|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯದ ಸುದ್ದಿಗೋಷ್ಠಿ
ಪಿ ಎನ್ ಜಿ (PNG) ಕಡೆಗೆ ಪರಿವರ್ತನೆಯನ್ನು ಬೆಂಬಲಿಸುವ ಸುಧಾರಣೆಗಳಿಗೆ ಅನುಗುಣವಾಗಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್ ಪಿ ಜಿ (LPG) ಹಂಚಿಕೆಯಲ್ಲಿ ಹೆಚ್ಚುವರಿ 10 ಪ್ರತಿಶತವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಮನೆಬಳಕೆಯ ಅನಿಲ ಸಂಪರ್ಕಗಳನ್ನು ತ್ವರಿತಗೊಳಿಸಲು ಮತ್ತು ಅಳವಡಿಕೆಯನ್ನು ಉತ್ತೇಜಿಸಲು ಗ್ರಾಹಕರಿಗೆ ಕಾಲಮಿತಿಗಳನ್ನು ಸ್ಪಷ್ಟವಾಗಿ ತಿಳಿಸಲು ಸಿಜಿಡಿ (CGD) ಘಟಕಗಳಿಗೆ ನಿರ್ದೇಶನ ನೀಡಲಾಗಿದೆ. ದೇಶೀಯ ಎಲ್ ಪಿ ಜಿ ಉತ್ಪಾದನೆಯು ಶೇಕಡಾ 40 ರಷ್ಟು ಹೆಚ್ಚಳವಾಗಿದೆ. ಆದ್ಯತಾ ವಲಯಗಳು ಸಂರಕ್ಷಿತ ಅನಿಲ ಪೂರೈಕೆಯನ್ನು ಪಡೆಯುವುದನ್ನು ಮುಂದುವರೆಸಿವೆ. ಭಾರತದ ಕಡಲ ವಲಯವು ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಂದರುಗಳಲ್ಲಿ ಯಾವುದೇ ದಟ್ಟಣೆ ವರದಿಯಾಗಿಲ್ಲ. ಗಲ್ಫ್ ಮತ್ತು ಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತೀಯ ಮಿಷನ್ ಗಳು ಬೆಂಬಲವನ್ನು ಹೆಚ್ಚಿಸಿವೆ; ರಾಯಭಾರ ಕಚೇರಿಯಿಂದ ಅಗತ್ಯ ನೆರವು ನೀಡಲಾಗುತ್ತಿದೆ. ಹೆಚ್ಚುವರಿ ವಿಮಾನಗಳ ಕಾರ್ಯಾಚರಣೆಯೊಂದಿಗೆ ವಿಮಾನಯಾನ ಪರಿಸ್ಥಿತಿಯು ಸುಧಾರಿಸುತ್ತಲೇ ಇದೆ.
ಪ್ರಕಟಣಾ ದಿನಾಂಕ:
18 MAR 2026 5:37PM by PIB Bengaluru
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಇಂದು ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಬದಲಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡಲು ಇಂತಹ ಸಂವಾದಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ಇಂದಿನ ಮಾಹಿತಿಯ ಸಂದರ್ಭದಲ್ಲಿ, ಇಂಧನ ಲಭ್ಯತೆ, ಕಡಲ ಕಾರ್ಯಾಚರಣೆಗಳು ಮತ್ತು ಆ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ನೀಡುವ ಕುರಿತು ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಲಾಯಿತು.
ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ
ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯ ನಡುವೆಯೂ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿಯ (LPG) ಸ್ಥಿರ ಲಭ್ಯತೆಯನ್ನು ಕಾಯ್ದುಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳು ಮತ್ತು ಇಂಧನ ಪೂರೈಕೆಯ ಸನ್ನಿವೇಶದ ಕುರಿತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಾಹಿತಿಯನ್ನು ಒದಗಿಸಿದೆ. ಸಚಿವಾಲಯವು ಹೀಗೆ ತಿಳಿಸಿದೆ:
ಕಚ್ಚಾ ತೈಲ ಮತ್ತು ಸಂಸ್ಕರಣಾಗಾರಗಳು
- ಎಲ್ಲಾ ಸಂಸ್ಕರಣಾಗಾರಗಳು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಾರತವು ಪೆಟ್ರೋಲ್ ಮತ್ತು ಡೀಸೆಲ್‌ನ ಸಾಕಷ್ಟು ಉತ್ಪಾದನೆಯನ್ನು ಹೊಂದಿದ್ದು, ದೇಶೀಯ ಬೇಡಿಕೆಯನ್ನು ಪೂರೈಸಲು ಯಾವುದೇ ಆಮದುಗಳ ಅಗತ್ಯವಿಲ್ಲ.
- ಸಂಸ್ಕರಣಾಗಾರಗಳಿಂದ ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಸುಮಾರು 40 ಪ್ರತಿಶತದಷ್ಟು ಹೆಚ್ಚಿಸಲಾಗಿದೆ.
