ಪ್ರಧಾನ ಮಂತ್ರಿಯವರ ಕಛೇರಿ
ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆʼಯ 20 ವರ್ಷಗಳ ಆಚರಣೆಯಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ
प्रविष्टि तिथि:
27 SEP 2023 3:27PM by PIB Bengaluru
ವೇದಿಕೆಯ ಮೇಲೆ ಉಪಸ್ಥಿತರಿರುವ ಗುಜರಾತ್‌ನ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಅವರಿಗೆ, ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಸಿ.ಆರ್. ಪಾಟೀಲ್, ಗುಜರಾತ್ ಸರ್ಕಾರದ ಸಚಿವರು, ಕೈಗಾರಿಕಾ ವಲಯದ ಎಲ್ಲ ಗಣ್ಯ ಸ್ನೇಹಿತರು, ಇತರ ಗಣ್ಯರು ಮತ್ತು ಇಲ್ಲಿ ನೆರೆದಿರುವ ನನ್ನ ಎಲ್ಲ ಕುಟುಂಬ ಸದಸ್ಯರಿಗೆ ನಮಸ್ಕಾರ. 20 ವರ್ಷಗಳ ಹಿಂದೆ ನಾವು ಒಂದು ಸಣ್ಣ ಬೀಜವನ್ನು ನೆಟ್ಟೆವು. ಇಂದು ಅದು ಇಂತಹ ಬೃಹತ್ ಮತ್ತು ವಿಶಾಲವಾದ ಆಲದ ಮರವಾಗಿ ಬೆಳೆದಿದೆ. ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ’ಯು 20 ವರ್ಷಗಳನ್ನು ಪೂರ್ಣಗೊಳಿಸಿದ ಈ ಸಂದರ್ಭದಲ್ಲಿ ಇಂದು ನಿಮ್ಮೆಲ್ಲರ ನಡುವೆ ಇರುವುದು ನನಗೆ ತುಂಬಾ ಸಂತೋಷ ತಂದಿದೆ. ವರ್ಷಗಳ ಹಿಂದೆ ನಾನು ಒಮ್ಮೆ ಹೇಳಿದ್ದೆ - ವೈಬ್ರಂಟ್ ಗುಜರಾತ್ ಕೇವಲ ಬ್ರ್ಯಾಂಡಿಂಗ್ ಕಾರ್ಯಕ್ರಮವಲ್ಲ, ಆದರೆ ಅದಕ್ಕಿಂತ ಮುಖ್ಯವಾಗಿ ಇದು ಬಂಧದ ಕಾರ್ಯಕ್ರಮವಾಗಿದೆ. ಈ ಯಶಸ್ವಿ ಶೃಂಗಸಭೆ ಜಗತ್ತಿಗೆ ಒಂದು ಬ್ರ್ಯಾಂಡ್ ಆಗಿರಬಹುದು, ಆದರೆ ನನಗೆ ಇದು ಬಲವಾದ ಬಂಧದ ಸಂಕೇತವಾಗಿದೆ. ಇದು ನನಗೂ ಮತ್ತು ಗುಜರಾತ್‌ನ 7 ಕೋಟಿ ನಾಗರಿಕರಿಗೂ ಹಾಗೂ ಅವರ ಸಾಮರ್ಥ್ಯಗಳಿಗೂ ಇರುವ ಬಂಧವಾಗಿದೆ. ಇದು ಅವರ ಅಪಾರ ಪ್ರೀತಿಯ ಮೇಲೆ ಆಧಾರಿತವಾದ ಬಂಧವಾಗಿದೆ.
ಸ್ನೇಹಿತರೇ,
ಇಂದು ನನಗೆ ಸ್ವಾಮಿ ವಿವೇಕಾನಂದ ಅವರು ಮಾತುಗಳು ನೆನಪಾಗುತ್ತಿವೆ. ಪ್ರತಿ ಕೆಲಸವು ಮೂರು ಹಂತಗಳ ಮೂಲಕ ಸಾಗಬೇಕು ಎಂದು ಸ್ವಾಮಿ ವಿವೇಕಾನಂದ ಅವರು ಹೇಳಿದ್ದರು. ಮೊದಲು, ಜನರು ಅದನ್ನು ಗೇಲಿ ಮಾಡುತ್ತಾರೆ, ನಂತರ ವಿರೋಧಿಸುತ್ತಾರೆ ಮತ್ತು ನಂತರ ಒಪ್ಪಿಕೊಳ್ಳುತ್ತಾರೆ, ವಿಶೇಷವಾಗಿ ಆ ಕಲ್ಪನೆಯು ತನ್ನ ಸಮಯಕ್ಕಿಂತ ಮುಂದಿದ್ದಾಗ. 20 ವರ್ಷಗಳು ಒಂದು ಸುದೀರ್ಘ ಅವಧಿ. 2001ರಲ್ಲಿ ಸಂಭವಿಸಿದ ಭಾರಿ ಭೂಕಂಪದ ನಂತರ ಗುಜರಾತ್‌ನ ಪರಿಸ್ಥಿತಿ ಹೇಗಿತ್ತು ಎಂಬುದು ಇಂದಿನ ಪೀಳಿಗೆಯ ಯುವಕರಿಗೆ ತಿಳಿದಿರುವುದಿಲ್ಲ. ಭೂಕಂಪದ ಮೊದಲು, ಗುಜರಾತ್ ಬಹಳ ಕಾಲದಿಂದ ತೀವ್ರ ಬರಗಾಲವನ್ನು ಎದುರಿಸುತ್ತಿತ್ತು. ನಂತರ ಬಂದ ಭೂಕಂಪದಲ್ಲಿ ಸಾವಿರಾರು ಜನರು ಮೃತಪಟ್ಟರು. ಲಕ್ಷಾಂತರ ಜನರು ಇದರಿಂದ ಬಾಧಿತರಾಗಿ ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಬರ ಮತ್ತು ಭೂಕಂಪದ ಜೊತೆಗೆ, ಅದೇ ಸಮಯದಲ್ಲಿ ಗುಜರಾತ್‌ನಲ್ಲಿ ಇನ್ನೊಂದು ಪ್ರಮುಖ ಘಟನೆ ನಡೆದಿತ್ತು. ಮಾಧವಪುರ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್ ಕುಸಿದಿತ್ತು, ಇದರಿಂದಾಗಿ 133 ಇತರ ಸಹಕಾರಿ ಬ್ಯಾಂಕ್‌ಗಳು ಸಹ ಪ್ರಭಾವಿತಗೊಂಡವು. ಇಡೀ ಗುಜರಾತ್‌ನ ಆರ್ಥಿಕ ಜೀವನದಲ್ಲಿ ಗೊಂದಲವಿತ್ತು. ಒಂದು ರೀತಿಯಲ್ಲಿ, ಗುಜರಾತ್‌ನ ಹಣಕಾಸು ವಲಯವು ಬಿಕ್ಕಟ್ಟಿನಲ್ಲಿತ್ತು. ಆ ಸಮಯದಲ್ಲಿ, ನಾನು