ರೈಲ್ವೇ ಸಚಿವಾಲಯ
azadi ka amrit mahotsav

ರೈಲ್ವೆ ಸಚಿವಾಲಯ: 2025 ವರ್ಷಾಂತ್ಯದ ಪರಾಮರ್ಶೆ


ಭವಿಷ್ಯಕ್ಕೆ ಸಿದ್ಧವಾದ ಜಾಲವನ್ನು ನಿರ್ಮಿಸುವುದು: ಭಾರತೀಯ ರೈಲ್ವೆಯ 2025ರ ಮೈಲಿಗಲ್ಲುಗಳು 2026ಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತಿವೆ

ನಾವೀನ್ಯತೆ, ದೇಶೀಕರಣ, ಹಳಿ ನವೀಕರಣ ಮತ್ತು ಪುನರ್ ಅಭಿವೃದ್ಧಿಪಡಿಸಿದ ನಿಲ್ದಾಣಗಳಲ್ಲಿನ ವಿಮಾನ ನಿಲ್ದಾಣದಂತಹ ಸೌಲಭ್ಯಗಳು ಭಾರತದಲ್ಲಿ ರೈಲು ಪ್ರಯಾಣವನ್ನು ಮರು ವ್ಯಾಖ್ಯಾನಿಸುತ್ತಿವೆ

ನಿಮ್ಮ ರೈಲು ಪ್ರಯಾಣದ ಅನುಭವದಲ್ಲಿ ಸ್ಥಳೀಯ ಪಾಕಪದ್ಧತಿ ಮತ್ತು ನೈರ್ಮಲ್ಯ, ಅದನ್ನು ಸ್ಮರಣೀಯವಾಗಿಸುತ್ತಿದೆ

ಹಳಿ ನವೀಕರಣವು ವೇಗದ, ಸುರಕ್ಷಿತ ಮತ್ತು ಆರಾಮದಾಯಕ ರೈಲು ಪ್ರಯಾಣವನ್ನು ಖಚಿತಪಡಿಸುತ್ತಿದೆ

ಕವಚ, ಸುರಕ್ಷತೆ ಮತ್ತು ಲೋಕೋ ಪೈಲೆಟ್ ಗಳಿಗೆ ಎಚ್ಚರಿಕೆಯನ್ನು ನೀಡುವಲ್ಲಿ  ಕೃತಕ ಬುದ್ಧಿಮತ್ತೆ ಬಳಕೆಯಿಂದಾಗಿ ರೈಲು ಅಪಘಾತಗಳನ್ನು ಐತಿಹಾಸಿಕವಾಗಿ  ಕನಿಷ್ಠ ಮಟ್ಟಕ್ಕೆ ಇಳಿಸಲು ಸಾಧ್ಯವಾಗಿದೆ

ಮೊದಲ ವಂದೇ ಭಾರತ್ ಸ್ಲೀಪರ್ ಶೀಘ್ರದಲ್ಲೇ ಕಾರ್ಯಾರಂಭ ಮಾಡಲು ಸಿದ್ಧವಾಗಿದೆ; ಪ್ರಯಾಣಿಕರ ಚಲನಶೀಲತೆಯನ್ನು ಹೆಚ್ಚಿಸಲು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು

ಸಾಮಾನ್ಯ ಜನರಿಗೆ ಆರಾಮದಾಯಕ ಪ್ರಯಾಣದ ವಿಸ್ತರಣೆ; 2025 ರಲ್ಲಿ ದೇಶಾದ್ಯಂತ 13 ಹೊಸ ಅಮೃತ ಭಾರತ್ ರೈಲುಗಳನ್ನು ಪರಿಚಯಿಸಲಾಯಿತು, ಇದರಿಂದ ಇವುಗಳ ಒಟ್ಟು ಸಂಖ್ಯೆ 30ಕ್ಕೆ ತಲುಪಿದೆ

ನಿಯಮಿತ ಸೇವೆಗಳ ಜೊತೆಗೆ, ಹೆಚ್ಚುವರಿ ಜನದಟ್ಟಣೆಯನ್ನು ನಿಭಾಯಿಸಲು ರೈಲ್ವೆಯು 2025 ರಲ್ಲಿ 43,000 ಕ್ಕೂ ಹೆಚ್ಚು ವಿಶೇಷ ರೈಲು ಟ್ರಿಪ್ ಗಳನ್ನು ನಿರ್ವಹಿಸಿವೆ; ಮಹಾ ಕುಂಭಕ್ಕಾಗಿ 17,000 ಕ್ಕೂ ಹೆಚ್ಚು ರೈಲು ಟ್ರಿಪ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು

ಸುಧಾರಿತ ಶೌಚಾಲಯಗಳು, ಲಿಫ್ಟ್‌ಗಳು/ಎಸ್ಕಲೇಟರ್‌ಗಳು, ಆಹಾರ ಕೋರ್ಟ್ ಗಳು, ಆಧುನಿಕ ಕಾಯುವ ಪ್ರದೇಶಗಳು, 155 ಸಂಪೂರ್ಣವಾಗಿ ಆಧುನೀಕರಿಸಿದ ನಿಲ್ದಾಣಗಳು ಸೇರಿದಂತೆ ಇತರ  ಸೌಲಭ್ಯಗಳೊಂದಿಗೆ ರೈಲು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಅನುಭವವನ್ನು ನೀಡುತ್ತಿವೆ; ಉಳಿದ 1182 ಅಮೃತ್ ಭಾರತ್ ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ

ಸರ್ವ-ಋತು ಪ್ರಾದೇಶಿಕ ಏಕೀಕರಣದ ಬಲಪಡಿಸುವಿಕೆ, ಕಾಶ್ಮೀರ ಮತ್ತು ಮಿಜೋರಾಂಗೆ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳು ದೂರದ ದುರ್ಗಮ ಪ್ರದೇಶಗಳ ಜನರ ಆರ್ಥಿಕ ಅಗತ್ಯಗಳನ್ನು ಪೂರೈಸುತ್ತಿವೆ

ಹೊಸ ಪಂಬನ್ ಸೇತುವೆ ತೀರ್ಥಯಾತ್ರೆ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತಿದೆ, ಪ್ರಾದೇಶಿಕ ಸಂಪರ್ಕವನ್ನು ಬಲಪಡಿಸುತ್ತಿದೆ ಮತ್ತು ಭವಿಷ್ಯದ ಭಾರತ-ಶ್ರೀಲಂಕಾ ಸಾರಿಗೆ ಸಂಪರ್ಕಗಳಿಗೆ ಬಾಗಿಲು ತೆರೆಯುತ್ತದೆ

2025ರಲ್ಲಿ ₹ 25,000 ಕೋಟಿಗೂ ಹೆಚ್ಚು ಮೌಲ್ಯದ 42 ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ

2029-30 ರ ವೇಳೆಗೆ 3,000 ಎಂ.ಟಿ. ವಾರ್ಷಿಕ ಲೋಡಿಂಗ್ ಗುರಿಯತ್ತ ಸಾಗುತ್ತಿರುವ ಭಾರತವು ವಿಶ್ವದ 2ನೇ ಅತಿದೊಡ್ಡ ಸರಕು ಸಾಗಣೆದಾರನಾಗುತ್ತಿದೆ

ಗತಿ ಶಕ್ತಿ ಸರಕು ಟರ್ಮಿನಲ್ಗಳು ಮತ್ತು ವ್ಯಾಗನ್ಗಳ ದಾಖಲೆಯ ಉತ್ಪಾದನೆಯು ಸರಕು ಬೆಳವಣಿಗೆಯ ಕಥೆಯನ್ನು ಉತ್ತೇಜಿಸುತ್ತಿದೆ; ಪ್ರತಿದಿನ 400 ಕ್ಕೂ ಹೆಚ್ಚು ರೈಲುಗಳು ಸರಕು ಸಾಗಾಣಿಕೆಗಾಗಿಯೇ ಮೀಸಲಿರುವ ಸರಕು ಕಾರಿಡಾರ್ಗಳಲ್ಲಿ ಓಡಾಟ ನಡೆಸುತ್ತಿವೆ

ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಪೂರೈಸುವತ್ತ ಸ್ವದೇಶಿ ವಿದ್ಯುತ್ ಲೋಕೋಮೋಟಿವ್ಗಳು ಆತ್ಮನಿರ್ಭರ ಭಾರತಕ್ಕೆ ಚಾಲನೆ ನೀಡುತ್ತಿವೆ

ಹೈ-ಸ್ಪೀಡ್ ಕಾರಿಡಾರ್ ನಲ್ಲಿ ಉನ್ನತ ತಂತ್ರಜ್ಞಾನದ ಬಳಕೆಯು ತ್ವರಿತ ಕಾಮಗಾರಿಯ ಪ್ರಗತಿಗೆ ಸಹಾಯ ಮಾಡುತ್ತಿದೆ

ಪ್ರಕಟಣಾ ದಿನಾಂಕ: 28 DEC 2025 3:30PM by PIB Bengaluru

ಗಮನ ಕೇಂದ್ರೀಕೃತ ಪ್ರಯತ್ನಗಳು, ನಾವೀನ್ಯತೆ ಮತ್ತು ದೇಶೀಕರಣವು ಭಾರತೀಯ ರೈಲ್ವೆಯನ್ನು ವಿಶ್ವ ದರ್ಜೆಯ ಜಾಲವನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತಿದೆ. ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ವರ್ಷ ವಿಶ್ವ ದರ್ಜೆಯ ಜಾಲದ ತನ್ನ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಗಮನಾರ್ಹ ಹೆಜ್ಜೆಗಳನ್ನು ಇಟ್ಟಿದೆ. 2025 ಕ್ಕೆ ತೆರೆ ಬೀಳಲಿರುವಂತೆಯೇ, ಭಾರತೀಯ ರೈಲ್ವೆ 2026 ರ ಹೊಸ ವರ್ಷದಲ್ಲಿ ನಿಮ್ಮ ರೈಲು ಪ್ರಯಾಣದ ಅನುಭವವನ್ನು ನಿಜವಾಗಿಯೂ ಸ್ಮರಣೀಯವಾಗಿಸುವ ಮೂಲಕ ಹೆಚ್ಚು ಮತ್ತು ಹೆಚ್ಚು ಆರಾಮದಾಯಕವಾಗಿಸಲು ಸಜ್ಜಾಗಿದೆ. ಅಮೃತ್ ಭಾರತ್ ರೈಲುಗಳ ಮೂಲಕ ಹವಾನಿಯಂತ್ರಿತವಲ್ಲದ (ಎಸಿ ಅಲ್ಲದ)ಬೋಗಿಯ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಐಷಾರಾಮಿ ಸೌಲಭ್ಯವನ್ನು ವಿಸ್ತರಿಸಿದ ನಂತರ, ಭಾರತೀಯ ರೈಲ್ವೆ ಶೀಘ್ರದಲ್ಲೇ ಎಸಿ ದರ್ಜೆಯ ಪ್ರಯಾಣಿಕರಿಗಾಗಿ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಕಾರ್ಯಗತಗೊಳಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಸಾರ್ವಜನಿಕ ಕೇಂದ್ರಿತ ಉಪಕ್ರಮವು ಮೊದಲು ದಟ್ಟಣೆಯ ಮಾರ್ಗಗಳಲ್ಲಿ ಮತ್ತು ನಂತರ ಎಲ್ಲಾ ಮಾರ್ಗಗಳಲ್ಲಿ ದೀರ್ಘ-ದೂರದ ರೈಲು ಪ್ರಯಾಣವನ್ನು ನಿಜವಾಗಿಯೂ ಮರು ವ್ಯಾಖ್ಯಾನಿಸುತ್ತದೆ, ಪ್ರಯಾಣದ ಸಮಯವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. ಭಾರತದಾದ್ಯಂತ ಪುನರಾಭಿವೃದ್ಧಿಗೊಂಡ ನಿಲ್ದಾಣಗಳು ಆಧುನಿಕ ಮತ್ತು ಅಗಲವಾದ ಪ್ರವೇಶದ್ವಾರಗಳು, ನವೀಕರಿಸಿದ ಶೌಚಾಲಯಗಳು, ಎಸ್ಕಲೇಟರ್‌ಗಳು, ಲಿಫ್ಟ್‌ಗಳು, ಫುಡ್ ಕೋರ್ಟ್‌ಗಳು ಮತ್ತು ಅತ್ಯಾಧುನಿಕ ಕಾಯುವ ಸಭಾಂಗಣಗಳು ಮುಂತಾದ ವಿಮಾನ ನಿಲ್ದಾಣದಂತಹ ಸೌಲಭ್ಯಗಳನ್ನು ಪ್ರಯಾಣಿಕರಿಗೆ ನೀಡುತ್ತಿವೆ.

ತನ್ನ ಅಡುಗೆ/ಆಹಾರ ಸೇವೆಯಲ್ಲಿ ಒಂದು ಮಾದರಿ ಬದಲಾವಣೆಯಾಗಿ, ರೈಲ್ವೆ ವಿವಿಧ ರೈಲುಗಳಲ್ಲಿ ಸ್ಥಳೀಯ ಪಾಕಪದ್ಧತಿಯ ರುಚಿಯನ್ನು ಪರಿಚಯಿಸುತ್ತಿದೆ. ಇದು ನಮ್ಮ ಪ್ರಯಾಣದ ಆಹಾರ ಅನುಭವಕ್ಕೆ ರುಚಿ ಮತ್ತು ನೈರ್ಮಲ್ಯವನ್ನು ಸೇರಿಸುತ್ತದೆ. ಪ್ರಯಾಣಿಕರ ಸುಧಾರಿತ ಅನುಭವದ ಜೊತೆಗೆ, ರೈಲ್ವೆ ಸರಕು ಸೇವೆಗಳಲ್ಲಿಯೂ ಉನ್ನತ ಸರಕು ಸಾಗಾಣಿಕಾ ವಾಹನವಾಗುವ ಗುರಿಯನ್ನು ಹೊಂದಿದೆ. ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು, ದಾಖಲೆ ಸಂಖ್ಯೆಯ ವ್ಯಾಗನ್ ಉತ್ಪಾದನೆಗಳು ಮತ್ತು ನಮ್ಮ ಸರಕು ಕಾರಿಡಾರ್‌ಗಳಲ್ಲಿ ಹೆಚ್ಚಿನ ರೈಲುಗಳ ಓಡಾಟವು ಭಾರತದ ಬೆಳವಣಿಗೆಯ ಕಥೆಯನ್ನು ಬರೆಯುತ್ತಿದೆ, ಇದು ಯುಎಸ್‌ಎಯನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಸರಕು ಸಾಗಣೆದಾರನಾಗಲು ನಮಗೆ ಸಹಾಯ ಮಾಡುತ್ತದೆ. ನವೀಕರಿಸಿದ ನಿಲ್ದಾಣಗಳು, ಆಧುನಿಕ ರೈಲುಗಳು ಮತ್ತು ವರ್ಧಿತ ಸುರಕ್ಷತಾ ವ್ಯವಸ್ಥೆಗಳು ನಮ್ಮ ಆಧುನಿಕ ರೈಲು ಪ್ರಯಾಣದ ಅನುಭವದ ಭಾಗವಾಗುತ್ತಿರುವುದನ್ನು ನಾವೆಲ್ಲರೂ ನೋಡಬಹುದು, ಅದು ಸುಧಾರಿತ ಪ್ರಯಾಣಿಕರ ಅನುಭವವಾಗಿರಬಹುದು ಅಥವಾ ವ್ಯಾಪಾರಿಗಳು, ಸಾಗಣೆದಾರರು ಮತ್ತು ಕೈಗಾರಿಕೆಗಳಿಗೆ ಅನುಭವವಾಗುತ್ತಿರುವ ವ್ಯಾಪಾರ ವ್ಯವಹಾರಕ್ಕೆ ಅನುಕೂಲಕರ ವಾತಾವರಣವೂ ಆಗಿರಬಹುದು.  

ಆಧುನಿಕ ಮೂಲಸೌಕರ್ಯ ಮತ್ತು ಸಂಪರ್ಕದ ಮೇಲೆ ದೃಢವಾದ ಗಮನವನ್ನು ಹೊಂದಿರುವ ಭಾರತೀಯ ರೈಲ್ವೆ, ಅತ್ಯುತ್ತಮ ಪ್ರಯಾಣ ಅನುಭವಗಳು, ಪರಿಣಾಮಕಾರಿ ಸರಕು ಸೇವೆಗಳು ಮತ್ತು ಆಧುನಿಕ ತಂತ್ರಜ್ಞಾನವನ್ನು ನೀಡುವ ಮೂಲಕ ರಾಷ್ಟ್ರೀಯ ಬೆಳವಣಿಗೆಗೆ ಚಾಲನೆ ನೀಡುತ್ತಿದೆ. ಸುಸ್ಥಿರತೆಗೆ ಆದ್ಯತೆ ನೀಡುತ್ತಾ ಮತ್ತು ನಾವೀನ್ಯತೆಯಿಂದ ಉತ್ತೇಜಿಸಲ್ಪಟ್ಟ ರೈಲ್ವೆ ಪರಿಸರ ಸ್ನೇಹಿ ಮತ್ತು ಹಸಿರು ಕಾರ್ಯಾಚರಣೆಗಳತ್ತ ಸಾಗುತ್ತಿದೆ, ಜೊತೆಗೆ ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯ ಸುಧಾರಣೆಗಳು ಮತ್ತು ಸಾಮರ್ಥ್ಯ ಸೇರ್ಪಡೆಯೊಂದಿಗೆ ನಮ್ಮ ದೇಶದ ಆರ್ಥಿಕ ಪ್ರಗತಿಯನ್ನು ಹೆಚ್ಚಿಸುತ್ತಿದೆ. ಈ ವರ್ಷದ ಪ್ರಯತ್ನಗಳು, ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಅನ್ವೇಷಣೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶದ ಅಗತ್ಯಗಳನ್ನು ಪೂರೈಸುವಾಗ ಸಂಪ್ರದಾಯದೊಂದಿಗೆ ನಾವೀನ್ಯತೆಯನ್ನು ಸಮತೋಲನಗೊಳಿಸುವ ವಿಶ್ವ ದರ್ಜೆಯ ಸಾರಿಗೆ ಜಾಲವನ್ನು ತನ್ನ ಜನರಿಗೆ ನಿರ್ಮಿಸುವಲ್ಲಿ ಭಾರತೀಯ ರೈಲ್ವೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. 2025 ವರ್ಷವು ನಮಗೆ ಸುರಕ್ಷಿತ, ವೇಗವಾದ ಮತ್ತು ಆರಾಮದಾಯಕ ರೈಲು ಪ್ರಯಾಣವನ್ನು ನೀಡುವಲ್ಲಿ ಬಲವಾದ ಅಡಿಪಾಯವನ್ನು ಹಾಕಿತು. ಹೊಸ ವರ್ಷವು ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳ ಮೂಲಕ "ದೀರ್ಘ ಪ್ರಯಾಣ" ಗಳಲ್ಲಿ ಆರಾಮದಾಯಕವಾದ ಸ್ಲೀಪರ್ ಪ್ರಯಾಣಗಳನ್ನು ನೀಡಲು ಸಜ್ಜಾಗಿದೆ, ಇದು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣಗಳಲ್ಲಿ ಬ್ರಾಂಡ್ ಆಹಾರ ಮತ್ತು ಪಾನೀಯ ಆಯ್ಕೆಗಳನ್ನು ನೀಡುತ್ತದೆ.

