ರಕ್ಷಣಾ ಸಚಿವಾಲಯ
ಪಶ್ಚಿಮ ಏಷ್ಯಾದ ಕುರಿತು ರಕ್ಷಣಾ ಸಚಿವರ ನೇತೃತ್ವದ ಸಚಿವರ ಅನೌಪಚಾರಿಕ ಗುಂಪಿನ (ಐಜಿಒಎಂ) ಎರಡನೇ ಸಭೆ ನವದೆಹಲಿಯಲ್ಲಿ ನಡೆಯಿತು
ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತವು ಸನ್ನದ್ಧವಾಗಿರಲು ಮತ್ತು ಸ್ಪಂದಿಸಲು ನಿರಂತರ ನಿಗಾ ಹಾಗೂ ವ್ಯವಸ್ಥಿತ ಪ್ರತಿಕ್ರಿಯೆ ಅಗತ್ಯ: ಶ್ರೀ ರಾಜನಾಥ್ ಸಿಂಗ್
ಪ್ರಕಟಣಾ ದಿನಾಂಕ:
02 APR 2026 9:32PM by PIB Bengaluru
ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸುತ್ತಿರುವ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಭಾರತದ ಮೇಲೆ ಅದರ ಕನಿಷ್ಠ ಪರಿಣಾಮಗಳಿಗಾಗಿ ಸಕ್ರಿಯ ಕ್ರಮಗಳನ್ನು ಸೂಚಿಸಲು ರಚಿಸಲಾದ ಸಚಿವರ ಅನೌಪಚಾರಿಕ ಗುಂಪಿನ (ಐಜಿಒಎಂ) ಎರಡನೇ ಸಭೆಯು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 02, 2026 ರಂದು ನವದೆಹಲಿಯ ಕರ್ತವ್ಯ ಭವನ-2 ರಲ್ಲಿ ನಡೆಯಿತು. ಸದ್ಯದ ಸಂಘರ್ಷದಿಂದ ಉಂಟಾಗುವ ಯಾವುದೇ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸರ್ಕಾರವು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳು ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಐಜಿಒಎಂ ಸುದೀರ್ಘವಾಗಿ ಚರ್ಚಿಸಿತು.

ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್; ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ; ಇಂಧನ ಸಚಿವರಾದ ಶ್ರೀ ಮನೋಹರ್ ಲಾಲ್; ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ; ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಎಸ್ ಜೈಶಂಕರ್; ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ; ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್; ಮತ್ತು ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಸಭೆಯಲ್ಲಿ ಭಾಗವಹಿಸಿದ್ದರು.

"ಅನಿಶ್ಚಿತ ಪರಿಸ್ಥಿತಿಯ" ಹಿನ್ನೆಲೆಯಲ್ಲಿ, ದಿನದ ಇಪ್ಪತ್ತನಾಲ್ಕು ಗಂಟೆಯೂ ಪರಿಸ್ಥಿತಿಯ ಮೇಲೆ ನಿಗಾ ಇಡುವ ಪ್ರಾಮುಖ್ಯತೆಯನ್ನು ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ವ್ಯವಸ್ಥಿತ ರೀತಿಯಲ್ಲಿ ಪ್ರತಿಕ್ರಿಯಿಸುವ ಅಗತ್ಯವನ್ನು ರಕ್ಷಣಾ ಸಚಿವರು ಒತ್ತಿಹೇಳಿದರು. ದೇಶದ ಜನರ ಮೇಲೆ ಸಂಘರ್ಷದ ಪರಿಣಾಮ ಕನಿಷ್ಠ ಪ್ರಮಾಣದಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಸರ್ವ ಪ್ರಯತ್ನವನ್ನೂ ಮಾಡಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ, ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಳ್ಳಲಾದ ಕ್ರಮಗಳ ಬಗ್ಗೆ ಕಾರ್ಯದರ್ಶಿಗಳ ಏಳು ಉನ್ನತಾಧಿಕಾರ ಸಮಿತಿಗಳು ಐಜಿಎಂಒಗೆ ಮಾಹಿತಿ ನೀಡಿದವು. ಜಾಗತಿಕ ವ್ಯಾಪಾರ ಅಡಚಣೆಗಳಿಂದ ಉಂಟಾಗುವ ಆತಂಕಗಳನ್ನು ಪರಿಹರಿಸಲು ಮತ್ತು ಉದ್ಯಮಕ್ಕೆ, ವಿಶೇಷವಾಗಿ ಉತ್ಪಾದನಾ ವಲಯಕ್ಕೆ ಪರಿಹಾರ ಹಾಗೂ ಬೆಂಬಲ ನೀಡಲು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಕೈಗೊಂಡ ಕ್ರಮಗಳ ಬಗ್ಗೆ ಐಜಿಎಂಒಗೆ ವಿವರಿಸಲಾಯಿತು. ಈ ಕೆಳಗಿನ ಕ್ರಮಗಳು ಅವುಗಳನ್ನು ಒಳಗೊಂಡಿವೆ:
- ಜೂನ್ 30, 2026 ರವರೆಗೆ 40 ನಿರ್ಣಾಯಕ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಸಂಪೂರ್ಣ ಕಸ್ಟಮ್ಸ್ ಸುಂಕ ವಿನಾಯಿತಿಗೆ ಸಂಬಂಧಿಸಿದಂತೆ ಏಪ್ರಿಲ್ 01, 2026 ರಂದು ಅಧಿಸೂಚನೆ ಹೊರಡಿಸಲಾಗಿದೆ.
- ವಿಶೇಷ ಆರ್ಥಿಕ ವಲಯಗಳಲ್ಲಿನ ಅರ್ಹ ಘಟಕಗಳು ಉತ್ಪಾದಿಸಿದ ಸರಕುಗಳನ್ನು ಗೃಹಬಳಕೆ ಸುಂಕ ಪ್ರದೇಶದಲ್ಲಿ (ಡಿಟಿಎ) ರಿಯಾಯಿತಿ ಕಸ್ಟಮ್ಸ್ ಸುಂಕದ ದರದಲ್ಲಿ ಮಾರಾಟ ಮಾಡಲು ವಿಶೇಷ ಏಕಕಾಲದ ಪರಿಹಾರ ಕ್ರಮದ ಘೋಷಣೆ. ಇದು ಏಪ್ರಿಲ್ 01, 2026 ರಿಂದ ಮಾರ್ಚ್ 31, 2027 ರವರೆಗೆ ಜಾರಿಯಲ್ಲಿರುತ್ತದೆ.
- ಏಪ್ರಿಲ್ 01, 2017 ಕ್ಕಿಂತ ಮೊದಲು ಮಾಡಿದ ಹೂಡಿಕೆಗಳಿಗೆ ಸಂಬಂಧಿಸಿದಂತೆ ಜಿಎಎಆರ್ ನ ನಿಬಂಧನೆಗಳನ್ನು ಅನ್ವಯಿಸುವುದಿಲ್ಲ ಎಂದು ಕಂದಾಯ ಇಲಾಖೆ ಮಾರ್ಚ್ 31, 2026 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ಈ ಕ್ರಮಗಳು ಜವಳಿ, ಪ್ಯಾಕೇಜಿಂಗ್ ಮತ್ತು ಫಾರ್ಮಾಸ್ಯುಟಿಕಲ್ಸ್ ಸೇರಿದಂತೆ ುತ್ಪಾದನಾ ಸರಪಳಿಯ ಕೆಳಹಂತದ ವಲಯಗಳ ಮೇಲಿನ ವೆಚ್ಚದ ಒತ್ತಡವನ್ನು ಕಡಿಮೆ ಮಾಡುತ್ತವೆ, ದೇಶದಲ್ಲಿ ಪೂರೈಕೆಯ ಸ್ಥಿರತೆಯನ್ನು ಸುಲಭಗೊಳಿಸುತ್ತವೆ ಮತ್ತು ಭಾರತದಲ್ಲಿ ಹೂಡಿಕೆ ಮಾಡಲು ಉದ್ದೇಶಿಸಿರುವ ಹೂಡಿಕೆದಾರರಿಗೆ ಅಗತ್ಯವಾದ ಸ್ಪಷ್ಟತೆಯನ್ನು ಒದಗಿಸುತ್ತವೆ.

ಗೃಹಬಳಕೆ ಕಾರ್ಯಾಚರಣೆಗಳಿಗಾಗಿ ವಿಮಾನ ಇಂಧನ (ಎಟಿಎಫ್) ಬೆಲೆಯಲ್ಲಿನ ಮಾಸಿಕ ಹೆಚ್ಚಳದ ಮೇಲೆ ಏಪ್ರಿಲ್ 01, 2026 ರಿಂದ ಜಾರಿಗೆ ಬರುವಂತೆ ಶೇ.25 ರ ಮಿತಿಯನ್ನು ವಿಧಿಸುವ ಸರ್ಕಾರದ ನಿರ್ಧಾರವನ್ನು ಶ್ರೀ ರಾಜನಾಥ್ ಸಿಂಗ್ ಶ್ಲಾಘಿಸಿದರು. ಈ ಕ್ರಮವು ಪ್ರಯಾಣ ದರದಲ್ಲಿನ ಹಠಾತ್ ಏರಿಕೆಯಿಂದ ಜನರನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಸರ್ಕಾರವು ಗೃಹಬಳಕೆ ಎಲ್ ಪಿ ಜಿ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಬಳಕೆಯ ಅಗತ್ಯಗಳನ್ನು ಸಂಪೂರ್ಣವಾಗಿ ಪೂರೈಸಲು ಸಂಸ್ಕರಣಾಗಾರಗಳ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ. ಎಲ್ ಪಿ ಜಿ ವಿತರಕರಲ್ಲಿ ಯಾವುದೇ ಕೊರತೆಯ ವರದಿಗಳಿಲ್ಲ ಮತ್ತು ಗೃಹಬಳಕೆ ಎಲ್ ಪಿ ಜಿ ಸಿಲಿಂಡರ್ ಗಳ ವಿತರಣೆಯು ಸಾಮಾನ್ಯ ವೇಳಾಪಟ್ಟಿಯಂತೆ ಮುಂದುವರಿಯುತ್ತಿದೆ ಎಂದು ಐಜಿಎಂಒಗೆ ತಿಳಿಸಲಾಯಿತು. ಕೆಲವು ಪ್ರದೇಶಗಳಲ್ಲಿ ಅಕ್ರಮ ಸಂಗ್ರಹಣೆ ಮತ್ತು ಕಾಳಸಂತೆಯ ನಿದರ್ಶನಗಳಿಂದಾಗಿ ತಾತ್ಕಾಲಿಕ ಪೂರೈಕೆಯ ಆತಂಕಗಳು ಉಂಟಾಗಿದ್ದು, ಇದು ಆತಂಕದ ಖರೀದಿಗೆ ಕಾರಣವಾಯಿತು.
ಎಲ್ ಪಿ ಜಿ ಸಂಗ್ರಹಣೆ ಮತ್ತು ಕಾಳಸಂತೆಯನ್ನು ತಡೆಗಟ್ಟಲು ಕಟ್ಟುನಿಟ್ಟಾದ ಜಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಹಲವಾರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಸಚಿವರಿಗೆ ತಿಳಿಸಲಾಯಿತು. ಅಕ್ರಮಗಳಲ್ಲಿ ತೊಡಗಿದ್ದ ಕೆಲವು ಎಲ್ ಪಿ ಜಿ ವಿತರಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.
ವಲಸೆ ಕಾರ್ಮಿಕರು ಮತ್ತು ಕಡಿಮೆ ಬಳಕೆಯ ಕುಟುಂಬಗಳಿಗೆ ಬೆಂಬಲ ನೀಡಲು, ಸರ್ಕಾರವು 5 ಕೆಜಿಯ ಮುಕ್ತ ವ್ಯಾಪಾರ ಎಲ್ ಪಿ ಜಿ ಸಿಲಿಂಡರ್ ಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳುತ್ತಿದೆ ಮತ್ತು ಮಾರ್ಚ್ 23, 2026 ರಿಂದ 4.3 ಲಕ್ಷಕ್ಕೂ ಹೆಚ್ಚು ಅಂತಹ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗಿದೆ. ಬೇಡಿಕೆ ಹೆಚ್ಚಿರುವ ರಾಜ್ಯಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ.
ವಾಣಿಜ್ಯ ಎಲ್ ಪಿ ಜಿ ಮೇಲೆ ಅವಲಂಬಿತವಾಗಿರುವ ಕೈಗಾರಿಕಾ ಅವಶ್ಯಕತೆಗಳನ್ನು ಪೂರೈಸಲಾಗುತ್ತಿದೆ ಮತ್ತು ಕಾರ್ಯಾಚರಣೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಬಿಕ್ಕಟ್ಟಿನ ಮುಂಚಿನ ಪೂರೈಕೆಯ ಶೇ. 80 ಕ್ಕಿಂತ ಹೆಚ್ಚಿನ ಮಟ್ಟವನ್ನು ಕಾಯ್ದುಕೊಳ್ಳಲಾಗಿದೆ ಎಂದು ಐಜಿಎಂಒಗೆ ತಿಳಿಸಲಾಯಿತು. ವಿವಿಧ ಕೈಗಾರಿಕೆಗಳ ಬೇಡಿಕೆಯನ್ನು ತಿಳಿದುಕೊಳ್ಳಲು ಮತ್ತು ಅವರ ಅಗತ್ಯಗಳನ್ನು ಪೂರೈಸಲು ಸಚಿವಾಲಯಗಳು ಮತ್ತು ಪಾಲುದಾರರೊಂದಿಗೆ ವಿಶೇಷ ಸಭೆಗಳನ್ನು ನಡೆಸಲಾಗಿದೆ. ಸಾರ್ವಜನಿಕ ತೈಲ ಮಾರುಕಟ್ಟೆ ಕಂಪನಿಗಳು ದೇಶಾದ್ಯಂತ ಆಟೋ ಎಲ್ ಪಿ ಜಿ ಪೂರೈಕೆಯನ್ನು ಖಚಿತಪಡಿಸುತ್ತಿವೆ. ಆದಾಗ್ಯೂ, ಖಾಸಗಿ ನಿರ್ವಾಹಕರು ತಮ್ಮ ಸಂಗ್ರಹಣೆಯ ಸವಾಲುಗಳಿಂದಾಗಿ ಕೆಲವು ಪೂರೈಕೆ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ, ಈ ಕಾರಣದಿಂದಾಗಿ ಪಿ ಎಸ್ ಯು ಆಟೋ ಎಲ್ ಪಿ ಜಿ ಪಂಪ್ ಗಳಲ್ಲಿ ಸಾಲುಗಳು ಕಂಡುಬರುತ್ತಿವೆ. ಆಟೋಗಳು ಡ್ಯುಯಲ್ ಫೀಡ್ ಹೊಂದಿದ್ದು ಪೆಟ್ರೋಲ್ ಬಳಸಲು ಸಾಧ್ಯವಿರುವಲ್ಲಿ, ಪೆಟ್ರೋಲ್ ಬಳಸಲು ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ.
