ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ.ಎಲ್.ಮುರುಗನ್ ಅವರಿಂದ ಭಾರತ ಸರ್ಕಾರದ 2026ನೇ ದಿನದರ್ಶಿಕೆ ಬಿಡುಗಡೆ
ಕ್ಯಾಲೆಂಡರ್ ನ ಘೋಷ ವಾಕ್ಯ ‘ಭಾರತ@2026: ಸೇವಾ, ಸುಶಾಶನ ಮತ್ತು ಸಮೃದ್ಧಿ’
ಭಾರತ್@2026 ಕ್ಯಾಲೆಂಡರ್ ಭಾರತದ ಪರಿವರ್ತನೆಯನ್ನು ಪ್ರದರ್ಶಿಸುತ್ತದೆ -ಐ & ಬಿ ಕಾರ್ಯದರ್ಶಿ ಸಂಜಯ್ ಜಾಜು ಹೇಳಿಕೆ
प्रविष्टि तिथि:
31 DEC 2025 2:25PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ (ಐ & ಬಿ) ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ದೆಹಲಿಯಲ್ಲಿಂದು ಭಾರತ ಸರ್ಕಾರದ 2026ರ ದಿನದರ್ಶಿಕೆ(ಕ್ಯಾಲೆಂಡರ್) ಅನ್ನು ಬಿಡುಗಡೆ ಮಾಡಿದರು. “ಈ ಕ್ಯಾಲೆಂಡರ್ ಕೇವಲ ದಿನಾಂಕಗಳು ಮತ್ತು ತಿಂಗಳುಗಳ ವಾರ್ಷಿಕ ಪ್ರಕಟಣೆಯಲ್ಲ, ಬದಲಿಗೆ ಭಾರತದ ಪರಿವರ್ತನೆಯ ಪಯಣವನ್ನು ಪ್ರತಿಬಿಂಬಿಸುವ, ಆಡಳಿತದ ಆದ್ಯತೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಮತ್ತು 2047ರ ವೇಳೆಗೆ ವಿಕಸಿತ ಭಾರತದ ಗುರಿಯತ್ತ ಸಾಮೂಹಿಕ ಸಂಕಲ್ಪವನ್ನು ನವೀಕರಿಸುವ ವಿಧಾನವಾಗಿದೆ’’ ಎಂದು ಸಚಿವರು ಹೇಳಿದರು.
ಕ್ಯಾಲೆಂಡರ್ ನ ಘೋಷ ವಾಕ್ಯವು “ಭಾರತ@2026: ಸೇವೆ, ಸುಶಾಸನ ಮತ್ತು ಸಮೃದ್ಧಿ” (ಸೇವೆ, ಉತ್ತಮ ಆಡಳಿತ ಮತ್ತು ಸಮಗ್ರ ಸಮೃದ್ಧಿ) ಎಂಬುದಾಗಿದ್ದು, ಇದು ಭಾರತವು ತನ್ನ ಅಸ್ಮಿತೆಯಲ್ಲಿ ಸುರಕ್ಷಿತವಾಗಿದೆ, ತನ್ನ ಸಂಸ್ಥೆಗಳಲ್ಲಿ ಬಲಿಷ್ಠವಾಗಿದೆ ಮತ್ತು ತನ್ನ ದೀರ್ಘಕಾಲೀನ ದೂರದೃಷ್ಟಿಯು ಸ್ಪಷ್ಟವಾಗಿದೆ ಎಂಬುದನ್ನು ಬಿಂಬಿಸುತ್ತದೆ. ಜನ-ಕೇಂದ್ರಿತ ಆಡಳಿತ, ಸೇವಾ ವಿತರಣೆ ಬಲವರ್ಧನೆ ಮತ್ತು ಪ್ರಕ್ರಿಯೆಗಳನ್ನು ಸರಳೀಕರಿಸಲು ಮತ್ತು ನಾಗರಿಕರು ಮತ್ತು ರಾಷ್ಟ್ರದ ನಡುವೆ ವಿಶ್ವಾಸವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಸುಧಾರಣೆಗಳಲ್ಲಿ ಬೇರೂರಿರುವ ರಾಷ್ಟ್ರೀಯ ವಿಶ್ವಾಸದ ಸ್ಫೂರ್ತಿಯನ್ನು ಕ್ಯಾಲೆಂಡರ್ ಕಟ್ಟಿಕೊಡುತ್ತದೆ ಎಂದು ಸಚಿವರು ಬಲವಾಗಿ ಪ್ರತಿಪಾದಿಸಿದರು.

