ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಕುರಿತಾದ ಸುದ್ದಿಗೋಷ್ಠಿ
ದೇಶೀಯ ಎಲ್‌ಪಿಜಿ ಸಿಲಿಂಡರ್ ವಿತರಣೆಗಳು ಸಹಜವಾಗಿದ್ದು, ನಿನ್ನೆ 53.5 ಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಿತರಿಸಲಾಗಿದೆ
39,000 ಕ್ಕೂ ಹೆಚ್ಚು ಪಿಎನ್‌ಜಿ ಗ್ರಾಹಕರು MYPNGD.in ಮೂಲಕ ತಮ್ಮ ಎಲ್‌ಪಿಜಿ ಸಂಪರ್ಕಗಳನ್ನು ಹಿಂತಿರುಗಿಸಿದ್ದಾರೆ
ಸಾರ್ವಜನಿಕ ವಲಯದ ಒಎಂಸಿಗಳಿಂದ ಆಟೋ ಎಲ್‌ಪಿಜಿ ಮಾರಾಟವು ಫೆಬ್ರವರಿ-26 ರ ಸರಾಸರಿ ದಿನಕ್ಕೆ 177 ಮೆಟ್ರಿಕ್ ಟನ್‌ಗೆ ಹೋಲಿಸಿದರೆ ಏಪ್ರಿಲ್-26 ರಲ್ಲಿ (17.04.26 ರವರೆಗೆ) ದಿನಕ್ಕೆ 305 ಮೆಟ್ರಿಕ್ ಟನ್‌ಗೆ ತಲುಪಿದೆ
ಭಾರತದ ಧ್ವಜ ಹೊಂದಿರುವ ಕಚ್ಚಾ ತೈಲ ಟ್ಯಾಂಕರ್ 'ದೇಶ್ ಗರಿಮಾ' ನಿನ್ನೆ 31 ಭಾರತೀಯ ನಾವಿಕರೊಂದಿಗೆ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ; ಏಪ್ರಿಲ್ 22, 2026 ರಂದು ಮುಂಬೈ ತಲುಪುವ ನಿರೀಕ್ಷೆಯಿದೆ
ಇರಾನ್ ರಾಯಭಾರಿಯನ್ನು ಕರೆಸಲಾಗಿದೆ; ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳ ಮೇಲಿನ ಗುಂಡಿನ ದಾಳಿಯ ಘಟನೆಯ ಬಗ್ಗೆ ಭಾರತದ ತೀವ್ರ ಕಳವಳ
ವಾಯುಪ್ರದೇಶ ಮುಕ್ತವಾಗಿರುವ ದೇಶಗಳಿಂದ ವಿಮಾನಗಳ ಹಾರಾಟ ಮುಂದುವರಿದಿದೆ; ಫೆಬ್ರವರಿ 28 ರಿಂದ ಈವರೆಗೆ ಆ ಪ್ರದೇಶದಿಂದ ಸುಮಾರು 10.97 ಲಕ್ಷ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸಿದ್ದಾರೆ
ಪ್ರಕಟಣಾ ದಿನಾಂಕ:
19 APR 2026 5:35PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ನಡುವೆ, ಭಾರತ ಸರ್ಕಾರವು ಸಮನ್ವಯದ ಕ್ರಮಗಳ ಮೂಲಕ ಪ್ರಮುಖ ವಲಯಗಳಲ್ಲಿ ಸನ್ನದ್ಧತೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು ಮತ್ತು ಆ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಈ ಕೆಳಗಿನ ಮಾಹಿತಿ ವಿವರಿಸುತ್ತದೆ:
ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ
ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಾಹಿತಿಯನ್ನು ಹಂಚಿಕೊಂಡಿದೆ. ಸಚಿವಾಲಯದ ಪ್ರಕಾರ:
ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ
-
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ನಾಗರಿಕರು ಇವುಗಳ ಆತಂಕದ ಖರೀದಿಯನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
- ವದಂತಿಗಗಳಿಂದ ಎಚ್ಚರದಿಂದಿರಿ ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸಿ.
- ಎಲ್‌ಪಿಜಿ ಗ್ರಾಹಕರು ಡಿಜಿಟಲ್ ಬುಕ್ಕಿಂಗ್ ವೇದಿಕೆಗಳನ್ನು ಬಳಸಲು ಮತ್ತು ವಿತರಕರನ್ನು ಭೇಟಿ ಮಾಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
- ಪಿಎನ್‌ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ಟಾಪ್‌ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗಿದೆ.
- ಪ್ರಸ್ತುತ ಪರಿಸ್ಥಿತಿಯಲ್ಲಿ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.
ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು
- ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ದೇಶೀಯ ಎಲ್‌ಪಿಜಿ, ದೇಶೀಯ ಪಿಎನ್‌ಜಿ ಮತ್ತು ಸಿಎನ್‌ಜಿ (ಸಾರಿಗೆ) ಗೆ ಶೇಕಡಾ 100 ರಷ್ಟು ಪೂರೈಕೆಯನ್ನು ಸರ್ಕಾರವು ಖಚಿತಪಡಿಸಿದೆ.
- ವಾಣಿಜ್ಯ ಎಲ್‌ಪಿಜಿಗಾಗಿ ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ ಫಾರ್ಮಾ, ಉಕ್ಕು, ಆಟೋಮೊಬೈಲ್, ಬೀಜ, ಕೃಷಿ ಇತ್ಯಾದಿ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಇದಲ್ಲದೆ, ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್‌ಟಿಎಲ್ ಪೂರೈಕೆಯನ್ನು 2026ರ ಮಾರ್ಚ್ 2 ಮತ್ತು 3 ನೇ ತಾರೀಖಿನ ಸರಾಸರಿ ಪೂರೈಕೆಯ ಆಧಾರದ ಮೇಲೆ ದ್ವಿಗುಣಗೊಳಿಸಲಾಗಿದೆ.
- ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತಂದಿದೆ, ಇದರಲ್ಲಿ ರಿಫೈನರಿ ಉತ್ಪಾದನೆಯನ್ನು ಹೆಚ್ಚಿಸುವುದು, ಬುಕ್ಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿದೆ.
- ಎಲ್‌ಪಿಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳು ಲಭ್ಯವಾಗುವಂತೆ ಮಾಡಲಾಗಿದೆ.
- ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ವಿತರಿಸಲು ರಾಜ್ಯಗಳಿಗೆ ಹೆಚ್ಚುವರಿ ಕಲ್ಲಿದ್ದಲನ್ನು ಪೂರೈಸಲು ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್‌ಗೆ ನಿರ್ದೇಶನ ನೀಡಿದೆ.
- ದೇಶೀಯ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿಎನ್‌ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯದ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು
-
- ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹಣೆ ಮತ್ತು ಕಾಳಸಂತೆ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ಪಿಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
- ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗಿದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಪತ್ರಗಳು ಮತ್ತು ವೀಡಿಯೊ ಕಾನ್ಫರೆನ್ಸ್‌ಗಳ ಮೂಲಕ ಇದನ್ನೇ ಪುನರುಚ್ಚರಿಸಿದೆ.
- ಭಾರತ ಸರ್ಕಾರವು 27.03.2026 ಮತ್ತು 02.04.2026 ರ ಪತ್ರಗಳ ಮೂಲಕ ಸಕ್ರಿಯ ಸಾರ್ವಜನಿಕ ಸಂವಹನದ ಅಗತ್ಯವನ್ನು ಒತ್ತಿಹೇಳಿದೆ. ಈ ಹಿನ್ನೆಲೆಯಲ್ಲಿ 02.04.2026 ಮತ್ತು 06.04.2026 ರಂದು ಸಭೆಗಳನ್ನು ನಡೆಸಲಾಗಿದ್ದು, ಈ ಕೆಳಗಿನ ಅಂಶಗಳನ್ನು ಒತ್ತಿಹೇಳಲಾಗಿದೆ:
- ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸಲು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ನೀಡಲು.
- ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿ / ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಎದುರಿಸಲು.
- ಜಿಲ್ಲಾ ಆಡಳಿತದಿಂದ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಮತ್ತು ಒಎಂಸಿಗಳ ಸಮನ್ವಯದೊಂದಿಗೆ ದಾಳಿಗಳನ್ನು ಮುಂದುವರಿಸಲು.
- ತಮ್ಮ ರಾಜ್ಯಗಳಲ್ಲಿ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಆದೇಶಗಳನ್ನು ಹೊರಡಿಸಲು.
- ಹೆಚ್ಚುವರಿ ಸೀಮೆಎಣ್ಣೆಗಾಗಿ (SKO) ಹಂಚಿಕೆ ಆದೇಶಗಳನ್ನು ಹೊರಡಿಸಲು.
- ಪಿಎನ್‌ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸಲು.
- ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡಲು ಮತ್ತು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳ ಉದ್ದೇಶಿತ ವಿತರಣೆಯನ್ನು ಅಳವಡಿಸಿಕೊಳ್ಳಲು.
- ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕಾಳಸಂತೆ ಸಂಗ್ರಹಣೆ ತಡೆಯಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ.
- ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.
ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು
-
- ಎಲ್‌ಪಿಜಿ ಕಾಳಸಂತೆ ಸಂಗ್ರಹಣೆ ತಡೆಯಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. 18.04.2026 ರಂದು ದೇಶಾದ್ಯಂತ 2400 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ.
- ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಆಕಸ್ಮಿಕ ತಪಾಸಣೆಗಳನ್ನು ಬಲಪಡಿಸಿದ್ದು, ಇದುವರೆಗೆ 264 ಎಲ್‌ಪಿಜಿ ವಿತರಣಾ ಕೇಂದ್ರಗಳ ಮೇಲೆ ದಂಡ ವಿಧಿಸಿವೆ ಮತ್ತು ನಿನ್ನೆಯವರೆಗೆ 67 ವಿತರಣಾ ಕೇಂದ್ರಗಳನ್ನು ಅಮಾನತುಗೊಳಿಸಲಾಗಿದೆ.
ಎಲ್‌ಪಿಜಿ ಪೂರೈಕೆ
ದೇಶೀಯ ಎಲ್‌ಪಿಜಿ ಪೂರೈಕೆ ಸ್ಥಿತಿ:
-
- ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
- ಮನೆಬಳಕೆಯ ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ.
- ಎಲ್‌ಪಿಜಿ ವಿತರಣಾ ಕೇಂದ್ರಗಳಲ್ಲಿ ಯಾವುದೇ ಕೊರತೆ (Dry-outs) ವರದಿಯಾಗಿಲ್ಲ.
- ನಿನ್ನೆಯ ವರದಿಯಂತೆ ಆನ್‌ಲೈನ್ ಎಲ್‌ಪಿಜಿ ಬುಕ್ಕಿಂಗ್‌ಗಳು ಉದ್ಯಮದಾದ್ಯಂತ ಸುಮಾರು ಶೇ. 98 ಕ್ಕೆ ಏರಿವೆ.
- ಪಥ ಬದಲಾವಣೆಯನ್ನು ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಗಳು ಶೇ. 93 ಕ್ಕಿಂತ ಹೆಚ್ಚಿವೆ. ಡಿಎಸಿಯನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
- ಬುಕ್ಕಿಂಗ್‌ಗಳಿಗೆ ಅನುಗುಣವಾಗಿ ದೇಶೀಯ ಎಲ್‌ಪಿಜಿ ಸಿಲಿಂಡರ್ ವಿತರಣೆಗಳು ಸಹಜವಾಗಿವೆ.