ಆತಂಕದ ಖರೀದಿಯಿಂದ ಉಂಟಾದ ಬೇಡಿಕೆಯ ಏರಿಕೆಯನ್ನು ಪೂರೈಸಲು ಪ್ರತಿದಿನದ ಎಲ್ ಪಿ ಜಿ ವಿತರಣೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಮತ್ತು ಗ್ರಾಹಕರಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರಿಗೆ ತಿಳಿಸಲಾಯಿತು. ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿ ಎನ್ ಜಿ) ಅನ್ನು ಕಾರ್ಯಸಾಧ್ಯವಿರುವಲ್ಲಿ ವಿಶ್ವಾಸಾರ್ಹ ಪರ್ಯಾಯವಾಗಿ ಕೈಗಾರಿಕಾ ಬಳಕೆಗಾಗಿ ಸಕ್ರಿಯವಾಗಿ ಉತ್ತೇಜಿಸಲಾಗುತ್ತಿದೆ. ಈಗಾಗಲೇ ಬಳಕೆಯಲ್ಲಿರುವ ವಲಯಗಳಲ್ಲಿ ಕಾರ್ಯಾಚರಣೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಕೈಗಾರಿಕಾ ಬಳಕೆಗಾಗಿ ಪಿ ಎನ್ ಜಿ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಕೆಲವು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಫೋಟೋಶಾಪ್ ಮಾಡಿದ ಮತ್ತು ತಿರುಚಿದ ಚಿತ್ರಗಳನ್ನು ಹಾಗೂ ದಾರಿತಪ್ಪಿಸುವ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ಆತಂಕ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಬಗ್ಗೆಯೂ ಐಜಿಎಂಒಗೆ ತಿಳಿಸಲಾಯಿತು. ಇಂತಹ ಕ್ರಮಗಳನ್ನು ನಿಕಟವಾಗಿ ಗಮನಿಸಲಾಗುತ್ತಿದೆ. ನಾಗರಿಕರು ಪರಿಶೀಲಿಸದ ಮಾಹಿತಿಯನ್ನು ನಂಬದಂತೆ ಅಥವಾ ಹಂಚಿಕೊಳ್ಳದಂತೆ ಮತ್ತು ನಿಖರವಾದ ನವೀಕರಣಗಳಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸುವಂತೆ ಸಲಹೆ ನೀಡಲಾಗಿದೆ.
ಐಜಿಎಂಒದ ಮೊದಲ ಸಭೆಯು ಮಾರ್ಚ್ 28, 2026 ರಂದು ನಡೆದಿತ್ತು, ಆ ಸಮಯದಲ್ಲಿ ರಕ್ಷಣಾ ಸಚಿವರು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲು, ಮಧ್ಯಮದಿಂದ ದೀರ್ಘಾವಧಿಯ ಸನ್ನದ್ಧತೆಯ ವಿಧಾನವನ್ನು ಅಳವಡಿಸಿಕೊಳ್ಳಲು, ಉನ್ನತ ಮಟ್ಟದ ಸಮನ್ವಯವನ್ನು ಕಾಯ್ದುಕೊಳ್ಳಲು ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
*****
(ಪ್ರಕಟಣೆ ಐ.ಡಿ.: 2248715)
ವಿಸಿಟರ್ ಕೌಂಟರ್ : 12