ಕೈಗೆಟುಕುವ ವೆಚ್ಚದಲ್ಲಿ ವೇಗವಾದ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ

ವಂದೇ ಭಾರತ್ ರೈಲು:

● 2025ರ ಡಿಸೆಂಬರ್ 26,ರ ಹೊತ್ತಿಗೆ, ಭಾರತೀಯ ರೈಲ್ವೆ ಜಾಲದಾದ್ಯಂತ ಒಟ್ಟು 164 ವಂದೇ ಭಾರತ್ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿವೆ.

● ಕ್ಯಾಲೆಂಡರ್ ವರ್ಷ -2025 ರಲ್ಲಿ, ಭಾರತೀಯ ರೈಲ್ವೆ 15 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಿತು.

● ಮುಂದೆ, ಬರಲಿರುವ ವಂದೇ ಭಾರತ್ ಸ್ಲೀಪರ್ ರಾತ್ರಿ ಪ್ರಯಾಣವನ್ನು ಪರಿವರ್ತಿಸಲು ಸಜ್ಜಾಗಿದೆ. ಇದು ದೂರದ ಪ್ರಯಾಣಿಕರಿಗೆ ವೇಗ, ಆರಾಮದಾಯಕ ಪ್ರಯಾಣ ಮತ್ತು ಆಧುನಿಕ ಸೌಲಭ್ಯಗಳನ್ನು ಸಂಯೋಜಿಸುತ್ತದೆ.

ಅಮೃತ್ ಭಾರತ್ ರೈಲು:

● ಸಂಪೂರ್ಣವಾಗಿ ಹವಾನಿಯಂತ್ರಣ ರಹಿತ (ಎಸಿ ಅಲ್ಲದ) ರೈಲುಗಳಾಗಿರುವ ಅಮೃತ್ ಭಾರತ್ ಸೇವೆಗಳು, ಪ್ರಸ್ತುತ 12 ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು 8 ಜನರಲ್ ಕ್ಲಾಸ್ ಬೋಗಿಗಳನ್ನು ಒಳಗೊಂಡಿದ್ದು, ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುತ್ತಿವೆ.

● ಕ್ಯಾಲೆಂಡರ್ ವರ್ಷ -2025 ರಲ್ಲಿ, 13 ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲಾಗಿದೆ ಮತ್ತು ಅವು ಕಾರ್ಯನಿರ್ವಹಿಸುತ್ತಿವೆ. ಭಾರತೀಯ ರೈಲ್ವೆ ಜಾಲದಾದ್ಯಂತ ಒಟ್ಟು 30 ಅಮೃತ್ ಭಾರತ್ ರೈಲು ಸೇವೆಗಳು ಓಡುತ್ತಿವೆ.

ನಮೋ ಭಾರತ್ ಕ್ಷಿಪ್ರ ರೈಲು:

● ನಮೋ ಭಾರತ್ ಕ್ಷಿಪ್ರ ರೈಲು ಸೇವೆಗಳನ್ನು ಹೆಚ್ಚಿನ ಆವರ್ತನ ಮತ್ತು ಪ್ರಾದೇಶಿಕ ಸಂಪರ್ಕಕ್ಕಾಗಿ ವಿನ್ಯಾಸಗೊಳಿಸಲಾಗಿದೆ, ಹೆಚ್ಚಿನ ಬೇಡಿಕೆಯ ಕಾರಿಡಾರ್‌ಗಳಲ್ಲಿ ಕಡಿಮೆ/ಅಲ್ಪ  ಮತ್ತು ಮಧ್ಯಮ-ದೂರ ಚಲನಶೀಲತೆಯನ್ನು ಬಲಪಡಿಸುತ್ತವೆ.

● ಭುಜ್ - ಅಹಮದಾಬಾದ್ ಮತ್ತು ಜಯನಗರ - ಪಾಟ್ನಾ ನಡುವೆ ದೇಶದಲ್ಲಿ 2 ನಮೋ ಭಾರತ್ ಕ್ಷಿಪ್ರ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿವೆ.

ವಿಶೇಷ ರೈಲು ಸೇವೆಗಳು:

2025ರಲ್ಲಿ, ಆಯಾ ಸಂದರ್ಭೋಚಿತ/ಕಾಲೋಚಿತ ಜನದಟ್ಟಣೆಯನ್ನು ನಿಭಾಯಿಸಲು ವಿಶೇಷ ರೈಲು ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು, ಇದು ವರ್ಧಿತ ಯೋಜನೆ ಮತ್ತು ಪ್ರಯಾಣಿಕರ ಅರಾಮದಾಯಕ ಸೌಕರ್ಯಸೌಲಭ್ಯದ ಮೇಲೆ ಬಲವಾದ ಗಮನವನ್ನು ಎತ್ತಿ ತೋರಿಸಿತು.

● ಭಾರತೀಯ ರೈಲ್ವೆ 2025 ರಲ್ಲಿ ದಾಖಲೆಯ ಅಂದರೆ 43,000 ಕ್ಕೂ ಹೆಚ್ಚು ವಿಶೇಷ ರೈಲು ಟ್ರಿಪ ಗಳನ್ನು ನಿರ್ವಹಿಸಿತು.

● ಹಬ್ಬ ಮತ್ತು ಬೇಸಿಗೆಯ ಜನದಟ್ಟಣೆಯನ್ನು ನಿಭಾಯಿಸಲು 2025 ರಲ್ಲಿ ಮಹಾ ಕುಂಭಕ್ಕೆ 17,340 ವಿಶೇಷ ರೈಲು ಟ್ರಿಪ್ ಗಳು, ಹೋಳಿ ಹಬ್ಬ ಸಂದರ್ಭದಲ್ಲಿ 1,144, ಬೇಸಿಗೆ ವಿಶೇಷ ರೈಲುಗಳು ಮತ್ತು ಛತ್ ಪೂಜೆಗೆ 12,383 ವಿಶೇಷ ರೈಲು ಟ್ರಿಪ್ ಗಳನ್ನು ನಿರ್ವಹಿಸಲಾಯಿತು.

ಇದಲ್ಲದೆ, ವೇಗವಾದ ಮತ್ತು ಆರಾಮದಾಯಕ ರೈಲುಗಳು ಮತ್ತು ಆಧುನಿಕ ರೈಲು ನಿಲ್ದಾಣಗಳು, ವ್ಯವಸ್ಥಿತ ಹಳಿ ನವೀಕರಣಗಳು, ವಿಭಾಗೀಯ ಮಟ್ಟದಲ್ಲಿ ಅಲ್ಲಿಯ ರೈಲು ಹಳಿಗಳ ಮೇಲೆ ರೈಲು ಚಲಿಸಬಹುದಾದ ಗರಿಷ್ಠ ವೇಗದ  ಹೆಚ್ಚಳ, ಆಧುನಿಕ ಹಳಿ ಯಂತ್ರಗಳ ಸೇರ್ಪಡೆ ಮತ್ತು ಮೇಲ್ದರ್ಜೆಗೇರಿಸುವಿಕೆ, ಸೇತುವೆಗಳ ಬಲವರ್ಧನೆ, ಸುರಕ್ಷತೆಯನ್ನು ಹೆಚ್ಚಿಸಲು ಲೆವೆಲ್ ಕ್ರಾಸಿಂಗ್‌ಗಳ ನಿರ್ಮೂಲನೆ, ಪರಿಣಾಮಕಾರಿ ನಿರ್ವಹಣೆ ಮತ್ತು ರೈಲ್ವೆ ಭೂಮಿಯ ರಕ್ಷಣೆಗೆ ಕೇಂದ್ರೀಕೃತ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಪ್ರದೇಶಗಳಲ್ಲಿನ ಪ್ರಮುಖ ಸಾಧನೆಗಳನ್ನು ಕೆಳಗೆ ವಿವರಿಸಲಾಗಿದೆ.

ರೈಲು ಹಳಿ/ಮಾರ್ಗ ಮೂಲಸೌಕರ್ಯವನ್ನು ಹೆಚ್ಚಿಸುವುದು

ರೈಲ್ವೇ ಹಳಿ/ಮಾರ್ಗಗಳ ಕಾರ್ಯಾರಂಭ

2025 ರ ಏಪ್ರಿಲ್ 1 ರಿಂದ ನವೆಂಬರ್ 30 ರವರೆಗೆ, ಭಾರತೀಯ ರೈಲ್ವೆ 900 ಕಿಲೋಮೀಟರ್‌ಗಳಿಗೂ ಹೆಚ್ಚು ಹೊಸ ಹಳಿ ಮಾರ್ಗಗಳನ್ನು ಕಾರ್ಯಾರಂಭ ಮಾಡಿದೆ. ಹೊಸ ಹಳಿಗಳನ್ನು ಹಾಕುವುದರ ಜೊತೆಗೆ ಸುರಕ್ಷಿತ, ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಅಸ್ತಿತ್ವದಲ್ಲಿರುವ ರೈಲು ಹಳಿಗಳನ್ನು ನವೀಕರಿಸುವತ್ತ ಗಮನ ಹರಿಸಲಾಗಿದೆ. ಅದರಂತೆ 2025 ರಲ್ಲಿ, ಈ ಕೆಳಗಿನ ಒಟ್ಟು ನವೀಕರಣ ಕಾರ್ಯಗಳನ್ನು ಮಾಡಲಾಗಿದೆ.

ಹಳಿ ನವೀಕರಣ ಕಾರ್ಯಗಳು

(ಎ) 6880 ಹಳಿ ಕಿಮೀ ಹಳಿಗಳನ್ನು ಹೊಸ ಹಳಿಗಳೊಂದಿಗೆ ನವೀಕರಿಸಲಾಗಿದೆ.

(ಬಿ) 7051 ಹಳಿ ಕಿಮೀಗಳಿಗೆ ಸಂಪೂರ್ಣ ಹಳಿ ನವೀಕರಣ ಮಾಡಲಾಗಿದೆ.

(ಸಿ) ಹಾಳಾದ/ ಸವೆದು ಹೋದ ಮತ್ತು ದುರಸ್ತಿಗೆ ಬಂದಿದ್ದ  9277 ಸೆಟ್‌ಗಳ ನವೀಕರಣ ಮಾಡಲಾಗಿದೆ.

2014–25ರ ಅವಧಿಯಲ್ಲಿ, ಭಾರತೀಯ ರೈಲ್ವೆಯಾದ್ಯಂತ ದಿನಕ್ಕೆ ಸರಾಸರಿ 8.57 ಕಿಮೀಯಂತೆ ಒಟ್ಟು 34,428 ಕಿಮೀ ಹೊಸ ಹಳಿಗಳನ್ನು ಹಾಕಲಾಗಿದೆ, ಇದು 2009–14ರ ಅವಧಿಯಲ್ಲಿದ್ದ ಸರಾಸರಿ ದೈನಂದಿನ ಕಾರ್ಯಾರಂಭಕ್ಕಿಂತ (4.2 ಕಿಮೀ/ದಿನಕ್ಕೆ) ಎರಡು ಪಟ್ಟು ಹೆಚ್ಚು.

ಮೂಲಸೌಕರ್ಯ ವಿಸ್ತರಣೆ ಮತ್ತು ನಿರ್ವಹಣೆಯನ್ನು ಬೆಂಬಲಿಸಲು, ಭಾರತೀಯ ರೈಲ್ವೆ ತನ್ನ ಹಳಿ ಯಂತ್ರೋಪಕರಣಗಳನ್ನು ಆಧುನೀಕರಿಸುತ್ತಿದೆ. ಒಂದು ಟ್ಯಾಂಪಿಂಗ್ ಯಂತ್ರವನ್ನು ಅಂದರೆ ಹಳಿಯ ದುರಸ್ತಿ ಹಾಗು ಅದರ ಅಲೈನ್ ಮೆಂಟ್ ನಡೆಸಲು ಎಚ್.ಒ.ಟಿ. 3ಎಕ್ಸ್  (HOT-3X)ನ್ನು  ಭಾರೀ ಕಾರ್ಯಾಚರಣೆಯ  3X-ಡೈನಾಮಿಕ್ (HOT-S-3X) ಯಂತ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದು ಮೂರು-ಸ್ಲೀಪರ್ ಬ್ಯಾಲಸ್ಟ್ ಪ್ಯಾಕಿಂಗ್ ಅನ್ನು ಟ್ರ್ಯಾಕ್ ಸ್ಥಿರೀಕರಣದೊಂದಿಗೆ ಸಂಯೋಜಿಸುತ್ತದೆ. ಈ ಏಕೀಕರಣವು ಟ್ರಾಫಿಕ್ ಬ್ಲಾಕ್ ಬಳಕೆಯನ್ನು ಅಂದರೆ ಹಳಿ/ಮಾರ್ಗ ದುರಸ್ತಿಯಲ್ಲಿ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಮಾನವಶಕ್ತಿಯ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ. ಇಷ್ಟಲ್ಲದೆ, 2025 ರಲ್ಲಿ (ನವೆಂಬರ್ ವರೆಗೆ), ಹಳಿ ನಿರ್ವಹಣೆ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಮತ್ತಷ್ಟು ನವೀಕರಣಗಳ ಯೋಜನೆಗಳೊಂದಿಗೆ.61 ಹೊಸ ಹಳಿ ಯಂತ್ರಗಳನ್ನು ಸೇರ್ಪಡೆ ಮಾಡಲಾಗಿದೆ.

ವಿಭಾಗೀಯ ವೇಗದಲ್ಲಿ ಹೆಚ್ಚಳ  

ಆಧುನೀಕರಣ ಪ್ರಯತ್ನಗಳು ರೈಲು ಕಾರ್ಯಾಚರಣೆಗಳು ಮತ್ತು ಪ್ರಯಾಣಿಕರ ಅನುಕೂಲವನ್ನು ಸುಧಾರಿಸಲು ವಿಭಾಗೀಯ ವೇಗವನ್ನು ಹೆಚ್ಚಿಸುವ ಮೂಲಕ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿವೆ. ಗೋಲ್ಡನ್ ಕ್ವಾಡ್ರಿಲ್ಯಾಟರಲ್, ಗೋಲ್ಡನ್ ಡಯಾಗ್ನಲ್ ಮತ್ತು ಇತರ ಬಿ ಮಾರ್ಗಗಳ ಭಾಗಗಳನ್ನು ಒಳಗೊಂಡ 599 ಟ್ರ್ಯಾಕ್ ಕಿಮೀಗಳಲ್ಲಿ ವಿಭಾಗೀಯ ವೇಗವನ್ನು ಗಂಟೆಗೆ 130 ಕಿಮೀಗೆ ಹೆಚ್ಚಿಸಲಾಗಿದೆ. ಇದಲ್ಲದೆ, ವೇಗವಾದ, ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ರೈಲು ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸುಧಾರಿತ ಟ್ರ್ಯಾಕ್ ಯಂತ್ರೋಪಕರಣಗಳೊಂದಿಗೆ ಮೂಲಸೌಕರ್ಯ ನವೀಕರಣಗಳನ್ನು ಸಂಯೋಜಿಸಿ 4,069 ಟ್ರ್ಯಾಕ್ ಕಿಮೀಗಳಲ್ಲಿ ಗಂಟೆಗೆ 110 ಕಿಮೀ ವೇಗವನ್ನು ಸಾಧಿಸಲಾಗಿದೆ.

ವಿದ್ಯುದ್ದೀಕರಣ

ಭಾರತೀಯ ರೈಲ್ವೆ (ಐ.ಆರ್.-IR) ನಲ್ಲಿ ರೈಲ್ವೆ ಜಾಲದ ವಿದ್ಯುದ್ದೀಕರಣವನ್ನು ಆಂದೋಲನದೋಪಾದಿಯಲ್ಲಿ (ಮಿಷನ್ ಮೋಡ್‌ನಲ್ಲಿ) ಕೈಗೆತ್ತಿಕೊಳ್ಳಲಾಗಿದೆ. ಇಲ್ಲಿಯವರೆಗೆ, ಸುಮಾರು 99.2% ಬ್ರಾಡ್ ಗೇಜ್ (BG) ಜಾಲವನ್ನು ವಿದ್ಯುದ್ದೀಕರಿಸಲಾಗಿದೆ. ಉಳಿದ ಜಾಲದಲ್ಲಿ ವಿದ್ಯುದ್ದೀಕರಣವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಾಧನೆಯು ಯು.ಕೆ. (39%), ರಷ್ಯಾ (52%) ಮತ್ತು ಚೀನಾ (82%) ಗಳ ವಿದ್ಯುದ್ದೀಕರಣ ಮಟ್ಟಗಳಿಗಿಂತ ಗಮನಾರ್ಹವಾಗಿ ಹೆಚ್ಚಿನ ಮಟ್ಟದಲ್ಲಿದೆ. ಒಟ್ಟು 14 ರೈಲ್ವೆ ವಲಯಗಳು ಮತ್ತು 25 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಈಗ 100% ವಿದ್ಯುದ್ದೀಕರಣವನ್ನು ಸಾಧಿಸಿವೆ.

