ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಸ್ಸಾಂನ ಕಲಿಯಾಬೋರ್‌ನಲ್ಲಿ ₹6,950 ಕೋಟಿಗೂ ಅಧಿಕ ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಭೂಮಿ ಪೂಜೆ


ಕಾಜಿರಂಗವು ಕೇವಲ ಒಂದು ರಾಷ್ಟ್ರೀಯ ಉದ್ಯಾನವನವಲ್ಲ—ಅದು ಅಸ್ಸಾಂನ ಆತ್ಮ, ಭಾರತದ ಜೀವವೈವಿಧ್ಯದ ಅಮೂಲ್ಯ ರತ್ನವಾಗಿದ್ದು, ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣವೆಂಬ ಗೌರವಕ್ಕೆ ಪಾತ್ರವಾಗಿದೆ: ಪ್ರಧಾನಮಂತ್ರಿ

ಪ್ರಕೃತಿಯನ್ನು ಸಂರಕ್ಷಿಸಿದಾಗ, ಅದರೊಂದಿಗೆ ಅವಕಾಶಗಳು ಕೂಡ ಚಿಗುರುತ್ತವೆ; ಇತ್ತೀಚಿನ ವರ್ಷಗಳಲ್ಲಿ ಕಾಜಿರಂಗದಲ್ಲಿ ಪ್ರವಾಸೋದ್ಯಮವು ಸ್ಥಿರವಾದ ಬೆಳವಣಿಗೆಯನ್ನು ಕಂಡಿದೆ. ಹೋಂ ಸ್ಟೇಗಳು, ಗೈಡ್ ಸೇವೆಗಳು, ಸಾರಿಗೆ, ಹಸ್ತಕಲೆಗಳು ಮತ್ತು ಸಣ್ಣ ಉದ್ಯಮಗಳ ಮೂಲಕ ಸ್ಥಳೀಯ ಯುವಕರು ಜೀವನೋಪಾಯದ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ: ಪ್ರಧಾನಮಂತ್ರಿ

ಪ್ರಕೃತಿ ಮತ್ತು ಪ್ರಗತಿಯು ಪರಸ್ಪರ ವಿರೋಧವಾಗಿವೆ ಹಾಗೂ ಇವೆರಡೂ ಒಟ್ಟಾಗಿ ಸಾಗಲು ಸಾಧ್ಯವಿಲ್ಲ ಎಂದು ಬಹಳ ಕಾಲದಿಂದ ನಂಬಲಾಗಿತ್ತು. ಇಂದು ಭಾರತವು ಇವೆರಡೂ ಏಕಕಾಲದಲ್ಲಿ ಜೊತೆಜೊತೆಯಾಗಿ ಸಾಗಬಲ್ಲವು ಎಂಬುದನ್ನು ವಿಶ್ವಕ್ಕೆ ತೋರಿಸಿಕೊಡುತ್ತಿದೆ: ಪ್ರಧಾನಮಂತ್ರಿ

ಈಶಾನ್ಯ ಭಾರತವು ಇನ್ನು ಮುಂದೆ ಅಭಿವೃದ್ಧಿಯಿಂದ ದೂರ ಉಳಿದಿಲ್ಲ; ಅದು ಈಗ ದೇಶದ ಹೃದಯಕ್ಕೆ ಮತ್ತು ದೆಹಲಿಗೆ ಅತ್ಯಂತ ಹತ್ತಿರವಾಗಿದೆ: ಪ್ರಧಾನಮಂತ್ರಿ

प्रविष्टि तिथि: 18 JAN 2026 12:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಕಲಿಯಾಬೋರ್‌ ನಲ್ಲಿ ₹6,950 ಕೋಟಿಗೂ ಅಧಿಕ ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ (NH-715 ರ ಕಲಿಯಾಬೋರ್-ನುಮಾಲಿಗಢ ವಿಭಾಗದ 4-ಲೇನ್ ರಸ್ತೆ) ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಂದು ತಮ್ಮನ್ನು ಆಶೀರ್ವದಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಕಾಜಿರಂಗಕ್ಕೆ ಮತ್ತೊಮ್ಮೆ ಭೇಟಿ ನೀಡಿದ್ದರಿಂದ ತಮ್ಮ ಹಳೆಯ ನೆನಪುಗಳು ಮರುಕಳಿಸಿವೆ ಎಂದು ಸ್ಮರಿಸಿದ ಅವರು, ಎರಡು ವರ್ಷಗಳ ಹಿಂದೆ ಕಾಜಿರಂಗದಲ್ಲಿ ಕಳೆದ ಕ್ಷಣಗಳು ತಮ್ಮ ಜೀವನದ ಅತ್ಯಂತ ವಿಶೇಷ ಅನುಭವಗಳಲ್ಲಿ ಒಂದಾಗಿವೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ಮೋದಿಯವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ಕಳೆಯುವ ಅವಕಾಶ ಸಿಕ್ಕಿದ್ದನ್ನು ಮತ್ತು ಮರುದಿನ ಬೆಳಿಗ್ಗೆ ಆನೆ ಸವಾರಿಯ ಮೂಲಕ ಈ ಪ್ರದೇಶದ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸಿದ್ದನ್ನು ವಿಶೇಷವಾಗಿ ಉಲ್ಲೇಖಿಸಿದರು

