ಸಹಜ ಪ್ರತಿಭೆ: ಜಾಣ್ಮೆ, ಬುದ್ಧಿವಂತಿಕೆ ಮತ್ತು ಸಿನಿಮೀಯ ಅದ್ಭುತದೊಂದಿಗೆ ಐ.ಎಫ್.ಎಫ್.ಐ ಗೆ ಮೆರುಗು ನೀಡಿದ ವಿಧು ವಿನೋದ್ ಚೋಪ್ರಾ
ಪ್ರೇಕ್ಷಕರು ನಗು ಮತ್ತು ಚಪ್ಪಾಳೆಯಲ್ಲಿ ಮುಳುಗುತ್ತಿದ್ದಂತೆ ಉಪಕಥೆಗಳು ಮುಕ್ತವಾಗಿ ಹರಿದವು
ಕಾಮ್ನಾ ಚಂದ್ರ ತಮ್ಮ ಪ್ರಯಾಣವನ್ನು ಹಂಚಿಕೊಳ್ಳುವಾಗ ಜೀವಂತ ಪರಂಪರೆ ಗಮನ ಸೆಳೆಯಿತು
"ಅನ್‌ಸ್ಕ್ರಿಪ್ಟ್ಡ್ - ದಿ ಆರ್ಟ್ ಅಂಡ್ ಎಮೋಷನ್ ಆಫ್ ಫಿಲ್ಮ್ ಮೇಕಿಂಗ್" ಎಂಬ ಶೀರ್ಷಿಕೆಯ ಐ.ಎಫ್.ಎಫ್.ಐ ನಲ್ಲಿ ನಡೆದ ಸಂವಾದ ಗೋಷ್ಠಿಯು ಇಂದು ಕಲಾ ಅಕಾಡೆಮಿಯನ್ನು ಚಲನಚಿತ್ರ ಸೆಟ್ ಆಗಿ ಪರಿವರ್ತಿಸಿತು. ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ವಿಧು ವಿನೋದ್ ಚೋಪ್ರಾ ವೇದಿಕೆ ಏರಿದಾಗ, ಖ್ಯಾತ ಚಿತ್ರಕಥೆಗಾರ ಅಭಿಜತ್ ಜೋಶಿ ಅವರೊಂದಿಗೆ ಪ್ರಾಮಾಣಿಕ ಸಂವಾದ ನಡೆಯಿತು. ಈ ಸಂವಾದವು ಪ್ರೇಕ್ಷಕರನ್ನು ಶುಕ್ರವಾರದ ಬ್ಲಾಕ್ ಬಸ್ಟರ್ ನಂತೆ ಹಿಡಿದಿಟ್ಟುಕೊಂಡಿತು.
ಗೋಷ್ಠಿಯ ಆರಂಭದಲ್ಲಿ, ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ಡಾ. ಎಂ.ಎನ್. ಅಜಯ್ ನಾಗಭೂಷಣ್ ಅವರು ಚೋಪ್ರಾ ಮತ್ತು ಜೋಶಿ ಅವರನ್ನು ಸನ್ಮಾನಿಸಿದರು. ನಂತರ ಖ್ಯಾತ ಚಲನಚಿತ್ರ ನಿರ್ಮಾಪಕ ಶ್ರೀ ರವಿ ಕೊಟ್ಟಾರಕ್ಕರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಚೋಪ್ರಾ ತಮ್ಮ ವಿಶಿಷ್ಟ ಪ್ರಾಮಾಣಿಕತೆಯಿಂದ ಯುವ ಚಲನಚಿತ್ರ ನಿರ್ಮಾಪಕರಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಡಾ. ಅಜಯ್ ಆಶಿಸಿದರು. ಚೋಪ್ರಾ ಅವರ "ಪರಿಂದಾ" ಚಿತ್ರವನ್ನು ಭಾರತೀಯ ಚಿತ್ರರಂಗವನ್ನು ಪುನಃ ಬರೆದ "ಗೇಮ್ ಚೇಂಜರ್ ಸಿನಿಮಾ" ಎಂದು ರವಿ ಬಣ್ಣಿಸಿದರು.
