|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಹಿತಿ ಸಭೆ
ವಿಮಾನಯಾನ ಸಂಸ್ಥೆಗಳಿಗೆ ಬೆಂಬಲ ನೀಡಲು ಎಟಿಎಫ್ (ATF) ಬೆಲೆ ಸ್ಥಿರೀಕರಣ ನಿಧಿ; ದೇಶಾದ್ಯಂತ ನಿರಂತರ ವಾಯು ಸಂಪರ್ಕವನ್ನು ಕಾಯ್ದುಕೊಳ್ಳಲು ನೆರವು ಎಲ್ಲಾ ತೈಲ ಶುದ್ಧೀಕರಣ ಘಟಕಗಳು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಣೆ; ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್‌ನ ಸಮರ್ಪಕ ದಾಸ್ತಾನು ಲಭ್ಯ ಕಳೆದ 3 ದಿನಗಳಲ್ಲಿ ಸುಮಾರು 1.50 ಕೋಟಿ ಸಿಲಿಂಡರ್‌ಗಳ ಬುಕಿಂಗ್‌ಗೆ ಪ್ರತಿಯಾಗಿ ಸುಮಾರು 1.43 ಕೋಟಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆ 03.06.2026 ರವರೆಗೆ MYPNGD.in ಜಾಲತಾಣದ ಮೂಲಕ 80,400 ಕ್ಕೂ ಹೆಚ್ಚು ಪಿಎನ್‌ಜಿ ಗ್ರಾಹಕರಿಂದ ತಮ್ಮ ಎಲ್‌ಪಿಜಿ ಸಂಪರ್ಕಗಳ ಹಸ್ತಾಂತರ ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತ; ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊತ್ತ ವಾಣಿಜ್ಯ ನೌಕೆಗಳು ಅಥವಾ ವಿದೇಶಿ ಧ್ವಜ ಹೊತ್ತ ವಾಣಿಜ್ಯ ನೌಕೆಗಳಲ್ಲಿರುವ ಭಾರತೀಯ ನಾವಿಕರಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಭಾರತೀಯ ಪ್ರಜೆ ಸಾವು; 13 ಭಾರತೀಯ ಪ್ರಜೆಗಳಿಗೆ ಗಾಯ; ಮಿಷನ್‌ನಿಂದ ಅಗತ್ಯವಿರುವ ಎಲ್ಲಾ ನೆರವು ವಿಸ್ತರಣೆ
प्रविष्टि तिथि:
04 JUN 2026 6:19PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ, ಭಾರತ ಸರ್ಕಾರವು ನಿಯಮಿತ ಅಪ್‌ಡೇಟ್‌ಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡುವ ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ, ಇಂದು ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಮಾಧ್ಯಮ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು, ಆ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ಮತ್ತು ಪ್ರಮುಖ ವಲಯಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ನಾಗರಿಕ ವಿಮಾನಯಾನ ಸಚಿವಾಲಯವು ಎಟಿಎಫ್ (ATF) ಬೆಲೆ ಸ್ಥಿರೀಕರಣ ನಿಧಿಯ ಕುರಿತು ಮಾಧ್ಯಮಗಳೊಂದಿಗೆ ವಿವರಗಳನ್ನು ಹಂಚಿಕೊಂಡಿದೆ.
ಎಟಿಎಫ್ (ATF) ಬೆಲೆ ಸ್ಥಿರೀಕರಣ ಕ್ರಮಗಳು
ನಿಗದಿತ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆ ಸ್ಥಿರೀಕರಣ ಬೆಂಬಲವನ್ನು ಒದಗಿಸಲು ₹10,000 ಕೋಟಿವರೆಗಿನ ಒಂದು ಬಾರಿಯ ಬಜೆಟ್ ಬೆಂಬಲ ಕಾರ್ಯವಿಧಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ವಾಯು ಸಂಪರ್ಕವನ್ನು ರಕ್ಷಿಸಲು, ವಾಯು ಸೇವೆಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಸ್ತುತ ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನ ಬೆಲೆಗಳಲ್ಲಿ ಉಂಟಾಗುತ್ತಿರುವ ಅಸಾಧಾರಣ ಏರಿಳಿತದ ಪ್ರಭಾವದಿಂದ ಪ್ರಯಾಣಿಕರನ್ನು ರಕ್ಷಿಸಲು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಈ ಕೆಳಗಿನ ಮಾಹಿತಿಗಳನ್ನು ನೀಡಲಾಯಿತು:
- ಅನುಮೋದಿತ ಕಾರ್ಯವಿಧಾನವನ್ನು ತಾತ್ಕಾಲಿಕ ಮತ್ತು ಸ್ವಯಂ-ಪರಿಹರಿಸಿಕೊಳ್ಳುವ (Self-correcting) ವ್ಯವಸ್ಥೆಯಾಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಡಿ, ಸರ್ಕಾರವು ತೈಲ ಮಾರಾಟ ಕಂಪನಿಗಳಿಗೆ (OMCs) ಬಡ್ಡಿ ರಹಿತ ಮುಂಗಡವನ್ನು ನೀಡಲಿದ್ದು, ಇದು ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳೆರಡಕ್ಕೂ ಭಾಗವಹಿಸುವ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮೊದಲೇ ನಿರ್ಧರಿಸಿದ ಮತ್ತು ಸ್ಥಿರವಾದ ಬೆಲೆಯಲ್ಲಿ ಎಟಿಎಫ್ ಪೂರೈಸಲು ಅನುವು ಮಾಡಿಕೊಡುತ್ತದೆ. ಅಂತಾರಾಷ್ಟ್ರೀಯ ಎಟಿಎಫ್ ಬೆಲೆಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಾದಾಗಲೆಲ್ಲಾ, ಈ ನಿಧಿಯು ತೈಲ ಮಾರಾಟ ಕಂಪನಿಗಳಿಗೆ ಉಂಟಾಗುವ ವ್ಯತ್ಯಾಸದ ಮೊತ್ತವನ್ನು ಸರಿದೂಗಿಸುತ್ತದೆ.
