ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತೀಯ ಅಂಧ ಮಹಿಳಾ ಟಿ 20 ವಿಶ್ವಕಪ್ ಚಾಂಪಿಯನ್‌ಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಸವಾಲುಗಳನ್ನು ನಿವಾರಿಸಿಕೊಂಡು, ಆತ್ಮವಿಶ್ವಾಸ ಬೆಳೆಸುವುದು, ಪ್ರತಿಭೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಪ್ರದರ್ಶಿಸಿದ್ದಕ್ಕಾಗಿ ಆಟಗಾರ್ತಿಯರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಕಠಿಣ ಪರಿಶ್ರಮವು ಕ್ರೀಡಾ ಕ್ಷೇತ್ರ ಮತ್ತು ಜೀವನದಲ್ಲಿ ಯಶಸ್ಸನ್ನು ಖಾತ್ರಿಪಡಿಸುತ್ತದೆ: ಪ್ರಧಾನಮಂತ್ರಿ

ತಂಡದ ಸಾಧನೆಗಳು ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ, ಭಾರತದ ಯುವಕರ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವ ಎತ್ತಿ ತೋರಿಸುತ್ತದೆ: ಪ್ರಧಾನಮಂತ್ರಿ

प्रविष्टि तिथि: 28 NOV 2025 11:18AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ನವದೆಹಲಿಯ 7, ಲೋಕ ಕಲ್ಯಾಣ್ ಮಾರ್ಗದಲ್ಲಿ ನಿನ್ನೆ ಭಾರತೀಯ ಅಂಧ ಮಹಿಳಾ ಟಿ20 ವಿಶ್ವಕಪ್ ಚಾಂಪಿಯನ್‌ಗಳೊಂದಿಗೆ ಸಂವಾದ ನಡೆಸಿದರು. ಶ್ರೀ ನರೇಂದ್ರ ಮೋದಿ ಅವರು ಆಟಗಾರ್ತಿಯರೊಂದಿಗೆ ಆತ್ಮೀಯವಾಗಿ ಮಾತನಾಡಿದರು, ಅವರ ದೃಢಸಂಕಲ್ಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆತ್ಮವಿಶ್ವಾಸ ಮತ್ತು ಸ್ಥಿತಿಸ್ಥಾಪಕತ್ವದಿಂದ ತಮ್ಮ ಪಯಣವನ್ನು ಮುಂದುವರಿಸಲು ಅವರನ್ನು ಪ್ರೋತ್ಸಾಹಿಸಿದರು. ಕಠಿಣ ಪರಿಶ್ರಮದ ಮೂಲಕ ಮುನ್ನಡೆಯುವವರು ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಜೀವನದಲ್ಲಿಯೂ ಸಹ ಎಂದಿಗೂ ವಿಫಲರಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಆಟಗಾರರು ತಮ್ಮದೇ ಆದ ಅಸ್ಮಿತೆಯನ್ನು ಸೃಷ್ಟಿಸಿಕೊಂಡಿದ್ದು, ಅದು ಅವರ ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ ಎಂದು ಅವರು ಉಲ್ಲೇಖಿಸಿದರು.

150 ವರ್ಷಗಳ ವಂದೇ ಮಾತರಂನ ಮಹತ್ವವನ್ನು ಪ್ರಮುಖವಾಗಿ ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, ತಂಡದ ಚೈತನ್ಯವು ಏಕತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದರು. ಭಕ್ತಿ ಗೀತೆಗಳನ್ನು ಹಾಡಿದ ಆಟಗಾರರಲ್ಲಿ ಒಬ್ಬರ ಸಂಗೀತ ಪ್ರತಿಭೆಯನ್ನು ಅವರು ಶ್ಲಾಘಿಸಿದರು, ಅದನ್ನು ಕಾಶಿಯೊಂದಿಗಿನ ತನ್ನ ಸ್ವಂತ ಸಂಬಂಧದೊಂದಿಗೆ ಬೆಸೆದರು.

ಹಾಸ್ಯದ ಧಾಟಿಯಲ್ಲಿ ಪ್ರಧಾನ ಮಂತ್ರಿ ಅವರು ತಂಡದ ಬಹುಮುಖತೆಯನ್ನು ರಾಜಕೀಯಕ್ಕೆ ಹೋಲಿಸಿದರು, ರಾಜಕೀಯದಲ್ಲಿ ವ್ಯಕ್ತಿಗಳು ಸಚಿವರು, ಶಾಸಕರು ಅಥವಾ ಸಂಸದರಂತಹ ವಿಭಿನ್ನ ಪಾತ್ರಗಳನ್ನು ವಹಿಸುವಂತೆಯೇ, ಆಟಗಾರರು ಸಹ ಅಲೌರೌಂಡರ್ ಗಳು ಎಂದು ಬಣ್ಣಿಸಿದರು.

ಸಾಮಾಜಿಕ ಪೂರ್ವಾಗ್ರಹಗಳು ಮತ್ತು ಕೌಟುಂಬಿಕ ಕಷ್ಟಗಳು ಸೇರಿದಂತೆ ಸವಾಲುಗಳನ್ನು ಜಯಿಸಿದ ವೈಯಕ್ತಿಕ ಕಥೆಗಳನ್ನು ಆಟಗಾರ್ತಿಯರಿಬ್ಬರೂ ಹಂಚಿಕೊಂಡರು. ಒಬ್ಬ ಆಟಗಾರ್ತಿ ತನ್ನ ದಿವಂಗತ ತಂದೆಯ ಕನಸನ್ನು ಸ್ಮರಿಸಿಕೊಂಡರು ಮತ್ತು ಪ್ರಧಾನಮಂತ್ರಿಯನ್ನು ಭೇಟಿಯಾಗುವ  ಕನಸನ್ನು ನನಸಾಯಿತು ಎಂದು ಸಂತಸ  ವ್ಯಕ್ತಪಡಿಸಿದರು.

ತಂಡದ ಈ ಯಶಸ್ಸು ವಿಶೇಷ ಚೇತನರಿಗೆ ಮಾತ್ರವಲ್ಲದೆ ಭಾರತದ ಎಲ್ಲಾ ನಾಗರಿಕರಿಗೂ ಸ್ಫೂರ್ತಿಯಾಗಿದೆ ಎಂದು ಪ್ರಧಾನಮಂತ್ರಿ ತಂಡಕ್ಕೆ ಭರವಸೆ ನೀಡಿದರು. ಅವರ ಸಾಧನೆಗಳು ಭಾರತದ ಯುವಕರ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ದೇಶವು ತನ್ನ ಮಕ್ಕಳಲ್ಲಿ ಅಂತಹ ಧೈರ್ಯ ಮತ್ತು ದೃಢಸಂಕಲ್ಪದೊಂದಿಗೆ ಮುಂದುವರಿಯುತ್ತಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

ಜಾಗತಿಕವಾಗಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವಲ್ಲಿ ಮತ್ತು ಅಸಂಖ್ಯಾತ ಇತರರ ಬದ್ಧತೆ ಮತ್ತು ಸ್ಫೂರ್ತಿ ಮೂಲಕ ಪ್ರೇರೇಪಿಸುವಲ್ಲಿ ಅವರ ಪಾತ್ರವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಕೊನೆಯದಾಗಿ ಶ್ರೀ ನರೇಂದ್ರ ಮೋದಿ ತಂಡಕ್ಕೆ ಶುಭ ಹಾರೈಸುವ ಮೂಲಕ ಸಂವಾದವನ್ನು ಮುಕ್ತಾಯಗೊಳಿಸಿದರು.

 

*****


(रिलीज़ आईडी: 2195815) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Malayalam