ಗೃಹ ವ್ಯವಹಾರಗಳ ಸಚಿವಾಲಯ
ರಾಜಸ್ಥಾನದಲ್ಲಿ ಗಡಿ ಭದ್ರತೆಯನ್ನು ಬಲಪಡಿಸಲು ಬಿಕಾನೇರ್‌ನಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವಹಿಸಿದ್ದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತ ಸರ್ಕಾರವು ಅಂತಾರಾಷ್ಟ್ರೀಯ ಗಡಿಗಳಲ್ಲಿ ಅತ್ಯುನ್ನತ ಗುಣಮಟ್ಟದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ
ನಾಗರಿಕರು, ರಾಜ್ಯ ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳನ್ನು ಒಳಗೊಂಡ ಪ್ರತಿಯೊಂದು ಗಡಿ ಜಿಲ್ಲೆಗಳಲ್ಲೂ ದೃಢವಾದ 360 ಡಿಗ್ರಿ (360°) ಭದ್ರತಾ ಚೌಕಟ್ಟನ್ನು ಅಳವಡಿಸಲಾಗುವುದು
ಗಡಿಗಳಲ್ಲಿ, ವಿಶೇಷವಾಗಿ 15 ಕಿ.ಮೀ ಒಳಗಿನ ಪ್ರದೇಶಗಳಲ್ಲಿನ ಅಕ್ರಮ ನಿರ್ಮಾಣಗಳನ್ನು ಕಟ್ಟುನಿಟ್ಟಾಗಿ ತೆರವುಗೊಳಿಸಲಾಗುವುದು
ಒಳನುಸುಳುವಿಕೆ, ಮಾದಕವಸ್ತು ಕಳ್ಳಸಾಗಣೆ, ಅತಿಕ್ರಮಣ, ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಗಡಿಯಾಚೆಗಿನ ಅಪರಾಧಗಳನ್ನು ತಡೆಯಲು ಬಿಎಸ್‌ಎಫ್ (BSF), ಸಿಬಿಡಿಟಿ (CBDT), ಎನ್‌ಸಿಬಿ (NCB) ಮತ್ತು ರಾಜ್ಯ ಸರ್ಕಾರಿ ವ್ಯವಸ್ಥೆಯನ್ನು ಸಂಯೋಜಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು
ಬ್ಯಾಂಕುಗಳ ಕಾನೂನು ಮತ್ತು ಆರ್ಥಿಕ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು, ಪ್ರಮುಖ ವ್ಯಾಪಾರ ಸಂಸ್ಥೆಗಳ ಪರಿಶೀಲನೆ ಮತ್ತು ನಿಧಿಯ ಮೂಲಗಳ ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳು ನಡೆಸಬೇಕು
ಕಳ್ಳಸಾಗಣೆ ನಿಯಂತ್ರಣಕ್ಕಾಗಿ ಮ್ಯೂಲ್ (Mule) ಖಾತೆಗಳು, ಶೆಲ್ (Shell) ಕಂಪನಿಗಳು ಮತ್ತು ನಕಲಿ ಆಧಾರ್ ಕಾರ್ಡ್‌ಗಳ ಮೇಲೆ ನಿಕಟ ನಿಗಾವಹಿಸಬೇಕು; ಆಗ ಕಳ್ಳಸಾಗಣೆ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ
ಅಪರಾಧ ಮತ್ತು ಮಾದಕವಸ್ತು ಪಿಡುಗಿನ ಹಿಂದಿನ ಮೂಲಗಳು, ಪ್ರವೃತ್ತಿಗಳು ಮತ್ತು ಜಾಲಗಳನ್ನು ಜಿಲ್ಲಾಡಳಿತಗಳು ಆಳವಾಗಿ ಅಧ್ಯಯನ ಮಾಡಬೇಕು
ಗಡಿ ಜಿಲ್ಲೆಗಳು ಅಪರಾಧ ಮತ್ತು ಮಾದಕವಸ್ತು ಪಿಡುಗಿಗೆ ಶಾಶ್ವತವಾದ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕು
ಮೂರು ಹೊಸ ಕ್ರಿಮಿನಲ್ ಕಾನೂನುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ನೀಡುವ ಮೂಲಕ ಸೈಬರ್ ಅಪರಾಧಗಳನ್ನು ನಿಗ್ರಹಿಸಲು '1930' ಸಹಾಯವಾಣಿಯ (ಕಾಲ್ ಸೆಂಟರ್) ಪರಿಣಾಮಕಾರಿ ಬಳಕೆಯಾಗಬೇಕು
ಕಟ್ಟಕಡೆಯ ಹಂತದ ಆಡಳಿತವನ್ನು ಬಲಪಡಿಸಲು, ಆರ್ಥಿಕ ಅಪರಾಧಗಳನ್ನು ನಿಗ್ರಹಿಸಲು, ಮೂಲಸೌಕರ್ಯ ಕೊರತೆಯನ್ನು ನೀಗಿಸಲು ಮತ್ತು ಗಡಿ ಭಾಗದ ಜನಸಂಖ್ಯೆಯನ್ನು ಬೆಂಬಲಿಸಲು 'ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ-II' (VVP-II) ನ ಯಶಸ್ವಿ ಅನುಷ್ಠಾನವಾಗಬೇಕು
ಪ್ರಕಟಣಾ ದಿನಾಂಕ:
27 MAY 2026 2:51PM by PIB Bengaluru
ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ (IPB) ಗಡಿ ಜಿಲ್ಲೆಗಳಿಗೆ ಸಂಬಂಧಿಸಿದ ಭದ್ರತಾ ಸಮಸ್ಯೆಗಳನ್ನು ಸಮಗ್ರವಾಗಿ ನಿರ್ಣಯಿಸಲು ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ವಹಿಸಿದ್ದರು. ಸಭೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಬಿಕಾನೇರ್, ಜೈಸಲ್ಮೇರ್, ಬಾರ್ಮರ್, ಶ್ರೀಗಂಗಾನಗರ ಮತ್ತು ಫಲೋಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಸಕ್ರಿಯ ಸಮನ್ವಯದೊಂದಿಗೆ ಸುಧಾರಿತ ಮತ್ತು ಸಮಗ್ರ ಗಡಿ ನಿರ್ವಹಣೆಯ ಮೇಲೆ ಈ ಸಭೆಯು ಪ್ರಮುಖವಾಗಿ ಗಮನ ಹರಿಸಿತು.

ಸಭೆಯಲ್ಲಿ, ಪ್ರತಿ ಗಡಿ ಭಾಗದ ಜಿಲ್ಲೆಗೆ 360 ಡಿಗ್ರಿ ಭದ್ರತಾ ಚೌಕಟ್ಟನ್ನು ರೂಪಿಸಲು ನಿರ್ಧರಿಸಲಾಯಿತು. ಸಮಗ್ರ ಮತ್ತು ಬಲಿಷ್ಠ ಗಡಿ ಪ್ರದೇಶದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಈ ಸಂಯೋಜಿತ ವಿಧಾನವು ಸ್ಥಳೀಯ ನಾಗರಿಕರು, ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಮತ್ತು ಎಲ್ಲಾ ಸಂಬಂಧಿತ ಭದ್ರತಾ ಸಂಸ್ಥೆಗಳನ್ನು ಸಕ್ರಿಯವಾಗಿ ಒಳಗೊಳ್ಳಲಿದೆ.
ಅಂತಾರಾಷ್ಟ್ರೀಯ ಗಡಿಯಿಂದ 0-15 ಕಿ.ಮೀ ವ್ಯಾಪ್ತಿಯೊಳಗೆ ನಡೆಯುವ ಅಕ್ರಮ ನಿರ್ಮಾಣಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವನ್ನು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಒತ್ತಿ ಹೇಳಿದರು. ಅಂತಹ ಎಲ್ಲಾ ಅನಧಿಕೃತ ನಿರ್ಮಾಣಗಳನ್ನು ತಕ್ಷಣವೇ ತೆರವುಗೊಳಿಸಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಳನುಸುಳುವಿಕೆ, ಮಾದಕವಸ್ತು ಕಳ್ಳಸಾಗಣೆ, ಅತಿಕ್ರಮಣ, ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಇತರ ಗಡಿಯಾಚೆಗಿನ ಅಪರಾಧಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಗಡಿ ಭದ್ರತಾ ಪಡೆ (BSF), ಕೇಂದ್ರ ನೇರ ತೆರಿಗೆ ಮಂಡಳಿ (CBDT), ಮಾದಕವಸ್ತು ನಿಯಂತ್ರಣ ಬ್ಯೂರೋ (NCB) ಮತ್ತು ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಒಳಗೊಂಡ ಸಂಘಟಿತ ಗಡಿ ನಿರ್ವಹಣಾ ಕಾರ್ಯತಂತ್ರದ ಅಗತ್ಯತೆಯನ್ನು ಶ್ರೀ ಅಮಿತ್ ಶಾ ಅವರು ಒತ್ತಿ ಹೇಳಿದರು.
ಎಲ್ಲಾ ಬ್ಯಾಂಕುಗಳಿಂದ ಸಂಪೂರ್ಣ ಕಾನೂನು ಮತ್ತು ಆರ್ಥಿಕ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು, ಪ್ರಮುಖ ವ್ಯಾಪಾರ ಸಂಸ್ಥೆಗಳ ಪರಿಶೀಲನೆ, ಅವುಗಳ ಆರ್ಥಿಕ ಮೂಲಗಳ ಪರಿಶೀಲನೆ, ಮ್ಯೂಲ್ (Mule) ಖಾತೆಗಳು ಮತ್ತು ಶೆಲ್ ಕಂಪನಿಗಳ ಪತ್ತೆಹಚ್ಚುವಿಕೆ, ನಕಲಿ ಆಧಾರ್ ಕಾರ್ಡ್‌ಗಳ ಗುರುತಿಸುವಿಕೆ ಮತ್ತು ಕಳ್ಳಸಾಗಣೆ ತಡೆಗಟ್ಟುವಿಕೆ ಸೇರಿದಂತೆ ವರ್ಧಿತ ಜವಾಬ್ದಾರಿಗಳನ್ನು ವಹಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೈಬರ್ ಅಪರಾಧಗಳ ತ್ವರಿತ ಪರಿಹಾರಕ್ಕಾಗಿ ಮತ್ತು ಈ ಪ್ರದೇಶದಲ್ಲಿ ಕಾನೂನು ಜಾರಿ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳನ್ನು ಬಲಪಡಿಸಲು ಮೂರು ಹೊಸ ಕ್ರಿಮಿನಲ್ ಕಾನೂನುಗಳ ಸಂಪೂರ್ಣ ಅನುಷ್ಠಾನಕ್ಕಾಗಿ '1930' ಸಹಾಯವಾಣಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಸೂಚನೆ ನೀಡಿದರು.
ಸಭೆಯಲ್ಲಿ, ಕಟ್ಟಕಡೆಯ ಹಂತದ ಆಡಳಿತವನ್ನು ಬಲಪಡಿಸಲು, ಆರ್ಥಿಕ ಅಪರಾಧಗಳನ್ನು ನಿಗ್ರಹಿಸಲು, ಮೂಲಸೌಕರ್ಯ ಕೊರತೆಗಳನ್ನು ನೀಗಿಸಲು ಮತ್ತು ಗಡಿ ಭಾಗದ ಜನಸಂಖ್ಯೆಯನ್ನು ಬೆಂಬಲಿಸಲು 'ವೈಬ್ರಂಟ್ ವಿಲೇಜಸ್ ಪ್ರೋಗ್ರಾಂ-II' (VVP-II) ನ ಯಶಸ್ವಿ ಅನುಷ್ಠಾನಕ್ಕೆ ವಿಶೇಷ ಒತ್ತು ನೀಡಲಾಯಿತು. ಗಡಿ ಭಾಗದ ಹಳ್ಳಿಗಳಲ್ಲಿ ಎಲ್ಲಾ ಸರ್ಕಾರಿ ಯೋಜನೆಗಳನ್ನು ಶೇ. 100ರಷ್ಟು ಅನುಷ್ಠಾನಗೊಳಿಸುವುದನ್ನು ಇದೇ ವೇಳೆ ಪುನರುಚ್ಚರಿಸಲಾಯಿತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಗಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮತ್ತು ಸುರಕ್ಷತೆಗಾಗಿ ಕೇಂದ್ರ ಹಾಗೂ ರಾಜ್ಯ ಸಂಸ್ಥೆಗಳ ನಡುವೆ ನಿಕಟ ಸಮನ್ವಯತೆಯನ್ನು (Synergy) ಉತ್ತೇಜಿಸಲಾಗುತ್ತಿದೆ. ಹಾಗೆಯೇ, ಅಂತಾರಾಷ್ಟ್ರೀಯ ಗಡಿಗಳಲ್ಲಿ ಅತ್ಯುನ್ನತ ಗುಣಮಟ್ಟದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಯಾವಾಗಲೂ ದೃಢವಾಗಿ ಬದ್ಧವಾಗಿದೆ ಎಂದು ಸಭೆಯಲ್ಲಿ ಆಶಯ ವ್ಯಕ್ತಪಡಿಸಲಾಯಿತು.
(ಪ್ರಕಟಣೆ ಐ.ಡಿ.: 2265834)
ವಿಸಿಟರ್ ಕೌಂಟರ್ : 15