ಪ್ರಧಾನ ಮಂತ್ರಿಯವರ ಕಛೇರಿ
ಇಥಿಯೋಪಿಯಾ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
प्रविष्टि तिथि:
17 DEC 2025 3:08PM by PIB Bengaluru
ಇಥಿಯೋಪಿಯಾದ ಘನವೆತ್ತ ಪ್ರಧಾನಮಂತ್ರಿಗಳೇ,
ಸಂಸತ್ತಿನ ಉಭಯ ಸದನಗಳ ಗೌರವಾನ್ವಿತ ಸಭಾಪತಿಗಳೇ,
ಗೌರವಾನ್ವಿತ ಸದಸ್ಯರೇ,
ಗಣ್ಯರೇ,
ಮತ್ತು ನನ್ನ ಇಥಿಯೋಪಿಯಾದ ಪ್ರಿಯ ಸಹೋದರ ಸಹೋದರಿಯರೇ,
ಇಂದು ನಿಮ್ಮ ಮುಂದೆ ನಿಲ್ಲುವುದು ನನಗೆ ಸಿಕ್ಕಿರುವ ಒಂದು ದೊಡ್ಡ ಸೌಭಾಗ್ಯ. ಸಿಂಹಗಳ ನಾಡಾದ ಇಥಿಯೋಪಿಯಾದಲ್ಲಿ ಇರುವುದು ಬಹಳ ಸಂತಸ ತಂದಿದೆ. ಇಲ್ಲಿ ನನಗೆ ನನ್ನ ಸ್ವಂತ ಮನೆಯಲ್ಲಿದ್ದಂತೆ ಅನಿಸುತ್ತಿದೆ. ಏಕೆಂದರೆ, ಭಾರತದಲ್ಲಿರುವ ನನ್ನ ತವರು ರಾಜ್ಯ ಗುಜರಾತ್ ಕೂಡ ಸಿಂಹಗಳ ನೆಲೆವೀಡಾಗಿದೆ.
ಪುರಾತನ ಜ್ಞಾನ ಮತ್ತು ಆಧುನಿಕ ಆಕಾಂಕ್ಷೆಗಳನ್ನು ಹೊಂದಿರುವ ರಾಷ್ಟ್ರದ ಹೃದಯಭಾಗದಲ್ಲಿರುವ ಈ ಪ್ರಜಾಪ್ರಭುತ್ವದ ದೇವಾಲಯದಲ್ಲಿ ಉಪಸ್ಥಿತರಿರುವುದು ನನಗೆ ಗೌರವದ ಸಂಗತಿಯಾಗಿದೆ. ನಿಮ್ಮ ಸಂಸತ್ತು, ನಿಮ್ಮ ಜನತೆ ಮತ್ತು ನಿಮ್ಮ ಪ್ರಜಾಪ್ರಭುತ್ವದ ಪಯಣದ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡು ನಾನು ಇಲ್ಲಿಗೆ ಬಂದಿದ್ದೇನೆ. ಭಾರತದ 140 ಕೋಟಿ ಜನರ ಪರವಾಗಿ, ನಾನು ಸ್ನೇಹ, ಸದ್ಭಾವನೆ ಮತ್ತು ಸಹೋದರತ್ವದ ಶುಭಾಶಯಗಳನ್ನು ಹೊತ್ತು ತಂದಿದ್ದೇನೆ.
ತೇನಾ ಇಸ್ತೀಲ್ಲಿನ್
ಸಲಾಮ್
ಗೌರವಾನ್ವಿತ ಸದಸ್ಯರೇ,
ಈ ಭವ್ಯವಾದ ಕಟ್ಟಡದಲ್ಲಿ ನಿಮ್ಮ ಕಾನೂನುಗಳು ರೂಪುಗೊಳ್ಳುತ್ತವೆ. ಇಲ್ಲಿ ಜನರ ಇಚ್ಛಾಶಕ್ತಿಯೇ ಸರ್ಕಾರದ ನಿರ್ಣಯವಾಗುತ್ತದೆ. ಯಾವಾಗ ಸರ್ಕಾರದ ನಿರ್ಣಯಗಳು ಜನರ ಆಶೋತ್ತರಗಳೊಂದಿಗೆ ಸಾಮರಸ್ಯದಿಂದ ಇರುತ್ತವೆಯೋ, ಆಗ ಪ್ರಗತಿಯ ಚಕ್ರವು ಭರವಸೆ ಮತ್ತು ಉದ್ದೇಶದೊಂದಿಗೆ ಮುನ್ನಡೆಯುತ್ತದೆ.
ನಿಮ್ಮ ಮೂಲಕ, ನಾನು ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ನಿಮ್ಮ ರೈತರಿಗೆ, ಹೊಸ ಆಲೋಚನೆಗಳನ್ನು ರೂಪಿಸುತ್ತಿರುವ ಉದ್ಯಮಿಗಳಿಗೆ, ಸಮುದಾಯ ಮತ್ತು ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಹೆಮ್ಮೆಯ ಮಹಿಳೆಯರಿಗೆ ಹಾಗೂ ಭವಿಷ್ಯವನ್ನು ರೂಪಿಸುತ್ತಿರುವ ಇಥಿಯೋಪಿಯಾದ ಯುವಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಈ ಅಪಾರ ಸುಯೋಗಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ.
ನಿನ್ನೆ, ನನ್ನ ಆತ್ಮೀಯ ಸ್ನೇಹಿತ ಪ್ರಧಾನ ಮಂತ್ರಿ ಡಾ. ಅಬಿ ಅಹ್ಮದ್ ಅವರಿಂದ ಇಥಿಯೋಪಿಯಾದ ಅತ್ಯುನ್ನತ ಗೌರವವಾದ 'ನಿಶಾನ್ ಆಫ್ ಇಥಿಯೋಪಿಯಾ' ಸ್ವೀಕರಿಸುವ ಗೌರವ ನನಗೆ ಸಿಕ್ಕಿತು. ಭಾರತದ ಜನರ ಪರವಾಗಿ, ಅತ್ಯಂತ ವಿನಮ್ರತೆಯಿಂದ ಕೈಮುಗಿದು ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ.
ಆಮ್ ಸಗ್ನಾಲೊ
ಗೌರವಾನ್ವಿತ ಸದಸ್ಯರೇ,
ಇಥಿಯೋಪಿಯಾ ಮಾನವ ಇತಿಹಾಸದ ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಒಂದಾಗಿದೆ. ಇಲ್ಲಿನ ಪರ್ವತಗಳಲ್ಲಿ, ಕಣಿವೆಗಳಲ್ಲಿ ಮತ್ತು ಇಥಿಯೋಪಿಯಾದ ಜನರ ಹೃದಯಗಳಲ್ಲಿ ಇತಿಹಾಸವು ಇಂದಿಗೂ ಜೀವಂತವಾಗಿದೆ. ಇಥಿಯೋಪಿಯಾದ ಬೇರುಗಳು ಆಳವಾಗಿರುವುದರಿಂದ ಇಂದು ಅದು ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ. ಇಥಿಯೋಪಿಯಾದ ನೆಲದಲ್ಲಿ ನಿಲ್ಲುವುದು ಎಂದರೆ - ಎಲ್ಲಿ ಭೂತಕಾಲವನ್ನು ಗೌರವಿಸಲಾಗುತ್ತದೆಯೋ, ವರ್ತಮಾನವು ಉದ್ದೇಶಪೂರ್ಣವಾಗಿದೆಯೋ ಮತ್ತು ಭವಿಷ್ಯವನ್ನು ತೆರೆದ ಹೃದಯದಿಂದ ಸ್ವಾಗತಿಸಲಾಗುತ್ತದೆಯೋ ಅಂತಹ ಪವಿತ್ರ ಸ್ಥಾನದಲ್ಲಿ ನಿಂತಂತೆ.
