ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯದ  ಸುದ್ದಿಗೋಷ್ಠಿ


ಭಾರತದ ವಿದ್ಯುತ್ ವ್ಯವಸ್ಥೆಯು ಸದೃಢವಾಗಿದೆ, ವೈವಿಧ್ಯಮಯವಾಗಿದೆ ಮತ್ತು ಅಲ್ಪಾವಧಿ ಹಾಗೂ ದೀರ್ಘಾವಧಿಯ ಬೇಡಿಕೆಯನ್ನು ಪೂರೈಸಲು ಸಮರ್ಥವಾಗಿದೆ

ಏಪ್ರಿಲ್-ಜೂನ್ 2026ರಲ್ಲಿ ಥರ್ಮಲ್, ಹೈಡ್ರೋ, ನವೀಕರಿಸಬಹುದಾದ ಇಂಧನ, BESS ಮತ್ತು PSP ಯೋಜನೆಗಳ ಕಾರ್ಯಾರಂಭಕ್ಕೆ ವೇಗ

ಉದ್ಯಮದಾದ್ಯಂತ ಆನ್‌ಲೈನ್ ಎಲ್‌ಪಿಜಿ ಬುಕ್ಕಿಂಗ್‌ಗಳು ಸುಮಾರು ಶೇಕಡಾ 98 ಕ್ಕೆ ಏರಿಕೆ

ಜಾರಿ ಕ್ರಮಗಳು ಮುಂದುವರಿಕೆ; ಸುಮಾರು 1.2 ಲಕ್ಷ ದಾಳಿಗಳು, 57,000 ಕ್ಕೂ ಹೆಚ್ಚು ಸಿಲಿಂಡರ್‌ಗಳ ವಶ

4.05 ಲಕ್ಷ ಪಿಎನ್‌ಜಿ ಸಂಪರ್ಕಗಳಿಗೆ ಗ್ಯಾಸ್ ಪೂರೈಕೆ ಮತ್ತು ಸುಮಾರು 4.41 ಲಕ್ಷ ಹೆಚ್ಚುವರಿ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಣಿ

ಬಂದರುಗಳಲ್ಲಿ ಕಂಟೈನರ್‌ಗಳ ಯಾವುದೇ ದಟ್ಟಣೆ ಅಥವಾ ಜನದಟ್ಟಣೆ ಇಲ್ಲ

ಭಾರತ ಮತ್ತು ಮಾರಿಷಸ್ ನಡುವೆ ತೈಲ ಮತ್ತು ಅನಿಲ ಪೂರೈಕೆ ಒಪ್ಪಂದ ಅಂತಿಮ ಹಂತದಲ್ಲಿ

ಲೆಬನಾನ್‌ನಲ್ಲಿ ನಾಗರಿಕರ ಸಾವು-ನೋವುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ; ಸುರಕ್ಷತೆ ಮತ್ತು ಭದ್ರತೆಗಾಗಿ ಭಾರತೀಯ ಸಮುದಾಯದೊಂದಿಗೆ ನಿರಂತರ ಸಂಪರ್ಕದಲ್ಲಿರುವ  ರಾಯಭಾರ ಕಚೇರಿ

ಪ್ರಕಟಣಾ ದಿನಾಂಕ: 10 APR 2026 6:25PM by PIB Bengaluru

ಪಶ್ಚಿಮ ಏಷ್ಯಾದಲ್ಲಿ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ, ಭಾರತ ಸರ್ಕಾರವು ಇಂದು ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿತ್ತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು, ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ಮತ್ತು ಪ್ರಮುಖ ವಲಯಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಅಪ್‌ಡೇಟ್‌ಗಳನ್ನು ನೀಡಿದರು. ವಿದ್ಯುತ್ ಸಚಿವಾಲಯವು ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಂಡಿದೆ.

ವಿದ್ಯುತ್ ವಲಯದ ಅಪ್ಡೇಟ್ಗಳು (Power Sector Updates)

ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ, ಭಾರತದ ವಿದ್ಯುತ್ ವ್ಯವಸ್ಥೆಯು ಸದೃಢವಾಗಿದೆ, ಉತ್ತಮವಾಗಿ ವೈವಿಧ್ಯಮಯವಾಗಿದೆ ಮತ್ತು ಅಲ್ಪಾವಧಿ ಹಾಗೂ ದೀರ್ಘಾವಧಿಯ ಬೇಡಿಕೆಯ ಅಗತ್ಯತೆಗಳನ್ನು ಪೂರೈಸಲು ಸಮರ್ಪಕವಾಗಿ ಸಜ್ಜಾಗಿದೆ ಎಂದು ವಿದ್ಯುತ್ ಸಚಿವಾಲಯವು ಒತ್ತಿ ಹೇಳಿದೆ.

  • ಭಾರತದ ಪ್ರಸ್ತುತ ಸ್ಥಾಪಿತ ಸಾಮರ್ಥ್ಯವು 531 GW ಗಿಂತ ಹೆಚ್ಚಿದ್ದು, ಇದು ಕಲ್ಲಿದ್ದಲು, ನವೀಕರಿಸಬಹುದಾದ ಇಂಧನಗಳು, ಹೈಡ್ರೋ ಮತ್ತು ಪರಮಾಣು ಮೂಲಗಳಿಂದ ಕೂಡಿದ ವೈವಿಧ್ಯಮಯ ಪೋರ್ಟ್‌ಫೋಲಿಯೊವನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ ಪಳೆಯುಳಿಕೆಯೇತರ ಮೂಲಗಳ ಪಾಲು ಶೇಕಡಾ 50 ಕ್ಕಿಂತ ಹೆಚ್ಚಿದೆ.
  • ಈ ಸಾಮರ್ಥ್ಯವು ಸುಮಾರು 5 ಲಕ್ಷ ಸರ್ಕ್ಯೂಟ್ ಕಿಲೋಮೀಟರ್ (ckm) ಪ್ರಬಲ ಪ್ರಸರಣ ಜಾಲ ಮತ್ತು 120 GW ಗಿಂತ ಹೆಚ್ಚಿನ ಅಂತರ-ಪ್ರಾದೇಶಿಕ ವರ್ಗಾವಣೆ ಸಾಮರ್ಥ್ಯದ ಬೆಂಬಲವನ್ನು ಹೊಂದಿದೆ, ಇದು ಪ್ರಾಂತ್ಯಗಳಾದ್ಯಂತ ವಿಶ್ವಾಸಾರ್ಹ ವಿದ್ಯುತ್ ಹರಿವನ್ನು ಖಚಿತಪಡಿಸುತ್ತದೆ.

