ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಕೆನಡಾ ನಾಯಕರ ಜಂಟಿ ಹೇಳಿಕೆ
ಪ್ರಕಟಣಾ ದಿನಾಂಕ:
02 MAR 2026 5:05PM by PIB Bengaluru
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಮಂತ್ರಣದ ಮೇರೆಗೆ, ಕೆನಡಾದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ಮಾರ್ಕ್ ಕಾರ್ನೆ ಅವರು 2026 ರ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಪ್ರಧಾನಮಂತ್ರಿ ಶ್ರೀ ಮಾರ್ಕ್ ಕಾರ್ನೆ ಅವರು ಕೆನಡಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ ಮತ್ತು 2018 ರ ನಂತರ ಕೆನಡಾದ ಪ್ರಧಾನ ಮಂತ್ರಿಯೊಬ್ಬರು ಭಾರತಕ್ಕೆ ನೀಡಿದ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಪ್ರಧಾನಮಂತ್ರಿ ಕಾರ್ನೆ ಅವರೊಂದಿಗೆ ಹಿರಿಯ ಸಚಿವರು, ಪ್ರಾಂತೀಯ ನಾಯಕರು ಮತ್ತು ಪ್ರಮುಖ ಸಿಇಒಗಳನ್ನು ಒಳಗೊಂಡ ಕೆನಡಾದ ಉನ್ನತ ಮಟ್ಟದ ನಿಯೋಗವು ಆಗಮಿಸಿತ್ತು.
ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 79 ವರ್ಷಗಳ ಸ್ಮರಣಾರ್ಥವಾಗಿ, ಉಭಯ ನಾಯಕರು ಸಮಾನ ಪ್ರಜಾಪ್ರಭುತ್ವ ಮೌಲ್ಯಗಳು, ಜನರು- ಜನರ ನಡುವಿನ ಗಾಢವಾದ ಸಂಬಂಧ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಹಾಗೂ ಕಾನೂನಿನ ಆಳ್ವಿಕೆಗೆ ಜಂಟಿ ಬದ್ಧತೆಯ ಮೇಲೆ ಆಧಾರಿತವಾಗಿರುವ ಭಾರತ-ಕೆನಡಾ ಸಂಬಂಧದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು.
ಹೆಚ್ಚುತ್ತಿರುವ ಸಂಕೀರ್ಣ ಮತ್ತು ಅನಿಶ್ಚಿತ ಜಾಗತಿಕ ಸಂದರ್ಭದಲ್ಲಿ, ಎರಡು ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಬಲವಾದ, ಸ್ಥಿತಿಸ್ಥಾಪಕ ಮತ್ತು ಭವಿಷ್ಯದ ದೃಷ್ಟಿಕೋನವುಳ್ಳ ಪಾಲುದಾರಿಕೆಯು ಪರಸ್ಪರ ಸಮೃದ್ಧಿಗೆ ಮತ್ತು ಸಮಾನ ಜಾಗತಿಕ ಆದ್ಯತೆಗಳನ್ನು ಮುನ್ನಡೆಸಲು ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತದೆ ಎಂದು ನಾಯಕರು ಒಪ್ಪಿಕೊಂಡರು. ಭಾರತ ಮತ್ತು ಕೆನಡಾ ನಡುವಿನ ನಿಕಟ ಸಹಕಾರವು ನ್ಯಾಯಯುತವಾಗಿ ಅನ್ವಯವಾಗುವ ಅಂತರರಾಷ್ಟ್ರೀಯ ನಿಯಮಗಳು ಮತ್ತು ಮಾನದಂಡಗಳನ್ನು ಬಲಪಡಿಸಲು, ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು, ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಹವಾಮಾನ ಬದಲಾವಣೆ, ಕ್ಷಿಪ್ರ ತಾಂತ್ರಿಕ ಪರಿವರ್ತನೆ ಹಾಗೂ ಸಾರ್ವಜನಿಕ ಆರೋಗ್ಯ ಸೇರಿದಂತೆ ಜಾಗತಿಕ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿಹೇಳಿದರು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಲು, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯನ್ನು ಬೆಂಬಲಿಸಲು ಮತ್ತು ಇಂಡೋ-ಪೆಸಿಫಿಕ್ ವಲಯ ಹಾಗೂ ಅದರಾಚೆಗೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ದ್ವಿಪಕ್ಷೀಯವಾಗಿ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ತಮ್ಮ ಸಂಕಲ್ಪವನ್ನು ನಾಯಕರು ದೃಢಪಡಿಸಿದರು.
ಈ ಸಮಾನ ದೃಷ್ಟಿಕೋನದ ಆಧಾರದ ಮೇಲೆ, ನವೀಕರಿಸಿದ ಭಾರತ-ಕೆನಡಾ ಕಾರ್ಯತಂತ್ರದ ಪಾಲುದಾರಿಕೆಗೆ "ವಸುಧೈವ ಕುಟುಂಬಕಂ" ಅಥವಾ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ತತ್ವವನ್ನು ಸಮಗ್ರ ಮಾರ್ಗದರ್ಶಿ ಚೌಕಟ್ಟಾಗಿ ಅಳವಡಿಸಿಕೊಳ್ಳಲು ನಾಯಕರು ಸಮ್ಮತಿಸಿದರು. ಇದು ಸುಸ್ಥಿರತೆ, ಒಳಗೊಳ್ಳುವಿಕೆ ಮತ್ತು ಸಾಮೂಹಿಕ ಜಾಗತಿಕ ಜವಾಬ್ದಾರಿಯ ಬಗ್ಗೆ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅವರು ಭಾರತದ 'ವಿಕಸಿತ ಭಾರತ' ದೃಷ್ಟಿಕೋನ ಮತ್ತು ಕೆನಡಾದ 'ಬಿಲ್ಡ್ ಕೆನಡಾ ಸ್ಟ್ರಾಂಗ್' ಕಾರ್ಯಸೂಚಿಯ ನಡುವಿನ ಸಾಮ್ಯತೆಯನ್ನು ಒತ್ತಿಹೇಳಿದರು. ಬೆಳವಣಿಗೆ, ನಾವೀನ್ಯತೆ, ಇಂಧನ ಪರಿವರ್ತನೆ, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ, ವಿಶ್ವಾಸಾರ್ಹ ಡಿಜಿಟಲ್ ಪರಿಸರ ವ್ಯವಸ್ಥೆಗಳು, ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು, ಕೌಶಲ್ಯ ಮತ್ತು ಪ್ರತಿಭೆಯ ಚಲನಶೀಲತೆ ಹಾಗೂ ಜನಕೇಂದ್ರಿತ ಅಭಿವೃದ್ಧಿಯಲ್ಲಿ ವರ್ಧಿತ ದ್ವಿಪಕ್ಷೀಯ ಸಹಕಾರವು ಉಭಯ ದೇಶಗಳು ಮತ್ತು ವಿಶಾಲ ಪ್ರಪಂಚದ ಸಮೃದ್ಧಿ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ದೃಢಪಡಿಸಿದರು.
ಹೊಸ ಮಾರ್ಗಸೂಚಿಯ ಪ್ರಗತಿ ಮತ್ತು ಅನುಷ್ಠಾನ
ಕೆನಡಾ-ಭಾರತದ ಸಂಬಂಧಗಳಿಗಾಗಿ ರೂಪಿಸಲಾದ 'ಹೊಸ ಮಾರ್ಗಸೂಚಿ' ಅನುಷ್ಠಾನದಲ್ಲಿ, ಕೆನಡಾದ ಕನನಾಸ್ಕಿಸ್ ನಲ್ಲಿ ನಡೆದ ಜಿ7 ಶೃಂಗಸಭೆ ಮತ್ತು ಜೋಹಾನ್ಸಬರ್ಗ್ ನಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ ನಡೆದ ತಮ್ಮ ಭೇಟಿಯ ನಂತರ ಸಾಧಿಸಲಾದ ಗಮನಾರ್ಹ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು. ಇದು ಕೆನಡಾ-ಭಾರತದ ಪಾಲುದಾರಿಕೆಯನ್ನು ಬಲಪಡಿಸಲು ಸ್ಪಷ್ಟ ದಿಕ್ಕನ್ನು ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು. ಆದ್ಯತೆಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ಚೈತನ್ಯ ನೀಡಿದ ಸಚಿವ ಮಟ್ಟದ ನಿರಂತರ ಭೇಟಿಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ವಿವಿಧ ಸಾಂಸ್ಥಿಕ ಸಂವಾದ ಕಾರ್ಯವಿಧಾನಗಳ ಸಕ್ರಿಯಗೊಳಿಸುವಿಕೆ ಮತ್ತು ವರ್ಧಿತ ಉಪ-ರಾಷ್ಟ್ರೀಯ ತೊಡಗಿಸಿಕೊಳ್ಳುವಿಕೆಯನ್ನು ಅವರು ಸ್ವಾಗತಿಸಿದರು; ಇದು ಪರಸ್ಪರ ತಿಳುವಳಿಕೆ ಮತ್ತು ನೀತಿ ಸಮನ್ವಯವನ್ನು ಗಾಢವಾಗಿಸುವಲ್ಲಿ ಪ್ರಮುಖವಾಗಿದೆ ಎಂದು ಒತ್ತಿಹೇಳಿದರು. ಆಯಾ ರಾಯಭಾರ ಕಚೇರಿಗಳಿಗೆ ರಾಜತಾಂತ್ರಿಕ ಪ್ರತಿನಿಧಿಗಳ ಮರಳುವಿಕೆಯನ್ನು ಉಭಯ ನಾಯಕರು ಶ್ಲಾಘಿಸಿದರು. ಪರಸ್ಪರ ಗೌರವ, ಸೌಹಾರ್ದತೆ ಮತ್ತು ಸಹಕಾರದ ಮನೋಭಾವದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುವ, ಸಂಬಂಧಗಳ ಕ್ರಮೇಣ ಸಹಜಸ್ಥಿತಿಗೆ ಕೈಗೊಂಡ ರಚನಾತ್ಮಕ ಕ್ರಮಗಳನ್ನು ಅವರು ಶ್ಲಾಘಿಸಿದರು.
ದ್ವಿಪಕ್ಷೀಯ ಬಾಂಧವ್ಯಕ್ಕೆ ಬಲವಾದ ವಾಣಿಜ್ಯ ಅಡಿಪಾಯವಿರುವುದನ್ನು ನಾಯಕರು ಎತ್ತಿ ತೋರಿಸಿದರು. ಇದು ಇತ್ತೀಚಿನ ತಿಂಗಳುಗಳಲ್ಲಿ ನಡೆದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಮಾತುಕತೆಗಳ ಆರಂಭ, ಪ್ರಮುಖ ವ್ಯಾಪಾರ ಪ್ರಕಟಣೆಗಳು ಮತ್ತು ಹೂಡಿಕೆಯ ಬದ್ಧತೆಗಳಲ್ಲಿ ಪ್ರತಿಫಲಿಸುತ್ತದೆ. ಈ ಬೆಳವಣಿಗೆಗಳು ದ್ವಿಪಕ್ಷೀಯ ಆರ್ಥಿಕ ಸಂಬಂಧದ ವಿಸ್ತರಣೆ, ವೈವಿಧ್ಯೀಕರಣ ಮತ್ತು ಪ್ರೌಢತೆಯನ್ನು ಪ್ರದರ್ಶಿಸುತ್ತವೆ ಹಾಗೂ ಎರಡೂ ಮಾರುಕಟ್ಟೆಗಳಲ್ಲಿನ ಉದ್ಯಮಿಗಳು ಮತ್ತು ಹೂಡಿಕೆದಾರರಲ್ಲಿ ಬೆಳೆಯುತ್ತಿರುವ ವಿಶ್ವಾಸವನ್ನು ಸೂಚಿಸುತ್ತವೆ. ಆದ್ಯತೆಯ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ತೆರೆಯಲು ಮತ್ತು ವಾಣಿಜ್ಯ ವೇಗವನ್ನು ದೀರ್ಘಕಾಲೀನ, ಪರಸ್ಪರ ಪ್ರಯೋಜನಕಾರಿ ಆರ್ಥಿಕ ಬೆಳವಣಿಗೆಯನ್ನಾಗಿ ಪರಿವರ್ತಿಸಲು, ಪೂರಕ ನೀತಿ ವಾತಾವರಣದ ಬೆಂಬಲದೊಂದಿಗೆ ಉದ್ಯಮ ಮತ್ತು ಸರ್ಕಾರದ ನಡುವಿನ ನಿರಂತರ ತೊಡಗಿಸಿಕೊಳ್ಳುವಿಕೆ ಅತ್ಯಗತ್ಯ ಎಂದು ನಾಯಕರು ಅಭಿಪ್ರಾಯಪಟ್ಟರು.
ಈ ವೇಗವನ್ನು ಆಧರಿಸಿ, ಈ ಕೆಳಗಿನ ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಗಾಢವಾಗಿಸಲು ಉಭಯ ನಾಯಕರು ಸಮ್ಮತಿಸಿದರು:
ಒಂದು ಭೂಮಿ
ಕಾರ್ಯತಂತ್ರದ ಇಂಧನ ಪಾಲುದಾರಿಕೆ
ಇಂಧನ ಶಕ್ತಿಗಳಾಗಿ ತಮ್ಮ ಪರಸ್ಪರ ಪೂರಕ ಸಾಮರ್ಥ್ಯಗಳನ್ನು ಗುರುತಿಸಿದ ನಾಯಕರು, ಇಂಧನ ಮೌಲ್ಯ ಸರಪಳಿಯಾದ್ಯಂತ ದೀರ್ಘಕಾಲೀನ ಸಹಕಾರವನ್ನು ಗಾಢವಾಗಿಸುವ ಉದ್ದೇಶದಿಂದ 'ಭಾರತ-ಕೆನಡಾ ಕಾರ್ಯತಂತ್ರದ ಇಂಧನ ಪಾಲುದಾರಿಕೆ'ಯನ್ನು ಮುನ್ನಡೆಸಲು ಸಮ್ಮತಿಸಿದರು. ಇಂಧನ ಭದ್ರತೆ ಮತ್ತು ಪೂರೈಕೆಯ ವೈವಿಧ್ಯೀಕರಣವು ಉಭಯ ದೇಶಗಳ ಸುರಕ್ಷತೆ, ಯೋಗಕ್ಷೇಮ ಮತ್ತು ಆರ್ಥಿಕ ಚೈತನ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಪುನರುಚ್ಚರಿಸಿದರು. ಕೈಗೆಟುಕುವ ದರ, ಸುಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಹಸಿರು ಇಂಧನ, ಸಾಂಪ್ರದಾಯಿಕ ಇಂಧನ, ನಾಗರಿಕ ಪರಮಾಣು ಇಂಧನ ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ಅವರು ಒತ್ತಿಹೇಳಿದರು.
