ಕೃಷಿ ಸಚಿವಾಲಯ
azadi ka amrit mahotsav

ಭೂಮಿ ತಾಯಿಯನ್ನು  ರಕ್ಷಿಸುವ ರಾಷ್ಟ್ರೀಯ ಸಂಕಲ್ಪ: ಜೂನ್ 1 ರಿಂದ ರೈಸೇನ್ ನಿಂದ ‘ಖೇತ್ ಬಚಾವೋ ಅಭಿಯಾನ’ (ಹೊಲ ಉಳಿಸಿ ಅಭಿಯಾನ) ಪ್ರಾರಂಭ


ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ದೇಶದ ಸಂಪೂರ್ಣ ಕೃಷಿ ಕ್ಷೇತ್ರಕ್ಕೆ ಕರೆ ನೀಡಿದ್ದಾರೆ; "ಇದನ್ನು ಕೇವಲ ಒಂದು ಔಪಚಾರಿಕ ಆಚರಣೆಯಾಗಿ ಪರಿಗಣಿಸಬೇಡಿ — ಸಂಪೂರ್ಣ ಬದ್ಧತೆ ಮತ್ತು ದೃಢ ವಿಶ್ವಾಸದೊಂದಿಗೆ ಹೊಲಗಳಿಗೆ ಇಳಿಯಿರಿ" ಎಂದು ಹೇಳಿದ್ದಾರೆ

ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಉಪಕ್ರಮದಿಂದಾಗಿ, ದೇಶಾದ್ಯಂತದ ಕೆವಿಕೆಗಳು, ಐಸಿಎಆರ್  ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು ಮತ್ತು ರಾಜ್ಯ ಕೃಷಿ ವ್ಯವಸ್ಥೆಗಳು ಒಂದೇ ವೇದಿಕೆಯಲ್ಲಿ ಒಂದಾಗಿವೆ

ಈ ಅಭಿಯಾನವು ರೈತರ ಮತ್ತು ಕೃಷಿ ಭೂಮಿಯ ಕಲ್ಯಾಣಕ್ಕಾಗಿ ದೇಶವ್ಯಾಪಿ ಜನ ಆಂದೋಲನವಾಗಿ ರೂಪಾಂತರಗೊಳ್ಳಲಿದೆ: ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಸಮತೋಲಿತ ರಸಗೊಬ್ಬರ ಬಳಕೆ, ನೈಸರ್ಗಿಕ ಕೃಷಿ, ಮತ್ತು ನಕಲಿ ರಸಗೊಬ್ಬರ ಹಾಗೂ ಬೀಜಗಳ ವಿರುದ್ಧ ಕ್ರಮ — ‘ಖೇತ್ ಬಚಾವೋ ಅಭಿಯಾನ’ದ ಅಡಿಯಲ್ಲಿ ಸಮಗ್ರ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ

ಜೂನ್ 1 ರಂದು ರಾಷ್ಟ್ರೀಯ ಚಾಲನೆಗೆ ಮುನ್ನ, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತಾ, "ಭೂಮಾತೆಯ ಘನತೆಯನ್ನು ಎತ್ತಿಹಿಡಿಯುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ" ಎಂದು ಹೇಳಿದರು

ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕೋರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ; ಹಾಗೆಯೇ ಈ ಉಪಕ್ರಮಕ್ಕೆ ಭಾಗವಹಿಸಬೇಕೆಂದು ಕೇಂದ್ರ ಸಚಿವರಿಗೂ ಮನವಿ ಮಾಡಿದ್ದಾರೆ

ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಅಭಿಯಾನದ ಅವಧಿಯಲ್ಲಿ ಸ್ವತಃ ವಿವಿಧ ರಾಜ್ಯಗಳ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸಲಿದ್ದಾರೆ