ಅಲ್ಪಾವಧಿಯ ಸನ್ನದ್ಧತೆ: ಪೂರೈಕೆಯ ಸಮರ್ಪಕತೆಯನ್ನು ಖಚಿತಪಡಿಸುವುದು

  • ಸಮೀಪದ ಅವಧಿಯ ಪೂರೈಕೆ ಸವಾಲುಗಳನ್ನು ಎದುರಿಸಲು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ (thermal power plants) ಸಮರ್ಪಕ ಕಲ್ಲಿದ್ದಲು ದಾಸ್ತಾನು ಖಚಿತಪಡಿಸಿಕೊಳ್ಳಲಾಗುತ್ತಿದೆ.
  • ಲಭ್ಯವಿರುವ ಸಾಮರ್ಥ್ಯವನ್ನು ಗರಿಷ್ಠಗೊಳಿಸಲು ಆಮದು ಮಾಡಿದ ಕಲ್ಲಿದ್ದಲು ಆಧಾರಿತ (ICB) ಸ್ಥಾವರಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೊಳಿಸಲಾಗುತ್ತಿದೆ.
  • ಬೇಸಿಗೆಯ ಅವಧಿಯಲ್ಲಿ ~10,000 MW ಹೆಚ್ಚುವರಿ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಥರ್ಮಲ್ ಸ್ಥಾವರಗಳ ನಿರ್ವಹಣಾ ಕಾರ್ಯವನ್ನು (maintenance) ಮುಂದೂಡಲಾಗಿದೆ.
  • ಏಪ್ರಿಲ್-ಜೂನ್ 2026 ರ ಅವಧಿಯಲ್ಲಿ ನಿರ್ಮಾಣ ಹಂತದಲ್ಲಿರುವ ಥರ್ಮಲ್, ಹೈಡ್ರೋ, ನವೀಕರಿಸಬಹುದಾದ ಇಂಧನ, BESS ಮತ್ತು PSP ಯೋಜನೆಗಳ ಕಾರ್ಯಾರಂಭವನ್ನು (Commissioning) ವೇಗಗೊಳಿಸಲಾಗುತ್ತಿದೆ.

ದೀರ್ಘಾವಧಿಯ ಕಾರ್ಯತಂತ್ರ: ಇಂಧನ ಸ್ವಾತಂತ್ರ್ಯದತ್ತ ಪಯಣ

  • ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ಇಂಧನ ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಗಮನ ಹರಿಸಲಾಗಿದೆ.
  • ಕಳೆದ ದಶಕದಲ್ಲಿ, ಯಾವುದೇ ಹೊಸ ಅನಿಲ ಆಧಾರಿತ ಅಥವಾ ಆಮದು ಮಾಡಿದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ಯೋಜಿಸಿಲ್ಲ, ಆದರೆ ಅಸ್ತಿತ್ವದಲ್ಲಿರುವ ಆಸ್ತಿಗಳನ್ನು ದೇಶೀಯ ಇಂಧನ ಮೂಲಗಳಿಗೆ ಅನುಗುಣವಾಗಿ ಹೊಂದಿಸಲಾಗುತ್ತಿದೆ.

ರಾಷ್ಟ್ರೀಯ ವಿದ್ಯುತ್ ಯೋಜನೆಯ ಪ್ರಕಾರ, ಒಟ್ಟು ಸ್ಥಾಪಿತ ಸಾಮರ್ಥ್ಯವು 2031-32 ವೇಳೆಗೆ ಸುಮಾರು 874 GW ತಲುಪುವ ನಿರೀಕ್ಷೆಯಿದೆ, ಇದರಲ್ಲಿ ಪಳೆಯುಳಿಕೆಯೇತರ ಮೂಲಗಳತ್ತ ಗಮನಾರ್ಹ ಬದಲಾವಣೆಯಾಗಲಿದೆ:

  • ಪಳೆಯುಳಿಕೆಯೇತರ ಪಾಲು ಶೇಕಡಾ 67 ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ.
  • ಇಂಧನ ಸಂಗ್ರಹಣೆ ವಿಸ್ತರಣೆ: 300 GWh ವರೆಗೆ.
  • ಪ್ರಸರಣ ಜಾಲದ ವಿಸ್ತರಣೆ: 167 GW ಅಂತರ-ಪ್ರಾದೇಶಿಕ ಸಾಮರ್ಥ್ಯದೊಂದಿಗೆ ಸುಮಾರು 6.5 ಲಕ್ಷ ckm.

ಚೇತರಿಸಿಕೊಳ್ಳುವ ಶಕ್ತಿಯನ್ನು ಉತ್ತೇಜಿಸುವ ಪ್ರಮುಖ ನೀತಿ ಹಸ್ತಕ್ಷೇಪಗಳು: ವಲಯವನ್ನು ಬಲಪಡಿಸಲು ಸರ್ಕಾರವು ಸರಣಿ ನೀತಿ ಉಪಕ್ರಮಗಳನ್ನು ಕೈಗೊಂಡಿದೆ:

  • ರಾಜ್ಯಗಳು ಹತ್ತು ವರ್ಷಗಳ ಸಂಪನ್ಮೂಲ ಸಮರ್ಪಕ ಯೋಜನೆಗಳನ್ನು (Resource Adequacy Plans) ಜಾರಿಗೆ ತರುತ್ತಿವೆ.
  • ರಾಷ್ಟ್ರೀಯ/ಪ್ರಾದೇಶಿಕ ಮಟ್ಟದಲ್ಲಿ ಹೊಂದಾಣಿಕೆಯ ಪ್ರಸರಣ ಜಾಲದ ಅಭಿವೃದ್ಧಿ.
  • ISTS ಶುಲ್ಕ ಮನ್ನಾ, ಹಸಿರು ಇಂಧನ ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ಪ್ರಧಾನಮಂತ್ರಿ ಕುಸುಮ್ (PM-KUSUM), ಪ್ರಧಾನಮಂತ್ರಿ ಸೂರ್ಯ ಘರ್ ಮತ್ತು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ನಂತಹ ಪ್ರಮುಖ ಯೋಜನೆಗಳು.

ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಸ್ತುತ ಇಂಧನ ಪೂರೈಕೆ ಪರಿಸ್ಥಿತಿಯ ಕುರಿತು ಅಪ್‌ಡೇಟ್ ಹಂಚಿಕೊಂಡಿದೆ, ಹಾರ್ಮುಜ್ ಜಲಸಂಧಿಯ ಮೇಲೆ ಪರಿಣಾಮ ಬೀರುತ್ತಿರುವ ಬೆಳವಣಿಗೆಗಳ ನಡುವೆ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳುತ್ತಿರುವ ಕ್ರಮಗಳನ್ನು ವಿವರಿಸಿದೆ. ಈ ಕೆಳಗಂಡವುಗಳನ್ನು ಗಮನಿಸಲಾಗಿದೆ.

ಸಾರ್ವಜನಿಕ ಸಲಹೆ ಮತ್ತು ನಾಗರಿಕ ಜಾಗೃತಿ

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಆತಂಕದ ಖರೀದಿಯನ್ನು ತಪ್ಪಿಸಲು ಮತ್ತು ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಲು ನಾಗರಿಕರಿಗೆ ಸಲಹೆ ನೀಡಲಾಗಿದೆ.
  • ಎಲ್‌ಪಿಜಿ ಗ್ರಾಹಕರು ಡಿಜಿಟಲ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಮತ್ತು ವಿತರಕರನ್ನು ಭೇಟಿ ಮಾಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
  • ಪಿಎನ್‌ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ಟಾಪ್‌ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗಿದೆ.
  • ಪ್ರಸ್ತುತ ಪರಿಸ್ಥಿತಿಯಲ್ಲಿ ಇಂಧನವನ್ನು ಉಳಿಸಲು ಎಲ್ಲಾ ನಾಗರಿಕರಿಗೆ ವಿನಂತಿಸಲಾಗಿದೆ.

ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು

  • ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಸರ್ಕಾರವು ದೇಶೀಯ ಎಲ್‌ಪಿಜಿ ಮತ್ತು ಪಿಎನ್‌ಜಿ ಪೂರೈಕೆಗೆ, ಅದರಲ್ಲೂ ವಿಶೇಷವಾಗಿ ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಆದ್ಯತೆ ನೀಡಿದೆ.
  • ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತಂದಿದೆ, ಇದರಲ್ಲಿ ರಿಫೈನರಿ ಉತ್ಪಾದನೆಯನ್ನು ಹೆಚ್ಚಿಸುವುದು, ಬುಕ್ಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿದೆ.
  • ಎಲ್‌ಪಿಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
  • ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ವಿತರಿಸಲು ರಾಜ್ಯಗಳಿಗೆ ಹೆಚ್ಚುವರಿ ಕಲ್ಲಿದ್ದಲನ್ನು ಪೂರೈಸಲು ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್‌ಗೆ ನಿರ್ದೇಶನ ನೀಡಿದೆ.
  • ದೇಶೀಯ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿಎನ್‌ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯದ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು

  • ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹಣೆ ಮತ್ತು ಕಾಳಸಂತೆ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ಪಿಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
  • ಭಾರತ ಸರ್ಕಾರವು 27.03.2026 ಮತ್ತು 02.04.2026 ರ ಪತ್ರಗಳ ಮೂಲಕ ಸಕ್ರಿಯ ಸಾರ್ವಜನಿಕ ಸಂವಹನದ ಅಗತ್ಯವನ್ನು ಒತ್ತಿಹೇಳಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಪರಾಮರ್ಶೆ ಸಭೆಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, 02.04.2026 ರಂದು ಮತ್ತು 06.04.2026 ರಂದು ಸಭೆಗಳನ್ನು ನಡೆಸಲಾಗಿದ್ದು, ಈ ಕೆಳಗಿನ ಅಂಶಗಳನ್ನು ಒತ್ತಿಹೇಳಲಾಗಿದೆ:
  • ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸಲು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ನೀಡಲು.
  • ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿ / ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಎದುರಿಸಲು.
  • ಜಿಲ್ಲಾ ಆಡಳಿತದಿಂದ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಮತ್ತು ಒಎಂಸಿಗಳ ಸಮನ್ವಯದೊಂದಿಗೆ ದಾಳಿಗಳನ್ನು ಮುಂದುವರಿಸಲು.
  • ತಮ್ಮ ರಾಜ್ಯಗಳಲ್ಲಿ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಆದೇಶಗಳನ್ನು ಹೊರಡಿಸಲು.
  • ಹೆಚ್ಚುವರಿ ಸೀಮೆಎಣ್ಣೆಗಾಗಿ (SKO) ಹಂಚಿಕೆ ಆದೇಶಗಳನ್ನು ಹೊರಡಿಸಲು.
  • ಪಿಎನ್‌ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸಲು.
  • ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡಲು ಮತ್ತು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳ ಉದ್ದೇಶಿತ ವಿತರಣೆಯನ್ನು ಅಳವಡಿಸಿಕೊಳ್ಳಲು.
  • ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕಾಳಸಂತೆ ಸಂಗ್ರಹಣೆ ತಡೆಯಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ.
  • ಪ್ರಸ್ತುತ, 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು

  • ಎಲ್‌ಪಿಜಿ ಕಾಳಸಂತೆ ಸಂಗ್ರಹಣೆ ತಡೆಯಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. 09.04.2026 ರಂದು ದೇಶಾದ್ಯಂತ 3800 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, ಸುಮಾರು 450 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ಇಲ್ಲಿಯವರೆಗೆ ದೇಶಾದ್ಯಂತ ಸುಮಾರು 1.2 ಲಕ್ಷ ದಾಳಿಗಳನ್ನು ನಡೆಸಲಾಗಿದ್ದು, 57,000 ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ, 950 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು 229 ವ್ಯಕ್ತಿಗಳನ್ನು ಬಂಧಿಸಲಾಗಿದೆ.
  • ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಆಕಸ್ಮಿಕ ತಪಾಸಣೆಗಳನ್ನು ಬಲಪಡಿಸಿವೆ ಮತ್ತು 2100 ಕ್ಕೂ ಹೆಚ್ಚು ಶೋಕಾಸ್ ನೋಟಿಸ್‌ಗಳನ್ನು ನೀಡಿವೆ, 204 ಎಲ್‌ಪಿಜಿ ವಿತರಣಾ ಕೇಂದ್ರಗಳ ಮೇಲೆ ದಂಡ ವಿಧಿಸಿವೆ ಮತ್ತು 53 ವಿತರಣಾ ಕೇಂದ್ರಗಳನ್ನು ಅಮಾನತುಗೊಳಿಸಿವೆ.

ಎಲ್ಪಿಜಿ ಪೂರೈಕೆ

ದೇಶೀಯ ಎಲ್ಪಿಜಿ ಪೂರೈಕೆ ಸ್ಥಿತಿ:

  • ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
  • ಎಲ್‌ಪಿಜಿ ವಿತರಣಾ ಕೇಂದ್ರಗಳಲ್ಲಿ ಯಾವುದೇ ಕೊರತೆ (Dry-outs) ವರದಿಯಾಗಿಲ್ಲ.
  • ಆನ್‌ಲೈನ್ ಎಲ್‌ಪಿಜಿ ಬುಕ್ಕಿಂಗ್‌ಗಳು ಉದ್ಯಮದಾದ್ಯಂತ ಸುಮಾರು ಶೇಕಡಾ 98 ಕ್ಕ್ಕೆ ಏರಿವೆ.
  • ಪಥ ಬದಲಾವಣೆಯನ್ನು ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಗಳನ್ನು ಸುಮಾರು ಶೇಕಡಾ 92 ಕ್ಕ್ಕೆ ಹೆಚ್ಚಿಸಲಾಗಿದೆ.
  • ದೇಶೀಯ ಎಲ್‌ಪಿಜಿ ಸಿಲಿಂಡರ್ ವಿತರಣೆಗಳು ಸಹಜವಾಗಿವೆ.

ವಾಣಿಜ್ಯ ಎಲ್ಪಿಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:

  • ಒಟ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಬಿಕ್ಕಟ್ಟಿನ ಮುಂಚಿನ ಮಟ್ಟದ ಶೇಕಡಾ 70 ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ ಶೇಕಡಾ 10 ರಷ್ಟು ಸುಧಾರಣೆ-ಆಧಾರಿತ ಹಂಚಿಕೆಯೂ ಸೇರಿದೆ.
  • ಭಾರತ ಸರ್ಕಾರವು 08.04.2026 ರ ಪತ್ರದ ಮೂಲಕ ಫಾರ್ಮಾ, ಆಹಾರ, ಪಾಲಿಮರ್, ಕೃಷಿ, ಪ್ಯಾಕೇಜಿಂಗ್, ಪೇಂಟ್, ಉಕ್ಕು, ರಕ್ಷಣಾ ಸಂಬಂಧಿತ ವಸ್ತುಗಳು ಇತ್ಯಾದಿ ವಲಯಗಳ ಕೈಗಾರಿಕಾ ಘಟಕಗಳು ಸಹ ಮಾರ್ಚ್ 2026 ಕ್ಕಿಂತ ಮೊದಲು ತಮ್ಮ ಘಟಕಗಳ ಬಲ್ಕ್ ದೇಶೀಯವಲ್ಲದ ಎಲ್‌ಪಿಜಿ ಬಳಕೆಯ ಮಟ್ಟದ ಶೇಕಡಾ 70 ರಷ್ಟನ್ನು ಪಡೆಯುತ್ತವೆ ಎಂದು ತಿಳಿಸಿದೆ.
  • ಈ ಹಂಚಿಕೆಯ ಅಡಿಯಲ್ಲಿ ಬಲ್ಕ್ ಎಲ್‌ಪಿಜಿ ಪಡೆಯಲು ಆಯಾ ಕೈಗಾರಿಕೆಗಳು ಒಎಂಸಿಗಳೊಂದಿಗೆ ನೋಂದಾಯಿಸಿಕೊಳ್ಳುವ ಮತ್ತು ಪಿಎನ್‌ಜಿಗಾಗಿ ಅರ್ಜಿ ಸಲ್ಲಿಸುವ ಷರತ್ತುಗಳನ್ನು ಪೂರೈಸಬೇಕು. ಆದಾಗ್ಯೂ, ಉತ್ಪಾದನಾ ಪ್ರಕ್ರಿಯೆಯಲ್ಲಿ ಎಲ್‌ಪಿಜಿಯನ್ನು ಅವಿಭಾಜ್ಯ ಇನ್‌ಪುಟ್ ಆಗಿ ಬಳಸುತ್ತಿದ್ದರೆ, ಪಿಎನ್‌ಜಿಗಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವ ಷರತ್ತನ್ನು ಮನ್ನಾ ಮಾಡಲಾಗುವುದು.
  • ಈ ಕ್ರಮಗಳು ಪೂರೈಕೆ ಸರಪಳಿಯ ಅಡೆತಡೆಗಳನ್ನು ತಡೆಯಲು ಮತ್ತು ಕೈಗಾರಿಕಾ ಕಾರ್ಯಾಚರಣೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ನಿರೀಕ್ಷಿಸಲಾಗಿದೆ.
  • ಭಾರತ ಸರ್ಕಾರವು 06.04.2026 ರ ಪತ್ರದ ಮೂಲಕ ವಲಸೆ ಕಾರ್ಮಿಕರಿಗೆ ವಿತರಿಸಲು ಪ್ರತಿ ರಾಜ್ಯದಲ್ಲಿ ಲಭ್ಯವಿರುವ 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳ ದೈನಂದಿನ ಪ್ರಮಾಣವನ್ನು ದ್ವಿಗುಣಗೊಳಿಸಿದೆ.
  • ಸಾರ್ವಜನಿಕ ವಲಯದ ಒಎಂಸಿಗಳು ಕಳೆದ 7 ದಿನಗಳಲ್ಲಿ 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳಿಗಾಗಿ ಸುಮಾರು 2400 ಜಾಗೃತಿ ಶಿಬಿರಗಳನ್ನು ಆಯೋಜಿಸಿವೆ, ಇದರಲ್ಲಿ 25,000 ಕ್ಕೂ ಹೆಚ್ಚು ಸಿಲಿಂಡರ್‌ಗಳು ಮಾರಾಟವಾಗಿವೆ.
  • 09.04.2026 ರಂದು ದೇಶಾದ್ಯಂತ 1.1 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್‌ಟಿಎಲ್ ಸಿಲಿಂಡರ್‌ಗಳು ಮಾರಾಟವಾಗಿವೆ.
  • 23 ಮಾರ್ಚ್ 2026 ರಿಂದ ಇದುವರೆಗೆ ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರಿಗೆ ಸುಮಾರು 11 ಲಕ್ಷ 5-ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡಲಾಗಿದೆ.
  • ಐಒಸಿಎಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಸಮಿತಿಯು ವಾಣಿಜ್ಯ ಎಲ್‌ಪಿಜಿ ವಿತರಣೆಯನ್ನು ಯೋಜಿಸಲು ರಾಜ್ಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
  • 14 ಮಾರ್ಚ್ 2026 ರಿಂದ ಸುಮಾರು 1,06,093 ಮೆಟ್ರಿಕ್ ಟನ್ ನಷ್ಟು (55.8 ಲಕ್ಷಕ್ಕೂ ಹೆಚ್ಚು 19 ಕೆಜಿ ಸಿಲಿಂಡರ್‌ಗಳಿಗೆ ಸಮ) ವಾಣಿಜ್ಯ ಎಲ್‌ಪಿಜಿ ಮಾರಾಟವಾಗಿದೆ.
  • ನಿನ್ನೆ 6297 ಮೆಟ್ರಿಕ್ ಟನ್ ನಷ್ಟು (3.3 ಲಕ್ಷಕ್ಕೂ ಹೆಚ್ಚು - 19 ಕೆಜಿ ಸಿಲಿಂಡರ್‌ಗಳಿಗೆ ಸಮ) ವಾಣಿಜ್ಯ ಎಲ್‌ಪಿಜಿ ಮಾರಾಟವಾಗಿದೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿಎನ್ಜಿ ವಿಸ್ತರಣಾ ಉಪಕ್ರಮಗಳು

  • ಆದ್ಯತೆಯ ವಲಯಗಳು ಸಂರಕ್ಷಿತ ಪೂರೈಕೆಯನ್ನು ಪಡೆಯುವುದನ್ನು ಮುಂದುವರಿಸಿವೆ, ಇದರಲ್ಲಿ ದೇಶೀಯ ಪಿಎನ್‌ಜಿ ಮತ್ತು ಸಿಎನ್‌ಜಿ ಸಾರಿಗೆಗೆ ಶೇಕಡಾ 100 ರಷ್ಟು ಪೂರೈಕೆ ಸೇರಿದೆ.
  • ರಸಗೊಬ್ಬರ ಘಟಕಗಳಿಗೆ ಒಟ್ಟಾರೆ ಗ್ಯಾಸ್ ಹಂಚಿಕೆಯನ್ನು 09.04.2026 ರಿಂದ ಜಾರಿಗೆ ಬರುವಂತೆ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇಕಡಾ 95 ಕ್ಕ್ಕೆ ಹೆಚ್ಚಿಸಲಾಗುತ್ತಿದೆ.
  • ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (CGD) ನೆಟ್‌ವರ್ಕ್‌ಗಳು ಸೇರಿದಂತೆ ಇತರ ಕೈಗಾರಿಕಾ ವಲಯಗಳಿಗೆ ಗ್ಯಾಸ್ ಪೂರೈಕೆಯನ್ನು 06.04.2026 ರಿಂದ ಜಾರಿಗೆ ಬರುವಂತೆ ಮತ್ತೆ ಶೇಕಡಾ 10 ರಷ್ಟು ಹೆಚ್ಚಿಸಲಾಗಿದೆ.
  • ಹೋಟೆಲ್‌ಗಳು ಮತ್ತು ಕ್ಯಾಂಟೀನ್‌ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿಎನ್‌ಜಿ ಸಂಪರ್ಕಗಳಿಗೆ ಆದ್ಯತೆ ನೀಡಲು ಸಿಜಿಡಿ ಘಟಕಗಳಿಗೆ ಸಲಹೆ ನೀಡಲಾಗಿದೆ.
  • ಐಜಿಎಲ್, ಎಂಜಿಎಲ್, ಗೇಲ್ ಗ್ಯಾಸ್ ಮತ್ತು ಬಿಪಿಸಿಎಲ್ ನಂತಹ ಕಂಪನಿಗಳು ಪಿಎನ್‌ಜಿ ಸಂಪರ್ಕಗಳಿಗಾಗಿ ಪ್ರೋತ್ಹಾಹಕಗಳನ್ನು ನೀಡುತ್ತಿವೆ.
  • ಸಿಜಿಡಿ ನೆಟ್‌ವರ್ಕ್‌ಗಳ ವಿಸ್ತರಣೆಗೆ ಅಗತ್ಯವಾದ ಅನುಮೋದನೆಗಳನ್ನು ತ್ವರಿತಗೊಳಿಸಲು ರಾಜ್ಯಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಲಾಗಿದೆ.
  • 18 ರಾಜ್ಯಗಳು ಈಗಾಗಲೇ ಪಿಎನ್‌ಜಿ ವಿಸ್ತರಣಾ ಸುಧಾರಣೆಗಳಿಗೆ ಸಂಬಂಧಿಸಿದ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಪಡೆಯುತ್ತಿವೆ.
  • ಪೈಪ್‌ಲೈನ್‌ಗಳು ಲಭ್ಯವಿರುವ ಕಡೆಗಳಲ್ಲಿ ಶಾಲೆಗಳು ಮತ್ತು ಹಾಸ್ಟೆಲ್‌ಗಳನ್ನು 5 ದಿನಗಳಲ್ಲಿ ಪಿಎನ್‌ಜಿ ಮೂಲಕ ಸಂಪರ್ಕಿಸಲು ಪಿಎನ್‌ಜಿಆರ್‌ಬಿ ನಿರ್ದೇಶಿಸಿದೆ.
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಿಜಿಡಿ ಮೂಲಸೌಕರ್ಯಕ್ಕಾಗಿ "ವೇಗವರ್ಧಿತ ಅನುಮೋದನೆ ಚೌಕಟ್ಟು" ಅನ್ನು ಅಳವಡಿಸಿಕೊಂಡಿದೆ.
  • ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಆದೇಶ, 2026 ಅನ್ನು ಸೂಚಿಸಿದೆ. ಇದು ಪೈಪ್‌ಲೈನ್‌ಗಳನ್ನು ಹಾಕಲು ಸುವ್ಯವಸ್ಥಿತ ಚೌಕಟ್ಟನ್ನು ಒದಗಿಸುತ್ತದೆ ಮತ್ತು ಸ್ವಚ್ಛ ಇಂಧನಗಳತ್ತ ಪರಿವರ್ತನೆಯನ್ನು ಬೆಂಬಲಿಸುತ್ತದೆ.
  • ಪಿಎನ್‌ಜಿಆರ್‌ಬಿ ರಾಷ್ಟ್ರೀಯ ಪಿಎನ್‌ಜಿ ಅಭಿಯಾನ 2.0 ಅನ್ನು 30 ಜೂನ್ 2026 ರವರೆಗೆ ವಿಸ್ತರಿಸಿದೆ.
  • ಸರ್ಕಾರವು ಮಾದರಿ ಕರಡು ರಾಜ್ಯ ಸಿಬಿಜಿ (CBG) ನೀತಿಯನ್ನು ಅಭಿವೃದ್ಧಿಪಡಿಸಿದೆ. ಇದನ್ನು ಅಳವಡಿಸಿಕೊಳ್ಳುವ ರಾಜ್ಯಗಳಿಗೆ ಹೆಚ್ಚುವರಿ ವಾಣಿಜ್ಯ ಎಲ್‌ಪಿಜಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
  • ಮಾರ್ಚ್ 2026 ರಿಂದ ಸುಮಾರು 4.05 lakh ಪಿಎನ್‌ಜಿ ಸಂಪರ್ಕಗಳಿಗೆ ಗ್ಯಾಸ್ ಪೂರೈಸಲಾಗಿದೆ ಮತ್ತು ಸುಮಾರು 4.41 ಲಕ್ಷ ಹೊಸ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.

ಕಚ್ಚಾ ತೈಲ ಸ್ಥಿತಿ ಮತ್ತು ರಿಫೈನರಿ ಕಾರ್ಯಾಚರಣೆಗಳು

  • ಎಲ್ಲಾ ರಿಫೈನರಿಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಪೆಟ್ರೋಲ್ ಹಾಗೂ ಡೀಸೆಲ್‌ನ ಸಾಕಷ್ಟು ದಾಸ್ತಾನುಗಳನ್ನು ಕಾಯ್ದುಕೊಳ್ಳಲಾಗುತ್ತಿದೆ.
  • ದೇಶೀಯ ಎಲ್‌ಪಿಜಿ ಬಳಕೆಯನ್ನು ಪ್ರೋತ್ಸಾಹಿಸಲು ಸಂಸ್ಕರಣಾಗಾರಗಳಿಂದ ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
  • ಭಾರತ ಸರ್ಕಾರವು 01.04.2026 ರ ಆದೇಶದ ಪ್ರಕಾರ, ಭಾರತದಲ್ಲಿನ ಪೆಟ್ರೋಕೆಮಿಕಲ್ ಸಂಕೀರ್ಣಗಳು ಸೇರಿದಂತೆ ಸಂಸ್ಕರಣಾ ಕಂಪನಿಗಳು ಔಷಧ ಇಲಾಖೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ ಮುಂತಾದ ನಿರ್ಣಾಯಕ ವಲಯಗಳಿಗೆ ನಿರ್ದಿಷ್ಟ ಪ್ರಮಾಣ ಮತ್ತು ಸಂಸ್ಕರಣಾ ಮೂಲದ ಆಧಾರದ ಮೇಲೆ ಕೆಲವು ಕನಿಷ್ಠ ಪ್ರಮಾಣದ C3 ಮತ್ತು C4 ಸ್ಟ್ರೀಮ್‌ಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿ ನೀಡಿದೆ.
  • ಮೇಲೆ ತಿಳಿಸಲಾದ ಇಲಾಖೆಗಳಿಗೆ ಸಂಬಂಧಿಸಿದ ಕಂಪನಿಗಳಿಗೆ ದಿನಕ್ಕೆ 800 ಮೆಟ್ರಿಕ್ ಟನ್ ಪೂರೈಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಿಪಿಸಿಎಲ್ ಕೊಚ್ಚಿ ಮತ್ತು ಮುಂಬೈ ರಿಫೈನರಿಗಳಿಂದ ಔಷಧೀಯ ಇಲಾಖೆಗೆ ದಿನಕ್ಕೆ 400 ಮೆಟ್ರಿಕ್ ಟನ್ ಹಂಚಿಕೆ ಮಾಡಲಾಗಿದ್ದು, ಮಾರಾಟ ಈಗಾಗಲೇ ಪ್ರಾರಂಭವಾಗಿದೆ.

ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು

  • ದೇಶಾದ್ಯಂತ ಚಿಲ್ಲರೆ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
  • ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಏರಿಕೆಗೆ ಕಾರಣವಾಗಿದೆ, ಆದಾಗ್ಯೂ, ಗ್ರಾಹಕರನ್ನು ರಕ್ಷಿಸಲು ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ. ಕಡಿತಗೊಳಿಸಿದೆ.
  • ದೇಶೀಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ 21.5 ರೂ. ಮತ್ತು ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಮೇಲೆ ಪ್ರತಿ ಲೀಟರ್‌ಗೆ 29.5 ರೂ. ರಫ್ತು ಸುಂಕವನ್ನು ವಿಧಿಸಲಾಗಿದೆ.
  • ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ.
  • ವದಂತಿಗಳನ್ನು ನಂಬಬೇಡಿ ಎಂದು ಸರ್ಕಾರ ನಾಗರಿಕರಿಗೆ ಸೂಚಿಸಿದೆ ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡುವಂತೆ ರಾಜ್ಯ ಸರ್ಕಾರಗಳನ್ನು ವಿನಂತಿಸಿದೆ.

ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು

  • ನಿಯಮಿತ ಹಂಚಿಕೆಯ ಜೊತೆಗೆ 48,000 ಕೆಎಲ್ (KL) ಸೀಮೆಎಣ್ಣೆಯ ಹೆಚ್ಚುವರಿ ಹಂಚಿಕೆಯನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ.
  • ಭಾರತ ಸರ್ಕಾರವು 29.03.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಪಿಡಿಎಸ್ ಎಸ್‌ಕೆಒ ಮುಕ್ತ (PDS SKO Free) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಡುಗೆ ಮತ್ತು ಬೆಳಕಿನ ಉದ್ದೇಶಕ್ಕಾಗಿ ಮಾತ್ರ ಪಿಡಿಎಸ್ ಸೀಮೆಎಣ್ಣೆ (Superior Kerosene Oil) ವಿತರಣೆಯನ್ನು ಸುಗಮಗೊಳಿಸಿದೆ
  • ಪ್ರತಿ ಜಿಲ್ಲೆಗೆ ಗರಿಷ್ಠ ಎರಡು ಸಾರ್ವಜನಿಕ ವಲಯದ ಒಎಂಸಿ (PSU OMC) ಸೇವಾ ಕೇಂದ್ರಗಳಿಗೆ (ಆದ್ಯತೆಯ ಮೇರೆಗೆ ಕಂಪನಿ ಒಡೆತನದ ಮತ್ತು ಕಂಪನಿ ನಿರ್ವಹಣೆಯ) 5,000 ಲೀಟರ್‌ವರೆಗೆ ಪಿಡಿಎಸ್ ಎಸ್‌ಕೆಒ ಸಂಗ್ರಹಿಸಲು ಅನುಮತಿ ನೀಡಲಾಗಿದೆ.
  • ಈ ಸಾರ್ವಜನಿಕ ವಲಯದ ಒಎಂಸಿ ಸೇವಾ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ಆಯಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತವು ಗೊತ್ತುಪಡಿಸುತ್ತದೆ.
  • 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎಸ್‌ಕೆಒ ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ಯಾವುದೇ ಅಗತ್ಯವಿಲ್ಲ ಎಂದು ತಿಳಿಸಿವೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಪರ್ಷಿಯನ್ ಕೊಲ್ಲಿಯ ಪ್ರಸ್ತುತ ಕಡಲ ಪರಿಸ್ಥಿತಿ ಮತ್ತು ಭಾರತೀಯ ಹಡಗುಗಳು ಹಾಗೂ ನಾವಿಕರನ್ನು ರಕ್ಷಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆಯೂ ಬ್ರೀಫಿಂಗ್ ನೀಡಲಾಯಿತು:

  • ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ವಾಣಿಜ್ಯ ಇಲಾಖೆ, CBIC ಮತ್ತು DGFT ಜೊತೆಗೆ ನಿನ್ನೆ ಸಭೆ ನಡೆಸಿ FIEO, CSLA, EEPC, SEPC, APEDA ಮತ್ತು ಇತರ ಪಾಲುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿದೆ.
  • ರಫ್ತುದಾರರು ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳು ಮತ್ತು ಬಂದರುಗಳ ವಿವರಗಳನ್ನು ಹಂಚಿಕೊಳ್ಳಲು ವಿನಂತಿಸಲಾಗಿದೆ.
  • ಬಂದರುಗಳು ರಫ್ತುದಾರರಿಗೆ ನೀಡುವ ವಿನಾಯಿತಿಗಳನ್ನು ಮರುಪಾವತಿ ಆಧಾರದ ಬದಲಿಗೆ ನೇರವಾಗಿ ಮುಂಗಡವಾಗಿಯೇ ನೀಡಲು ಹಡಗು ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ.
  • ಪಾರದರ್ಶಕತೆಗಾಗಿ ಬಂದರುಗಳು ಸರಕು ಮತ್ತು ಹಡಗುಗಳಿಗೆ ನೀಡುವ ಎಲ್ಲಾ ವಿನಾಯಿತಿಗಳ ವಿವರಗಳನ್ನು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲು ಸೂಚಿಸಲಾಗಿದೆ.
  • ತೈಲ ಕಂಪನಿಗಳು ಮತ್ತು ಪೆಟ್ರೋಲಿಯಂ ಸಚಿವಾಲಯದ ಸಮನ್ವಯದೊಂದಿಗೆ ಎಲ್ಲಾ ಬಂದರುಗಳಲ್ಲಿ ಸಮರ್ಪಕ ಬಂಕರ್ ಸೌಲಭ್ಯಗಳು ಲಭ್ಯವಿದ್ದು, ಯಾವುದೇ ಕೊರತೆಯಿಲ್ಲ.
  • ಬಂದರುಗಳಲ್ಲಿ ಕಂಟೈನರ್‌ಗಳ ಯಾವುದೇ ದಟ್ಟಣೆ ಅಥವಾ ಜನದಟ್ಟಣೆ ಇಲ್ಲ ಮತ್ತು ಕಾರ್ಯಾಚರಣೆಗಳು ಸುಗಮವಾಗಿ ನಡೆಯುತ್ತಿವೆ.
  • ಮಾರ್ಚ್ 8 ರಿಂದ ಏಪ್ರಿಲ್ 10, 2026 ರವರೆಗೆ ಕಾಂಡ್ಲಾ ಮತ್ತು ಜೆಎನ್‌ಪಿಟಿ ಬಂದರುಗಳಲ್ಲಿ ಹಡಗು ಕಂಪನಿಗಳ ಕಾರ್ಯಾಚರಣೆಯಿಂದಾಗಿ ಕಂಟೈನರ್‌ಗಳ ಸಂಗ್ರಹಣೆ ಕಡಿಮೆಯಾಗಿರುವ ವಿವರಗಳು ಕೆಳಗಿನಂತಿವೆ:-
  • ಕಾಂಡ್ಲಾ - 1575 ರಿಂದ 44 ಕ್ಕೆ ಇಳಿಕೆಯಾಗಿದೆ (ಶೇಕಡಾ 97 ರಷ್ಟು ಇಳಿಕೆ)
  • ಜೆಎನ್‌ಪಿಟಿ - 4500 ರಿಂದ 394 ಕ್ಕೆ ಇಳಿಕೆಯಾಗಿದೆ (ಶೇಕಡಾ 92 ರಷ್ಟು ಇಳಿಕೆ)
  • ರೀಫರ್ ಕಂಟೈನರ್‌ಗಳು - 1200 ರಿಂದ 8 ಕ್ಕೆ ಇಳಿಕೆಯಾಗಿದೆ (ಶೇಕಡಾ 99 ರಷ್ಟು ಇಳಿಕೆ)
  • ಗೌರವಾನ್ವಿತ ಬಂದರು ಸಚಿವರು ಎಲ್ಲಾ ಬಂದರುಗಳು, ಡಿಜಿ ಶಿಪ್ಪಿಂಗ್ ಮತ್ತು ಇತರ ಪಾಲುದಾರರೊಂದಿಗೆ ಪರಿಸ್ಥಿತಿಯನ್ನು ಪರಾಮರ್ಶಿಸಿದ್ದಾರೆ ಮತ್ತು ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ನಿರ್ದೇಶಿಸಿದ್ದಾರೆ.
  • ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
  • ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು ಕಳೆದ 24 ಗಂಟೆಗಳಲ್ಲಿ 198 ಕರೆಗಳು ಮತ್ತು 319 ಇಮೇಲ್‌ಗಳನ್ನು ನಿರ್ವಹಿಸಿದೆ.
  • ಡಿಜಿ ಶಿಪ್ಪಿಂಗ್ ಇದುವರೆಗೆ 1,927 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಅನುಕೂಲ ಮಾಡಿಕೊಟ್ಟಿದೆ.
  • ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಮಿಷನ್‌ಗಳೊಂದಿಗೆ ನಿಕಟ ಸಮನ್ವಯ ಮುಂದುವರಿಸಿದೆ.

ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ

ಭಾರತೀಯ ಮಿಷನ್‌ಗಳ ಮೂಲಕ ನೆರವು ಸೇರಿದಂತೆ ಈ ಪ್ರದೇಶದ ಇತ್ತೀಚಿನ ಬೆಳವಣಿಗೆಗಳನ್ನು ಬ್ರೀಫಿಂಗ್ ಸಮಯದಲ್ಲಿ ಹಂಚಿಕೊಳ್ಳಲಾಯಿತು. ಅದನ್ನು ಈ ಕೆಳಗಿನಂತೆ ತಿಳಿಸಲಾಯಿತು:

  • ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ಸರ್ಕಾರವು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ.
  •  ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದಂತೆ, ಭಾರತದ ಇಂಧನ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸಚಿವರು ಗಲ್ಫ್ ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
  • ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಎಸ್. ಜೈಶಂಕರ್ ಅವರು ಪ್ರಸ್ತುತ ಮಾರಿಷಸ್‌ಗೆ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಅವರು 11-12 ಏಪ್ರಿಲ್ 2026 ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) ಪ್ರಯಾಣಿಸಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಅವರು ದ್ವಿಪಕ್ಷೀಯ ಸಹಕಾರವನ್ನು ಪರಾಮರ್ಶಿಸಲು ಮತ್ತು ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಯುಎಇ ನಾಯಕತ್ವದೊಂದಿಗೆ ಚರ್ಚೆ ನಡೆಸಲಿದ್ದಾರೆ.
  • ಭಾರತವು ತನ್ನ ಇಂಧನ ಭದ್ರತೆಯನ್ನು ಬಲಪಡಿಸಲು ಶ್ರಮಿಸುತ್ತಿರುವಂತೆಯೇ, ನೆರೆಯ ದೇಶಗಳ ವಿನಂತಿಯ ಮೇರೆಗೆ ಅವರ ಇಂಧನ ಅಗತ್ಯಗಳನ್ನು ಪೂರೈಸಲು ಬೆಂಬಲವನ್ನು ನೀಡುತ್ತಿದೆ.
  • ಎರಡು ವಾರಗಳ ಹಿಂದೆ ಶ್ರೀಲಂಕಾಕ್ಕೆ 38 ಮೆಟ್ರಿಕ್ ಟನ್ (MT) ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತ ಪೂರೈಸಿದೆ.
  • ಮಾರಿಷಸ್‌ನ ಇಂಧನ ಭದ್ರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ತೈಲ ಮತ್ತು ಅನಿಲ ಪೂರೈಕೆಗಾಗಿ ಸರ್ಕಾರದಿಂದ ಸರ್ಕಾರದ (G2G) ಒಪ್ಪಂದವನ್ನು ಅಂತಿಮಗೊಳಿಸಲಾಗುತ್ತಿದೆ.
  • ಪಶ್ಚಿಮ ಏಷ್ಯಾದ ಪ್ರಸ್ತುತ ಬಿಕ್ಕಟ್ಟಿನ ಸಮಯದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಬೆಂಬಲಕ್ಕಾಗಿ ಉಭಯ ದೇಶಗಳ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  • ಗೌರವಾನ್ವಿತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು 9-10 ಏಪ್ರಿಲ್ 2026 ರಂದು ಭಾರತಕ್ಕೆ ಇಂಧನದ ಪ್ರಮುಖ ಪೂರೈಕೆದಾರ ರಾಷ್ಟ್ರವಾದ ಕತಾರ್‌ಗೆ ಭೇಟಿ ನೀಡುತ್ತಿದ್ದಾರೆ.
  • ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರವಾಗಿ ಕತಾರ್‌ನ ಅಮೀರ್ ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ ಹಾಗೂ ಕತಾರ್‌ನ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಗೌರವಾನ್ವಿತ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರಿಗೆ ಶುಭಾಶಯಗಳು ಮತ್ತು ಒಗ್ಗಟ್ಟು ಹಾಗೂ ಬೆಂಬಲದ ಸಂದೇಶವನ್ನು ತಲುಪಿಸಿದ್ದಾರೆ.
  • ಕತಾರ್‌ನ ಇಂಧನ ಸಚಿವರು ತಮ್ಮ ದೇಶವು ವಿಶ್ವಾಸಾರ್ಹ ಇಂಧನ ಪೂರೈಕೆದಾರರಾಗಿ ಮುಂದುವರಿಯುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಭಾರತದೊಂದಿಗೆ ಇಂಧನ ಸಂಬಂಧ ಹಾಗೂ ಸಹಕಾರವನ್ನು ಮುಂದುವರಿಸಲು ಮತ್ತು ಬಲಪಡಿಸಲು ಆಶಿಸಿದ್ದಾರೆ.
  • ಸಚಿವಾಲಯದಲ್ಲಿ ಮೀಸಲಾದ ವಿಶೇಷ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಮಿಷನ್‌ಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತ ಸಂಪರ್ಕವನ್ನು ಹೊಂದಿದೆ.
  • ಈ ಪ್ರದೇಶದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವತ್ತ ಪ್ರಯತ್ನಗಳು ಕೇಂದ್ರೀಕೃತವಾಗಿವೆ.
  • ಭಾರತೀಯ ಮಿಷನ್‌ಗಳು ಮತ್ತು ಪೋಸ್ಟ್‌ಗಳು ದಿನದ 24 ಗಂಟೆಯೂ (24x7) ಸಹಾಯವಾಣಿಗಳನ್ನು ನಿರ್ವಹಿಸುತ್ತಿವೆ ಮತ್ತು ಭಾರತೀಯ ಪ್ರಜೆಗಳಿಗೆ ಸಕ್ರಿಯವಾಗಿ ಸಹಾಯ ಮಾಡುತ್ತಿವೆ.
  • ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಮತ್ತು ಪ್ರಯಾಣದ ಪರಿಸ್ಥಿತಿಗಳು ಹಾಗೂ ಕಾನ್ಸುಲರ್ ಸೇವೆಗಳ ಮಾಹಿತಿಯನ್ನು ಒಳಗೊಂಡ ನವೀಕೃತ ಸಲಹೆಗಳನ್ನು (Advisories) ನಿಯಮಿತವಾಗಿ ನೀಡಲಾಗುತ್ತಿದೆ.
  • ಭಾರತೀಯ ಮಿಷನ್‌ಗಳು ಈ ಪ್ರದೇಶದಲ್ಲಿರುವ ಭಾರತೀಯ ಸಮುದಾಯ ಸಂಘಗಳು, ವೃತ್ತಿಪರ ಗುಂಪುಗಳು, ಭಾರತೀಯ ಕಂಪನಿಗಳು ಮತ್ತು ಇತರ ಪಾಲುದಾರರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
  • ವಾಯುಪ್ರದೇಶವು ಮುಕ್ತವಾಗಿರುವ ದೇಶಗಳಿಂದ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಫೆಬ್ರವರಿ 28 ರಿಂದ ಈವರೆಗೆ ಸುಮಾರು 8,43,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ.
  • ಯುಎಇನಲ್ಲಿ, ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ಮತ್ತು ಸುರಕ್ಷತಾ ಪರಿಗಣನೆಗಳ ಆಧಾರದ ಮೇಲೆ ಯುಎಇ ಮತ್ತು ಭಾರತದ ನಡುವೆ ಸೀಮಿತ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ಓಡಿಸುವುದನ್ನು ಮುಂದುವರಿಸಿವೆ, ಇಂದು ಸುಮಾರು 95 ವಿಮಾನಗಳನ್ನು ನಿರೀಕ್ಷಿಸಲಾಗಿದೆ.
  • ಸೌದಿ ಅರೇಬಿಯಾ ಮತ್ತು ಓಮನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
  • ಕತಾರ್ ವಾಯುಪ್ರದೇಶವು ಭಾಗಶಃ ಮುಕ್ತವಾಗಿರುವುದರಿಂದ, ಕತಾರ್ ಏರ್‌ವೇಸ್ ಇಂದು ಭಾರತಕ್ಕೆ ಸುಮಾರು 8-10 ವಿಮಾನಗಳನ್ನು ಓಡಿಸುವ ನಿರೀಕ್ಷೆಯಿದೆ.
  • ಕುವೈತ್ ವಾಯುಪ್ರದೇಶವು ಮುಚ್ಚಲ್ಪಟ್ಟಿದೆ. ಜಜೀರಾ ಏರ್‌ವೇಸ್ ಮತ್ತು ಕುವೈತ್ ಏರ್‌ವೇಸ್ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ಓಡಿಸುತ್ತಿವೆ. ವಾಯುಪ್ರದೇಶ ಮುಚ್ಚಿರುವುದರಿಂದ, ನಾವು ಕುವೈತ್‌ನಿಂದ ಬರುವ ಭಾರತೀಯ ಪ್ರಜೆಗಳ ಪ್ರಯಾಣವನ್ನು ಸೌದಿ ಅರೇಬಿಯಾದ ಮೂಲಕ ಭಾರತಕ್ಕೆ ಸುಗಮಗೊಳಿಸುವುದನ್ನು ಮುಂದುವರಿಸಿದ್ದೇವೆ.
  • ಬಹ್ರೇನ್ ವಾಯುಪ್ರದೇಶವು ಮುಕ್ತವಾಗಿದೆ. ಗಲ್ಫ್ ಏರ್ ಬಹ್ರೇನ್‌ನಿಂದ ಭಾರತಕ್ಕೆ ಸೀಮಿತ ವಿಮಾನ ಕಾರ್ಯಾಚರಣೆಯನ್ನು ಯೋಜಿಸುತ್ತಿದೆ ಮತ್ತು ಪ್ರಸ್ತುತ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ನಿಗದಿತವಲ್ಲದ ವಿಮಾನಗಳನ್ನು ಓಡಿಸುತ್ತಿದೆ. ಬಹ್ರೇನ್‌ನಿಂದ ಬರುವ ಭಾರತೀಯ ಪ್ರಜೆಗಳ ಪ್ರಯಾಣವನ್ನು ಸೌದಿ ಅರೇಬಿಯಾದ ಮೂಲಕ ಸುಗಮಗೊಳಿಸಲಾಗುತ್ತಿದೆ.
  • ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇದುವರೆಗೆ 981 ಭಾರತೀಯ ವಿದ್ಯಾರ್ಥಿಗಳು ಮತ್ತು 657 ಭಾರತೀಯ ಮೀನುಗಾರರು ಸೇರಿದಂತೆ ಒಟ್ಟು 2,180 ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದೆ.
  • ಇಸ್ರೇಲ್ ವಾಯುಪ್ರದೇಶವು ಸೀಮಿತ ವಿಮಾನ ಕಾರ್ಯಾಚರಣೆಗಳೊಂದಿಗೆ ಭಾಗಶಃ ಮುಕ್ತವಾಗಿದೆ. ಭಾರತೀಯ ಪ್ರಜೆಗಳ ಪ್ರಯಾಣವನ್ನು ಜೋರ್ಡಾನ್ ಮತ್ತು ಈಜಿಪ್ಟ್ ಮೂಲಕ ಭಾರತಕ್ಕೆ ಸುಗಮಗೊಳಿಸಲಾಗುತ್ತಿದೆ.
  • ಇರಾಕ್ ವಾಯುಪ್ರದೇಶವು ಸೀಮಿತ ವಿಮಾನ ಕಾರ್ಯಾಚರಣೆಗಳೊಂದಿಗೆ ಮುಕ್ತವಾಗಿದೆ. ಭಾರತೀಯ ಪ್ರಜೆಗಳ ಪ್ರಯಾಣವನ್ನು ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮೂಲಕ ಭಾರತಕ್ಕೆ ಸುಗಮಗೊಳಿಸಲಾಗುತ್ತಿದೆ.