ಉನ್ನತ ಮಟ್ಟದ ನೀತಿ ಸಂವಾದವನ್ನು ಕಾಯ್ದುಕೊಳ್ಳಲು ಮತ್ತು ಇಂಧನ ಭದ್ರತೆ, ಪೂರೈಕೆಯ ವೈವಿಧ್ಯೀಕರಣ ಮತ್ತು ದೀರ್ಘಕಾಲೀನ ಮಾರುಕಟ್ಟೆ ಏಕೀಕರಣದ ಕುರಿತು ಕಾರ್ಯತಂತ್ರದ ಸಹಕಾರವನ್ನು ಬಲಪಡಿಸಲು ಪ್ರಮುಖ ಸಾಂಸ್ಥಿಕ ವೇದಿಕೆಯಾಗಿ, 'ಭಾರತ ಇಂಧನ ಸಪ್ತಾಹ 2026' ರ ಸಂದರ್ಭದಲ್ಲಿ 'ಕೆನಡಾ-ಭಾರತ ಸಚಿವ ಮಟ್ಟದ ಇಂಧನ ಮಾತುಕತೆ'ಯ ಪುನರಾರಂಭವನ್ನು ನಾಯಕರು ಸ್ವಾಗತಿಸಿದರು. ಈ ಮಾತುಕತೆಯ ಅಡಿಯಲ್ಲಿ 'ಜಂಟಿ ಕ್ರಿಯಾ ಯೋಜನೆ'ಯ ಅಂತಿಮಗೊಳಿಸುವಿಕೆಯನ್ನು ಅವರು ಸ್ವಾಗತಿಸಿದರು.
ಹಂಚಿಕೆಯ ಹವಾಮಾನ ಗುರಿಗಳು ಮತ್ತು ಇಂಧನ ಪರಿವರ್ತನೆಯ ಗುರಿಗಳನ್ನು ಮುನ್ನಡೆಸುವಲ್ಲಿ ಈ ಕ್ಷೇತ್ರಗಳ ಪ್ರಮುಖ ಪಾತ್ರವನ್ನು ಗುರುತಿಸಿದ ನಾಯಕರು; ನವೀಕರಿಸಬಹುದಾದ ಇಂಧನ, ಹೈಡ್ರೋಜನ್ ಮತ್ತು ಅದರ ಉತ್ಪನ್ನಗಳು, ಜೈವಿಕ ಇಂಧನಗಳು, ಸುಸ್ಥಿರ ವಿಮಾನಯಾನ ಇಂಧನ, ಬ್ಯಾಟರಿ ಸಂಗ್ರಹಣೆ ಮತ್ತು ವಿದ್ಯುತ್ ವ್ಯವಸ್ಥೆಗಳ ಆಧುನೀಕರಣ ಸೇರಿದಂತೆ ಹಸಿರು ಇಂಧನ ಮತ್ತು ಹವಾಮಾನಕ್ಕೆ ಸಂಬಂಧಿಸಿದ ಮೌಲ್ಯ ಸರಪಳಿಗಳಲ್ಲಿ ಸಹಕಾರವನ್ನು ವಿಸ್ತರಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು.
ಇಂಧನ ಮತ್ತು ನಿರ್ಣಾಯಕ ಖನಿಜಗಳ ಸುಸ್ಥಿರ ಉತ್ಪಾದನೆಗೆ ಗಮನಾರ್ಹ ಅವಕಾಶವನ್ನು ಒದಗಿಸುವ 'ಕಾರ್ಬನ್ ಕ್ಯಾಪ್ಚರ್, ಯುಟಿಲೈಸೇಶನ್ ಅಂಡ್ ಸ್ಟೋರೇಜ್' (ಸಿಸಿಯುಎಸ್) ಪರಿಹಾರಗಳನ್ನು ಸಹಕಾರದ ಪ್ರಮುಖ ಕ್ಷೇತ್ರವೆಂದು ನಾಯಕರು ಒತ್ತಿಹೇಳಿದರು.
ಈ 'ಕಾರ್ಯತಂತ್ರದ ಇಂಧನ ಪಾಲುದಾರಿಕೆ'ಯು ಉಭಯ ದೇಶಗಳಿಗೆ ಸ್ಪಷ್ಟವಾದ, ದೀರ್ಘಕಾಲೀನ ಪ್ರಯೋಜನಗಳನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಲು; ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಕಾರ್ಯವಿಧಾನಗಳ ಮೂಲಕ ನಿರಂತರ ತಜ್ಞರ ಸಹಯೋಗ ಹಾಗೂ ಸರ್ಕಾರದಿಂದ ಸರ್ಕಾರಕ್ಕೆ (ಜಿ2ಜಿ) ಮತ್ತು ಉದ್ಯಮದಿಂದ ಉದ್ಯಮಕ್ಕೆ (ಬಿ2ಬಿ) ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ತಮ್ಮ ಉದ್ದೇಶವನ್ನು ನಾಯಕರು ಪುನರುಚ್ಚರಿಸಿದರು.
ಇಂಧನ ವ್ಯಾಪಾರ
ಬಲವರ್ಧಿತ ಸಾಂಸ್ಥಿಕ ತೊಡಗಿಸಿಕೊಳ್ಳುವಿಕೆಯು ದ್ರವೀಕೃತ ನೈಸರ್ಗಿಕ ಅನಿಲ (ಎಲ್ ಎನ್ ಜಿ), ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ ಪಿ ಜಿ), ಕಚ್ಚಾ ತೈಲ, ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು, ಪೊಟ್ಯಾಶ್ ಮತ್ತು ಯುರೇನಿಯಂ ಪೂರೈಕೆ ಸೇರಿದಂತೆ ದ್ವಿಪಕ್ಷೀಯ ಇಂಧನ ವ್ಯಾಪಾರದ ವಿಸ್ತರಣೆಗೆ ಪೂರಕವಾಗಲಿದೆ ಎಂದು ನಾಯಕರು ಗಮನಿಸಿದರು. ಈ ನಿಟ್ಟಿನಲ್ಲಿ, ಭಾರತದ ನಾಗರಿಕ ಪರಮಾಣು ಇಂಧನ ಉತ್ಪಾದನೆ, ಹಸಿರು ಇಂಧನ ಪರಿವರ್ತನೆಯ ಗುರಿಗಳು ಮತ್ತು ದೀರ್ಘಕಾಲೀನ ಇಂಧನ ಭದ್ರತೆಗೆ ಕೊಡುಗೆ ನೀಡುವ ಉದ್ದೇಶದಿಂದ, ಯುರೇನಿಯಂನ ದೀರ್ಘಕಾಲೀನ ಪೂರೈಕೆಗಾಗಿ ಕ್ಯಾಮೆಕೊ (Cameco) ಮತ್ತು ಪರಮಾಣು ಇಂಧನ ಇಲಾಖೆ ನಡುವೆ ಏರ್ಪಟ್ಟಿರುವ 2.6 ಬಿಲಿಯನ್ ಕೆನಡಿಯನ್ ಡಾಲರ್ ಮೊತ್ತದ ವಾಣಿಜ್ಯ ಒಪ್ಪಂದವನ್ನು ಅವರು ಸ್ವಾಗತಿಸಿದರು.
ಕೆನಡಾವು ಎಲ್ ಎನ್ ಜಿ ಯ ಪ್ರಮುಖ ಜಾಗತಿಕ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಲು ಸಜ್ಜಾಗಿರುವುದನ್ನು ನಾಯಕರು ಗಮನಿಸಿದರು ಮತ್ತು ಕೆನಡಾದಿಂದ ಎಲ್ ಎನ್ ಜಿ ಆಮದು ಮಾಡಿಕೊಳ್ಳುವ ಭಾರತದ ಉದ್ದೇಶವನ್ನು ಸ್ವಾಗತಿಸಿದರು. ಕಳೆದ ಐದು ವರ್ಷಗಳಲ್ಲಿ ಕೆನಡಾವು 'ಹೆವಿ ಆಯಿಲ್' (ಭಾರೀ ತೈಲ) ನ ಪ್ರಮುಖ ಪೂರೈಕೆದಾರನಾಗಿ ಹೊರಹೊಮ್ಮಿರುವುದನ್ನು ಅವರು ಶ್ಲಾಘಿಸಿದರು. ಭಾರತವು ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ತೈಲ ಗ್ರಾಹಕ ಮತ್ತು ನಾಲ್ಕನೇ ಅತಿದೊಡ್ಡ ಎಲ್ ಎನ್ ಜಿ ಆಮದುದಾರ ರಾಷ್ಟ್ರವಾಗಿದ್ದು, ಮುಂದಿನ ಎರಡು ದಶಕಗಳಲ್ಲಿ ಜಾಗತಿಕ ಇಂಧನ ಬೇಡಿಕೆಯ ಬೆಳವಣಿಗೆಗೆ ಅತಿ ಹೆಚ್ಚು ಕೊಡುಗೆ ನೀಡುವ ದೇಶವಾಗಿ ಹೊರಹೊಮ್ಮಲಿದೆ. ಈ ಹಿನ್ನೆಲೆಯಲ್ಲಿ, ದ್ವಿಪಕ್ಷೀಯ ಇಂಧನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸಲು ಗಣನೀಯ ಅವಕಾಶವಿದೆ ಎಂದು ಉಭಯ ದೇಶಗಳು ಒಪ್ಪಿಕೊಂಡವು. ಇದರಲ್ಲಿ ಭಾರತವು ಕೆನಡಾದಿಂದ ತೈಲ ಮತ್ತು ಎಲ್ ಎನ್ ಜಿ ಆಮದನ್ನು ಹೆಚ್ಚಿಸುವುದು ಮತ್ತು ಭಾರತದಿಂದ ಕೆನಡಾಕ್ಕೆ ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಸೇರಿದೆ. ಈ ಸಂದರ್ಭದಲ್ಲಿ, ಕೆನಡಾವು 2030ರ ವೇಳೆಗೆ ವಾರ್ಷಿಕ 50 ಮಿಲಿಯನ್ ಟನ್ ಮತ್ತು 2040ರ ವೇಳೆಗೆ 100 ಮಿಲಿಯನ್ ಟನ್ ಎಲ್ ಎನ್ ಜಿ ಉತ್ಪಾದಿಸುವ ಗುರಿಯನ್ನು ಹೊಂದಿದ್ದು, ಇಂಡೋ-ಪೆಸಿಫಿಕ್ ಮಾರುಕಟ್ಟೆಗೆ ಭಾರೀ ತೈಲ ರಫ್ತು ಮೂಲಸೌಕರ್ಯ ಮತ್ತು ಎಲ್ ಎನ್ ಜಿ ಪೂರೈಕೆಯನ್ನು ವಿಸ್ತರಿಸುವ ತನ್ನ ಯೋಜನೆಗಳನ್ನು ಪುನರುಚ್ಚರಿಸಿತು.
ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ ಪಿ ಜಿ) ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಭಾರತದ ಸಾರ್ವಜನಿಕ ವಲಯದ ತೈಲ ಮತ್ತು ಅನಿಲ ಕಂಪನಿಗಳು ಹಾಗೂ ಕೆನಡಾದ ಇಂಧನ ಸಂಸ್ಥೆಗಳ ನಡುವೆ ನಡೆಯುತ್ತಿರುವ ಚರ್ಚೆಗಳನ್ನು ನಾಯಕರು ಸ್ವಾಗತಿಸಿದರು. ಕೆನಡಾದೊಂದಿಗೆ ಭಾರತದ ಮೊದಲ ದೀರ್ಘಕಾಲೀನ ಎಲ್ ಪಿ ಜಿ ಪೂರೈಕೆ ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಗಮನಿಸಿದರು. ಇಂತಹ ಪಾಲುದಾರಿಕೆಗಳು ಇಂಧನ ವ್ಯಾಪಾರವನ್ನು ವೈವಿಧ್ಯಗೊಳಿಸುತ್ತವೆ, ಪೂರೈಕೆ ಭದ್ರತೆಯನ್ನು ಬಲಪಡಿಸುತ್ತವೆ ಮತ್ತು ಹೈಡ್ರೋಕಾರ್ಬನ್ ಮೌಲ್ಯ ಸರಪಳಿಯಾದ್ಯಂತ ಸಹಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಾಣಿಜ್ಯಿಕವಾಗಿ ಲಾಭದಾಯಕವಾದ ಇಂಧನ ಪಾಲುದಾರಿಕೆಗಳನ್ನು ಬೆಂಬಲಿಸಲು ಸಾಲಗಳು, ಹಣಕಾಸು ನೆರವು ಮತ್ತು ಇಕ್ವಿಟಿ ಹೂಡಿಕೆಗಳಂತಹ ಸಾಧನಗಳ ಮೂಲಕ ಹೆಚ್ಚಿನ ಖಾಸಗಿ ಹೂಡಿಕೆ ಹರಿವು ಮತ್ತು ದೀರ್ಘಕಾಲೀನ ಖರೀದಿ ಒಪ್ಪಂದಗಳಿಗೆ ಉಭಯ ದೇಶಗಳು ತಮ್ಮ ಬೆಂಬಲವನ್ನು ಪುನರುಚ್ಚರಿಸಿದವು. 'ಭಾರತ-ಕೆನಡಾ ಇಂಧನ ಸಂವಾದ'ದ ಮೂಲಕ, ಉಭಯ ದೇಶಗಳು ದೀರ್ಘಕಾಲೀನ ಒಪ್ಪಂದಗಳ ಸಾಧ್ಯತೆಗಳನ್ನು ಅನ್ವೇಷಿಸಲು ಮತ್ತು ಹಡಗು ಸಾಗಣೆ ವೆಚ್ಚಗಳು ಹಾಗೂ ಕೆನಡಾದ ಭಾರೀ ತೈಲ ಪೂರೈಕೆಯ ಲಭ್ಯತೆಯನ್ನು ಹೆಚ್ಚಿಸುವುದು ಸೇರಿದಂತೆ ಈ ವ್ಯಾಪಾರದ ಬೆಳವಣಿಗೆಗೆ ಇರುವ ಸವಾಲುಗಳನ್ನು ಎದುರಿಸಲು ಜಂಟಿ ಕ್ರಿಯಾ ಯೋಜನೆಯನ್ನು ರೂಪಿಸಲಿವೆ.
