ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ, ಧನಬಾದ್ ನ ಐ.ಐ.ಟಿ (ಐ.ಎಸ್.ಎಂ) ಶತಮಾನೋತ್ಸವ ಸಂಸ್ಥಾಪನಾ ಸಪ್ತಾಹವನ್ನು ಉದ್ದೇಶಿಸಿ ಮಾತನಾಡಿದರು
ಪ್ರಧಾನಮಂತ್ರಿ ಅವರ 2047ರ ವೇಳೆಗೆ ವಿಕಸಿತ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವಂತೆ ಡಾ. ಪಿ.ಕೆ. ಮಿಶ್ರಾ ಅವರು ಐ.ಐ.ಟಿ ಧನಬಾದ್ ಗೆ ಕರೆ ನೀಡಿದರು
ಜಾಗತಿಕ ಪ್ರಕ್ಷುಬ್ಧತೆಯ ನಡುವೆಯೂ ಭಾರತದ ಆರ್ಥಿಕ ಅಡಿಪಾಯ ಬಲಿಷ್ಠವಾಗಿದೆ: ಡಾ. ಪಿ.ಕೆ. ಮಿಶ್ರಾ
ಅನೇಕ ರಾಷ್ಟ್ರಗಳು, ವಿಶೇಷವಾಗಿ ಜಾಗತಿಕ ದಕ್ಷಿಣ ದೇಶಗಳು, ಈಗ ಭಾರತವನ್ನು ವಿಶ್ವ ಬಂಧುವಾಗಿ, ಆಧುನಿಕ ಸಾಮರ್ಥ್ಯವನ್ನು ನಾಗರಿಕತೆಯ ಬುದ್ಧಿಮತ್ತೆಯೊಂದಿಗೆ ಸಂಯೋಜಿಸುವ ವಿಶ್ವಾಸಾರ್ಹ ಪಾಲುದಾರನಾಗಿ ನೋಡುತ್ತಿವೆ: ಡಾ. ಪಿ.ಕೆ. ಮಿಶ್ರಾ
ಭಾರತದ ನಿರ್ಣಾಯಕ ಖನಿಜ ಕಾರ್ಯತಂತ್ರವನ್ನು ಬಲಡಿಸುವಂತೆ ಐ.ಐ.ಟಿ ಧನಬಾದ್ ಅನ್ನು ಡಾ. ಮಿಶ್ರಾ ಒತ್ತಾಯಿಸಿದರು
प्रविष्टि तिथि:
03 DEC 2025 3:08PM by PIB Bengaluru
ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ಇಂದು ಧನಬಾದ್ ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಇಂಡಿಯನ್ ಸ್ಕೂಲ್ ಆಫ್ ಮೈನ್ಸ್) ಶತಮಾನೋತ್ಸವ ಸಂಸ್ಥಾಪನಾ ಸಪ್ತಾಹದ ಉದ್ಘಾಟನಾ ಭಾಷಣ ಮಾಡಿದರು. ಬೋಧಕ ವರ್ಗ, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಮತ್ತು ವಿಶೇಷ ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ. ಮಿಶ್ರಾ, 2047ರ ವೇಳೆಗೆ ಭಾರತವು ವಿಕಸಿತ ಭಾರತವಾಗುವ ಪ್ರಯಾಣದಲ್ಲಿ ಐ.ಐ.ಟಿ ಧನಬಾದ್ ನ ನಿರ್ಣಾಯಕ ಪಾತ್ರವನ್ನು ತಿಳಿಸಿದರು.
ಈ ವರ್ಷದ ಆರಂಭದಲ್ಲಿ ಐ.ಐ.ಟಿ (ಐ.ಎಸ್.ಎಂ) ಧನಬಾದ್ ನಿಂದ ಡಾ. ಪಿ.ಕೆ. ಮಿಶ್ರಾ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಲಾಗಿತ್ತು.

ಗಣಿಗಾರಿಕೆ, ಇಂಧನ, ಭೂ ವಿಜ್ಞಾನ ಮತ್ತು ಅನ್ವಯಿಕ ಎಂಜಿನಿಯರಿಂಗ್ ಗೆ ಅಪಾರ ಕೊಡುಗೆ ನೀಡಿರುವ ಸಂಸ್ಥೆಯ 100 ವರ್ಷಗಳ ಪರಂಪರೆಯ ಆಚರಣೆಯ ಭಾಗವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಡಾ. ಮಿಶ್ರಾ, ಐ.ಐ.ಟಿ ಧನಬಾದ್ ಏಷ್ಯಾದಲ್ಲಿ ಗಣಿಗಾರಿಕೆ ಶಿಕ್ಷಣದಲ್ಲಿ ಪ್ರವರ್ತಕವಾಗಿದೆ ಮತ್ತು ಕೋಲ್ ಇಂಡಿಯಾ, ಒ.ಎನ್.ಜಿ.ಸಿ, ಜಿ.ಎಸ್.ಐ, ಸಿ.ಎಂ.ಪಿ.ಡಿ.ಐ ಮತ್ತು ಎನ್.ಟಿ.ಪಿ.ಸಿ ಯಂತಹ ರಾಷ್ಟ್ರೀಯ ಸಂಸ್ಥೆಗಳಿಗೆ ನಿರಂತರವಾಗಿ ಪರಿಣತಿಯನ್ನು ಒದಗಿಸಿದೆ ಎಂದು ನೆನಪಿಸಿಕೊಂಡರು. ಇದರ ಸಂಶೋಧನಾ ಫಲಿತಾಂಶಗಳು ಗಣಿ ಸುರಕ್ಷತೆ, ಕಲ್ಲಿದ್ದಲು ಪರಿಶೋಧನೆ, ತೈಲ ಮತ್ತು ಅನಿಲ ಮತ್ತು ಖನಿಜ ಸದ್ಬಳಕೆಯಲ್ಲಿ ರಾಷ್ಟ್ರೀಯ ಮಾನದಂಡಗಳನ್ನು ರೂಪಿಸಿವೆ ಎಂದು ಅವರು ಹೇಳಿದರು. "ಶತಮಾನೋತ್ಸವವು ಒಂದು ಮೈಲಿಗಲ್ಲು ಮಾತ್ರವಲ್ಲ, ಬದಲಾಗಿ ಜ್ಞಾನವನ್ನು ಸಾರ್ವಜನಿಕ ಒಳಿತಿಗಾಗಿ ಸಕಾರಾತ್ಮಕ ಸಾಮಾಜಿಕ ಫಲಿತಾಂಶಗಳಿಗಾಗಿ ಬಳಸಿದಾಗ ನಿರಂತರ ಬದ್ಧತೆಯ ಮೂಲಕ ಏನನ್ನು ಸಾಧಿಸಬಹುದು ಎಂಬುದರ ಜ್ಞಾಪನೆಯಾಗಿದೆ" ಎಂದು ಡಾ. ಮಿಶ್ರಾ ಹೇಳಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ದೀರ್ಘಕಾಲೀನ ದೃಷ್ಟಿಕೋನವನ್ನು ಮುನ್ನಡೆಸುವಲ್ಲಿ ಸಂಸ್ಥೆಯು ತನ್ನ ಪಾತ್ರವನ್ನು ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಧಾನಮಂತ್ರಿ ಅವರ 2047ರ ಭಾರತದ ದೃಷ್ಟಿಕೋನವನ್ನು ತಿಳಿಸಿದ ಶ್ರೀ ಮಿಶ್ರಾ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಮತೋಲನಗೊಳಿಸುತ್ತಾ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ಸಾಧಿಸುವುದು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗುವುದು ಗುರಿಯಾಗಿದೆ ಎಂದು ಹೇಳಿದರು. ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಲಿದೆ, ಮಹಿಳೆಯರು ಅಭಿವೃದ್ಧಿಯನ್ನು ಮುನ್ನಡೆಸುತ್ತಾರೆ, ಆರ್ಥಿಕತೆಯು ಎಲ್ಲರನ್ನೂ ಒಳಗೊಳ್ಳುತ್ತದೆ ಮತ್ತು ನವೀನವಾಗಿರುತ್ತದೆ ಮತ್ತು ಭ್ರಷ್ಟಾಚಾರ, ಜಾತೀಯತೆ ಮತ್ತು ಕೋಮುವಾದಕ್ಕೆ ದೇಶದದಲ್ಲಿ ಯಾವುದೇ ಸ್ಥಾನವಿರುವುದಿಲ್ಲ ಎಂದು ಅವರು ತಿಳಿಸಿದರು.
ಕಳೆದ 11 ವರ್ಷಗಳಲ್ಲಿ ಭಾರತದ ಆರ್ಥಿಕ ಪ್ರಗತಿಯ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿಯವರು, ಪ್ರಧಾನಮಂತ್ರಿ ಅವರ ದೃಷ್ಟಿಕೋನವು ನಾವೀನ್ಯತೆ ಮತ್ತು ಪುನರ್ನಿರ್ಮಾಣವನ್ನು ಆಧರಿಸಿದೆ ಎಂದು ಬಣ್ಣಿಸಿದರು. ಈ ದೃಷ್ಟಿಕೋನದ ನಾಲ್ಕು ಸ್ತಂಭಗಳನ್ನು ಅವರು ವಿವರಿಸಿದರು: ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವುದು, ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು, ಜಾಗತಿಕ ಸವಾಲುಗಳನ್ನು ಎದುರಿಸುವುದು ಮತ್ತು ಕೊನೆಯ ಹಂತದ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು. ಸಾಂಕ್ರಾಮಿಕ ರೋಗ, ವ್ಯಾಪಾರ ಸಮರಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ಹವಾಮಾನ ಬದಲಾವಣೆ ಮತ್ತು ಪೂರೈಕೆ ಸರಪಳಿ ಅಡೆತಡೆಗಳಿಂದ ಜಾಗತಿಕ ಆರ್ಥಿಕತೆಯಲ್ಲಿ ಉಂಟಾದ ಪ್ರಕ್ಷುಬ್ಧತೆಯನ್ನು ಅವರು ಒಪ್ಪಿಕೊಂಡರು. ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ. 8.2ರ ದೃಢವಾದ ಜಿಡಿಪಿ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು ಭಾರತದ ಸಾಮರ್ಥ್ಯಗಳನ್ನು ಉಲ್ಲೇಖಿಸಿದರು. "ಅನಿಶ್ಚಿತತೆಯ ನಡುವೆಯೂ, ಭಾರತವು ಅಮೃತ ಕಾಲದಲ್ಲಿ ಧೈರ್ಯ ಮತ್ತು ವಿಶ್ವಾಸದಿಂದ ಮುನ್ನಡೆಯುತ್ತಿದೆ" ಎಂದು ಅವರು ಹೇಳಿದರು.
ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನದ ಪರಿವರ್ತಕ ಪಾತ್ರವನ್ನು ಡಾ. ಮಿಶ್ರಾ ತಿಳಿಸಿದರು. ಸ್ಮಾರ್ಟ್‌ಫೋನ್ ಗಳು ಮತ್ತು ಬಿಗ್ ಡೇಟಾದಿಂದ ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯವರೆಗೆ, ಬದಲಾವಣೆ ಎಲ್ಲೆಡೆ ಇದೆ ಎಂದು ಅವರು ಹೇಳಿದರು. ಭಾರತವು 100ಕ್ಕೂ ಹೆಚ್ಚು ಯುನಿಕಾರ್ನ್ ಗಳು ಮತ್ತು 200,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಗಳೊಂದಿಗೆ ಜಾಗತಿಕ ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ, ಇದು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಾಗಿದೆ ಎಂದು ಅವರು ಹೇಳಿದರು. ಮೂಲಭೂತ ಸಂಶೋಧನೆ ಮತ್ತು ಮೂಲಮಾದರಿಗಾಗಿ ₹1 ಲಕ್ಷ ಕೋಟಿ ರಾಷ್ಟ್ರೀಯ ಸಂಶೋಧನಾ ನಿಧಿ, ಕೃತಕ ಬುದ್ಧಿಮತ್ತೆಯಲ್ಲಿ ನಾಯಕತ್ವವನ್ನು