ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಾರತ ಸರ್ಕಾರದಿಂದ 'ಜನಸಂಖ್ಯಾ ಬದಲಾವಣೆ ಕುರಿತ ಉನ್ನತ ಮಟ್ಟದ ಸಮಿತಿ' ರಚನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಆಗಸ್ಟ್ 15ರಂದು ‘ಉನ್ನತಾಧಿಕಾರದ ಜನಸಂಖ್ಯಾ ಮಿಷನ್’ ಅನ್ನು ಘೋಷಿಸಿದ್ದರು

ಅಕ್ರಮ ನುಸುಳುವಿಕೆ ಮತ್ತು ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗೆ ಕಾರಣವಾಗುವ ಇತರ ಅಂಶಗಳು ಯಾವುದೇ ದೇಶದ ಪ್ರಸ್ತುತ ಹಾಗೂ ಭವಿಷ್ಯಕ್ಕೆ ಅತ್ಯಂತ ದೊಡ್ಡ ಸವಾಲಾಗಿದೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ

ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನಾವ್ಲೇಕರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ಸಮಿತಿಯು ಜನಗಣತಿ ಆಯುಕ್ತರ ಜೊತೆಗೆ ಶ್ರೀ ದುರ್ಗಾ ಶಂಕರ್ ಮಿಶ್ರಾ (ನಿವೃತ್ತ ಐಎಎಸ್), ಶ್ರೀ ಬಾಲಾಜಿ ಶ್ರೀವಾಸ್ತವ (ನಿವೃತ್ತ ಐಪಿಎಸ್) ಮತ್ತು ಡಾ. ಶಮಿಕಾ ರವಿ ಅವರನ್ನು ಸದಸ್ಯರನ್ನಾಗಿ ಒಳಗೊಂಡಿರುತ್ತದೆ

ಜನಸಂಖ್ಯಾ ಬದಲಾವಣೆಯು ಕೇವಲ ನಮ್ಮ ಸಾರ್ವಭೌಮತ್ವಕ್ಕೆ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ, ಸಾಮಾಜಿಕ ರಚನೆಯಲ್ಲಿನ ಪ್ರಮುಖ ಬದಲಾವಣೆಗಳು ಹಾಗೂ ಬುಡಕಟ್ಟು ಸಮುದಾಯಗಳ ರಕ್ಷಣೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ

ಅಕ್ರಮ ವಲಸೆ ಮತ್ತು ಇತರ ಅಸ್ವಾಭಾವಿಕ ಕಾರಣಗಳಿಂದಾಗಿ ಭಾರತದಾದ್ಯಂತ ಸಂಭವಿಸುತ್ತಿರುವ ಜನಸಂಖ್ಯಾ ಬದಲಾವಣೆಗಳ ಸಮಗ್ರ ಮೌಲ್ಯಮಾಪನವನ್ನು ಈ ಸಮಿತಿಯು ನಡೆಸಲಿದೆ

ಸಮಿತಿಯು ಧಾರ್ಮಿಕ ಮತ್ತು ಸಾಮಾಜಿಕ ಸಮುದಾಯಗಳ ಮಟ್ಟದಲ್ಲಿ ಕಂಡುಬರುತ್ತಿರುವ ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗಳ ಮಾದರಿಗಳನ್ನು ವಿಶ್ಲೇಷಿಸಲಿದೆ ಹಾಗೂ ಈ ಸಮಸ್ಯೆಯನ್ನು ಪರಿಹರಿಸಲು ಸುಸೂತ್ರವಾದ ಮತ್ತು ಕಾಲಮಿತಿಯ ಪರಿಹಾರವನ್ನು ಪ್ರಸ್ತುತಪಡಿಸಲಿದೆ

ಸಮಿತಿಯು ತನ್ನ ವರದಿಯನ್ನು ಒಂದು ವರ್ಷದೊಳಗೆ ಸಲ್ಲಿಸಲಿದೆ. ಅಗತ್ಯ ಬಿದ್ದರೆ ಸಮಿತಿಯ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಬಹುದಾಗಿದೆ

ಪ್ರಕಟಣಾ ದಿನಾಂಕ: 26 MAY 2026 5:30PM by PIB Bengaluru

ಅಕ್ರಮ ವಲಸೆ ಮತ್ತು ಇತರ ಅಸ್ವಾಭಾವಿಕ ಕಾರಣಗಳಿಂದ ಉಂಟಾಗುವ ಜನಸಂಖ್ಯಾ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಲು ಮತ್ತು ಈ ಬದಲಾವಣೆಗಳನ್ನು ನಿಭಾಯಿಸಲು ಅಗತ್ಯ ಕ್ರಮಗಳನ್ನು ಸೂಚಿಸಲು ಭಾರತ ಸರ್ಕಾರವು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಆಗಸ್ಟ್ 15ರಂದು “ಉನ್ನತಾಧಿಕಾರದ ಜನಸಂಖ್ಯಾ ಮಿಷನ್” ಅನ್ನು ಘೋಷಿಸಿದ್ದರು. ಕೇಂದ್ರ ಸಚಿವ ಸಂಪುಟವು 2025ರ ಸೆಪ್ಟೆಂಬರ್ 11ರಂದು ಈ ಪ್ರಸ್ತಾಪಕ್ಕೆ ತನ್ನ ಅನುಮೋದನೆಯನ್ನು ನೀಡಿತ್ತು.

ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನಾವ್ಲೇಕರ್ ಅವರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜನಗಣತಿ ಆಯುಕ್ತರ ಜೊತೆಗೆ, ಮೂವರು ತಜ್ಞರಾದ — ಶ್ರೀ ದುರ್ಗಾ ಶಂಕರ್ ಮಿಶ್ರಾ (ನಿವೃತ್ತ ಐಎಎಸ್ - IAS), ಶ್ರೀ ಬಾಲಾಜಿ ಶ್ರೀವಾಸ್ತವ (ನಿವೃತ್ತ ಐಪಿಎಸ್ - IPS), ಮತ್ತು ಡಾ. ಶಮಿಕಾ ರವಿ ಅವರು ಸಮಿತಿಯ ಸದಸ್ಯರಾಗಿರುತ್ತಾರೆ. ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ವಿದೇಶಿಯರು-I) ಅವರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಈ ಸಮಿತಿಯು ತನ್ನ ವರದಿಯನ್ನು ಒಂದು ವರ್ಷದೊಳಗೆ ಸಲ್ಲಿಸಲಿದೆ. ಅಗತ್ಯವಿದ್ದರೆ, ಗೃಹ ವ್ಯವಹಾರಗಳ ಸಚಿವಾಲಯವು ಸಮಿತಿಯ ಅವಧಿಯನ್ನು ಆರು ತಿಂಗಳವರೆಗೆ ವಿಸ್ತರಿಸಬಹುದು.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಈ ಕುರಿತು ಎಕ್ಸ್ (X) ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. “ಅಕ್ರಮ ನುಸುಳುವಿಕೆ ಮತ್ತು ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗೆ ಕಾರಣವಾಗುವ ಇತರ ಅಂಶಗಳು ಯಾವುದೇ ದೇಶದ ಪ್ರಸ್ತುತ ಹಾಗೂ ಭವಿಷ್ಯಕ್ಕೆ ಅತ್ಯಂತ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಎದುರಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಆಗಸ್ಟ್ 15ರಂದು ‘ಜನಸಂಖ್ಯಾ ಬದಲಾವಣೆ ಕುರಿತ ಉನ್ನತ ಮಟ್ಟದ ಸಮಿತಿ’ಯನ್ನು ಘೋಷಿಸಿದ್ದರು. ಸರ್ಕಾರವು ಈ ಸಮಿತಿಯನ್ನು ರಚಿಸಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನಾವ್ಲೇಕರ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಈ ಸಮಿತಿಯು ಜನಗಣತಿ ಆಯುಕ್ತರ ಜೊತೆಗೆ ಶ್ರೀ ದುರ್ಗಾ ಶಂಕರ್ ಮಿಶ್ರಾ (ನಿವೃತ್ತ ಐಎಎಸ್), ಶ್ರೀ ಬಾಲಾಜಿ ಶ್ರೀವಾಸ್ತವ (ನಿವೃತ್ತ ಐಪಿಎಸ್) ಮತ್ತು ಡಾ. ಶಮಿಕಾ ರವಿ ಅವರನ್ನು ಸದಸ್ಯರನ್ನಾಗಿ ಒಳಗೊಂಡಿರುತ್ತದೆ. ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ವಿದೇಶಿಯರು-I) ಅವರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಜನಸಂಖ್ಯಾ ಬದಲಾವಣೆಯು ಕೇವಲ ನಮ್ಮ ಸಾರ್ವಭೌಮತ್ವಕ್ಕೆ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ, ಸಾಮಾಜಿಕ ರಚನೆಯಲ್ಲಿನ ಪ್ರಮುಖ ಬದಲಾವಣೆಗಳು ಹಾಗೂ ಬುಡಕಟ್ಟು ಸಮುದಾಯಗಳ ರಕ್ಷಣೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದೆ. ಅಕ್ರಮ ವಲಸೆ ಮತ್ತು ಇತರ ಅಸ್ವಾಭಾವಿಕ ಕಾರಣಗಳಿಂದಾಗಿ ಭಾರತದಾದ್ಯಂತ ಸಂಭವಿಸುತ್ತಿರುವ ಜನಸಂಖ್ಯಾ ಬದಲಾವಣೆಗಳ ಸಮಗ್ರ ಮೌಲ್ಯಮಾಪನವನ್ನು ಈ ಸಮಿತಿಯು ನಡೆಸಲಿದೆ. ಇದು ಧಾರ್ಮಿಕ ಮತ್ತು ಸಾಮಾಜಿಕ ಸಮುದಾಯಗಳ ಮಟ್ಟದಲ್ಲಿ ಕಂಡುಬರುತ್ತಿರುವ ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆಗಳ ಮಾದರಿಗಳನ್ನು ವಿಶ್ಲೇಷಿಸಲಿದೆ ಹಾಗೂ ಈ ಸಮಸ್ಯೆಯನ್ನು ಪರಿಹರಿಸಲು ಸುಸೂತ್ರವಾದ ಮತ್ತು ಕಾಲಮಿತಿಯ ಪರಿಹಾರವನ್ನು ಪ್ರಸ್ತುತಪಡಿಸಲಿದೆ,” ಎಂದು ಅವರು ಹೇಳಿದ್ದಾರೆ.