ಹಳೆಯ ಮತ್ತು ಹೊಸದರ ಈ ಸಂಗಮ... ಪುರಾತನ ಜ್ಞಾನ ಮತ್ತು ಆಧುನಿಕ ಮಹತ್ವಾಕಾಂಕ್ಷೆಯ ನಡುವಿನ ಈ ಸಮತೋಲನ... ಇದೇ ಇಥಿಯೋಪಿಯಾದ ನಿಜವಾದ ಶಕ್ತಿ.
ಈ 'ಮೇಡೆಮರ್' ಅಥವಾ ಸಮನ್ವಯದ ಮನೋಭಾವವು ಭಾರತೀಯರಾದ ನಮಗೂ ಬಹಳ ಪರಿಚಿತವಾದುದು. ಲಾಲಿಬೆಲಾದ ಏಕಶಿಲಾ ಚರ್ಚುಗಳಂತೆಯೇ, ಭಾರತದ ತಮಿಳುನಾಡಿನ ಪುರಾತನ ಶಿಲಾ ದೇವಾಲಯಗಳು ಕೂಡ ಕಲ್ಲಿನಲ್ಲಿ ಕೆತ್ತಲಾದ ಪ್ರಾರ್ಥನೆಗಳಾಗಿವೆ. ನಮ್ಮದು ಕೂಡ ಒಂದು ಪ್ರಾಚೀನ ನಾಗರಿಕತೆಯಾಗಿದ್ದು, ಭವಿಷ್ಯದತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಿದ್ದೇವೆ.
"ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್" ಎನ್ನುವ ಕರೆ ನೀಡಿರುವ ನಾವು - ಎಲ್ಲರ ಜೊತೆಗೂಡಿ, ಎಲ್ಲರ ಅಭಿವೃದ್ಧಿಗಾಗಿ, ಎಲ್ಲರ ವಿಶ್ವಾಸ ಮತ್ತು ಪ್ರಯತ್ನದೊಂದಿಗೆ ಮುನ್ನಡೆಯುತ್ತಿದ್ದೇವೆ. ನಮ್ಮ ಮಾತೃಭೂಮಿಯ ಬಗೆಗಿನ ನಮ್ಮ ಭಾವನೆಗಳು ನಮ್ಮ ಹಂಚಿಕೆಯ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತವೆ.
ಭಾರತದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಮತ್ತು ಇಥಿಯೋಪಿಯಾದ ರಾಷ್ಟ್ರಗೀತೆ, ಇವೆರಡೂ ನಮ್ಮ ನೆಲವನ್ನು 'ತಾಯಿ' ಎಂದು ಸಂಬೋಧಿಸುತ್ತವೆ. ಇವು ನಮ್ಮ ಪರಂಪರೆ, ಸಂಸ್ಕೃತಿ, ನೈಸರ್ಗಿಕ ಸೌಂದರ್ಯದ ಬಗ್ಗೆ ಹೆಮ್ಮೆ ಪಡಲು ಮತ್ತು ನಮ್ಮ ಮಾತೃಭೂಮಿಯನ್ನು ರಕ್ಷಿಸಲು ನಮಗೆ ಸದಾ ಪ್ರೇರಣೆ ನೀಡುತ್ತವೆ.
ಗೌರವಾನ್ವಿತ ಸದಸ್ಯರೇ,
ವಿಜ್ಞಾನವು ನಮ್ಮ ಮಾನವ ಜನಾಂಗದ ಅತ್ಯಂತ ಹಳೆಯ ಹೆಜ್ಜೆಗುರುತುಗಳನ್ನು ಇಥಿಯೋಪಿಯಾದಲ್ಲಿ ಗುರುತಿಸಿದೆ. ಪ್ರಪಂಚವು 'ಲೂಸಿ' ಅಥವಾ 'ದಿಂಕಿಶೆ' ಬಗ್ಗೆ ಮಾತನಾಡುವಾಗ, ಅದು ಕೇವಲ ಒಂದು ಪಳೆಯುಳಿಕೆಯ ಬಗ್ಗೆಯಲ್ಲ; ಬದಲಾಗಿ ಅದೊಂದು 'ಆರಂಭ'ದ ಬಗ್ಗೆ. ಆ ಆರಂಭವು ನಮಗೆಲ್ಲರಿಗೂ ಸೇರಿದ್ದಾಗಿದೆ - ನಾವು ಅಡಿಸ್ ಅಬಾಬಾದಲ್ಲಿ ವಾಸಿಸುತ್ತಿರಲಿ ಅಥವಾ ಅಯೋಧ್ಯೆಯಲ್ಲಿರಲಿ, ನಮ್ಮೆಲ್ಲರ ಮೂಲ ಒಂದೇ ಆಗಿದೆ.
ಭಾರತದಲ್ಲಿ ನಾವು "ವಸುಧೈವ ಕುಟುಂಬಕಂ" ಎನ್ನುತ್ತೇವೆ, ಅಂದರೆ ಈ ಇಡೀ ಜಗತ್ತೇ ಒಂದು ಕುಟುಂಬ. ರಾಜಕೀಯ, ಗಡಿಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಮೀರಿ, ನಾವೆಲ್ಲರೂ ಒಂದು ಸಮಾನ ಮೂಲವನ್ನು ಹಂಚಿಕೊಂಡಿದ್ದೇವೆ ಎಂಬುದನ್ನು ಇದು ನಮಗೆ ನೆನಪಿಸುತ್ತದೆ. ನಮ್ಮ ಆರಂಭವು ಒಂದೇ ಆಗಿದ್ದ ಮೇಲೆ, ನಮ್ಮ ಗುರಿ ಅಥವಾ ಭವಿಷ್ಯವು ಕೂಡ ಒಂದೇ ಆಗಿರಬೇಕು.
ಗೌರವಾನ್ವಿತ ಸದಸ್ಯರೇ,
ಭಾರತ ಮತ್ತು ಇಥಿಯೋಪಿಯಾ ಹವಾಮಾನದಷ್ಟೇ ಮನಸ್ಸಿನ ಆತ್ಮೀಯತೆಯನ್ನೂ ಹಂಚಿಕೊಂಡಿವೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ, ನಮ್ಮ ಪೂರ್ವಜರು ವಿಶಾಲವಾದ ಸಾಗರಗಳ ಮೂಲಕ ಬಾಂಧವ್ಯವನ್ನು ಬೆಳೆಸಿದ್ದರು. ಹಿಂದೂ ಮಹಾಸಾಗರದ ಮೂಲಕ ವ್ಯಾಪಾರಿಗಳು ಸಾಂಬಾರ ಪದಾರ್ಥಗಳು, ಹತ್ತಿ, ಕಾಫಿ ಮತ್ತು ಚಿನ್ನದೊಂದಿಗೆ ನೌಕಾಯಾನ ಮಾಡುತ್ತಿದ್ದರು. ಆದರೆ, ಅವರು ಕೇವಲ ಸರಕುಗಳನ್ನು ಮಾತ್ರ ವ್ಯಾಪಾರ ಮಾಡಲಿಲ್ಲ; ಬದಲಾಗಿ ಅವರು ಹೊಸ ಆಲೋಚನೆಗಳು, ಕಥೆಗಳು ಮತ್ತು ಜೀವನ ವಿಧಾನಗಳನ್ನು ವಿನಿಮಯ ಮಾಡಿಕೊಂಡರು. ಅದುಲಿಸ್ ಮತ್ತು ಧೋಲೆರಾ ಗಳಂತಹ ಬಂದರುಗಳು ಕೇವಲ ವ್ಯಾಪಾರ ಕೇಂದ್ರಗಳಾಗಿರಲಿಲ್ಲ; ಅವು ಎರಡು ನಾಗರಿಕತೆಗಳ ನಡುವಿನ ಸೇತುವೆಗಳಾಗಿದ್ದವು.