ಆರ್.ಒ.ಬಿ /ಆರ್.ಯು.ಬಿ. ಗಳ (ROB/RUB) ನಿರ್ಮಾಣ

2025 ರಲ್ಲಿ, ಭಾರತೀಯ ರೈಲ್ವೆ 1,161 ಆರ್.ಒ.ಬಿ (ರೋಡ್ ಓವರ್ ಬ್ರಿಜ್)  ಮತ್ತು ಆರ್.ಯು.ಬಿ. (ರೋಡ್ ಅಂಡರ್ ಬ್ರಿಜ್) ಗಳ ನಿರ್ಮಾಣವನ್ನು ಪೂರ್ಣಗೊಳಿಸಿತು, ಸುರಕ್ಷತೆ ಮತ್ತು ಸಂಚಾರದ ಒತ್ತಡ/ ಹರಿವನ್ನು ಸುಧಾರಿಸಿತು. ರಸ್ತೆ ಮೇಲ್ಸೇತುವೆಗಳು (ROB ಗಳು) ಮತ್ತು ಸೇತುವೆಗಳ ಕೆಳಗೆ ರಸ್ತೆಗಳ (RUB ಗಳು) ಮಂಜೂರು ಮತ್ತು ಕಾರ್ಯಗತಗೊಳಿಸುವಿಕೆಯು ಭಾರತೀಯ ರೈಲ್ವೆಯಲ್ಲಿ ನಿರಂತರವಾಗಿ ಮತ್ತು ಜಾರಿಯಲ್ಲಿರುವ ಪ್ರಕ್ರಿಯೆಯಾಗಿದೆ. ಕಳೆದ 11 ವರ್ಷಗಳಲ್ಲಿ, ನಿರ್ಮಾಣದ ವೇಗವು ಗಮನಾರ್ಹವಾಗಿ ಹೆಚ್ಚಳಗೊಂಡಿದೆ, 13,600 ಕ್ಕೂ ಹೆಚ್ಚು ಸೇತುವೆಗಳು ಪೂರ್ಣಗೊಂಡಿವೆ –ಇದು  2004 ಮತ್ತು 2014 ರ ನಡುವೆ ನಿರ್ಮಿಸಲಾದ 4,148 ಸೇತುವೆಗಳಿಗಿಂತ ಮೂರು ಪಟ್ಟು ಹೆಚ್ಚು.

ಸಮಾನಾಂತರವಾಗಿ, ಮಾನವಸಹಿತ ಲೆವೆಲ್ ಕ್ರಾಸಿಂಗ್‌ಗಳ (MLC ಗಳು) ನಿರ್ಮೂಲನೆ ಸುರಕ್ಷತೆಯನ್ನು ಹೆಚ್ಚಿಸುತ್ತಿದೆ, 2025-26 ರಲ್ಲಿ (ನವೆಂಬರ್ ವರೆಗೆ) 268 ಎಂ.ಎಲ್.ಸಿ. (MLC) ಗಳನ್ನು ತೆಗೆದುಹಾಕಲಾಗಿದೆ. ಪುನರ್ವಸತಿ ಪ್ರಯತ್ನಗಳ ಮೂಲಕ ರೈಲ್ವೆ ಸೇತುವೆ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ, ಅದೇ ಅವಧಿಯಲ್ಲಿ 1,799 ಸೇತುವೆಗಳನ್ನು ದುರಸ್ತಿ ಮಾಡಲಾಗಿದೆ ಅಥವಾ ಮೇಲ್ದರ್ಜೆಗೆ ಏರಿಸಲಾಗಿದೆ.

ಎಲ್.ಎಚ್.ಬಿ.(LHB)  ಕೋಚ್ ತಯಾರಿಕೆ ಮತ್ತು ಆಧುನೀಕರಣ

2025-26ನೇ ಹಣಕಾಸು ವರ್ಷದಲ್ಲಿ (ನವೆಂಬರ್ 2025 ರವರೆಗೆ), 4,224 ಕ್ಕೂ ಹೆಚ್ಚು ಎಲ್.ಎಚ್.ಬಿ. ಕೋಚ್‌ಗಳನ್ನು ಉತ್ಪಾದಿಸಲಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ನಿರ್ಮಾಣಗೊಂಡ ಸಂಖ್ಯೆಗೆ ಹೋಲಿಸಿದರೆ 18% ಹೆಚ್ಚಾಗಿದೆ. 2014-25ರ ನಡುವೆ, ಉತ್ಪಾದನೆಯು 2004-14ರ ಅವಧಿಗೆ ಹೋಲಿಸಿದರೆ 18 ಪಟ್ಟು ಹೆಚ್ಚಾಗಿದ್ದು, ಸುರಕ್ಷಿತ, ಸುಗಮ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುತ್ತಿದೆ.

ಕಳೆದ 11 ವರ್ಷಗಳಲ್ಲಿ 42,600 ಕ್ಕೂ ಹೆಚ್ಚು ಎಲ್.ಎಚ್.ಬಿ. ಕೋಚ್‌ಗಳನ್ನು ತಯಾರಿಸುವ ಮೂಲಕ ಭಾರತೀಯ ರೈಲ್ವೆ ಆಧುನೀಕರಣದಲ್ಲಿ ಪ್ರಮುಖ ಮುನ್ನಡೆ ಸಾಧಿಸಿದೆ. ಎಲ್.ಎಚ್.ಬಿ. ಕೋಚ್‌ಗಳು ಹೆಚ್ಚಿನ ಸುರಕ್ಷತಾ ಮಾನದಂಡಗಳು, ಕಡಿಮೆ ನಿರ್ವಹಣಾ ವೆಚ್ಚಗಳು ಮತ್ತು ಉತ್ತಮ ಕಾರ್ಯಾಚರಣೆಯ ದಕ್ಷತೆಗೆ ಹೆಸರುವಾಸಿಯಾಗಿವೆ. ಭವಿಷ್ಯದ ಬೇಡಿಕೆಯನ್ನು ಪೂರೈಸಲು ರೈಲ್ವೆಗಳು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಎಲ್.ಎಚ್.ಬಿ. ಕೋಚ್‌ಗಳ ಸ್ಥಳೀಯ ಉತ್ಪಾದನೆಯ ಮೂಲಕ, ಭಾರತೀಯ ರೈಲ್ವೆ ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳನ್ನು ಬಲಪಡಿಸುತ್ತಿದೆ.

ಉತ್ಪಾದನಾ ವಿವರಗಳು:

  •  ಐಸಿಎಫ್ ಚೆನ್ನೈ: 1,659 ಕೋಚ್‌ಗಳು
  • ಎಂಸಿಎಫ್ ರಾಯ್‌ಬರೇಲಿ: 1,234 ಕೋಚ್‌ಗಳು
  •  ಆರ್‌ಸಿಎಫ್ ಕಪುರ್ತಾಲಾ: 1,331 ಕೋಚ್‌ಗಳು

ಹೆಗ್ಗುರುತು ಯೋಜನೆಗಳು

ದೇಶಾದ್ಯಂತ ಹೆಗ್ಗುರುತು ಯೋಜನೆಗಳನ್ನು ಪೂರ್ಣಗೊಳಿಸಲಾಯಿತು ಅಥವಾ ಉದ್ಘಾಟಿಸಲಾಯಿತು, ಇದು ತ್ವರಿತ ಪ್ರಗತಿಗೆ ಉತ್ತೇಜನಕಾರಿಯಾಗಿದೆ. ಭಾರತವು ಪಂಬನ್‌ನಲ್ಲಿ ತನ್ನ ಮೊದಲ ಲಂಬ-ಲಿಫ್ಟ್ ರೈಲು ಸೇತುವೆಯನ್ನು ತೆರೆಯಿತು, ಎಲ್ಲಾ ಹವಾಮಾನ ರೈಲು ಸಂಪರ್ಕಗಳೊಂದಿಗೆ (ವಿಶ್ವದ ಅತಿ ಎತ್ತರದ ಚೆನಾಬ್ ಸೇತುವೆ ಸೇರಿದಂತೆ) ಕಾಶ್ಮೀರ ಸಂಪರ್ಕವನ್ನು ಬಲಪಡಿಸಿತು ಮತ್ತು ಹೊಸ ಬೈರಾಬಿ-ಸೈರಾಂಗ್ ಮಾರ್ಗದೊಂದಿಗೆ ಈಶಾನ್ಯಕ್ಕೆ ರೈಲು ಪ್ರವೇಶವನ್ನು ವಿಸ್ತರಿಸಿತು. ಅದೇ ಸಮಯದಲ್ಲಿ, ರೈಲ್ವೆಯು ಆಧುನಿಕ ರೈಲು ಸೇವೆಗಳನ್ನು (ವಂದೇ ಭಾರತ್, ಅಮೃತ್ ಭಾರತ್, ನಮೋ ಭಾರತ್) ವಿಸ್ತರಿಸಿತು ಮತ್ತು ನಿಲ್ದಾಣಗಳು ಹಾಗು ಸರಕು ಸಾಗಣೆ ಕಾರಿಡಾರ್‌ಗಳನ್ನು ತ್ವರಿತವಾಗಿ  ಮರುಅಭಿವೃದ್ಧಿ ಮಾಡಿತು.ಇದು  ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವಲ್ಲಿ ಅದರ ಪಾತ್ರವನ್ನು ಒತ್ತಿಹೇಳುತ್ತದೆ.

ಸರ್ವ -ಋತು ರೈಲು ಸಂಪರ್ಕ: ಯು.ಎಸ್.ಬಿ.ಆರ್.ಎಲ್. (USBRL)  ಮತ್ತು ಕಾಶ್ಮೀರ ಸೇತುವೆಗಳು

ಹಿಮಾಲಯದ ಮೂಲಕ 272 ಕಿ.ಮೀ ಉದ್ದದ ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದ ಯು.ಎಸ್.ಬಿ.ಆರ್.ಎಲ್. (USBRL) ಯೋಜನೆಯು 2025 ರಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಂಡಿತು. ಇದು 36 ಪ್ರಮುಖ ಸುರಂಗಗಳು ಮತ್ತು 943 ಸೇತುವೆಗಳನ್ನು ಒಳಗೊಂಡಿದೆ, ಇದು ವಿಶ್ವದ ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಒಂದಾದ ಪ್ರದೇಶದಲ್ಲಿ ಕೈಗೊಂಡ ಅಸಾಧಾರಣ ಎಂಜಿನಿಯರಿಂಗ್ ಕೌಶಲ್ಯವನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆಯು ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ 'ಚೆನಾಬ್ ಸೇತುವೆ', ಚೆನಾಬ್ ನದಿಯ ಮೇಲೆ 1,315 ಮೀ ಉಕ್ಕಿನ ಕಮಾನು (359 ಮೀ ಎತ್ತರ), ಭಾರತದ ಮೊದಲ ಕೇಬಲ್-ಸ್ಟೇಡ್ ರೈಲ್ವೆ ಸೇತುವೆ 'ಅಂಜಿ ಸೇತುವೆ' (ನದಿಯಿಂದ 331 ಮೀ ಎತ್ತರ) ಮತ್ತು ಭಾರತದ ಅತಿ ಉದ್ದದ ಕಾರ್ಯಾಚರಣೆಯ ರೈಲ್ವೆ ಸುರಂಗ 'ಟಿ-50' ಸೇರಿದಂತೆ ಅಸಾಧಾರಣ ಎಂಜಿನಿಯರಿಂಗ್ ಹೆಗ್ಗುರುತುಗಳನ್ನು ಒಳಗೊಂಡಿದೆ. ಈ ಮೂರು ಹೆಗ್ಗುರುತುಗಳು ಕಾಶ್ಮೀರಕ್ಕೆ ಸರ್ವ ಋತು ರೈಲು ಮಾರ್ಗವನ್ನು ಸಕ್ರಿಯಗೊಳಿಸುತ್ತವೆ, ಪ್ರಯಾಣದ ಸಮಯವನ್ನು ಗಂಟೆಗಟ್ಟಲೆ ಕಡಿತಗೊಳಿಸುತ್ತವೆ. ಅತ್ಯಾಧುನಿಕ ಸುರಕ್ಷತೆ ಮತ್ತು ಪರಿಸರ ಕ್ರಮಗಳೊಂದಿಗೆ ನಿರ್ಮಿಸಲಾದ ಸೇತುವೆಗಳು ಮತ್ತು ಸುರಂಗಗಳು ಅಡೆ-ತಡೆರಹಿತ ಸಂಪರ್ಕಕ್ಕಾಗಿ ಅಸಾಮಾನ್ಯವೆಂದು ಪರಿಗಣಿತವಾದ ಭೂಪ್ರದೇಶವನ್ನು ಪಳಗಿಸುವ ಭಾರತದ ಸಾಮರ್ಥ್ಯವನ್ನು ಸಂಕೇತಿಸುತ್ತವೆ. ಈ ಯೋಜನೆಯು 95 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಪರ್ಕವನ್ನು ಬಲಪಡಿಸುತ್ತದೆ ಮತ್ತು ವಿಶ್ವಾಸಾರ್ಹ, ಸರ್ವ ಋತು ಸಾರಿಗೆಯನ್ನು ಖಚಿತಪಡಿಸುತ್ತದೆ ಮತ್ತು ಉದ್ಯೋಗ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಪ್ರಾದೇಶಿಕ ಆರ್ಥಿಕತೆಯಲ್ಲಿ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಈಶಾನ್ಯ ರೈಲು ಸಂಪರ್ಕ: ಬೈರಾಬಿಸೈರಾಂಗ್ ಮಾರ್ಗ

ಮಿಜೋರಾಂನಲ್ಲಿ 51 ಕಿಮೀ ಬೈರಾಬಿ–ಸೈರಾಂಗ್ ಬ್ರಾಡ್-ಗೇಜ್ ಮಾರ್ಗವನ್ನು ಸೆಪ್ಟೆಂಬರ್ 2025 ರಲ್ಲಿ ಉದ್ಘಾಟಿಸಲಾಯಿತು, ಇದು ಐಜ್ವಾಲ್ ನ್ನು ಮೊದಲ ಬಾರಿಗೆ ಭಾರತದ ರೈಲು ನಕ್ಷೆಯಲ್ಲಿ ಸೇರಿಸಿತು. ಒರಟಾದ ಬೆಟ್ಟಗಳನ್ನು ದಾಟಿ, ಈ ಮಾರ್ಗವು 45 ಸುರಂಗಗಳು, 55 ಪ್ರಮುಖ ಸೇತುವೆಗಳು ಮತ್ತು 88 ಸಣ್ಣ ಸೇತುವೆಗಳನ್ನು ಒಳಗೊಂಡಿದೆ. ಉದ್ಘಾಟನಾ ದಿನದಂದು ಪ್ರಧಾನಮಂತ್ರಿಗಳು ಮಾರ್ಗದಲ್ಲಿ ಮೂರು ಹೊಸ ರೈಲುಗಳನ್ನು ಉದ್ಘಾಟಿಸಿದರು - ಸೈರಾಂಗ್–ದಿಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ಸೇರಿದಂತೆ –ಈ ರೈಲುಗಳು ಮಿಜೋರಾಂ ನ್ನು ದಿಲ್ಲಿ, ಗುವಾಹಟಿ ಮತ್ತು ಕೋಲ್ಕತ್ತಾದೊಂದಿಗೆ ನೇರವಾಗಿ ಸಂಪರ್ಕಿಸುತ್ತವೆ. ಈ ವ್ಯೂಹಾತ್ಮಕ ಯೋಜನೆಯು ಪ್ರಾದೇಶಿಕ ಪ್ರಯಾಣ ಮತ್ತು ವ್ಯಾಪಾರವನ್ನು ಪರಿವರ್ತಿಸುತ್ತದೆ, ಈಶಾನ್ಯಕ್ಕೆ ಮಾರುಕಟ್ಟೆಗಳು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಪ್ರವೇಶ ಲಭ್ಯತೆಯನ್ನು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ವ್ಯೂಹಾತ್ಮಕ ಸಮುದ್ರ ಸಂಪರ್ಕ: ಹೊಸ ಪಂಬನ್ ಸೇತುವೆ

2025ರ ಏಪ್ರಿಲ್ 6 ರಂದು ಉದ್ಘಾಟನೆಯಾದ ಹೊಸ ಪಂಬನ್ ಸೇತುವೆ, ಭಾರತದ ಮೊದಲ ಲಂಬ-ಲಿಫ್ಟ್ ರೈಲ್ವೆ ಸಮುದ್ರ ಸೇತುವೆಯಾಗಿದೆ. ಒಟ್ಟು 2.08 ಕಿಲೋಮೀಟರ್ ಉದ್ದದ ಹೊಸ ಪಂಬನ್ ಸೇತುವೆ, ರಾಮೇಶ್ವರಂ ಅನ್ನು ಭಾರತೀಯ ಮುಖ್ಯ ಭೂಭಾಗಕ್ಕೆ ಸಂಪರ್ಕಿಸುತ್ತದೆ. ಪಾಕ್ ಜಲಸಂಧಿಯ ಮೇಲೆ 2.08 ಕಿಮೀ ವ್ಯಾಪಿಸಿರುವ ಇದು 110 ವರ್ಷ ಹಳೆಯ ಕ್ಯಾಂಟಿಲಿವರ್ ಸೇತುವೆಯನ್ನು ಬದಲಾಯಿಸುತ್ತದೆ, ಪರಂಪರೆಯನ್ನು ಆಧುನಿಕ ವಿನ್ಯಾಸದೊಂದಿಗೆ ಸಂಯೋಜಿಸುತ್ತದೆ. 72.5 ಮೀ ಕೇಂದ್ರ ಸ್ಪ್ಯಾನ್ ಅನ್ನು ಹಡಗುಗಳು ಹಾದುಹೋಗಲು 17 ಮೀ ಎತ್ತರಿಸಬಹುದು ಮತ್ತು ಡೆಕ್ ಹಳೆಯ ಸೇತುವೆಗಿಂತ 3 ಮೀ ಎತ್ತರದಲ್ಲಿದೆ. ಸ್ಟೇನ್‌ಲೆಸ್-ಸ್ಟೀಲ್ ಬಲವರ್ಧನೆ, ವಿಶೇಷ ತುಕ್ಕು-ನಿರೋಧಕ ಲೇಪನಗಳು ಮತ್ತು 100+ ವರ್ಷಗಳ ವಿನ್ಯಾಸ ಜೀವಿತಾವಧಿಯೊಂದಿಗೆ ನಿರ್ಮಿಸಲಾದ ಸೇತುವೆ ರಾಮೇಶ್ವರಂಗೆ ಪ್ರಮುಖ ರೈಲು ಸಂಪರ್ಕವನ್ನು ಪುನಃಸ್ಥಾಪಿಸುತ್ತದೆ ಮತ್ತು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತದೆ. ಇದರ ಪೂರ್ಣಗೊಳಿಸುವಿಕೆಯು ತೀರ್ಥಯಾತ್ರೆ ಮತ್ತು ಪ್ರವಾಸೋದ್ಯಮವನ್ನು ಸುಗಮಗೊಳಿಸುವುದಲ್ಲದೆ, ಪಾಕ್ ಜಲಸಂಧಿಯಾದ್ಯಂತ ಭವಿಷ್ಯದ ಭಾರತ-ಶ್ರೀಲಂಕಾ ಸಾರಿಗೆ ಸಂಪರ್ಕಗಳ ನಿರೀಕ್ಷೆಗಳನ್ನು ಪುನರುಜ್ಜೀವನಗೊಳಿಸುತ್ತದೆ.

ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು (ಎಂ.ಎ.ಎಚ್.ಎಸ್.ಆರ್.-MAHSR) ಯೋಜನೆ

ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು (MAHSR) ಯೋಜನೆ: ಭಾರತ ಸರ್ಕಾರವು ಡಿಸೆಂಬರ್ 2015 ರಲ್ಲಿ 508 ಕಿಮೀ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು (ಎಂ.ಎ.ಎಚ್.ಎಸ್.ಆರ್.) ಯೋಜನೆಯನ್ನು ಮಂಜೂರು ಮಾಡಿದೆ, ಇದು ಜಪಾನ್ ಸರ್ಕಾರದ ತಾಂತ್ರಿಕ ಮತ್ತು ಆರ್ಥಿಕ ಸಹಕಾರದೊಂದಿಗೆ ಕಾರ್ಯಗತಗೊಳ್ಳುತ್ತಿದೆ. 2025-26 ರ ಅವಧಿಗೆ ಎಂ.ಎ.ಎಚ್.ಎಸ್.ಆರ್. ಯೋಜನೆಯ ಪ್ರಗತಿ ಕೆಳಗಿನಂತಿದೆ:-

  • ಭೌತಿಕ ಪ್ರಗತಿ: 2025 ರ ನವೆಂಬರ್ 30ರ ವೇಳೆಗೆ ಶೇ. 55.63 ರಷ್ಟು ಒಟ್ಟಾರೆ ಭೌತಿಕ ಪ್ರಗತಿಯನ್ನು ಸಾಧಿಸಲಾಗಿದೆ.
  • ಆರ್ಥಿಕ ಪ್ರಗತಿ: 2025 ರ ನವೆಂಬರ್ 30ರ ವೇಳೆಗೆ ₹ 85,801/- ಕೋಟಿ ವೆಚ್ಚದೊಂದಿಗೆ ಶೇ. 69.62 ರಷ್ಟು ಒಟ್ಟಾರೆ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ.
  •  ಪ್ರಮುಖ ಸಿವಿಲ್ ಎಂಜಿನಿಯರಿಂಗ್ ನಿಯತಾಂಕಗಳು:  2025 ರ ನವೆಂಬರ್ 30 ರವರೆಗೆ ಒಟ್ಟು 412 ಕಿಮೀ ಅಡಿಪಾಯ, 405 ಕಿಮೀ ಪಿಯರ್ಸ್, 344 ಕಿಮೀ ಗಿರ್ಡರ್ ಎರಕಹೊಯ್ದ ಮತ್ತು 330 ಕಿಮೀ ಗಿರ್ಡರ್ ನಿಯುಕ್ತಿ  ಪೂರ್ಣಗೊಂಡಿದೆ.

2025 ರಲ್ಲಿ ಯೋಜನೆಗಳ ಕಾರ್ಯಾರಂಭ (ಇಲ್ಲಿಯವರೆಗೆ)

2025-26 ನೇ ಹಣಕಾಸು ವರ್ಷದಲ್ಲಿ ನೀತಿ ಅನುಮೋದನೆಗಳು ಭೂಮಿಯಲ್ಲಿ ಸ್ವತ್ತುಗಳಾಗಿ ಪರಿವರ್ತನೆಗೊಂಡವು. ಗೌರವಾನ್ವಿತ ಪ್ರಧಾನ ಮಂತ್ರಿಗಳು 42 ಯೋಜನೆಗಳನ್ನು ರಾಷ್ಟ್ರಕ್ಕೆ ಅರ್ಪಿಸಿದರು, 13 ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 21 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು ಇವು ಒಟ್ಟಾರೆಯಾಗಿ ₹ 25,000 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳು.

ಪ್ರಸ್ತುತ ವರ್ಷದಲ್ಲಿ, ಕೆಳಗಿನ ಯೋಜನೆಗಳನ್ನು ಕಾರ್ಯಾರಂಭ ಮಾಡಲಾಗಿದೆ:

  •  ವಿಜಾಪುರ–ಅಂಬ್ಲಿಯಾಸನ್ ಗೇಜ್ ಪರಿವರ್ತನೆ
  •  ಡೊಮಿಂಗರ್-ಗೋರಖ್‌ಪುರ್-ಗೋರಖ್‌ಪುರ್ ಕ್ಯಾಂಟ್.-ಕುಸುಮ್ಹಿ - 3ನೇ ರೈಲು ಓಡಾಟ ಮಾರ್ಗ ಮತ್ತು ಗೋರಖ್‌ಪುರ-ನಕಾಹಾ ಜಂಗಲ್ ಡಬ್ಲಿಂಗ್
  •  ಬಹ್ರೈಚ್-ನನ್ಪಾರಾ-ನೇಪಾಳ ಗಂಜ್ ಗೇಜ್ ಪರಿವರ್ತನೆ
  •  ಚಲನಶೀಲತೆಯನ್ನು ಸುಧಾರಿಸಲು ಪಿ.ಇ.ಎಂ.-ಕೆ.ಐ.ಕೆ. ಎನ್.ಎಲ್. (PEM-KIK NL) ಅನ್ನು ನೇರವಾಗಿ ಪ್ರವೇಶಿಸಲು ಕಾರೈಕಲ್ ಬಂದರಿನ ಉತ್ತರ ತುದಿಯಲ್ಲಿ ಸಂಪರ್ಕವನ್ನು ಒದಗಿಸುವುದು
  •  ಕಾಜಿಪೇಟ್-ಬಲ್ಲಾರ್ಷಾ ಮುಖ್ಯ ಮಾರ್ಗವನ್ನು ಪೆದ್ದಪಲ್ಲಿ-ಕರೀಂನಗರ ಮಾರ್ಗಕ್ಕೆ ಸಂಪರ್ಕಿಸಲು ಪೆದ್ದಪಲ್ಲಿಯಲ್ಲಿ ಬೈಪಾಸ್ ಮಾರ್ಗ
  •  ಹಿಮ್ಮತ್‌ನಗರ–ಖೇಡಬ್ರಹ್ಮ ಗೇಜ್ ಪರಿವರ್ತನೆ
  •  ಛಾಪ್ರಾ ಜಂಕ್ಶನ್ ನಿಂದ ಛಾಪ್ರಾ ಕಚೇರಿಗೆ ನಡುವೆ 3 ನೇ ಮಾರ್ಗದ ಸಂಪರ್ಕ. (3.0 ಕಿ.ಮೀ)
  •  ಅರಾರಿಯಾ–ಗಲ್ಗಾಲಿಯಾ (ಠಾಕೂರ್ಗಂಜ್) ಹೊಸ ಮಾರ್ಗ
  •  ಸೋಮನಾಥ ನಿಲ್ದಾಣದಲ್ಲಿ ಹೆಚ್ಚುವರಿ ಹಳಿ/ರೈಲು ಮಾರ್ಗ ಹಾಕುವ ಅವಕಾಶ (2.5 ಕಿ.ಮೀ)
  •  ಭೈರಬಿ–ಸೈರಾಂಗ್ ಹೊಸ ಮಾರ್ಗ
  •  ಟೋರಿ–ಶಿವಪುರ 3ನೇ ಮಾರ್ಗ
  •  ಚುರು-ರತನ್‌ಗಢದ ದ್ವಿಮುಖ ಮಾರ್ಗ
  •  ದಿಯೋಬಂದ್ (ಮುಜಾಫರ್ ನಗರ)–ರೂರ್ಕಿ ಹೊಸ ಮಾರ್ಗ
  •  ಯಮುನಾ ಸೇತುವೆ – ಆಗ್ರಾ ಕೋಟೆ – ಯಮುನಾ ನದಿಯಲ್ಲಿ ಪ್ರಮುಖ ಸೇತುವೆಯೊಂದಿಗೆ ದ್ವಿಮುಖ ಮಾರ್ಗ
  •  ಪುಣೆ–ಮಿರಾಜ್–ಲೋಂಡಾ ದ್ವಿಮುಖ ಮಾರ್ಗ
  •  ಮನ್ಮಾಡ್–ಜಲಗಾಂವ್ 3ನೇ ಮಾರ್ಗ

ಸುರಕ್ಷತೆ

ಭಾರತೀಯ ರೈಲ್ವೆ ಸುರಕ್ಷತಾ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 2004-14ರ ಅವಧಿಯಲ್ಲಿ ಸಂಭವಿಸಿದ ರೈಲು ಅಪಘಾತಗಳ ಸಂಖ್ಯೆ 1711 (ವಾರ್ಷಿಕ ಸರಾಸರಿ 171), ಇದು 2024-25ರಲ್ಲಿ 31 ಕ್ಕೆ ಮತ್ತು 2025-26ರಲ್ಲಿ (ನವೆಂಬರ್, 2025 ರವರೆಗೆ) 11 ಕ್ಕೆ ಇಳಿದಿದೆ. ಸುರಕ್ಷತಾ ಬಜೆಟ್ ಸುಮಾರು ಮೂರು ಪಟ್ಟು ಹೆಚ್ಚಾಗಿದೆ, 2013-14 ರ ಹಣಕಾಸು ವರ್ಷದಲ್ಲಿ ₹39,463 ಕೋಟಿಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ₹1,16,470 ಕೋಟಿಗೆ ಏರಿದೆ. ಮಂಜು ಸುರಕ್ಷತಾ ಸಾಧನಗಳು 2014 ರಲ್ಲಿದ್ದ  90 ರಿಂದ 2025 ರಲ್ಲಿ 25,939 ಕ್ಕೆ ಏರಿದೆ. ಕಳೆದ ನಾಲ್ಕು ತಿಂಗಳಲ್ಲೇ, 21 ನಿಲ್ದಾಣಗಳಲ್ಲಿ ಕೇಂದ್ರೀಕೃತ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಮತ್ತು ಟ್ರ್ಯಾಕ್ ಸರ್ಕ್ಯೂಟಿಂಗ್ ಪೂರ್ಣಗೊಂಡಿದೆ.

ಕವಚ್ ಎಂಬುದು ಸ್ಥಳೀಯವಾಗಿ/ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಸ್ವಯಂಚಾಲಿತ ರೈಲು ರಕ್ಷಣೆ (ಎ.ಟಿ.ಪಿ-ATP) ವ್ಯವಸ್ಥೆಯಾಗಿದ್ದು, ಇದು ಮಾನವ ವೈಫಲ್ಯದ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ ನಿಗದಿತ ವೇಗ ಮಿತಿಗಳಲ್ಲಿ ರೈಲುಗಳನ್ನು ಚಲಾಯಿಸಲು ಲೋಕೋ ಪೈಲಟ್‌ಗೆ ಸಹಾಯ ಮಾಡುತ್ತದೆ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಸುರಕ್ಷಿತ ರೈಲು ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತ್ತದೆ. ಈ ದಿಕ್ಕಿನಲ್ಲಿ, ಕವಚ್ ಆವೃತ್ತಿ 4.0 ಅನ್ನು 738 ಮಾರ್ಗ ಕಿಲೋಮೀಟರ್‌ಗಳಲ್ಲಿ ನಿಯೋಜಿಸಲಾಗಿದೆ. ಕವಚ್ ಆವೃತ್ತಿ 4.0 ರಲ್ಲಿನ ಪ್ರಮುಖ ವರ್ಧನೆಗಳಲ್ಲಿ ಹೆಚ್ಚಿದ ಸ್ಥಳ ನಿಖರತೆ, ದೊಡ್ಡ ಯಾರ್ಡ್ ಗಳಲ್ಲಿ ಸುಧಾರಿತ ಸಿಗ್ನಲ್ ಅಂಶ ಮಾಹಿತಿ, ಆಪ್ಟಿಕಲ್ ಫೈಬರ್ ಕೇಬಲ್ (OFC) ಮೇಲೆ ನಿಲ್ದಾಣದಿಂದ ನಿಲ್ದಾಣಕ್ಕೆ ಕವಾಚ್ ಇಂಟರ್ಫೇಸ್ ಮತ್ತು ಚಾಲ್ತಿಯಲ್ಲಿರುವ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಗಳೊಂದಿಗೆ ನೇರ ಇಂಟರ್‌ಫೇಸಿಂಗ್ ಸೇರಿವೆ. ಈ ತಾಂತ್ರಿಕ ನವೀಕರಣಗಳೊಂದಿಗೆ, ಕವಚ್ ಆವೃತ್ತಿ 4.0 ಅನ್ನು ಭಾರತೀಯ ರೈಲ್ವೆ ಜಾಲದಾದ್ಯಂತ ದೊಡ್ಡ ಪ್ರಮಾಣದ ನಿಯೋಜನೆಗೆ ಯೋಜಿಸಲಾಗಿದೆ.

ಸುರಕ್ಷತಾ ಕ್ರಮಗಳಿಗೆ ಪೂರಕವಾಗಿ, ಭಾರತೀಯ ರೈಲ್ವೆಯು  ನಿಲ್ದಾಣಗಳು ಮತ್ತು ಆನ್‌ಬೋರ್ಡ್ ರೈಲುಗಳಲ್ಲಿ ಕಣ್ಗಾವಲು ಮೂಲಸೌಕರ್ಯವನ್ನು ಬಲಪಡಿಸುತ್ತಿದೆ. ನಿಲ್ದಾಣಗಳು ಮತ್ತು ಕೋಚ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸ್ಥಾಪನೆಯು ಪ್ರಸ್ತುತ ಪ್ರಗತಿಯಲ್ಲಿರುವ ಪ್ರಕ್ರಿಯೆಯಾಗಿದೆ ಮತ್ತು ಇಲ್ಲಿಯವರೆಗೆ, ಪ್ರಯಾಣಿಕರಿಗೆ ಸುರಕ್ಷಿತ ಹಾಗು ಭದ್ರತೆ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು 1,731 ನಿಲ್ದಾಣಗಳಲ್ಲಿ ಮತ್ತು 11,953 ಕೋಚ್‌ಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಈ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಗಳನ್ನು ಬಂಡವಾಳ ವೆಚ್ಚದ ಅಡಿಯಲ್ಲಿ ಸ್ಥಾಪಿಸಲಾಗುತ್ತಿದ್ದು, ಇದು ಸುರಕ್ಷತೆ, ಭದ್ರತೆ ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ಭಾರತೀಯ ರೈಲ್ವೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಪುನರಾಭಿವೃದ್ಧಿಗೊಂಡ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಭವ ವೃದ್ಧಿ

ಅಮೃತ ಭಾರತ್ ನಿಲ್ದಾಣ ಯೋಜನೆಯು ಪ್ರಯಾಣಿಕರ ನಿಲ್ದಾಣಗಳ ಬೃಹತ್ ಪ್ರಮಾಣದ ಪುನರ್ನಿರ್ಮಾಣವನ್ನು ಸಜ್ಜುಗೊಳಿಸಿದೆ. ಈ ಯೋಜನೆಯಡಿಯಲ್ಲಿ, ರೈಲು ನಿಲ್ದಾಣಗಳನ್ನು ಕೇವಲ ಸಾರಿಗೆ ಕೇಂದ್ರಗಳಾಗಿ ಮಾತ್ರವಲ್ಲದೆ, ನಗರ ಕೇಂದ್ರಗಳಾಗಿ ಮರುರೂಪಿಸಲಾಗಿದೆ. ಇಲ್ಲಿಯವರೆಗೆ, ಈ ಕಾರ್ಯಕ್ರಮದಡಿಯಲ್ಲಿ 1,337 ನಿಲ್ದಾಣಗಳನ್ನು ಕೂಲಂಕುಷ ಪುನರ್ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿದೆ - ಇದು ವಿಶ್ವದ ಅತಿದೊಡ್ಡ ನಿಲ್ದಾಣ ಪುನರ್ನಿರ್ಮಾಣ ಉಪಕ್ರಮಗಳಲ್ಲಿ ಒಂದಾಗಿದೆ. ದೇಶಾದ್ಯಂತ ಪುನರಾಭಿವೃದ್ಧಿ ಕಾರ್ಯಗಳು (ಎಲ್ಲವೂ ರೈಲು ಸಂಚಾರವನ್ನು ಸ್ಥಗಿತಗೊಳಿಸದೆ ಮಾಡಲಾಗುತ್ತದೆ) ನಡೆಯುತ್ತಿವೆ ಮತ್ತು ಡಿಸೆಂಬರ್ 2025 ರ ಹೊತ್ತಿಗೆ, 155 ನಿಲ್ದಾಣಗಳನ್ನು ಸಂಪೂರ್ಣವಾಗಿ ಆಧುನೀಕರಿಸಲಾಗಿದೆ. ವಿಸ್ತೃತ ಪಾದಚಾರಿ ಸೇತುವೆಗಳು ಮತ್ತು ವಿಸ್ತಾರ ಸ್ಥಳಾವಕಾಶ ಇರುವ ಕಾನ್ಕೋರ್ಸ್‌ಗಳು, ಲಿಫ್ಟ್‌ಗಳು/ಎಸ್ಕಲೇಟರ್‌ಗಳು, ಸುಧಾರಿತ ಕಾಯುವ ಸಭಾಂಗಣಗಳು, ಶೌಚಾಲಯಗಳು ಮತ್ತು ಆಸನಗಳು, ಮಲ್ಟಿಮೋಡಲ್ ಏಕೀಕರಣ (ಬಸ್/ಟ್ಯಾಕ್ಸಿ), ಸ್ಥಳೀಯ ಕಿಯೋಸ್ಕ್‌ಗಳು ('ಒಂದು ನಿಲ್ದಾಣ ಒಂದು ಉತ್ಪನ್ನ'), ಡಿಜಿಟಲ್ ಸೈನೇಜ್ ಮತ್ತು ಅಂಗವಿಕಲ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು ಸೇರಿವೆ. ಮೇಲ್ದರ್ಜೆಗೆ ಏರಿಸಲ್ಪಟ್ಟ ಈ ವರ್ಧಿತ ನಿಲ್ದಾಣಗಳು ಪ್ರಯಾಣಿಕರ ಅನುಭವವನ್ನು ಸುಧಾರಿಸುತ್ತವೆ ಮತ್ತು ಗ್ರಾಹಕರ ಸೌಕರ್ಯ ಮತ್ತು ನಗರ ಏಕೀಕರಣದ ಮೇಲೆ ರೈಲ್ವೆಯ ಗಮನವನ್ನು ಪ್ರತಿಬಿಂಬಿಸುತ್ತವೆ.

