ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯ ಭಾರತ ಮಂಟಪದಲ್ಲಿ ನಡೆದ ಭಾರತ-ಯುರೋಪ್ ಒಕ್ಕೂಟದ ವ್ಯವಹಾರ ವೇದಿಕೆಯ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಗಳ ಕನ್ನಡ ಅನುವಾದ
प्रविष्टि तिथि:
27 JAN 2026 8:05PM by PIB Bengaluru
ಗೌರವಾನ್ವಿತರೇ,
ಮೇಡಂ ಅಧ್ಯಕ್ಷರೇ, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ವ್ಯವಹಾರ ನಾಯಕರೇ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.
ಭಾರತ-ಯುರೋಪಿಯನ್ ಒಕ್ಕೂಟದ ವ್ಯವಹಾರ ವೇದಿಕೆಯಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ. ಯುರೋಪಿಯನ್ ಒಕ್ಕೂಟದ ಮಂಡಳಿ ಮತ್ತು ಆಯೋಗದ ಅಧ್ಯಕ್ಷರ ಭಾರತ ಭೇಟಿಯು ಸಾಮಾನ್ಯ ರಾಜತಾಂತ್ರಿಕ ಪ್ರವಾಸವಲ್ಲ; ಇದು ಭಾರತ-ಯುರೋಪಿಯನ್ ಒಕ್ಕೂಟದ ಸಂಬಂಧಗಳಲ್ಲಿ ಹೊಸ ಯುಗಕ್ಕೆ ಕಹಳೆ ಮೊಳಗಿಸುತ್ತಿದೆ. ಮೊದಲ ಬಾರಿಗೆ, ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಯುರೋಪಿಯನ್ ಒಕ್ಕೂಟದ ನಾಯಕರು ಭಾಗವಹಿಸುವುದು, ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಭಾರತದ ಇತಿಹಾಸದಲ್ಲಿ ಅತಿದೊಡ್ಡ ಎಫ್.ಟಿ.ಎ. ಯ ಅಂಗೀಕಾರ, ಮತ್ತು ಇಂದು, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭಾರತ-ಯುರೋಪಿಯನ್ ಒಕ್ಕೂಟದ ವ್ಯವಹಾರ ವೇದಿಕೆಯ ಸಂಘಟನೆ, ಅದೂ ಹಲವಾರು ಸಿ.ಇ.ಒ. ಗಳೊಂದಿಗೆ - ಈ ಎಲ್ಲಾ ಸಾಧನೆಗಳು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳ ನಡುವೆ ನಡೆಯುತ್ತಿರುವ ಅಭೂತಪೂರ್ವ ಹೊಂದಾಣಿಕೆಯ ಸಂಕೇತಗಳಾಗಿವೆ.
ಸ್ನೇಹಿತರೇ,
ಈ ಹೊಂದಾಣಿಕೆ ಆಕಸ್ಮಿಕವಲ್ಲ; ಮಾರುಕಟ್ಟೆ ಆರ್ಥಿಕತೆಗಳಾಗಿ, ನಮಲ್ಲಿ ಹಂಚಿಕೆಯ ಮೌಲ್ಯಗಳಿವೆ. ಜಾಗತಿಕ ಸ್ಥಿರತೆಯ ಕಡೆಗೆ ನಮಗೆ ಹಂಚಿಕೆಯ ಆದ್ಯತೆಗಳಿವೆ. ಮತ್ತು ಮುಕ್ತ ಸಮಾಜಗಳಾಗಿ, ನಮ್ಮ ಜನರ ನಡುವೆ ನೈಸರ್ಗಿಕ ಸಂಪರ್ಕವೂ ಇದೆ. ಈ ಬಲವಾದ ಅಡಿಪಾಯದ ಮೇಲೆ, ನಾವು ನಮ್ಮ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದೇವೆ. ನಾವು ಇದನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಲುದಾರಿಕೆಗಳಲ್ಲಿ ಒಂದಾಗಿ ಸ್ಥಾಪಿಸುತ್ತಿದ್ದೇವೆ ಮತ್ತು ಫಲಿತಾಂಶಗಳು ನಮಗೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಕಳೆದ 10 ವರ್ಷಗಳಲ್ಲಿ, ನಮ್ಮ ವ್ಯಾಪಾರವು ದ್ವಿಗುಣಗೊಂಡಿದೆ, 180 ಬಿಲಿಯನ್ ಯುರೋಗಳನ್ನು ತಲುಪಿದೆ. 6,000 ಕ್ಕೂ ಹೆಚ್ಚು ಯುರೋಪಿಯನ್ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಯುರೋಪಿಯನ್ ಒಕ್ಕೂಟದಿಂದ ಭಾರತದಲ್ಲಿ 120 ಬಿಲಿಯನ್ ಯುರೋಗಳಿಗಿಂತ ಹೆಚ್ಚು ಹೂಡಿಕೆ ಇದೆ. 1,500 ಭಾರತೀಯ ಕಂಪನಿಗಳು ಯುರೋಪಿಯನ್ ಒಕ್ಕೂಟದಲ್ಲಿವೆ ಮತ್ತು ಅಲ್ಲಿ ಭಾರತೀಯ ಹೂಡಿಕೆ ಸುಮಾರು 40 ಬಿಲಿಯನ್ ಯುರೋಗಳನ್ನು ತಲುಪಿದೆ. ಇಂದು, ಭಾರತೀಯ ಮತ್ತು ಯುರೋಪಿಯನ್ ಕಂಪನಿಗಳ ನಡುವೆ - ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆ ಮತ್ತು ಸೇವೆಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಆಳವಾದ ಸಹಕಾರವಿದೆ. ಮತ್ತು ನಿಮ್ಮಂತಹ ವ್ಯಾಪಾರ ನಾಯಕರು ಇದರ ಕಾರ್ಯನಿರ್ವಾಹಕರು ಮತ್ತು ಫಲಾನುಭವಿಗಳು.
ಸ್ನೇಹಿತರೇ,
ಈ ಪಾಲುದಾರಿಕೆಯನ್ನು 'ಇಡೀ ಸಮಾಜದ ಪಾಲುದಾರಿಕೆ'ಯನ್ನಾಗಿ ಮಾಡುವ ಸಮಯ. ಇದೀಗ. ಈ ಚಿಂತನೆಯೊಂದಿಗೆ, ನಾವು ಇಂದು ಸಮಗ್ರ ಎಫ್.ಟಿ.ಎ. ಯನ್ನು ಪೂರ್ಣಗೊಳಿಸಿದ್ದೇವೆ. ಇದರ ಮೂಲಕ, ಭಾರತದ ಕಾರ್ಮಿಕ-ಕೇಂದ್ರಿತ ಉತ್ಪನ್ನಗಳು ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಗೆ ಸುಲಭವಾಗಿ ಪ್ರವೇಶವನ್ನು ಪಡೆಯುತ್ತವೆ. ಇದರಲ್ಲಿ ನಿರ್ದಿಷ್ಟವಾಗಿ ಜವಳಿ, ರತ್ನಗಳು ಮತ್ತು ಆಭರಣಗಳು, ಆಟೋ ಬಿಡಿಭಾಗಗಳು ಮತ್ತು ಎಂಜಿನಿಯರಿಂಗ್ ಸರಕುಗಳು ಸೇರಿವೆ. ಹಣ್ಣುಗಳು, ತರಕಾರಿಗಳು, ಸಂಸ್ಕರಿಸಿದ ಆಹಾರ ಮತ್ತು ಸಮುದ್ರ ಉತ್ಪನ್ನಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ಇದರ ನೇರ ಲಾಭವು ನಮ್ಮ ರೈತರು, ನಮ್ಮ ಮೀನುಗಾರರಿಗೆ ಹೋಗುತ್ತದೆ; ನಮ್ಮ ಸೇವಾ ವಲಯವು ಸಹ ಇದರಿಂದ ಪ್ರಯೋಜನ ಪಡೆಯುತ್ತದೆ. ವಿಶೇಷವಾಗಿ ಐಟಿ, ಶಿಕ್ಷಣ, ಸಾಂಪ್ರದಾಯಿಕ ಔಷಧ ಮತ್ತು ವ್ಯಾಪಾರ ಸೇವೆಗಳು ಪ್ರಯೋಜನ ಪಡೆಯುತ್ತವೆ.
ಸ್ನೇಹಿತರೇ,
ಇಂದು, ಜಾಗತಿಕ ವ್ಯವಹಾರದಲ್ಲಿ ದೊಡ್ಡ ಗೊಂದಲವಿದೆ. ಪ್ರತಿಯೊಂದು ಕಂಪನಿಯು ತನ್ನ ಮಾರುಕಟ್ಟೆ ತಂತ್ರ ಮತ್ತು ಪಾಲುದಾರಿಕೆಯನ್ನು ಹೊಸದಾಗಿ ನೋಡುತ್ತಿದೆ. ಅಂತಹ ಸಮಯದಲ್ಲಿ, ಈ ಎಫ್.ಟಿ.ಎ. ವ್ಯಾಪಾರ ಜಗತ್ತಿಗೆ ಸ್ಪಷ್ಟ ಮತ್ತು ಸಕಾರಾತ್ಮಕ ಸಂದೇಶವಾಗಿದೆ. ಇದು ಎರಡೂ ಕಡೆಯ ವ್ಯಾಪಾರ ಸಮುದಾಯಗಳಿಗೆ ಸಮರ್ಥ, ವಿಶ್ವಾಸಾರ್ಹ ಮತ್ತು ಭವಿಷ್ಯ-ಆಧಾರಿತ ಪಾಲುದಾರಿಕೆಯನ್ನು ನಿರ್ಮಿಸಲು ಸ್ಪಷ್ಟ ಆಹ್ವಾನವಾಗಿದೆ. ನೀವೆಲ್ಲರೂ ಈ ಎಫ್.ಟಿ.ಎ. ಯ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ ಎಂಬುದರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.
ಸ್ನೇಹಿತರೇ,
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ವ್ಯಾಪಾರ ಪಾಲುದಾರಿಕೆಯು ಹಲವಾರು ಆದ್ಯತೆಗಳಿಂದ ಪ್ರಯೋಜನ ಪಡೆಯಬಹುದು. ಈ ಸಂದರ್ಭದಲ್ಲಿ, ನಾನು ಮೂರು ಆದ್ಯತೆಗಳ ಬಗ್ಗೆ ಮಾತನಾಡುತ್ತೇನೆ. ಮೊದಲನೆಯದಾಗಿ - ಇಂದು ಜಗತ್ತಿನಲ್ಲಿ, ವ್ಯಾಪಾರ, ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳನ್ನು ಶಸ್ತ್ರಾಸ್ತ್ರಗಳಂತೆ ಪರಿಗಣಿಸಲಾಗುತ್ತಿದೆ. ನಮ್ಮ ಅವಲಂಬನೆಗಳನ್ನು ಅಪಾಯದಿಂದ ಮುಕ್ತಗೊಳಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಮ್ಮ ವ್ಯಾಪಾರ ಸಮುದಾಯವು ಒಟ್ಟಾಗಿ ಇ.ವಿ. ಗಳು, ಬ್ಯಾಟರಿಗಳು, ಚಿಪ್‌ಗಳು ಮತ್ತು ಎ.ಪಿ.ಐ. ಗಳಲ್ಲಿ ಬಾಹ್ಯ ಅವಲಂಬನೆಯನ್ನು ಕಡಿಮೆ ಮಾಡಬಹುದೇ? ವಿಶ್ವಾಸಾರ್ಹ ಪೂರೈಕೆ ಸರಪಳಿಗಳ ಹಂಚಿಕೆಯ ಪರ್ಯಾಯವನ್ನು ನಾವು ನಿರ್ಮಿಸಬಹುದೇ? ಎರಡನೆಯದಾಗಿ - ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಗಮನವು ರಕ್ಷಣಾ ಕೈಗಾರಿಕೆಗಳು ಮತ್ತು ಮುಂಚೂಣಿ ತಂತ್ರಜ್ಞಾನದ ಮೇಲೆ ಕೇಂದ್ರೀಕೃತವಾಗಿದೆ. ರಕ್ಷಣೆ, ಬಾಹ್ಯಾಕಾಶ, ದೂರಸಂಪರ್ಕ ಮತ್ತು ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಹೆಚ್ಚಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಮೂರನೆಯದಾಗಿ - ಸ್ವಚ್ಛ ಮತ್ತು ಸುಸ್ಥಿರ ಭವಿಷ್ಯವು ಎರಡಕ್ಕೂ ಆದ್ಯತೆಯಾಗಿದೆ. ಹಸಿರು ಹೈಡ್ರೋಜನ್‌ನಿಂದ ಸೌರಶಕ್ತಿ ಮತ್ತು ಸ್ಮಾರ್ಟ್ ಗ್ರಿಡ್‌ಗಳವರೆಗೆ, ನಾವು ಪ್ರತಿ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ಮತ್ತು ಹೂಡಿಕೆಯನ್ನು ಹೆಚ್ಚಿಸಬೇಕು. ಎರಡೂ ಕೈಗಾರಿಕೆಗಳು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು ಮತ್ತು ಸುಸ್ಥಿರ ಚಲನಶೀಲತೆಯ ಮೇಲೂ ಒಟ್ಟಾಗಿ ಕೆಲಸ ಮಾಡಬೇಕು. ಇದರೊಂದಿಗೆ, ನೀರಿನ ನಿರ್ವಹಣೆ, ವೃತ್ತಾಕಾರದ ಆರ್ಥಿಕತೆ ಮತ್ತು ಪ್ರತಿ ಕ್ಷೇತ್ರದಲ್ಲಿ ಸುಸ್ಥಿರ ಕೃಷಿಯಲ್ಲಿ ಪರಿಹಾರಗಳನ್ನು ಒಟ್ಟಾಗಿ ಅಭಿವೃದ್ಧಿಪಡಿಸಬೇಕು.
ಸ್ನೇಹಿತರೇ,
ಇಂದಿನ ಐತಿಹಾಸಿಕ ನಿರ್ಧಾರಗಳ ನಂತರ, ಈಗ ನಿಮ್ಮೆಲ್ಲರ ಮೇಲೆ ವಿಶೇಷ ಜವಾಬ್ದಾರಿ ಇದೆ. ಈಗ ಮುಂದಿನ ಹೆಜ್ಜೆಯನ್ನು ವ್ಯಾಪಾರ ಸಮುದಾಯ ತೆಗೆದುಕೊಳ್ಳಬೇಕಾಗಿದೆ, ಚೆಂಡು ನಿಮ್ಮ ಅಂಗಳದಲ್ಲಿದೆ. ನಿಮ್ಮ ಪರಸ್ಪರ ಸಹಕಾರದ ಮೂಲಕ ಮಾತ್ರ ನಮ್ಮ ಪಾಲುದಾರಿಕೆಯು ವಿಶ್ವಾಸ, ವ್ಯಾಪ್ತಿ ಮತ್ತು ಪ್ರಮಾಣವನ್ನು ಗಳಿಸುತ್ತದೆ. ನಿಮ್ಮ ಪ್ರಯತ್ನಗಳ ಮೂಲಕ, ನಾವು ಹಂಚಿಕೆಯ ಸಮೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ನಮ್ಮ ಸಾಮರ್ಥ್ಯಗಳನ್ನು ಒಟ್ಟುಗೂಡಿಸಿಕೊಂಡು ಇಡೀ ಪ್ರಪಂಚದ ಬೆಳವಣಿಗೆಯ ಡಬಲ್ ಎಂಜಿನ್ ಆಗೋಣ.
ತುಂಬಾ ಧನ್ಯವಾದಗಳು.
*****
(रिलीज़ आईडी: 2219454)
आगंतुक पटल : 10
इस विज्ञप्ति को इन भाषाओं में पढ़ें:
English
,
Urdu
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Odia
,
Telugu
,
Malayalam