ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮಗೋಷ್ಠಿ


ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಹಾರ ಭದ್ರತೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ

ಆಹಾರ ಪದಾರ್ಥಗಳ ಬೆಲೆ ಮತ್ತು ಪೂರೈಕೆಯ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂವಹನ ಮತ್ತು ಮಾಹಿತಿ ವಿನಿಮಯವನ್ನು ಸುಲಭಗೊಳಿಸಲು ಗ್ರಾಹಕ ವ್ಯವಹಾರಗಳ ಇಲಾಖೆಯು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ

ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಯಾವುದೇ ತುರ್ತು ಅಗತ್ಯಗಳಿಗಾಗಿ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಕ್ಕಿ ಮತ್ತು ಗೋಧಿಯ ಸಮರ್ಪಕ ಹೆಚ್ಚುವರಿ ದಾಸ್ತಾನು ಲಭ್ಯವಿದೆ

ಆನ್‌ಲೈನ್ ಎಲ್‌ ಪಿ ಜಿ ಬುಕಿಂಗ್‌ ಗಳು ಸುಮಾರು ಶೇ. 97 ಕ್ಕೆ ಏರಿಕೆಯಾಗಿವೆ

ಗೃಹಬಳಕೆ ಎಲ್‌ ಪಿ ಜಿ ಸಿಲಿಂಡರ್ ವಿತರಣೆಯು ಸಹಜವಾಗಿದ್ದು, 2026ರ ಮಾರ್ಚ್ 1 ರಿಂದ ಈವರೆಗೆ ಮನೆಗಳಿಗೆ 18 ಕೋಟಿಗೂ ಹೆಚ್ಚು ಸಿಲಿಂಡರ್‌ ಗಳನ್ನು ತಲುಪಿಸಲಾಗಿದೆ

ದೇಶಾದ್ಯಂತ 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳಿಗಾಗಿ 550 ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿದೆ; ಈ ಶಿಬಿರಗಳಲ್ಲಿ 6,700 ಕ್ಕೂ ಹೆಚ್ಚು ಸಿಲಿಂಡರ್‌ ಗಳು ಮಾರಾಟವಾಗಿವೆ

ಮೂವರು ಸದಸ್ಯರ ಸಮಿತಿಯು ರಾಜ್ಯ ಅಧಿಕಾರಿಗಳು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ

ಕಳೆದ ಎರಡು ದಿನಗಳಲ್ಲಿ 'ಗ್ರೀನ್ ಸಾನ್ವಿ' ಮತ್ತು 'ಗ್ರೀನ್ ಆಶಾ' ಎಂಬ ಎರಡು ಭಾರತೀಯ ಧ್ವಜದ ಎಲ್‌ ಪಿ ಜಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ

ಗಲ್ಫ್ ಮತ್ತು ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ; ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಕಲ್ಯಾಣವು ಪ್ರಮುಖ ಆದ್ಯತೆಯಾಗಿದೆ

ಪ್ರಕಟಣಾ ದಿನಾಂಕ: 06 APR 2026 6:03PM by PIB Bengaluru

 ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವ ನಿರಂತರ ಪ್ರಯತ್ನದ ಭಾಗವಾಗಿ, ಭಾರತ ಸರ್ಕಾರವು ಇಂದು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಠಿಯನ್ನು ನಡೆಸಿತು. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಪ್ರತಿನಿಧಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿರುವ ಭಾರತೀಯ ನಾಗರಿಕರಿಗೆ ನೆರವು ಹಾಗೂ ವಿವಿಧ ವಲಯಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಆಹಾರ ಭದ್ರತೆಯ ಸಿದ್ಧತೆ ಮತ್ತು ಅಗತ್ಯ ವಸ್ತುಗಳ ಬೆಲೆಗಳ ಬಗ್ಗೆ ಮಾಹಿತಿಗಳನ್ನು ನೀಡಿತು.

ಆಹಾರ ಭದ್ರತೆ ಮತ್ತು ಬೆಲೆಗಳ ಮಾಹಿತಿ

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಅಗತ್ಯ ಆಹಾರ ಪದಾರ್ಥಗಳ ಲಭ್ಯತೆ ಮತ್ತು ಚಾಲ್ತಿಯಲ್ಲಿರುವ ಬೆಲೆ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತು. ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಮಾರುಕಟ್ಟೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಸಹ ವಿವರಿಸಲಾಯಿತು. ಸಚಿವಾಲಯವು ಹೇಳಿದ್ದೆಂದರೆ:

ಆಹಾರ ಭದ್ರತಾ ಸಿದ್ಧತೆ:

  • ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರವು ಆಹಾರ ಭದ್ರತೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
  • ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಹಾಗೂ ಯಾವುದೇ ತುರ್ತು ಅಗತ್ಯಗಳನ್ನು ಪೂರೈಸಲು ಅಕ್ಕಿ ಮತ್ತು ಗೋಧಿಯ ಸಮರ್ಪಕ ಹೆಚ್ಚುವರಿ ದಾಸ್ತಾನು ಲಭ್ಯವಿದೆ.
  • ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು ದುರ್ಬಲ ಜನಸಂಖ್ಯೆಗೆ ಆಹಾರ ಧಾನ್ಯಗಳ ಲಭ್ಯತೆಯನ್ನು ಖಚಿತಪಡಿಸುವುದನ್ನು ಮುಂದುವರೆಸಿದೆ.

ಮಾರುಕಟ್ಟೆ ಹಸ್ತಕ್ಷೇಪಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ):

  • ಸರ್ಕಾರವು ಆಹಾರ ಧಾನ್ಯಗಳ ಬೆಲೆಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ ಮತ್ತು ಅಗತ್ಯವಿದ್ದಾಗ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) (ಒ ಎಂ ಎಸ್‌ ಎಸ್‌ - ಡಿ) ಮೂಲಕ ಮಾರುಕಟ್ಟೆ ಹಸ್ತಕ್ಷೇಪಗಳನ್ನು ಕೈಗೊಳ್ಳುತ್ತದೆ.
  • ಒ ಎಂ ಎಸ್‌ ಎಸ್‌ - ಡಿ ಅಡಿಯಲ್ಲಿ, ಎಫ್‌ ಸಿ ಐ ಪೂರೈಕೆಯನ್ನು ಹೆಚ್ಚಿಸಲು, ಬೆಲೆಗಳನ್ನು ಸ್ಥಿರಗೊಳಿಸಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚುವರಿ ಗೋಧಿ ಮತ್ತು ಅಕ್ಕಿಯನ್ನು ಬಿಡುಗಡೆ ಮಾಡುತ್ತದೆ.
  • ಅಗತ್ಯವಿದ್ದಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳಲು ಎಫ್‌ ಸಿ ಐ ಬಳಿ ಸಮರ್ಪಕ ದಾಸ್ತಾನು ಲಭ್ಯವಿದೆ.
  • ಈ ಯೋಜನೆಯು ಹೆಚ್ಚುವರಿ ಅಗತ್ಯಗಳನ್ನು ಪೂರೈಸಲು ರಾಜ್ಯ ಸರ್ಕಾರಗಳಿಗೆ ಸಬ್ಸಿಡಿ ದರದಲ್ಲಿ ಅಕ್ಕಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.

ಖರೀದಿ – ಆರ್ಎಂ ಎಸ್ 2026–27:

  • 2026-27ರ ರಬಿ ಮಾರುಕಟ್ಟೆ ಹಂಗಾಮಿನಲ್ಲಿ (ಆರ್‌ ಎಂ ಎಸ್) ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆಯಡಿಯಲ್ಲಿ ಗೋಧಿ ಖರೀದಿ ಪ್ರಾರಂಭವಾಗಿದೆ, ಇದು ಮುಖ್ಯವಾಗಿ ರಾಜ್ಯ ಸರ್ಕಾರಿ ಏಜೆನ್ಸಿಗಳ ಮೂಲಕ ನಡೆಯುತ್ತಿದೆ.
  • ಇಲಾಖೆಯು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ಸಿದ್ಧತೆಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದೆ.
  • ಖರೀದಿ ಕಾರ್ಯಾಚರಣೆಗಳಿಗಾಗಿ ಸಮರ್ಪಕ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.