- 18.04.26 ರಂದು 53.5 ಲಕ್ಷಕ್ಕೂ ಹೆಚ್ಚು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗಿದೆ.
ವಾಣಿಜ್ಯ ಎಲ್‌ಪಿಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:
-
- ಒಟ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಬಿಕ್ಕಟ್ಟಿನ ಮುಂಚಿನ ಮಟ್ಟದ ಶೇ. 70 ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ ಶೇ. 10 ರಷ್ಟು ಸುಧಾರಣೆ-ಆಧಾರಿತ ಹಂಚಿಕೆಯೂ ಸೇರಿದೆ.
- ಭಾರತ ಸರ್ಕಾರವು 06.04.2026 ರ ಪತ್ರದ ಮೂಲಕ ವಲಸೆ ಕಾರ್ಮಿಕರಿಗೆ ವಿತರಿಸಲು ಪ್ರತಿ ರಾಜ್ಯದಲ್ಲಿ ಲಭ್ಯವಿರುವ 5 ಕೆಜಿ ಎಫ್‌ಟಿಎಲ್ (FTL) ಸಿಲಿಂಡರ್‌ಗಳ ದೈನಂದಿನ ಪ್ರಮಾಣವನ್ನು ದ್ವಿಗುಣಗೊಳಿಸಿದೆ. ಇದು 2026 ರ ಮಾರ್ಚ್ 2 ಮತ್ತು 3 ರ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ಪೂರೈಸಲಾದ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ಮತ್ತು 21.03.2026 ರ ಪತ್ರದಲ್ಲಿ ತಿಳಿಸಲಾದ ಶೇ. 20 ರ ಮಿತಿಗಿಂತ ಹೆಚ್ಚಾಗಿರುತ್ತದೆ. ಈ 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳು ಆಯಾ ರಾಜ್ಯ ಸರ್ಕಾರಗಳ ವಿಲೇವಾರಿಯಲ್ಲಿದ್ದು, ತೈಲ ಮಾರುಕಟ್ಟೆ ಕಂಪನಿಗಳ (OMCs) ನೆರವಿನೊಂದಿಗೆ ರಾಜ್ಯದ ವಲಸೆ ಕಾರ್ಮಿಕರಿಗೆ ಮಾತ್ರ ಪೂರೈಸಲಾಗುತ್ತದೆ.
- ಏಪ್ರಿಲ್ 3, 2026 ರಿಂದ ಸಾರ್ವಜನಿಕ ವಲಯದ ಒಎಂಸಿಗಳು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳಿಗಾಗಿ 6700 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿದ್ದು, ಅದರಲ್ಲಿ 96,000 ಕ್ಕೂ ಹೆಚ್ಚು ಸಿಲಿಂಡರ್‌ಗಳು ಮಾರಾಟವಾಗಿವೆ. ನಿನ್ನೆ 230 ಕ್ಕೂ ಹೆಚ್ಚು ಶಿಬಿರಗಳ ಮೂಲಕ 5233 ಎಫ್‌ಟಿಎಲ್ ಸಿಲಿಂಡರ್‌ಗಳು ಮಾರಾಟವಾಗಿವೆ.
- ಇತ್ತೀಚೆಗೆ ಏಪ್ರಿಲ್ 18, 2026 ರಂದು ಥಾಣೆಯ ರಬಾಲೆ ಎಂಐಡಿಸಿಯಲ್ಲಿ ಬಿಪಿಸಿಎಲ್ ಆಯೋಜಿಸಿದ್ದ ಜಾಗೃತಿ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಿಬಿರದಲ್ಲಿ ಸುಮಾರು 300 ಕ್ಕೂ ಹೆಚ್ಚು ಸಿಲಿಂಡರ್‌ಗಳು ಮಾರಾಟವಾಗಿವೆ.
- 23 ಮಾರ್ಚ್ 2026 ರಿಂದ ಇದುವರೆಗೆ 18.33 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳು ಮಾರಾಟವಾಗಿವೆ.
- ಐಒಸಿಎಲ್ (IOCL), ಎಚ್‌ಪಿಸಿಎಲ್ (HPCL) ಮತ್ತು ಬಿಪಿಸಿಎಲ್ (BPCL) ಕಂಪನಿಗಳ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು ವಾಣಿಜ್ಯ ಎಲ್‌ಪಿಜಿ ವಿತರಣೆಯನ್ನು ಯೋಜಿಸಲು ರಾಜ್ಯ ಅಧಿಕಾರಿಗಳು ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
- 18.04.2026 ರಂದು 9192 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ಪಿಜಿ (ಇದು 4.83 ಲಕ್ಷಕ್ಕೂ ಹೆಚ್ಚು 19-ಕೆಜಿ ಸಿಲಿಂಡರ್‌ಗಳಿಗೆ ಸಮಾನವಾಗಿದೆ) ಮಾರಾಟವಾಗಿದೆ.
- ಮಾರ್ಚ್ 14, 2026 ರಿಂದ ಇದುವರೆಗೆ ಒಟ್ಟು 1,67,775 ಮೆಟ್ರಿಕ್ ಟನ್ (ಇದು 88.3 ಲಕ್ಷಕ್ಕೂ ಹೆಚ್ಚು 19-ಕೆಜಿ ಸಿಲಿಂಡರ್‌ಗಳಿಗೆ ಸಮಾನವಾಗಿದೆ) ವಾಣಿಜ್ಯ ಎಲ್‌ಪಿಜಿ ಮಾರಾಟವಾಗಿದೆ. ಇದು 9600 ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಆಟೋ ಎಲ್‌ಪಿಜಿಯನ್ನು ಒಳಗೊಂಡಿದೆ.
