ರಕ್ಷಣಾ ಸಚಿವಾಲಯ
ಪಾಕಿಸ್ತಾನದ ಪ್ರತಿಯೊಂದು ದುಸ್ಸಾಹಸಕ್ಕೂ ನಿರ್ಣಾಯಕವಾಗಿ ಉತ್ತರಿಸುವ ಭಾರತದ ಸಾಮರ್ಥ್ಯಕ್ಕೆ 'ಆಪರೇಷನ್ ಸಿಂಧೂರ್' ಸಾಕ್ಷಿ: 27 ನೇ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ದ್ರಾಸ್‌ನಲ್ಲಿ ರಕ್ಷಾ ಮಂತ್ರಿ
"ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆದರೂ ಅದು ಭಾರತದ ಅವಿಭಾಜ್ಯ ಅಂಗವಾಗಿರುವ ಪಿಒಕೆ (PoK) ಕುರಿತು ಮಾತ್ರ"
"ಭಾರತವು ಪ್ರಗತಿ ಮತ್ತು ನಾವೀನ್ಯತೆಯನ್ನು ಅನುಸರಿಸಿದರೆ, ಪಾಕಿಸ್ತಾನವು ಭಯೋತ್ಪಾದನೆ ಮತ್ತು ನುಸುಳುವಿಕೆಯನ್ನು ಪ್ರೋತ್ಸಾಹಿಸುತ್ತದೆ"
"‘ಯೆ ದಿಲ್ ಮಾಂಗೆ ಮೋರ್’ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯ ಹಾದಿಗೆ ಪ್ರೇರಣೆ"
"ವಿಕಸಿತ ಭಾರತ@2047 ಕೇವಲ ಆರ್ಥಿಕ ಸಮೃದ್ಧಿಗಷ್ಟೇ ಸೀಮಿತವಾಗಿಲ್ಲ, ಅದು ಆಯಕಟ್ಟಿನ ಶಕ್ತಿ, ಸಾಂಸ್ಕೃತಿಕ ಹೆಮ್ಮೆ ಮತ್ತು ಸಾಮಾಜಿಕ ಸಾಮರಸ್ಯದ ಬದ್ಧತೆಯಾಗಿದೆ"
प्रविष्टि तिथि:
26 JUL 2026 12:25PM by PIB Bengaluru
ಪಾಕಿಸ್ತಾನದ ಅನಧಿಕೃತ ಆಕ್ರಮಣದಲ್ಲಿರುವ ಪಿಒಕೆ (PoK) ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನದೊಂದಿಗೆ ಇನ್ಮುಂದೆ ಯಾವುದೇ ಸಾಮಾನ್ಯ ಮಾತುಕತೆಗಳಿರುವುದಿಲ್ಲ, ಏನೇ ಸಂಭಾಷಣೆ ನಡೆದರೂ ಅದು ಸಂಪೂರ್ಣವಾಗಿ ಪಿಒಕೆ ಕುರಿತಾಗಿಯೇ ಇರುತ್ತದೆ ಎಂದು ರಕ್ಷಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಪುನರುಚ್ಚರಿಸಿದ್ದಾರೆ. "ಪಾಕಿಸ್ತಾನದ ಪ್ರತಿಯೊಂದು ದುಸ್ಸಾಹಸಕ್ಕೂ ಅದರ ಕಲ್ಪನೆಗೂ ಮೀರಿದ ತೀವ್ರತೆಯೊಂದಿಗೆ ಪ್ರತ್ಯುತ್ತರ ನೀಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂಬುದಕ್ಕೆ ಆಪರೇಷನ್ ಸಿಂಧೂರ್ ಯಶಸ್ಸೇ ಸಾಕ್ಷಿ" ಎಂದು ಅವರು ಹೇಳಿದರು. ಜುಲೈ 26, 2026 ರಂದು ದ್ರಾಸ್‌ನಲ್ಲಿ ನಡೆದ 27 ನೇ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಾ ಮಂತ್ರಿಗಳು, ಭಾರತದ ಸಾರ್ವಭೌಮತ್ವದ ವಿರುದ್ಧದ ಪ್ರತಿಯೊಂದು ಕುತಂತ್ರಕ್ಕೂ ಭಾರತೀಯ ರಕ್ಷಣಾ ಪಡೆಗಳು ಆಪರೇಷನ್ ಸಿಂಧೂರ್ ಮೂಲಕ ಭಯೋತ್ಪಾದಕರಿಗೆ ಮತ್ತು ಅವರ ಪೋಷಕರಿಗೆ ನೀಡಿದಂತೆಯೇ ಅಭೂತಪೂರ್ವ ಶೌರ್ಯದೊಂದಿಗೆ ದಿಟ್ಟ ಉತ್ತರ ನೀಡಲಾಗುವುದು ಎಂದು ಹೇಳಿದರು.

ಪಾಕಿಸ್ತಾನದಲ್ಲಿ ಸೇನೆ ಮತ್ತು ಉಗ್ರರ ನಡುವಿನ ವ್ಯತ್ಯಾಸವೇ ಇಲ್ಲದಂತಾಗಿದ್ದು, ಆ ದೇಶವು ಭಯೋತ್ಪಾದನೆಯನ್ನು ತನ್ನ ಸರ್ಕಾರಿ ನೀತಿಯನ್ನಾಗಿ ಮಾಡಿಕೊಂಡಿದೆ ಎಂದು ಶ್ರೀ ರಾಜನಾಥ್ ಸಿಂಗ್ ಪ್ರತಿಪಾದಿಸಿದರು. "ಪಾಕಿಸ್ತಾನದ ಸೇನೆಯು ಭಯೋತ್ಪಾದಕ ಸಂಸ್ಥೆಗಳಿಗೆ ಆಶ್ರಯ ನೀಡುವುದು ಮಾತ್ರವಲ್ಲದೆ ಅವುಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿಯೇ, ಆಪರೇಷನ್ ಸಿಂಧೂರ್ ಸಮಯದಲ್ಲಿ, ಭಯೋತ್ಪಾದಕರನ್ನು ಮತ್ತು ಅವರನ್ನು ಪೋಷಿಸುವ ಸರ್ಕಾರಗಳನ್ನು ಭಾರತವು ಇನ್ಮುಂದೆ ಪ್ರತ್ಯೇಕ ಸಂಸ್ಥೆಗಳಾಗಿ ನೋಡುವುದಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಿದ್ದೇವೆ" ಎಂದು ಅವರು ಹೇಳಿದರು.
ಕಾರ್ಗಿಲ್ ಯುದ್ಧ ನಡೆದು 27 ವರ್ಷಗಳು ಕಳೆದಿವೆ ಮತ್ತು ಭಾರತ ಹಾಗೂ ಪಾಕಿಸ್ತಾನ ಆಯ್ಕೆ ಮಾಡಿಕೊಂಡ ಹಾದಿಗಳು ಸಂಪೂರ್ಣವಾಗಿ ಭಿನ್ನವಾಗಿವೆ ಎಂದೂ ಸಹ ರಕ್ಷಾ ಮಂತ್ರಿ ತಿಳಿಸಿದರು. "ಭಾರತವು ನಾವೀನ್ಯತೆಯ ಹೊಸ ಮಾರ್ಗಗಳನ್ನು ಅನ್ವೇಷಿಸುತ್ತಿದ್ದರೆ, ಪಾಕಿಸ್ತಾನವು ನುಸುಳುವಿಕೆಗೆ ಹೊಸ ಮಾರ್ಗಗಳನ್ನು ಹುಡುಕುತ್ತಿದೆ. ಭಾರತವು ಚಿಪ್ ವಿನ್ಯಾಸದಲ್ಲಿ ನಿರತವಾಗಿದ್ದರೆ, ಪಾಕಿಸ್ತಾನವು ಭಯೋತ್ಪಾದನೆಯನ್ನು ವಿನ್ಯಾಸಗೊಳಿಸುವಲ್ಲಿ ನಿರತವಾಗಿದೆ. ಭಾರತವು ಸ್ಟಾರ್ಟ್-ಅಪ್ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದರೆ, ಪಾಕಿಸ್ತಾನವು