ಸೌರಶಕ್ತಿ ಚಾಲಿತ ರೈಲು ನಿಲ್ದಾಣಗಳು

ಭಾರತೀಯ ರೈಲ್ವೆ ದೇಶಾದ್ಯಂತ 2,626 ರೈಲು ನಿಲ್ದಾಣಗಳನ್ನು ಸೌರಶಕ್ತಿ ಚಾಲಿತವಾಗಿಸುವ ಮೂಲಕ ಶುದ್ಧ ಮತ್ತು ಸುಸ್ಥಿರ ಇಂಧನ ಬಳಕೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನು ಇಟ್ಟಿದೆ. ಒಟ್ಟು 898 ಮೆ.ವಾ (ಎಂ.ಡಬ್ಲ್ಯು.) ಸೌರಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ , ಸರಿಸುಮಾರು 70% ರಷ್ಟನ್ನು ಎಳೆತದ (ಟ್ರ್ಯಾಕ್ಷನ್ )ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಇದು ಇಂಧನ ಸುರಕ್ಷತೆಯನ್ನು ಬಲಪಡಿಸಿದೆ, ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಿದೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ ಮತ್ತು ಪರಿಸರ ಸ್ನೇಹಿ ರೈಲು ಕಾರ್ಯಾಚರಣೆಗಳನ್ನು ಉತ್ತೇಜಿಸಿದೆ.್

ಉಚಿತ ವೈ-ಫೈ

ಭಾರತೀಯ ರೈಲ್ವೆ 6,117 ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೇವೆಗಳನ್ನು ಒದಗಿಸುತ್ತಿದೆ, ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ನೀಡುತ್ತಿದೆ.

ರೈಲ್ಒನ್ ಅಪ್ಲಿಕೇಶನ್: ಪ್ರಯಾಣಿಕರಿಗೆ ಏಕಗವಾಕ್ಷ   ಪರಿಹಾರ

ಭಾರತೀಯ ರೈಲ್ವೆ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಪ್ರಯಾಣಿಕರ ಸೇವೆಗಳಿಗೆ ಸಮಗ್ರ ಏಕಗವಾಕ್ಷ ಪರಿಹಾರವಾದ ರೈಲ್‌ಒನ್ ಅಪ್ಲಿಕೇಶನ್ ಪ್ರಾರಂಭಿಸಿದೆ.

ಇದರಲ್ಲಿ ಈ ಕೆಳಗಿನ ಪ್ರಮುಖ ವೈಶಿಷ್ಟ್ಯಗಳು ಸೇರಿವೆ:

  •  ಕಾಯ್ದಿರಿಸದ ಯು.ಟಿ.ಎಸ್. ಟಿಕೆಟ್‌ಗಳು (R-Wallet ಮೂಲಕ 3% ರಿಯಾಯಿತಿ)
  •  ಲೈವ್ ರೈಲು ಟ್ರ್ಯಾಕಿಂಗ್
  •  ಕುಂದುಕೊರತೆ ಪರಿಹಾರ
  •  ಇ-ಕೇಟರಿಂಗ್
  •  ಪೋರ್ಟರ್ ಬುಕಿಂಗ್
  •  ಕೊನೆಯ ಹಂತದವರೆಗೆ (ಮೈಲಿ)  ಟ್ಯಾಕ್ಸಿ ಸೇವೆಗಳು

ಆಧಾರ್-ದೃಢೀಕೃತ ಆಸನ ಕಾಯ್ದಿರಿಸುವ ಸುಧಾರಣೆಗಳು

ಬಳಕೆದಾರರ ಆಧಾರ್ ಪರಿಶೀಲನೆಯು ವ್ಯವಸ್ಥೆಯನ್ನು ಹೆಚ್ಚು ಬಲಿಷ್ಠಗೊಳಿಸಲು ತೆಗೆದುಕೊಳ್ಳಲಾದ ಒಂದು ಪ್ರಮುಖ ಹೆಜ್ಜೆಯಾಗಿದೆ. ನಿಜವಾದ ಪ್ರಯಾಣಿಕರಿಗೆ ಆದ್ಯತೆ ನೀಡಲು, ಆಧಾರ್-ದೃಢೀಕೃತ ಬಳಕೆದಾರರಿಗೆ ಮಾತ್ರ ಐ.ಆರ್.ಟಿ.ಸಿ. (IRCTC) ಜಾಲತಾಣ ಅಥವಾ ಅಪ್ಲಿಕೇಶನ್‌ನಲ್ಲಿ ಬುಕಿಂಗ್ ತೆರೆಯುವ ಮೊದಲ 15 ನಿಮಿಷಗಳಲ್ಲಿ ಸಾಮಾನ್ಯ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸಲಾಗಿದೆ. ಆಧಾರ್-ದೃಢೀಕೃತ ಬಳಕೆದಾರರಿಗೆ ಮಾತ್ರ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಅನುಮತಿಸಲಾಗಿದೆ. ಇ-ಟಿಕೆಟಿಂಗ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಿರ್ಲಜ್ಜ ಬಳಕೆದಾರರನ್ನು ಗುರುತಿಸಲು ಮತ್ತು ತಡೆಯಲು ಅತ್ಯಾಧುನಿಕ ತಂತ್ರಜ್ಞಾನವನ್ನು ಸಹ ಬಳಸಲಾಗುತ್ತಿದೆ. ಪರಿಣಾಮವಾಗಿ, ಐ.ಆರ್.ಸಿ.ಟಿ.ಸಿ. ಯಲ್ಲಿ ನೋಂದಾಯಿಸಲಾದ 5.73 ಕೋಟಿ ಅನುಮಾನಾಸ್ಪದ ಮತ್ತು ನಿಷ್ಕ್ರಿಯ ಬಳಕೆದಾರರನ್ನು ನಿಷ್ಕ್ರಿಯಗೊಳಿಸಲಾಗಿದೆ ಅಥವಾ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇನ್ನಷ್ಟು  ಅನುಮಾನಾಸ್ಪದ ಬಳಕೆದಾರರನ್ನು ನಿಷ್ಕ್ರಿಯಗೊಳಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.

ಪ್ರಮುಖ ಆರ್.ಪಿ.ಎಫ್. ಕಾರ್ಯಾಚರಣೆಗಳು ಮತ್ತು ಸಾಧನೆಗಳು

ರೈಲ್ವೆ ಪ್ರಯಾಣಿಕರಿಗೆ ಭದ್ರತೆ ಮತ್ತು ಸೌಲಭ್ಯವನ್ನು ಒದಗಿಸಲು, ತನ್ನ ಪ್ರಯಾಣಿಕರ ವಿಶ್ವಾಸ ಮತ್ತು ಭದ್ರತೆಯ ಪ್ರಜ್ಞೆಯನ್ನು ಹೆಚ್ಚಿಸಲು ಆರ್.ಪಿ.ಎಫ್. ಕೆಳಗಿನ ಉಪಕ್ರಮಗಳನ್ನು ಕೈಗೊಂಡಿದೆ:

  • I. ಆರ್.ಪಿ.ಎಫ್. ನಿಂದ ಪ್ರಯಾಣಿಕರಿಗೆ ನಿರಂತರ ಸಹಾಯ:

ವರ್ಷ

ಟ್ವಿಟರ್ ಮೂಲಕ ಬಂದ ಹಾಗು ಅವುಗಳನ್ನು ನಿಭಾಯಿಸಿದ ದೂರುಗಳ ಸಂಖ್ಯೆ

ಸಹಾಯವಾಣಿ ಸಂಖ್ಯೆ 182/139ರಲ್ಲಿ ಬಂದ ಹಾಗು ನಿಭಾಯಿಸಲಾದ ದೂರುಗಳ ಸಂಖ್ಯೆ

ಒಟ್ಟು

2025 (ನವೆಂಬರ್ ವರೆಗೆ)

54648

321557

376205

 

  1. ವಿಷಯಾಧಾರಿತ ಕಾರ್ಯಾಚರಣೆಗಳ ಮೇಲೆ ಗಮನ
  1. ಆಪರೇಷನ್ ನಾನ್ಹೆ ಫಾರಿಸ್ಟೆ ಮತ್ತು ಮಕ್ಕಳ ರಕ್ಷಣೆ:

ಆರ್ಪಿಎಫ್ ರಕ್ಷಿಸಿದ ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳ ವಿವರಗಳು

ವರ್ಷ

  ಆರ್ಪಿಎಫ್ ರಕ್ಷಿಸಿದ ಮಕ್ಕಳ ಸಂಖ್ಯೆ.

2025 (ನವೆಂಬರ್ ವರೆಗೆ)

17231

 

  1. ಜೀವನ್ ರಕ್ಷಾ”  ಕಾರ್ಯಾಚರಣೆ :

ವರ್ಷ

ರೈಲ್ವೇಯಲ್ಲಿ ಜೀವ ರಕ್ಷಿಸಿದ ಪ್ರಕರಣಗಳು

ಗಂಡು

ಹೆಣ್ಣು

ಒಟ್ಟು

2025 (ನವೆಂಬರ್ ವರೆಗೆ)

1894

974

2868

 

  1. ಅಮಾನತ್ ಕಾರ್ಯಾಚರಣೆ ಮತ್ತು ಲಗೇಜ್ ಮರುಪಡೆಯುವಿಕೆ:

ವರ್ಷ

ಪ್ರಯಾಣಿಕರು ಬಿಟ್ಟು ಹೋದ,  ಉಳಿದ ವಸ್ತು/ಸಾಮಾನುಗಳನ್ನು ಸಂಗ್ರಹಿಸಿ ಹಿಂದಿರುಗಿಸಿದ ಪ್ರಕರಣಗಳ ಸಂಖ್ಯೆ

ವಶಪಡಿಸಿಕೊಂಡ ಆಸ್ತಿಯ ಮೌಲ್ಯ (ರೂ.ಗಳಲ್ಲಿ)

2025 (ನವೆಂಬರ್ ವರೆಗೆ)

53607

79,85,11,140

 

  1. ಮಾತೃಶಕ್ತಿ ಕಾರ್ಯಾಚರಣೆ:

ವರ್ಷ

ಮಗುವಿನ ಜನನ ಸಂದರ್ಭದಲ್ಲಿ ನಿಭಾಯಿಸಲಾದ ಮತ್ತು ಸಹಾಯ ಒದಗಿಸಲಾದ ಪ್ರಕರಣಗಳ ಸಂಖ್ಯೆ.

ರೈಲಿನಲ್ಲಿ

ರೈಲ್ವೇ ಆವರಣಗಳಲ್ಲಿ

ಒಟ್ಟು

2025 (ನವೆಂಬರ್ ವರೆಗೆ)

198

105

303

 

  1. ಮಹಿಳಾ ಸುರಕ್ಷಾ:

ಮಹಿಳೆಯರಿಗೆ ಮೀಸಲಾದ ಗಾಡಿ ಅಥವಾ ಇತರ ಸ್ಥಳಗಳಿಗೆ ಅನಧಿಕೃತ ಪ್ರಯಾಣಿಕರು ಪ್ರವೇಶಿಸುವುದರ ವಿರುದ್ಧ ಕ್ರಮ ಜರುಗಿಸಿದ ಪ್ರಕರಣಗಳು

         ವರ್ಷ

ದಾಖಲಾದ ಪ್ರಕರಣಗಳ ಸಂಖ್ಯೆ

ಬಂಧಿತರ ಸಂಖ್ಯೆ

2025 (ನವೆಂಬರ್ ವರೆಗೆ)

107606

110940

 

  1. ಉಪಲಬ್ಧ” ಕಾರ್ಯಾಚರಣೆ ಮತ್ತು ಅನಧಿಕೃತ ವ್ಯಕ್ತಿಗಳ ವಿರುದ್ಡ ಕ್ರಮ

.

         ವರ್ಷ

ದಾಖಲಾದ ಪ್ರಕರಣಗಳ ಸಂಖ್ಯೆ

ಬಂಧಿತರ ಸಂಖ್ಯೆ

ಭವಿಷ್ಯದ/ಮುಂದಿನ ದಿನಗಳ ಪ್ರಯಾಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡ  ಟಿಕೇಟ್ ಗಳ ಸಂಖ್ಯೆ.

 

ಭವಿಷ್ಯದ/ಮುಂದಿನ ದಿನಗಳ ಪ್ರಯಾಣಕ್ಕೆ ಸಂಬಂಧಿಸಿ ವಶಪಡಿಸಿಕೊಂಡ ಟಿಕೇಟ್ ಗಳ ಮೌಲ್ಯ

ಬ್ಲಾಕ್ ಮಾಡಲಾದ ಐ.ಆರ್.ಸಿ.ಟಿ.ಸಿ.

ಬಳಕೆದಾರರ

ಸಂಖ್ಯೆ

2025 (ನವೆಂಬರ್ ವರೆಗೆ)

2449

2690

7974

1,98,92,275

8905

 

  1. ಸೇವಾ” ಕಾರ್ಯಾಚರಣೆ:

ವರ್ಷ

ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್‌ನಲ್ಲಿ ಮತ್ತು ಇತರ ಸೌಲಭ್ಯಗಳನ್ನು ಪಡೆಯುವಲ್ಲಿ/ಒದಗಿಸುವಲ್ಲಿ ಅಂದರೆ ವೀಲ್‌ಚೇರ್‌ಗಳು, ಸ್ಟ್ರೆಚರ್, ವೈದ್ಯಕೀಯ ಸಹಾಯ, ಆಂಬ್ಯುಲೆನ್ಸ್ ಒದಗಿಸುವುದು, ಔಷಧ, ಶಿಶು ಆಹಾರ ಇತ್ಯಾದಿಗಳಲ್ಲಿ ಆರ್.ಪಿ.ಎಫ್. ನಿಂದ ಸಹಾಯ ಪಡೆದ  ವ್ಯಕ್ತಿಗಳ ಸಂಖ್ಯೆ (ವೃದ್ಧರು/ ಮಹಿಳೆಯರು/ ದಿವ್ಯಾಂಗರು/ ಅನಾರೋಗ್ಯ ಪೀಡಿತರು/ ಗಾಯಗೊಂಡವರು/ ಶಿಶುಗಳು)

2025 (ನವೆಂಬರ್ ವರೆಗೆ)

10146

 

  1. ಎ.ಎ.ಎಚ್.ಟಿ.ಕಾರ್ಯಾಚರಣೆ ಮತ್ತು ಮಾನವ ಕಳ್ಳಸಾಗಾಣಿಕೆ:

ವರ್ಷ

ಮಾನವ ಕಳ್ಳಸಾಗಾಣಿಕೆಯಲ್ಲಿ ಆರ್.ಪಿ.ಎಫ್. ನಿಂದ ರಕ್ಷಿಸಲ್ಪಟ್ಟವರು

ಆರ್.ಪಿ.ಎಫ್. ನಿಂದ ಬಂಧಿಸಲ್ಪಟ್ಟ ಕಳ್ಳಸಾಗಣೆದಾರರ ಸಂಖ್ಯೆ

ಅಪ್ರಾಪ್ತರು

ವಯಸ್ಕರು

ಟ್ಟು

ಹುಡುಗರು

ಹುಡುಗಿಯರು

ಗಂಡಸರು

ಮಹಿಳೆಯರು

2025 (ನವೆಂಬರ್ ವರೆಗೆ)

783

88

14

93

978

292

               

 

  1. ನಾರ್ಕೋಸ್” ಕಾರ್ಯಾಚರಣೆ:

ವರ್ಷ

ಪತ್ತೆಯಾದ ಪ್ರಕರಣಗಳ ಸಂಖ್ಯೆ

 

ವಶಪಡಿಸಿಕೊಂಡ ಎನ್.ಡಿ.ಪಿ.ಎಸ್. ನ ಮೊತ್ತ

 ಬಂಧಿತರ ಸಂಖ್ಯೆ

2025 (ನವೆಂಬರ್ ವರೆಗೆ)

1980

2,08,52,03,671

1601

 

  1. ವಿಲೆಪ್” ಕಾರ್ಯಾಚರಣೆ :

ವರ್ಷ

ಪತ್ತೆಯಾದ ಪ್ರಕರಣಗಳ ಸಂಖ್ಯೆ

ಬಂಧಿತರ ಸಂಖ್ಯೆ

 

ಪ್ರಾಣಿ ಸಂಕುಲ

ಸಸ್ಯ ಸಂಕುಲ

2025 (ನವೆಂಬರ್ ವರೆಗೆ)

43

19

44

 

  1. “ಸ್ಟರಕ್ “ ಕಾರ್ಯಾಚರಣೆ

ವರ್ಷ

ತಂಬಾಕು ಉತ್ಪನ್ನ

ಮದ್ಯದ ಉತ್ಪನ್ನಗಳು

ಪತ್ತೆಯಾದ ಪ್ರಕರಣಗಳು

ಮೌಲ್ಯ

ಬಂಧಿತರು

ಪತ್ತೆಯಾದ ಪ್ರಕರಣಗಳು

ಮೌಲ್ಯ

ಬಂಧಿತರು

2025 ನವೆಂಬರ್ ವರೆಗೆ

140

8,25,05,340

97

4044

6,01,64,423

3356

ಆರ್ಥಿಕ ಕಾರಿಡಾರ್ಗಳು

ರೈಲು ಜಾಲದಾದ್ಯಂತ ಸಾಮರ್ಥ್ಯ, ದಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೆ ಹಲವಾರು ಪರಿವರ್ತನಾತ್ಮಕ ಮೂಲಸೌಕರ್ಯ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಂಪ್ರದಾಯಿಕ ಜಾಲದ ಮೇಲಣ ದಟ್ಟಣೆಯನ್ನು ಕಡಿಮೆ ಮಾಡಲು ಪ್ರತ್ಯೇಕ ಸರಕು ಸಾಗಣೆ ಮೀಸಲು ಕಾರಿಡಾರ್‌ಗಳ ಕಾರ್ಯಾರಂಭ ಮತ್ತು ಸಾರ್ವಜನಿಕ ಹೂಡಿಕೆಗೆ ಪೂರಕವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಗಳಿಗೆ  ಉತ್ತೇಜನವು ಪ್ರಮುಖ ಗಮನ ಕ್ಷೇತ್ರಗಳಲ್ಲಿ ಸೇರಿವೆ. ಈ ಪ್ರಮುಖ ಉಪಕ್ರಮಗಳ ಪ್ರಗತಿ ಮತ್ತು ವಾಸ್ತವ ಸ್ಥಿತಿಯನ್ನು ಕೆಳಗಿನ ವಿಭಾಗಗಳು ವಿವರಿಸುತ್ತವೆ.