ಪ್ರಕಟಣಾ ದಿನಾಂಕ: 31 MAY 2026 4:12PM by PIB Bengaluru

ಮಧ್ಯಪ್ರದೇಶದ ರಾಯ್ಸನ್ ಜಿಲ್ಲೆಯ ರಾಮಸಿಯಾ ಗ್ರಾಮದಿಂದ ಜೂನ್ 1 ರಂದು ಪ್ರಾರಂಭವಾಗಲಿರುವ ‘ಖೇತ್ ಬಚಾವೋ ಅಭಿಯಾನ’ದ (ಹೊಲ ಉಳಿಸಿ ಅಭಿಯಾನ)  ರಾಷ್ಟ್ರೀಯ ಚಾಲನೆಗೆ ಮುನ್ನ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ದೇಶಾದ್ಯಂತ ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು), ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್) ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಕೃಷಿ ಅಧಿಕಾರಿಗಳು ಹಾಗೂ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಇತರರೊಂದಿಗೆ ವರ್ಚುವಲ್ (ವಾಸ್ತವೋಪಮ) ಸಂವಾದ ನಡೆಸಿದರು. ಈ ಸಂವಾದದ ವೇಳೆ, ಸಾರ್ವಜನಿಕರ ಸಹಭಾಗಿತ್ವ, ವೈಜ್ಞಾನಿಕ ವಿಧಾನ ಮತ್ತು ರಾಷ್ಟ್ರೀಯ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಈ ಅಭಿಯಾನವನ್ನು ಮುನ್ನಡೆಸುವಂತೆ ಅವರು ಕರೆ ನೀಡಿದರು. ಈ ಪ್ರಮುಖ ಉಪಕ್ರಮದಲ್ಲಿ ಭಾಗವಹಿಸುವಂತೆ ಕೋರಿ ತಾವು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ಶ್ರೀ ಚೌಹಾಣ್ ತಿಳಿಸಿದರು. ಅವರು ಕೇಂದ್ರ ಸಚಿವರು ಮತ್ತು ಇತರ ಸಾರ್ವಜನಿಕ ಪ್ರತಿನಿಧಿಗಳಿಗೂ ಈ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮನವಿ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಸ್ಪೂರ್ತಿದಾಯಕ ಭಾಷಣದಲ್ಲಿ, ಇದು ಕೇವಲ ಸರ್ಕಾರದ ಕಾರ್ಯಕ್ರಮವಲ್ಲ, ಬದಲಿಗೆ ಭೂಮಿತಾಯಿಯನ್ನು ರಕ್ಷಿಸುವ, ಕೃಷಿಯ ಭವಿಷ್ಯವನ್ನು ಭದ್ರಪಡಿಸುವ ಮತ್ತು ಮುಂದಿನ ಪೀಳಿಗೆಯ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಅಭಿಯಾನವಾಗಿದೆ ಎಂದು ಹೇಳಿದರು. ಹೆಚ್ಚುತ್ತಿರುವ ತಾಪಮಾನ, ರಾಸಾಯನಿಕ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಅತಿಯಾದ ಹಾಗೂ ಅಸಮತೋಲಿತ ಬಳಕೆ, ಮಣ್ಣಿನ ಆರೋಗ್ಯದ ಕ್ಷೀಣತೆ ಮತ್ತು ಹೆಚ್ಚುತ್ತಿರುವ ಹವಾಮಾನ ಬಿಕ್ಕಟ್ಟು ಕೃಷಿಯ ಮುಂದೆ ಗಂಭೀರ ಸವಾಲುಗಳಾಗಿ ಬಂದಿವೆ ಎಂದು ಅವರು ಹೇಳಿದರು. ಆದ್ದರಿಂದ, ಸಕಾಲಿಕ ಜಾಗೃತಿ ಮೂಡಿಸುವಿಕೆ ಮತ್ತು ಕಾರ್ಯಸಾಧ್ಯವಾದ ಮಧ್ಯಸ್ಥಿಕೆಗಳು ಅತ್ಯಗತ್ಯವಾಗಿವೆ ಎಂದರು.

ಜೂನ್ 1 ರಂದು ರಾಯ್ಸನ್ ಜಿಲ್ಲೆಯ ರಾಮಸಿಯಾ ಗ್ರಾಮದಿಂದ ಪ್ರಾರಂಭವಾಗುವ ದೇಶವ್ಯಾಪಿ ʻಹೊಲ ಉಳಿಸಿ ಅಭಿಯಾನʼವು ರೈತರಲ್ಲಿ ಸಮತೋಲಿತ ರಸಗೊಬ್ಬರ ಬಳಕೆ, ಮಣ್ಣು ಪರೀಕ್ಷೆ, ಮಣ್ಣಿನ ಆರೋಗ್ಯ ಕಾರ್ಡುಗಳು  ನೈಸರ್ಗಿಕ ಕೃಷಿ, ಬೆಳೆ ಆಯ್ಕೆ, ಜಲ ಸಂರಕ್ಷಣೆ, ಹಸಿರು ಗೊಬ್ಬರ ಬಳಕೆ, ಕಡಿಮೆ ಮಳೆಯ ಪರಿಸ್ಥಿತಿಯಲ್ಲಿ ಪರ್ಯಾಯ ಕೃಷಿ ಪದ್ಧತಿಗಳು ಮತ್ತು ನಕಲಿ ರಸಗೊಬ್ಬರಗಳು, ಬೀಜಗಳು ಹಾಗೂ ಕೀಟನಾಶಕಗಳ ಗುರುತಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಗಮನ ಹರಿಸಲಿದೆ ಎಂದು ಶ್ರೀ ಚೌಹಾಣ್ ವಿವರಿಸಿದರು.

