ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಐ.ಬಿ.ಎಸ್.ಎ ನಾಯಕರ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಹೇಳಿಕೆಯ ಕನ್ನಡ ಅನುವಾದ

Posted On: 23 NOV 2025 2:29PM by PIB Bengaluru

ಗೌರವಾನ್ವಿತ ಅಧ್ಯಕ್ಷ ರಾಮಫೋಸಾ,
ಗೌರವಾನ್ವಿತ ಅಧ್ಯಕ್ಷ ಲೂಲಾ,
ಸ್ನೇಹಿತರೇ,

ನಮಸ್ಕಾರ!

ಜೋಹಾನ್ಸ್‌ಬರ್ಗ್‌ನ ರೋಮಾಂಚಕ ಮತ್ತು ಸುಂದರ ನಗರದಲ್ಲಿ ನಡೆಯುತ್ತಿರುವ ಐಬಿಎಸ್‌ಎ ನಾಯಕರ ಸಭೆಯಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಉಪಕ್ರಮಕ್ಕಾಗಿ ಐಬಿಎಸ್‌ಎ ಅಧ್ಯಕ್ಷ ಲೂಲಾ ಮತ್ತು ಅವರ ಆತ್ಮೀಯ ಆತಿಥ್ಯಕ್ಕಾಗಿ ಅಧ್ಯಕ್ಷ ರಾಮಫೋಸಾ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಐಬಿಎಸ್‌ಎ ಕೇವಲ ಮೂರು ದೇಶಗಳ ವೇದಿಕೆಯಲ್ಲ; ಇದು ಮೂರು ಖಂಡಗಳು, ಮೂರು ಪ್ರಮುಖ ಪ್ರಜಾಪ್ರಭುತ್ವ ಶಕ್ತಿಗಳು ಮತ್ತು ಮೂರು ಮಹತ್ವದ ಆರ್ಥಿಕತೆಗಳನ್ನು ಜೋಡಿಸುವ ಪ್ರಮುಖ ವೇದಿಕೆಯಾಗಿದೆ. ಇದು ನಮ್ಮ ವೈವಿಧ್ಯತೆ, ಹಂಚಿಕೆಯ ಮೌಲ್ಯಗಳು ಮತ್ತು ಹಂಚಿಕೆಯ ಆಕಾಂಕ್ಷೆಗಳಲ್ಲಿ ಬೇರೂರಿರುವ ಆಳವಾದ ಮತ್ತು ನಿರಂತರ ಪಾಲುದಾರಿಕೆಯಾಗಿದೆ.

ಸ್ನೇಹಿತರೇ,

ಇಂದಿನ ಐ.ಬಿ.ಎಸ್.ಎ ನಾಯಕರ ಸಭೆ ಐತಿಹಾಸಿಕ ಮತ್ತು ಸಕಾಲಿಕವಾಗಿದೆ. ಆಫ್ರಿಕನ್ ಖಂಡದಲ್ಲಿ ನಡೆಯುತ್ತಿರುವ ಈ ಮೊದಲ ಜಿ20 ಶೃಂಗಸಭೆಯು ಜಾಗತಿಕ ದಕ್ಷಿಣ ದೇಶಗಳ ನೇತೃತ್ವದ  ಸತತ ನಾಲ್ಕು ಜಿ20 ಅಧ್ಯಕ್ಷತೆಗಳ ಸಂಯೋಜನೆಯ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ, ಮೂರು ಐ.ಬಿ.ಎಸ್.ಎ ರಾಷ್ಟ್ರಗಳು ಜಿ20 ನೇತೃತ್ವ ವಹಿಸಿವೆ. ಈ ಮೂರು ಶೃಂಗಸಭೆಗಳಲ್ಲಿ, ಮಾನವ ಕೇಂದ್ರಿತ ಅಭಿವೃದ್ಧಿ, ಬಹುಪಕ್ಷೀಯ ಸುಧಾರಣೆ ಮತ್ತು ಸುಸ್ಥಿರ ಬೆಳವಣಿಗೆ ಸೇರಿದಂತೆ ಹಂಚಿಕೆಯ ಆದ್ಯತೆಗಳ ಕುರಿತು ನಾವು ಹಲವಾರು ಪ್ರಮುಖ ಉಪಕ್ರಮಗಳನ್ನು ಮುಂದಿಟ್ಟಿದ್ದೇವೆ. ಈ ಉಪಕ್ರಮಗಳನ್ನು ಬಲಪಡಿಸುವುದು ಮತ್ತು ಅವುಗಳ ಪ್ರಭಾವವನ್ನು ಹೆಚ್ಚಿಸುವುದು ಈಗ ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಈ ಉತ್ಸಾಹದಲ್ಲಿ, ನಮ್ಮ ಸಹಕಾರದ ಕುರಿತು ಕೆಲವು ಸಲಹೆಗಳನ್ನು ನೀಡಲು ನಾನು ಬಯಸುತ್ತೇನೆ.

ಸ್ನೇಹಿತರೇ,

ಮೊದಲನೆಯದಾಗಿ, ಜಾಗತಿಕ ಸಂಸ್ಥೆಗಳು 21ನೇ ಶತಮಾನದ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ನಾವೆಲ್ಲರೂ ಒಪ್ಪುತ್ತೇವೆ. ನಮ್ಮಲ್ಲಿ ಯಾರೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಲ್ಲ. ಜಾಗತಿಕ ಸಂಸ್ಥೆಗಳು ಇಂದಿನ ಜಗತ್ತನ್ನು ಪ್ರತಿನಿಧಿಸುವುದಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ, ಐ.ಬಿ.ಎಸ್.ಎ ಜಗತ್ತಿಗೆ ಏಕೀಕೃತ ಸಂದೇಶವನ್ನು ಕಳುಹಿಸಬೇಕು: ಸಾಂಸ್ಥಿಕ ಸುಧಾರಣೆ ಒಂದು ಆಯ್ಕೆಯಲ್ಲ ಆದರೆ ಒಂದು ವಿಶೇಷ ಹಕ್ಕು ಬದ್ಧತೆ. 

ಅದೇ ರೀತಿ, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಾವು ನಿಕಟ ಸಮನ್ವಯದಿಂದ ಕೆಲಸ ಮಾಡಬೇಕು. ಅಂತಹ ಗಂಭೀರತೆಯ ವಿಷಯದಲ್ಲಿ, ಎರಡು ಮಾನದಂಡಗಳಿಗೆ ಅವಕಾಶವಿಲ್ಲ. ಜಾಗತಿಕ ಶಾಂತಿ ಮತ್ತು ಸಮೃದ್ಧಿಗಾಗಿ, ಒಗ್ಗಟ್ಟಿನ ಮತ್ತು ನಿರ್ಣಾಯಕ ಕ್ರಮ ಅತ್ಯಗತ್ಯ.

ಮೂರು ದೇಶಗಳ ಎನ್.‌ಎಸ್.‌ಎ ಗಳ ಮೊದಲ ಸಭೆಯು 2021ರಲ್ಲಿ ಭಾರತದ ಐಬಿಎಸ್‌ಎ ಅಧ್ಯಕ್ಷತೆಯಲ್ಲಿ ನಡೆಯಿತು. ಭದ್ರತಾ ಸಹಕಾರವನ್ನು ಬಲಪಡಿಸಲು ನಾವು ಇದನ್ನು ಸಾಂಸ್ಥಿಕಗೊಳಿಸಬಹುದು.

ಸ್ನೇಹಿತರೇ,

ಮಾನವ ಕೇಂದ್ರಿತ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ. ಐ.ಬಿ.ಎಸ್.ಎ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ, ವಿಶೇಷವಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಕೃತಕ ಬುದ್ಧಿಮತ್ತೆಯ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು. ಈ ನಿಟ್ಟಿನಲ್ಲಿ, ನಾವು "ಐ.ಬಿ.ಎಸ್.ಎ ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್" (ಐ.ಬಿ.ಎಸ್.ಎ. ಡಿಜಿಟಲ್ ನಾವೀನ್ಯತಾ ಮಿತ್ರಕೂಟ) ಸ್ಥಾಪಿಸುವುದನ್ನು ಪರಿಗಣಿಸಬಹುದು, ಅದರ ಮೂಲಕ ಯು.ಪಿ.ಐ, ಕೋವಿನ್‌ನಂತಹ ಆರೋಗ್ಯ ವೇದಿಕೆಗಳು, ಸೈಬರ್‌ ಸೆಕ್ಯುರಿಟಿ ಫ್ರೇಮ್‌ವರ್ಕ್‌ಗಳು ಮತ್ತು ಮಹಿಳೆಯರ ನೇತೃತ್ವದ ತಂತ್ರಜ್ಞಾನ ಉಪಕ್ರಮಗಳಂತಹ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಮ್ಮ ಮೂರು ದೇಶಗಳಲ್ಲಿ ಹಂಚಿಕೊಳ್ಳಬಹುದು. ಇದು ನಮ್ಮ ಡಿಜಿಟಲ್ ಆರ್ಥಿಕತೆಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ಜಾಗತಿಕ ದಕ್ಷಿಣಕ್ಕೆ ವಿಸ್ತಾರ ವ್ಯಾಪ್ತಿಯ ಪರಿಹಾರಗಳನ್ನು ಸೃಷ್ಟಿಸುತ್ತದೆ. ಒಟ್ಟಾಗಿ, ನಾವು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಮಾನವ ಕೇಂದ್ರಿತ ಕೃತಕ ಬುದ್ಧಿಮತ್ತೆ  ಮಾನದಂಡಗಳ ಸೃಷ್ಟಿಗೆ ಕೊಡುಗೆ ನೀಡಬಹುದು. ಮುಂದಿನ ವರ್ಷ ಭಾರತದಲ್ಲಿ ನಡೆಯುವ ಕೃತಕ ಬುದ್ಧಿಮತ್ತೆ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಇದನ್ನು ಪ್ರಾರಂಭಿಸಬಹುದು.

ಸ್ನೇಹಿತರೇ,

ಸುಸ್ಥಿರ ಬೆಳವಣಿಗೆಗೆ, ಐ.ಬಿ.ಎಸ್.ಎ ಪರಸ್ಪರರ ಅಭಿವೃದ್ಧಿ ಪ್ರಯತ್ನಗಳಿಗೆ ಪೂರಕವಾಗುವುದಲ್ಲದೆ, ಜಗತ್ತಿಗೆ ಒಂದು ಉದಾಹರಣೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಸಿರಿ ಧಾನ್ಯಗಳು ಮತ್ತು ನೈಸರ್ಗಿಕ ಕೃಷಿ, ವಿಪತ್ತು ಸ್ಥಿತಿಸ್ಥಾಪಕತ್ವ ಮತ್ತು ಹಸಿರು ಶಕ್ತಿಯ ಪ್ರಚಾರದಲ್ಲಿ ಅಥವಾ ಸಾಂಪ್ರದಾಯಿಕ ಔಷಧ ಮತ್ತು ಆರೋಗ್ಯ ಭದ್ರತೆಯಲ್ಲಿ, ನಮ್ಮ ಸಾಮರ್ಥ್ಯಗಳನ್ನು ಸಂಯೋಜಿಸುವ ಮೂಲಕ, ನಾವು ಜಾಗತಿಕ ಕಲ್ಯಾಣಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಬಹುದು.

ಈ ದೃಷ್ಟಿಕೋನದಿಂದಲೇ ಐ.ಬಿ.ಎಸ್.ಎ ನಿಧಿಯನ್ನು ರಚಿಸಲಾಗಿದೆ. ಅದರ ಬೆಂಬಲದೊಂದಿಗೆ, ನಾವು ನಲವತ್ತು ದೇಶಗಳಲ್ಲಿ ಸುಮಾರು ಐವತ್ತು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಶಿಕ್ಷಣ ಮತ್ತು ಆರೋಗ್ಯದಿಂದ ಮಹಿಳಾ ಸಬಲೀಕರಣ ಮತ್ತು ಸೌರಶಕ್ತಿಯವರೆಗಿನ ಈ ಉಪಕ್ರಮಗಳನ್ನು ಸ್ಥಳೀಯ ಸಮುದಾಯಗಳ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗಿದೆ. ಈ ಸಹಕಾರದ ಮನೋಭಾವವನ್ನು ಮತ್ತಷ್ಟು ಬಲಪಡಿಸಲು, ಹವಾಮಾನ-ಸ್ಥಿತಿಸ್ಥಾಪಕತ್ವದ ಕೃಷಿಗಾಗಿ ಐ.ಬಿ.ಎಸ್.ಎ ನಿಧಿಯನ್ನು ಸ್ಥಾಪಿಸುವುದನ್ನು ನಾವು ಪರಿಗಣಿಸಬಹುದು.

ಸ್ನೇಹಿತರೇ,

ಇಂದಿನ ಜಗತ್ತು ಹಲವು ರಂಗಗಳಲ್ಲಿ ಛಿದ್ರವಾಗಿ ಮತ್ತು ವಿಭಜಿತವಾಗಿ ಕಾಣುತ್ತಿದೆ. ಅಂತಹ ಸಮಯದಲ್ಲಿ, ಐ.ಬಿ.ಎಸ್.ಎ ಏಕತೆ, ಸಹಕಾರ ಮತ್ತು ಮಾನವೀಯತೆಯ ಸಂದೇಶವನ್ನು ನೀಡಬಲ್ಲದು. ಇದು ಮೂರು ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ನಮ್ಮ ಜವಾಬ್ದಾರಿ ಮತ್ತು ನಮ್ಮ ಶಕ್ತಿ ಎರಡೂ ಆಗಿದೆ.

ತುಂಬಾ ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****


(Release ID: 2193246) Visitor Counter : 5