ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ತೈಲ ಆಮದು ಕಡಿತದಿಂದ ರೈತರ ಸಮೃದ್ಧಿಯವರೆಗೆ: ಶ್ರೀ ಹರ್ ದೀಪ್ ಸಿಂಗ್ ಪುರಿ ಅವರಿಂದ ಮೊದಲ ಫ್ಲೆಕ್ಸ್ ಇಂಧನ ಪ್ರಯಾಣಿಕ ವಾಹನದ ಬಿಡುಗಡೆ
ಜಾಗತಿಕ ಬಿಕ್ಕಟ್ಟಿನ ನಡುವೆಯೂ ಕಡಿಮೆ ಇಂಧನ ಬೆಲೆ ಏರಿಕೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು: ಶ್ರೀ ಹರ್ ದೀಪ್ ಸಿಂಗ್ ಪುರಿ
ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳಲ್ಲಿ ಶೇ. 50 ರಷ್ಟು ಫ್ಲೆಕ್ಸ್-ಇಂಧನದಿಂದ ಚಲಿಸಿದರೆ, ಅದು ರೈತರಿಗೆ ₹12,403 ಕೋಟಿ ಹೆಚ್ಚುವರಿ ಆದಾಯವನ್ನು ತರಬಲ್ಲದು: ಶ್ರೀ ಹರ್ ದೀಪ್ ಸಿಂಗ್ ಪುರಿ
प्रविष्टि तिथि:
04 JUN 2026 4:02PM by PIB Bengaluru
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಇಂದು ನವದೆಹಲಿಯಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಭಾರತದ ಮೊದಲ ಫ್ಲೆಕ್ಸ್- ಇಂಧನ ಪ್ರಯಾಣಿಕ ವಾಹನವಾದ ಕಾರನ್ನು ಉದ್ಘಾಟಿಸಿದರು. ಇದು ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನಕ್ಕೆ ಉತ್ತೇಜನ ನೀಡಿತು. ಈ ಸಂದರ್ಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಉಪಸ್ಥಿತರಿದ್ದರು. ಫ್ಲೆಕ್ಸ್-ಇಂಧನ ವಾಹನಗಳು ಇ20 ರಿಂದ ಇ100ರವರೆಗಿನ ವಿವಿಧ ಪ್ರಮಾಣದ ಎಥನಾಲ್-ಪೆಟ್ರೋಲ್ ಮಿಶ್ರಣದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ವಾಹನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪ್ರಯಾಣಿಕ ವಾಹನ ವಿಭಾಗದಲ್ಲಿ ಫ್ಲೆಕ್ಸ್-ಇಂಧನ ತಂತ್ರಜ್ಞಾನದ ಪ್ರವೇಶವು ಕೇವಲ ಒಂದು ಉತ್ಪನ್ನದ ಬಿಡುಗಡೆಯಲ್ಲ, ಬದಲಿಗೆ ಇದು ಭಾರತದ ಇಂಧನ ಪರಿವರ್ತನೆಯಲ್ಲಿ ಒಂದು ಹೊಸ ಅಧ್ಯಾಯದ ಆರಂಭವಾಗಿದೆ ಎಂದು ಹೇಳಿದರು. ಭಾರತದಲ್ಲಿ ಪ್ರಸ್ತುತ ಸುಮಾರು 37 ಲಕ್ಷ ಪ್ರಯಾಣಿಕ ವಾಹನಗಳಿದ್ದು, ಇವು ಮಧ್ಯಮ ವರ್ಗದ ಭಾರತದ ಆಕಾಂಕ್ಷೆಗಳನ್ನು ಮತ್ತು ವೈಯಕ್ತಿಕ ಸಾರಿಗೆಯ ಭವಿಷ್ಯವನ್ನು ಪ್ರತಿನಿಧಿಸುತ್ತವೆ ಎಂದು ಶ್ರೀ ಪುರಿ ಅವರು ಉಲ್ಲೇಖಿಸಿದರು. ಈ ವಿಭಾಗದಲ್ಲಿ ಫ್ಲೆಕ್ಸ್- ಇಂಧನ ತಂತ್ರಜ್ಞಾನದ ಬೃಹತ್ ಪ್ರಮಾಣದ ಅಳವಡಿಕೆಯು ಎಥನಾಲ್ ಆಧಾರಿತ ಸಾರಿಗೆಯ ಪ್ರಭಾವವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದರು.