ಮೊದಲ ಬಾರಿಗೆ ಶಾಸಕನಾಗಿದ್ದೆ. ಆ ಪಾತ್ರವೂ ನನಗೆ ಹೊಸತು. ಸರ್ಕಾರ ನಡೆಸಿದ ಅನುಭವ ನನಗೆ ಇರಲಿಲ್ಲ. ಆದರೆ ಸವಾಲು ಅಗಾಧವಾಗಿತ್ತು. ಅಷ್ಟರಲ್ಲಿ ಇನ್ನೊಂದು ಘಟನೆ ನಡೆದಿತ್ತು. ಹೃದಯ ವಿದ್ರಾವಕವಾದ ಗೋಧ್ರಾ ಘಟನೆ ಸಂಭವಿಸಿತು ಮತ್ತು ಅದರ ನಂತರದ ಸಂದರ್ಭಗಳಲ್ಲಿ, ಗುಜರಾತ್ ಹಿಂಸಾಚಾರದ ಜ್ವಾಲೆಯಲ್ಲಿ ಸಿಲುಕಿತ್ತು. ಯಾರೂ ಅಂತಹ ಭೀಕರ ಪರಿಸ್ಥಿತಿಯನ್ನು ಊಹಿಸಿರಲಿಲ್ಲ. ಆ ಸಮಯದಲ್ಲಿ ನನಗೆ ಮುಖ್ಯಮಂತ್ರಿಯಾಗಿ ಹೆಚ್ಚು ಅನುಭವ ಇರದಿದ್ದರೂ, ನನ್ನಲ್ಲಿ ಗುಜರಾತ್ ಮತ್ತು ನನ್ನ ಗುಜರಾತ್‌ನ ಜನರ ಬಗ್ಗೆ ಅಚಲ ನಂಬಿಕೆ ಇತ್ತು. ಆದಾಗ್ಯೂ, ಕಾರ್ಯಸೂಚಿಯನ್ನು ಹೊತ್ತವರು ಆಗಲೂ ಘಟನೆಗಳನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸುವಲ್ಲಿ ನಿರತರಾಗಿದ್ದರು. ಗುಜರಾತ್‌ನ ಯುವಕರು, ಗುಜರಾತ್‌ನ ಕೈಗಾರಿಕೆಗಳು, ಗುಜರಾತ್‌ನ ವ್ಯಾಪಾರಿಗಳು ಎಲ್ಲರೂ ಹೊರಗೆ ಹೋಗುತ್ತಾರೆ, ವಲಸೆ ಹೋಗುತ್ತಾರೆ ಮತ್ತು ಗುಜರಾತ್ ಅಂತಹ ವಿನಾಶಕ್ಕೆ ಒಳಗಾಗುತ್ತದೆ, ಅದು ದೇಶಕ್ಕೆ ದೊಡ್ಡ ಹೊರೆಯಾಗುತ್ತದೆ ಎಂದು ಹೇಳಲಾಯಿತು. ಜಗತ್ತಿನ ಮುಂದೆ ಗುಜರಾತ್ ಹೆಸರನ್ನು ಹಾಳು ಮಾಡಲು ಪಿತೂರಿ ಮಾಡಲಾಯಿತು. ಹತಾಶೆಯ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಲಾಯಿತು. ಗುಜರಾತ್ ಎಂದಿಗೂ ಮೇಲೇಳಲು ಸಾಧ್ಯವಿಲ್ಲ ಎಂದು ಹೇಳಲಾಯಿತು. ಆ ಬಿಕ್ಕಟ್ಟಿನಲ್ಲೂ, ಪರಿಸ್ಥಿತಿ ಏನೇ ಇರಲಿ, ನಾನು ಗುಜರಾತ್ ಅನ್ನು ಅದರಿಂದ ಹೊರಗೆ ತರುತ್ತೇನೆ ಎಂದು ನಿರ್ಧರಿಸಿದೆ. ನಾವು ಗುಜರಾತ್‌ನ ಪುನರ್ನಿರ್ಮಾಣದ ಬಗ್ಗೆ ಮಾತ್ರವಲ್ಲದೆ ಅದರ ಭವಿಷ್ಯದ ಬಗ್ಗೆಯೂ ಯೋಚಿಸುತ್ತಿದ್ದೆವು. ಮತ್ತು ಅದಕ್ಕಾಗಿ ನಾವು ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯನ್ನು ಪ್ರಮುಖ ಮಾಧ್ಯಮವನ್ನಾಗಿ ಮಾಡಿದೆವು. ಇದು ಗುಜರಾತ್‌ನ ವಿಶ್ವಾಸವನ್ನು ಹೆಚ್ಚಿಸಲು ಮತ್ತು ಅದರ ಮೂಲಕ ಜಗತ್ತಿನೊಂದಿಗೆ ನೇರವಾಗಿ ಮಾತನಾಡಲು ಒಂದು ಮಾಧ್ಯಮವಾಯಿತು. ಇದು ಗುಜರಾತ್ ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಮತ್ತು ಕೇಂದ್ರೀಕೃತ ವಿಧಾನವನ್ನು ಇಡೀ ಜಗತ್ತಿಗೆ ಪ್ರದರ್ಶಿಸಲು ಒಂದು ಮಾಧ್ಯಮವಾಯಿತು. ಇದು ಜಗತ್ತಿನ ಮುಂದೆ ಗುಜರಾತ್ ಸೇರಿದಂತೆ ಭಾರತದ ಕೈಗಾರಿಕಾ ಸಾಮರ್ಥ್ಯವನ್ನು ಎತ್ತಿ ಹಿಡಿಯಲು ಒಂದು ಮಾಧ್ಯಮವಾಯಿತು. ಇದು ಭಾರತದಲ್ಲಿ ಇರುವ ವಿವಿಧ ವಲಯಗಳ ಅಪರಿಮಿತ ಸಾಧ್ಯತೆಗಳನ್ನು ತೋರಿಸಲು ಒಂದು ಮಾಧ್ಯಮವಾಯಿತು. ಇದು ದೇಶದೊಳಗೆ ಭಾರತದ ಪ್ರತಿಭೆಯನ್ನು ಬಳಸಿಕೊಳ್ಳಲು ಒಂದು ಮಾಧ್ಯಮವಾಯಿತು. ಇದು ಜಗತ್ತಿನ ಮುಂದೆ ಭಾರತದ ದಿವ್ಯತೆ, ವೈಭವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಇನ್ನೊಂದು ಮಾಧ್ಯಮವಾಯಿತು. ವೈಬ್ರಂಟ್ ಗುಜರಾತ್‌ನ ಸಮಯವೂ ನಾವು ಎಷ್ಟು ನಿಕಟವಾಗಿ ಕೆಲಸ ಮಾಡಿದ್ದೇವೆ ಎಂಬುದಕ್ಕೆ ಉದಾಹರಣೆಯಾಗಿತ್ತು. ಗುಜರಾತ್‌ನಲ್ಲಿ ನವರಾತ್ರಿ ಮತ್ತು ಗರ್ಬಾ ಪೂರ್ಣ ಸ್ವಿಂಗ್‌ನಲ್ಲಿದ್ದಾಗ ನಾವು ವೈಬ್ರಂಟ್ ಗುಜರಾತ್ ಅನ್ನು ಆಯೋಜಿಸಿದೆವು. ನಾವು ಅದನ್ನು ಗುಜರಾತ್‌ನ ಕೈಗಾರಿಕಾ ಅಭಿವೃದ್ಧಿಯ ಹಬ್ಬವನ್ನಾಗಿ ಮಾಡಿದೆವು.