ಭಯೋತ್ಪಾದಕ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಭಾರತವು ಸೆಮಿಕಂಡಕ್ಟರ್‌ಗಳನ್ನು ತಯಾರಿಸುತ್ತಿದ್ದರೆ; ಪಾಕಿಸ್ತಾನವು ಮಾನವ ಬಾಂಬ್‌ಗಳನ್ನು (suicide bombers) ಸಿದ್ಧಪಡಿಸುತ್ತಿದೆ. ಭಾರತವು ಬಾಹ್ಯಾಕಾಶ ಯೋಜನೆಗಳಿಗೆ ಗುರುತಿಸಲ್ಪಟ್ಟಿದ್ದರೆ, ಪಾಕಿಸ್ತಾನವು ಪ್ರಾಕ್ಸಿ ಮಿಷನ್‌ಗಳನ್ನು ನಡೆಸುತ್ತಿದೆ. ಭಾರತವು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸುತ್ತಿದ್ದರೆ, ಪಾಕಿಸ್ತಾನವು ಗಡಿಯುದ್ದಕ್ಕೂ ಭಯೋತ್ಪಾದಕರನ್ನು ಕಳುಹಿಸುವುದರತ್ತ ಗಮನ ಹರಿಸುತ್ತಿದೆ. ಭಾರತವು ಜಗತ್ತಿಗೆ ಸಾಫ್ಟ್‌ವೇರ್ ಒದಗಿಸುತ್ತಿದ್ದರೆ, ಪಾಕಿಸ್ತಾನವು ಸ್ಲೀಪರ್ ಸೆಲ್‌ಗಳನ್ನು ರಫ್ತು ಮಾಡುತ್ತಿದೆ. ಭಾರತವು ಡಾಟಾ ಸೆಂಟರ್‌ಗಳನ್ನು ಸ್ಥಾಪಿಸುತ್ತಿದ್ದರೆ; ಪಾಕಿಸ್ತಾನವು ಮೂಲಭೂತವಾದಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಭಾರತವು ಯುಪಿಐ (UPI) ಮೂಲಕ ಜಗತ್ತನ್ನು ಸಂಪರ್ಕಿಸುತ್ತಿದ್ದರೆ, ಪಾಕಿಸ್ತಾನವು ಭಯೋತ್ಪಾದನೆಯನ್ನು ಹವಾಲಾ ಜಾಲಗಳೊಂದಿಗೆ ಸಂಯೋಜಿಸುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಹಾದಿಗಳು ವಿಭಿನ್ನವಾಗಿವೆ; ಪಾಕಿಸ್ತಾನವು ತನ್ನ ದುಷ್ಟ ಯೋಜನೆಗಳ ಮೂಲಕ ನಮ್ಮ ಸಮೃದ್ಧಿಯ ಹಾದಿಯನ್ನು ತಡೆಯಲು ಯತ್ನಿಸಿದರೆ, ನಮ್ಮ ರಕ್ಷಣಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಲು ಸಿದ್ಧವಾಗಿವೆ," ಎಂದು ಹೇಳಿದರು.