ಮೂರು ಪ್ರಮುಖ ಆರ್ಥಿಕ ಕಾರಿಡಾರ್ಗಳು

ರೂ. 11.17 ಲಕ್ಷ ಕೋಟಿ ವೆಚ್ಚದ 03 ಆರ್ಥಿಕ ಕಾರಿಡಾರ್‌ಗಳ ಅಡಿಯಲ್ಲಿ 434 ಯೋಜನೆಗಳನ್ನು ಗುರುತಿಸಲಾಗಿದೆ.

ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್: 192 ಯೋಜನೆಗಳು

ಹೆಚ್ಚಿನ ಸಂಚಾರ ಸಾಂದ್ರತೆಯ ಮಾರ್ಗಗಳು: 200 ಯೋಜನೆಗಳು

ಬಂದರು ಸಂಪರ್ಕ: 42 ಯೋಜನೆಗಳು

ಎಲ್ಲಾ 434 ಯೋಜನೆಗಳನ್ನು ಪ್ರಧಾನ ಮಂತ್ರಿ ಗತಿಶಕ್ತಿ ಪೋರ್ಟಲ್‌ನಲ್ಲಿ ನಕ್ಷೆ ಮಾಡಲಾಗಿದೆ. ಅವುಗಳಲ್ಲಿ ಪ್ರಸ್ತುತ 12,133 ಕಿ.ಮೀ. ಉದ್ದದ ಮತ್ತು 2,02,551 ಕೋಟಿ ರೂ. ವೆಚ್ಚದ 121 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ, ಮತ್ತು 16,910 ಕಿ.ಮೀ. ಉದ್ದದ ಮತ್ತು 3,30,545 ಕೋಟಿ ರೂ. ಅಂದಾಜು ವೆಚ್ಚದ 162 ಯೋಜನೆಗಳು ಮೌಲ್ಯಮಾಪನ/ಅಂತರ-ಸಚಿವಾಲಯ ಸಮಾಲೋಚನೆಯ ವಿವಿಧ ಹಂತಗಳಲ್ಲಿವೆ.

ಕಾರಿಡಾರ್ ಆಧಾರಿತ ಕಾರ್ಯಕ್ರಮವು ಲಾಜಿಸ್ಟಿಕ್ ದಕ್ಷತೆಯನ್ನು ಸುಧಾರಿಸಲು ಮತ್ತು ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡಲು ಉದ್ದೇಶಿಸಿದೆ.

ಮೀಸಲಾದ ಸರಕು ಕಾರಿಡಾರ್ಗಳು (ಡಿ.ಎಫ್.ಸಿ.ಗಳು-DFC) ಯೋಜನೆ:

ಸರಕು ಸಾಗಾಣಿಕೆಗಾಗಿ ಪ್ರತ್ಯೇಕವಾಗಿ ಮೀಸಲಾದ ಸರಕು ಕಾರಿಡಾರ್ ಒಂದು ಮೆಗಾ ರೈಲ್ವೆ ಮೂಲಸೌಕರ್ಯ ಯೋಜನೆಯಾಗಿದೆ. ಎರಡು ಮೀಸಲಾದ ಸರಕು ಕಾರಿಡಾರ್‌ಗಳು (ಡಿ.ಎಫ್.ಸಿ.ಗಳು) ಅಂದರೆ. ಲುಧಿಯಾನದಿಂದ ಸೋನ್ನಗರ್‌ವರೆಗಿನ ಪೂರ್ವ ಮೀಸಲಾದ ಸರಕು ಕಾರಿಡಾರ್ (ಇ.ಡಿ.ಎಫ್.ಸಿ.-EDFC) (1337 ಕಿ.ಮೀ) ಮತ್ತು ಜವಾಹರಲಾಲ್ ನೆಹರು ಬಂದರು ಟರ್ಮಿನಲ್ (ಜೆ.ಎನ್.ಎಂ.ಪಿ.ಟಿ.-JNPT) ನಿಂದ ದಾದ್ರಿವರೆಗಿನ ಪಶ್ಚಿಮ ಮೀಸಲಾದ ಸರಕು ಕಾರಿಡಾರ್ (ಡಬ್ಲ್ಯು.ಡಿ.ಎಫ್.ಸಿ.-WDFC) (1506 ಕಿ.ಮೀ) ಅನ್ನು ಕಾರ್ಯಾರಂಭ ಮಾಡಿ ಕಾರ್ಯಗತಗೊಳಿಸಲಾಗಿದೆ (ಪ್ರಗತಿಯಲ್ಲಿರುವ 102 ಕಿ.ಮೀ ವೈತರ್ಣ-ಜೆ.ಎನ್.ಎಂ.ಪಿ.ಟಿ. ಮುಂಬೈ ವಿಭಾಗವನ್ನು ಹೊರತುಪಡಿಸಿ).

ಸರಕು ಸಾಗಣೆಯನ್ನು ಇ.ಡಿ.ಎಫ್.ಸಿ ಮತ್ತು ಡಬ್ಲ್ಯು.ಡಿ.ಎಫ್.ಸಿ ಗೆ ತಿರುಗಿಸುವ ಮೂಲಕ ಸಾಂಪ್ರದಾಯಿಕ ಜಾಲದಲ್ಲಿ ಹೆಚ್ಚುವರಿ ಮಾರ್ಗಗಳನ್ನು ರೂಪಿಸಲು ಡಿ.ಎಫ್.ಸಿ. ಕೊಡುಗೆ ನೀಡಿದೆ. ನವೆಂಬರ್ 2025 ರಲ್ಲಿ, ದಿನಕ್ಕೆ ಸರಾಸರಿ 403 ರೈಲುಗಳನ್ನು ಓಡಿಸಲಾಯಿತು. ಇದರ ಪರಿಣಾಮವಾಗಿ, ರೈಲ್ವೆಗೆ ತನ್ನ ಜಾಲದ ಮೂಲಕ ಉತ್ತಮ ಸಮಯಪ್ರಜ್ಞೆ/ಪಾಲನೆಯೊಂದಿಗೆ ಹೆಚ್ಚುವರಿ ಸರಕು ಮತ್ತು ಬೋಗಿ ಸೇವೆಗಳನ್ನು ನೀಡಲು ಸಾಧ್ಯವಾಗಿದೆ.

ಕಾರ್ಯಾರಂಭ ಮಾಡಲಾದ ವಿಭಾಗಗಳಲ್ಲಿ ಕೆಳಗಿನಂತೆ ರೈಲು ಕಾರ್ಯಾಚರಣೆಗಳು ನಡೆಯುತ್ತಿವೆ :-

 

ಕಾರಿಡಾರ್

ಓಡುತ್ತಿರುವ ರೈಲುಗಳ ಸಂಖ್ಯೆ

ಎನ್.ಟಿ.ಕೆ.ಎಂ.(ಮಿಲಿಯನ್)

ಜಿ.ಟಿ.ಕೆ.ಎಂ.(ಮಿಲಿಯನ್)

ಅಕ್ಟೋಬರ್’25

ಒಟ್ಟು  (ಹ.ವ. 25-26)

ಅಕ್ಟೋಬರ್’25

ಸಂಚಿತ  (ಹ.ವ. 25-26)

ಅಕ್ಟೋಬರ್’25

ಸಂಚಿತ  (ಹ.ವ 25-26)

ಇ.ಡಿ.ಎಫ್.ಸಿ

5960

44,094

5,363

41,974

9,855

75,262

ಡಬ್ಲ್ಯು..ಡಿ.ಎಫ್.ಸಿ

5979

38,624

3,260

22,138

6,217

40,480

ಒಟ್ಟು

11,939

82,718

8,623

64,111

16,072

1,15,743

 

 

ವರ್ಷದಲ್ಲಿ ದಾಖಲೆಯ ಸರಕು ಸಾಗಣೆ ಕಾರ್ಯಕ್ಷಮತೆ ಮತ್ತು ಉದ್ದೇಶಿತ ನೀತಿ ಮಧ್ಯಸ್ಥಿಕೆಗಳಿಂದ ಉಂಟಾದ ತ್ವರಿತಗತಿಯ ವೇಗವು ಎಲ್ಲಾ ಪ್ರದೇಶಗಳಲ್ಲಿ ಸ್ಪಷ್ಟವಾದ ಆನ್-ಗ್ರೌಂಡ್ ಲಾಜಿಸ್ಟಿಕ್ಸ್ ಫಲಿತಾಂಶಗಳಾಗಿ ಪರಿವರ್ತನೆಗೊಂಡಿದೆ. 2025–26ನೇ ಹಣಕಾಸು ವರ್ಷದಲ್ಲಿ, ಭಾರತೀಯ ರೈಲ್ವೆ 1 ಬಿಲಿಯನ್ ಟನ್ ಸರಕು ಸಾಗಣೆಯ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ, ದೈನಂದಿನ ಲೋಡಿಂಗ್ 4.4 ಮಿಲಿಯನ್ ಟನ್‌ಗಳನ್ನು ತಲುಪಿದೆ, ಇದು ಕಲ್ಲಿದ್ದಲು, ಕಬ್ಬಿಣದ ಅದಿರು, ಸಿಮೆಂಟ್ ಮತ್ತು ಕಂಟೇನರ್ ಟ್ರಾಫಿಕ್‌ನಿಂದ ಬಂದ ಬಲವಾದ ಬೇಡಿಕೆಯಿಂದ ನಡೆಸಲ್ಪಟ್ಟಿದೆ.

ಬೆಳವಣಿಗೆಗೆ ರಚನಾತ್ಮಕ ಸುಧಾರಣೆಗಳು ಮತ್ತು ಸಾಮರ್ಥ್ಯ ವರ್ಧನೆಯು ಬೆಂಬಲ ನೀಡಿವೆ, ಇದರಲ್ಲಿ ಬೃಹತ್ ಪ್ರಮಾಣದ ಸಿಮೆಂಟ್ ಸಾಗಣೆಗೆ ಪ್ರತಿ ಕಿಲೋಮೀಟರ್‌ಗೆ ₹0.90 ಸರಳೀಕೃತ ಫ್ಲಾಟ್-ರೇಟ್ ದರವನ್ನು ಪರಿಚಯಿಸಲಾಗಿದೆ, ಇದು ವೆಚ್ಚದ ಊಹನೆಯನ್ನು ಸುಧಾರಿಸಿದೆ ಮತ್ತು ರೈಲಿನತ್ತ ಮಾದರಿ ಬದಲಾವಣೆಯನ್ನು ಉತ್ತೇಜಿಸಿದೆ. ಅದೇ ಸಮಯದಲ್ಲಿ, ಪ್ರಸಕ್ತ ವರ್ಷದಲ್ಲಿ 25 ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳ ಕಾರ್ಯಾರಂಭವು ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಬಲಪಡಿಸಿದೆ, ಟರ್ಮಿನಲ್ ದಕ್ಷತೆಯನ್ನು ಹೆಚ್ಚಿಸಿದೆ ಮತ್ತು ಸರಕು ಸಾಗಣೆಗೆ ತಗಲುವ ಸಮಯವನ್ನು ಕಡಿಮೆ ಮಾಡಿದೆ.

ವ್ಯಾಗನ್ ಉತ್ಪಾದನೆ:

ಭಾರತೀಯ ರೈಲ್ವೆಯಲ್ಲಿ ಹೊಸ ವ್ಯಾಗನ್‌ಗಳ ಸೇರ್ಪಡೆಯನ್ನು ಹೆಚ್ಚಿಸುವ ಮೂಲಕ ಸರಕು ಸಾಗಣೆ ಗಳಿಕೆಯನ್ನು ಹೆಚ್ಚಿಸಲಾಗಿದೆ, 2029-30 ರ ವೇಳೆಗೆ 3000 ಎಂ.ಟಿ. ಲೋಡಿಂಗ್ ಗುರಿಯನ್ನು ಹೊಂದುವ ಮೂಲಕ ವ್ಯಾಗನ್ ಉತ್ಪಾದನೆಯನ್ನು ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿಸಲಾಯಿತು. ಇದರ ಹಿನ್ನೆಲೆಯಲ್ಲಿ, ವ್ಯಾಗನ್‌ಗಳ ಉತ್ಪಾದನೆಯನ್ನು ಬಲಪಡಿಸಲಾಯಿತು, ಇದು ಜನವರಿ, ಫೆಬ್ರವರಿ, ಮಾರ್ಚ್ 2025 ರಲ್ಲಿ ಕ್ರಮವಾಗಿ 3651, 3880, 4135 ವ್ಯಾಗನ್ ಉತ್ಪಾದನೆಗೆ ಕಾರಣವಾಯಿತು, ಇದರ ಪರಿಣಾಮವಾಗಿ ಗರಿಷ್ಠ ವ್ಯಾಗನ್‌ಗಳ ಉತ್ಪಾದನೆಯಾಗಿದೆ, ಅಂದರೆ 2024-25 ರ ಹಣಕಾಸು ವರ್ಷದಲ್ಲಿ 41,929 ವ್ಯಾಗನ್ ಗಳು ತಯಾರಾಗಿವೆ (ಕಳೆದ 3 ವರ್ಷಗಳಲ್ಲಿ ಅತ್ಯಧಿಕ).

ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ, ಜನವರಿ 25 ರಿಂದ ನವೆಂಬರ್ 25 ರವರೆಗೆ 33,703 ವ್ಯಾಗನ್ ಗಳನ್ನು ತಯಾರಿಸಲಾಗಿದೆ. ವ್ಯಾಗನ್ ಪೂರೈಕೆಯಲ್ಲಿ ನಿರಂತರ ಸುಧಾರಣೆ ಕಂಡುಬಂದಿದೆ.

ಬೆಳವಣಿಗೆಗಳು ಒಟ್ಟಾಗಿ, ಭಾರತೀಯ ರೈಲ್ವೆಗಳು ಹೆಚ್ಚಿನ ಸರಕು ಸಾಗಣೆ ಪ್ರಮಾಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಾತ್ರವಲ್ಲದೆ, ವಿಶೇಷವಾಗಿ ದೂರದ ಮತ್ತು ಕಾರ್ಯತಂತ್ರದ ಪ್ರಮುಖ ಪ್ರದೇಶಗಳಲ್ಲಿ ಪ್ರದೇಶ-ನಿರ್ದಿಷ್ಟ, ಇದೇ ಮೊದಲ-ರೀತಿಯ ಸರಕು ಸಾಗಣೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟಿವೆ, ಈ ಕೆಳಗಿನ ಉದಾಹರಣೆಗಳು ವರ್ಷದಲ್ಲಿ ನಿರ್ಣಾಯಕ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಒದಗಿಸಲು ವರ್ಧಿತ ಸರಕು ಸಾಗಣೆ ಸಾಮರ್ಥ್ಯ, ದರ ತರ್ಕಬದ್ಧಗೊಳಿಸುವಿಕೆ ಮತ್ತು ಮೂಲಸೌಕರ್ಯ ವಿಸ್ತರಣೆಯನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದನ್ನು ಎತ್ತಿ ತೋರಿಸುತ್ತವೆ.

ಅನಂತ್ನಾಗ್ಗೆ ಮೊದಲ ಆಹಾರ ಧಾನ್ಯ ಸರಕು ರೈಲು

ಕಾಶ್ಮೀರ ಕಣಿವೆಯಲ್ಲಿ ಐತಿಹಾಸಿಕವಾಗಿ ಮೊದಲ ಬಾರಿಗೆ ಸಾಗಿದ, ಆಹಾರ ಧಾನ್ಯ ಸರಕು ರೈಲು ಅನಂತ್‌ನಾಗ್ ಸರಕು ಟರ್ಮಿನಲ್ ತಲುಪಿತು. ಪಂಜಾಬ್‌ನ ಅಜಿತ್ ವಾಲ್ ರೈಲು ನಿಲ್ದಾಣದಿಂದ ರೈಲು ರವಾನೆಯಾಗಿದ್ದು, ಸುಮಾರು 1,384 ಟನ್ ಆಹಾರ ಧಾನ್ಯಗಳನ್ನು ಸಾಗಿಸಿತು, ಇದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ರೈಲು ನಿಲ್ದಾಣಕ್ಕೆ ಮೊದಲ ಬೃಹತ್ ರೈಲು ಆಧಾರಿತ ಆಹಾರ ಧಾನ್ಯ ಪೂರೈಕೆಯನ್ನು ದಾಖಲಿಸುತ್ತದೆ.

ಅಭಿವೃದ್ಧಿಯು ಕಣಿವೆಯನ್ನು ರಾಷ್ಟ್ರೀಯ ಸರಕು ರೈಲು ಜಾಲದೊಂದಿಗೆ ಔಪಚಾರಿಕವಾಗಿ ಸಂಯೋಜಿಸುತ್ತದೆ, ಆಹಾರ ಪೂರೈಕೆ ವ್ಯವಸ್ಥೆಗಳನ್ನು ಬಲಪಡಿಸುತ್ತದೆ, ಸಾರಿಗೆ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಾದೇಶಿಕ ಲಾಜಿಸ್ಟಿಕ್ಸ್ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.

