ಹಣಕಾಸು ಸಚಿವಾಲಯ
ಹಣಕಾಸು ವರ್ಷ 26ರಲ್ಲಿ ಬಳಕೆ ಮತ್ತು ಹೂಡಿಕೆಯ ಡಬಲ್ ಎಂಜಿನ್ ಗಳಿಂದ ಪ್ರೇರಿತವಾದ ಭಾರತದ ಜಿಡಿಪಿ (GDP) ಬೆಳವಣಿಗೆಯನ್ನು ಶೇ. 7.4 ರಷ್ಟು ಎಂದು ಅಂದಾಜಿಸಲಾಗಿದೆ
ಹಣಕಾಸು ವರ್ಷ 27ರ ನೈಜ ಜಿಡಿಪಿ ಬೆಳವಣಿಗೆಯು ಶೇ. 6.8-7.2 ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ
ಜಿಡಿಪಿಯಲ್ಲಿ ಅಂತಿಮ ಖಾಸಗಿ ಬಳಕೆ ವೆಚ್ಚದ ಪಾಲು ಹಣಕಾಸು ವರ್ಷ 26ರಲ್ಲಿ ಶೇ. 61.5ಕ್ಕೆ ಏರಿದೆ
ಹಣಕಾಸು ವರ್ಷ 26ರಲ್ಲಿ ಕೃಷಿ ಮತ್ತು ಪೂರಕ ವಲಯಗಳು ಶೇ. 3.1 ರಷ್ಟು ಬೆಳವಣಿಗೆಯಾಗುವ ಅಂದಾಜಿದೆ
ಕೈಗಾರಿಕಾ ವಲಯವು ಸದೃಢತೆಯ ಲಕ್ಷಣಗಳನ್ನು ತೋರಿಸುತ್ತಿದ್ದು, ಹಣಕಾಸು ವರ್ಷ 26ರ ಮೊದಲಾರ್ಧದಲ್ಲಿ ಉತ್ಪಾದನಾ ವಲಯವು ಶೇ. 8.4 ರಷ್ಟು ಬೆಳವಣಿಗೆಯನ್ನು ಕಂಡಿದೆ
ಹಣಕಾಸು ವರ್ಷ 26ರ ಮೊದಲಾರ್ಧದಲ್ಲಿ ಸೇವಾ ವಲಯದ ಒಟ್ಟು ಮೌಲ್ಯವರ್ಧನೆಯು ಶೇ. 9.3 ರಷ್ಟು ಹೆಚ್ಚಾಗಿದೆ
ಒಟ್ಟು ವಸೂಲಾಗದ ಸಾಲಗಳ (GNPA) ಅನುಪಾತವು ಹಲವು ದಶಕಗಳಲ್ಲೇ ಕನಿಷ್ಠ ಮಟ್ಟವಾದ ಶೇ. 2.2 ಕ್ಕೆ ಇಳಿದಿದೆ
ಭಾರತದ ಒಟ್ಟು ರಫ್ತು (ಸರಕು ಮತ್ತು ಸೇವೆಗಳು) ಹಣಕಾಸು ವರ್ಷ 25 ರಲ್ಲಿ ದಾಖಲೆಯ 825.3 ಶತಕೋಟಿ ಯುಎಸ್ ಡಾಲರ್ ತಲುಪಿದೆ
ಮೂರು ವರ್ಷಗಳ ಮಾತುಕತೆಯ ನಂತರ ಭಾರತವು ಯುರೋಪಿಯನ್ ಯೂನಿಯನ್ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಯಶಸ್ವಿಯಾಗಿ ಪೂರ್ಣಗೊಳಿಸಿದೆ
प्रविष्टि तिथि:
29 JAN 2026 2:19PM by PIB Bengaluru
ಬಳಕೆ ಮತ್ತು ಹೂಡಿಕೆಯ ಡಬಲ್ ಎಂಜಿನ್ ಗಳಿಂದ ಪ್ರೇರಿತವಾದ ಹಣಕಾಸು ವರ್ಷ 26ರಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆಯು ಶೇ. 7.4 ರಷ್ಟು ಎಂದು ಅಂದಾಜಿಸಲಾಗಿದೆ. ಇದು ಸತತ ನಾಲ್ಕನೇ ವರ್ಷವೂ ಭಾರತವು ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂಬ ಸ್ಥಾನವನ್ನು ಪುನರುಚ್ಚರಿಸುತ್ತದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ 2025-26ರ ಪ್ರಮುಖ ಮುಖ್ಯಾಂಶವಿದು.
ಹಣಕಾಸು ವರ್ಷ 27ರಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇ. 6.8-7.2 ರಷ್ಟಿರಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ, ಹಾಗೂ ಭಾರತದ ಸಂಭಾವ್ಯ ಬೆಳವಣಿಗೆಯ ದರವು ಸುಮಾರು ಶೇ. 7 ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.
ಹಣಕಾಸು ವರ್ಷ 26ರಲ್ಲಿ ಆಂತರಿಕ ಬೇಡಿಕೆಯು ಆರ್ಥಿಕ ಬೆಳವಣಿಗೆಗೆ ಬೆಂಬಲವಾಗಿ ಮುಂದುವರಿದಿದೆ ಎಂದು ಸಮೀಕ್ಷೆಯು ಬೆಟ್ಟು ಮಾಡಿದೆ. ಮೊದಲ ಮುಂಗಡ ಅಂದಾಜಿನ ಪ್ರಕಾರ, ಜಿಡಿಪಿಯಲ್ಲಿ ಅಂತಿಮ ಖಾಸಗಿ ಬಳಕೆ ವೆಚ್ಚದ (PFCE) ಪಾಲು ಹಣಕಾಸು ವರ್ಷ 26ರಲ್ಲಿ ಶೇ. 61.5 ಕ್ಕೆ ಏರಿದೆ. ಬಳಕೆಯಲ್ಲಿನ ಈ ಸಾಮರ್ಥ್ಯವು ಕಡಿಮೆ ಹಣದುಬ್ಬರ, ಸ್ಥಿರ ಉದ್ಯೋಗ ಪರಿಸ್ಥಿತಿಗಳು ಮತ್ತು ಹೆಚ್ಚುತ್ತಿರುವ ನೈಜ ಖರೀದಿ ಸಾಮರ್ಥ್ಯದಿಂದ ಕೂಡಿದ ಪೂರಕ ಸ್ಥೂಲ ಆರ್ಥಿಕ ಪರಿಸರವನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲದೆ, ಪ್ರಬಲ ಕೃಷಿ ಪ್ರದರ್ಶನದಿಂದಾಗಿ ಗ್ರಾಮೀಣ ಬಳಕೆಯು ಸ್ಥಿರವಾಗಿದ್ದು, ನೇರ ಮತ್ತು ಪರೋಕ್ಷ ತೆರಿಗೆಗಳ ವೈಚಾರಿಕೀಕರಣದಿಂದ ನಗರ ಪ್ರದೇಶದ ಬಳಕೆಯು ಕ್ರಮೇಣ ಸುಧಾರಿಸುತ್ತಿದೆ. ಇದು ಬಳಕೆಯ ಬೇಡಿಕೆಯು ಆರ್ಥಿಕತೆಯ ಎಲ್ಲಾ ವಲಯಗಳಲ್ಲಿ ವ್ಯಾಪಕವಾಗಿದೆ ಎಂಬುದನ್ನು ದೃಢಪಡಿಸುತ್ತದೆ.
ಬಳಕೆಯ ಜೊತೆಗೆ, ಹೂಡಿಕೆಯು ಕೂಡ ಹಣಕಾಸು ವರ್ಷ 26ರ ಬೆಳವಣಿಗೆಗೆ ಪ್ರಮುಖ ಆಧಾರವಾಗಿ ಮುಂದುವರಿದಿದ್ದು, ಒಟ್ಟು ಸ್ಥಿರ ಬಂಡವಾಳ ರಚನೆಯ (GFCF) ಪಾಲು ಶೇ. 30.0 ರಷ್ಟಿದೆ ಎಂದು ಅಂದಾಜಿಸಲಾಗಿದೆ. ವರ್ಷದ ಮೊದಲಾರ್ಧದಲ್ಲಿ ಹೂಡಿಕೆ ಚಟುವಟಿಕೆಯು ಬಲಗೊಂಡಿದ್ದು, GFCF ಶೇ. 7.6 ರಷ್ಟು ವಿಸ್ತರಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾದ ವೇಗವನ್ನು ಮೀರಿಸಿದೆ ಮತ್ತು ಕೋವಿಡ್ ಪೂರ್ವದ ಸರಾಸರಿ ಶೇ. 7.1 ಕ್ಕಿಂತಲೂ ಮೇಲಿದೆ.

ಹಣಕಾಸು ವರ್ಷ 26ರಲ್ಲಿ ಕೃಷಿ ಮತ್ತು ಪೂರಕ ವಲಯಗಳು ಶೇ. 3.1 ರಷ್ಟು ಬೆಳವಣಿಗೆಯಾಗುವ ಅಂದಾಜಿದೆ ಎಂದು ಸಮೀಕ್ಷೆಯು ಮುಖ್ಯಾಂಶವಾಗಿ ತಿಳಿಸಿದೆ. ಹಣಕಾಸು ವರ್ಷ 26ರ ಮೊದಲಾರ್ಧದಲ್ಲಿ ಅನುಕೂಲಕರ ಮುಂಗಾರು ಮಳೆಯು ಕೃಷಿ ಚಟುವಟಿಕೆಗಳಿಗೆ ಬೆಂಬಲ ನೀಡಿದೆ. ಕೃಷಿ ಜಿವಿಎ (GVA) ಶೇ. 3.6 ರಷ್ಟು ಬೆಳವಣಿಗೆ ಕಂಡಿದ್ದು, ಇದು ಹಣಕಾಸು ವರ್ಷ 25ರ ಮೊದಲಾರ್ಧದಲ್ಲಿ ದಾಖಲಾಗಿದ್ದ ಶೇ. 2.7 ಕ್ಕಿಂತ ಹೆಚ್ಚಾಗಿದೆ. ಆದಾಗ್ಯೂ, ಇದು ಶೇ. 4.5 ರ ದೀರ್ಘಕಾಲೀನ ಸರಾಸರಿಗಿಂತ ಕಡಿಮೆ ಮಟ್ಟದಲ್ಲಿದೆ. ಪೂರಕ ಚಟುವಟಿಕೆಗಳು, ಅದರಲ್ಲೂ ಮುಖ್ಯವಾಗಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ವಲಯಗಳು ಶೇ. 5-6 ರಷ್ಟು ಸ್ಥಿರ ದರದಲ್ಲಿ ಬೆಳವಣಿಗೆ ಹೊಂದಿವೆ. ಕೃಷಿ ಜಿವಿಎನಲ್ಲಿ ಇವುಗಳ ಪಾಲು ಹೆಚ್ಚುತ್ತಿರುವುದರಿಂದ, ಒಟ್ಟು ಕೃಷಿ ಬೆಳವಣಿಗೆಯು ಈಗ ಅಸ್ಥಿರ ಬೆಳೆ ಪ್ರದರ್ಶನ ಮತ್ತು ಪೂರಕ ವಲಯಗಳ ಸ್ಥಿರ ವಿಸ್ತರಣೆಯ ಸಂಯೋಜಿತ ಫಲಿತಾಂಶವನ್ನು ಪ್ರತಿಬಿಂಬಿಸುತ್ತಿದೆ.
ಕೈಗಾರಿಕಾ ವಲಯವು ಸದೃಢತೆಯ ಲಕ್ಷಣಗಳನ್ನು ತೋರಿಸುತ್ತಿದೆ ಮತ್ತು ಹಣಕಾಸು ವರ್ಷ 26ರ ಮೊದಲಾರ್ಧದಲ್ಲಿ ಉತ್ಪಾದನಾ ವಲಯವು ಶೇ. 8.4 ರಷ್ಟು ಬೆಳವಣಿಗೆ ಕಾಣುವ ಮೂಲಕ ಆ ವರ್ಷದ ಶೇ. 7.0 ರ ಅಂದಾಜನ್ನು ಮೀರಿದೆ ಎಂದು ಆರ್ಥಿಕ ಸಮೀಕ್ಷೆಯು ಉಲ್ಲೇಖಿಸಿದೆ. ಇದಲ್ಲದೆ, ಸಾರ್ವಜನಿಕ ಬಂಡವಾಳ ವೆಚ್ಚದ ನಿರಂತರ ಬೆಂಬಲ ಮತ್ತು ಮೂಲಸೌಕರ್ಯ ಯೋಜನೆಗಳ ವೇಗದಿಂದಾಗಿ ನಿರ್ಮಾಣ ಕ್ಷೇತ್ರವು ಚೇತೋಹಾರಿ ಸ್ಥಿತಿಯಲ್ಲಿದೆ. ನೈಜ (ಸ್ಥಿರ) ಬೆಲೆಗಳ ಆಧಾರದ ಮೇಲೆ ಉತ್ಪಾದನಾ ವಲಯದ ಪಾಲು ಶೇ. 17-18 ರಷ್ಟು ಸ್ಥಿರವಾಗಿದೆ. ಉತ್ಪಾದನಾ ವಲಯದ ಒಟ್ಟು ಉತ್ಪಾದನಾ ಮೌಲ್ಯವು (GVO) ಸುಮಾರು ಶೇ. 38 ರಷ್ಟಿದ್ದು, ಇದು ಸೇವಾ ವಲಯಕ್ಕೆ ಸರಿಸಮಾನವಾಗಿದೆ ಮತ್ತು ಉತ್ಪಾದನೆಯು ಸುಸ್ಥಿರವಾಗಿರುವುದನ್ನು ಇದು ಸೂಚಿಸುತ್ತದೆ. ಅಷ್ಟೇ ಅಲ್ಲದೆ, ಹಣಕಾಸು ವರ್ಷ 26ರಲ್ಲಿ ಕೈಗಾರಿಕಾ ವಲಯವು ಶೇ. 6.2 ರಷ್ಟು ಬೆಳವಣಿಗೆಯನ್ನು ಸಾಧಿಸುವ ಮೂಲಕ ವೇಗವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ, ಇದು ಹಣಕಾಸು ವರ್ಷ 25ರ ಶೇ. 5.9 ಕ್ಕಿಂತ ಹೆಚ್ಚಾಗಿದೆ. ಹಣಕಾಸು ವರ್ಷ 26ರ ಮೂರನೇ ತ್ರೈಮಾಸಿಕದ ಹೈ-ಫ್ರೀಕ್ವೆನ್ಸಿ ಸೂಚಕಗಳಾದ ಪಿಎಂಐ (PMI) ಉತ್ಪಾದನೆ, ಐಐಪಿ (IIP) ಉತ್ಪಾದನೆ ಮತ್ತು ಇ-ವೇ ಬಿಲ್ ಜನರೇಟ್ ಆಗಿರುವುದು ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ ಉತ್ಪಾದನಾ ಚಟುವಟಿಕೆಗಳು ಮತ್ತಷ್ಟು ಬಲಗೊಳ್ಳುತ್ತಿರುವುದನ್ನು ಸಂಕೇತಿಸುತ್ತಿವೆ. ಉಕ್ಕು ಬಳಕೆ ಮತ್ತು ಸಿಮೆಂಟ್ ಉತ್ಪಾದನೆಯಂತಹ ನಿರ್ಮಾಣ ಕ್ಷೇತ್ರದ ಸೂಚಕಗಳು ಕೂಡ ಸ್ಥಿರವಾದ ಬೆಳವಣಿಗೆಯನ್ನು ಕಂಡಿವೆ. ಮುಂದಿನ ದಿನಗಳಲ್ಲಿ ಜಿಎಸ್ಟಿ (GST) ವೈಚಾರಿಕೀಕರಣ ಮತ್ತು ಬೇಡಿಕೆಯ ಅನುಕೂಲಕರ ಮುನ್ಸೂಚನೆಯಿಂದಾಗಿ ಕೈಗಾರಿಕಾ ಚಟುವಟಿಕೆಗಳ ವೇಗವು ಮತ್ತಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ.
ಆರ್ಥಿಕ ಸಮೀಕ್ಷೆಯು ಪೂರೈಕೆಯ ದೃಷ್ಟಿಯಿಂದ ಸೇವಾ ವಲಯವು ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಿ ಮುಂದುವರಿದಿದೆ ಎಂದು ಹೈಲೈಟ್ ಮಾಡಿದೆ. 26ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ, ಸೇವಾ ವಲಯದ ಒಟ್ಟು ಮೌಲ್ಯವರ್ಧನೆ (GVA) ಶೇಕಡಾ 9.3 ರಷ್ಟು ಹೆಚ್ಚಾಗಿದೆ ಮತ್ತು ಇಡೀ ಹಣಕಾಸು ವರ್ಷಕ್ಕೆ ಶೇಕಡಾ 9.1 ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಈ ಪ್ರವೃತ್ತಿಯು ಈ ವಲಯದಾದ್ಯಂತ ವ್ಯಾಪಕವಾದ ವಿಸ್ತರಣೆಯನ್ನು ಸೂಚಿಸುತ್ತದೆ. ಸೇವಾ ವಲಯದೊಳಗೆ, ಕೋವಿಡ್ನಿಂದ ಹೆಚ್ಚು ಬಾಧಿತವಾಗಿದ್ದ 'ವ್ಯಾಪಾರ, ಹೋಟೆಲ್ ಉದ್ಯಮ (hospitality), ಸಾರಿಗೆ, ಸಂವಹನ ಮತ್ತು ಸಂಬಂಧಿತ ಸೇವೆಗಳನ್ನು' ಹೊರತುಪಡಿಸಿ ಉಳಿದೆಲ್ಲಾ ಉಪ-ವಿಭಾಗಗಳು ಶೇಕಡಾ 9 ಕ್ಕಿಂತ ಹೆಚ್ಚು ಬೆಳೆದಿವೆ. ಈ ನಿರ್ದಿಷ್ಟ ವಿಭಾಗವು ಸಾಂಕ್ರಾಮಿಕ ಪೂರ್ವದ ಸರಾಸರಿಗಿಂತ ಇನ್ನು ಕೇವಲ 50 ಬೇಸಿಸ್ ಪಾಯಿಂಟ್ ಗಳಷ್ಟು ಹಿಂದಿದೆ.
ಆರ್ಥಿಕ ಸಮೀಕ್ಷೆಯು ಉಲ್ಲೇಖಿಸಿರುವಂತೆ, ಆರ್ಥಿಕತೆಯಲ್ಲಿನ ಬೇಡಿಕೆ ಆಧಾರಿತ ಬೆಳವಣಿಗೆಯು ಹಣದುಬ್ಬರದ ಗಣನೀಯ ಇಳಿಕೆಯೊಂದಿಗೆ ತೆರೆದುಕೊಂಡಿದೆ, ಇದು ನೈಜ ಖರೀದಿ ಸಾಮರ್ಥ್ಯವನ್ನು ಸುಧಾರಿಸಿದೆ ಮತ್ತು ಬಳಕೆಗೆ ಬೆಂಬಲ ನೀಡಿದೆ. ಹಣಕಾಸು ವರ್ಷ 26 ರ (ಏಪ್ರಿಲ್-ಡಿಸೆಂಬರ್) ದೇಶೀಯ ಹಣದುಬ್ಬರದ ಚಲನಶೀಲತೆಯು ಬೆಲೆ ಏರಿಕೆಯ ಒತ್ತಡದಲ್ಲಿ ವ್ಯಾಪಕವಾದ ಇಳಿಕೆಯನ್ನು ಪ್ರತಿಬಿಂಬಿಸುತ್ತದೆ, ಇದು ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆಗಳ ಇಳಿಕೆಯಿಂದ ಸಾಧ್ಯವಾಗಿದೆ. ಅನುಕೂಲಕರ ಕೃಷಿ ಪರಿಸ್ಥಿತಿಗಳು, ಪೂರೈಕೆ ವ್ಯವಸ್ಥೆಯ ಮಧ್ಯಸ್ಥಿಕೆಗಳು ಮತ್ತು ಬಲವಾದ ಬೇಸ್ ಎಫೆಕ್ಟ್ನಿಂದಾಗಿ ತರಕಾರಿ ಮತ್ತು ಬೇಳೆಕಾಲುಗಳ ಬೆಲೆಗಳಲ್ಲಿನ ಸುಧಾರಣೆಯ ಫಲವಾಗಿ ಹೆಡ್ಲೈನ್ ಸಿಪಿಐ (CPI) ಹಣದುಬ್ಬರವು ಶೇಕಡಾ 1.7 ಕ್ಕೆ ಇಳಿದಿದೆ. ಮೋರ್ ಹಣದುಬ್ಬರವು (Core inflation) ಸ್ಥಿರತೆಯನ್ನು ಪ್ರದರ್ಶಿಸಿದ್ದರೂ, ಇದು ಹೆಚ್ಚಾಗಿ ಅಮೂಲ್ಯ ಲೋಹಗಳ ಬೆಲೆ ಏರಿಕೆಯಿಂದ ಪ್ರಭಾವಿತವಾಗಿದೆ; ಇವುಗಳನ್ನು ಸರಿಹೊಂದಿಸಿದ ನಂತರದ ಹಣದುಬ್ಬರದ ಒತ್ತಡವು ಗಮನಾರ್ಹವಾಗಿ ಮೃದುವಾಗಿ ಕಂಡುಬರುತ್ತದೆ, ಇದು ಬೇಡಿಕೆಯ ಕಡೆಯಿಂದ ಮಿತಿಮೀರಿದ ಏರಿಕೆಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ, ಅನುಕೂಲಕರ ಪೂರೈಕೆ ಪರಿಸ್ಥಿತಿಗಳು ಮತ್ತು ಜಿಎಸ್ಟಿ (GST) ದರಗಳ ತರ್ಕಬದ್ಧಗೊಳಿಸುವಿಕೆಯಿಂದಾಗಿ ಹಣದುಬ್ಬರದ ಮುನ್ನೋಟವು ಸಮಾಧಾನಕರವಾಗಿರಲಿದೆ.
ಹಣಕಾಸು ವರ್ಷ 26ರಲ್ಲಿ ಕಂಡುಬಂದ ಆಂತರಿಕ ಬೇಡಿಕೆ ಮತ್ತು ಬಂಡವಾಳ ರಚನೆಯ ವೇಗಕ್ಕೆ ವಿವೇಕಯುತ ವಿತ್ತೀಯ ನೀತಿ ತಂತ್ರವು ಆಧಾರವಾಗಿದೆ, ಇದು ಸ್ಥಿರವಾದ ಆದಾಯ ಸಂಗ್ರಹಣೆ ಮತ್ತು ವ್ಯವಸ್ಥಿತ ವೆಚ್ಚದ ವೈಚಾರಿಕೀಕರಣದ ಲಕ್ಷಣಗಳನ್ನು ಹೊಂದಿದೆ ಎಂದು ಸಮೀಕ್ಷೆಯು ತಿಳಿಸಿದೆ. ಈ ವರ್ಷದ ಒಟ್ಟು ತೆರಿಗೆ ಆದಾಯದ ಸಂಗ್ರಹಣೆಯು ಚೇತೋಹಾರಿ ಪ್ರಗತಿಯನ್ನು ಕಂಡಿದೆ, ನೇರ ತೆರಿಗೆ ಸಂಗ್ರಹವು ಬಜೆಟ್ ನ ವಾರ್ಷಿಕ ಗುರಿಯ ಸುಮಾರು ಶೇ. 53 ರಷ್ಟನ್ನು ತಲುಪಿದೆ (ನವೆಂಬರ್ 2025 ರವರೆಗೆ). ಕಡಿಮೆ ಹಣದುಬ್ಬರ ಮತ್ತು ಆಮದು ಅಸ್ಥಿರತೆಯ ಹೊರತಾಗಿಯೂ ಪರೋಕ್ಷ ತೆರಿಗೆ ಸಂಗ್ರಹವೂ ಸಹ ಸದೃಢವಾಗಿದ್ದು, ಈ ವರ್ಷದಲ್ಲಿ ಒಟ್ಟು ಜಿಎಸ್ಟಿ (GST) ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಹಲವು ಬಾರಿ ದಾಖಲಿಸಿದೆ. ವೈಯಕ್ತಿಕ ಆದಾಯ ತೆರಿಗೆಯ ಪುನರ್ರಚನೆ ಮತ್ತು ಜಿಎಸ್ಟಿ ದರದ ವೈಚಾರಿಕೀಕರಣ ಸೇರಿದಂತೆ ಇತ್ತೀಚಿನ ತೆರಿಗೆ ನೀತಿ ಸುಧಾರಣೆಗಳು, ಆದಾಯದ ಪ್ರಮಾಣವನ್ನು ಕಾಯ್ದುಕೊಳ್ಳುವ ಜೊತೆಗೆ ಬಳಕೆಯ ಬೇಡಿಕೆಯನ್ನು ಬೆಂಬಲಿಸಿವೆ. ವೆಚ್ಚದ ಕಡೆಯಿಂದ ನೋಡುವುದಾದರೆ, ಬಂಡವಾಳ ವೆಚ್ಚವು ಕಳೆದ ವರ್ಷಕ್ಕಿಂತ ಬಲವಾದ ಏರಿಕೆಯನ್ನು ದಾಖಲಿಸಿದೆ ಮತ್ತು ನವೆಂಬರ್ 2025 ರ ವೇಳೆಗೆ ಬಜೆಟ್ ಹಂಚಿಕೆಯ ಸುಮಾರು ಶೇ. 60 ರಷ್ಟನ್ನು ತಲುಪಿದೆ. ಅಷ್ಟೇ ಅಲ್ಲದೆ, ಕಂದಾಯ ವೆಚ್ಚದ ಬೆಳವಣಿಗೆಯು ನಿಯಂತ್ರಣದಲ್ಲಿದ್ದು, ಸಾರ್ವಜನಿಕ ವೆಚ್ಚದ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸಿದೆ.
ಸರ್ಕಾರದ ವಿತ್ತೀಯ ಶಿಸ್ತಿನ ಬದ್ಧತೆಯನ್ನು ಮಾರುಕಟ್ಟೆಗಳು ಗುರುತಿಸಿವೆ ಮತ್ತು ಕಡಿಮೆ ಸಾವರಿನ್ ಬಾಂಡ್ ಇಳುವರಿಗಳ (Sovereign bond yields) ಮೂಲಕ ಅದನ್ನು ಪುರಸ್ಕರಿಸಿವೆ. ಯು.ಎಸ್. ಬಾಂಡ್ಗಳ ಮೇಲಿನ ಇಳುವರಿ ವ್ಯತ್ಯಾಸವು ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಕಡಿಮೆ ರೆಪೊ ದರದ ಜೊತೆಗೆ, ಆರ್ಥಿಕತೆಯಾದ್ಯಂತ ಸಾಲದ ವೆಚ್ಚಗಳಿಗೆ ಮಾನದಂಡವಾಗಿರುವ ಈ ಇಳಿಯುತ್ತಿರುವ ಇಳುವರಿಗಳು ಸ್ವತಃ ಒಂದು ವಿತ್ತೀಯ ಉತ್ತೇಜನದಂತೆ ಕಾರ್ಯನಿರ್ವಹಿಸುತ್ತವೆ. ಕ್ರೆಡಿಟ್ ರೇಟಿಂಗ್ ಸಂಸ್ಥೆಯಾದ ಎಸ್ ಅಂಡ್ ಪಿ ರೇಟಿಂಗ್ಸ್ (S&P Ratings), ವಿತ್ತೀಯ ಹಾದಿಯ ವಿಶ್ವಾಸಾರ್ಹತೆ ಮತ್ತು ಬದ್ಧತೆಯನ್ನು ಗುರುತಿಸಿ ಭಾರತದ ರೇಟಿಂಗ್ ಅನ್ನು ‘BBB-’ ನಿಂದ ‘BBB’ ಗೆ ಏರಿಸಿದೆ. ಅದೇ ರೀತಿ, ಕೇರ್ ಎಡ್ಜ್ ಗ್ಲೋಬಲ್ (CareEdge Global) ಕೂಡ ಭಾರತದ ಸದೃಢ ಆರ್ಥಿಕ ಪ್ರದರ್ಶನ ಮತ್ತು ವಿತ್ತೀಯ ಶಿಸ್ತನ್ನು ಎತ್ತಿ ಹಿಡಿಯುತ್ತಾ ‘BBB+’ ರೇಟಿಂಗ್ ನೀಡಿದೆ.
ಹೆಚ್ಚಿನ ಸಾರ್ವಜನಿಕ ಬಂಡವಾಳ ವೆಚ್ಚ ಮತ್ತು ತೆರಿಗೆ ಕಡಿತಗಳ ಮೂಲಕ ನೀಡಲಾದ ವಿತ್ತೀಯ ಉತ್ತೇಜನದ ಜೊತೆಗೆ, ಫೆಬ್ರವರಿ 2025 ರಿಂದ (ಹಣದುಬ್ಬರದ ಒತ್ತಡಗಳು ಕಡಿಮೆಯಾದಂತೆ) ಪಾಲಿಸಿ ರೆಪೊ ದರದಲ್ಲಿ ಒಟ್ಟು 125 ಬೇಸಿಸ್ ಪಾಯಿಂಟ್ಗಳ ಕಡಿತದ ಮೂಲಕ ಹಣಕಾಸಿನ ಬೆಂಬಲವನ್ನು ನೀಡಲಾಗಿದೆ. ಇದಕ್ಕೆ ಪೂರಕವಾಗಿ ನಗದು ಮೀಸಲು ಅನುಪಾತ (CRR) ಕಡಿತ (₹ 2.5 ಲಕ್ಷ ಕೋಟಿ), ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳು (₹6.95 ಲಕ್ಷ ಕೋಟಿ) ಮತ್ತು ಸುಮಾರು $25 ಬಿಲಿಯನ್ ವಿದೇಶಿ ವಿನಿಮಯ ಸ್ವಾಪ್ ಗಳ (Forex swap) ಮೂಲಕ ದೀರ್ಘಾವಧಿಯ ದ್ರವ್ಯತೆಯನ್ನು ಒದಗಿಸಲಾಗಿದೆ. ಈ ಕ್ರಮಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿವೆ. ಫೆಬ್ರವರಿ ಮತ್ತು ನವೆಂಬರ್ 2025 ರ ನಡುವೆ, ನಿಗದಿತ ವಾಣಿಜ್ಯ ಬ್ಯಾಂಕುಗಳ ಹೊಸ ರೂಪಾಯಿ ಸಾಲಗಳ ಮೇಲಿನ ಸರಾಸರಿ ಬಡ್ಡಿದರ (WALR) 59 ಬೇಸಿಸ್ ಪಾಯಿಂಟ್ಗಳಷ್ಟು ಇಳಿಕೆಯಾಗಿದ್ದರೆ, ಅಸ್ತಿತ್ವದಲ್ಲಿರುವ ಸಾಲಗಳ ಮೇಲಿನ ಸರಾಸರಿ ಬಡ್ಡಿದರವು 69 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆಯಾಗಿದೆ. ಅದೇ ಸಮಯದಲ್ಲಿ, ಬ್ಯಾಂಕಿಂಗ್ ವಲಯವು ತನ್ನ ಬ್ಯಾಲೆನ್ಸ್ ಶೀಟ್ಗಳನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದು, ಒಟ್ಟು ವಸೂಲಾಗದ ಸಾಲಗಳ (NPA) ಅನುಪಾತವು ಹಲವು ದಶಕಗಳಲ್ಲೇ ಕನಿಷ್ಠ ಮಟ್ಟವಾದ ಶೇ. 2.2 ಕ್ಕೆ ಇಳಿದಿದೆ. ಅರ್ಧವಾರ್ಷಿಕ ಸ್ಲಿಪ್ಪೇಜ್ ಅನುಪಾತವು ಶೇ. 0.7 ರಷ್ಟು ಸ್ಥಿರವಾಗಿದೆ ಮತ್ತು ತೆರಿಗೆಯ ನಂತರದ ಹೆಚ್ಚಿನ ಲಾಭ ಹಾಗೂ ಬಲಿಷ್ಠವಾದ ನಿವ್ವಳ ಬಡ್ಡಿ ಮಾರ್ಜಿನ್ ಗಳಿಂದಾಗಿ ಲಾಭದಾಯಕತೆ ಸುಧಾರಿಸಿದೆ.
ಜಾಗತಿಕ ವ್ಯಾಪಾರದ ಅನಿಶ್ಚಿತತೆಯ ನಡುವೆಯೂ, ಭಾರತದ ಒಟ್ಟು ರಫ್ತು (ಸರಕು ಮತ್ತು ಸೇವೆಗಳು) ಹಣಕಾಸು ವರ್ಷ 25 ರಲ್ಲಿ ದಾಖಲೆಯ 825.3 ಶತಕೋಟಿ ಯುಎಸ್ ಡಾಲರ್ ತಲುಪಿದೆ ಮತ್ತು ಹಣಕಾಸು ವರ್ಷ 26 ರಲ್ಲಿಯೂ ಈ ವೇಗವು ಮುಂದುವರಿದಿದೆ ಎಂದು ಆರ್ಥಿಕ ಸಮೀಕ್ಷೆಯು ಉಲ್ಲೇಖಿಸಿದೆ. ಅಮೆರಿಕ ಹೇರಿರುವ ಹೆಚ್ಚಿನ ಸುಂಕಗಳ ಹೊರತಾಗಿಯೂ, ಸರಕು ರಫ್ತು ಶೇ. 2.4 ರಷ್ಟು (ಏಪ್ರಿಲ್-ಡಿಸೆಂಬರ್ 2025) ಬೆಳೆದಿದೆ, ಹಾಗೂ ಸೇವಾ ರಫ್ತು ಶೇ. 6.5 ರಷ್ಟು ಹೆಚ್ಚಾಗಿದೆ. ಏಪ್ರಿಲ್-ಡಿಸೆಂಬರ್ 2025ರ ಅವಧಿಯಲ್ಲಿ ಸರಕು ಆಮದು ಶೇ. 5.9 ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷಗಳ ಪ್ರವೃತ್ತಿಯನ್ನು ಅನುಸರಿಸಿ, ಸರಕು ವ್ಯಾಪಾರ ಕೊರತೆಯ ಏರಿಕೆಯನ್ನು ಸೇವಾ ವ್ಯಾಪಾರ ಹೆಚ್ಚುವರಿಯ ಹೆಚ್ಚಳದ ಮೂಲಕ ಸಮತೋಲನಗೊಳಿಸಲಾಗಿದೆ, ಅಷ್ಟೇ ಅಲ್ಲದೆ ವಿದೇಶಗಳಿಂದ ಹರಿದುಬರುವ ಹಣದ ಬೆಳವಣಿಗೆಯು ಈ ಸಮತೋಲನವನ್ನು ಮತ್ತಷ್ಟು ಬಲಪಡಿಸಿದೆ. ಹೆಚ್ಚಿನ ವರ್ಷಗಳಲ್ಲಿ ವಿದೇಶಗಳಿಂದ ಹರಿದುಬರುವ ಹಣವು ಒಟ್ಟು ವಿದೇಶಿ ನೇರ ಹೂಡಿಕೆಗಿಂತ (FDI) ಹೆಚ್ಚಾಗಿದ್ದು, ಇದು ಬಾಹ್ಯ ಧನಸಹಾಯದ ಪ್ರಮುಖ ಮೂಲವಾಗಿ ಅವುಗಳ ಪ್ರಾಮುಖ್ಯತೆಯನ್ನು ಉಲ್ಲೇಖಿಸುತ್ತದೆ. ಇದರ ಪರಿಣಾಮವಾಗಿ, ಹಣಕಾಸು ವರ್ಷ 26ರ ಮೊದಲಾರ್ಧದಲ್ಲಿ (H1) ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ. 0.8 ರಷ್ಟು ಸಾಧಾರಣ ಮಟ್ಟದಲ್ಲಿದೆ.
ಅಲ್ಪಾವಧಿಯಲ್ಲಿ ಭಾರತದ ಬಾಹ್ಯ ವಲಯವು ಸುಭದ್ರ ಸ್ಥಿತಿಯಲ್ಲಿದೆ. 2026ರ ಜನವರಿ 16ರ ಹೊತ್ತಿಗೆ ವಿದೇಶಿ ವಿನಿಮಯ ಮೀಸಲು ನಿಧಿಯು 11 ತಿಂಗಳಿಗೂ ಹೆಚ್ಚಿನ ಆಮದನ್ನು ಸರಿದೂಗಿಸುವಷ್ಟಿದೆ ಮತ್ತು 2025ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಬಾಕಿ ಇರುವ ಬಾಹ್ಯ ಸಾಲದ ಸುಮಾರು ಶೇ. 94.0 ರಷ್ಟಿದೆ, ಇದು ದ್ರವ್ಯತೆಯ ದೃಷ್ಟಿಯಿಂದ ಉತ್ತಮವಾದ ಸುರಕ್ಷತಾ ಕವಚವನ್ನು ಒದಗಿಸುತ್ತದೆ. ಯುಕೆ (UK), ಓಮನ್ ಮತ್ತು ನ್ಯೂಜಿಲೆಂಡ್ ದೇಶಗಳೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದಗಳು ಮತ್ತು ಮೂರು ವರ್ಷಗಳ ಮಾತುಕತೆಯ ನಂತರ ಇತ್ತೀಚೆಗೆ ಯುರೋಪಿಯನ್ ಯೂನಿಯನ್ನೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದವು (FTA), ಭಾರತದ ವೈವಿಧ್ಯಮಯ ವ್ಯಾಪಾರ ತಂತ್ರಕ್ಕೆ ಸಾಕ್ಷಿಯಾಗಿದೆ. ಈ ಒಪ್ಪಂದಕ್ಕೆ ಈಗ ಯುರೋಪಿಯನ್ ಪಾರ್ಲಿಮೆಂಟ್ ನ ಅನುಮೋದನೆಯ ಅಗತ್ಯವಿದೆ. ಅಷ್ಟೇ ಅಲ್ಲದೆ, ಅಮೆರಿಕದೊಂದಿಗೆ ನಡೆಯುತ್ತಿರುವ ಸಕ್ರಿಯ ಮಾತುಕತೆಗಳು ಭಾರತದ ರಫ್ತು ವಲಯಕ್ಕೆ ಪೂರಕವಾಗಿವೆ.
ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ಘೋಷಿಸಿರುವ ಕೇಂದ್ರ ಸರ್ಕಾರದ ಐತಿಹಾಸಿಕ ಕ್ರಮವು ನಿಯಂತ್ರಣ ಚೌಕಟ್ಟಿನಲ್ಲಿ ಪ್ರಮುಖ ಸುಧಾರಣೆಯಾಗಿದೆ. 29 ಕೇಂದ್ರ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಕ್ರೋಢೀಕರಿಸುವುದು ಅನುಸರಣೆಯನ್ನು ಸರಳಗೊಳಿಸುವ, ಕಾರ್ಮಿಕ ಮಾರುಕಟ್ಟೆಯ ನಮ್ಯತೆಯನ್ನು ಹೆಚ್ಚಿಸುವ ಮತ್ತು ಹೆಚ್ಚಿನ ಸಂಖ್ಯೆಯ ಕಾರ್ಮಿಕರಿಗೆ ಭದ್ರತೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಅಷ್ಟೇ ಅಲ್ಲದೆ ವೇತನ, ಔದ್ಯೋಗಿಕ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯ ರಕ್ಷಣೆಗಳನ್ನು ಇದು ಕಾಯ್ದುಕೊಳ್ಳಲಿದೆ.
ಬಾಹ್ಯ ರಂಗದಲ್ಲಿ ಆರ್ಥಿಕತೆಗೆ ಹಣಕಾಸು ವರ್ಷ 26 ಅಸಾಮಾನ್ಯ ಸವಾಲಿನ ವರ್ಷವಾಗಿತ್ತು. ಜಾಗತಿಕ ವ್ಯಾಪಾರದಲ್ಲಿನ ಹೆಚ್ಚಿದ ಅನಿಶ್ಚಿತತೆ ಮತ್ತು ಹೆಚ್ಚಿನ ದಂಡನಾತ್ಮಕ ಸುಂಕಗಳ ಹೇರಿಕೆಯು ಉತ್ಪಾದಕರಿಗೆ, ವಿಶೇಷವಾಗಿ ರಫ್ತುದಾರರಿಗೆ ಒತ್ತಡವನ್ನು ಉಂಟುಮಾಡಿತು ಮತ್ತು ವ್ಯವಹಾರದ ವಿಶ್ವಾಸದ ಮೇಲೆ ಪರಿಣಾಮ ಬೀರಿದೆ. ಈ ಬಿಕ್ಕಟ್ಟನ್ನು ಒಂದು ಅವಕಾಶವಾಗಿ ಬಳಸಿಕೊಂಡ ಸರ್ಕಾರವು ಜಿಎಸ್ಟಿ (GST) ವೈಚಾರಿಕೀಕರಣ, ನಿಯಂತ್ರಣ ಮುಕ್ತಗೊಳಿಸುವ ಪ್ರಕ್ರಿಯೆಯ ವೇಗವರ್ಧನೆ ಮತ್ತು ವಿವಿಧ ವಲಯಗಳಲ್ಲಿನ ನಿಯಮಗಳ ಪಾಲನೆಯನ್ನು ಮತ್ತಷ್ಟು ಸರಳಗೊಳಿಸುವಂತಹ ಪ್ರಮುಖ ಕ್ರಮಗಳನ್ನು ಜಾರಿಗೆ ತಂದಿದೆ. ಆದ್ದರಿಂದ, ಕಂಪನಿಗಳು ಮತ್ತು ಕುಟುಂಬಗಳು ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದರಿಂದ ಹಣಕಾಸು ವರ್ಷ 27 ಒಂದು ಹೊಂದಾಣಿಕೆಯ ವರ್ಷವಾಗುವ ನಿರೀಕ್ಷೆಯಿದೆ, ಜೊತೆಗೆ ಆಂತರಿಕ ಬೇಡಿಕೆ ಮತ್ತು ಹೂಡಿಕೆಗಳು ಬಲಗೊಳ್ಳಲಿವೆ. ಹೀಗಿದ್ದರೂ, ಬಾಹ್ಯ ಪರಿಸರವು ಅನಿಶ್ಚಿತವಾಗಿ ಮುಂದುವರಿದಿದೆ ಮತ್ತು ಇದು ಒಟ್ಟಾರೆ ಆರ್ಥಿಕ ಮುನ್ನೋಟದ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಜಾಗತಿಕ ಆರ್ಥಿಕತೆಯ ಮುನ್ನೋಟವು ಮಧ್ಯಮ ಅವಧಿಯಲ್ಲಿ ಮಂದವಾಗಿ ಮುಂದುವರಿದಿದೆ ಮತ್ತು ಹಿನ್ನಡೆಯ ಅಪಾಯಗಳು ಹೆಚ್ಚಾಗಿವೆ. ಜಾಗತಿಕ ಮಟ್ಟದಲ್ಲಿ, ಬೆಳವಣಿಗೆಯು ಸಾಧಾರಣವಾಗಿರುವ ನಿರೀಕ್ಷೆಯಿದೆ, ಇದು ಸರಕುಗಳ ಬೆಲೆ ಪ್ರವೃತ್ತಿಯು ವ್ಯಾಪಕವಾಗಿ ಸ್ಥಿರವಾಗಿರಲು ಕಾರಣವಾಗಲಿದೆ. ವಿವಿಧ ಆರ್ಥಿಕತೆಗಳಲ್ಲಿ ಹಣದುಬ್ಬರವು ಇಳಿಮುಖವಾಗುತ್ತಿದೆ ಮತ್ತು ಆದ್ದರಿಂದ ಹಣಕಾಸು ನೀತಿಗಳು ಹೆಚ್ಚು ಪೂರಕವಾಗುವ ಮೂಲಕ ಬೆಳವಣಿಗೆಗೆ ಬೆಂಬಲ ನೀಡಲಿವೆ ಎಂದು ನಿರೀಕ್ಷಿಸಲಾಗಿದೆ.
ಜಾಗತಿಕ ಪರಿಸರವು ಸೂಕ್ಷ್ಮವಾಗಿ ಮುಂದುವರಿದಿದೆ, ಬೆಳವಣಿಗೆಯು ನಿರೀಕ್ಷೆಗಿಂತ ಉತ್ತಮವಾಗಿದ್ದರೂ ಸಹ, ತೀವ್ರಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವ್ಯಾಪಾರ ವಿಘಟನೆ ಮತ್ತು ಆರ್ಥಿಕ ದೌರ್ಬಲ್ಯಗಳ ನಡುವೆ ಅಪಾಯಗಳು ಹೆಚ್ಚಿವೆ ಎಂದು ಸಮೀಕ್ಷೆಯು ಬೆಟ್ಟು ಮಾಡಿದೆ. ಈ ಆಘಾತಗಳ ಪ್ರಭಾವವು ಸ್ವಲ್ಪ ಸಮಯದ ನಂತರ ಕಂಡುಬರಬಹುದು. ಭಾರತದ ಮಟ್ಟಿಗೆ ಹೇಳುವುದಾದರೆ, ಜಾಗತಿಕ ಪರಿಸ್ಥಿತಿಗಳು ತಕ್ಷಣದ ಸ್ಥೂಲ ಆರ್ಥಿಕ ಒತ್ತಡಕ್ಕಿಂತ ಹೆಚ್ಚಾಗಿ ಬಾಹ್ಯ ಅನಿಶ್ಚಿತತೆಗಳಾಗಿ ಬದಲಾಗುತ್ತವೆ. ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿನ ನಿಧಾನಗತಿಯ ಬೆಳವಣಿಗೆ, ಸುಂಕಗಳಿಂದ ಪ್ರೇರಿತವಾದ ವ್ಯಾಪಾರ ಅಡಚಣೆಗಳು ಮತ್ತು ಬಂಡವಾಳ ಹರಿವಿನ ಅಸ್ಥಿರತೆಯು ಕಾಲಕಾಲಕ್ಕೆ ರಫ್ತು ಮತ್ತು ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರಬಹುದು. ಅದೇ ಸಮಯದಲ್ಲಿ, ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಮಾತುಕತೆಗಳು ಈ ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಇದು ಬಾಹ್ಯ ವಲಯದ ಅನಿಶ್ಚಿತತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಅಪಾಯಗಳು ನಿರ್ವಹಿಸಬಹುದಾದ ಮಟ್ಟದಲ್ಲಿದ್ದರೂ ಸಹ, ಅವು ಸಾಕಷ್ಟು ಮೀಸಲು ನಿಧಿಯನ್ನು ಹೊಂದುವ ಮತ್ತು ನೀತಿಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸುತ್ತವೆ.
ಈ ಹಿನ್ನೆಲೆಯಲ್ಲಿ, ದೇಶೀಯ ಆರ್ಥಿಕತೆಯು ಸ್ಥಿರವಾದ ಹಾದಿಯಲ್ಲಿದೆ. ಹಣದುಬ್ಬರವು ಐತಿಹಾಸಿಕವಾಗಿ ಕನಿಷ್ಠ ಮಟ್ಟಕ್ಕೆ ಇಳಿದಿದೆ, ಆದರೆ ಮುಂದಿನ ದಿನಗಳಲ್ಲಿ ಸ್ವಲ್ಪ ಏರಿಕೆಯಾಗುವ ನಿರೀಕ್ಷೆಯಿದೆ. ಕುಟುಂಬಗಳು, ಕಂಪನಿಗಳು ಮತ್ತು ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ಗಳು ಹೆಚ್ಚು ಸದೃಢವಾಗಿವೆ ಮತ್ತು ಸಾರ್ವಜನಿಕ ಹೂಡಿಕೆಯು ಚಟುವಟಿಕೆಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸಿದೆ. ಬಳಕೆಯ ಬೇಡಿಕೆಯು ಚೇತೋಹಾರಿ ಸ್ಥಿತಿಯಲ್ಲಿದೆ ಮತ್ತು ಖಾಸಗಿ ಹೂಡಿಕೆಯ ಉದ್ದೇಶಗಳು ಸುಧಾರಿಸುತ್ತಿವೆ. ಈ ಪರಿಸ್ಥಿತಿಗಳು ಬಾಹ್ಯ ಆಘಾತಗಳ ವಿರುದ್ಧ ಪ್ರತಿರೋಧ ಶಕ್ತಿಯನ್ನು ಒದಗಿಸುತ್ತವೆ ಮತ್ತು ಬೆಳವಣಿಗೆಯ ವೇಗವನ್ನು ಮುಂದುವರಿಸಲು ಬೆಂಬಲ ನೀಡುತ್ತವೆ. ಮುಂದಿನ ವರ್ಷದಲ್ಲಿ ಬರಲಿರುವ ಸಿಪಿಐ ಸರಣಿಯ ಪುನರ್-ಆಧಾರಿತ ಪ್ರಕ್ರಿಯೆಯು ಹಣದುಬ್ಬರದ ಮೌಲ್ಯಮಾಪನದ ಮೇಲೆ ಪರಿಣಾಮ ಬೀರಲಿದ್ದು, ಬೆಲೆಗಳ ಗತಿಶೀಲತೆಯನ್ನು ಎಚ್ಚರಿಕೆಯಿಂದ ಅರ್ಥೈಸುವ ಅಗತ್ಯವಿರುತ್ತದೆ.
ಪ್ರಮುಖವಾಗಿ, ಕಳೆದ ಕೆಲವು ವರ್ಷಗಳಲ್ಲಿನ ನೀತಿ ಸುಧಾರಣೆಗಳ ಸಂಚಿತ ಪ್ರಭಾವವು ಆರ್ಥಿಕತೆಯ ಮಧ್ಯಮ ಅವಧಿಯ ಬೆಳವಣಿಗೆಯ ಸಾಮರ್ಥ್ಯವನ್ನು ಶೇ. 7ಕ್ಕೆ ಹತ್ತಿರಕ್ಕೆ ಕೊಂಡೊಯ್ದಿದೆ ಎಂದು ಕಂಡುಬರುತ್ತದೆ. ಆಂತರಿಕ ಅಂಶಗಳು ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯು ಉತ್ತಮವಾಗಿ ನೆಲೆಯೂರಿರುವುದರಿಂದ, ಬೆಳವಣಿಗೆಗೆ ಸಂಬಂಧಿಸಿದ ಅಪಾಯಗಳ ಸಮತೋಲನವು ಸಮನಾಗಿದೆ. ಈ ಎಲ್ಲಾ ಅಂಶಗಳನ್ನು ಒಟ್ಟಾಗಿ ಪರಿಗಣಿಸಿ, ಆರ್ಥಿಕ ಸಮೀಕ್ಷೆಯು ಹಣಕಾಸು ವರ್ಷ 27 ರಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇ. 6.8 ರಿಂದ 7.2ರ ವ್ಯಾಪ್ತಿಯಲ್ಲಿರಲಿದೆ ಎಂದು ಅಂದಾಜಿಸಿದೆ. ಆದ್ದರಿಂದ, ಜಾಗತಿಕ ಅನಿಶ್ಚಿತತೆಯ ನಡುವೆಯೂ ಆರ್ಥಿಕ ಮುನ್ನೋಟವು ಸ್ಥಿರವಾದ ಬೆಳವಣಿಗೆಯನ್ನು ಸೂಚಿಸುತ್ತಿದೆ, ಇದು ಎಚ್ಚರಿಕೆಯನ್ನು ಬಯಸುತ್ತದೆಯೇ ಹೊರತು ನಿರಾಶಾವಾದವನ್ನಲ್ಲ.
*****
(रिलीज़ आईडी: 2220029)
आगंतुक पटल : 31