ಬೆದರಿಕೆಗಳಿಗೆ ನಿರ್ಣಾಯಕವಾಗಿ ಉತ್ತರಿಸಲು ರಕ್ಷಣಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ರಾಜಕೀಯ ಇಚ್ಛಾಶಕ್ತಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಶ್ರೀ ರಾಜನಾಥ್ ಸಿಂಗ್ ಪ್ರತಿಪಾದಿಸಿದರು. ನಮ್ಮ ಯೋಧರು ದೇಶದ ಗಡಿಗಳನ್ನು ಕಾಯುತ್ತಿರುವಾಗ ಯಾವುದೇ ಶತ್ರು ಭಾರತದತ್ತ ಕೆಂಗಣ್ಣಿನಿಂದ ನೋಡಲು ಧೈರ್ಯ ಮಾಡುವುದಿಲ್ಲ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಾತೃಭೂಮಿಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಭಾರತದ ಶೂರ ಯೋಧರಿಗೆ ರಕ್ಷಾ ಮಂತ್ರಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಪರಮವೀರ ಚಕ್ರ ವಿಜೇತರಾದ ಕ್ಯಾಪ್ಟನ್ ವಿಕ್ರಮ್ ಬಟ್ರಾ ಮತ್ತು ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ ದೇಶಕ್ಕೆ, ವಿಶೇಷವಾಗಿ ಯುವಕರಿಗೆ ನಿರಂತರ ಪ್ರೇರಣೆಯಾಗಿರುವ ಅಸಂಖ್ಯಾತ ವೀರರನ್ನು ಅವರು ಸ್ಮರಿಸಿದರು. ವೈಯಕ್ತಿಕ ಯಶಸ್ಸು ಮತ್ತು ರಾಷ್ಟ್ರೀಯ ಕರ್ತವ್ಯದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಬಯಸುವ ಪ್ರತಿಯೊಬ್ಬ ಯುವಕನಿಗೂ ಕಾರ್ಗಿಲ್ ವಿಜಯ್ ದಿವಸ್ ಪ್ರೇರಣೆಯ ದಿನ ಎಂದು ಅವರು ಕರೆದರು. "‘ತ್ಯಾಗ’ ಮತ್ತು ‘ಸೇವೆ’ಯ ಭಾವನೆಯು ಯಾವುದೇ ರಾಷ್ಟ್ರದ ಬೆನ್ನೆಲುಬಾಗಿದೆ ಎಂಬುದನ್ನು ಈ ದಿನ ನಮಗೆ ಕಲಿಸುತ್ತದೆ" ಎಂದು ಹೇಳಿದರು.
ಕಾರ್ಗಿಲ್ ಯುದ್ಧ ಸ್ಮಾರಕವು, ಭಾರತದ ಸಂಪೂರ್ಣತೆಯನ್ನು ಪ್ರತಿಬಿಂಬಿಸುತ್ತದೆ, ಏಕೆಂದರೆ ವೀರ ಮರಣವನ್ನಪ್ಪಿದ ಯೋಧರು ದೇಶದ ಎಲ್ಲಾ ಪ್ರಾಂತ್ಯಗಳನ್ನು ಪ್ರತಿನಿಧಿಸಿದ್ದಾರೆ ಎಂದು ಶ್ರೀ ರಾಜನಾಥ್ ಸಿಂಗ್ ಎತ್ತಿ ತೋರಿಸಿದರು. "ವಿವಿಧತೆಗಳ ನಡುವೆಯೂ ಇರುವ ಈ ಒಗ್ಗಟ್ಟಿನ ಗೋಡೆಯು ನಮಗೆ ಹಾನಿ ಮಾಡಲು ಬಯಸುವವರ ವಿರುದ್ಧ ಎತ್ತರವಾಗಿ ನಿಲ್ಲುತ್ತದೆ" ಎಂದರು.
ಪಶ್ಚಿಮ ಏಷ್ಯಾ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷಗಳು ರಕ್ಷಣಾ ಪಡೆಗಳ ಸಾಮರ್ಥ್ಯವನ್ನು ಮಾತ್ರವಲ್ಲದೆ ರಾಷ್ಟ್ರಗಳ ಚೇತರಿಕೆ, ತಾಳ್ಮೆ ಮತ್ತು ಸಂಕಲ್ಪವನ್ನು ಪರೀಕ್ಷಿಸಿವೆ ಎಂದು ರಕ್ಷಾ ಮಂತ್ರಿ ಉಲ್ಲೇಖಿಸಿದರು. ಭಾರತವು ಪ್ರಬಲ ಮತ್ತು ಸಮರ್ಥ ಸೇನೆಯನ್ನು ಹೊಂದಿದ್ದರೂ, ರಾಷ್ಟ್ರೀಯ ಭದ್ರತೆಯನ್ನು ಕಾಯುವುದು ಪ್ರತಿಯೊಬ್ಬ ಪ್ರಜೆಯ ಜಂಟಿ ಜವಾಬ್ದಾರಿಯಾಗಿದೆ ಎಂದು ಅವರು ಪ್ರತಿಪಾದಿಸಿದರು. 'ರಾಷ್ಟ್ರಕ್ಕೆ ಮೊದಲ ಆದ್ಯತೆ' (Nation First), ಶಿಸ್ತು ಮತ್ತು ಕರ್ತವ್ಯ ಪ್ರಜ್ಞೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ಪ್ರತಿಯೊಬ್ಬ ಭಾರತೀಯನೂ ಸೈನಿಕನಂತಹ ಪ್ರಜ್ಞೆಯನ್ನು ಹೊಂದಿರಬೇಕು ಎಂದರು. "ಪ್ರತಿಯೊಬ್ಬ ಪ್ರಜೆಯೂ ಸೈನಿಕನಾಗಬೇಕು ಎಂದು ನಾನು ಸೂಚಿಸುತ್ತಿಲ್ಲ, ಆದರೆ ದೇಶಕ್ಕೆ ಎಂದಾದರೂ ತನ್ನ ಜನರ ನೇರ ಅಥವಾ ಪರೋಕ್ಷ ಬೆಂಬಲ ಅಗತ್ಯವಿರುವ ಪರಿಸ್ಥಿತಿ ಎದುರಾದರೆ, ಪ್ರತಿಯೊಬ್ಬ ಭಾರತೀಯನೂ ದೇಶದ ರಕ್ಷಣೆಗೆ ಮುಂದಾಗಲು ಮಾನಸಿಕವಾಗಿ, ನೈತಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಿರಬೇಕು. ಪ್ರತಿಯೊಬ್ಬ ಸೈನಿಕನೂ ಮೊದಲ ಮತ್ತು ಅಗ್ರಸ್ಥಾನದಲ್ಲಿ ಹೇಗೆ ಭಾರತೀಯನೋ, ಹಾಗೆಯೇ ಸೈನಿಕನ ಧೈರ್ಯ, ಶಿಸ್ತು ಮತ್ತು ದೇಶಭಕ್ತಿ ಪ್ರತಿಯೊಬ್ಬ ಭಾರತೀಯನಲ್ಲೂ ಯಾವಾಗಲೂ ಜೀವಂತವಾಗಿರಬೇಕು" ಎಂದರು.

2047 ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ದೃಷ್ಟಿಕೋನವು ಕೇವಲ ಆರ್ಥಿಕ ಸಮೃದ್ಧಿಗಷ್ಟೇ ಸೀಮಿತವಾಗಿಲ್ಲ, ಅದು ಆಯಕಟ್ಟಿನ ಶಕ್ತಿ, ಸಾಂಸ್ಕೃತಿಕ ಹೆಮ್ಮೆ ಮತ್ತು ಸಾಮಾಜಿಕ ಸಾಮರಸ್ಯದ ಬದ್ಧತೆಯಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. ರಾಷ್ಟ್ರ ನಿರ್ಮಾಣದ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಗಿಲ್ ಯುದ್ಧದ ವೀರರು ತೋರಿದ ಅದೇ ಸಮರ್ಪಣೆ ಮತ್ತು ಕರ್ತವ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಮಾತ್ರ ಈ ದೃಷ್ಟಿಕೋನವನ್ನು ನನಸಾಗಿಸಲು ಸಾಧ್ಯ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಸರ್ಕಾರವು ರಾಷ್ಟ್ರೀಯ ಭದ್ರತೆ ಮತ್ತು ಸೈನಿಕರ ಕಲ್ಯಾಣಕ್ಕೆ ಅತ್ಯುನ್ನತ ಆದ್ಯತೆ ನೀಡುತ್ತಿದೆ ಎಂದು ರಕ್ಷಾ ಮಂತ್ರಿ ಒತ್ತಿ ಹೇಳಿದರು. "ಪ್ರತಿಯೊಂದು ಋತುವಿನಲ್ಲೂ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲೂ ನಾವು ನಮ್ಮ ಗಡಿಗಳಲ್ಲಿ ನಿರಂತರ ಜಾಗರೂಕರಾಗಿರಬೇಕು ಎಂಬುದನ್ನು ಕಾರ್ಗಿಲ್ ಯುದ್ಧವು ನಮಗೆ ಕಲಿಸಿದೆ" ಎಂದು ಅವರು ಹೇಳಿದರು. ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಸೇನಾ ಸಾಮರ್ಥ್ಯಗಳನ್ನು ಆಧುನಿಕಗೊಳಿಸುವುದರ ಜೊತೆಗೆ ಗಡಿ ಮೂಲಸೌಕರ್ಯಗಳನ್ನು ನಿರಂತರವಾಗಿ ಬಲಪಡಿಸಲಾಗುತ್ತಿದೆ ಎಂದು ಅವರು ಬೆಟ್ಟು ಮಾಡಿದರು.
ಕ್ಯಾಪ್ಟನ್ ವಿಕ್ರಮ್ ಬಟ್ರಾ ಅವರ ಪ್ರಸಿದ್ಧ ನುಡಿಗಟ್ಟು ‘ಯೆ ದಿಲ್ ಮಾಂಗೆ ಮೋರ್’ ನಿಂದ ಪ್ರೇರಣೆ ಪಡೆದು ಮಾತನಾಡಿದ ಶ್ರೀ ರಾಜನಾಥ್ ಸಿಂಗ್ ಅವರು, ರಕ್ಷಣಾ ಉತ್ಪಾದನೆಯಲ್ಲಿ 'ಸ್ವಾವಲಂಬನೆ' ಸಾಧಿಸಲು ಕ್ಷಿಪ್ರ ಹೆಜ್ಜೆಗಳನ್ನು ಇಡಲಾಗುತ್ತಿದೆ ಮತ್ತು ಪ್ರಗತಿಯನ್ನು ವೇಗಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು. "ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಭಾರತವು ಶೇಕಡಾ 65 ರಿಂದ 70 ರಷ್ಟು ರಕ್ಷಣಾ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇಂದು, ನಾವು ನಮ್ಮ ಶೇಕಡಾ 65 ರಷ್ಟು ರಕ್ಷಣಾ ಉಪಕರಣಗಳನ್ನು ಭಾರತದ ನೆಲದಲ್ಲೇ ತಯಾರಿಸುತ್ತಿದ್ದೇವೆ. ಇಂದು, ನಮ್ಮ ಸೈನಿಕರು ದೇಶೀಯವಾಗಿ ಅಭಿವೃದ್ಧಿಪಡಿಸಿದ ವಾಯು ರಕ್ಷಣಾ ನಿಯಂತ್ರಣ ವ್ಯವಸ್ಥೆ 'ಆಕಾಶ್-ತೀರ್' ಅನ್ನು ಹೊಂದಿದ್ದಾರೆ. ನಾವು ಮುಂದಿನ ಪೀಳಿಗೆಯ ಆಕಾಶ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ್ದೇವೆ. ಭಾರತದ ಮೊದಲ ದೇಶೀಯ ವಿಮಾನ ವಾಹಕ ನೌಕೆ 'ಐಎನ್‌ಎಸ್ ವಿಕ್ರಾಂತ್', ಹಗುರವಾದ ಯುದ್ಧ ವಿಮಾನ 'ತೇಜಸ್', ಹಗುರವಾದ ಯುದ್ಧ ಹೆಲಿಕಾಪ್ಟರ್ 'ಪ್ರಚಂಡ್', ಸುಧಾರಿತ ಹಗುರವಾದ ಹೆಲಿಕಾಪ್ಟರ್ 'ಧ್ರುವ', ಮುಖ್ಯ ಯುದ್ಧ ಟ್ಯಾಂಕ್ 'ಅರ್ಜುನ್', 'ಪಿನಾಕಾ' ಮಲ್ಟಿ-ಬ್ಯಾರಲ್ ರಾಕೆಟ್ ಲಾಂಚರ್, 'ಅಸ್ತ್ರ' ಆಕಾಶದಿಂದ ಆಕಾಶಕ್ಕೆ ಹಾರುವ ಕ್ಷಿಪಣಿ, ಮತ್ತು ಆಧುನಿಕ ಡ್ರೋನ್‌ಗಳು ಹಾಗೂ ಕೌಂಟರ್-ಡ್ರೋನ್ ವ್ಯವಸ್ಥೆಗಳು ರಕ್ಷಣಾ ಪಡೆಗಳ ಯುದ್ಧ ಸನ್ನದ್ಧತೆಯನ್ನು ಬಲಪಡಿಸುತ್ತಿವೆ. ಆದರೆ, 'ಯೆ ದಿಲ್ ಮಾಂಗೆ ಮೋರ್'. ಇನ್ನಷ್ಟು ಆಧುನಿಕ ಶಸ್ತ್ರಾಸ್ತ್ರಗಳು, ಮುಂದಿನ ಪೀಳಿಗೆಯ ಯುದ್ಧ ವಿಮಾನಗಳು, ಜಲಮಾರ್ಗ ನೌಕೆಗಳು (ಸಬ್‌ಮರೀನ್) ಮತ್ತು ಕ್ಷಿಪಣಿಗಳನ್ನು ಭಾರತದಲ್ಲೇ ತಯಾರಿಸಲು ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ," ಎಂದು ಹೇಳಿದರು.


ಕಾರ್ಯಕ್ರಮದ ಸಮಯದಲ್ಲಿ, ರಕ್ಷಾ ಮಂತ್ರಿಗಳು ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಲ್ಲಿಸಿದರು, 1999 ರ ಆಪರೇಷನ್ ವಿಜಯ್ ಸಮಯದಲ್ಲಿ ಅತ್ಯುನ್ನತ ತ್ಯಾಗ ಮಾಡಿದ ವೀರನನ್ನು ಸ್ಮರಿಸುತ್ತಾ, ಮೌನ ಆಚರಿಸಿದರು. ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ, ಭೂಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಥ್, ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ, 14 ನೇ ಕಾರ್ಪ್ಸ್‌ನ ಜಿಒಸಿ ಲೆಫ್ಟಿನೆಂಟ್ ಜನರಲ್ ಮದನ್‌ರಾಜ್ ಪಾಂಡೆ ಮತ್ತು 8 ನೇ ಮೌಂಟೇನ್ ಡಿವಿಷನ್‌ನ ಜಿಒಸಿ ಮೇಜರ್ ಜನರಲ್ ಎ.ಪಿ. ಸಿಂಗ್ ಅವರು ಕಾರ್ಗಿಲ್ ಯುದ್ಧದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸುವಲ್ಲಿ ಶ್ರೀ ರಾಜನಾಥ್ ಸಿಂಗ್ ಅವರೊಂದಿಗೆ ಜೊತೆಯಾದರು. ಹಿರಿಯ ಮಿಲಿಟರಿ ಮತ್ತು ನಾಗರಿಕ ಗಣ್ಯರು, ಕಾರ್ಗಿಲ್ ಯುದ್ಧದ ನಿವೃತ್ತ ಯೋಧರು, ಶೌರ್ಯ ಪ್ರಶಸ್ತಿ ವಿಜೇತರು, ವೀರ್ ನಾರಿಯರು, ಹುತಾತ್ಮರ ಕುಟುಂಬಸ್ಥರು ಮತ್ತು ಸ್ಥಳೀಯ ನಾಗರಿಕರು 'ಶ್ರದ್ಧಾಂಜಲಿ ಸಮಾರೋಪ'ದಲ್ಲಿ ಭಾಗವಹಿಸಿದ್ದರು.
ರಕ್ಷಾ ಮಂತ್ರಿಗಳು ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು ಮತ್ತು ಆಪರೇಷನ್ ವಿಜಯ್ ಸಮಯದಲ್ಲಿ ಭಾರತೀಯ ಯೋಧರು ಪ್ರದರ್ಶಿಸಿದ ಧೈರ್ಯ, ಸಂಕಲ್ಪ ಮತ್ತು ಅದಮ್ಯ ಚೇತನವನ್ನು ವಿವರಿಸುವ, ಇಬ್ಬರು ನಾನ್-ಕಮಿಷನ್ಡ್ ಆಫೀಸರ್‌ಗಳು ಪ್ರಸ್ತುತಪಡಿಸಿದ 'ಗೌರವ್ ಗಾಥಾ' ಕಾರ್ಯಕ್ರಮವನ್ನು ವೀಕ್ಷಿಸಿದರು. ಕಾರ್ಗಿಲ್ ಯುದ್ಧದ ಇತಿಹಾಸ ಮತ್ತು ಪರಂಪರೆಯನ್ನು ಸಾರ್ವಜನಿಕರಿಗೆ ವ್ಯಾಪಕವಾಗಿ ತಲುಪಿಸಲು ವಿನ್ಯಾಸಗೊಳಿಸಲಾದ 'ವರ್ಚುವಲ್ ವಾಕ್‌ಥ್ರೂ ಪೋರ್ಟಲ್' ಅನ್ನು ಅವರು ಉದ್ಘಾಟಿಸಿದರು. ನಂತರ ಅವರು 'ಹಟ್ ಆಫ್ ರಿಮೆಂಬರೆನ್ಸ್' ಗೆ ಭೇಟಿ ನೀಡಿ, 'ವೀರ ಭೂಮಿ'ಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.



ಶ್ರೀ ರಾಜನಾಥ್ ಸಿಂಗ್ ಅವರು, ಚಹಾಕೂಟದಲ್ಲಿ ಗಣ್ಯರು, ಯೋಧರು ಮತ್ತು ಅವರ ಕುಟುಂಬಸ್ಥರೊಂದಿಗೆ ಸಂವಾದ ನಡೆಸಿದರು. ಜುಲೈ 14, 2026 ರಂದು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ತಾವು ಹಸಿರು ನಿಶಾನೆ ತೋರಿದ್ದ, ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ಆಯೋಜಿಸಲಾಗಿದ್ದ 'ಶೌರ್ಯ ವಿಜಯ್ ಯಾತ್ರೆ' ಮೋಟಾರ್ ಸೈಕಲ್ ರ‍್ಯಾಲಿಯನ್ನು ಅವರು ಸ್ವೀಕರಿಸಿದರು.

ರಕ್ಷಾ ಮಂತ್ರಿಗಳು ದ್ರಾಸ್‌ನಲ್ಲಿ ರಕ್ಷಣಾ ಪಡೆಗಳೊಂದಿಗೆ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ನೇತೃತ್ವ ವಹಿಸಿದರೆ, ಸಹಾಯಕ ರಕ್ಷಣಾ ಸಚಿವರಾದ ಶ್ರೀ ಸಂಜಯ್ ಸೇಥ್ ಅವರು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪುಷ್ಪಗುಚ್ಛ ಇರಿಸಿ ಹುತಾತ್ಮ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಎನ್.ಎಸ್. ರಾಜಾ ಸುಬ್ರಮಣಿ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಮತ್ತು ಭೂಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸಂದೀಪ್ ಜೈನ್ ಅವರೂ ಸಹ ವೀರರಿಗೆ ಶ್ರದ್ಧಾಂಜಲಿ ಅರ್ಪಿಸಿದರು.


*****
(रिलीज़ आईडी: 2289588)
आगंतुक पटल : 14