- ಮುಖ್ಯವಾಗಿ, ಇಂಧನ ಬೆಲೆಗಳು ಕಡಿಮೆಯಾದಾಗ, ವ್ಯತ್ಯಾಸದ ಮೊತ್ತವನ್ನು ತೈಲ ಮಾರಾಟ ಕಂಪನಿಗಳಿಂದ ಮರುಪಡೆಯಲಾಗುತ್ತದೆ ಮತ್ತು ಪಾರದರ್ಶಕ ಹೊಂದಾಣಿಕೆ ಕಾರ್ಯವಿಧಾನದ ಮೂಲಕ ಭಾರತದ ಸಂಚಿತ ನಿಧಿಗೆ ಹಿಂತಿರುಗಿಸಲಾಗುತ್ತದೆ. ಆದ್ದರಿಂದ, ಈ ವ್ಯವಸ್ಥೆಯನ್ನು ಸಬ್ಸಿಡಿಯಾಗಿ ನೀಡುತ್ತಿಲ್ಲ, ಬದಲಿಗೆ ಅಸಾಧಾರಣ ಇಂಧನ ಬೆಲೆ ಏರಿಳಿತದ ಪ್ರಭಾವವನ್ನು ಸರಾಗಗೊಳಿಸುವ ಮತ್ತು ನಿಧಿಯ ಪೂರ್ಣ ಹೊಣೆಗಾರಿಕೆ, ಮೇಲ್ವಿಚಾರಣೆ ಹಾಗೂ ಮರುಪಡೆಯುವಿಕೆಯನ್ನು ಖಚಿತಪಡಿಸುವ ತಾತ್ಕಾಲಿಕ ಸ್ಥಿರೀಕರಣ ಕ್ರಮವಾಗಿ ಜಾರಿಗೆ ತರಲಾಗಿದೆ.
- ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದಲ್ಲಿ ಎಟಿಎಫ್ ಪ್ರಮುಖ ಪಾಲನ್ನು ಹೊಂದಿದೆ ಮತ್ತು ಅಂತಾರಾಷ್ಟ್ರೀಯ ಇಂಧನ ಬೆಲೆಗಳ ತೀವ್ರ ಏರಿಕೆಯು, ಹಲವಾರು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಭಾರತೀಯ ವಿಮಾನಗಳ ದೀರ್ಘ ಹಾರಾಟದ ಹಾದಿಗಳೊಂದಿಗೆ ಸೇರಿ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ಮೇಲೆ ಗಮನಾರ್ಹ ಒತ್ತಡವನ್ನು ಉಂಟುಮಾಡಿದೆ. ಅನುಮೋದಿತ ಕಾರ್ಯವಿಧಾನವು ಸ್ಥಿರ-ಬೆಲೆ ವ್ಯವಸ್ಥೆಯ ಮೂಲಕ ಇಂಧನ ವೆಚ್ಚದಲ್ಲಿ ಹೆಚ್ಚಿನ ಮುನ್ಸೂಚನೆಯನ್ನು ಒದಗಿಸುತ್ತದೆ, ಇದು ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಯೋಜಿಸಲು ಮತ್ತು ದೇಶೀಯ ಹಾಗೂ ಅಂತಾರಾಷ್ಟ್ರೀಯ ನೆಟ್‌ವರ್ಕ್‌ಗಳಾದ್ಯಂತ ಪ್ರಯಾಣಿಕರಿಗೆ ಸೇವೆಯನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.
- ಪ್ರಯಾಣಿಕರಿಗೆ ಈ ನಿರ್ಧಾರದ ಪ್ರಮುಖ ಪ್ರಯೋಜನವೆಂದರೆ, ಇಂಧನ ಬೆಲೆಗಳ ತೀವ್ರ ಏರಿಕೆಯಿಂದಾಗಿ ಆಗಾಗ್ಗೆ ಉಂಟಾಗುವ ವಿಮಾನ ದರಗಳ ಹಠಾತ್ ಹೆಚ್ಚಳವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ತೀವ್ರ ಇಂಧನ ಬೆಲೆ ಏರಿಳಿತಗಳಿಗೆ ವಿಮಾನಯಾನ ಸಂಸ್ಥೆಗಳು ಒಳಗಾಗುವುದನ್ನು ಕಡಿಮೆ ಮಾಡುವ ಮೂಲಕ, ಅಂತಹ ವೆಚ್ಚಗಳ ಹೊರೆಯನ್ನು ಪ್ರಯಾಣಿಕರಿಗೆ ವರ್ಗಾಯಿಸುವುದನ್ನು ಕನಿಷ್ಠಗೊಳಿಸಲು ಮತ್ತು ಹೆಚ್ಚಿನ ದರ ಸ್ಥಿರತೆಯನ್ನು ಒದಗಿಸಲು ಸರ್ಕಾರ ಉದ್ದೇಶಿಸಿದೆ. ಇದು ವಿಶೇಷವಾಗಿ ಕುಟುಂಬಗಳು, ವಿದ್ಯಾರ್ಥಿಗಳು, ಉದ್ಯಮ ಪ್ರವಾಸಿಗರು, ಪ್ರವಾಸಿಗರು ಮತ್ತು ಜೀವನೋಪಾಯ ಹಾಗೂ ಆರ್ಥಿಕ ಅವಕಾಶಗಳಿಗಾಗಿ ವಾಯು ಸಾರಿಗೆಯನ್ನು ಅವಲಂಬಿಸಿರುವ ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತದೆ.
- ಈ ಕ್ರಮವು ದೂರದ, ಪ್ರಾದೇಶಿಕ, ಶ್ರೇಣಿ-II (Tier-II) ಮತ್ತು ಶ್ರೇಣಿ-III (Tier-III) ನಗರಗಳ ಸೇವೆಗಳು ಸೇರಿದಂತೆ ದೇಶಾದ್ಯಂತ ನಿರಂತರ ವಾಯು ಸಂಪರ್ಕವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಪ್ರಾದೇಶಿಕ ಅಭಿವೃದ್ಧಿ, ಪ್ರವಾಸೋದ್ಯಮ, ವ್ಯಾಪಾರ, ಆರೋಗ್ಯ ಸೇವೆಗಳ ಲಭ್ಯತೆ, ಶಿಕ್ಷಣ ಮತ್ತು ಹೂಡಿಕೆಗೆ ನಿರಂತರ ಸಂಪರ್ಕ ಅತ್ಯಗತ್ಯವಾಗಿದೆ. ಇದು ದೇಶದ ಎಲ್ಲಾ ಭಾಗಗಳ ನಾಗರಿಕರು ವಾಯು ಸಾರಿಗೆ ಸೇವೆಗಳಿಗೆ ವಿಶ್ವಾಸಾರ್ಹ ಪ್ರವೇಶವನ್ನು ಮುಂದುವರಿಸುವುದನ್ನು ಖಚಿತಪಡಿಸುತ್ತದೆ ಮತ್ತು ಒಳಗೊಳ್ಳುವ ಬೆಳವಣಿಗೆ ಹಾಗೂ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯ ಸರ್ಕಾರದ ದೃಷ್ಟಿಕೋನವನ್ನು ಬೆಂಬಲಿಸುತ್ತದೆ.
