ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೇರಳದ ಆರ್ಯ ವೈದ್ಯ ಶಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

ಪ್ರಕಟಣಾ ದಿನಾಂಕ: 28 JAN 2026 2:39PM by PIB Bengaluru

ನಮಸ್ಕಾರಂ!

ಕೇರಳದ ರಾಜ್ಯಪಾಲ ಶ್ರೀ ರಾಜೇಂದ್ರ ಅರ್ಲೇಕರ್ ಜೀ, ಆರ್ಯ ವೈದ್ಯ ಶಾಲೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ,

ಇಂದು ಮಹತ್ವದ ಸಂದರ್ಭದಲ್ಲಿ, ನಿಮ್ಮೆಲ್ಲರೊಂದಿಗೆ ಸಂಪರ್ಕ ಸಾಧಿಸುವುದು ನನಗೆ ಸಂತೋಷದ ಸಂಗತಿಯಾಗಿದೆ. ಆರ್ಯ ವೈದ್ಯ ಶಾಲೆಯು ಆಯುರ್ವೇದವನ್ನು ಕಾಪಿಡುವಲ್ಲಿ, ರಕ್ಷಿಸುವಲ್ಲಿ ಮತ್ತು ಮುನ್ನಡೆಸುವಲ್ಲಿ ಮಹತ್ವದ ಕೊಡುಗೆಯನ್ನು ಹೊಂದಿದೆ. 125 ವರ್ಷಗಳ ತನ್ನ ಪ್ರಯಾಣದಲ್ಲಿ, ಈ ಸಂಸ್ಥೆಯು ಆಯುರ್ವೇದವನ್ನು ಪ್ರಬಲ ಚಿಕಿತ್ಸಾ ವ್ಯವಸ್ಥೆಯಾಗಿ ಸ್ಥಾಪಿಸಿದೆ. ಇಂದು ಸಂದರ್ಭದಲ್ಲಿ, ಆರ್ಯ ವೈದ್ಯ ಶಾಲೆಯ ಸ್ಥಾಪಕ ವೈದ್ಯರತ್ನಂ ಪಿ.ಎಸ್. ವಾರಿಯರ್ ಜೀ ಅವರ ಕೊಡುಗೆಗಳನ್ನು ನಾನು ಸ್ಮರಿಸುತ್ತೇನೆ. ಆಯುರ್ವೇದದ ಬಗ್ಗೆ ಅವರ ದೃಷ್ಟಿಕೋನ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅವರ ಸಮರ್ಪಣೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತದೆ.

ಸ್ನೇಹಿತರೇ,

ಕೇರಳದ ಆರ್ಯ ವೈದ್ಯ ಶಾಲೆಯು ಶತಮಾನಗಳಿಂದ ಮಾನವೀಯತೆಗೆ ಸೇವೆ ಸಲ್ಲಿಸುತ್ತಿರುವ ಹಾಗು ಭಾರತೀಯ ಗುಣಪಡಿಸುವ ಸಂಪ್ರದಾಯದ ಜೀವಂತ ಸಂಕೇತವಾಗಿದೆ. ಭಾರತದಲ್ಲಿ, ಆಯುರ್ವೇದವು ಯಾವುದೇ ಒಂದು ಅವಧಿಗೆ ಅಥವಾ ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಪ್ರತಿ ಯುಗದಲ್ಲೂ, ಈ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯು ಜೀವನವನ್ನು ಅರ್ಥಮಾಡಿಕೊಳ್ಳಲು, ಸಮತೋಲನವನ್ನು ಸೃಷ್ಟಿಸಲು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಸ್ಥಾಪಿಸಲು ಮಾರ್ಗವನ್ನು ತೋರಿಸಿದೆ. ಇಂದು, ಆರ್ಯ ವೈದ್ಯ ಶಾಲೆಯು 600 ಕ್ಕೂ ಹೆಚ್ಚು ಆಯುರ್ವೇದ ಔಷಧಿಗಳನ್ನು ತಯಾರಿಸುತ್ತಿದೆ; ದೇಶದ ವಿವಿಧ ಪ್ರದೇಶಗಳಲ್ಲಿನ ಸಂಸ್ಥೆಯ ಆಸ್ಪತ್ರೆಗಳು ಆಯುರ್ವೇದ ವಿಧಾನಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ, ಇದರಲ್ಲಿ ವಿಶ್ವದ 60 ಕ್ಕೂ ಹೆಚ್ಚು ದೇಶಗಳ ರೋಗಿಗಳು ಸೇರಿದ್ದಾರೆ. ಆರ್ಯ ವೈದ್ಯ ಶಾಲೆಯು ತನ್ನ ಕೆಲಸದ ಮೂಲಕ ನಂಬಿಕೆಯನ್ನು ನಿರ್ಮಿಸಿದೆ. ಜನರು ಸಂಕಷ್ಟದಲ್ಲಿದ್ದಾಗ, ನೀವೆಲ್ಲರೂ ಅವರಿಗೆ ಬಹಳ ದೊಡ್ಡ ಆಶಾಕಿರಣವಾಗುತ್ತೀರಿ.

ಸ್ನೇಹಿತರೇ,

ಆರ್ಯ ವೈದ್ಯಶಾಲೆಗೆ, ಸೇವೆ ಎಂಬುದು ಕೇವಲ ಒಂದು ಕಲ್ಪನೆಯಲ್ಲ; ಈ ಭಾವನೆ ಅವರ ಕ್ರಿಯೆ, ವಿಧಾನ ಮತ್ತು ಸಂಸ್ಥೆಗಳಲ್ಲಿಯೂ ಗೋಚರಿಸುತ್ತದೆ. ಸಂಸ್ಥೆಯ ಚಾರಿಟೇಬಲ್ ಆಸ್ಪತ್ರೆ ಕಳೆದ 100 ವರ್ಷಗಳಿಂದ ನಿರಂತರವಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದೆ - 100 ವರ್ಷಗಳು ಎಂಬುದು ಸಣ್ಣ ಕಾಲಾವಧಿಯೇನಲ್ಲ. ಆಸ್ಪತ್ರೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಜನರ ಕೊಡುಗೆ ಇದರಲ್ಲಿದೆ. ನಾನು ವೈದ್ಯರು, ನರ್ಸಿಂಗ್ ಸಿಬ್ಬಂದಿ ಮತ್ತು ಆಸ್ಪತ್ರೆಯ ಎಲ್ಲಾ ಇತರ ಜನರನ್ನು ಸಹ ಅಭಿನಂದಿಸುತ್ತೇನೆ. ಚಾರಿಟೇಬಲ್ ಆಸ್ಪತ್ರೆಯ 125 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ನೀವೆಲ್ಲರೂ ಅಭಿನಂದನೆಗಳಿಗೆ ಅರ್ಹರು. ಕೇರಳದ ಜನರು ಶತಮಾನಗಳಿಂದ ಜೀವಂತವಾಗಿಟ್ಟುಕೊಂಡಿರುವ ಆಯುರ್ವೇದದ ಸಂಪ್ರದಾಯಗಳನ್ನು, ನೀವು ಕೂಡಾ ಸಂರಕ್ಷಿಸುತ್ತಿದ್ದೀರಿ ಮತ್ತು ಪೋಷಿಸುತ್ತಿದ್ದೀರಿ.