ಫೆಬ್ರವರಿ 28 ರಂದು ಮಿಲಿಟರಿ ಸಂಘರ್ಷಗಳು ಪ್ರಾರಂಭವಾಗುವ ಮೊದಲು, ಭಾರತದ ಒಟ್ಟು ಎಲ್ ಪಿ ಜಿ ಆಮದಿನ ಸುಮಾರು ಶೇ. 60 ರಷ್ಟು ಭಾಗವು ಹಾರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತಿತ್ತು ಎಂದು ಸಚಿವರು ತಿಳಿಸಿದರು. 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಮತ್ತು ಜಾಗತಿಕ ಸರಾಸರಿಗಿಂತ ಮೂರು ಪಟ್ಟು ಹೆಚ್ಚಿನ ಇಂಧನ ಬೇಡಿಕೆಯ ಬೆಳವಣಿಗೆಯನ್ನು ಹೊಂದಿರುವ ಭಾರತವು, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ನಿರಂತರ ಲಭ್ಯತೆಯನ್ನು ಖಾತರಿಪಡಿಸಿದೆ. "ದೇಶದ ಯಾವುದೇ ಭಾಗದಲ್ಲೂ ಇಂಧನದ ಕೊರತೆ ಉಂಟಾಗಲಿಲ್ಲ. ಜನರು ರಸ್ತೆ ಮತ್ತು ವಾಯುಮಾರ್ಗದ ಮೂಲಕ ಎಂದಿನಂತೆ ಪ್ರಯಾಣಿಸುತ್ತಲೇ ಇದ್ದರು. ಜಾಗತಿಕ ಅಡೆತಡೆಗಳ ನಡುವೆಯೂ ಭಾರತವು ಸಾಮಾನ್ಯ ಸ್ಥಿತಿಯನ್ನು ಕಾಯ್ದುಕೊಂಡಿದೆ," ಎಂದು ಸಚಿವರು ಹೇಳಿದರು.
ತಪ್ಪು ಮಾಹಿತಿ ಹರಡುವ ಮತ್ತು ಕೃತಕ ಕೊರತೆಯನ್ನು ಸೃಷ್ಟಿಸುವ ಕೆಲವು ಪ್ರಯತ್ನಗಳು ನಡೆದರೂ, ಸಕಾಲಿಕ ನೀತಿ ಮಧ್ಯಸ್ಥಿಕೆಗಳು ಮತ್ತು ಪರಿಣಾಮಕಾರಿ ನಿರ್ವಹಣೆಯಿಂದಾಗಿ ಪರಿಸ್ಥಿತಿಯು ಸಂಪೂರ್ಣವಾಗಿ ನಿಯಂತ್ರಣದಲ್ಲಿತ್ತು ಎಂದು ಅವರು ತಿಳಿಸಿದರು.