ಸ್ವಂತ ಸೃಷ್ಟಿಯ ಚಲನಚಿತ್ರ ನಿರ್ಮಾತೃ

ಅಭಿಜತ್ ಜೋಶಿ ಸಂವಾದವನ್ನು ಆರಂಭಿಸುತ್ತಾ, ವಿಧು ವಿನೋದ್ ಚೋಪ್ರಾ ಅವರನ್ನು ಮೊದಲ ಬಾರಿಗೆ ಭೇಟಿಯಾದ ನವೆಂಬರ್ ನ ಆ ದಿನವನ್ನು ಸ್ಪಷ್ಟವಾಗಿ ನೆನಪಿಸಿಕೊಂಡರು, ಆ ಕ್ಷಣವು ಅಂತಿಮವಾಗಿ "ಲಗೇ ರಹೋ ಮುನ್ನಾ ಭಾಯ್" ಮತ್ತು "3 ಈಡಿಯಟ್ಸ್" ನಂತಹ ಚಿತ್ರಗಳಿಗೆ ಕಾರಣವಾಯಿತು ಎಂದರು. ನಂತರ ಅವರು ಚೋಪ್ರಾ ಅವರನ್ನು ನಿಮ್ಮ ಶೈಲಿ "ಪರಿಂದಾ" ದಿಂದ "12th ಫೇಲ್" ವರೆಗೆ ಬದಲಾಗಿದೆಯೇ ಎಂದು ಕೇಳಿದರು. ಚೋಪ್ರಾ ಅವರ ಉತ್ತರವು ಅಷ್ಟೇ ಕಚ್ಚಾ ಮತ್ತು ಪ್ರಾಮಾಣಿಕವಾಗಿತ್ತು.
"ಪ್ರತಿಯೊಂದು ಚಿತ್ರವೂ ಆ ಸಮಯದಲ್ಲಿ ನಾನು ಯಾರಾಗಿದ್ದೆ ಎಂಬುದನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಹೇಳಿದರು. "ನಾನು 'ಪರಿಂದಾ' ಚಿತ್ರವನ್ನು ಮಾಡಿದಾಗ, ನನಗೆ ಕೋಪವಿತ್ತು. ಆ ಹಿಂಸೆಯನ್ನು ನೀವು ಚಿತ್ರದಲ್ಲಿ ನೋಡಬಹುದು. ಇವತ್ತು, ನಾನು ಶಾಂತವಾಗಿದ್ದೇನೆ." ಎಂದು ಅವರು ಉತ್ತರಿಸಿದರು.
ತಮ್ಮ ಸುತ್ತಲಿನ ಭ್ರಷ್ಟಾಚಾರವನ್ನು ನೋಡಿದ ನಂತರ "12th ಫೇಲ್" ಅನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಚಿತ್ರ ನನಗೆ ಬದಲಾವಣೆಗಾಗಿ ಮಾರ್ಗವಾಗಿತ್ತು. ನಾನು ಅಧಿಕಾರಶಾಹಿಯ ಶೇ.1 ರಷ್ಟನ್ನಾದರೂ ಬದಲಾಯಿಸಲು ಸಾಧ್ಯವಾದರೆ, ಅಷ್ಟೇ ಸಾಕು" ಎಂದರು. ಹೊಸದಾಗಿ ಪುನಃಸ್ಥಾಪಿಸಲಾದ 8K ಆವೃತ್ತಿಯಲ್ಲಿ '1942: ಎ ಲವ್ ಸ್ಟೋರಿ' ನೋಡಿದಾಗ ತಾವು ಹೇಗೆ ಭಾವುಕರಾದರು ಎಂಬುದನ್ನು ಅವರು ಹಂಚಿಕೊಂಡರು. ಅವರು ಇಂದು ಅದೇ ವ್ಯಕ್ತಿಯಾಗಿಲ್ಲದ ಕಾರಣ ಅವರು ಆ ಸಿನಿಮಾವನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮನೋನಿಶ್ಚಯದ ಸಿನಿಮಾ
ಚೋಪ್ರಾ ಅವರ ಶ್ರೇಷ್ಠ ಲಕ್ಷಣವೆಂದರೆ ತಮ್ಮ ನಂಬಿಕೆಗೆ ಅವರ ಅಚಲ ನಿಷ್ಠೆ ಎಂದು ಜೋಶಿ ಹೇಳಿದರು. "ಅವರು ಎಂದಿಗೂ ಚಲನಚಿತ್ರದ ವಾಣಿಜ್ಯ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ; ಅವರು ಅದರ ಕಲಾತ್ಮಕ ಭವಿಷ್ಯದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ" ಎಂದು ಅವರು ಹೇಳಿದರು ಮತ್ತು ನಂತರ ಸಂಭಾಷಣೆಯನ್ನು "ಪರಿಂದಾ" ಮತ್ತು "12th ಫೇಲ್" ದ ಹಿಂದಿನ ಸೃಜನಶೀಲ ಪ್ರಕ್ರಿಯೆಯ ಕಡೆಗೆ ತಿರುಗಿಸಿದರು.
