ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಚ್ ಮತ್ತು ಸೌರಾಷ್ಟ್ರ ಪ್ರಾಂತ್ಯದ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಭಾಷಣ

प्रविष्टि तिथि: 11 JAN 2026 6:00PM by PIB Bengaluru

ನಮಸ್ಕಾರಗಳು!

ಗುಜರಾತ್ ನ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಭೂಪೇಂದ್ರ ಭಾಯಿ ಪಟೇಲ್ ಅವರೇ, ಉಪ ಮುಖ್ಯಮಂತ್ರಿಗಳಾದ ಹರ್ಷ್ ಸಂಘವಿ ಅವರೇ, ಗುಜರಾತ್ ಸರ್ಕಾರದ ಇತರ ಸಚಿವರೇ, ಸಂಸತ್ ಸದಸ್ಯರೇ ಹಾಗೂ ಶಾಸಕರೇ, ಗಣ್ಯರೇ, ಉದ್ಯಮ ಕ್ಷೇತ್ರದ ಪ್ರತಿನಿಧಿಗಳೇ ಮತ್ತು ಉಪಸ್ಥಿತರಿರುವ ಸಜ್ಜನರೇ ಹಾಗೂ ಮಹಿಳೆಯರೇ.

2026ರ ಆರಂಭದ ನಂತರ ಗುಜರಾತ್ ಗೆ ಇದು ನನ್ನ ಮೊದಲ ಭೇಟಿಯಾಗಿದೆ. ಈ ವರ್ಷದ ನನ್ನ ಪ್ರಯಾಣವು ಸೋಮನಾಥ ದಾದಾ ಅವರ ಪಾದಗಳಿಗೆ ತಲೆಬಾಗುವ ಮೂಲಕ ಪ್ರಾರಂಭವಾಗಿರುವುದು ಅತ್ಯಂತ ಮಂಗಳಕರ ಸಂಗತಿಯಾಗಿದೆ. ಈಗ ನಾನು ಈ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜಕೋಟ್ ನಲ್ಲಿದ್ದೇನೆ. 'ಅಭಿವೃದ್ಧಿ ಮತ್ತು ಪರಂಪರೆ' ಎಂಬ ಮಂತ್ರವು ಇಂದು ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ದೇಶದ ಮೂಲೆ ಮೂಲೆಗಳಿಂದ ಮತ್ತು ವಿಶ್ವದಾದ್ಯಂತ ಈ 'ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆ'ಗೆ ಆಗಮಿಸಿರುವ ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ಸ್ವಾಗತ ಮತ್ತು ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೇ,

ವೈಬ್ರಂಟ್ ಗುಜರಾತ್ ಶೃಂಗಸಭೆಯ ವೇದಿಕೆ ಸಜ್ಜಾದಾಗಲೆಲ್ಲಾ, ನಾನು ಅದನ್ನು ಕೇವಲ ಒಂದು ಶೃಂಗಸಭೆಯಾಗಿ ನೋಡುವುದಿಲ್ಲ. ನಾನು ಇದರಲ್ಲಿ 21ನೇ ಶತಮಾನದ ಆಧುನಿಕ ಭಾರತದ ಪಯಣವನ್ನು ಕಾಣುತ್ತೇನೆ—ಒಂದು ಕನಸಿನೊಂದಿಗೆ ಆರಂಭವಾಗಿ ಈಗ ಅಚಲವಾದ ನಂಬಿಕೆಯ ಹಂತವನ್ನು ತಲುಪಿರುವ ಪಯಣವಿದು. ಎರಡು ದಶಕಗಳಲ್ಲಿ, ವೈಬ್ರಂಟ್ ಗುಜರಾತ್ ನ ಈ ಪಯಣವು ಜಾಗತಿಕ ಮಟ್ಟದ ಒಂದು ಮಾನದಂಡವಾಗಿ ಬೆಳೆದಿದೆ. ಈಗಾಗಲೇ ಹತ್ತು ಆವೃತ್ತಿಗಳು ಯಶಸ್ವಿಯಾಗಿ ನಡೆದಿವೆ ಮತ್ತು ಪ್ರತಿ ಆವೃತ್ತಿಯೊಂದಿಗೆ ಈ ಶೃಂಗಸಭೆಯ ಗುರುತು ಹಾಗೂ ಪಾತ್ರ ಇನ್ನಷ್ಟು ಬಲಗೊಂಡಿದೆ.

ಸ್ನೇಹಿತರೇ,

ವೈಬ್ರಂಟ್ ಗುಜರಾತ್ ಶೃಂಗಸಭೆಯ ಈ ಪರಿಕಲ್ಪನೆಯೊಂದಿಗೆ ನಾನು ಅದರ ಆರಂಭದ ದಿನಗಳಿಂದಲೂ ನಿಕಟವಾಗಿ ಸಂಬಂಧ ಹೊಂದಿದ್ದೇನೆ. ಆರಂಭದ ದಿನಗಳಲ್ಲಿ, ಗುಜರಾತ್ ನ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವುದು, ಜನರನ್ನು ಇಲ್ಲಿಗೆ ಆಹ್ವಾನಿಸುವುದು ಮತ್ತು ಹೂಡಿಕೆಯನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿತ್ತು—ಇದರಿಂದ ಭಾರತಕ್ಕೂ ಲಾಭವಾಗಬೇಕು ಮತ್ತು ಜಾಗತಿಕ ಹೂಡಿಕೆದಾರರಿಗೂ ಅನುಕೂಲವಾಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಇಂದು, ಈ ಶೃಂಗಸಭೆಯು ಕೇವಲ ಹೂಡಿಕೆಯನ್ನು ಮೀರಿ ಬೆಳೆದಿದೆ; ಇದು ಜಾಗತಿಕ ಬೆಳವಣಿಗೆ, ಅಂತಾರಾಷ್ಟ್ರೀಯ ಸಹಕಾರ ಮತ್ತು ಪಾಲುದಾರಿಕೆಗೆ ಒಂದು ಬಲವಾದ ವೇದಿಕೆಯಾಗಿ ರೂಪಾಂತರಗೊಂಡಿದೆ. ವರ್ಷಗಳು ಕಳೆದಂತೆ, ಜಾಗತಿಕ ಪಾಲುದಾರರ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಕಾಲಾನಂತರದಲ್ಲಿ ಈ ಶೃಂಗಸಭೆಯು ಸರ್ವರನ್ನೂ ಒಳಗೊಳ್ಳುವಿಕೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಇಲ್ಲಿ ಕಾರ್ಪೊರೇಟ್ ಗುಂಪುಗಳು, ಸಹಕಾರಿ ಸಂಸ್ಥೆಗಳು, MSMEಗಳು, ಸ್ಟಾರ್ಟ್-ಅಪ್ ಗಳು, ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಸಂಸ್ಥೆಗಳು, ಅಂತಾಷ್ಟ್ರೀಯ ಹಣಕಾಸು ಸಂಸ್ಥೆಗಳು—ಎಲ್ಲವೂ ಒಂದೆಡೆ ಸೇರಿ, ಸಂವಾದ ನಡೆಸಿ, ಗಹನವಾಗಿ ಚರ್ಚಿಸುತ್ತಾ ಗುಜರಾತ್ ನ ಅಭಿವೃದ್ಧಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿವೆ.

ಸ್ನೇಹಿತರೇ,

ಕಳೆದ ಎರಡು ದಶಕಗಳಲ್ಲಿ, ವೈಬ್ರಂಟ್ ಗುಜರಾತ್ ಶೃಂಗಸಭೆಯು ನಿರಂತರವಾಗಿ ಏನಾದರೂ ಹೊಸತನ್ನು, ವಿಶೇಷತೆಯನ್ನು ಪರಿಚಯಿಸುತ್ತಾ ಬಂದಿದೆ. ಈ 'ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆ' ಅಂತಹದ್ದೇ ಮತ್ತೊಂದು ಉದಾಹರಣೆಯಾಗಿದೆ. ಗುಜರಾತ್ ನ ವಿವಿಧ ಭಾಗಗಳಲ್ಲಿ ಅಡಗಿರುವ ಸಾಮರ್ಥ್ಯವನ್ನು ವಾಸ್ತವಿಕ ಸಾಧನೆಯನ್ನಾಗಿ ಪರಿವರ್ತಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಉದಾಹರಣೆಗೆ, ಕೆಲವು ಪ್ರದೇಶಗಳು ಬಲಿಷ್ಠ ಕರಾವಳಿ ತೀರವನ್ನು ಹೊಂದಿದ್ದರೆ, ಇನ್ನು ಕೆಲವು ದೀರ್ಘವಾದ ಬುಡಕಟ್ಟು ಪಟ್ಟಿಯನ್ನು ಹೊಂದಿವೆ. ಕೆಲವು ಕಡೆಗಳಲ್ಲಿ ಬೃಹತ್ ಕೈಗಾರಿಕಾ ಕ್ಲಸ್ಟರ್ ಗಳಿದ್ದರೆ, ಮತ್ತೆ ಕೆಲವು ಪ್ರದೇಶಗಳು ಕೃಷಿ ಮತ್ತು ಪಶುಸಂಗೋಪನೆಯ ಶ್ರೀಮಂತ ಪರಂಪರೆಯನ್ನು ಹೊಂದಿವೆ. ಸರಳವಾಗಿ ಹೇಳುವುದಾದರೆ, ಗುಜರಾತ್ ನ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರಾದೇಶಿಕ ಸಾಧ್ಯತೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆಯು ಮುನ್ನಡೆಯುತ್ತಿದೆ.

ಸ್ನೇಹಿತರೇ,

21ನೇ ಶತಮಾನದ ಕಾಲು ಭಾಗ ಈಗಾಗಲೇ ಕಳೆದುಹೋಗಿದೆ. ಈ ವರ್ಷಗಳಲ್ಲಿ ಭಾರತವು ಕ್ಷಿಪ್ರ ಪ್ರಗತಿಯನ್ನು ಸಾಧಿಸಿದೆ ಮತ್ತು ಇದರಲ್ಲಿ ಗುಜರಾತ್ ಹಾಗೂ ನೀವೆಲ್ಲರೂ ಪ್ರಮುಖ ಪಾತ್ರ ವಹಿಸಿದ್ದೀರಿ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ  ವೇಗವಾಗಿ ಸಾಗುತ್ತಿದೆ. ಭಾರತದ ಮೇಲಿನ ವಿಶ್ವದ ನಿರೀಕ್ಷೆಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಅಂಕಿಅಂಶಗಳು ಸ್ಪಷ್ಟವಾಗಿ ತೋರಿಸುತ್ತಿವೆ. ಭಾರತವು ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾಗಿದೆ. ಹಣದುಬ್ಬರವು ನಿಯಂತ್ರಣದಲ್ಲಿದೆ. ಕೃಷಿ ಉತ್ಪಾದನೆಯಲ್ಲಿ ಭಾರತವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಹಾಲು ಉತ್ಪಾದನೆಯಲ್ಲಿ ಭಾರತ ಇಂದು ಜಗತ್ತಿಗೇ ನಂಬರ್ ಒನ್. ಜೆನೆರಿಕ್ ಔಷಧಿಗಳ ಉತ್ಪಾದನೆಯಲ್ಲೂ ಭಾರತವೇ ಅಗ್ರಸ್ಥಾನದಲ್ಲಿದೆ. ಇನ್ನು ಲಸಿಕೆ ತಯಾರಿಕೆಯ ವಿಷಯಕ್ಕೆ ಬಂದರೆ, ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆಗಳನ್ನು ಉತ್ಪಾದಿಸುವ ದೇಶ ಯಾವುದಾದರೂ ಇದ್ದರೆ ಅದು ನಮ್ಮ ಭಾರತ.

ಸ್ನೇಹಿತರೇ,

ಭಾರತದ ಬೆಳವಣಿಗೆಯ ಅಂಕಿ-ಅಂಶಗಳ ಪಟ್ಟಿಯೇ, 'ಸುಧಾರಣೆ, ಸಾಧನೆ ಮತ್ತು ಪರಿವರ್ತನೆ' ಎಂಬ ಮಂತ್ರದ ಯಶಸ್ಸಿನ ಗಾಥೆಯಾಗಿದೆ. ಕಳೆದ 11 ವರ್ಷಗಳಲ್ಲಿ, ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ಬಳಕೆದಾರ ದೇಶವಾಗಿ ಹೊರಹೊಮ್ಮಿದೆ. ನಮ್ಮ ಯುಪಿಐ ವಿಶ್ವದ ನಂಬರ್ ಒನ್ ರಿಯಲ್‌ -ಟೈಮ್ ಡಿಜಿಟಲ್ ಹಣಕಾಸು ವಹಿವಾಟು ವೇದಿಕೆಯಾಗಿ ಬೆಳೆದಿದೆ. ಒಂದು ಕಾಲದಲ್ಲಿ, ಇಲ್ಲಿ ಬಳಕೆಯಾಗುತ್ತಿದ್ದ 10 ಮೊಬೈಲ್ ಗಳಲ್ಲಿ 9 ಮೊಬೈಲ್ ಗಳು ಆಮದಾಗುತ್ತಿದ್ದವು. ಆದರೆ ಇಂದು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ದೇಶವಾಗಿದೆ. ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ 'ಸ್ಟಾರ್ಟ್-ಅಪ್'  ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಸೌರಶಕ್ತಿ ಉತ್ಪಾದನೆಯಲ್ಲೂ ಭಾರತವು ವಿಶ್ವದ ಅಗ್ರ ಮೂರು ದೇಶಗಳಲ್ಲಿ ಒಂದಾಗಿದೆ. ನಾವು ವಿಶ್ವದ ಮೂರನೇ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯಾಗಿದ್ದೇವೆ ಮತ್ತು ಮೆಟ್ರೋ ರೈಲು ಜಾಲದ ವಿಷಯದಲ್ಲಿ ಭಾರತವು ಇಂದು ವಿಶ್ವದ ಮೊದಲ ಮೂರು ಸ್ಥಾನಗಳಲ್ಲಿದೆ.

ಸ್ನೇಹಿತರೇ,

ಇಂದು ಪ್ರತಿಯೊಬ್ಬ ಜಾಗತಿಕ ತಜ್ಞರು ಮತ್ತು ಸಂಸ್ಥೆಗಳು ಭಾರತದ ಬಗ್ಗೆ ಅತ್ಯಂತ ಆಶಾವಾದ ಹೊಂದಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಭಾರತವನ್ನು 'ಜಾಗತಿಕ ಬೆಳವಣಿಗೆಯ ಇಂಜಿನ್' ಎಂದು ಕರೆದಿದೆ. S&P ಸಂಸ್ಥೆಯು 18 ವರ್ಷಗಳ ನಂತರ ಭಾರತದ ರೇಟಿಂಗ್ ಅನ್ನು ಉತ್ತಮಗೊಳಿಸಿದೆ. ಫಿಚ್ ರೇಟಿಂಗ್ಸ್ ಭಾರತದ ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಹಣಕಾಸಿನ ವಿಶ್ವಾಸಾರ್ಹತೆಯನ್ನು ಶ್ಲಾಘಿಸಿದೆ. ಭಾರತದ ಮೇಲೆ ವಿಶ್ವಕ್ಕಿರುವ ಈ ನಂಬಿಕೆಗೆ ಕಾರಣವೆಂದರೆ—ವಿಶ್ವದಾದ್ಯಂತ ಅನಿಶ್ಚಿತತೆಯ ವಾತಾವರಣವಿರುವಾಗ, ಭಾರತವು ಅಭೂತಪೂರ್ವವಾದ 'ನಿಶ್ಚಿತತೆಯ ಯುಗ'ವನ್ನು ಅನುಭವಿಸುತ್ತಿದೆ. ಇಂದು ಭಾರತದಲ್ಲಿ ರಾಜಕೀಯ ಸ್ಥಿರತೆ ಇದೆ, ಸರ್ಕಾರದ ನೀತಿಗಳಲ್ಲಿ ಮುಂದುವರಿಕೆ ಇದೆ ಮತ್ತು ಹೆಚ್ಚುತ್ತಿರುವ ಖರೀದಿ ಸಾಮರ್ಥ್ಯದೊಂದಿಗೆ ವಿಸ್ತರಿಸುತ್ತಿರುವ 'ನವ-ಮಧ್ಯಮ ವರ್ಗ'ವಿದೆ. ಈ ಎಲ್ಲಾ ಅಂಶಗಳು ಭಾರತವನ್ನು ಅಪಾರ ಸಾಧ್ಯತೆಗಳ ಭೂಮಿಯನ್ನಾಗಿ ಮಾಡಿವೆ. ನಾನು ಕೆಂಪುಕೋಟೆಯಿಂದ ಹೇಳಿದಂತೆ—"ಇದೇ ಸಮಯ, ಸರಿಯಾದ ಸಮಯ" (ಯಹಿ ಸಮಯ ಹೈ, ಸಹಿ ಸಮಯ ಹೈ). ಭಾರತ ಮತ್ತು ಪ್ರಪಂಚದಾದ್ಯಂತದ ಪ್ರತಿಯೊಬ್ಬ ಹೂಡಿಕೆದಾರರಿಗೆ, ಈ ಅವಕಾಶಗಳನ್ನು ಬಳಸಿಕೊಳ್ಳಲು ಇದೇ ಸರಿಯಾದ ಸಮಯ. ವೈಬ್ರಂಟ್ ಗುಜರಾತ್ ಪ್ರಾದೇಶಿಕ ಶೃಂಗಸಭೆಯು ಸಹ ಎಲ್ಲಾ ಹೂಡಿಕೆದಾರರಿಗೆ ಇದೇ ಸಂದೇಶವನ್ನು ನೀಡುತ್ತಿದೆ—ಸೌರಾಷ್ಟ್ರ-ಕಚ್ ಭಾಗದಲ್ಲಿ ಹೂಡಿಕೆ ಮಾಡಿ, ಏಕೆಂದರೆ ಇದೇ ಸಮಯ, ಅತ್ಯಂತ ಸರಿಯಾದ ಸಮಯ.

ಸ್ನೇಹಿತರೇ,

ಸವಾಲು ಎಷ್ಟೇ ದೊಡ್ಡದಿದ್ದರೂ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದೊಂದಿಗೆ ಛಲ ಬಿಡದೆ ಮುನ್ನಡೆದರೆ ಯಶಸ್ಸು ಖಚಿತ ಎಂಬುದನ್ನು ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳು ನಮಗೆ ಕಲಿಸಿಕೊಡುತ್ತವೆ. ಈ ಶತಮಾನದ ಆರಂಭದಲ್ಲಿ ಭೀಕರ ವಿನಾಶಕಾರಿ ಭೂಕಂಪಕ್ಕೆ ತುತ್ತಾದ ಕಚ್ ಇದೇ ಆಗಿದೆ. ವರ್ಷಗಳ ಕಾಲ ಸತತವಾಗಿ ಬರಗಾಲವನ್ನು ಎದುರಿಸಿದ ಸೌರಾಷ್ಟ್ರವೂ ಇದೇ ಆಗಿದೆ. ಅಂದು ಕುಡಿಯುವ ನೀರಿಗಾಗಿ ನಮ್ಮ ತಾಯಿ-ತಂಗಿಯರು ಮೈಲುಗಟ್ಟಲೆ ದೂರ ನಡೆಯಬೇಕಿತ್ತು. ವಿದ್ಯುತ್ ಪೂರೈಕೆಯು ಅನಿಶ್ಚಿತವಾಗಿತ್ತು ಮತ್ತು ಹೆಜ್ಜೆ ಹೆಜ್ಜೆಗೂ ಸಂಕಷ್ಟಗಳೇ ಎದುರಾಗುತ್ತಿದ್ದವು.

ಸ್ನೇಹಿತರೇ,

ಇಂದಿನ 20-25 ವರ್ಷದ ಯುವಜನತೆ ಆ ಕಾಲದ ಕಥೆಗಳನ್ನು ಕೇವಲ ಕೇಳಿರಬಹುದು. ಆದರೆ ಅಂದಿನ ವಾಸ್ತವ ಏನೆಂದರೆ, ಜನರಿಗೆ ಕಚ್ ಅಥವಾ ಸೌರಾಷ್ಟ್ರದಲ್ಲಿ ಹೆಚ್ಚು ಕಾಲ ನೆಲೆಸಲು ಮನಸ್ಸಿರಲಿಲ್ಲ. ಆ ಸಮಯದಲ್ಲಿ ಈ ಕಠಿಣ ಪರಿಸ್ಥಿತಿಗಳು ಎಂದಿಗೂ ಬದಲಾಗುವುದಿಲ್ಲ ಎಂದೇ ನಮಗೆ ಅನ್ನಿಸುತ್ತಿತ್ತು. ಆದರೆ ಕಾಲ ಬದಲಾಗುತ್ತದೆ ಮತ್ತು ಅದು ಖಂಡಿತವಾಗಿಯೂ ಬದಲಾಗುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಸೌರಾಷ್ಟ್ರ ಮತ್ತು ಕಚ್ ನ ಜನರು ತಮ್ಮ ಅಚಲವಾದ ಕಠಿಣ ಪರಿಶ್ರಮದ ಮೂಲಕ ತಮ್ಮ ಹಣೆಬರಹವನ್ನೇ ಬದಲಿಸಿ ತೋರಿಸಿದರು.

ಸ್ನೇಹಿತರೇ,

ಇಂದು ಸೌರಾಷ್ಟ್ರ ಮತ್ತು ಕಚ್ ಕೇವಲ ಅವಕಾಶಗಳ ಪ್ರದೇಶಗಳಾಗಿ ಉಳಿದಿಲ್ಲ; ಬದಲಾಗಿ ಅವು ಭಾರತದ ಬೆಳವಣಿಗೆಯ ಆಧಾರಸ್ತಂಭ ಪ್ರದೇಶಗಳಾಗಿ ಮಾರ್ಪಟ್ಟಿವೆ. ಇವು 'ಆತ್ಮನಿರ್ಭರ ಭಾರತ' ಅಭಿಯಾನವನ್ನು ಮುನ್ನಡೆಸುವ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವಲ್ಲಿ ಸೌರಾಷ್ಟ್ರ ಮತ್ತು ಕಚ್ ಪ್ರಮುಖ ಪಾತ್ರ ವಹಿಸುತ್ತಿವೆ—ಮತ್ತು ವಿಶೇಷವೆಂದರೆ ಈ ಬೆಳವಣಿಗೆಯು ಮಾರುಕಟ್ಟೆ ಚಾಲಿತವಾಗಿದೆ . ಹೂಡಿಕೆದಾರರಿಗೆ ಇದು ಅತ್ಯಂತ ದೊಡ್ಡ ಭರವಸೆಯಾಗಿದೆ. ಇಲ್ಲಿಯೇ ರಾಜಕೋಟ್ ನಲ್ಲಿ 2,50,000ಕ್ಕೂ ಹೆಚ್ಚು MSME ಸಂಸ್ಥೆಗಳಿವೆ. ಇಲ್ಲಿನ ವೈವಿಧ್ಯಮಯ ಕೈಗಾರಿಕಾ ಸಮೂಹಗಳಲ್ಲಿ, ಸ್ಕ್ರೂಡ್ರೈವರ್ ಗಳಿಂದ ಹಿಡಿದು ಆಟೋ ಬಿಡಿಭಾಗಗಳು, ಯಂತ್ರೋಪಕರಣಗಳು, ಐಷಾರಾಮಿ ಕಾರುಗಳ ಲೈನರ್ ಗಳು ಹಾಗೂ ವಿಮಾನ, ಯುದ್ಧ ವಿಮಾನ ಮತ್ತು ರಾಕೆಟ್ ಗಳ ಬಿಡಿಭಾಗಗಳವರೆಗೆ ಎಲ್ಲವನ್ನೂ ಉತ್ಪಾದಿಸಲಾಗುತ್ತದೆ. ಈ ಪ್ರದೇಶವು ಕಡಿಮೆ ವೆಚ್ಚದ ಉತ್ಪಾದನೆಯಿಂದ ಹಿಡಿದು ಅತ್ಯಂತ ನಿಖರವಾದ  ಮತ್ತು ಉನ್ನತ ತಂತ್ರಜ್ಞಾನದ ಉತ್ಪಾದನೆಯವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು  ಬೆಂಬಲಿಸುತ್ತದೆ. ಅಷ್ಟೇ ಅಲ್ಲದೆ, ಇಲ್ಲಿನ ಆಭರಣ ಉದ್ಯಮವು ವಿಶ್ವಪ್ರಸಿದ್ಧವಾಗಿದೆ. ಈ ಕ್ಷೇತ್ರವು ಬೃಹತ್ ಪ್ರಮಾಣ, ನೈಪುಣ್ಯತೆ  ಮತ್ತು ಜಾಗತಿಕ ಸಂಪರ್ಕಕ್ಕೆ  ಒಂದು ಪ್ರಜ್ವಲಿಸುವ ಉದಾಹರಣೆಯಾಗಿದೆ.

ಸ್ನೇಹಿತರೇ,

ಅಲಾಂಗ್ (Alang) ವಿಶ್ವದ ಅತಿದೊಡ್ಡ ಹಡಗು ಒಡೆಯುವ ಅಂಗಳವಾಗಿದೆ. ಇಲ್ಲಿ ವಿಶ್ವದ ಮೂರನೇ ಒಂದು ಭಾಗದಷ್ಟು ಹಡಗುಗಳನ್ನು ಮರುಬಳಕೆ ಮಾಡಲಾಗುತ್ತದೆ. ಇದು 'ವರ್ತುಲ ಆರ್ಥಿಕತೆ'ಯಲ್ಲಿ  ಭಾರತದ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಟೈಲ್ಸ್ ಉತ್ಪಾದನೆಯಲ್ಲಿ ಭಾರತವು ವಿಶ್ವದ ಅತಿದೊಡ್ಡ ದೇಶಗಳಲ್ಲಿ ಒಂದಾಗಿದ್ದು, ಇದರಲ್ಲಿ ಮೋರ್ಬಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಇಲ್ಲಿನ ಉತ್ಪಾದನೆಯು ವೆಚ್ಚದ ದೃಷ್ಟಿಯಿಂದ ಅತ್ಯಂತ ಸ್ಪರ್ಧಾತ್ಮಕವಾಗಿದ್ದು, ಜಾಗತಿಕ ಗುಣಮಟ್ಟವನ್ನು ಹೊಂದಿದೆ. ನನಗಿನ್ನೂ ನೆನಪಿದೆ—ಸೌರಾಷ್ಟ್ರದ ಪತ್ರಿಕಾ ಮಿತ್ರರಲ್ಲಿ ಅನೇಕರಿಗೆ ಇದು ನೆನಪಿರಬಹುದು—ಒಮ್ಮೆ ನಾನು ಇಲ್ಲಿ ಭಾಷಣ ಮಾಡುವಾಗ, ಮೋರ್ಬಿ, ಜಾಮ್ ನಗರ ಮತ್ತು ರಾಜಕೋಟ್ ನಗರಗಳು ಸೇರಿ 'ಮಿನಿ ಜಪಾನ್'ನಂತಹ ಒಂದು ತ್ರಿಕೋನವನ್ನು ರೂಪಿಸುವ ಕಾಲ ಬರಲಿದೆ ಎಂದು ಹೇಳಿದ್ದೆ. ಅಂದು ನನ್ನ ಈ ಮಾತನ್ನು ಲೇವಡಿ ಮಾಡಲಾಗಿತ್ತು, ಆದರೆ ಇಂದು ಆ ದೃಷ್ಟಿಕೋನವು ನನ್ನ ಕಣ್ಣ ಮುಂದೆಯೇ ವಾಸ್ತವವಾಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಧೋಲೇರಾ ವಿಶೇಷ ಹೂಡಿಕೆ ವಲಯದ  ಬಗ್ಗೆಯೂ ನಮಗೆ ಹೆಮ್ಮೆಯಿದೆ. ಇಂದು ಈ ನಗರವು ಆಧುನಿಕ ಉತ್ಪಾದನೆಯ ಪ್ರಮುಖ ಕೇಂದ್ರವಾಗಿ ಮಾರ್ಪಡುತ್ತಿದೆ. ಭಾರತದ ಮೊಟ್ಟಮೊದಲ 'ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್' ಸೌಲಭ್ಯವು ಧೋಲೇರಾದಲ್ಲಿ ಸ್ಥಾಪನೆಯಾಗುತ್ತಿದೆ. ಭವಿಷ್ಯದ ತಂತ್ರಜ್ಞಾನಗಳಲ್ಲಿ ಭಾರತಕ್ಕೆ 'ಮೊದಲಿಗರ ಲಾಭ'  ದೊರೆಯುವಂತೆ ಮಾಡುವಲ್ಲಿ ಈ ಪ್ರದೇಶವು ಪ್ರಮುಖ ಪಾತ್ರ ವಹಿಸುತ್ತಿದೆ. ನಿಮ್ಮ ಹೂಡಿಕೆಗಾಗಿ ಇಲ್ಲಿ ವೇದಿಕೆ ಸಂಪೂರ್ಣವಾಗಿ ಸಿದ್ಧವಾಗಿದೆ—ಮೂಲಸೌಕರ್ಯಗಳು ಸಜ್ಜಾಗಿವೆ, ಸರ್ಕಾರದ ನೀತಿಗಳು ಸ್ಪಷ್ಟವಾಗಿವೆ ಮತ್ತು ನಮ್ಮ ದೃಷ್ಟಿಕೋನವು ದೀರ್ಘಕಾಲೀನವಾಗಿದೆ.

ಸ್ನೇಹಿತರೇ,

ಸೌರಾಷ್ಟ್ರ ಮತ್ತು ಕಚ್ ಭಾರತದ ಹಸಿರು ಬೆಳವಣಿಗೆ, ಹಸಿರು ಚಲನಶೀಲತೆ ಮತ್ತು ಇಂಧನ ಭದ್ರತೆಯ ಪ್ರಮುಖ ಕೇಂದ್ರಗಳಾಗುತ್ತಿವೆ. ಕಚ್ನಲ್ಲಿ 30 ಗಿಗಾವ್ಯಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಪಾರ್ಕ್ ನಿರ್ಮಾಣವಾಗುತ್ತಿದೆ—ಇದು ವಿಶ್ವದ ಅತಿದೊಡ್ಡ ಹೈಬ್ರಿಡ್ ಇಂಧನ ಪಾರ್ಕ್ ಆಗಿದೆ. ಒಮ್ಮೆ ಕಲ್ಪಿಸಿಕೊಳ್ಳಿ, ಈ ಪಾರ್ಕ್ ಪ್ಯಾರಿಸ್ ನಗರಕ್ಕಿಂತ ಐದು ಪಟ್ಟು ದೊಡ್ಡದಾಗಿರಲಿದೆ! ಇಲ್ಲಿ ಶುದ್ಧ ಇಂಧನ ಎಂಬುದು ಕೇವಲ ಒಂದು ಬದ್ಧತೆಯಾಗಿ ಉಳಿದಿಲ್ಲ; ಬದಲಾಗಿ ಅದು ವಾಣಿಜ್ಯ ಮಟ್ಟದ ವಾಸ್ತವವಾಗಿ ರೂಪುಗೊಂಡಿದೆ. ಗ್ರೀನ್ ಹೈಡ್ರೋಜನ್ ನ  ಸಾಮರ್ಥ್ಯದ ಬಗ್ಗೆ ನೀವೆಲ್ಲರೂ ತಿಳಿದಿದ್ದೀರಿ. ಭಾರತವು ಈ ದಿಸೆಯಲ್ಲಿ ಅಭೂತಪೂರ್ವ ವೇಗ ಮತ್ತು ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಚ್ ಮತ್ತು ಜಾಮ್ನಗರ ಹಸಿರು ಹೈಡ್ರೋಜನ್ ಉತ್ಪಾದನೆಯ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ಇದರೊಂದಿಗೆ, ಕಚ್ ನಲ್ಲಿ ಬೃಹತ್ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಯನ್ನು ಸಹ ಸ್ಥಾಪಿಸಲಾಗುತ್ತಿದೆ. ಇದು ನವೀಕರಿಸಬಹುದಾದ ಇಂಧನದ ಬಳಕೆಯ ಜೊತೆಗೆ ವಿದ್ಯುತ್ ಗ್ರಿಡ್ನ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ.

ಸ್ನೇಹಿತರೇ,

ಕಚ್ ಮತ್ತು ಸೌರಾಷ್ಟ್ರಕ್ಕೆ ಮತ್ತೊಂದು ದೊಡ್ಡ ಶಕ್ತಿಯಿದೆ. ಈ ಪ್ರದೇಶವು ಭಾರತದ ವಿಶ್ವದರ್ಜೆಯ ಬಂದರುಗಳಿಂದ ಸುಸಜ್ಜಿತವಾಗಿದೆ. ಭಾರತದ ರಫ್ತಿನ ಬಹುಪಾಲು ಪಾಲು ಈ ಬಂದರುಗಳ ಮೂಲಕವೇ ಸಾಗುತ್ತದೆ. ಪಿಪಾವಾವ್ ಮತ್ತು ಮುದ್ರಾ ಅಂತಹ ಬಂದರುಗಳು ಇಂದು ಭಾರತದ ಆಟೋಮೊಬೈಲ್ ರಫ್ತಿನ ಪ್ರಮುಖ ಕೇಂದ್ರಗಳಾಗಿ ಮಾರ್ಪಟ್ಟಿವೆ. ಕಳೆದ ವರ್ಷವೊಂದರಲ್ಲೇ ಗುಜರಾತ್ ನ ಬಂದರುಗಳ ಮೂಲಕ ಸುಮಾರು 1,75,000ವಾಹನಗಳನ್ನು ರಫ್ತು ಮಾಡಲಾಗಿದೆ. ಇದು ಕೇವಲ ಸರಕು ಸಾಗಣೆ ಮಾತ್ರವಲ್ಲ—ಬಂದರು ಆಧಾರಿತ ಅಭಿವೃದ್ಧಿಯ ಪ್ರತಿಯೊಂದು ಮಜಲಿನಲ್ಲಿಯೂ ಹೂಡಿಕೆಗೆ ಅಪಾರ ಅವಕಾಶಗಳಿವೆ. ಇದರೊಂದಿಗೆ, ಗುಜರಾತ್ ಸರ್ಕಾರವು ಮೀನುಗಾರಿಕೆ ಕ್ಷೇತ್ರಕ್ಕೂ ವಿಶೇಷ ಆದ್ಯತೆ ನೀಡುತ್ತಿದೆ. ಮೀನುಗಾರಿಕೆ ಮೂಲಸೌಕರ್ಯಗಳ ಮೇಲೆ ಬೃಹತ್ ಪ್ರಮಾಣದ ಕೆಲಸ ಮಾಡಲಾಗಿದೆ ಮತ್ತು ಸಮುದ್ರ ಆಹಾರ ಸಂಸ್ಕರಣೆಯಲ್ಲಿ  ಹೂಡಿಕೆ ಮಾಡುವವರಿಗಾಗಿ ಇಲ್ಲಿ ಅತ್ಯಂತ ಬಲಿಷ್ಠವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.

ಸ್ನೇಹಿತರೇ,

ಮೂಲಸೌಕರ್ಯದ ಜೊತೆಗೆ, ಕೈಗಾರಿಕೆಗಳಿಗೆ ಸನ್ನದ್ಧವಾಗಿರುವ ಮಾನವಶಕ್ತಿ ಇಂದು ಅತ್ಯಗತ್ಯವಾಗಿದೆ. ಈ ವಿಷಯದಲ್ಲಿ ಗುಜರಾತ್ ಹೂಡಿಕೆದಾರರಿಗೆ ಸಂಪೂರ್ಣ ಭರವಸೆಯನ್ನು ನೀಡುತ್ತದೆ. ಇಲ್ಲಿ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಅಂತಾರಾಷ್ಟ್ರೀಯ ಗುಣಮಟ್ಟದ ಪರಿಸರ ವ್ಯವಸ್ಥೆ ಇದೆ. ಗುಜರಾತ್ ನ ಕೌಶಲ್ಯ ವಿಶ್ವವಿದ್ಯಾಲಯವು  ಆಸ್ಟ್ರೇಲಿಯಾ ಮತ್ತು ಸಿಂಗಾಪುರದ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತಿದ್ದು, ಯುವಜನರನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುತ್ತಿದೆ. ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯವು ಭಾರತದ ಮೊದಲ ರಾಷ್ಟ್ರೀಯ ಮಟ್ಟದ ರಕ್ಷಣಾ ವಿಶ್ವವಿದ್ಯಾಲಯವಾಗಿದೆ. ಹಾಗೆಯೇ, ಗತಿ ಶಕ್ತಿ ವಿಶ್ವವಿದ್ಯಾಲಯವು ರಸ್ತೆ, ರೈಲ್ವೆ, ವಾಯುಯಾನ, ಜಲಮಾರ್ಗ ಮತ್ತು ಸಾಗಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ನುರಿತ ಮಾನವಶಕ್ತಿಯನ್ನು ಸಿದ್ಧಪಡಿಸುತ್ತಿದೆ. ಅಂದರೆ, ನಿಮ್ಮ ಹೂಡಿಕೆಯ ಜೊತೆಗೆ ಪ್ರತಿಭಾನ್ವಿತರ ನಿರಂತರ ಲಭ್ಯತೆಯೂ ಇಲ್ಲಿ ಖಚಿತವಾಗಿದೆ. ಇಂದು ಅನೇಕ ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಹೊಸ ಅವಕಾಶಗಳನ್ನು ಕಾಣುತ್ತಿವೆ ಮತ್ತು ಗುಜರಾತ್ ಅವುಗಳ ನೆಚ್ಚಿನ ತಾಣವಾಗುತ್ತಿದೆ. ಆಸ್ಟ್ರೇಲಿಯಾದ ಎರಡು ಪ್ರಮುಖ ವಿಶ್ವವಿದ್ಯಾಲಯಗಳು ಈಗಾಗಲೇ ಇಲ್ಲಿ ತಮ್ಮ ಕ್ಯಾಂಪಸ್ ಗಳನ್ನು ಪ್ರಾರಂಭಿಸಿವೆ ಮತ್ತು ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಸ್ನೇಹಿತರೇ,

ಗುಜರಾತ್ ಪ್ರಕೃತಿ, ಸಾಹಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಮೃದ್ಧವಾಗಿ ನೀಡುತ್ತದೆ. ಒಬ್ಬ ಪ್ರವಾಸಿಗ ಯಾವುದೇ ರೀತಿಯ ಅನುಭವವನ್ನು ಬಯಸಲಿ, ಅದು ಇಲ್ಲಿ ಲಭ್ಯವಿದೆ. ಲೋಥಲ್ ಭಾರತದ 4,500 ವರ್ಷಗಳ ಹಳೆಯ ನೌಕಾ ಪರಂಪರೆಯ ಸಂಕೇತವಾಗಿದೆ. ವಿಶ್ವದ ಅತ್ಯಂತ ಹಳೆಯ ಮಾನವ ನಿರ್ಮಿತ ಹಡಗುಕಟ್ಟೆ  ಇಲ್ಲಿ ಕಂಡುಬಂದಿದೆ ಮತ್ತು ಅಲ್ಲಿ ಈಗ 'ರಾಷ್ಟ್ರೀಯ ನೌಕಾ ಪರಂಪರೆ ಸಂಕೀರ್ಣ'ವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಚ್ ನಲ್ಲಿ ಈ ದಿನಗಳಲ್ಲಿ 'ರನ್ ಉತ್ಸವ' ನಡೆಯುತ್ತಿದೆ ಮತ್ತು ಅಲ್ಲಿನ ಟೆಂಟ್ ಸಿಟಿಯಲ್ಲಿ ಉಳಿಯುವುದು ಒಂದು ವಿಶಿಷ್ಟ ಅನುಭವವಾಗಿದೆ. 

ವನ್ಯಜೀವಿ ಪ್ರೇಮಿಗಳಿಗೆ ಗಿರ್ ಅರಣ್ಯದಲ್ಲಿ ಏಷ್ಯಾದ ಸಿಂಹಗಳನ್ನು ನೋಡುವುದಕ್ಕಿಂತ ಉತ್ತಮವಾದದ್ದು ಬೇರೇನಿದೆ? ಪ್ರತಿ ವರ್ಷ 9 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಮುದ್ರವನ್ನು ಇಷ್ಟಪಡುವವರಿಗಾಗಿ 'ಬ್ಲೂ ಫ್ಲ್ಯಾಗ್' ಪ್ರಮಾಣೀಕೃತ ಶಿವ್ ರಾಜ್ ಪುರ ಬೀಚ್ ಇದೆ. ಇದರ ಜೊತೆಗೆ ಮಾಂಡವಿ, ಸೋಮನಾಥ ಮತ್ತು ದ್ವಾರಕಾ ಕೂಡ ಬೀಚ್ ಪ್ರವಾಸೋದ್ಯಮಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿವೆ. ಸಮೀಪದ ದಿಯು ಜಲಕ್ರೀಡೆ ಮತ್ತು ಬೀಚ್ ಆಟಗಳಿಗೆ ಅತ್ಯದ್ಭುತ ತಾಣವಾಗಿ ಮಾರ್ಪಡುತ್ತಿದೆ. ಈ ಇಡೀ ಪ್ರದೇಶವು ಹೂಡಿಕೆದಾರರಿಗೆ ಅಸಂಖ್ಯಾತ ಅವಕಾಶಗಳಿಂದ ಕೂಡಿದೆ. ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಾನು ಮೊದಲೇ ಹೇಳಿದಂತೆ—ನೀವು ಈಗ ವಿಳಂಬ ಮಾಡಿದರೆ, ನಂತರ ನನ್ನನ್ನು ದೂಷಿಸಬೇಡಿ. ಸೌರಾಷ್ಟ್ರ-ಕಚ್ ನಲ್ಲಿ ನೀವು ಮಾಡುವ ಪ್ರತಿಯೊಂದು ಹೂಡಿಕೆಯು ಗುಜರಾತ್ ಮತ್ತು ಭಾರತದ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ.

ಸೌರಾಷ್ಟ್ರದ ಶಕ್ತಿಯು ವಿದೇಶಗಳಲ್ಲೂ ಕಂಡುಬರುತ್ತಿದೆ. ರುವಾಂಡಾದ ಹೈಕಮಿಷನರ್ ಅವರು ಇತ್ತೀಚೆಗೆ ನಾನು ರುವಾಂಡಾಕ್ಕೆ ಭೇಟಿ ನೀಡಿದ್ದಾಗ 200 ಗಿರ್ ಹಸುಗಳನ್ನು ಉಡುಗೊರೆಯಾಗಿ ನೀಡಿದ್ದನ್ನು ನೆನಪಿಸಿಕೊಂಡರು. ಆದರೆ ಅದಕ್ಕೊಂದು ವಿಶೇಷ ನಿಯಮವಿತ್ತು: ಜನಿಸಿದ ಮೊದಲ ಹೆಣ್ಣು ಕರುವನ್ನು ವಾಪಸ್ ಪಡೆದು ಮತ್ತೊಂದು ಕುಟುಂಬಕ್ಕೆ ನೀಡಬೇಕಿತ್ತು. ಅಂದು ನೀಡಿದ ಆ 200 ಹಸುಗಳಿಂದಾಗಿ ಇಂದು ರುವಾಂಡಾದ ಸಾವಿರಾರು ಕುಟುಂಬಗಳು ಹಸುಗಳನ್ನು ಹೊಂದಿವೆ. ಗಿರ್ ಹಸುಗಳು ಇಂದು ಅಲ್ಲಿನ ಪ್ರತಿ ಮನೆಯಲ್ಲೂ ಕಂಡುಬರುತ್ತಿವೆ ಮತ್ತು ರುವಾಂಡಾದ ಗ್ರಾಮೀಣ ಆರ್ಥಿಕತೆಗೆ ದೊಡ್ಡ ಶಕ್ತಿಯನ್ನು ನೀಡುತ್ತಿವೆ. ಇದೇ ಸೌರಾಷ್ಟ್ರದ ಚೈತನ್ಯ.

ಸ್ನೇಹಿತರೇ,

ಇಂದಿನ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ವೇಗವಾಗಿ ಸಾಗುತ್ತಿದೆ. ಮತ್ತು ಈ ಗುರಿಯನ್ನು ಸಾಧಿಸುವಲ್ಲಿ ಸುಧಾರಣಾ ಎಕ್ಸ್ ಪ್ರೆಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಸುಧಾರಣಾ ಎಕ್ಸ್ ಪ್ರೆಸ್ ಎಂದರೆ ಪ್ರತಿ ವಲಯದಲ್ಲೂ ಜಾರಿಗೆ ತರುತ್ತಿರುವ ಮುಂದಿನ ಪೀಳಿಗೆಯ ಸುಧಾರಣೆಗಳು ಎಂದರ್ಥ. ಇತ್ತೀಚೆಗೆ, ಭಾರತವು ಮುಂದಿನ ಪೀಳಿಗೆಯ GST ಸುಧಾರಣೆಗಳನ್ನು ಜಾರಿಗೆ ತಂದಿದೆ, ಇದು ಎಲ್ಲಾ ವಲಯಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ, ವಿಶೇಷವಾಗಿ ನಮ್ಮ MSMEಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ. ಈ ರಿಫಾರ್ಮ್ ಎಕ್ಸ್‌ಪ್ರೆಸ್ ನಲ್ಲಿ ಸವಾರಿ ಮಾಡುವ ಮೂಲಕ, ಭಾರತವು ವಿಮಾ ವಲಯದಲ್ಲಿ ಪ್ರಮುಖ ಸುಧಾರಣೆಯನ್ನು ಕೈಗೊಂಡಿದೆ—ಅಲ್ಲಿ ಶೇಕಡಾ 100 ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲಾಗಿದೆ. ಇದು ನಾಗರಿಕರಿಗೆ ಸಾರ್ವತ್ರಿಕ ವಿಮಾ ಸೌಲಭ್ಯವನ್ನು ಒದಗಿಸುವ ಅಭಿಯಾನವನ್ನು ಚುರುಕುಗೊಳಿಸುತ್ತದೆ. ಅದೇ ರೀತಿ, ಸುಮಾರು ಆರು ದಶಕಗಳ ನಂತರ, ಆದಾಯ ತೆರಿಗೆ ಕಾನೂನನ್ನು ಆಧುನೀಕರಿಸಲಾಗಿದ್ದು, ಇದರಿಂದ ಲಕ್ಷಾಂತರ ತೆರಿಗೆದಾರರಿಗೆ ಅನುಕೂಲವಾಗಲಿದೆ. ಭಾರತವು ಐತಿಹಾಸಿಕ ಕಾರ್ಮಿಕ ಸುಧಾರಣೆಗಳನ್ನು ಸಹ ಜಾರಿಗೆ ತಂದಿದೆ, ಇದು ವೇತನ, ಸಾಮಾಜಿಕ ಭದ್ರತೆ ಮತ್ತು ಕೈಗಾರಿಕೆಗಳಿಗೆ ಒಂದು ಏಕೀಕೃತ ಚೌಕಟ್ಟನ್ನು ಒದಗಿಸಿದೆ. ಇದರಿಂದ ಕಾರ್ಮಿಕರು ಮತ್ತು ಉದ್ಯಮಗಳು ಸಮಾನವಾಗಿ ಪ್ರಯೋಜನ ಪಡೆಯುತ್ತಿವೆ.