ನಿರ್ಮಿಸುವ ಇಂಡಿಯಾಎಐ ಮಿಷನ್ ಮತ್ತು ಪರಿವರ್ತನಾಶೀಲ ಸ್ಟಾರ್ಟ್‌ಅಪ್ ಗಳನ್ನು ಬೆಂಬಲಿಸಲು ಮೀಸಲಾದ ಡೀಪ್ ಟೆಕ್ ನಿಧಿ ಸೇರಿದಂತೆ ನಾವೀನ್ಯತೆ ಅಂತರವನ್ನು ನಿವಾರಿಸಲು ಸರ್ಕಾರದ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. "ಭವಿಷ್ಯಕ್ಕೆ ಸಿದ್ಧವಾದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಇವು ಅತ್ಯಗತ್ಯವಾದ ಮೊದಲ ಹೆಜ್ಜೆಗಳಾಗಿವೆ" ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವರ "4S" ಮಂತ್ರಗಳನ್ನು - ವ್ಯಾಪ್ತಿ, ಪ್ರಮಾಣ, ವೇಗ ಮತ್ತು ಕೌಶಲ್ಯ - ಆಡಳಿತದ ಮಾರ್ಗದರ್ಶಿ ತತ್ವಗಳಾಗಿ ವಿವರಿಸಿದ ಡಾ. ಮಿಶ್ರಾ, ತಂತ್ರಜ್ಞಾನ ಮತ್ತು ಮೌಲ್ಯಗಳು ಸಮಗ್ರ, ನಾಗರಿಕ-ಕೇಂದ್ರಿತ ಸೇವಾ ವಿತರಣೆಯನ್ನು ಹೇಗೆ ಸಕ್ರಿಯಗೊಳಿಸುತ್ತಿವೆ ಎಂಬುದನ್ನು ವಿವರಿಸಲು ಆಯುಷ್ಮಾನ್ ಭಾರತ್, ಡಿಜಿಟಲ್ ಇಂಡಿಯಾ, ಯುಪಿಐ ಮತ್ತು ಮಿಷನ್ ಕರ್ಮಯೋಗಿಯಂತಹ ಪ್ರಮುಖ ಉಪಕ್ರಮಗಳನ್ನು ಉಲ್ಲೇಖಿಸಿದರು. ಆಧಾರ್, ಕೋವಿನ್ ಮತ್ತು ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವಾಸ್ತುಶಿಲ್ಪದಂತಹ ವೇದಿಕೆಗಳು ದಕ್ಷತೆ ಮತ್ತು ಸಮಗ್ರ ಸೇವಾ ವಿತರಣೆಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ತೋರಿಸಿವೆ ಎಂದು ಅವರು ಹೇಳಿದರು. "ಅನೇಕ ದೇಶಗಳು, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿ, ಈಗ ಭಾರತವನ್ನು ವಿಶ್ವ ಬಂಧುವಾಗಿ, - ಆಧುನಿಕ ಸಾಮರ್ಥ್ಯಗಳನ್ನು ನಾಗರಿಕ ಬುದ್ಧಿಮತ್ತೆಯೊಂದಿಗೆ ಸಂಯೋಜಿಸುವ ವಿಶ್ವಾಸಾರ್ಹ ಪಾಲುದಾರನಾಗಿ ನೋಡುತ್ತಿರುವುದು ಸಹಜವಾಗಿದೆ " ಎಂದು ಡಾ. ಮಿಶ್ರಾ ಹೇಳಿದರು. ರಾಷ್ಟ್ರೀಯ ಕ್ವಾಂಟಮ್ ಮಿಷನ್, ಚಂದ್ರಯಾನ-3 ಮತ್ತು ಆದಿತ್ಯ-ಎಲ್1 ನಂತಹ ಬಾಹ್ಯಾಕಾಶ ಸಾಧನೆಗಳು, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ನೊಂದಿಗೆ 200 ಗಿಗಾವ್ಯಾಟ್ ದಾಟಿದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ವೈಜ್ಞಾನಿಕ ಪರಿಶೋಧನೆಗಾಗಿ ಸ್ಥಳೀಯ ಸಬ್ ಮರ್ಸಿಬಲ್ ಗಳನ್ನು ಅಭಿವೃದ್ಧಿಪಡಿಸುವ ಡೀಪ್ ಓಷನ್ ಮಿಷನ್ ನಂತಹ ಮುಂಚೂಣಿ ವಲಯಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಅವರು ಗಮನಸೆಳೆದರು.
