ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ರ ಪರಿಶೀಲನೆ; ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸಲು ನಿರ್ದೇಶನ
ಸೈಬರ್ ಅಪರಾಧಗಳಿಂದ, ವಿಶೇಷವಾಗಿ ಸೈಬರ್ ಹಣಕಾಸು ವಂಚನೆಗಳಿಂದ ನಾಗರಿಕರಿಗೆ ತಕ್ಷಣದ ಪರಿಹಾರವನ್ನು ಒದಗಿಸಲು ಸ್ಥಾಪಿಸಲಾದ ವಿವಿಧ ನಾಗರಿಕ-ಕೇಂದ್ರಿತ ಕಾರ್ಯವಿಧಾನಗಳನ್ನೂ ಪರಿಶೀಲಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು
ಕೃತಕ ಬುದ್ಧಿಮತ್ತೆ (ಎ.ಐ) ಸೇರಿದಂತೆ ಸುಧಾರಿತ ತಂತ್ರಜ್ಞಾನಗಳ ಬಳಕೆಯೊಂದಿಗೆ 1930 ಸಹಾಯವಾಣಿ ವ್ಯವಸ್ಥೆಯ ಸಮಗ್ರ ಆಧುನೀಕರಣ
ಸುರಕ್ಷಿತ, ತಂತ್ರಜ್ಞಾನ ಚಾಲಿತ ಮತ್ತು ನಾಗರಿಕ-ಕೇಂದ್ರಿತ ಸೈಬರ್ ಅಪರಾಧ ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ ಕಾರ್ಯವಿಧಾನವನ್ನು ನಿರ್ಮಿಸಲು ಮೋದಿ ಸರ್ಕಾರ ಬದ್ಧವಾಗಿದೆ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 1930 ಕಾಲ್ ಸೆಂಟರ್‌ಗಳನ್ನು ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ದೃಷ್ಟಿಯಿಂದ ಮತ್ತಷ್ಟು ಬಲಪಡಿಸಲು ಕೇಂದ್ರ ಗೃಹ ಸಚಿವರ ನಿರ್ದೇಶನ
ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಅಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಸಿ.ಎಫ್.ಸಿ.ಎಫ್.ಆರ್.ಎಂ.ಎಸ್) ಕಾರ್ಯಕ್ಷಮತೆಯ ಪರಿಶೀಲನೆ
ಸಿ.ಎಫ್.ಸಿ.ಎಫ್.ಆರ್.ಎಂ.ಎಸ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಮನಿ ರೆಸ್ಟೋರೇಶನ್ ಮಾಡ್ಯೂಲ್ (ಎಂ.ಆರ್.ಎಂ) ಮತ್ತು ಗ್ರೀವೆನ್ಸ್ ರಿಡ್ರೆಸಲ್ ಮಾಡ್ಯೂಲ್ (ಜಿ.ಆರ್.ಎಂ) ಗಳ ನಿಯಮಿತ ಪರಿಶೀಲನೆಗೆ ಸೂಚನೆ
ಹಣ ಮರುಸ್ಥಾಪನೆ ಮತ್ತು ಕುಂದುಕೊರತೆ ನಿವಾರಣಾ ಕಾರ್ಯವಿಧಾನದಿಂದ ಇದುವರೆಗೆ ಸುಮಾರು ಒಂದು ಲಕ್ಷ ನಾಗರಿಕರಿಗೆ ಅನುಕೂಲ
ಸೈಬರ್ ಅಪರಾಧಗಳಲ್ಲಿ ಬಳಸಲಾಗುವ ಮ್ಯೂಲ್ ಬ್ಯಾಂಕ್ ಖಾತೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಬಲವಾದ ಕ್ರಮಗಳನ್ನು ಕೈಗೊಳ್ಳಲು ಒತ್ತು
प्रविष्टि तिथि:
17 JUN 2026 8:04PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು ಮತ್ತು ಈ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸೈಬರ್ ಅಪರಾಧಗಳಿಂದ, ವಿಶೇಷವಾಗಿ ಸೈಬರ್ ಹಣಕಾಸು ವಂಚನೆಗಳಿಂದ ನಾಗರಿಕರಿಗೆ ತಕ್ಷಣದ ಪರಿಹಾರವನ್ನು ಒದಗಿಸಲು ಸ್ಥಾಪಿಸಲಾದ ವಿವಿಧ ನಾಗರಿಕ-ಕೇಂದ್ರಿತ ಕಾರ್ಯವಿಧಾನಗಳನ್ನು ಸಹ ಈ ಸಭೆಯಲ್ಲಿ ಪರಿಶೀಲಿಸಲಾಯಿತು.

ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930, ನಾಗರಿಕರು ಸೈಬರ್ ಅಪರಾಧಗಳಿಗೆ, ವಿಶೇಷವಾಗಿ ಹಣಕಾಸಿನ ಸೈಬರ್ ವಂಚನೆಗಳಿಗೆ ಸಂಬಂಧಿಸಿದ ದೂರುಗಳನ್ನು ಸರಳ ಮತ್ತು ತ್ವರಿತ ರೀತಿಯಲ್ಲಿ ನೋಂದಾಯಿಸಲು ಒಂದು ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸಹಾಯವಾಣಿಯ ಮೂಲಕ ಸಹಾಯ ಕೋರುವ ಪ್ರತಿಯೊಬ್ಬ ನಾಗರಿಕನಿಗೂ ಸಕಾಲದಲ್ಲಿ ನೆರವು ಸಿಗಬೇಕು ಮತ್ತು ಯಾವುದೇ ದೂರು ಗಮನ ಹರಿಸದೆ ಅಥವಾ ಬಾಕಿ ಉಳಿಯಬಾರದು ಎಂದು ಅವರು ಒತ್ತಿಹೇಳಿದರು.
1930 ಸಹಾಯವಾಣಿ ವ್ಯವಸ್ಥೆಯ ದಕ್ಷತೆ, ಪ್ರತಿಕ್ರಿಯೆ ಸಾಮರ್ಥ್ಯ ಮತ್ತು ಸೇವೆ ಸಲ್ಲಿಕೆಯನ್ನು ಮತ್ತಷ್ಟು ಸುಧಾರಿಸಲು, ಕೃತಕ ಬುದ್ಧಿಮತ್ತೆ (ಎ.ಐ) ಸೇರಿದಂತೆ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಅದನ್ನು ಸಮಗ್ರವಾಗಿ ಆಧುನೀಕರಿಸಲು ಮತ್ತು ನವೀಕರಿಸಲು ಶ್ರೀ ಅಮಿತ್ ಶಾ ಅವರು ನಿರ್ದೇಶನ ನೀಡಿದರು. ನವೀಕರಿಸಿದ ವ್ಯವಸ್ಥೆಯು ವೇಗವಾಗಿ ದೂರು ನೋಂದಣಿ, ಇಂಟೆಲಿಜೆಂಟ್ ಕಾಲ್ ರೂಟಿಂಗ್ ಮತ್ತು ನಾಗರಿಕರ ಕುಂದುಕೊರತೆಗಳ ಪರಿಣಾಮಕಾರಿ ನಿರ್ವಹಣೆಯನ್ನು ಸುಲಭಗೊಳಿಸಬೇಕು ಎಂದು ಅವರು ಹೇಳಿದರು.
ಸುರಕ್ಷಿತ, ತಂತ್ರಜ್ಞಾನ ಚಾಲಿತ ಮತ್ತು ನಾಗರಿಕ-ಕೇಂದ್ರಿತ ಸೈಬರ್ ಅಪರಾಧ ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ ಕಾರ್ಯವಿಧಾನವನ್ನು ನಿರ್ಮಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1930 ಕಾಲ್ ಸೆಂಟರ್‌ಗಳನ್ನು ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ದೃಷ್ಟಿಯಿಂದ ಮತ್ತಷ್ಟು ಬಲಪಡಿಸಬೇಕು ಎಂದು ಅವರು ನಿರ್ದೇಶಿಸಿದರು. ಹಾರ್ಡ್‌ವೇರ್ ಮತ್ತು ತಾಂತ್ರಿಕ ನವೀಕರಣಗಳಿಗಾಗಿ ಗೃಹ ವ್ಯವಹಾರಗಳ ಸಚಿವಾಲಯವು ಅಗತ್ಯ ಬೆಂಬಲವನ್ನು ಒದಗಿಸುತ್ತದೆ, ದೂರುಗಳ ಸಕಾಲಿಕ ವಿಲೇವಾರಿಗೆ ಅನುಕೂಲವಾಗುವಂತೆ ಈ ಕೇಂದ್ರಗಳಲ್ಲಿ ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗುವುದು ಎಂದು ಅವರು ಹೇಳಿದರು.

ಸಮರ್ಥ ಕರೆ ನಿರ್ವಹಣೆ ಮತ್ತು ಸೂಕ್ತ ಮಟ್ಟಗಳಿಗೆ ಕರೆಗಳನ್ನು ಸುಲಭವಾಗಿ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಮಟ್ಟದ 1930 ಕಾಲ್ ಸೆಂಟರ್‌ಗಳನ್ನು ಬಲವಾದ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ (ಐ.ವಿ.ಆರ್) ವ್ಯವಸ್ಥೆಗಳೊಂದಿಗೆ ನವೀಕರಿಸಲು ಶ್ರೀ ಅಮಿತ್ ಶಾ ಅವರು ನಿರ್ದೇಶನ ನೀಡಿದರು.
ರಾಷ್ಟ್ರೀಯ ಸೈಬರ್ ಅಪರಾಧ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಸಾಕಷ್ಟು ಸಿಬ್ಬಂದಿ ಮತ್ತು ಕರೆ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರೀಯ ಮಟ್ಟದ 1930 ಕಾಲ್ ಸೆಂಟರ್ ಅನ್ನು ಸ್ಥಾಪಿಸಲು ಶ್ರೀ ಅಮಿತ್ ಶಾ ಅವರು ನಿರ್ದೇಶಿಸಿದರು. ಈ ರಾಷ್ಟ್ರೀಯ ಕಾಲ್ ಸೆಂಟರ್ ರಾಜ್ಯ ಮಟ್ಟದಲ್ಲಿ ಉತ್ತರಿಸಲಾಗದ ಕರೆಗಳನ್ನು ನಿರ್ವಹಿಸುತ್ತದೆ ಮತ್ತು ಪ್ರತಿಯೊಬ್ಬ ಸಂತ್ರಸ್ತನಿಗೂ ಸಕಾಲಿಕ ಸಹಾಯ ಮತ್ತು ದೂರುಗಳ ತ್ವರಿತ ನೋಂದಣಿಯನ್ನು ಖಚಿತಪಡಿಸುತ್ತದೆ.
ಸೈಬರ್ ಹಣಕಾಸು ವಂಚನೆಗಳನ್ನು ಎದುರಿಸಲು ಗೃಹ ವ್ಯವಹಾರಗಳ ಸಚಿವಾಲಯದ ಪ್ರಮುಖ ಉಪಕ್ರಮವಾದ ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಅಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಸಿ.ಎಫ್.ಸಿ.ಎಫ್.ಆರ್.ಎಂ.ಎಸ್) ಕಾರ್ಯಕ್ಷಮತೆಯನ್ನು ಸಹ ಸಭೆಯಲ್ಲಿ ಪರಿಶೀಲಿಸಲಾಯಿತು. ಈ ವ್ಯವಸ್ಥೆಯು ಬ್ಯಾಂಕಿಂಗ್ ನೆಟ್‌ವರ್ಕ್ ಮೂಲಕ ವಂಚನೆಯ ಹಣಕಾಸು ವಹಿವಾಟುಗಳನ್ನು ತ್ವರಿತವಾಗಿ ನಿರ್ಬಂಧಿಸಲು ಸಹಾಯ ಮಾಡುತ್ತದೆ, ಆ ಮೂಲಕ ಸಂತ್ರಸ್ತರಿಗೆ ಹಣವನ್ನು ಸುರಕ್ಷಿತವಾಗಿರಿಸುವ ಮತ್ತು ಮರುಸ್ಥಾಪಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಸೈಬರ್ ಹಣಕಾಸು ವಂಚನೆ ಪ್ರಕರಣಗಳ ತ್ವರಿತ ಪರಿಹಾರಕ್ಕಾಗಿ ಗೃಹ ವ್ಯವಹಾರಗಳ ಸಚಿವಾಲಯವು ಜನವರಿ 2026 ರಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್.ಒ.ಪಿ) ಅನ್ನು ಹೊರಡಿಸಿತ್ತು ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಿರ್ಬಂಧಿಸಲಾದ (ಬ್ಲಾಕ್ ಮಾಡಲಾದ) ಹಣವನ್ನು ಸಂತ್ರಸ್ತ ನಾಗರಿಕರಿಗೆ ಆದಷ್ಟು ಬೇಗ ಹಿಂತಿರುಗಿಸಲು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಕಾನೂನು ಜಾರಿ ಸಂಸ್ಥೆಗಳು ಮತ್ತು ಇತರ ಪಾಲುದಾರರ ನಡುವೆ ಸಂಘಟಿತ ಕ್ರಮವನ್ನು ಈ ಎಸ್.ಒ.ಪಿ ಖಚಿತಪಡಿಸುತ್ತದೆ. ಈ ಎಸ್.ಒ.ಪಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್ ಕೂಡ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ ಎಂದು ಅವರು ಹೇಳಿದರು.
ಪರಿಶೀಲನಾ ಸಭೆಯಲ್ಲಿ ಶ್ರೀ ಅಮಿತ್ ಶಾ ಅವರು ಸಿ.ಎಫ್.ಸಿ.ಎಫ್.ಆರ್.ಎಂ.ಎಸ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಮನಿ ರೆಸ್ಟೋರೇಶನ್ ಮಾಡ್ಯೂಲ್ (ಎಂ.ಆರ್.ಎಂ) ಮತ್ತು ಗ್ರೀವೆನ್ಸ್ ರಿಡ್ರೆಸಲ್ ಮಾಡ್ಯೂಲ್ (ಜಿ.ಆರ್.ಎಂ) ಗಳ ನಿಯಮಿತ ಪರಿಶೀಲನೆಗೆ ನಿರ್ದೇಶನ ನೀಡಿದರು. ದೂರುಗಳ ಸಕಾಲಿಕ ಪರಿಹಾರ ಮತ್ತು ಸಂತ್ರಸ್ತರಿಗೆ ತ್ವರಿತವಾಗಿ ಹಣವನ್ನು ಮರುಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಮಾಡ್ಯೂಲ್‌ಗಳ ಪರಿಣಾಮಕಾರಿ ಅನುಷ್ಠಾನವನ್ನು ರಾಜ್ಯ ಮಟ್ಟದಲ್ಲಿ ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಹೇಳಿದರು. ಅನಗತ್ಯವಾಗಿ ಸ್ಥಗಿತ ಮಾಡಲಾದ ಬ್ಯಾಂಕ್ ಖಾತೆಗಳ ಪ್ರಕರಣಗಳಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಮತ್ತು ಅಂತಹ ವಿಷಯಗಳಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಶ್ರೀ ಶಾ ಅವರು ಹೇಳಿದರು. ಇದುವರೆಗೆ ಸುಮಾರು ಒಂದು ಲಕ್ಷ ನಾಗರಿಕರು ಹಣ ಮರುಸ್ಥಾಪನೆ ಮತ್ತು ಕುಂದುಕೊರತೆ ನಿವಾರಣಾ ಕಾರ್ಯವಿಧಾನದಿಂದ ಪ್ರಯೋಜನ ಪಡೆದಿದ್ದಾರೆ ಎಂದು ಅವರು ಹೇಳಿದರು.
ಎಸ್.ಒ.ಪಿ ಅಡಿಯಲ್ಲಿ, ಹಣವನ್ನು ಮರುಸ್ಥಾಪಿಸಬಹುದಾದ ಸರಿಸುಮಾರು 94 ಲಕ್ಷ ಬ್ಯಾಂಕ್ ಖಾತೆಗಳನ್ನು ಇದುವರೆಗೆ ಹಣ ಮರುಸ್ಥಾಪನೆ ಮತ್ತು ಕುಂದುಕೊರತೆ ನಿವಾರಣಾ ಚೌಕಟ್ಟಿನಡಿಯಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಅಧಿಕಾರಿಗಳು ಕೇಂದ್ರ ಗೃಹ ಸಚಿವರಿಗೆ ತಿಳಿಸಿದರು.
ಹಣಕಾಸು ವಂಚನೆಗಳಲ್ಲಿ ಸೈಬರ್ ಅಪರಾಧಿಗಳು ಬಳಸುವ 'ಮ್ಯೂಲ್ ಬ್ಯಾಂಕ್ ಖಾತೆಗಳ' ಸಮಸ್ಯೆಯನ್ನು ಎದುರಿಸಲು ಹೆಚ್ಚು ಪರಿಣಾಮಕಾರಿ ಕ್ರಮಗಳ ಅಗತ್ಯವನ್ನು ಕೇಂದ್ರ ಗೃಹ ಸಚಿವರು ಒತ್ತಿಹೇಳಿದರು. ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (ಐ.4.ಸಿ), ರಾಜ್ಯ ಸರ್ಕಾರಗಳು, ಕಾನೂನು ಜಾರಿ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಸಂಘಟಿತ ಪ್ರಯತ್ನಗಳ ಮೂಲಕ, ಸೈಬರ್ ಅಪರಾಧಗಳ ಸಂತ್ರಸ್ತರಿಗೆ ತ್ವರಿತ ಮತ್ತು ಪರಿಣಾಮಕಾರಿ ಸಹಾಯವನ್ನು ಖಚಿತಪಡಿಸುವುದರ ಜೊತೆಗೆ ನಮ್ಮ ಸೈಬರ್ ಭದ್ರತಾ ಚೌಕಟ್ಟನ್ನು ನಾವು ಮತ್ತಷ್ಟು ಬಲಪಡಿಸುತ್ತೇವೆ ಎಂದು ಅವರು ಹೇಳಿದರು.
****
(रिलीज़ आईडी: 2274327)
आगंतुक पटल : 7