ನಿರ್ಣಾಯಕ ಖನಿಜಗಳಲ್ಲಿ ಸಹಕಾರ
ಉಭಯ ಮಾರುಕಟ್ಟೆಗಳಲ್ಲಿನ ಪ್ರಸ್ತುತ ಯೋಜನೆಗಳ ವ್ಯಾಪ್ತಿ ಮತ್ತು ಉದ್ಭವಿಸುತ್ತಿರುವ ಅವಕಾಶಗಳನ್ನು ಗುರುತಿಸಿದ ನಾಯಕರು, ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲ ಕ್ಷೇತ್ರಗಳಲ್ಲಿ ದೀರ್ಘಕಾಲೀನ ಹಾಗೂ ಪರಸ್ಪರ ಹೂಡಿಕೆಯ ಪಾಲುದಾರಿಕೆಯನ್ನು ಗಾಢವಾಗಿಸುವ ತಮ್ಮ ಬದ್ಧತೆಯನ್ನು ಒತ್ತಿಹೇಳಿದರು. ಸ್ಥಿತಿಸ್ಥಾಪಕತ್ವವುಳ್ಳ, ಸುರಕ್ಷಿತ ಮತ್ತು ವೈವಿಧ್ಯಮಯವಾದ ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಯನ್ನು ನಿರ್ಮಿಸುವ ಹಂಚಿಕೆಯ ಸಂಕಲ್ಪವನ್ನು ಪ್ರತಿಬಿಂಬಿಸುವ 'ನಿರ್ಣಾಯಕ ಖನಿಜಗಳ ಸಹಕಾರದ ಕುರಿತಾದ ತಿಳುವಳಿಕೆ ಒಪ್ಪಂದ'ಕ್ಕೆ ಸಹಿ ಹಾಕಿದ್ದನ್ನು ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ, ಜಿ7 ನಿರ್ಣಾಯಕ ಖನಿಜಗಳ ಕ್ರಿಯಾ ಯೋಜನೆಯನ್ನು ಭಾರತವು ಅನುಮೋದಿಸಿರುವುದನ್ನು ಅವರು ಸ್ವಾಗತಿಸಿದರು. ಈ ಯೋಜನೆಯು ನಿರ್ಣಾಯಕ ಖನಿಜಗಳ ಜವಾಬ್ದಾರಿಯುತ ಉತ್ಪಾದನೆ ಮತ್ತು ಪೂರೈಕೆಯನ್ನು ಬೆಂಬಲಿಸುತ್ತದೆ ಹಾಗೂ ಹಸಿರು ಇಂಧನ, ಸುಧಾರಿತ ಉತ್ಪಾದನೆ ಮತ್ತು ತಂತ್ರಜ್ಞಾನಕ್ಕೆ ಅಗತ್ಯವಾದ ಮೌಲ್ಯ ಸರಪಳಿಗಳಲ್ಲಿ ಹೂಡಿಕೆ ಮತ್ತು ನಾವೀನ್ಯತೆಯನ್ನು ಪ್ರೋತ್ಸಾಹಿಸುತ್ತದೆ. ಮಾರ್ಚ್ 2026 ರಲ್ಲಿ ಕೆನಡಾದಲ್ಲಿ ನಡೆಯಲಿರುವ 'ಪ್ರಾಸ್ಪೆಕ್ಟರ್ಸ್ ಅಂಡ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಕೆನಡಾ' (ಪಿಡಿಎಸಿ) ಸಭೆಯಲ್ಲಿ ಭಾರತದ ಭಾಗವಹಿಸುವಿಕೆ ಮತ್ತು ಕೆನಡಾ ಹಾಗೂ ಭಾರತೀಯ ಕಂಪನಿಗಳಿಗೆ ಬಲವಾದ ವಾಣಿಜ್ಯ ಫಲಿತಾಂಶಗಳನ್ನು ಉತ್ತೇಜಿಸಲು 2026 ರ ಬೇಸಿಗೆಯಲ್ಲಿ ಭಾರತದಿಂದ ಸಚಿವರ ನೇತೃತ್ವದ ಇಂಧನ ಮತ್ತು ಕೈಗಾರಿಕಾ ನಿಯೋಗವು ಕೆನಡಾಕ್ಕೆ ಭೇಟಿ ನೀಡುವ ಕುರಿತು ನಾಯಕರು ಚರ್ಚಿಸಿದರು.
ಹಸಿರು ಇಂಧನ ತಂತ್ರಜ್ಞಾನಗಳು ಮತ್ತು ಭವಿಷ್ಯದ ಉದ್ದಿಮೆಗಳನ್ನು ಬೆಂಬಲಿಸಲು ಹೂಡಿಕೆಯಲ್ಲಿನ ಸಹಯೋಗವನ್ನು ಬಲಪಡಿಸಲು ನಾಯಕರು ಸಮ್ಮತಿಸಿದರು. ಭಾರತದ 'ಖನಿಜ ಸಂಗ್ರಹಣೆ' ಉಪಕ್ರಮಕ್ಕೆ ನೆರವಾಗುವ ಸಾಧ್ಯತೆಗಳನ್ನು ಅನ್ವೇಷಿಸುವುದು ಸೇರಿದಂತೆ ನಿರ್ಣಾಯಕ ಖನಿಜಗಳು ಮತ್ತು ಇಂಧನ ಪರಿವರ್ತನೆಯ ಮಾರ್ಗಗಳಲ್ಲಿ ಸಹಕಾರವನ್ನು ಗಾಢವಾಗಿಸಲು ಅವರು ಒಪ್ಪಿಕೊಂಡರು. ಇದರೊಂದಿಗೆ ಹೊರಸೂಸುವಿಕೆ ಕಡಿತ ಮತ್ತು ಪರಿವರ್ತನೆಯ ತಂತ್ರಜ್ಞಾನಗಳಲ್ಲಿ ಪರಿಣತಿಯನ್ನು ಹಂಚಿಕೊಳ್ಳಲು ನಿರ್ಧರಿಸಿದರು.
ಶುದ್ದ ಇಂಧನ ಸಹಕಾರ
ಸೌರ, ಪವನ, ಜೈವಿಕ ಇಂಧನ, ಸಣ್ಣ ಜಲವಿದ್ಯುತ್ ಯೋಜನೆಗಳು, ಇಂಧನ ಸಂಗ್ರಹಣೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ದ್ವಿಪಕ್ಷೀಯ ಸಹಯೋಗವನ್ನು ಮುನ್ನಡೆಸಲು ಸಮಗ್ರ ಸಾಂಸ್ಥಿಕ ಚೌಕಟ್ಟನ್ನು ರೂಪಿಸುವ 'ಶುದ್ದ ಇಂಧನ ಸಹಕಾರದ ಕುರಿತಾದ ತಿಳುವಳಿಕೆ ಒಪ್ಪಂದ'ಕ್ಕೆ ಸಹಿ ಹಾಕಿದ್ದನ್ನು ನಾಯಕರು ಸ್ವಾಗತಿಸಿದರು. ಇಂಧನ ಭದ್ರತೆಯನ್ನು ಬಲಪಡಿಸುವ, ಮಾಹಿತಿ ವಿನಿಮಯ ಮತ್ತು ಜಂಟಿ ಹೂಡಿಕೆಯ ಮೂಲಕ ಇಂಧನ ಪರಿವರ್ತನೆಯನ್ನು ವೇಗಗೊಳಿಸುವ ಹಾಗೂ ಸಮರ್ಪಿತ 'ಜಂಟಿ ಕಾರ್ಯಪಡೆ'ಯ ಮೂಲಕ ನವೀಕರಿಸಬಹುದಾದ ಇಂಧನ ಮೌಲ್ಯ ಸರಪಳಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುವ ಪರಸ್ಪರ ಪ್ರಯೋಜನಕಾರಿ ಶುದ್ಧ ಇಂಧನ ಪಾಲುದಾರಿಕೆಯನ್ನು ನಿರ್ಮಿಸಲು ಅವರು ಸಮ್ಮತಿಸಿದರು. ಈ ಸಹಕಾರವು ಸುಸ್ಥಿರ ಆರ್ಥಿಕ ಬೆಳವಣಿಗೆ, ಇಂಡೋ-ಪೆಸಿಫಿಕ್ ವಲಯದ ಸ್ಥಿತಿಸ್ಥಾಪಕತ್ವ ಮತ್ತು ಸಮಗ್ರ ಶುದ್ದ ಇಂಧನ ಭವಿಷ್ಯವನ್ನು ನಿರ್ಮಿಸುವ ಹಂಚಿಕೆಯ ಉದ್ದೇಶಕ್ಕೆ ಪೂರಕವಾಗಲಿದೆ.
ಕೆನಡಾವು 2050 ರ ವೇಳೆಗೆ ವಿದ್ಯುತ್ ಪೂರೈಕೆಯನ್ನು ದ್ವಿಗುಣಗೊಳಿಸಲು ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಇಂಧನ ಸಂಗ್ರಹಣೆಯ ನಿಯೋಜನೆಯನ್ನು ಗಣನೀಯವಾಗಿ ವಿಸ್ತರಿಸಲು ಯೋಜಿಸಿದೆ. ಅದೇ ಸಮಯದಲ್ಲಿ, ಭಾರತವು ಬೃಹತ್ ಪ್ರಮಾಣದ ಸೌರಶಕ್ತಿ ಮತ್ತು ಗ್ರಿಡ್-ಮಟ್ಟದ ಇಂಧನ ಸಂಗ್ರಹಣಾ ತಂತ್ರಜ್ಞಾನಗಳಲ್ಲಿ ನಾಯಕತ್ವ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದೆ; ಜೊತೆಗೆ ಮೇಲ್ಛಾವಣಿ ಸೌರಶಕ್ತಿ ಮತ್ತು ಇತರ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಪರಿಹಾರಗಳಲ್ಲಿ ಅನುಕರಣೀಯ ಮಾದರಿಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ, ಭವಿಷ್ಯದ ಖರೀದಿಗಳು ಮತ್ತು ಪೂರೈಕೆ ಸರಪಳಿ ಪಾಲುದಾರಿಕೆಗಳ ಮೂಲಕ ಕೆನಡಾಕ್ಕೆ ಈ ತಂತ್ರಜ್ಞಾನಗಳ ವ್ಯಾಪಾರವನ್ನು ವಿಸ್ತರಿಸಲು ಮತ್ತು ವೈವಿಧ್ಯಗೊಳಿಸಲು ಕೈಗಾರಿಕೆ, ಹೂಡಿಕೆದಾರರು ಮತ್ತು ಸರ್ಕಾರದ ನಿರ್ಧಾರ ತೆಗೆದುಕೊಳ್ಳುವವರನ್ನು ಒಗ್ಗೂಡಿಸಲು 'ಭಾರತ-ಕೆನಡಾ ನವೀಕರಿಸಬಹುದಾದ ಇಂಧನ ಮತ್ತು ಸಂಗ್ರಹಣಾ ಶೃಂಗಸಭೆ'ಯನ್ನು 2026 ರಲ್ಲಿ ಆಯೋಜಿಸಲು ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದರು.
ಹವಾಮಾನ ಮತ್ತು ಪರಿಸರ
ಹವಾಮಾನ ಬದಲಾವಣೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ತಿಳುವಳಿಕೆ ಒಪ್ಪಂದದ ಅಡಿಯಲ್ಲಿ ಸಹಕಾರವು ಗಾಢವಾಗುತ್ತಿರುವುದನ್ನು ನಾಯಕರು ಸ್ವಾಗತಿಸಿದರು. ವಿಜ್ಞಾನ ಆಧಾರಿತ, ಒಳಗೊಳ್ಳುವ ಮತ್ತು ಸಮಾನವಾದ ಹವಾಮಾನ ಕ್ರಮಗಳ ಕುರಿತು ಉಭಯ ದೇಶಗಳ ಸಮಾನ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ, ಮಾಲಿನ್ಯ ಮತ್ತು ಪರಿಸರ ವ್ಯವಸ್ಥೆಯ ಅವನತಿಯನ್ನು ತಡೆಯುವ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ದ್ವಿಪಕ್ಷೀಯ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು. ಹವಾಮಾನದ ದುಷ್ಪರಿಣಾಮಗಳ ತಗ್ಗಿಸುವಿಕೆ ಮತ್ತು ಅಳವಡಿಕೆ, ಜೀವವೈವಿಧ್ಯ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮಾಲಿನ್ಯದ ಕಡಿತದ ಮೇಲೆ ಸಹಯೋಗವನ್ನು ಬಲಪಡಿಸಲು ಅವರು ಸಮ್ಮತಿಸಿದರು. ವಿಶೇಷವಾಗಿ ಹವಾಮಾನ ಬದಲಾವಣೆಗೆ ತುತ್ತಾಗುವ ಸಮುದಾಯಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ಅವರಿಗೆ ಬೆಂಬಲ ನೀಡಲು ಆದ್ಯತೆ ನೀಡಲು ನಿರ್ಧರಿಸಿದರು.
ಜಾಗತಿಕ ಹಸಿರು ಇಂಧನ ವೇದಿಕೆಗಳು
ಅಂತರರಾಷ್ಟ್ರೀಯ ಸೌರ ಒಕ್ಕೂಟದ ಸದಸ್ಯತ್ವವನ್ನು ಪಡೆಯುವ ಕೆನಡಾದ ನಿರ್ಧಾರವನ್ನು ಭಾರತವು ಸ್ವಾಗತಿಸಿತು. ಕೆನಡಾದ ಭಾಗವಹಿಸುವಿಕೆಯು ಸೌರಶಕ್ತಿ ನಿಯೋಜನೆ, ನಾವೀನ್ಯತೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ, ವಿಶೇಷವಾಗಿ ಅಭಿವೃದ್ಧಿಶೀಲ ಮತ್ತು ಹವಾಮಾನ ವೈಪರೀತ್ಯಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಬಲಪಡಿಸುತ್ತದೆ ಎಂದು ನಾಯಕರು ಅಭಿಪ್ರಾಯಪಟ್ಟರು.
ಜಾಗತಿಕ ಜೈವಿಕ ಇಂಧನ ಒಕ್ಕೂಟದ ಪೂರ್ಣ ಪ್ರಮಾಣದ ಸದಸ್ಯರಾಗಿ ತನ್ನ ಸಹಭಾಗಿತ್ವವನ್ನು ಮೇಲ್ದರ್ಜೆಗೇರಿಸಲು ಅಗತ್ಯವಾದ ಮೂಲಭೂತ ದಾಖಲೆಗಳಿಗೆ ಕೆನಡಾ ಸಹಿ ಹಾಕಿದ್ದನ್ನು ಭಾರತವು ಸ್ವಾಗತಿಸಿತು. ಈ ಕ್ರಮವು ಜಾಗತಿಕವಾಗಿ ಸುಸ್ಥಿರ ಜೈವಿಕ ಇಂಧನಗಳ ಅಳವಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಜೈವಿಕ ಇಂಧನ ಪೂರೈಕೆ ಸರಪಳಿಗಳು, ಮಾನದಂಡಗಳು ಹಾಗೂ ಹೊರಸೂಸುವಿಕೆ ನಿಯಂತ್ರಣದಲ್ಲಿ ಸಹಕಾರವನ್ನು ಬಲಪಡಿಸುತ್ತದೆ.
ಸುಸ್ಥಿರ ಕೃಷಿ ಮತ್ತು ಪೌಷ್ಟಿಕಾಂಶದ ಭದ್ರತೆ
ಕೃಷಿ ಮತ್ತು ಕೃಷಿ-ಆಹಾರ ವ್ಯವಸ್ಥೆಗಳಲ್ಲಿ ಭಾರತ ಮತ್ತು ಕೆನಡಾ ನಡುವೆ ಬೆಳೆಯುತ್ತಿರುವ ಪೂರಕ ಸಂಬಂಧವನ್ನು ಗುರುತಿಸಿದ ನಾಯಕರು, ಆಹಾರ ಭದ್ರತೆ, ಕೃಷಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವವುಳ್ಳ ಪೂರೈಕೆ ಸರಪಳಿಗಳನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಕೃಷಿ-ತಂತ್ರಜ್ಞಾನ, ಸಂಶೋಧನೆ ಮತ್ತು ಮೌಲ್ಯವರ್ಧಿತ ಆಹಾರ ಉತ್ಪಾದನೆಯಲ್ಲಿ ಸಹಯೋಗದ ಅವಕಾಶಗಳನ್ನು ಅವರು ಗುರುತಿಸಿದರು.
ಕುಂಡ್ಲಿಯ 'ನಿಫ್ಟೆಮ್' (NIFTEM) ಸಂಸ್ಥೆಯಲ್ಲಿ 'ಭಾರತ-ಕೆನಡಾ ಬೇಳೆಕಾಳು ಪ್ರೋಟೀನ್ ಶ್ರೇಷ್ಠತಾ ಕೇಂದ್ರ' ಸ್ಥಾಪಿಸುವ ಪ್ರಸ್ತಾವನೆಯನ್ನು ನಾಯಕರು ಸ್ವಾಗತಿಸಿದರು. ಬೇಳೆಕಾಳುಗಳ ಉತ್ಪಾದನೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕನಾಗಿರುವ ಕೆನಡಾದ ಸಾಸ್ಕಾಚೆವನ್ ಪ್ರಾಂತ್ಯ ಮತ್ತು ವಿಶ್ವದ ಅತಿದೊಡ್ಡ ಬೇಳೆಕಾಳು ಉತ್ಪಾದಕ ಹಾಗೂ ಗ್ರಾಹಕ ದೇಶವಾಗಿರುವ ಭಾರತದ ಪೂರಕ ಸಾಮರ್ಥ್ಯಗಳನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಈ ಉಪಕ್ರಮವು ಕೃಷಿ-ಆಹಾರ ಸಂಶೋಧನೆಯನ್ನು ಬಲಪಡಿಸುತ್ತದೆ, ಬೇಳೆಕಾಳುಗಳ ಪ್ರೋಟೀನ್ ಸಂಸ್ಕರಣೆ ಮತ್ತು ಪೌಷ್ಟಿಕಾಂಶವರ್ಧಿತ ಆಹಾರ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಅವರು ಒಪ್ಪಿಕೊಂಡರು.
ಒಂದು ಕುಟುಂಬ
ಪ್ರತಿಭೆಯಲ್ಲಿ ಹೂಡಿಕೆ
ಭಾರತ ಮತ್ತು ಕೆನಡಾ ನಡುವಿನ ಜನರು- ಜನರ ನಡುವಿನ ಬಾಂಧವ್ಯವನ್ನು ವೃದ್ಧಿಸುವಲ್ಲಿ ಶಿಕ್ಷಣ ಮತ್ತು ಪ್ರತಿಭೆಯ ಚಲನಶೀಲತೆಯು ಕೇಂದ್ರ ಪಾತ್ರ ವಹಿಸುತ್ತದೆ ಎಂದು ನಾಯಕರು ಒತ್ತಿಹೇಳಿದರು. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವೃತ್ತಿಪರರ ಸಂಚಾರವು ಉಭಯ ದೇಶಗಳ ನಾವೀನ್ಯತೆ ವ್ಯವಸ್ಥೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವ ಮೂಲಕ ಪರಸ್ಪರ ಪ್ರಯೋಜನಕಾರಿಯಾಗಿದೆ ಎಂದು ಅವರು ಗಮನಿಸಿದರು.
ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ, ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಮತ್ತು ಭವಿಷ್ಯದ ಸವಾಲುಗಳಿಗೆ ಸನ್ನದ್ಧವಾದ ಕಾರ್ಯಪಡೆಯನ್ನು ನಿರ್ಮಿಸುವಲ್ಲಿ ಅಂತರರಾಷ್ಟ್ರೀಯ ಶೈಕ್ಷಣಿಕ ಸಹಯೋಗದ ಪ್ರಾಮುಖ್ಯತೆಯನ್ನು ನಾಯಕರು ಗುರುತಿಸಿದರು. ಈ ನಿಟ್ಟಿನಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರವನ್ನು ಗಾಢವಾಗಿಸಲು ಅವರು ಸಮ್ಮತಿಸಿದರು. ಇದರಲ್ಲಿ ಉದ್ಯಮಕ್ಕೆ ಪೂರಕವಾದ ಕೌಶಲ್ಯ ತರಬೇತಿಯನ್ನು ಹೆಚ್ಚಿಸುವುದು; ಜಂಟಿ, ದ್ವಿ-ಪದವಿ ಮತ್ತು ತರಬೇತಿ ಕಾರ್ಯಕ್ರಮಗಳ ವಿಸ್ತರಣೆ; ಪ್ರಮುಖ ಕೆನಡಿಯನ್ ಶಿಕ್ಷಣ ಸಂಸ್ಥೆಗಳ ವಿದೇಶಿ ಕ್ಯಾಂಪಸ್ ಗಳನ್ನು ಭಾರತದಲ್ಲಿ ಸ್ಥಾಪಿಸಲು ಅನುಕೂಲ ಮಾಡಿಕೊಡುವುದು; ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಂಶೋಧನಾ ಪಾಲುದಾರಿಕೆಯನ್ನು ಬಲಪಡಿಸುವುದು ಮತ್ತು ಈ ಕ್ಷೇತ್ರದಲ್ಲಿ ಸಹಕಾರವನ್ನು ಬೆಂಬಲಿಸಲು ಉನ್ನತ ಶಿಕ್ಷಣದ 'ಜಂಟಿ ಕಾರ್ಯಪಡೆ'ಯನ್ನು ಪುನಶ್ಚೇತನಗೊಳಿಸುವುದು ಸೇರಿದೆ.
ಭಾರತದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ಕೆನಡಾದ ಮೈಟಾಕ್ಸ್ (MITACS) ನಡುವಿನ ತಿಳುವಳಿಕೆ ಒಪ್ಪಂದಬನ್ನು ನಾಯಕರು ಸ್ವಾಗತಿಸಿದರು. ಇದು 'ಗ್ಲೋಬಲಿಂಕ್ ಸಂಶೋಧನಾ ಇಂಟರ್ನ್‌ಶಿಪ್' ಕಾರ್ಯಕ್ರಮವನ್ನು ವಿಸ್ತರಿಸಲಿದ್ದು, ವಾರ್ಷಿಕವಾಗಿ ಸುಮಾರು 300 ಭಾರತೀಯ ಪದವಿ ವಿದ್ಯಾರ್ಥಿಗಳಿಗೆ ಕೆನಡಾದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ತರಬೇತಿ ಪಡೆಯಲು ಅವಕಾಶ ಮಾಡಿಕೊಡಲಿದೆ. ಈ ಪ್ರಮುಖ ಉಪಕ್ರಮವು ಸಾಂಸ್ಥಿಕ ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಸಂಶೋಧನೆಯ ಮೂಲಕ ಭವಿಷ್ಯದ ಕೌಶಲ್ಯಗಳನ್ನು ನಿರ್ಮಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಹಂಚಿಕೆಯ ಆದ್ಯತೆಯ ಕ್ಷೇತ್ರಗಳಲ್ಲಿ ಕೆನಡಾದ ಸಂಶೋಧನೆ ಮತ್ತು ನಾವೀನ್ಯತೆ ಸಾಮರ್ಥ್ಯವನ್ನು ಅಳವಡಿಸಲು ಹಾಗೂ ಜಂಟಿ ತರಬೇತಿ ಮತ್ತು ಸಂಶೋಧನಾ ಸಹಯೋಗದ ಮೂಲಕ ಉಭಯ ದೇಶಗಳ ನಡುವಿನ ಪ್ರತಿಭೆಯ ಹರಿವನ್ನು ಬಲಪಡಿಸುವ ಉದ್ದೇಶ ಹೊಂದಿರುವ ಹೊಸ 'ಜಂಟಿ ಪ್ರತಿಭೆ ಮತ್ತು ನಾವೀನ್ಯತೆ ಕಾರ್ಯತಂತ್ರ'ವನ್ನು ನಾಯಕರು ಸ್ವಾಗತಿಸಿದರು.
ನಾವೀನ್ಯತೆಯನ್ನು ಮುನ್ನಡೆಸಲು, ಸಾಮರ್ಥ್ಯ ವೃದ್ಧಿಸಲು ಮತ್ತು ಇಂಡೋ-ಪೆಸಿಫಿಕ್ ಆದ್ಯತೆಗಳನ್ನು ಬೆಂಬಲಿಸಲು ಆಳವಾದ ಸಾಂಸ್ಥಿಕ ಪಾಲುದಾರಿಕೆ, ಸಂಶೋಧಕರ ಚಲನಶೀಲತೆ ಮತ್ತು ಜ್ಞಾನ ವಿನಿಮಯದ ಪ್ರಾಮುಖ್ಯತೆಯನ್ನು ನಾಯಕರು ಒತ್ತಿಹೇಳಿದರು. ಈ ಸಂದರ್ಭದಲ್ಲಿ, ಕೆನಡಾ ಮತ್ತು ಭಾರತೀಯ ಸಂಸ್ಥೆಗಳ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಕೊಂಡಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೆನಡಾದ 'ಇಂಡೋ-ಪೆಸಿಫಿಕ್ ಸ್ಕಾಲರ್‌ಶಿಪ್ ಗಳು ಮತ್ತು ಫೆಲೋಶಿಪ್ ಗಳು' (IPSFC) ಕಾರ್ಯಕ್ರಮವನ್ನು ಅರ್ಥಪೂರ್ಣ ಹೆಜ್ಜೆ ಎಂದು ಅವರು ಸ್ವಾಗತಿಸಿದರು. ಈ ಕಾರ್ಯಕ್ರಮದ ಅಡಿಯಲ್ಲಿ ಕೆನಡಾದ 11 ಶಿಕ್ಷಣ ಸಂಸ್ಥೆಗಳ 85 ಕ್ಕೂ ಹೆಚ್ಚು ಪದವೀಧರ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾರತಕ್ಕೆ ಭೇಟಿ ನೀಡಲಿದ್ದು, ಹಸಿರು ಹೈಡ್ರೋಜನ್, ಹವಾಮಾನ ಸ್ಥಿತಿಸ್ಥಾಪಕತ್ವ, ಕೃತಕ ಬುದ್ಧಿಮತ್ತೆ, ವ್ಯಾಪಾರ ಮತ್ತು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಹಾಗೂ ಸುಸ್ಥಿರ ಅಭಿವೃದ್ಧಿ ಸೇರಿದಂತೆ ಆದ್ಯತೆಯ ಕ್ಷೇತ್ರಗಳಲ್ಲಿ ಭಾರತದ ಪ್ರಮುಖ ಶಿಕ್ಷಣತಜ್ಞರೊಂದಿಗೆ ಕೆಲಸ ಮಾಡಲಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದ ಇಪ್ಪತ್ತನಾಲ್ಕು ತಿಳುವಳಿಕೆ ಒಪ್ಪಂದಗಳ ಅಂತಿಮಗೊಳಿಸುವಿಕೆಯನ್ನು ನಾಯಕರು ಸ್ವಾಗತಿಸಿದರು.
