ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಸುದ್ದಿಗೋಷ್ಠಿ


ರಸಗೊಬ್ಬರಗಳ ಸಾಕಷ್ಟು ದಾಸ್ತಾನು ಲಭ್ಯವಿದೆ; ರೈತರಿಗೆ ಹಳೆಯ ಬೆಲೆಯಲ್ಲೇ ಪೂರೈಕೆ

ಯೂರಿಯಾ ಘಟಕಗಳಿಗೆ ಅನಿಲ ಪೂರೈಕೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳು

ಹಲವು ದೇಶಗಳ ಮೂಲಕ ರಸಗೊಬ್ಬರ ಸಂಗ್ರಹಣೆಯ ವೈವಿಧ್ಯೀಕರಣ

ರಸಗೊಬ್ಬರ ಅಡ್ಡದಾರಿ ಹಿಡಿಯುವುದು, ಕಾಳಸಂತೆ ಮಾರಾಟ ಮತ್ತು ಸಂಗ್ರಹಣೆಯ ಮೇಲೆ ಕಟ್ಟುನಿಟ್ಟಿನ ನಿಗಾ

ದೇಶೀಯ ಮತ್ತು ವಾಣಿಜ್ಯ ಪಿ ಎನ್‌ ಜಿ (PNG) ಸಂಪರ್ಕಗಳನ್ನು ಉತ್ತೇಜಿಸಲು ಸಿಜಿಡಿ (CGD) ಕಂಪನಿಗಳಿಂದ ಪ್ರೋತ್ಸಾಹಕಗಳ ಕೊಡುಗೆ

ಉದ್ಯಮದ ಆಧಾರದ ಮೇಲೆ ಆನ್‌ ಲೈನ್ ಎಲ್‌ ಪಿ ಜಿ ಬುಕಿಂಗ್ ಸುಮಾರು ಶೇ. 95 ಕ್ಕೆ ಏರಿಕೆ

ವಲಸೆ ಕಾರ್ಮಿಕರಿಗಾಗಿ ಕಳೆದ ಎರಡು ದಿನಗಳಲ್ಲಿ ಮಾರಾಟವಾದ 88,000 ಸಿಲಿಂಡರ್‌ಗಳು ಸೇರಿದಂತೆ, ಕಳೆದ ವಾರದಲ್ಲಿ 2.6 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್‌ಟಿಎಲ್ (FTL) ಸಿಲಿಂಡರ್‌ಗಳ ಮಾರಾಟ

16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಯಮಿತ ಪತ್ರಿಕಾಗೋಷ್ಠಿಗಳ ಆಯೋಜನೆ; ಉಳಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೂ ಇದೇ ರೀತಿ ಮಾಡಲು ಸೂಚನೆ

ಕಳೆದ 24 ಗಂಟೆಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ 2,500 ಕ್ಕೂ ಹೆಚ್ಚು ದಾಳಿಗಳು, 2,000 ಕ್ಕೂ ಹೆಚ್ಚು ಸಿಲಿಂಡರ್‌ ಗಳ ವಶ

ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಯಾವುದೇ ಅಡೆತಡೆಯಿಲ್ಲದೆ ಸಹಜ ಸ್ಥಿತಿಯಲ್ಲಿ ಮುಂದುವರಿಕೆ

ಸೌದಿ ಯುವರಾಜರೊಂದಿಗೆ ಪ್ರಧಾನಮಂತ್ರಿ ಮಾತುಕತೆ; ಭಾರತೀಯ ಸಮುದಾಯದ ಕಲ್ಯಾಣಕ್ಕಾಗಿ ನೀಡುತ್ತಿರುವ ನಿರಂತರ ಬೆಂಬಲಕ್ಕೆ ಪ್ರಶಂಸೆ

ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಹಡಗು ಮಾರ್ಗಗಳನ್ನು ಮುಕ್ತವಾಗಿ ಹಾಗೂ ಸುರಕ್ಷಿತವಾಗಿಡಲು ಉಭಯ ನಾಯಕರ ಸಮ್ಮತಿ

ಒಟ್ಟಾರೆ ವಿಮಾನಯಾನ ಪರಿಸ್ಥಿತಿಯಲ್ಲಿ ಸುಧಾರಣೆ - ಫೆಬ್ರವರಿ 28 ರಿಂದ ಈವರೆಗೆ ಸುಮಾರು 5,50,000 ಪ್ರಯಾಣಿಕರು ಭಾರತಕ್ಕೆ ವಾಪಸ್

ಪ್ರಕಟಣಾ ದಿನಾಂಕ: 30 MAR 2026 5:27PM by PIB Bengaluru

ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಕುರಿತು ನಾಗರಿಕರಿಗೆ ಮಾಹಿತಿ ನೀಡುವ ಭಾರತ ಸರ್ಕಾರದ ನಿರಂತರ ಪ್ರಯತ್ನಗಳ ಭಾಗವಾಗಿ, ಇಂದು ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಮಾಧ್ಯಮ ಗೋಷ್ಠಿಯನ್ನು ನಡೆಸಲಾಯಿತು. ಈ ಗೋಷ್ಠಿಯ ಸಮಯದಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಅಧಿಕಾರಿಗಳು ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು, ಆ ಪ್ರದೇಶದಲ್ಲಿನ ಭಾರತೀಯ ನಾಗರಿಕರಿಗೆ ನೀಡಲಾದ ಬೆಂಬಲ ಮತ್ತು ಈ ವಲಯಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು. ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಸಗೊಬ್ಬರ ಇಲಾಖೆಯ ಅಧಿಕಾರಿಯೊಬ್ಬರು ಸಹ ಈ ಗೋಷ್ಠಿಯಲ್ಲಿ ಭಾಗವಹಿಸಿದ್ದರು ಮತ್ತು ದೇಶದಲ್ಲಿ ರಸಗೊಬ್ಬರಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ರಸಗೊಬ್ಬರ ಲಭ್ಯತೆ ಮತ್ತು ಪೂರೈಕೆ ಕ್ರಮಗಳು

ದೇಶದಲ್ಲಿ ರಸಗೊಬ್ಬರಗಳ ಲಭ್ಯತೆ ಮತ್ತು ಸುಗಮ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ವಿವರಿಸುವ ಮೂಲಕ ರಸಗೊಬ್ಬರ ಪರಿಸ್ಥಿತಿಯ ಕುರಿತಾದ ನವೀಕೃತ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಈ ಕೆಳಗಿನ ಅಂಶಗಳನ್ನು ಪ್ರಮುಖವಾಗಿ ಗುರುತಿಸಲಾಯಿತು:

ಪ್ರಸ್ತುತ ಪರಿಸ್ಥಿತಿ

· ರಸಗೊಬ್ಬರ ಆಮದಿಗೆ ಗಲ್ಫ್ ಪ್ರದೇಶವು ಪ್ರಮುಖ ಮೂಲವಾಗಿದ್ದು, ಶೇ. 20–30 ರಷ್ಟು ಯೂರಿಯಾ ಮತ್ತು ಶೇ. 30 ರಷ್ಟು ಡಿಎಪಿ (DAP) ಆಮದು ಈ ಭಾಗದಿಂದಲೇ ಆಗುತ್ತದೆ. ಅಲ್ಲದೆ, ಭಾರತದ ಎಲ್‌ ಎನ್‌ ಜಿ (LNG) ಆಮದಿನ ಸುಮಾರು ಶೇ. 50 ರಷ್ಟು ಪೂರೈಕೆ ಇಲ್ಲೇ ಆಗುತ್ತಿದ್ದು, ಇದು ಯೂರಿಯಾ ಉತ್ಪಾದನೆಗೆ ಅಗತ್ಯವಾದ ಪ್ರಮುಖ ಕಚ್ಚಾ ವಸ್ತುವಾಗಿದೆ. ದೇಶೀಯವಾಗಿ ಪಿ ಆಂಡ್ ಕೆ (P&K) ರಸಗೊಬ್ಬರಗಳ ಉತ್ಪಾದನೆಗೆ ಬಳಸುವ ಅಮೋನಿಯಾ, ಸಲ್ಫರ್ ಮತ್ತು ಸಲ್ಫ್ಯೂರಿಕ್ ಆಸಿಡ್‌ ನಂತಹ ಪ್ರಮುಖ ಕಚ್ಚಾ ವಸ್ತುಗಳು ಮತ್ತು ಮಧ್ಯಂತರಗಳ ಪೂರೈಕೆಯ ಮೇಲೂ ಪರಿಣಾಮ ಬೀರಿದೆ.

· ಜಾಗತಿಕ ರಸಗೊಬ್ಬರ ಮಾರುಕಟ್ಟೆಯು ಎಲ್‌ಎನ್‌ಜಿ, ಅಮೋನಿಯಾ ಮತ್ತು ಸಲ್ಫರ್ ಸೇರಿದಂತೆ ಇನ್‌ ಪುಟ್‌ ಗಳ ಬೆಲೆಯಲ್ಲಿ ತೀವ್ರ ಏರಿಕೆಗೆ ಸಾಕ್ಷಿಯಾಗಿದೆ, ಇದರೊಂದಿಗೆ ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳೂ ಹೆಚ್ಚಾಗಿವೆ.

· ಪ್ರಸ್ತುತ ಪರಿಸ್ಥಿತಿಯಿಂದಾಗಿ ಯೂರಿಯಾದ ದೇಶೀಯ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಇದರ ಪ್ರಭಾವವನ್ನು ತಗ್ಗಿಸಲು ರಸಗೊಬ್ಬರ ಇಲಾಖೆಯು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಲಭ್ಯತೆ

· ಮುಂಬರುವ 2026ರ ಮುಂಗಾರು (ಖಾರಿಫ್) ಹಂಗಾಮಿಗೆ ಒಟ್ಟು ಅಂದಾಜು 390 ಲಕ್ಷ ಟನ್ ರಸಗೊಬ್ಬರದ ಅಗತ್ಯವಿದ್ದು, ಕಳೆದ 2025ರ ಮುಂಗಾರು ಹಂಗಾಮಿನಲ್ಲಿ 361 ಲಕ್ಷ ಟನ್ ರಸಗೊಬ್ಬರ ಮಾರಾಟವಾಗಿತ್ತು.

· ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸ್ತುತ ಸಾಕಷ್ಟು ದಾಸ್ತಾನು ಲಭ್ಯವಿದೆ.

· ಒಟ್ಟು ದಾಸ್ತಾನು ಸುಮಾರು 180 ಲಕ್ಷ ಟನ್‌ ಗಳಷ್ಟಿದ್ದು, ಕಳೆದ ವರ್ಷ ಇದು 147 ಲಕ್ಷ ಟನ್‌ ಗಳಷ್ಟಿತ್ತು.

· ಏಪ್ರಿಲ್ ಮತ್ತು ಮೇ ತಿಂಗಳುಗಳು ಕೃಷಿ ಚಟುವಟಿಕೆಗಳಿಲ್ಲದ ಬಿಡುವಿನ ಅವಧಿಯಾಗಿದ್ದು (lean period), ಮುಂಗಾರು ಹಂಗಾಮಿಗಿಂತ ಮುಂಚಿತವಾಗಿ ದಾಸ್ತಾನು ಸಂಗ್ರಹಿಸಲು ಈ ಅವಧಿಯನ್ನು ಬಳಸಿಕೊಳ್ಳಲಾಗುತ್ತಿದೆ.

ದೇಶೀಯ ಉತ್ಪಾದನೆ

· ಯೂರಿಯಾ ಘಟಕಗಳಿಗೆ ಅನಿಲ ಪೂರೈಕೆಯನ್ನು ಆರಂಭದಲ್ಲಿ ಸುಮಾರು 60% ಕ್ಕೆ ಇಳಿಸಲಾಗಿತ್ತು, ಇದನ್ನು ಹಂತಹಂತವಾಗಿ 65% ಕ್ಕೆ ಹೆಚ್ಚಿಸಲಾಗಿದೆ ಮತ್ತು ಪರ್ಯಾಯ ವ್ಯವಸ್ಥೆಗಳ ಮೂಲಕ 75-80% ಕ್ಕೆ ಮತ್ತಷ್ಟು ಹೆಚ್ಚಿಸಲಾಗಿದೆ. ಇದು ಯೂರಿಯಾ ಉತ್ಪಾದನೆಯನ್ನು ಪ್ರತಿದಿನ 12,000–15,000 ಟನ್‌ ಗಳಷ್ಟು ಹೆಚ್ಚಿಸಿದೆ, ಇದರಿಂದ ಮಾಸಿಕ ಉತ್ಪಾದನಾ ನಷ್ಟವು 9–10 ಲಕ್ಷ ಮೆಟ್ರಿಕ್ ಟನ್‌ ನಿಂದ (LMT) ಸುಮಾರು 6–7 ಲಕ್ಷ ಮೆಟ್ರಿಕ್ ಟನ್‌ ಗೆ (LMT) ಇಳಿಕೆಯಾಗಿದೆ.

· ಈ ಕ್ರಮಗಳು ಯೂರಿಯಾ ಘಟಕಗಳಿಗೆ ಅನಿಲ ಪೂರೈಕೆಯ ನಿರಂತರತೆಯನ್ನು ಖಚಿತಪಡಿಸಿವೆ ಮತ್ತು ಸೂಕ್ತ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲು ಸಮಯವನ್ನು ಒದಗಿಸಿವೆ.

· ಮಾರ್ಚ್‌ನಲ್ಲಿ ದೇಶೀಯ ಉತ್ಪಾದನೆಯು ಯೂರಿಯಾಕ್ಕೆ ಸುಮಾರು 18 ಲಕ್ಷ ಟನ್‌ ಗಳು ಮತ್ತು ಪಿ ಆಂಡ್ ಕೆ (P&K) ರಸಗೊಬ್ಬರಗಳಿಗೆ 9–10 ಲಕ್ಷ ಟನ್‌ ಗಳಷ್ಟಿತ್ತು; ಮಾರ್ಚ್ 2025 ರಲ್ಲಿ ಇದು ಕ್ರಮವಾಗಿ 24.78 ಲಕ್ಷ ಮೆಟ್ರಿಕ್ ಟನ್ (LMT) ಮತ್ತು 11.90 ಲಕ್ಷ ಮೆಟ್ರಿಕ್ ಟನ್ (LMT) ಆಗಿತ್ತು.

· ದೇಶೀಯ ಉತ್ಪಾದನೆಗಾಗಿ ರಸಗೊಬ್ಬರ ಕಂಪನಿಗಳಿಗೆ ಸಾಕಷ್ಟು ಪ್ರಮಾಣದ ಸಲ್ಫರ್ ಪೂರೈಸುವಂತೆ ರಸಗೊಬ್ಬರ ಇಲಾಖೆಯು (DoF) ಇಂಡಿಯನ್ ಆಯಿಲ್ ರಿಫೈನರಿಗಳಿಗೆ ನಿರ್ದೇಶನ ನೀಡಿದೆ.

ರಸಗೊಬ್ಬರಗಳ ಆಮದು ಮತ್ತು ವೈವಿಧ್ಯಮಯ ಮೂಲಗಳು

· ಜಾಗತಿಕ ಲಭ್ಯತೆಯನ್ನು ನಿರ್ಣಯಿಸಲು, ಪೂರೈಕೆ ಮೂಲಗಳನ್ನು ಗುರುತಿಸಲು ಮತ್ತು ಯೂರಿಯಾದ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಆಮದುಗಳನ್ನು ಯೋಜಿಸಲು ಮೀಸಲಾದ ಕಾರ್ಯಪಡೆಯನ್ನು (Task Group) ಸ್ಥಾಪಿಸಲಾಗಿದೆ.

· 13.07 ಲಕ್ಷ ಟನ್ ಯೂರಿಯಾ ಆಮದು ಮಾಡಿಕೊಳ್ಳಲು ಫೆಬ್ರವರಿ ಮಧ್ಯ ಭಾಗದಲ್ಲಿ ಜಾಗತಿಕ ಟೆಂಡರ್ ಅನ್ನು ಈಗಾಗಲೇ ಕರೆಯಲಾಗಿದೆ.

· ಪೂರೈಕೆ ವ್ಯವಸ್ಥೆಗಳಲ್ಲಿ 'ಕೇಪ್ ಆಫ್ ಗುಡ್ ಹೋಪ್' ಮಾರ್ಗದ ಮೂಲಕ ರಷ್ಯಾದಿಂದ ಸುಮಾರು 28 ಲಕ್ಷ ಟನ್‌ಗಳಷ್ಟು ಪೂರೈಕೆ ಸೇರಿದೆ.

· ಸೌದಿ ಅರೇಬಿಯಾದಿಂದ ಡಿಎಪಿ (DAP) ಪೂರೈಕೆಗಾಗಿ ದೀರ್ಘಾವಧಿಯ ವ್ಯವಸ್ಥೆಗಳನ್ನು ಮಾಡಲಾಗಿದೆ (ಐದು ವರ್ಷಗಳವರೆಗೆ ವಾರ್ಷಿಕ 31.10 ಲಕ್ಷ ಟನ್).

· ಹೆಚ್ಚುವರಿ ಪೂರೈಕೆಗಳಲ್ಲಿ ಅಕ್ಟೋಬರ್ 2026 ರವರೆಗೆ ಒಮಿಫ್ಕೊ (OMIFCO - ಒಮಾನ್) ನಿಂದ ವಾರ್ಷಿಕ 10 ಲಕ್ಷ ಟನ್ ಮತ್ತು ಸಾಬಿಕ್ (SABIC - ಸೌದಿ ಅರೇಬಿಯಾ) ನಿಂದ 7 ಲಕ್ಷ ಟನ್ ಯೂರಿಯಾ ಸೇರಿದೆ.

· ಸಲ್ಫರ್ ಮತ್ತು ಎಲ್‌ಎನ್‌ಜಿ (LNG) ನಂತಹ ಪ್ರಮುಖ ಕಚ್ಚಾ ವಸ್ತುಗಳ ಪೂರೈಕೆಯನ್ನು ಸ್ಥಿರಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ.

· ರಷ್ಯಾ, ಮೊರಾಕೊ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಮಲೇಷ್ಯಾ, ಜೋರ್ಡಾನ್, ಕೆನಡಾ, ಅಲ್ಜೀರಿಯಾ, ಈಜಿಪ್ಟ್, ಫಿನ್ಲೆಂಡ್ ಮತ್ತು ಟೋಗೊ ಸೇರಿದಂತೆ ಹಲವು ದೇಶಗಳಲ್ಲಿ ಪೂರೈಕೆ ಮೂಲಗಳನ್ನು ವೈವಿಧ್ಯಗೊಳಿಸಲಾಗುತ್ತಿದೆ.

· ವಿದೇಶಗಳಲ್ಲಿರುವ 16 ಭಾರತೀಯ ರಾಯಭಾರ ಕಚೇರಿಗಳು ಪರ್ಯಾಯ ಪೂರೈಕೆ ಮೂಲಗಳನ್ನು ಗುರುತಿಸಲು ಸಮನ್ವಯ ನಡೆಸುತ್ತಿವೆ.

ರಾಜ್ಯಗಳೊಂದಿಗೆ ಸಮನ್ವಯ

· ರಸಗೊಬ್ಬರಗಳ ಲಭ್ಯತೆಯ ಬಗ್ಗೆ ಯಾವುದೇ ಆತಂಕ ಉಂಟಾಗದಂತೆ ತಡೆಯಲು ರಾಜ್ಯಗಳಿಗೆ ಅರಿವು ಮೂಡಿಸಲಾಗಿದೆ. ಗೌರವಾನ್ವಿತ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು ಈಗಾಗಲೇ 2026ರ ಮಾರ್ಚ್ 26 ರಂದು 10 ಮುಖ್ಯಮಂತ್ರಿಗಳು ಮತ್ತು 12 ರಾಜ್ಯ ಕೃಷಿ ಸಚಿವರೊಂದಿಗೆ ಈ ಕುರಿತು ಮಾತನಾಡಿದ್ದಾರೆ.

· ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ (DA&FW) ಮತ್ತು ರಸಗೊಬ್ಬರ ಇಲಾಖೆಯ (DoF) ಜಂಟಿ ಪ್ರಯತ್ನಗಳ ಮೂಲಕ ಮುಖ್ಯ ಕಾರ್ಯದರ್ಶಿಗಳು ಮತ್ತು ಕೃಷಿ ಕಾರ್ಯದರ್ಶಿಗಳಿಗೂ ಅರಿವು ಮೂಡಿಸಲಾಗಿದೆ.

· ಕೇಂದ್ರ ಸರ್ಕಾರದ DA&FW ಮತ್ತು ರಾಜ್ಯಗಳ ಕೃಷಿ ಇಲಾಖೆಗಳ ಸಮನ್ವಯದೊಂದಿಗೆ ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ರಸಗೊಬ್ಬರ ದುರುಪಯೋಗ, ಕಪ್ಪು ಮಾರುಕಟ್ಟೆ, ಅಕ್ರಮ ದಾಸ್ತಾನು ಇತ್ಯಾದಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ.

· ವಿತರಣಾ ದಕ್ಷತೆಯನ್ನು ಸುಧಾರಿಸಲು ನವೀನ ಕ್ರಮಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುತ್ತಿದೆ.

· ಅಮೋನಿಯಂ ಸಲ್ಫೇಟ್ (AS), TSP, SSP, FOM/LFOM ಮತ್ತು ನ್ಯಾನೋ (NANOs) ನಂತಹ ಪರ್ಯಾಯ ರಸಗೊಬ್ಬರಗಳನ್ನು ಸಿದ್ಧಪಡಿಸಲಾಗಿದೆ.

ಒಟ್ಟಾರೆ ಪ್ರಯತ್ನಗಳು

· ರಸಗೊಬ್ಬರ ಇಲಾಖೆಯು ಜಾಗತಿಕ ಬೆಲೆ ಏರಿಳಿತಗಳನ್ನು ನಿಕಟವಾಗಿ ಗಮನಿಸುತ್ತಿದೆ ಮತ್ತು ಮುಂಬರುವ ಖಾರಿಫ್ ಹಂಗಾಮಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ ದರಗಳ ಬಗ್ಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ.

· ಇಂದಿನವರೆಗೆ, ದೇಶದಲ್ಲಿ ಎಲ್ಲಾ ರೀತಿಯ ರಸಗೊಬ್ಬರಗಳ ಸಮರ್ಪಕ ದಾಸ್ತಾನು ಲಭ್ಯವಿದೆ. ಮುಂದಿನ 2.5 ತಿಂಗಳುಗಳಲ್ಲಿ ಯಾವುದೇ ರಸಗೊಬ್ಬರಗಳ ಪ್ರಮುಖ ಅವಶ್ಯಕತೆ ಇರುವುದಿಲ್ಲ.

· ಪ್ರಸ್ತುತ ಪರಿಸ್ಥಿತಿಗಿಂತ ಮೊದಲು ಇದ್ದ ಅದೇ ಬೆಲೆಗೆ ರೈತರಿಗೆ ರಸಗೊಬ್ಬರಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ. DA&FW ಸಲ್ಲಿಸಿದ ಬೇಡಿಕೆಯಂತೆ ಸಮರ್ಪಕ ಪ್ರಮಾಣದ ರಸಗೊಬ್ಬರಗಳನ್ನು ಒದಗಿಸಲು ರಸಗೊಬ್ಬರ ಇಲಾಖೆ (DoF) ಬದ್ಧವಾಗಿದೆ. ಕ್ಷೇತ್ರದಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರಸಗೊಬ್ಬರ ಉತ್ಪಾದಕರು, ಆಮದುದಾರರು, ಬಂದರು ಪ್ರಾಧಿಕಾರಗಳು, ಭಾರತೀಯ ರೈಲ್ವೆ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಎಲ್ಲಾ ಪಾಲುದಾರರ ನಡುವೆ ಸಮನ್ವಯ ಸಾಧಿಸಲು ರಸಗೊಬ್ಬರ ಇಲಾಖೆಯು 24x7 ಕೆಲಸ ಮಾಡುತ್ತಿದೆ. ಯಾವುದೇ ಆತಂಕದ ಅಗತ್ಯವಿಲ್ಲ.

· ರಸಗೊಬ್ಬರ ಲಭ್ಯತೆ, ಉತ್ಪಾದನೆ, ಆಮದು ಮತ್ತು ಸಾಗಣೆಯ ನಿರಂತರ ಮೇಲ್ವಿಚಾರಣೆಗಾಗಿ ತುರ್ತು ಪರಿಸ್ಥಿತಿ ವಾರ್ ರೂಮ್ ಅನ್ನು ಸ್ಥಾಪಿಸಲಾಗಿದೆ. ಸಮರ್ಪಕ ಪೂರೈಕೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ ಮತ್ತು ರೈತರಲ್ಲಿ ಆತಂಕದ ಅಗತ್ಯವಿಲ್ಲ.

ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇಂಧನ ಪೂರೈಕೆ ಪರಿಸ್ಥಿತಿಯ ಕುರಿತು ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡಿದೆ. ಹಾರ್ಮುಜ್ ಜಲಸಂಧಿ ಮುಚ್ಚಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ (LPG) ನಿರಂತರವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿದೆ. ಈ ಕೆಳಗಿನ ಅಂಶಗಳನ್ನು ಗಮನಿಸಲಾಗಿದೆ:

ಕಚ್ಚಾ ತೈಲ ಮತ್ತು ಸಂಸ್ಕರಣಾಗಾರಗಳು

· ಎಲ್ಲಾ ಸಂಸ್ಕರಣಾಗಾರಗಳು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಪೆಟ್ರೋಲ್ ಹಾಗೂ ಡೀಸೆಲ್‌ ನ ಸಾಕಷ್ಟು ದಾಸ್ತಾನುಗಳನ್ನು ಕಾಯ್ದುಕೊಳ್ಳಲಾಗುತ್ತಿದೆ.

· ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ದೇಶೀಯ ಎಲ್‌ ಪಿ ಜಿ  ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.

ರಿಟೇಲ್ ಔಟ್ಲೆಟ್ಗಳು

· ದೇಶಾದ್ಯಂತ ಎಲ್ಲಾ ರಿಟೇಲ್ ಔಟ್‌ ಲೆಟ್‌ ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.

· ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ ಗೆ 10 ರೂ. ಕಡಿತಗೊಳಿಸಿದೆ.

· ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಡೀಸೆಲ್ ಮೇಲೆ ಪ್ರತಿ ಲೀಟರ್‌ ಗೆ 21.5 ರೂ. ಮತ್ತು ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಮೇಲೆ ಪ್ರತಿ ಲೀಟರ್‌ ಗೆ 29.5 ರೂ. ರಫ್ತು ಸುಂಕವನ್ನು ವಿಧಿಸಿದೆ.

· ವದಂತಿಗಳಿಂದಾಗಿ ಕೆಲವು ಪ್ರದೇಶಗಳಲ್ಲಿ ಆತಂಕದ ಖರೀದಿಯ (panic buying) ನಿದರ್ಶನಗಳು ಕಂಡುಬಂದಿವೆ, ಇದು ಅಸಾಮಾನ್ಯವಾಗಿ ಹೆಚ್ಚಿನ ಮಾರಾಟ ಮತ್ತು ರಿಟೇಲ್ ಔಟ್‌ಲೆಟ್‌ಗಳಲ್ಲಿ ಜನಸಂದಣಿಗೆ ಕಾರಣವಾಗಿದೆ. ಆದಾಗ್ಯೂ, ದೇಶಾದ್ಯಂತದ ಎಲ್ಲಾ ಪೆಟ್ರೋಲ್ ಬಂಕ್‌ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಸಾಕಷ್ಟು ದಾಸ್ತಾನುಗಳು ಲಭ್ಯವಿವೆ.

· ಸಾರ್ವಜನಿಕರು ವದಂತಿಗಳನ್ನು ನಂಬಬಾರದು ಎಂದು ಸರ್ಕಾರವು ತನ್ನ ಸಲಹೆಯನ್ನು ಪುನರುಚ್ಚರಿಸಿದೆ ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡುವಂತೆ ರಾಜ್ಯ ಸರ್ಕಾರಗಳನ್ನು ವಿನಂತಿಸಿದೆ.

ನೈಸರ್ಗಿಕ ಅನಿಲ

  • ಮನೆಬಳಕೆಯ ಪಿ ಎನ್‌ ಜಿ (PNG) ಮತ್ತು ಸಿ ಎನ್‌ ಜಿ (CNG) ಸಾರಿಗೆಗೆ ಶೇ. 100 ರಷ್ಟು ಪೂರೈಕೆಯೊಂದಿಗೆ ಗ್ರಾಹಕರಿಗೆ ಆದ್ಯತೆ ನೀಡಲಾಗಿದೆ.
  • ಗ್ರಿಡ್‌ಗೆ ಸಂಪರ್ಕ ಹೊಂದಿರುವ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಅವರ ಸರಾಸರಿ ಬಳಕೆಯ ಸುಮಾರು ಶೇ. 80 ರಷ್ಟು ಪೂರೈಕೆಯನ್ನು ಕಾಯ್ದುಕೊಳ್ಳಲಾಗುತ್ತಿದೆ.
  • ವಾಣಿಜ್ಯ ಎಲ್‌ ಪಿ ಜಿ (LPG) ಲಭ್ಯತೆಯ ಬಗ್ಗೆ ಇರುವ ಕಳವಳಗಳನ್ನು ಪರಿಹರಿಸಲು ರೆಸ್ಟೋರೆಂಟ್‌ ಗಳು, ಹೋಟೆಲ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ (PNG) ಸಂಪರ್ಕಗಳಿಗೆ ಆದ್ಯತೆ ನೀಡುವಂತೆ ಸಿಜಿಡಿ (CGD) ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.
  • ಐಜಿಎಲ್ (IGL), ಎಂಜಿಎಲ್ (MGL), ಗೇಲ್ ಗ್ಯಾಸ್ (GAIL Gas) ಮತ್ತು ಬಿಪಿಸಿಎಲ್ (BPCL) ಸೇರಿದಂತೆ ಸಿಜಿಡಿ (CGD) ಕಂಪನಿಗಳು ಮನೆಬಳಕೆಯ ಮತ್ತು ವಾಣಿಜ್ಯ ಪಿಎನ್‌ಜಿ (PNG) ಸಂಪರ್ಕಗಳನ್ನು ಉತ್ತೇಜಿಸಲು ಪ್ರೋತ್ಸಾಹಕಗಳನ್ನು ನೀಡುತ್ತಿವೆ.
  • ಸಿಜಿಡಿ (CGD) ನೆಟ್‌ ವರ್ಕ್ ವಿಸ್ತರಣೆಯ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳನ್ನು ವಿನಂತಿಸಿದೆ.
  • ಎಲ್‌ಪಿಜಿ (LPG) ಇಂದ ಪಿಎನ್‌ಜಿ (PNG) ಗೆ ದೀರ್ಘಕಾಲೀನ ಸ್ಥಿತ್ಯಂತರವನ್ನು ಬೆಂಬಲಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಶೇ. 10 ರಷ್ಟು ಹೆಚ್ಚುವರಿ ವಾಣಿಜ್ಯ ಎಲ್‌ ಪಿ ಜಿ (LPG) ಹಂಚಿಕೆಯನ್ನು ನೀಡಲಾಗಿದೆ; ರಾಜ್ಯಗಳು ಕೈಗೊಂಡ ಸುಧಾರಣಾ ಕ್ರಮಗಳ ಆಧಾರದ ಮೇಲೆ ಈ ಹಂಚಿಕೆಯನ್ನು ಶಿಫಾರಸು ಮಾಡಲಾಗಿದೆ.
  • ಪೈಪ್‌ಲೈನ್‌ ಗಳು ಲಭ್ಯವಿರುವಲ್ಲಿ ವಸತಿ ಶಾಲೆಗಳು, ಕಾಲೇಜುಗಳು, ಹಾಸ್ಟೆಲ್‌ ಗಳು, ಸಮುದಾಯ ಅಡುಗೆಮನೆಗಳು ಮತ್ತು ಅಂಗನವಾಡಿ ಅಡುಗೆಮನೆಗಳಿಗೆ 5 ದಿನಗಳೊಳಗೆ ಪಿಎನ್‌ಜಿ (PNG) ಸಂಪರ್ಕಗಳಿಗೆ ಆದ್ಯತೆ ನೀಡುವಂತೆ ಪಿ ಎನ್‌ ಜಿ ಆರ್‌ ಬಿ (PNGRB) ಸಂಸ್ಥೆಯು ಸಿಜಿಡಿ (CGD) ಘಟಕಗಳಿಗೆ ನಿರ್ದೇಶನ ನೀಡಿದೆ.
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 3 ತಿಂಗಳ ಅವಧಿಗೆ ಸಿಜಿಡಿ (CGD) ಮೂಲಸೌಕರ್ಯಕ್ಕಾಗಿ ಕಡಿಮೆ ಸಮಯದ ಮಿತಿಯೊಂದಿಗೆ ತ್ವರಿತ ಅನುಮೋದನೆಯ ಚೌಕಟ್ಟನ್ನು ಅಳವಡಿಸಿಕೊಂಡಿದೆ.
  • ಪೈಪ್‌ಲೈನ್ ವಿಸ್ತರಣೆಗೆ ಸುವ್ಯವಸ್ಥಿತ ಮತ್ತು ಸಮಯೋಚಿತ ಚೌಕಟ್ಟನ್ನು ಒದಗಿಸಲು, ನೈಸರ್ಗಿಕ ಅನಿಲ ಮೂಲಸೌಕರ್ಯದ ವೇಗದ ಬೆಳವಣಿಗೆಯನ್ನು ಸುಗಮಗೊಳಿಸಲು ಮತ್ತು ಇಂಧನ ಭದ್ರತೆಯನ್ನು ಬಲಪಡಿಸಲು ಸರ್ಕಾರವು 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಆದೇಶ, 2026' ಅನ್ನು ಅಧಿಸೂಚಿಸಿದೆ.
  • ರಕ್ಷಣಾ ವಸತಿ ಪ್ರದೇಶಗಳಲ್ಲಿ ಪಿಎನ್‌ಜಿ (PNG) ಮೂಲಸೌಕರ್ಯ ಅಳವಡಿಕೆಯನ್ನು ತ್ವರಿತಗೊಳಿಸಲು ರಕ್ಷಣಾ ಸಚಿವಾಲಯವು ಜೂನ್ 2026 ರವರೆಗೆ ಅಲ್ಪಾವಧಿಯ ನೀತಿ ಮಾರ್ಪಾಡನ್ನು ಹೊರಡಿಸಿದೆ.
  • ಮಾರ್ಚ್ ತಿಂಗಳಿನಲ್ಲಿ, ಮನೆಬಳಕೆಯ ಮತ್ತು ವಾಣಿಜ್ಯ ವಿಭಾಗಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಪಿ ಎನ್‌ ಜಿ (PNG) ಸಂಪರ್ಕಗಳಿಗೆ ಅನಿಲ ಪೂರೈಕೆಯನ್ನು ಆರಂಭಿಸಲಾಗಿದೆ (Gasified).

ಎಲ್ಪಿ ಜಿ 

· ಪ್ರಚಲಿತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್‌ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರೆದಿದೆ.

· ಎಲ್‌ ಪಿ ಜಿ ವಿತರಕರಲ್ಲಿ ಯಾವುದೇ ದಾಸ್ತಾನು ಖಾಲಿಯಾದ (dry-outs) ಬಗ್ಗೆ ವರದಿಯಾಗಿಲ್ಲ.

· ಉದ್ಯಮದ ಆಧಾರದ ಮೇಲೆ ಆನ್‌ ಲೈನ್ ಎಲ್‌ ಪಿಜಿ  ಬುಕ್ಕಿಂಗ್‌ ಗಳು ಸುಮಾರು ಶೇ. 95 ಕ್ಕೆ ಏರಿವೆ.

· ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಗಳು ಫೆಬ್ರವರಿ 2026 ರಲ್ಲಿದ್ದ ಶೇ. 53 ರಿಂದ ಶೇ. 82 ಕ್ಕೆ ಏರಿಕೆಯಾಗಿದ್ದು, ಇದು ದುರುಪಯೋಗವನ್ನು ತಡೆಯಲು ಸಹಾಯ ಮಾಡಿದೆ.

· ಮನೆಗಳಿಗೆ ಅಡೆತಡೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಎಲ್‌ಪಿಜಿ ವಿತರಕರು ಭಾನುವಾರದಂದು ಕಾರ್ಯನಿರ್ವಹಿಸಿದ್ದಾರೆ.

· ಭಾಗಶಃ ವಾಣಿಜ್ಯ ಎಲ್‌ ಪಿ ಜಿ ಪೂರೈಕೆಯನ್ನು (ಶೇ. 20) ಈಗಾಗಲೇ ಮೊದಲೇ ಪುನಃಸ್ಥಾಪಿಸಲಾಗಿತ್ತು. ಹೆಚ್ಚುವರಿ ಹಂಚಿಕೆಗಳನ್ನು ಮಾಡಲಾಗಿದ್ದು, ಸುಧಾರಣೆ ಆಧಾರಿತ ಹಂಚಿಕೆಗಳು ಸೇರಿದಂತೆ ಒಟ್ಟು ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟದ ಶೇ. 50 ಕ್ಕೆ ಮತ್ತು ನಂತರ ಶೇ. 70 ಕ್ಕೆ ಏರಿಸಲಾಗಿದೆ.

· ಇತ್ತೀಚಿನ ಹೆಚ್ಚುವರಿ ಹಂಚಿಕೆಯು ಉಕ್ಕು, ಆಟೋಮೊಬೈಲ್, ಜವಳಿ, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ ಸೇರಿದಂತೆ ವಿಶೇಷ ಬಿಸಿ ಮಾಡುವಿಕೆ ಅಗತ್ಯವಿರುವ ಪ್ರಕ್ರಿಯೆ ಆಧಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡುತ್ತದೆ.

· ಕಳೆದ ವಾರದಲ್ಲಿ 2.6 ಲಕ್ಷಕ್ಕೂ ಹೆಚ್ಚು 5 ಕೆಜಿ ಎಫ್‌ ಟಿ ಎಲ್ (FTL) ಸಿಲಿಂಡರ್‌ ಗಳನ್ನು ಮಾರಾಟ ಮಾಡಲಾಗಿದೆ, ಇದರಲ್ಲಿ ಕಳೆದ 2 ದಿನಗಳಲ್ಲಿ ವಲಸೆ ಕಾರ್ಮಿಕರಿಗಾಗಿ ಮಾರಾಟ ಮಾಡಲಾದ 88,000 ಕ್ಕೂ ಹೆಚ್ಚು ಸಿಲಿಂಡರ್‌ಗಳು ಸೇರಿವೆ.

· ಹೆಚ್ಚಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗೃಹೇತರ ಎಲ್‌ ಪಿ ಜಿ ಹಂಚಿಕೆಗಾಗಿ ಆದೇಶಗಳನ್ನು ಹೊರಡಿಸಿದ್ದು, 14 ಮಾರ್ಚ್ 2026 ರಿಂದ ಸುಮಾರು 41,503 ಮೆಟ್ರಿಕ್ ಟನ್ (MT) ಅನಿಲವನ್ನು ಪಡೆದುಕೊಳ್ಳಲಾಗಿದೆ.

ಸೀಮೆಎಣ್ಣೆ

· ನಿಯಮಿತ ಹಂಚಿಕೆಯ ಜೊತೆಗೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 48,000 ಕೆ.ಎಲ್ (KL) ಹೆಚ್ಚುವರಿ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.

· ಸೀಮೆಎಣ್ಣೆ ಮುಕ್ತ (SKO-free) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಗ್ರಹಣಾ ಮಿತಿಗಳನ್ನು ಹೊಂದಿರುವ ಗೊತ್ತುಪಡಿಸಿದ ಪಿ ಎಸ್‌ ಯು ಒಎಂಸಿ (PSU OMC) ಸೇವಾ ಕೇಂದ್ರಗಳ ಮೂಲಕ ಪಡಿತರ ಸೀಮೆಎಣ್ಣೆ (PDS SKO) ವಿತರಣೆಯನ್ನು ಸುಗಮಗೊಳಿಸಲು ಸರ್ಕಾರವು ಕ್ರಮಗಳನ್ನು ಅಧಿಸೂಚಿಸಿದೆ.

· 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ (SKO) ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ಯಾವುದೇ ಅವಶ್ಯಕತೆ ಇಲ್ಲ ಎಂದು ತಿಳಿಸಿವೆ.

ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಪಾತ್ರ

· ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ಪಿಜಿ (ನಿಯಂತ್ರಣ) ಆದೇಶ, 2000 ರ ಅಡಿಯಲ್ಲಿ, ಅಕ್ರಮ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ ಹಾಗೂ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಅವು ಹೊಂದಿವೆ.

· ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಮುಖ್ಯ ಕಾರ್ಯದರ್ಶಿಗಳು, ಎಸಿಎಸ್ (ACS)/ಪ್ರಧಾನ ಕಾರ್ಯದರ್ಶಿ/ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಾರ್ಯದರ್ಶಿಗಳಿಗೆ ಈ ಕೆಳಗಿನಂತೆ ವಿನಂತಿಸಲಾಗಿದೆ –

o ರಾಜ್ಯ/ಜಿಲ್ಲಾ ಮಟ್ಟದಲ್ಲಿ ದೈನಂದಿನ ಪತ್ರಿಕಾಗೋಷ್ಠಿಗಳನ್ನು ಸಾಂಸ್ಥಿಕಗೊಳಿಸಲು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ಹೊರಡಿಸಲು.

o ಮೀಸಲಾದ ನಿಯಂತ್ರಣ ಕೊಠಡಿಗಳು/ಸಹಾಯವಾಣಿಗಳನ್ನು ಸ್ಥಾಪಿಸಲು.

o ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಸುದ್ದಿ / ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಎದುರಿಸಲು.

o ಜಿಲ್ಲಾ ಆಡಳಿತದ ಮೂಲಕ ದೈನಂದಿನ ಜಾರಿ ಕ್ರಮಗಳನ್ನು ತೀವ್ರಗೊಳಿಸಲು ಮತ್ತು ತೈಲ ಮಾರುಕಟ್ಟೆ ಕಂಪನಿಗಳ (OMCs) ಸಮನ್ವಯದೊಂದಿಗೆ ದಾಳಿ ಹಾಗೂ ತಪಾಸಣೆಗಳನ್ನು ಮುಂದುವರಿಸಲು.

o ತಮ್ಮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಆದೇಶಗಳನ್ನು ಹೊರಡಿಸಲು.

o ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾದ ಹೆಚ್ಚುವರಿ ಸೀಮೆಎಣ್ಣೆಗಾಗಿ (SKO) ಹಂಚಿಕೆ ಆದೇಶಗಳನ್ನು ಹೊರಡಿಸಲು.

o ಆರ್‌ ಒ ಡಬ್ಲ್ಯೂ (RoW)/ಆರ್‌ ಒ ಯು (RoU) ಅನುಮತಿಗಳು, 24x7 ಕೆಲಸದ ಅನುಮತಿಗಳು ಇತ್ಯಾದಿಗಳನ್ನು ತ್ವರಿತಗೊಳಿಸುವುದು ಸೇರಿದಂತೆ ಸಿಜಿಡಿ (CGD) ವಿಸ್ತರಣೆಯನ್ನು ವೇಗಗೊಳಿಸಲು.

o ಪಿ ಎನ್‌ ಜಿ (PNG) ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸಲು.

o ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (MoPNG) ಸಮನ್ವಯಕ್ಕಾಗಿ ಹಿರಿಯ ನೋಡಲ್ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಲು.

· ಭಾರತ ಸರ್ಕಾರವು 27.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡಲು ಮತ್ತು ವದಂತಿ ಹರಡುವುದನ್ನು ತಡೆಯಲು ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸಲು ಹಾಗೂ ಸಾಮಾಜಿಕ ಮಾಧ್ಯಮ/ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸಕ್ರಿಯವಾಗಿ ಮಾಹಿತಿಯನ್ನು ಒದಗಿಸಲು ಮತ್ತೊಮ್ಮೆ ವಿನಂತಿಸಿದೆ.

· ಪ್ರಸ್ತುತ ಆಂಧ್ರಪ್ರದೇಶ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ತಮಿಳುನಾಡು ಮತ್ತು ಅರುಣಾಚಲ ಪ್ರದೇಶ ಸೇರಿದಂತೆ 16 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.

ಜಾರಿ ಕ್ರಮಗಳು

· ಕಳೆದ 24 ಗಂಟೆಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ 2,500ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, 2,000ಕ್ಕೂ ಹೆಚ್ಚು ಸಿಲಿಂಡರ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.

· ಬಿಹಾರ, ಜಾರ್ಖಂಡ್, ಕೇರಳ ಮತ್ತು ಕೆಲವು ಈಶಾನ್ಯ ರಾಜ್ಯಗಳು ಸೇರಿದಂತೆ ಕೆಲವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿ ಪ್ರಯತ್ನಗಳನ್ನು ಬಲಪಡಿಸುವ ಅಗತ್ಯವಿದೆ.

· ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಅಕ್ರಮ ದಾಸ್ತಾನು/ಕಪ್ಪು ಮಾರುಕಟ್ಟೆ ಪ್ರಕರಣಗಳನ್ನು ಪರೀಕ್ಷಿಸಲು ಪಿ ಎಸ್‌ ಯು ಒಎಂಸಿ (PSU OMC) ಅಧಿಕಾರಿಗಳು ದೇಶಾದ್ಯಂತ ಪ್ರತಿದಿನ ಆರ್‌ ಒ (RO) ಮತ್ತು ಎಲ್‌ಪಿಜಿ ವಿತರಕರಲ್ಲಿ ಹಠಾತ್ ತಪಾಸಣೆಗಳನ್ನು ನಡೆಸುತ್ತಿದ್ದಾರೆ.

· ಪಿ ಎಸ್‌ ಯು ಒಎಂಸಿಗಳು ಇಲ್ಲಿಯವರೆಗೆ ಎಲ್‌ಪಿಜಿ ವಿತರಕರಿಗೆ 500ಕ್ಕೂ ಹೆಚ್ಚು ಶೋಕಾಸ್ ನೋಟಿಸ್‌ಗಳನ್ನು ನೀಡಿವೆ.

· ದೆಹಲಿಯನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ.

ಇತರ ಸರ್ಕಾರಿ ಕ್ರಮಗಳು

· ಸರ್ಕಾರವು ಪ್ರಸ್ತುತ ಬಿಕ್ಕಟ್ಟಿನ ಅವಧಿಯಲ್ಲೂ ಮನೆಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ವಿಶೇಷ ಗಮನಹರಿಸಿ, ದೇಶೀಯ ಎಲ್‌ ಪಿ ಜಿ ಮತ್ತು ಪಿ ಎನ್‌ ಜಿ ಪೂರೈಕೆಗೆ ಆದ್ಯತೆ ನೀಡುವುದನ್ನು ಮುಂದುವರಿಸಿದೆ.

· ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಹಲವಾರು ವೈಚಾರಿಕ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇವುಗಳಲ್ಲಿ ಸಂಸ್ಕರಣಾಗಾರಗಳ ಉತ್ಪಾದನೆಯ ಹೆಚ್ಚಳ, ಎಲ್‌ಪಿಜಿ ಬುಕ್ಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿವೆ.

· ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ.

· ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಹಂಚಿಕೆ ಮಾಡುವಂತೆ ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್‌ ಗೆ ನಿರ್ದೇಶನ ನೀಡಿದೆ.

· ಮನೆಬಳಕೆಯ ಮತ್ತು ವಾಣಿಜ್ಯ ಗ್ರಾಹಕರಿಬ್ಬರಿಗೂ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ಸಾರ್ವಜನಿಕ ಸಲಹೆ

· ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಆತಂಕದ ಖರೀದಿಯನ್ನು (panic purchase) ಹಾಗೂ ಅನಗತ್ಯ ಎಲ್‌ ಪಿ ಜಿ ಬುಕ್ಕಿಂಗ್‌ ಗಳನ್ನು ತಪ್ಪಿಸಲು ನಾಗರಿಕರಿಗೆ ಸಲಹೆ ನೀಡಲಾಗಿದೆ.

· ವದಂತಿಗಳ ಬಗ್ಗೆ ಎಚ್ಚರದಿಂದಿರಲು ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಲು ನಾಗರಿಕರಿಗೆ ಸಲಹೆ ನೀಡಲಾಗಿದೆ.

· ಎಲ್‌ ಪಿ ಜಿ ಬುಕ್ಕಿಂಗ್‌ ಗಾಗಿ ಡಿಜಿಟಲ್ ವೇದಿಕೆಗಳನ್ನು ಬಳಸಲು ಮತ್ತು ಎಲ್‌ ಪಿ ಜಿ ವಿತರಕರಿಗೆ ಭೇಟಿ ನೀಡುವುದನ್ನು ತಪ್ಪಿಸಲು ಗ್ರಾಹಕರನ್ನು ಪ್ರೋತ್ಸಾಹಿಸಲಾಗುತ್ತಿದೆ.

· ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ.

· ಪ್ರಸ್ತುತ ಪರಿಸ್ಥಿತಿಯಲ್ಲಿ ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸುವಂತೆ ಎಲ್ಲಾ ನಾಗರಿಕರಲ್ಲಿ ವಿನಂತಿಸಲಾಗಿದೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಪರ್ಷಿಯನ್ ಗಲ್ಫ್‌ ನಲ್ಲಿನ ಕಡಲ ಪರಿಸ್ಥಿತಿಯ ಕುರಿತು ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡಿದೆ, ಜೊತೆಗೆ ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿದೆ. ಈ ಕೆಳಗಿನ ಅಂಶಗಳನ್ನು ತಿಳಿಸಲಾಗಿದೆ:

· ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು, ವಿಶೇಷವಾಗಿ ಭಾರತೀಯ ನಾವಿಕರ ಸುರಕ್ಷತೆ, ಹಡಗುಗಳ ಸಂಚಾರ ಮತ್ತು ಬಂದರು ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಸಚಿವಾಲಯವು ನಿಕಟವಾಗಿ ಗಮನಿಸುತ್ತಿದೆ.

· ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆ ವರದಿಯಾಗಿಲ್ಲ. ಕಳೆದ 72 ಗಂಟೆಗಳಲ್ಲಿಯೂ ಪರಿಸ್ಥಿತಿ ಸ್ಥಿರವಾಗಿದೆ.

· ಸುಮಾರು 485 ಭಾರತೀಯ ನಾವಿಕರನ್ನು ಹೊಂದಿರುವ 18 ಭಾರತೀಯ ಧ್ವಜದ ಹಡಗುಗಳು ಪಶ್ಚಿಮ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿವೆ, ಇದು ಕಳೆದ 72 ಗಂಟೆಗಳಲ್ಲಿ 540 ನಾವಿಕರಿದ್ದ 20 ಹಡಗುಗಳಿಂದ ಇಳಿಕೆಯಾಗಿರುವುದನ್ನು ಪ್ರತಿಬಿಂಬಿಸುತ್ತದೆ. ಶಿಪ್ಪಿಂಗ್ ಮಹಾನಿರ್ದೇಶನಾಲಯವು (DG Shipping) ಹಡಗು ಮಾಲೀಕರು, RPSL ಏಜೆನ್ಸಿಗಳು ಮತ್ತು ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯದ ಮೂಲಕ ನಿಕಟ ಮೇಲ್ವಿಚಾರಣೆಯನ್ನು ಮುಂದುವರಿಸಿದೆ.

· ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು 24×7 ಕಾರ್ಯನಿರ್ವಹಿಸುತ್ತಿದೆ ಮತ್ತು ಸಕ್ರಿಯಗೊಂಡ ನಂತರ 4,555 ಕರೆಗಳು ಮತ್ತು 9,074 ಇಮೇಲ್‌ಗಳನ್ನು ನಿರ್ವಹಿಸಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ 32 ಕರೆಗಳು ಮತ್ತು 89 ಇಮೇಲ್‌ ಗಳು ಹಾಗೂ ಕಳೆದ 72 ಗಂಟೆಗಳಲ್ಲಿ 124 ಕರೆಗಳು ಮತ್ತು 209 ಇಮೇಲ್‌ ಗಳು ಸೇರಿವೆ.

· ಡಿಜಿ ಶಿಪ್ಪಿಂಗ್ ಇದುವರೆಗೆ 950 ಕ್ಕೂ ಹೆಚ್ಚು ಭಾರತೀಯ ನಾವಿಕರ ಸುರಕ್ಷಿತ ಮರುಸ್ಥಾಪನೆಗೆ (repatriation) ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ 8 ಮತ್ತು ಕಳೆದ 72 ಗಂಟೆಗಳಲ್ಲಿ 12 ಜನರು ಸೇರಿದ್ದಾರೆ.

· ಸುಮಾರು 94,114 ಮೆಟ್ರಿಕ್ ಟನ್ (MT) ಎಲ್‌ಪಿಜಿ ಸರಕುಗಳನ್ನು ಹೊತ್ತ ಬಿಡಬ್ಲ್ಯೂ ಟೈರ್ (BW TYR) ಮತ್ತು ಬಿಡಬ್ಲ್ಯೂ ಎಲ್ಮ್ (BW ELM) ಎಂಬ ಎರಡು ಹಡಗುಗಳು 28 ಮಾರ್ಚ್ 2026 ರಂದು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಬಿಡಬ್ಲ್ಯೂ ಟೈರ್ 47,115 ಮೆಟ್ರಿಕ್ ಟನ್ ಎಲ್‌ ಎನ್‌ ಜಿ ಯನ್ನು ಹೊತ್ತೊಯ್ಯುತ್ತಿದ್ದು, ನಾಳೆ ಅಂದರೆ 31.03.2026 ರಂದು ಮಧ್ಯಾಹ್ನ/ಸಂಜೆ ಮುಂಬೈ ತಲುಪುವ ನಿರೀಕ್ಷೆಯಿದೆ ಮತ್ತು ಬಿಡಬ್ಲ್ಯೂ ಎಲ್ಮ್ 46,999 ಮೆಟ್ರಿಕ್ ಟನ್ ಎಲ್‌ ಪಿ ಜಿ ಸರಕುಗಳನ್ನು ಹೊತ್ತೊಯ್ಯುತ್ತಿದ್ದು, 01.04.2026 ರಂದು ಮಧ್ಯಾಹ್ನ/ಸಂಜೆ ಮಂಗಳೂರು ತಲುಪಲು ಯೋಜಿಸಲಾಗಿದೆ.

· ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿ ಸೇರಿದಂತೆ ರಾಜ್ಯ ಕಡಲ ಮಂಡಳಿಗಳು ದೃಢಪಡಿಸಿದಂತೆ, ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿ ಮುಂದುವರಿದಿವೆ ಮತ್ತು ಕಳೆದ 24 ಗಂಟೆಗಳಲ್ಲಿ ಯಾವುದೇ ದಟ್ಟಣೆ ವರದಿಯಾಗಿಲ್ಲ ಹಾಗೂ ಕಳೆದ 72 ಗಂಟೆಗಳಲ್ಲಿಯೂ ಪರಿಸ್ಥಿತಿ ಸ್ಥಿರವಾಗಿದೆ.

· ಭಾರತೀಯ ನಾವಿಕರ ಸುರಕ್ಷತೆ ಮತ್ತು ಅಡೆತಡೆಯಿಲ್ಲದ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರಿಸಿದೆ.

ಪ್ರದೇಶದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ

ಭಾರತೀಯ ಮಿಷನ್‌ ಗಳ ಮೂಲಕ ನಡೆಯುತ್ತಿರುವ ನೆರವು ಸೇರಿದಂತೆ ಈ ಪ್ರದೇಶದ ಇತ್ತೀಚಿನ ಬೆಳವಣಿಗೆಗಳ ಕುರಿತಾದ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹಂಚಿಕೊಂಡಿದೆ. ಈ ಕೆಳಗಿನ ಅಂಶಗಳನ್ನು ತಿಳಿಸಲಾಯಿತು:

· ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 28 ರಂದು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದರು ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಚರ್ಚಿಸಿದರು.

· ಪ್ರಾದೇಶಿಕ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಭಾರತವು ಖಂಡಿಸುತ್ತದೆ ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.

· ನೌಕಾಯಾನದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಹಡಗು ಮಾರ್ಗಗಳನ್ನು ಮುಕ್ತವಾಗಿ ಹಾಗೂ ಸುರಕ್ಷಿತವಾಗಿರಿಸುವ ಅಗತ್ಯವನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.

· ಸೌದಿ ಅರೇಬಿಯಾದಲ್ಲಿರುವ ಭಾರತೀಯ ಸಮುದಾಯದ ಕಲ್ಯಾಣಕ್ಕಾಗಿ ಆ ದೇಶವು ನೀಡುತ್ತಿರುವ ನಿರಂತರ ಬೆಂಬಲಕ್ಕಾಗಿ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದುವರಿದು ಕೆಳಗಿನ ಮಾಹಿತಿಯನ್ನು ನೀಡಲಾಯಿತು:

· ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿಕಟವಾಗಿ ಗಮನಿಸುತ್ತಿದೆ. ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಅತ್ಯುನ್ನತ ಆದ್ಯತೆ ನೀಡಲಾಗಿದೆ.

· ಭಾರತೀಯ ನಾಗರಿಕರು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಮೀಸಲಾದ ವಿಶೇಷ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ ಹಾಗೂ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಕಟ ಸಮನ್ವಯವನ್ನು ಕಾಯ್ದುಕೊಳ್ಳಲಾಗಿದೆ.

· ಈ ಪ್ರದೇಶದಾದ್ಯಂತ ಇರುವ ಭಾರತೀಯ ಮಿಷನ್ ಮತ್ತು ಪೋಸ್ಟ್‌ಗಳು 24×7 ಸಹಾಯವಾಣಿಗಳೊಂದಿಗೆ ಹಗಲಿರುಳು ಕಾರ್ಯನಿರ್ವಹಿಸುತ್ತಿವೆ. ಅವು ನಿಯಮಿತವಾಗಿ ಸಲಹೆಗಳನ್ನು (advisories) ನೀಡುತ್ತಿವೆ ಮತ್ತು ಭಾರತೀಯ ಸಮುದಾಯದ ಸಂಸ್ಥೆಗಳು, ಸಂಘಗಳು ಹಾಗೂ ಕಂಪನಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಮತ್ತು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ.

· ವಾಯುಪ್ರದೇಶದ ನಿರ್ಬಂಧಗಳ ಹಿನ್ನೆಲೆಯಲ್ಲಿ ವೀಸಾ, ಕಾನ್ಸುಲರ್ ಸೇವೆಗಳು, ನೆರೆಯ ದೇಶಗಳ ಮೂಲಕ ಪ್ರಯಾಣವನ್ನು ಸುಗಮಗೊಳಿಸುವ ಮೂಲಕ ಮತ್ತು ಅಗತ್ಯವಿರುವ ಕಡೆಗಳಲ್ಲಿ ಲಾಜಿಸ್ಟಿಕಲ್ ಬೆಂಬಲವನ್ನು ನೀಡುವ ಮೂಲಕ ಮಿಷನ್‌ಗಳು ಭಾರತೀಯ ನಾಗರಿಕರಿಗೆ ಸಕ್ರಿಯವಾಗಿ ಸಹಾಯ ಮಾಡುತ್ತಿವೆ.

· ಗಲ್ಫ್ ದೇಶಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅವರ ಶೈಕ್ಷಣಿಕ ವರ್ಷಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

· ಶೈಕ್ಷಣಿಕ ಕಳವಳಗಳನ್ನು ಪರಿಹರಿಸಲು ಮಿಷನ್‌ ಗಳು ಸ್ಥಳೀಯ ಅಧಿಕಾರಿಗಳು, ಭಾರತೀಯ ಶಾಲೆಗಳು, ಸಂಬಂಧಿತ ಶಿಕ್ಷಣ ಮಂಡಳಿಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯೊಂದಿಗೆ (NTA) ಸಮನ್ವಯ ನಡೆಸುತ್ತಿವೆ.

· ಈ ಪ್ರದೇಶದಲ್ಲಿನ 10 ಮತ್ತು 12 ನೇ ತರಗತಿ ಫಲಿತಾಂಶಗಳ ಘೋಷಣೆಗಾಗಿ ಸಿಬಿಎಸ್ಇ (CBSE) ಮೌಲ್ಯಮಾಪನ ಯೋಜನೆಯನ್ನು ಅಧಿಸೂಚಿಸಿದೆ. ಐ ಸಿ ಎಸ್ ಇ (ICSE), ಕೇರಳ ಮಂಡಳಿಗಳು ಮತ್ತು ಜೆಇಇ (JEE) ಹಾಗೂ ನೀಟ್ (NEET) ನಂತಹ ಪರೀಕ್ಷೆಗಳಿಗೆ ಸಂಬಂಧಿಸಿದ ಕಳವಳಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರನ್ನು ನಿಯಮಿತವಾಗಿ ಸಂಪರ್ಕಿಸುವ ಮೂಲಕ ಪರಿಹರಿಸಲಾಗುತ್ತಿದೆ.

· ಭಾರತೀಯ ನಾವಿಕರಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಕಾನ್ಸುಲರ್ ನೆರವು ನೀಡಲು, ಕುಟುಂಬಗಳೊಂದಿಗೆ ಸಂವಹನಕ್ಕೆ ಅನುಕೂಲ ಮಾಡಿಕೊಡಲು ಮತ್ತು ಸ್ವದೇಶಕ್ಕೆ ಮರಳುವ ವಿನಂತಿಗಳಿಗೆ ಸಹಾಯ ಮಾಡಲು ಮಿಷನ್‌ಗಳು ಹಡಗಿನ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿವೆ.

· ಒಟ್ಟಾರೆ ವಿಮಾನಯಾನ ಪರಿಸ್ಥಿತಿಯು ಸುಧಾರಿಸುತ್ತಿದೆ. ಫೆಬ್ರವರಿ 28 ರಿಂದ ಸುಮಾರು 5,50,000 ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ.

· ಯುಎಇ (UAE) ನಲ್ಲಿ, ಏರ್‌ಲೈನ್‌ಗಳು ಕಾರ್ಯಾಚರಣೆ ಮತ್ತು ಸುರಕ್ಷತಾ ಪರಿಗಣನೆಗಳ ಆಧಾರದ ಮೇಲೆ ಸೀಮಿತ ನಿಗದಿತವಲ್ಲದ (non-scheduled) ವಿಮಾನಗಳನ್ನು ನಿರ್ವಹಿಸುವುದನ್ನು ಮುಂದುವರಿಸಿವೆ. ಇಂದು ಭಾರತಕ್ಕೆ ಸುಮಾರು 85 ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

· ಸೌದಿ ಅರೇಬಿಯಾ ಮತ್ತು ಒಮಾನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ವಿವಿಧ ಸ್ಥಳಗಳಿಗೆ ವಿಮಾನಗಳು ಸಂಚರಿಸುತ್ತಿವೆ.

· ಕತಾರ್ ವಾಯುಪ್ರದೇಶವು ಭಾಗಶಃ ಮುಕ್ತವಾಗಿರುವುದರಿಂದ, ಕತಾರ್ ಏರ್ವೇಸ್ ಇಂದು ಭಾರತಕ್ಕೆ ಸುಮಾರು 10 ವಿಮಾನಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.

· ಕುವೈತ್ ಮತ್ತು ಬಹ್ರೇನ್ ವಾಯುಪ್ರದೇಶಗಳು ಮುಚ್ಚಲ್ಪಟ್ಟಿವೆ. ಜಜೀರಾ ಏರ್‌ ವೇಸ್ ಮತ್ತು ಗಲ್ಫ್ ಏರ್ ಕಂಪನಿಗಳು ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತದ ವಿವಿಧ ಸ್ಥಳಗಳಿಗೆ ನಿಗದಿತವಲ್ಲದ ವಾಣಿಜ್ಯ ವಿಮಾನಗಳನ್ನು ನಿರ್ವಹಿಸುತ್ತಿವೆ.

· ವಾಯುಪ್ರದೇಶದ ನಿರ್ಬಂಧಗಳಿಂದಾಗಿ, ಭಾರತೀಯ ನಾಗರಿಕರಿಗೆ ಪರ್ಯಾಯ ಮಾರ್ಗಗಳ ಮೂಲಕ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ. ಇದರಲ್ಲಿ ಇರಾನ್‌ ನಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ, ಇಸ್ರೇಲ್‌ ನಿಂದ ಈಜಿಪ್ಟ್ ಮತ್ತು ಜೋರ್ಡಾನ್ ಮೂಲಕ, ಇರಾಕ್‌ ನಿಂದ ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮೂಲಕ ಹಾಗೂ ಕುವೈತ್ ಮತ್ತು ಬಹ್ರೇನ್‌ನಿಂದ ಸೌದಿ ಅರೇಬಿಯಾ ಮೂಲಕ ಪ್ರಯಾಣ ಸೇರಿದೆ.

· ಕುವೈತ್‌ ನಲ್ಲಿ ನಡೆದ ದಾಳಿಯಲ್ಲಿ ಭಾರತೀಯ ನಾಗರಿಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರವು ಸಂತಾಪ ವ್ಯಕ್ತಪಡಿಸಿದೆ ಮತ್ತು ಪಾರ್ಥಿವ ಶರೀರವನ್ನು ಶೀಘ್ರವಾಗಿ ತಾಯ್ನಾಡಿಗೆ ಮರಳಿಸಲು ಮಿಷನ್ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುತ್ತಿದೆ.

· ವಿವಿಧ ಘಟನೆಗಳಲ್ಲಿ ಒಟ್ಟು 8 ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ. ಮಿಷನ್‌ಗಳು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಮುಂದುವರಿಸಿವೆ ಮತ್ತು ಪೀಡಿತ ಕುಟುಂಬಗಳಿಗೆ ಸಹಾಯವನ್ನು ನೀಡುತ್ತಿವೆ.

 

*****


(ಪ್ರಕಟಣೆ ಐ.ಡಿ.: 2247083) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Gujarati , Telugu , Malayalam