ಆಹಾರ ಧಾನ್ಯಗಳ ಪ್ಯಾಕೇಜಿಂಗ್:

  • 2026-27ರ ಆರ್‌ ಎಂ ಎಸ್ ಅವಧಿಯಲ್ಲಿ ಪ್ಯಾಕೇಜಿಂಗ್ ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
  • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯ ಸಮನ್ವಯದೊಂದಿಗೆ, ಇಲಾಖೆಯು ಪ್ಯಾಕೇಜಿಂಗ್ ಮೂಲಗಳನ್ನು ವೈವಿಧ್ಯಗೊಳಿಸುತ್ತಿದೆ ಮತ್ತು ಯಾವುದೇ ಸಂಭಾವ್ಯ ಕೊರತೆಯನ್ನು ನೀಗಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಖಾದ್ಯ ತೈಲ ಪರಿಸ್ಥಿತಿ:

  • ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ಖಾದ್ಯ ತೈಲಗಳ ದೇಶೀಯ ಲಭ್ಯತೆ ಸುಗಮವಾಗಿದೆ.
  • ಇಂಡೋನೇಷ್ಯಾ, ಮಲೇಷ್ಯಾ, ಅರ್ಜೆಂಟೀನಾ ಮತ್ತು ಬ್ರೆಜಿಲ್ ಸೇರಿದಂತೆ ಪ್ರಮುಖ ಪಾಲುದಾರ ದೇಶಗಳಿಂದ ಆಮದು ಸ್ಥಿರವಾಗಿ ಮುಂದುವರಿದಿದೆ.
  • ಸುಧಾರಿತ ಸಾಸಿವೆ ಉತ್ಪಾದನೆಯು ದೇಶೀಯ ಪೂರೈಕೆಯನ್ನು ಬಲಪಡಿಸಿದೆ.
  • ಒಟ್ಟಾರೆಯಾಗಿ ಖಾದ್ಯ ತೈಲ ಪೂರೈಕೆ ಸ್ಥಿರವಾಗಿದೆ ಮತ್ತು ಅಗತ್ಯವಿದ್ದಲ್ಲಿ ಹಸ್ತಕ್ಷೇಪ ಮಾಡಲು ಸಿದ್ಧತೆಯೊಂದಿಗೆ ಸರ್ಕಾರವು ನಿಕಟವಾಗಿ ಗಮನಿಸುತ್ತಿದೆ.

ಸಕ್ಕರೆ ವಲಯ:

  • ಸಮರ್ಪಕ ಸಕ್ಕರೆ ಬಫರ್ ಸ್ಟಾಕ್ ಲಭ್ಯವಿದೆ ಮತ್ತು 2025-26ರಲ್ಲಿ ಸಕ್ಕರೆ ಉತ್ಪಾದನೆಯು ಸಾಕಷ್ಟಿರುವ ನಿರೀಕ್ಷೆಯಿದೆ.
  • ಸುಮಾರು 15.80 ಎಲ್‌ ಎಂ ಟಿ ಸಕ್ಕರೆ ರಫ್ತಿಗೆ ಅನುಮತಿ ನೀಡಲಾಗಿದೆ, ಅದರಲ್ಲಿ 3.73 ಎಲ್‌ ಎಂ ಟಿ ಈಗಾಗಲೇ ರಫ್ತು ಮಾಡಲಾಗಿದೆ.
  • ಶ್ರೀಲಂಕಾ, ಪಶ್ಚಿಮ ಏಷ್ಯಾ ಮತ್ತು ಪೂರ್ವ ಆಫ್ರಿಕಾ ಪ್ರಮುಖ ರಫ್ತು ತಾಣಗಳಾಗಿವೆ.
  • ಕಳೆದ ಮೂರು ವರ್ಷಗಳಿಂದ ಹಣದುಬ್ಬರವು ಸುಮಾರು ಶೇ. 3 ರಷ್ಟಿದ್ದು, ಚಿಲ್ಲರೆ ಸಕ್ಕರೆ ಬೆಲೆಗಳು ಸ್ಥಿರವಾಗಿವೆ.

ಅಗತ್ಯ ವಸ್ತುಗಳ ಬೆಲೆಗಳು:

  • ಗ್ರಾಹಕ ವ್ಯವಹಾರಗಳ ಇಲಾಖೆಯು ದೇಶಾದ್ಯಂತ 578 ಕೇಂದ್ರಗಳಿಂದ ವರದಿಯಾಗುವ 40 ಆಹಾರ ಪದಾರ್ಥಗಳ ದೈನಂದಿನ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.
  • ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಲೆ ಪ್ರವೃತ್ತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
  • ಇದುವರೆಗೆ, ಯಾವುದೇ ಅಸಹಜ ಏರಿಳಿತ ಕಂಡುಬಂದಿಲ್ಲ ಮತ್ತು ಹೆಚ್ಚಿನ ಸರಕುಗಳ ಬೆಲೆಗಳು ಸ್ಥಿರವಾಗಿದ್ದು, ಸಮರ್ಪಕ ಲಭ್ಯತೆಯನ್ನು ಸೂಚಿಸುತ್ತವೆ.
  • ಅಗತ್ಯ ಆಹಾರ ಪದಾರ್ಥಗಳಲ್ಲಿ ಪೂರೈಕೆ ಒತ್ತಡ ಅಥವಾ ಹಣದುಬ್ಬರದ ಯಾವುದೇ ಪುರಾವೆಗಳಿಲ್ಲ.

ದ್ವಿದಳ ಧಾನ್ಯಗಳ ಲಭ್ಯತೆ:

  • ದ್ವಿದಳ ಧಾನ್ಯಗಳ ಉತ್ಪಾದನೆಯು ಕಳೆದ ವರ್ಷದ 257 ಎಲ್‌ ಎಂ ಟಿ ಗೆ ಹೋಲಿಸಿದರೆ ಈ ವರ್ಷ ಸುಮಾರು 266 ಎಲ್‌ ಎಂ ಟಿ ಯಷ್ಟು ಹೆಚ್ಚಾಗುವ ಅಂದಾಜಿದೆ.
  • ಸರ್ಕಾರದ ದ್ವಿದಳ ಧಾನ್ಯಗಳ ದಾಸ್ತಾನು ಸುಮಾರು 28 ಎಲ್‌ ಎಂ ಟಿ ಇದೆ, ಬೆಲೆ ಬೆಂಬಲ ಯೋಜನೆಯಡಿ ತೊಗರಿ ಮತ್ತು ರಬಿ ದ್ವಿದಳ ಧಾನ್ಯಗಳ ಖರೀದಿ ನಡೆಯುತ್ತಿದೆ.
  • ಇದುವರೆಗೆ ಸುಮಾರು 3.21 ಎಲ್‌ ಎಂ ಟಿ ತೊಗರಿ ಮತ್ತು 5.71 ಎಲ್‌ ಎಂ ಟಿ ಕಡಲೆ ಖರೀದಿಸಲಾಗಿದೆ.
  • ಪೂರೈಕೆ ನಮ್ಯತೆ ಮತ್ತು ಸ್ಥಿರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 2026-27ರ ದ್ವಿದಳ ಧಾನ್ಯಗಳ ಆಮದು ನೀತಿಯು 2025-26ರ ಅಸ್ತಿತ್ವದಲ್ಲಿರುವ ಚೌಕಟ್ಟನ್ನು ಮುಂದುವರಿಸಿದೆ.
  • ತೊಗರಿ ಮತ್ತು ಉದ್ದಿನ ಬೇಳೆ ಆಮದನ್ನು 31 ಮಾರ್ಚ್ 2027 ರವರೆಗೆ 'ಮುಕ್ತ' ವರ್ಗದ ಅಡಿಯಲ್ಲಿ ಅನುಮತಿಸಲಾಗಿದೆ, ಆದರೆ ಕಡಲೆ ಮತ್ತು ಮಸೂರ್ ಆಮದುಗಳಿಗೆ ಶೇ. 10 ಸುಂಕ ಮತ್ತು ಹಳದಿ ಬಟಾಣಿ ಮೇಲೆ ಶೇ. 30 ಸುಂಕ ವಿಧಿಸಲಾಗುತ್ತದೆ.