ಕೇವಲ ಸಲಹೆ ನೀಡುವುದು ಸಾಲುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಕ್ಷೇತ್ರ ಮಟ್ಟದ ಪ್ರಾತ್ಯಕ್ಷಿಕೆಗಳು, ವೈಜ್ಞಾನಿಕ ಪುರಾವೆಗಳು ಮತ್ತು ಕಾರ್ಯಸಾಧ್ಯವಾದ ಉದಾಹರಣೆಗಳ ಮೂಲಕ ರೈತರ ವಿಶ್ವಾಸವನ್ನು ಬಲಪಡಿಸಬೇಕಾಗಿದೆ. ಜೂನ್ 30 ರವರೆಗೆ ವಿಸ್ತರಿಸುವ ವಿವರವಾದ ಮಾರ್ಗಸೂಚಿಯನ್ನು ದೇಶಾದ್ಯಂತ ಸಿದ್ಧಪಡಿಸಬೇಕು, ಅದರಲ್ಲಿ ಯಾವ ಅಧಿಕಾರಿ, ವಿಜ್ಞಾನಿ, ಸಂಸ್ಥೆ ಅಥವಾ ತಂಡವು ಯಾವ ದಿನಾಂಕದಂದು ಯಾವ ಗ್ರಾಮಕ್ಕೆ ಭೇಟಿ ನೀಡಲಿದೆ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಬೇಕು ಎಂದು ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಹೇಳಿದರು. ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಮುಂಚಿತವಾಗಿಯೇ ಯೋಜಿಸಬೇಕು, ಉಸ್ತುವಾರಿಯು ಡ್ಯಾಶ್ ಬೋರ್ಡ್ ಆಧಾರಿತವಾಗಿರಬೇಕು, ಸ್ಥಳೀಯ ಮಟ್ಟದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅಭಿಯಾನದ ಪ್ರತಿಯೊಂದು ಹಂತದಲ್ಲೂ ಪರಿಣಾಮಕಾರಿ ಸಮನ್ವಯವು ಕಾಣಬೇಕು ಎಂದು ಅವರು ನಿರ್ದೇಶನ ನೀಡಿದರು.

ರಾಜ್ಯ ಕೃಷಿ ಇಲಾಖೆಗಳ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ ಶ್ರೀ ಚೌಹಾಣ್ ಅವರು, ಕೇಂದ್ರ, ರಾಜ್ಯ ಸರ್ಕಾರಗಳು, ಐಸಿಎಆರ್, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸಾರ್ವಜನಿಕ ಪ್ರತಿನಿಧಿಗಳು, ವಿದ್ಯಾರ್ಥಿಗಳು ಮತ್ತು ರೈತ ಬೆಂಬಲ ಸಂಸ್ಥೆಗಳು ಸಮನ್ವಯದಿಂದ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಈ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು. ಸಂಸದರು, ಶಾಸಕರು ಮತ್ತು ಇತರ ಚುನಾಯಿತ ಪ್ರತಿನಿಧಿಗಳನ್ನು ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿಹೇಳಿದರು ಮತ್ತು ನೈಸರ್ಗಿಕ ಕೃಷಿ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಕಾರ್ಯಸಾಧ್ಯವಾದ ಉದಾಹರಣೆಗಳನ್ನು ಪ್ರಸ್ತುತಪಡಿಸಲು ಅವರನ್ನು ಪ್ರೋತ್ಸಾಹಿಸಿದರು.