ರೈಲಿನ ಮೂಲಕ ಈಶಾನ್ಯದಲ್ಲಿ ಸಿಮೆಂಟ್ ಸಾಗಣೆ

ಬೈರಾಬಿ-ಸೈರಾಂಗ್ ಮಾರ್ಗದಲ್ಲಿ ಸರಕು ಕಾರ್ಯಾಚರಣೆಗಳು ಉದ್ಘಾಟನೆಯ ನಂತರ ಶೀಘ್ರದಲ್ಲೇ ಪ್ರಾರಂಭವಾದವು. ಸೆಪ್ಟೆಂಬರ್ 14, 2025 ರಂದು ಮೊದಲ ಸರಕು ಸಾಗಣೆಯು ಅಸ್ಸಾಂನಿಂದ ಐಜ್ವಾಲ್‌ಗೆ 21 ಸಿಮೆಂಟ್ ವ್ಯಾಗನ್‌ಗಳನ್ನು ಸಾಗಿಸಿತು. ಅಂದಿನಿಂದ, ಈ ಮಾರ್ಗವು ಸಿಮೆಂಟ್, ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್‌ಗಳು, ಮರಳು ಮತ್ತು ಕಲ್ಲಿನ ಚಪ್ಪಡಿಗಳಂತಹ ಅಗತ್ಯ ಸರಕುಗಳನ್ನು ಸಾಗಿಸಿದೆ, ಇದು ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಾರುಕಟ್ಟೆ ಪ್ರವೇಶವನ್ನು ಬೆಂಬಲಿಸುತ್ತದೆ.

ಮಿಜೋರಾಂಗೆ ರೈಲು ಮೂಲಕ ಕಾರುಗಳ ಪೂರೈಕೆ

ಇದೇ ಮೊದಲ ಬಾರಿಗೆ, ಮಿಜೋರಾಂಗೆ ರೈಲು ಮೂಲಕ ಕಾರುಗಳನ್ನು ಸರಬರಾಜು ಮಾಡಲಾಗಿದ್ದು, ಇದು ಐತಿಹಾಸಿಕ ಲಾಜಿಸ್ಟಿಕ್ಸ್ ಸಾಧನೆಯಾಗಿದೆ. ಚಾಂಗ್ಸಾರಿಯಿಂದ (ಗುವಾಹಟಿ ಬಳಿ) 119 ಮಾರುತಿ ಕಾರುಗಳನ್ನು ಹೊತ್ತ ಆಟೋಮೊಬೈಲ್ ರೇಕ್ ಐಜ್ವಾಲ್ ಬಳಿಯ ಸೈರಾಂಗ್ ರೈಲು ನಿಲ್ದಾಣವನ್ನು ತಲುಪಿತು.

ಅಭಿವೃದ್ಧಿಯು ಐಜ್ವಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಲಭ್ಯತೆಯನ್ನು ಹೆಚ್ಚಿಸುತ್ತದೆ, ದೂರದ ರಸ್ತೆ ಸಾರಿಗೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಡೀಲರ್‌ಗಳು, ಸೇವಾ ಪೂರೈಕೆದಾರರು ಮತ್ತು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸಂಯೋಜಿತ ಲಾಜಿಸ್ಟಿಕ್ಸ್ ಹಬ್ಗಳು ಮತ್ತು ಹೊಸ ಸರಕು ಸೇವೆಗಳು

ಭಾರತೀಯ ರೈಲ್ವೆಯು ಸಮಗ್ರ ಲಾಜಿಸ್ಟಿಕ್ಸ್ ಅನ್ನು ಬಲಪಡಿಸಲು ಹೊಸ ಮನೆ-ಮನೆ ಸರಕು ಮತ್ತು ಪಾರ್ಸೆಲ್ ಸೇವೆಗಳನ್ನು ಪ್ರಾರಂಭಿಸಿದೆ, ಅವುಗಳೆಂದರೆ:

  • ದಿಲ್ಲಿ ಮತ್ತು ಕೋಲ್ಕತ್ತಾ ನಡುವೆ ಭರವಸೆದಾಯಕ ಕಂಟೇನರ್ ರೈಲು ಸೇವೆ
  •  ಮುಂಬೈ-ಕೋಲ್ಕತ್ತಾ ಮಾರ್ಗದಲ್ಲಿ ಮನೆ-ಮನೆಗೆ ಪಾರ್ಸೆಲ್ ಸೇವೆ

ಭಾರತೀಯ ರೈಲ್ವೆಯಲ್ಲಿ ಪಿಪಿಪಿ:

ವೇಗವಾಗಿ ವಿಸ್ತರಿಸುತ್ತಿರುವ ಆರ್ಥಿಕತೆಯಲ್ಲಿ, ಆರ್ಥಿಕ ಮತ್ತು ಪರಿಸರ ಗುರಿಗಳನ್ನು ಪೂರೈಸುವಲ್ಲಿ, ರೈಲ್ವೆಯ ಪಾತ್ರ ಮುಖ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ನೆಟ್‌ವರ್ಕ್ ಅನ್ನು ವಿಸ್ತರಿಸಲು ಜಿಬಿಎಸ್ (ಒಟ್ಟು ಬಜೆಟ್ ಬೆಂಬಲ) ಮೂಲಕ ಹೆಚ್ಚಿದ ಹಣವನ್ನು ಒದಗಿಸಲಾಗಿದೆ. ಆರ್ಥಿಕ ವಿಸ್ತರಣೆಯ ವೇಗವನ್ನು ಹೊಂದಿಸಲು ಇದು ಮಾತ್ರ ಸಾಕಾಗುವುದಿಲ್ಲ. ಸರ್ಕಾರಿ ಮತ್ತು ಖಾಸಗಿ ವಲಯದ ಹೂಡಿಕೆ ಅಗತ್ಯವಿದೆ. ರೈಲ್ವೆಯಲ್ಲಿ ಪಿಪಿಪಿ ಯೋಜನೆಗಳನ್ನು ಪ್ರಸ್ತುತ 2012 ರ ಪಿಪಿಪಿ ನೀತಿಯಡಿಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ, ₹ 16,686 ಕೋಟಿಯ 18 ​​ಯೋಜನೆಗಳು ಪಿಪಿಪಿ ಮಾದರಿಯ ಮೂಲಕ ಪೂರ್ಣಗೊಂಡಿವೆ. ಕಲ್ಲಿದ್ದಲು ಸಂಪರ್ಕ ಮತ್ತು ಬಂದರು ಸಂಪರ್ಕ ಯೋಜನೆಗಳು ಸೇರಿದಂತೆ ₹ 16,362 ಕೋಟಿಯ 7 ಯೋಜನೆಗಳು ಅನುಷ್ಠಾನದಲ್ಲಿವೆ. ಈ ನೀತಿಯನ್ನು ಆಕರ್ಷಕವಾಗಿಸಲು ಪಿಪಿಪಿ ಮಾದರಿಗಳ ಪುನರ್ರಚನೆ ಮತ್ತು ಪರಿಷ್ಕರಣೆಗಳು ನಡೆಯುತ್ತಿವೆ.

ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಪಿಪಿಪಿ ನೇತೃತ್ವದ ಲೋಕೋಮೋಟಿವ್ ತಯಾರಿಕೆ

ಜನವರಿ 1 ಮತ್ತು ನವೆಂಬರ್ 30, 2025 ರ ನಡುವೆ, ಭಾರತೀಯ ರೈಲ್ವೆ 1,542 ವಿದ್ಯುತ್ ಲೋಕೋಮೋಟಿವ್‌ಗಳನ್ನು ಉತ್ಪಾದಿಸಿತು. ಲೋಕೋಮೋಟಿವ್ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಬಲಪಡಿಸಲು ಮತ್ತು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಲು, ಭಾರತೀಯ ರೈಲ್ವೆ ದೇಶದಲ್ಲಿ ಅತ್ಯಾಧುನಿಕ ಲೋಕೋಮೋಟಿವ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸುಧಾರಿತ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಗಳನ್ನು ಅಳವಡಿಸಿಕೊಂಡಿದೆ. ಈ ಉಪಕ್ರಮಗಳು 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮವನ್ನು ಬೆಂಬಲಿಸುತ್ತವೆ, ಸ್ಥಳೀಯ ಪೂರೈಕೆ ಸರಪಳಿಗಳನ್ನು ಉತ್ತೇಜಿಸುತ್ತವೆ ಮತ್ತು ದೀರ್ಘಕಾಲೀನ ನಿರ್ವಹಣಾ ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತವೆ. ಪ್ರಮುಖ ಲೋಕೋಮೋಟಿವ್ ಉತ್ಪಾದನಾ ಯೋಜನೆಗಳ ಸ್ಥಿತಿಯನ್ನು ಕೆಳಗೆ ವಿವರಿಸಲಾಗಿದೆ.

ಮಾಧೇಪುರ ಎಲೆಕ್ಟ್ರಿಕ್ ಲೋಕೋಮೋಟಿವ್ ಕಾರ್ಖಾನೆ

ಭಾರತೀಯ ರೈಲ್ವೆಯು ಬಿಹಾರದ ಮಾಧೇಪುರ ಕಾರ್ಖಾನೆಯಿಂದ 576 ಹೈ-ಪವರ್ 12,000 ಎಚ್.ಪಿ. (HP) ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳನ್ನು ಪಿ.ಪಿ.ಪಿ. ಮಾದರಿಯಡಿಯಲ್ಲಿ ಪೂರೈಸಿದೆ, ಇದರಲ್ಲಿ ಏಪ್ರಿಲ್-ನವೆಂಬರ್ 2025 ರ ಅವಧಿಯಲ್ಲಿ ವಿತರಿಸಲಾದ 76 ಲೋಕೋಮೋಟಿವ್‌ಗಳು ಸೇರಿವೆ. ಆಲ್‌ಸ್ಟಾಮ್ ಟ್ರಾನ್ಸ್‌ಪೋರ್ಟ್ ಇಂಡಿಯಾ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆಯಲ್ಲಿ ಸ್ಥಾಪಿಸಲಾದ ಸೌಲಭ್ಯವು 11 ವರ್ಷಗಳಲ್ಲಿ 800 ಲೋಕೋಮೋಟಿವ್‌ಗಳನ್ನು ತಯಾರಿಸುತ್ತಿದೆ, 90% ಕ್ಕಿಂತ ಹೆಚ್ಚು ಸ್ಥಳೀಯ ಸಾಮಗ್ರಿಗಳೊಂದಿಗೆ ಮೇಕ್ ಇನ್ ಇಂಡಿಯಾವನ್ನು ಬಲಪಡಿಸುತ್ತದೆ ಮತ್ತು ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಮರ್ಹೌರಾ ಡೀಸೆಲ್ ಲೋಕೋಮೋಟಿವ್ ಕಾರ್ಖಾನೆ

ಬಿಹಾರದ ಮರ್ಹೌರಾ ಡೀಸೆಲ್ ಲೋಕೋಮೋಟಿವ್ ಕಾರ್ಖಾನೆಯು ವಾಬ್ಟೆಕ್ ಲೋಕೋಮೋಟಿವ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಪಿಪಿಪಿ ಒಪ್ಪಂದದಡಿಯಲ್ಲಿ ಇಲ್ಲಿಯವರೆಗೆ 773 ಲೋಕೋಮೋಟಿವ್‌ಗಳನ್ನು (4,500 ಎಚ್‌ಪಿಯಲ್ಲಿ 569 ಮತ್ತು 6,000 ಎಚ್‌ಪಿಯಲ್ಲಿ 204) ವಿತರಿಸಿದೆ, ಇದರಲ್ಲಿ 2025–26ರ ಹಣಕಾಸು ವರ್ಷದಲ್ಲಿ (ನವೆಂಬರ್ ವರೆಗೆ) ಸರಬರಾಜು ಮಾಡಲಾದ 73 ಘಟಕಗಳು ಸೇರಿವೆ. ಇದಕ್ಕೆ ಅವಶ್ಯವಾದ ಸುಮಾರು 65% ಬಿಡಿ ಭಾಗ ಘಟಕ ಸಾಮಗ್ರಿಗಳನ್ನು ಭಾರತದಲ್ಲಿಯೇ ಖರೀದಿಸಲಾಗುತ್ತದೆ. ಪ್ರಮುಖ ರಫ್ತು ಮೈಲಿಗಲ್ಲು ಸಾಧನೆಯಲ್ಲಿ, ಕಾರ್ಖಾನೆಯು ಆಫ್ರಿಕಾದ ಗಿನಿಯಾಗೆ 150 ಲೋಕೋಮೋಟಿವ್‌ಗಳಿಗೆ 400 ಮಿಲಿಯನ್ ಯುಎಸ್‌ಡಿ ರಫ್ತು ಆರ್ಡರ್‌ಗಳನ್ನು ಪಡೆದುಕೊಂಡಿದೆ, 14 ಲೋಕೋಮೋಟಿವ್‌ಗಳನ್ನು ಈಗಾಗಲೇ ರವಾನಿಸಲಾಗಿದೆ, ಇದು ಜಾಗತಿಕ ರೈಲು ಮಾರುಕಟ್ಟೆಯಲ್ಲಿ ಭಾರತದ ಬೆಳೆಯುತ್ತಿರುವ ಉಪಸ್ಥಿತಿಯನ್ನು ಗುರುತಿಸುತ್ತದೆ.

ದಾಹೋದ್ ಎಲೆಕ್ಟ್ರಿಕ್ ಸರಕು ಲೋಕೋಮೋಟಿವ್ ಸೌಲಭ್ಯ

ಸೀಮೆನ್ಸ್ ಲಿಮಿಟೆಡ್ ಜೊತೆ ಸ್ಥಾಪಿಸಲಾದ ಗುಜರಾತ್‌ನಲ್ಲಿರುವ ದಾಹೋದ್ ಲೋಕೋಮೋಟಿವ್ ಉತ್ಪಾದನಾ ಸೌಲಭ್ಯವು ದೀರ್ಘಾವಧಿಯ ಉತ್ಪಾದನೆ ಮತ್ತು ನಿರ್ವಹಣಾ ಒಪ್ಪಂದದ ಅಡಿಯಲ್ಲಿ 9,000 ಎಚ್.ಪಿ. ಯ 1,200 ವಿದ್ಯುತ್ ಸರಕು ಲೋಕೋಮೋಟಿವ್‌ಗಳನ್ನು ಉತ್ಪಾದಿಸುತ್ತದೆ. ಮೇ 2025 ರಲ್ಲಿ ರಾಷ್ಟ್ರಕ್ಕೆ ಸಮರ್ಪಿತವಾದ ಸೌಲಭ್ಯವು ಆರ್.ಡಿ.ಎಸ್.ಒ. (RDSO) ಪ್ರಯೋಗಗಳು ಮತ್ತು ಶಾಸನಬದ್ಧ ಸುರಕ್ಷತಾ ತಪಾಸಣೆಗಳನ್ನು ಪೂರ್ಣಗೊಳಿಸಿದೆ, ಸುಮಾರು 90% ಸ್ಥಳೀಯ ಘಟಕಗಳನ್ನು ಹೊಂದಿರುವ ಉನ್ನತ-ಶಕ್ತಿಯ ವಿದ್ಯುತ್ ಲೋಕೋಮೋಟಿವ್‌ಗಳ ದೊಡ್ಡ ಪ್ರಮಾಣದ ಅಳವಡಿಕೆಗೆ ದಾರಿ ಮಾಡಿಕೊಟ್ಟಿದೆ. ಈ ವರ್ಷ ಸೌಲಭ್ಯದಿಂದ ತಯಾರಾದ ಮೊದಲ ಹೊಸ ಡಿ9 ಸರಣಿಯ 9,000-ಎಚ್.ಪಿ. ಸಾಮರ್ಥ್ಯದ  ವಿದ್ಯುತ್ ಲೋಕೋಮೋಟಿವ್ ಗೆ  ಪ್ರಧಾನಿ ಶ್ರೀ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ.

ಕೃತಕ ಬುದ್ಧಿಮತ್ತೆ (AI ) & ತಂತ್ರಜ್ಞಾನ ನೇತೃತ್ವದ ಸಿಗ್ನಲಿಂಗ್ & ಟೆಲಿಕಾಂ

ಭಾರತೀಯ ರೈಲ್ವೆಯು ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸಲು, ಸಂವಹನ ವಿಶ್ವಾಸಾರ್ಹತೆಯನ್ನು ಸುಧಾರಿಸಲು ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳನ್ನು ಬಲಪಡಿಸಲು ಸುಧಾರಿತ ಟೆಲಿಕಾಂ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದೆ. ಈ ಕ್ಷೇತ್ರದಲ್ಲಿ ಕೈಗೊಳ್ಳಲಾದ ಪ್ರಮುಖ ಉಪಕ್ರಮಗಳಲ್ಲಿ ಕೃತಕ ಬುದ್ಧಿಮತ್ತೆ (AI-) ಸಕ್ರಿಯಗೊಳಿಸಿದ ಒಳನುಗ್ಗುವಿಕೆ ಪತ್ತೆ, ಜಾಲದಾದ್ಯಂತ (ನೆಟವರ್ಕ್ ನಾದ್ಯಂತ)  ವೀಡಿಯೊ ಕಣ್ಗಾವಲು, ಡಿಜಿಟಲ್ ರೇಡಿಯೋ ಸಂವಹನ, ಆಪ್ಟಿಕಲ್ ಫೈಬರ್ ವಿಸ್ತರಣೆ ಮತ್ತು ಆಧುನಿಕ ಪ್ರಯಾಣಿಕರ ಮಾರ್ಗದರ್ಶನ ವ್ಯವಸ್ಥೆಗಳು ಸೇರಿವೆ. ಪ್ರಮುಖ ಬೆಳವಣಿಗೆಗಳನ್ನು ಕೆಳಗೆ ವಿವರಿಸಲಾಗಿದೆ.