ತೋಟಗಾರಿಕಾ ಬೆಳೆಗಳ ಲಭ್ಯತೆ (ಆಲೂಗಡ್ಡೆ, ಟೊಮ್ಯಾಟೊ, ಈರುಳ್ಳಿ):

  • ಆಲೂಗಡ್ಡೆ, ಟೊಮ್ಯಾಟೊ ಮತ್ತು ಈರುಳ್ಳಿಯಂತಹ ಪ್ರಮುಖ ತೋಟಗಾರಿಕಾ ಬೆಳೆಗಳ ಉತ್ಪಾದನೆಯು ದೇಶೀಯ ಬೇಡಿಕೆಯನ್ನು ಪೂರೈಸಲು ಸಾಕಷ್ಟಿದೆ.
  • ಆಲೂಗಡ್ಡೆ ಉತ್ಪಾದನೆಯು ಸುಮಾರು 584 ಎಲ್‌ ಎಂ ಟಿ (ಕಳೆದ ವರ್ಷ 586 ಎಲ್‌ ಎಂ ಟಿ), ಟೊಮ್ಯಾಟೊ ಸುಮಾರು 227 ಎಲ್‌ ಎಂ ಟಿ ಮತ್ತು ಈರುಳ್ಳಿ ಸುಮಾರು 273 ಎಲ್‌ ಎಂ ಟಿ ಎಂದು ಅಂದಾಜಿಸಲಾಗಿದೆ.
  • ಭಾರತ ಸರ್ಕಾರವು 2026-27ರಲ್ಲಿ ಈರುಳ್ಳಿಗಾಗಿ 2 ಎಲ್‌ ಎಂ ಟಿ ಬೆಲೆ ಸ್ಥಿರೀಕರಣ ಬಫರ್ ಗುರಿಯನ್ನು ನಿಗದಿಪಡಿಸಿದೆ, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಲಿಮಿಟೆಡ್ (ನಾಫೆಡ್) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಲಿಮಿಟೆಡ್ (ಎನ್‌ ಸಿ ಸಿ ಎಫ್) ಸಂಗ್ರಹಣಾ ಸಿದ್ಧತೆಗಳನ್ನು ಪ್ರಾರಂಭಿಸಿವೆ.
  • ಬಫರ್ ಸ್ಟಾಕ್ ಮತ್ತು ಸಂಗ್ರಹಣೆಯು ಮಂಡಿ ಬೆಲೆಗಳನ್ನು ಬೆಂಬಲಿಸುತ್ತದೆ ಮತ್ತು ಬೆಲೆ ಏರಿಳಿತವನ್ನು ನಿಯಂತ್ರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮೇಲ್ವಿಚಾರಣೆ ಮತ್ತು ಜಾರಿ:

  • ಆಹಾರ ಪದಾರ್ಥಗಳ ಬೆಲೆ ಮತ್ತು ಪೂರೈಕೆಯ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂವಹನ ಮತ್ತು ಮಾಹಿತಿ ವಿನಿಮಯವನ್ನು ಸುಲಭಗೊಳಿಸಲು ಗ್ರಾಹಕ ವ್ಯವಹಾರಗಳ ಇಲಾಖೆಯು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
  • ನಿಯಂತ್ರಣ ಕೊಠಡಿಯು ಅಗತ್ಯ ವಸ್ತುಗಳ ಕಾಯ್ದೆ, 1955 ರ ಜಾರಿಯನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ, ಇದರಲ್ಲಿ ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯ ವಿರುದ್ಧದ ಕ್ರಮಗಳು ಸೇರಿವೆ.
  • ದೇಶಾದ್ಯಂತ 17 ಭಾಷೆಗಳಲ್ಲಿ ಲಭ್ಯವಿರುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ-1915 ರಲ್ಲಿ ಸ್ವೀಕರಿಸಲಾಗುತ್ತಿರುವ ದೂರುಗಳ ಬಗ್ಗೆ ಇಲಾಖೆಯು ನಿಕಟ ನಿಗಾ ಇರಿಸಿದೆ. ವಾಟ್ಸಾಪ್ ಮತ್ತು INGRAM ಪೋರ್ಟಲ್ ಸೇರಿದಂತೆ ಬಹು ವೇದಿಕೆಗಳ ಮೂಲಕ ಸಹಾಯವಾಣಿ ಲಭ್ಯವಿದ್ದು, ಗ್ರಾಹಕರು ಸುಲಭವಾಗಿ ದೂರುಗಳನ್ನು ದಾಖಲಿಸಲು ಅನುವು ಮಾಡಿಕೊಡುತ್ತದೆ.

ಇಂಧನ ಪೂರೈಕೆ ಮತ್ತು ಲಭ್ಯತೆ

ಚಾಲ್ತಿಯಲ್ಲಿರುವ ಇಂಧನ ಪೂರೈಕೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದ್ದು, ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ ನಿರಂತರವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿವರಿಸಲಾಯಿತು. ಈ ಕೆಳಗಿನ ಅಂಶಗಳನ್ನು ಹಂಚಿಕೊಳ್ಳಲಾಯಿತು:

ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ:

  • ನಾಗರಿಕರು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಯನ್ನು ಗಾಬರಿಯಿಂದ ಖರೀದಿಸುವುದನ್ನು ತಪ್ಪಿಸಲು ಮತ್ತು ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಲು ಸೂಚಿಸಲಾಗಿದೆ.
  • ಎಲ್‌ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ಪ್ಲಾಟ್‌ಫಾರ್ಮ್‌ ಗಳನ್ನು ಬಳಸಲು ಮತ್ತು ವಿತರಕರನ್ನು ಭೇಟಿ ಮಾಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
  • ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಸ್ಟೌವ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತದೆ.
  • ಪ್ರಸ್ತುತ ಪರಿಸ್ಥಿತಿಯಲ್ಲಿ ಇಂಧನವನ್ನು ಉಳಿಸಲು ಎಲ್ಲಾ ನಾಗರಿಕರನ್ನು ಒತ್ತಾಯಿಸಲಾಗಿದೆ.