ಜನರು-ಜನರ ನಡುವಿನ ಸಂಬಂಧ ಮತ್ತು ಸಾಂಸ್ಕೃತಿಕ ಸಹಕಾರ
ಭಾರತ ಮತ್ತು ಕೆನಡಾ ನಡುವಿನ ಆಳವಾದ ಐತಿಹಾಸಿಕ ಸಂಬಂಧಗಳು ಮತ್ತು ಜನರು-ಜನರ ನಡುವಿನ ರೋಮಾಂಚಕ ಸಂಪರ್ಕಗಳನ್ನು ಗುರುತಿಸಿದ ನಾಯಕರು, ಸಾಂಸ್ಕೃತಿಕ ಸಹಕಾರವು ದ್ವಿಪಕ್ಷೀಯ ಸಂಬಂಧದ ಪ್ರಮುಖ ಸ್ತಂಭವಾಗಿದೆ ಎಂದು ಒತ್ತಿಹೇಳಿದರು. ನಿರಂತರ ಸಾಂಸ್ಕೃತಿಕ ವಿನಿಮಯವು ಪರಸ್ಪರ ತಿಳುವಳಿಕೆಯನ್ನು ಬಲಪಡಿಸುತ್ತದೆ, ವೈವಿಧ್ಯತೆಯನ್ನು ಸಂಭ್ರಮಿಸುತ್ತದೆ ಮತ್ತು ಸಮಾಜಗಳ ನಡುವೆ ಶಾಶ್ವತ ಸಂಬಂಧಗಳನ್ನು ನಿರ್ಮಿಸುತ್ತದೆ; ಜೊತೆಗೆ ಸೃಜನಶೀಲ ಆರ್ಥಿಕತೆ ಮತ್ತು ನಾವೀನ್ಯತೆಗೆ ಬೆಂಬಲ ನೀಡುತ್ತದೆ ಎಂದು ಅವರು ಗಮನಿಸಿದರು. ಸಂಸ್ಕೃತಿ, ಪರಂಪರೆ ಮತ್ತು ಸೃಜನಶೀಲ ಉದ್ಯಮಗಳಲ್ಲಿನ ನಿಕಟ ಸಹಯೋಗವು ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ ಮತ್ತು ಸಮಗ್ರ ಬೆಳವಣಿಗೆ ಹಾಗೂ ಹಂಚಿಕೆಯ ಸಮೃದ್ಧಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತದೆ ಎಂದು ನಾಯಕರು ಸಮ್ಮತಿಸಿದರು.
ಕಲೆ, ಪರಂಪರೆ, ಶ್ರವ್ಯ – ದೃಶ್ಯ ಮಾಧ್ಯಮ, ಸಂಗೀತ ಮತ್ತು ಸೃಜನಶೀಲ ಉದ್ಯಮಗಳಲ್ಲಿ ವಿಸ್ತೃತ ಸಹಯೋಗದ ಮೂಲಕ ಉಭಯ ದೇಶಗಳ ನಡುವಿನ ಜನರ ಸಂಬಂಧವನ್ನು ಗಾಢವಾಗಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸುವ 'ಸಾಂಸ್ಕೃತಿಕ ಸಹಕಾರದ ಕುರಿತಾದ ತಿಳುವಳಿಕೆ ಒಪ್ಪಂದ'ಕ್ಕೆ ಸಹಿ ಹಾಕಿದ್ದನ್ನು ನಾಯಕರು ಸ್ವಾಗತಿಸಿದರು. ಉದ್ದೇಶಿತ ಉಪಕ್ರಮಗಳ ಮೂಲಕ ಉಭಯ ದೇಶಗಳ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಸೃಜನಾತ್ಮಕ ಕಲಾವಿದರ ನಡುವಿನ ಸಹಕಾರವನ್ನು ಬಲಪಡಿಸಲು ಅವರು ಒಪ್ಪಿಕೊಂಡರು.
ಸಾಂಸ್ಕೃತಿಕ ವಲಯಕ್ಕಾಗಿ ಮತ್ತು ಈ ಕ್ಷೇತ್ರದಲ್ಲಿ ನಿರಂತರ ಸಾಂಸ್ಕೃತಿಕ ಸಂವಾದ, ಸೃಜನಾತ್ಮಕ ಪಾಲುದಾರಿಕೆ ಹಾಗೂ ಪರಸ್ಪರ ತಿಳುವಳಿಕೆಯನ್ನು ಬೆಂಬಲಿಸಲು 'ವರ್ಚುವಲ್ ರಿಯಾಲಿಟಿ', 'ಆಗ್ಯುಮೆಂಟೆಡ್ ರಿಯಾಲಿಟಿ' ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಸಂಭಾವ್ಯ ಬಳಕೆಯನ್ನು ನಾಯಕರು ಒತ್ತಿಹೇಳಿದರು.
ಉಭಯ ದೇಶಗಳಲ್ಲಿನ ಮೂಲನಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಸಬಲೀಕರಣದ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ನಾಯಕರು, ಅವರ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಾಂಪ್ರದಾಯಿಕ ಜ್ಞಾನ ಪದ್ಧತಿಗಳು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅವರು ನೀಡುತ್ತಿರುವ ನಿರಂತರ ಕೊಡುಗೆಗಳನ್ನು ಗುರುತಿಸಿದರು. ಉದ್ಯಮಶೀಲತೆ, ಸಾಂಸ್ಕೃತಿಕ ಸಂರಕ್ಷಣೆ ಮತ್ತು ಸುಸ್ಥಿರ ಜೀವನೋಪಾಯದಲ್ಲಿ ಜಾಗತಿಕ ವಿನಿಮಯವನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾಗಿ 'ಭಾರತ ಬುಡಕಟ್ಟು ಉತ್ಸವ' (ಬಿಟಿಎಫ್) 2026 ಅನ್ನು ಅವರು ಸ್ವಾಗತಿಸಿದರು. ಸಮಗ್ರ ಬೆಳವಣಿಗೆಯನ್ನು ಬಲಪಡಿಸುವ ಮತ್ತು ಪರಸ್ಪರ ಗೌರವದ ಮೇಲೆ ಆಧಾರಿತವಾದ ಜನರ ಸಂಬಂಧವನ್ನು ವೃದ್ಧಿಸುವ ದೃಷ್ಟಿಯಿಂದ; ಸಾಂಸ್ಕೃತಿಕ ವಿನಿಮಯ, ಕೌಶಲ್ಯ ಅಭಿವೃದ್ಧಿ, ಸಾಂಪ್ರದಾಯಿಕ ಜ್ಞಾನ ಮತ್ತು ಸಮುದಾಯ ಆಧಾರಿತ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶದಂತಹ ಕ್ಷೇತ್ರಗಳಲ್ಲಿ ಸಂವಾದ ಮತ್ತು ಸಹಯೋಗವನ್ನು ಪ್ರೋತ್ಸಾಹಿಸಲು ನಾಯಕರು ಸಮ್ಮತಿಸಿದರು.
ಇತ್ತೀಚೆಗೆ ನಡೆದ 'ಭಾರತ-ಕೆನಡಾ ಟ್ರ್ಯಾಕ್-II ಸ್ಟ್ರಾಟೆಜಿಕ್ ಡೈಲಾಗ್' ಅನ್ನು ನಾಯಕರು ಸ್ವಾಗತಿಸಿದರು. ಇದು ನೀತಿ ನಿರೂಪಕರು, ತಜ್ಞರು, ಉದ್ಯಮಿಗಳು ಮತ್ತು ನಾಗರಿಕ ಸಮಾಜವನ್ನು ಒಗ್ಗೂಡಿಸಿ; ರಾಜತಾಂತ್ರಿಕ ಪುನರಾರಂಭವನ್ನು ಆರ್ಥಿಕ ಸ್ಥಿತಿಸ್ಥಾಪಕತ್ವ, ಉದಯೋನ್ಮುಖ ತಂತ್ರಜ್ಞಾನಗಳು, ಇಂಧನ ಭದ್ರತೆ ಮತ್ತು ಜನರೊಂದಿಗಿನ ವಿನಿಮಯದಂತಹ ವಿಷಯಗಳಲ್ಲಿ ದೃಢವಾದ ಸಹಕಾರವನ್ನಾಗಿ ಪರಿವರ್ತಿಸುವ ಮಾರ್ಗಗಳನ್ನು ಅನ್ವೇಷಿಸಿತು. ಈ ಉನ್ನತ ಮಟ್ಟದ ವಿನಿಮಯವು ಸಾಂಸ್ಥಿಕ ತೊಡಗಿಸಿಕೊಳ್ಳುವಿಕೆ ಮತ್ತು ಹಂಚಿಕೆಯ ನೀತಿ ಸಂವಾದದ ಪ್ರಾಮುಖ್ಯತೆಯನ್ನು ಒತ್ತಿಹೇಳಿದೆ ಎಂದು ಅವರು ಗಮನಿಸಿದರು. ಔಪಚಾರಿಕ ಮತ್ತು 'ಟ್ರ್ಯಾಕ್-II' ವೇದಿಕೆಗಳಾದ್ಯಂತ ನಿರಂತರ ಸಂವಾದವು ಪರಸ್ಪರ ತಿಳುವಳಿಕೆಯನ್ನು ಗಾಢವಾಗಿಸಲು ಮತ್ತು ಉಭಯ ಸಮಾಜಗಳಿಗೆ ಸ್ಪಷ್ಟ ಪ್ರಯೋಜನಗಳನ್ನು ನೀಡುವ ಪ್ರಾಯೋಗಿಕ, ಭವಿಷ್ಯದ ದೃಷ್ಟಿಕೋನವುಳ್ಳ ಉಪಕ್ರಮಗಳಿಗೆ ಪೂರಕವಾಗಲಿದೆ ಎಂದು ನಾಯಕರು ಒಪ್ಪಿಕೊಂಡರು.
ಉಭಯ ದೇಶಗಳ ನಡುವಿನ ನಾಗರಿಕ ವಿಮಾನಯಾನ ಕ್ಷೇತ್ರದ ಸಹಕಾರದ ಸುದೀರ್ಘ ಇತಿಹಾಸವನ್ನು ಮತ್ತು ಆರ್ಥಿಕ ಬೆಳವಣಿಗೆ, ಸಂಪರ್ಕ ಹಾಗೂ ಜನರು-ಜನರ ನಡುವಿನ ವಿನಿಮಯಕ್ಕೆ ಅದರ ಗಮನಾರ್ಹ ಕೊಡುಗೆಯನ್ನು ನಾಯಕರು ಗುರುತಿಸಿದರು. ಉಭಯ ದೇಶಗಳಲ್ಲಿ ಸುರಕ್ಷಿತ, ಸುಭದ್ರ, ಸುಸ್ಥಿರ ಮತ್ತು ಸ್ಥಿತಿಸ್ಥಾಪಕತ್ವವುಳ್ಳ ವಿಮಾನಯಾನ ವ್ಯವಸ್ಥೆಯನ್ನು ಉತ್ತೇಜಿಸಲು; 'ನಾಗರಿಕ ವಿಮಾನಯಾನ ಸಹಕಾರದ ಜಂಟಿ ತಿಳುವಳಿಕೆ ಒಪ್ಪಂದ'ವನ್ನು ನವೀಕರಿಸುವ ಮೂಲಕ ಈ ಸಹಯೋಗವನ್ನು ಮತ್ತಷ್ಟು ಗಾಢವಾಗಿಸುವ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
ಒಂದು ಭವಿಷ್ಯ
ವಿಜ್ಞಾನ ಮತ್ತು ತಂತ್ರಜ್ಞಾನದ ಚೌಕಟ್ಟು
ತಂತ್ರಜ್ಞಾನ ಮತ್ತು ನಾವೀನ್ಯತೆಗಳು ಆರ್ಥಿಕ ಬೆಳವಣಿಗೆ, ಸ್ಪರ್ಧಾತ್ಮಕತೆ ಮತ್ತು ಸಮಾಜದ ಸ್ಥಿತಿಸ್ಥಾಪಕತ್ವದ ಪ್ರಮುಖ ಚಾಲಕಶಕ್ತಿಗಳು ಎಂಬುದನ್ನು ಗುರುತಿಸಿದ ನಾಯಕರು, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭಾರತ-ಕೆನಡಾ ಸಹಕಾರವನ್ನು ಗಾಢವಾಗಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಈ ಗುರಿಯನ್ನು ತಲುಪಲು ಆಕಾಂಕ್ಷೆಗಳನ್ನು ಸಂಘಟಿತ ಹಾಗೂ ಫಲಿತಾಂಶ ಆಧಾರಿತ ಸಹಯೋಗವನ್ನಾಗಿ ಪರಿವರ್ತಿಸಬಲ್ಲ ಸಾಂಸ್ಥಿಕ ಕಾರ್ಯವಿಧಾನಗಳನ್ನು ಪುನಶ್ಚೇತನಗೊಳಿಸುವ ಅಗತ್ಯವನ್ನು ಈ ಒಮ್ಮತವು ಎತ್ತಿ ತೋರಿಸುತ್ತದೆ. ಈ ನಿಟ್ಟಿನಲ್ಲಿ 'ಜಂಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಸಮಿತಿ'ಯ (ಜೆ ಎಸ್ ಟಿ ಸಿ ಸಿ) ಪುನರಾರಂಭವು ಒಂದು ಪ್ರಮುಖ ಹೆಜ್ಜೆಯಾಗಿದ್ದು, ಇದು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಹೆಚ್ಚಿಸಲು, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಬಲಪಡಿಸಲು, ಹಸಿರು ತಂತ್ರಜ್ಞಾನ ಮತ್ತು ಇಂಧನ ನಾವೀನ್ಯತೆಯನ್ನು ವೇಗಗೊಳಿಸಲು ಹಾಗೂ ಸಂಶೋಧನಾ ಪಾಲುದಾರಿಕೆಗಳನ್ನು ವಿಸ್ತರಿಸಲು ನವೀಕೃತ ವೇದಿಕೆಯನ್ನು ಒದಗಿಸುತ್ತದೆ.
ಬಾಹ್ಯಾಕಾಶ ಸಹಕಾರ
ಆಯಾ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಖಾಸಗಿ ವಲಯಗಳ ನಡುವಿನ ಬಾಹ್ಯಾಕಾಶ ಸಹಕಾರದ ಕುರಿತಾದ ಕಾರ್ಯತಂತ್ರದ ಪಾಲುದಾರಿಕೆಯ ತುರ್ತು ಮತ್ತು ಪರಸ್ಪರ ಪ್ರಯೋಜನಗಳ ಬಗ್ಗೆ ನಾಯಕರು ಚರ್ಚಿಸಿದರು. 1996 ರಲ್ಲಿ ಬಾಹ್ಯಾಕಾಶ ಸಹಕಾರದ ಕುರಿತು ಮೊದಲ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ಕಳೆದ 30 ವರ್ಷಗಳಲ್ಲಿ ಕೆನಡಿಯನ್ ಸ್ಪೇಸ್ ಏಜೆನ್ಸಿ (ಸಿ ಎಸ್ ಎ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಡುವೆ ನಿರ್ಮಾಣವಾಗಿರುವ ನಂಬಿಕೆಯ ಆಧಾರದ ಮೇಲೆ, ಬಾಹ್ಯಾಕಾಶ ಸಂಸ್ಥೆಗಳು ಮತ್ತು ಅವುಗಳ ರಾಷ್ಟ್ರೀಯ ವ್ಯಾಪಾರ ಹಾಗೂ ಸಂಶೋಧನಾ ಪರಿಸರ ವ್ಯವಸ್ಥೆಗಳು ಉದಯೋನ್ಮುಖ ಅವಕಾಶಗಳನ್ನು ಜಂಟಿಯಾಗಿ ವೇಗವಾಗಿ ಬಳಸಿಕೊಳ್ಳಲು ಸಜ್ಜಾಗಿವೆ.
ಈ ಪಾಲುದಾರಿಕೆಯು ತಿಳುವಳಿಕೆ ಒಪ್ಪಂದದ ಅಡಿಯಲ್ಲಿನ ಮಹತ್ವಾಕಾಂಕ್ಷೆಯ 'ಅನುಷ್ಠಾನ ವ್ಯವಸ್ಥೆ'ಯ ಮೂಲಕ ಮಾರ್ಗದರ್ಶನ ಪಡೆಯಲಿದ್ದು, ಜಂಟಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಮತ್ತು ವಾಯುಮಂಡಲ ವಿಜ್ಞಾನಗಳು, ಬಾಹ್ಯಾಕಾಶ ರೊಬೊಟಿಕ್ಸ್ ಹಾಗೂ ಮಾನವ ಸಹಿತ ಬಾಹ್ಯಾಕಾಶ ಯಾನವನ್ನೊಳಗೊಂಡ ಬಾಹ್ಯಾಕಾಶ ಅನ್ವೇಷಣೆ ಮತ್ತು ಕ್ವಾಂಟಮ್ ಸಂವಹನ ತಂತ್ರಜ್ಞಾನಗಳು ಸೇರಿದಂತೆ ಹೊಸ ಹಾಗೂ ಉದಯೋನ್ಮುಖ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಯೋಗವನ್ನು ಸುಗಮಗೊಳಿಸಲಿದೆ. ಇದಲ್ಲದೆ, ತಮ್ಮ ರಾಷ್ಟ್ರೀಯ ಬಾಹ್ಯಾಕಾಶ ಪರಿಸರ ವ್ಯವಸ್ಥೆಗಳಾದ್ಯಂತ ಸಂಪರ್ಕಗಳನ್ನು ಬಲಪಡಿಸುವ, ಪರಸ್ಪರ ಪೂರಕ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಸರ್ಕಾರಿ ಸಂಸ್ಥೆಗಳು, ಕೈಗಾರಿಕೆಗಳು, ನವೋದ್ಯಮಗಳು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಪಾಲುದಾರಿಕೆಯನ್ನು ಪ್ರೋತ್ಸಾಹಿಸುವ ಮೂಲಕ ನಾವೀನ್ಯತೆಯನ್ನು ಹೆಚ್ಚಿಸಲು ಮತ್ತು ಹಂಚಿಕೆಯ ಅಭಿವೃದ್ಧಿ ಗುರಿಗಳಿಗೆ ಕೊಡುಗೆಯನ್ನು ಅವರು ದೃಢಪಡಿಸಿದರು.
ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆ ಸಹಕಾರ
ಬಾಹ್ಯಾಕಾಶ ಸಹಕಾರದ ಮುಂದುವರಿದ ಭಾಗವಾಗಿ, ಭಾರತ ಮತ್ತು ಕೆನಡಾ ಬಾಹ್ಯಾಕಾಶ ಹಾಗೂ ಏರೋಸ್ಪೇಸ್ ತಂತ್ರಜ್ಞಾನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲು ಜಂಟಿ ಉಪಕ್ರಮಗಳನ್ನು ಅನ್ವೇಷಿಸುವ ಉದ್ದೇಶ ಹೊಂದಿವೆ. ಬಾಹ್ಯಾಕಾಶ ಅನ್ವಯಿಕೆಗಳು ಮತ್ತು ಭೂ-ಪರಿವೀಕ್ಷಣೆಗಾಗಿ ಈ ಎಐ ಸಾಧನಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ಮೂಲಕ, ಎರಡೂ ದೇಶಗಳು ನಾವೀನ್ಯತೆಯನ್ನು ಮುನ್ನಡೆಸಲಿವೆ ಮತ್ತು ತಮ್ಮ ತಾಂತ್ರಿಕ ಸಾರ್ವಭೌಮತ್ವವನ್ನು ಬಲಪಡಿಸಲಿವೆ.
ಉಭಯ ದೇಶಗಳ ದೂರದ ಪ್ರದೇಶಗಳಿಗೆ ಆಧುನಿಕ ಹಾಗೂ ವಿಶ್ವಾಸಾರ್ಹ ಆರೋಗ್ಯ ಸೇವೆಯನ್ನು ಒದಗಿಸಲು, ದೂರದ ವೈದ್ಯಕೀಯ ಸೇವೆಗಳ ರೋಗನಿರ್ಣಯ ಸಾಮರ್ಥ್ಯಗಳನ್ನು ಬಲಪಡಿಸುವ ಎಐ-ಚಾಲಿತ ಸಾಧನಗಳ ಕುರಿತು ಸಹಯೋಗವನ್ನು ಅನ್ವೇಷಿಸಲು ನಾಯಕರು ಸಮ್ಮತಿಸಿದರು.
ಉದ್ಯಮ ಮತ್ತು ಶೈಕ್ಷಣಿಕ ಪಾಲುದಾರಿಕೆಗಳ ಮೌಲ್ಯವನ್ನು ಗುರುತಿಸಿದ ಉಭಯ ರಾಷ್ಟ್ರಗಳು, 'ಗಡಿಯಾಚೆಗಿನ ಕೆಲಸ-ಸಂಯೋಜಿತ ಕಲಿಕೆಯ ಅವಕಾಶಗಳು' ಕಾರ್ಯಕ್ರಮವನ್ನು ಸ್ಥಾಪಿಸಲು ಉದ್ದೇಶಿಸಿವೆ. ಇದು ಭಾರತೀಯ ಇಂಜಿನಿಯರ್ ಗಳು ಮತ್ತು ಸಂಶೋಧಕರಿಗೆ ಕೆನಡಾದ ವಿಶ್ವದರ್ಜೆಯ ಎಐ ಸಂಶೋಧನಾ ಸಂಸ್ಥೆಗಳಲ್ಲಿ ಪ್ರಾಯೋಗಿಕ ಅನುಭವ ಪಡೆಯಲು ಸಹಾಯ ಮಾಡಲಿದೆ. ಅಂತೆಯೇ ಕೆನಡಾದ ಇಂಜಿನಿಯರ್ ಗಳು ಭಾರತದ ಬೃಹತ್ ಪ್ರಮಾಣದ 'ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ' ವ್ಯವಸ್ಥೆಯ ಪರಿಣತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.
ಹೆಚ್ಚುತ್ತಿರುವ ಇಂಧನ ಬೇಡಿಕೆ ಮತ್ತು ನವೀಕರಿಸಬಹುದಾದ ಇಂಧನದ ವಿಸ್ತೃತ ಪಾತ್ರದ ಹಿನ್ನೆಲೆಯಲ್ಲಿ, ಸ್ಥಿತಿಸ್ಥಾಪಕತ್ವವುಳ್ಳ ವಿದ್ಯುತ್ ಗ್ರಿಡ್ ವ್ಯವಸ್ಥೆಗಳ ಪ್ರಾಮುಖ್ಯತೆಯನ್ನು ಗುರುತಿಸಲಾಯಿತು. ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಇಂಧನ ಬೇಡಿಕೆಯ ಏರಿಳಿತಗಳನ್ನು ಮುನ್ಸೂಚಿಸಲು ಮತ್ತು ಬ್ಯಾಟರಿ ಸಂಗ್ರಹಣೆಯನ್ನು ಉತ್ತಮವಾಗಿ ನಿರ್ವಹಿಸಲು ಬೇಕಾದ ಎಐ ಆಲ್ಗೊರಿದಮ್ ಗಳ ಅಭಿವೃದ್ಧಿಯ ಕುರಿತು ಜ್ಞಾನ ಹಂಚಿಕೆಯ ಮೂಲಕ ಸಹಕಾರವನ್ನು ಬಲಪಡಿಸಲು ಉಭಯ ಕಡೆಯವರು ಒಪ್ಪಿಕೊಂಡರು.
ಆಸ್ಟ್ರೇಲಿಯಾ-ಕೆನಡಾ-ಭಾರತ ತಂತ್ರಜ್ಞಾನ ಮತ್ತು ನಾವೀನ್ಯತೆ (ಎಸಿಐಟಿಐ) ಪಾಲುದಾರಿಕೆಯ ಅಡಿಯಲ್ಲಿ ಸಾಧಿಸಲಾದ ಪ್ರಗತಿಯನ್ನು ನಾಯಕರು ಸ್ವಾಗತಿಸಿದರು ಮತ್ತು ನವದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ಮೂರೂ ದೇಶಗಳ ಎಐ ಸಚಿವರು ನಡೆಸಿದ ಇತ್ತೀಚಿನ ಸಭೆಯನ್ನು ಗಮನಿಸಿದರು. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳಲ್ಲಿ ಪ್ರಾಯೋಗಿಕ ತ್ರಿಪಕ್ಷೀಯ ಸಹಕಾರವನ್ನು ಮುನ್ನಡೆಸಲು ಜಂಟಿ ಕ್ರಿಯಾ ಯೋಜನೆಯನ್ನು ರೂಪಿಸಲು ಅವರು ಸಮ್ಮತಿಸಿದರು. ಡಿಜಿಟಲ್ ಮೂಲಸೌಕರ್ಯ, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆ, ಉನ್ನತ-ಸಾಮರ್ಥ್ಯದ ಕಂಪ್ಯೂಟಿಂಗ್, ಇಂಟರ್ನೆಟ್-ಆಫ್-ಥಿಂಗ್ಸ್, ಸೈಬರ್ ಭದ್ರತೆ ಮತ್ತು ನವೋದ್ಯಮ ವ್ಯವಸ್ಥೆಗಳಲ್ಲಿ ಆಳವಾದ ಸಹಯೋಗದ ಸಂಭಾವ್ಯತೆಯನ್ನು ಅವರು ಒತ್ತಿಹೇಳಿದರು. ಎಐ ಸಾರ್ವಭೌಮತ್ವ, ಒಳಗೊಳ್ಳುವಿಕೆ ಮತ್ತು ವಿಶ್ವಾಸಾರ್ಹತೆಯನ್ನು ಉತ್ತೇಜಿಸಲು ನೀತಿ ಹಾಗೂ ನಿಯಂತ್ರಕ ವಿನಿಮಯಗಳನ್ನು ಬಲಪಡಿಸಲು ನಾಯಕರು ಒಪ್ಪಿಕೊಂಡರು. ಈ ಕಾರ್ಯವನ್ನು ಅಧಿಕೃತಗೊಳಿಸಲು ತಂತ್ರಜ್ಞಾನ ಮತ್ತು ನಾವೀನ್ಯತೆ ಸಹಕಾರದ ಕುರಿತಾದ ಆಸ್ಟ್ರೇಲಿಯಾ-ಕೆನಡಾ-ಭಾರತ ತ್ರಿಪಕ್ಷೀಯ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಅವರು ಸ್ವಾಗತಿಸಿದರು.
ಈ ಸಮಾನ ದೃಷ್ಟಿಕೋನವನ್ನು ದೃಢವಾದ ಫಲಿತಾಂಶಗಳನ್ನಾಗಿ ಪರಿವರ್ತಿಸಲು, ನವೀಕರಿಸಿದ ಭಾರತ-ಕೆನಡಾ ಕಾರ್ಯತಂತ್ರದ ಪಾಲುದಾರಿಕೆಯನ್ನು ಎರಡು ಮೂಲಭೂತ ಸ್ತರಗಳಲ್ಲಿ ರೂಪಿಸಲು ನಾಯಕರು ಸಮ್ಮತಿಸಿದರು.
ಮೂಲಭೂತ ಸ್ತರ - 1: ಭದ್ರತೆ ಮತ್ತು ರಕ್ಷಣಾ ಸಹಕಾರ
ಭದ್ರತಾ ಸಹಕಾರ
ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದಲ್ಲಿ ನಿಯಮಿತವಾಗಿ ನಡೆಯುತ್ತಿರುವ ದ್ವಿಪಕ್ಷೀಯ ಭದ್ರತಾ ಮಾತುಕತೆಯ ಪ್ರಗತಿಯನ್ನು ನಾಯಕರು ಸ್ವಾಗತಿಸಿದರು. ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಜಾರಿ ಆದ್ಯತೆಗಳ ಕುರಿತು ವರ್ಧಿತ ಸಹಕಾರಕ್ಕೆ ಮಾರ್ಗದರ್ಶನ ನೀಡುವ ಜಂಟಿ ಕಾರ್ಯಯೋಜನೆಗೆ ಅವರು ಸಮ್ಮತಿಸಿದರು. ಬಹುತ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಹಿಂಸಾತ್ಮಕ ಉಗ್ರವಾದ, ಭಯೋತ್ಪಾದನೆ, ಸಂಘಟಿತ ಅಪರಾಧಗಳು, ಮಾದಕ ದ್ರವ್ಯಗಳು ಮತ್ತು ಫೆಂಟಾನಿಲ್ ಅಕ್ರಮ ಸಾಗಣೆ, ಸೈಬರ್ ಅಪರಾಧ, ಸುಲಿಗೆ, ಹಣಕಾಸು ವಂಚನೆ, ಮಾನವ ಸಾಗಣೆ ಮತ್ತು ಸಂಬಂಧಿತ ಅಪರಾಧ ಜಾಲಗಳನ್ನು ಹತ್ತಿಕ್ಕಲು ಸಹಯೋಗವನ್ನು ಗಾಢವಾಗಿಸಲು ಅವರು ಒಪ್ಪಿಕೊಂಡರು. ದ್ವಿಪಕ್ಷೀಯ ಸಂವಹನವನ್ನು ಸುಗಮಗೊಳಿಸಲು ಮತ್ತು ಸಮಯೋಚಿತ ಮಾಹಿತಿ ಹಂಚಿಕೆಯನ್ನು ಸಕ್ರಿಯಗೊಳಿಸಲು ಭದ್ರತೆ ಮತ್ತು ಕಾನೂನು ಜಾರಿ ಸಂಪರ್ಕ ಕಾರ್ಯವಿಧಾನಗಳ ಸ್ಥಾಪನೆಯನ್ನು ನಾಯಕರು ಬೆಂಬಲಿಸಿದರು. ದೇಶೀಯ ಕಾನೂನುಗಳು ಮತ್ತು ಅಂತರರಾಷ್ಟ್ರೀಯ ಜವಾಬ್ದಾರಿಗಳಿಗೆ ಅನುಗುಣವಾಗಿ ಸೈಬರ್ ಭದ್ರತೆ ಮತ್ತು ವಲಸೆ ಜಾರಿ ಕುರಿತು ಸಹಕಾರವನ್ನು ಬಲಪಡಿಸಲು ಅವರು ಬದ್ಧತೆ ವ್ಯಕ್ತಪಡಿಸಿದರು. ಅಲ್ಲದೆ, ಭಯೋತ್ಪಾದನೆ ನಿಗ್ರಹದ ಕುರಿತಾದ 'ಜಂಟಿ ಕಾರ್ಯಕಾರಿ ಗುಂಪಿ'ನ ಮುಂದಿನ ಸಭೆಯನ್ನು ಶೀಘ್ರವಾಗಿ ನಡೆಸುವಂತೆ ಅವರು ಕರೆ ನೀಡಿದರು.
ರಕ್ಷಣಾ ಸಹಕಾರ
ಪ್ರಾಯೋಗಿಕ ಮಿಲಿಟರಿ ಸಹಕಾರವನ್ನು ವಿಸ್ತರಿಸುವ ಮಹತ್ವವನ್ನು ನಾಯಕರು ಗುರುತಿಸಿದರು ಮತ್ತು ಸಹಕಾರ ಚಟುವಟಿಕೆಗಳು, ಜಂಟಿ ತರಬೇತಿ ಅವಕಾಶಗಳು ಹಾಗೂ ವೃತ್ತಿಪರ ಮಿಲಿಟರಿ ವಿನಿಮಯಗಳ ಮೂಲಕ ರಕ್ಷಣಾ ಸಂಬಂಧಗಳನ್ನು ಗಾಢವಾಗಿಸುವ ಅವಕಾಶಗಳನ್ನು ಸ್ವಾಗತಿಸಿದರು. ರಕ್ಷಣಾ ಸಾಮಗ್ರಿ ಸಹಕಾರ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ ಮತ್ತು ತರಬೇತಿ ಹಾಗೂ ಅಭ್ಯಾಸಗಳಂತಹ ಕ್ಷೇತ್ರಗಳಲ್ಲಿ ಹೊಸ 'ಕಡಲ ಭದ್ರತಾ ಪಾಲುದಾರಿಕೆ'ಯನ್ನು ನಾಯಕರು ಸ್ವಾಗತಿಸಿದರು.
ರಕ್ಷಣಾ ಸಹಯೋಗಕ್ಕೆ ಹೆಚ್ಚಿನ ಅವಕಾಶಗಳನ್ನು ಗುರುತಿಸುವ ಸಲುವಾಗಿ; ಆಯಾ ರಕ್ಷಣಾ ನೀತಿಗಳು, ಪ್ರಾದೇಶಿಕ ಮತ್ತು ಜಾಗತಿಕ ಭದ್ರತಾ ಬೆಳವಣಿಗೆಗಳು ಹಾಗೂ ಕಾರ್ಯತಂತ್ರದ ದೃಷ್ಟಿಕೋನಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು 'ಭಾರತ-ಕೆನಡಾ ರಕ್ಷಣಾ ಸಂವಾದ'ವನ್ನು ಸಾಂಸ್ಥಿಕಗೊಳಿಸಲು ಉಭಯ ದೇಶಗಳು ಒಪ್ಪಿಕೊಂಡವು.
ಈ ಸಂದರ್ಭದಲ್ಲಿ, ಸಾಂಸ್ಥಿಕ ಕೊಂಡಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ, ಕೆನಡಾವು ಭಾರತಕ್ಕೆ 'ಡಿಫೆನ್ಸ್ ಅಟ್ಯಾಚೆ' ಅನ್ನು ನೇಮಕ ಮಾಡಿರುವುದನ್ನು ಮತ್ತು ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಭಾರತದ 'ಡಿಫೆನ್ಸ್ ಅಟ್ಯಾಚೆ'ಗೆ ಕೆನಡಾದ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಿರುವುದನ್ನು ನಾಯಕರು ಸ್ವಾಗತಿಸಿದರು.
ಬಹುಪಕ್ಷೀಯ ಮತ್ತು ಇಂಡೋ-ಪೆಸಿಫಿಕ್ ಮಾತುಕತೆಗಳು
ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ವೇದಿಕೆಗಳಲ್ಲಿ ಸಹಕಾರವನ್ನು ಗಾಢವಾಗಿಸಲು ಉಭಯ ದೇಶಗಳು ಸಮ್ಮತಿಸಿದವು. ಈ ಮಾತುಕತೆಗಳು ಸಮನ್ವಯವನ್ನು ಬಲಪಡಿಸುತ್ತವೆ ಮತ್ತು ಹೆಚ್ಚು ಸಂಕೀರ್ಣವಾಗುತ್ತಿರುವ ಕಾರ್ಯತಂತ್ರದ ವಾತಾವರಣದಲ್ಲಿ ಆದ್ಯತೆಗಳ ಕುರಿತು ಹಂಚಿಕೆಯ ತಿಳುವಳಿಕೆಯನ್ನು ಉತ್ತೇಜಿಸುತ್ತವೆ.
ಇಂಡೋ-ಪೆಸಿಫಿಕ್ ವಲಯವು ಬೆಳೆಯುತ್ತಿರುವ ಕಾರ್ಯತಂತ್ರದ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಪ್ರತಿನಿಧಿಸುತ್ತದೆ ಎಂದು ಒಪ್ಪಿಕೊಂಡ ನಾಯಕರು, ಮುಕ್ತ ಮತ್ತು ಅಬಾಧಿತ, ಒಳಗೊಳ್ಳುವ ಮತ್ತು ಸ್ಥಿತಿಸ್ಥಾಪಕತ್ವವುಳ್ಳ ಇಂಡೋ-ಪೆಸಿಫಿಕ್ ವಲಯಕ್ಕಾಗಿ ತಮ್ಮ ಸಮಾನ ಬದ್ಧತೆಯನ್ನು ಪುನರುಚ್ಚರಿಸಿದರು. ಸುಸ್ಥಿರ ಅಭಿವೃದ್ಧಿ, ಕಡಲ ಸುರಕ್ಷತೆ ಮತ್ತು ಭದ್ರತೆ, ಹವಾಮಾನ ಸ್ಥಿತಿಸ್ಥಾಪಕತ್ವ, ಸಂಪರ್ಕ ಮತ್ತು ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಾಯೋಗಿಕ ಸಹಕಾರದ ಮೌಲ್ಯವನ್ನು ಅವರು ಒತ್ತಿಹೇಳಿದರು. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ನಿಯಮಾಧಾರಿತ ಅಂತರರಾಷ್ಟ್ರೀಯ ಕ್ರಮವನ್ನು ಮುನ್ನಡೆಸುವ ಜೊತೆಗೆ; ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಒಳಗೊಳ್ಳುವಿಕೆ, ವಿಪತ್ತು ಸನ್ನದ್ಧತೆ ಮತ್ತು ಜನಕೇಂದ್ರಿತ ಬೆಳವಣಿಗೆಯನ್ನು ಬೆಂಬಲಿಸಲು ಪ್ರಾದೇಶಿಕ ಮತ್ತು ಜಾಗತಿಕ ಸಂಸ್ಥೆಗಳ ಮೂಲಕ ಸಮನ್ವಯವನ್ನು ಬಲಪಡಿಸಲು ನಾಯಕರು ಬದ್ಧತೆ ವ್ಯಕ್ತಪಡಿಸಿದರು.
ಹಿಂದೂ ಮಹಾಸಾಗರ ವಲಯದ ಕುರಿತಾದ ಭಾರತದ ದೃಷ್ಟಿಕೋನ ಮತ್ತು ಕೆನಡಾದ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ನಡುವೆ ಬೆಳೆಯುತ್ತಿರುವ ಒಮ್ಮತವನ್ನು ನಾಯಕರು ಗಮನಿಸಿದರು. ಸ್ಥಿರತೆ, ಸುಸ್ಥಿರ ಅಭಿವೃದ್ಧಿ, ಸಂಪರ್ಕ ಮತ್ತು ಒಳಗೊಳ್ಳುವ ಬೆಳವಣಿಗೆಯ ಹಂಚಿಕೆಯ ಹಿತಾಸಕ್ತಿಗಳ ಮೇಲೆ ಇದು ಆಧಾರಿತವಾಗಿದೆ. ಕಡಲ ಆಡಳಿತ, ಹವಾಮಾನ ಸ್ಥಿತಿಸ್ಥಾಪಕತ್ವ, ನೀಲಿ ಆರ್ಥಿಕತೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಕೆನಡಾ ಹೊಂದಿರುವ ಪರಿಣತಿಯನ್ನು ಗುರುತಿಸಿದ ಭಾರತವು, 'ಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್' (IORA) ಅನ್ನು 'ಸಂವಾದ ಪಾಲುದಾರ'ನಾಗಿ ಸೇರಲು ಕೆನಡಾ ವ್ಯಕ್ತಪಡಿಸಿರುವ ಆಸಕ್ತಿಯನ್ನು ಸ್ವಾಗತಿಸಿತು. ವಿಪತ್ತು ಸನ್ನದ್ಧತೆ, ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಒಳಗೊಳ್ಳುವಿಕೆ ಮತ್ತು ಜನಕೇಂದ್ರಿತ ಬೆಳವಣಿಗೆಯನ್ನು ಬೆಂಬಲಿಸುವ ಪ್ರಾಯೋಗಿಕ ಉಪಕ್ರಮಗಳ ಮೂಲಕ ಹಿಂದೂ ಮಹಾಸಾಗರದಲ್ಲಿ ಸಹಕಾರವನ್ನು ಬಲಪಡಿಸಲು ನಾಯಕರು ಸಮ್ಮತಿಸಿದರು.
ಮೂಲಭೂತ ಸ್ತರ - 2: ವ್ಯಾಪಾರ ಪಾಲುದಾರಿಕೆಯನ್ನು ಮುನ್ನಡೆಸುವುದು
ವ್ಯಾಪಾರ ಮತ್ತು ಹೂಡಿಕೆ ಕುರಿತ ಸಚಿವ ಮಟ್ಟದ ಮಾತುಕತೆ
ನವೀಕೃತಗೊಂಡ 'ವ್ಯಾಪಾರ ಮತ್ತು ಹೂಡಿಕೆ ಕುರಿತ ಸಚಿವ ಮಟ್ಟದ ಮಾತುಕತೆ'ಯು ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಿಗೆ ಮರುಚೈತನ್ಯ ನೀಡುವ ಉದ್ದೇಶವನ್ನು ಹೊಂದಿದ್ದು, ಇದು ಒಂದು ಹೊಸ ಹಂತದ ತೊಡಗಿಸಿಕೊಳ್ಳುವಿಕೆಯಾಗಿದೆ ಎಂದು ನಾಯಕರು ಗಮನಿಸಿದರು. ಸಮಾನ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಬೆಳೆಯುತ್ತಿರುವ ಆರ್ಥಿಕ ಪೂರಕತೆಗಳ ಆಧಾರದ ಮೇಲೆ ಸಹಕಾರಕ್ಕಾಗಿ ಭವಿಷ್ಯದ ದೃಷ್ಟಿಕೋನವುಳ್ಳ ಕಾರ್ಯಸೂಚಿಯನ್ನು ರೂಪಿಸುವುದು ಇದರ ಗುರಿಯಾಗಿದೆ.
ಸಿಎಪಿಎ ಮತ್ತು ವ್ಯಾಪಾರ ಚೌಕಟ್ಟು
ಮಹತ್ವಾಕಾಂಕ್ಷೆಯ ಮತ್ತು ಪರಸ್ಪರ ಪ್ರಯೋಜನಕಾರಿ 'ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ' (ಸಿಎಪಿಎ) ಕುರಿತಾದ ಚರ್ಚೆಗಳನ್ನು ಪುನರಾರಂಭಿಸುವ ಮೂಲಕ ದ್ವಿಪಕ್ಷೀಯ ಆರ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವ ತಮ್ಮ ಹಂಚಿಕೆಯ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಇಂತಹ ಸಮಗ್ರ ವ್ಯಾಪಾರ ಚೌಕಟ್ಟು ಪಾಲುದಾರಿಕೆಗೆ ಭದ್ರವಾದ ಆರ್ಥಿಕ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 70 ಬಿಲಿಯನ್ ಕೆನಡಿಯನ್ ಡಾಲರ್ (ಅಂದಾಜು 4.65 ಲಕ್ಷ ಕೋಟಿ ರೂಪಾಯಿ) ಗೆ ವಿಸ್ತರಿಸುವ ಹಂಚಿಕೆಯ ಆಕಾಂಕ್ಷೆಯನ್ನು ಬೆಂಬಲಿಸುತ್ತದೆ ಎಂಬ ವಿಶ್ವಾಸವನ್ನು ನಾಯಕರು ವ್ಯಕ್ತಪಡಿಸಿದರು. ಸಿಎಪಿಎ ಮಾತುಕತೆಗಳ 'ಉಲ್ಲೇಖಿತ ಅಂತಿಮಗೊಳಿಸುವಿಕೆ ಮತ್ತು ಸಹಿ ಮಾಡುವಿಕೆಯನ್ನು ಹಾಗೂ ಅಧಿಕೃತ ಮಾತುಕತೆಗಳ ಪ್ರಾರಂಭವನ್ನು ಅವರು ಸ್ವಾಗತಿಸಿದರು. ಈ ಮಾತುಕತೆಗಳನ್ನು 2026ರ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ತಮ್ಮ ಸಂಕಲ್ಪವನ್ನು ಅವರು ವ್ಯಕ್ತಪಡಿಸಿದರು.
ವಾಣಿಜ್ಯ ವೇಗವರ್ಧನೆ
ಬದಲಾಗುತ್ತಿರುವ ಜಾಗತಿಕ ಆರ್ಥಿಕ ಪರಿಸರವನ್ನು ಗುರುತಿಸಿದ ಉಭಯ ಕಡೆಯವರು; ಪೂರೈಕೆ ಸರಪಳಿಯ ಸ್ಥಿರತೆಯನ್ನು ಹೆಚ್ಚಿಸುವ, ಬಾಹ್ಯ ಸವಾಲುಗಳನ್ನು ತಗ್ಗಿಸುವ, ಪರಸ್ಪರರ ಸೂಕ್ಷ್ಮತೆಗಳನ್ನು ಗೌರವಿಸುವ ಮತ್ತು ಆದ್ಯತೆಯ ಕ್ಷೇತ್ರಗಳಲ್ಲಿ ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಉತ್ತೇಜಿಸುವ ಸ್ಥಿತಿಸ್ಥಾಪಕತ್ವವುಳ್ಳ, ವಿಶ್ವಾಸಾರ್ಹ ಮತ್ತು ನಿರೀಕ್ಷಿತ ವ್ಯಾಪಾರ ಸಂಬಂಧದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನಡಾದ ಕಂಪನಿಗಳು ಮತ್ತು ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಹೊಂದಿರುವುದು ಉಭಯ ದೇಶಗಳ ಆರ್ಥಿಕತೆಯ ಆಳವಾದ ಏಕೀಕರಣವನ್ನು ಪ್ರತಿಬಿಂಬಿಸುತ್ತದೆ. ಇದು ಈಗಾಗಲೇ ಪಾಲುದಾರಿಕೆಯನ್ನು ಗಟ್ಟಿಗೊಳಿಸಿರುವ ಗಮನಾರ್ಹ ದ್ವಿಪಕ್ಷೀಯ ವಾಣಿಜ್ಯ ಅಸ್ತಿತ್ವವನ್ನು ಪ್ರದರ್ಶಿಸುತ್ತದೆ ಎಂದು ಅವರು ಒಪ್ಪಿಕೊಂಡರು.
ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಿಗೆ ಹೆಚ್ಚಿನ ವಾಣಿಜ್ಯ ವೇಗವರ್ಧನೆಗೆ, ನಾಯಕರು ಉದ್ಯಮ ನಿಯೋಗಗಳೊಂದಿಗೆ ಸಚಿವರ ನೇತೃತ್ವದಲ್ಲಿ ನಡೆಯಲಿರುವ ನಾಲ್ಕು ಪರಸ್ಪರ ವ್ಯಾಪಾರ ಮತ್ತು ಹೂಡಿಕೆ ಕಾರ್ಯಕ್ರಮಗಳನ್ನು (ಕೆನಡಾಕ್ಕೆ ಎರಡು ಭೇಟಿಗಳು ಮತ್ತು ಭಾರತಕ್ಕೆ ಎರಡು ಭೇಟಿಗಳು) ಸ್ವಾಗತಿಸಿದರು. ಈ ವಿನಿಮಯಗಳು ಹೊಸ ವಾಣಿಜ್ಯ ಅವಕಾಶಗಳನ್ನು ತೆರೆಯಲು, ಖಾಸಗಿ ವಲಯದ ಪಾಲುದಾರಿಕೆಯನ್ನು ಗಾಢವಾಗಿಸಲು ಮತ್ತು ಉಭಯ ದೇಶಗಳ ಆರ್ಥಿಕತೆಯನ್ನು ಮತ್ತಷ್ಟು ಸಂಯೋಜಿಸಲು ಸಹಾಯ ಮಾಡುತ್ತದೆ ಎಂದು ಅವರು ಗಮನಿಸಿದರು.
ಭಾರತ-ಕೆನಡಾ ಸಿಇಒ ಫೋರಂ
ಖಾಸಗಿ ವಲಯದ ಪಾಲುದಾರಿಕೆಯನ್ನು ಗಾಢವಾಗಿಸಲು ಮತ್ತು ಆದ್ಯತೆಯ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಸಹಕಾರವನ್ನು ಮುನ್ನಡೆಸಲು ಪ್ರಮುಖ ವೇದಿಕೆಯಾಗಿ 'ಭಾರತ-ಕೆನಡಾ ಸಿಇಒ ಫೋರಂ'ನ ಪುನರ್ರಚನೆಯನ್ನು ನಾಯಕರು ಸ್ವಾಗತಿಸಿದರು. ವ್ಯಾಪಾರ, ಹೂಡಿಕೆ, ನಾವೀನ್ಯತೆ ಮತ್ತು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವದಲ್ಲಿ ಹೊಸ ಅವಕಾಶಗಳನ್ನು ಗುರುತಿಸಲು ಮತ್ತು ಸಿಎಪಿಎ ಮಾತುಕತೆಗಳು ಹಾಗೂ ವಿಶಾಲವಾದ ಆರ್ಥಿಕ ಗುರಿಗಳನ್ನು ಬೆಂಬಲಿಸಲು ಕ್ರಿಯಾತ್ಮಕ ಶಿಫಾರಸುಗಳನ್ನು ನೀಡಲು ಉಭಯ ದೇಶಗಳ ಉದ್ಯಮ ನಾಯಕರಿಗೆ ಅವರು ಕರೆ ನೀಡಿದರು. ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಉಭಯ ದೇಶಗಳ ಉದ್ಯಮಗಳು ಹಾಗೂ ನಾಗರಿಕರಿಗೆ ಸ್ಪಷ್ಟ ಪ್ರಯೋಜನಗಳನ್ನು ನೀಡಲು ಕೈಗಾರಿಕೆ, ಸರ್ಕಾರ ಮತ್ತು ಹಣಕಾಸು ಸಂಸ್ಥೆಗಳ ನಡುವಿನ ಬಲವಾದ ಸಹಯೋಗ ಅತ್ಯಗತ್ಯ ಎಂದು ನಾಯಕರು ಸಮ್ಮತಿಸಿದರು.
ಹಣಕಾಸು ಸಚಿವರ ಆರ್ಥಿಕ ಮಾತುಕತೆ
ಪಾವತಿ ವ್ಯವಸ್ಥೆಗಳ ಆಧುನೀಕರಣ, ಹಣಕಾಸು ಸ್ಥಿರತೆ, ಫಿನ್-ಟೆಕ್ ನಾವೀನ್ಯತೆ ಮತ್ತು ಬಂಡವಾಳ ಮಾರುಕಟ್ಟೆಗಳ ಅಭಿವೃದ್ಧಿಯಂತಹ ವಿಷಯಗಳ ಕುರಿತು ಹಣಕಾಸು ಅಧಿಕಾರಿಗಳನ್ನು ಒಗ್ಗೂಡಿಸುವ 'ಹಣಕಾಸು ಸಚಿವರ ಆರ್ಥಿಕ ಮತ್ತು ಹಣಕಾಸು ಮಾತುಕತೆʼಯ ಪ್ರಾರಂಭವನ್ನು ನಾಯಕರು ಸ್ವಾಗತಿಸಿದರು. ಆರಂಭಿಕ ಆದ್ಯತೆಯಾಗಿ, ಇದು ತತ್ಕ್ಷಣದ ಪಾವತಿಗಳ ಭವಿಷ್ಯದ ಕುರಿತು ಸಹಯೋಗವನ್ನು ಒಳಗೊಂಡಿರುತ್ತದೆ ಮತ್ತು ಗಡಿಯಾಚೆಗಿನ ಹಣ ರವಾನೆ ಹಾಗೂ ವ್ಯಾಪಾರಿ ಪಾವತಿಗಳ ಅವಕಾಶಗಳನ್ನು ಅನ್ವೇಷಿಸುತ್ತದೆ. ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವ ಜೊತೆಗೆ ಪ್ರವಾಸೋದ್ಯಮ, ಶಿಕ್ಷಣ, ಹಣ ರವಾನೆ ಮತ್ತು ಉಭಯ ದೇಶಗಳ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಬೆಳವಣಿಗೆಯನ್ನು ಬೆಂಬಲಿಸುವ ಉದ್ದೇಶದಿಂದ, ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಮತ್ತು ಪೇಮೆಂಟ್ಸ್ ಕೆನಡಾ ಸಂಸ್ಥೆಗಳನ್ನು ಈ ಮಾತುಕತೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗುವುದು. ಉದ್ಘಾಟನಾ 'ಹಣಕಾಸು ಸಚಿವರ ಆರ್ಥಿಕ ಮಾತುಕತೆ'ಯು 2026 ರಲ್ಲಿ ಉಭಯ ರಾಷ್ಟ್ರಗಳು ಸಮ್ಮತಿಸುವ ಸಮಯದಲ್ಲಿ ನಡೆಯಲಿದೆ ಎಂದು ಅವರು ಗಮನಿಸಿದರು.
ಉಪಸಂಹಾರ
ಭಾರತ ಸರ್ಕಾರ ಮತ್ತು ಭಾರತದ ಜನರು ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಕಾರ್ನಿಯವರು ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು ಮತ್ತು ಈ ಸಮಗ್ರ ಪಾಲುದಾರಿಕೆಯನ್ನು ಮುನ್ನಡೆಸಲು ಕೆನಡಾದ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದರು.
ನಿರಂತರ ಉನ್ನತ ಮಟ್ಟದ ತೊಡಗಿಸಿಕೊಳ್ಳುವಿಕೆಯನ್ನು ಉಭಯ ನಾಯಕರು ಸ್ವಾಗತಿಸಿದರು ಮತ್ತು ಈ ಜಂಟಿ ಪ್ರಕಟಣೆಯಲ್ಲಿ ವಿವರಿಸಲಾದ ಉಪಕ್ರಮಗಳು ಭಾರತ-ಕೆನಡಾ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸುತ್ತವೆ, ಪರಸ್ಪರ ವಿಶ್ವಾಸವನ್ನು ಬಲಪಡಿಸುತ್ತವೆ ಮತ್ತು ಉಭಯ ದೇಶಗಳಿಗೆ ಹಾಗೂ ಅಲ್ಲಿನ ಜನರಿಗೆ ಸ್ಪಷ್ಟವಾದ, ದೀರ್ಘಕಾಲೀನ ಪ್ರಯೋಜನಗಳನ್ನು ನೀಡುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಲಿಷ್ಠ ಭಾರತ-ಕೆನಡಾ ಪಾಲುದಾರಿಕೆಯು ಪ್ರಾದೇಶಿಕ ಸ್ಥಿರತೆ, ಜಾಗತಿಕ ಸ್ಥಿತಿಸ್ಥಾಪಕತ್ವ ಮತ್ತು ಪರಸ್ಪರ ಸಮೃದ್ಧಿಗೆ ಧನಾತ್ಮಕವಾಗಿ ಕೊಡುಗೆ ನೀಡಲಿದೆ ಎಂದು ಅವರು ದೃಢಪಡಿಸಿದರು. ಇದು ಹೆಚ್ಚು ಸಮಗ್ರ, ಸುಸ್ಥಿರ ಮತ್ತು ಸುರಕ್ಷಿತ ಭವಿಷ್ಯವನ್ನು ನಿರ್ಮಿಸುವ ಉಭಯ ದೇಶಗಳ ಸಾಮಾನ್ಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
*****
(ಪ್ರಕಟಣೆ ಐ.ಡಿ.: 2234767)
ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam