ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತೀಯ ಸಾಂಸ್ಕೃತಿಕ ವಿಷಯಗಳ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸಲು ಐಸಿಸಿಆರ್ ನೊಂದಿಗೆ ದೂರದರ್ಶನ (ಪ್ರಸಾರ ಭಾರತಿ) ಒಪ್ಪಂದಕ್ಕೆ ಸಹಿ


ಸಾಂಸ್ಕೃತಿಕ ವಿಷಯಗಳ ಬಹು-ಪ್ಲಾಟ್‌ಫಾರ್ಮ್ ಪ್ರಸರಣಕ್ಕೆ ಪಾಲುದಾರಿಕೆ; ಜಾಗತಿಕ ತಲುಪುವಿಕೆ ಮತ್ತು ಡಿಜಿಟಲ್ ವಿಸ್ತರಣೆಯ ಮೇಲೆ ಗಮನ

ಪ್ರಕಟಣಾ ದಿನಾಂಕ: 09 APR 2026 6:51PM by PIB Bengaluru

ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ ಮತ್ತು ಜಾಗತಿಕ ವ್ಯಾಪ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ದೂರದರ್ಶನ (ಪ್ರಸಾರ ಭಾರತಿ) ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್) ಏಪ್ರಿಲ್ 7, 2026 ರಂದು ನವದೆಹಲಿಯ ದೂರದರ್ಶನ ಭವನದಲ್ಲಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ.

ದೂರದರ್ಶನದ ಮಹಾನಿರ್ದೇಶಕರಾದ ಶ್ರೀ ಕೆ. ಸತೀಶ್ ನಂಬೂದರಿಪಾಡ್ ಮತ್ತು ಐಸಿಸಿಆರ್ ಮಹಾನಿರ್ದೇಶಕರಾದ ಶ್ರೀಮತಿ ಕೆ. ನಂದಿನಿ ಸಿಂಗ್ಲಾ ಅವರು ಎರಡೂ ಸಂಸ್ಥೆಗಳ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ದೂರದರ್ಶನ (ಪ್ರಸಾರ ಭಾರತಿ) ಮತ್ತು ಐಸಿಸಿಆರ್‌‌ ನ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಪಾಲುದಾರಿಕೆಯು ಐಸಿಸಿಆರ್ ಒದಗಿಸುವ ಸಾಂಸ್ಕೃತಿಕ ವಿಷಯಗಳ ವ್ಯಾಪ್ತಿಯನ್ನು ಹೆಚ್ಚಿಸಲು ದೂರದರ್ಶನದ (ಪ್ರಸಾರ ಭಾರತಿ) ವ್ಯಾಪಕವಾದ ದೂರದರ್ಶನ, ರೇಡಿಯೋ ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ವಿದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು, ದೂತಾವಾಸಗಳು ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರಗಳು ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೆಯೇ ಐಸಿಸಿಆರ್ ಪ್ರಧಾನ ಕಚೇರಿ ಮತ್ತು ಭಾರತದಾದ್ಯಂತ ಇರುವ ಅದರ ವಲಯ ಹಾಗೂ ಪ್ರಾದೇಶಿಕ ಕಚೇರಿಗಳು ನಡೆಸುವ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ.

ತಿಳುವಳಿಕೆ ಒಪ್ಪಂದದ ಪ್ರಕಾರ, ಐಸಿಸಿಆರ್ ಸಾಂಸ್ಕೃತಿಕ ವಿಷಯಗಳು ಮತ್ತು ಪ್ರದರ್ಶನಗಳನ್ನು ಒದಗಿಸುತ್ತದೆ, ಹಾಗೆಯೇ ದೂರದರ್ಶನ (ಪ್ರಸಾರ ಭಾರತಿ) ಅವುಗಳನ್ನು ದೂರದರ್ಶನ ವಾಹಿನಿಗಳು, ರೇಡಿಯೋ ಜಾಲಗಳು, ಒಟಿಟಿ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಬಹು ವೇದಿಕೆಗಳಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ. ಈ ಒಪ್ಪಂದವು ವಿದೇಶಗಳಲ್ಲಿರುವ ಭಾರತೀಯ ಮಿಷನ್‌ ಗಳಿಂದ ಸ್ವೀಕರಿಸಲಾದ ರೆಕಾರ್ಡ್ ಮಾಡಲಾದ ಸಾಂಸ್ಕೃತಿಕ ವಿಷಯಗಳ ಪ್ರಸಾರಕ್ಕೂ ಅನುಕೂಲ ಮಾಡಿಕೊಡುತ್ತದೆ, ಆ ಮೂಲಕ ಜಗತ್ತಿನಾದ್ಯಂತ ಭಾರತದ ಸಾಂಸ್ಕೃತಿಕ ಅಭಿವ್ಯಕ್ತಿಗಳಿಗೆ ಹೆಚ್ಚಿನ ಪ್ರವೇಶವನ್ನು ಖಚಿತಪಡಿಸುತ್ತದೆ.

ಈ ಒಪ್ಪಂದದ ಒಂದು ಪ್ರಮುಖ ವೈಶಿಷ್ಟ್ಯವೆಂದರೆ ಡಿಜಿಟಲ್ ಹಕ್ಕುಗಳು ಸೇರಿದಂತೆ ವಿಷಯದ (ಕಂಟೆಂಟ್)‌ ಮಾಲೀಕತ್ವದ ಹಕ್ಕುಗಳನ್ನು ಶಾಶ್ವತವಾಗಿ ಜಂಟಿಯಾಗಿ ಹೊಂದುವ ನಿಬಂಧನೆಯಾಗಿದೆ. ಇದು ಎರಡೂ ಸಂಸ್ಥೆಗಳಿಗೆ ದೀರ್ಘಕಾಲೀನ ಬಳಕೆಗಾಗಿ ವಿಷಯವನ್ನು ಆರ್ಕೈವ್ ಮಾಡಲು ಮತ್ತು ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ. ದೂರದರ್ಶನ (ಪ್ರಸಾರ ಭಾರತಿ) ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಕಾರ್ಯಕ್ರಮದ ಪೂರ್ವ ಪ್ರಚಾರ ಮತ್ತು ವಿವಿಧ ಪ್ಲಾಟ್‌ಫಾರ್ಮ್‌ ಗಳಲ್ಲಿ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಿದೆ.

ಇದಲ್ಲದೆ, ಈ ಸಹಯೋಗದ ಅಡಿಯಲ್ಲಿ ಸೃಜನೆಯಾದ ವಿಷಯಗಳಿಂದ ಹಣಗಳಿಸುವ ಅವಕಾಶಗಳನ್ನು ಅನ್ವೇಷಿಸಲು ಈ ತಿಳುವಳಿಕೆ ಪತ್ರವು ದೂರದರ್ಶನಕ್ಕೆ (ಪ್ರಸಾರ ಭಾರತಿ) ಅಧಿಕಾರ ನೀಡುತ್ತದೆ, ಇದು ಸಾಂಸ್ಕೃತಿಕ ಪ್ರಸಾರ ಉಪಕ್ರಮಗಳ ಸುಸ್ಥಿರತೆಗೆ ಕೊಡುಗೆ ನೀಡುತ್ತದೆ.

ಈ ಒಪ್ಪಂದವು ಮೂರು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿರುತ್ತದೆ ಮತ್ತು ಪರಸ್ಪರ ಒಪ್ಪಿಗೆಯ ಮೂಲಕ ವಿಸ್ತರಿಸುವ ನಿಬಂಧನೆಯನ್ನು ಹೊಂದಿದೆ. ಈ ಸಹಯೋಗವು ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ದೃಶ್ಯಗೋಚರತೆ ಮತ್ತು ಪ್ರವೇಶವನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ, ಜೊತೆಗೆ ಸಾಂಸ್ಕೃತಿಕ ಪ್ರಚಾರದ ಪ್ರಯತ್ನಗಳನ್ನು ಸಮಕಾಲೀನ ಮಾಧ್ಯಮ ವೇದಿಕೆಗಳು ಮತ್ತು ಜಾಗತಿಕ ಪ್ರೇಕ್ಷಕರೊಂದಿಗೆ ಸಮನ್ವಯಗೊಳಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2250603) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Manipuri , Assamese , Punjabi , Gujarati , Telugu , Telugu , Malayalam