ಈ ಉನ್ನತ ಮಟ್ಟದ ಸಮಿತಿಯು ಅಕ್ರಮ ವಲಸೆ ಮತ್ತು ಇತರ ಅಸ್ವಾಭಾವಿಕ ಕಾರಣಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿರುವ ಜನಸಂಖ್ಯಾ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡುತ್ತದೆ, ಅವುಗಳ ಕಾರಣಗಳನ್ನು ವಿಶ್ಲೇಷಿಸುತ್ತದೆ ಮತ್ತು ಸೂಕ್ತವಾದ ನೀತಿ, ಶಾಸಕಾಂಗ ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಸಮಿತಿಯ ಉದ್ದೇಶಿತ ರಚನೆ ಮತ್ತು ಪರಿಶೀಲನಾಂಶಗಳು (Terms of Reference) ಈ ಕೆಳಗಿನಂತಿವೆ:

  1. ಅಕ್ರಮ ವಲಸೆ ಸೇರಿದಂತೆ ಜನಸಂಖ್ಯಾ ಬದಲಾವಣೆಗಳಿಂದ ಉಂಟಾಗುವ ಸವಾಲುಗಳನ್ನು ಸಮಗ್ರವಾಗಿ ಪರಿಶೀಲಿಸುವುದು.

  2. ಗಡಿಯಾಚೆಗಿನ ಚಟುವಟಿಕೆಗಳು (ಅಕ್ರಮ ವಲಸೆ ಸೇರಿದಂತೆ), ಆರ್ಥಿಕ ಅವಕಾಶಗಳು ಮತ್ತು ಇತರ ಸಾಮಾಜಿಕ-ಪರಿಸರ ಅಂಶಗಳಂತಹ ಜನಸಂಖ್ಯಾ ಬದಲಾವಣೆಗಳ ಸಂಭಾವ್ಯ ಕಾರಣಗಳ ಬಗ್ಗೆ ಅಧ್ಯಯನ ಮಾಡುವುದು.

  3. ಅಕ್ರಮ ವಲಸೆ, ಅಸಹಜ ನೆಲೆಸುವಿಕೆಯ ಮಾದರಿಗಳು ಮತ್ತು ವ್ಯವಸ್ಥಿತ ವಲಸೆಯನ್ನು ಒಳಗೊಂಡಿರುವ ಈ ಬದಲಾವಣೆಗಳ ಹಿಂದಿನ ಮೂಲಭೂತ ಅಂಶಗಳನ್ನು ಗುರುತಿಸುವುದು.

  4. ಧಾರ್ಮಿಕ ಅಥವಾ ಸಾಮಾಜಿಕ ಸಮುದಾಯಗಳ ಮಟ್ಟದಲ್ಲಿ, ವಿಶೇಷವಾಗಿ ಅವು ವಿಶಾಲವಾದ ಪ್ರವೃತ್ತಿಗಳಿಂದ ಭಿನ್ನವಾಗಿರುವ ಕಡೆಗಳಲ್ಲಿ, ಜನಸಂಖ್ಯೆಯ ರಚನಾತ್ಮಕ ಬದಲಾವಣೆಗಳನ್ನು ವಿಶ್ಲೇಷಿಸುವುದು.

  5. ದೇಶದಲ್ಲಿ ಈಗಾಗಲೇ ವಾಸಿಸುತ್ತಿರುವ ಅಕ್ರಮ ವಲಸಿಗರನ್ನು ಕಾನೂನುಬದ್ಧ, ನ್ಯಾಯಯುತ ಮತ್ತು ಕಾಲಮಿತಿಯೊಳಗೆ ಗುರುತಿಸಲು, ಬಂಧಿಸಲು ಮತ್ತು ಗಡೀಪಾರು ಮಾಡಲು ಸುಗಮ ಹಾಗೂ ಶಾಶ್ವತವಾದ ಕಾರ್ಯಾಚರಣಾ ವಿಧಾನವನ್ನು (standard operating procedure) ಶಿಫಾರಸು ಮಾಡುವುದು.

  6. ಇಂತಹ ಪ್ರವೃತ್ತಿಗಳ ನಿರಂತರ ಮೇಲ್ವಿಚಾರಣೆಗಾಗಿ ಗಡಿ ನಿರ್ವಹಣೆ, ಜನಸಂಖ್ಯಾ ಸ್ಥಿರೀಕರಣ ಮತ್ತು ಗುರುತಿಸುವಿಕೆ ವ್ಯವಸ್ಥೆಗಳನ್ನು ಬಲಪಡಿಸಲು ಸೂಕ್ತವಾದ ಸಾಂಸ್ಥಿಕ ಕಾರ್ಯವಿಧಾನವನ್ನು ಶಿಫಾರಸು ಮಾಡುವುದು.

  7. ಅಕ್ರಮ ವಲಸೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಜನಸಂಖ್ಯಾ ಅಸಮತೋಲನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯತೆಯನ್ನು ಹೆಚ್ಚಿಸಲು ಸಮಗ್ರ ನೀತಿ ಚೌಕಟ್ಟನ್ನು ಪ್ರಸ್ತಾಪಿಸುವುದು.

  8. ಅಕ್ರಮ ವಲಸೆ ಸೇರಿದಂತೆ ಜನಸಂಖ್ಯಾ ಬದಲಾವಣೆಗಳಿಂದ ಉಂಟಾಗುವ ಸವಾಲುಗಳನ್ನು ನಿಭಾಯಿಸಲು ಸಮಿತಿಯು ಸೂಕ್ತವೆಂದು ಭಾವಿಸುವ ಯಾವುದೇ ಇತರ ಕ್ರಮಗಳನ್ನು ಶಿಫಾರಸು ಮಾಡುವುದು.

****


(ಪ್ರಕಟಣೆ ಐ.ಡಿ.: 2265574) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , English , Khasi , Urdu , Marathi , हिन्दी , Gujarati , Tamil , Malayalam