ಅಸ್ಸಾಂಗೆ ಭೇಟಿ ನೀಡುವುದು ತಮಗೆ ಯಾವಾಗಲೂ ಅಪಾರ ಸಂತೋಷ ತರುತ್ತದೆ ಎಂದು ಹೇಳಿದ ಶ್ರೀ ಮೋದಿಯವರು, ಇದನ್ನು ಶೂರರ ನಾಡು ಹಾಗೂ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಪುತ್ರ-ಪುತ್ರಿಯರ ನಾಡು ಎಂದು ಬಣ್ಣಿಸಿದರು. ನಿನ್ನೆಯಷ್ಟೇ ಗುವಾಹಟಿಯಲ್ಲಿ ನಡೆದ 'ಬಾಗುರೂಂಬಾ ದೊಹೊ' ಉತ್ಸವದಲ್ಲಿ ತಾವು ಪಾಲ್ಗೊಂಡಿದ್ದನ್ನು ನೆನಪಿಸಿದ ಪ್ರಧಾನಮಂತ್ರಿಯವರು, ಅಲ್ಲಿ ಬೋಡೋ ಸಮುದಾಯದ ಪುತ್ರಿಯರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಉಲ್ಲೇಖಿಸಿದರು. 10,000 ಕ್ಕೂ ಹೆಚ್ಚು ಕಲಾವಿದರ ಶಕ್ತಿ, 'ಖಾಮ್' ವಾದ್ಯದ ಲಯ ಮತ್ತು 'ಸಿಫುಂಗ್' ಕೊಳಲಿನ ಮಧುರ ಧ್ವನಿಯೊಂದಿಗೆ ಮೂಡಿಬಂದ ಬಾಗುರೂಂಬ ನೃತ್ಯದ ಅಸಾಧಾರಣ ಪ್ರಸ್ತುತಿಯು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಅವರು ಉಲ್ಲೇಖಿಸಿದರು ಮಾಡಿದರು. "ಬಾಗುರೂಂಬ ನೃತ್ಯದ ಅನುಭವವು ಕಣ್ಣುಗಳನ್ನು ತಣಿಸಿ, ನೇರವಾಗಿ ಹೃದಯವನ್ನು ಮುಟ್ಟಿತು" ಎಂದು ಅವರು ಅಭಿಪ್ರಾಯಪಟ್ಟರು. ಅಸ್ಸಾಂನ ಕಲಾವಿದರ ಗಮನಾರ್ಹ ಪ್ರಯತ್ನ, ಸಿದ್ಧತೆ ಮತ್ತು ಸಮನ್ವಯತೆಯನ್ನು ಶ್ಲಾಘಿಸಿದ ಪ್ರಧಾನಿ, ಇದು ನಿಜಕ್ಕೂ ಅದ್ಭುತ ಎಂದರು. ಈ ಉತ್ಸವದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಅವರು ಮತ್ತೊಮ್ಮೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ, ಈ ಕಾರ್ಯಕ್ರಮವನ್ನು ದೇಶಕ್ಕೆ ಮತ್ತು ಜಗತ್ತಿಗೆ ತಲುಪಿಸಲು ಶ್ರಮಿಸಿದ ಎಲ್ಲಾ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಟಿವಿ ಮಾಧ್ಯಮಗಳಿಗೆ ಅವರು ಧನ್ಯವಾದ ಅರ್ಪಿಸಿದರು.

ಕಳೆದ ವರ್ಷ ತಾವು ಝುಮೋಯಿರ್ ಮಹೋತ್ಸವದಲ್ಲಿ ಪಾಲ್ಗೊಂಡಿದ್ದನ್ನು ಸ್ಮರಿಸಿದ ಶ್ರೀ ಮೋದಿಯವರು, ಈ ಬಾರಿ ಮಘ್ ಬಿಹು ಹಬ್ಬದ ಸಮಯದಲ್ಲಿ ಅಸ್ಸಾಂಗೆ ಭೇಟಿ ನೀಡುವ ಅವಕಾಶ ಲಭಿಸಿದೆ ಎಂದು ತಿಳಿಸಿದರು. ಕೇವಲ ಒಂದು ತಿಂಗಳ ಹಿಂದೆಯಷ್ಟೇ ತಾವು ಅಭಿವೃದ್ಧಿ ಯೋಜನೆಗಳಿಗಾಗಿ ಇಲ್ಲಿಗೆ ಬಂದಿದ್ದನ್ನು ಉಲ್ಲೇಖಿಸಿದ ಅವರು, ಗುವಾಹಟಿಯ ವಿಸ್ತೃತ ಲೋಕಪ್ರಿಯ ಗೋಪಿನಾಥ್ ಬರ್ದೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದ್ದನ್ನು ಮತ್ತು ನಮ್ರೂಪ್‌ ನಲ್ಲಿ ಅಮೋನಿಯಾ ಯೂರಿಯಾ ಸಂಕೀರ್ಣಕ್ಕೆ ಶಂಕುಸ್ಥಾಪನೆ ಮಾಡಿದ್ದನ್ನು ಉಲ್ಲೇಖಿಸಿದರು. ಇಂತಹ ಸಂದರ್ಭಗಳು ಸರ್ಕಾರದ “ವಿಕಾಸ್ ಭಿ, ವಿರಾಸತ್ ಭಿ” (ಅಭಿವೃದ್ಧಿಯೂ ಹೌದು, ಪರಂಪರೆಯೂ ಹೌದು) ಎಂಬ ಮಂತ್ರವನ್ನು ಮತ್ತಷ್ಟು ಬಲಪಡಿಸಿವೆ ಎಂದು ಅವರು ಅಭಿಪ್ರಾಯಪಟ್ಟರು.