ಚಿಲ್ಲರೆ ಮಾರಾಟ ಮಳಿಗೆಗಳು
ತೈಲ ಮಾರುಕಟ್ಟೆ ಕಂಪನಿಗಳಿಂದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನ ಖಾಲಿಯಾದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯನ್ನು ನಿಯಮಿತವಾಗಿ ಮುಂದುವರಿಸಲಾಗುತ್ತಿದೆ.
ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ನಾಗರಿಕರು ಆತಂಕದ ಖರೀದಿ ಮಾಡಬಾರದು ಎಂದು ಸಲಹೆ ನೀಡಲಾಗಿದೆ.
ನೈಸರ್ಗಿಕ ಅನಿಲ
- ಮನೆಬಳಕೆಯ PNG ಮತ್ತು CNG ಸಾರಿಗೆಗೆ 100 ಪ್ರತಿಶತ ಪೂರೈಕೆ ಸೇರಿದಂತೆ ಆದ್ಯತಾ ವಲಯಗಳು ಸಂರಕ್ಷಿತ ಅನಿಲ ಪೂರೈಕೆಯನ್ನು ಪಡೆಯುವುದನ್ನು ಮುಂದುವರೆಸಿವೆ, ಆದರೆ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪೂರೈಕೆಯನ್ನು ಸುಮಾರು 80 ಪ್ರತಿಶತಕ್ಕೆ ನಿಯಂತ್ರಿಸಲಾಗುತ್ತಿದೆ.
- ವಾಣಿಜ್ಯ ಎಲ್ ಪಿ ಜಿ ಗ್ರಾಹಕರು ಪಿಎನ್‌ಜಿಗೆ ಬದಲಾಗಲು ಪ್ರೋತ್ಸಾಹಿಸಲಾಗುತ್ತಿದೆ ಮತ್ತು ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಆಸ್ಪತ್ರೆಗಳು ಮತ್ತು ಹಾಸ್ಟೆಲ್ ಗಳಂತಹ ಸಂಸ್ಥೆಗಳು ಅಧಿಕೃತ ನಗರ ಅನಿಲ ವಿತರಣಾ (CGD) ಘಟಕಗಳಿಂದ ಪಿಎನ್‌ಜಿ ಸಂಪರ್ಕಗಳನ್ನು ಪಡೆಯಬಹುದು.
- IGL, MGL, GAIL Gas ಮತ್ತು BPCL ಸೇರಿದಂತೆ ಸಿಜಿಡಿ ಕಂಪನಿಗಳು ಮನೆಬಳಕೆ ಮತ್ತು ವಾಣಿಜ್ಯ ಪಿಎನ್‌ಜಿ ಸಂಪರ್ಕಗಳನ್ನು ಉತ್ತೇಜಿಸಲು ಪ್ರೋತ್ಸಾಹಕಗಳನ್ನು ನೀಡುತ್ತಿವೆ.
- ಸ್ವಚ್ಛ ಮತ್ತು ದಕ್ಷ ಪಿ ಎನ್ ಜಿ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ಸಿಜಿಡಿ ಜಾಲವನ್ನು ವಿಸ್ತರಿಸುತ್ತಿದೆ ಮತ್ತು ಉದ್ಯಮಗಳು ಸಂಪರ್ಕಗಳಿಗಾಗಿ ಅಧಿಕೃತ ಸಿಜಿಡಿ ಘಟಕಗಳನ್ನು ಸಂಪರ್ಕಿಸಲು ಪ್ರೋತ್ಸಾಹಿಸಲಾಗುತ್ತಿದೆ.
- ಬೀಜ ಒಣಗಿಸುವ ಘಟಕಗಳು ಮತ್ತು ಕೋಲ್ಡ್ ಸ್ಟೋರೇಜ್ ಗಳಂತಹ ನಿರ್ಣಾಯಕ ವಲಯಗಳಿಗೆ ಗರಿಷ್ಠ ಅನಿಲ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಿಜಿಡಿ ಘಟಕಗಳಿಗೆ ಸಲಹೆ ನೀಡಲಾಗಿದೆ.
- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯು (PNGRB), ಅರ್ಜಿಯ ಸಲ್ಲಿಕೆ ಮತ್ತು ಅನಿಲ ಪೂರೈಕೆಯ ಪ್ರಾರಂಭದ ನಡುವಿನ ಅವಧಿಯನ್ನು ಕಡಿಮೆ ಮಾಡಲು ಸಿಜಿಡಿ ಘಟಕಗಳಿಗೆ ನಿರ್ದೇಶನ ನೀಡಿದೆ, ಜೊತೆಗೆ ಅಳವಡಿಕೆಯನ್ನು ಉತ್ತೇಜಿಸಲು ಕಾಲಮಿತಿಗಳನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಲು ಸೂಚಿಸಿದೆ.
- ಮುದ್ರಣ, ರೇಡಿಯೋ, ಸಾಮಾಜಿಕ ಮಾಧ್ಯಮ ಮತ್ತು ಪಾಲುದಾರರು ಹಾಗೂ ಪ್ರಭಾವಿಗಳನ್ನು ಒಳಗೊಂಡ ಸಾರ್ವಜನಿಕ ಸಂಪರ್ಕ ಚಟುವಟಿಕೆಗಳ ಮೂಲಕ ಪ್ರಚಾರ ಸೇರಿದಂತೆ ಪಿಎನ್‌ಜಿ ಅಭಿಯಾನದ ಅಡಿಯಲ್ಲಿ ಸಾಮೂಹಿಕ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳಲು ಸಿಜಿಡಿ ಘಟಕಗಳಿಗೆ ಸಲಹೆ ನೀಡಲಾಗಿದೆ.
- ಭಾರತ ಸರ್ಕಾರವು 16 ಮಾರ್ಚ್ 2026 ರ ದಿನಾಂಕದ ಪತ್ರದ ಮೂಲಕ, ಬಾಕಿ ಉಳಿದಿರುವ ಅರ್ಜಿಗಳಿಗೆ ಸಮ್ಮತಿತ ಅನುಮತಿಗಳನ್ನು (deemed permissions) ನೀಡುವ ಮೂಲಕ, 24 ಗಂಟೆಗಳ ಒಳಗೆ ಹೊಸ ಅನುಮತಿಗಳನ್ನು ಅನುಮೋದಿಸುವ ಮೂಲಕ, ರಸ್ತೆ ಪುನಃಸ್ಥಾಪನೆ ಮತ್ತು ಅನುಮತಿ ಶುಲ್ಕಗಳನ್ನು ಮನ್ನಾ ಮಾಡುವ ಮೂಲಕ, ಕೆಲಸದ ಸಮಯ ಮತ್ತು ಋತುಗಳನ್ನು ಸಡಿಲಗೊಳಿಸುವ ಮೂಲಕ ಮತ್ತು ಸಮನ್ವಯ ಹಾಗೂ ವೇಗದ ಅನುಷ್ಠಾನಕ್ಕಾಗಿ ರಾಜ್ಯ ನೋಡಲ್ ಅಧಿಕಾರಿಗಳನ್ನು ನೇಮಿಸುವ ಮೂಲಕ ಸಿಜಿಡಿ ವಿಸ್ತರಣೆಗೆ ಅನುಕೂಲ ಮಾಡಿಕೊಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ವಿನಂತಿಸಿದೆ.
- ಭಾರತ ಸರ್ಕಾರವು 18 ಮಾರ್ಚ್ 2026 ರ ದಿನಾಂಕದ ಪತ್ರದ ಮೂಲಕ, ಎಲ್ ಪಿ ಜಿಯಿಂದ ಪಿ ಎನ್ ಜಿಗೆ ಪರಿವರ್ತನೆಯನ್ನು ಬೆಂಬಲಿಸುವ ಸುಧಾರಣೆಗಳಿಗೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ 10 ಪ್ರತಿಶತ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ನೀಡಿದೆ, ಇದರಲ್ಲಿ ಈ ಕೆಳಗಿನವು ಸೇರಿವೆ:
- ಸಿಜಿಡಿ ಅರ್ಜಿಗಳ ಅನುಮೋದನೆ ಮತ್ತು ದೂರುಗಳ ಪರಿಹಾರಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಸಮಿತಿಗಳ ರಚನೆಗಾಗಿ 1% ಹೆಚ್ಚುವರಿ ಹಂಚಿಕೆ,
- ಸಮ್ಮತಿತ ಸಿಜಿಡಿ ಅನುಮತಿಗಳನ್ನು ನೀಡುವ ಆದೇಶಗಳನ್ನು ಹೊರಡಿಸಲು 2% ಹೆಚ್ಚುವರಿ ಹಂಚಿಕೆ,
- ಸಿಜಿಡಿ ಘಟಕಗಳಿಗಾಗಿ “Dig and restore scheme” ಪರಿಚಯಿಸಲು 3% ಹೆಚ್ಚುವರಿ ಹಂಚಿಕೆ ಮತ್ತು
- ವಾರ್ಷಿಕ ಬಾಡಿಗೆ/ಲೀಸ್ ಶುಲ್ಕವನ್ನು ಕಡಿಮೆ ಮಾಡಲು 4% ಹೆಚ್ಚುವರಿ ಹಂಚಿಕೆ.
- ಸಿಜಿಡಿ ನೆಟ್ ವರ್ಕ್ ವಿಸ್ತರಣೆಯನ್ನು ವೇಗಗೊಳಿಸಲು ಮತ್ತು ಮನೆಬಳಕೆ, ವಾಣಿಜ್ಯ ಹಾಗೂ ಕೈಗಾರಿಕಾ ಗ್ರಾಹಕರಿಗೆ ಪಿ ಎನ್ ಜಿ ಸಂಪರ್ಕಗಳನ್ನು ತ್ವರಿತಗೊಳಿಸಲು ಈ ಸುಧಾರಣೆಗಳನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸಲಾಗಿದೆ.
- ಈ ಕ್ರಮಗಳು ಎಲ್ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವಾಣಿಜ್ಯ ಗ್ರಾಹಕರು ಪಿಎನ್‌ಜಿಗೆ ಬದಲಾಗುವುದನ್ನು ಸುಲಭಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಎಲ್ಪಿಜಿ (LPG)
- ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್ ಪಿಜಿ ಪೂರೈಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
- ವಿತರಕರಲ್ಲಿ ಯಾವುದೇ ಇಂಧನ ಖಾಲಿಯಾದ (dry-outs) ಪ್ರಕರಣಗಳು ವರದಿಯಾಗಿಲ್ಲ.
- ಆನ್ ಲೈನ್ ಎಲ್ ಪಿಜಿ ಬುಕಿಂಗ್ ಶೇಕಡಾ 83 ರಿಂದ 93 ಕ್ಕೆ ಏರಿಕೆಯಾಗಿದೆ.
- ವಿತರಣೆಯನ್ನುತಡೆಯಲು ಡೆಲಿವರಿ ದೃಢೀಕರಣ ಕೋಡ್ (DAC) ವ್ಯಾಪ್ತಿಯನ್ನು ಶೇಕಡಾ 53 ರಿಂದ (ಫೆಬ್ರವರಿ 2026) ಸುಮಾರು ಶೇಕಡಾ 81 ಕ್ಕ್ಕೆ ವಿಸ್ತರಿಸಲಾಗಿದೆ.
- ಮನೆಬಳಕೆಯ ಎಲ್ ಪಿ ಜಿ ಸಿಲಿಂಡರ್ ವಿತರಣೆಯು ಎಂದಿನಂತೆ ಮುಂದುವರಿದಿದೆ.
- ಬಿಹಾರ, ಛತ್ತೀಸ್ ಗಢ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಮಣಿಪುರ, ರಾಜಸ್ಥಾನ, ಉತ್ತರಾಖಂಡ ಮತ್ತು ಇತರ ಸುಮಾರು 15 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಗೃಹಬಳಕೆಯಲ್ಲದ ಎಲ್‌ಪಿಜಿ ಹಂಚಿಕೆಗೆ ಆದೇಶ ಹೊರಡಿಸಿವೆ ಮತ್ತು ದೇಶಾದ್ಯಂತ ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ.
ಸೀಮೆಎಣ್ಣೆ (Kerosene)
- ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 48,000 ಕೆ.ಎಲ್ (KL) ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದ್ದು, ವಿತರಣಾ ಕೇಂದ್ರಗಳನ್ನು ಗುರುತಿಸಲು ವಿನಂತಿಸಲಾಗಿದೆ.
- ಬಿಹಾರ, ಛತ್ತೀಸ್‌ಗಢ, ಗುಜರಾತ್, ಕರ್ನಾಟಕ, ಕೇರಳ, ಮಣಿಪುರ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಇತರ ಸುಮಾರು 12 ರಾಜ್ಯಗಳು ಎಸ್ ಕೆ ಒ (SKO) ಹಂಚಿಕೆ ಆದೇಶಗಳನ್ನು ಹೊರಡಿಸಿವೆ, ಆದರೆ ಕೆಲವು ರಾಜ್ಯಗಳು ತಮಗೆ ಅಗತ್ಯವಿಲ್ಲ ಎಂದು ಸೂಚಿಸಿವೆ.
ರಾಜ್ಯ ಸರ್ಕಾರಗಳು ನಡೆಸಿದ ಸಭೆಗಳು
- ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಗತ್ಯ ವಸ್ತುಗಳ ಕಾಯ್ದೆ ಮತ್ತು ಎಲ್ ಪಿ ಜಿ ನಿಯಂತ್ರಣ ಆದೇಶದ ಅಡಿಯಲ್ಲಿ ಅಗತ್ಯ ವಸ್ತುಗಳ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಯಾವುದೇ ಅಕ್ರಮ ದಾಸ್ತಾನು ಹಾಗೂ ಕಪ್ಪು ಸಂತೆ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುತ್ತಿವೆ.
- ದುಷ್ಕೃತ್ಯಗಳನ್ನು ತಡೆಯಲು ಸಮನ್ವಯದಿಂದ ಕೂಡಿದ ತಪಾಸಣೆ ಮತ್ತು ಹಠಾತ್ ದಾಳಿಗಳನ್ನು ನಡೆಸುವಂತೆ ಭಾರತ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
- 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಸ್ಥಾಪಿಸಿವೆ ಮತ್ತು 22 ರಾಜ್ಯಗಳು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ರಚಿಸಿವೆ; ಉಳಿದವುಗಳಿಗೆ ಆದ್ಯತೆಯ ಮೇಲೆ ಇದನ್ನು ಮಾಡಲು ಸಲಹೆ ನೀಡಲಾಗಿದೆ.
- ರಾಜಸ್ಥಾನ, ತೆಲಂಗಾಣ, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮುಂತಾದ 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿವೆ.
- ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸದ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತುರ್ತಾಗಿ ಇದನ್ನು ಮಾಡಲು ವಿನಂತಿಸಲಾಗಿದೆ.
ಜಾರಿ ಕ್ರಮಗಳು
- ಎಲ್ ಪಿ ಜಿ ಅಕ್ರಮ ದಾಸ್ತಾನು ಮತ್ತು ಕಪ್ಪು ಸಂತೆ ಮಾರಾಟವನ್ನು ತಡೆಯಲು ರಾಜ್ಯಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ.
- ಇತ್ತೀಚಿನ ಪ್ರಕರಣಗಳಲ್ಲಿ ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲಿ ಎಲ್ ಪಿ ಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಜಾರಿ ಏಜೆನ್ಸಿಗಳಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.
- ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಕ್ರಮಗಳನ್ನು ತಡೆಯಲು ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎಲ್ ಪಿ ಜಿ ವಿತರಣಾ ಕೇಂದ್ರಗಳಲ್ಲಿ 2,300 ಕ್ಕೂ ಹೆಚ್ಚು ಹಠಾತ್ ತಪಾಸಣೆಗಳನ್ನು ನಡೆಸಿವೆ.
ಸರ್ಕಾರದ ಇತರ ಕ್ರಮಗಳು
- ಸರ್ಕಾರವು ನಿರಂತರ ಎಲ್ ಪಿ ಜಿ ಪೂರೈಕೆ ಮತ್ತು ಪಿಎನ್‌ಜಿ ವಿಸ್ತರಣೆಗೆ ಆದ್ಯತೆ ನೀಡುವುದನ್ನು ಮುಂದುವರೆಸಿದೆ, ವಿಶೇಷವಾಗಿ ಮನೆಗಳು ಮತ್ತು ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಂತಹ ಆದ್ಯತಾ ವಲಯಗಳಿಗೆ.
- ಪೂರೈಕೆ ಮತ್ತು ಬೇಡಿಕೆಯ ಕ್ರಮಗಳಲ್ಲಿ ಹೆಚ್ಚಿದ ಸಂಸ್ಕರಣಾಗಾರ ಉತ್ಪಾದನೆ, ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಪರಿಷ್ಕೃತ ಬುಕಿಂಗ್ ಅಂತರ ಮತ್ತು ಆದ್ಯತೆಯ ಹಂಚಿಕೆ ಸೇರಿವೆ.
- ಎಲ್ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
- ಸಾರ್ವಜನಿಕ ವಲಯದ ತೈಲ ಕಂಪನಿಗಳು ಡಿಜಿಟಲ್ ಬುಕಿಂಗ್ ಗಳನ್ನು ಉತ್ತೇಜಿಸುತ್ತಿವೆ ಮತ್ತು ಆತಂಕದ ಬುಕಿಂಗ್ ಗಳನ್ನು ಕಡಿಮೆಗೊಳಿಸುತ್ತಿವೆ, ಆನ್ ಲೈನ್ ಬುಕಿಂಗ್ ವ್ಯವಸ್ಥೆಗಳ ಅಳವಡಿಕೆಯಲ್ಲಿ ಸುಧಾರಣೆಯಾಗಿದೆ.
- ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಹಲವಾರು ರಾಜ್ಯಗಳಲ್ಲಿ ವಾಣಿಜ್ಯ ಎಲ್ ಪಿ ಜಿ ಪೂರೈಕೆಯನ್ನು ಪ್ರಾರಂಭಿಸಲಾಗಿದೆ.
ಸಾರ್ವಜನಿಕ ಸಲಹೆ
- ನಾಗರಿಕರು ಅಧಿಕೃತ ಮೂಲಗಳನ್ನು ಅವಲಂಬಿಸಲು ಮತ್ತು ವದಂತಿಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
- ಗ್ರಾಹಕರು ಆತಂಕದ ಬುಕಿಂಗ್‌ಗಳನ್ನು ತಪ್ಪಿಸಲು, ಡಿಜಿಟಲ್ ಬುಕಿಂಗ್ ವೇದಿಕೆಗಳನ್ನು ಬಳಸಲು ಮತ್ತು ಎಲ್‌ಪಿಜಿ ವಿತರಕರ ಬಳಿ ಅನಗತ್ಯ ಭೇಟಿಗಳನ್ನು ತಪ್ಪಿಸಲು ಮನವಿ ಮಾಡಲಾಗಿದೆ.
- ನಾಗರಿಕರು ಪಿ ಎ ನ್‌ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್ ಟಾಪ್ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ಮತ್ತು ಇಂಧನವನ್ನು ಉಳಿಸಲು ಪ್ರೋತ್ಸಾಹಿಸಲಾಗಿದೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಸುದ್ದಿಗೋಷ್ಠಿಯಲ್ಲಿ, ಪರ್ಷಿಯನ್ ಕೊಲ್ಲಿಯ ಪ್ರಸ್ತುತ ಕಡಲ ಪರಿಸ್ಥಿತಿ ಮತ್ತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಭಾರತೀಯ ಹಡಗುಗಳು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಸಚಿವಾಲಯವು ಈ ಕೆಳಗಿನ ಅಂಶಗಳನ್ನು ತಿಳಿಸಿದೆ:
- ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊತ್ತ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಕಡಲ ಅಪಘಾತಗಳು ವರದಿಯಾಗಿಲ್ಲ.
- ಪ್ರಸ್ತುತ, 611 ಭಾರತೀಯ ನಾವಿಕರನ್ನು ಹೊಂದಿರುವ 22 ಭಾರತೀಯ ಧ್ವಜದ ಹಡಗುಗಳು ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿವೆ. ಶಿಪ್ಪಿಂಗ್ ಮಹಾನಿರ್ದೇಶನಾಲಯವು (Directorate General of Shipping) ಹಡಗು ಮಾಲೀಕರು, RPSL ಏಜೆನ್ಸಿಗಳು ಮತ್ತು ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಿ ನಿಕಟ ಮೇಲ್ವಿಚಾರಣೆಯನ್ನು ಮುಂದುವರೆಸಿದೆ.
- ಎಲ್ ಪಿ ಜಿ ಸಾಗಿಸುವ ಹಡಗುಗಳಾದ ಶಿವಾಲಿಕ್ (Shivalik) ಮತ್ತು ನಂದಾದೇವಿ (Nanda Devi) ಪ್ರಸ್ತುತ ತೈಲ ನಿರ್ವಹಣಾ ಕಂಪನಿಗಳ ವೇಳಾಪಟ್ಟಿಯಂತೆ ಸರಕನ್ನು ಇಳಿಸುತ್ತಿವೆ.
- ಡಿಜಿ ಶಿಪ್ಪಿಂಗ್ ಕಂಟ್ರೋಲ್ ರೂಮ್ 24x7 ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದ್ದು, ಪ್ರಾರಂಭವಾದಾಗಿನಿಂದ 3,305 ಕರೆಗಳು ಮತ್ತು 6,324 ಇಮೇಲ್ ಗಳನ್ನು ನಿರ್ವಹಿಸಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಬಂದ 125 ಕರೆಗಳು ಮತ್ತು 449 ಇಮೇಲ್ ಗಳು ಸೇರಿವೆ.
- ಡಿಜಿ ಶಿಪ್ಪಿಂಗ್ ಇದುವರೆಗೆ ವಿಮಾನ ನಿಲ್ದಾಣಗಳು ಮತ್ತು ಪ್ರಾದೇಶಿಕ ಸ್ಥಳಗಳಿಂದ 472 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಮರಳಿದ 25 ನಾವಿಕರು ಸೇರಿದ್ದಾರೆ.
- ಭಾರತದ ಕಡಲ ವಲಯವು ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯ ಕಡಲ ಮಂಡಳಿಗಳ ದೃಢೀಕರಣದಂತೆ ಬಂದರುಗಳಲ್ಲಿ ಯಾವುದೇ ದಟ್ಟಣೆ ವರದಿಯಾಗಿಲ್ಲ.
- ಬಂದರುಗಳು ಹಡಗುಗಳ ಸಂಚಾರ ಮತ್ತು ಸರಕು ಕಾರ್ಯಾಚರಣೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ ಮತ್ತು ಸಾಕಷ್ಟು ಹೆಚ್ಚುವರಿ ಸಾಮರ್ಥ್ಯವನ್ನು ಹೊಂದಿವೆ. ವಿಶಾಖಪಟ್ಟಣಂ ಪೋರ್ಟ್ ಅಥಾರಿಟಿಯಲ್ಲಿ ಸುಮಾರು 2,260 ಚದರ ಮೀಟರ್ ಸೇರಿದಂತೆ ಹೆಚ್ಚುವರಿ ಶೇಖರಣಾ ಸ್ಥಳವನ್ನು ಸೃಜಿಸಲಾಗಿದೆ.
- ಜೆ ಎನ್ ಪಿ ಎ (JNPA) ನಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದು, ಸಿಲುಕಿಕೊಂಡಿದ್ದ ಕಂಟೈನರ್‌ಗಳ ಸಂಖ್ಯೆ ಸುಮಾರು 1,000 ರಿಂದ ಸುಮಾರು 770 ಕ್ಕೆ ಮತ್ತಷ್ಟು ಇಳಿಕೆಯಾಗಿದೆ.
- ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಹಡಗುಗಳ ಸಂಚಾರ, ಬಂದರು ಕಾರ್ಯಾಚರಣೆಗಳು, ನಾವಿಕರ ಸುರಕ್ಷತೆ ಮತ್ತು ಕಡಲ ವ್ಯಾಪಾರದ ನಿರಂತರತೆಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ.
ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂಡಿಯನ್ ಮಿಷನ್ ಗಳ (ರಾಯಭಾರ ಕಚೇರಿಗಳ) ಮೂಲಕ ನಡೆಯುತ್ತಿರುವ ನಿರಂತರ ನೆರವು ಮತ್ತು ಸಂಪರ್ಕ ಕಾರ್ಯಕ್ರಮಗಳು ಸೇರಿದಂತೆ ಈ ಪ್ರದೇಶದ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ಸಚಿವಾಲಯವು ಈ ಕೆಳಗಿನಂತೆ ತಿಳಿಸಿದೆ:
- ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾ ಮತ್ತು ಗಲ್ಫ್ ಪ್ರದೇಶದ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ, ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
- ಪ್ರಧಾನಮಂತ್ರಿಯವರು ಯುಎಇ ಅಧ್ಯಕ್ಷರಾದ ಹೆಚ್.ಹೆಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತನಾಡಿ, ಮುಂಗಡ ಈದ್ ಶುಭಾಶಯಗಳನ್ನು ಕೋರಿದರು.
- ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಯುಎಇ ಮೇಲಿನ ದಾಳಿಗಳಿಂದ ಉಂಟಾದ ಜೀವಹಾನಿ ಮತ್ತು ನಾಗರಿಕ ಮೂಲಸೌಕರ್ಯಗಳ ಹಾನಿಯನ್ನು ಪ್ರಧಾನಮಂತ್ರಿಯವರು ಭಾರತದ ಪರವಾಗಿ ಬಲವಾಗಿ ಖಂಡಿಸಿದರು.
- ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಇಬ್ಬರೂ ನಾಯಕರು ಒತ್ತಿಹೇಳಿದರು ಮತ್ತು ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಶೀಘ್ರವಾಗಿ ಮರುಸ್ಥಾಪಿಸಲು ಕೆಲಸ ಮಾಡಲು ಒಪ್ಪಿಕೊಂಡರು.
- ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಅಜೆರ್ಬೈಜಾನ್‌ಗೆ ಭೂ ಗಡಿಯ ಮೂಲಕ ಹೋಗಲು ಬಯಸುವವರಿಗೆ ಸಹಾಯ ಮಾಡುವುದನ್ನು ಮುಂದುವರೆಸಿದೆ.
- ಆರ್ಮೇನಿಯಾ ಮತ್ತು ಅಜೆರ್ಬೈಜಾನ್ ಗೆ ಸುಗಮವಾಗಿ ಭೂ ಗಡಿ ದಾಟಲು ಭಾರತೀಯ ಪ್ರಜೆಗಳು ರಾಯಭಾರ ಕಚೇರಿಯ ಸಲಹೆಗಳನ್ನು (advisories) ಅನುಸರಿಸಲು ಸೂಚಿಸಲಾಗಿದೆ.
- ಭಾರತೀಯ ಪ್ರಜೆಗಳು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ಮೀಸಲಾದ ಎಂಇಎ (MEA) ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಮುಂದುವರಿದಿದೆ.
- ಈ ಪ್ರದೇಶದಾದ್ಯಂತ ಇರುವ ಭಾರತೀಯ ಮಿಷನ್‌ಗಳು ಮತ್ತು ಕಚೇರಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ, ಸಮುದಾಯ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿವೆ ಮತ್ತು ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸುತ್ತಿವೆ. ಸಹಾಯವಾಣಿ ಕರೆಗಳ ಸಂಖ್ಯೆ ಕಡಿಮೆಯಾಗಿರುವುದು ಸಿಲುಕಿಕೊಂಡಿರುವ ಅನೇಕ ಪ್ರಜೆಗಳ ತುರ್ತು ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ.
- ಮಿಷನ್ ಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ನಾವಿಕರು, ಸಿಲುಕಿಕೊಂಡಿರುವ ಭಾರತೀಯರು ಮತ್ತು ಅಲ್ಪಾವಧಿ ಪ್ರವಾಸಿಗರಿಗೆ ವೀಸಾ, ಕಾನ್ಸುಲರ್ ಸೇವೆಗಳು ಮತ್ತು ಲಾಜಿಸ್ಟಿಕ್ ಬೆಂಬಲವನ್ನು ನೀಡುವುದನ್ನು ಮುಂದುವರೆಸಿವೆ.
- ಈ ಪ್ರದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಮಿಷನ್‌ಗಳು ಶಾಲೆಗಳು ಮತ್ತು ಶಿಕ್ಷಣ ಮಂಡಳಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ.
- CBSE 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು ಮತ್ತು ಈಗ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಸಹ ರದ್ದುಗೊಳಿಸಲಾಗಿದೆ. ICSE ಮತ್ತು ಕೇರಳ ಬೋರ್ಡ್ ಪರೀಕ್ಷೆಗಳನ್ನು ಸಹ ರದ್ದುಗೊಳಿಸಲಾಗಿದೆ.
- ಆಯಾ ಮಂಡಳಿಗಳು ಈ ಪ್ರಕರಣಗಳಲ್ಲಿ ಅಂಕಗಳನ್ನು ನಿರ್ಧರಿಸುವ ಸೂತ್ರವನ್ನು ಸಕಾಲದಲ್ಲಿ ಪ್ರಕಟಿಸಲಿವೆ.
- ಇರಾನ್ ನಲ್ಲಿ ಟೆಹ್ರಾನ್, ಇಸ್ಫಹಾನ್ ಮತ್ತು ಶಿರಾಜ್ ನ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ರಾಯಭಾರ ಕಚೇರಿಯಿಂದ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದೆ.
- 28 ಫೆಬ್ರವರಿ 2026 ರಿಂದ ಸುಮಾರು 2,60,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ.
- ವಿಮಾನ ಕಾರ್ಯಾಚರಣೆಗಳು ಕ್ರಮೇಣ ಸುಧಾರಿಸುತ್ತಿವೆ ಮತ್ತು ಈ ಪ್ರದೇಶದಾದ್ಯಂತ ಹೆಚ್ಚುವರಿ ಸೇವೆಗಳನ್ನು ಪರಿಚಯಿಸಲಾಗುತ್ತಿದೆ.
- ಯುಎಇನಲ್ಲಿ, 17 ಮಾರ್ಚ್ 2026 ರಂದು ಸುಮಾರು 70 ವಿಮಾನಗಳು ಕಾರ್ಯನಿರ್ವಹಿಸಿವೆ ಮತ್ತು ಇಂದು ಭಾರತದ ವಿವಿಧ ನಗರಗಳಿಗೆ ಸುಮಾರು 75 ವಿಮಾನಗಳು ನಿರೀಕ್ಷಿತವಾಗಿವೆ. 5 ಮಾರ್ಚ್ 2026 ರಿಂದ ಪ್ರತಿದಿನ 50 ಕ್ಕೂ ಹೆಚ್ಚು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ, ಇದು ಸಂಪರ್ಕ ಸುಧಾರಿಸುತ್ತಿರುವುದನ್ನು ಸೂಚಿಸುತ್ತದೆ.
- ಸೌದಿ ಅರೇಬಿಯಾ ಮತ್ತು ಓಮನ್ ನಿಂದ ಭಾರತಕ್ಕೆ ವಿಮಾನಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸಿವೆ.
- ಕತಾರ್ ವಾಯುಪ್ರದೇಶವು ಭಾಗಶಃ ಮುಕ್ತವಾಗಿದ್ದು, ನಿನ್ನೆ 5 ವಿಮಾನಗಳು ಕಾರ್ಯನಿರ್ವಹಿಸಿವೆ ಮತ್ತು ಇಂದಿನಿಂದ ಭಾರತದ 9 ನಗರಗಳಿಗೆ ಸೇವೆಗಳನ್ನು ಘೋಷಿಸಲಾಗಿದೆ.
- 28 ಫೆಬ್ರವರಿ 2026 ರಿಂದ ಕುವೈತ್ ವಾಯುಪ್ರದೇಶವು ಮುಚ್ಚಲ್ಪಟ್ಟಿದೆ. ಸೌದಿ ಅರೇಬಿಯಾದ ಅಲ್ ಕೈಸುಮಾ ವಿಮಾನ ನಿಲ್ದಾಣದಿಂದ ಜಜೀರಾ ಏರ್ವೇಸ್ ನ ವಿಶೇಷ ನಿಗದಿತವಲ್ಲದ (non-scheduled) ವಿಮಾನಗಳನ್ನು ನಿರೀಕ್ಷಿಸಲಾಗಿದೆ.
- ವಾಯುಪ್ರದೇಶ ನಿರ್ಬಂಧಿತವಾಗಿರುವ ಕುವೈತ್, ಬಹ್ರೇನ್ ಮತ್ತು ಇರಾಕ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಸೌದಿ ಅರೇಬಿಯಾ ಮೂಲಕ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ.
ಸರ್ಕಾರವು ಜಾಗರೂಕವಾಗಿದೆ ಮತ್ತು ಸಂಬಂಧಪಟ್ಟ ಸಚಿವಾಲಯಗಳು, ಏಜೆನ್ಸಿಗಳು ಮತ್ತು ರಾಜ್ಯ/ಕೇಂದ್ರಾಡಳಿತ ಸರ್ಕಾರಗಳ ನಡುವೆ ನಿಕಟ ಸಮನ್ವಯವನ್ನು ಕಾಯ್ದುಕೊಂಡಿದೆ. ಪ್ರಮುಖ ವಲಯಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸರ್ಕಾರ ಒತ್ತಿಹೇಳಿದೆ.
******
(ಪ್ರಕಟಣೆ ಐ.ಡಿ.: 2242046)
|