ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಜನವರಿ 11 ರಂದು ರಾಜ್‌ಕೋಟ್‌ಗೆ ಭೇಟಿ


ಕಛ್‌ ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಪಶ್ಚಿಮ ಗುಜರಾತ್‌ನಲ್ಲಿ ಹೂಡಿಕೆ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ವೇಗ ನೀಡಲಿರುವ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನ

ಸೆರಾಮಿಕ್ಸ್, ಎಂಜಿನಿಯರಿಂಗ್, ಬಂದರುಗಳು ಮತ್ತು ಲಾಜಿಸ್ಟಿಕ್ಸ್, ಹಸಿರು ಇಂಧನ, ಪ್ರವಾಸೋದ್ಯಮ ಸೇರಿ ಪ್ರಮುಖ ವಲಯಗಳ ಮೇಲೆ ಗಮನ ಕೇಂದ್ರೀಕರಿಸಲಿರುವ ಸಮ್ಮೇಳನ

ವೈಬ್ರಂಟ್ ಗುಜರಾತ್‌ನ ಯಶಸ್ವಿ ಮಾದರಿಯ ವ್ಯಾಪ್ತಿ ಮತ್ತು ಪ್ರಭಾವವನ್ನು ಮತ್ತಷ್ಟು ವಿಸ್ತರಿಸಲು, ಗುಜರಾತ್‌ನಾದ್ಯಂತ ನಾಲ್ಕು ವೈಬ್ರೆಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನಗಳ ಆಯೋಜನೆ

ನಿರ್ದಿಷ್ಟ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಉತ್ತೇಜಿಸುವ, ವೈವಿಧ್ಯಮಯ ವಲಯಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಜಾಗತಿಕ ಒಳಗೊಳ್ಳುವಿಕೆ ಹೆಚ್ಚಿಸುವ ಗುರಿ ಹೊಂದಿರುವ ಪ್ರಾದೇಶಿಕ ಸಮ್ಮೇಳನಗಳು

प्रविष्टि तिथि: 09 JAN 2026 12:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 11 ರಂದು ರಾಜ್‌ಕೋಟ್‌ಗೆ ಭೇಟಿ ನೀಡಲಿದ್ದಾರೆ ಮತ್ತು ಕಛ್‌  ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ನಡೆಯುವ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1:30 ರ ಸುಮಾರಿಗೆ ಅವರು ಸಮ್ಮೇಳನದಲ್ಲಿ ವ್ಯಾಪಾರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಆನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜ್‌ಕೋಟ್‌ನ ಮಾರ್ವಾಡಿ ವಿಶ್ವವಿದ್ಯಾಲಯದಲ್ಲಿ ಕಛ್ ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ನಡೆಯುವ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನವನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು 14 ಗ್ರೀನ್‌ಫೀಲ್ಡ್ ಸ್ಮಾರ್ಟ್ ಗುಜರಾತ್  ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಜಿಐಡಿಸಿ) ಎಸ್ಟೇಟ್‌ಗಳ ಅಭಿವೃದ್ಧಿಯನ್ನು ಘೋಷಿಸಲಿದ್ದಾರೆ ಮತ್ತು ರಾಜ್‌ಕೋಟ್‌ನಲ್ಲಿ ಜಿಐಡಿಸಿಯ ವೈದ್ಯಕೀಯ ಸಾಧನಗಳ ಪಾರ್ಕ್ ಅನ್ನು ಉದ್ಘಾಟಿಸಲಿದ್ದಾರೆ.

ಕಛ್‌ ಮತ್ತು ಸೌರಾಷ್ಟ್ರ ಪ್ರದೇಶಗಳಾದ್ಯಂತ 12 ಜಿಲ್ಲೆಗಳನ್ನು ಒಳಗೊಂಡ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನವು 2026 ರ ಜನವರಿ 11 ರಿಂದ 12 ರಿಂದ ನಡೆಯುತ್ತಿದೆ. ಈ ಪ್ರದೇಶಗಳಿಗೆ ಮಾತ್ರ ನಿರ್ದಿಷ್ಟವಾಗಿರುವ ಈ ಸಮ್ಮೇಳನವು ಪಶ್ಚಿಮ ಗುಜರಾತ್‌ನಲ್ಲಿ ಹೂಡಿಕೆ ಮತ್ತು ಕೈಗಾರಿಕಾ ಬೆಳವಣಿಗೆಗೆ ಹೊಸ ಆವೇಗವನ್ನು ನೀಡುವ ಗುರಿ ಹೊಂದಿದೆ. ಸಮ್ಮೇಳನದ ಕೇಂದ್ರೀಕೃತ ವಲಯಗಳಲ್ಲಿ ಸೆರಾಮಿಕ್ಸ್, ಎಂಜಿನಿಯರಿಂಗ್, ಬಂದರುಗಳು ಮತ್ತು ಲಾಜಿಸ್ಟಿಕ್ಸ್, ಮೀನುಗಾರಿಕೆ, ಪೆಟ್ರೋಕೆಮಿಕಲ್ಸ್‌, ಕೃಷಿ ಮತ್ತು ಆಹಾರ ಸಂಸ್ಕರಣೆ, ಖನಿಜಗಳು, ಹಸಿರು ಇಂಧನ ಪರಿಸರ ವ್ಯವಸ್ಥೆ, ಕೌಶಲ್ಯ ಅಭಿವೃದ್ಧಿ ನವೋದ್ಯಮಗಳು, ಎಂಎಸ್ ಎಂಇಗಳು, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸೇರಿವೆ. ಜಪಾನ್, ದಕ್ಷಿಣ ಕೊರಿಯಾ, ರುವಾಂಡಾ ಮತ್ತು ಉಕ್ರೇನ್ ಸಮ್ಮೇಳನದ ಪಾಲುದಾರ ರಾಷ್ಟ್ರಗಳಾಗಲಿವೆ.

ವೈಬ್ರಂಟ್ ಗುಜರಾತ್‌ನ ಯಶಸ್ವಿ ಮಾದರಿಯ ವ್ಯಾಪ್ತಿ ಮತ್ತು ಪ್ರಭಾವವನ್ನು ಮತ್ತಷ್ಟು ವಿಸ್ತರಿಸಲು ರಾಜ್ಯದಾದ್ಯಂತ ನಾಲ್ಕು ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಉತ್ತರ ಗುಜರಾತ್ ಪ್ರದೇಶದ ಪ್ರಾದೇಶಿಕ ಸಮ್ಮೇಳನದ ಮೊದಲ ಆವೃತ್ತಿಯನ್ನು 2025ರ ಅಕ್ಟೋಬರ್ 9-10 ರಂದು ಮೆಹ್ಸಾನಾದಲ್ಲಿ ನಡೆಸಲಾಯಿತು. ಸದ್ಯದ ಆವೃತ್ತಿಯನ್ನು ಕಛ್‌  ಮತ್ತು ಸೌರಾಷ್ಟ್ರ ಪ್ರದೇಶಕ್ಕಾಗಿ ನಡೆಸಲಾಗುತ್ತಿದೆ. ದಕ್ಷಿಣ ಗುಜರಾತ್ (2026ರ ಏಪ್ರಿಲ್ 9-10ರಂದು) ಮತ್ತು ಮಧ್ಯ ಗುಜರಾತ್ (2026ರ ಜೂನ್ 10-11ರಂದು) ಪ್ರದೇಶಗಳ ಪ್ರಾದೇಶಿಕ ಸಮ್ಮೇಳನಗಳನ್ನು ನಂತರ ಕ್ರಮವಾಗಿ ಸೂರತ್ ಮತ್ತು ವಡೋದರಾದಲ್ಲಿ ಆಯೋಜಿಸಲಾಗುವುದು.