ಅಸ್ಸಾಂನ ಭೂತಕಾಲ, ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಕಲಿಯಾಬೋರ್ ಹೊಂದಿರುವ ಐತಿಹಾಸಿಕ ಮಹತ್ವವನ್ನು ಪ್ರಧಾನಮಂತ್ರಿಯವರು ಹೇಳಿದರು. ಇದು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಪ್ರವೇಶ ದ್ವಾರ ಮಾತ್ರವಲ್ಲದೆ, ಮೇಲ್ ಅಸ್ಸಾಂನ ಸಂಪರ್ಕದ ಪ್ರಮುಖ ಕೇಂದ್ರವೂ ಆಗಿದೆ ಎಂದು ಅವರು ತಿಳಿಸಿದರು. ಮಹಾನ್ ಯೋಧ ಲಚಿತ್ ಬರ್ಫೂಕನ್ ಅವರು ಮೊಘಲ್ ಆಕ್ರಮಣಕಾರರನ್ನು ಓಡಿಸಲು ತಂತ್ರ ರೂಪಿಸಿದ್ದು ಇದೇ ಕಲಿಯಾಬೋರ್‌ ನಿಂದ ಎಂಬುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅವರ ನಾಯಕತ್ವದಲ್ಲಿ ಅಸ್ಸಾಂನ ಜನರು ಧೈರ್ಯ, ಏಕತೆ ಮತ್ತು ದೃಢನಿಶ್ಚಯದಿಂದ ಮೊಘಲ್ ಸೈನ್ಯವನ್ನು ಸೋಲಿಸಿದರು ಎಂದು ಹೇಳಿದರು. ಇದು ಕೇವಲ ಮಿಲಿಟರಿ ವಿಜಯವಲ್ಲ, ಬದಲಿಗೆ ಅಸ್ಸಾಂನ ಹೆಮ್ಮೆ ಮತ್ತು ಆತ್ಮವಿಶ್ವಾಸದ ಘೋಷಣೆಯಾಗಿದೆ ಎಂದು ಶ್ರೀ ಮೋದಿಯವರು ಪ್ರತಿಪಾದಿಸಿದರು. ಅಹೋಂ ಆಳ್ವಿಕೆಯ ಕಾಲದಿಂದಲೂ ಕಲಿಯಾಬೋರ್ ಆಯಕಟ್ಟಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಬೆಟ್ಟು ಮಾಡಿದ ಅವರು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಈ ಪ್ರದೇಶವು ಸಂಪರ್ಕ ಮತ್ತು ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿ ಬದಲಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಕಳೆದ ಒಂದೂವರೆ ವರ್ಷಗಳಿಂದ ಪಕ್ಷದ ಮೇಲಿನ ನಂಬಿಕೆ ಸ್ಥಿರವಾಗಿ ಬೆಳೆಯುತ್ತಿದ್ದು, ಇಂದು ದೇಶಾದ್ಯಂತ ಜನಸಾಮಾನ್ಯರ ಮೊದಲ ಆಯ್ಕೆ ನಮ್ಮ ಪಕ್ಷವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇತ್ತೀಚಿನ ಬಿಹಾರ ಚುನಾವಣೆಯಲ್ಲಿ, 20 ವರ್ಷಗಳ ನಂತರವೂ ಜನರು ನಮಗೆ ದಾಖಲೆ ಪ್ರಮಾಣದ ಮತಗಳನ್ನು ಮತ್ತು ಸ್ಥಾನಗಳನ್ನು ನೀಡಿದ್ದಾರೆ ಎಂದು ಅವರು ಹೈಲೈಟ್ ಮಾಡಿದರು. ಕೇವಲ ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಪ್ರಮುಖ ನಗರಗಳ ಮೇಯರ್ ಮತ್ತು ಕೌನ್ಸಿಲರ್ ಚುನಾವಣಾ ಫಲಿತಾಂಶಗಳು ಬಂದಿದ್ದು, ವಿಶ್ವದ ಅತಿದೊಡ್ಡ ಮಹಾನಗರ ಪಾಲಿಕೆಗಳಲ್ಲಿ ಒಂದಾದ ಮುಂಬೈ, ಮೊದಲ ಬಾರಿಗೆ ನಮ್ಮ ಪಕ್ಷಕ್ಕೆ ದಾಖಲೆಯ ಜನಾದೇಶ ನೀಡಿದೆ ಎಂದು ಅವರು ತಿಳಿಸಿದರು. ಮಹಾರಾಷ್ಟ್ರದ ಹೆಚ್ಚಿನ ನಗರಗಳ ಜನರು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಕೇರಳದ ಜನರು ಕೂಡ ಈ ಹಿಂದೆ ತಮ್ಮ ಪಕ್ಷಕ್ಕೆ ಭಾರಿ ಬೆಂಬಲ ನೀಡಿದ್ದರು ಮತ್ತು ಇದೇ ಮೊದಲ ಬಾರಿಗೆ ರಾಜ್ಯದ ರಾಜಧಾನಿ ತಿರುವನಂತಪುರದಲ್ಲಿ ಮೇಯರ್ ಸ್ಥಾನವನ್ನು ಗೆಲ್ಲುವ ಮೂಲಕ ಪಕ್ಷವು ಅಲ್ಲಿ ಖಾತೆ ತೆರೆದಿದೆ ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು. ಪ್ರಗತಿ ಮತ್ತು ಪರಂಪರೆ ಎರಡರ ಮೇಲೂ ಗಮನ ಕೇಂದ್ರೀಕರಿಸುವ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯನ್ನು ಮತದಾರರು ಬಯಸುತ್ತಿದ್ದಾರೆ ಎಂಬುದನ್ನು ಇತ್ತೀಚಿನ ಚುನಾವಣಾ ಫಲಿತಾಂಶಗಳು ಸ್ಪಷ್ಟವಾಗಿ ತೋರಿಸುತ್ತಿವೆ, ಆದ್ದರಿಂದಲೇ ಜನರು ನಮ್ಮನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಇದೇ ವೇಳೆ ವಿರೋಧ ಪಕ್ಷಗಳ ನಕಾರಾತ್ಮಕ ರಾಜಕೀಯವನ್ನು ದೇಶವು ನಿರಂತರವಾಗಿ ತಿರಸ್ಕರಿಸುತ್ತಿದೆ ಎಂಬ ಮತ್ತೊಂದು ಸಂದೇಶವನ್ನು ಈ ಚುನಾವಣೆಗಳು ನೀಡುತ್ತಿವೆ ಎಂದು ಶ್ರೀ ಮೋದಿಯವರು ಪ್ರತಿಪಾದಿಸಿದರು. ವಿರೋಧ ಪಕ್ಷವು ಹುಟ್ಟಿದ ನಗರವಾದ ಮುಂಬೈನಲ್ಲಿಯೇ ಅದು ಇಂದು ನಾಲ್ಕನೇ ಅಥವಾ ಐದನೇ ಸ್ಥಾನಕ್ಕೆ ಕುಸಿದಿದೆ ಮತ್ತು ದಶಕಗಳ ಕಾಲ ಆಳ್ವಿಕೆ ನಡೆಸಿದ ಮಹಾರಾಷ್ಟ್ರದಲ್ಲಿ ಆ ಪಕ್ಷವು ಸಂಪೂರ್ಣವಾಗಿ ಕ್ಷೀಣಿಸಿದೆ ಎಂದು ಅವರು ಬೆಟ್ಟು ಮಾಡಿದರು. ವಿರೋಧ ಪಕ್ಷದ ಬಳಿ ಅಭಿವೃದ್ಧಿಯ ಯಾವುದೇ ಕಾರ್ಯಸೂಚಿ ಇಲ್ಲದ ಕಾರಣ ಅದು ದೇಶದ ವಿಶ್ವಾಸವನ್ನು ಕಳೆದುಕೊಂಡಿದೆ; ಅಂತಹ ಪಕ್ಷವು ಅಸ್ಸಾಂ ಅಥವಾ ಕಾಜಿರಂಗದ ಹಿತಾಸಕ್ತಿಗಳನ್ನು ಎಂದಿಗೂ ಕಾಪಾಡಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.

ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರು ಕಾಜಿರಂಗದ ಸೌಂದರ್ಯವನ್ನು ಅಪಾರ ಪ್ರೀತಿಯಿಂದ ಬಣ್ಣಿಸಿದ ಮಾತುಗಳನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಈ ಸಾಲುಗಳು ಕಾಜಿರಂಗದ ಮೇಲಿರುವ ಪ್ರೀತಿ ಮತ್ತು ಪ್ರಕೃತಿಯೊಂದಿಗೆ ಅಸ್ಸಾಂನ ಜನತೆಗಿರುವ ಅವಿನಾಭಾವ ಸಂಬಂಧವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ತಿಳಿಸಿದರು. ಕಾಜಿರಂಗವು ಕೇವಲ ಒಂದು ರಾಷ್ಟ್ರೀಯ ಉದ್ಯಾನವನವಲ್ಲ, ಅದು ಅಸ್ಸಾಂನ ಆತ್ಮ ಮತ್ತು ಭಾರತದ ಜೀವವೈವಿಧ್ಯದ ಅಮೂಲ್ಯ ರತ್ನವಾಗಿದ್ದು, ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣ ಎಂಬ ಮಾನ್ಯತೆ ಪಡೆದಿದೆ ಎಂದು ಅವರು ಒತ್ತಿ ಹೇಳಿದರು. ಕಾಜಿರಂಗ ಮತ್ತು ಅಲ್ಲಿನ ವನ್ಯಜೀವಿಗಳನ್ನು ಸಂರಕ್ಷಿಸುವುದು ಕೇವಲ ಪರಿಸರ ರಕ್ಷಣೆಯಲ್ಲ, ಅದು ಅಸ್ಸಾಂನ ಭವಿಷ್ಯ ಮತ್ತು ಮುಂದಿನ ಪೀಳಿಗೆಯ ಬಗೆಗಿನ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಅಸ್ಸಾಂನ ಮಣ್ಣಿನಿಂದ ಹೊಸ ಯೋಜನೆಗಳಿಗೆ ಚಾಲನೆ ನೀಡುತ್ತಿರುವುದಾಗಿ ಘೋಷಿಸಿದ ಶ್ರೀ ಮೋದಿಯವರು, ವ್ಯಾಪಕ ಪ್ರಭಾವ ಬೀರಲಿರುವ ಈ ಉಪಕ್ರಮಗಳಿಗಾಗಿ ಅಲ್ಲಿನ ಜನತೆಯನ್ನು ಅಭಿನಂದಿಸಿದರು.

ಕಾಜಿರಂಗವು ಒಂಟಿ ಕೊಂಬಿನ ಖಡ್ಗಮೃಗಗಳ ನೆಲೆಯಾಗಿದೆ ಎಂಬುದನ್ನು ಹೇಳಿದ ಪ್ರಧಾನಮಂತ್ರಿಯವರು, ಪ್ರವಾಹದ ಸಮಯದಲ್ಲಿ ವನ್ಯಜೀವಿಗಳು ಎತ್ತರದ ಪ್ರದೇಶಗಳನ್ನು ಹುಡುಕುತ್ತಾ ರಾಷ್ಟ್ರೀಯ ಹೆದ್ದಾರಿಯನ್ನು ದಾಟುವಾಗ ಎದುರಿಸುವ ಸವಾಲುಗಳನ್ನು ಮತ್ತು ಆಗಾಗ್ಗೆ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಯನ್ನು ವಿವರಿಸಿದರು. ಅರಣ್ಯವನ್ನು ಸುರಕ್ಷಿತವಾಗಿರಿಸುವ ಜೊತೆಗೆ ಸುಗಮ ಸಂಚಾರವನ್ನು ಖಚಿತಪಡಿಸುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ಅವರು ತಿಳಿಸಿದರು. ಈ ದೃಷ್ಟಿಕೋನದ ಅಡಿಯಲ್ಲಿ, ಕಲಿಯಾಬೋರ್‌ ನಿಂದ ನುಮಾಲಿಗಢದವರೆಗೆ ಸುಮಾರು ₹7,000 ಕೋಟಿ ವೆಚ್ಚದಲ್ಲಿ 90 ಕಿಲೋಮೀಟರ್ ಉದ್ದದ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ 35 ಕಿಲೋಮೀಟರ್ ಉದ್ದದ 'ಎಲಿವೇಟೆಡ್ ವೈಲ್ಡ್‌ಲೈಫ್ ಕಾರಿಡಾರ್' (ಮೇಲ್ಸೇತುವೆ ಮಾದರಿಯ ವನ್ಯಜೀವಿ ಕಾರಿಡಾರ್) ಕೂಡ ಸೇರಿದೆ ಎಂದು ಅವರು ಮಾಹಿತಿ ನೀಡಿದರು. ಈ ಮೇಲ್ಸೇತುವೆಯ ಮೇಲೆ ವಾಹನಗಳು ಸಂಚರಿಸಲಿದ್ದರೆ, ಕೆಳಭಾಗದಲ್ಲಿ ವನ್ಯಜೀವಿಗಳ ಚಲನವಲನಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಖಡ್ಗಮೃಗಗಳು, ಆನೆಗಳು ಮತ್ತು ಹುಲಿಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳನ್ನು ಗಮನದಲ್ಲಿಟ್ಟುಕೊಂಡು ಈ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಈ ಕಾರಿಡಾರ್ ಮೇಲ್ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಹೊಸ ರೈಲು ಸೇವೆಗಳೊಂದಿಗೆ ಜನರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. ಈ ಪ್ರಮುಖ ಯೋಜನೆಗಳಿಗಾಗಿ ಅವರು ಅಸ್ಸಾಂನ ಜನತೆಗೆ ಮತ್ತು ಇಡೀ ದೇಶಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ಪ್ರಕೃತಿಯನ್ನು ರಕ್ಷಿಸಿದಾಗ ಹೊಸ ಅವಕಾಶಗಳು ಕೂಡ ಸೃಷ್ಟಿಯಾಗುತ್ತವೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಇತ್ತೀಚಿನ ವರ್ಷಗಳಲ್ಲಿ ಕಾಜಿರಂಗದಲ್ಲಿ ಪ್ರವಾಸೋದ್ಯಮವು ಸ್ಥಿರವಾಗಿ ಏರಿಕೆ ಕಾಣುತ್ತಿರುವುದನ್ನು ಬೆಟ್ಟು ಮಾಡಿದರು. ಹೋಂಸ್ಟೇಗಳು, ಗೈಡ್ ಸೇವೆಗಳು, ಸಾರಿಗೆ, ಹಸ್ತಶಿಲ್ಪ ಮತ್ತು ಸಣ್ಣ ವ್ಯವಹಾರಗಳ ಮೂಲಕ ಸ್ಥಳೀಯ ಯುವಕರು ಆದಾಯದ ಹೊಸ ಮೂಲಗಳನ್ನು ಕಂಡುಕೊಂಡಿದ್ದಾರೆ ಎಂದು ಅವರು ಹೇಳಿದರು.