ಸ್ನೇಹಿತರೇ,

ದೇಶದಲ್ಲಿ ಬಹಳ ಸಮಯದಿಂದ ಪ್ರಾಚೀನ ವೈದ್ಯಕೀಯ ವ್ಯವಸ್ಥೆಗಳು ಸ್ಥಗಿತ ರೂಪದಲ್ಲಿ, ಪ್ರತ್ಯೇಕವಾಗಿ ಕಾಣುತ್ತಲೇ ಇದ್ದವು. ಕಳೆದ 10-11 ವರ್ಷಗಳಲ್ಲಿ, ಈ ವಿಧಾನದಲ್ಲಿ ದೊಡ್ಡ ಬದಲಾವಣೆಯಾಗಿದೆ. ಈಗ ಆರೋಗ್ಯ ಸೇವೆಗಳನ್ನು ಸಮಗ್ರ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆಯುರ್ವೇದ, ಯುನಾನಿ, ಹೋಮಿಯೋಪತಿ, ಸಿದ್ಧ ಮತ್ತು ಯೋಗ - ಇವೆಲ್ಲವನ್ನೂ ನಾವು ಒಂದೇ ಛತ್ರಿಯಡಿಯಲ್ಲಿ ತಂದಿದ್ದೇವೆ ಮತ್ತು ಇದಕ್ಕಾಗಿ ಆಯುಷ್ ಸಚಿವಾಲಯವನ್ನು ವಿಶೇಷವಾಗಿ ರಚಿಸಲಾಗಿದೆ. ನಾವು ನಿರಂತರವಾಗಿ ರೋಗ ತಡೆಗಟ್ಟುವ ಆರೋಗ್ಯದ ಮೇಲೆ ಗಮನಹರಿಸಿದ್ದೇವೆ. ಈ ಚಿಂತನೆಯೊಂದಿಗೆ, ರಾಷ್ಟ್ರೀಯ ಆಯುಷ್ ಮಿಷನ್  ಪ್ರಾರಂಭಿಸಲಾಯಿತು, 12 ಸಾವಿರಕ್ಕೂ ಹೆಚ್ಚು ಆಯುಷ್ ಸ್ವಾಸ್ಥ್ಯ ಕೇಂದ್ರಗಳನ್ನು ತೆರೆಯಲಾಯಿತು; ಈ ಕೇಂದ್ರಗಳಲ್ಲಿ, ಯೋಗ, ರೋಗ ತಡೆಗಟ್ಟುವ ಆರೈಕೆ, ಸಮುದಾಯ ಆರೋಗ್ಯ ಸೇವೆಗಳು - ಈ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ನಾವು ದೇಶದ ಇತರ ಆಸ್ಪತ್ರೆಗಳನ್ನು ಆಯುಷ್ ಸೇವೆಗಳೊಂದಿಗೆ ಸಂಪರ್ಕಿಸಿದ್ದೇವೆ ಮತ್ತು ಆಯುಷ್ ಔಷಧಿಗಳ ನಿಯಮಿತ ಪೂರೈಕೆಯತ್ತ ಗಮನ ಹರಿಸಿದ್ದೇವೆ. ಇದರ ಉದ್ದೇಶ ಸ್ಪಷ್ಟವಾಗಿದೆ: ಭಾರತದ ಸಾಂಪ್ರದಾಯಿಕ ಔಷಧದ ಜ್ಞಾನದ ಪ್ರಯೋಜನಗಳು ದೇಶದ ಪ್ರತಿಯೊಂದು ಮೂಲೆಯಲ್ಲಿರುವ ಜನರನ್ನು ತಲುಪಬೇಕು ಎಂಬುದಾಗಿದೆ.

ಸ್ನೇಹಿತರೇ,

ಸರ್ಕಾರದ ನೀತಿಗಳ ಸ್ಪಷ್ಟ ಪರಿಣಾಮ ಆಯುಷ್ ಕ್ಷೇತ್ರದ ಮೇಲೆ ಗೋಚರಿಸುತ್ತಿದೆ. ಆಯುಷ್ ಉತ್ಪಾದನಾ ವಲಯವು ವೇಗವಾಗಿ ಪ್ರಗತಿ ಸಾಧಿಸಿದೆ ಮತ್ತು ವಿಸ್ತರಿಸಿದೆ. ಭಾರತೀಯ ಸಾಂಪ್ರದಾಯಿಕ ಯೋಗಕ್ಷೇಮವನ್ನು ಜಗತ್ತಿಗೆ ವಿಸ್ತರಿಸಲು, ಸರ್ಕಾರವು ಆಯುಷ್ ರಫ್ತು ಉತ್ತೇಜನ ಮಂಡಳಿಯನ್ನು ಸ್ಥಾಪಿಸಿದೆ. ಆಯುಷ್ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತೇಜಿಸಬಹುದು ಎಂಬ ನಿಟ್ಟಿನಲ್ಲಿ ಇದೊಂದು ನಮ್ಮ ಪ್ರಯತ್ನವಾಗಿದೆ. ಇದರ ಸಕಾರಾತ್ಮಕ ಪರಿಣಾಮವನ್ನು ಸಹ ನಾವು ನೋಡುತ್ತಿದ್ದೇವೆ. 2014 ರಲ್ಲಿ, ಸುಮಾರು 3 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಯುಷ್ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತಿತ್ತು. ಆದರೆ ಈಗ, 6500 ಕೋಟಿ ರೂಪಾಯಿ ಮೌಲ್ಯದ ಆಯುಷ್ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ಭಾರತದಿಂದ ರಫ್ತು ಮಾಡಲು ಪ್ರಾರಂಭಿಸಲಾಗಿದೆ. ಇದು ದೇಶದ ರೈತರಿಗೆ ಬಹಳ ದೊಡ್ಡ ಪ್ರಯೋಜನವನ್ನು ನೀಡುತ್ತಿದೆ.

ಸ್ನೇಹಿತರೇ,

ಭಾರತವು ಇಂದು ಆಯುಷ್ ಆಧಾರಿತ ವೈದ್ಯಕೀಯ ಮೌಲ್ಯ ಪ್ರಯಾಣಕ್ಕೆ ವಿಶ್ವಾಸಾರ್ಹ ತಾಣವಾಗಿ ಹೊರಹೊಮ್ಮುತ್ತಿದೆ. ಆದ್ದರಿಂದ, ನಾವು ಆಯುಷ್ ವೀಸಾದಂತಹ ಕ್ರಮಗಳನ್ನು ಸಹ ತೆಗೆದುಕೊಂಡಿದ್ದೇವೆ. ಇದರ ಮೂಲಕ, ವಿದೇಶದಿಂದ ಬರುವ ಜನರು ಆಯುಷ್ ಚಿಕಿತ್ಸೆಗೆ ಉತ್ತಮ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

ಸ್ನೇಹಿತರೇ,

ಆಯುರ್ವೇದದಂತಹ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯನ್ನು ಉತ್ತೇಜಿಸಲು, ಸರ್ಕಾರವು ಪ್ರತಿ ದೊಡ್ಡ ವೇದಿಕೆಯಲ್ಲಿಯೂ ಅದನ್ನು ಹೆಮ್ಮೆಯಿಂದ ಮುಂದಿಡುತ್ತಿದೆ. ಅದು ಬ್ರಿಕ್ಸ್ ದೇಶಗಳ ಶೃಂಗಸಭೆಯಾಗಿರಲಿ ಅಥವಾ ಜಿ-20 ದೇಶಗಳ ಸಭೆಯಾಗಿರಲಿ, ಅವಕಾಶ ಸಿಕ್ಕಲ್ಲೆಲ್ಲಾ, ನಾನು ಆಯುರ್ವೇದವನ್ನು ಸಮಗ್ರ ಆರೋಗ್ಯದ ಮಾಧ್ಯಮವಾಗಿ ಪ್ರಸ್ತುತಪಡಿಸಿದ್ದೇನೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರವನ್ನು ಗುಜರಾತ್‌ನ ಜಾಮ್‌ನಗರದಲ್ಲಿ ಸ್ಥಾಪಿಸಲಾಗುತ್ತಿದೆ. ಜಾಮ್‌ನಗರದಲ್ಲಿಯೇ, ಆಯುರ್ವೇದದಲ್ಲಿ ಬೋಧನೆ ಮತ್ತು ಸಂಶೋಧನಾ ಸಂಸ್ಥೆ ಕೆಲಸ ಮಾಡಲು ಪ್ರಾರಂಭಿಸಿದೆ. ಆಯುರ್ವೇದ ಔಷಧಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಗಂಗಾ ನದಿಯ ದಡದಲ್ಲಿ ಔಷಧೀಯ ಕೃಷಿಯನ್ನು ಸಹ ಉತ್ತೇಜಿಸಲಾಗುತ್ತಿದೆ.

ಸ್ನೇಹಿತರೇ,

ಇಂದು ನಾನು ನಿಮ್ಮೆಲ್ಲರೊಂದಿಗೆ ದೇಶದ ಮತ್ತೊಂದು ಸಾಧನೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇದೀಗ ಯುರೋಪಿಯನ್ ಒಕ್ಕೂಟದೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಲಾಗಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಈ ವ್ಯಾಪಾರ ಒಪ್ಪಂದವು ಭಾರತೀಯ ಸಾಂಪ್ರದಾಯಿಕ ಔಷಧ ಸೇವೆಗಳು ಮತ್ತು ವೈದ್ಯರಿಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ನಾನು ನಿಮಗೆ ಹೇಳಲು ಸಂತೋಷಪಡುತ್ತೇನೆ. ನಿರ್ಬಂಧಗಳು ಅಸ್ತಿತ್ವದಲ್ಲಿಲ್ಲದ ಇ.ಯು. ಸದಸ್ಯ ರಾಷ್ಟ್ರಗಳಲ್ಲಿ, ನಮ್ಮ ಆಯುಷ್ ವೈದ್ಯರು ಭಾರತದಲ್ಲಿ ಪಡೆದ ವೃತ್ತಿಪರ ಅರ್ಹತೆಗಳ ಆಧಾರದ ಮೇಲೆ ತಮ್ಮ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಇದು ಆಯುರ್ವೇದ ಮತ್ತು ಯೋಗದೊಂದಿಗೆ ಸಂಬಂಧಿಸಿದ ನಮ್ಮ ಯುವಜನರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಈ ಒಪ್ಪಂದವು ಯುರೋಪಿನಲ್ಲಿ ಆಯುಷ್ ಕ್ಷೇಮ ಕೇಂದ್ರಗಳ ಸ್ಥಾಪನೆಗೂ ಸಹಾಯ ಮಾಡುತ್ತದೆ. ಈ ಒಪ್ಪಂದಕ್ಕಾಗಿ ಆಯುರ್ವೇದ-ಆಯುಷ್‌ನೊಂದಿಗೆ ಸಂಬಂಧ ಹೊಂದಿರುವ ನೀವೆಲ್ಲ ಗಣ್ಯರನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಆಯುರ್ವೇದದ ಮೂಲಕ, ಭಾರತದಲ್ಲಿ ಚಿಕಿತ್ಸಾ ಕಾರ್ಯವು ಶತಮಾನಗಳಿಂದ ನಡೆಯುತ್ತಿದೆ. ಆದರೆ ದೇಶೀಯ ಮತ್ತು ಹೆಚ್ಚಾಗಿ ವಿದೇಶಗಳಲ್ಲಿ ಜನರಿಗೆ ಆಯುರ್ವೇದದ ಮಹತ್ವವನ್ನು ನಾವು ವಿವರಿಸಬೇಕಾದ ದುರದೃಷ್ಟವೂ ಇದೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ಪುರಾವೆ ಆಧಾರಿತ ಸಂಶೋಧನೆಯ ಕೊರತೆ, ಸಂಶೋಧನಾ ಪ್ರಬಂಧಗಳ ಕೊರತೆ; ಆಯುರ್ವೇದ ವ್ಯವಸ್ಥೆಯನ್ನು ವಿಜ್ಞಾನದ ತತ್ವಗಳ ಮೇಲೆ ಪರೀಕ್ಷಿಸಿದಾಗ, ಜನರ ನಂಬಿಕೆ ಇನ್ನಷ್ಟು ಬಲಗೊಳ್ಳುತ್ತದೆ. ಆದ್ದರಿಂದ, ಆರ್ಯ ವೈದ್ಯ ಶಾಲೆಯು ಆಯುರ್ವೇದವನ್ನು ವಿಜ್ಞಾನ ಮತ್ತು ಸಂಶೋಧನೆಯ ಮಾನದಂಡವಾಗಿ ನಿರಂತರವಾಗಿ ಪರೀಕ್ಷಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಇದು ಸಿ.ಎಸ್.ಐ.ಆರ್.(CSIR)ಮತ್ತು ಐ.ಐ.ಟಿ.(I.I.T) ನಂತಹ ಸಂಸ್ಥೆಗಳೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ನಿಮ್ಮ ಗಮನವು ಔಷಧ ಸಂಶೋಧನೆ, ಕ್ಲಿನಿಕಲ್ ಸಂಶೋಧನೆ ಮತ್ತು ಕ್ಯಾನ್ಸರ್ ಆರೈಕೆಯ ಮೇಲೂ ಇದೆ. ಆಯುಷ್ ಸಚಿವಾಲಯದ ಸಹಕಾರದೊಂದಿಗೆ ಕ್ಯಾನ್ಸರ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವುದು ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಸ್ನೇಹಿತರೇ,

ಈಗ ನಾವು ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಆಯುರ್ವೇದದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಹೆಚ್ಚಿಸಬೇಕು. ರೋಗದ ಸಾಧ್ಯತೆಗಳನ್ನು ಕಂಡುಹಿಡಿಯಲು ಮತ್ತು ವಿವಿಧ ವಿಧಾನಗಳ ಮೂಲಕ ಚಿಕಿತ್ಸೆಗಾಗಿ, ನವೀನವಾದದ್ದನ್ನು ಮಾಡಬಹುದು.

ಸ್ನೇಹಿತರೇ,

ಆರ್ಯ ವೈದ್ಯ ಶಾಲೆಯು ಸಂಪ್ರದಾಯ ಮತ್ತು ಆಧುನಿಕತೆ ಒಟ್ಟಿಗೆ ಹೋಗಬಹುದು ಮತ್ತು ಆರೋಗ್ಯ ಸೇವೆಯು ಜನರ ಜೀವನದಲ್ಲಿ ನಂಬಿಕೆಯ ಆಧಾರವಾಗಬಹುದು ಎಂಬುದನ್ನು ತೋರಿಸಿದೆ. ಆಯುರ್ವೇದದ ಹಳೆಯ ತಿಳುವಳಿಕೆಯನ್ನು ಸಂರಕ್ಷಿಸುವುದರೊಂದಿಗೆ, ಈ ಸಂಸ್ಥೆಯು ಆಧುನಿಕ ಅಗತ್ಯಗಳನ್ನು ಅಳವಡಿಸಿಕೊಂಡಿದೆ. ಚಿಕಿತ್ಸೆಯನ್ನು ಸಂಘಟಿಸಲಾಗಿದೆ ಮತ್ತು ರೋಗಿಗಳಿಗೆ ಸೇವೆಗಳನ್ನು ತಲುಪಿಸಲಾಗಿದೆ. ಈ ಸ್ಪೂರ್ತಿದಾಯಕ ಪ್ರಯಾಣಕ್ಕಾಗಿ ನಾನು ಆರ್ಯ ವೈದ್ಯ ಶಾಲೆಯನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ಸಂಸ್ಥೆಯು ಇದೇ ಸಮರ್ಪಣೆ ಮತ್ತು ಸೇವಾ ಮನೋಭಾವದಿಂದ ಜನರ ಜೀವನವನ್ನು ಉತ್ತಮಗೊಳಿಸುವುದನ್ನು ಮುಂದುವರಿಸಲಿ ಎಂಬುದು ನನ್ನ ಹಾರೈಕೆ. ಅನೇಕ, ಅನೇಕ ಧನ್ಯವಾದಗಳು.

ನಮಸ್ಕಾರಂ.

 

*****


(ಪ್ರಕಟಣೆ ಐ.ಡಿ.: 2219996) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Bengali , Assamese , Punjabi , Gujarati , Telugu , Malayalam