ಕಿಸಾನ್ ಕ್ರೆಡಿಟ್ ಕಾರ್ಡ್, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಬೆಳೆ ವಿಮೆ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್ಗಳು, ಮಿನಿ ಬೀಜ ಕಿಟ್ಗಳು, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಮಿಷನ್, ಮತ್ತು ಕೃಷಿ ಯಾಂತ್ರೀಕರಣ ಕಾರ್ಯಕ್ರಮಗಳಂತಹ ಯೋಜನೆಗಳ ಪ್ರಯೋಜನಗಳು ರೈತರನ್ನು ತಲುಪುವಂತೆ ನೋಡಿಕೊಳ್ಳುವ ಮೂಲಕ ಈ ಅಭಿಯಾನಕ್ಕೆ ಬಹು ಆಯಾಮದ ಸ್ವರೂಪವನ್ನು ನೀಡಬೇಕು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು. ಇದು ಕೃಷಿ ಭೂಮಿಯನ್ನು ರಕ್ಷಿಸಲು ಸಹಾಯ ಮಾಡುವುದಲ್ಲದೆ, ರೈತರ ಆದಾಯ, ಜಾಗೃತಿ ಮಟ್ಟಗಳು ಮತ್ತು ಕೃಷಿ ನಿರ್ವಹಣಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವರು ಪ್ರಚಾರ ಮತ್ತು ಜನಸಂಪರ್ಕಕ್ಕೆ ವಿಶೇಷ ಒತ್ತು ನೀಡಿದರು, ಇವುಗಳನ್ನು ಅಭಿಯಾನದ ಅವಿಭಾಜ್ಯ ಅಂಗಗಳೆಂದು ಹೇಳಿದರು. ಇದು ರಾಷ್ಟ್ರದ ಹಿತಾಸಕ್ತಿಯ ಕಾರ್ಯಕ್ರಮವಾಗಿದ್ದು, ಇದರ ಬಗ್ಗೆ ಮಾಹಿತಿ ಎಷ್ಟು ವೇಗವಾಗಿ ದೇಶದ ಗ್ರಾಮಗಳನ್ನು ತಲುಪುತ್ತದೆಯೋ, ಅಷ್ಟು ಹೆಚ್ಚು ಪರಿಣಾಮಕಾರಿಯಾಗಿ ಅಭಿಯಾನ ಮೂಡಿಬರುತ್ತದೆ ಎಂದು ಅವರು ಹೇಳಿದರು. ಈ ಅಭಿಯಾನವು ಭೂಮಿ, ಕೃಷಿ ಮತ್ತು ದೇಶದ ಅನ್ನದಾತರ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ ಅವರು, ಮಾಧ್ಯಮಗಳೊಂದಿಗೆ ಮುಕ್ತವಾಗಿ ಸಂವಹನ ನಡೆಸುವಂತೆ ಅಧಿಕಾರಿಗಳು ಮತ್ತು ವಿಜ್ಞಾನಿಗಳಿಗೆ ಒತ್ತಾಯಿಸಿದರು.

ಹಿಂದಿನ ಕೃಷಿ ಜನಸಂಪರ್ಕ ಉಪಕ್ರಮಗಳು ಹೇಗೆ ಗಮನಾರ್ಹ ಪ್ರಭಾವ ಬೀರಿದ್ದವೋ, ಅದೇ ರೀತಿ ʻಹೊಲ ಉಳಿಸಿ ಅಭಿಯಾನʼವೂ ದೇಶವ್ಯಾಪಿ ಕೃಷಿ ಸುಧಾರಣೆ ಮತ್ತು ಸಾರ್ವಜನಿಕ ಜಾಗೃತಿಯಲ್ಲಿ ಯಶಸ್ವಿ ಅಧ್ಯಾಯವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ವ್ಯಕ್ತಪಡಿಸಿದರು. ಸಂಬಂಧಪಟ್ಟ ಎಲ್ಲರೂ ಸಂಪೂರ್ಣ ಸಮರ್ಪಣಾ ಭಾವ, ಸಿದ್ಧತೆ ಮತ್ತು ಸೂಕ್ಷ್ಮತೆಯೊಂದಿಗೆ ಗ್ರಾಮಗಳಿಗೆ ಭೇಟಿ ನೀಡಲು, ರೈತರಿಗೆ ನಿಖರವಾದ ಮಾಹಿತಿ ನೀಡಲು ಮತ್ತು ಭೂತಾಯಿಯನ್ನು ರಕ್ಷಿಸುವ ಸಂಕಲ್ಪವನ್ನು ಜನಾಂದೋಲನವನ್ನಾಗಿ ಪರಿವರ್ತಿಸಲು ಕರೆ ನೀಡಿದರು. ತಾವು ಕೂಡ ಅಭಿಯಾನದ ಅವಧಿಯಲ್ಲಿ ವಿವಿಧ ರಾಜ್ಯಗಳ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಸಂವಾದ ನಡೆಸುವುದಾಗಿ ಶ್ರೀ ಚೌಹಾಣ್ ಘೋಷಿಸಿದರು.

ವರ್ಚುವಲ್ ಸಂವಾದದಲ್ಲಿ, ಕೃಷಿ ಮತ್ತು ರೈತರ ಕಲ್ಯಾಣ ಕಾರ್ಯದರ್ಶಿ ಅತಿಶ್ ಚಂದ್ರ ಮತ್ತು ಐಸಿಎಆರ್ ಮಹಾನಿರ್ದೇಶಕ ಡಾ. ಎಂ. ಎಲ್. ಜಾಟ್ ಅವರೂ ಸಹ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ವಿಜ್ಞಾನಿಗಳು, ಐಸಿಎಆರ್ ಸಂಸ್ಥೆಗಳ ನಿರ್ದೇಶಕರು, ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು, ರಾಜ್ಯ ಕೃಷಿ ಇಲಾಖೆಗಳ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 

*****


(ಪ್ರಕಟಣೆ ಐ.ಡಿ.: 2267298) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil