ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿ ಅವರ ಉತ್ತರ

ಪ್ರಕಟಣಾ ದಿನಾಂಕ: 05 FEB 2026 9:19PM by PIB Bengaluru

ಸನ್ಮಾನ್ಯ ಸಭಾಪತಿಗಳೆ,

ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ(ಕೃತಜ್ಞತೆ) ಸಲ್ಲಿಸಲು ನಾನು ಇಂದು ಇಲ್ಲಿ ನಿಂತಿದ್ದೇನೆ.

ಸನ್ಮಾನ್ಯ ಸಭಾಪತಿಗಳೆ,

ವಂದನಾ ನಿರ್ಣಯಕ್ಕೆ ಬೆಂಬಲವಾಗಿ ಸದನದ ಮುಂದೆ ನನ್ನ ಭಾವನೆಗಳನ್ನು ಮಂಡಿಸುವುದು ನನ್ನ ಸೌಭಾಗ್ಯವೇ ಸರಿ.

ಸನ್ಮಾನ್ಯ ಸಭಾಪತಿಗಳೆ,

ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುವ ಪ್ರಯಾಣದಲ್ಲಿ ಕಳೆದ ವರ್ಷವು ತ್ವರಿತ ಪ್ರಗತಿ ಮತ್ತು ಬೆಳವಣಿಗೆ ಕಂಡ ವರ್ಷವಾಗಿದೆ. ಜೀವನದ ಪ್ರತಿಯೊಂದು ಕ್ಷೇತ್ರ, ಸಮಾಜದ ಪ್ರತಿಯೊಂದು ವಿಭಾಗವು ಪರಿವರ್ತನಾ ಹಂತಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರವು ಸರಿಯಾದ ದಿಕ್ಕಿನಲ್ಲಿ, ಹೆಚ್ಚಿನ ವೇಗದಲ್ಲಿ ಮುನ್ನಡೆಯುತ್ತಿದೆ. ಗೌರವಾನ್ವಿತ ರಾಷ್ಟ್ರಪತಿಗಳು ಇದನ್ನು ಹೆಚ್ಚಿನ ಸಂವೇದನೆ ಮತ್ತು ಸ್ಪಷ್ಟತೆಯೊಂದಿಗೆ ನಮ್ಮ ಮುಂದೆ ಪ್ರಸ್ತುತಪಡಿಸಿದ್ದಾರೆ.

ಸನ್ಮಾನ್ಯ ಸಭಾಪತಿಗಳೆ,

ನನ್ನದೊಂದು ವಿನಮ್ರ ಮನವಿ ಇದೆ. ಗೌರವಾನ್ವಿತ ಖರ್ಗೆ ಜಿ ಅವರ ವಯಸ್ಸು ಪರಿಗಣಿಸಿ, ಅವರು ಅಸ್ವಸ್ಥತೆ ಅನುಭವಿಸದಂತೆ ಕುಳಿತುಕೊಂಡೇ ಘೋಷಣೆ(ಮಾತು)ಗಳನ್ನು ಮಾಡುವುದು ಉತ್ತಮ. ಅವರ ಹಿಂದೆ ಅನೇಕ ಯುವ ಸದಸ್ಯರು ಇದ್ದಾರೆ, ಆದ್ದರಿಂದ ದಯವಿಟ್ಟು ಖರ್ಗೆ ಜಿ ಅವರು ಕುಳಿತುಕೊಂಡೇ  ಮಾತುಗಳನ್ನು ಆಡಲು ಅನುಮತಿ ನೀಡಿ.

ಸನ್ಮಾನ್ಯ ಸಭಾಪತಿಗಳೆ,

ರಾಷ್ಟ್ರಪತಿ ಅವರು ದೇಶದ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗ, ಬಡವರು, ಹಳ್ಳಿಗಳು, ರೈತರು, ಮಹಿಳೆಯರು, ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿಯ ಬಗ್ಗೆ ವಿವರವಾಗಿ ಮಾತನಾಡಿದರು. ಅವರ ಮಾತುಗಳು ಸಂಸತ್ತಿನಾದ್ಯಂತ ಭಾರತದ ಪ್ರಗತಿಯನ್ನು ಪ್ರತಿಧ್ವನಿಸಿದವು. ಯುವಕರು ಭಾರತದ ಶಕ್ತಿಯನ್ನು ಹೇಗೆ ಮುನ್ನಡೆಸುತ್ತಿದ್ದಾರೆ ಎಂಬುದನ್ನು ಅವರು ವಿವರಿಸಿದರು. ಸಮಾಜದ ಪ್ರತಿಯೊಂದು ವರ್ಗದ ಸಾಮರ್ಥ್ಯಗಳನ್ನು ಅವರು ಉಲ್ಲೇಖಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದ ಉಜ್ವಲ ಭವಿಷ್ಯದಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದು ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

ಸನ್ಮಾನ್ಯ ಸಭಾಪತಿಗಳೆ,

21ನೇ ಶತಮಾನದ ಮೊದಲ ತ್ರೈಮಾಸಿಕ(25 ವರ್ಷಗಳು) ಮುಕ್ತಾಯಗೊಂಡಿದೆ. ಕಳೆದ ಶತಮಾನದ 2ನೇ ತ್ರೈಮಾಸಿಕವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನಿರ್ಣಾಯಕ ಎಂಬುದು ಸಾಬೀತಾದಂತೆಯೇ, ಈ 2ನೇ ತ್ರೈಮಾಸಿಕವು ಅಷ್ಟೇ ಶಕ್ತಿಶಾಲಿಯಾಗಿರುತ್ತದೆ, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವತ್ತ ವೇಗವಾಗಿ ಮುನ್ನಡೆಸುತ್ತದೆ ಎಂದು ನಾನು ಸ್ಪಷ್ಟವಾಗಿ ನೋಡುತ್ತೇನೆ.

ಆದ್ದರಿಂದ, ಸನ್ಮಾನ್ಯ ಸಭಾಪತಿಗಳೆ,

ಪ್ರತಿಯೊಬ್ಬ ನಾಗರಿಕನು ನಾವು ನಿರ್ಣಾಯಕ ಮೈಲಿಗಲ್ಲು ತಲುಪಿದ್ದೇವೆ ಎಂದು ಭಾವಿಸುತ್ತಿದ್ದಾನೆ. ನಾವು ನಿಲ್ಲಬಾರದು ಅಥವಾ ಹಿಂತಿರುಗಿ ನೋಡಬಾರದು. ನಮ್ಮ ಗುರಿಗಳನ್ನು ಸಾಧಿಸಿದ ನಂತರವೇ ನಾವು ಮುಂದೆ ನೋಡಬೇಕು, ವೇಗವಾಗಿ ಚಲಿಸಬೇಕು ಮತ್ತು ಉಸಿರಾಡಬೇಕು. ಇದು ನಾವು ಮುಂದುವರಿಯುತ್ತಿರುವ ದಿಕ್ಕಾಗಿದೆ.

ಸನ್ಮಾನ್ಯ ಸಭಾಪತಿಗಳೆ,

ಪ್ರಸ್ತುತ, ಭಾರತವು ಏಕಕಾಲದಲ್ಲಿ ಹಲವಾರು ಅನುಕೂಲಕರ ಸಂದರ್ಭಗಳಿಂದ ಆಶೀರ್ವದಿಸಲ್ಪಟ್ಟಿದೆ. ಇದು ನಿಜಕ್ಕೂ ಅಪರೂಪದ ಮತ್ತು ಅದೃಷ್ಟದ ಸಂಗಮವಾಗಿದೆ. ಪ್ರಮುಖ ಅಂಶವೆಂದರೆ, ವಿಶ್ವದ ಶ್ರೀಮಂತ ರಾಷ್ಟ್ರಗಳಿಗೆ ವಯಸ್ಸಾಗುತ್ತಿದೆ, ಅವರ ಜನಸಂಖ್ಯೆಯು ಹಿರಿಯ ಹಂತಗಳನ್ನು ತಲುಪುತ್ತಿದೆ, ನಮ್ಮ ದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ಏರುತ್ತಿದೆ.  ಅದೇ ಸಮಯದಲ್ಲಿ ಚಿರ ಯೌವ್ವನವಾಗುತ್ತಿದೆ. ಭಾರತವು ಯುವ ಸಮುದಾಯದಿಂದ ಕೂಡಿದ ರಾಷ್ಟ್ರವಾಗಿದೆ, ಇದು ನಮಗೆಲ್ಲಾ ಒಂದು ದೊಡ್ಡ ಪ್ರಯೋಜನವಾಗಿದೆ.

ಸನ್ಮಾನ್ಯ ಸಭಾಪತಿಗಳೆ,

ಮತ್ತೊಂದೆಡೆ, ಭಾರತದ ಕಡೆಗೆ ಹೆಚ್ಚುತ್ತಿರುವ ಜಾಗತಿಕ ಆಕರ್ಷಣೆ ಮತ್ತು ಭಾರತದ ಪ್ರತಿಭೆಯ ಗುರುತಿಸುವುದನ್ನು ನಾನು ನೋಡುತ್ತೇನೆ. ಇಂದು ನಾವು ವಿಶ್ವದ ಅತ್ಯಂತ ಮಹತ್ವದ ಪ್ರತಿಭಾ ಕೂಟಗಳಲ್ಲಿ ಒಂದಾಗಿದ್ದೇವೆ - ಯುವ, ಮಹತ್ವಾಕಾಂಕ್ಷೆ, ದೃಢ ನಿಶ್ಚಯ ಮತ್ತು ಸಮರ್ಥವಾಗಿದ್ದೇವೆ. ಇದು ಮತ್ತೊಂದು ಆಶೀರ್ವಾದ, ನಮಗೆ ನೀಡಲಾದ ನಿಜವಾದ ಶಕ್ತಿಯಾಗಿದೆ.

ಸನ್ಮಾನ್ಯ ಸಭಾಪತಿಗಳೆ,

ಭಾರತವು ಇಂದು ಭರವಸೆಯ ದೀಪವಾಗಿ ಬೆಳಗುತ್ತಿದೆ, ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ನೀಡುತ್ತಿದೆ. ಮತ್ತೊಂದು ಅನುಕೂಲಕರ ಸನ್ನಿವೇಶವೆಂದರೆ, ಪ್ರಮುಖ ಆರ್ಥಿಕತೆಗಳಲ್ಲಿ, ಭಾರತದ ಬೆಳವಣಿಗೆ ಹೆಚ್ಚಿದ್ದು, ಕಡಿಮೆ ಹಣದುಬ್ಬರವೂ ಇದೆ. ಈ ವಿಶಿಷ್ಟ ಸಂಯೋಜನೆಯು ನಮ್ಮ ಆರ್ಥಿಕತೆಯ ಶಕ್ತಿ ಪ್ರದರ್ಶಿಸುತ್ತದೆ.

ಸನ್ಮಾನ್ಯ ಸಭಾಪತಿಗಳೆ,

ದೇಶದ ಜನರು ನಮಗೆ ಸೇವೆ ಸಲ್ಲಿಸುವ ಅವಕಾಶ ನೀಡಿದಾಗ, ಭಾರತವನ್ನು "ದುರ್ಬಲ 5" ದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಸ್ವಾತಂತ್ರ್ಯ ಸಮಯದಲ್ಲಿ, ನಾವು ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೆವು, ಆದರೆ ಹಿಂದಿನ ನಾಯಕತ್ವದಲ್ಲಿ, ನಾವು 11ನೇ ಸ್ಥಾನಕ್ಕೆ ಕುಸಿದಿದ್ದೆವು. ಇಂದು ನಾವು 3ನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಯುತ್ತಿದ್ದೇವೆ.

ಸನ್ಮಾನ್ಯ ಸಭಾಪತಿಗಳೆ,

ವಿಜ್ಞಾನ, ಬಾಹ್ಯಾಕಾಶ, ಕ್ರೀಡೆ ಯಾವುದೇ ವಲಯವನ್ನು ನೋಡಿ - ಭಾರತ ಇಂದು ಆತ್ಮವಿಶ್ವಾಸ ಮತ್ತು ಚೈತನ್ಯದಿಂದ ಬೀಗುತ್ತಿದೆ. ಕೋವಿಡ್ ನಂತರ ಜಗತ್ತು ಹೊಸ ಸವಾಲುಗಳನ್ನು ನಿಭಾಯಿಸಲು ಹೆಣಗಾಡಿತು ಮತ್ತು ಜಗತ್ತು ಹೊಸ ಜಾಗತಿಕ ಕ್ರಮದತ್ತ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಎರಡನೆಯ ಮಹಾಯುದ್ಧದ ನಂತರ, ಒಂದು ವಿಶ್ವ ಕ್ರಮ ಸ್ಥಾಪಿಸಲಾಯಿತು; ಈಗ, ಹೊಸ ಕ್ರಮವು ವೇಗವಾಗಿ ಹೊರಹೊಮ್ಮುತ್ತಿದೆ. ಈ ಬೆಳವಣಿಗೆಗಳ ನಿಷ್ಪಕ್ಷಪಾತ ವಿಶ್ಲೇಷಣೆಯು ಭಾರತದ ಕಡೆಗೆ ಸ್ಪಷ್ಟವಾದ ಒಲವನ್ನು ತೋರಿಸುತ್ತದೆ ಎಂಬುದು ಅತ್ಯಂತ ಸಂತೋಷಕರ ಅಂಶವಾಗಿದೆ. ವಿಶ್ವಾಸಾರ್ಹ ಪಾಲುದಾರ ಮತ್ತು ಸ್ನೇಹಿತನಾಗಿ, ಭಾರತವು ಅನೇಕ ರಾಷ್ಟ್ರಗಳಿಗೆ ವಿಶ್ವಾಸಾರ್ಹ ಮಿತ್ರ ರಾಷ್ಟ್ರವಾಗಿದೆ. ನಾವು ಜಗತ್ತಿನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ, ನಮ್ಮ ಶಕ್ತಿಯಿಂದ ಜಾಗತಿಕ ಕಲ್ಯಾಣಕ್ಕೆ ಕೊಡುಗೆ ನೀಡುತ್ತಿದ್ದೇವೆ.

ಸನ್ಮಾನ್ಯ ಸಭಾಪತಿಗಳೆ,

ಇಂದು ಇಡೀ ಜಗತ್ತು ಜಾಗತಿಕ ದಕ್ಷಿಣದ ಬಗ್ಗೆ ಮಾತನಾಡುತ್ತಿದೆ, ಭಾರತವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅದರ ಪ್ರತಿಧ್ವನಿಸುವ ಧ್ವನಿಯಾಗಿದೆ. ಭಾರತವು ಅನೇಕ ರಾಷ್ಟ್ರಗಳೊಂದಿಗೆ "ಭವಿಷ್ಯಕ್ಕೆ ಸಿದ್ಧವಾದ ವ್ಯಾಪಾರ ಒಪ್ಪಂದಗಳನ್ನು" ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ, ನಾವು ಐರೋಪ್ಯ ಒಕ್ಕೂಟದೊಂದಿಗೆ "ಎಲ್ಲಾ ಒಪ್ಪಂದಗಳ ತಾಯಿ" ಸೇರಿದಂತೆ 27 ರಾಷ್ಟ್ರಗಳನ್ನು ಏಕಕಾಲದಲ್ಲಿ ಒಳಗೊಂಡ ಪ್ರಮುಖ ದೇಶಗಳೊಂದಿಗೆ 9 ಪ್ರಮುಖ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ.  ವೇದಿಕೆಯಿಂದ ಬೇಸತ್ತು ಹೊರಬಂದವರು ಒಂದು ದಿನ ಯಾವುದೇ ದೇಶವು ನಮ್ಮೊಂದಿಗೆ ವ್ಯವಹರಿಸಲು ಸಿದ್ಧರಿಲ್ಲದ ಸ್ಥಿತಿಯಲ್ಲಿ ದೇಶವನ್ನು ಏಕೆ ತೊರೆದರು ಎಂದು ಉತ್ತರಿಸಬೇಕಾಗುತ್ತದೆ. ಬಹುಶಃ ಅವರು ಪ್ರಯತ್ನಿಸಿದರು, ಅಂತ್ಯವಿಲ್ಲದ ಮಾತುಕತೆ ಸುತ್ತುಗಳನ್ನು ಮಾಡಿದರು, ಆದರೆ ಯಾರೂ ತಮ್ಮ ದಾರಿಯನ್ನು ನೋಡಲಿಲ್ಲ. ಅಂತಹ ಪರಿಸ್ಥಿತಿ ಹೇಗೆ ಉದ್ಭವಿಸಿತು? ಇಂದು ದೇಶಗಳು ಆಕಸ್ಮಿಕವಾಗಿ ಭಾರತದೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿಲ್ಲ - ಅವರು ಭಾರತದ ಶಕ್ತಿ ಮತ್ತು ನಿಲುವಿನಿಂದಾಗಿ ಹಾಗೆ ಮಾಡುತ್ತಿದ್ದಾರೆ.

ಸನ್ಮಾನ್ಯ ಸಭಾಪತಿಗಳೆ,

ಇಲ್ಲಿ ಪ್ರಮುಖ ಅಂಶವೆಂದರೆ ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರದೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಾಗ, ಅದು ಜಾಗತಿಕ ಆರ್ಥಿಕ ಸಮುದಾಯಕ್ಕೆ ಪ್ರಬಲ ಸಂದೇಶ ಕಳುಹಿಸುತ್ತದೆ. ಇದು ನನಗೆ ಹೊಸದಲ್ಲ. ಗುಜರಾತ್ ‌ನಲ್ಲಿ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಾಗ, ನಾನು ವೈಬ್ರೆಂಟ್ ಗುಜರಾತ್ ಶೃಂಗಸಭೆ ಆಯೋಜಿಸಿದೆ, ಭಾರತದ ಒಂದು ರಾಜ್ಯವು ಅಭಿವೃದ್ಧಿ ಹೊಂದಿದ ದೇಶವಾದ ಜಪಾನ್ ಅನ್ನು ತನ್ನ ಪಾಲುದಾರ ರಾಷ್ಟ್ರವಾಗಿ ಹೊಂದಿದೆ ಎಂಬುದು ನನಗೆ ಹೆಮ್ಮೆ ತಂದಿತು. ಒಂದು ರಾಜ್ಯವು ಅಂದು ಸಾಮರ್ಥ್ಯ ಪ್ರದರ್ಶಿಸಿತು, ಮತ್ತು ಇಂದು ನನ್ನ ದೇಶವು ಅದನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುತ್ತಿದೆ. ನೀವು ಆರ್ಥಿಕ ಶಕ್ತಿ ಹೊಂದಿರುವಾಗ, ನಿಮ್ಮ ನಾಗರಿಕರು ಚೈತನ್ಯಶೀಲರಾದಾಗ ಮತ್ತು ಉತ್ಪಾದನೆಗೆ ಬಲವಾದ ಪರಿಸರ ವ್ಯವಸ್ಥೆ ಹೊಂದಿರುವಾಗ ಮಾತ್ರ ಇದು ಸಂಭವಿಸುತ್ತದೆ. ಆಗ ಜಗತ್ತು ನಿಮ್ಮನ್ನು ನಿಭಾಯಿಸಲು ಮುಂದೆ ಬರುತ್ತದೆ. ಮತ-ಬ್ಯಾಂಕ್ ರಾಜಕೀಯದಲ್ಲಿ ಮುಳುಗಿರುವವರು ರಾಷ್ಟ್ರದ ಅಂತಹ ಅಂಶಗಳನ್ನು ಬಲಪಡಿಸಲು ಎಂದಿಗೂ ಆದ್ಯತೆ ನೀಡಲಿಲ್ಲ, ಅದರ ಫಲಿತಾಂಶವು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದಂತೆ, ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ. ನೀವು ನನ್ನ ಮಾತುಗಳನ್ನು ನಂಬದಿದ್ದರೆ, ಈ ದೇಶದ ಜನರು ಕೆಂಪುಕೋಟೆಯಿಂದ ಕಾಂಗ್ರೆಸ್ ಪ್ರಧಾನ ಮಂತ್ರಿ ಮಾಡಿದ ಭಾಷಣಗಳನ್ನು ಸರಳವಾಗಿ ವಿಶ್ಲೇಷಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಅವರಿಗೆ ಯಾವುದೇ ದೃಷ್ಟಿಕೋನ, ಆಲೋಚನೆಗಳು ಮತ್ತು ಇಚ್ಛಾಶಕ್ತಿ ಇರಲಿಲ್ಲ ಎಂಬುದನ್ನು ನೀವು ಸ್ಪಷ್ಟವಾಗಿ ನೋಡುತ್ತೀರಿ,  ಅದರಿಂದ ರಾಷ್ಟ್ರವು ಬಹಳಷ್ಟು ನರಳಿತು.

ಸನ್ಮಾನ್ಯ ಸಭಾಪತಿಗಳೆ,

ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ದೇಶದ ನಾಗರಿಕರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂದು ನಮ್ಮ ಶಕ್ತಿಯ ಬಹುಪಾಲನ್ನು ಅವರ ತಪ್ಪುಗಳನ್ನು ಸರಿಪಡಿಸಲು ಖರ್ಚು ಮಾಡಲಾಗುತ್ತಿದೆ. ಜಗತ್ತು ತಮ್ಮ ಕಾಲದಿಂದ ಹೊತ್ತುಕೊಂಡಿದ್ದ ಭಾರತದ ಚಿತ್ರಣವನ್ನು ಅಳಿಸಿಹಾಕಲು ಪ್ರಯತ್ನ ಮಾಡುವ ಅಗತ್ಯವಿದೆ. ಅವರು ರಾಷ್ಟ್ರವನ್ನು ಹಾಳುಗೆಡವಿದರು. ಇದನ್ನು ಸರಿಪಡಿಸಲು, ನಾವು ಭವಿಷ್ಯಕ್ಕೆ ಸಿದ್ಧವಾದ ನೀತಿಗಳಿಗೆ ಒತ್ತು ನೀಡಿದ್ದೇವೆ. ಇಂದು ದೇಶವು ನೀತಿಗಳಿಂದ ನಿಯಂತ್ರಿಸಲ್ಪಡುತ್ತದೆ, ತಾತ್ಕಾಲಿಕ ನಿರ್ಧಾರಗಳಿಂದಲ್ಲ ಎಂಬುದನ್ನು ನೀವು ನೋಡಬಹುದು, ಇದು ಜಾಗತಿಕ ವಿಶ್ವಾಸವನ್ನು ನಿರ್ಮಿಸಿದೆ. ನಾವು ಸುಧಾರಣೆ, ಕಾರ್ಯಕ್ಷಮತೆ, ಪರಿವರ್ತನೆ ಎಂಬ ಮಂತ್ರದೊಂದಿಗೆ ಮುನ್ನಡೆದಿದ್ದೇವೆ. ಇಂದು ರಾಷ್ಟ್ರವು ಸುಧಾರಣಾ ಎಕ್ಸ್ ‌ಪ್ರೆಸ್ ‌ನಲ್ಲಿ ಸವಾರಿ ಮಾಡುತ್ತಿದೆ. ನಾವು ರಚನಾತ್ಮಕ ಸುಧಾರಣೆಗಳು, ಪ್ರಕ್ರಿಯೆ-ಸಂಬಂಧಿತ ಸುಧಾರಣೆಗಳು ಮತ್ತು ನೀತಿ ಸುಧಾರಣೆಗಳನ್ನು ಜಾರಿಗೆ ತಂದಿದ್ದೇವೆ. ಭಾರತ ಉತ್ಪಾದಿಸುವ ಎಲ್ಲದರಲ್ಲೂ ಮೌಲ್ಯವರ್ಧನೆ ಖಚಿತಪಡಿಸಿಕೊಳ್ಳುವ ಮೂಲಕ ನಮ್ಮ ಉತ್ಪಾದನಾ ವಲಯ ಮತ್ತು ಉದ್ಯಮಿಗಳನ್ನು ಸಬಲೀಕರಣಗೊಳಿಸಲು ನಾವು ಕೆಲಸ ಮಾಡಿದ್ದೇವೆ. ಭಾರತವು ಪ್ರಪಂಚದೊಂದಿಗೆ ಸ್ಪರ್ಧಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ನಾನು ಇಂದು ವಿಶ್ವಾಸದಿಂದ ಹೇಳಬಲ್ಲೆ. ನಾನು ಜಾಗತಿಕ ಸಿಇಒ ವೇದಿಕೆಗಳಲ್ಲಿ ಭಾಗವಹಿಸಿದಾಗ, ಜಗತ್ತು ಈಗ ನಮ್ಮ ಉದ್ಯಮಿಗಳನ್ನು ಸಮಾನವಾಗಿ ನೋಡುತ್ತದೆ ಎಂದು ನಾನು ನೋಡುತ್ತೇನೆ. ಇತ್ತೀಚೆಗೆ, ಎಲ್ಲಾ ಪಕ್ಷಗಳ ನಿಯೋಗಗಳು ವಿದೇಶಗಳಿಗೆ ಭೇಟಿ ನೀಡಿವೆ, ಅವು ಹಿಂದಿರುಗಿದ ನಂತರ, ಗೌರವಾನ್ವಿತ ಸದಸ್ಯರು ಭಾರತವನ್ನು ಸಮಾನವಾಗಿ ಪರಿಗಣಿಸಲಾಗುತ್ತಿದೆ ಎಂದು ಹೆಮ್ಮೆಯಿಂದ ನನಗೆ ಹೇಳಿದರು. ಇದು ಸ್ವತಃ ಒಂದು ಸಾಧನೆಯಾಗಿದೆ.

ಸನ್ಮಾನ್ಯ ಸಭಾಪತಿಗಳೆ,

ವಿಶಾಲವಾದ ಎಂಎಸ್ಎಂಇ ಜಾಲವು ಆರ್ಥಿಕತೆಗೆ ದೀರ್ಘಕಾಲೀನ ಶಕ್ತಿಯಾಗಿದೆ. ನಾವು ವಲಯವನ್ನು ಒತ್ತಿ ಹೇಳಿದ್ದೇವೆ, ಅನೇಕ ಸುಧಾರಣೆಗಳನ್ನು ಪರಿಚಯಿಸಿದ್ದೇವೆ. ಇಂದು ನಮ್ಮ ಎಂಎಸ್ಎಂಇಗಳ ಮೇಲಿನ ವಿಶ್ವದ ನಂಬಿಕೆ ಬೆಳೆಯುತ್ತಿದೆ. ನಾವು ಸಂಪೂರ್ಣ ವಿಮಾನಗಳನ್ನು ತಯಾರಿಸದಿರಬಹುದು, ಆದರೆ ವಿಮಾನಗಳಲ್ಲಿರುವ ಹಲವು ಘಟಕಗಳನ್ನು ಭಾರತದ ಚಿಕ್ಕ ಎಂಎಸ್ಎಂಇಗಳು ಉತ್ಪಾದಿಸುತ್ತವೆ.

ಸನ್ಮಾನ್ಯ ಸಭಾಪತಿಗಳೆ,

ಪ್ರಯತ್ನಗಳ ಫಲಿತಾಂಶಗಳು ಎಲ್ಲರಿಗೂ ಗೋಚರಿಸುತ್ತಿವೆ. ಪ್ರಮುಖ ರಾಷ್ಟ್ರಗಳು ಭಾರತದೊಂದಿಗೆ ವ್ಯಾಪಾರ ಸಂಬಂಧ ಸ್ಥಾಪಿಸಲು ಉತ್ಸುಕವಾಗಿವೆ. ಅದು ಐರೋಪ್ಯ ಒಕ್ಕೂಟದೊಂದಿಗಿನ ವ್ಯಾಪಾರ ಒಪ್ಪಂದವಾಗಿರಲಿ ಅಥವಾ ನಮ್ಮ ಸಹೋದ್ಯೋಗಿ ಪಿಯೂಷ್ ಜಿ ಸದನದಲ್ಲಿ ವಿವರವಾದ ಮಾಹಿತಿ ಒದಗಿಸಿದ ಅಮೆರಿಕದೊಂದಿಗಿನ ಇತ್ತೀಚಿನ ಒಪ್ಪಂದವಾಗಿರಲಿ - ಇಡೀ ಜಗತ್ತು ಒಪ್ಪಂದಗಳನ್ನು ಬಹಿರಂಗವಾಗಿ ಹೊಗಳುತ್ತಿದೆ. ಐರೋಪ್ಯ ಒಕ್ಕೂಟ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದಾಗ, ಜಾಗತಿಕ ಸ್ಥಿರತೆ ಹೆಚ್ಚುತ್ತಿದೆ ಎಂದು ಜಗತ್ತು ವಿಶ್ವಾಸ ಗಳಿಸಿತು. ಅಮೆರಿಕ ವ್ಯಾಪಾರ ಒಪ್ಪಂದದ ನಂತರ, ಜಗತ್ತು ಸ್ಥಿರತೆಯ ಜತೆಗೆ ಆವೇಗವನ್ನೂ ಅನುಭವಿಸಿತು. ಇದು ಜಗತ್ತಿಗೆ ಸಕಾರಾತ್ಮಕ ಸಂಕೇತವಾಗಿದೆ.

ಸನ್ಮಾನ್ಯ ಸಭಾಪತಿಗಳೆ,

ಇದರ ಅತ್ಯಂತ ದೊಡ್ಡ ಫಲಾನುಭವಿಗಳು ನಮ್ಮ ದೇಶದ ಯುವಕರಾಗಿರುತ್ತಾರೆ. ನಾನು ಯುವಕರು ಎಂದು ಹೇಳುವಾಗ, ನಾನು ಅವರನ್ನು ತುಂಡುಗಳಾಗಿ ನೋಡಬಾರದು. ಭಾರತದ ಯುವಕರ ಶಕ್ತಿಯ ಬಗ್ಗೆ ನಾವು ಹೆಮ್ಮೆ ಪಡಬೇಕು. ಜಾಗತಿಕ ಮಾರುಕಟ್ಟೆ ಈಗ ಅವರಿಗೆ ಮುಕ್ತವಾಗಿದೆ, ಅಂತ್ಯವಿಲ್ಲದ ಅವಕಾಶಗಳನ್ನು ನೀಡುತ್ತದೆ. ನಾನು ಅವರಿಗೆ ಹೇಳುತ್ತೇನೆ: ಮುಂದೆ ಬನ್ನಿ, ನನ್ನ ಸ್ನೇಹಿತರೆ! ನಾನು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇನೆ. ಧೈರ್ಯವಾಗಿರಿ, ಮುಂದುವರಿಯಿರಿ! ರಾಷ್ಟ್ರವು ನಿಮ್ಮೊಂದಿಗೆ ನಿಂತಿದೆ, ಜಗತ್ತು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿದೆ.

ಸನ್ಮಾನ್ಯ ಸಭಾಪತಿಗಳೆ,

ನಮ್ಮ ಯುವ ವೃತ್ತಿಪರರಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚುತ್ತಿದೆ - ಆರೈಕೆದಾರರಿಗೂ ಸಹ. ನಾನು ಹೋದಲ್ಲೆಲ್ಲಾ ಜನರು ಅಂತಹ ಪ್ರತಿಭೆ ಬೇಕು ಎಂದು ಹೇಳುತ್ತಾರೆ. ಕೆಲವರು ಅರ್ಹ ವೃತ್ತಿಪರರನ್ನು ನೇಮಿಸಿಕೊಳ್ಳಲು ಮತ್ತು ಹುಡುಕಲು ಇಲ್ಲಿ ವಿಶೇಷ ಕಚೇರಿಗಳನ್ನು ಸ್ಥಾಪಿಸುತ್ತಿದ್ದಾರೆ. ಇದರರ್ಥ ಭಾರತದ ವೃತ್ತಿಪರರಿಗೆ ಜಾಗತಿಕವಾಗಿ ಅಗಾಧ ಅವಕಾಶಗಳು ತೆರೆದುಕೊಳ್ಳುತ್ತಿವೆ.

ಸನ್ಮಾನ್ಯ ಸಭಾಪತಿಗಳೆ,

ಸಂಸತ್ತಿನ ಮೇಲ್ಮನೆ ರಾಜ್ಯಗಳನ್ನು ಪ್ರತಿನಿಧಿಸುತ್ತದೆ. ಇಲ್ಲಿನ ಚರ್ಚೆಗಳ ವಿವರಗಳನ್ನು ಗಮನಿಸಿದಾಗ, ಚರ್ಚೆಗಳ ಮಟ್ಟವು ಹೆಚ್ಚಿರಬೇಕಿತ್ತು ಎಂದು ನನಗೆ ಅನಿಸುತ್ತದೆ. ವಿಶೇಷವಾಗಿ ಹಲವು ವರ್ಷಗಳ ಕಾಲ ಆಡಳಿತ ನಡೆಸಿದವರಿಂದ, ಚರ್ಚೆಯ ಗುಣಮಟ್ಟ ಹೆಚ್ಚಿಸಬೇಕಿತ್ತು. ಆದರೆ ಅವರು ಅವಕಾಶವನ್ನು ಹಾಳು ಮಾಡಿದರು. ರಾಷ್ಟ್ರವು ಅವರನ್ನು ಹೇಗೆ ನಂಬಬಹುದು?

ಸನ್ಮಾನ್ಯ ಸಭಾಪತಿಗಳೆ,

ನಿನ್ನೆ, ತಮ್ಮನ್ನು ತಾವು ರಾಜ ಎಂದು ಹೆಮ್ಮೆಯಿಂದ ಕರೆದುಕೊಳ್ಳುವ ಗೌರವಾನ್ವಿತ ಸದಸ್ಯರನ್ನು ನಾನು ಕೇಳಿದೆ. ಆದರೂ ಅವರು ಆರ್ಥಿಕ ಅಸಮಾನತೆಯ ಬಗ್ಗೆ ಮಾತನಾಡುತ್ತಿದ್ದರು. ಊಹಿಸಿ! ತನ್ನನ್ನು ರಾಜ ಎಂದು ಕರೆದುಕೊಳ್ಳುವವನು ಅಸಮಾನತೆಯ ಬಗ್ಗೆ ಮಾತನಾಡುತ್ತಿದ್ದಾನೆ - ಇದು ನಾವು ನೋಡಬೇಕಾದದ್ದೇ ಎಂದು ಒಬ್ಬರು ಆಶ್ಚರ್ಯ ಪಡಬಹುದು.

ಸನ್ಮಾನ್ಯ ಸಭಾಪತಿ ಸರ್,

ಟಿಎಂಸಿಯ ನಮ್ಮ ಸಹೋದ್ಯೋಗಿಗಳು ದೀರ್ಘವಾಗಿ ಮಾತನಾಡಿದರು. ಆದರೆ ಅವರು ಒಳನೋಟವನ್ನು ಹೊಂದಿರಬೇಕು. ಅವರ ಸರ್ಕಾರ ನಿರ್ದಯಿ, ಅವನತಿಯ ಪ್ರತಿಯೊಂದು ನಿಯತಾಂಕದಲ್ಲೂ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ, ಆದರೂ ಅವರು ನಮಗೆ ಉಪನ್ಯಾಸ ನೀಡಲು ಇಲ್ಲಿಗೆ ಬರುತ್ತಾರೆ. ಅಂತಹ ಸರ್ಕಾರದಲ್ಲಿ ಜನರ ಭವಿಷ್ಯ ಕತ್ತಲೆಯಲ್ಲಿ ಮುಳುಗುತ್ತಿದೆ, ಆದರೆ ಅವರು ಅದನ್ನು ಲೆಕ್ಕಿಸುವುದಿಲ್ಲ. ಅವರ ಏಕೈಕ ಆಕಾಂಕ್ಷೆ ಅಧಿಕಾರದ ಆನಂದ, ಮತ್ತು ಅವರು ಇಲ್ಲಿಗೆ ಬೋಧಿಸಲು ಬರುತ್ತಾರೆ. ಶ್ರೀಮಂತ ರಾಷ್ಟ್ರಗಳು ಸಹ ಅಕ್ರಮ ವಲಸಿಗರನ್ನು ಹೊರಹಾಕುತ್ತವೆ, ಆದರೆ ನಮ್ಮ ದೇಶದಲ್ಲಿ, ನ್ಯಾಯಾಂಗದ ಮೇಲೂ ಸಹ ಒಳನುಸುಳುವವರನ್ನು ರಕ್ಷಿಸಲು ಒತ್ತಡ ಹೇರಲಾಗುತ್ತದೆ. ತಮ್ಮ ಹಕ್ಕುಗಳನ್ನು, ಅವರ ಜೀವನೋಪಾಯವನ್ನು, ಬುಡಕಟ್ಟು ಜನಾಂಗದವರ ಭೂಮಿಯನ್ನು ಕಸಿದುಕೊಳ್ಳುವ, ಪುತ್ರರು ಮತ್ತು ಪುತ್ರಿಯರ ಜೀವಕ್ಕೆ ಬೆದರಿಕೆ ಹಾಕುವ ಒಳನುಸುಳುಕೋರರ ರಕ್ಷಿಸುವವರನ್ನು ಭಾರತದ ಯುವಕರು ಹೇಗೆ ಕ್ಷಮಿಸುತ್ತಾರೆ? ಮಹಿಳೆಯರು ದೌರ್ಜನ್ಯಗಳನ್ನು ಅನುಭವಿಸುತ್ತಲೇ ಇದ್ದಾರೆ, ಆದರೂ ಅವರು ಅಸಡ್ಡೆ ತೋರುತ್ತಾರೆ. ಅವರು ಅಧಿಕಾರ ರಾಜಕೀಯವನ್ನು ಮೀರಿ ಏನನ್ನೂ ಮಾಡುವುದಿಲ್ಲ, ನಂತರ ನಮಗೆ ಉಪನ್ಯಾಸ ನೀಡಲು ಇಲ್ಲಿಗೆ ಬರುತ್ತಾರೆ. ಅಂತಹ ಗಂಭೀರ ವಿಷಯಗಳ ಬಗ್ಗೆ, ಅವರು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆ. ಮತ್ತೊಬ್ಬ ಗೌರವಾನ್ವಿತ ಸದಸ್ಯರು ದೀರ್ಘವಾಗಿ ಮಾತನಾಡಿದರು, ಆದರೂ ಅವರ ಇಡೀ ಸರ್ಕಾರ ಮಧ್ಯದಲ್ಲೇ ಮುಳುಗುತ್ತಿದೆ, ಅವರ ಗಾಜಿನ ಅರಮನೆಗಳು ಪ್ರತಿ ಮನೆಯಲ್ಲಿ ದ್ವೇಷದ ಸಂಕೇತಗಳಾಗಿವೆ. ಬಹುಶಃ ಅದಕ್ಕಾಗಿಯೇ ಅವರು "ಕಪ್ಪು" ಪದವನ್ನು ಬಯಸುತ್ತಾರೆ. ಪ್ರತಿಯೊಬ್ಬರಿಗೂ ಭೂತಕಾಲವಿದೆ - ಅವರಿಗೆ "ಕಪ್ಪು" ಜೊತೆ ಯಾವ ಹಳೆಯ ಸಂಬಂಧವಿದೆ ಎಂಬುದು ಅವರಿಗೇ ತಿಳಿದಿದೆ.

ಸನ್ಮಾನ್ಯ ಸಭಾಪತಿಗಳೆ,

ಅಂತಹ ಎಲ್ಲಾ ಸಹೋದ್ಯೋಗಿಗಳಿಗೆ ನಾನು ಇಂದು ಹೇಳುತ್ತೇನೆ. ನೀವು ಎಷ್ಟು ಕಾಲ ಜಗತ್ತಿಗೆ ಮೋಸ ಮಾಡುತ್ತೀರಿ? ಎಷ್ಟು ಕಾಲ ನೀವು ಜಗತ್ತಿಗೆ ಮೋಸ ಮಾಡುತ್ತೀರಿ? ನೀವು ಕನ್ನಡಿಯಲ್ಲಿ ನೋಡಿದಾಗ, ನಿಮ್ಮ ಸತ್ಯವನ್ನು ಎಲ್ಲಿ ಮರೆ ಮಾಚುತ್ತೀರಿ? ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎಡಪಂಥೀಯರು - ಅವರೆಲ್ಲರೂ ದಶಕಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ, ಆಡಳಿತ ಹಂಚಿಕೊಂಡಿದ್ದಾರೆ. ಅವರಿಗೆ ರಾಜ್ಯಗಳಲ್ಲಿ ಆಡಳಿತ ನಡೆಸಲು ಅವಕಾಶಗಳಿವೆ. ಆದರೆ ಇಂದು ಅವರ ಗುರುತು ಏನು? ಮಹತ್ವದ ಒಪ್ಪಂದಗಳ ಬಗ್ಗೆ ಚರ್ಚಿಸಿದಾಗ, ನಾವು ಹೆಮ್ಮೆಯಿಂದ ಮಾತನಾಡುತ್ತೇವೆ. ಆದರೆ ಅವರ ಕಾಲದ ಒಪ್ಪಂದಗಳ ಬಗ್ಗೆ ಚರ್ಚಿಸಿದಾಗ, ನೆನಪಿಗೆ ಬಂದದ್ದು ಬೋಫೋರ್ಸ್ ಒಪ್ಪಂದ. ಅವು ಅವರ ಡೀಲ್ ‌ಗಳಾಗಿದ್ದವು. ಅವರು ತಮ್ಮ ಜೇಬುಗಳನ್ನು ಮಾತ್ರ ತುಂಬಿಸಿಕೊಂಡರು. ನಾಗರಿಕರ ಜೀವನವನ್ನು ಸುಧಾರಿಸುವುದು ಎಂದಿಗೂ ಅವರ ಆದ್ಯತೆಯಾಗಿರಲಿಲ್ಲ.

ಸನ್ಮಾನ್ಯ ಸಭಾಪತಿಗಳೆ,

ನಾನು ಉದಾಹರಣೆಗಳನ್ನು ನೀಡಲೇಬೇಕು, ಏಕೆಂದರೆ ವಿಷಯಗಳು ಚರ್ಚೆಯಲ್ಲಿ ಬಂದಿವೆ. ಆರ್ಥಿಕತೆಯ ಬೆನ್ನೆಲುಬಾಗಿರುವ ಬ್ಯಾಂಕಿಂಗ್ ವಲಯವನ್ನು ನಾನು ಉಲ್ಲೇಖಿಸುತ್ತೇನೆ. 2014ಕ್ಕಿಂತ ಮೊದಲು, ಅದು "ಫೋನ್ ಬ್ಯಾಂಕಿಂಗ್" ಯುಗವಾಗಿತ್ತು. ನಾಯಕರು ಕರೆಗಳನ್ನು ಮಾಡುತ್ತಿದ್ದರು, ಆ ಆಧಾರದ ಮೇಲೆ, ಕೋಟ್ಯಂತರ ರೂಪಾಯಿ ಹಸ್ತಾಂತರಿಸಲಾಗುತ್ತಿತ್ತು, ಆದರೆ ಬಡವರನ್ನು ಬ್ಯಾಂಕುಗಳಲ್ಲಿ ತಿರಸ್ಕಾರದಿಂದ ನಡೆಸಿಕೊಳ್ಳಲಾಗುತ್ತಿತ್ತು. ಜನಸಂಖ್ಯೆಯ 50%ಗಿಂತ ಹೆಚ್ಚಿನ ಜನರು ಬ್ಯಾಂಕಿನ ಬಾಗಿಲುಗಳನ್ನು ನೋಡಿರಲಿಲ್ಲ. ಕಾಂಗ್ರೆಸ್ ನಾಯಕರ ಫೋನ್ ಕರೆಗಳಲ್ಲಿ, ಕೋಟ್ಯಂತರ ಹಣ ದಾನ ಮಾಡಲಾಯಿತು, ಆ ಹಣವನ್ನು ಪಡೆದವರು ಅದನ್ನು ತಮ್ಮ ವೈಯಕ್ತಿಕ ಆಸ್ತಿಯಂತೆ ಪರಿಗಣಿಸಿದರು. ಇದು ಕಾಂಗ್ರೆಸ್ ಮತ್ತು ಯುಪಿಎ ಆಳ್ವಿಕೆಯ ಆಟವಾಗಿತ್ತು. ಇಂದು ಭಾರತದ ಮೈತ್ರಿ ರಾಜ್ಯಗಳೆಂದು ಕರೆಯಲ್ಪಡುವ ರಾಜ್ಯಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗಳು ಕುಸಿತದ ಅಂಚಿನಲ್ಲಿದ್ದವು. ನಾನು ಮೊದಲು ಪ್ರಧಾನಿಯಾದಾಗ, ನಾನು ಇನ್ನೊಂದು ರಾಷ್ಟ್ರದ ಮುಖ್ಯಸ್ಥರೊಂದಿಗೆ ಮಾತನಾಡಿದೆ. ನಾವು ಬ್ಯಾಂಕಿಂಗ್ ‌ನಲ್ಲಿ ಮುನ್ನಡೆಯಬೇಕು ಎಂದು ನಾನು ಹೇಳಿದೆ. ಅವರು ಉತ್ತರಿಸಿದರು, "ಸರ್, ನೀವು ಹೊಸಬರು - ನೀವು ಪ್ರಗತಿಯ ಬಗ್ಗೆ ಯೋಚಿಸುವ ಮೊದಲು ನಿಮ್ಮ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮೊದಲು ಅಧ್ಯಯನ ಮಾಡಿ. ನಾವು ಅದನ್ನು ಹೇಗೆ ನಂಬಬಹುದು?" ಆ ನಾಯಕನಿಗೆ ವಾಸ್ತವ ತಿಳಿದಿತ್ತು. ಆದರೆ ಇಲ್ಲಿ ಅವರು ಅದನ್ನು ಲೆಕ್ಕಿಸಲಿಲ್ಲ. ಎನ್ ‌ಪಿ ಎಗಳು ಪರ್ವತಗಳಂತೆ ರಾಶಿ ಬಿದ್ದಿದ್ದವು. ಎಲ್ಲೆಡೆ, ಚರ್ಚೆ: ಎನ್ ‌ಪಿ ಎಗಳಿಗೆ ಏನಾಗುತ್ತದೆ? ನಾವು ಹೇಗೆ ಬದುಕುಳಿಯುತ್ತೇವೆ?

ಸನ್ಮಾನ್ಯ ಸಭಾಪತಿಗಳೆ,

ಸವಾಲು ಅಗಾಧವಾಗಿತ್ತು, ಆದರೆ ನಾವು ಬುದ್ಧಿವಂತಿಕೆಯಿಂದ ವರ್ತಿಸಿದೆವು. ನಾವು ಬ್ಯಾಂಕಿಂಗ್ ವ್ಯವಸ್ಥೆಯ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡೆವು. ಸುಧಾರಣೆಗಳು ಬೇಕಾಗಿದ್ದವು, ನಾವು ಅವುಗಳನ್ನು ಧೈರ್ಯದಿಂದ ನಿರ್ವಹಿಸಿದೆವು. ನಾವು ಪಾರದರ್ಶಕ ವ್ಯವಸ್ಥೆ ರಚಿಸಿದ್ದೇವೆ, ಹಲವಾರು ಬ್ಯಾಂಕಿಂಗ್ ಸುಧಾರಣೆಗಳನ್ನು ಪರಿಚಯಿಸಿದ್ದೇವೆ ಮತ್ತು ದುರ್ಬಲ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಬಲವಾದವುಗಳೊಂದಿಗೆ ವಿಲೀನಗೊಳಿಸಿದ್ದೇವೆ. ತಮ್ಮನ್ನು ತಾವು ಬಹಳ ವಿದ್ಯಾವಂತರೆಂದು ಪರಿಗಣಿಸುತ್ತಿದ್ದ ಒಬ್ಬ ಸಂಭಾವಿತ ವ್ಯಕ್ತಿ ಒಮ್ಮೆ ಬರೆದದ್ದು ನನಗೆ ನೆನಪಿದೆ: "ಮೋದಿ ಸರ್ಕಾರವು ಬ್ಯಾಂಕುಗಳನ್ನು ಸುಧಾರಿಸಲು ಸಾಧ್ಯವಾದರೆ, ಅದು ಭಾರತದ ಶ್ರೇಷ್ಠ ಸುಧಾರಣೆಗಳಲ್ಲಿ ಒಂದಾಗಿರುತ್ತದೆ." ನಾನು ಅಧಿಕಾರ ವಹಿಸಿಕೊಂಡ ತಕ್ಷಣ ಕಾರ್ಯವನ್ನು ಸಾಧಿಸಿದೆ.

ಸನ್ಮಾನ್ಯ ಸಭಾಪತಿಗಳೆ,

ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ನಮ್ಮ ಬ್ಯಾಂಕುಗಳಲ್ಲಿ ಬೇರೂರಿದ್ದ ರೋಗಗಳನ್ನು ನಿರ್ಮೂಲನೆ ಮಾಡಲಾಗಿದೆ. ಬ್ಯಾಂಕುಗಳ ಆರೋಗ್ಯವು ಸ್ಥಿರವಾಗಿ ಸುಧಾರಿಸಿದೆ, ಬಲಗೊಳ್ಳುತ್ತಲೇ ಇದೆ, ಅವು ಈಗ ಮುಂದೆ ಸಾಗುತ್ತಿವೆ. ಬ್ಯಾಂಕಿಂಗ್ ಆರೋಗ್ಯ ಸುಧಾರಿಸಿದಂತೆ, ವಹಿವಾಟುಗಳು ಹೆಚ್ಚಾದವು, ಸಾಮಾನ್ಯ ನಾಗರಿಕರು ಸಾಲ ಪಡೆಯಲು ಪ್ರಾರಂಭಿಸಿದರು. ಒಂದು ಕಾಲದಲ್ಲಿ ಬ್ಯಾಂಕುಗಳ ಬಾಗಿಲುಗಳು ಮುಚ್ಚಲ್ಪಟ್ಟಿದ್ದ ಬಡವರಿಗೂ ಸಾಲಗಳನ್ನು ವಿಸ್ತರಿಸಲಾಯಿತು. ಇಂದು ಮುದ್ರಾ ಯೋಜನೆಯು ದೇಶದ ಯುವಕರನ್ನು ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡುತ್ತದೆ. ಇದು ಸ್ವ-ಉದ್ಯೋಗಕ್ಕೆ ಸ್ಫೂರ್ತಿ ನೀಡುತ್ತದೆ, ಆದರೆ ಸ್ವ-ಉದ್ಯೋಗವನ್ನು ಭಾಷಣಗಳ ಮೂಲಕ ಮಾತ್ರ ಸಾಧಿಸಲಾಗುವುದಿಲ್ಲ. ಇದಕ್ಕೆ ಬೆಂಬಲ, ಮಾರ್ಗದರ್ಶನ ಮತ್ತು ಸಹಾಯದ ಅಗತ್ಯವಿದೆ. ಮುದ್ರಾ ಮೂಲಕ ನಾವು 30 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲಗಳನ್ನು ಮೇಲಾಧಾರವಿಲ್ಲದೆ ನೇರವಾಗಿ ನಮ್ಮ ಯುವಕರ ಕೈಗೆ ವಿತರಿಸಿದ್ದೇವೆ. ಅವರು ತಮ್ಮ ಉದ್ಯಮಗಳನ್ನು ವಿಸ್ತರಿಸಿದ್ದಾರೆ, ಹೆಚ್ಚಿನ ಸಂಖ್ಯೆಯ ಮಹಿಳೆಯರು ಸಹ ಫಲಾನುಭವಿಗಳಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಮಹಿಳಾ ಸ್ವ-ಸಹಾಯ ಗುಂಪುಗಳು, ದೊಡ್ಡ ಕನಸುಗಳನ್ನು ಹೊಂದಿರುವ ಗ್ರಾಮೀಣ ಮಹಿಳೆಯರು, ಸ್ವತಂತ್ರವಾಗಿ ನಿಲ್ಲಲು ಬಯಸುವವರನ್ನು ಬಲಪಡಿಸಲಾಗಿದೆ. ನಾವು ಸ್ವಸಹಾಯ ಗುಂಪುಗಳ ವ್ಯಾಪ್ತಿಯನ್ನು ವಿಸ್ತರಿಸಿದ್ದೇವೆ, 10 ಕೋಟಿ ಮಹಿಳೆಯರಿಗೆ ನೇರ ಆರ್ಥಿಕ ನೆರವು ನೀಡಿದ್ದೇವೆ. ನಮ್ಮ ಎಂಎಸ್ಎಂಇ ವಲಯವು ಹೇರಳವಾದ ಸಾಲಗಳನ್ನು ಪಡೆದುಕೊಂಡಿದೆ. ಇಂದು ಬಹಳ ತೃಪ್ತಿ ಮತ್ತು ಜವಾಬ್ದಾರಿಯೊಂದಿಗೆ, 2014ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಅನುತ್ಪಾದಕ ಆಸ್ತಿಗಳ ಪ್ರಮಾಣವನ್ನು ಶೇಕಡ 1ಕ್ಕಿಂತ ಕಡಿಮೆ ಮಾಡಲಾಗಿದೆ ಎಂದು ನಾನು ಗೌರವಾನ್ವಿತ ಸದನದಲ್ಲಿ ಘೋಷಿಸುತ್ತೇನೆ. ಇದು ಬ್ಯಾಂಕಿಂಗ್ ಆರೋಗ್ಯಕ್ಕೆ ಗಮನಾರ್ಹ ಸಾಧನೆಯಾಗಿದೆ. ಅಷ್ಟೇ ಅಲ್ಲ, ನಮ್ಮ ಬ್ಯಾಂಕುಗಳು ಈಗ ಐತಿಹಾಸಿಕ ಲಾಭ ದಾಖಲಿಸುತ್ತಿವೆ. ಬಲವಾದ ಬ್ಯಾಂಕಿಂಗ್ ವ್ಯವಸ್ಥೆಯು ಇಡೀ ಆರ್ಥಿಕತೆಯನ್ನು ಬಲಪಡಿಸುತ್ತದೆ, ನಾವು ಕಾರ್ಯವನ್ನು ಸಾಧಿಸಿದ್ದೇವೆ.

ಸನ್ಮಾನ್ಯ ಸಭಾಪತಿಗಳೆ,

ನಾನು ಇನ್ನೊಂದು ಉದಾಹರಣೆ ನೀಡುತ್ತೇನೆ. ನಮ್ಮ ಸಾರ್ವಜನಿಕ ರಂಗದ ಘಟಕಗಳನ್ನು(ಪಿಎಸ್ ಯು) ಒಂದು ಕಾಲದಲ್ಲಿ ವ್ಯಾಪಕವಾಗಿ ವಿಫಲಗೊಳ್ಳುವ, ಕುಸಿಯುವ, ಮುಚ್ಚುವ ಉದ್ದೇಶಿತ ಘಟಕಗಳಾಗಿ ಗ್ರಹಿಸಲಾಗಿತ್ತು. ನಾವು ಮನಸ್ಥಿತಿಯನ್ನು ಸತ್ಯಗಳೊಂದಿಗೆ ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಜನರು ಪಿಎಸ್ ಯುಗಳ ಬಗ್ಗೆ ಸುಳ್ಳುಗಳನ್ನು ಹರಡಿದರು, ನಗರ ನಕ್ಸಲರಂತೆ ಕಾರ್ಮಿಕರನ್ನು ತಮ್ಮ ದ್ವಾರಗಳ ಹೊರಗೆ ಪ್ರಚೋದಿಸಿದರು, ಅವರನ್ನು ದಾರಿ ತಪ್ಪಿಸಿದರು. ಅವರು ಎಲ್ಐಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್ಎಲ್ ನಂತಹ ಸಂಸ್ಥೆಗಳನ್ನು ಅಸಭ್ಯ ರೀತಿಯಲ್ಲಿ ದೂಷಿಸಿದರು. ಅವರು ಅಧಿಕಾರದಲ್ಲಿದ್ದಾಗ, ಅವರು ಅವುಗಳನ್ನು ನಿರ್ವಹಿಸಲು ಅಥವಾ ಸುಧಾರಿಸಲು ಸಾಧ್ಯವಾಗಲಿಲ್ಲ.

ಸನ್ಮಾನ್ಯ ಸಭಾಪತಿಗಳೆ,

ನಾವು ಇಲ್ಲಿಯೂ ಧೈರ್ಯ ತೋರಿಸಿದ್ದೇವೆ. ನಾವು ಪಿಎಸ್ ‌ಯುಗಳಲ್ಲಿ ಸುಧಾರಣೆಗಳನ್ನು ಪರಿಚಯಿಸಿದ್ದೇವೆ, ನಿರಂತರ ಸುಧಾರಣೆಯ ಸಂಪ್ರದಾಯವನ್ನು ಸ್ಥಾಪಿಸಿದ್ದೇವೆ. ಇಂದು, ಎಲ್‌ಐಸಿ ತನ್ನ ಆರಂಭದಿಂದಲೂ ಅತ್ಯುತ್ತಮ ಕಾರ್ಯಕ್ಷಮತೆ ತೋರಿಸಿದೆ. ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ಮುಚ್ಚುವಿಕೆಯ ಅಂಚಿಗೆ ತಳ್ಳಿದ ಪಿಎಸ್ ‌ಯುಗಳು ಈಗ ಐತಿಹಾಸಿಕ ಲಾಭ ದಾಖಲಿಸುತ್ತಿವೆ. ಅವರು ಮೇಕ್ ಇನ್ ಇಂಡಿಯಾ ಚಾಲನೆ ಮಾಡುತ್ತಿದ್ದಾರೆ, ಆ ಕನಸನ್ನು ನನಸಾಗಿಸುವಲ್ಲಿ ವೇಗವರ್ಧಕ ಏಜೆಂಟ್ ‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ದಾಖಲೆ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದಾರೆ. ನಮ್ಮ ಕೆಲವು ಪಿಎಸ್ ‌ಯುಗಳು ಈಗ ಜಾಗತಿಕವಾಗಿ ವಿಸ್ತರಿಸುತ್ತಿವೆ, ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತಿವೆ, ಅನೇಕ ರಾಷ್ಟ್ರಗಳ ಅಭಿವೃದ್ಧಿ ಪ್ರಯಾಣಗಳಲ್ಲಿ ಪಾಲುದಾರಿಕೆ ಹೊಂದುತ್ತಿವೆ. ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಪ್ರಮುಖ ಆದೇಶಗಳನ್ನು ಪಡೆದುಕೊಂಡಿವೆ. ಇದು ಭಾರತವು ನಿರ್ಣಾಯಕ ಮೈಲಿಗಲ್ಲನ್ನು ತಲುಪಿದೆ ಎಂಬುದನ್ನು ತೋರಿಸುತ್ತದೆ, ಇದು 25 ವರ್ಷಗಳ ಮುಂದಿನ ಪರಿವರ್ತನೆಯ ಸಂಕೇತವಾಗಿದೆ.

ಸನ್ಮಾನ್ಯ ಸಭಾಪತಿಗಳೆ,

ಕಾಂಗ್ರೆಸ್ ತನ್ನ ದ್ರೋಹದಲ್ಲಿ, ಈ ದೇಶದ ರೈತರನ್ನು ಸಹ ಬಿಡಲಿಲ್ಲ. ಎರಡು ಹೆಕ್ಟೇರ್ ‌ಗಿಂತ ಕಡಿಮೆ ಭೂಮಿ ಹೊಂದಿರುವ 10 ಕೋಟಿ ರೈತರಿದ್ದಾರೆ, ಅವರೆಲ್ಲರೂ ಸಣ್ಣ ರೈತರು. ಅವರಿಗೆ ಎಂದಿಗೂ ಕಾಳಜಿ ವಹಿಸಲಿಲ್ಲ, ಎಂದಿಗೂ ಪರಿಗಣಿಸಲಿಲ್ಲ. ಕಾಂಗ್ರೆಸ್ ಎಂದಿಗೂ ಅವರ ಮಹತ್ವವನ್ನು ಗುರುತಿಸಲಿಲ್ಲ, ವ್ಯವಸ್ಥೆ ಮುನ್ನಡೆಸಲು ಕೆಲವು ದೊಡ್ಡ ರೈತರನ್ನು ನಿರ್ವಹಿಸುವುದು ಸಾಕು ಎಂಬುದು ಅವರ ನಂಬೆಕಿಯಾಗಿತ್ತು. ಅದು ಅವರ ರಾಜಕೀಯವಾಗಿತ್ತು.

ಸನ್ಮಾನ್ಯ ಸಭಾಪತಿಗಳೆ,

ಸಣ್ಣ ರೈತರ ನೋವನ್ನು ನಾವು ಅನುಭವಿಸಿದ್ದೇವೆ. ನಮಗೆ ವಾಸ್ತವಗಳ ಪರಿಚಯವಿತ್ತು, ಅದಕ್ಕಾಗಿಯೇ ನಾವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪರಿಚಯಿಸಿದ್ದೇವೆ. ಕಡಿಮೆ ಸಮಯದಲ್ಲಿ, ನಾವು 4 ಲಕ್ಷ ಕೋಟಿ ರೂ.ಗಳನ್ನು ಸಣ್ಣ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದ್ದೇವೆ. ಗೌರವಾನ್ವಿತ ಸಭಾಪತಿಗಳೆ, 4 ಲಕ್ಷ ಕೋಟಿ ರೂ. ಸಣ್ಣ ಮೊತ್ತವಲ್ಲ. ಇದು ನಮ್ಮ ಸಣ್ಣ ರೈತರಿಗೆ ಹೊಸ ಶಕ್ತಿ, ಹೊಸ ಕನಸುಗಳು ಮತ್ತು ಹೊಸ ಸಾಮರ್ಥ್ಯಗಳನ್ನು ನೀಡಿದೆ. ನಮ್ಮ ರೈತರು ರಾಷ್ಟ್ರದ ಭರವಸೆಗಳು ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ.

ಸನ್ಮಾನ್ಯ ಸಭಾಪತಿಗಳೆ,

ಕೆಲವು ಸಹೋದ್ಯೋಗಿಗಳು ಅನುಷ್ಠಾನ ಸಮಸ್ಯೆಗಳ ಬಗ್ಗೆ ದೀರ್ಘವಾಗಿ ಮಾತನಾಡಿದ್ದಾರೆ. ಬಹುಶಃ ಅವರು ಅಂತಹ ವಿಷಯಗಳನ್ನು ಹೇಳಲು ಸಿದ್ಧರಾಗಿ ಬಂದಿರಬಹುದು, ಅವರ ಮೈತ್ರಿ ಇದರಲ್ಲಿ ಗೋಚರಿಸಿರಬಹುದು, ಆದರೆ ಅದು ಬೇರೆಡೆ ಅಲ್ಲ.

ಸನ್ಮಾನ್ಯ ಸಭಾಪತಿಗಳೆ,

ಅವರು ಅನುಷ್ಠಾನದ ಬಗ್ಗೆ ಜೋರಾಗಿ ಮಾತನಾಡುತ್ತಾರೆ. ನಾನು ಒಂದು ಉಪಾಖ್ಯಾನ ಹಂಚಿಕೊಳ್ಳುತ್ತೇನೆ - ಯಾರನ್ನೂ ಟೀಕಿಸಲು ಅಲ್ಲ, ಆದರೆ ಸತ್ಯಗಳನ್ನು ಪ್ರಸ್ತುತಪಡಿಸಲು. ಸತ್ಯಗಳು ಕೆಲವರಿಗೆ ತೊಂದರೆ ನೀಡಬಹುದು, ಆದರೆ ಸತ್ಯಗಳು ಸತ್ಯಗಳಾಗಿಯೇ ಉಳಿದಿವೆ. ನಮ್ಮ ದೇಶದ ಒಬ್ಬ ನಾಯಕಿ ಒಮ್ಮೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದರು. ಹಿಂದಿರುಗಿದ ನಂತರ, ಅವರು ಸ್ವತಃ ಘಟನೆಯನ್ನು ವಿವರಿಸಿದರು, ಅದು ದಾಖಲೆಯಲ್ಲಿದೆ. ಅವರು ಹೇಳಿದರು: “ಬಹಳ ಸಮಯದಿಂದ, ನಾನು ಯೋಜನಾ ಆಯೋಗದೊಂದಿಗೆ ಹೋರಾಡುತ್ತಿದ್ದೆ, ಏಕೆಂದರೆ ಅವರು ಬೆಟ್ಟದ ಪ್ರದೇಶಗಳಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಲು ಇಷ್ಟಪಡುತ್ತಿರಲಿಲ್ಲ. ನಾನು ಹಿಮಾಚಲ ಪ್ರದೇಶಕ್ಕೆ ಹೋಗಿ ಬಂದಾಗ, ನಮ್ಮ ಕಾರ್ಮಿಕರಿಗೆ ಜೀಪ್ ‌ಗಳ ಅಗತ್ಯವಿಲ್ಲ, ಅವರಿಗೆ ಸರಕು ಅಥವಾ ಹೊರೆ ಸಾಗಿಸಲು ಹೇಸರಗತ್ತೆಗಳು ಬೇಕಿವೆ ಎಂದು ನಾನು ಯೋಜನಾ ಆಯೋಗಕ್ಕೆ ಹೇಳಿದೆ.” “ಆದರೆ ನನಗೆ ಹೇಳಿದ್ದೇನೆಂದರೆ, ‘ನಾವು ಜೀಪ್ ‌ಗಳಿಗೆ ಮಾತ್ರ ಹಣ ಒದಗಿಸುತ್ತೇವೆ, ಏಕೆಂದರೆ ಹೇಸರಗತ್ತೆಗಳಿಗೆ ಯಾವುದೇ ನೀತಿ ಇಲ್ಲ.’” ಅದೇ ಭಾಷಣದಲ್ಲಿ, ಅವರು ಹೀಗೆ ಹೇಳಿದರು: “ಅಲ್ಲಿ ರಸ್ತೆಗಳಿರಲಿಲ್ಲ.” ಅವರು ಭೇಟಿ ನೀಡಿದ ಹಿಮಾಚಲದಲ್ಲಿ ರಸ್ತೆಗಳಿಲ್ಲ ಎಂಬುದು ಅವರ ಉದ್ದೇಶವಾಗಿತ್ತು. ರಸ್ತೆಗಳಿಲ್ಲದೆ, ಜೀಪ್ ‌ಗಳ ಬಳಕೆ ಹೇಗೆ? ರಸ್ತೆಗಳಿಲ್ಲದಿರುವಲ್ಲಿ ಜೀಪ್ ಓಡಿಸುವವರು ಯಾರು? ಆದರೂ ಯೋಜನಾ ಆಯೋಗವು ಒತ್ತಾಯಿಸಿದ್ದೇನೆಂದರೆ: ಜೀಪ್ ‌ಗಳು ಅಥವಾ ಏನೂ ಬೇಕಿಲ್ಲ ಎಂಬುದು

ಸನ್ಮಾನ್ಯ ಸಭಾಪತಿಗಳೆ,

ಭಾಷಣ ಬೇರೆಯವರದ್ದಲ್ಲ, ಕಾಂಗ್ರೆಸ್ಸಿನ ಹಿರಿಯ ನಾಯಕಿ ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರದ್ದು. ಇದು ಕಾಂಗ್ರೆಸ್ಸಿನ ದೀರ್ಘ ಆಡಳಿತದ ಕಾರ್ಯ ಸಂಸ್ಕೃತಿಯಾಗಿತ್ತು. ಇಂದಿರಾ ಜಿ ಅವರಿಗೇ ದುಷ್ಕೃತ್ಯ ನಡೆಯುತ್ತಿದೆ ಎಂದು ತಿಳಿದಿತ್ತು, ಆದರೆ ಅದನ್ನು ಸರಿಪಡಿಸಲು ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರು ಟೀಕಿಸಿದ ಯೋಜನಾ ಆಯೋಗವನ್ನು ಅವರ ಸ್ವಂತ ತಂದೆಯೇ ಸ್ಥಾಪಿಸಿದ್ದರು, ಅದರ ರಚನೆ ಮತ್ತು ಅವರ ಭಾಷಣದ ನಡುವೆ 2 ದಶಕಗಳು ಕಳೆದವು, ಆದರೆ ಪರಿಸ್ಥಿತಿ ಬದಲಾಗದೆ ಉಳಿಯಿತು. 2014ರ ವರೆಗೆ, ಎಲ್ಲರೂ ಅತೃಪ್ತರಾಗಿದ್ದರು, ಎಲ್ಲರೂ ತಪ್ಪುಗಳನ್ನು ನೋಡಿದರು, ಆದರೆ ಯಾರೂ ಸುಧಾರಣೆಗೆ ಸಿದ್ಧರಿರಲಿಲ್ಲ. 2014ರ ನಂತರ, ನಮಗೆ ಅವಕಾಶ ನೀಡಿದಾಗ, ನಾವು ಯೋಜನಾ ಆಯೋಗ ರದ್ದುಗೊಳಿಸಿ ನೀತಿ ಆಯೋಗ ಸ್ಥಾಪಿಸಿದ್ದೇವೆ. ಇಂದು ನೀತಿ ಆಯೋಗವು ಹೆಚ್ಚಿನ ವೇಗದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವನ್ನು ನೋಡಿ - ಇದು ಒಂದು ಪ್ರಬಲ ಉದಾಹರಣೆಯಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಭಿವೃದ್ಧಿಗೆ ಮಾದರಿಯಾಗಿ ಜಾಗತಿಕ ಸಂಸ್ಥೆಗಳು ಈಗ ಇದನ್ನು ಅನುಮೋದಿಸುತ್ತಿವೆ. ಇದು ಮಹತ್ವಾಕಾಂಕ್ಷೆ ಜಿಲ್ಲೆಗಳ ಉಪಕ್ರಮದ ಯಶಸ್ಸು. ಒಂದು ಕಾಲದಲ್ಲಿ ಹಿಂದುಳಿದ ಜಿಲ್ಲೆಗಳೆಂದು ವಜಾಗೊಳಿಸಲಾದ ಅನೇಕ ಜಿಲ್ಲೆಗಳು, ಲಕ್ಷಾಂತರ ಜನರ ಮೂಲಭೂತ ಅಗತ್ಯಗಳನ್ನು ನಿರ್ಲಕ್ಷಿಸಲಾಗಿತ್ತು, ಈಗ ಅವು ರೂಪಾಂತರಗೊಂಡಿವೆ. ಹಿಂದೆ, ಅಂತಹ ಜಿಲ್ಲೆಗಳಿಗೆ ಅಧಿಕಾರಿಗಳನ್ನು ವರ್ಗಾಯಿಸಿ ಶಿಕ್ಷೆಯ ಹುದ್ದೆ ನೀಡಲಾಗುತ್ತಿತ್ತು, ಅದು ಕೆಲಸದ ಸಂಸ್ಕೃತಿಯಾಗಿತ್ತು. ನಾವು ಇದನ್ನು ಬದಲಾಯಿಸಿದ್ದೇವೆ. ನಾವು ಯುವ, ಸಮರ್ಥ ಅಧಿಕಾರಿಗಳನ್ನು ಅಲ್ಲಿ ಇರಿಸಿದ್ದೇವೆ, ಅವರಿಗೆ 3 ವರ್ಷಗಳ ಕಾಲ ಕೆಲಸ ಮಾಡಲು ಅವಕಾಶ ನೀಡಿದ್ದೇವೆ. ಒಬ್ಬರ ನಂತರ ಒಬ್ಬರು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇಂದು ಒಂದು ಕಾಲದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಯಾಗಿದ್ದ ಛತ್ತೀಸ್ ‌ಗಢದ ಬಸ್ತರ್ ಅನ್ನು ನೋಡಿ. ಇಂದು, ಬಸ್ತರ್ ಒಲಿಂಪಿಕ್ಸ್ ‌ಗೆ ದೇಶಾದ್ಯಂತ ಹೆಸರುವಾಸಿಯಾಗಿದೆ. ಅಭಿವೃದ್ಧಿ ಪ್ರತಿ ಹಳ್ಳಿಯನ್ನು ತಲುಪುತ್ತಿದೆ. ಕೆಲವು ಹಳ್ಳಿಗಳಲ್ಲಿ, ಬಸ್ ‌ಗಳು ಮೊದಲ ಬಾರಿಗೆ ಬಂದಿವೆ, ಇದು ನಾವು ತಂದ ಪರಿವರ್ತನೆ. ಆದರೆ ಇತರರು ಅಂತಹ ಪರಿಸ್ಥಿತಿಗಳನ್ನು ಬಿಟ್ಟು ಈಗ ರಾಷ್ಟ್ರದ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.

ಸನ್ಮಾನ್ಯ ಸಭಾಪತಿಗಳೆ,

ಆಕಾಂಕ್ಷೆಯ ಜಿಲ್ಲೆಗಳ ಉಪಕ್ರಮವು ನಿಜವಾದ ಅನುಷ್ಠಾನದ ಅರ್ಥಕ್ಕೆ ಒಂದು ಉಜ್ವಲ ಉದಾಹರಣೆಯಾಗಿದೆ. ಅಂತಹ ನೂರಾರು ಉದಾಹರಣೆಗಳಿವೆ, ಆದರೆ ನಾನು ಇದನ್ನು ಉಲ್ಲೇಖಿಸುತ್ತೇನೆ. ಕಾಂಗ್ರೆಸ್ ‌ನಲ್ಲಿರುವ ನಮ್ಮ ಸಹೋದ್ಯೋಗಿಗಳು ನಡೆಯುತ್ತಿರುವ ರೂಪಾಂತರದ ಹಿಂದಿನ ಅನುಷ್ಠಾನವನ್ನು ನೋಡಲು ವಿಫಲರಾಗಿದ್ದಾರೆ. ಅವರ ಏಕೈಕ ಮಾದರಿ ಹಳೆಯ ಯೋಜನಾ ಆಯೋಗದ ವಿಧಾನ - "ಜೀಪ್ ಮತ್ತು ಹೇಸರಗತ್ತೆ" ಮಾದರಿ. ಅದನ್ನು ಮೀರಿ ಅವರಿಗೆ ಏನೂ ತಿಳಿದಿಲ್ಲ. ಅನುಷ್ಠಾನವನ್ನು ಪರಿಗಣಿಸಿ: ನಾನು ಹುಟ್ಟುವ ಮೊದಲೇ, ಸರ್ದಾರ್ ವಲ್ಲಭಭಾಯಿ ಪಟೇಲ್ ನರ್ಮದಾ ನದಿಗೆ ಅಣೆಕಟ್ಟನ್ನು ಕಲ್ಪಿಸಿಕೊಂಡರು. ಯೋಜನೆಯನ್ನು ಅಂತಿಮಗೊಳಿಸಲಾಯಿತು, ಆದರೆ ಸರ್ದಾರ್ ಪಟೇಲ್ ನಿಧನರಾದರು. ನಂತರ, ನೆಹರು ಜಿ ಅಡಿಪಾಯ ಹಾಕಿದರು. ಆದರೂ, ದಶಕಗಳೇ ಕಳೆದವು, ಯಾವುದೇ ಪ್ರಗತಿಯಾಗಲಿಲ್ಲ. ನಾನು ಪ್ರಧಾನಿಯಾಗುವ ಹೊತ್ತಿಗೆ, ಅದನ್ನು ಉದ್ಘಾಟಿಸುವ ಗೌರವ ನನಗೆ ಬಂತು. ಮುಖ್ಯಮಂತ್ರಿಯಾಗಿ ನನ್ನ ರಾಜ್ಯದ ರೈತರಿಗಾಗಿ ನನ್ನನ್ನು ನಾನೇ ಪಣಕ್ಕಿಟ್ಟು ಸರ್ದಾರ್ ಸರೋವರ್ ಅಣೆಕಟ್ಟಿಗಾಗಿ 3 ದಿನಗಳ ಉಪವಾಸ ಸತ್ಯಾಗ್ರಹ ಮಾಡಬೇಕಾಯಿತು. ಆಗ ಮಾತ್ರ ಭಾರತ ಸರ್ಕಾರ ಪಶ್ಚಾತ್ತಾಪ ಪಟ್ಟಿತು, ನಿರ್ಮಾಣ ಕಾರ್ಯವು ವೇಗ ಪಡೆಯಿತು. ಇಂದು ಶುದ್ಧ ನರ್ಮದಾ ನೀರು ಬಿಎಸ್‌ಎಫ್ ಜವಾನರು ಇರುವ ಕಚ್ ‌ನ ಖಾವ್ಡಾವನ್ನು ತಲುಪುತ್ತಿದೆ. ಅನುಷ್ಠಾನ ಎಂದರೆ ಅದೇ. ಇದಕ್ಕೆ ವಿರುದ್ಧವಾಗಿ, ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಘೋಷಣೆಗಳನ್ನು ಮಾಡಿತು, ವಿಧ್ಯುಕ್ತ ಉದ್ಘಾಟನೆ ನೆರವೇರಿತು, ಶಂಕುಸ್ಥಾಪನೆ ನೆರವೇರಿಸಲಾಯಿತು, ಆದರೆ ಏನನ್ನೂ ಮಾಡಲಿಲ್ಲ. ಈ ಸಂಸ್ಕೃತಿಯನ್ನು ಬದಲಾಯಿಸಲು, ನಾನು ಪ್ರಗತಿ ಎಂಬ ತಂತ್ರಜ್ಞಾನ ವೇದಿಕೆಯನ್ನು ರಚಿಸಿದ್ದೇವೆ. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ಹಿಮಾಚಲಕ್ಕೆ ಸಂಸತ್ತಿನಲ್ಲಿ ರೈಲು ಯೋಜನೆ ಘೋಷಿಸಲಾಯಿತು - ಬಹುಶಃ ಉನಾ ಇರಬೇಕು, ಚುನಾವಣೆಗಳನ್ನು ಗೆಲ್ಲಲು ಮಾತ್ರ ಅದನ್ನು ಘೋಷಿಸಲಾಯಿತು. ಪ್ರಗತಿಯ ಮೂಲಕ, ನಾನು ಅಂತಹ ಯೋಜನೆಗಳನ್ನು ಪರಿಶೀಲಿಸಿದೆ. ಪ್ರತಿಯೊಂದು ಯೋಜನೆಯು ಏಕೆ ಸಿಲುಕಿಕೊಂಡಿದೆ, ಯಾವ ಇಲಾಖೆಯಲ್ಲಿ ತಪ್ಪಿದೆ, ಯಾವ ಕಾನೂನು ಅಡೆತಡೆಗಳು ಅಸ್ತಿತ್ವದಲ್ಲಿವೆ,  ವೆಚ್ಚಗಳು ಏಕೆ ಹೆಚ್ಚಿವೆ ಎಂಬುದನ್ನು ನಾವು ಪರಿಶೀಲಿಸಿದ್ದೇವೆ. 900 ಕೋಟಿ ರೂ. ವೆಚ್ಚವಾಗಬೇಕಿದ್ದ ಯೋಜನೆಯು 90,000 ಕೋಟಿ ರೂ.ಗೆ ಏರಿತ್ತು. ನಾವು ಮಾಸಿಕ ವಿಮರ್ಶೆಗಳನ್ನು ಪ್ರಾರಂಭಿಸಿದ್ದೇವೆ. ನಾನು ಈಗ ಸಭೆಗಳ 50ನೇ ಸಂಚಿಕೆಯನ್ನು ಪೂರ್ಣಗೊಳಿಸಿದ್ದೇನೆ. ರಾಜ್ಯಗಳು ಮತ್ತು ಸಚಿವಾಲಯಗಳನ್ನು ಒಳಗೊಳ್ಳುವ ಮೂಲಕ, ನಾವು 85 ಲಕ್ಷ ಕೋಟಿ ರೂ.  ಮೌಲ್ಯದ ಯೋಜನೆಗಳನ್ನು ಬಿಡುಗಡೆ ಮಾಡಿದ್ದೇವೆ. ನಾವು ಬಿಡುಗಡೆ ಮಾಡಿದ ರಾಷ್ಟ್ರೀಯ ಶಕ್ತಿಯ ಪ್ರಮಾಣವನ್ನು ಊಹಿಸಿ. ರೈಲ್ವೆಗಳು, ರಸ್ತೆಗಳು, ನೀರಾವರಿ, ಗ್ರಾಮೀಣ ಮೂಲಸೌಕರ್ಯ - ಎಲ್ಲವನ್ನೂ ವೇಗಗೊಳಿಸಲಾಯಿತು. 3 ದಶಕಗಳಿಂದ ಸ್ಥಗಿತಗೊಂಡಿದ್ದ ಜಮ್ಮು-ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗವು ಈಗ ಪೂರ್ಣಗೊಂಡಿದೆ. ಹಿಮದಿಂದ ಆವೃತವಾದ ಕಣಿವೆಗಳ ಮೂಲಕ ಚಲಿಸುವ ವಂದೇ ಭಾರತ್ ರೈಲಿನ ವೀಡಿಯೊ ವೈರಲ್ ಆಗಿದ್ದು, ಜನರು "ಇದನ್ನು ವಿದೇಶ ಎಂದು ತಪ್ಪಾಗಿ ಭಾವಿಸಬೇಡಿ - ಇದು ಭಾರತ" ಎಂದು ಹೇಳುತ್ತಾರೆ. ಅನುಷ್ಠಾನ ಎಂದರೆ ಅದೇ .

ಸನ್ಮಾನ್ಯ ಸಭಾಪತಿಗಳೆ,

ನಾನು ಅಸ್ಸಾಂ ಬಗ್ಗೆ ಮಾತನಾಡುತ್ತೇನೆ - ಚುನಾವಣೆಗಳಿಂದಾಗಿ ಅಲ್ಲ, ಆದರೆ ಕಾಂಗ್ರೆಸ್ ವೈಫಲ್ಯಗಳಿಂದಾಗಿ. ಕಾಂಗ್ರೆಸ್ ಕೇವಲ ಕಲ್ಪನೆ ಮಾಡುತ್ತದೆ, ಅವರು ಎಂದಿಗೂ ಕಾರ್ಯಗತಗೊಳಿಸುವುದಿಲ್ಲ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಸಂಪರ್ಕಿಸುವ ಬೋಗಿಬೀಲ್ ಸೇತುವೆ ತೆಗೆದುಕೊಳ್ಳಿ. ಈ ಮಹತ್ವದ ಯೋಜನೆಯು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಪ್ರಗತಿಯ ಮೂಲಕ, ನಾವು ಅದನ್ನು ಪರಿಶೀಲಿಸಿದ್ದೇವೆ, ಇಂದು ಅದು ಪೂರ್ಣಗೊಂಡಿದೆ, ಅಸ್ಸಾಂ ಮತ್ತು ಇಡೀ ಈಶಾನ್ಯಕ್ಕೆ ಅಪಾರ ಪ್ರಯೋಜನ ತಂದಿದೆ.

ಸನ್ಮಾನ್ಯ ಸಭಾಪತಿಗಳೆ,

ನಾವು ಅನುಷ್ಠಾನದ ಬಗ್ಗೆ ಮಾತನಾಡುವಾಗ, ನಾವು ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೇವೆ, ಆಗಾಗ್ಗೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ. 2030ರ ವೇಳೆಗೆ ಕೆಲವು ಸೌರಶಕ್ತಿ ಗುರಿಗಳನ್ನು ಸಾಧಿಸುವುದಾಗಿ ನಾವು ಸಂಕಲ್ಪ ಮಾಡಿದ್ದೇವೆ, ಆದರೆ 2025ರ ವೇಳೆಗೆ ಅವುಗಳನ್ನು ಸಾಧಿಸಿದ್ದೇವೆ. ಎಥೆನಾಲ್ ಗುರಿಗಳನ್ನು ಸಹ 2-3 ವರ್ಷಗಳ ಮುಂಚಿತವಾಗಿಯೇ ಮುಗಿಸಲಾಗಿದೆ. ಇದು ನಮ್ಮ ಅನುಷ್ಠಾನ ಸಾಮರ್ಥ್ಯವು ಪ್ರಬಲವಾಗಿದೆ, ಆದರೆ ಸಮಯಕ್ಕಿಂತ ಮುಂಚೆಯೇ ಇದೆ ಎಂಬುದನ್ನು ತೋರಿಸುತ್ತದೆ.

ಸನ್ಮಾನ್ಯ ಸಭಾಪತಿಗಳೆ,

ಬಿಜೆಪಿ ಮತ್ತು ಎನ್ ‌ಡಿಎ ವಿಧಾನವು ಕಾಂಗ್ರೆಸ್ ‌ನ ವಿಧಾನಕ್ಕಿಂತ ಬಹಳ ಭಿನ್ನವಾಗಿದೆ. ನಮ್ಮ ದೃಷ್ಟಿಕೋನ, ನಮ್ಮ ಸಮಸ್ಯೆ ಪರಿಹರಿಸುವ ಮನಸ್ಥಿತಿ, ಪ್ರಪಂಚದಾದ್ಯಂತ ಭಿನ್ನವಾಗಿದೆ. 1.4 ಶತಕೋಟಿ ಭಾರತೀಯರು ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾವು ನಂಬುತ್ತೇವೆ. ನಾವು ನಮ್ಮ ಜನರನ್ನು, ಅವರ ಶಕ್ತಿಯನ್ನು ನಂಬುತ್ತೇವೆ, ಅದು ಪ್ರಜಾಪ್ರಭುತ್ವದ ನಿಜವಾದ ಶಕ್ತಿಯಾಗಿದೆ. ಆದಾಗ್ಯೂ, ಕಾಂಗ್ರೆಸ್ ಜನರನ್ನೇ ಸಮಸ್ಯೆ ಎಂದು ನೋಡುತ್ತದೆ. ನಾನು ವಿವರಿಸುತ್ತೇನೆ. ಇಂದಿರಾ ಗಾಂಧಿ ಒಮ್ಮೆ ಇರಾನ್ ‌ನಲ್ಲಿ ಮಾತನಾಡುತ್ತಾ, ನೆಹರೂ ಜಿ ಅವರೊಂದಿಗಿನ ಸಂಭಾಷಣೆ ವಿವರಿಸಿದರು. ಅವರು ಎದುರಿಸಿದ ಸಮಸ್ಯೆಗಳ ಬಗ್ಗೆ ಕೇಳಿದಾಗ, ನೆಹರೂ ಉತ್ತರಿಸಿದರು: "35 ಕೋಟಿ." ಆ ಸಮಯದಲ್ಲಿ, ಭಾರತದ ಜನಸಂಖ್ಯೆ 35 ಕೋಟಿ ಇತ್ತು. ಅವರಿಗೆ, ಪ್ರತಿಯೊಬ್ಬ ನಾಗರಿಕನೂ ಒಂದು ಸಮಸ್ಯೆಯಾಗಿದ್ದನು. 57 ಕೋಟಿ ಜನಸಂಖ್ಯೆಯೊಂದಿಗೆ, ಅವರ ಸಮಸ್ಯೆಗಳು ಹೆಚ್ಚಿವೆ ಎಂದು ಇಂದಿರಾ ಜಿ ಹೇಳಿದರು. ತಮ್ಮದೇ ಜನರನ್ನು ಸಮಸ್ಯೆಗಳಾಗಿ ನೋಡಿದ ನಾಯಕರನ್ನು ಕಲ್ಪಿಸಿಕೊಳ್ಳಿ. ಇದು ಅವರ ಮನಸ್ಥಿತಿ ಮತ್ತು ನಮ್ಮ ಮನಸ್ಥಿತಿಯ ನಡುವಿನ ವ್ಯತ್ಯಾಸ. ನಮಗೆ, ಪ್ರತಿಯೊಬ್ಬ ನಾಗರಿಕನೂ ಒಂದು ಪರಿಹಾರ, ಭಾರತದ ಭವಿಷ್ಯ ನಿರ್ಮಿಸುವಲ್ಲಿ ದೇಶವಾಸಿಯೇ ಪಾಲುದಾರ. ಆದರೆ ಅವರಿಗೆ ನಾಗರಿಕರು ಹೊರೆಯಾಗಿದ್ದರು.

ಸನ್ಮಾನ್ಯ ಸಭಾಪತಿಗಳೆ,

ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ, ವಾಕ್ಚಾತುರ್ಯದಿಂದಲ್ಲ ಆದರೆ ದೃಢನಿಶ್ಚಯದಿಂದ. ಸವಾಲುಗಳು ಎಷ್ಟೇ ದೊಡ್ಡದಾಗಿದ್ದರೂ, ನಮ್ಮಲ್ಲಿ 1.4 ಶತಕೋಟಿ ಪರಿಹಾರಗಳಿವೆ. ನಮ್ಮ ಜನರೇ ನಮ್ಮ ದೊಡ್ಡ ಬಂಡವಾಳ. ಪ್ರತಿಯೊಬ್ಬ ನಾಗರಿಕನು ಭಾರತದ ಉಜ್ವಲ ಭವಿಷ್ಯದ ಸೃಷ್ಟಿಕರ್ತ, ನಿರ್ಮಾತೃ, ರಕ್ಷಕ. ನಾವು ಅವುಗಳನ್ನು ಹೇಗೆ ಸಮಸ್ಯೆಗಳು ಎಂದು ಕರೆಯಬಹುದು? ಈ ರೀತಿ ಯೋಚಿಸುವವರು ದೇಶಕ್ಕೆ ಅಲ್ಲ, ತಮ್ಮ ಕುಟುಂಬಗಳಿಗೆ ಮಾತ್ರ ಸೇವೆ ಸಲ್ಲಿಸುತ್ತಾರೆ.

ಸನ್ಮಾನ್ಯ ಸಭಾಪತಿಗಳೆ,

ಭಾರತದ ಜನರನ್ನು ಅವಮಾನಿಸುವುದು ಕಾಂಗ್ರೆಸ್ಸಿನ ಸ್ವಭಾವ ಮತ್ತು ಸಂಸ್ಕೃತಿಯಲ್ಲಿ ಬೇರೂರಿದೆ. ಇತ್ತೀಚೆಗೆ, ಅವರು ಭಾರತದ ರಾಷ್ಟ್ರಪತಿಗಳನ್ನು ಅವಮಾನಿಸಿದ್ದಾರೆ. ಚುನಾವಣೆಯ ನಂತರ ಅವರು ಬಳಸಿದ ಪದಗಳು ನಾಚಿಕೆಗೇಡಿನವು. ಬಡತನದಿಂದ ಬಂದು ಅತ್ಯುನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿದ ಬುಡಕಟ್ಟು ಕುಟುಂಬದ ಮಹಿಳಾ ರಾಷ್ಟ್ರಪತಿಯನ್ನು ಅವಮಾನಿಸುವುದು ಬುಡಕಟ್ಟು ಸಮುದಾಯವನ್ನು ಅವಮಾನಿಸುವುದು, ಮಹಿಳೆಯರನ್ನು ಅವಮಾನಿಸುವುದು  ಸಂವಿಧಾನವನ್ನೇ ಅವಮಾನಿಸಿದಂತೆ.

ಸನ್ಮಾನ್ಯ ಸಭಾಪತಿಗಳೆ,

ಕಾಂಗ್ರೆಸ್ ಏನೇ ಭಾವಿಸಿದರೂ, ಇದು ಅವರ ಗಂಭೀರ ತಪ್ಪು. ನನಗೆ ಹೆಚ್ಚುವರಿ ಸಮಯ ನೀಡಿದ್ದಕ್ಕಾಗಿ ನಾನು ನಿಮಗೆ ಮತ್ತು ಸದನಕ್ಕೆ ಧನ್ಯವಾದ ಸಲ್ಲಿಸುತ್ತೇನೆ.

ಸನ್ಮಾನ್ಯ ಸಭಾಪತಿಗಳೆ,

ಲೋಕಸಭೆಯಲ್ಲಿ ನಡೆದದ್ದು ತೀವ್ರ ನೋವಿನಿಂದ ಕೂಡಿದೆ. ಹತಾಶೆ ಮತ್ತು ನೋವು ಅರ್ಥವಾಗುವಂತಹದ್ದಾಗಿರಬೇಕು, ಆದರೆ ಪ್ರಜಾಪ್ರಭುತ್ವದ ಪವಿತ್ರ ದೇವಾಲಯವನ್ನು ರೀತಿ ಅಪವಿತ್ರಗೊಳಿಸುವುದು ಸ್ವೀಕಾರಾರ್ಹವಲ್ಲ. ಆ ಸಮಯದಲ್ಲಿ, ಅಸ್ಸಾಂನ ಗೌರವಾನ್ವಿತ ಸದಸ್ಯರು ಪೀಠವನ್ನು ಆಕ್ರಮಿಸಿಕೊಂಡಿದ್ದರು. ಕಾಗದಪತ್ರಗಳನ್ನು ಎಸೆದರು, ಮೇಜುಗಳ ಮೇಲೆ ಹತ್ತಿದರು. ಇದು ಈಶಾನ್ಯಕ್ಕೆ ಮಾಡಿದ ಅವಮಾನವಲ್ಲವೇ? ನಂತರ, ಆಂಧ್ರದ ದಲಿತ ಕುಟುಂಬದ ಮಗ ಪೀಠವನ್ನು ಅಲಂಕರಿಸಿದಾಗ, ಅವರನ್ನೂ ಅವಮಾನಿಸಲಾಯಿತು. ಇದು ಕಾಂಗ್ರೆಸ್ ಈಶಾನ್ಯವನ್ನು ಅವಹೇಳನಕಾರಿಯಾಗಿ ಅವಮಾನಿಸುತ್ತಿದೆ, ದಲಿತರನ್ನು ಅವಮಾನಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಅವರು ಇನ್ನು ಮುಂದೆ ಕಾಂಗ್ರೆಸ್ ಅನ್ನು ಬೆಂಬಲಿಸುವುದಿಲ್ಲ ಎಂಬ ಕಾರಣಕ್ಕಾಗಿ ಅವರು ಅಸ್ಸಾಂ ಜನರ ಬಗ್ಗೆ ದ್ವೇಷ ಹೊಂದಿದ್ದಾರೆಂದು ತೋರುತ್ತದೆ. ಪ್ರಜಾಪ್ರಭುತ್ವ ಹೀಗೆಯೇ ಕಾರ್ಯ ನಿರ್ವಹಿಸಬೇಕೇ?

ಸನ್ಮಾನ್ಯ ಸಭಾಪತಿಗಳೆ,

ಭಾರತ ರತ್ನ ಭೂಪೇನ್ ಹಜಾರಿಕಾ ಜಿ ಅವರನ್ನು ನೆನಪಿಸಿಕೊಂಡಾಗ ನನಗೆ ತುಂಬಾ ನೋವಾಯಿತು, ಅವರ ಹಾಡುಗಳು ಮತ್ತು ಧ್ವನಿಯು ರಾಷ್ಟ್ರವನ್ನು ಒಂದುಗೂಡಿಸಿದ ಗೌರವಾನ್ವಿತ ವ್ಯಕ್ತಿ. ಅವರಿಗೆ ಭಾರತ ರತ್ನ ನೀಡುವ ಗೌರವ ನಮಗಿತ್ತು. ಆದರೂ ಕಾಂಗ್ರೆಸ್ ಇದನ್ನೂ ವಿರೋಧಿಸಿತು. ಭಾರತ ರತ್ನದ ಬಗ್ಗೆ ಉಲ್ಲೇಖಿಸಿದಾಗ ಖರ್ಗೆ ಜಿ ಅವರ ಪ್ರತಿಕ್ರಿಯೆ ವೀಡಿಯೊದಲ್ಲಿದೆ - ಅವರ ಮುಖವು ತಿರಸ್ಕಾರವನ್ನು ತೋರಿಸುತ್ತದೆ. ಹಜಾರಿಕಾ ಜಿ ಅವರನ್ನು "ಕೇವಲ ಗಾಯಕ" ಎಂದು ತಳ್ಳಿಹಾಕುವುದು ಅಸ್ಸಾಂ ಅನ್ನು ಅವಮಾನಿಸಿದಂತೆ, ಭಾರತದ ಕಲಾ ಪ್ರೇಮಿಗಳನ್ನು ಅವಮಾನಿಸಿದಂತೆ. ಅಸ್ಸಾಂ ಮತ್ತು ರಾಷ್ಟ್ರದ ಹೆಮ್ಮೆಯನ್ನು ವಿರೋಧಿಸಿ ಕಾಂಗ್ರೆಸ್ ಅವರಿಗೆ ಭಾರತ ರತ್ನವನ್ನು ವಿರೋಧಿಸಿತು. ಅಸ್ಸಾಂ ಅವಮಾನವನ್ನು ಎಂದಿಗೂ ಮರೆಯುವುದಿಲ್ಲ ಎಂಬುದು ನನಗೆ ಖಚಿತವಾಗಿದೆ.

ಸನ್ಮಾನ್ಯ ಸಭಾಪತಿಗಳೆ,

ನಿನ್ನೆ ಈ ಸದನದಲ್ಲೇ ಕಾಂಗ್ರೆಸ್ ಸದಸ್ಯರು - ಅವರ ತಥಾಕಥಿತ ಯುವರಾಜರಲ್ಲಿ ಒಬ್ಬರು ಸಹ ಸಂಸದರನ್ನು "ದೇಶದ್ರೋಹಿ" ಎಂದು ಕರೆಯುತ್ತಾರೆ. ಅವರ ದುರಹಂಕಾರವು 7ನೇ ಸ್ವರ್ಗವನ್ನು ತಲುಪಿದೆ. ಅನೇಕರು ಕಾಂಗ್ರೆಸ್ ತೊರೆದಿದ್ದಾರೆ, ಪಕ್ಷವು ಛಿದ್ರವಾಗಿದೆ ಮತ್ತು ನಾಯಕರು ಇತರ ಪಕ್ಷಗಳನ್ನು ಸೇರಿದ್ದಾರೆ. ಆದರೂ ಅವರಲ್ಲಿ ಯಾರನ್ನೂ ಎಂದಿಗೂ ದೇಶದ್ರೋಹಿಗಳೆಂದು ಕರೆಯಲಾಗಿಲ್ಲ. ಆದರೆ ನಿನ್ನೆ ಈ ಸಂಸದರನ್ನು ಸಿಖ್ ಆಗಿದ್ದರಿಂದ ಅವರನ್ನು ದೇಶದ್ರೋಹಿ ಎಂದು ಕರೆಯಲಾಯಿತು. ಇದು ಸಿಖ್ಖರಿಗೆ ಮಾಡಿದ ಅವಮಾನ, ಗುರುಗಳಿಗೆ ಮಾಡಿದ ಅವಮಾನ. ಕಾಂಗ್ರೆಸ್ ‌ನಲ್ಲಿ ಸಿಖ್ಖರ ಬಗ್ಗೆ ಆಳವಾಗಿ ಬೇರೂರಿರುವ ದ್ವೇಷವನ್ನು ಇದು ಬಹಿರಂಗಪಡಿಸಿತು. ಈ ಸದನದಲ್ಲಿ ಕಾಂಗ್ರೆಸ್ ಇದೆ ಎಂದು ಹೇಳಿದ ಸದಸ್ಯನಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ಅವರು ಇಂದು ನಿಂತು "ನಿನ್ನೆ ನಡೆದದ್ದು ಸಂಸತ್ತಿನ ಘನತೆಗೆ ವಿರುದ್ಧವಾಗಿದೆ, ನಾವು ವಿಷಾದಿಸುತ್ತೇವೆ" ಎಂದು ಹೇಳಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ರಾಷ್ಟ್ರಕ್ಕಾಗಿ ರಕ್ತದಾನ ಮಾಡಿದ ಕುಟುಂಬವನ್ನು ಅದರ ಸದಸ್ಯರಲ್ಲಿ ಒಬ್ಬರು ರಾಜಕೀಯ ದೃಷ್ಟಿಕೋನಗಳನ್ನು ಬದಲಾಯಿಸಿದ್ದರಿಂದ ಅವಮಾನಿಸಲಾಗಿದೆ. ಅವರನ್ನು ದೇಶದ್ರೋಹಿ ಎಂದು ಕರೆಯುವುದು ಸಣ್ಣ ವಿಷಯವಲ್ಲ. ಯಾವುದೇ ನಾಗರಿಕನನ್ನು ದೇಶದ್ರೋಹಿ - ವಿಶೇಷವಾಗಿ ಸಿಖ್ ಎಂದು ಕರೆಯುವುದನ್ನು ರಾಷ್ಟ್ರ ಹೇಗೆ ಸಹಿಸಿಕೊಳ್ಳುತ್ತದೆ? ಇದು ದುರದೃಷ್ಟಕರ, ಅಂತಹ ನಡವಳಿಕೆಯು ಕಾಂಗ್ರೆಸ್ ಅನ್ನು ಮತ್ತಷ್ಟು ಮುಳುಗಿಸುತ್ತದೆ.

ಸನ್ಮಾನ್ಯ ಸಭಾಪತಿಗಳೆ,

ಒಂದು ಕಡೆ ನಾವು ಇದನ್ನು ನೋಡುತ್ತೇವೆ, ಮತ್ತೊಂದೆಡೆ, ಮಾಸ್ಟರ್ ಸದಾನಂದ ಜೀ ಅವರ ಉದಾಹರಣೆ. ರಾಜಕೀಯ ದ್ವೇಷದಿಂದಾಗಿ, ಅವರ ಎರಡೂ ಕಾಲುಗಳನ್ನು ಅವರ ಯೌವನದಲ್ಲಿ ಕತ್ತರಿಸಲಾಯಿತು. ಅವರು ಕೃತಕ ಅಂಗಗಳೊಂದಿಗೆ ವಾಸಿಸುತ್ತಾರೆ, ಆದರೆ ಅವರ ಭಾಷಣದಲ್ಲಿ ಯಾವುದೇ ಕಹಿ ಇಲ್ಲ, ಅವರ ನಡವಳಿಕೆಯಲ್ಲಿ ಯಾವುದೇ ಕಠೋರತೆ ಇಲ್ಲ. ಇದು ನಮಗೆ ಹೆಮ್ಮೆ ತುಂಬುತ್ತದೆ. ನಿನ್ನೆ ಅವರು ಸದನದಲ್ಲಿ ತಮ್ಮ ಮೊದಲ ಭಾಷಣ ಮಾಡಿದಾಗ, ಅವರು ನಿಮ್ಮ ಅನುಮತಿಯೊಂದಿಗೆ ಗೌರವದಿಂದ ತಮ್ಮ ಕೃತಕ ಅಂಗವನ್ನು ಪಕ್ಕದಲ್ಲಿ ಇರಿಸಿದರು. ಆ ದೃಶ್ಯ ರಾಷ್ಟ್ರಕ್ಕೆ ನೋವಿನಿಂದ ಕೂಡಿತ್ತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗಾಗಿ ಯುವ ಶಿಕ್ಷಕನ ಕಾಲುಗಳನ್ನು ಕತ್ತರಿಸಿದ್ದಕ್ಕೆ ಭಾರತ ಮೈತ್ರಿಕೂಟ ಕಾರಣವಾಗಿದೆ. ಆದರೂ ಅವರಿಗೆ ಯಾವುದೇ ಕಹಿ, ಕೋಪವಿಲ್ಲ. ನಾನು ಮಾಸ್ಟರ್ ಸದಾನಂದ ಜಿ ಅವರನ್ನು ನನ್ನ ಹೃದಯದಿಂದ ವಂದಿಸುತ್ತೇನೆ. ಅಂತಹ ಕ್ರೂರ ದಾಳಿಯ ಹೊರತಾಗಿಯೂ, ಅವರು ರಾಷ್ಟ್ರಕ್ಕೆ ತಮ್ಮ ಸೇವೆಯ ಸಂಕಲ್ಪವನ್ನು  ಮುಂದುವರೆಸಿದ್ದಾರೆ, ಇಂದು ನೀತಿ ನಿರೂಪಣೆಗೆ ಕೊಡುಗೆ ನೀಡಿದ್ದಾರೆ. ಇದು ಹೆಮ್ಮೆಯ ವಿಷಯ. ಅಂತಹ ಜನರ ಬಲದ ಮೇಲೆ ನಾವು ರಾಜಕೀಯದಲ್ಲಿ ಬದುಕುತ್ತೇವೆ ಮತ್ತು ಕೆಲಸ ಮಾಡುತ್ತೇವೆ. ಅವರ ತ್ಯಾಗವು ರಾಷ್ಟ್ರಕ್ಕಾಗಿ ಬದುಕಲು ಮತ್ತು ಮಡಿಯಲು ನಮಗೆ ಸ್ಫೂರ್ತಿ ನೀಡುತ್ತದೆ.

ಸನ್ಮಾನ್ಯ ಸಭಾಪತಿಗಳೆ,

ದಿನಗಳಲ್ಲಿ ಕಾಂಗ್ರೆಸ್ ಸಹೋದ್ಯೋಗಿಗಳು ನನಗೆ ವಿಶೇಷ ರೀತಿಯ ಪ್ರೀತಿ ತೋರಿಸುತ್ತಾರೆ. ಜವಾಬ್ದಾರಿಯಿಲ್ಲದೆಯೂ, ನಾವು ರಾಷ್ಟ್ರಕ್ಕಾಗಿ ಬದುಕಲು ಕಲಿತಿದ್ದೇವೆ. ನಾವು ಅಭಿವೃದ್ಧಿ ಹೊಂದಿದ ಭಾರತಕ್ಕೆ ಅಡಿಪಾಯ ಹಾಕುತ್ತಿದ್ದೇವೆ, ಅದನ್ನು ಬಲಪಡಿಸುತ್ತಿದ್ದೇವೆ. ನಾನು ಯುವಕರಿಗೆ ಘನವಾದ ನೆಲವನ್ನು ಸಿದ್ಧಪಡಿಸುತ್ತಿರುವಾಗ, ಕಾಂಗ್ರೆಸ್ ಮೋದಿಯ ಸಮಾಧಿಯನ್ನು ಅಗೆಯಲು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಪ್ರೀತಿಯ ಅಂಗಡಿಗಳನ್ನು ತೆರೆಯುವುದಾಗಿ ಹೇಳಿಕೊಳ್ಳುವವರು "ಮೋದಿ, ನಿಮ್ಮ ಸಮಾಧಿಯನ್ನು ಅಗೆಯಲಾಗುವುದು" ಎಂದು ಜಪಿಸುತ್ತಾರೆ. ಸಹ ನಾಗರಿಕನ ಸಮಾಧಿಯನ್ನು ಅಗೆಯುವ ಕನಸು ಯಾವ ರೀತಿಯ ಪ್ರೀತಿಯ ಅಂಗಡಿಯಾಗಿದೆ? ಅಂತಹ ವಿಷಯಗಳ ಬಗ್ಗೆ ಮಾತನಾಡಲು ಅವರಿಗೆ ಯಾವ ಸಾಂವಿಧಾನಿಕ ತತ್ವ ಕಲಿಸುತ್ತದೆ? ಇದು ಸಂವಿಧಾನಕ್ಕೆ, ಮಾನವತೆಗೆ, ಸಾರ್ವಜನಿಕ ಜೀವನದ ಘನತೆಗೆ ಮಾಡಿದ ಅವಮಾನವಲ್ಲವೇ? ಅವರಿಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಂತರ, ಅವರು, "ಪ್ರಧಾನಿ ರಾಜ್ಯಸಭೆಯಲ್ಲಿ ಅಳುತ್ತಿದ್ದರು" ಎಂದು ಕೂಡ ಹೇಳಿದರು. ಯಾವ ರೀತಿಯ ಪಾಲನೆಯು ಅಂತಹ ನಡವಳಿಕೆಯನ್ನು ಉಂಟುಮಾಡುತ್ತದೆ?

ಸನ್ಮಾನ್ಯ ಸಭಾಪತಿಗಳೆ,

ನನ್ನ ಅನುಭವ ದೀರ್ಘವಾಗಿದೆ. 2002ರಲ್ಲಿ ಅವರು ವಿರೋಧ ಪಕ್ಷದಲ್ಲಿದ್ದಾಗಿನಿಂದ, 2004ರಲ್ಲಿ ಅವರು ಅಧಿಕಾರಕ್ಕೆ ಬಂದಾಗಿನಿಂದ ಮತ್ತು 2014ರಲ್ಲಿ ನಾನು ಸದನವನ್ನು ಪ್ರವೇಶಿಸಿದಾಗಿನಿಂದ - 25 ವರ್ಷಗಳಿಗೂ ಹೆಚ್ಚು ಕಾಲ - ಕಾಂಗ್ರೆಸ್ ಮೋದಿಯನ್ನು ನಿಂದಿಸದೆ ಒಂದೇ ಒಂದು ಅಧಿವೇಶನವೂ ಕಳೆದಿಲ್ಲ. ಒಮ್ಮೆ ಯಾರೋ ನನ್ನ ಆರೋಗ್ಯದ ರಹಸ್ಯ ಕೇಳಿದರು. ನಾನು ಉತ್ತರಿಸಿದೆ: "ನಾನು ಪ್ರತಿದಿನ 2 ಕಿಲೋ ನಿಂದನೆ ಸೇವಿಸುತ್ತೇನೆ."

ಸನ್ಮಾನ್ಯ ಸಭಾಪತಿಗಳೆ,

ಅವರು ಮೋದಿಯ ಸಮಾಧಿಯನ್ನು ಏಕೆ ಅಗೆಯಲು ಬಯಸುತ್ತಾರೆ? ಈ ಘೋಷಣೆ ಕೇವಲ ವಾಕ್ಚಾತುರ್ಯವಲ್ಲ - ಇದು ಅವರೊಳಗಿನ ದ್ವೇಷವನ್ನು ಪ್ರತಿಬಿಂಬಿಸುತ್ತದೆ. ನಾವು 370ನೇ ವಿಧಿ ರದ್ದುಗೊಳಿಸಿದ ಕಾರಣ, ಅವರು ಮೋದಿಯ ಸಮಾಧಿ ಅಗೆಯಲು ಬಯಸುತ್ತಾರೆ. ಬಾಂಬ್ ಮತ್ತು ಬಂದೂಕುಗಳಿಂದ ಆವೃತವಾದ ಈಶಾನ್ಯಕ್ಕೆ ನಾವು ಶಾಂತಿ ಮತ್ತು ಅಭಿವೃದ್ಧಿಯನ್ನು ತಂದ ಕಾರಣ, ಅವರು ಮೋದಿಯ ಸಮಾಧಿ ಅಗೆಯಲು ಬಯಸುತ್ತಾರೆ. ನಾವು ಪಾಕಿಸ್ತಾನಿ ಭಯೋತ್ಪಾದಕರನ್ನು ಅವರ ಸ್ವಂತ ಮನೆಗಳೊಳಗೆ ಹೊಡೆದ ಕಾರಣ, ಅವರು ಮೋದಿಯ ಸಮಾಧಿ ಅಗೆಯಲು ಬಯಸುತ್ತಾರೆ. ನಾವು ಆಪರೇಷನ್ ಸಿಂದೂರ್ ನಡೆಸಿದ್ದರಿಂದ, ಅವರು ಮೋದಿಯ ಸಮಾಧಿ ಅಗೆಯಲು ಬಯಸುತ್ತಾರೆ. ನಾವು ಮಾವೋವಾದಿ ಭಯೋತ್ಪಾದನೆಯಿಂದ ದೇಶವನ್ನು ಮುಕ್ತಗೊಳಿಸಲು ದಿಟ್ಟ ಕ್ರಮಗಳನ್ನು ತೆಗೆದುಕೊಂಡ ಕಾರಣ, ಅವರು ಮೋದಿ ಸಮಾಧಿ ಅಗೆಯಲು ಬಯಸುತ್ತಾರೆ. ನೆಹರೂ ಸಹಿ ಮಾಡಿದ ಅನ್ಯಾಯದ ಸಿಂಧೂ ಜಲ ಒಪ್ಪಂದವನ್ನು ನಾವು ಸ್ಥಗಿತಗೊಳಿಸಿದ್ದರಿಂದ, ಅವರು ಮೋದಿ ಸಮಾಧಿ ಅಗೆಯಲು ಬಯಸುತ್ತಾರೆ.

ಸನ್ಮಾನ್ಯ ಸಭಾಪತಿಗಳೆ,

ಕಾಂಗ್ರೆಸ್ ಸಮಸ್ಯೆ ವಿಭಿನ್ನವಾಗಿದೆ. ಮೋದಿ ಇಲ್ಲಿಗೆ ಹೇಗೆ ತಲುಪಿದರು ಎಂಬುದನ್ನು ಅವರು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಹತಾಶೆ ಬೆಳೆಯುತ್ತಿದೆ. ಮೋದಿ ಬಂದಿದ್ದನ್ನು ಅವರು ಸಹಿಸಿಕೊಂಡಿದ್ದಾರೆ. ಆದ್ದರಿಂದ, ಅವರು "ಮೋದಿ ಸಮಾಧಿ ಅಗೆಯಲಾಗುವುದು" ಎಂದು ಜಪಿಸುವ ಒಂದೇ ಒಂದು ಮಾರ್ಗ ನೋಡುತ್ತಾರೆ.

ಸನ್ಮಾನ್ಯ ಸಭಾಪತಿಗಳೆ,

ಪ್ರಧಾನಿ ಕುರ್ಚಿ ತಮ್ಮ ಕುಟುಂಬದ ಆನುವಂಶಿಯ ಅಧಿಕಾರ ಎಂದು ಅವರು ನಂಬುತ್ತಾರೆ. ಬೇರೆ ಯಾರೂ ಅಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಅವರೊಳಗಿನ ದ್ವೇಷ, ಅವರ ಪ್ರೀತಿಯ ಅಂಗಡಿ ಎಂದು ಕರೆಯಲ್ಪಡುವ ಬೆಂಕಿಯಿಂದಾಗಿ ಅವರು ಮೋದಿಯ ಸಮಾಧಿ ಅಗೆಯುವ ಬಗ್ಗೆ ಜಪಿಸುತ್ತಾರೆ.

ಸನ್ಮಾನ್ಯ ಸಭಾಪತಿಗಳೆ,

ಕಾಂಗ್ರೆಸ್ ವಂಶ ಪಾರಂಪರ್ಯ ಆಡಳಿತಕ್ಕೆ ದಶಕಗಳ ಅವಕಾಶ ನೀಡಲಾಯಿತು. ರಾಷ್ಟ್ರವು ಅವರ ಮೇಲೆ ತನ್ನ ಭವಿಷ್ಯವನ್ನು ಪಣಕ್ಕಿಟ್ಟಿತು. ಅವರು "ಗರೀಬಿ ಹಟಾವೋ"(ಬಡತನ ಹೋಗಲಾಡಿಸಿ) ಎಂಬ ಘೋಷಣೆಗಳನ್ನು ಎತ್ತಿದರು, ಆದರೆ ಜನರನ್ನು ದಾರಿ ತಪ್ಪಿಸಿದರು. ಪ್ರತಿಯೊಬ್ಬ ಕಾಂಗ್ರೆಸ್ ಪ್ರಧಾನಿಯೂ ಕೆಂಪುಕೋಟೆಯಿಂದ ಬಡತನ ಹೋಗಲಾಡಿಸುವ ಬಗ್ಗೆ ಮಾತನಾಡಿದರು, ಆದರೆ ಯಾವು ಸಹ ಎಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಅವರ ಘೋಷಣೆಗಳು ಖಾಲಿಯಾಗಿದ್ದವು. ಮೋದಿ ಬಡವರನ್ನು ಸಬಲೀಕರಣಗೊಳಿಸುವ ವಿಭಿನ್ನ ಮಾರ್ಗ ಆರಿಸಿಕೊಂಡರು. ನನ್ನ ದೇಶದ ಬಡವರಿಗೆ ನಾನು ನಮಸ್ಕರಿಸುತ್ತೇನೆ. ಅವರು ನಮ್ಮ ನೀತಿಗಳು ಮತ್ತು ಉದ್ದೇಶಗಳನ್ನು ನಂಬಿದ್ದರು, ತಮ್ಮನ್ನು ತಾವು ಬಲಪಡಿಸಿಕೊಳ್ಳಲು ಅವಿಶ್ರಾಂತವಾಗಿ ಶ್ರಮಿಸಿದರು. 25 ಕೋಟಿ ಬಡ ಕುಟುಂಬಗಳು ಬಡತನವನ್ನು ಸೋಲಿಸಿ ಅದರಿಂದ ಹೊರಬಂದಿವೆ. ನಾನು ಅವರಿಗೆ ನಮಸ್ಕರಿಸುತ್ತೇನೆ. ಒಮ್ಮೆ ಹತಾಶರಾಗಿದ್ದ ಅವರು ಭರವಸೆಯ ಆಶಾಕಿರಣ ಕಂಡರು, ಮೇಲೇರಿದರು ಮತ್ತು ಈಗ ನಮ್ಮೊಂದಿಗೆ ಮೆರವಣಿಗೆ ನಡೆಸಿದರು.

ಸನ್ಮಾನ್ಯ ಸಭಾಪತಿಗಳೆ,

2014ರ ಮೊದಲು, ರೈಲ್ವೆ ಕ್ರಾಸಿಂಗ್ ‌ಗಳಲ್ಲಿ ನೂರಾರು ಜನರು ಸತ್ತರು. ಶಾಲಾ ಬಸ್‌ಗಳು ರೈಲುಗಳಿಗೆ ಡಿಕ್ಕಿ ಹೊಡೆದು ಡಜನ್ ಗಟ್ಟಲೆ ಮಕ್ಕಳು ಅಸುನೀಗಿದರು. ಮಾನವರಹಿತ ಕ್ರಾಸಿಂಗ್ ‌ಗಳನ್ನು ಗಮನಿಸದೆ ಹಾಗೇ ಬಿಡಲಾಯಿತು. ಕಾಂಗ್ರೆಸ್ ಇದನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ. ನಾವು ಎಲ್ಲಾ ಮಾನವರಹಿತ ಕ್ರಾಸಿಂಗ್ ‌ಗಳನ್ನು ತೆಗೆದುಹಾಕಿದ್ದೇವೆ, ಲೆಕ್ಕವಿಲ್ಲದಷ್ಟು ಜೀವಗಳನ್ನು ಉಳಿಸಿದ್ದೇವೆ. ಇದಕ್ಕಾಗಿ, ಅವರು ಮೋದಿ ಸಮಾಧಿ ಅಗೆಯಬೇಕೆಂದು ಬಯಸುತ್ತಾರೆ.

ಸನ್ಮಾನ್ಯ ಸಭಾಪತಿಗಳೆ,

2014ಕ್ಕಿಂತ ಮೊದಲು, 18,000 ಹಳ್ಳಿಗಳು ವಿದ್ಯುತ್ ನೋಡಿರಲಿಲ್ಲ. ಅವರಿಗೆ ತಂತಿ, ಬಲ್ಬ್ ಅಥವಾ ದೀಪ ಎಂದರೇನು ಎಂದು ತಿಳಿದಿರಲಿಲ್ಲ. 2014ರ ನಂತರ, ಜನರು ನಮ್ಮನ್ನು ನಂಬಿದಾಗ, ನಾವು ಆ 18,000 ಹಳ್ಳಿಗಳಿಗೆ ಬೆಳಕು ತಂದಿದ್ದೇವೆ. ಇದಕ್ಕಾಗಿಯೂ ಅವರು ಮೋದಿ ಸಮಾಧಿ ಅಗೆಯಲು ಬಯಸುತ್ತಾರೆ.

ಸನ್ಮಾನ್ಯ ಸಭಾಪತಿಗಳೆ,

ಸೈನಿಕರಿಗೆ ಮದ್ದುಗುಂಡುಗಳು, ಗುಂಡು ನಿರೋಧಕ ಜಾಕೆಟ್ ‌ಗಳು, ಹಿಮದ ಬೂಟುಗಳು ಸಹ ಇರಲಿಲ್ಲ ಎಂದು ಸುದ್ದಿಗಳು ಹರಿದಾಡುತ್ತಿದ್ದ ಕಾಲವಿತ್ತು. ನಮ್ಮ ಸೈನಿಕರಿಗೆ ನಾವು ಖಜಾನೆ ತೆರೆದಿದ್ದೇವೆ, ಅವರಿಗೆ ಬೇಕಾದುದನ್ನು ನೀಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಅವರು ಮೋದಿ ಸಮಾಧಿ ಅಗೆಯಲು ಬಯಸುತ್ತಾರೆ.

ಸನ್ಮಾನ್ಯ ಸಭಾಪತಿಗಳೆ,

ಒಮ್ಮೆ, ಉತ್ತರ ಪ್ರದೇಶದ ಪ್ರಸ್ತುತ ಮುಖ್ಯಮಂತ್ರಿ ಸದನದಲ್ಲಿ ಮೆದುಳಿನ ಉರಿಯೂತ(ಎನ್ ಸಿಪಿಲಿಟಿಸ್) ಕಾಯಿಲೆಯಿಂದ ಸಾಯುತ್ತಿರುವ ಮಕ್ಕಳ ಬಗ್ಗೆ ಮಾತನಾಡುತ್ತಾ ಅಳುತ್ತಿದ್ದರು. ಕಾಂಗ್ರೆಸ್ ಎಂದಿಗೂ ರಾಷ್ಟ್ರವನ್ನು ಕಾಯಿಲೆಯಿಂದ ಮುಕ್ತಗೊಳಿಸುವ ಬಗ್ಗೆ ಯೋಚಿಸಲಿಲ್ಲ.

ಸನ್ಮಾನ್ಯ ಸಭಾಪತಿಗಳೆ,

ಟ್ರಾಕೋಮಾ ಕಣ್ಣಿನ ಕಾಯಿಲೆಯು ಅನೇಕರನ್ನು ಕುರುಡರನ್ನಾಗಿ ಮಾಡಿತು. ವಿಜ್ಞಾನ ಮುಂದುವರೆದಿತ್ತು, ನಮ್ಮಿಂದ ಚಿಕಿತ್ಸೆ ಸಾಧ್ಯವಾಯಿತು, ಆದರೆ ಕಾಂಗ್ರೆಸ್ ಏನನ್ನೂ ಮಾಡಲಿಲ್ಲ. ನಾವು ರಾಷ್ಟ್ರವನ್ನು ಮೆದುಳಿನ ಉರಿಯೂತದಿಂದ ಮುಕ್ತಗೊಳಿಸಿದ್ದೇವೆ, ಕಣ್ಣುಗಳನ್ನು ಟ್ರಾಕೋಮಾದಿಂದ ರಕ್ಷಿಸಿದ್ದೇವೆ. ಈ ಯಶಸ್ಸುಗಳು, ಈ ಸೂಕ್ಷ್ಮತೆ, ಸಮಾಜಕ್ಕಾಗಿ ಬದುಕಿ ಸಾಯುವ ಪ್ರತಿಜ್ಞೆ - ಇದು ಅವರನ್ನು ತೊಂದರೆಗೊಳಿಸುತ್ತದೆ. ಆದ್ದರಿಂದ ಅವರು ಪ್ರಜಾಪ್ರಭುತ್ವ ಮತ್ತು ಪ್ರೀತಿಯ ಬಗ್ಗೆ ಮಾತನಾಡುವಂತೆ ನಟಿಸುತ್ತಾ "ಮೋದಿ, ನಿಮ್ಮ ಸಮಾಧಿ ಅಗೆಯುತ್ತೇವೆ" ಎಂದು ಜಪಿಸುತ್ತಾರೆ. ಸಾರ್ವಜನಿಕ ಜೀವನ ಹೀಗಿರಬೇಕಾ?

ಸನ್ಮಾನ್ಯ ಸಭಾಪತಿಗಳೆ,

ಅವರ ಸರ್ಕಾರವನ್ನು ರಿಮೋಟ್ ಕಂಟ್ರೋಲ್ ಮೂಲಕ ನಡೆಸಲಾಗುತ್ತಿತ್ತು. ನನ್ನ ಸರ್ಕಾರವೂ ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತದೆ - ಆದರೆ ನನ್ನ ರಿಮೋಟ್ 1.4 ಶತಕೋಟಿ ಭಾರತೀಯರಾಗಿದ್ದಾರೆ. ಅವರ ಕನಸುಗಳು, ಅವರ ಆಕಾಂಕ್ಷೆಗಳು, ಅವರ ಸಂಕಲ್ಪ ನಮಗೆ ಮಾರ್ಗದರ್ಶನ ನೀಡುತ್ತದೆ. ನಮಗೆ ಅಧಿಕಾರವು ಸಂತೋಷದ ಮಾರ್ಗವಲ್ಲ, ಆದರೆ ಸೇವೆಯ ಮಾಧ್ಯಮ. ಮುದ್ರಾ ಮೂಲಕ ಕೋಟ್ಯಂತರ ಜನರು ಸ್ವ-ಉದ್ಯೋಗಕ್ಕಾಗಿ ಬೆಂಬಲ ಪಡೆದರು. ಕಾಂಗ್ರೆಸ್ ಎಂದಿಗೂ ಸ್ಟಾರ್ಟಪ್ ಸಂಸ್ಕೃತಿ ಉತ್ತೇಜಿಸಲಿಲ್ಲ. ಅವರಿಗೆ ಕೆಲವು 100 ಸ್ಟಾರ್ಟಪ್ ‌ಗಳ ಬಗ್ಗೆ ತಿಳಿದಿರಲಿಲ್ಲ. ಅವರು ತಮ್ಮ ಸ್ವಂತ ಕುಟುಂಬದ ಸ್ಟಾರ್ಟಪ್ ಅನ್ನು ಸಹ ಬೆಂಬಲಿಸಲು ಸಾಧ್ಯವಾಗಲಿಲ್ಲ. ಇಂದು ನಮ್ಮ ಸರ್ಕಾರದ ಅಡಿ, 200,000ಕ್ಕೂ ಹೆಚ್ಚು ಸ್ಟಾರ್ಟಪ್ ‌ಗಳಿವೆ. ಯಶಸ್ಸಿನ ನಂತರ ಯಶಸ್ಸು ಜನರ ಹೃದಯಗಳನ್ನು ಗೆಲ್ಲುತ್ತದೆ, ಕಾಂಗ್ರೆಸ್ "ಮೋದಿ, ನಿಮ್ಮ ಸಮಾಧಿ ಅಗೆಯುತ್ತೇವೆ" ಎಂದು ಜಪಿಸುವ ಒಂದೇ ಒಂದು ಮಾರ್ಗ ನೋಡುತ್ತಿದೆ. ಬಿಎಸ್ಎನ್ಎಲ್ ಒಂದು ಜೋಕ್, ವ್ಯಂಗ್ಯಚಿತ್ರಗಳ ವಿಷಯವಾಗಿದ್ದ ದಿನಗಳನ್ನು ನೆನಪಿಡಿ. ಇಂದು ನಾವು ಸ್ಥಳೀಯ 4ಜಿ ತಂತ್ರಜ್ಞಾನ ಸ್ಟ್ಯಾಕ್ ನಿರ್ಮಿಸಿದ್ದೇವೆ. ನಾವು ಜಗತ್ತಿನ ಯಾವುದೇ ದೇಶಕ್ಕಿಂತ ವೇಗವಾಗಿ 5ಜಿ ಜಾರಿಗೆ ತಂದಿದ್ದೇವೆ. ಹೊಸ ತಂತ್ರಜ್ಞಾನ ಮತ್ತು ಹೊಸ ಚಿಂತನೆಯೊಂದಿಗೆ ನಾವು ಸಂವಹನ ಮುಂದುವರೆಸಿದ್ದೇವೆ. ಆದ್ದರಿಂದ, ಅವರ ನೋವು ಪದಗಳಲ್ಲಿ ವ್ಯಕ್ತವಾಗುತ್ತದೆ: "ಮೋದಿ, ನಿಮ್ಮ ಸಮಾಧಿ ಅಗೆಯುತ್ತೇವೆ" ಎಂದು.

ಸನ್ಮಾನ್ಯ ಸಭಾಪತಿಗಳೆ,

ಬಡವರಿಗೆ ಸೇವೆ ಸಲ್ಲಿಸುವುದು ನನ್ನ ದೊಡ್ಡ ಸೌಭಾಗ್ಯ. 40 ದಶಲಕ್ಷ ಬಡ ಕುಟುಂಬಗಳಿಗೆ ಕಾಯಂ ಮನೆಗಳನ್ನು ಒದಗಿಸುವುದು ನನಗೆ ಜೀವನದಲ್ಲಿ ಶಾಂತಿ ನೀಡುತ್ತದೆ. ವಿದ್ಯುತ್, ನೀರು, ಗ್ಯಾಸ್ ಸಿಲಿಂಡರ್ ‌ಗಳು, ಶೌಚಾಲಯಗಳು - ಇವು ದೇವರು ನನಗೆ ನೀಡಲು ಪ್ರೇರೇಪಿಸಿದ್ದಾನೆಂದು ನಾನು ಭಾವಿಸುತ್ತೇನೆ. ಮೊದಲ ಬಾರಿಗೆ, ಹಳ್ಳಿಯ ಮಹಿಳೆಯರು ಹೆಮ್ಮೆಯಿಂದ ಹೇಳುತ್ತಾರೆ, "ಹೌದು, ನಾನು ಲಕ್ಷಪತಿ ದೀದಿಯಾಗಿದ್ದೇನೆ." ಇತರರು ಹೇಳುತ್ತಾರೆ - "ಈ ವರ್ಷದ ಹೊತ್ತಿಗೆ, ನಾನು ಕೂಡ ಒಂದಾಗುತ್ತೇನೆ." ಈಗಾಗಲೇ ಲಕ್ಷಪತಿ ದೀದಿಯಾಗಿರುವವರು ಈಗ, "ಇಲ್ಲ ಸರ್, ಈಗ ನಾವು ಕೋಟ್ಯಾಧಿಪತಿ ಆಗುವ ಬಗ್ಗೆ ಯೋಚಿಸುತ್ತಿದ್ದೇವೆ" ಎಂದು ಹೇಳುತ್ತಾರೆ. ಮನಸ್ಥಿತಿಯಲ್ಲಿನ ಬದಲಾವಣೆ, ಆತ್ಮವಿಶ್ವಾಸದ ಏರಿಕೆ - ಲಕ್ಷಾಂತರ ನಾಗರಿಕರಿಂದ ಅಂತಹ ಆಶೀರ್ವಾದಗಳು ಮತ್ತು ಲಕ್ಷಾಂತರ ತಾಯಂದಿರು ಮತ್ತು ಸಹೋದರಿಯರ ರಕ್ಷಣಾತ್ಮಕ ಗುರಾಣಿ ಒಬ್ಬ ವ್ಯಕ್ತಿಯನ್ನು ಸುತ್ತುವರೆದಾಗ, ಎಷ್ಟೇ ಘೋಷಣೆಗಳನ್ನು ಎತ್ತಿದರೂ, ಯಾವುದೇ ಸಮಾಧಿ ಅಗೆಯಲು ಸಾಧ್ಯವಿಲ್ಲ. ಯಾರೂ ಕಾಳಜಿ ವಹಿಸದ, ಆದರೆ ಮೋದಿ ಗೌರವಿಸುವ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಯಾವ ಭಕ್ತಿಯಿಂದ ಸೇವೆ ಸಲ್ಲಿಸಿದ್ದೇನೆ ಎಂಬುದು ಅವರ ಆಶೀರ್ವಾದಕ್ಕೆ ಕಾರಣವಾಗಿದೆ. ಈ ಆಶೀರ್ವಾದಗಳೇ ನನ್ನ ವಿರೋಧಿಗಳಿಗೆ ತೊಂದರೆ ಕೊಡುತ್ತಿವೆ, ಅದಕ್ಕಾಗಿಯೇ ಅವರು ಸಮಾಧಿ ಅಗೆಯುವ ಬಗ್ಗೆ ಮಾತನಾಡುತ್ತಿದ್ದಾರೆ.

ಸನ್ಮಾನ್ಯ ಸಭಾಪತಿಗಳೆ,

ಕೆಲವರಿಗೆ ಕಳ್ಳತನವು ಆನುವಂಶಿಕ ವ್ಯಾಪಾರವಾಗಿದೆ. ಅವರು ಗುಜರಾತಿ-ಮಹಾತ್ಮ ಗಾಂಧಿ ಅವರ ಉಪನಾಮವನ್ನೂ ಕದ್ದಿದ್ದಾರೆ. ಆದರೆ ದೇಶದ ಜನರು ಬುದ್ಧಿವಂತರು, ಅಂತಹ ವಂಚನೆಗೆ ಹೇಗೆ ಬಲವಾದ ಹೊಡೆತ ನೀಡಬೇಕೆಂದು ಅವರಿಗೆ ತಿಳಿದಿದೆ.

ಸನ್ಮಾನ್ಯ ಸಭಾಪತಿಗಳೆ,

ನಾವು ಅಭಿವೃದ್ಧಿ ಹೊಂದಿದ ಭಾರತದ ಕನಸಿನೊಂದಿಗೆ ಹೊರಟಿದ್ದೇವೆ. ಇಂದು ಆ ಕನಸು ಜನರ ಶಕ್ತಿಯಿಂದ ನಡೆಸಲ್ಪಡುವ ರಾಷ್ಟ್ರೀಯ ಸಂಕಲ್ಪವಾಗಿದೆ. ನೀವು ಹೋದಲ್ಲೆಲ್ಲಾ ಜನರು ಹೇಳುತ್ತಾರೆ: "2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಬೇಕು." ಆದರೆ ಸದನದ ಕೆಲವು ಸಹೋದ್ಯೋಗಿಗಳು ತುಂಬಾ ನಿರಾಶಾವಾದಿಗಳು, ವಾಸ್ತವದಿಂದ ಸಂಪರ್ಕ ಕಡಿತಗೊಂಡವರು, ಬದಲಾಗುತ್ತಿರುವ ಪ್ರಪಂಚದ ಬಗ್ಗೆ ತಿಳಿದಿಲ್ಲದಿರುವುದು ನನಗೆ ಆಶ್ಚರ್ಯ ತಂದಿದೆ. ಅವರು ಕೇಳುತ್ತಾರೆ, "ಮೋದಿ 2047ರ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ? 2047 ಅನ್ನು ಯಾರು ನೋಡಿದ್ದಾರೆ?" ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಗಲ್ಲು ಶಿಕ್ಷೆಗೆ ಏರಿದ, ಗುಂಡುಗಳು, ಲಾಠಿಗಳನ್ನು ಮತ್ತು ಅಂಡಮಾನ್ ‌ನಲ್ಲಿ ಸೆಲ್ಯುಲಾರ್ ಜೈಲಿನ ಭಯಾನಕತೆ ಸಹಿಸಿಕೊಂಡ ಯುವಕರು ಮತ್ತು ಮಹಿಳೆಯರು ಎಂದಾದರೂ ಯೋಚಿಸಿದ್ದಾರೆಯೇ, "ನನ್ನ ಜೀವಿತಾವಧಿಯಲ್ಲಿ ಸ್ವಾತಂತ್ರ್ಯ ಬರುವುದಿಲ್ಲ, ಹಾಗಾದರೆ ನಾನು ಏಕೆ ಹೋರಾಡಬೇಕು?" ಎಂದು ಅವರು ಭಾವಿಸಿದ್ದರೆ, ಭಾರತ ಎಂದಾದರೂ ಸ್ವತಂತ್ರವಾಗಿರುತ್ತಿತ್ತೆ? ನಾನು ಡಿಜಿಟಲ್ ಇಂಡಿಯಾ, ಹಣಕಾಸು ತಂತ್ರಜ್ಞಾನ, ಯುಪಿಐ ಬಗ್ಗೆ ಮಾತನಾಡಿದಾಗ ನಿರಾಶಾವಾದಿಗಳು ಒಮ್ಮೆ ನನ್ನನ್ನು ಅಪಹಾಸ್ಯ ಮಾಡಿದರು. ಅವರು ಹೇಳಿದರು, "ಬಡವನು ಮೊಬೈಲ್ ಫೋನ್ ‌ನಲ್ಲಿ ಹಣವನ್ನು ಹೇಗೆ ವಹಿವಾಟು ಮಾಡುತ್ತಾನೆ?" 3 ವರ್ಷಗಳಲ್ಲಿ ರಾಷ್ಟ್ರವು ಅದನ್ನು ಸಾಧ್ಯ ಎಂದು ಸಾಬೀತುಪಡಿಸಿತು. ಸಂಸತ್ತಿನಲ್ಲಿ ಅಂತಹ ಭಾಷಣ ಮಾಡಿದ ದಿನ ನನಗೆ ನೆನಪಿದೆ, ಅವರ ಪರಿಸರ ವ್ಯವಸ್ಥೆಯು "ಮೋದಿಗೆ ಬಲವಾದ ಉತ್ತರ ನೀಡಲಾಗಿದೆ" ಎಂದು ಆಚರಿಸಿತು. ಆದರೆ ಮೋದಿ ಉತ್ತರಿಸಲಿಲ್ಲ - ನಿಮ್ಮ ಕೈಯಲ್ಲಿರುವ ಮೊಬೈಲ್ ಫೋನ್, ಯುಪಿಐ ಮೂಲಕ ಕಾರ್ಯ ನಿರ್ವಹಿಸುತ್ತಾ, ಉತ್ತರ ನೀಡಿತು.

ಸನ್ಮಾನ್ಯ ಸಭಾಪತಿಗಳೆ,

ಕಾಂಗ್ರೆಸ್ ಕಾಲದಲ್ಲಿ, ಒಂದು ಸಾಮಾನ್ಯ ನುಡಿಗಟ್ಟು ಜನಪ್ರಿಯವಾಯಿತು - ಗಂಭೀರ ಚರ್ಚೆಗಳಲ್ಲಿಯೂ ಸಹ, ಹಾಸ್ಯಗಳಲ್ಲಿಯೂ ಸಹ. ಭಾರತ ಬಸ್ ತಪ್ಪಿಸಿಕೊಂಡಿತು. ಅದು ಕ್ಲೀಷೆಯಾಯಿತು. ಅವಕಾಶಗಳು ಕಳೆದುಹೋದವು, ಅವಕಾಶಗಳು ಹೋದವು - ಭಾರತ ಬಸ್ ತಪ್ಪಿಸಿಕೊಂಡಿತು.

ಸನ್ಮಾನ್ಯ ಸಭಾಪತಿಗಳೆ,

ಇಂದು ಭಾರತವು ಯಾವುದೇ ಬಸ್ ಕಳೆದುಕೊಳ್ಳುತ್ತಿಲ್ಲ. ಇಂದು ಭಾರತವು ಬೆಂಗಾವಲು ಪಡೆಯನ್ನು ಮುನ್ನಡೆಸುತ್ತಿದೆ.

ಸನ್ಮಾನ್ಯ ಸಭಾಪತಿಗಳೆ,

ರಾಷ್ಟ್ರಕ್ಕೆ ಉಜ್ವಲ ಭವಿಷ್ಯ ನಿರ್ಮಿಸಲು, ವರ್ತಮಾನ ಬೆಳಗಿಸಲು ನಾವು ಅವಿಶ್ರಾಂತವಾಗಿ ಕೆಲಸ ಮಾಡಬೇಕು. ಅಭಿವೃದ್ಧಿ ಹೊಂದಿದ ಭಾರತದತ್ತ ಹಾರಾಟ ನಡೆಸಲು ನಾವು 5 ವರ್ಷಗಳ ಯೋಜನೆಗಳನ್ನು ರೂಪಿಸುತ್ತೇವೆ ಮತ್ತು ವಾರ್ಷಿಕ ಬಜೆಟ್ ‌ಗಳು ಅದೇ ಹಾದಿಯಲ್ಲಿ ಉಳಿಯುತ್ತವೆ. ನಮ್ಮ ಗುರಿ ಮುಂದಿನ ಚುನಾವಣೆಯಲ್ಲ - ಇದು 2047, ಅಭಿವೃದ್ಧಿ ಹೊಂದಿದ ಭಾರತ. ಚುನಾವಣೆಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ನನ್ನ ರಾಷ್ಟ್ರ ಶಾಶ್ವತ. ಸಮೃದ್ಧ ಭಾರತವನ್ನು ಯುವಕರಿಗೆ ಹಸ್ತಾಂತರಿಸುವುದು ನಮ್ಮ ಕನಸಾಗಿದೆ. ಇಂದು ನಾನು ಮನೆಗಳಲ್ಲಿ ಮಕ್ಕಳನ್ನು ನೋಡಿದಾಗ, ನನಗೆ ಅನಿಸುತ್ತದೆ. ನನ್ನ ಕೆಲಸದಲ್ಲಿ ತೃಪ್ತಿ ಅನುಭವಿಸಲು ಅವರಿಗೆ ಬಲವಾದ ರಾಷ್ಟ್ರವನ್ನು ಬಿಡಬೇಕು. ಅದಕ್ಕಾಗಿಯೇ ನಾವು 2047ರ ಬಗ್ಗೆ ಮಾತನಾಡುತ್ತೇವೆ.

ಸನ್ಮಾನ್ಯ ಸಭಾಪತಿಗಳೆ,

ನಾವು ಕೈಗೊಂಡಿರುವ ಉಪಕ್ರಮಗಳನ್ನು ನೋಡಿ - ಬಾಹ್ಯಾಕಾಶ, ವಿಜ್ಞಾನ, ತಂತ್ರಜ್ಞಾನ, ಸಾಗರಗಳ ಆಳ, ಭೂಮಿ, ಆಕಾಶ ಮತ್ತು ಬಾಹ್ಯಾಕಾಶದಲ್ಲಿ. ಹೊಸ ಸಂಕಲ್ಪ, ಹೊಸ ಶಕ್ತಿ, ಹೊಸ ಹೆಜ್ಜೆಗಳು, ಹೊಸ ಸಾಧನೆಗಳು - ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಯುತ್ತಿದೆ. ನಾವು ಹಸಿರು ಹೈಡ್ರೋಜನ್ ಮೇಲೆ ಕೆಲಸ ಮಾಡುತ್ತಿದ್ದೇವೆ, ಭವಿಷ್ಯಕ್ಕಾಗಿ ತಯಾರಿ ನಡೆಸುತ್ತಿದ್ದೇವೆ. ನಾವು ಕ್ವಾಂಟಮ್ ಕಂಪ್ಯೂಟಿಂಗ್ ಬಗ್ಗೆ ಮಾತನಾಡುತ್ತಿದ್ದೇವೆ, ಎಐ ಮಿಷನ್ ಮುನ್ನಡೆಸುತ್ತಿದ್ದೇವೆ. ಇಂದು ಭಾರತವು ಎಐಗೆ ಹೆಚ್ಚಿನ ಕೊಡುಗೆ ನೀಡಬಹುದು ಎಂದು ಜಗತ್ತು ನಂಬುತ್ತದೆ. ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಭೂಮಿಗಳು ಭೌಗೋಳಿಕ ರಾಜಕೀಯ ಆಯುಧಗಳಾಗಿ ಮಾರ್ಪಟ್ಟಿವೆ, ನಾವು ಅವುಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ ಆದ್ದರಿಂದ ಭಾರತವು ಎಂದಿಗೂ ಯಾರಿಗೂ ತನ್ನ ಕೈ ಚಾಚಬೇಕಾಗಿಲ್ಲ.

ಸನ್ಮಾನ್ಯ ಸಭಾಪತಿಗಳೆ,

ವಿದೇಶಿ ಹೂಡಿಕೆ ಆಕರ್ಷಿಸುವ ಲೆಕ್ಕವಿಲ್ಲದಷ್ಟು ಯೋಜನೆಗಳಿವೆ, ಏಕೆಂದರೆ ಪ್ರತಿಯೊಬ್ಬರೂ ಈಗ ತಮ್ಮ ಭವಿಷ್ಯವನ್ನು ಭಾರತೀಯ ನೆಲದಲ್ಲಿ ನೋಡುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಭವಿಷ್ಯವನ್ನು ಭಾರತದ ಪ್ರತಿಭೆಯಿಂದ ಭದ್ರಪಡಿಸಿಕೊಳ್ಳಲು ನೋಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಸ್ವಂತ ಉಜ್ವಲ ಭವಿಷ್ಯವನ್ನು ಭಾರತದ ಉಜ್ವಲ ಭವಿಷ್ಯದೊಂದಿಗೆ ಜೋಡಿಸಲು ನೋಡುತ್ತಾರೆ. ಅದಕ್ಕಾಗಿಯೇ ನಾವು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಏಕೆ ಮಾತನಾಡುತ್ತೇವೆ ಎಂಬುದನ್ನು ಜಗತ್ತು ಅರ್ಥ ಮಾಡಿಕೊಳ್ಳುತ್ತದೆ. ಅದನ್ನು ಗ್ರಹಿಸಲು ಸಾಧ್ಯವಾಗದವರು ತಿಳಿದುಕೊಳ್ಳಬೇಕು - ಭಾರತ ಸರಿಯಾದ ಮಾರ್ಗ ಆರಿಸಿಕೊಂಡಿದೆ ಎಂದು ಜಗತ್ತು ನೋಡುತ್ತಿದೆ. ಒಂದು ಕಾಲದಲ್ಲಿ, "ಭಾರತ ಬಸ್ ತಪ್ಪಿಸಿಕೊಂಡಿತು" ಎಂಬ ನುಡಿಗಟ್ಟು ಇತ್ತು. ಇಂದು, ಭಾರತದ ಪ್ರಯಾಣ ತಡವಾಗುತ್ತದಾ ಎಂಬ ಬಗ್ಗೆ ಇಡೀ ಜಗತ್ತು ಭಯಪಡುತ್ತಿದೆ. ರಾಷ್ಟ್ರಗಳು ಈಗ ನಮ್ಮೊಂದಿಗೆ ಸೇರಲು ಬಯಸುತ್ತಿವೆ.

ಸನ್ಮಾನ್ಯ ಸಭಾಪತಿಗಳೆ,

ಮುಂಬರುವ ಯುಗವು ಭಾರತಕ್ಕೆ, ನಮ್ಮ ಯುವಕರಿಗೆ, ನಮ್ಮ ಉಜ್ವಲ ಭವಿಷ್ಯಕ್ಕಾಗಿ ಅವಕಾಶಗಳಿಂದ ತುಂಬಿದೆ. ನಾನು ಸಾಧ್ಯತೆಗಳನ್ನು ಸ್ಪಷ್ಟವಾಗಿ ವಿವರಿಸಬಲ್ಲೆ, ನಾವು ದಿಕ್ಕಿನಲ್ಲಿ ನೀತಿಗಳನ್ನು ಮುನ್ನಡೆಸುತ್ತಿದ್ದೇವೆ. ನಾನು ನನ್ನ ನಾಗರಿಕರನ್ನು ಆಹ್ವಾನಿಸುತ್ತೇನೆ. ಈ ಸದನದ ಗೌರವಾನ್ವಿತ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿನ ಜನರಿಗೆ ಹೇಳುವಂತೆ ನಾನು ಒತ್ತಾಯಿಸುತ್ತೇನೆ. ಜಾಗತಿಕವಾಗಿ ಅವಕಾಶಗಳು ತೆರೆದುಕೊಂಡಾಗ, ನಾವು ಶ್ರೇಷ್ಠತೆಯನ್ನು ನೀಡಿದರೆ ಮಾತ್ರ ಅವು ಉಳಿಯುತ್ತವೆ. ನಾವು ಎಂದಿಗೂ ಗುಣಮಟ್ಟದ ಬಗ್ಗೆ ರಾಜಿ ಮಾಡಿಕೊಳ್ಳಬಾರದು. ಲಾಭಗಳು ಚಿಕ್ಕದಾಗಿದ್ದರೂ, ಗುಣಮಟ್ಟವು ಸರ್ವೋಚ್ಚವಾಗಿರಬೇಕು. ನಾವು ನಾವೀನ್ಯತೆ, ಸಂಶೋಧನೆ ಅಗತ್ಯವಿದ್ದರೆ ವಸ್ತುಗಳನ್ನು ಬದಲಾಯಿಸಬೇಕು - ಆದರೆ ಭಾರತವು ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಆಗ ಜಗತ್ತು ಮೇಡ್ ಇನ್ ಇಂಡಿಯಾ, ಮೇಡ್ ಇನ್ ಭಾರತ್ ಬಗ್ಗೆ ಮಾತ್ರ ಧ್ವನಿ ಎತ್ತುತ್ತದೆ.

ಸನ್ಮಾನ್ಯ ಸಭಾಪತಿಗಳೆ,

ನನ್ನ ಕಾಂಗ್ರೆಸ್ ಸ್ನೇಹಿತರಿಗೂ ನಾನು ಧನ್ಯವಾದ ಹೇಳುತ್ತೇನೆ. ಅವರು ಕಳೆದ ದಶಕದಲ್ಲಿ 5 ಅಥವಾ 6 ಬಾರಿ ಪ್ರಯತ್ನಿಸಿದ್ದರು, ನಾನು ಒಮ್ಮೆ ಪ್ರಾರಂಭಿಸಿದರೆ, ನಾನು ನಿಲ್ಲಿಸುವುದಿಲ್ಲ ಎಂದು ತಿಳಿದಿದ್ದರು, ಅವರು ನನ್ನನ್ನು ಮಾತನಾಡದಂತೆ ತಡೆದರು. ಪ್ರಯತ್ನಿಸುವುದರಲ್ಲಿ ಅರ್ಥವಿಲ್ಲ ಎಂದು ಅವರು ಈಗ ಅನುಭವದಿಂದ ಕಲಿತಿದ್ದಾರೆ. ಅಂತಹ ಬುದ್ಧಿವಂತಿಕೆ ಅವರ ಮೇಲೆ ಮೂಡುತ್ತಲೇ ಇರುತ್ತದೆ ಎಂದು ನಾನು ಭಾವಿಸುತ್ತೇನೆ.

ಸನ್ಮಾನ್ಯ ಸಭಾಪತಿಗಳೆ,

ಅಧ್ಯಕ್ಷರ ಭಾಷಣದ ಮೇಲಿನ ಚರ್ಚೆಗೆ ಕೊಡುಗೆ ನೀಡಿದ ಎಲ್ಲಾ ಸದಸ್ಯರಿಗೆ ನಾನು ಧನ್ಯವಾದ ಹೇಳುತ್ತೇನೆ. ಇಲ್ಲಿ ವ್ಯಕ್ತಪಡಿಸಿದ ಅಮೂಲ್ಯವಾದ ವಿಚಾರಗಳು ಖಂಡಿತವಾಗಿಯೂ ರಾಷ್ಟ್ರದ ಪ್ರಗತಿಗೆ ಸಹಾಯ ಮಾಡುತ್ತವೆ. ಈ ಸ್ಫೂರ್ತಿದಾಯಕ ಭಾಷಣಕ್ಕಾಗಿ ನಾನು ಗೌರವಾನ್ವಿತ ರಾಷ್ಟ್ರಪತಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಅದರೊಂದಿಗೆ, ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.

ಹೃತ್ಪೂರ್ವಕ ಧನ್ಯವಾದಗಳು!

 

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2224832) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Bengali , Assamese , Punjabi , Gujarati , Telugu