ಆಧುನಿಕ ಕಾಲದಲ್ಲಿ ನಮ್ಮ ಸಂಬಂಧವು ಹೊಸ ಯುಗಕ್ಕೆ ಕಾಲಿಟ್ಟಿದೆ. 1941ರಲ್ಲಿ ಇಥಿಯೋಪಿಯಾದ ವಿಮೋಚನೆಗಾಗಿ ಭಾರತೀಯ ಸೈನಿಕರು ಇಥಿಯೋಪಿಯನ್ನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಶೀಘ್ರದಲ್ಲೇ ನಮ್ಮ ನಡುವೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳು ಆರಂಭವಾದವು.
ಆದರೆ ರಾಯಭಾರ ಕಚೇರಿಗಳು ಸ್ಥಾಪನೆಯಾಗುವ ಮೊದಲೇ, ನಮ್ಮ ಜನರು ಒಟ್ಟಾಗಿ ಹೊಸ ಅಧ್ಯಾಯವನ್ನು ಬರೆಯಲು ಆರಂಭಿಸಿದ್ದರು. ಸಾವಿರಾರು ಭಾರತೀಯ ಶಿಕ್ಷಕರು ಇಥಿಯೋಪಿಯಾಕ್ಕೆ ಬಂದರು. ಅವರು ಅಡಿಸ್ ಅಬಾಬಾದಿಂದ ದಿರೆ ದಾವಾ ವರೆಗೆ, ಬಹಿರ್ ದಾರ್ ನಿಂದ ಮೆಕೆಲೆ ವರೆಗೆ ಮಕ್ಕಳಿಗೆ ಪಾಠ ಮಾಡಿದರು. ಅವರು ಇಥಿಯೋಪಿಯಾದ ಶಾಲೆಗಳನ್ನು ತಲುಪಿದ್ದಲ್ಲದೆ, ಇಥಿಯೋಪಿಯನ್ನರ ಹೃದಯಗಳನ್ನು ಗೆದ್ದರು. ಇಂದಿಗೂ ಅನೇಕ ಇಥಿಯೋಪಿಯನ್ ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಿದ ಭಾರತೀಯ ಶಿಕ್ಷಕರನ್ನು ಬಹಳ ಆತ್ಮೀಯವಾಗಿ ಸ್ಮರಿಸುತ್ತಾರೆ.
ಭಾರತೀಯ ಶಿಕ್ಷಕರು ಇಲ್ಲಿಗೆ ಬಂದಂತೆಯೇ, ಇಥಿಯೋಪಿಯಾದ ವಿದ್ಯಾರ್ಥಿಗಳು ಕೂಡ ಜ್ಞಾನಾರ್ಜನೆ ಮತ್ತು ಸ್ನೇಹವನ್ನು ಅರಸುತ್ತಾ ಭಾರತಕ್ಕೆ ಪ್ರಯಾಣ ಬೆಳೆಸಿದರು. ಅವರು ವಿದ್ಯಾರ್ಥಿಗಳಾಗಿ ಭಾರತಕ್ಕೆ ಹೋದರು ಮತ್ತು ಆಧುನಿಕ ಇಥಿಯೋಪಿಯಾದ ನಿರ್ಮಾತೃಗಳಾಗಿ ತಮ್ಮ ತಾಯ್ನಾಡಿಗೆ ಮರಳಿದರು. ಅವರಲ್ಲಿ ಕೆಲವರು ಈಗ ಇದೇ ಸಂಸತ್ತಿನಲ್ಲಿ ಉಪಸ್ಥಿತರಿದ್ದಾರೆ ಎಂದು ನನಗೆ ತಿಳಿದುಬಂದಿದೆ! ಅದರಲ್ಲಿ ಗೌರವಾನ್ವಿತ ಸಭಾಪತಿಗಳಾದ ಟಾಗೆಸ್ಸೆ ಚಾಫೋ ಅವರೂ ಒಬ್ಬರು.
ನಮ್ಮ ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಅವರು ವಿಶೇಷ ಪಾತ್ರ ವಹಿಸಿದ್ದಾರೆ. ಏಕೆಂದರೆ ಅವರು ಇಥಿಯೋಪಿಯಾದ ಖಾದ್ಯಗಳನ್ನು ಭಾರತಕ್ಕೆ ಪರಿಚಯಿಸಿದರು. ಭಾರತದಲ್ಲಿ ನಾವು ರಾಗಿ ಮತ್ತು ಸಜ್ಜೆಗಳಂತಹ 'ಶ್ರೀ ಅನ್ನ' (ಸಿರಿಧಾನ್ಯಗಳನ್ನು) ತಿನ್ನಲು ಇಷ್ಟಪಡುತ್ತೇವೆ. ಆದ್ದರಿಂದ ಇಥಿಯೋಪಿಯಾದ 'ಟೆಫ್' ಧಾನ್ಯದ ರುಚಿಯು ನಮಗೆ ಬಹಳ ಪರಿಚಿತವಾಗಿ ಮತ್ತು ಹಿತವಾಗಿ ಅನಿಸುತ್ತದೆ. ನಾವು ಭಾರತೀಯ 'ಥಾಲಿ'ಯನ್ನು ಸವಿಯುವಂತೆಯೇ, ಇಥಿಯೋಪಿಯಾದ 'ಬೆಯಾಯ್ನೇತು' ಕೂಡ ನಮಗೆ ತುಂಬಾ ಆತ್ಮೀಯವಾಗಿ ಮತ್ತು ಪರಿಚಿತವಾಗಿ ಕಾಣುತ್ತದೆ.
ಗೌರವಾನ್ವಿತ ಸದಸ್ಯರೇ,
ಇಂದು ಇಥಿಯೋಪಿಯಾದಲ್ಲಿ ಅತಿ ದೊಡ್ಡ ವಿದೇಶಿ ಹೂಡಿಕೆದಾರರಲ್ಲಿ ಭಾರತೀಯ ಕಂಪನಿಗಳೂ ಸೇರಿವೆ. ಜವಳಿ, ಉತ್ಪಾದನೆ, ಕೃಷಿ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವು ಐದು ಶತಕೋಟಿ ಡಾಲರ್ ಗಿಂತಲೂ (5 Billion Dollars) ಹೆಚ್ಚು ಹೂಡಿಕೆ ಮಾಡಿವೆ. ಅಲ್ಲದೆ, ಅವು ಇಲ್ಲಿನ ಎಪ್ಪತ್ತೈದು ಸಾವಿರಕ್ಕೂ ಹೆಚ್ಚು (75,000+) ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸಿವೆ.
ಆದರೆ, ನಮ್ಮ ಪಾಲುದಾರಿಕೆಯಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯ ಅಡಗಿದೆ ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ ಎಂಬ ನಂಬಿಕೆ ನನಗಿದೆ. ಅದಕ್ಕಾಗಿಯೇ, ಪ್ರಧಾನ ಮಂತ್ರಿ ಡಾ. ಅಬಿ ಅಹ್ಮದ್ ಮತ್ತು ನಾನು ನಿನ್ನೆ ಒಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದ್ದೇವೆ. ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು 'ಕಾರ್ಯತಂತ್ರದ ಪಾಲುದಾರಿಕೆ' (Strategic Partnership) ಮಟ್ಟಕ್ಕೆ ಏರಿಸಲು ನಾವು ನಿರ್ಧರಿಸಿದ್ದೇವೆ.
ಇದು ತಂತ್ರಜ್ಞಾನ, ನಾವೀನ್ಯತೆ, ಗಣಿಗಾರಿಕೆ, ಸುಸ್ಥಿರತೆ ಮತ್ತು ಶುದ್ಧ ಇಂಧನ ಕ್ಷೇತ್ರದಲ್ಲಿ ಸಹಕಾರದ ಮೂಲಕ ನಮ್ಮ ಆರ್ಥಿಕತೆಯ ಅಪಾರ ಸಾಮರ್ಥ್ಯವನ್ನು ಅನಾವರಣಗೊಳಿಸಲಿದೆ. ಅಲ್ಲದೆ ಆಹಾರ ಭದ್ರತೆ, ಆರೋಗ್ಯ ಭದ್ರತೆ ಮತ್ತು ಸಾಮರ್ಥ್ಯ ವರ್ಧನೆಯಲ್ಲಿ ಸಹಕರಿಸುವ ಮೂಲಕ ನಮ್ಮ ಜನರ ಭವಿಷ್ಯವನ್ನು ಸುರಕ್ಷಿತವಾಗಿಸಲು ಇದು ಸಹಾಯ ಮಾಡುತ್ತದೆ. ಇದರ ಜೊತೆಗೆ, ವ್ಯಾಪಾರ ಮತ್ತು ಹೂಡಿಕೆಯಲ್ಲಿನ ಸಹಕಾರದೊಂದಿಗೆ, ರಕ್ಷಣೆ ಮತ್ತು ಭದ್ರತಾ ವಿಷಯಗಳಲ್ಲಿಯೂ ನಾವು ನಮ್ಮ ಬಾಂಧವ್ಯವನ್ನು ಇನ್ನಷ್ಟು ವಿಸ್ತರಿಸಲಿದ್ದೇವೆ.
ಗೌರವಾನ್ವಿತ ಸದಸ್ಯರೇ,
ಅಭಿವೃದ್ಧಿಶೀಲ ರಾಷ್ಟ್ರಗಳಾಗಿ, ನಾವು ಪರಸ್ಪರ ಕಲಿಯುವುದು ಮತ್ತು ಹಂಚಿಕೊಳ್ಳುವುದು ಬಹಳಷ್ಟಿದೆ. ಕೃಷಿಯು ನಮ್ಮೆರಡು ರಾಷ್ಟ್ರಗಳ ಬೆನ್ನೆಲುಬಾಗಿದೆ. ಇದು ನಮ್ಮ ಜನರಿಗೆ ಆಹಾರ ನೀಡುತ್ತದೆ ಮತ್ತು ನಮ್ಮ ರೈತರ ಜೀವನಕ್ಕೆ ಆಧಾರವಾಗಿದೆ. ಅಷ್ಟೇ ಅಲ್ಲದೆ, ಇದು ಪರಂಪರೆಯನ್ನು ನಾವೀನ್ಯತೆಯೊಂದಿಗೆ ಬೆಸೆಯುತ್ತದೆ. ಉತ್ತಮ ಗುಣಮಟ್ಟದ ಬೀಜಗಳು, ಸುಧಾರಿತ ನೀರಾವರಿ ಪದ್ಧತಿಗಳು ಮತ್ತು ಮಣ್ಣಿನ ಆರೋಗ್ಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ನಾವು ಒಟ್ಟಾಗಿ ಶ್ರಮಿಸಬಹುದು.
ಹವಾಮಾನ ಬದಲಾವಣೆಯು ಮಳೆ ಮತ್ತು ಬೆಳೆ ಚಕ್ರಗಳ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ, ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಬಲ್ಲ ಕೃಷಿ ಪದ್ಧತಿಗಳ ಬಗ್ಗೆ ನಾವು ಜ್ಞಾನವನ್ನು ವಿನಿಮಯ ಮಾಡಿಕೊಳ್ಳಬಹುದು. ಹೈನುಗಾರಿಕೆಯಿಂದ ಕೃಷಿ ಯಾಂತ್ರಿಕೀಕರಣದವರೆಗೆ, ಸಿರಿಧಾನ್ಯಗಳ ಸಂಶೋಧನೆಯಿಂದ ಆಹಾರ ಸಂಸ್ಕರಣೆಯವರೆಗೆ, ನಾವು ಒಟ್ಟಾಗಿ ಕೆಲಸ ಮಾಡುವ ಮೂಲಕ ನಮ್ಮ ರೈತರು ಅಭಿವೃದ್ಧಿ ಹೊಂದಲು ನೆರವಾಗಬಹುದು.
ಗೌರವಾನ್ವಿತ ಸದಸ್ಯರೇ,
ಭಾರತದಲ್ಲಿ, ನಾವು ಅತ್ಯಂತ ಬಲಿಷ್ಠವಾದ 'ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ'ವನ್ನು (Digital Public Infrastructure) ನಿರ್ಮಿಸಿದ್ದೇವೆ. ಇದು ನಾವು ಸೇವೆಗಳನ್ನು ಒದಗಿಸುವ ವಿಧಾನ ಮತ್ತು ಜನರು ಅವುಗಳನ್ನು ಪಡೆಯುವ ಕ್ರಮದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಇಂದು ಭಾರತದ ಪ್ರತಿಯೊಬ್ಬ ಪ್ರಜೆಯೂ ಪಾವತಿಗಳಿಗಾಗಿ, ಗುರುತಿಗಾಗಿ ಮತ್ತು ಸರ್ಕಾರಿ ಸೇವೆಗಳಿಗಾಗಿ ತಂತ್ರಜ್ಞಾನವನ್ನು ಸುಲಭವಾಗಿ ಬಳಸಬಹುದಾಗಿದೆ. ವಿಶ್ವದ ಒಟ್ಟು ರಿಯಲ್ -ಟೈಮ್ ಡಿಜಿಟಲ್ ಪಾವತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಈಗ ಭಾರತದಲ್ಲೇ ನಡೆಯುತ್ತಿವೆ ಎನ್ನುವುದು ಹೆಮ್ಮೆಯ ಸಂಗತಿ.
ಸುಮಾರು 500 ಶತಕೋಟಿ ಡಾಲರ್ ಗೂ ಅಧಿಕ ಮೌಲ್ಯದ ಕಲ್ಯಾಣ ಯೋಜನೆಗಳ ಹಣವು ಯಾವುದೇ ಸೋರಿಕೆ ಅಥವಾ ಭ್ರಷ್ಟಾಚಾರವಿಲ್ಲದೆ ಕೋಟ್ಯಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲುಪಿದೆ. ಪ್ರತಿ ವರ್ಷ ಮೂರು ಬಾರಿ, ಸುಮಾರು 10 ಕೋಟಿ ರೈತರು ಕೇವಲ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ನೇರವಾಗಿ ತಮ್ಮ ಖಾತೆಗೆ ಆರ್ಥಿಕ ನೆರವನ್ನು ಪಡೆಯುತ್ತಿದ್ದಾರೆ.
ನೀವು 'ಡಿಜಿಟಲ್ ಇಥಿಯೋಪಿಯಾ 2025' ಕಾರ್ಯತಂತ್ರವನ್ನು ಜಾರಿಗೆ ತರುತ್ತಿರುವ ಈ ಸಂದರ್ಭದಲ್ಲಿ, ನಮ್ಮ ತಾಂತ್ರಿಕ ಪರಿಣತಿ ಮತ್ತು ಅನುಭವವನ್ನು ಇಥಿಯೋಪಿಯಾದೊಂದಿಗೆ ಹಂಚಿಕೊಳ್ಳಲು ನಾವು ಸಂಪೂರ್ಣ ಸಿದ್ಧರಿದ್ದೇವೆ. ನಿಮ್ಮ ವಿದೇಶಾಂಗ ಸಚಿವಾಲಯದ ಡೇಟಾ ಸೆಂಟರ್ ಅಭಿವೃದ್ಧಿಪಡಿಸಲು ಭಾರತವನ್ನು ವಿಶ್ವಾಸಾರ್ಹ ಪಾಲುದಾರನನ್ನಾಗಿ ನೀವು ಆಯ್ಕೆ ಮಾಡಿರುವುದು ನಮಗೆ ಸಂದ ದೊಡ್ಡ ಗೌರವವಾಗಿದೆ.
ಗೌರವಾನ್ವಿತ ಸದಸ್ಯರೇ,
ಭಾರತವು ವಿಶ್ವದ ಔಷಧಾಲಯ ಎಂದು ಪ್ರಸಿದ್ಧವಾಗಿದೆ.ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಇಡೀ ಜಗತ್ತೇ ಆತಂಕಕ್ಕೊಳಗಾಗಿತ್ತು. ಅದು ಅತ್ಯಂತ ಕಠಿಣ ಸಮಯವಾಗಿತ್ತು. ನಮ್ಮಲ್ಲಿ ಸಂಪನ್ಮೂಲಗಳು ಸೀಮಿತವಾಗಿದ್ದರೂ ಸಹ, ಇತರರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡುವುದು ಮಾನವೀಯತೆಯ ದೃಷ್ಟಿಯಿಂದ ನಮ್ಮ ಪವಿತ್ರ ಕರ್ತವ್ಯ ಎಂದು ನಾವು ಭಾವಿಸಿದೆವು.
ಭಾರತವು 150ಕ್ಕೂ ಹೆಚ್ಚು ದೇಶಗಳಿಗೆ ಔಷಧಿ ಮತ್ತು ಲಸಿಕೆಗಳನ್ನು ರವಾನಿಸಿದೆ. ಇಥಿಯೋಪಿಯಾಕ್ಕೆ 40 ಲಕ್ಷಕ್ಕೂ ಹೆಚ್ಚು ಲಸಿಕಾ ಡೋಸ್ ಗಳನ್ನು ಪೂರೈಸುವುದು ಭಾರತಕ್ಕೆ ಸಂದ ಹೆಮ್ಮೆಯ ಗೌರವವಾಗಿದೆ. ಅದರಲ್ಲೂ ಇಥಿಯೋಪಿಯಾದ ಹೆಮ್ಮೆಯ ಪುತ್ರ ಹಾಗೂ ಭಾರತದಲ್ಲಿ 'ತುಳಸಿ ಭಾಯಿ' ಎಂದೇ ಚಿರಪರಿಚಿತರಾಗಿರುವ ಡಾ. ಟೆಡ್ರೊಸ್ ಅವರ ನೇತೃತ್ವದ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ (W.H.O) ಸಹಕರಿಸಿ ಈ ಕಾರ್ಯವನ್ನು ಮಾಡಿದ್ದು ನಮ್ಮ ಸೌಭಾಗ್ಯ.
ಔಷಧ ವಲಯದಿಂದ ಹಿಡಿದು ಆಸ್ಪತ್ರೆಗಳವರೆಗೆ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಿಂದ ಹಿಡಿದು ಟೆಲಿ-ಮೆಡಿಸಿನ್ವರೆಗೆ ನಮ್ಮ ಆರೋಗ್ಯ ರಕ್ಷಣಾ ಸಹಕಾರವು ವಿಸ್ತರಿಸುತ್ತಿರುವುದು ನನಗೆ ಸಂತೋಷ ತಂದಿದೆ. ಆಸ್ಪತ್ರೆಗಳಿಗೆ ಹೊಸ ಉಪಕರಣಗಳನ್ನು ಒದಗಿಸುವುದರಿಂದ ಹಿಡಿದು ಆರೋಗ್ಯ ರಕ್ಷಣಾ ವೃತ್ತಿಪರರ ಸಾಮರ್ಥ್ಯ ವೃದ್ಧಿಯವರೆಗೆ, ನಮ್ಮ ಆರೋಗ್ಯ ಸುರಕ್ಷತಾ ಸಹಕಾರವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ.
ಗೌರವಾನ್ವಿತ ಸದಸ್ಯರೇ,
ಇಥಿಯೋಪಿಯಾ ಆಫ್ರಿಕಾದ ಆಯಕಟ್ಟಿನ ಕೂಡುದಾರಿಯಲ್ಲಿದ್ದರೆ, ಭಾರತವು ಹಿಂದೂ ಮಹಾಸಾಗರದ ಹೃದಯಭಾಗದಲ್ಲಿದೆ. ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸಂಪರ್ಕವನ್ನು ವೃದ್ಧಿಸುವಲ್ಲಿ ನಾವಿಬ್ಬರೂ ಸಹಜ ಪಾಲುದಾರರು.
ಈ ವರ್ಷದ ಆರಂಭದಲ್ಲಿ 'ರಕ್ಷಣಾ ಸಹಕಾರ ಒಪ್ಪಂದ'ಕ್ಕೆ ಸಹಿ ಹಾಕುವ ಮೂಲಕ ಪರಸ್ಪರ ಭದ್ರತೆಯ ಕುರಿತಾದ ನಮ್ಮ ಬದ್ಧತೆಯು ಮತ್ತಷ್ಟು ಗಟ್ಟಿಯಾಗಿದೆ. ಈ ಒಪ್ಪಂದವು ನಿಕಟ ಮಿಲಿಟರಿ ಸಹಕಾರದ ಮೇಲೆ ಕೇಂದ್ರೀಕರಿಸುತ್ತದೆ. ಇದು ಸೈಬರ್ ಭದ್ರತೆ, ರಕ್ಷಣಾ ಉದ್ಯಮಗಳು, ಜಂಟಿ ಸಂಶೋಧನೆ ಮತ್ತು ಸಾಮರ್ಥ್ಯ ವರ್ಧನೆಯಲ್ಲಿನ ಸಹಯೋಗವನ್ನು ಒಳಗೊಂಡಿದೆ.
ಕಳೆದ ಏಪ್ರಿಲ್ ನಲ್ಲಿ ಭಾರತದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಇಥಿಯೋಪಿಯಾ ತೋರಿದ ಬೆಂಬಲಕ್ಕಾಗಿ ನಾನು ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಸರ್ವಪಕ್ಷ ಸಂಸದೀಯ ನಿಯೋಗವನ್ನು ಅತಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಕ್ಕಾಗಿ ಮತ್ತು ಭಯೋತ್ಪಾದನೆಯ ವಿರುದ್ಧ 'ಶೂನ್ಯ ಸಹಿಷ್ಣುತೆ' (Zero Tolerance) ಎಂಬ ಬದ್ಧತೆಯನ್ನು ಪುನರುಚ್ಚರಿಸಿದ್ದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ.
ಗೌರವಾನ್ವಿತ ಸದಸ್ಯರೇ,
ಉತ್ಸಾಹಭರಿತ ಮತ್ತು ವೈವಿಧ್ಯಮಯ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಪ್ರಜಾಪ್ರಭುತ್ವವು ಒಂದು ಜೀವನ ವಿಧಾನ ಮತ್ತು ಅದು ನಿರಂತರವಾಗಿ ಸಾಗುವ ಒಂದು ಪಯಣ ಎಂಬುದನ್ನು ನಾವಿಬ್ಬರೂ ಅರ್ಥಮಾಡಿಕೊಂಡಿದ್ದೇವೆ. ಈ ಪಯಣವು ಕೆಲವೊಮ್ಮೆ ಚರ್ಚೆಗಳ ಮೂಲಕ, ಇನ್ನು ಕೆಲವೊಮ್ಮೆ ಭಿನ್ನಾಭಿಪ್ರಾಯಗಳ ಮೂಲಕ ರೂಪಿತವಾಗುತ್ತದೆ; ಆದರೆ ಇದು ಯಾವಾಗಲೂ ಕಾನೂನಿನ ಆಳ್ವಿಕೆ ಮತ್ತು ಜನರ ಇಚ್ಛಾಶಕ್ತಿಯ ಮೇಲಿನ ಅಚಲ ನಂಬಿಕೆಯಿಂದಲೇ ಮುನ್ನಡೆಯುತ್ತದೆ.
ನಮ್ಮ ಎರಡೂ ದೇಶಗಳ ಸಂವಿಧಾನಗಳು ಇದೇ ಆಶಯವನ್ನು ಪ್ರತಿಬಿಂಬಿಸುತ್ತವೆ. ಭಾರತದ ಸಂವಿಧಾನವು "ಭಾರತದ ಪ್ರಜೆಗಳಾದ ನಾವು" ಎಂಬ ಪದಗಳೊಂದಿಗೆ ಪ್ರಾರಂಭವಾಗುತ್ತದೆ. ಇಥಿಯೋಪಿಯಾದ ಸಂವಿಧಾನವು "ಇಥಿಯೋಪಿಯಾದ ರಾಷ್ಟ್ರಗಳು, ರಾಷ್ಟ್ರೀಯತೆಗಳು ಮತ್ತು ಪ್ರಜೆಗಳಾದ ನಾವು" ಎಂಬ ಸಾಲುಗಳೊಂದಿಗೆ ಆರಂಭವಾಗುತ್ತದೆ. ಇವೆರಡರ ಸಂದೇಶವೂ ಒಂದೇ: ನಮ್ಮ ಭವಿಷ್ಯವು ನಮ್ಮ ಕೈಯಲ್ಲಿದೆ.
ಇಂದು ಬೆಳಿಗ್ಗೆ ನಾನು 'ಅಡ್ವಾ ವಿಜಯ ಸ್ಮಾರಕ'ಕ್ಕೆ (Adwa Victory Monument) ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸುವ ಸೌಭಾಗ್ಯ ಪಡೆದೆ. ಇಥಿಯೋಪಿಯಾದ ವಿಜಯವು, ವಸಾಹತುಶಾಹಿಗೆ ಒಳಗಾಗಿದ್ದ ಇಡೀ ಜಗತ್ತಿಗೆ ತನ್ನ ಘನತೆ ಮತ್ತು ಸ್ವಾತಂತ್ರ್ಯದ ಹೋರಾಟದಲ್ಲಿ ಹೇಗೆ ಸ್ಫೂರ್ತಿಯಾಯಿತು ಎಂಬುದಕ್ಕೆ ಈ ಸ್ಮಾರಕವು ಒಂದು ಸಾರ್ವಕಾಲಿಕ ಸಾಕ್ಷಿಯಾಗಿದೆ. ಸಂಘರ್ಷ ಮತ್ತು ಅನಿಶ್ಚಿತತೆಯ ಈ ಕಾಲದಲ್ಲಿ, 'ಗ್ಲೋಬಲ್ ಸೌತ್'ನ ಜನರು ತಮಗಾಗಿ ತಾವು ಸ್ವಾವಲಂಬಿಯಾಗಿ ನಿಲ್ಲಬಲ್ಲರು ಎಂಬುದಕ್ಕೆ ಇದು ಒಂದು ದೊಡ್ಡ ನೆನಪಾಗಿದೆ.
ಗೌರವಾನ್ವಿತ ಸದಸ್ಯರೇ,
ಮಹಾತ್ಮ ಗಾಂಧೀಜಿಯವರು ನಮಗೆ 'ಟ್ರಸ್ಟೀಶಿಪ್' (ಧರ್ಮದರ್ಶಿತ್ವ) ಎಂಬ ಪರಿಕಲ್ಪನೆಯನ್ನು ನೀಡಿದ್ದಾರೆ. ಈ ಸುಂದರ ಗ್ರಹ ಮತ್ತು ಇಲ್ಲಿನ ಸಂಪನ್ಮೂಲಗಳು ನಮ್ಮ ಸ್ವತ್ತಲ್ಲ; ಬದಲಿಗೆ, ನಾವು ಇವುಗಳ ರಕ್ಷಣೆ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸಬೇಕಾದ ಧರ್ಮದರ್ಶಿಗಳಾಗಿದ್ದೇವೆ. ಭಾರತದ "ಏಕ್ ಪೇಡ್ ಮಾ ಕೆ ನಾಮ್" (ತಾಯಿಯ ಹೆಸರಲ್ಲಿ ಒಂದು ಮರ) ಅಭಿಯಾನವನ್ನು ಮುನ್ನಡೆಸುತ್ತಿರುವ ಇದೇ ಧರ್ಮದರ್ಶಿತ್ವದ ಭಾವನೆಯು, ಇಥಿಯೋಪಿಯಾದ 'ಗ್ರೀನ್ ಲೆಗಸಿ ಇನಿಶಿಯೇಟಿವ್' (ಹಸಿರು ಪರಂಪರೆ ಯೋಜನೆ) ನಲ್ಲೂ ಪ್ರತಿಫಲಿಸುತ್ತದೆ.