2025ರಲ್ಲಿ ಕೈಗೊಂಡ ಪ್ರಮುಖ ಸುಧಾರಣೆಗಳನ್ನು ಉಲ್ಲೇಖಿಸಿದ ಡಾ. ಮುರುಗನ್ ಅವರು, ಸಾಂಸ್ಥಿಕ ಸುಧಾರಣಾ ಕ್ರಮಗಳು ಭಾರತದ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಬಲವರ್ಧನೆಗೊಳಿಸಿವೆ ಮತ್ತು ಅಭಿವೃದ್ಧಿಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವುದನ್ನು ಖಾತ್ರಿಪಡಿಸಿಕೊಂಡಿವೆ ಎಂದು ಹೇಳಿದರು. ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ವಿನಾಯಿತಿ, ಜಿ ಎಸ್ ಟಿ 2.0 ಏಕರೂಪಗೊಳಿಸುವಿಕೆ, ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಮತ್ತು ಕೇಂದ್ರೀಕೃತ ಉದ್ಯೋಗ ಸೃಷ್ಟಿ ಉಪಕ್ರಮಗಳು ಉತ್ಪಾದಕತೆ, ಸುಲಭ ಜೀವನ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮೃದ್ಧಿಗೆ ಹೊಸ ವೇಗವನ್ನು ನೀಡಿವೆ ಎಂದು ಅವರು ಉಲ್ಲೇಖಿಸಿದರು.
ಈ ವೇಳೆ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಭಾರತ ಸರ್ಕಾರದ ಕ್ಯಾಲೆಂಡರ್ ವಾಸ್ತವವಾಗಿ ಸರ್ಕಾರದ ಆದ್ಯತೆಯನ್ನು ವಿವರಿಸುತ್ತದೆ ಮತ್ತು ರಾಷ್ಟ್ರೀಯ ಆದ್ಯತೆಗಳು ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಪ್ರಬಲ ಸಂವಹನ ಸಾಧನವಾಗಿ ವಿಕಸನಗೊಂಡಿದೆ ಎಂದು ಹೇಳಿದರು. ‘ಭಾರತ್@2026 ಸೇವಾ, ಸುಶಾಶನ ಮತ್ತು ಸಮೃದ್ಧಿ’ ಎಂಬ ವಿಷಯಾಧಾರಿತ 2026 ರ ಕ್ಯಾಲೆಂಡರ್ ಸುಧಾರಣೆ, ಎಲ್ಲರನ್ನೂ ಒಳಗೊಳ್ಳುವುದು ಮತ್ತು ಆಶೋತ್ತರಗಳ ಮೂಲಕ ಭಾರತದ ಆತ್ಮವಿಶ್ವಾಸದ ಕ್ರೂಢೀಕರಣವನ್ನು ಕಟ್ಟಿಕೊಡುತ್ತದೆ ಎಂದು ಅವರು ಉಲ್ಲೇಖಿಸಿದರು.
2026ರ ಕ್ಯಾಲೆಂಡರ್ ರಾಷ್ಟ್ರೀಯ ಪ್ರಗತಿಯ ಪ್ರಮುಖ ಸ್ತಂಭಗಳನ್ನು ಚಿತ್ರಿಸುವ ಮತ್ತು ಬದಲಾಗುತ್ತಿರುವ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುವ ಹನ್ನೆರಡು ವಿಷಯಾಧಾರಿತ ಮಾಸಿಕ ಹಾಳೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ಆತ್ಮನಿರ್ಭರ ಭಾರತದಿಂದ ಆತ್ಮವಿಶ್ವಾಸ (ಜನವರಿ), ಇದು ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬನೆಯನ್ನು ಉಲ್ಲೇಖಿಸುತ್ತದೆ; ಸಮೃದ್ಧ ರೈತ, ಸಮೃದ್ಧ ಭಾರತ (ಫೆಬ್ರವರಿ), ರೈತರ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತದೆ; ನವ ಭಾರತಕ್ಕಾಗಿ ನಾರಿ ಶಕ್ತಿ (ಮಾರ್ಚ್), ಮಹಿಳೆಯರನ್ನು ಆಧುನಿಕ ಭಾರತದ ವಾಸ್ತುಶಿಲ್ಪಿಗಳಾಗಿ ಬಿಂಬಿಸುತ್ತದೆ; ಮತ್ತು ಸರಳೀಕರಣ ಮತ್ತು ಆಡಳಿತ ಸುಧಾರಣೆಗಳ ಮೇಲೆ ಕೇಂದ್ರೀಕರಿಸುವ ಸರಳೀಕರಣದಿಂದ ಸಶಕ್ತಿಕರಣ್ (ಏಪ್ರಿಲ್) ಇವು ಸೇರಿವೆ. ವೀರತ್ವದಿಂದ ವಿಜಯದೆಡೆಗೆ, ಸಶಸ್ತ್ರ ಪಡೆಗಳ ಧೈರ್ಯ ಮತ್ತು ತ್ಯಾಗವನ್ನು ಗೌರವಿಸುವ ಆಪರೇಷನ್ ಸಿಂಧೂರ್ (ಮೇ); ಅತ್ಯಂತ ದುರ್ಬಲರಿಗೆ ಯೋಗಕ್ಷೇಮ ಮತ್ತು ಘನತೆಯನ್ನು ಒತ್ತಿಹೇಳುವ ಸ್ವಸ್ಥ ಭಾರತ, ಸಮೃದ್ಧ ಭಾರತ (ಜೂನ್) ಮತ್ತು ವಂಚಿತರಿಗೆ ಸನ್ಮಾನ (ಜುಲೈ); ಯುವ ಶಕ್ತಿ, ರಾಷ್ಟ್ರ ಶಕ್ತಿ (ಆಗಸ್ಟ್) ಮತ್ತು ಗತಿ, ಶಕ್ತಿ, ಪ್ರಗತಿ (ಸೆಪ್ಟೆಂಬರ್) ಯುವಕರ ಶಕ್ತಿಯನ್ನು ಸೆರೆಹಿಡಿಯುತ್ತದೆ ಮತ್ತು ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯದ ವಿಸ್ತರಣೆ; ಪರಂಪರೆಯಿಂದ ಪ್ರಗತಿಯವರೆಗೆ (ಅಕ್ಟೋಬರ್) ಮತ್ತು ಸಬ್ ಕಾ ಸಾಥ್, ಸಬ್ ಕಾ ಸಮ್ಮಾನ್ (ನವೆಂಬರ್) ಭಾರತದ ನಾಗರಿಕತೆಯ ಮೌಲ್ಯಗಳು ಮತ್ತು ಸಮಗ್ರ ಪ್ರಗತಿಯನ್ನು ಪುನರುಚ್ಚರಿಸುತ್ತದೆ; ಮತ್ತು ವಿಶ್ವಬಂಧು ಭಾರತ (ಡಿಸೆಂಬರ್), ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಜಾಗತಿಕ ಪಾಲುದಾರನಾಗಿ ಭಾರತದ ಪಾತ್ರವನ್ನು ಪ್ರಮುಖವಾಗಿ ಬಿಂಬಿಸುತ್ತದೆ.
(ಸಿಬಿಸಿ) ಮಹಾನಿರ್ದೇಶಕಿ ಶ್ರೀಮತಿ ಕಾಂಚನ್ ಪ್ರಸಾದ್, ಕ್ಯಾಲೆಂಡರ್ ಅನ್ನು 13 ಭಾರತೀಯ ಭಾಷೆಗಳಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿ, ಕ್ಯಾಲೆಂಡರ್‌ನ ಒಳಗೊಳ್ಳುವಿಕೆ ಪ್ರತಿಯೊಂದು ಭಾಷೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ನಾಗರಿಕರೊಂದಿಗೆ ಸಂಪರ್ಕ ಸಾಧಿಸುವ ಸರ್ಕಾರದ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದರು. ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಭಾತ್, ಹೆಚ್ಚುವರಿ ಕಾರ್ಯದರ್ಶಿ (ಐ & ಬಿ ಸಚಿವಾಲಯ), ಶ್ರೀಮತಿ ಅನುಪಮಾ ಭಟ್ನಾಗರ್, ಮಹಾನಿರ್ದೇಶಕಿ (ಪಿಐಬಿ) ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಗಣ್ಯರು ಪರಸ್ಪರ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು 2026 ಸಮೃದ್ಧ, ಎಲ್ಲರನ್ನೂ ಒಳಗೊಂಡ ಮತ್ತು ಆತ್ಮವಿಶ್ವಾಸದ ಭಾರತದತ್ತ ಮತ್ತೊಂದು ನಿರ್ಣಾಯಕ ಹೆಜ್ಜೆ ಮೂಡಿಸಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಭಾರತ ಸರ್ಕಾರದ 2026ನೇ ಸಾಲಿನ ಕ್ಯಾಲೆಂಡರ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು, ಈ ಕೆಳಗಿನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ:

*****
(रिलीज़ आईडी: 2210139)
आगंतुक पटल : 8