ಈ ಹಿನ್ನೆಲೆಯಲ್ಲಿ ಐ.ಐ.ಟಿ ಧನಬಾದ್ ನ ವಿಶೇಷ ಜವಾಬ್ದಾರಿಯನ್ನು ಶ್ರೀ ಮಿಶ್ರಾ ತಿಳಿಸಿದರು. ಆಧುನಿಕ ಪ್ರಯೋಗಾಲಯಗಳು, ಸೂಪರ್ ಕಂಪ್ಯೂಟಿಂಗ್ ಕ್ಲಸ್ಟರ್ ಮತ್ತು ಬೆಳೆಯುತ್ತಿರುವ ಇನ್‌ಕ್ಯುಬೇಶನ್ ಪರಿಸರ ವ್ಯವಸ್ಥೆಯೊಂದಿಗೆ, ಸಂಸ್ಥೆಯು ರಾಷ್ಟ್ರದ ಅಗತ್ಯಗಳಿಗೆ ಕೊಡುಗೆ ನೀಡಲು ಉತ್ತಮ ಸ್ಥಾನದಲ್ಲಿದೆ. ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ ಅಡಿಯಲ್ಲಿ ಶ್ರೇಷ್ಠತಾ ಕೇಂದ್ರವಾಗಿ ಇದನ್ನು ಹೆಸರಿಸಿರುವುದು ಭಾರತದ ನಿರ್ಣಾಯಕ ಖನಿಜ ಕಾರ್ಯತಂತ್ರವನ್ನು ರೂಪಿಸುವ ಸಾಮರ್ಥ್ಯದಲ್ಲಿ ರಾಷ್ಟ್ರಕ್ಕಿರುವ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಹವಾಮಾನ, ಖನಿಜಗಳು, ಇಂಧನ ಪರಿವರ್ತನೆ ಮತ್ತು ಸುಧಾರಿತ ತಯಾರಿಕೆಯ ಮೇಲೆ ಗಮನಹರಿಸಲು ಮತ್ತು ಸಾರ್ವಜನಿಕರಿಗೆ ಪ್ರಯೋಜನಕಾರಿಯಾದ ಸಂಶೋಧನೆಯನ್ನು ನಡೆಸಲು ಅವರು ಸಂಸ್ಥೆಯನ್ನು ಒತ್ತಾಯಿಸಿದರು. "ತಾಂತ್ರಿಕ ಕೌಶಲ್ಯಗಳು ಅಗತ್ಯ ಆದರೆ ಅದಷ್ಟೇ ಸಾಕಾಗುವುದಿಲ್ಲ. ವರ್ತನೆ, ತಂಡದ ಕೆಲಸ, ನಮ್ರತೆ ಮತ್ತು ಮೌಲ್ಯಗಳು ಅಷ್ಟೇ ಮುಖ್ಯ" ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಸಾಮೂಹಿಕ ಪ್ರಯತ್ನ, ಪಾರದರ್ಶಕತೆ ಮತ್ತು ಗೌರವ ಅತ್ಯಗತ್ಯ ಎಂದು ಅವರು ತಿಳಿಸಿದರು.
ಭಾರತವು ಸ್ಪಷ್ಟವಾದ ದೀರ್ಘಕಾಲೀನ ನಿರ್ದೇಶನ ಮತ್ತು ಅದನ್ನು ಮುನ್ನಡೆಸಲು ಒಂದು ರಚನೆಯನ್ನು ಹೊಂದಿರುವ ಸಮಯದಲ್ಲಿ ಐ.ಐ.ಟಿ ಧನಬಾದ್ ತನ್ನ ಎರಡನೇ ಶತಮಾನಕ್ಕೆ ಪ್ರವೇಶಿಸುತ್ತಿದೆ ಎಂದು ಡಾ. ಮಿಶ್ರಾ ಹೇಳಿದರು. "ವಿಕಸಿತ ಭಾರತ 2047 ರ ಸಾಂಸ್ಥಿಕ ಸಾಮರ್ಥ್ಯಗಳು ಮತ್ತು ರಾಷ್ಟ್ರೀಯ ಗುರಿಗಳ ನಡುವಿನ ಹೊಂದಾಣಿಕೆ ಸ್ಪಷ್ಟವಾಗಿದೆ. ಮುಂದಿನ 25 ವರ್ಷಗಳು ಭಾರತವು ಜ್ಞಾನ, ತಂತ್ರಜ್ಞಾನ ಮತ್ತು ಮಾನವ ಬಂಡವಾಳವನ್ನು ಹೆಚ್ಚು ಸಮರ್ಥ, ಹೆಮ್ಮೆಯ ಮತ್ತು ಸಮಾನ ರಾಷ್ಟ್ರವನ್ನು ನಿರ್ಮಿಸಲು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ನಿರ್ಧರಿಸುತ್ತದೆ" ಎಂದು ಅವರು ಹೇಳಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ನಿರ್ದೇಶಕ ಪ್ರೊ. ಸುಕುಮಾರ್ ಮಿಶ್ರಾ ಮತ್ತು ಆಯೋಜನಾ ತಂಡಕ್ಕೆ ಅವರು ಧನ್ಯವಾದಗಳನ್ನು ತಿಳಿಸಿದರು ಮತ್ತು ಬೋಧಕ ವರ್ಗ, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.
****
(रिलीज़ आईडी: 2198391)
आगंतुक पटल : 8
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Gujarati
,
Odia
,
Tamil
,
Telugu
,
Malayalam