- ಏಪ್ರಿಲ್-26 ರ ಅವಧಿಯಲ್ಲಿ (17.04.26 ರವರೆಗೆ) ಒಎಂಸಿಗಳಿಂದ ಆಟೋ ಎಲ್‌ಪಿಜಿ ಮಾರಾಟವು ದಿನಕ್ಕೆ ಸುಮಾರು 305 ಮೆಟ್ರಿಕ್ ಟನ್ ಆಗಿದ್ದು, ಫೆಬ್ರವರಿ-26 ರ ಸರಾಸರಿ ದಿನಕ್ಕೆ 177 ಮೆಟ್ರಿಕ್ ಟನ್ ಆಗಿತ್ತು.
- ಆಟೋ ಎಲ್‌ಪಿಜಿ ಮಾರಾಟವು ಖಾಸಗಿಯಿಂದ ಸಾರ್ವಜನಿಕ ವಲಯದ ಒಎಂಸಿಗಳಿಗೆ ಸ್ಥಳಾಂತರಗೊಂಡಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಸಾರ್ವಜನಿಕ ವಲಯದ ಒಎಂಸಿಗಳಿಂದ ಆಟೋ ಎಲ್‌ಪಿಜಿ ಮಾರಾಟವು ಶೇ. 72 ರಷ್ಟು ಹೆಚ್ಚಾಗಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಪ್ರಮುಖ ಹೆಚ್ಚಳ ಕಂಡುಬಂದಿದೆ.
ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿಎನ್‌ಜಿ ವಿಸ್ತರಣಾ ಉಪಕ್ರಮಗಳು
-
- ದೇಶೀಯ ಪಿಎನ್‌ಜಿ (D-PNG) ಮತ್ತು ಸಿಎನ್‌ಜಿ (ಸಾರಿಗೆ) ಗೆ ಶೇ. 100 ರಷ್ಟು ಪೂರೈಕೆಯೊಂದಿಗೆ ಗ್ರಾಹಕರಿಗೆ ಆದ್ಯತೆ ನೀಡಲಾಗಿದೆ.
- ರಸಗೊಬ್ಬರ ಘಟಕಗಳಿಗೆ ಒಟ್ಟಾರೆ ಅನಿಲ ಹಂಚಿಕೆಯನ್ನು ಅವುಗಳ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇ. 95 ಕ್ಕೆ ಹೆಚ್ಚಿಸಲಾಗಿದೆ.
- ಹೆಚ್ಚುವರಿಯಾಗಿ, ಸಿಜಿಡಿ (CGD) ನೆಟ್‌ವರ್ಕ್‌ಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ಶೇ. 80 ರವರೆಗೆ ಹೆಚ್ಚಿಸಲಾಗಿದೆ.
- ವಾಣಿಜ್ಯ ಎಲ್‌ಪಿಜಿ ಲಭ್ಯತೆಯ ಬಗ್ಗೆ ಇರುವ ಕಾಳಜಿಗಳನ್ನು ಪರಿಹರಿಸಲು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಂಟೀನ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ತಮ್ಮೆಲ್ಲಾ ಭೌಗೋಳಿಕ ಪ್ರದೇಶಗಳಲ್ಲಿ (GAs) ಪಿಎನ್‌ಜಿ ಸಂಪರ್ಕ ನೀಡಲು ಆದ್ಯತೆ ನೀಡುವಂತೆ ಸಿಜಿಡಿ ಘಟಕಗಳಿಗೆ ಸಲಹೆ ನೀಡಲಾಗಿದೆ.
- ಐಜಿಎಲ್, ಎಂಜಿಎಲ್, ಗೇಲ್ ಗ್ಯಾಸ್ ಮತ್ತು ಬಿಪಿಸಿಎಲ್ ಸೇರಿದಂತೆ ಸಿಜಿಡಿ ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಪಿಎನ್‌ಜಿ ಸಂಪರ್ಕಗಳಿಗಾಗಿ ಪ್ರೋತ್ಸಾಹಕಗಳನ್ನು ನೀಡುತ್ತಿವೆ.
- ಸಿಜಿಡಿ ನೆಟ್‌ವರ್ಕ್‌ಗಳ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಲಾಗಿದೆ.
- ಎಲ್‌ಪಿಜಿಯಿಂದ ಪಿಎನ್‌ಜಿಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡಬಹುದಾದರೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಶೇ. 10 ರಷ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆ ಮಾಡುವುದಾಗಿ ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ತಿಳಿಸಿದೆ.
- 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಪಿಎನ್‌ಜಿ ವಿಸ್ತರಣಾ ಸುಧಾರಣೆಗಳಿಗೆ ಸಂಬಂಧಿಸಿದ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಪಡೆಯುತ್ತಿವೆ.
- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.26 ರ ಪತ್ರದ ಮೂಲಕ ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇಲೆ ಪ್ರಕ್ರಿಯೆಗೊಳಿಸಲು 3 ತಿಂಗಳ ಅವಧಿಗೆ 'ಕಡಿಮೆ ಕಾಲಮಿತಿಯೊಂದಿಗೆ ವೇಗವರ್ಧಿತ ಅನುಮೋದನೆ ಚೌಕಟ್ಟು' ಅಳವಡಿಸಿಕೊಂಡಿದೆ.
- ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ (ಪೈಪ್‌ಲೈನ್‌ಗಳ ಹಾಕುವಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ಗಳನ್ನು ಹಾಕಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ, ಇದು ಅನುಮೋದನೆಗಳು ಮತ್ತು ಭೂಮಿಯ ಲಭ್ಯತೆಯಲ್ಲಿನ ವಿಳಂಬಗಳನ್ನು ಪರಿಹರಿಸುತ್ತದೆ ಮತ್ತು ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ವೇಗದ ಅಭಿವೃದ್ಧಿಯನ್ನು ಶಕ್ತಗೊಳಿಸುತ್ತದೆ. ಇದು ಪಿಎನ್‌ಜಿ ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಇಂಧನ ಭದ್ರತೆಯನ್ನು ಬಲಪಡಿಸುವ ಮೂಲಕ ಸ್ವಚ್ಛ ಇಂಧನಗಳತ್ತ ಪರಿವರ್ತನೆಯನ್ನು ಬೆಂಬಲಿಸುತ್ತದೆ.
- ಪಿಎನ್‌ಜಿಆರ್‌ಬಿ (PNGRB) ದೇಶೀಯ ಪಿಎನ್‌ಜಿ ಸಂಪರ್ಕಗಳನ್ನು ತ್ವರಿತಗೊಳಿಸಲು ಸಿಜಿಡಿ ಘಟಕಗಳಿಗೆ ನಿರ್ದೇಶಿಸಿದೆ. ಅಲ್ಲದೆ, ಪಿಎನ್‌ಜಿ ವಿಸ್ತರಣೆಯ ವೇಗವನ್ನು ಉಳಿಸಿಕೊಳ್ಳಲು 'ರಾಷ್ಟ್ರೀಯ ಪಿಎನ್‌ಜಿ ಅಭಿಯಾನ 2.0' ಅನ್ನು 30.06.2026 ರವರೆಗೆ ವಿಸ್ತರಿಸಲಾಗಿದೆ.
- ಸ್ವಚ್ಛವಾದ ಮತ್ತು ಸ್ವಾವಲಂಬಿ ಇಂಧನ ಭವಿಷ್ಯವನ್ನು ಉತ್ತೇಜಿಸಲು, ಭಾರತ ಸರ್ಕಾರವು ಮಾದರಿ ಕರಡು ರಾಜ್ಯ ಸಿಬಿಜಿ (CBG) ನೀತಿಯನ್ನು ಅಭಿವೃದ್ಧಿಪಡಿಸಿದೆ. ಇದು ರಾಜ್ಯಗಳು ಸಿಬಿಜಿ ಅಭಿವೃದ್ಧಿಗಾಗಿ ಹೂಡಿಕೆದಾರ ಸ್ನೇಹಿ ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡುವ ಸಮಗ್ರ ಮಾರ್ಗದರ್ಶಿ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಆರಿಸಿಕೊಳ್ಳುವ ರಾಜ್ಯಗಳಿಗೆ ಮುಂದಿನ ಹಂತದ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
- ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (CPCB), ಸಿಜಿಡಿ ನೆಟ್‌ವರ್ಕ್/ಮೂಲಸೌಕರ್ಯಗಳಿಗೆ 15 ದಿನಗಳೊಳಗೆ ಅನುಮತಿ ನೀಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ MoEFCC 07.04.2026 ರ ಆದೇಶದ ಮೂಲಕ ನಿರ್ದೇಶಿಸಿದೆ.
- CPCB ನಿರ್ದೇಶನಗಳಂತೆ, ಕೆಲವು ತೈಲ ಮತ್ತು ಅನಿಲ ಸಾರಿಗೆ ಪೈಪ್‌ಲೈನ್‌ಗಳನ್ನು "ಹಸಿರು" (Green) ವರ್ಗದ ಅಡಿಯಲ್ಲಿ ವರ್ಗೀಕರಿಸಲಾಗಿದೆ.
- MoEFCC ಈಗಾಗಲೇ "ವಾಹನ ಸೇವೆ, ದುರಸ್ತಿ ಮತ್ತು ಪೇಂಟಿಂಗ್ ಇಲ್ಲದ ಇಂಧನ ವಿತರಣಾ ಘಟಕಗಳನ್ನು" "ಬಿಳಿ" (White) ವರ್ಗದ ಅಡಿಯಲ್ಲಿ ವರ್ಗೀಕರಿಸಿದೆ ಮತ್ತು ಇವುಗಳಿಗೆ ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ಅನುಮತಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.
- ಮಾರ್ಚ್ 2026 ರಿಂದ ಇದುವರೆಗೆ 4.85 ಲಕ್ಷಕ್ಕೂ ಹೆಚ್ಚು ಪಿಎನ್‌ಜಿ ಸಂಪರ್ಕಗಳಿಗೆ ಗ್ಯಾಸ್ ಪೂರೈಸಲಾಗಿದೆ. ಅಲ್ಲದೆ, 5.43 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.
- 18.04.2026 ರವರೆಗೆ 39,000 ಕ್ಕೂ ಹೆಚ್ಚು ಪಿಎನ್‌ಜಿ ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ ಎಲ್‌ಪಿಜಿ ಸಂಪರ್ಕಗಳನ್ನು ಹಿಂತಿರುಗಿಸಿದ್ದಾರೆ.
ಕಚ್ಚಾ ತೈಲ ಸ್ಥಿತಿ ಮತ್ತು ರಿಫೈನರಿ ಕಾರ್ಯಾಚರಣೆಗಳು
-
- ಎಲ್ಲಾ ರಿಫೈನರಿಗಳು ಸಮರ್ಪಕ ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ, ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್‌ನ ಸಾಕಷ್ಟು ದಾಸ್ತಾನುಗಳನ್ನು ಕಾಯ್ದುಕೊಳ್ಳಲಾಗುತ್ತಿದೆ.
- ದೇಶೀಯ ಬಳಕೆಯನ್ನು ಬೆಂಬಲಿಸಲು ರಿಫೈನರಿಗಳಿಂದ ಉತ್ಪಾದನೆಯಾಗುವ ಎಲ್‌ಪಿಜಿ ಪ್ರಮಾಣವನ್ನು ಹೆಚ್ಚಿಸಲಾಗಿದೆ.
- ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್‌ಸ್ಟಾಕ್ ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ್-ಸಚಿವಾಲಯ ಜಂಟಿ ಕಾರ್ಯಕಾರಿ ಗುಂಪನ್ನು (JWG) ಸ್ಥಾಪಿಸಲಾಗಿದೆ. ಜೊತೆಗೆ, ಸಿಎಚ್‌ಟಿ (CHT) ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ಸಿ3 ಮತ್ತು ಸಿ4 ಸ್ಟ್ರೀಮ್‌ಗಳ ಕನಿಷ್ಠ ಪ್ರಮಾಣವನ್ನು ಲಭ್ಯವಾಗುವಂತೆ ಮಾಡಲು ರಿಫೈನಿಂಗ್ ಕಂಪನಿಗಳಿಗೆ ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ ಅನುಮತಿ ನೀಡಿದೆ.
- ಔಷಧೀಯ ಇಲಾಖೆ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ (DCPC) ಹಾಗೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯಿಂದ (DPIIT) ಬಂದ ವಿನಂತಿಗಳ ಆಧಾರದ ಮೇಲೆ, ಫಾರ್ಮಾ ಮತ್ತು ರಾಸಾಯನಿಕ ವಲಯದ ಕಂಪನಿಗಳಿಗಾಗಿ ಎಲ್‌ಪಿಜಿ ಪೂಲ್‌ನಿಂದ ಪ್ರತಿದಿನ 1000 ಮೆಟ್ರಿಕ್ ಟನ್ (MT/day) ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ.9 ಏಪ್ರಿಲ್ 2026 ರಿಂದ ಸುಮಾರು 3700 ಮೆಟ್ರಿಕ್ ಟನ್ ಪ್ರೊಪಿಲೀನ್ ಮಾರಾಟವಾಗಿದೆ.
ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು
- ದೇಶಾದ್ಯಂತ ಇರುವ ಚಿಲ್ಲರೆ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
- ಮಧ್ಯಪ್ರಾಚ್ಯ ಬಿಕ್ಕಟ್ಟು ಕಚ್ಚಾ ತೈಲ ಬೆಲೆಯಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಗಿದೆ; ಆದಾಗ್ಯೂ, ಗ್ರಾಹಕರನ್ನು ರಕ್ಷಿಸಲು ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ. ಕಡಿತಗೊಳಿಸಿದೆ.
- ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು 11.04.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಡೀಸೆಲ್ ಮೇಲಿನ ರಫ್ತು ಲೆವಿಯನ್ನು ಪ್ರತಿ ಲೀಟರ್‌ಗೆ 55.50 ರೂ. ಗೆ ಮತ್ತು ಎಟಿಎಫ್ (ATF) ಮೇಲಿನ ಲೆವಿಯನ್ನು ಪ್ರತಿ ಲೀಟರ್‌ಗೆ 42 ರೂ. ಗೆ ಹೆಚ್ಚಿಸಿದೆ.
- ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳು ಬದಲಾಗದೆ ಸ್ಥಿರವಾಗಿವೆ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಯಾವುದೇ ಬೆಲೆ ಏರಿಕೆಯಾಗಿಲ್ಲ.
ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು
- ನಿಯಮಿತ ಹಂಚಿಕೆಯ ಜೊತೆಗೆ 48,000 ಕೆಎಲ್ (KL) ಸೀಮೆಎಣ್ಣೆಯ ಹೆಚ್ಚುವರಿ ಹಂಚಿಕೆಯನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ.
- 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎಸ್‌ಕೆಒ ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ಯಾವುದೇ ಅಗತ್ಯವಿಲ್ಲ ಎಂದು ತಿಳಿಸಿವೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್‌ಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯ ಸಾಧಿಸುವುದನ್ನು ಮುಂದುವರಿಸಿದೆ. ಸಚಿವಾಲಯವು ಹೀಗೆ ತಿಳಿಸಿದೆ:
- ಭಾರತದ ಧ್ವಜ ಹೊಂದಿರುವ ಕಚ್ಚಾ ತೈಲ ಟ್ಯಾಂಕರ್ 'ದೇಶ್ ಗರಿಮಾ' 18 ಏಪ್ರಿಲ್ 2026 ರಂದು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿದೆ. 31 ಭಾರತೀಯ ನಾವಿಕರನ್ನು ಹೊಂದಿರುವ ಈ ಹಡಗು 22 ಏಪ್ರಿಲ್ 2026 ರಂದು ಮುಂಬೈ ತಲುಪುವ ನಿರೀಕ್ಷೆಯಿದೆ.
- ಕಳೆದ 24 ಗಂಟೆಗಳಲ್ಲಿ, ಭಾರತದ ಎರಡು ಹಡಗುಗಳಾದ 'ವಿಎಲ್‌ಸಿಸಿ ಸಮನಾರ್ ಹೆರಾಡ್' ಮತ್ತು 'ಬಲ್ಕ್ ಕ್ಯಾರಿಯರ್ ಜಗ್ ಅರ್ನವ್' ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವಾಗ ಗುಂಡಿನ ದಾಳಿಯ ಘಟನೆಯನ್ನು ವರದಿ ಮಾಡಿದ್ದು, ತರುವಾಯ ಪರ್ಷಿಯನ್ ಗಲ್ಫ್‌ಗೆ ಮರಳಿವೆ. ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
- ಹಾರ್ಮುಜ್ ಜಲಸಂಧಿಯಲ್ಲಿ ನಿನ್ನೆ ನಡೆದ ಭಾರತದ ಎರಡು ಹಡಗುಗಳ ಮೇಲಿನ ಗುಂಡಿನ ದಾಳಿಯ ಘಟನೆಗೆ ಸಂಬಂಧಿಸಿದಂತೆ ಭಾರತವು ತನ್ನ ತೀವ್ರ ಕಳವಳವನ್ನು ನವದೆಹಲಿಯಲ್ಲಿರುವ ಇರಾನ್ ರಾಯಭಾರಿಗೆ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಯಭಾರಿಯನ್ನು ಕರೆಸಿ ವಿದೇಶಾಂಗ ಕಾರ್ಯದರ್ಶಿಯವರೊಂದಿಗೆ ಸಭೆ ನಡೆಸಿತು. ಈ ವೇಳೆ ವ್ಯಾಪಾರಿ ಹಡಗುಗಳು ಮತ್ತು ನಾವಿಕರ ಸುರಕ್ಷತೆಗೆ ಭಾರತವು ನೀಡುವ ಪ್ರಾಮುಖ್ಯತೆಯನ್ನು ವಿದೇಶಾಂಗ ಕಾರ್ಯದರ್ಶಿಗಳು ಒತ್ತಿಹೇಳಿದರು.
- ವ್ಯಾಪಾರಿ ಹಡಗುಗಳ ಮೇಲೆ ನಡೆದ ಈ ಗಂಭೀರ ಗುಂಡಿನ ದಾಳಿಯ ಘಟನೆಯ ಬಗ್ಗೆ ತಮ್ಮ ಕಳವಳವನ್ನು ಪುನರುಚ್ಚರಿಸಿದ ವಿದೇಶಾಂಗ ಕಾರ್ಯದರ್ಶಿಗಳು, ಭಾರತದ ನಿಲುವನ್ನು ಇರಾನ್ ಅಧಿಕಾರಿಗಳಿಗೆ ತಿಳಿಸುವಂತೆ ಮತ್ತು ಭಾರತಕ್ಕೆ ಬರುವ ಹಡಗುಗಳ ಸಂಚಾರವನ್ನು ಶೀಘ್ರವಾಗಿ ಸುಗಮಗೊಳಿಸುವಂತೆ ರಾಯಭಾರಿಯನ್ನು ಒತ್ತಾಯಿಸಿದರು.
- ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸಂಬಂಧಿತ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
- ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿ ಅಪ್‌ಡೇಟ್: ನಿಯಂತ್ರಣ ಕೊಠಡಿಯು ಸಕ್ರಿಯಗೊಂಡ ನಂತರ ಇದುವರೆಗೆ 6,893 ಕರೆಗಳು ಮತ್ತು 14,470 ಕ್ಕೂ ಹೆಚ್ಚು ಇಮೇಲ್‌ಗಳನ್ನು ನಿರ್ವಹಿಸಿದೆ. ಕಳೆದ 24 ಗಂಟೆಗಳಲ್ಲಿ 66 ಕರೆಗಳು ಮತ್ತು 204 ಇಮೇಲ್‌ಗಳನ್ನು ಸ್ವೀಕರಿಸಲಾಗಿದೆ.
- ಶಿಪ್ಪಿಂಗ್ ಮಹಾನಿರ್ದೇಶನಾಲಯದ (DG Shipping) ಮೂಲಕ ಸಚಿವಾಲಯವು ಇದುವರೆಗೆ ಗಲ್ಫ್ ಪ್ರದೇಶದ ವಿವಿಧ ಸ್ಥಳಗಳಿಂದ 2,538 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಬಂದ 51 ನಾವಿಕರು ಸೇರಿದ್ದಾರೆ.
- ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ.
ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ, ಈ ಪ್ರದೇಶದಲ್ಲಿರುವ ಭಾರತೀಯ ಸಮುದಾಯದ ರಕ್ಷಣೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವತ್ತ ವಿಶೇಷ ಪ್ರಯತ್ನಗಳನ್ನು ಕೇಂದ್ರೀಕರಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದಂತೆ:
- ಮಾಹಿತಿ ಹಂಚಿಕೆ ಮತ್ತು ಪ್ರಯತ್ನಗಳ ಉತ್ತಮ ಸಮನ್ವಯಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಂಪರ್ಕದಲ್ಲಿದೆ.
- ಭಾರತೀಯ ಮಿಷನ್‌ಗಳು ಮತ್ತು ಪೋಸ್ಟ್‌ಗಳು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ನಿರ್ವಹಿಸುತ್ತಿವೆ ಮತ್ತು ಭಾರತೀಯ ಪ್ರಜೆಗಳಿಗೆ ಸಕ್ರಿಯವಾಗಿ ಸಹಾಯ ಮಾಡುತ್ತಿವೆ. ಅವರು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.
- ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಮತ್ತು ಪ್ರಯಾಣದ ಪರಿಸ್ಥಿತಿಗಳು, ಕಾನ್ಸುಲರ್ ಸೇವೆಗಳು ಮತ್ತು ನಮ್ಮ ಸಮುದಾಯವನ್ನು ಬೆಂಬಲಿಸಲು ಕೈಗೊಳ್ಳಲಾಗುತ್ತಿರುವ ವಿವಿಧ ಕಲ್ಯಾಣ ಕ್ರಮಗಳ ಮಾಹಿತಿಯನ್ನು ಒಳಗೊಂಡ ನವೀಕೃತ ಸಲಹೆಗಳನ್ನು ನಿಯಮಿತವಾಗಿ ನೀಡಲಾಗುತ್ತಿದೆ.
- ಭಾರತೀಯ ಮಿಷನ್‌ಗಳು ಈ ಪ್ರದೇಶದಲ್ಲಿರುವ ವಿವಿಧ ಸಂಘಗಳು, ಸಂಸ್ಥೆಗಳು, ವೃತ್ತಿಪರ ಗುಂಪುಗಳು, ಭಾರತೀಯ ಕಂಪನಿಗಳು ಮತ್ತು ಇತರ ಪಾಲುದಾರರನ್ನೊಳಗೊಂಡ ಭಾರತೀಯ ಸಮುದಾಯದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
- ಈ ಪ್ರದೇಶದ ಹಡಗುಗಳಲ್ಲಿರುವ ಭಾರತೀಯ ಸಿಬ್ಬಂದಿಗೆ ನಮ್ಮ ಮಿಷನ್‌ಗಳು ಎಲ್ಲಾ ರೀತಿಯ ನೆರವು ನೀಡುತ್ತಿವೆ. ಇದರಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸುವುದು, ಕಾನ್ಸುಲರ್ ನೆರವು ಒದಗಿಸುವುದು ಮತ್ತು ಭಾರತಕ್ಕೆ ಮರಳುವ ವಿನಂತಿಗಳಿಗೆ ಸಹಾಯ ಮಾಡುವುದು ಸೇರಿದೆ.
- ವಾಯುಪ್ರದೇಶ ಮುಕ್ತವಾಗಿರುವ ದೇಶಗಳಿಂದ ವಿಮಾನಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ. ಫೆಬ್ರವರಿ 28 ರಿಂದ ಈವರೆಗೆ ಸುಮಾರು 10,97,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ.
- ಯುಎಇನಲ್ಲಿ (UAE), ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ಮತ್ತು ಸುರಕ್ಷತಾ ಪರಿಗಣನೆಗಳ ಆಧಾರದ ಮೇಲೆ ಯುಎಇ ಮತ್ತು ಭಾರತದ ನಡುವೆ ಸೀಮಿತ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ಓಡಿಸುತ್ತಿವೆ; ಇಂದು ಯುಎಇ ಮತ್ತು ಭಾರತದ ನಡುವೆ ಸುಮಾರು 110 ವಿಮಾನಗಳನ್ನು ನಿರೀಕ್ಷಿಸಲಾಗಿದೆ.
- ಸೌದಿ ಅರೇಬಿಯಾ ಮತ್ತು ಓಮನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
- ಕತಾರ್ ವಾಯುಪ್ರದೇಶವು ಭಾಗಶಃ ಮುಕ್ತವಾಗಿರುವುದರಿಂದ, ಕತಾರ್ ಏರ್‌ವೇಸ್ ಇಂದು ಭಾರತಕ್ಕೆ ಸುಮಾರು 10 ರಿಂದ 11 ವಿಮಾನಗಳನ್ನು ಓಡಿಸುವ ನಿರೀಕ್ಷೆಯಿದೆ.
- ಕುವೈತ್ ವಾಯುಪ್ರದೇಶವು ಮುಚ್ಚಲ್ಪಟ್ಟಿದೆ. ಕುವೈತ್‌ನ ಜಜೀರಾ ಏರ್‌ವೇಸ್ ಮತ್ತು ಕುವೈತ್ ಏರ್‌ವೇಸ್ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ಓಡಿಸುತ್ತಿವೆ.
- ಬಹ್ರೇನ್ ವಾಯುಪ್ರದೇಶವು ಮುಕ್ತವಾಗಿದೆ. ಬಹ್ರೇನ್‌ನ ಗಲ್ಫ್ ಏರ್ ಸಂಸ್ಥೆಯು ಬಹ್ರೇನ್‌ನಿಂದ ಭಾರತಕ್ಕೆ ಸೀಮಿತ ವಿಮಾನ ಕಾರ್ಯಾಚರಣೆಗಳನ್ನು ಯೋಜಿಸುತ್ತಿದೆ ಮತ್ತು ಪ್ರಸ್ತುತ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತದ ವಿವಿಧ ಸ್ಥಳಗಳಿಗೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ಓಡಿಸುತ್ತಿದೆ.
- ಇರಾಕ್ ವಾಯುಪ್ರದೇಶವು ಮುಕ್ತವಾಗಿದ್ದು, ಈ ಪ್ರದೇಶದ ವಿವಿಧ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆಗಳಿವೆ; ಇವುಗಳನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು.
- ಇರಾನ್ ವಾಯುಪ್ರದೇಶವು ಸರಕು ಮತ್ತು ಚಾರ್ಟರ್ಡ್ ವಿಮಾನಗಳಿಗೆ ಭಾಗಶಃ ಮುಕ್ತವಾಗಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇದುವರೆಗೆ 1,046 ಭಾರತೀಯ ವಿದ್ಯಾರ್ಥಿಗಳು ಮತ್ತು 657 ಭಾರತೀಯ ಮೀನುಗಾರರು ಸೇರಿದಂತೆ ಒಟ್ಟು 2,378 ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದೆ.
- ಇಸ್ರೇಲ್ ವಾಯುಪ್ರದೇಶವು ಮುಕ್ತವಾಗಿದೆ ಮತ್ತು ಈ ಪ್ರದೇಶದ ವಿವಿಧ ಸ್ಥಳಗಳಿಗೆ ಸೀಮಿತ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿವೆ; ಇವುಗಳನ್ನು ಭಾರತಕ್ಕೆ ಮುಂದಿನ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು. ಭಾರತೀಯ ಪ್ರಜೆಗಳ ಪ್ರಯಾಣವನ್ನು ಜೋರ್ಡಾನ್ ಮತ್ತು ಈಜಿಪ್ಟ್ ಮೂಲಕ ಭಾರತಕ್ಕೆ ಸುಗಮಗೊಳಿಸುವುದನ್ನು ಮುಂದುವರಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2253588)
ವಿಸಿಟರ್ ಕೌಂಟರ್ : 12