ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧಿಕಾರಾವಧಿಯ ನಾಲ್ಕು ವರ್ಷಗಳ ನೆನಪಿಗಾಗಿ ರಾಷ್ಟ್ರಪತಿ ಭವನದಲ್ಲಿ ಐದು ಸ್ಮರಣಾರ್ಥ ಪುಸ್ತಕಗಳ ಬಿಡುಗಡೆ


ಸ್ಮರಣಾರ್ಥ ಪುಸ್ತಕಗಳು ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವದಲ್ಲಿ ದೇಶಕ್ಕಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಭಾರತದ ಪರಂಪರೆಯ ಬಗ್ಗೆ ಹೆಮ್ಮೆ ಪಡಲು ನಾಗರಿಕರಿಗೆ ಪ್ರೇರಣೆ ನೀಡುತ್ತವೆ: ಶ್ರೀಮತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ಮುರ್ಮು ಅವರು ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಘನತೆ, ವಿನಮ್ರತೆ, ಬುದ್ಧಿವಂತಿಕೆ ಮತ್ತು ಸಂವಿಧಾನಕ್ಕೆ ಅಚಲವಾದ ಬದ್ಧತೆಯಿಂದ ಸಮೃದ್ಧಗೊಳಿಸಿದ್ದಾರೆ: ಉಪರಾಷ್ಟ್ರಪತಿ

प्रविष्टि तिथि: 28 JUL 2026 8:47PM by PIB Bengaluru

ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷೀಯ ಅವಧಿಯ ನಾಲ್ಕು ವರ್ಷಗಳ ನೆನಪಿಗಾಗಿ ಪ್ರಕಟಿಸಲಾದ ಐದು ಸ್ಮರಣಾರ್ಥ ಪುಸ್ತಕಗಳ ಮೊದಲ ಸೆಟ್‌ ಅನ್ನು ಬಿಡುಗಡೆ ಮಾಡಿ, ರಾಷ್ಟ್ರಪತಿಯವರಿಗೆ ಹಸ್ತಾಂತರಿಸಿದರು.

ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷೀಯ ಅವಧಿಯ ನಾಲ್ಕು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, 'ರಾಷ್ಟ್ರಪತಿ ಭವನ್: ರಾಷ್ಟ್ರ ಕಾ ಭವನ್', 'ಸೇವಾ ಔರ್ ಸಂವೇದನಾ', 'ಸಮಾವೇಶಿ ಸಹಭಾಗಿತಾ' ಮತ್ತು 'ಭಾರತೀಯತಾ ಕಾ ಉತ್ಸವ್' ಎಂಬ ನಾಲ್ಕು ಪುಸ್ತಕಗಳನ್ನು ಇಂದು ರಾಷ್ಟ್ರಪತಿ ಭವನದಲ್ಲಿ ಬಿಡುಗಡೆ ಮಾಡಲಾಯಿತು. ಈ ಪುಸ್ತಕಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪಬ್ಲಿಕೇಷನ್ಸ್ ಡಿವಿಷನ್ (ಪ್ರಕಟಣಾ ವಿಭಾಗ) ಪ್ರಕಟಿಸಿದೆ. ಈ ಪುಸ್ತಕಗಳ ಜೊತೆಗೆ, 'ಆಮ ರಾಷ್ಟ್ರಪತಿ ಆಮ ಗೌರವ್' ಎಂಬ ಮತ್ತೊಂದು ಒಡಿಯಾ ಭಾಷೆಯ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು. 'ಆಮ ರಾಷ್ಟ್ರಪತಿ ಆಮ ಗೌರವ್' ಪುಸ್ತಕವು ಗೌರವಾನ್ವಿತ ಭಾರತದ ರಾಷ್ಟ್ರಪತಿಯವರ ಕುರಿತಾದ ಲೇಖನಗಳ ಸಂಗ್ರಹವಾಗಿದೆ.

ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಮತ್ತು ಗೌರವಾನ್ವಿತ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರ ಉಪಸ್ಥಿತಿಯಲ್ಲಿ ಈ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಈ ಪುಸ್ತಕಗಳ ಶೀರ್ಷಿಕೆಗಳು ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವದಲ್ಲಿ ನಮಗಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ಈ ಸಚಿತ್ರ ಸಂಕಲನಗಳು ಓದುಗರಿಗೆ ರಾಷ್ಟ್ರಪತಿ ಭವನದ ಪರಂಪರೆ, ಕಾರ್ಯವೈಖರಿ ಮತ್ತು ವಿವಿಧ ಆಯಾಮಗಳನ್ನು ಪರಿಚಯಿಸುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಜೊತೆಗೆ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಸಹ ನಾಗರಿಕರನ್ನು ಪ್ರೇರೇಪಿಸುವ ಸಾಮರ್ಥ್ಯದಲ್ಲಿಯೇ ಈ ಪುಸ್ತಕಗಳ ನಿಜವಾದ ಸಾರ್ಥಕತೆ ಅಡಗಿದೆ ಎಂದು ಅವರು ಹೇಳಿದರು.

ಜುಲೈ 25, 2022 ರಂದು ಭಾರತದ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಾಗ, ಅದು ತಮಗೆ ಗೌರವಕ್ಕಿಂತ ಹೆಚ್ಚಾಗಿ ಜವಾಬ್ದಾರಿಯ ವಿಷಯವಾಗಿತ್ತು ಎಂದು ರಾಷ್ಟ್ರಪತಿಯವರು ಹೇಳಿದರು. ಕಳೆದ ನಾಲ್ಕು ವರ್ಷಗಳಲ್ಲಿ, ತಾವು ಇದೇ ಕರ್ತವ್ಯ ಪ್ರಜ್ಞೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿರುವುದಾಗಿ ಅವರು ತಿಳಿಸಿದರು. ರಾಷ್ಟ್ರಪತಿ ಭವನದಲ್ಲಿ ಅಥವಾ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದಾಗ ಜನರು, ವಿಶೇಷವಾಗಿ ಯುವಜನರನ್ನು ಭೇಟಿಯಾದಾಗಲೆಲ್ಲಾ, ನೈತಿಕ ಮೌಲ್ಯಗಳಲ್ಲಿ ಬೇರೂರಿರಲು ಮತ್ತು ದೇಶ ಹಾಗೂ ಸಮಾಜದ ಪ್ರಗತಿಗಾಗಿ ಶ್ರಮಿಸಲು ಕರೆ ನೀಡುವುದಾಗಿ ಅವರು ಹೇಳಿದರು. ಮಹಿಳೆಯರು ಸ್ವಾವಲಂಬಿಗಳಾಗಬೇಕು ಮತ್ತು ಆತ್ಮವಿಶ್ವಾಸದಿಂದ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ತಾವು ಒತ್ತಾಯಿಸುವುದಾಗಿ ಅವರು ಹೇಳಿದರು. ಬುಡಕಟ್ಟು ಸಮುದಾಯಗಳ ಸದಸ್ಯರೊಂದಿಗೆ ಸಂವಾದ ನಡೆಸುವಾಗ, ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವ ಜೊತೆಗೆ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರ್ಪಡೆಯಾಗುವಂತೆ ತಾವು ಕೋರುವುದಾಗಿ ತಿಳಿಸಿದರು. ತಾವು ವಿದೇಶ ಪ್ರವಾಸ ಕೈಗೊಂಡಾಗಲೆಲ್ಲಾ, ಆ ದೇಶಗಳಲ್ಲಿರುವ ಭಾರತೀಯ ಸಮುದಾಯವನ್ನು ಭೇಟಿಯಾಗುವುದಾಗಿ ಮತ್ತು ಭಾರತದ ಅಭಿವೃದ್ಧಿ ಪಯಣಕ್ಕೆ ಕೊಡುಗೆ ನೀಡುವಂತೆ ಅವರನ್ನು ಪ್ರೋತ್ಸಾಹಿಸುವುದಾಗಿ ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಜಾರ್ಖಂಡ್ ರಾಜ್ಯಪಾಲರಾಗಿ ತಮ್ಮ ಅಧಿಕಾರಾವಧಿಯನ್ನು ಸ್ಮರಿಸಿಕೊಳ್ಳುತ್ತಾ, ಈ ಸಂದರ್ಭವು ತಮಗೆ ವೈಯಕ್ತಿಕವಾಗಿ ವಿಶೇಷ ಮಹತ್ವವನ್ನು ಹೊಂದಿದೆ ಎಂದು ಹೇಳಿದರು. ರಾಜ್ಯದಾದ್ಯಂತ ತಾವು ವ್ಯಾಪಕವಾಗಿ ಪ್ರವಾಸ ಮಾಡಿದ ಸಮಯದಲ್ಲಿ, ಸಮಾಜದ ಎಲ್ಲಾ ವರ್ಗಗಳ ಜನರು ಶ್ರೀಮತಿ ದ್ರೌಪದಿ ಮುರ್ಮು ಅವರ ರಾಜ್ಯಪಾಲರ ಅಧಿಕಾರಾವಧಿಯ ಬಗ್ಗೆ ಅತ್ಯಂತ ಆತ್ಮೀಯತೆ ಮತ್ತು ಆದರದಿಂದ ಮಾತನಾಡಿದ್ದನ್ನು ಅವರು ಉಲ್ಲೇಖಿಸಿದರು. ಅವರು ತಮ್ಮ ಸಾಂವಿಧಾನಿಕ ಜವಾಬ್ದಾರಿಗಳನ್ನು ಘನತೆಯಿಂದ ನಿರ್ವಹಿಸಿದ್ದು, ಜನರೊಂದಿಗಿನ ಅವರ ಆಳವಾದ ವೈಯಕ್ತಿಕ ಸಂಪರ್ಕ, ಮತ್ತು ಬುಡಕಟ್ಟು ಸಮುದಾಯಗಳು, ವಂಚಿತರು ಹಾಗೂ ಯುವಕರ ಬಗ್ಗೆ ಅವರಿಗಿದ್ದ ಅಂತಃಕರಣ ಮತ್ತು ಪ್ರಾಮಾಣಿಕ ಕಾಳಜಿಯನ್ನು ನಾಗರಿಕರು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು. "ಇಂತಹ ಸದ್ಭಾವನೆಯನ್ನು ಕೇವಲ ಹುದ್ದೆಯಿಂದ ಗಳಿಸಲು ಸಾಧ್ಯವಿಲ್ಲ, ಅದನ್ನು ಸದಾಚಾರ, ಸಹಾನುಭೂತಿ ಮತ್ತು ಜನರ ಬಗೆಗಿನ ಸಮರ್ಪಣಾ ಭಾವದಿಂದ ಮಾತ್ರ ಗಳಿಸಲು ಸಾಧ್ಯ" ಎಂದು ಅವರು ಹೇಳಿದರು.

ರಾಷ್ಟ್ರಪತಿ ಮುರ್ಮು ಅವರ ಅಧಿಕಾರಾವಧಿಯಲ್ಲಿ ಕೈಗೊಳ್ಳಲಾದ ಹಲವು ಉಪಕ್ರಮಗಳನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, ಐತಿಹಾಸಿಕ ಮೊಘಲ್ ಗಾರ್ಡನ್ಸ್ ಅನ್ನು 'ಅಮೃತ ಉದ್ಯಾನ' ಎಂದು ಮರುನಾಮಕರಣ ಮಾಡಿದ್ದು, ಡೆಹ್ರಾಡೂನ್‌ ನಲ್ಲಿರುವ ರಾಷ್ಟ್ರಪತಿ ನಿಕೇತನ ಮತ್ತು ರಾಷ್ಟ್ರಪತಿ ತಪೋವನಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದು, ರಾಷ್ಟ್ರಪತಿ ಭವನವನ್ನು ದಿವ್ಯಾಂಗ ಸ್ನೇಹಿಯನ್ನಾಗಿ ಮಾಡಲು ಕೈಗೊಂಡ ಪ್ರಯತ್ನಗಳು, ಮತ್ತು ಸರ್ ಎಡ್ವಿನ್ ಲೂಟಿಯನ್ಸ್ ಅವರ ಪ್ರತಿಮೆಯ ಜಾಗದಲ್ಲಿ ಭಾರತದ ಕೊನೆಯ ಗವರ್ನರ್ ಜನರಲ್ ಆಗಿದ್ದ ಭಾರತ ರತ್ನ ಚಕ್ರವರ್ತಿ ರಾಜಗೋಪಾಲಚಾರಿ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದನ್ನು ಉಲ್ಲೇಖಿಸಿದರು. ಈ ಉಪಕ್ರಮಗಳು ರಾಷ್ಟ್ರಪತಿ ಭವನವನ್ನು ಜನರಿಗೆ ಇನ್ನಷ್ಟು ಹತ್ತಿರ ತರುವ ಜೊತೆಗೆ ರಾಷ್ಟ್ರೀಯ ಸಂಸ್ಥೆಗಳನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸುವ ಪ್ರಜ್ಞಾಪೂರ್ವಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.

ಪ್ರಕಟಣೆಗಳನ್ನು ಉಲ್ಲೇಖಿಸಿ ಮಾತನಾಡಿದ ಶ್ರೀ ರಾಧಾಕೃಷ್ಣನ್ ಅವರು, 'ಸೇವಾ ಔರ್ ಸಂವೇದನಾ' ಪುಸ್ತಕವು ರಾಷ್ಟ್ರಪತಿ ಮುರ್ಮು ಅವರ ಸಾರ್ವಜನಿಕ ಜೀವನವನ್ನು ನಿರೂಪಿಸುವ ಸೇವೆ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ, 'ಸಮಾವೇಶಿ ಸಹಭಾಗಿತಾ' ಪುಸ್ತಕವು ಭಾರತದ ಅಭಿವೃದ್ಧಿಯು ಎಲ್ಲರನ್ನೂ ಒಳಗೊಳ್ಳಬೇಕು ಮತ್ತು ಸಹಭಾಗಿತ್ವದಿಂದ ಕೂಡಿರಬೇಕು ಎಂಬ ಅವರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. 'ಭಾರತೀಯತಾ ಕಾ ಉತ್ಸವ್' ಪುಸ್ತಕವು ಭಾರತದ ನಾಗರಿಕತೆಯ ಸನಾತನ ಮೌಲ್ಯಗಳನ್ನು ಮತ್ತು ಅದರ ಗಮನಾರ್ಹ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂಭ್ರಮಿಸುತ್ತದೆ ಎಂದು ಹೇಳಿದ ಅವರು, ರಾಷ್ಟ್ರಪತಿ ಮುರ್ಮು ಅವರು ಭಾರತದ ವೈವಿಧ್ಯತೆಯನ್ನು ಸಂಭ್ರಮಿಸುತ್ತಲೇ ದೇಶವನ್ನು ಒಗ್ಗೂಡಿಸುವ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ, ಸ್ಥಳೀಯ ಪರಂಪರೆಗಳು ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ನಿರಂತರವಾಗಿ ಎತ್ತಿಹಿಡಿದಿದ್ದಾರೆ ಎಂದು ಹೇಳಿದರು.

ರಾಷ್ಟ್ರಪತಿಯವರು ಒಲ್ ಚಿಕಿ ಲಿಪಿಯಲ್ಲಿ ಸಂಥಾಲಿ ಭಾಷೆಯ ಭಾರತದ ಸಂವಿಧಾನವನ್ನು ಬಿಡುಗಡೆ ಮಾಡಿದ್ದನ್ನು ಸ್ಮರಿಸಿಕೊಂಡ ಉಪರಾಷ್ಟ್ರಪತಿಯವರು, ಇದನ್ನು ಬುಡಕಟ್ಟು ಸಮುದಾಯದ ಸದಸ್ಯರಲ್ಲಿ ಹೆಮ್ಮೆಯನ್ನು ತುಂಬಿದ ಮತ್ತು ಭಾರತದ ಭಾಷಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ದೇಶದ ಬದ್ಧತೆಯನ್ನು ಪುನರುಚ್ಚರಿಸಿದ ಅತ್ಯಂತ ಮಹತ್ವದ ಕ್ಷಣ ಎಂದು ಬಣ್ಣಿಸಿದರು.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಪುಸ್ತಕಗಳು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಸೆರೆಹಿಡಿದಿವೆ ಎಂದು ಹೇಳಿದರು. ಮುಂದಿನ ಪೀಳಿಗೆಗೆ ಉಲ್ಲೇಖಿತ (ರೆಫರೆನ್ಸ್) ಪುಸ್ತಕಗಳಾಗಿ ಇವು ಪ್ರಮುಖ ಪಾತ್ರ ವಹಿಸಲಿವೆ ಎಂದು ಅವರು ಹೇಳಿದರು. ಇಂದು ಬಿಡುಗಡೆಯಾದ ಪ್ರಕಟಣೆಗಳು ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷೀಯ ಪಯಣವನ್ನು ದಾಖಲಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿವೆ ಎಂದು ಅವರು ಹೇಳಿದರು.

 

*****

 


(रिलीज़ आईडी: 2290851) आगंतुक पटल : 11
इस विज्ञप्ति को इन भाषाओं में पढ़ें: English , हिन्दी , Gujarati , Tamil , Telugu , Malayalam