ನಮ್ಮ ಎರಡೂ ರಾಷ್ಟ್ರಗಳು ಭೂಮಿತಾಯಿಯ ಆರೈಕೆಯಲ್ಲಿ ನಂಬಿಕೆ ಇಟ್ಟಿವೆ ಮತ್ತು ನಿಸರ್ಗಕ್ಕೆ ನಾವು ಮರಳಿಸಬೇಕು ಎನ್ನುವುದನ್ನು ಬಲವಾಗಿ ನಂಬುತ್ತವೆ. ನಾವೆಲ್ಲರೂ ಒಟ್ಟಾಗಿ ನವೀಕರಿಸಬಹುದಾದ ಇಂಧನ ಮತ್ತು 'ಗ್ರೀನ್ ಜಾಬ್ಸ್' (ಪರಿಸರ ಸ್ನೇಹಿ ಉದ್ಯೋಗಗಳು) ಕ್ಷೇತ್ರದಲ್ಲಿ ಕೆಲಸ ಮಾಡೋಣ. ವಿಪತ್ತುಗಳನ್ನು ಎದುರಿಸಬಲ್ಲ ಮೂಲಸೌಕರ್ಯ ಮತ್ತು ಜೈವಿಕ ಇಂಧನಗಳ ಅಭಿವೃದ್ಧಿಗೆ ಕೈಜೋಡಿಸೋಣ. ಅಷ್ಟೇ ಅಲ್ಲದೆ, 'ಪರಿಸರ ನ್ಯಾಯ'ಕ್ಕಾಗಿ (Climate Justice) ಜಗತ್ತಿನಾದ್ಯಂತ ಬಲವಾದ ಧ್ವನಿ ಎತ್ತೋಣ. 2027ರ ಸಿಒಪಿ-32 (COP-32) ಸಮಾವೇಶದಲ್ಲಿ 'ಗ್ಲೋಬಲ್ ಸೌತ್'ಗೆ ಪ್ರಬಲ ಧ್ವನಿ ನೀಡುವ ಇಥಿಯೋಪಿಯಾದ ಪ್ರಯತ್ನಗಳನ್ನು ಬೆಂಬಲಿಸಲು ಭಾರತವು ಸಂತೋಷಪಡುತ್ತದೆ.
ಗೌರವಾನ್ವಿತ ಸದಸ್ಯರೇ,
ಇಥಿಯೋಪಿಯಾದಲ್ಲಿ ಒಂದು ಸುಂದರವಾದ ಗಾದೆ ಮಾತಿದೆ ಎಂದು ನನಗೆ ತಿಳಿಯಿತು: "ಜೇಡರ ಬಲೆಗಳು ಒಂದಾದರೆ ಸಿಂಹವನ್ನೇ ಕಟ್ಟಿಹಾಕಬಲ್ಲವು". ಭಾರತದಲ್ಲಿಯೂ ನಾವಿದನ್ನೇ ನಂಬುತ್ತೇವೆ - 'ಮನಸ್ಸುಗಳು ಒಂದಾದರೆ ಪರ್ವತಗಳೂ ದಾರಿ ಮಾಡಿಕೊಡುತ್ತವೆ' (ಮನ್ ಮಿಲೇ ತೋ ಪರ್ವತ್ ಭೀ ರಾಸ್ತಾ ದೇ ದೇತೇ ಹೈ).
ನಿಜಕ್ಕೂ, ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಸಹಕಾರವೇ ಶಕ್ತಿ. ಇಂದು ಗ್ಲೋಬಲ್ ಸೌತ್ ರಾಷ್ಟ್ರಗಳಾಗಿ, ಪುರಾತನ ನಾಗರಿಕತೆಗಳಾಗಿ ಮತ್ತು ಆತ್ಮೀಯ ಮಿತ್ರರಾಗಿ ಭಾರತ ಮತ್ತು ಇಥಿಯೋಪಿಯಾ ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ. ನಾವು ಒಂದೇ ಕುಟುಂಬದ ಸದಸ್ಯರಂತೆ ಒಟ್ಟಾಗಿ ನಿಂತಿದ್ದೇವೆ. ಹೆಚ್ಚು ನ್ಯಾಯಯುತವಾದ, ಸಮಾನವಾದ ಮತ್ತು ಶಾಂತಿಯುತವಾದ ಜಗತ್ತಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ.
ಆಫ್ರಿಕನ್ ಒಕ್ಕೂಟದ ಕನಸುಗಳು ನೆಲೆ ಕಂಡುಕೊಂಡಿದ್ದೇ ಈ ಆಡಿಸ್ ಅಬಾಬಾದಲ್ಲಿ. ಈ ಅದ್ಭುತ ನಗರದ ಅನೇಕ ರಸ್ತೆಗಳಿಗೆ ಆಫ್ರಿಕಾದ ವಿವಿಧ ದೇಶಗಳ ಹೆಸರನ್ನೇ ಇಡಲಾಗಿದೆ ಎಂದು ಕೇಳಿ ನನಗೆ ಸಂತೋಷವಾಯಿತು!
ಹಿಂದೂ ಮಹಾಸಾಗರದ ಇನ್ನೊಂದು ಬದಿಯಲ್ಲಿರುವ ನವದೆಹಲಿಯಲ್ಲಿ, ಆಫ್ರಿಕನ್ ಒಕ್ಕೂಟವನ್ನು ಜಿ-20ಯ (G20) ಕಾಯಂ ಸದಸ್ಯನಾಗಿ ಸ್ವಾಗತಿಸುವ ಗೌರವ ಭಾರತಕ್ಕೆ ಲಭಿಸಿತು. ಕಳೆದ ವರ್ಷ ಇಥಿಯೋಪಿಯಾ ಬ್ರಿಕ್ಸ್ನ (BRICS) ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಗುವ ಮೂಲಕ ನಾವು ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದೇವೆ.
ವಾಸ್ತವವಾಗಿ, ನನ್ನ ಸರ್ಕಾರದ ಕಳೆದ 11 ವರ್ಷಗಳಲ್ಲಿ ಭಾರತ ಮತ್ತು ಆಫ್ರಿಕಾ ನಡುವಿನ ಬಾಂಧವ್ಯವು ಹಲವು ಪಟ್ಟು ವೃದ್ಧಿಸಿದೆ. ಈ ಅವಧಿಯಲ್ಲಿ ರಾಷ್ಟ್ರದ ಮುಖ್ಯಸ್ಥರ ಮತ್ತು ಸರ್ಕಾರದ ಮಟ್ಟದಲ್ಲಿ ನಾವು 100ಕ್ಕೂ ಹೆಚ್ಚು ಭೇಟಿಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ.
ಗೌರವಾನ್ವಿತ ಸದಸ್ಯರೇ,
'ಗ್ಲೋಬಲ್ ಸೌತ್' ಇಂದು ತನ್ನ ಸ್ವಂತ ಭವಿಷ್ಯವನ್ನು ತಾನೇ ರೂಪಿಸುತ್ತಿದೆ. ಭಾರತ ಮತ್ತು ಇಥಿಯೋಪಿಯಾ ಈ ಬಗ್ಗೆ ಒಂದೇ ರೀತಿಯ ದೂರದೃಷ್ಟಿಯನ್ನು ಹೊಂದಿವೆ. ಗ್ಲೋಬಲ್ ಸೌತ್ ಯಾರೊಬ್ಬರ ವಿರುದ್ಧವಾಗಿಯೂ ಅಲ್ಲದೆ, ಬದಲಿಗೆ ಸರ್ವರ ಏಳಿಗೆಗಾಗಿ ಪುಟಿದೇಳುವಂತಹ ಜಗತ್ತು ನಮ್ಮ ಕನಸಾಗಿದೆ.
ಅಭಿವೃದ್ಧಿಯು ನ್ಯಾಯಯುತವಾಗಿರುವ, ತಂತ್ರಜ್ಞಾನವು ಎಲ್ಲರಿಗೂ ಸುಲಭವಾಗಿ ಲಭ್ಯವಿರುವ ಮತ್ತು ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಗೌರವವಿರುವ ಜಗತ್ತು ನಮಗೆ ಬೇಕು. ಸಮೃದ್ಧಿಯನ್ನು ಎಲ್ಲರೂ ಹಂಚಿಕೊಳ್ಳುವ ಮತ್ತು ಶಾಂತಿಯನ್ನು ರಕ್ಷಿಸುವ ಜಗತ್ತು ನಮ್ಮದಾಗಬೇಕು. ಅಷ್ಟೇ ಅಲ್ಲದೆ, ಜಾಗತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಯು 1945ರ ಕಾಲಘಟ್ಟವನ್ನಲ್ಲದೆ, ಇಂದಿನ ವಾಸ್ತವವನ್ನು ಪ್ರತಿಬಿಂಬಿಸುವಂತಿರಬೇಕು. ಏಕೆಂದರೆ, ಹಳೆಯ ವ್ಯವಸ್ಥೆಗಳಲ್ಲೇ ಸಿಲುಕಿಕೊಂಡಿದ್ದರೆ ಜಗತ್ತು ಮುಂದೆ ಸಾಗಲು ಸಾಧ್ಯವಿಲ್ಲ.
ಆದ್ದರಿಂದಲೇ, ಭಾರತವು 'ಜಾಗತಿಕ ಅಭಿವೃದ್ಧಿ ಒಪ್ಪಂದ'ಕ್ಕೆ (Global Development Compact) ಒತ್ತು ನೀಡಿದೆ. ಇದು ತಂತ್ರಜ್ಞಾನ ಹಂಚಿಕೆ, ಕೈಗೆಟುಕುವ ದರದ ಹಣಕಾಸು ನೆರವು, ಸಾಮರ್ಥ್ಯ ವೃದ್ಧಿ ಮತ್ತು ಸುಸ್ಥಿರ ಬೆಳವಣಿಗೆಗಾಗಿ ವ್ಯಾಪಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಇದೇ ಕಾರಣಕ್ಕೆ, ಕಳೆದ ನವೆಂಬರ್ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ, ಹತ್ತು ಲಕ್ಷ ತರಬೇತುದಾರರಿಗೆ ತರಬೇತಿ ನೀಡುವ ಸಲುವಾಗಿ ನಾನು "ಆಫ್ರಿಕಾ ಸ್ಕಿಲ್ಸ್ ಮಲ್ಟಿಪ್ಲೈಯರ್ ಇನಿಶಿಯೇಟಿವ್" (Africa Skills Multiplier Initiative) ಗೆ ಕರೆ ನೀಡಿದ್ದೇನೆ. ಇದು ಸ್ಥಳೀಯವಾಗಿ ಸಾಮರ್ಥ್ಯಗಳನ್ನು ವೃದ್ಧಿಸಲು ಮತ್ತು ಅಂತರ್ಗತ ಹಾಗೂ ಸುಸ್ಥಿರ ಅಭಿವೃದ್ಧಿಯತ್ತ ನಿಮ್ಮ ಪ್ರಯತ್ನಗಳಿಗೆ ಪೂರಕವಾಗಿರಲಿದೆ.
ಗೌರವಾನ್ವಿತ ಸದಸ್ಯರೇ,
ಚಹಾದೊಂದಿಗೆ ನನಗಿರುವ ವೈಯಕ್ತಿಕ ನಂಟು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ, ಇಥಿಯೋಪಿಯಾಕ್ಕೆ ಬಂದು ಇಲ್ಲಿನ ಕಾಫಿಯ ಬಗ್ಗೆ ಪ್ರಸ್ತಾಪಿಸದಿದ್ದರೆ ಅದು ಅಪೂರ್ಣವೆನಿಸುತ್ತದೆ! ಕಾಫಿಯು ನೀವು ಈ ಜಗತ್ತಿಗೆ ನೀಡಿರುವ ಶ್ರೇಷ್ಠ ಕೊಡುಗೆಗಳಲ್ಲಿ ಒಂದಾಗಿದೆ.
ಇಥಿಯೋಪಿಯಾದ ಕಾಫಿ ಸಮಾರಂಭದಲ್ಲಿ, ಜನರು ಒಟ್ಟಾಗಿ ಕುಳಿತುಕೊಳ್ಳುತ್ತಾರೆ, ಸಮಯವೇ ನಿಂತಂತಾಗಿ ಸ್ನೇಹವು ಮತ್ತಷ್ಟು ಗಾಢವಾಗುತ್ತದೆ. ಭಾರತದಲ್ಲೂ ಸಹ, ಒಂದು ಕಪ್ ಚಹಾ ಎಂದರೆ ಅದು ಮಾತುಕತೆ, ವಿಚಾರ ವಿನಿಮಯ ಮತ್ತು ಸಂಬಂಧ ಬೆಸೆಯಲು ನೀಡುವ ಆಹ್ವಾನವಿದ್ದಂತೆ. ಇಥಿಯೋಪಿಯಾದ ಕಾಫಿ ಮತ್ತು ಭಾರತದ ಚಹಾದಂತೆಯೇ, ನಮ್ಮ ಬಾಂಧವ್ಯವೂ ಸಹ ಇಂದು ಮತ್ತಷ್ಟು ಮಾಗಿ ಗಟ್ಟಿಯಾಗುತ್ತಿದೆ!
ಇಂದು ನಾನು ಸಹೋದರ ಸಹೋದರಿಯರಂತಿರುವ ನಿಮ್ಮೆಲ್ಲರ ನಡುವೆ, ಕೃತಜ್ಞತೆಯ ಭಾವದೊಂದಿಗೆ ಮತ್ತು ಭವಿಷ್ಯದ ಬಗ್ಗೆ ಉಜ್ವಲ ಭರವಸೆಗಳೊಂದಿಗೆ ನಿಂತಿದ್ದೇನೆ. ಭವಿಷ್ಯವು ನಮಗೆ ಕರೆ ನೀಡುತ್ತಿದೆ; ಭಾರತ ಮತ್ತು ಇಥಿಯೋಪಿಯಾ ಆ ಕರೆಗೆ ಓಗೊಡಲು ಸನ್ನದ್ಧವಾಗಿವೆ.
ಗೌರವಾನ್ವಿತ ಸದಸ್ಯರೇ,
ಮಾತು ಮುಗಿಸುವ ಮುನ್ನ, ನಾನು ನಿಮಗೆ ಮಾತು ನೀಡುತ್ತಿದ್ದೇನೆ: ನಾವು ಸಮಾನರಾಗಿ ಜೊತೆಯಲ್ಲಿ ಹೆಜ್ಜೆ ಹಾಕುತ್ತೇವೆ. ಪಾಲುದಾರರಾಗಿ ನವಭವಿಷ್ಯವನ್ನು ಒಟ್ಟಾಗಿ ನಿರ್ಮಿಸುತ್ತೇವೆ. ಮತ್ತು ಮಿತ್ರರಾಗಿ ನಾವೆಲ್ಲರೂ ಒಟ್ಟಾಗಿ ಯಶಸ್ಸು ಸಾಧಿಸುತ್ತೇವೆ.
ಈ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಗೌರವ ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಿಮ್ಮ ಸ್ನೇಹಕ್ಕಾಗಿ ಮತ್ತು ನಿಮ್ಮ ವಿಶ್ವಾಸಕ್ಕಾಗಿ ಕೃತಜ್ಞತೆಗಳು.
ತಬ್ಬಾರಕು
ದೇನಾ ಹುನ್ನು
ಆಮ್ ಸಗ್ನಾಲೋ
ಧನ್ಯವಾದಗಳು.
*****
(रिलीज़ आईडी: 2205829)
आगंतुक पटल : 7
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Bengali-TR
,
Manipuri
,
Punjabi
,
Gujarati
,
Odia
,
Telugu
,
Malayalam