ಸರ್ಕಾರದ ಸಿದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು:

  • ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಸರ್ಕಾರವು ವಿಶೇಷವಾಗಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಗೃಹಬಳಕೆ ಎಲ್‌ ಪಿ ಜಿ ಮತ್ತು ಪಿ ಎನ್‌ ಜಿ ಪೂರೈಕೆಗೆ ಆದ್ಯತೆ ನೀಡಿದೆ.
  • ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಸರ್ಕಾರವು ಈಗಾಗಲೇ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತಂದಿದೆ, ಇದರಲ್ಲಿ ಸಂಸ್ಕರಣಾಗಾರ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅಂತರವನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿದೆ.
  • ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
  • ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ವಿತರಣೆ ಮಾಡಲು ರಾಜ್ಯಗಳಿಗೆ ಹೆಚ್ಚುವರಿ ಕಲ್ಲಿದ್ದಲು ಪೂರೈಸುವಂತೆ ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್‌ ಗೆ ನಿರ್ದೇಶನ ನೀಡಿದೆ.
  • ಗೃಹಬಳಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಸುಲಭಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
  • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯು ಸಾಕಷ್ಟು ಎಲ್‌ ಪಿ ಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಕ್ರಮಗಳನ್ನು ಹೈಲೈಟ್ ಮಾಡಿತು ಮತ್ತು ಅಕ್ರಮ ದಾಸ್ತಾನು, ದಾರಿ ತಪ್ಪಿಸುವುದು ಮತ್ತು ತಪ್ಪು ಮಾಹಿತಿಯ ವಿರುದ್ಧ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ನಿರ್ದೇಶಿಸಿತು. ವಲಸೆ ಕಾರ್ಮಿಕರಿಗೆ ಎಫ್‌ ಟಿ ಎಲ್ ಎಲ್‌ ಪಿ ಜಿ ಪೂರೈಕೆಯ ವರದಿಗಳಿಗೆ ಸಂಬಂಧಿಸಿದಂತೆ, ವಲಸಿಗರಿಗೆ ಬಾಧಿಸುವಂತಹ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ರಾಜ್ಯಗಳು ಸ್ಪಷ್ಟಪಡಿಸಿವೆ. ಸ್ಥಳೀಯ ಅವಶ್ಯಕತೆಗಳ ಆಧಾರದ ಮೇಲೆ 5 ಕೆಜಿ ಎಫ್‌ ಟಿ ಎಲ್ ಎಲ್‌ ಪಿ ಜಿ ಸಿಲಿಂಡರ್‌ಗಳ ಗುರಿ ವಿತರಣೆಯನ್ನು ನಿರ್ವಹಿಸುವುದನ್ನು ರಾಜ್ಯಗಳು ಪರಿಗಣಿಸಬಹುದು ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಮತ್ತು ಸಾಂಸ್ಥಿಕ ಕಾರ್ಯವಿಧಾನ:

  • ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಕ್ರಮ ದಾಸ್ತಾನು ಹಾಗೂ ಕಾಳಸಂತೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
  • ಎಲ್ಲಾ ಮುಖ್ಯ ಕಾರ್ಯದರ್ಶಿಗಳು, ಎಸಿಎಸ್/ಪ್ರಧಾನ ಕಾರ್ಯದರ್ಶಿ/ಆಹಾರ ಮತ್ತು ನಾಗರಿಕ ಪೂರೈಕೆ ಕಾರ್ಯದರ್ಶಿಗಳಿಗೆ ಈ ಅಂಶಗಳ ಬಗ್ಗೆ ವಿನಂತಿಸಲಾಗಿದೆ-
    • ದೈನಂದಿನ ಪತ್ರಿಕಾ ಗೋಷ್ಠಿಗಳನ್ನು ನಡೆಸುವುದು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ನೀಡುವುದು.
    • ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿ / ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ಎದುರಿಸುವುದು.
    • ಜಿಲ್ಲಾಡಳಿತದಿಂದ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವುದು ಮತ್ತು ತೈಲ ಮಾರಾಟ ಕಂಪನಿಗಳ ಸಮನ್ವಯದೊಂದಿಗೆ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸುವುದು.
    • ತಮ್ಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆ ಆದೇಶಗಳನ್ನು ಹೊರಡಿಸುವುದು.
    • ರಾಜ್ಯಗಳಿಗೆ ಹಂಚಿಕೆಯಾದ ಹೆಚ್ಚುವರಿ ಸೀಮೆಎಣ್ಣೆಗಾಗಿ ಹಂಚಿಕೆ ಆದೇಶಗಳನ್ನು ಹೊರಡಿಸುವುದು.
    • ಪಿ ಎನ್‌ ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸುವುದು.
  • ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಕ್ರಮ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಗಟ್ಟಲು ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಿವೆ.
  • ಭಾರತ ಸರ್ಕಾರವು 27.03.2026 ಮತ್ತು 02.04.2026 ರಂದು ಬರೆದ ಪತ್ರದಲ್ಲಿ, ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಸಕ್ರಿಯ ಮತ್ತು ನಿಯಮಿತ ಸಾರ್ವಜನಿಕ ಸಂವಹನವನ್ನು ತೀವ್ರಗೊಳಿಸಬೇಕು, ಸೂಕ್ತ ಉನ್ನತ ಮಟ್ಟದಲ್ಲಿ ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸಬೇಕು ಮತ್ತು ತಪ್ಪು ಮಾಹಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಎಲ ಪಿ ಜಿ ಯ ಸಾಕಷ್ಟು ಲಭ್ಯತೆ ಮತ್ತು ಸುಗಮ ವಿತರಣೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಸಾಮಾಜಿಕ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನಿಖರವಾದ ಮಾಹಿತಿಯನ್ನು ಸಮಯೋಚಿತವಾಗಿ ಪ್ರಸಾರ ಮಾಡಬೇಕು ಎಂದು ವಿನಂತಿಸಿದೆ.
  • ಪ್ರಸ್ತುತ, 23 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಪತ್ರಿಕಾ ಗೋಷ್ಠಿಗಳನ್ನು ನಡೆಸುತ್ತಿವೆ.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು:

  • ಎಲ್‌ ಪಿ ಜಿ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಗಟ್ಟಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ.
  • 1 ಲಕ್ಷಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, 52,000 ಕ್ಕೂ ಹೆಚ್ಚು ಸಿಲಿಂಡರ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.
  • 850 ಕ್ಕೂ ಹೆಚ್ಚು ಎಫ್‌ ಐ ಆರ್‌ ಗಳನ್ನು ದಾಖಲಿಸಲಾಗಿದ್ದು, ಸುಮಾರು 220 ವ್ಯಕ್ತಿಗಳನ್ನು ಬಂಧಿಸಲಾಗಿದೆ.
  • ಸಾರ್ವಜನಿಕ ವಲಯದ ತೈಲ ಕಂಪನಿಗಳು ಅನಿರೀಕ್ಷಿತ ತಪಾಸಣೆಗಳನ್ನು ಬಲಪಡಿಸಿವೆ ಮತ್ತು 1,500 ಕ್ಕೂ ಹೆಚ್ಚು ಶೋ-ಕಾಸ್ ನೋಟಿಸ್‌ ಗಳನ್ನು ನೀಡಿವೆ, 118 ಎಲ್‌ ಪಿ ಜಿ ವಿತರಕರಿಗೆ ದಂಡ ವಿಧಿಸಿವೆ ಮತ್ತು 41 ವಿತರಕರನ್ನು ಅಮಾನತುಗೊಳಿಸಿವೆ.

ಎಲ್‌ ಪಿ ಜಿ ಪೂರೈಕೆ

ಗೃಹಬಳಕೆ ಎಲ್ಪಿ ಜಿ ಪೂರೈಕೆ ಸ್ಥಿತಿ:

  • ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದ ಎಲ್‌ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
  • ಎಲ್‌ ಪಿ ಜಿ ವಿತರಕರಲ್ಲಿ ದಾಸ್ತಾನು ಖಾಲಿಯಾದ ಯಾವುದೇ ವರದಿಯಾಗಿಲ್ಲ.
  • ಆನ್‌ಲೈನ್ ಎಲ್‌ ಪಿ ಜಿ ಬುಕಿಂಗ್ ಸುಮಾರು ಶೇ. 97 ಕ್ಕೆ ಏರಿದೆ.
  • ದಾರಿ ತಪ್ಪಿಸುವುದನ್ನು ತಡೆಯಲು ವಿತರಣಾ ದೃಢೀಕರಣ ಕೋಡ್ (ಡಿಎಸಿ) ಆಧಾರಿತ ವಿತರಣೆಗಳು ಸುಮಾರು ಶೇ. 90 ಕ್ಕೆ ಏರಿವೆ.
  • ಗೃಹಬಳಕೆ ಎಲ್‌ ಪಿ ಜಿ ಸಿಲಿಂಡರ್ ವಿತರಣೆಯು ಸಹಜವಾಗಿದ್ದು, 2026ರ ಮಾರ್ಚ್ 1 ರಿಂದ ಈವರೆಗೆ ಮನೆಗಳಿಗೆ 18 ಕೋಟಿಗೂ ಹೆಚ್ಚು ಸಿಲಿಂಡರ್‌ ಗಳನ್ನು ತಲುಪಿಸಲಾಗಿದೆ.

ವಾಣಿಜ್ಯ ಎಲ್ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:

ಔಷಧ ಇಲಾಖೆ, ಪಶುಸಂಗೋಪನೆ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಇಲಾಖೆ ಇತ್ಯಾದಿಗಳಿಗೆ ಪ್ರೊಪಿಲೀನ್, ಪಾಲಿಪ್ರೊಪಿಲೀನ್, ಐಸೊಪ್ರೊಪೈಲ್ ಆಲ್ಕೋಹಾಲ್, ಬ್ಯುಟಾಡೀನ್, ಬ್ಯುಟೈಲ್ ಅಕ್ರಿಲೇಟ್ ಮುಂತಾದ ಪೆಟ್ರೋಕೆಮಿಕಲ್ ಗಳ ಲಭ್ಯತೆಯ ಸಮಸ್ಯೆಗಳನ್ನು ಪರಿಶೀಲಿಸಲು ಜಂಟಿ ಕಾರ್ಯಕಾರಿ ಗುಂಪನ್ನು ರಚಿಸಲಾಗಿದೆ. ಇದು ಸಂಸ್ಕರಣಾಗಾರ ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣಗಳಿಂದ ಈ ವಲಯಗಳಿಗೆ ನಿರ್ದಿಷ್ಟ ಪ್ರಮಾಣದ ಸಿ3-ಸಿ4 ಅಣುಗಳನ್ನು ವರ್ಗಾಯಿಸಲು ಶಿಫಾರಸು ಮಾಡಿದೆ. ಈ ಗುಂಪು LDPE, LLDPE, HDPE ಮುಂತಾದ C2 ಆಧಾರಿತ ಉತ್ಪನ್ನಗಳಿಗೆ ಫೀಡ್‌ಸ್ಟಾಕ್ ಲಭ್ಯತೆ ಮತ್ತು ಕೆಳಮಟ್ಟದ ಘಟಕಗಳಿಗೆ ಅವುಗಳ ಪೂರೈಕೆಗಾಗಿ ಶಿಫಾರಸುಗಳನ್ನು ನೀಡಿದೆ.

  • ಒಟ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟದ ಸುಮಾರು ಶೇ. 70 ಕ್ಕೆ ಹೆಚ್ಚಿಸಲಾಗಿದೆ.
  • 23 ಮಾರ್ಚ್ 2026 ರಿಂದ, ಸುಮಾರು 6.75 ಲಕ್ಷ 5-ಕೆಜಿ ಮುಕ್ತ ವ್ಯಾಪಾರ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಮಾರಾಟ ಮಾಡಲಾಗಿದೆ.
  • ಸಾರ್ವಜನಿಕ ವಲಯದ ತೈಲ ಕಂಪನಿಗಳು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳಿಗಾಗಿ ಸುಮಾರು 550 ಜಾಗೃತಿ ಶಿಬಿರಗಳನ್ನು ಆಯೋಜಿಸಿವೆ.
  • ಈ ಶಿಬಿರಗಳಲ್ಲಿ 6,700 ಕ್ಕೂ ಹೆಚ್ಚು 5 ಕೆಜಿ ಎಫ್‌ ಟಿ ಎಲ್ ಸಿಲಿಂಡರ್‌ ಗಳು ಮಾರಾಟವಾಗಿವೆ.
  • ವಾಣಿಜ್ಯ ಎಲ್‌ ಪಿ ಜಿ ವಿತರಣೆಯನ್ನು ಯೋಜಿಸಲು ಐಒಸಿಎಲ್, ಎಚ್‌ ಪಿ ಸಿ ಎಲ್ ಮತ್ತು ಬಿಪಿಸಿಎಲ್‌ ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು ರಾಜ್ಯ ಅಧಿಕಾರಿಗಳು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
  • 14 ಮಾರ್ಚ್ 2026 ರಿಂದ ಸುಮಾರು 79,909 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ ಪಿ ಜಿ (42 ಲಕ್ಷಕ್ಕೂ ಹೆಚ್ಚು 19 ಕೆಜಿ ಸಿಲಿಂಡರ್‌ ಗಳಿಗೆ ಸಮಾನ) ಮಾರಾಟವಾಗಿದೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್ಜಿ ವಿಸ್ತರಣಾ ಉಪಕ್ರಮಗಳು:

  • ಗೃಹಬಳಕೆ ಪಿ ಎನ್‌ ಜಿ ಮತ್ತು ಸಿ ಎನ್‌ ಜಿ ಸಾರಿಗೆಗೆ ಶೇ. 100 ರಷ್ಟು ಪೂರೈಕೆ ಸೇರಿದಂತೆ ಆದ್ಯತೆಯ ವಲಯಗಳು ಸಂರಕ್ಷಿತ ಪೂರೈಕೆಯನ್ನು ಪಡೆಯುವುದನ್ನು ಮುಂದುವರಿಸಿವೆ.
  • ಕಾರ್ಯನಿರ್ವಹಿಸುತ್ತಿರುವ ಯೂರಿಯಾ ಸ್ಥಾವರಗಳಿಗೆ ಅನಿಲ ಪೂರೈಕೆಯು ಪ್ರಸ್ತುತ ಅವುಗಳ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇ. 70-75 ರಷ್ಟಿದೆ ಮತ್ತು ಇದನ್ನು 6 ಏಪ್ರಿಲ್ 2026 ರಿಂದ (ಇಂದಿನಿಂದ) ಸುಮಾರು ಶೇ. 90 ಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ.
  • ನಗರ ಅನಿಲ ವಿತರಣಾ (ಸಿಜಿಡಿ) ಜಾಲಗಳು ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು 6 ಏಪ್ರಿಲ್ 2026 ರಿಂದ ಹೆಚ್ಚುವರಿ ಶೇ. 10 ರಷ್ಟು ಹೆಚ್ಚಿಸಲಾಗುವುದು.
  • ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ ಸಂಪರ್ಕಗಳಿಗೆ ಆದ್ಯತೆ ನೀಡಲು ಸಿಜಿಡಿ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.
  • ಐಜಿಎಲ್‌, ಎಂಜಿಎಲ್‌, ಗೇಲ್‌ ಗ್ಯಾಸ್‌ ಮತ್ತು ಬಿಪಿಸಿಎಲ್‌ ಸೇರಿದಂತೆ ಸಿಜಿಡಿ ಕಂಪನಿಗಳು ಗೃಹಬಳಕೆ ಮತ್ತು ವಾಣಿಜ್ಯ ಪಿ ಎನ್‌ ಜಿ ಸಂಪರ್ಕಗಳಿಗೆ ಪ್ರೋತ್ಸಾಹಕಗಳನ್ನು ನೀಡುತ್ತಿವೆ.
  • ದೀರ್ಘಕಾಲೀನವಾಗಿ ಎಲ್‌ ಪಿ ಜಿಯಿಂದ ಪಿ ಎನ್‌ ಜಿ ಗೆ ಪರಿವರ್ತನೆಯಾಗಲು ಸಹಾಯ ಮಾಡುವ ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿಯ ಹೆಚ್ಚುವರಿ ಶೇ. 10 ಹಂಚಿಕೆಯನ್ನು ಭಾರತ ಸರ್ಕಾರವು ನೀಡಿದೆ.
  • ಶಾಲಾ, ಹಾಸ್ಟೆಲ್, ಸಮುದಾಯ ಅಡುಗೆ ಮನೆಗಳು ಮತ್ತು ಅಂಗನವಾಡಿ ಅಡುಗೆ ಮನೆಗಳನ್ನು ಪೈಪ್‌ಲೈನ್‌ ಗಳು ಲಭ್ಯವಿರುವಲ್ಲಿ ಐದು ದಿನಗಳೊಳಗೆ ಪಿ ಎನ್‌ ಜಿ ಮೂಲಕ ಸಂಪರ್ಕಿಸಲು ಪಿ ಎನ್‌ ಜಿ ಆರ್‌ ಬಿ ಸಿಜಿಡಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅರ್ಜಿಗಳನ್ನು ಆದ್ಯತೆಯ ಮೇಲೆ ಪ್ರಕ್ರಿಯೆಗೊಳಿಸಲು ಮೂರು ತಿಂಗಳ ಕಾಲ ಸಿಜಿಡಿ ಮೂಲಸೌಕರ್ಯಕ್ಕಾಗಿ ವೇಗವರ್ಧಿತ ಅನುಮೋದನೆ ಚೌಕಟ್ಟನ್ನು ಅಳವಡಿಸಿಕೊಂಡಿದೆ.
  • ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಆದೇಶ, 2026 ಅನ್ನು ಅಧಿಸೂಚಿಸಿದೆ. ಇದು ದೇಶಾದ್ಯಂತ ಪೈಪ್‌ಲೈನ್‌ ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಸುಗಮ ಮತ್ತು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ.
  • ದೇಶಾದ್ಯಂತ ಪೈಪ್‌ಲೈನ್‌ಗಳನ್ನು ಹಾಕಲು ಮತ್ತು ವಿಸ್ತರಿಸಲು, ಅನುಮೋದನೆಗಳು ಮತ್ತು ಭೂಮಿಗೆ ಪ್ರವೇಶದಲ್ಲಿನ ವಿಳಂಬವನ್ನು ಪರಿಹರಿಸಲು ಮತ್ತು ವಸತಿ ಪ್ರದೇಶಗಳನ್ನು ಒಳಗೊಂಡಂತೆ ನೈಸರ್ಗಿಕ ಅನಿಲ ಮೂಲಸೌಕರ್ಯದ ತ್ವರಿತ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ಈ ಆದೇಶವು ಸುವ್ಯವಸ್ಥಿತ ಮತ್ತು ಸಮಯಕ್ಕೆ ಸೀಮಿತವಾದ ಚೌಕಟ್ಟನ್ನು ಒದಗಿಸುತ್ತದೆ.
  • ಇದು ಪಿ ಎನ್‌ ಜಿ ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಶುದ್ಧ ಇಂಧನಗಳಿಗೆ ಪರಿವರ್ತನೆಯನ್ನು ಬೆಂಬಲಿಸುತ್ತದೆ, ಇದರಿಂದಾಗಿ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ ಎಂದು ನಿರೀಕ್ಷಿಸಲಾಗಿದೆ.
  • ರಕ್ಷಣಾ ವಸತಿ ಪ್ರದೇಶಗಳಲ್ಲಿ ಪಿ ಎನ್‌ ಜಿ ಮೂಲಸೌಕರ್ಯ ಸ್ಥಾಪನೆಯನ್ನು ತ್ವರಿತಗೊಳಿಸಲು ರಕ್ಷಣಾ ಸಚಿವಾಲಯವು 30 ಜೂನ್ 2026 ರವರೆಗೆ ಅಲ್ಪಾವಧಿಯ ನೀತಿ ಮಾರ್ಪಾಡುಗಳನ್ನು ಹೊರಡಿಸಿದೆ.
  • ವಿಸ್ತರಣೆಯಲ್ಲಿ ಆವೇಗವನ್ನು ಉಳಿಸಿಕೊಳ್ಳಲು ಪಿ ಎನ್‌‌ ಜಿ ಆರ್‌ ಬಿ ರಾಷ್ಟ್ರೀಯ ಪಿ ಎನ್‌ ಜಿ ಡ್ರೈವ್ 2.0 ಅನ್ನು 30 ಜೂನ್ 2026 ರವರೆಗೆ ವಿಸ್ತರಿಸಿದೆ.
  • ಮಾರ್ಚ್ 2026 ರಿಂದ, ಸುಮಾರು 3.67 ಲಕ್ಷ ಪಿ ಎನ್‌ ಜಿ ಸಂಪರ್ಕಗಳಿಗೆ ಅನಿಲ ಪೂರೈಸಲಾಗಿದೆ ಮತ್ತು ಸುಮಾರು 4 ಲಕ್ಷ ಹೆಚ್ಚುವರಿ ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.

ಕಚ್ಚಾ ತೈಲ ಪರಿಸ್ಥಿತಿ ಮತ್ತು ಸಂಸ್ಕರಣಾಗಾರ ಕಾರ್ಯಾಚರಣೆಗಳು:

  • ಎಲ್ಲಾ ಸಂಸ್ಕರಣಾಗಾರಗಳು ಸಮರ್ಪಕ ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ, ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನುಗಳನ್ನು ನಿರ್ವಹಿಸಲಾಗುತ್ತಿದೆ.
  • ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ಗೃಹಬಳಕೆ ಎಲ್‌ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.

ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು:

  • ದೇಶಾದ್ಯಂತ ಇರುವ ಚಿಲ್ಲರೆ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
  • ಮಧ್ಯಪ್ರಾಚ್ಯ ಬಿಕ್ಕಟ್ಟು ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಗಿದೆ; ಆದಾಗ್ಯೂ, ಗ್ರಾಹಕರನ್ನು ರಕ್ಷಿಸಲು ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ ಗೆ ₹10 ರಷ್ಟು ಕಡಿತಗೊಳಿಸಿದೆ.
  • ದೇಶೀಯವಾಗಿ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಡೀಸೆಲ್ ಮೇಲೆ ಲೀಟರ್‌ ಗೆ ₹₹21.5 ಮತ್ತು ಎಟಿಎಫ್ ಮೇಲೆ ₹29.5 ರಷ್ಟು ರಫ್ತು ಸುಂಕವನ್ನು ವಿಧಿಸಲಾಗಿದೆ.
  • ಪೆಟ್ರೋಲ್ ಮತ್ತು ಡೀಸೆಲ್‌ ನ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
  • ಸರ್ಕಾರವು ನಾಗರಿಕರಿಗೆ ವದಂತಿಗಳನ್ನು ನಂಬದಂತೆ ಸಲಹೆ ನೀಡಿದೆ ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡಲು ರಾಜ್ಯ ಸರ್ಕಾರಗಳನ್ನು ವಿನಂತಿಸಿದೆ.

ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು:

  • ನಿಯಮಿತ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ.
  • ಮಾರ್ಚ್ 29, 2026 ರ ಗೆಜೆಟ್ ಅಧಿಸೂಚನೆಯು ಸೀಮೆಎಣ್ಣೆ ಮುಕ್ತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಡುಗೆ ಮತ್ತು ಬೆಳಕಿನ ಉದ್ದೇಶಗಳಿಗಾಗಿ ಗೊತ್ತುಪಡಿಸಿದ ಪಿ ಎಸ್‌ ಯು ಒಎಂಸಿ ಸೇವಾ ಕೇಂದ್ರಗಳ ಮೂಲಕ ಪಿ ಡಿಎಸ್ ಸುಪೀರಿಯರ್ ಸೀಮೆಎಣ್ಣೆ ವಿತರಣೆಯನ್ನು ಅನುಮತಿಸುತ್ತದೆ.
  • 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ನೀಡಿದ್ದರೆ, ಹಿಮಾಚಲ ಪ್ರದೇಶ ಮತ್ತು ಲಡಾಖ್ ಯಾವುದೇ ಅವಶ್ಯಕತೆಯನ್ನು ಸೂಚಿಸಿಲ್ಲ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಪರ್ಷಿಯನ್ ಗಲ್ಫ್‌ ನಲ್ಲಿನ ಪ್ರಸ್ತುತ ಕಡಲ ಪರಿಸ್ಥಿತಿ ಮತ್ತು ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಯಿತು:

  • ಬಂದರುಗಳು, ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯವು ಹಡಗು ಚಲನವಲನಗಳು, ಬಂದರು ಕಾರ್ಯಾಚರಣೆಗಳು ಮತ್ತು ಭಾರತೀಯ ನಾವಿಕರ ಸುರಕ್ಷತೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ, ಅದೇ ಸಮಯದಲ್ಲಿ ಕಡಲ ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸುತ್ತಿದೆ.
  • ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜದ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆ ವರದಿಯಾಗಿಲ್ಲ.
  • ಕಳೆದ ಎರಡು ದಿನಗಳಲ್ಲಿ, ಎರಡು ಭಾರತೀಯ ಧ್ವಜ ಹೊಂದಿರುವ ಗ್ರೀನ್ ಸಾನ್ವಿ ಮತ್ತು ಗ್ರೀನ್ ಆಶಾ ಎಂಬ ಎಲ್‌ ಪಿ ಜಿ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಗ್ರೀನ್ ಸಾನ್ವಿ ಸುಮಾರು 46,650 ಮೆಟ್ರಿಕ್ ಟನ್ ಎಲ್‌ ಪಿ ಜಿ ಯನ್ನು ಸಾಗಿಸುತ್ತಿದ್ದರೆ, ಗ್ರೀನ್ ಆಶಾ ಸುಮಾರು 15,405 ಮೆಟ್ರಿಕ್ ಟನ್ ಎಲ್‌ ಪಿ ಜಿ ಯನ್ನು ಸಾಗಿಸುತ್ತಿದೆ.
  • ಪ್ರಸ್ತುತ, 433 ಭಾರತೀಯ ನಾವಿಕರನ್ನೊಳಗೊಂಡ 16 ಭಾರತೀಯ ಧ್ವಜದ ಹಡಗುಗಳು ಪಶ್ಚಿಮ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿವೆ. ಹಡಗು ನಿರ್ದೇಶನಾಲಯವು ಹಡಗು ಮಾಲೀಕರು ಮತ್ತು ಭಾರತೀಯ ಮಿಷನ್‌ ಗಳೊಂದಿಗೆ ಸಮನ್ವಯ ಸಾಧಿಸಿ ನಿಕಟವಾಗಿ ಗಮನಿಸುತ್ತಿದೆ.
  • ಹಡಗು ನಿರ್ದೇಶನಾಲಯದ ನಿಯಂತ್ರಣ ಕೊಠಡಿಯು 24×7 ಕಾರ್ಯನಿರ್ವಹಿಸುತ್ತಿದೆ ಮತ್ತು ಸಕ್ರಿಯಗೊಳಿಸಿದಾಗಿನಿಂದ 5,113 ಕರೆಗಳು ಮತ್ತು 10,647 ಇಮೇಲ್‌ ಗಳನ್ನು ನಿರ್ವಹಿಸಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ 25 ಕರೆಗಳು ಮತ್ತು 100 ಇಮೇಲ್‌ ಗಳು ಸೇರಿವೆ.
  • ಹಡಗು ನಿರ್ದೇಶನಾಲಯವು ಇದುವರೆಗೆ 1,599 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಅನುವು ಮಾಡಿಕೊಟ್ಟಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ ವಿಮಾನ ನಿಲ್ದಾಣಗಳು ಮತ್ತು ಕೊಲ್ಲಿಯಾದ್ಯಂತ ವಿವಿಧ ಪ್ರಾದೇಶಿಕ ಸ್ಥಳಗಳಿಂದ 120 ಮಂದಿ ಸೇರಿದ್ದಾರೆ.
  • ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಾಮಾನ್ಯವಾಗಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ. ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿಯ ರಾಜ್ಯ ಸಾಗರ ಮಂಡಳಿಗಳು ಸುಗಮವಾಗಿ ಕಾರ್ಯನಿರ್ವಹಿಸುವುದನ್ನು ದೃಢಪಡಿಸಿವೆ.
  • ಭಾರತೀಯ ನಾವಿಕರ ಕಲ್ಯಾಣ ಮತ್ತು ನಿರಂತರ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯ ಸಾಧಿಸುವುದನ್ನು ಮುಂದುವರೆಸಿದೆ.

ಪ್ರದೇಶದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ

ಭಾರತೀಯ ಮಿಷನ್‌ ಗಳ ಮೂಲಕ ನೀಡಲಾಗುತ್ತಿರುವ ನೆರವು ಸೇರಿದಂತೆ ಪ್ರದೇಶದ ಇತ್ತೀಚಿನ ಬೆಳವಣಿಗೆಗಳನ್ನು ಹಂಚಿಕೊಳ್ಳಲಾಯಿತು:

  • ವಿದೇಶಾಂಗ ವ್ಯವಹಾರಗಳ ಸಚಿವರು ಕತಾರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ ನ ವಿದೇಶಾಂಗ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.
  • ಇರಾನ್‌ ನ ವಿದೇಶಾಂಗ ಸಚಿವರಿಂದಲೂ ಅವರಿಗೆ ಕರೆ ಬಂದಿದ್ದು, ಇಬ್ಬರೂ ಪ್ರದೇಶದ ಸಂಘರ್ಷದ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದಾರೆ.
  • ತೆಹ್ರಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇದುವರೆಗೆ 1,777 ಭಾರತೀಯ ನಾಗರಿಕರನ್ನು ಇರಾನ್‌ ನಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದೆ. ಇದರಲ್ಲಿ 895 ವಿದ್ಯಾರ್ಥಿಗಳು ಮತ್ತು 345 ಮೀನುಗಾರರು ಸೇರಿದ್ದಾರೆ. ಮೀನುಗಾರರು ಏಪ್ರಿಲ್ 4, 2026 ರಂದು ಅರ್ಮೇನಿಯಾದಿಂದ ಚೆನ್ನೈಗೆ ಪ್ರಯಾಣ ಬೆಳೆಸಿದರು. ರಾಯಭಾರ ಕಚೇರಿಯು ಇಬ್ಬರು ವಿದೇಶಿ ಪ್ರಜೆಗಳ ಸಾಗಣೆಗೆ ಅನುಕೂಲ ಮಾಡಿಕೊಟ್ಟಿತು - ಒಬ್ಬರು ಬಾಂಗ್ಲಾದೇಶದವರು ಮತ್ತೊಬ್ಬರು ಶ್ರೀಲಂಕಾದವರು.

· ಸ್ಥಳಾಂತರಿಸಲ್ಪಟ್ಟ ಒಟ್ಟು ಜನರಲ್ಲಿ, 1,545 ಜನರು ಅರ್ಮೇನಿಯಾಕ್ಕೆ ಮತ್ತು 234 ಜನರು ಅಜೆರ್ಬೈಜಾನ್‌ ಗೆ ಪ್ರವೇಶಿಸಿದ್ದಾರೆ. ಸ್ಥಳಾಂತರಗೊಂಡವರ ಸುರಕ್ಷಿತ ಪ್ರಯಾಣಕ್ಕೆ ಸಹಕರಿಸಿದ ಇರಾನ್, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಅಧಿಕಾರಿಗಳಿಗೆ ಭಾರತವು ಕೃತಜ್ಞತೆ ಸಲ್ಲಿಸಿದೆ.

· ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತೀಯ ಸಮುದಾಯದ ರಕ್ಷಣೆ, ಭದ್ರತೆ ಮತ್ತು ಕಲ್ಯಾಣಕ್ಕೆ ಅತ್ಯುನ್ನತ ಆದ್ಯತೆ ನೀಡಲಾಗಿದೆ.

· ಭಾರತೀಯ ನಾಗರಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರತ್ಯೇಕ ವಿಶೇಷ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಮನ್ವಯ ಸಾಧಿಸಲಾಗುತ್ತಿದೆ.

· ಈ ಪ್ರದೇಶದಾದ್ಯಂತ ಇರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ಕೇಂದ್ರಗಳು ಹಗಲಿರುಳು (24x7) ಕಾರ್ಯನಿರ್ವಹಿಸುತ್ತಿವೆ. ಇವು ಸಹಾಯವಾಣಿಗಳನ್ನು ನಡೆಸುತ್ತಿವೆ, ಕಾಲಕಾಲಕ್ಕೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸುತ್ತಿವೆ ಮತ್ತು ಭಾರತೀಯ ಸಮುದಾಯದ ಸಂಘ-ಸಂಸ್ಥೆಗಳು ಹಾಗೂ ಕಂಪನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ.

· ರಾಯಭಾರ ಕಚೇರಿಗಳು ಭಾರತೀಯ ನಾಗರಿಕರಿಗೆ ವೀಸಾ ಸೌಲಭ್ಯ, ದೂತಾವಾಸ ಸೇವೆಗಳು, ಸಾರಿಗೆ ನೆರವು ಮತ್ತು ವಾಯುಪ್ರದೇಶ ನಿರ್ಬಂಧವಿರುವ ಕಡೆ ನೆರೆಯ ದೇಶಗಳ ಮೂಲಕ ಪ್ರಯಾಣಿಸಲು ಸಹಾಯ ಮಾಡುತ್ತಿವೆ. ಅವರು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ.

· ಗಲ್ಫ್ ದೇಶಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಆದ್ಯತೆ ನೀಡಲಾಗಿದೆ. ಶೈಕ್ಷಣಿಕ ವೇಳಾಪಟ್ಟಿ ಮತ್ತು ಜೆಇಇ ಹಾಗೂ ನೀಟ್ ನಂತಹ ಪರೀಕ್ಷೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ರಾಯಭಾರ ಕಚೇರಿಗಳು ಸ್ಥಳೀಯ ಅಧಿಕಾರಿಗಳು, ಭಾರತೀಯ ಶಾಲೆಗಳು, ಶಿಕ್ಷಣ ಮಂಡಳಿಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸುತ್ತಿವೆ.

· ಈ ಪ್ರದೇಶದಲ್ಲಿರುವ ಭಾರತೀಯ ನಾವಿಕರಿಗೆ ರಾಯಭಾರ ಕಚೇರಿಗಳು ಬೆಂಬಲ ನೀಡುತ್ತಿವೆ. ಇದರಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ, ದೂತಾವಾಸದ ನೆರವು, ಕುಟುಂಬದೊಂದಿಗೆ ಸಂವಹನಕ್ಕೆ ವ್ಯವಸ್ಥೆ ಮತ್ತು ಭಾರತಕ್ಕೆ ಮರಳುವ ವಿನಂತಿಗಳಿಗೆ ಸಹಾಯ ಮಾಡುವುದು ಸೇರಿದೆ.

· ಫೆಬ್ರವರಿ 28 ರಿಂದ ಈವರೆಗೆ ಸುಮಾರು 7,30,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ.

· ಯುನೈಟೆಡ್ ಅರಬ್ ಎಮಿರೇಟ್ಸ್‌ ನಲ್ಲಿ, ಏರ್‌ಲೈನ್ಸ್‌ ಗಳು ಕಾರ್ಯಾಚರಣೆ ಮತ್ತು ಸುರಕ್ಷತೆಯ ಆಧಾರದ ಮೇಲೆ ಸೀಮಿತ ಸಂಖ್ಯೆಯ ನಾನ್‌ ಷೆಡ್ಯೂಲ್ಡ್ ವಿಮಾನಗಳ ಹಾರಾಟವನ್ನು ನಡೆಸುತ್ತಿವೆ. ಇಂದು ಭಾರತಕ್ಕೆ ಸುಮಾರು 90 ವಿಮಾನಗಳು ಸಂಚರಿಸುವ ನಿರೀಕ್ಷೆಯಿದೆ.

· ಸೌದಿ ಅರೇಬಿಯಾ ಮತ್ತು ಓಮನ್‌ ನಿಂದ ಭಾರತದ ವಿವಿಧ ನಗರಗಳಿಗೆ ವಿಮಾನಗಳು ಎಂದಿನಂತೆ ಸಂಚರಿಸುತ್ತಿವೆ.

· ಕತಾರ್ ವಾಯುಪ್ರದೇಶವು ಭಾಗಶಃ ತೆರೆದಿದ್ದು, ಕತಾರ್ ಏರ್ವೇಸ್ ಇಂದು ಭಾರತಕ್ಕೆ ಸುಮಾರು 8 ರಿಂದ 10 ವಿಮಾನಗಳ‌ ಹಾರಾಟ ನಡೆಸುವ ನಿರೀಕ್ಷೆಯಿದೆ.

· ಕುವೈತ್ ವಾಯುಪ್ರದೇಶವು ಮುಚ್ಚಲ್ಪಟ್ಟಿದೆ. ಆದ್ದರಿಂದ ಜಜೀರಾ ಏರ್ವೇಸ್ ಮತ್ತು ಕುವೈತ್ ಏರ್ವೇಸ್ ಸಂಸ್ಥೆಗಳು ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ನಾನ್‌ ಷೆಡ್ಯೂಲ್ಡ್ ವಿಮಾನಗಳ ಹಾರಾಟ ನಡೆಸುತ್ತಿವೆ.

· ಬಹ್ರೇನ್ ವಾಯುಪ್ರದೇಶವೂ ಮುಚ್ಚಲ್ಪಟ್ಟಿದೆ. ಗಲ್ಫ್ ಏರ್ ಸಂಸ್ಥೆಯು ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ನಾನ್‌ ಷೆಡ್ಯೂಲ್ಡ್ ವಿಮಾನಗಳನ್ನು ನಡೆಸುತ್ತಿದೆ.

· ವಿಮಾನ ನಿರ್ಬಂಧಗಳು ಮತ್ತು ವಾಯುಪ್ರದೇಶ ಮುಚ್ಚುವಿಕೆಯ ಕಾರಣದಿಂದಾಗಿ, ಭಾರತೀಯ ನಾಗರಿಕರ ಪ್ರಯಾಣವನ್ನು ಪರ್ಯಾಯ ಮಾರ್ಗಗಳ ಮೂಲಕ ಸುಗಮಗೊಳಿಸಲಾಗುತ್ತಿದೆ:

o ಇಸ್ರೇಲ್‌ ನಿಂದ ಈಜಿಪ್ಟ್ ಮತ್ತು ಜೋರ್ಡಾನ್ ಮೂಲಕ.

o ಇರಾನ್‌ ನಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ.

o ಇರಾಕ್‌ ನಿಂದ ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮೂಲಕ.

o ಕುವೈತ್ ಮತ್ತು ಬಹ್ರೇನ್‌ ನಿಂದ ಸೌದಿ ಅರೇಬಿಯಾ ಮೂಲಕ. 

 

*****


(ಪ್ರಕಟಣೆ ಐ.ಡಿ.: 2249490) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Punjabi , Gujarati , Odia , Tamil , Telugu , Malayalam