ಸ್ನೇಹಿತರೇ,
ಇಂದು ನಾನು ನಿಮಗೆಲ್ಲರಿಗೂ ಇನ್ನೊಂದು ವಿಷಯವನ್ನು ನೆನಪಿಸಲು ಬಯಸುತ್ತೇನೆ. 20 ವರ್ಷಗಳಾಗಿವೆ, ಮತ್ತು ಎಲ್ಲಾ ರೀತಿಯ ಸಿಹಿ ಮತ್ತು ಕಹಿ ವಿಷಯಗಳನ್ನು ನೆನಪಿಸಿಕೊಳ್ಳುವುದು ಸಹಜ. ಇಂದು ಜಗತ್ತು ವೈಬ್ರಂಟ್ ಗುಜರಾತ್‌ನ ಯಶಸ್ಸನ್ನು ನೋಡುತ್ತಿದೆ. ಆದರೆ ವೈಬ್ರಂಟ್ ಗುಜರಾತ್ ಅನ್ನು ಆಯೋಜಿಸಿದಾಗ, ಆಗಿನ ಕೇಂದ್ರ ಸರ್ಕಾರವು ಗುಜರಾತ್‌ನ ಅಭಿವೃದ್ಧಿಯ ಬಗ್ಗೆ ಉದಾಸೀನತೆ ತೋರಿಸಿತ್ತು. ಗುಜರಾತ್‌ನ ಅಭಿವೃದ್ಧಿಯು ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ನಾನು ಯಾವಾಗಲೂ ಹೇಳಿದ್ದೇನೆ. ಆದರೆ ಆ ಸಮಯದಲ್ಲಿ ಕೇಂದ್ರ ಸರ್ಕಾರವನ್ನು ನಡೆಸುತ್ತಿದ್ದವರು ಸಹ ಗುಜರಾತ್‌ನ ಅಭಿವೃದ್ಧಿಯನ್ನು ರಾಜಕೀಯದೊಂದಿಗೆ ಜೋಡಿಸಿದ್ದರು. ಆ ಸಮಯದಲ್ಲಿ ಕೇಂದ್ರ ಸರ್ಕಾರದ ಸಚಿವರು ವೈಬ್ರಂಟ್ ಗುಜರಾತ್ ಶೃಂಗಸಭೆಗೆ ಬರಲು ನಿರಾಕರಿಸುತ್ತಿದ್ದರು. ವೈಯಕ್ತಿಕವಾಗಿ, ಅವರು ಖಂಡಿತ ಬರುತ್ತೇವೆ ಎಂದು ನನಗೆ ಹೇಳುತ್ತಿದ್ದರು, ಆದರೆ ನಂತರ ಉನ್ನತ ಅಧಿಕಾರಿಗಳ ಒತ್ತಡದಿಂದಾಗಿ ನಿರಾಕರಿಸುತ್ತಿದ್ದರು. ಸಹಕಾರದ ಬಗ್ಗೆ ಮರೆತುಬಿಡಿ, ಅವರು ಅಡಚಣೆಗಳನ್ನು ಸೃಷ್ಟಿಸುವಲ್ಲಿ ನಿರತರಾಗಿದ್ದರು. ವಿದೇಶಿ ಹೂಡಿಕೆದಾರರಿಗೆ ಗುಜರಾತ್‌ಗೆ ಹೋಗದಂತೆ ಬೆದರಿಕೆ ಹಾಕಲಾಯಿತು. ಅಷ್ಟೆಲ್ಲಾ ಬೆದರಿಕೆಯ ನಂತರವೂ, ಗುಜರಾತ್‌ನಲ್ಲಿ ಅವರಿಗೆ ಯಾವುದೇ ವಿಶೇಷ ಪ್ರೋತ್ಸಾಹವನ್ನು ನೀಡದಿದ್ದರೂ ವಿದೇಶಿ ಹೂಡಿಕೆದಾರರು ಗುಜರಾತ್‌ಗೆ ಬಂದರು. ಅವರು ಇಲ್ಲಿಗೆ ಬರುತ್ತಿದ್ದರು ಏಕೆಂದರೆ ಅವರು ತಮ್ಮ ದೈನಂದಿನ ಜೀವನದಲ್ಲಿ ಉತ್ತಮ ಆಡಳಿತ, ನ್ಯಾಯಯುತ ಆಡಳಿತ, ನೀತಿ ಆಧಾರಿತ ಆಡಳಿತ, ಸಮಾನ ಬೆಳವಣಿಗೆಯ ವ್ಯವಸ್ಥೆ ಮತ್ತು ಪಾರದರ್ಶಕ ಸರ್ಕಾರವನ್ನು ಅನುಭವಿಸಿದರು. ನೀವು ಊಹಿಸಬಹುದು, ವೈಬ್ರಂಟ್ ಗುಜರಾತ್ ಅನ್ನು ಪ್ರಾರಂಭಿಸಿದಾಗ, ಆ ಅನೇಕ ವಿದೇಶಿ ಅತಿಥಿಗಳು ಉಳಿಯಲು ಗುಜರಾತ್‌ನಲ್ಲಿ ಸಾಕಷ್ಟು ದೊಡ್ಡ ಹೋಟೆಲ್‌ಗಳು ಇರಲಿಲ್ಲ. ಎಲ್ಲಾ ಸರ್ಕಾರಿ ಅತಿಥಿ ಗೃಹಗಳು ತುಂಬಿದಾಗ, ಉಳಿದ ಜನರು ಎಲ್ಲಿ ಉಳಿಯುತ್ತಾರೆ ಎಂಬ ಪ್ರಶ್ನೆ ನಮ್ಮ ಮುಂದೆ ಇತ್ತು. ಅಂತಹ ಪರಿಸ್ಥಿತಿಯಲ್ಲಿ, ವಿದೇಶಿ ಅತಿಥಿಗಳಿಗಾಗಿ ಬಳಸಲು ತಮ್ಮ ಅತಿಥಿ ಗೃಹಗಳನ್ನು ನೀಡಲು ನಾನು ವ್ಯಾಪಾರ ಸಂಸ್ಥೆಗಳಿಗೆ ವಿನಂತಿಸಿದೆ. ನಾವು ಇಲ್ಲಿನ ವಿಶ್ವವಿದ್ಯಾಲಯಗಳ ಅತಿಥಿ ಗೃಹಗಳನ್ನು ಸಹ ಬಳಸಿದ್ದೇವೆ. ಆ ಅತಿಥಿ ಗೃಹಗಳಲ್ಲಿ ಅತಿಥಿಗಳು ಉಳಿಯಲು ವ್ಯವಸ್ಥೆ ಮಾಡಲಾಯಿತು. ಕೆಲವರು ಬರೋಡಾದಲ್ಲಿಯೇ ಉಳಿಯಬೇಕಾಯಿತು.
ಸ್ನೇಹಿತರೇ,
2009ರಲ್ಲಿ ವೈಬ್ರಂಟ್ ಗುಜರಾತ್ ಅನ್ನು ಆಯೋಜಿಸಿದಾಗ, ಪ್ರಪಂಚದಾದ್ಯಂತ ಆರ್ಥಿಕ ಹಿಂಜರಿತದ ವಾತಾವರಣ ಇತ್ತು ಎಂಬುದು ನನಗೆ ಇನ್ನೂ ನೆನಪಿದೆ. ಪ್ರಪಂಚವು ಆರ್ಥಿಕ ಹಿಂಜರಿತದ ಹಿಡಿತದಲ್ಲಿತ್ತು ಮತ್ತು ನಮ್ಮ ಅಧಿಕಾರಿಗಳು ಸೇರಿದಂತೆ ಎಲ್ಲರೂ ಆ ಸಮಯದಲ್ಲಿ ವೈಬ್ರಂಟ್ ಗುಜರಾತ್ ಅನ್ನು ಮುಂದೂಡುವಂತೆ ನನ್ನನ್ನು ಕೇಳುತ್ತಿದ್ದರು. ಯಾರೂ ಹಾಜರಾಗುವುದಿಲ್ಲ, ಆದ್ದರಿಂದ ಅದು ವಿಫಲಗೊಳ್ಳುತ್ತದೆ ಎಂದು ಅವರು ನಂಬಿದ್ದರು. ಆದರೆ ಆ ಸಮಯದಲ್ಲಿಯೂ ನಾನು, "ಇಲ್ಲ, ಇದು ನಿಲ್ಲುವುದಿಲ್ಲ. ಇದು ನಡೆಯುತ್ತದೆ. ವಿಫಲವಾದರೂ ಹೆಚ್ಚೆಂದರೆ ಟೀಕೆ ಇರಬಹುದು, ಆದರೆ ಅಭ್ಯಾಸ ಮುರಿಯಬಾರದು" ಎಂದು ಹೇಳಿದೆ. ಮತ್ತು ಆಗಲೂ, ಇಡೀ ಪ್ರಪಂಚವು ಆರ್ಥಿಕ ಹಿಂಜರಿತದ ಹಿಡಿತದಲ್ಲಿದ್ದಾಗ, 2009 ರ ವೈಬ್ರಂಟ್ ಗುಜರಾತ್ ಶೃಂಗಸಭೆಯಲ್ಲಿ ಯಶಸ್ಸಿನ ಇನ್ನೊಂದು ಹೊಸ ಅಧ್ಯಾಯವನ್ನು ಸೇರಿಸಲಾಯಿತು.
ಸ್ನೇಹಿತರೇ,
ವೈಬ್ರಂಟ್ ಗುಜರಾತ್‌ನ ಯಶಸ್ಸನ್ನು ಅದರ ಅಭಿವೃದ್ಧಿ ಪ್ರಯಾಣದಿಂದಲೂ ಅರ್ಥಮಾಡಿಕೊಳ್ಳಬಹುದು. 2003ರಲ್ಲಿ ಸುಮಾರು 100 ಭಾಗವಹಿಸುವವರು ಮತ್ತು ಪ್ರತಿನಿಧಿಗಳು ಈ ಶೃಂಗಸಭೆಯೊಂದಿಗೆ ಸಂಬಂಧ ಹೊಂದಿದ್ದರು. ಅದು ಬಹಳ ಸಣ್ಣ ಕಾರ್ಯಕ್ರಮವಾಗಿತ್ತು. ಇಂದು 40,000 ಕ್ಕೂ ಹೆಚ್ಚು ಭಾಗವಹಿಸುವವರು ಮತ್ತು ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ. 2003ರಲ್ಲಿ, ಕೆಲವೇ ಕೆಲವು ದೇಶಗಳು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದವು; ಇಂದು 135 ದೇಶಗಳು ಇದರಲ್ಲಿ ಭಾಗವಹಿಸುತ್ತವೆ. 2003ರಲ್ಲಿ ಈ ಶೃಂಗಸಭೆಯ ಆರಂಭದಲ್ಲಿ, ಸುಮಾರು 30 ಪ್ರದರ್ಶಕರು ಬಂದಿದ್ದರು; ಆದರೆ ಈಗ 2000 ಕ್ಕೂ ಹೆಚ್ಚು ಪ್ರದರ್ಶಕರು ಈ ಶೃಂಗಸಭೆಗೆ ಬರುತ್ತಾರೆ.
ಸ್ನೇಹಿತರೇ,
ವೈಬ್ರಂಟ್ ಗುಜರಾತ್‌ನ ಯಶಸ್ಸಿನ ಹಿಂದೆ ಹಲವಾರು ನಿರ್ದಿಷ್ಟ ಕಾರಣಗಳಿವೆ. ಅದರ ಯಶಸ್ಸು ಕಲ್ಪನೆ , ಊಹೆ ಮತ್ತು ಅನುಷ್ಠಾನ ದಂತಹ ಪ್ರಮುಖ ಅಂಶಗಳನ್ನು ಒಳಗೊಂಡಿದೆ. ನಾನು ಕಲ್ಪನೆಯ ಬಗ್ಗೆ ಮಾತನಾಡಿದರೆ, ವೈಬ್ರಂಟ್ ಗುಜರಾತ್ ಅಂತಹ ಒಂದು ವಿಶಿಷ್ಟ ಪರಿಕಲ್ಪನೆಯಾಗಿತ್ತು, ಅದರ ಬಗ್ಗೆ ಭಾರತದಲ್ಲಿ ಕೆಲವೇ ಜನರಿಗೆ ತಿಳಿದಿತ್ತು. ಆದರೆ ಕಾಲಾನಂತರದಲ್ಲಿ ಸಾಧಿಸಿದ ಯಶಸ್ಸಿನೊಂದಿಗೆ, ಜನರು ಅದರ ಮಹತ್ವವನ್ನು ಅರ್ಥಮಾಡಿಕೊಂಡರು. ಸ್ವಲ್ಪ ಸಮಯದ ನಂತರ, ಇತರ ರಾಜ್ಯಗಳು ಸಹ ತಮ್ಮದೇ ಆದ ವ್ಯಾಪಾರ ಮತ್ತು ಹೂಡಿಕೆದಾರರ ಶೃಂಗಸಭೆಗಳನ್ನು ಆಯೋಜಿಸಲು ಪ್ರಾರಂಭಿಸಿದವು. ಇನ್ನೊಂದು ಪ್ರಮುಖ ಅಂಶವೆಂದರೆ ಊಹೆ. ನಾವು ವಿಭಿನ್ನವಾಗಿ ಯೋಚಿಸಲು ಧೈರ್ಯ ಮಾಡಿದೆವು. ಆ ದಿನಗಳಲ್ಲಿ, ನಾವು ರಾಜ್ಯ ಮಟ್ಟದಲ್ಲಿ ಬಹಳ ದೊಡ್ಡದನ್ನು ಯೋಚಿಸುತ್ತಿದ್ದೆವು; ದೇಶದ ಮಟ್ಟದಲ್ಲಿಯೂ ಮಾಡಲು ಸಾಧ್ಯವಾಗದಂತಹದನ್ನು. ಒಂದು ದೇಶವನ್ನು ನಮ್ಮ ಪಾಲುದಾರ ದೇಶವನ್ನಾಗಿ ಮಾಡಲು ನಾವು ಧೈರ್ಯವನ್ನು ಪ್ರದರ್ಶಿಸಿದೆವು. ಒಂದು ದೇಶದ ಸಣ್ಣ ರಾಜ್ಯವೊಂದು ಅಭಿವೃದ್ಧಿ ಹೊಂದಿದ ದೇಶವನ್ನು ತನ್ನ ಪಾಲುದಾರ ದೇಶವನ್ನಾಗಿ ಮಾಡಿಕೊಳ್ಳುವ ಕಲ್ಪನೆಯು ಇಂದು ವಿಚಿತ್ರವೆಂದು ಕಾಣಿಸಬಹುದು. ಆ ಸಮಯದಲ್ಲಿ ಏನಾಗುತ್ತಿತ್ತು ಎಂದು ಊಹಿಸಿ? ಆದರೆ ನಾವು ಅದನ್ನು ಮಾಡಿದೆವು. ಇದು ದೇಶದ ಒಂದು ರಾಜ್ಯಕ್ಕೆ ದೊಡ್ಡ ವಿಷಯವಾಗಿತ್ತು.
ಸ್ನೇಹಿತರೇ,
ಕಲ್ಪನೆ ಮತ್ತು ಊಹೆ ಎಷ್ಟು ಚೆನ್ನಾಗಿದ್ದರೂ, ಇಡೀ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು ಮತ್ತು ಫಲಿತಾಂಶಗಳನ್ನು ನೀಡುವುದು ಬಹಳ ಮುಖ್ಯ. ಈ ಪ್ರಮಾಣದ ಕಾರ್ಯಕ್ರಮವನ್ನು ಆಯೋಜಿಸಲು ವ್ಯಾಪಕ ಯೋಜನೆ, ಸಾಮರ್ಥ್ಯ ನಿರ್ಮಾಣದಲ್ಲಿ ಹೂಡಿಕೆ, ಪ್ರತಿ ವಿವರಕ್ಕೂ ಗಮನ ಮತ್ತು ದಣಿವರಿಯದ ಶ್ರಮದ ಅಗತ್ಯವಿದೆ. ಅದೇ ಅಧಿಕಾರಿಗಳು, ಅದೇ ಸಂಪನ್ಮೂಲಗಳು ಮತ್ತು ಅದೇ ನಿಯಮಗಳೊಂದಿಗೆ, ಯಾರೂ ಯೋಚಿಸದಂತಹದನ್ನು ನಾವು ಮಾಡಿದ್ದೇವೆ ಎಂದು ನಾನು ಮೊದಲೂ ಹೇಳಿದ್ದೇನೆ!