ಅಸ್ಸಾಂನ ಜನತೆ ಮತ್ತು ಸರ್ಕಾರ ಮಾಡಿರುವ ಮತ್ತೊಂದು ಸಾಧನೆಯನ್ನು ಶ್ಲಾಘಿಸಿದ ಶ್ರೀ ಮೋದಿಯವರು, ಒಂದು ಕಾಲದಲ್ಲಿ ಖಡ್ಗಮೃಗಗಳ ಬೇಟೆ ದೊಡ್ಡ ಆತಂಕದ ವಿಷಯವಾಗಿತ್ತು ಎಂದು ನೆನಪಿಸಿಕೊಂಡರು. 2013 ಮತ್ತು 2014ರಲ್ಲಿ ಡಜನ್ಗಟ್ಟಲೆ ಒಂಟಿ ಕೊಂಬಿನ ಖಡ್ಗಮೃಗಗಳನ್ನು ಕೊಲ್ಲಲಾಗಿತ್ತು. ಆದರೆ, ನಮ್ಮ ಸರ್ಕಾರವು ಇದು ಹೀಗೆಯೇ ಮುಂದುವರಿಯಬಾರದು ಎಂದು ನಿರ್ಧರಿಸಿ, ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಿತು. ಅರಣ್ಯ ಇಲಾಖೆಗೆ ಆಧುನಿಕ ಸಂಪನ್ಮೂಲಗಳನ್ನು ಒದಗಿಸುವುದು, ಕಣ್ಗಾವಲು ಹೆಚ್ಚಿಸುವುದು ಮತ್ತು 'ವನ ದುರ್ಗಾ' ಪಡೆಯ ಮೂಲಕ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲಾಯಿತು ಎಂದು ಅವರು ತಿಳಿಸಿದರು. ಇದರ ಫಲವಾಗಿ, 2025ರಲ್ಲಿ ಖಡ್ಗಮೃಗ ಬೇಟೆಯ ಒಂದೂ ಪ್ರಕರಣ ವರದಿಯಾಗಿಲ್ಲ ಎಂದು ಅವರು ಹೇಳಿದರು. ಸರ್ಕಾರದ ರಾಜಕೀಯ ಇಚ್ಛಾಶಕ್ತಿ ಮತ್ತು ಅಸ್ಸಾಂನ ಜನರ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಪ್ರಕೃತಿ ಮತ್ತು ಪ್ರಗತಿ ಎಂಬುದು ಪರಸ್ಪರ ವಿರುದ್ಧವಾದುದು ಎಂದು ದೀರ್ಘಕಾಲದವರೆಗೆ ನಂಬಲಾಗಿತ್ತು, ಆದರೆ ಇಂದು ಭಾರತವು ಆರ್ಥಿಕತೆ ಮತ್ತು ಪರಿಸರ ಎರಡೂ ಒಟ್ಟಾಗಿ ಸಾಗಬಲ್ಲವು ಎಂಬುದನ್ನು ಜಗತ್ತಿಗೆ ತೋರಿಸಿಕೊಡುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಳೆದ ದಶಕದಲ್ಲಿ ಅರಣ್ಯ ಮತ್ತು ಹಸಿರು ಹೊದಿಕೆಯು ಹೆಚ್ಚಾಗಿದೆ. ಜನರು ಅತ್ಯಂತ ಉತ್ಸಾಹದಿಂದ "ಏಕ್ ಪೇಡ್ ಮಾ ಕೆ ನಾಮ್" (Ek Ped Maa Ke Naam) ಅಭಿಯಾನದಲ್ಲಿ ಭಾಗವಹಿಸಿದ್ದು, ಇದರ ಅಡಿಯಲ್ಲಿ 260 ಕೋಟಿಗೂ ಅಧಿಕ ಸಸಿಗಳನ್ನು ನೆಡಲಾಗಿದೆ ಎಂದು ಅವರು ತಿಳಿಸಿದರು. 2014ರಿಂದ ಹುಲಿ ಮತ್ತು ಆನೆ ಸಂರಕ್ಷಿತ ಪ್ರದೇಶಗಳ ಸಂಖ್ಯೆ ಬೆಳೆದಿದೆ ಹಾಗೂ ಸಂರಕ್ಷಿತ ಮತ್ತು ಸಮುದಾಯ ಪ್ರದೇಶಗಳು ವಿಸ್ತಾರಗೊಂಡಿವೆ. ಭಾರತದಲ್ಲಿ ಅಳಿದುಹೋಗಿದ್ದ ಚೀತಾಗಳನ್ನು ಈಗ ಮರಳಿ ತರಲಾಗಿದ್ದು, ಅವು ಹೊಸ ಆಕರ್ಷಣೆಯಾಗಿವೆ ಎಂದು ಶ್ರೀ ಮೋದಿಯವರು ಅಭಿಪ್ರಾಯಪಟ್ಟರು. ಅಲ್ಲದೆ, ಭಾರತವು ಜೌಗು ಪ್ರದೇಶಗಳ ಸಂರಕ್ಷಣೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಏಷ್ಯಾದ ಅತಿದೊಡ್ಡ 'ರಾಮ್ಸರ್ ನೆಟ್‌ವರ್ಕ್' ಹೊಂದಿದೆ ಮತ್ತು ರಾಮ್ಸರ್ ತಾಣಗಳ ಸಂಖ್ಯೆಯಲ್ಲಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. ಅಸ್ಸಾಂ ಕೂಡ ಅಭಿವೃದ್ಧಿಯು ಪರಂಪರೆಯ ಸಂರಕ್ಷಣೆ ಮತ್ತು ಪ್ರಕೃತಿಯ ರಕ್ಷಣೆಯೊಂದಿಗೆ ಹೇಗೆ ಕೈಜೋಡಿಸಿ ಸಾಗಬಹುದು ಎಂಬುದನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಈಶಾನ್ಯ ರಾಜ್ಯಗಳ ಅತಿದೊಡ್ಡ ನೋವು ಯಾವಾಗಲೂ 'ದೂರ'ವೇ ಆಗಿತ್ತು—ಅದು ಮನಸ್ಸುಗಳ ನಡುವಿನ ದೂರ ಇರಬಹುದು ಅಥವಾ ಸ್ಥಳಗಳ ನಡುವಿನ ಭೌಗೋಳಿಕ ದೂರ ಇರಬಹುದು ಎಂದು ಶ್ರೀ ಮೋದಿಯವರು ಅಭಿಪ್ರಾಯಪಟ್ಟರು. ದಶಕಗಳ ಕಾಲ ಈ ಭಾಗದ ಜನರು ಅಭಿವೃದ್ಧಿಯು ಬೇರೆಡೆ ನಡೆಯುತ್ತಿದೆ ಮತ್ತು ತಾವು ಹಿಂದುಳಿಯುತ್ತಿದ್ದೇವೆ ಎಂಬ ಭಾವನೆಯಲ್ಲಿದ್ದರು. ಇದು ಆರ್ಥಿಕತೆಯ ಮೇಲೆ ಮಾತ್ರವಲ್ಲದೆ, ಜನರ ನಂಬಿಕೆಯ ಮೇಲೂ ಪರಿಣಾಮ ಬೀರಿತ್ತು ಎಂದು ಅವರು ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಕ ನಮ್ಮ ಪಕ್ಷವು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಈ ಭಾವನೆಯನ್ನು ಬದಲಾಯಿಸಿದೆ ಎಂದು ಅವರು ಒತ್ತಿ ಹೇಳಿದರು. ಅಸ್ಸಾಂ ಅನ್ನು ರಸ್ತೆ ಮಾರ್ಗ, ರೈಲು ಮಾರ್ಗ, ವಾಯು ಮಾರ್ಗ ಮತ್ತು ಜಲಮಾರ್ಗಗಳ ಮೂಲಕ ಸಂಪರ್ಕಿಸಲು ಏಕಕಾಲದಲ್ಲಿ ಕೆಲಸಗಳು ಪ್ರಾರಂಭವಾಗಿವೆ ಎಂದು ಅವರು ಉಲ್ಲೇಖಿಸಿದರು.

ರೈಲ್ವೆ ಸಂಪರ್ಕದ ವಿಸ್ತರಣೆಯು ಸಾಮಾಜಿಕ ಮತ್ತು ಆರ್ಥಿಕ ಸ್ತರಗಳೆರಡಕ್ಕೂ ಪ್ರಯೋಜನಕಾರಿ, ಹೀಗಾಗಿ ಇದು ಈಶಾನ್ಯ ರಾಜ್ಯಗಳಿಗೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಶ್ರೀ ಮೋದಿಯವರು ಪ್ರತಿಪಾದಿಸಿದರು. ಈ ವಿಷಯದಲ್ಲಿ ವಿರೋಧ ಪಕ್ಷಗಳ ನಿರ್ಲಕ್ಷ್ಯವನ್ನು ಟೀಕಿಸಿದ ಅವರು, ಈ ಹಿಂದೆ ಕೇಂದ್ರದಲ್ಲಿ ಅವರು ಅಧಿಕಾರದಲ್ಲಿದ್ದಾಗ ಅಸ್ಸಾಂನ ರೈಲ್ವೆ ಬಜೆಟ್‌ ಗೆ ಕೇವಲ ₹2,000 ಕೋಟಿ ನೀಡಲಾಗುತ್ತಿತ್ತು; ಆದರೆ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇದನ್ನು ವಾರ್ಷಿಕವಾಗಿ ಸುಮಾರು ₹10,000 ಕೋಟಿಗೆ ಅಂದರೆ ಐದು ಪಟ್ಟು ಹೆಚ್ಚಿಸಲಾಗಿದೆ ಎಂದು ಬೆಟ್ಟು ಮಾಡಿದರು. ಈ ಹೆಚ್ಚುವರಿ ಹೂಡಿಕೆಯು ಬೃಹತ್ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿಗೆ ಕಾರಣವಾಗಿದ್ದು, ಹೊಸ ರೈಲು ಮಾರ್ಗಗಳು, ಹಳಿಗಳ ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದೀಕರಣವು ರೈಲ್ವೆ ಸಾಮರ್ಥ್ಯ ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಿವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಕಲಿಯಾಬೋರ್‌ ನಿಂದ ಮೂರು ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಇದು ಅಸ್ಸಾಂನ ರೈಲ್ವೆ ಸಂಪರ್ಕದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ವಂದೇ ಭಾರತ್ ಸ್ಲೀಪರ್ ರೈಲು ಗುವಾಹಟಿಯನ್ನು ಕೋಲ್ಕತ್ತಾದೊಂದಿಗೆ ಸಂಪರ್ಕಿಸಲಿದ್ದು, ಸುದೀರ್ಘ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲಿದೆ. ಇನ್ನು ಎರಡು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶದ ಪ್ರಮುಖ ನಿಲ್ದಾಣಗಳನ್ನು ಒಳಗೊಳ್ಳಲಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ನೇರ ಪ್ರಯೋಜನ ನೀಡಲಿವೆ. ಈ ರೈಲುಗಳು ಅಸ್ಸಾಂನ ವ್ಯಾಪಾರಿಗಳಿಗೆ ಹೊಸ ಮಾರುಕಟ್ಟೆಗಳನ್ನು ತಲುಪಲು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ಸುಲಭವಾಗಿ ಪಡೆಯಲು ಮತ್ತು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು ನೆರವಾಗಲಿವೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ಇಂತಹ ಸಂಪರ್ಕ ವಿಸ್ತರಣೆಯು ಈಶಾನ್ಯ ರಾಜ್ಯಗಳು ಇನ್ನು ಮುಂದೆ ಅಭಿವೃದ್ಧಿಯ ಅಂಚಿನಲ್ಲಿಲ್ಲ, ಅವು ದೂರವೂ ಇಲ್ಲ; ಬದಲಿಗೆ ಹೃದಯಕ್ಕೆ ಹತ್ತಿರ ಮತ್ತು ದೆಹಲಿಗೆ ಹತ್ತಿರವಾಗಿವೆ ಎಂಬ ವಿಶ್ವಾಸವನ್ನು ಮೂಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಅಸ್ಸಾಂ ಎದುರಿಸುತ್ತಿರುವ ಪ್ರಮುಖ ಸವಾಲಾದ ತನ್ನ ಗುರುತು ಮತ್ತು ಸಂಸ್ಕೃತಿಯ ರಕ್ಷಣೆಯ ಬಗ್ಗೆಯೂ ಪ್ರಧಾನಮಂತ್ರಿ ಅವರು ಮಾತನಾಡಿದರು. ಅಸ್ಸಾಂನ ಅಂದಿನ ಸರ್ಕಾರವು ನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಿರುವುದನ್ನು ಮತ್ತು ಅರಣ್ಯಗಳು, ಐತಿಹಾಸಿಕ ಸಾಂಸ್ಕೃತಿಕ ತಾಣಗಳು ಹಾಗೂ ಜನರ ಭೂಮಿಯನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಿರುವುದನ್ನು ಅವರು ಶ್ಲಾಘಿಸಿದರು, ಈ ಕ್ರಮವನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ವಿಷಯದಲ್ಲಿ ವಿರೋಧ ಪಕ್ಷದ ಧೋರಣೆಯನ್ನು ಟೀಕಿಸಿದ ಪ್ರಧಾನಮಂತ್ರಿ ಶ್ರೀ ಮೋದಿ, ದಶಕಗಳ ಕಾಲ ಅವರು ಕೇವಲ ಮತಗಳಿಗಾಗಿ ಮತ್ತು ಸರ್ಕಾರ ರಚನೆಗಾಗಿ ಅಸ್ಸಾಂನ ಮಣ್ಣನ್ನು ನುಸುಳುಕೋರರಿಗೆ ಹಸ್ತಾಂತರಿಸಿದ್ದರು ಎಂದು ಹೇಳಿದರು. ವಿರೋಧ ಪಕ್ಷದ ಆಳ್ವಿಕೆಯಲ್ಲಿ ನುಸುಳುವಿಕೆ ಹೆಚ್ಚುತ್ತಲೇ ಇತ್ತು; ಅಸ್ಸಾಂನ ಇತಿಹಾಸ, ಸಂಸ್ಕೃತಿ ಅಥವಾ ನಂಬಿಕೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಈ ನುಸುಳುಕೋರರು ವ್ಯಾಪಕವಾಗಿ ಒತ್ತುವರಿ ಮಾಡಿಕೊಂಡಿದ್ದರು ಎಂದು ಅವರು ತಿಳಿಸಿದರು. ನುಸುಳುವಿಕೆಯಿಂದಾಗಿ ವನ್ಯಜೀವಿ ಕಾರಿಡಾರ್‌ ಗಳು ಒತ್ತುವರಿಯಾದವು, ಅಕ್ರಮ ಬೇಟೆ ಪ್ರೋತ್ಸಾಹಿಸಲ್ಪಟ್ಟಿತು ಹಾಗೂ ಸ್ಮಗ್ಲಿಂಗ್ ಮತ್ತು ಇತರ ಅಪರಾಧಗಳು ಹೆಚ್ಚಾದವು ಎಂದು ಅವರು ಹೇಳಿದರು.