ಭಾರತವು ಇಂದು ಡೇಟಾ-ಚಾಲಿತ ನಾವೀನ್ಯತೆ, ಕೃತಕ ಬುದ್ಧಿಮತ್ತೆ ಸಂಶೋಧನೆ ಮತ್ತು ಸೆಮಿಕಂಡಕ್ಟರ್ ತಯಾರಿಕೆಯ ಜಾಗತಿಕ ಕೇಂದ್ರವಾಗುತ್ತಿದೆ. ಭಾರತದ ವಿದ್ಯುತ್ ಬೇಡಿಕೆಯು ಸ್ಥಿರವಾಗಿ ಹೆಚ್ಚುತ್ತಿದ್ದು, ದೇಶದ ಪ್ರಗತಿಗೆ ನಿರಂತರ ಇಂಧನ ಪೂರೈಕೆ ಅತ್ಯಗತ್ಯವಾಗಿದೆ. ಇದರ ಒಂದು ಪ್ರಮುಖ ಮೂಲವೆಂದರೆ ಪರಮಾಣು ಶಕ್ತಿ. ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಪರಮಾಣು ವಿದ್ಯುತ್ ವಲಯದಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಪರಿಚಯಿಸಿದ್ದೇವೆ. ಸಂಸತ್ತಿನ ಕಳೆದ ಅಧಿವೇಶನದಲ್ಲಿ, 'ಶಾಂತಿ ಕಾಯ್ದೆ' (Shanti Act) ಮೂಲಕ ನಾಗರಿಕ ಪರಮಾಣು ಇಂಧನ ಕ್ಷೇತ್ರವನ್ನು ಖಾಸಗಿ ಪಾಲುದಾರಿಕೆಗಾಗಿ ಮುಕ್ತಗೊಳಿಸಲಾಗಿದೆ. ಇದು ಹೂಡಿಕೆದಾರರಿಗೆ ಲಭ್ಯವಿರುವ ಒಂದು ಬೃಹತ್ ಅವಕಾಶವಾಗಿದೆ.

ಸ್ನೇಹಿತರೇ,

ಇಲ್ಲಿ ಉಪಸ್ಥಿತರಿರುವ ಎಲ್ಲಾ ಹೂಡಿಕೆದಾರರಿಗೆ ನಾನು ಭರವಸೆ ನೀಡುತ್ತೇನೆ—ನಮ್ಮ ಈ 'ಸುಧಾರಣಾ ಎಕ್ಸ್ಪ್ರೆಸ್'  ನಿಲ್ಲುವುದಿಲ್ಲ. ಭಾರತದ ಸುಧಾರಣಾ ಪಯಣವು ಈಗ ಸಾಂಸ್ಥಿಕ ರೂಪಾಂತರದತ್ತ ಸಾಗಿದೆ.

ನೀವು ಇಲ್ಲಿಗೆ ಕೇವಲ ಒಂದು 'ತಿಳುವಳಿಕಾ ಪತ್ರ' ಹಿಡಿದು ಬಂದಿಲ್ಲ. ಬದಲಾಗಿ, ಸೌರಾಷ್ಟ್ರ-ಕಚ್ ನ ಅಭಿವೃದ್ಧಿ ಮತ್ತು ಪರಂಪರೆಯೊಂದಿಗೆ ಬೆರೆಯಲು ಇಲ್ಲಿಗೆ ಬಂದಿದ್ದೀರಿ. ನಾನು ನಿಮಗೆ ಭರವಸೆ ನೀಡುತ್ತೇನೆ, ನಿಮ್ಮ ಹೂಡಿಕೆಯ ಪ್ರತಿಯೊಂದು ರೂಪಾಯಿಯೂ ಇಲ್ಲಿ ಅತ್ಯುತ್ತಮ ಲಾಭವನ್ನು ನೀಡುತ್ತದೆ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಗುಜರಾತ್ ಸರ್ಕಾರ ಮತ್ತು ಅದರ ಇಡೀ ತಂಡವು ಹಾಕುತ್ತಿರುವ ಶ್ರಮಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಶ್ಲಾಘಿಸುತ್ತೇನೆ. 2027ರ 'ವೈಬ್ರಂಟ್ ಶೃಂಗಸಭೆ'ಗೂ ಮುನ್ನ ನಡೆಯುತ್ತಿರುವ ಈ ಪ್ರಾದೇಶಿಕ ಶೃಂಗಸಭೆಯು ಒಂದು ಮೌಲ್ಯಯುತ ಪ್ರಯೋಗವೆಂದು ಸಾಬೀತಾಗುತ್ತಿದೆ. ನಾನು ಆರಂಭಿಸಲು ಅವಕಾಶ ಪಡೆದಿದ್ದ ಈ ಕಾರ್ಯಗಳನ್ನು ಈಗ ನನ್ನ ಸಹೋದ್ಯೋಗಿಗಳು ವಿಸ್ತರಿಸುತ್ತಾ, ಅದಕ್ಕೆ ಹೊಸ ಚೈತನ್ಯವನ್ನು ತುಂಬುತ್ತಿರುವುದನ್ನು ಕಂಡು ನನಗೆ ಅತೀವ ಸಂತೋಷವಾಗುತ್ತಿದೆ. ಇದು ನನ್ನ ಸಂತೋಷವನ್ನು ಹತ್ತಾರು ಪಟ್ಟು ಹೆಚ್ಚಿಸಿದೆ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಧನ್ಯವಾದಗಳು!

 

*****


(रिलीज़ आईडी: 2213636) आगंतुक पटल : 6
इस विज्ञप्ति को इन भाषाओं में पढ़ें: Telugu , English , Urdu , हिन्दी , Manipuri , Assamese , Bengali , Punjabi , Gujarati , Odia , Malayalam