ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಜೈಸಲ್ಮೇರ್ ನ ರಾಮಗಢದಲ್ಲಿ 20 ಕಿ.ವ್ಯಾ. ಆಕಾಶವಾಣಿ ಎಫ್ ಎಂ ಟ್ರಾನ್ಸ್ ಮಿಟರ್ ಉದ್ಘಾಟಿಸಿದರು
ರೇಡಿಯೋ ಪ್ರಸಾರವು ಪ್ರಸ್ತುತತೆ ಮತ್ತು ಪ್ರಭಾವವನ್ನು ಕಾಯ್ದುಕೊಳ್ಳಲು “ಡಿಜಿಟಲ್ ಫಸ್ಟ್” ಮತ್ತು “ಹೈಪರ್-ಲೋಕಲ್” ವಿಧಾನವನ್ನು ಅಳವಡಿಸಿಕೊಳ್ಳಬೇಕು: ಶ್ರೀ ವೈಷ್ಣವ್
ಹೊಸ ಎಫ್ ಎಂ ಟ್ರಾನ್ಸ್ ಮಿಟರ್ “ಕಾಶ್ಮೀರದಿಂದ ಕಚ್” ವರೆಗಿನ ಸಂಪರ್ಕದ ದೂರದೃಷ್ಟಿಯನ್ನು ಮುನ್ನಡೆಸುತ್ತಾ, ಗಡಿ ಪ್ರದೇಶಗಳಲ್ಲಿ ಪ್ರಸಾರ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ
प्रविष्टि तिथि:
11 JUN 2026 3:57PM by PIB Bengaluru
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಜೈಸಲ್ಮೇರ್ ನ ರಾಮಗಢದಲ್ಲಿ 20 ಕಿಲೋವ್ಯಾಟ್ ಆಕಾಶವಾಣಿ ಎಫ್ ಎಂ ಟ್ರಾನ್ಸ್ ಮಿಟರ್ ಅನ್ನು ಆಕಾಶವಾಣಿ ಜೈಪುರ ಆವರಣದಿಂದ ವರ್ಚುವಲ್ ಆಗಿ ಉದ್ಘಾಟಿಸಿದರು.

ಈ ಸೇರ್ಪಡೆಯೊಂದಿಗೆ, ರಾಜಸ್ಥಾನದಲ್ಲಿ ಎಫ್ ಎಂ ಟ್ರಾನ್ಸ್ ಮಿಟರ್ ಗಳ ಸಂಖ್ಯೆ 39 ಕ್ಕೆ ಏರಿದೆ. ರಾಮಗಢ ಟ್ರಾನ್ಸ್ ಮಿಟರ್ ಗಡಿ ಪ್ರದೇಶದಲ್ಲಿ 80 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೇಡಿಯೋ ಪ್ರಸಾರವನ್ನು ಖಚಿತಪಡಿಸುತ್ತದೆದೆ, ಜೈಸಲ್ಮೇರ್ ಜಿಲ್ಲೆಯ ಸುಮಾರು 20,000 ಚದರ ಕಿಲೋಮೀಟರ್ ಪ್ರದೇಶವನ್ನು ಇದು ಒಳಗೊಳ್ಳಲಿದ್ದು, ಜನರು ವಿವಿಧ ಮಾಹಿತಿ, ಶೈಕ್ಷಣಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಲಿಸಲು ಅನುವು ಮಾಡಿಕೊಡುತ್ತದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ವೈಷ್ಣವ್, ಪ್ರಸಾರ ಭಾರತಿಯ ಕಾರ್ಯನಿರ್ವಹಣೆ ಮತ್ತು ದೃಷ್ಟಿಕೋನದಲ್ಲಿ ರೂಪಾಂತರಕ್ಕೆ ಕರೆ ನೀಡಿದರು. ತೀವ್ರ ತಾಂತ್ರಿಕ ಪ್ರಗತಿಯ ಈ ಯುಗದಲ್ಲಿ, ರೇಡಿಯೋ ಪ್ರಸಾರವು ಪ್ರಸ್ತುತತೆ ಮತ್ತು ಪ್ರಭಾವವನ್ನು ಕಾಯ್ದುಕೊಳ್ಳಲು “ಡಿಜಿಟಲ್ ಫಸ್ಟ್” (ಡಿಜಿಟಲ್‌ಗೆ ಪ್ರಥಮ ಆದ್ಯತೆ) ಮತ್ತು “ಹೈಪರ್-ಲೋಕಲ್” (ಸ್ಥಳೀಯತೆಗೆ ಹೆಚ್ಚಿನ ಒತ್ತು) ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಿಹೇಳಿದರು. ಈ ರೂಪಾಂತರಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು ಸ್ಥಳೀಯ ಕಲಾವಿದರು ಹಾಗೂ ಕುಶಲಕರ್ಮಿಗಳನ್ನು ಪ್ರಸಾರ ಪರಿಸರ ವ್ಯವಸ್ಥೆಯಲ್ಲಿ ಸಂಯೋಜಿಸುವ ಮಹತ್ವವನ್ನು ಒತ್ತಿಹೇಳಿದರು.
ಸಚಿವರು ಜೈಪುರದಲ್ಲಿ ಮುಂಬರಲಿರುವ ಎಐ (ಕೃತಕ ಬುದ್ಧಿಮತ್ತೆ) ಡೇಟಾ ಸೆಂಟರ್ ಅನ್ನು ಸಹ ಉಲ್ಲೇಖಿಸಿದರು, ಇದನ್ನು ಭವಿಷ್ಯದ ಬುನಾದಿ ಮತ್ತು ತಾಂತ್ರಿಕ ಪ್ರಗತಿಯತ್ತ ಒಂದು ಪ್ರಮುಖ ಹೆಜ್ಜೆ ಎಂದು ಬಣ್ಣಿಸಿದರು.
ಪ್ರಸಾರ ಭಾರತಿ ಅಧ್ಯಕ್ಷರಾದ ಪ್ರಸೂನ್ ಜೋಶಿ ಸಭೆಯನ್ನುದ್ದೇಶಿಸಿ ಮಾತನಾಡಿ, ಆಕಾಶವಾಣಿ ಮತ್ತು ದೂರದರ್ಶನದಂತಹ ಸಂಸ್ಥೆಗಳ ನಿರಂತರ ಮಹತ್ವವನ್ನು ಒತ್ತಿ ಹೇಳಿದರು. ಈ ಸಂಸ್ಥೆಗಳು ಸಮಾಜದ ಬೇರುಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿವೆ ಮತ್ತು ಮಾಹಿತಿಯನ್ನು ಪ್ರಸಾರ ಮಾಡುವಲ್ಲಿ ಹಾಗೂ ತಳಮಟ್ಟದ ವಾಸ್ತವಗಳನ್ನು ವಿಶಾಲ ಜನಸಮುದಾಯಕ್ಕೆ ಪ್ರತಿಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

ಗಡಿ ಪ್ರದೇಶಗಳಲ್ಲಿ ಆಕಾಶವಾಣಿ ಮತ್ತು ದೂರದರ್ಶನದ ತಲುಪುವಿಕೆಯನ್ನು ಬಲಪಡಿಸುವ ಗುರಿಯನ್ನು ಈ ಟ್ರಾನ್ಸ್ ಮಿಟರ್ ಹೊಂದಿದೆ. ಇದು ಜೈಸಲ್ಮೇರ್ ಮಾತ್ರವಲ್ಲದೆ ಸುತ್ತಮುತ್ತಲಿನ ಪ್ರದೇಶಗಳಿಗೂ ಸೇವೆ ಸಲ್ಲಿಸಲಿದ್ದು, ಗಡಿ ಸಂವಹನ ಮೂಲಸೌಕರ್ಯದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಉಪಕ್ರಮವು ಇಡೀ ಗಡಿಯುದ್ದಕ್ಕೂ ಪ್ರಸಾರ ಸೇವೆಗಳ ವ್ಯವಸ್ಥಿತ ವಿಸ್ತರಣೆಯನ್ನು ಖಚಿತಪಡಿಸುವ “ಕಾಶ್ಮೀರದಿಂದ ಕಚ್” ವರೆಗಿನ ಸಮರ್ಪಿತ ಪ್ರಸಾರ ಮೂಲಸೌಕರ್ಯದ ದೃಷ್ಟಿಕೋನಕ್ಕೆ ಅನುಗುಣವಾಗಿದೆ.
ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀ ವೈಷ್ಣವ್ ಅವರು ಪ್ರಸಾರ ಭಾರತಿಯ ಯುವ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಆಕಾಶವಾಣಿ ಜೈಪುರ ಆವರಣದಲ್ಲಿ ನಡೆದ ಈ ಸಮಾರಂಭದಲ್ಲಿ ರಾಜಸ್ಥಾನದ ಇಂಧನ ಸಚಿವರಾದ ಶ್ರೀ ಹೀರಾಲಾಲ್ ನಗರ್, ಜೈಪುರ ಸಂಸದರಾದ ಶ್ರೀಮತಿ ಮಂಜು ಶರ್ಮಾ ಮತ್ತು ಆಕಾಶವಾಣಿ ಮಹಾನಿರ್ದೇಶಕರಾದ ಶ್ರೀ ರಾಜೀವ್ ಕುಮಾರ್ ಜೈನ್ ಉಪಸ್ಥಿತರಿದ್ದರು. ಜೈಸಲ್ಮೇರ್ ಸಂಸದರಾದ ಶ್ರೀ ಉಮೇದಾರಾಮ್ ಬೇನಿವಾಲ್ ಕೂಡ ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*****
(रिलीज़ आईडी: 2271674)
आगंतुक पटल : 12
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Gujarati
,
Odia
,
Tamil
,
Telugu
,
Malayalam