ಲೆಬನಾನ್ ಕುರಿತ ಹೇಳಿಕೆ:

ಲೆಬನಾನ್‌ನಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕರು ಸಾವು-ನೋವುಗೀಡಾಗಿರುವ ವರದಿಗಳ ಬಗ್ಗೆ ನಮಗೆ ತೀವ್ರ ಕಳವಳವಿದೆ.

ಲೆಬನಾನ್‌ನ ಶಾಂತಿ ಮತ್ತು ಭದ್ರತೆಗೆ ಶ್ರಮಿಸುತ್ತಿರುವ UNIFIL ಗೆ ಸೈನಿಕರನ್ನು ಕಳುಹಿಸಿರುವ ದೇಶವಾಗಿ, ಅಲ್ಲಿನ ಬೆಳವಣಿಗೆಗಳು ನಮಗೆ ತುಂಬಾ ಅಸಮಾಧಾನ ತಂದಿವೆ.

ನಾಗರಿಕರ ರಕ್ಷಣೆಯೇ ಪ್ರಮುಖ ಆದ್ಯತೆಯಾಗಬೇಕು ಎಂದು ಭಾರತ ಯಾವಾಗಲೂ ಒತ್ತಿಹೇಳಿದೆ. ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುವುದು ಮತ್ತು ರಾಷ್ಟ್ರಗಳ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದು ಅತ್ಯಗತ್ಯ.

ಸುರಕ್ಷತೆ ಮತ್ತು ಭದ್ರತೆಗಾಗಿ ಭಾರತೀಯ ಸಮುದಾಯದೊಂದಿಗೆ ಲೆಬನಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು ನಿರಂತರ ಸಂಪರ್ಕದಲ್ಲಿದೆ.

 

*****


(ಪ್ರಕಟಣೆ ಐ.ಡಿ.: 2251043) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Gujarati , Odia , Tamil , Telugu , Malayalam