ತಯಾರಿ, ದೃಷ್ಟಿ ಮತ್ತು ದೃಶ್ಯ ಸತ್ಯದ ಅನ್ವೇಷಣೆಯ ಬಗ್ಗೆ ಚೋಪ್ರಾ ಉತ್ಸಾಹದಿಂದ ಮಾತನಾಡಿದರು. ಅವರು "1942: ಎ ಲವ್ ಸ್ಟೋರಿ" ಯ ಪ್ರಸಿದ್ಧ ಶಾಟ್ ಅನ್ನು ವಿವರಿಸಿದರು, ಪ್ರೇಕ್ಷಕರು ಹುರಿದುಂಬಿಸುತ್ತಿದ್ದಂತೆ ಭಾವಪೂರ್ಣವಾಗಿ ಹಾಡಿದರು. ಪರ್ವತದ ತುದಿಯ ಮೇಲೆ ನಿಜವಾದ ಪಕ್ಷಿಗಳು ಹಾರುವಂತೆ ಅವರ ತಂಡವು ಬ್ರೆಡ್ ತುಂಡುಗಳನ್ನು ಹೇಗೆ ಹರಡಿತು ಎಂಬುದರ ಕುರಿತು ವಿವರಿಸಿದರು. ನಿನ್ನೆ ಆ ದೃಶ್ಯವನ್ನು 8K ನಲ್ಲಿ ನೋಡಿದಾಗ, "ಸಂತೋಷವಾಯಿತು" ಎಂದು ಹೇಳಿದರು.
ಸಭಾಂಗಣವನ್ನು ನಗೆಗಡಲಲ್ಲಿ ಮುಳುಗಿಸಿದ ಉಪಕಥೆಗಳು

ನಂತರ ನಡೆದದ್ದು ಹಾಸ್ಯಮಯ ಮತ್ತು ಹೃದಯಸ್ಪರ್ಶಿ ನೆನಪುಗಳ ಸರಮಾಲೆ. ಒಂದು ಸಣ್ಣ ಕೋಣೆಯ ಫ್ಲಾಟ್ ನಲ್ಲಿ 'ಖಾಮೋಶ್' ಬರೆದಿದ್ದನ್ನು ಚೋಪ್ರಾ ನೆನಪಿಸಿಕೊಂಡರು, ಅಲ್ಲಿ ಅವರು ಸಂಭಾಷಣೆಗಳನ್ನು ಜೋರಾಗಿ ಹೇಳುತ್ತಿದ್ದರು ಮತ್ತು ಛಾವಣಿಯ ಮೇಲೆ ಕುಳಿತು "ಕಟ್, ಕಟ್!" ಎಂದು ಕೂಗಿ ನೆರೆಹೊರೆಯವರನ್ನು ಭಯಭೀತಗೊಳಿಸುತ್ತಿದ್ದರು. "ವಿಧು ಸಿನಿಮಾ ಮಾಡುವಾಗ ಮಗುವಿನಂತೆ ಸಡಗರಪಡುತ್ತಾರೆ" ಎಂದು ಜೋಶಿ ಹೇಳಿದರು.
ಪ್ರೇಕ್ಷಕರಿಗೆ ಹಿಡಿಸಿದ ಮತ್ತೊಂದು ಕಥೆಯೆಂದರೆ, ನಟ ಜಾಕಿ ಶ್ರಾಫ್ ಅಭ್ಯಾಸದ ಸಮಯದಲ್ಲಿ ಆಕಸ್ಮಿಕವಾಗಿ ತಪ್ಪು ಅಪಾರ್ಟ್ಮೆಂಟ್ ಒಳಗೆ ಹೋದರು, ಗಾಬರಿಗೊಂಡ ಮಹಿಳೆಯನ್ನು ಎಬ್ಬಿಸಿ, ಅವಳಿಗೆ ಹೂವುಗಳನ್ನು ನೀಡಿದರು. "ಜಾಕಿ ಶ್ರಾಫ್ ತನ್ನನ್ನು ಭೇಟಿ ಮಾಡಿದ್ದಾಗಿ ಕನಸು ಕಂಡದ್ದಾಗಿ ಎಲ್ಲರಿಗೂ ಅವಳು ಹೇಳಿದಳು" ಎಂದು ಚೋಪ್ರಾ ನಕ್ಕರು.
ಸಂಗೀತ, ಹುಚ್ಚುತನ, ಮ್ಯಾಜಿಕ್

'1942: ಎ ಲವ್ ಸ್ಟೋರಿ' ಬಗ್ಗೆ ಮಾತನಾಡಿದ ಚೋಪ್ರಾ, ತಾನು ಆರ್.ಡಿ. ಬರ್ಮನ್ ಅವರೊಂದಿಗೆ ಕೆಲಸ ಮಾಡಲು ದೃಢನಿಶ್ಚಯ ಮಾಡಿದ್ದಾಗಿ ವಿವರಿಸಿದರು, ಕೆಲವರು ಬರ್ಮನ್ ಅವರ ಸಮಯ ಮುಗಿದಿದೆ ಎಂದು ಹೇಳಿದರು. ಬರ್ಮನ್ ಆರಂಭಿಕ ರಾಗಗಳನ್ನು ನೀಡಿದಾಗ, ಚೋಪ್ರಾ ಅವುಗಳನ್ನು ನೇರವಾಗಿ ತಿರಸ್ಕರಿಸಿದರು. "ನಾನು ಅದನ್ನು ಕಸ ಎಂದು ಕರೆದೆ. ನನಗೆ ಎಸ್.ಡಿ. ಬರ್ಮನ್ ಅವರ ಆತ್ಮ ಬೇಕಿತ್ತು." ವಾರಗಳ ನಂತರ, "ಕುಚ್ ನಾ ಕಹೋ" ಹಾಡು ಬಂದಿತು. ಚೋಪ್ರಾ ವೇದಿಕೆಯಲ್ಲಿ ಆ ಮಧುರ ಹಾಡನ್ನು ಹಾಡಿದರು, ಚಪ್ಪಾಳೆ ಗಿಟ್ಟಿಸಿದರು. "ನಾನು ಆ ಒಂದು ಪದವನ್ನು ಹೇಳಿದ್ದರಿಂದಲೇ ಈ ಹಾಡು ಅಸ್ತಿತ್ವದಲ್ಲಿದೆ" ಎಂದು ಅವರು ತಮಾಷೆ ಮಾಡಿದರು.
ಚೋಪ್ರಾ ತಮ್ಮ ಪ್ರಸಿದ್ಧ ರಾಷ್ಟ್ರೀಯ ಪ್ರಶಸ್ತಿಯ ಕಥೆಯನ್ನು ಮತ್ತೊಮ್ಮೆ ನೆನಪಿಸಿಕೊಂಡರು. ಪ್ರಶಸ್ತಿಯ ಜೊತೆಗೆ ₹4,000 ನಗದು ಸಿಗುತ್ತದೆ ಎಂದು ನಿರೀಕ್ಷಿಸಿದ್ದ ಅವರು, ಎಂಟು ವರ್ಷಗಳ ಅಂಚೆ ಬಾಂಡ್ ಪಡೆದಿದ್ದನ್ನು ವಿವರಿಸಿದರು. ಎಲ್.ಕೆ. ಅಡ್ವಾಣಿ ಅವರೊಂದಿಗಿನ ಅವರ ವಾದದ ಹಾಸ್ಯಮಯ ಮರುಸೃಷ್ಟಿಯು ಸಭಾಂಗಣವನ್ನು ನಗೆಗಡಲಲ್ಲಿ ತೇಲಿಸಿತು. ಆಸ್ಕರ್ ಪ್ರಶಸ್ತಿಗೆ ಹಾಜರಾಗಲು ಸಹಾಯ ಮಾಡುವುದೂ ಸೇರಿದಂತೆ ಅಡ್ವಾಣಿಯವರ ನಂತರದ ಬೆಂಬಲವನ್ನು ಅವರು ನೆನಪಿಸಿಕೊಂಡರು.
ಕ್ಲಾಸಿಕ್ ಗಳ ಹಿಂದಿನ ಧ್ವನಿಗಳು ಸೇರಿಕೊಂಡವು
ಹೃದಯಸ್ಪರ್ಶಿ ಕ್ಷಣದಲ್ಲಿ, '1942: ಎ ಲವ್ ಸ್ಟೋರಿ' ಚಿತ್ರದ ಬರಹಗಾರ್ತಿ ಮತ್ತು ಚೋಪ್ರಾ ಅವರ ಅತ್ತೆ 92 ವರ್ಷದ ಕಾಮ್ನಾ ಚಂದ್ರ, ನಿರ್ಮಾಪಕ ಯೋಗೇಶ್ ಈಶ್ವರ್ ಅವರೊಂದಿಗೆ ಸಂವಾದದಲ್ಲಿ ಸೇರಿಕೊಂಡರು. ಪ್ರತಿ ಸಂಭಾಷಣೆಗೂ ಶ್ರಮ ಹಾಕಿದ ಬಗ್ಗೆ ಮತ್ತು ಮರುಸ್ಥಾಪಿಸಲಾದ ಆವೃತ್ತಿಯನ್ನು ನೋಡುವಾಗ ಅವರು ಅನುಭವಿಸಿದ ಭಾವನೆಯ ಬಗ್ಗೆ ಕಾಮ್ನಾ ಮಾತನಾಡಿದರು. "ನಾನು ಜೀವನದಲ್ಲಿ ಏನನ್ನಾದರೂ ಮಾಡಿದ್ದೇನೆ ಎಂದು ನನಗೆ ಅನಿಸಿತು" ಎಂದು ಅವರು ಹೇಳಿದರು.
ಇಟಲಿಯಲ್ಲಿ ನಡೆದ 8K ಮರುಸ್ಥಾಪನೆಯ ಪ್ರಯಾಣವನ್ನು ಯೋಗೇಶ್ ವಿವರಿಸಿದರು, ಇದರಲ್ಲಿ ಚಿತ್ರವನ್ನು ಫ್ರೇಮ್-ಬೈ-ಫ್ರೇಮ್ ಅನ್ನು ಸ್ವಚ್ಛಗೊಳಿಸಿ ಧ್ವನಿಗಾಗಿ ಮರುಮಾದರಿ ಮಾಡಲಾಯಿತು. ಮರುಸ್ಥಾಪಿಸಲಾದ ಆವೃತ್ತಿಯು "ನಾನು ಅಂದುಕೊಂಡಂತೆಯೇ ಕಾಣುತ್ತಿದೆ" ಎಂದು ಚೋಪ್ರಾ ಹೇಳಿದರು.
ಗೋಷ್ಠಿಯು ಮೋಜಿನ ಪ್ರಶ್ನೋತ್ತರಗಳೊಂದಿಗೆ ಕೊನೆಗೊಂಡಿತು, ಆದರೆ ನಿಜವಾದ ಮ್ಯಾಜಿಕ್ ಈಗಾಗಲೇ ಪ್ರಾರಂಭವಾಗಿದೆ ಎಂಬುದು ಸ್ಪಷ್ಟವಾಗಿತ್ತು. ಪ್ರೇಕ್ಷಕರು ದಶಕಗಳ ಸಿನಿಮಾ ಮೂಲಕ ಪ್ರಯಾಣಿಸಿದರು, ಚಲನಚಿತ್ರ ನಿರ್ಮಾಣದ ಸಂತೋಷ ಮತ್ತು ಚಮತ್ಕಾರಗಳ ಮೂಲಕ ಬದುಕಿದರು ಮತ್ತು ಭಾರತದ ಅತ್ಯಂತ ಪ್ರೀತಿಯ ಕೆಲವು ಚಲನಚಿತ್ರಗಳನ್ನು ರೂಪಿಸಿದ ವಿಧು ಮತ್ತು ಅಭಿಜತ್ ನಡುವಿನ ಸೃಜನಶೀಲ ಪಾಲುದಾರಿಕೆಯನ್ನು ವೀಕ್ಷಿಸಿದರು.
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿದೆ. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮತ್ತು ಗೋವಾ ಸರ್ಕಾರದ ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸುತ್ತವೆ. ಈ ಉತ್ಸವವು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳು ದಿಟ್ಟ ಪ್ರಯೋಗಗಳನ್ನು ಸಂಧಿಸುತ್ತವೆ ಮತ್ತು ಹೆಸರಾಂತ ಕಲಾವಿದರು ಮೊದಲ ಬಾರಿಯ ಧೈರ್ಯಶಾಲಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ಅನ್ನು ನಿಜವಾಗಿಯೂ ಅದ್ಭುತವಾಗಿಸುವುದು ಅದರ ಅದ್ಭುತವಾದ ಸಮ್ಮಿಲನಗಳು - ಅಂತರರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್ ಗಳು, ಗೌರವಗಳು ಮತ್ತು ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ವ್ಯವಹಾರಗಳು ಮತ್ತು ಸಹಯೋಗಗಳು ಹುಟ್ಟುತ್ತವೆ. ಗೋವಾದ ಬೆರಗುಗೊಳಿಸುವ ಕಡಲತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುವ 56ನೇ ಆವೃತ್ತಿಯು ಬೆರಗುಗೊಳಿಸುವ ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಒಂದು ಅದ್ಭುತ ಶ್ರೇಣಿಯನ್ನು ಆಚರಿಸುವ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
रिलीज़ आईडी:
2192955
| Visitor Counter:
3