ನುಸುಳುಕೋರರು ಜನಸಂಖ್ಯಾ ಸಮತೋಲನವನ್ನು ಹದಗೆಡಿಸುತ್ತಿದ್ದಾರೆ, ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದ್ದಾರೆ, ಬಡವರು ಮತ್ತು ಯುವಕರ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ವಂಚನೆಯಿಂದ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಎಚ್ಚರಿಸಿದರು. ಇದು ಅಸ್ಸಾಂ ಮತ್ತು ದೇಶದ ಭದ್ರತೆಗೆ ಗಂಭೀರ ಬೆದರಿಕೆಯೊಡ್ಡಿದೆ ಎಂದು ಅವರು ಹೇಳಿದರು. ನುಸುಳುಕೋರರನ್ನು ರಕ್ಷಿಸುವುದು ಮತ್ತು ಅಧಿಕಾರ ಪಡೆಯುವುದು ಮಾತ್ರವೇ ವಿರೋಧ ಪಕ್ಷದ ಏಕೈಕ ನೀತಿಯಾಗಿದ್ದು, ಅವರ ಬಗ್ಗೆ ಜಾಗರೂಕರಾಗಿರುವಂತೆ ಅವರು ಜನತೆಗೆ ಎಚ್ಚರಿಕೆ ನೀಡಿದರು. ವಿರೋಧ ಪಕ್ಷ ಮತ್ತು ಅದರ ಮಿತ್ರಪಕ್ಷಗಳು ದೇಶಾದ್ಯಂತ ಇದೇ ಧೋರಣೆಯನ್ನು ಅನುಸರಿಸುತ್ತಿವೆ ಎಂದು ಶ್ರೀ ಮೋದಿಯವರು ಅಭಿಪ್ರಾಯಪಟ್ಟರು. ಬಿಹಾರದಲ್ಲಿ ನುಸುಳುಕೋರರನ್ನು ರಕ್ಷಿಸಲು ಅವರು ಮೆರವಣಿಗೆ ಮತ್ತು ರ‍್ಯಾಲಿಗಳನ್ನು ಆಯೋಜಿಸಿದ್ದರು, ಆದರೆ ಬಿಹಾರದ ಜನರು ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಅವರು ಉದಾಹರಿಸಿದರು. ಅಸ್ಸಾಂನ ಜನತೆಯೂ ವಿರೋಧ ಪಕ್ಷಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಅಸ್ಸಾಂನ ಅಭಿವೃದ್ಧಿಯು ಇಡೀ ಈಶಾನ್ಯ ರಾಜ್ಯಗಳ ಪ್ರಗತಿಗೆ ಹೊಸ ಬಾಗಿಲುಗಳನ್ನು ತೆರೆಯುತ್ತಿದೆ ಮತ್ತು 'ಆಕ್ಟ್ ಈಸ್ಟ್' ನೀತಿಗೆ ಹೊಸ ದಿಕ್ಕನ್ನು ನೀಡುತ್ತಿದೆ ಎಂದು ಶ್ರೀ ಮೋದಿಯವರು ಉಲ್ಲೇಖಿಸಿದರು. ಅಸ್ಸಾಂ ಮುನ್ನಡೆದರೆ ಇಡೀ ಈಶಾನ್ಯ ಭಾಗವು ಮುನ್ನಡೆಯುತ್ತದೆ; ಸರ್ಕಾರದ ಪ್ರಯತ್ನಗಳು ಮತ್ತು ಜನರ ನಂಬಿಕೆಯೊಂದಿಗೆ ಈ ಪ್ರದೇಶವು ಹೊಸ ಎತ್ತರಕ್ಕೆ ತಲುಪಲಿದೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನಮಂತ್ರಿ ಅವರು ಇಂದು ಉದ್ಘಾಟನೆಗೊಂಡ ಯೋಜನೆಗಳಿಗಾಗಿ ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್, ಶ್ರೀ ಪವಿತ್ರ ಮಾರ್ಗರಿಟಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಿನ್ನೆಲೆ 
ಪ್ರಧಾನಮಂತ್ರಿ ಅವರು ₹6,950 ಕೋಟಿಗೂ ಅಧಿಕ ಮೌಲ್ಯದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ (ರಾಷ್ಟ್ರೀಯ ಹೆದ್ದಾರಿ-715 ರ ಕಲಿಯಾಬೋರ್-ನುಮಾಲಿಗಢ ವಿಭಾಗದ 4-ಪಥದ ಕಾಮಗಾರಿ) ಭೂಮಿ ಪೂಜೆ ನೆರವೇರಿಸಿದರು.