ಪ್ರಧಾನ ಮಂತ್ರಿ ಅವರ ‘ವಿಕಸಿತ ಭಾರತ @2047’  ದೂರದೃಷ್ಟಿಗೆ ಅನುಗುಣವಾಗಿ ಮತ್ತು ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗಸಭೆಯ ಯಶಸ್ಸು ಮತ್ತು ಪರಂಪರೆಯನ್ನು ಆಧರಿಸಿ, ಈ ಪ್ರಾದೇಶಿಕ ಸಮ್ಮೇಳನಗಳು ನಿರ್ದಿಷ್ಟ ಪ್ರದೇಶಗಳ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ, ವೈವಿಧ್ಯಮಯ ವಲಯಗಳಲ್ಲಿ ಹೂಡಿಕೆಗಳ ಆಕರ್ಷಣೆ ಮತ್ತು ಜಾಗತಿಕ ಪಾಲುದಾರಿಕೆಯನ್ನು ವೃದ್ಧಿಸುವ ಗುರಿಯನ್ನು ಹೊಂದಿವೆ. ವೈಬ್ರಂಟ್ ಗುಜರಾತ್ ವೇದಿಕೆಯನ್ನು ಪ್ರದೇಶಗಳಿಗೆ ಹತ್ತಿರ ತರುವ ಮೂಲಕ ಈ ಉಪಕ್ರಮವು ವಿಕೇಂದ್ರೀಕೃತ ಅಭಿವೃದ್ಧಿ, ಸುಲಭ ವ್ಯವಹಾರ, ನಾವೀನ್ಯತೆ ಆಧರಿತ ಬೆಳವಣಿಗೆ ಮತ್ತು ಸುಸ್ಥಿರ ಉದ್ಯೋಗಾವಕಾಶಗಳ ಸೃಷ್ಟಿಗೆ ಪ್ರಧಾನಮಂತ್ರಿಯವರ ಒತ್ತು ನೀಡುತ್ತಿರುವುದು ಪ್ರತಿಫಲನಗೊಳ್ಳಲಿದೆ.

ಪ್ರಾದೇಶಿಕ ಸಮ್ಮೇಳನಗಳು ಪ್ರಾದೇಶಿಕ ಸಾಧನೆಗಳನ್ನು ಪ್ರದರ್ಶಿಸಲು ಮತ್ತು ಹೊಸ ಉಪಕ್ರಮಗಳನ್ನು ಘೋಷಿಸಲು ವೇದಿಕೆಯಾಗುವುದು ಮಾತ್ರವಲ್ಲದೆ, ಪ್ರಾದೇಶಿಕ ಆರ್ಥಿಕತೆಗಳನ್ನು ಸಬಲೀಕರಣಗೊಳಿಸುವ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ಮತ್ತು ರಾಜ್ಯದ ಪ್ರತಿಯೊಂದು ಭಾಗದಲ್ಲೂ ಕಾರ್ಯತಂತ್ರದ ಹೂಡಿಕೆಗಳನ್ನು ಸುಗಮಗೊಳಿಸುವ ಮೂಲಕ ಗುಜರಾತ್‌ನ ಪ್ರಗತಿಯ ಯಶೋಗಾಥೆಯ ಸಹ-ಸೃಷ್ಟಿಗೆ ಸಾಧನಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಪ್ರಾದೇಶಿಕ ಸಮ್ಮೇಳನಗಳ ಸಾಧನೆಗಳನ್ನು 2027ರ ಜನವರಿಯಲ್ಲಿ ನಡೆಯಲಿರುವ ಮುಂದಿನ ಆವೃತ್ತಿಯ ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗಸಭೆಯ ಪ್ರದರ್ಶಿಸಲಾಗುವುದು.

 

*****


(रिलीज़ आईडी: 2212899) आगंतुक पटल : 6
इस विज्ञप्ति को इन भाषाओं में पढ़ें: Bengali , Assamese , English , Urdu , Marathi , हिन्दी , Manipuri , Punjabi , Gujarati , Odia , Tamil , Telugu , Malayalam