1. ಒಳನುಗ್ಗುವಿಕೆ/ನುಸುಳುವಿಕೆ ಪತ್ತೆ ವ್ಯವಸ್ಥೆ: ಗುರುತಿಸಲಾದ ಕಾರಿಡಾರ್ ಸ್ಥಳಗಳಲ್ಲಿ ರೈಲ್ವೆ ಹಳಿಗಳಲ್ಲಿ ಆನೆಗಳು ಮತ್ತು ಇತರ ಕಾಡು ಪ್ರಾಣಿಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು ಭಾರತೀಯ ರೈಲ್ವೆ ಡಿಸ್ಟ್ರಿಬ್ಯೂಟೆಡ್ ಅಕೌಸ್ಟಿಕ್ ಸೆನ್ಸಿಂಗ್ (DAS) ತಂತ್ರಜ್ಞಾನವನ್ನು ಆಧರಿಸಿದ ಕೃತಕ ಬುದ್ಧಿಮತ್ತೆಯನ್ನು ಸಕ್ರಿಯಗೊಳಿಸಿದ ಪರಿಹಾರವನ್ನು ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯು ಪ್ರಾಣಿಗಳ ಚಲನೆಯ ಬಗ್ಗೆ ಮುಂಚಿತವಾಗಿ ಎಚ್ಚರಿಕೆಗಳನ್ನು ಒದಗಿಸುತ್ತದೆ, ಲೋಕೋ ಪೈಲಟ್‌ಗಳು, ಸ್ಟೇಷನ್ ಮಾಸ್ಟರ್‌ಗಳು ಮತ್ತು ನಿಯಂತ್ರಣ ಕೊಠಡಿಗಳಿಗೆ ಸಕಾಲಿಕ ತಡೆಗಟ್ಟುವ/ಮುಂಜಾಗರೂಕತಾ  ಕ್ರಮ ಮತ್ತು ಎಚ್ಚರಿಕೆಗಳ ಪ್ರಸರಣವನ್ನು ಸಕ್ರಿಯಗೊಳಿಸುತ್ತದೆ, ಇದರಿಂದಾಗಿ ಅಪಘಾತಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ, ಈ ವ್ಯವಸ್ಥೆಯು ಈಶಾನ್ಯ ಗಡಿನಾಡಿನ ರೈಲ್ವೆಯಲ್ಲಿ 141 ಆರ್.ಕೆ.ಎಂ.ನಲ್ಲಿ (Rkm) ನಲ್ಲಿ ಕಾರ್ಯನಿರ್ವಹಿಸುತ್ತಿದೆ.

2. ವೀಡಿಯೊ ಕಣ್ಗಾವಲು ವ್ಯವಸ್ಥೆ: ಭಾರತೀಯ ರೈಲ್ವೆಯು ರೈಲ್ವೆ ಜಾಲದಾದ್ಯಂತ 1731 ರೈಲು ನಿಲ್ದಾಣಗಳಲ್ಲಿ ವೀಡಿಯೊ ಕಣ್ಗಾವಲು ವ್ಯವಸ್ಥೆ (VSS) ಯನ್ನು ನಿಯೋಜಿಸಿದೆ. ಈ ವ್ಯವಸ್ಥೆಯು ಸ್ವಯಂಚಾಲಿತ ಘಟನೆ ಪತ್ತೆಗಾಗಿ (ಒಳನುಗ್ಗುವಿಕೆ ಪತ್ತೆ, ಅಡ್ಡಾಡುವಿಕೆ ಪತ್ತೆ ಮುಂತಾದವು) ಕೃತಕ ಬುದ್ಧಿಮತ್ತೆ ಆಧಾರಿತ ವೀಡಿಯೊ ಅನಾಲಿಟಿಕ್ಸ್ (VA) ಮತ್ತು ನೈಜ-ಸಮಯದ ಗುರುತಿಸುವಿಕೆ ಮತ್ತು ಮೇಲ್ವಿಚಾರಣೆಗಾಗಿ ಮುಖ ಗುರುತಿಸುವಿಕೆ ಸಾಫ್ಟ್‌ವೇರ್ (FRS) ಅನ್ನು ಹೊಂದಿದೆ.

3. ಭಾರತೀಯ ರೈಲ್ವೆಗಳಲ್ಲಿ ಡಿಜಿಟಲ್ ವಿ.ಎಚ್.ಎಫ್. (VHF) ಸೆಟ್‌ಗಳ ಬಳಕೆ: ಲೋಕೋ ಪೈಲಟ್ ಮತ್ತು ಗಾರ್ಡ್ ನಡುವಿನ ಸಂವಹನವು ಸುರಕ್ಷತಾ ದೃಷ್ಟಿಕೋನದಿಂದ ಬಹಳ ಮುಖ್ಯವಾಗಿದೆ. ಮಾತಿನಲ್ಲಿ ಸ್ಪಷ್ಟತೆಯೊಂದಿಗೆ ಸಂವಹನವು ವಿಶ್ವಾಸಾರ್ಹವಾಗಿರಬೇಕು. ಡಿಜಿಟಲ್ ತಂತ್ರಜ್ಞಾನ ಆಧಾರಿತ ವಿ.ಎಚ್.ಎಫ್.  ಸೆಟ್‌ಗಳು ನೀಡುವ ಅನುಕೂಲಗಳನ್ನು ಬಳಸಿಕೊಳ್ಳುವ ಸಲುವಾಗಿ, ಭಾರತೀಯ ರೈಲ್ವೆಗಳಲ್ಲಿ ಡಿಜಿಟಲ್ 5ಡಬ್ಲ್ಯು ವಾಕಿ-ಟಾಕಿ ಸೆಟ್‌ಗಳನ್ನು ಮಾತ್ರ ಖರೀದಿಸಬೇಕೆಂಬುದಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

4. ಸುರಂಗ ಸಂವಹನ ವ್ಯವಸ್ಥೆ: ಸುರಂಗದ ಒಳಗಿನಿಂದ ಪ್ರಧಾನ ಕಚೇರಿ ಮತ್ತು ಕಾರ್ಯಾಚರಣೆ ನಿಯಂತ್ರಣ ಕೇಂದ್ರಗಳಿಗೆ ನಿರಂತರ ರೇಡಿಯೋ ಸಂವಹನಕ್ಕಾಗಿ ಯು.ಎಸ್.ಬಿ.ಆರ್.ಎಲ್. (USBRL) ಯೋಜನೆ ಸೇರಿದಂತೆ ವಿವಿಧ ರೈಲ್ವೆಗಳಲ್ಲಿ ಸುರಂಗ ಸಂವಹನವನ್ನು ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

5. ಆಪ್ಟಿಕಲ್ ಫೈಬರ್ ಕೇಬಲ್ (OFC): ಭಾರತೀಯ ರೈಲ್ವೆ ಅಕ್ಟೋಬರ್ 2025 ರವರೆಗೆ 619 ಆರ್.ಕೆ.ಎಂ.(Rkm)  ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಒದಗಿಸಿದೆ. ಇದರಿಂದಾಗಿ, ಒಟ್ಟು ಸುಮಾರು 67233 ಆರ್.ಕೆ.ಎಂ.ಗಳಷ್ಟು  ಐ.ಆರ್. ನೆಟ್‌ವರ್ಕ್ ಜಾಲ ಸೃಷ್ಟಿಯಾಗಿದೆ.

6. ಕೋಚ್ ಮಾರ್ಗದರ್ಶನ ವ್ಯವಸ್ಥೆ: ಕೋಚ್ ಮಾರ್ಗದರ್ಶನ ವ್ಯವಸ್ಥೆ (CGS) ಪ್ಲಾಟ್‌ಫಾರ್ಮ್‌ನಲ್ಲಿ ನಿಗದಿತ ರೈಲಿನ ಕೋಚ್ ಸ್ಥಾನವನ್ನು ಪ್ರದರ್ಶಿಸುತ್ತದೆ. ಈ ವ್ಯವಸ್ಥೆಯು ಪ್ರಯಾಣಿಕರಿಗೆ ತಮ್ಮ ಕೋಚ್‌ಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪತ್ತೆಹಚ್ಚಲು ಸಹಾಯ ಮಾಡುವ ಮೂಲಕ ಅನುಕೂಲತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಇಲ್ಲಿಯವರೆಗೆ, 1064 ನಿಲ್ದಾಣಗಳಲ್ಲಿ ಕೋಚ್ ಮಾರ್ಗದರ್ಶನ ವ್ಯವಸ್ಥೆಗಳನ್ನು ಒದಗಿಸಲಾಗಿದೆ.

7. ರೈಲು ಸೂಚನಾ ಫಲಕ: ರೈಲು ಸೂಚನಾ ಫಲಕವು ರೈಲು ಸಂಖ್ಯೆ, ಹೆಸರು, ಆಗಮನ/ನಿರ್ಗಮನ ಸಮಯ ಮತ್ತು ಪ್ಲಾಟ್‌ಫಾರ್ಮ್ ಸಂಖ್ಯೆಯನ್ನು ಸೂಚಿಸುವ ರೈಲುಗಳ ಆಗಮನ/ನಿರ್ಗಮನಗಳನ್ನು ಪ್ರದರ್ಶಿಸುತ್ತದೆ. ಇಲ್ಲಿಯವರೆಗೆ, 1449 ನಿಲ್ದಾಣಗಳಲ್ಲಿ ರೈಲು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ನೇಮಕಾತಿ

ಭಾರತೀಯ ರೈಲ್ವೆಯಲ್ಲಿ  ಖಾಲಿ ಹುದ್ದೆಗಳ ಸೃಷ್ಟಿಯಾಗುವಿಕೆ ಮತ್ತು ಭರ್ತಿ ನಿರಂತರ ಪ್ರಕ್ರಿಯೆಗಳಾಗಿದ್ದು, ಅದರ ಗಾತ್ರ, ಪ್ರಾದೇಶಿಕ ವಿತರಣೆ ಮತ್ತು ಕಾರ್ಯಾಚರಣೆಯ ನಿರ್ಣಾಯಕತೆಯನ್ನು ಪರಿಗಣಿಸಿ. ನಿಯಮಿತ ಕಾರ್ಯಾಚರಣೆಗಳು, ತಂತ್ರಜ್ಞಾನದಲ್ಲಿನ ಬದಲಾವಣೆಗಳು, ಯಾಂತ್ರೀಕರಣಗಳು ಮತ್ತು ನವೀನ ಅಭ್ಯಾಸ/ಪದ್ಧತಿಗಳ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಮತ್ತು ಸೂಕ್ತವಾದ ಮಾನವಶಕ್ತಿಯನ್ನು ಒದಗಿಸಲಾಗಿದೆ. ಕಾರ್ಯಾಚರಣೆ ಮತ್ತು ತಾಂತ್ರಿಕ ಅವಶ್ಯಕತೆಗಳಿಗೆ ಅನುಗುಣವಾಗಿ ರೈಲ್ವೆಗಳು ನೇಮಕಾತಿ ಸಂಸ್ಥೆಗಳೊಂದಿಗೆ ಇಂಡೆಂಟ್‌ಗಳನ್ನು ನೀಡುವ  ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಾರ್ಷಿಕ ಕ್ಯಾಲೆಂಡರ್ 2024 ಮತ್ತು 2025 ರ ಪ್ರಕಾರ, ವಲಯ ರೈಲ್ವೆಗಳು ಮತ್ತು ಉತ್ಪಾದನಾ ಘಟಕಗಳು ಸೇರಿದಂತೆ ಭಾರತೀಯ ರೈಲ್ವೆಯಲ್ಲಿ 1,20,579 ಹುದ್ದೆಗಳ ನೇಮಕಾತಿಯನ್ನು ಕೈಗೆತ್ತಿಕೊಳ್ಳಲಾಗಿದೆ.

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನಲ್ಲಿ ನೇಮಕಾತಿ ಸ್ಥಿರವಾಗಿ ಪ್ರಗತಿಯಲ್ಲಿದ್ದು, ಸಬ್-ಇನ್‌ಸ್ಪೆಕ್ಟರ್‌ಗಳ (ಕಾರ್ಯನಿರ್ವಾಹಕ) 452 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಪ್ರಸ್ತುತ 4,208 ಕಾನ್‌ಸ್ಟೆಬಲ್‌ಗಳ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ನೇಮಕಾತಿ ದತ್ತಾಂಶ/ಡೇಟಾ:

ಕ್ರೀಡೆ

ಭಾರತೀಯ ರೈಲ್ವೆಯು ಭಾರತದ ಕ್ರೀಡಾ ಪ್ರತಿಭೆಯನ್ನು ಪೋಷಿಸುವಲ್ಲಿ ಬಹುಕಾಲದಿಂದ ಪ್ರಮುಖ ಪಾತ್ರ ವಹಿಸಿದೆ, ಅದರ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ರಾಷ್ಟ್ರಕ್ಕೆ ಪ್ರಶಸ್ತಿಗಳನ್ನು ತಂದಿದ್ದಾರೆ. ಅವರ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಮತ್ತು ಪುರಸ್ಕಾರ ರೂಪದಲ್ಲಿ ಪ್ರತಿಫಲವಾಗಿ, ವರ್ಷದಲ್ಲಿ, ಪ್ರತಿಕಾ ರಾವಲ್, ಸ್ನೇಹ ರಾಣಾ ಮತ್ತು ರೇಣುಕಾ ಸಿಂಗ್ ಠಾಕೂರ್ ಅವರಿಗೆ ವಿಶೇಷ ಕರ್ತವ್ಯ ಅಧಿಕಾರಿ (ಕ್ರೀಡೆ) ಗುಂಪಿನ 'ಬಿ' ಅಧಿಕಾರಿ ದರ್ಜೆಯ ಹುದ್ದೆಗೆ ಸರದಿಯಂತೆ ಭಡ್ತಿ ನೀಡಿದೆ. ಭಾರತದ ವಿಜಯಶಾಲಿ ಐಸಿಸಿ ಮಹಿಳಾ ವಿಶ್ವಕಪ್ 2025 ಚಾಂಪಿಯನ್ ಶಿಪ್ ನಲ್ಲಿ ಅವರ ಅಸಾಧಾರಣ ಸಾಧನೆಯ ಪ್ರದರ್ಶನಕ್ಕಾಗಿ ಭಡ್ತಿಗಳನ್ನು ನೀಡಲಾಗಿದೆ.

ಪರಿವರ್ತನೆಯ ವರ್ಷ, ಭರವಸೆಯ ಭವಿಷ್ಯ: 2026 ಕ್ಕೆ ಭಾರತೀಯ ರೈಲ್ವೆಯ ಸಂದೇಶ

2025 ಅಂತ್ಯಗೊಳ್ಳುತ್ತಿದ್ದಂತೆ, ಭಾರತೀಯ ರೈಲ್ವೆ ರಾಷ್ಟ್ರದ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತದೆ ಮತ್ತು ಸ್ಥಿರ ಪ್ರಗತಿ ಹಾಗು ಉದ್ದೇಶಪೂರ್ವಕ ರೂಪಾಂತರದ ವರ್ಷದ ಬಗ್ಗೆ ಹೆಮ್ಮೆಯಿಂದ ಪ್ರತಿಬಿಂಬಿಸುತ್ತದೆ. ನಿಲ್ದಾಣಗಳ ಪುನರಾಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿ, ಬಲಪಡಿಸಿದ ಸುರಕ್ಷತಾ ವ್ಯವಸ್ಥೆಗಳು, ಡಿಜಿಟಲ್ ಮತ್ತು ಸುಸ್ಥಿರ ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆ ಮತ್ತು ಸರಕು ಸಾಗಣೆ ಕಾರಿಡಾರ್‌ಗಳ ನಿರಂತರ ವರ್ಧನೆಯು ಭಾರತೀಯ ರೈಲ್ವೆಯನ್ನು ರಾಷ್ಟ್ರೀಯ ಬೆಳವಣಿಗೆಯ ಪ್ರಮುಖ ಚಾಲಕನನ್ನಾಗಿ ಬಲಪಡಿಸಿದೆ. ಈ ಪ್ರಯತ್ನಗಳು ವೇಗವಾದ, ಸುರಕ್ಷಿತ, ಹಸಿರು ಮತ್ತು ಹೆಚ್ಚು ಅಂತರ್ಗತವಾಗಿರುವ ಭವಿಷ್ಯಕ್ಕೆ ಸಿದ್ಧವಾದ ರೈಲು ಜಾಲಕ್ಕೆ ಬಲವಾದ ಅಡಿಪಾಯವನ್ನು ಹಾಕಿವೆ.

2026 ನವೀಕರಿಸಿದ ವಿಶ್ವಾಸ ಮತ್ತು ಬದ್ಧತೆಯೊಂದಿಗೆ ಸ್ವಾಗತಿಸುತ್ತಾ, ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ರೈಲು ಸೇವೆಗಳನ್ನು ತಲುಪಿಸುವ ಬಗ್ಗೆ ರಾಷ್ಟ್ರಕ್ಕೆ ಭಾರತೀಯ ರೈಲ್ವೆ ತನ್ನ ಭರವಸೆಯನ್ನು ಪುನರುಚ್ಚರಿಸುತ್ತದೆ. ಸ್ಪಷ್ಟ ದೃಷ್ಟಿ ಮತ್ತು ನಿರಂತರ ಹೂಡಿಕೆಯೊಂದಿಗೆ, ಭಾರತೀಯ ರೈಲ್ವೆ ಜನರನ್ನು ಸಂಪರ್ಕಿಸಲು, ಪ್ರದೇಶಗಳನ್ನು ಸಬಲೀಕರಣಗೊಳಿಸಲು, ಮೂಲಸೌಕರ್ಯವನ್ನು ಬಲಪಡಿಸಲು, ಸುರಕ್ಷತೆಯನ್ನು ಹೆಚ್ಚಿಸಲು, ತಂತ್ರಜ್ಞಾನವನ್ನು ಮುಂದುವರಿಸಲು ಮತ್ತು ಒಟ್ಟಾರೆ ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಬದ್ಧವಾಗಿದೆ, ಅದೇ ಸಮಯದಲ್ಲಿ ರಾಷ್ಟ್ರವನ್ನು ವಿಶ್ವಾಸಾರ್ಹತೆ ಮತ್ತು ಶ್ರೇಷ್ಠತೆಯೊಂದಿಗೆ ಮುನ್ನಡೆಸಲು ಬದ್ಧವಾಗಿದೆ.

 

*****


(ಪ್ರಕಟಣೆ ಐ.ಡಿ.: 2209457) ವಿಸಿಟರ್ ಕೌಂಟರ್ : 60
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Assamese , Odia , Tamil , Malayalam