86 ಕಿ.ಮೀ ಉದ್ದದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಯು ಪರಿಸರ ಪ್ರಜ್ಞೆಯುಳ್ಳ ರಾಷ್ಟ್ರೀಯ ಹೆದ್ದಾರಿ ಯೋಜನೆಯಾಗಿದೆ. ಇದು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ 35 ಕಿ.ಮೀ ಉದ್ದದ ಎಲಿವೇಟೆಡ್ ವನ್ಯಜೀವಿ ಕಾರಿಡಾರ್, 21 ಕಿ.ಮೀ ಬೈಪಾಸ್ ವಿಭಾಗ ಮತ್ತು NH-715 ರ ಅಸ್ತಿತ್ವದಲ್ಲಿರುವ ಹೆದ್ದಾರಿಯನ್ನು ಎರಡು ಪಥದಿಂದ ನಾಲ್ಕು ಪಥಕ್ಕೆ ವಿಸ್ತರಿಸುವ 30 ಕಿ.ಮೀ ವಿಭಾಗವನ್ನು ಒಳಗೊಂಡಿದೆ. ಉದ್ಯಾನವನದ ಶ್ರೀಮಂತ ಜೀವವೈವಿಧ್ಯದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಈ ಯೋಜನೆಯು ನಾಗಾಂವ್, ಕರ್ಬಿ ಆಂಗ್ಲಾಂಗ್ ಮತ್ತು ಗೋಲಾಘಾಟ್ ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಅಪ್ಪರ್ ಅಸ್ಸಾಂ, ವಿಶೇಷವಾಗಿ ದಿಬ್ರುಗಢ ಮತ್ತು ತೀನ್ಸುಕಿಯಾ ಜಿಲ್ಲೆಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಲಿದೆ. ಎಲಿವೇಟೆಡ್ ವನ್ಯಜೀವಿ ಕಾರಿಡಾರ್ ಪ್ರಾಣಿಗಳ ಅಡೆತಡೆಯಿಲ್ಲದ ಸಂಚಾರವನ್ನು ಖಚಿತಪಡಿಸುತ್ತದೆ ಮತ್ತು ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುತ್ತದೆ. ಇದು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ, ಪ್ರಯಾಣದ ಸಮಯ ಮತ್ತು ಅಪಘಾತದ ದರಗಳನ್ನು ಕಡಿಮೆ ಮಾಡುತ್ತದೆ ಹಾಗೂ ಬೆಳೆಯುತ್ತಿರುವ ಪ್ರಯಾಣಿಕರ ಮತ್ತು ಸರಕು ಸಾಗಣೆಗೆ ಬೆಂಬಲ ನೀಡುತ್ತದೆ. ಯೋಜನೆಯ ಭಾಗವಾಗಿ ಜಖಲಾಬಂಧ ಮತ್ತು ಬೊಕಾಖಾತ್‌ ಗಳಲ್ಲಿ ಬೈಪಾಸ್‌ ಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದು ಪಟ್ಟಣಗಳಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ನಗರ ಸಂಚಾರವನ್ನು ಸುಧಾರಿಸಲು ಮತ್ತು ಸ್ಥಳೀಯ ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು 2 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು - ಗುವಾಹಟಿ (ಕಾಮಾಖ್ಯ)-ರೋಹ್ಟಕ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ದಿಬ್ರುಗಢ-ಲಕ್ನೋ (ಗೋಮತಿ ನಗರ) ಅಮೃತ್ ಭಾರತ್ ಎಕ್ಸ್‌ಪ್ರೆಸ್. ಈ ಹೊಸ ರೈಲು ಸೇವೆಗಳು ಈಶಾನ್ಯ ಮತ್ತು ಉತ್ತರ ಭಾರತದ ನಡುವಿನ ರೈಲು ಸಂಪರ್ಕವನ್ನು ಬಲಪಡಿಸುತ್ತವೆ, ಇದು ಜನರ ಸುರಕ್ಷಿತ ಮತ್ತು ಹೆಚ್ಚು ಅನುಕೂಲಕರ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ.

******


(रिलीज़ आईडी: 2215823) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Nepali , Assamese , Manipuri , Bengali , Gujarati , Tamil , Telugu , Malayalam