- ಈ ನಿರ್ಧಾರವು ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಗಳು, ನಿರ್ವಹಣೆ ಮತ್ತು ದುರಸ್ತಿ ಸಂಸ್ಥೆಗಳು (MRO), ಪ್ರವಾಸೋದ್ಯಮ, ಆತಿಥ್ಯ ಮತ್ತು ಲಾಜಿಸ್ಟಿಕ್ಸ್ ವಲಯಗಳಲ್ಲಿ ಉದ್ಯೋಗವನ್ನು ಬೆಂಬಲಿಸುವ ಮೂಲಕ ಒಟ್ಟಾರೆ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವ ನಿರೀಕ್ಷೆಯಿದೆ. ಇದು ಭಾರತದ ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕವನ್ನು ರಕ್ಷಿಸಲು, ಜಾಗತಿಕ ಮಾರುಕಟ್ಟೆಗಳೊಂದಿಗಿನ ಏಕೀಕರಣವನ್ನು ಬಲಪಡಿಸಲು ಮತ್ತು ಉಡಾನ್ ಯೋಜನೆಯಡಿ ಕಾರ್ಯಾರಂಭ ಮಾಡಲಾದ ವಿಮಾನ ನಿಲ್ದಾಣಗಳು ಸೇರಿದಂತೆ ದೇಶಾದ್ಯಂತ ಅಭಿವೃದ್ಧಿಪಡಿಸಲಾದ ವಿಮಾನ ನಿಲ್ದಾಣ ಮೂಲಸೌಕರ್ಯಗಳ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಜಾಗತಿಕ ಅನಿಶ್ಚಿತತೆಯ ಈ ಅವಧಿಯಲ್ಲಿ ಪ್ರಯಾಣಿಕರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು, ಕೈಗೆಟುಕುವ ಮತ್ತು ವಿಶ್ವಾಸಾರ್ಹ ವಾಯು ಸೇವೆಗಳನ್ನು ನಿರ್ವಹಿಸಲು ಹಾಗೂ ಭಾರತದ ನಾಗರಿಕ ವಿಮಾನಯಾನ ವಲಯದ ದೀರ್ಘಕಾಲೀನ ಬೆಳವಣಿಗೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಂಬಲಿಸಲು ಸರ್ಕಾರ ಬದ್ಧವಾಗಿದೆ.
ಇಂಧನ ಪೂರೈಕೆ ಮತ್ತು ಲಭ್ಯತೆ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಸ್ತುತ ಇಂಧನ ಪೂರೈಕೆ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿತು, ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿತು. ಈ ಸಂದರ್ಭದಲ್ಲಿ ಈ ಕೆಳಗಿನ ಅಂಶಗಳನ್ನು ಸಚಿವಾಲಯವು ಹಂಚಿಕೊಂಡಿದೆ:
ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ನಾಗರಿಕರು ಪೆಟ್ರೋಲ್, ಡೀಸೆಲ್ ಅನ್ನು ಆತಂಕದಿಂದ ಮುಗಿಬಿದ್ದು ಖರೀದಿಸುವುದನ್ನು ಮತ್ತು ಎಲ್‌ಪಿಜಿ ಬುಕಿಂಗ್ ಮಾಡುವುದನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
- ವದಂತಿಗಳ ಬಗ್ಗೆ ಎಚ್ಚರದಿಂದಿರಿ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಿ.
- ನಾಗರಿಕರು ಪಿಎನ್‌ಜಿ (PNG), ಇಂಡಕ್ಷನ್/ಎಲೆಕ್ಟ್ರಿಕ್ ಸ್ಟೌವ್‌ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ವಿನಂತಿಸಲಾಗಿದೆ.
- ಬೃಹತ್ (Bulk) ಮತ್ತು ಕೈಗಾರಿಕಾ ಗ್ರಾಹಕರು ಅಧಿಕೃತ ಖರೀದಿ ಕೇಂದ್ರಗಳಿಂದಲೇ ಡೀಸೆಲ್ ಖರೀದಿಸಲು ವಿನಂತಿಸಲಾಗಿದೆ.
- ಪ್ರಸ್ತುತ ಪರಿಸ್ಥಿತಿಯಲ್ಲಿ, ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.
ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು
- ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ದೇಶೀಯ ಎಲ್‌ಪಿಜಿ, ದೇಶೀಯ ಪಿಎನ್‌ಜಿ ಮತ್ತು ಸಿಎನ್‌ಜಿ (ಸಾರಿಗೆ) ಗೆ 100% ಪೂರೈಕೆಯನ್ನು ಸರ್ಕಾರ ಖಚಿತಪಡಿಸಿದೆ.
- ವಾಣಿಜ್ಯ ಎಲ್‌ಪಿಜಿಗಾಗಿ, ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಫಾರ್ಮಾ, ಉಕ್ಕು, ಆಟೋಮೊಬೈಲ್, ಬೀಜ, ಕೃಷಿ ಇತ್ಯಾದಿಗಳಿಗೂ ಆದ್ಯತೆ ನೀಡಲಾಗಿದೆ. ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್‌ಟಿಎಲ್ (FTL) ಪೂರೈಕೆಯನ್ನು 2 ಮತ್ತು 3 ಮಾರ್ಚ್ 2026 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ.
- ತೈಲ ಶುದ್ಧೀಕರಣ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿದಂತೆ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಸರ್ಕಾರ ಈಗಾಗಲೇ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೊಳಿಸಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು
- ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ಪಿಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ದಾಸ್ತಾನು ಮಾಡುವುದು ಹಾಗೂ ಕಪ್ಪುಮಾರುಕಟ್ಟೆ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ.
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗುತ್ತದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಲವಾರು ಪತ್ರಗಳು ಮತ್ತು ವೀಡಿಯೊ ಕಾನ್ಫರೆನ್ಸ್‌ಗಳ (VCs) ಮೂಲಕ ಇದನ್ನೇ ಪುನರುಚ್ಚರಿಸಿದೆ.
- ಸಮರ್ಪಕ ಇಂಧನ ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಪೂರ್ವಭಾವಿ ಸಾರ್ವಜನಿಕ ಸಂವಹನದ ಅಗತ್ಯವನ್ನು ಭಾರತ ಸರ್ಕಾರವು ಹಲವಾರು ಪತ್ರಗಳು ಮತ್ತು ವೀಡಿಯೊ ಕಾನ್ಫರೆನ್ಸ್‌ಗಳ ಮೂಲಕ ಒತ್ತಿಹೇಳಿದೆ.
- ಭಾರತ ಸರ್ಕಾರವು 26.05.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾವಾರು ಎಚ್‌ಎಸ್‌ಡಿ/ಎಂಎಸ್ (HSD/MS) ವಿತರಣಾ ಮಾದರಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಪರಿಶೀಲಿಸಲು ಸೂಕ್ತ ನಿರ್ದೇಶನಗಳನ್ನು ನೀಡುವಂತೆ ವಿನಂತಿಸಿದೆ. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರು ಚಿಲ್ಲರೆ ವ್ಯಾಪಾರ ಕೇಂದ್ರಗಳ (Retail Outlets) ಮೂಲಕ ಅನಧಿಕೃತವಾಗಿ ಎಚ್‌ಎಸ್‌ಡಿ (HSD) ಖರೀದಿಸುವುದನ್ನು ತಡೆಯಲು ಮತ್ತು ಉಲ್ಲಂಘಿಸುವವರ ವಿರುದ್ಧ ತ್ವರಿತ ದಂಡನಾತ್ಮಕ ಕ್ರಮವನ್ನು ಪ್ರಾರಂಭಿಸಲು ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ಪ್ರಮುಖ ಸಾರಿಗೆ/ಕೈಗಾರಿಕಾ ಕಾರಿಡಾರ್‌ಗಳಲ್ಲಿ ತಪಾಸಣೆ ಮತ್ತು ಜಾರಿ ಚಟುವಟಿಕೆಗಳನ್ನು ತೀವ್ರಗೊಳಿಸಲು ಸೂಚಿಸಲಾಗಿದೆ.
ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದಾಸ್ತಾನು ಮಾಡುವುದು ಮತ್ತು ಕಪ್ಪುಮಾರುಕಟ್ಟೆ ದಂದೆಯನ್ನು ತಡೆಗಟ್ಟಲು ದೇಶಾದ್ಯಂತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಜಾರಿ ಕ್ರಮಗಳು ಮುಂದುವರೆದಿವೆ.
- ಎಲ್‌ಪಿಜಿಗೆ ಸಂಬಂಧಿಸಿದ ಜಾರಿ ಕ್ರಮಗಳು — ಎಲ್‌ಪಿಜಿ ಸಿಲಿಂಡರ್‌ಗಳ ದಾಸ್ತಾನು ಮತ್ತು ಕಪ್ಪುಮಾರುಕಟ್ಟೆ ದಂದೆಯನ್ನು ಪರಿಶೀಲಿಸಲು ಕಳೆದ 3 ದಿನಗಳಲ್ಲಿ 4 ಎಫ್‌ಐಆರ್‌ಗಳನ್ನು (FIRs) ದಾಖಲಿಸಲಾಗಿದೆ.
- ಪೆಟ್ರೋಲ್ ಮತ್ತು ಡೀಸೆಲ್‌ಗೆ ಸಂಬಂಧಿಸಿದ ಜಾರಿ ಕ್ರಮಗಳು — ಕಳೆದ 3 ದಿನಗಳಲ್ಲಿ, 1,880 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, ಅದರಲ್ಲಿ 2,900 ಲೀಟರ್‌ಗಿಂತ ಹೆಚ್ಚು ಪೆಟ್ರೋಲ್ ಮತ್ತು 6,350 ಲೀಟರ್‌ಗಿಂತ ಹೆಚ್ಚು ಡೀಸೆಲ್ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ದೇಶಾದ್ಯಂತ 18 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 13 ಜನರನ್ನು ಬಂಧಿಸಲಾಗಿದೆ.
- ಪಿಎಸ್‌ಯು ತೈಲ ಮಾರಾಟ ಕಂಪನಿಗಳ (PSU OMCs) ಅಧಿಕಾರಿಗಳಿಂದ ಹಠಾತ್ ತಪಾಸಣೆಗಳೂ ಸಹ ಮುಂದುವರೆದಿವೆ:
- ಎಲ್‌ಪಿಜಿ ವಿತರಕರು — ಕಳೆದ 3 ದಿನಗಳಲ್ಲಿ, ಸುಮಾರು 680 ಎಲ್‌ಪಿಜಿ ವಿತರಕರ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗಿದೆ. 6 ಎಲ್‌ಪಿಜಿ ವಿತರಕರಿಗೆ ದಂಡ ವಿಧಿಸಲಾಗಿದೆ ಮತ್ತು 2 ಎಲ್‌ಪಿಜಿ ವಿತರಕರನ್ನು ಅಮಾನತುಗೊಳಿಸಲಾಗಿದೆ.
- ಚಿಲ್ಲರೆ ಮಾರಾಟ ಕೇಂದ್ರಗಳು — ಕಳೆದ 3 ದಿನಗಳಲ್ಲಿ, ಸುಮಾರು 2,500 ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗಿದೆ. 19 ಚಿಲ್ಲರೆ ಮಾರಾಟ ಕೇಂದ್ರಗಳಿಗೆ ದಂಡ ವಿಧಿಸಲಾಗಿದೆ ಮತ್ತು 457 ಚಿಲ್ಲರೆ ಮಾರಾಟ ಕೇಂದ್ರಗಳನ್ನು ಅಮಾನತುಗೊಳಿಸಲಾಗಿದೆ.
ಎಲ್‌ಪಿಜಿ ಪೂರೈಕೆ:
ದೇಶೀಯ ಎಲ್‌ಪಿಜಿ ಪೂರೈಕೆ ಸ್ಥಿತಿ:
- ಚಾಲ್ತಿಯಲ್ಲಿರುವ ಭೌಗೋಳಿಕ ಪರಿಸ್ಥಿತಿಯಿಂದಾಗಿ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
- ಮನೆಬಳಕೆಯ ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ.
- ಎಲ್‌ಪಿಜಿ ವಿತರಣಾ ಕೇಂದ್ರಗಳಲ್ಲಿ ಯಾವುದೇ ಕೊರತೆ (Dry-outs) ವರದಿಯಾಗಿಲ್ಲ.
- ನಿನ್ನೆಯ ವರದಿಯಂತೆ ಆನ್‌ಲೈನ್ ಎಲ್‌ಪಿಜಿ ಬುಕ್ಕಿಂಗ್‌ಗಳು ಉದ್ಯಮದಾದ್ಯಂತ ಸುಮಾರು ಶೇ. 99 ಕ್ಕೆ ಏರಿವೆ.
- ವಿತರಕರ ಮಟ್ಟದಲ್ಲಿ ದುರುಪಯೋಗವನ್ನು ತಡೆಗಟ್ಟಲು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಗಳನ್ನು ಸುಮಾರು 96% ಕ್ಕೆ ಹೆಚ್ಚಿಸಲಾಗಿದೆ. ಡಿಎಸಿ (DAC) ಕೋಡ್ ಅನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
- ಕಳೆದ 3 ದಿನಗಳಲ್ಲಿ, ಸುಮಾರು 1.50 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳ ಬುಕಿಂಗ್‌ಗೆ ಪ್ರತಿಯಾಗಿ ಸುಮಾರು 1.43 ಕೋಟಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ.
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:
- ಒಟ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಬಿಕ್ಕಟ್ಟಿನ ಮುಂಚಿನ ಮಟ್ಟದ ಶೇ. 70 ಕ್ಕೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ, (ಇದರಲ್ಲಿ ಶೇ. 10 ರಷ್ಟು ಸುಧಾರಣೆ-ಆಧಾರಿತ ಹಂಚಿಕೆಯೂ ಸೇರಿದೆ.)
- ಕಳೆದ 3 ದಿನಗಳಲ್ಲಿ, ಸುಮಾರು 1.57 ಲಕ್ಷ — 5 ಕೆಜಿ ತೂಕದ ಎಫ್‌ಟಿಎಲ್ (FTL) ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗಿದೆ.
- ಕಳೆದ 3 ದಿನಗಳಲ್ಲಿ, ಸುಮಾರು 520 ಶಿಬಿರಗಳ ಮೂಲಕ ಅಂದಾಜು 9,200 — 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗಿದೆ.
- ಕಳೆದ 3 ದಿನಗಳಲ್ಲಿ, ಒಟ್ಟು 19,372 ಮೆಟ್ರಿಕ್ ಟನ್ ನಷ್ಟು ವಾಣಿಜ್ಯ ಎಲ್‌ಪಿಜಿ ಮಾರಾಟವಾಗಿದೆ.
- ಕಳೆದ 3 ದಿನಗಳಲ್ಲಿ, ಪಿಎಸ್ ಯು ತೈಲ ಮಾರಾಟ ಕಂಪನಿಗಳಿಂದ (PSU OMCs) ಸುಮಾರು 649 ಮೆಟ್ರಿಕ್ ಟನ್ ಆಟೋ ಎಲ್‌ಪಿಜಿ ಮಾರಾಟ ಮಾಡಲಾಗಿದೆ.
ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿಎನ್‌ಜಿ ವಿಸ್ತರಣೆ ಉಪಕ್ರಮಗಳು (Natural Gas Supply and PNG Expansion)
- ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ದೇಶೀಯ ಪಿಎನ್‌ಜಿ (D-PNG) ಮತ್ತು ಸಿಎನ್‌ಜಿ (ಸಾರಿಗೆ) ಗೆ 100% ಪೂರೈಕೆಯನ್ನು ಖಚಿತಪಡಿಸಲಾಗಿದೆ.
- ಕಾರ್ಯನಿರ್ವಹಿಸುತ್ತಿರುವ ಯೂರಿಯಾ ಘಟಕಗಳಿಗೆ ಗ್ಯಾಸ್ ಪೂರೈಕೆಯು, ಪ್ರಸ್ತುತ ಕಳೆದ ಆರು ತಿಂಗಳ ಅವರ ಸರಾಸರಿ ಬಳಕೆಯ ಸುಮಾರು 98% ರಷ್ಟಿದೆ.
- ಸಿಜಿಡಿ (CGD) ನೆಟ್‌ವರ್ಕ್‌ಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಗ್ಯಾಸ್ ಪೂರೈಕೆಯನ್ನು 80% ರಷ್ಟು ಹೆಚ್ಚಿಸಲಾಗಿದೆ.
- ವಾಣಿಜ್ಯ ಎಲ್‌ಪಿಜಿ ಲಭ್ಯತೆಯ ಕಳವಳಗಳನ್ನು ನಿವಾರಿಸಲು, ಸಿಜಿಡಿ (CGD) ಸಂಸ್ಥೆಗಳಿಗೆ ತಮ್ಮ ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿ (GAs) ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಂಟೀನ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿಎನ್‌ಜಿ ಸಂಪರ್ಕಗಳನ್ನು ನೀಡಲು ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
- ಸಿಜಿಡಿ ನೆಟ್‌ವರ್ಕ್ ವಿಸ್ತರಣೆಗೆ ಅಗತ್ಯವಿರುವ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ವಿನಂತಿಸಿದೆ.
- ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್‌ಪಿಜಿಯ ಹೆಚ್ಚುವರಿ 10% ಹಂಚಿಕೆಯನ್ನು ನೀಡಿದ್ದು, ಅವರು ಎಲ್‌ಪಿಜಿಯಿಂದ ಪಿಎನ್‌ಜಿಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡಬೇಕಾಗುತ್ತದೆ. 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿಎನ್‌ಜಿ ವಿಸ್ತರಣೆ ಸುಧಾರಣೆಗಳಿಗೆ ಲಿಂಕ್ ಮಾಡಲಾದ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಪಡೆಯುತ್ತಿವೆ.
- ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ಗಳು ಮತ್ತು ಇತರ ಸೌಲಭ್ಯಗಳ ಅಳವಡಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುಗಮ ಹಾಗೂ ಸಮಯೋಚಿತ ಚೌಕಟ್ಟನ್ನು ಒದಗಿಸುತ್ತದೆ, ಅನುಮೋದನೆಗಳು ಮತ್ತು ಭೂಮಿ ಸ್ವಾಧೀನದಲ್ಲಿನ ವಿಳಂಬವನ್ನು ನಿವಾರಿಸುತ್ತದೆ ಹಾಗೂ ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ವೇಗದ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಇದು ಪಿಎನ್‌ಜಿ ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸಲು, ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸಲು ಮತ್ತು ಸ್ವಚ್ಛ ಇಂಧನಗಳ ಕಡೆಗೆ ಪರಿವರ್ತನೆಯನ್ನು ಬೆಂಬಲಿಸಲು ನಿರೀಕ್ಷಿಸಲಾಗಿದೆ, ಆ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ.
- ಪಿಎನ್‌ಜಿಆರ್‌ಬಿ (PNGRB) ಸಂಸ್ಥೆಯು ಡಿ-ಪಿಎನ್‌ಜಿ ಸಂಪರ್ಕಗಳನ್ನು ತ್ವರಿತಗೊಳಿಸಲು ಸಿಜಿಡಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಪಿಎನ್‌ಜಿ ವಿಸ್ತರಣೆಯ ವೇಗವನ್ನು ಕಾಯ್ದುಕೊಳ್ಳಲು ರಾಷ್ಟ್ರೀಯ ಪಿಎನ್‌ಜಿ ಡ್ರೈವ್ 2.0 (01.01.2026–31.03.2026) ಅನ್ನು ಈಗ 30.06.2026 ರವರೆಗೆ ವಿಸ್ತರಿಸಲಾಗಿದೆ.
- ಸ್ವಚ್ಛ, ಹೆಚ್ಚು ಸುರಕ್ಷಿತ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಉತ್ತೇಜಿಸಲು, ಭಾರತ ಸರ್ಕಾರವು ಮಾದರಿ ಕರಡು ರಾಜ್ಯ ಸಿಬಿಜಿ (CBG) ನೀತಿಯನ್ನು ಅಭಿವೃದ್ಧಿಪಡಿಸಿದೆ. ಇದು ರಾಜ್ಯಗಳಿಗೆ ಸಿಬಿಜಿ ಅಭಿವೃದ್ಧಿಗಾಗಿ ತಮ್ಮದೇ ಆದ ಹೂಡಿಕೆ-ಸ್ನೇಹಿ ಮತ್ತು ಅನುಷ್ಠಾನ ಆಧಾರಿತ ಪರಿಸರ ವ್ಯವಸ್ಥೆಯನ್ನು ರಚಿಸಲು ಸಮಗ್ರ ಸುಲಭ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಇದನ್ನು ಆಯ್ಕೆ ಮಾಡಿಕೊಳ್ಳುವ ರಾಜ್ಯಗಳಿಗೆ ಮುಂದಿನ ಕಂತಿನ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
- ಮಾರ್ಚ್ 2026 ರಿಂದ, ಸುಮಾರು 8.82 ಲಕ್ಷ ಪಿಎನ್‌ಜಿ ಸಂಪರ್ಕಗಳಿಗೆ ಗ್ಯಾಸ್ ಪೂರೈಸಲಾಗಿದೆ ಮತ್ತು ಹೆಚ್ಚುವರಿ 2.98 ಲಕ್ಷ ಸಂಪರ್ಕಗಳಿಗೆ ಮೂಲಸೌಕರ್ಯವನ್ನು ಸೃಷ್ಟಿಸಲಾಗಿದೆ, ಇದು ಒಟ್ಟು ಸಂಪರ್ಕಗಳನ್ನು 11.80 ಲಕ್ಷಕ್ಕೆ ಕೊಂಡೊಯ್ದಿದೆ. ಇದಲ್ಲದೆ, ಹೊಸ ಸಂಪರ್ಕಗಳಿಗಾಗಿ ಸುಮಾರು 8.98 ಲಕ್ಷ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.
- 03.06.2026 ರವರೆಗೆ, 80,400 ಕ್ಕೂ ಹೆಚ್ಚು ಪಿಎನ್‌ಜಿ ಗ್ರಾಹಕರು MYPNGD.in ಜಾಲತಾಣದ ಮೂಲಕ ತಮ್ಮ ಎಲ್‌ಪಿಜಿ ಸಂಪರ್ಕಗಳನ್ನು ಹಸ್ತಾಂತರಿಸಿದ್ದಾರೆ (ಸರೆಂಡರ್ ಮಾಡಿದ್ದಾರೆ).
ಕಚ್ಚಾ ತೈಲ ಸ್ಥಿತಿ ಮತ್ತು ತೈಲ ಶುದ್ಧೀಕರಣ ಕಾರ್ಯಾಚರಣೆಗಳು
ಎಲ್ಲಾ ತೈಲ ಶುದ್ಧೀಕರಣ ಘಟಕಗಳು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಪೆಟ್ರೋಲ್ ಹಾಗೂ ಡೀಸೆಲ್‌ನ ಸಮರ್ಪಕ ದಾಸ್ತಾನುಗಳನ್ನು ನಿರ್ವಹಿಸಲಾಗುತ್ತಿದೆ.
- ದೇಶೀಯ ಬಳಕೆಯನ್ನು ಬೆಂಬಲಿಸಲು ಶುದ್ಧೀಕರಣ ಘಟಕಗಳಿಂದ ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
- ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ-ಸಚಿವಾಲಯ ಜಂಟಿ ಕಾರ್ಯಕಾರಿ ಸಮಿತಿಯನ್ನು (JWG) ರಚಿಸಲಾಗಿದೆ. ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಸೇರಿದಂತೆ ತೈಲ ಶುದ್ಧೀಕರಣ ಕಂಪನಿಗಳಿಗೆ ಹೈ ಟೆಕ್ನಾಲಜಿ ಕೇಂದ್ರವು (CHT) ನಿರ್ಧರಿಸಿದಂತೆ ಪ್ರಮುಖ ವಲಯಗಳಿಗೆ ನಿರ್ದಿಷ್ಟ ಕನಿಷ್ಠ ಪ್ರಮಾಣದ C3 ಮತ್ತು C4 ಸ್ಟ್ರೀಮ್‌ಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿ ನೀಡಿದೆ.
- ಫಾರ್ಮಾಸ್ಯುಟಿಕಲ್ಸ್ ಇಲಾಖೆ, ರಾಸಾಯನಿಕಗಳು ಮತ್ತು ಪೆಟ್ರೋ ರಾಸಾಯನಿಕಗಳ ಇಲಾಖೆ (DCPC) ಹಾಗೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (DPIIT) ವಿನಂತಿಗಳ ಆಧಾರದ ಮೇಲೆ, ಫಾರ್ಮಾ, ರಾಸಾಯನಿಕ ಮತ್ತು ಪೇಂಟ್ ವಲಯದ ಕಂಪನಿಗಳಿಗೆ ಎಲ್‌ಪಿಜಿ ಪೂಲ್‌ನಿಂದ ಪ್ರತಿದಿನ 1120 ಮೆಟ್ರಿಕ್ ಟನ್ C3-C4 ಅಣುಗಳ (Molecules) ವ್ಯವಸ್ಥೆ ಮಾಡಲಾಗಿದೆ.
- 01 ಜೂನ್ 2026 ರಿಂದ, ಮುಂಬೈ, ಕೊಚ್ಚಿ, ವೈಜಾಗ್, ಚೆನ್ನೈ, ಮಥುರಾ ಮತ್ತು ಗುಜರಾತ್ ಶುದ್ಧೀಕರಣ ಘಟಕಗಳಿಂದ ರಾಸಾಯನಿಕ, ಫಾರ್ಮಾ ಮತ್ತು ಪೇಂಟ್ ಉದ್ಯಮಕ್ಕೆ ಸುಮಾರು 1,030 ಮೆಟ್ರಿಕ್ ಟನ್ C3-C4 ಅಣುಗಳನ್ನು (ಪ್ರೊಪಿಲೀನ್ ಮತ್ತು ಬ್ಯುಟಿಲೀನ್ ಒಳಗೊಂಡಂತೆ) ಮತ್ತು ಸುಮಾರು 320 ಮೆಟ್ರಿಕ್ ಟನ್ ಬ್ಯುಟೈಲ್ ಆಕ್ರಿಲೇಟ್ ಅನ್ನು ಮಾರಾಟ ಮಾಡಲಾಗಿದೆ.
ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು (Retail Fuel Availability)
- ದೇಶಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಕೇಂದ್ರಗಳು ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿವೆ.
- ಮಧ್ಯಪ್ರಾಚ್ಯ ಬಿಕ್ಕಟ್ಟು, ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಗಿದೆ; ಆದಾಗ್ಯೂ, ಗ್ರಾಹಕರನ್ನು ರಕ್ಷಿಸಲು ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹10 ರಷ್ಟು ಕಡಿಮೆ ಮಾಡಿದೆ.
- ಭಾರತ ಸರ್ಕಾರವು 31.05.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹3 ರಿಂದ ₹1.5 ಕ್ಕೆ, ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹16.50 ರಿಂದ ₹13.50 ಕ್ಕೆ ಮತ್ತು ಎಟಿಎಫ್ (ATF) ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹16 ರಿಂದ ₹9.5 ಕ್ಕೆ ಕಡಿಮೆ ಮಾಡಿದೆ.
- ಕೆಲವು ಪ್ರದೇಶಗಳಲ್ಲಿನ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ಮಾರಾಟ ಮತ್ತು ಭಾರಿ ಜನಸಂದಣಿ ಕಂಡುಬಂದಿದೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಪರ್ಷಿಯನ್ ಗಲ್ಫ್‌ನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕಡಲ ಪರಿಸ್ಥಿತಿಯ ಕುರಿತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಮಾಹಿತಿ ನೀಡಿತು, ಈ ಪ್ರದೇಶದಲ್ಲಿ ಭಾರತೀಯ ನೌಕೆಗಳು ಮತ್ತು ನಾವಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿತು. ಈ ಕೆಳಗಿನ ವಿವರಗಳನ್ನು ಸಚಿವಾಲಯವು ಹಂಚಿಕೊಂಡಿದೆ:
- ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ನಾವಿಕರ ಕಲ್ಯಾಣ ಮತ್ತು ನಿರಂತರ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್‌ಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರೆಸಿದೆ.
- ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 72 ಗಂಟೆಗಳಲ್ಲಿ ಭಾರತೀಯ ಧ್ವಜ ಹೊತ್ತ ನೌಕೆಗಳು ಅಥವಾ ಭಾರತೀಯ ನಾವಿಕರನ್ನು ಹೊಂದಿರುವ ವಿದೇಶಿ ನೌಕೆಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
- ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯ ಮಾಹಿತಿ: ನಿಯಂತ್ರಣ ಕೊಠಡಿಯು ಪ್ರಾರಂಭವಾದಾಗಿನಿಂದ 11,630 ಕರೆಗಳನ್ನು ಮತ್ತು 25,864 ಕ್ಕೂ ಹೆಚ್ಚು ಇಮೇಲ್‌ಗಳನ್ನು ನಿರ್ವಹಿಸಿದೆ. ಕಳೆದ 72 ಗಂಟೆಗಳಲ್ಲಿ ನಾವಿಕರು, ಅವರ ಕುಟುಂಬಗಳು ಮತ್ತು ಕಡಲ ಪಾಲುದಾರರಿಂದ ಒಟ್ಟು 444 ಕರೆಗಳು ಮತ್ತು 1,034 ಇಮೇಲ್‌ಗಳು ಸ್ವೀಕೃತವಾಗಿವೆ.
- ಸ್ವದೇಶಕ್ಕೆ ಮರಳಿಸುವಿಕೆಯ ಮಾಹಿತಿ: ಸಚಿವಾಲಯವು ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ (DG Shipping) ಮೂಲಕ ಇದುವರೆಗೆ 3,474 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿಸಲು ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 72 ಗಂಟೆಗಳಲ್ಲಿ ಗಲ್ಫ್ ಪ್ರದೇಶದ ವಿವಿಧ ಸ್ಥಳಗಳಿಂದ ಮರಳಿದ 28 ನಾವಿಕರು ಸೇರಿದ್ದಾರೆ.
- ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಯಥಾಸ್ಥಿತಿಯಲ್ಲಿದ್ದು, ಯಾವುದೇ ಸರಕು ಸಾಗಣೆ ವಿಳಂಬ ವರದಿಯಾಗಿಲ್ಲ.
ಪ್ರದೇಶದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ
ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ, ಆ ಪ್ರದೇಶದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕೇಂದ್ರೀಕೃತ ಪ್ರಯತ್ನಗಳನ್ನು ಮಾಡುತ್ತಿದೆ. ಈ ಕೆಳಗಿನ ಮಾಹಿತಿಗಳನ್ನು ಸಚಿವಾಲಯವು ಹಂಚಿಕೊಂಡಿದೆ:
- ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ಹಂಚಿಕೆ ಮತ್ತು ಪ್ರಯತ್ನಗಳ ಸಮನ್ವಯಕ್ಕಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.
- ಪ್ರದೇಶದಾದ್ಯಂತ ಇರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ರಾಯಭಾರ ಕಚೇರಿಗಳು ಹೈ ಅಲರ್ಟ್‌ನಲ್ಲಿದ್ದು, ಭಾರತೀಯ ಸಮುದಾಯಕ್ಕೆ ಸಕ್ರಿಯವಾಗಿ ಸಹಾಯ ಮಾಡುತ್ತಿವೆ. ಭಾರತೀಯ ಪ್ರಜೆಗಳಿಗೆ ಸಮಯೋಚಿತ ಸಹಾಯವನ್ನು ಒದಗಿಸಲು ಅವು 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್‌ಗಳನ್ನು ನಡೆಸುತ್ತಿವೆ ಮತ್ತು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ.
- ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಮತ್ತು ಪ್ರಯಾಣದ ಪರಿಸ್ಥಿತಿಗಳು, ರಾಯಭಾರ ಕಚೇರಿಗಳ ಸೇವೆಗಳು ಮತ್ತು ಸಮುದಾಯಕ್ಕಾಗಿ ಕೈಗೊಳ್ಳಲಾಗುತ್ತಿರುವ ವಿವಿಧ ಕಲ್ಯಾಣ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡ ಸಲಹೆಗಳನ್ನು ನೀಡಲಾಗುತ್ತಿದೆ.
- ಭಾರತೀಯ ಮಿಷನ್‌ಗಳು ಅಲ್ಲಿ ವಾಸಿಸುವ ಭಾರತೀಯ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಅವರ ಕಳವಳಗಳನ್ನು ನಿವಾರಿಸಲು ಅವು ಭಾರತೀಯ ಸಮುದಾಯದ ಸಂಘಗಳು, ಸಂಸ್ಥೆಗಳು, ವೃತ್ತಿಪರ ಗುಂಪುಗಳು ಮತ್ತು ಭಾರತೀಯ ಕಂಪನಿಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿವೆ.
- ಈ ಪ್ರದೇಶದಲ್ಲಿರುವ ಭಾರತೀಯ ನಾವಿಕರ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭಾರತೀಯ ಮಿಷನ್‌ಗಳು ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುವುದು, ರಾಯಭಾರ ಕಚೇರಿಗಳ ನೆರವು ಒದಿಗಿಸುವುದು ಮತ್ತು ಭಾರತಕ್ಕೆ ಮರಳುವ ವಿನಂತಿಗಳಿಗೆ ಸಹಾಯ ಮಾಡುವುದು ಸೇರಿದಂತೆ ಅವರಿಗೆ ಎಲ್ಲಾ ರೀತಿಯ ನೆರವನ್ನು ನೀಡುತ್ತಿವೆ.
ವಿಮಾನಯಾನ ಸ್ಥಿತಿ:
- ಆ ಪ್ರದೇಶದಿಂದ ಭಾರತದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ವಿಮಾನಗಳು ಕಾರ್ಯನಿರ್ವಹಿಸುವುದರೊಂದಿಗೆ ಒಟ್ಟಾರೆ ವಿಮಾನಯಾನ ಪರಿಸ್ಥಿತಿಯು ಸುಧಾರಿಸುತ್ತಿದೆ.
- ಯುಎಇ : ಯುಎಇ ವಾಯುಪ್ರದೇಶ ಮುಕ್ತವಾಗಿದೆ. ಭಾರತೀಯ ಮತ್ತು ಯುಎಇ ವಿಮಾನಯಾನ ಸಂಸ್ಥೆಗಳು ಯುಎಇಯಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳ ಹಾರಾಟವನ್ನು ನಿರ್ವಹಿಸುತ್ತಿವೆ.
- ಸೌದಿ ಅರೇಬಿಯಾ ಮತ್ತು ಒಮಾನ್: ಸೌದಿ ಅರೇಬಿಯಾ ಮತ್ತು ಒಮಾನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಹಾರಾಟವನ್ನು ನಿರ್ವಹಿಸುತ್ತಿವೆ.
- ಕತಾರ್: ಕತಾರ್ ವಾಯುಪ್ರದೇಶ ಭಾಗಶಃ ಮುಕ್ತವಾಗಿದೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ ಮತ್ತು ಕತಾರ್ ಏರ್ವೇಸ್ ಕತಾರ್‌ನಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳ ಹಾರಾಟವನ್ನು ನಿರ್ವಹಿಸುತ್ತಿವೆ.
- ಕುವೈತ್: ಕುವೈತ್ ವಾಯುಪ್ರದೇಶ ಮುಕ್ತವಾಗಿದೆ. ಕುವೈತ್ ಏರ್ವೇಸ್ ಮತ್ತು ಜಜೀರಾ ಏರ್ವೇಸ್ ಕುವೈತ್‌ನಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳ ಹಾರಾಟವನ್ನು ನಿರ್ವಹಿಸುವುದನ್ನು ಮುಂದುವರೆಸಿವೆ.
- ಬಹ್ರೇನ್: ಬಹ್ರೇನ್ ವಾಯುಪ್ರದೇಶ ಮುಕ್ತವಾಗಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ ಮತ್ತು ಗಲ್ಫ್ ಏರ್ ಬಹ್ರೇನ್‌ನಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳ ಹಾರಾಟವನ್ನು ನಿರ್ವಹಿಸುತ್ತಿವೆ.
- ಇರಾಕ್: ಇರಾಕ್ ವಾಯುಪ್ರದೇಶವು ಮುಕ್ತವಾಗಿದ್ದು, ಈ ಪ್ರದೇಶದ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆಗಳಿವೆ, ಇದನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು.
- ಇರಾನ್: ಇರಾನ್ ವಾಯುಪ್ರದೇಶ ಭಾಗಶಃ ಮುಕ್ತವಾಗಿದೆ. ಭಾರತೀಯ ಪ್ರಜೆಗಳು ಇರಾನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಸಚಿವಾಲಯ ಸಲಹೆ ನೀಡಿದೆ ಮತ್ತು ಈಗಾಗಲೇ ಅಲ್ಲಿರುವವರು ರಾಯಭಾರ ಕಚೇರಿಯ ಬೆಂಬಲದೊಂದಿಗೆ ಹೊರಡುವಂತೆ ಒತ್ತಾಯಿಸಿದೆ. ಇದುವರೆಗೆ, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭೂ ಗಡಿ ಮಾರ್ಗಗಳ ಮೂಲಕ 2,557 ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಹೊರಗೆ ಕರೆತರಲು ಅನುಕೂಲ ಮಾಡಿಕೊಟ್ಟಿದೆ.
- ಇಸ್ರೇಲ್: ಇಸ್ರೇಲ್ ವಾಯುಪ್ರದೇಶ ಮುಕ್ತವಾಗಿದೆ ಮತ್ತು ಈ ಪ್ರದೇಶದ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ, ಇದನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು.
ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಯ ಇತ್ತೀಚಿನ ಮಾಹಿತಿ
- ನಿನ್ನೆ, ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ ತನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಕುವೈತ್‌ನಲ್ಲಿರುವ ಭಾರತೀಯ ಮಿಷನ್ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ. ಪಾರ್ಥಿವ ಶರೀರ ನಾಳೆ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ.
- ಈ ದಾಳಿಯಲ್ಲಿ ಹದಿಮೂರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದು, ಪ್ರಸ್ತುತ ಕುವೈತ್‌ನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳಿಗೆ ಎಲ್ಲಾ ರೀತಿಯ ನೆರವನ್ನು ಮಿಷನ್ ನೀಡುತ್ತಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ.
*****
(रिलीज़ आईडी: 2269078)
|