ಸ್ನೇಹಿತರೇ,
ವೈಬ್ರಂಟ್ ಗುಜರಾತ್ ಶೃಂಗಸಭೆಯ ಇನ್ನೊಂದು ಹೆಜ್ಜೆಯನ್ನು ಗಮನಿಸಬೇಕು. ಒಂದೇ ಬಾರಿಯ ಕಾರ್ಯಕ್ರಮದಿಂದ, ವೈಬ್ರಂಟ್ ಗುಜರಾತ್ ಇಂದು ಒಂದು ಸಂಸ್ಥೆಯಾಗಿ ಮಾರ್ಪಟ್ಟಿದೆ, ಅದರ ವ್ಯವಸ್ಥೆ ಮತ್ತು ಪ್ರಕ್ರಿಯೆಯು ವರ್ಷವಿಡೀ ಸರ್ಕಾರದ ಒಳಗೆ ಮತ್ತು ಹೊರಗೆ ಸ್ವಯಂಚಾಲಿತವಾಗಿ ನಡೆಯುತ್ತದೆ. ಮುಖ್ಯಮಂತ್ರಿಗಳು ಬದಲಾದರು, ಬಹುತೇಕ ಹಳೆಯ ಪ್ರಮುಖ ಅಧಿಕಾರಿಗಳೆಲ್ಲ ನಿವೃತ್ತರಾಗಿದ್ದಾರೆ. 2001 ರಲ್ಲಿ ಗುಜರಾತ್‌ಗೆ ಮೊದಲ ಬಾರಿಗೆ ಬಂದಿದ್ದ ಅಧಿಕಾರಿಗಳು ಇಂದು ಗುಜರಾತ್ ಅನ್ನು ನಿರ್ವಹಿಸುತ್ತಿದ್ದಾರೆ. ಅವರು ಈಗ ಹಿರಿಯ ಅಧಿಕಾರಿಗಳಾಗಿದ್ದಾರೆ. ಸಮಯ ಬದಲಾಗಿದೆ, ಆದರೆ ಒಂದು ವಿಷಯ ಬದಲಾಗಲಿಲ್ಲ. ಪ್ರತಿ ಬಾರಿಯೂ ವೈಬ್ರಂಟ್ ಗುಜರಾತ್ ಯಶಸ್ಸಿನ ಹೊಸ ಎತ್ತರಗಳನ್ನು ಮುಟ್ಟುತ್ತಲೇ ಇದೆ. ನಾವು ಪ್ರಕ್ರಿಯೆಗಳನ್ನು ಸಾಂಸ್ಥೀಕರಿಸಿದ ಕಾರಣ ಇದು ಸಾಧ್ಯವಾಯಿತು. ಈ ಬಲವು ಈ ಯಶಸ್ಸಿನ ಸ್ಥಿರತೆಗೆ ಆಧಾರವಾಗಿದೆ ಮತ್ತು ಇದಕ್ಕಾಗಿ, ಮೂಲಸೌಕರ್ಯದ ಮೇಲೆ ಅದೇ ಒತ್ತು ನೀಡಲಾಯಿತು. ಕೆಲವು ಸಂದರ್ಭಗಳಲ್ಲಿ, ಕಾರ್ಯಕ್ರಮಗಳನ್ನು ಟಾಗೋರ್ ಹಾಲ್‌ನಲ್ಲಿ ನಡೆಸಲಾಯಿತು, ಕೆಲವೊಮ್ಮೆ ಇಲ್ಲಿ ಸೈನ್ಸ್ ಸಿಟಿಯಲ್ಲಿ ಡೇರೆಗಳನ್ನು ಹಾಕಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು ಮತ್ತು ಇಂದು ಅದೇ ಕಾರ್ಯಕ್ರಮಗಳಿಗಾಗಿ ನಮ್ಮಲ್ಲಿ ಮಹಾತ್ಮ ಮಂದಿರ ಇದೆ.
ಸ್ನೇಹಿತರೇ,
ನಾವು ವೈಬ್ರಂಟ್ ಗುಜರಾತ್ ಶೃಂಗಸಭೆಯನ್ನು ಮುಂದುವರಿಸಿದ ಉತ್ಸಾಹವು ನಮ್ಮ ದೇಶದಲ್ಲಿ ವಿರಳವಾಗಿ ಕಂಡುಬರುತ್ತದೆ. ನಾವು ಈ ಶೃಂಗಸಭೆಯನ್ನು ಗುಜರಾತ್‌ನಲ್ಲಿ ನಡೆಸುತ್ತಿದ್ದೆವು ಆದರೆ ಅದರ ಮೂಲಕ ಪ್ರತಿ ರಾಜ್ಯಕ್ಕೂ ಪ್ರಯೋಜನವಾಗಬೇಕೆಂದು ನಾವು ಬಯಸಿದ್ದೇವೆ. ಇಂದಿಗೂ ನಮ್ಮ ಚಿಂತನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದವರು ಕೆಲವೇ ಜನರು. ಅವರು ತಮ್ಮದೇ ಆದ ವೃತ್ತದಲ್ಲಿ ಮುದುಡಿಕೊಂಡಿದ್ದಾರೆ. ಆ ಸಮಯದಲ್ಲಿ, ಗುಜರಾತ್‌ನ ಮುಖ್ಯಮಂತ್ರಿಯೊಬ್ಬರು ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಶೃಂಗಸಭೆ ನಡೆಯುತ್ತಿದೆ, ನೀವೂ ಸಹ ನಿಮ್ಮ ಸ್ಟಾಲ್‌ಗಳನ್ನು ಸ್ಥಾಪಿಸಿ; ನೀವೂ ಸಹ ವಿಚಾರ ಸಂಕಿರಣಗಳನ್ನು ನಡೆಸಿ ಎಂದು ಒತ್ತಾಯಿಸುತ್ತಿದ್ದರು. ಇತರ ರಾಜ್ಯಗಳಿಗೆ ಸಹ ವೈಬ್ರಂಟ್ ಗುಜರಾತ್ ಶೃಂಗಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು. ನಾವು ರಾಜ್ಯಗಳನ್ನು ಬಂದು, ತಮ್ಮ ಶಕ್ತಿಯನ್ನು ಇದರಲ್ಲಿ ತೊಡಗಿಸಿ ಮತ್ತು ಲಾಭ ಪಡೆಯಲು ಆಹ್ವಾನಿಸಿದ್ದೆವು. ನಾವು ರಾಜ್ಯ ವಿಚಾರ ಸಂಕಿರಣವನ್ನು ಆಯೋಜಿಸಿದೆವು, ಇದರಲ್ಲಿ ಅನೇಕ ರಾಜ್ಯಗಳು ಬರುತ್ತಿದ್ದವು. ಮತ್ತು ವೈಬ್ರಂಟ್ ಶೃಂಗಸಭೆಯ ಸಮಯದಲ್ಲಿಯೂ, ಒಡಿಶಾ ಶೃಂಗಸಭೆ, ತೆಲುಗು ಶೃಂಗಸಭೆ, ಹರಿಯಾಣದ ಶೃಂಗಸಭೆ, ಅಥವಾ ಜಮ್ಮು ಮತ್ತು ಕಾಶ್ಮೀರ ಮತ್ತು ಹೀಗೆ ವಿಭಿನ್ನ ಶೃಂಗಸಭೆಗಳನ್ನು ನಡೆಸಲಾಗುತ್ತಿತ್ತು. ಅದರ ಜೊತೆಗೆ, ಗುಜರಾತ್‌ನಲ್ಲಿ ಆಯುರ್ವೇದದ ರಾಷ್ಟ್ರೀಯ ಶೃಂಗಸಭೆ, ಪ್ರಗತಿಪರ ಪಾಲುದಾರರ ದೊಡ್ಡ ಶೃಂಗಸಭೆ, ಅಖಿಲ ಭಾರತ ವಕೀಲರ ಶೃಂಗಸಭೆ ಇತ್ಯಾದಿ ಇದ್ದವು. ನಾವು ನಿರಂತರವಾಗಿ ವಿವಿಧ ರೀತಿಯ ಶೃಂಗಸಭೆಗಳನ್ನು ರಚಿಸುತ್ತಿದ್ದೆವು. ನಾವು ರಾಷ್ಟ್ರೀಯ ದೃಷ್ಟಿಕೋನದ ಅಡಿಯಲ್ಲಿ ಗುಜರಾತ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದ್ದೆವು.
ಸ್ನೇಹಿತರೇ,
20ನೇ ಶತಮಾನದಲ್ಲಿ ಗುಜರಾತ್‌ನ ಗುರುತು ಏನಿತ್ತು? ನಾವು ವ್ಯಾಪಾರಿ ರಾಜ್ಯ ಎಂದು ಕರೆಯಲ್ಪಡುತ್ತಿದ್ದೆವು. ನಾವು ಒಂದು ಸ್ಥಳದಿಂದ ಖರೀದಿಸಿ ಇನ್ನೊಂದು ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದೆವು. ಈ ಪ್ರಕ್ರಿಯೆಯಲ್ಲಿ ಸಿಗುವ ಕಮಿಷನ್ ಮೇಲೆ ಅವರು ಬದುಕುತ್ತಿದ್ದರು. ಇದು ನಮ್ಮ ಚಿತ್ರವಾಗಿತ್ತು. ಆದರೆ 20 ನೇ ಶತಮಾನದ ಆ ಚಿತ್ರವನ್ನು ಬದಿಗಿಟ್ಟು, 21 ನೇ ಶತಮಾನದಲ್ಲಿ ಗುಜರಾತ್ ವ್ಯಾಪಾರದ ಜೊತೆಗೆ ಕೃಷಿ ಶಕ್ತಿ ಕೇಂದ್ರ, ಆರ್ಥಿಕ ಕೇಂದ್ರವಾಗಿ ಮಾರ್ಪಟ್ಟಿದೆ ಮತ್ತು ಕೈಗಾರಿಕಾ ಮತ್ತು ಉತ್ಪಾದನಾ ಪರಿಸರ ವ್ಯವಸ್ಥೆಯಾಗಿ ಗುರುತನ್ನು ಅಭಿವೃದ್ಧಿಪಡಿಸಿದೆ. ಇದರ ಹೊರತಾಗಿ, ಗುಜರಾತ್‌ನ ವ್ಯಾಪಾರ ಆಧಾರಿತ ಖ್ಯಾತಿಯು ಸಹ ಸಾಕಷ್ಟು ಬಲಶಾಲಿಯಾಗಿದೆ. ಈ ಎಲ್ಲದರ ಹಿಂದೆ ವೈಬ್ರಂಟ್ ಗುಜರಾತ್‌ನಂತಹ ಕಾರ್ಯಕ್ರಮಗಳ ಯಶಸ್ಸು ಇದೆ, ಇದು ಕಲ್ಪನೆಗಳು, ನಾವೀನ್ಯತೆ ಮತ್ತು ಕೈಗಾರಿಕೆಗಳ ಇನ್ಕ್ಯುಬೇಟರ್ ಆಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ 20 ವರ್ಷಗಳಿಂದ ನಮ್ಮಲ್ಲಿ ಸಾವಿರಾರು ಯಶಸ್ಸಿನ ಕಥೆಗಳು ಮತ್ತು ಕೇಸ್ ಸ್ಟಡೀಸ್ ಇವೆ. ಪರಿಣಾಮಕಾರಿ ನೀತಿ ರೂಪಿಸುವಿಕೆ ಮತ್ತು ದಕ್ಷ ಯೋಜನಾ ಅನುಷ್ಠಾನದಿಂದ ಇದು ಸಾಧ್ಯವಾಯಿತು. ಜವಳಿ ಮತ್ತು ಉಡುಪು ಕೈಗಾರಿಕೆಗಳಲ್ಲಿ ಹೂಡಿಕೆ ಮತ್ತು ಉದ್ಯೋಗದಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ, ಇದರಿಂದಾಗಿ ನಮ್ಮ ರಫ್ತುಗಳು ಸಹ ದಾಖಲೆಗಳನ್ನು ಮಾಡುತ್ತಿವೆ. ಕಳೆದ ಎರಡು ದಶಕಗಳಲ್ಲಿ, ನಾವು ವಿವಿಧ ವಲಯಗಳಲ್ಲಿ ಹೊಸ ಎತ್ತರಗಳನ್ನು ತಲುಪಿದ್ದೇವೆ. 2001 ಕ್ಕೆ ಹೋಲಿಸಿದರೆ, ಆಟೋಮೊಬೈಲ್ ವಲಯದಲ್ಲಿ ನಮ್ಮ ಹೂಡಿಕೆ ಸುಮಾರು 9 ಪಟ್ಟು ಹೆಚ್ಚಾಗಿದೆ. ನಮ್ಮ ಉತ್ಪಾದನೆಯ ಉತ್ಪನ್ನವು 12 ಪಟ್ಟು ಹೆಚ್ಚಾಗಿದೆ. ರಾಸಾಯನಿಕ ವಲಯದಲ್ಲಿ, ಗುಜರಾತ್ ದೇಶದ ಮತ್ತು ಪ್ರಪಂಚದಾದ್ಯಂತದ ಅನೇಕ ಕಂಪನಿಗಳ ಆಯ್ಕೆಯಾಗಿದೆ. ಇಂದು ಭಾರತದ ಡೈಸ್ ಮತ್ತು ಇಂಟರ್ಮೀಡಿಯೆಟ್ಸ್ ಉತ್ಪಾದನೆಯಲ್ಲಿ ಗುಜರಾತ್‌ನ ಕೊಡುಗೆ ಸುಮಾರು 75 ಪ್ರತಿಶತ ದಷ್ಟಿದೆ.
ದೇಶದಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣಾ ಉದ್ಯಮದಲ್ಲಿ ಹೂಡಿಕೆಯಲ್ಲಿ ಗುಜರಾತ್ ಅತಿ ಹೆಚ್ಚು ಪಾಲನ್ನು ಹೊಂದಿದೆ. ಇಂದು, ಗುಜರಾತ್‌ನಲ್ಲಿ 30,000 ಕ್ಕೂ ಹೆಚ್ಚು ಆಹಾರ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಔಷಧೀಯ ವಲಯದಲ್ಲಿ, ಗುಜರಾತ್ ನಾವೀನ್ಯತೆ-ಚಾಲಿತ, ಜ್ಞಾನ-ಕೇಂದ್ರಿತ ಔಷಧೀಯ ಉದ್ಯಮವಾಗಿ ಹೊರಹೊಮ್ಮುತ್ತಿದೆ. ವೈದ್ಯಕೀಯ ಸಾಧನಗಳ ಉತ್ಪಾದನೆಯಲ್ಲಿ ಗುಜರಾತ್ 50 ಪ್ರತಿಶತಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ ಮತ್ತು ಕಾರ್ಡಿಯಾಕ್ ಸ್ಟೆಂಟ್‌ಗಳ ಉತ್ಪಾದನೆಯಲ್ಲಿ ಸುಮಾರು 80 ಪ್ರತಿಶತ ಪಾಲನ್ನು ಹೊಂದಿದೆ. ರತ್ನ ಮತ್ತು ಆಭರಣ ಉದ್ಯಮದಲ್ಲಿ ಗುಜರಾತ್‌ನ ಯಶಸ್ಸು ಅದ್ಭುತವಾಗಿದೆ. ಗುಜರಾತ್ ಜಗತ್ತಿನ ಸಂಸ್ಕರಿಸಿದ ವಜ್ರಗಳ 70 ಪ್ರತಿಶತಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಭಾರತದ ವಜ್ರ ರಫ್ತಿಗೆ ಗುಜರಾತ್‌ನ ಕೊಡುಗೆ 80 ಪ್ರತಿಶತ. ಸೆರಾಮಿಕ್ ವಲಯದ ಬಗ್ಗೆ ಹೇಳುವುದಾದರೆ, ಗುಜರಾತ್‌ನ ಮೊರ್ಬಿ ಪ್ರದೇಶವೊಂದೇ ದೇಶದ ಸೆರಾಮಿಕ್ ಮಾರುಕಟ್ಟೆಯಲ್ಲಿ 90 ಪ್ರತಿಶತ ಪಾಲನ್ನು ಹೊಂದಿದೆ. ಇಲ್ಲಿ ಸೆರಾಮಿಕ್ ಟೈಲ್ಸ್, ಸ್ಯಾನಿಟರಿ-ವೇರ್ ಮತ್ತು ವಿಭಿನ್ನ ಸೆರಾಮಿಕ್ ಉತ್ಪನ್ನಗಳ ಸುಮಾರು 10,000 ಉತ್ಪಾದನಾ ಘಟಕಗಳಿವೆ. ಗುಜರಾತ್ ಭಾರತದಲ್ಲಿ ಅಗ್ರ ರಫ್ತುದಾರರಲ್ಲಿ ಒಂದಾಗಿದೆ. ಕಳೆದ ವರ್ಷ ರಾಜ್ಯವು ಸುಮಾರು $2 ಬಿಲಿಯನ್ ರಫ್ತು ಮಾಡಿದೆ. ರಕ್ಷಣಾ ಉತ್ಪಾದನೆಯು ಮುಂಬರುವ ದಿನಗಳಲ್ಲಿ ದೊಡ್ಡ ವಲಯವಾಗಲಿದೆ.
ಸ್ನೇಹಿತರೇ,
ನಾವು ವೈಬ್ರಂಟ್ ಗುಜರಾತ್ ಅನ್ನು ಪ್ರಾರಂಭಿಸಿದಾಗ, ಈ ರಾಜ್ಯವು ದೇಶದ ಪ್ರಗತಿಗೆ ಬೆಳವಣಿಗೆಯ ಎಂಜಿನ್ ಆಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ನಾನು ಏನು ಹೇಳುತ್ತಿದ್ದೇನೆ ಎಂದು ನಿಮಗೆ ಅರ್ಥವಾಗಿದೆಯೇ? ನಾವು ಇಲ್ಲಿ ಕೆಲಸ ಮಾಡುತ್ತಿದ್ದಾಗ, ನಮಗೆ ಒಂದು ದೃಷ್ಟಿ ಇತ್ತು. ಗುಜರಾತ್ ದೇಶದ ಬೆಳವಣಿಗೆಯ ಎಂಜಿನ್ ಆಗಬೇಕು ಎಂದು ನಾವು ನಂಬಿದ್ದೆವು. ಕೆಲವೇ ಜನರಿಗೆ ಇದು ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ದೃಷ್ಟಿಕೋನವು ನನಸಾಗುವುದನ್ನು ದೇಶವು ನೋಡಿದೆ. 2014 ರಲ್ಲಿ, ದೇಶಕ್ಕೆ ಸೇವೆ ಸಲ್ಲಿಸಲು ನಮಗೆ ಅವಕಾಶ ನೀಡಿದಾಗ, ನಮ್ಮ ಗುರಿ ಕೂಡ ವಿಸ್ತರಿಸಿತು, ಮತ್ತು ಇಡೀ ಜಗತ್ತಿಗೆ ಭಾರತವನ್ನು ಬೆಳವಣಿಗೆಯ ಎಂಜಿನ್ ಮಾಡುವ ಗುರಿ ನಮ್ಮದಾಗಿತ್ತು. ಇಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ತಜ್ಞರು ಇದೇ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಇಂದು ಭಾರತವು ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಈಗ ನಾವು ಒಂದು ತಿರುವು ಪಾಯಿಂಟ್‌ನಲ್ಲಿ ನಿಂತಿದ್ದೇವೆ, ಅಲ್ಲಿ ಭಾರತವು ಜಾಗತಿಕ ಆರ್ಥಿಕ ಶಕ್ತಿ ಕೇಂದ್ರವಾಗಲು ಹೊರಟಿದೆ. ಈಗ ಇದು ಜಗತ್ತಿಗೆ ಭಾರತದ ಗ್ಯಾರಂಟಿ ಮತ್ತು ನಿಮಗೂ ನನ್ನ ಗ್ಯಾರಂಟಿ. ನಿಮ್ಮ ಕಣ್ಣುಗಳ ಮುಂದೆ ನೀವು ನೋಡುತ್ತೀರಿ; ಕೆಲವೇ ವರ್ಷಗಳಲ್ಲಿ ಭಾರತವು ಜಗತ್ತಿನ ಟಾಪ್ 3 ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಲಿದೆ. ಇದು ಮೋದಿ ಗ್ಯಾರಂಟಿ. ಆದ್ದರಿಂದ, ಇಲ್ಲಿ ಉಪಸ್ಥಿತರಿರುವ ಅತಿಥಿಗಳಿಗೆ ಮತ್ತು ಭಾರತೀಯ ಕೈಗಾರಿಕೆಗಳಿಗೆ ನಾನು ಮನವಿ ಮಾಡಲು ಬಯಸುತ್ತೇನೆ. ಭಾರತವು ತನ್ನದೇ ಆದ ಹೊಸ ಸಾಮರ್ಥ್ಯವನ್ನು ಸೃಷ್ಟಿಸಲು ಸಾಧ್ಯವಾಗುವ ಅಥವಾ ತನ್ನ ಸ್ಥಾನವನ್ನು ಇನ್ನಷ್ಟು ಸುಧಾರಿಸಲು ಸಾಧ್ಯವಾಗುವಂತಹ ವಲಯಗಳ ಬಗ್ಗೆ ನೀವೆಲ್ಲರೂ ಯೋಚಿಸಬೇಕು. ವೈಬ್ರಂಟ್ ಗುಜರಾತ್ ಈ ಉದ್ದೇಶಕ್ಕೆ ಹೇಗೆ ವೇಗವನ್ನು ನೀಡುತ್ತದೆ ಎಂಬುದರ ಬಗ್ಗೆಯೂ ನಾವು ಯೋಚಿಸಬೇಕು. ಇಂದು ಸುಸ್ಥಿರತೆಯ ಕ್ಷೇತ್ರದಲ್ಲಿ ಭಾರತವು ಜಗತ್ತನ್ನು ಮುನ್ನಡೆಸುತ್ತಿರುವಂತೆಯೇ, ನಮ್ಮ ನವೋದ್ಯಮ ಪರಿಸರ ವ್ಯವಸ್ಥೆಯು ಈ ಶೃಂಗಸಭೆಯಿಂದ ಗರಿಷ್ಠ ಪ್ರಯೋಜನಗಳನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆಯೂ ನಾವು ಯೋಚಿಸಬೇಕು. ಇಂದು ಅಗ್ರಿ-ಟೆಕ್ ಒಂದು ಉದಯೋನ್ಮುಖ ವಲಯವಾಗಿದೆ. ಆಹಾರ ಸಂಸ್ಕರಣಾ ವಲಯವು ವೇಗವಾಗಿ ವಿಸ್ತರಿಸುತ್ತಿದೆ. ಶ್ರೀ ಅನ್ನದ (ಸಿರಿಧಾನ್ಯಗಳು) ಹೆಚ್ಚಿದ ಬಳಕೆಯಿಂದ, ನಮ್ಮ ಸಿರಿಧಾನ್ಯಗಳು ಇಂದು ಪ್ರಪಂಚದಾದ್ಯಂತದ ಊಟದ ಕೋಷ್ಟಕಗಳಲ್ಲಿ ಹೆಮ್ಮೆಯ ಸ್ಥಾನವನ್ನು ಕಂಡುಕೊಂಡಿವೆ. ಶ್ರೀ ಅನ್ನದ ಬಳಕೆಯಿಂದ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಸಂಸ್ಕರಣೆ, ಪ್ಯಾಕೇಜಿಂಗ್‌ನಲ್ಲಿನ ಬದಲಾವಣೆಗಳು ಮತ್ತು ಅದನ್ನು ಜಾಗತಿಕ ಮಾರುಕಟ್ಟೆಗೆ ಕೊಂಡೊಯ್ಯುವ ಸಾಧ್ಯತೆಗಳು ಅನೇಕ ಹೊಸ ಅವಕಾಶಗಳನ್ನು ತಂದಿವೆ.
ಇಂದಿನ ಆಳವಾಗಿ ಸಂಪರ್ಕಗೊಂಡ ಜಗತ್ತಿನಲ್ಲಿ, ಹಣಕಾಸು ಸಹಕಾರದ ಸಂಸ್ಥೆಗಳ ಅಗತ್ಯವು ವೇಗವಾಗಿ ಹೆಚ್ಚುತ್ತಿದೆ. ಗುಜರಾತ್ ಈಗಾಗಲೇ ಗಿಫ್ಟ್ ಸಿಟಿಯನ್ನು ಹೊಂದಿದೆ, ಅದರ ಪ್ರಸ್ತುತತೆ ಪ್ರತಿದಿನ ಹೆಚ್ಚುತ್ತಿದೆ. ಗಿಫ್ಟ್ ಸಿಟಿ ನಮ್ಮ ಸಂಪೂರ್ಣ ಸರ್ಕಾರದ ವಿಧಾನವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ಕೇಂದ್ರ, ರಾಜ್ಯ ಮತ್ತು ಐ ಎಫ್ ಎಸ್ ಸಿ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿ ಜಗತ್ತಿನಲ್ಲಿ ಅತ್ಯುತ್ತಮ ನಿಯಂತ್ರಣ ಪರಿಸರವನ್ನು ಸೃಷ್ಟಿಸುತ್ತಾರೆ. ಅದನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಹಣಕಾಸು ಮಾರುಕಟ್ಟೆ ಸ್ಥಳವನ್ನಾಗಿ ಮಾಡಲು ನಾವು ಪ್ರಯತ್ನಗಳನ್ನು ತೀವ್ರಗೊಳಿಸಬೇಕು. ಇದಕ್ಕಾಗಿ ನಮ್ಮ ದೊಡ್ಡ ದೇಶೀಯ ಬೇಡಿಕೆಯನ್ನು ನಾವು ಬಳಸಿಕೊಳ್ಳಬಹುದು. ವೈಬ್ರಂಟ್ ಗುಜರಾತ್‌ನ ಮುಂದಿರುವ ಗುರಿ ಗಿಫ್ಟ್ ಸಿಟಿಯನ್ನು ಮತ್ತಷ್ಟು ಬಲಪಡಿಸುವುದು ಇದರಿಂದ ಅದರ ಜಾಗತಿಕ ಉಪಸ್ಥಿತಿಯು ವಿಸ್ತರಿಸುತ್ತದೆ.
ಸ್ನೇಹಿತರೇ,
ವೈಬ್ರಂಟ್ ಗುಜರಾತ್‌ನ ಯಶಸ್ಸಿನ ಬಗ್ಗೆ ಚರ್ಚಿಸುವಾಗ, ಇದು ನಿಲ್ಲುವ ಸಮಯವಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಮುಂದಿನ 20 ವರ್ಷಗಳು ಕಳೆದ 20 ವರ್ಷಗಳಿಗಿಂತ ಹೆಚ್ಚು ಮುಖ್ಯ. ವೈಬ್ರಂಟ್ ಗುಜರಾತ್ 40 ವರ್ಷಗಳನ್ನು ಪೂರ್ಣಗೊಳಿಸಿದಾಗ, ಭಾರತವು ತನ್ನ ಸ್ವಾತಂತ್ರ್ಯದ ಶತಮಾನೋತ್ಸವದ ಸಮೀಪವಿರುತ್ತದೆ. ಇದು ಭಾರತವು ಅಂತಹ ಒಂದು ಮಾರ್ಗಸೂಚಿಯನ್ನು ರೂಪಿಸಬೇಕಾದ ಸಮಯ, ಇದು 2047 ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರವಾಗಿ ಜಗತ್ತಿಗೆ ಪ್ರಸ್ತುತಪಡಿಸಲು ಸಹಾಯ ಮಾಡುತ್ತದೆ. ನೀವೆಲ್ಲರೂ ಖಂಡಿತವಾಗಿಯೂ ಈ ದಿಕ್ಕಿನಲ್ಲಿ ಕೆಲಸ ಮಾಡುತ್ತೀರಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಮತ್ತು ಖಂಡಿತವಾಗಿಯೂ ಮುಂದೆ ಬರುತ್ತೀರಿ ಎಂದು ನನಗೆ ವಿಶ್ವಾಸವಿದೆ. ಪ್ರಸ್ತುತ ವೈಬ್ರಂಟ್ ಶೃಂಗಸಭೆಯು ಜನವರಿಯಲ್ಲಿ ನಡೆಯಲಿದೆ. ರಾಜ್ಯ ಸರ್ಕಾರ ಮತ್ತು ಇಲ್ಲಿನ ಕೈಗಾರಿಕಾ ವಲಯದ ಸ್ನೇಹಿತರು ಪೂರ್ಣ ಶಕ್ತಿಯಿಂದ ತೊಡಗಿರಬಹುದು, ಆದರೆ ಇಂದು ನೀವು ನನ್ನನ್ನು ಆಹ್ವಾನಿಸಿದಾಗ, ನಾನು 20 ವರ್ಷ ಚಿಕ್ಕವನಾದೆ ಮತ್ತು ಹಳೆಯ ನೆನಪುಗಳಲ್ಲಿ ಕಳೆದುಹೋದೆ; ಆ ಭಯಾನಕ ದಿನಗಳಿಂದ ಗುಜರಾತ್ ಅನ್ನು ಹೇಗೆ ಹೊರಗೆ ತರಲಾಯಿತು ಮತ್ತು ಇಂದು ಅದು ಎಲ್ಲಿಗೆ ತಲುಪಿದೆ? ಸ್ನೇಹಿತರೇ, ಜೀವನದಲ್ಲಿ ಇದಕ್ಕಿಂತ ಹೆಚ್ಚಿನ ತೃಪ್ತಿ ಇನ್ನೇನಿದೆ? ಈ 20 ವರ್ಷಗಳನ್ನು ಸ್ಮರಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಗುಜರಾತ್ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ನಡುವೆ ಇರುವುದರಿಂದ ಹಳೆಯ ದಿನಗಳನ್ನು ಮತ್ತೆ ಜೀವಿಸುವ ಅವಕಾಶವನ್ನು ನೀವು ನನಗೆ ನೀಡಿದ್ದೀರಿ. ಆದ್ದರಿಂದ, ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಶುಭಾಶಯಗಳು!
ಸೂಚನೆ: ಇದು ಪ್ರಧಾನಮಂತ್ರಿ ಅವರು ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.
*****
(रिलीज़ आईडी: 2201411)
आगंतुक पटल : 11
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam