ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ ಸಂಪೂರ್ಣ: ಭಾರತದ ಜಾಗತಿಕ ವ್ಯಾಪಾರ ಮಾತುಕತೆಗಳಲ್ಲಿ ಮಹತ್ವದ ಮೈಲುಗಲ್ಲು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯುರೋಪ್ಆಯೋಗದ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೆಯೆನ್ ಅವರು 16ನೇ ಭಾರತ-ಯುರೋಪಿಯನ್ ಒಕ್ಕೂಟ ಶೃಂಗಸಭೆಯಲ್ಲಿ ಐತಿಹಾಸಿಕ ಮೈಲುಗಲ್ಲು ಸಾಧನೆಯನ್ನು ಘೋಷಿಸಿದರು
ಭಾರತವು 4ನೇ ಅತಿದೊಡ್ಡ ಆರ್ಥಿಕತೆ ಮತ್ತು ಯುರೋಪಿಯನ್ ಒಕ್ಕೂಟ, 2ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಇವೆರಡೂ ಜಾಗತಿಕ ಜಿಡಿಪಿಯ ಶೇ.25 ರಷ್ಟನ್ನು ಒಳಗೊಂಡಿವೆ, ಈ ದೇಶಗಳು ವಿಶ್ವಾಸಾರ್ಹ ಪಾಲುದಾರಿಕೆಯನ್ನು ರೂಪಿಸುತ್ತವೆ
ಅಭೂತಪೂರ್ವ ಮಾರುಕಟ್ಟೆ ಪ್ರವೇಶ: ಶೇ.99 ಕ್ಕೂ ಹೆಚ್ಚು ಭಾರತೀಯ ರಫ್ತುಗಳು ಯುರೋಪ್ಒಕ್ಕೂಟಕ್ಕೆ ಆದ್ಯತೆಯ ಪ್ರವೇಶವನ್ನು ಪಡೆಯುತ್ತವೆ, ಇದು ಬೃಹತ್ ಬೆಳವಣಿಗೆಯ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತದೆ
ಮುಕ್ತ ವ್ಯಾಪಾರ ಒಪ್ಪಂದವು ʻಎಂಎಸ್ಎಂಇʼಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಜೊತೆಗೆ ಮಹಿಳೆಯರು, ಕುಶಲಕರ್ಮಿಗಳು, ಯುವಕರು ಮತ್ತು ವೃತ್ತಿಪರರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ
6.41 ಲಕ್ಷ ಕೋಟಿ ರೂ.ಗಳ (75 ಶತಕೋಟಿ ಡಾಲರ್) ಮೌಲ್ಯದ ರಫ್ತಿಗೆ ವೇದಿಕೆ ಸಜ್ಜಾಗಿದೆ; ಜವಳಿ, ಚರ್ಮ, ಸಮುದ್ರ ಉತ್ಪನ್ನಗಳು, ರತ್ನಗಳು ಮತ್ತು ಆಭರಣಗಳಂತಹ ಶ್ರಮಾಧಾರಿತ ಕ್ಷೇತ್ರಗಳಲ್ಲಿ 33 ಶತಕೋಟಿ ಡಾಲರ್ ರಫ್ತುಗಳು ʻಮುಕ್ತ ವ್ಯಾಪಾರ ಒಪ್ಪಂದʼದ ಅಡಿಯಲ್ಲಿ ಆದ್ಯತೆಯ ಪ್ರವೇಶದ ಮೂಲಕ ಅಪಾರ ಲಾಭ ಪಡೆಯಲಿವೆ
ʻಮೇಕ್ ಇನ್ ಇಂಡಿಯಾʼ ಅಭಿಯಾನ ಮುನ್ನಡೆಸುವ ನಿಟ್ಟಿನಲ್ಲಿ ಪರಸ್ಪರ ಮುಕ್ತ ಮಾರುಕಟ್ಟೆ ಪ್ರವೇಶ ಹಾಗೂ ಪರಾಮರ್ಶಿಸಿದ ನಿರ್ಣಯದೊಂದಿಗೆ ಸ್ವಯಂಚಾಲಿತ ಉದಾರೀಕರಣ
ಅನುಕೂಲಕರ ಮಾರುಕಟ್ಟೆ ಪ್ರವೇಶವು ಭಾರತದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತಿಗೆ ಬಾಗಿಲು ತೆರೆಯಲಿದೆ
ಭಾರತವು ಸೂಕ್ಷ್ಮ ಕೃಷಿ ಉತ್ಪನ್ನಗಳು ಮತ್ತು ಹೈನುಗಾರಿಕೆ ವಲಯವನ್ನು ರಕ್ಷಿಸುತ್ತದೆ: ಇವುಗಳಿಗೆ ಮಾರುಕಟ್ಟೆ ಪ್ರವೇಶ ಒದಗಿಸಿಲ್ಲ
ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವಾಕಾಂಕ್ಷೆಯ ಮತ್ತು ವಾಣಿಜ್ಯವಾಗಿ ಅರ್ಥಪೂರ್ಣವಾದ ಮಾರುಕಟ್ಟೆ ಪ್ರವೇಶ
ಭವಿಷ್ಯ ಸನ್ನದ್ಧವಾದ ಸಂಚಾರ ನೀತಿಯು ನುರಿತ ಮತ್ತು ಅರೆ-ನುರಿತ ಭಾರತೀಯ ವೃತ್ತಿಪರರಿಗೆ ಜಾಗತಿಕ ಅವಕಾಶಗಳನ್ನು ವಿಸ್ತರಿಸುತ್ತದೆ
ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದವು ರಚನಾತ್ಮಕ ತೊಡಗಿಸಿಕೊಳ್ಳುವಿಕೆ, ಚರ್ಚೆ ಮತ್ತು ಬೆಂಬಲವನ್ನು ಸುರಕ್ಷಿತಗೊಳಿಸುತ್ತದೆ; ಎಲ್ಲರನ್ನೂ ಒಳಗೊಂಡ, ಸದೃಢ ಮತ್ತು ಭವಿಷ್ಯ-ಸನ್ನದ್ಧ ಬೆಳವಣಿಗೆಗೆ ಅಡಿಪಾಯ ಹಾಕುತ್ತದೆ
प्रविष्टि तिथि:
27 JAN 2026 2:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯುರೋಪ್ ಆಯೋಗದ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೆಯೆನ್ ಅವರು ಇಂದು ಜಂಟಿಯಾಗಿ ಭಾರತ-ಯುರೋಪ್ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದವನ್ನು ಆಖೈರುಗೊಳಿಸಿದರು. ಯುರೋಪ್ ನಾಯಕರ ಭಾರತ ಭೇಟಿಯ ಸಂದರ್ಭದಲ್ಲಿ ನಡೆದ 16ನೇ ʻಭಾರತ-ಯುರೋಪ್ಒಕ್ಕೂಟ ಶೃಂಗಸಭೆʼಯಲ್ಲಿ ಒಪ್ಪಂದವನ್ನು ಅಂತಿಮಗೊಳಿಸಲಾಯಿತು. ಈ ಘೋಷಣೆಯು ಭಾರತ-ಯುರೋಪ್ ಒಕ್ಕೂಟದ ಆರ್ಥಿಕ ಸಂಬಂಧಗಳು ಮತ್ತು ಪ್ರಮುಖ ಜಾಗತಿಕ ಪಾಲುದಾರರೊಂದಿಗಿನ ವ್ಯಾಪಾರ ಸಂಬಂಧಗಳಲ್ಲಿ ಐತಿಹಾಸಿಕ ಮೈಲುಗಲ್ಲಾಗಿದೆ.
ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಈ ತೀರ್ಮಾನವು ಭಾರತ ಮತ್ತು ಯುರೋಪ್ಒಕ್ಕೂಟವನ್ನು ಮುಕ್ತ ಮಾರುಕಟ್ಟೆ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ಬದ್ಧವಾಗಿರುವ ವಿಶ್ವಾಸಾರ್ಹ ಪಾಲುದಾರರನ್ನಾಗಿ ಮಾಡುತ್ತದೆ.
2022ರಲ್ಲಿ ಮಾತುಕತೆ ಪುನರಾರಂಭಿಸಿ, ಗಂಭೀರ ಸಮಾಲೋಚನೆಗಳ ಬಳಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇಂದು ʻಮುಕ್ತ ವ್ಯಾಪಾರʼ ಘೋಷಣೆಯು ಭಾರತ ಮತ್ತು ಯುರೋಪ್ ಒಕ್ಕೂಟದ ನಡುವಿನ ನಿರಂತರ ಚರ್ಚೆ ಮತ್ತು ಸಹಕಾರದ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಇದು ಸಮತೋಲಿತ, ಆಧುನಿಕ, ನಿಯಮ-ಆಧಾರಿತ ಆರ್ಥಿಕ ಮತ್ತು ವ್ಯಾಪಾರ ಪಾಲುದಾರಿಕೆಯನ್ನು ತಲುಪಿಸುವ ರಾಜಕೀಯ ಇಚ್ಛಾಶಕ್ತಿ ಹಾಗೂ ಪರಸ್ಪರ ಹಂಚಿಕೆಯ ದೃಷ್ಟಿಕೋನವನ್ನು ಪ್ರದರ್ಶಿಸುತ್ತದೆ.
ಯುರೋಪ್ ಒಕ್ಕೂಟವು ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದ್ದು, ಸರಕು ಮತ್ತು ಸೇವೆಗಳ ದ್ವಿಪಕ್ಷೀಯ ವ್ಯಾಪಾರವು ಹಲವು ವರ್ಷಗಳಿಂದ ಸ್ಥಿರವಾಗಿ ಬೆಳೆಯುತ್ತಿದೆ. 2024-25ರಲ್ಲಿ, ಸರಕುಗಳಿಗೆ ಸಂಬಂಧಿಸಿದಂತೆ ಯುರೋಪ್ ಒಕ್ಕೂಟದೊಂದಿಗಿನ ಭಾರತದ ದ್ವಿಪಕ್ಷೀಯ ವ್ಯಾಪಾರದ ಮೌಲ್ಯವು 6.4 ಲಕ್ಷ ಕೋಟಿ ರೂ.ಗಳ (75.85 ಶತಕೋಟಿ ಡಾಲರ್) ರಫ್ತು ಮತ್ತು 5.1 ಲಕ್ಷ ಕೋಟಿ ರೂ. (60.68 ಶತಕೋಟಿ ಡಾಲರ್) ಆಮದುಗಳೊಂದಿಗೆ 11.5 ಲಕ್ಷ ಕೋಟಿ ರೂ.ಗಳಷ್ಟಿತ್ತು. ಸೇವಾ ವಲಯದಲ್ಲಿ ಭಾರತ-ಯುರೋಪ್ಒಕ್ಕೂಟದ ವ್ಯಾಪಾರ ಮೌಲ್ಯವು 2024ರಲ್ಲಿ 7.2 ಲಕ್ಷ ಕೋಟಿ ರೂ.ಗಳನ್ನು (83.10 ಶತಕೋಟಿ ಡಾಲರ್) ತಲುಪಿದೆ.
ಭಾರತ ಮತ್ತು ಯುರೋಪ್ ಒಕ್ಕೂಟ ಕ್ರಮವಾಗಿ ಜಗತ್ತಿನ 4ನೇ ಮತ್ತು 2ನೇ ಅತಿದೊಡ್ಡ ಆರ್ಥಿಕತೆಗಳಾಗಿವೆ, ಇವೆರಡೂ ಜಾಗತಿಕ ಜಿಡಿಪಿಯ ಶೇ.25 ರಷ್ಟನ್ನು ಒಳಗೊಂಡಿವೆ ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಹೊಂದಿವೆ. ಎರಡು ಬೃಹತ್ ವೈವಿಧ್ಯಮಯ ಮತ್ತು ಪೂರಕ ಆರ್ಥಿಕತೆಗಳ ಏಕೀಕರಣವು ಅಭೂತಪೂರ್ವ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಸೃಷ್ಟಿಸುತ್ತದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕಾರ್ಯತಂತ್ರದ ದೂರದೃಷ್ಟಿ ಹಾಗೂ ದೃಢ ನಾಯಕತ್ವವನ್ನು ಶ್ಲಾಘಿಸಿದರು. ಅವರು ಹೀಗೆ ಹೇಳಿದ್ದಾರೆ:
"ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ ಘೋಷಣೆಯು ಭಾರತದ ಆರ್ಥಿಕ ತೊಡಗಿಸಿಕೊಳ್ಳುವಿಕೆ ಮತ್ತು ಜಾಗತಿಕ ದೃಷ್ಟಿಕೋನದಲ್ಲಿ ನಿರ್ಣಾಯಕ ಸಾಧನೆಯನ್ನು ಪ್ರತಿನಿಧಿಸುತ್ತದೆ. ಇದು ವಿಶ್ವಾಸಾರ್ಹ, ಪರಸ್ಪರ ಲಾಭದಾಯಕ ಮತ್ತು ಸಮತೋಲಿತ ಸಹಭಾಗಿತ್ವವನ್ನು ಭದ್ರಪಡಿಸುವ ಭಾರತದ ಕಾರ್ಯವಿಧಾನವನ್ನು ಬೆಂಬಲಿಸುತ್ತದೆ.”
“ಸಾಂಪ್ರದಾಯಿಕ ವ್ಯಾಪಾರ ಒಪ್ಪಂದವನ್ನು ಮೀರಿ, ಇದು ಕಾರ್ಯತಂತ್ರದ ಆಯಾಮಗಳೊಂದಿಗೆ ಸಮಗ್ರ ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಇದು ಅತ್ಯಂತ ಪರಿಣಾಮಕಾರಿಯಾದ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಒಂದಾಗಿದೆ. ಯುರೋಪ್ ಒಕ್ಕೂಟದೊಂದಿಗೆ ವ್ಯಾಪಾರ ಒಪ್ಪಂದದ ಮೂಲಕ ಭಾರತವು ಶೇ.99 ಕ್ಕಿಂತ ಹೆಚ್ಚು ಭಾರತೀಯ ರಫ್ತುಗಳಿಗೆ ಅಭೂತಪೂರ್ವ ಮಾರುಕಟ್ಟೆ ಪ್ರವೇಶವನ್ನು ಪಡೆದುಕೊಂಡಿದೆ, ಇದು 'ಮೇಕ್ ಇನ್ ಇಂಡಿಯಾ' ಉಪಕ್ರಮವನ್ನು ಬಲಪಡಿಸುತ್ತದೆ. ಸರಕುಗಳ ಹೊರತಾಗಿ, ಇದು ನುರಿತ ಭಾರತೀಯ ವೃತ್ತಿಪರರ ತಡೆರಹಿತ ಚಲನೆಗೆ ಅನುವು ಮಾಡಿಕೊಡುವ ಸಮಗ್ರ ಚಲನಶೀಲತೆಯ ನೀತಿಯ ಬೆಂಬಲವನ್ನೂ ಹೊಂದಿದೆ. ಆ ಮೂಲಕ ಸೇವೆಗಳಲ್ಲಿ ಹೆಚ್ಚಿನ ಮೌಲ್ಯದ ಅವಕಾಶಗಳನ್ನು ತೆರೆಯುತ್ತದೆ.”
“ಯುವ ಮತ್ತು ಕ್ರಿಯಾಶೀಲ ಕಾರ್ಯಪಡೆಯಿಂದ ಬೆಂಬಲಿತವಾದ ಮತ್ತು ವೇಗವಾಗಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾದ ಭಾರತವು, ಉದ್ಯೋಗಗಳನ್ನು ಸೃಷ್ಟಿಸಲು, ನಾವೀನ್ಯತೆಯನ್ನು ಉತ್ತೇಜಿಸಲು, ಕ್ಷೇತ್ರಗಳಾದ್ಯಂತ ಅವಕಾಶಗಳನ್ನು ತೆರೆಯಲು, ಜೊತೆಗೆ ಜಾಗತಿಕ ವೇದಿಕೆಯಲ್ಲಿ ತನ್ನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಈ ಮುಕ್ತ ವ್ಯಾಪಾರ ಒಪ್ಪಂದವನ್ನು ಬಳಸಿಕೊಳ್ಳಲು ಸಜ್ಜಾಗಿದೆ.”
ಭಾರತ-ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದವು ಸರಕುಗಳು, ಸೇವೆಗಳು, ವ್ಯಾಪಾರ ಪರಿಹಾರಗಳು, ಮೂಲ ನಿಯಮಗಳು, ಕಸ್ಟಮ್ಸ್ ಮತ್ತು ವ್ಯಾಪಾರ ಸಮನ್ವಯವನ್ನು ಮುಂತಾದ ಸಾಂಪ್ರದಾಯಿಕ ಕ್ಷೇತ್ರಗಳನ್ನು ಒಳಗೊಂಡಿದೆ. ಜೊತೆಗೆ ಡಿಜಿಟಲ್ ವ್ಯಾಪಾರದಂತಹ ಉದಯೋನ್ಮುಖ ಕ್ಷೇತ್ರಗಳು, ʻಎಸ್ಎಂಇʼಗಳು ಹಾಗೂ ಇತರೆ ಕ್ಷೇತ್ರಗಳನ್ನು ಒಳಗೊಂಡಿದೆ.
ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವು ತನ್ನ ಅಧಿಕ ಶ್ರಮಾಧಾರಿತ ವಲಯಗಳಾದ ಜವಳಿ, ಉಡುಪು, ಚರ್ಮ, ಪಾದರಕ್ಷೆಗಳು, ಸಾಗರ ಉತ್ಪನ್ನಗಳು, ರತ್ನಗಳು ಮತ್ತು ಆಭರಣಗಳು, ಕರಕುಶಲ ವಸ್ತುಗಳು, ಎಂಜಿನಿಯರಿಂಗ್ ಸರಕುಗಳು ಮತ್ತು ವಾಹನಗಳಿಗೆ ನಿರ್ಣಾಯಕ ಉತ್ತೇಜನ ನೀಡುತ್ತದೆ. ಒಪ್ಪಂದ ಜಾರಿಗೆ ಬಂದ ಬಳಿಕ ಸುಮಾರು 33 ಶತಕೋಟಿ ಅಮೆರಿಕನ್ ಡಾಲರ್ ರಫ್ತುಗಳ ಮೇಲೆ ಸುಂಕವು ಶೇ.10ರವರೆಗೆ ಕಡಿಮೆಯಾಗಿ ಶೂನ್ಯಕ್ಕೆ ಇಳಿಯಲಿದೆ. ಇದು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದರ ಜೊತೆಗೆ, ಕಾರ್ಮಿಕರು, ಕುಶಲಕರ್ಮಿಗಳು, ಮಹಿಳೆಯರು, ಯುವಕರು ಮತ್ತು ʻಎಂಎಸ್ಎಂಇʼಗಳನ್ನು ಸಬಲೀಕರಣಗೊಳಿಸುತ್ತದೆ. ಜೊತೆಗ ಭಾರತೀಯ ವ್ಯವಹಾರಗಳನ್ನು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಹೆಚ್ಚು ಆಳವಾಗಿ ಸಂಯೋಜಿಸುತ್ತದೆ ಹಾಗೂ ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ಪೂರೈಕೆದಾರನಾಗಿ ಭಾರತದ ಪಾತ್ರವನ್ನು ಬಲಪಡಿಸುತ್ತದೆ.
ವಾಹನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಪರಾಮರ್ಶಿಸಿದ ಮಾನದಂಡಗಳು ಮತ್ತು ಎಚ್ಚರಿಕೆಯಿಂದ ರಚಿಸಲಾದ ಕೋಟಾ ಆಧಾರಿತ ಆಟೋ ಉದಾರೀಕರಣ ಪ್ಯಾಕೇಜ್, ಯುರೋಪ್ ಒಕ್ಕೂಟದ ವಾಹನ ತಯಾರಕರಿಗೆ ತಮ್ಮ ವಾಹನ ಮಾದರಿಗಳನ್ನು ಭಾರತದಲ್ಲಿ ಹೆಚ್ಚಿನ ಬೆಲೆಯಲ್ಲಿ ಪರಿಚಯಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಭಾರತದಲ್ಲೇ ತಯಾರಿಸುವ ಮತ್ತು ಭಾರತದಿಂದ ರಫ್ತು ಮಾಡುವ ಸಾಧ್ಯತೆಗಳನ್ನು ತೆರೆಯುತ್ತದೆ. ಭಾರತೀಯ ಗ್ರಾಹಕರು ಉತ್ಕೃಷ್ಟ ಉತ್ಪನ್ನಗಳು ಮತ್ತು ಹೆಚ್ಚಿನ ಸ್ಪರ್ಧೆಯಿಂದ ಪ್ರಯೋಜನ ಪಡೆಯುತ್ತಾರೆ. ಯುರೋಪ್ ಒಕ್ಕೂಟದ ಮಾರುಕಟ್ಟೆಯಲ್ಲಿ ಪರಸ್ಪರ ಮಾರುಕಟ್ಟೆ ಪ್ರವೇಶವು ಭಾರತ ನಿರ್ಮಿತ ವಾಹನಗಳಿಗೆ ಯುರೋಪ್ ಒಕ್ಕೂಟದ ಮಾರುಕಟ್ಟೆಯನ್ನು ಪ್ರವೇಶಿಸಲು ಅವಕಾಶಗಳನ್ನು ತೆರೆಯುತ್ತದೆ.
ಭಾರತದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ವಲಯಗಳು ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರದ ಅಡಿಯಲ್ಲಿ ಪರಿವರ್ತನಾತ್ಮಕ ಉತ್ತೇಜನಕ್ಕೆ ಸಜ್ಜಾಗಿವೆ. ಇದು ಭಾರತೀಯ ರೈತರು ಮತ್ತು ಕೃಷಿ ಉದ್ಯಮಗಳಿಗೆ ಸಮಾನ ಅವಕಾಶವನ್ನು ಸೃಷ್ಟಿಸುತ್ತದೆ. ಚಹಾ, ಕಾಫಿ, ಮಸಾಲೆ ಪದಾರ್ಥಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳು ಹಾಗೂ ಸಂಸ್ಕರಿಸಿದ ಆಹಾರಗಳಂತಹ ಪ್ರಮುಖ ಸರಕುಗಳು ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ಪಡೆಯುತ್ತವೆ. ಇದು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುತ್ತದೆ, ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಉತ್ತೇಜಿಸುತ್ತವೆ ಮತ್ತು ವಿಶ್ವಾಸಾರ್ಹ ಜಾಗತಿಕ ಪೂರೈಕೆದಾರರಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ. ಹೈನುಗಾರಿಕೆ, ಧಾನ್ಯಗಳು, ಕೋಳಿ, ಸೋಯಾಮೀಲ್, ಕೆಲವು ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಸೂಕ್ಷ್ಮ ವಲಯಗಳನ್ನು ಭಾರತವು ಮುಕ್ತ ಮಾರುಕಟ್ಟೆಗೆ ಅವಕಾಶ ನೀಡದೆ ವಿವೇಚನೆಯಿಂದ ರಕ್ಷಿಸಿದೆ. ದೇಶೀಯ ಆದ್ಯತೆಗಳೊಂದಿಗೆ ರಫ್ತು ಬೆಳವಣಿಗೆಯನ್ನು ಸಮತೋಲನಗೊಳಿಸಿದೆ.
ಮುಕ್ತ ವ್ಯಾಪಾರ ಒಪ್ಪಂದವು ಸುಂಕ ಉದಾರೀಕರಣದ ಆಚೆಗೂ ಪ್ರಯೋಜನ ನೀಡುತ್ತದೆ. ಹೆಚ್ಚಿನ ನಿಯಂತ್ರಕ ಸಹಕಾರ, ಹೆಚ್ಚಿನ ಪಾರದರ್ಶಕತೆ ಮತ್ತು ಸುವ್ಯವಸ್ಥಿತಗೊಳಿಸಿದ ಕಸ್ಟಮ್ಸ್, ಸ್ಯಾನಿಟರಿ ಮತ್ತು ಫೈಟೊಸ್ಯಾನಿಟರಿ ಕಾರ್ಯವಿಧಾನಗಳ ಮೂಲಕ ಸುಂಕರಹಿತ ಅಡೆತಡೆಗಳನ್ನು ನಿಭಾಯಿಸಲು ಅನುವುಮಾಡುತ್ತದೆ. ವ್ಯಾಪಾರ ವಿಭಾಗಗಳಿಗೆ ತಾಂತ್ರಿಕ ಅಡೆತಡೆಗಳ ನಿವಾರಣೆಗೂ ಅವಕಾಶ ಒದಗಿಸುತ್ತದೆ.
ʻಸಿಬಿಎಎಂʼ ನಿಬಂಧನೆಗಳ ಅಡಿಯಲ್ಲಿ ಇಂಗಾಲದ ಬೆಲೆಗಳನ್ನು ಗುರುತಿಸುವಲ್ಲಿ ವರ್ಧಿತ ತಾಂತ್ರಿಕ ಸಹಕಾರ, ಪರಿಶೀಲಕರ ಗುರುತಿಸುವಿಕೆ ಜೊತೆಗೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಉದಯೋನ್ಮುಖ ಇಂಗಾಲದ ಅವಶ್ಯಕತೆಗಳನ್ನು ಅನುಸರಿಸಲು ಹಣಕಾಸಿನ ನೆರವು ಮತ್ತು ಉದ್ದೇಶಿತ ಬೆಂಬಲ ಸೇರಿದಂತೆ ಬದ್ಧತೆಗಳನ್ನು ಪಡೆಯಲಾಗಿದೆ.
ಸೇವಾ ವಲಯವು ಎರಡೂ ಆರ್ಥಿಕತೆಗಳಲ್ಲಿ ಪ್ರಬಲ ಮತ್ತು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಇದು ಭವಿಷ್ಯದಲ್ಲಿ ಹೆಚ್ಚು ವ್ಯಾಪಾರ-ವಹಿವಾಟಿಗೆ ಸಾಕ್ಷಿಯಾಗಲಿದೆ. ಮಾರುಕಟ್ಟೆ ಲಭ್ಯತೆಯ ನಿಶ್ಚಿತತೆ, ತಾರತಮ್ಯರಹಿತತೆ, ಡಿಜಿಟಲ್ ಮೂಲಕ ವಿತರಿಸಲಾಗುವ ಸೇವೆಗಳ ಮೇಲೆ ನಿಗಾ, ಸುಗಮ ಚಲನಶೀಲತೆಯು ಭಾರತದ ಸೇವಾ ರಫ್ತುಗಳಿಗೆ ಉತ್ತೇಜನ ನೀಡುತ್ತದೆ.
ಭಾರತದ ಬಲವಾಗಿರುವ ಐಟಿ ಮತ್ತು ಐಟಿ-ಆಧರಿತ ಸೇವೆಗಳು, ವೃತ್ತಿಪರ ಸೇವೆಗಳು, ಶಿಕ್ಷಣ, ಹಣಕಾಸು ಸೇವೆಗಳು, ಪ್ರವಾಸೋದ್ಯಮ, ನಿರ್ಮಾಣ ಮತ್ತು ಇತರ ಪ್ರಮುಖ ಕ್ಷೇತ್ರಗಳಲ್ಲಿ ಯುರೋಪ್ ಒಕ್ಕೂಟದಿಂದ ವಿಸ್ತೃತ ಮತ್ತು ವಾಣಿಜ್ಯವಾಗಿ ಮಹತ್ವದ ಬದ್ಧತೆಗಳನ್ನು ಪಡೆಯಲು ʻಮುಕ್ತ ವ್ಯಾಪಾರ ಒಪ್ಪಂದʼ ಅನುವು ಮಾಡಿಕೊಡುತ್ತದೆ.
ಯುರೋಪ್ ಒಕ್ಕೂಟದ 144 ಉಪ ವಲಯಗಳಿಗೆ (ಐಟಿ / ಐಟಿಇಎಸ್, ವೃತ್ತಿಪರ ಸೇವೆಗಳು, ಇತರ ವ್ಯಾಪಾರ ಸೇವೆಗಳು ಮತ್ತು ಶಿಕ್ಷಣ ಸೇವೆಗಳನ್ನು ಒಳಗೊಂಡಿದೆ) ಭಾರತದ ಊಹಿಸಬಹುದಾದ ಪ್ರವೇಶವು ಭಾರತೀಯ ಸೇವಾ ಪೂರೈಕೆದಾರರಿಗೆ ಉತ್ತೇಜನ ನೀಡುತ್ತದೆ. ಜೊತೆಗೆ, ಯುರೋಪ್ ಒಕ್ಕೂಟದ ಗ್ರಾಹಕರಿಗೆ ಸ್ಪರ್ಧಾತ್ಮಕವಾದ ವಿಶ್ವದರ್ಜೆಯ ಭಾರತೀಯ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಭಾರತವು ನೀಡುವ 102 ಉಪ ವಲಯಗಳಿಗೆ ಯುರೋಪ್ ಒಕ್ಕೂಟದ ಪ್ರವೇಶವು ಉನ್ನತ ತಂತ್ರಜ್ಞಾನದ ಸೇವೆಗಳನ್ನು ಭಾರತಕ್ಕೆ ತರುತ್ತದೆ, ಯುರೋಪ್ ಒಕ್ಕೂಟದಿಂದ ಭಾರತಕ್ಕೆ ಹೂಡಿಕೆಯನ್ನು ತರುತ್ತದೆ, ಇದರ ಪರಿಣಾಮವಾಗಿ ಪರಸ್ಪರ ಲಾಭದಾಯಕ ವ್ಯವಸ್ಥೆ ಏರ್ಪಡುತ್ತದೆ.
ಚಲನಶೀಲತೆಯಲ್ಲಿ, ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವು ಎರಡೂ ದಿಕ್ಕುಗಳಲ್ಲಿ ಅಲ್ಪಾವಧಿಯ, ತಾತ್ಕಾಲಿಕ ಮತ್ತು ವ್ಯಾಪಾರ ಪ್ರಯಾಣವನ್ನು ಒಳಗೊಂಡ ವ್ಯಾಪಾರ ಚಲನಶೀಲತೆಗೆ ಅನುಕೂಲಕರ ಮತ್ತು ಊಹಿಸಬಹುದಾದ ನೀತಿಯನ್ನು ಒದಗಿಸುತ್ತದೆ. ವಿಭಿನ್ನ ಸನ್ನಿವೇಶಗಳಲ್ಲಿ ಸೇವೆಗಳನ್ನು ಒದಗಿಸಲು ಎರಡು ಆರ್ಥಿಕತೆಗಳ ನಡುವೆ ಪ್ರಯಾಣಿಸಲು ಇದು ವೃತ್ತಿಪರರಿಗೆ ಅನುವು ಮಾಡಿಕೊಡುತ್ತದೆ. ʻಐಸಿಟಿʼಗಳ ಅವಲಂಬಿತರು ಮತ್ತು ಕುಟುಂಬ ಸದಸ್ಯರಿಗೆ ಪ್ರವೇಶ ಮತ್ತು ಕೆಲಸದ ಹಕ್ಕುಗಳ ಜೊತೆಗೆ ಅಂತರ ಕಾರ್ಪೊರೇಟ್ ವರ್ಗಾವಣೆದಾರರಿಗೆ (ಐಸಿಟಿ) ಮತ್ತು ವ್ಯಾಪಾರ ಸಂದರ್ಶಕರಿಗೆ ಇಯು ಮತ್ತು ಭಾರತ ಪರಸ್ಪರ ಚಲನಶೀಲತೆಯ ಬದ್ಧತೆಗಳನ್ನು ಒದಗಿಸುತ್ತವೆ. ಸೇವಾ ಪೂರೈಕೆದಾರರಿಗೆ (ಸಿಎಸ್ಎಸ್) 37 ವಲಯಗಳು / ಉಪ-ವಲಯಗಳು ಹಾಗೂ ಸ್ವತಂತ್ರ ವೃತ್ತಿಪರರಿಗಾಗಿ (ಐಪಿ) 17 ವಲಯಗಳು / ಉಪ-ವಲಯಗಳಲ್ಲಿ ಇಯು ಬದ್ಧತೆಗಳನ್ನು ನೀಡಿದೆ. ಅವುಗಳಲ್ಲಿ ಹಲವು ಭಾರತಕ್ಕೆ ಆಸಕ್ತಿಯ ಕ್ಷೇತ್ರಗಳಾಗಿವೆ. ಇವುಗಳಲ್ಲಿ ವೃತ್ತಿಪರ ಸೇವೆಗಳು, ಕಂಪ್ಯೂಟರ್ ಮತ್ತು ಸಂಬಂಧಿತ ಸೇವೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸೇವೆಗಳು ಮತ್ತು ಶಿಕ್ಷಣ ಸೇವೆಗಳು ಸೇರಿವೆ.
ವಿದ್ಯಾರ್ಥಿಗಳ ಚಲನಶೀಲತೆ ಮತ್ತು ಅಧ್ಯಯನದ ನಂತರದ ಕೆಲಸದ ಅವಕಾಶಗಳನ್ನು ಬೆಂಬಲಿಸುವ ನೀತಿಯ ಜೊತೆಗೆ ಐದು ವರ್ಷಗಳ ಅವಧಿಯಲ್ಲಿ ಸಾಮಾಜಿಕ ಭದ್ರತಾ ಒಪ್ಪಂದಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಭಾರತವು ಬದ್ಧತೆಯನ್ನು ಪಡೆದುಕೊಂಡಿದೆ.
ಹೆಚ್ಚುವರಿಯಾಗಿ, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ನಿಯಂತ್ರಿಸದ ಯುರೋಪ್ ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲಿ ಭಾರತೀಯ ಸಾಂಪ್ರದಾಯಿಕ ಔಷಧದ ವೈದ್ಯರಿಗೆ ಕೆಲಸ ಮಾಡಲು ಭಾರತವು ಪ್ರವೇಶವನ್ನು ಪಡೆದುಕೊಂಡಿದೆ.
ಮುಕ್ತ ವ್ಯಾಪಾರ ಒಪ್ಪಂದವು ಹಣಕಾಸು ಸೇವೆಗಳಲ್ಲಿ ನಾವೀನ್ಯತೆಯನ್ನು ಮುನ್ನಡೆಸಲು ಮತ್ತು ಗಡಿಯಾಚೆಗಿನ ಎಲೆಕ್ಟ್ರಾನಿಕ್ ಪಾವತಿಗಳನ್ನು ಸುರಕ್ಷಿತಗೊಳಿಸಲು ಸಹಕಾರವನ್ನು ಉತ್ತೇಜಿಸುತ್ತದೆ. ಜೊತೆಗೆ ಹಲವಾರು ಪ್ರಮುಖ ಇಯು ಸದಸ್ಯ ರಾಷ್ಟ್ರಗಳಲ್ಲಿ ಭಾರತಕ್ಕೆ ವರ್ಧಿತ ಮಾರುಕಟ್ಟೆ ಪ್ರವೇಶವನ್ನು ಒದಗಿಸುತ್ತದೆ. ಈ ನಿಬಂಧನೆಗಳು ಆರ್ಥಿಕ ಏಕೀಕರಣವನ್ನು ಆಳಗೊಳಿಸುತ್ತವೆ ಮತ್ತು ಹಣಕಾಸು ಸೇವೆಗಳ ವ್ಯಾಪಾರದ ಬೆಳವಣಿಗೆಯನ್ನು ಬೆಂಬಲಿಸುತ್ತವೆ ಎಂದು ನಿರೀಕ್ಷಿಸಲಾಗಿದೆ.
ಈ ಬದ್ಧತೆಗಳು ಹೆಚ್ಚಿನ ಮೌಲ್ಯದ ಉದ್ಯೋಗಾವಕಾಶಗಳನ್ನು ತೆರೆಯುವುದರ ಜೊತೆಗೆ ಪ್ರತಿಭೆ, ನಾವೀನ್ಯತೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತವೆ.
ಹಕ್ಕುಸ್ವಾಮ್ಯ, ಟ್ರೇಡ್ ಮಾರ್ಕ್ಗಳು, ವಿನ್ಯಾಸಗಳು, ವ್ಯಾಪಾರ ರಹಸ್ಯಗಳು, ಸಸ್ಯ ಪ್ರಭೇದಗಳು, ʻಐಪಿಆರ್ʼಗಳ ಜಾರಿಗೆ ಸಂಬಂಧಿಸಿದ ಹಾಗೂ ʻಟ್ರಿಪ್ಸ್ʼ ಅಡಿಯಲ್ಲಿ ಒದಗಿಸಲಾದ ಬೌದ್ಧಿಕ ಆಸ್ತಿ ರಕ್ಷಣೆಗಳನ್ನು ʻಮುಕ್ತ ವ್ಯಾಪಾರ ಒಪ್ಪಂದʼ ಬಲಪಡಿಸುತ್ತದೆ. ದೋಹಾ ಘೋಷಣೆಯನ್ನು ಇದು ದೃಢೀಕರಿಸುತ್ತದೆ ಮತ್ತು ಡಿಜಿಟಲ್ ಗ್ರಂಥಾಲಯಗಳ ಮಹತ್ವವನ್ನು ಗುರುತಿಸುತ್ತದೆ. ನಿರ್ದಿಷ್ಟವಾಗಿ ಭಾರತವು ಪ್ರಾರಂಭಿಸಿದ ಸಾಂಪ್ರದಾಯಿಕ ಜ್ಞಾನ ಡಿಜಿಟಲ್ ಗ್ರಂಥಾಲಯ (ಟಿಕೆಡಿಎಲ್) ಯೋಜನೆಯನ್ನು ಇದು ಬೆಂಬಲಿಸುತ್ತದೆ.
ಮುಕ್ತ ವ್ಯಾಪಾರ ಒಪ್ಪಂದವು ಭಾರತದ ತಾಂತ್ರಿಕ ಪ್ರಗತಿಯನ್ನು ಬೆಂಬಲಿಸುವ ಕೃತಕ ಬುದ್ಧಿಮತ್ತೆ, ಶುದ್ಧ ತಂತ್ರಜ್ಞಾನಗಳು ಮತ್ತು ಸೆಮಿಕಂಡಕ್ಟರ್ಗಳಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಸಹಕಾರವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.
ಮುಕ್ತ ವ್ಯಾಪಾರ ಒಪ್ಪಂದವು ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸುತ್ತದೆ, ರಫ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸುತ್ತದೆ ಮತ್ತು ಭಾರತೀಯ ವ್ಯವಹಾರಗಳನ್ನು ಯುರೋಪ್ ಹಾಗೂ ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಹೆಚ್ಚು ಸಂಯೋಜಿಸುವ ನಿರೀಕ್ಷೆಯಿದೆ.
ಭಾರತ ಮತ್ತು 27 ಸದಸ್ಯರ ಯುರೋಪ್ ಒಕ್ಕೂಟದ ನಡುವಿನ ದ್ವಿಪಕ್ಷೀಯ ಆರ್ಥಿಕ ಸಂಬಂಧ, ವ್ಯಾಪಾರವನ್ನು ಬಲವರ್ಧನೆ ಮತ್ತು ಕಾರ್ಯತಂತ್ರದ ಸಹಕಾರದಲ್ಲಿ ಈ ಒಪ್ಪಂದವು ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ವ್ಯಾಪಾರ, ಕ್ರಿಯಾತ್ಮಕ ಸ್ವರೂಪದ ವ್ಯಾಪಾರ, ವೇಗವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳು ಮತ್ತು ಹೆಚ್ಚುತ್ತಿರುವ ನಿಯಂತ್ರಣ ಸಂಕೀರ್ಣತೆಗಳ ಹಿನ್ನೆಲೆಯಲ್ಲಿ ಬಹುಮುಖ ಉದ್ದೇಶಗಳನ್ನು ಅರಿತುಕೊಂಡಿರುವ ಒಪ್ಪಂದವು ಭವಿಷ್ಯದಲ್ಲಿ ಹೊರಹೊಮ್ಮುವ ಹೊಸ, ಹಠಾತ್ ಸವಾಲುಗಳನ್ನು ಎದುರಿಸಲು ನೆರವಾಗಲಿದೆ. ಇದಕ್ಕಾಗಿ ಬಹು ಹಂತಗಳ ಪರಾಮರ್ಶೆ, ಸಮಾಲೋಚನೆ ಮತ್ತು ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಇದು ಒಳಗೊಂಡಿದೆ. ಎರಡೂ ಕಡೆಯವರಿಗೆ ಲಾಭವನ್ನು ತಲುಪಿಸಲು ಬಲವಾದ ಉಸ್ತುವಾರಿ ಮತ್ತು ವಿಶ್ವಾಸವನ್ನು ಈ ಒಪ್ಪಂದವು ಹೊಂದಿದೆ.
ಯುರೋಪ್ ಒಕ್ಕೂಟವು ಭಾರತದ 22ನೇ ʻಮುಕ್ತ ವ್ಯಾಪಾರ ಒಪ್ಪಂದʼ ಪಾಲುದಾರ ರಾಷ್ಟ್ರವಾಗಿದೆ. 2014ರಿಂದ ಭಾರತ ಸರ್ಕಾರವು ಮಾರಿಷಸ್, ಯುಎಇ, ಯುಕೆ, ಇಎಫ್ಟಿಎ, ಒಮನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಜೊತೆಗೆ ನ್ಯೂಜಿಲೆಂಡ್ನೊಂದಿಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿದೆ. 2025ರಲ್ಲಿ, ಭಾರತವು ಒಮನ್ ಮತ್ತು ಬ್ರಿಟನ್ ಜೊತೆಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತು ಮತ್ತು ನ್ಯೂಜಿಲೆಂಡ್ನೊಂದಿಗೆ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸುವುದಾಗಿ ಘೋಷಿಸಿತು.
ಭಾರತ-ಇಯು ವ್ಯಾಪಾರ ಒಪ್ಪಂದ, ಯುಕೆ ಮತ್ತು ಇಎಫ್ಟಿಎ ಜೊತೆಗಿನ ಭಾರತದ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಭಾರತೀಯ ವ್ಯವಹಾರಗಳು, ರಫ್ತುದಾರರು ಮತ್ತು ಉದ್ಯಮಿಗಳಿಗೆ ಸಂಪೂರ್ಣ ಯುರೋಪ್ ಮಾರುಕಟ್ಟೆ ಪ್ರವೇಶ ಪರಿಣಾಮಕಾರಿಯಾಗಿ ತೆರೆದುಕೊಳ್ಳಲಿದೆ.
ಇದು ವಾಣಿಜ್ಯ-ವ್ಯವಹಾರವನ್ನು ಹೆಚ್ಚಿಸುವುದರ ಜೊತೆಗೆ, ಹಂಚಿಕೆಯ ಮೌಲ್ಯಗಳನ್ನು ಬಲಪಡಿಸುತ್ತದೆ, ನಾವೀನ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ʻಎಂಎಸ್ಎಂʼಇಗಳು, ಮಹಿಳೆಯರು ಮತ್ತು ನುರಿತ ವೃತ್ತಿಪರರಿಂದ ಹಿಡಿದು ರೈತರು ಮತ್ತು ರಫ್ತುದಾರರವರೆಗೆ ವಲಯಗಳು ಮತ್ತು ಮಧ್ಯಸ್ಥಗಾರರಲ್ಲಿ ಅವಕಾಶಗಳನ್ನು ಸೃಷ್ಟಿಸುತ್ತದೆ. "ವಿಕಸಿತ ಭಾರತ 2047"ರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಒಪ್ಪಂದವು ಭಾರತವನ್ನು ಜಾಗತಿಕ ವೇದಿಕೆಯಲ್ಲಿ ಕ್ರಿಯಾತ್ಮಕ, ವಿಶ್ವಾಸಾರ್ಹ ಮತ್ತು ದೂರದೃಷ್ಟಿಯ ಪಾಲುದಾರನಾಗಿ ಇರಿಸುತ್ತದೆ, ಎರಡೂ ಪ್ರದೇಶಗಳಲ್ಲಿ ಎಲ್ಲರನ್ನೂ ಒಳಗೊಂಡ, ಸದೃಢ ಮತ್ತು ಭವಿಷ್ಯ-ಸನ್ನದ್ಧ ಬೆಳವಣಿಗೆಗೆ ಅಡಿಪಾಯವನ್ನು ಹಾಕುತ್ತದೆ.
*****
(रिलीज़ आईडी: 2219154)
आगंतुक पटल : 27