ಭಾರತದ ಇಂಧನ ಕಾರ್ಯತಂತ್ರದ ಮೂರು ಪ್ರಮುಖ ಸ್ತಂಭಗಳಾದ — ಲಭ್ಯತೆ, ಕೈಗೆಟುಕುವ ದರ ಮತ್ತು ಸುಸ್ಥಿರತೆಯನ್ನು ಸಮತೋಲನಗೊಳಿಸಿದ್ದಕ್ಕಾಗಿ ಶ್ರೀ ಪುರಿ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದರು. ಲಭ್ಯತೆಯ ಕುರಿತು ಮಾತನಾಡಿದ ಶ್ರೀ ಪುರಿ ಅವರು, ಜಾಗತಿಕ ಏರಿಳಿತಗಳ ನಡುವೆಯೂ ಭಾರತವು ಕಚ್ಚಾ ತೈಲ, ಎಲ್ ಪಿಜಿ ಮತ್ತು ನೈಸರ್ಗಿಕ ಅನಿಲದ ನಿರಂತರ ಪೂರೈಕೆಯನ್ನು ಕಾಯ್ದುಕೊಂಡಿದೆ ಎಂದು ಎತ್ತಿ ತೋರಿಸಿದರು. ಭಾರತವು ಬಿಕ್ಕಟ್ಟಿನ ಮೊದಲು ದಿನಕ್ಕೆ 32 ಟಿಎಂಟಿ ಇದ್ದ ಎಲ್ ಪಿ ಜಿ ದೇಶೀಯ ಉತ್ಪಾದನೆಯನ್ನು ಪ್ರಸ್ತುತ ದಿನಕ್ಕೆ ಸುಮಾರು 52 ಟಿಎಂಟಿಗೆ ಹೆಚ್ಚಿಸಿದೆ, ಜೊತೆಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಮತ್ತು ಸಿ ಎನ್ ಜಿ ಕಡೆಗೆ ಪರಿವರ್ತನೆಯನ್ನು ವಿಸ್ತರಿಸಿತು.
ಕೈಗೆಟುಕುವ ದರದ ಕುರಿತು ಮಾತನಾಡಿದ ಸಚಿವರು, ಜಾಗತಿಕವಾಗಿ ಇಂಧನ ಬೆಲೆಗಳಲ್ಲಿ ಅತ್ಯಂತ ಕಡಿಮೆ ಏರಿಕೆಯನ್ನು ದಾಖಲಿಸಿದ ದೇಶಗಳಲ್ಲಿ ಭಾರತವೂ ಒಂದು ಎಂದರು. ಗ್ರಾಹಕರಿಗೆ ಪರಿಹಾರ ನೀಡಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ ₹10 ರಷ್ಟು ಕಡಿತಗೊಳಿಸಿದ ಪ್ರಧಾನಮಂತ್ರಿಯವರ ನಿರ್ಧಾರವನ್ನು ಅವರು ನೆನೆದರು.

ಸುಸ್ಥಿರತೆಯ ಬಗ್ಗೆ ಮಾತನಾಡುತ್ತಾ, ಶ್ರೀ ಪುರಿ ಅವರು ಬ್ರೆಜಿಲ್ ಮತ್ತು ಅಮೆರಿಕದಲ್ಲಿ ತಮಗಿದ್ದ ಹಿಂದಿನ ಅನುಭವವನ್ನು ಸ್ಮರಿಸಿದರು, ಅಲ್ಲಿ ಸಕ್ಕರೆ ಮತ್ತು ಮೆಕ್ಕೆಜೋಳದ ಆಧಾರಿತ ಎಥನಾಲ್ ಮಿಶ್ರಣವು ಈಗಾಗಲೇ ಯಶಸ್ಸನ್ನು ಸಾಧಿಸಿದೆ. ಭಾರತದ ಎಥನಾಲ್ ಮಿಶ್ರಣ ಕಾರ್ಯಕ್ರಮವು ಅತ್ಯಂತ ಯಶಸ್ವಿ ಇಂಧನ ಪರಿವರ್ತನೆ ಉಪಕ್ರಮಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಸರ್ಕಾರದ ಸಮಗ್ರ ವಿಧಾನ ಹಾಗೂ ರೈತರು, ಎಥನಾಲ್ ಉತ್ಪಾದಕರು, ತೈಲ ಮಾರುಕಟ್ಟೆ ಕಂಪನಿಗಳು, ವಾಹನ ತಯಾರಕರು, ವಿಜ್ಞಾನಿಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಒಳಗೊಂಡ ಬಲವಾದ ಪರಿಸರ ವ್ಯವಸ್ಥೆಯ ಸೃಷ್ಟಿಯಿಂದಾಗಿ ಭಾರತದ ಎಥನಾಲ್ ಯಶಸ್ಸಿನ ಕಥೆ ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಭಾರತವು ಈಗ ನುಚ್ಚು ಧಾನ್ಯಗಳು, ಕೃಷಿ ತ್ಯಾಜ್ಯ, ಬಿದಿರು ಮತ್ತು ಕಡಲಕಳೆಗಳಂತಹ ಅನೇಕ ಮೂಲಗಳಿಂದ ಎಥನಾಲ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಥನಾಲ್ ಮಿಶ್ರಣದ ಪ್ರಮಾಣವು 2013-14ರಲ್ಲಿ ಶೇ. 1.5 ಕ್ಕಿಂತ ಕಡಿಮೆ ಇದ್ದದ್ದು 2025-26ರ ವೇಳೆಗೆ ಶೇ. 20 ಕ್ಕೆ ಏರಿಕೆಯಾಗಿದೆ, ಈ ಮೂಲಕ ನಿಗದಿತ ಅವಧಿಗಿಂತ 5 ವರ್ಷ ಮುಂಚಿತವಾಗಿಯೇ ಗುರಿಯನ್ನು ಸಾಧಿಸಲಾಗಿದೆ. ಎಥನಾಲ್ ಸಂಗ್ರಹಣೆಯು ಎಥೆನಾಲ್ ಸರಬರಾಜು ವರ್ಷ (ಇ ಎಸ್ ವೈ 2013-14 ರಲ್ಲಿದ್ದ ಸುಮಾರು 38 ಕೋಟಿ ಲೀಟರ್ ಗಳಿಂದ ಇಂದು 1,040 ಕೋಟಿ ಲೀಟರ್ ಗಳಿಗಿಂತ ಹೆಚ್ಚಾಗಿದೆ. ಹಾಗೆಯೇ ಎಥನಾಲ್ ಉತ್ಪಾದನಾ ಸಾಮರ್ಥ್ಯವು 2014 ರಲ್ಲಿದ್ದ 421 ಕೋಟಿ ಲೀಟರ್ ಗಳಿಂದ 2026 ರಲ್ಲಿ ಸುಮಾರು 2000 ಕೋಟಿ ಲೀಟರ್ ಗಳಿಗೆ ಐದು ಪಟ್ಟು ವಿಸ್ತರಿಸಿದೆ. ಈ ಬದಲಾವಣೆಯು ಕಚ್ಚಾ ತೈಲ ಆಮದನ್ನು ಕಡಿಮೆ ಮಾಡಿದೆ, ವಿದೇಶಿ ವಿನಿಮಯವನ್ನು ಉಳಿಸಿದೆ, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಿದೆ ಮತ್ತು ರೈತರ ಆದಾಯವನ್ನು ಹೆಚ್ಚಿಸಿದೆ.
ಹೊಸ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ಮಾರಾಟದ ಶೇ. 50 ರಷ್ಟು ಭಾಗವು ಭವಿಷ್ಯದಲ್ಲಿ ಫ್ಲೆಕ್ಸ್-ಇಂಧನ ವಾಹನಗಳಿಗೆ ಬದಲಾದರೆ, ಅದು 311.8 ಕೋಟಿ ಲೀಟರ್ ಎಥನಾಲ್ ಗೆ ಹೆಚ್ಚುವರಿ ಬೇಡಿಕೆಯನ್ನು ಸೃಷ್ಟಿಸುತ್ತದೆ ಮತ್ತು ರೈತರಿಗೆ ₹12,403 ಕೋಟಿ ಹೆಚ್ಚುವರಿ ಆದಾಯವನ್ನು ನೀಡುತ್ತದೆ ಎಂದು ಶ್ರೀ ಪುರಿ ತಿಳಿಸಿದರು. ಇದು 66.4 ಲಕ್ಷ ಮೆಟ್ರಿಕ್ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.
ನೀತಿ ಆಯೋಗವು ಇ85 ರಂತಹ ಹೆಚ್ಚಿನ ಎಥನಾಲ್ ಮಿಶ್ರಣಗಳಲ್ಲಿ ಚಲಿಸುವ ವಾಹನಗಳು ಸೇರಿದಂತೆ ಎಥನಾಲ್ ಆಧಾರಿತ ಫ್ಲೆಕ್ಸ್-ಇಂಧನ ವಾಹನಗಳನ್ನು ಅಧಿಕೃತವಾಗಿ 'ಶೂನ್ಯ-ಹೊರಸೂಸುವಿಕೆ ವಾಹನಗಳು' ಎಂದು ವರ್ಗೀಕರಿಸಿದೆ. ಇ85 ಇಂಧನವು ಅತ್ಯಲ್ಪ ಪ್ರಮಾಣದ ಪಾರ್ಟಿಕ್ಯುಲೇಟ್ ಮ್ಯಾಟರ್ ಹೊರಸೂಸುವಿಕೆಯನ್ನು ಉಂಟುಮಾಡುವುದರಿಂದ, ದೇಶದ ಬೆಳೆಯುತ್ತಿರುವ ವಾಯು ಮಾಲಿನ್ಯದ ಸವಾಲನ್ನು ಎದುರಿಸಲು ಫ್ಲೆಕ್ಸ್-ಇಂಧನ ವಾಹನಗಳು ಭರವಸೆಯ ಪರಿಹಾರವಾಗಿವೆ.
ದೇಶಾದ್ಯಂತ ಫ್ಲೆಕ್ಸ್-ಇಂಧನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರದ ಮಾರ್ಗಸೂಚಿಯನ್ನು ಸಚಿವರು ವಿವರಿಸಿದರು. ಪ್ರಸ್ತಾವಿತ ಮಾರ್ಗಸೂಚಿಯ ಅಡಿಯಲ್ಲಿ, ಬಿಐಎಸ್ ವಿವರಗಳ ಪ್ರಕಾರ ಫ್ಲೆಕ್ಸ್-ಇಂಧನ ವಾಹನಗಳಿಗೆ 'ಇ85' ಅನ್ನು ಮಾನದಂಡ ಇಂಧನವಾಗಿ ಗುರುತಿಸಲಾಗಿದೆ. ಈ ಯೋಜನೆಯು ದೆಹಲಿ-ಎನ್ ಸಿಆರ್ ಮತ್ತು ಮುಂಬೈ-ಪುಣೆ-ನಾಗ್ ಪುರ ಕಾರಿಡಾರ್ ಗಳಲ್ಲಿ ಆರಂಭದಲ್ಲಿ 50-100 ಫ್ಲೆಕ್ಸ್-ಇಂಧನ ಸಜ್ಜಿತ ಇಂಧನ ಚಿಲ್ಲರೆ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲು ಪ್ರಸ್ತಾಪಿಸಿದೆ. ಇದನ್ನು ಡಿಸೆಂಬರ್ 2026 ರ ವೇಳೆಗೆ ಸುಮಾರು 500 ಮಳಿಗೆಗಳಿಗೆ ಮತ್ತು 2027 ರ ಅಂತ್ಯದ ವೇಳೆಗೆ ಪ್ರಮುಖ ನಗರಗಳಲ್ಲಿ ಸುಮಾರು 5,000 ಮಳಿಗೆಗಳಿಗೆ ವಿಸ್ತರಿಸುವ ಗುರಿ ಹೊಂದಿದೆ.
ವಾಹನಗಳ ಅಳವಡಿಕೆಯನ್ನು ಹೆಚ್ಚಿಸಲು ಬೆಲೆ ಬೆಂಬಲ, ರಸ್ತೆ ತೆರಿಗೆ ವಿನಾಯಿತಿಗಳು, ಇ85 ಪರೀಕ್ಷಾ ಇಂಧನದ ಲಭ್ಯತೆ, ಫ್ಲೆಕ್ಸ್-ಇಂಧನ ವಾಹನಗಳು ಹಾಗೂ ಚಿಲ್ಲರೆ ಮಳಿಗೆಗಳಿಗೆ ವಿಶೇಷ ಗುರುತುಗಳು, ಗ್ರಾಹಕ ಜಾಗೃತಿ ಉಪಕ್ರಮಗಳು ಮತ್ತು ಶೇಖರಣೆ ಹಾಗೂ ವಿತರಣಾ ಮೂಲಸೌಕರ್ಯಗಳ ಅಭಿವೃದ್ಧಿಯಂತಹ ಪೂರಕ ಕ್ರಮಗಳ ಮೇಲೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದು ಕೇವಲ ಇಂಧನ ಬದಲಾವಣೆಯಲ್ಲ, ಬದಲಿಗೆ ಇದು ಸ್ವಚ್ಛ ಸಾರಿಗೆ, ಬಲವಾದ ಇಂಧನ ಭದ್ರತೆ ಮತ್ತು ಹೆಚ್ಚಿನ ಸ್ವಾವಲಂಬನೆಗಾಗಿ ಸಂಪೂರ್ಣ ಪರಿಸರ ವ್ಯವಸ್ಥೆಯ ಸೃಷ್ಟಿಯಾಗಿದೆ ಎಂದು ಶ್ರೀ ಪುರಿ ಹೇಳಿದರು.
ಹೀರೋ ಮೋಟೋಕಾರ್ಪ್ ಇತ್ತೀಚೆಗೆ ಬಿಡುಗಡೆ ಮಾಡಿದ ಫ್ಲೆಕ್ಸ್- ಇಂಧನ ಮೋಟಾರ್ ಸೈಕಲ್ ಗಳು ಮತ್ತು ಇಂದು ಮಾರುತಿ ಸುಜುಕಿ ಬಿಡುಗಡೆ ಮಾಡಿದ ಫ್ಲೆಕ್ಸ್- ಇಂಧನ ಪ್ರಯಾಣಿಕ ಕಾರನ್ನು ಉಲ್ಲೇಖಿಸಿದ ಸಚಿವರು, ದೇಶವು ಸ್ವಚ್ಛ ಸಾರಿಗೆಯ ಹೊಸ ಹಂತಕ್ಕೆ ಪ್ರವೇಶಿಸುತ್ತಿದೆ ಎಂದು ಹೇಳಿದರು.
ಭಾರತದ ಸ್ವಚ್ಛ ಸಾರಿಗೆ ಪರಿವರ್ತನೆಗೆ ನೀಡಿದ ಕೊಡುಗೆಗಾಗಿ ಮಾರುತಿ ಸುಜುಕಿ ಸಂಸ್ಥೆಯನ್ನು ಅಭಿನಂದಿಸಿದ ಶ್ರೀ ಪುರಿ, "ಭಾರತದ ಇಂಧನ ಪರಿವರ್ತನೆಯು ಭಾರತದಲ್ಲೇ ನಿರ್ಮಾಣವಾಗಲಿದೆ, ಭಾರತೀಯ ನಾವೀನ್ಯತೆಯಿಂದ ಶಕ್ತಿ ಪಡೆಯಲಿದೆ, ಭಾರತೀಯ ರೈತರಿಂದ ಬೆಂಬಲಿತವಾಗಲಿದೆ ಮತ್ತು ಭಾರತೀಯ ಗ್ರಾಹಕರಿಂದ ಮುನ್ನಡೆಸಲ್ಪಡಲಿದೆ" ಎಂದರು. ಎಲ್ಲಾ ವಾಹನ ವಿಭಾಗಗಳಲ್ಲಿ ಫ್ಲೆಕ್ಸ್- ಇಂಧನ ಮಾದರಿಗಳ ಪರಿಚಯವನ್ನು ವೇಗಗೊಳಿಸಲು ವಾಹನ ತಯಾರಕರಿಗೆ ಮತ್ತು ದೇಶಾದ್ಯಂತ ಇ85 ಲಭ್ಯತೆಯನ್ನು ಶೀಘ್ರವಾಗಿ ವಿಸ್ತರಿಸಲು ತೈಲ ಮಾರುಕಟ್ಟೆ ಕಂಪನಿಗಳಿಗೆ ಅವರು ಕರೆ ನೀಡಿದರು.
*****
(रिलीज़ आईडी: 2268960)
आगंतुक पटल : 22