ಪ್ರಧಾನ ಮಂತ್ರಿಯವರ ಕಛೇರಿ
ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಪರಾಮರ್ಶೆಗಾಗಿ ತಮ್ಮ ನೇತೃತ್ವದಲ್ಲಿ ಭದ್ರತೆ ಕುರಿತಾದ ಸಂಪುಟ ಸಮಿತಿ (ಸಿಸಿಎಸ್) ಸಭೆಯ ನಡೆಸಿದ ಪ್ರಧಾನಮಂತ್ರಿ
ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಕೃಷಿ, ರಸಗೊಬ್ಬರಗಳು, ಹಡಗು, ವಾಯುಯಾನ, ಸರಕು-ಸಾಗಣೆ ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ (ಎಂಎಸ್ಎಂಇ) ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಕ್ರಮಗಳ ಬಗ್ಗೆ ಚರ್ಚಿಸಲಾಯಿತು
ವೈವಿಧ್ಯಮಯ ಮೂಲಗಳಿಂದ ಎಲ್‌ಪಿಜಿ ಮತ್ತು ಎಲ್ಎನ್‌ಜಿ ಪೂರೈಕೆ, ಇಂಧನ ಸುಂಕ ಕಡಿತ ಮತ್ತು ಅಗತ್ಯ ಸರಬರಾಜುಗಳ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಇಂಧನ ವಲಯದಲ್ಲಿ ಕೈಗೊಂಡ ಕ್ರಮಗಳ ಪರಿಶೀಲನೆ
ಅಗತ್ಯ ವಸ್ತುಗಳ ಬೆಲೆಗಳ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳು ಹಾಗೂ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಮಾರಾಟದ ವಿರುದ್ಧ ಕಠಿಣ ಕ್ರಮ
ಅಗತ್ಯ ಸರಕುಗಳ ಕಾಯ್ದೆ ಜಾರಿ ಮತ್ತು ಬೆಲೆಗಳ ಬಗ್ಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಮೇಲ್ವಿಚಾರಣೆ ಹಾಗೂ ಸಂವಹನಕ್ಕಾಗಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ
ರಸಗೊಬ್ಬರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಯೂರಿಯಾ ಉತ್ಪಾದನೆಯನ್ನು ನಿರ್ವಹಿಸುವುದು ಮತ್ತು ಡಿಎಪಿ / ಎನ್‌ಪಿಕೆಎಸ್ ಸರಬರಾಜಿಗಾಗಿ ಸಾಗರೋತ್ತರ ಪೂರೈಕೆದಾರರೊಂದಿಗೆ ಸಮನ್ವಯ ಮುಂತಾದ ವಿವಿಧ ಪ್ರಯತ್ನಗಳನ್ನು ಮಾಡಲಾಗುತ್ತಿದೆ
ಜನಸಾಮಾನ್ಯರ ನಿರ್ಣಾಯಕ ಅಗತ್ಯಗಳ ಲಭ್ಯತೆಯನ್ನು ಪರಾಮರ್ಶಿಸಿದ ಪ್ರಧಾನಮಂತ್ರಿ
ದೇಶದಲ್ಲಿ ರಸಗೊಬ್ಬರಗಳ ಲಭ್ಯತೆ; ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಅವುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪ್ರಧಾನಮಂತ್ರಿ ಚರ್ಚಿಸಿದರು
ಈ ಸಂಘರ್ಷದ ಪರಿಣಾಮದಿಂದ ನಾಗರಿಕರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಪ್ರಧಾನಮಂತ್ರಿ ನಿರ್ದೇಶನ ನೀಡಿದರು
ತಪ್ಪು ಮಾಹಿತಿ ಮತ್ತು ವದಂತಿ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರಿಗೆ ಅಧಿಕೃತ ಮಾಹಿತಿಯ ಸಮಯೋಚಿತ ಮತ್ತು ಸುಗಮ ರವಾನೆಯ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿಹೇಳಿದರು
ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸಲು ಸಾಕಷ್ಟು ಕಲ್ಲಿದ್ದಲು ದಾಸ್ತಾನು ಅಸ್ತಿತ್ವದಲ್ಲಿದೆ
ಪ್ರಕಟಣಾ ದಿನಾಂಕ:
01 APR 2026 10:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ವಿವಿಧ ಸಚಿವಾಲಯಗಳು/ಇಲಾಖೆಗಳು ಕೈಗೊಂಡಿರುವ ಕ್ರಮಗಳ ಪರಾಮರ್ಶೆಗಾಗಿ ಇಂದು ದಿಲ್ಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿಯ (ಸಿಸಿಎಸ್) ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಬಿಕ್ಕಟ್ಟು ಎದುರಿಸಲು ಮುಂದೆ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆಯೂ ಚರ್ಚಿಸಿದರು. ಈ ವಿಷಯದ ಬಗ್ಗೆ ನಡೆದ ಎರಡನೇ ವಿಶೇಷ ʻಸಿಸಿಎಸ್ʼ ಸಭೆ ಇದಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ, ವಿಶೇಷವಾಗಿ ಎಲ್‌ಎನ್‌ಜಿ/ಎಲ್‌ಪಿಜಿ ಪೂರೈಕೆ ಹಾಗೂ ಸಾಕಷ್ಟು ವಿದ್ಯುತ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆ ಸಂಪುಟ ಕಾರ್ಯದರ್ಶಿಯವರು ವಿವರಿಸಿದರು. ವಿವಿಧ ದೇಶಗಳಿಂದ ಹೊಸದಾಗಿ ಎಲ್‌ಪಿಜಿ ಸರಬರಾಜಿನೊಂದಿಗೆ ಎಲ್‌ಪಿಜಿ ಖರೀದಿಯ ಮೂಲಗಳನ್ನು ವೈವಿಧ್ಯಗೊಳಿಸಲಾಗುತ್ತಿದೆ. ಅಂತೆಯೇ, ದ್ರವೀಕೃತ ನೈಸರ್ಗಿಕ ಅನಿಲವನ್ನು (ಎಲ್‌ಎನ್‌ಜಿ) ವಿವಿಧ ದೇಶಗಳಿಂದ ಪಡೆಯಲಾಗುತ್ತಿದೆ. ಗೃಹ ಬಳಕೆದಾರರಿಗೆ ಎಲ್‌ಪಿಜಿ ಬೆಲೆಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ. ಎಲ್‌ಪಿಜಿ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅನ್ಯ ಉದ್ದೇಶಕ್ಕೆ ಬಳಕೆಗೆ ತಡೆ ಸೇರಿದಂತೆ ಕಠಿಣ ಕ್ರಮಗಳ ಜಾರಿಯನ್ನು ನಿಯಮಿತವಾಗಿ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಕೊಳವೆ ಮಾರ್ಗದ ನೈಸರ್ಗಿಕ ಅನಿಲ (ಪಿಎನ್‌ಜಿ) ಸಂಪರ್ಕಗಳನ್ನು ವಿಸ್ತರಿಸಲು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಬೇಸಿಗೆಯ ತಿಂಗಳುಗಳಲ್ಲಿ ವಿದ್ಯುತ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 7-8 ಗಿಗಾವ್ಯಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಸ್ಥಾವರಗಳಿಗೆ ಅನಿಲ ಪೂಲಿಂಗ್ ಕಾರ್ಯವಿಧಾನದಿಂದ ವಿನಾಯಿತಿ ನೀಡಲಾಗಿದೆ. ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಹೆಚ್ಚಿನ ಕಲ್ಲಿದ್ದಲನ್ನು ಇರಿಸಲು ರೇಕ್ ಗಳನ್ನು ಹೆಚ್ಚಿಸುವಂತಹ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ, ಕೃಷಿ, ನಾಗರಿಕ ವಿಮಾನಯಾನ, ಹಡಗು ಮತ್ತು ಸರಕು ಸಾಗಣೆಯಂತಹ ವಿವಿಧ ಕ್ಷೇತ್ರಗಳಲ್ಲಿ ಹೊರಹೊಮ್ಮುತ್ತಿರುವ ಸವಾಲುಗಳನ್ನು ಎದುರಿಸಲು ಪ್ರಸ್ತಾಪಿಸಲಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು.
ರೈತರು ಮತ್ತು ಕೃಷಿ ಅಗತ್ಯಗಳನ್ನು ಪೂರೈಸಲು ಯೂರಿಯಾ ಉತ್ಪಾದನೆಯನ್ನು ನಿರ್ವಹಿಸುವುದು, ರಸಗೊಬ್ಬರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಡಿಎಪಿ / ಎನ್‌ಪಿಕೆಎಸ್ ಪೂರೈಕೆದಾರರಿಗೆ ಸಾಗರೋತ್ತರ ಸರಬರಾಜುಗಳೊಂದಿಗೆ ಸಮನ್ವಯದಂತಹ ವಿವಿಧ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದೈನಂದಿನ ಮೇಲ್ವಿಚಾರಣೆ, ದಾಳಿ ಮತ್ತು ಕಠಿಣ ಕ್ರಮದ ಮೂಲಕ ಕಾಳಸಂತೆ ಮಾರಾಟ ತಡೆಯಲಾಗುತ್ತಿದೆ. ರಸಗೊಬ್ಬರಗಳ ಅಕ್ರಮ ಮಾರಾಟ ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳನ್ನು ಕೋರಲಾಗಿದೆ.
ಕಳೆದ ಒಂದು ತಿಂಗಳಿನಿಂದ ಆಹಾರ ಪದಾರ್ಥಗಳ ಚಿಲ್ಲರೆ ಬೆಲೆಗಳು ಸ್ಥಿರವಾಗಿವೆ. ʻಬೆಲೆಗಳು ಮತ್ತು ಅಗತ್ಯ ಸರಕುಗಳ ಕಾಯ್ದೆʼಯ ಜಾರಿ ಕುರಿತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಮೇಲ್ವಿಚಾರಣೆ ಮತ್ತು ಸಂವಹನಕ್ಕಾಗಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಕೃಷಿ ಉತ್ಪನ್ನಗಳು, ತರಕಾರಿಗಳು ಮತ್ತು ಹಣ್ಣುಗಳ ಬೆಲೆಗಳನ್ನು ಸಹ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಇಂಧನ, ರಸಗೊಬ್ಬರಗಳು ಮತ್ತು ಇತರ ಪೂರೈಕೆ ಸರಪಳಿಗಳಿಗಾಗಿ ಜಾಗತಿಕವಾಗಿ ನಮ್ಮ ಪೂರೈಕೆ ಮೂಲಗಳನ್ನು ಹೆಚ್ಚಿಸುವ ಪ್ರಯತ್ನಗಳು ಹಾಗೂ ಹರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸುರಕ್ಷಿತ ಸಂಚಾರವನ್ನು ಸುರಕ್ಷಿತಗೊಳಿಸಲು ಅಂತರರಾಷ್ಟ್ರೀಯ ಉಪಕ್ರಮಗಳು ಹಾಗೂ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳ ಬಗ್ಗೆ ಚರ್ಚಿಸಲಾಯಿತು.
ತೀವ್ರಗೊಳ್ಳುತ್ತಿರುವ ಬಿಕ್ಕಟ್ಟಿನ ನಡುವೆ ಪರಿಣಾಮಕಾರಿ ಮಾಹಿತಿ ಪ್ರಸಾರ ಮತ್ತು ಸಾರ್ವಜನಿಕ ಜಾಗೃತಿಗೆ ಚಾಲನೆ ನೀಡಲು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ಸಮನ್ವಯ ಹೆಚ್ಚಳ, ನೈಜ-ಸಮಯದ ಸಂವಹನ ಹಾಗೂ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಜನಸಾಮಾನ್ಯರಿಗೆ ಅತ್ಯಗತ್ಯ ವಸ್ತುಗಳ ಲಭ್ಯತೆಯನ್ನು ಪ್ರಧಾನಮಂತ್ರಿ ಪರಾಮರ್ಶಿಸಿದರು. ದೇಶದಲ್ಲಿ ರಸಗೊಬ್ಬರಗಳ ಲಭ್ಯತೆ ಹಾಗೂ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಅವುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಂಘರ್ಷದ ಪರಿಣಾಮದಿಂದ ನಾಗರಿಕರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಅವರು ಹೇಳಿದರು. ತಪ್ಪು ಮಾಹಿತಿ ಮತ್ತು ವದಂತಿಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ಅಧಿಕೃತ ಮಾಹಿತಿಯ ಸುಗಮ ಹರಿವು ಕುರಿತು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಪ್ರಸಕ್ತ ಜಾಗತಿಕ ಪರಿಸ್ಥಿತಿಯಿಂದ ಬಾಧಿತವಾಗಿರುವ ನಾಗರಿಕರು ಮತ್ತು ವಲಯಗಳ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಮಂತ್ರಿಯವರು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿದರು.
*****
(ಪ್ರಕಟಣೆ ಐ.ಡಿ.: 2248145)
ವಿಸಿಟರ್ ಕೌಂಟರ್ : 19