ಬೀದಿಗಳಲ್ಲಿ ಹೆಜ್ಜೆ ಹಾಕಿದ ಐ.ಎಫ್.ಎಫ್.ಐ: ಐತಿಹಾಸಿಕ ಪರೇಡ್ ಮೂಲಕ 56ನೇ ಆವೃತ್ತಿಗೆ ಚಾಲನೆ
ಐ.ಎಫ್.ಎಫ್.ಐ ಪ್ರಪಂಚದಾದ್ಯಂತದ ಆಲೋಚನೆಗಳು, ಕಥೆಗಳು ಮತ್ತು ಸೃಜನಶೀಲ ಮನಸ್ಸುಗಳಿಗೆ ಒಂದು ಸಭೆಯ ಸ್ಥಳವಾಗಿದೆ: ಗೋವಾ ರಾಜ್ಯಪಾಲರಾದ ಶ್ರೀ ಪುಸಪತಿ ಅಶೋಕ್ ಗಜಪತಿ ರಾಜು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತೀಯ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರವನ್ನು ತಲುಪುತ್ತಿದೆ: ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್
ಸಾಂಸ್ಕೃತಿಕ ಉತ್ಸವವು ನಮ್ಮ ರಾಜ್ಯಗಳ ವೈವಿಧ್ಯಮಯ ಸಂಪ್ರದಾಯಗಳನ್ನು ಪ್ರದರ್ಶಿಸುತ್ತದೆ: ಡಾ. ಎಲ್. ಮುರುಗನ್
ಚಿತ್ರರಂಗದಲ್ಲಿ 50 ಅದ್ಭುತ ವರ್ಷಗಳನ್ನು ಪೂರೈಸಿದ್ದಕ್ಕಾಗಿ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರಿಗೆ ಸನ್ಮಾನ
ಐ ಎಫ್ ಎಫ್ ಐ - 2025ರ ಉದ್ಘಾಟನಾ ಚಿತ್ರ 'ದಿ ಬ್ಲೂ ಟ್ರಯಲ್' ಸಿನಿಪ್ರಿಯರನ್ನು ಆಕರ್ಷಿಸಿತು
ಬೀದಿಗಳಲ್ಲಿ ಹೆಜ್ಜೆ ಹಾಕಿ. ಲಯವನ್ನು ಅನುಭವಿಸಿ. ಕಥೆಗಳು ಅನಾವರಣಗೊಳ್ಳುವುದನ್ನು ವೀಕ್ಷಿಸಿ. ಐ.ಎಫ್.ಎಫ್.ಐ ಗೋವಾವನ್ನು ಅದ್ಭುತಗಳ ಜೀವಂತ ರೀಲ್ ಆಗಿ ಪರಿವರ್ತಿಸುತ್ತಿದೆ! ತನ್ನ ಗಮನಾರ್ಹ ಪ್ರಯಾಣದಲ್ಲಿ ಮೊದಲ ಬಾರಿಗೆ, ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ಸಾಂಪ್ರದಾಯಿಕತೆಯ ಗೋಡೆಗಳನ್ನು ದಾಟಿ ಗೋವಾದ ರೋಮಾಂಚಕ ಹೃದಯಕ್ಕೆ ಲಗ್ಗೆ ಹಾಕಿತು - ಹಿಂದೆಂದೂ ಕಾಣದ ಸಂಭ್ರಮದಲ್ಲಿ ಅದರ ಜನರು, ಬೀದಿಗಳು ಮತ್ತು ಉತ್ಸಾಹವನ್ನು ಅಪ್ಪಿಕೊಂಡಿತು.
ಇಂದು ನಡೆದ ಅದ್ದೂರಿ ಉದ್ಘಾಟನೆಯ ದಿಟ್ಟ ಮರುಕಲ್ಪನೆಯಲ್ಲಿ, ಐ.ಎಫ್.ಎಫ್.ಐ 2025 ನಗರವನ್ನು ಒಂದು ಬೃಹತ್, ಜೀವಂತ ಕ್ಯಾನ್ವಾಸ್ ಆಗಿ ಪರಿವರ್ತಿಸಿತು - ಅಲ್ಲಿ ಸಿನೆಮಾದ ಪ್ರತಿಭೆಯು ಸಾಂಸ್ಕೃತಿಕ ವೈಭವದೊಂದಿಗೆ ಬೆರೆಯಿತು ಮತ್ತು ಕಥೆ ಹೇಳುವಿಕೆಯ ಅಂತ್ಯವಿಲ್ಲದ ಮಾಂತ್ರಿಕತೆಯು ಗೋವಾದ ಬೀದಿಗಳಲ್ಲಿ ನರ್ತಿಸಿತು. ಕಲಾವಿದರು, ಪ್ರದರ್ಶಕರು ಮತ್ತು ಸಿನಿಪ್ರಿಯರಿಂದ ಬೀದಿಗಳು ಶಕ್ತಿ ಮತ್ತು ಮನರಂಜನೆಯಿಂದ ತುಂಬುತ್ತಿದ್ದಂತೆ, ಗೋವಾ ಸೃಜನಶೀಲತೆಯ ರೋಮಾಂಚಕ ಕಾರಿಡಾರ್ ಆಗಿ ರೂಪಾಂತರಗೊಂಡಿತು - ಇದು ಉತ್ಸವದ ಆರಂಭವನ್ನು ಮಾತ್ರವಲ್ಲದೆ, ಐ.ಎಫ್.ಎಫ್.ಐ ಪರಂಪರೆಯಲ್ಲಿ ಒಂದು ದಿಟ್ಟ ಹೊಸ ಅಧ್ಯಾಯದ ಆರಂಭವನ್ನೂ ಸೂಚಿಸುತ್ತದೆ.

ಆಚರಣೆಗಳನ್ನು ಉದ್ಘಾಟಿಸಿದ ಗೋವಾ ರಾಜ್ಯಪಾಲರಾದ ಶ್ರೀ ಪುಸಪತಿ ಅಶೋಕ್ ಗಜಪತಿ ರಾಜು, ಐ.ಎಫ್.ಎಫ್.ಐ ನ ಬೆಳೆಯುತ್ತಿರುವ ಜಾಗತಿಕ ಪ್ರತಿಷ್ಠೆಯನ್ನು ಶ್ಲಾಘಿಸಿದರು. " ಐ.ಎಫ್.ಎಫ್.ಐ ಸೃಜನಶೀಲ ವಿನಿಮಯ, ಹೊಸ ಸಹಯೋಗಗಳು ಮತ್ತು ಸಿನೆಮಾ ಶ್ರೇಷ್ಠತೆಯ ಆಚರಣೆಗೆ ಅರ್ಥಪೂರ್ಣ ವೇದಿಕೆಯಾಗಿದೆ. ಗೋವಾದ ಕಾಸ್ಮೊಪಾಲಿಟನ್ ಗುಣ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಜಾಗತಿಕ ಸಂಪರ್ಕದೊಂದಿಗೆ, ಚಲನಚಿತ್ರ ಪ್ರೇಮಿಗಳು ಇಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರುವುದು ಸಹಜ" ಎಂದು ಅವರು ಹೇಳಿದರು.

ಐ.ಎಫ್.ಎಫ್.ಐ ಯಾವಾಗಲೂ ಸಾಂಪ್ರದಾಯಿಕ ಚಲನಚಿತ್ರೋತ್ಸವದ ಮಿತಿಗಳನ್ನು ಮೀರಿದೆ ಎಂದು ಅವರು ಒತ್ತಿ ಹೇಳಿದರು. ಇದು ಪ್ರಪಂಚದಾದ್ಯಂತದ ಆಲೋಚನೆಗಳು, ಕಥೆಗಳು ಮತ್ತು ಸೃಜನಶೀಲ ಮನಸ್ಸುಗಳ ಸಭೆಯ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ, ಯುವ ಚಲನಚಿತ್ರ ನಿರ್ಮಾತೃಗಳನ್ನು ಬೆಂಬಲಿಸುತ್ತಿದೆ, ಸಿನಿಮಾ ಪ್ರತಿಭೆಯನ್ನು ಗೌರವಿಸುತ್ತಿದೆ ಮತ್ತು ಚಲನಚಿತ್ರ ಮತ್ತು ಸೃಜನಶೀಲ ಉದ್ಯಮಗಳಿಗೆ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತಿದೆ ಎಂದು ಅವರು ಹೇಳಿದರು.

ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಮಾತನಾಡಿ, ಗೋವಾ ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಣ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು. "ಗೋವಾ ವಿಶ್ವ ದರ್ಜೆಯ ಮೂಲಸೌಕರ್ಯದಿಂದ ಸಜ್ಜುಗೊಂಡಿದ್ದು, ಇದು ಐ.ಎಫ್.ಎಫ್.ಐ ನ ಶಾಶ್ವತ ನೆಲೆಯಾಗಿದೆ. ನಮ್ಮ ಸುಂದರ ಸ್ಥಳಗಳು ಚಲನಚಿತ್ರ ನಿರ್ಮಾಪಕರನ್ನು ಆಕರ್ಷಿಸುತ್ತವೆ, ಆದರೆ ನಮ್ಮ ಬಲವಾದ ನೀತಿ ಸುಧಾರಣೆಗಳು ಅವರನ್ನು ಮತ್ತೆ ಮತ್ತೆ ಬರುವಂತೆ ಮಾಡುತ್ತವೆ" ಎಂದು ಹೇಳಿದರು. ಜಾಗತಿಕ ಸೃಜನಶೀಲ ಕ್ರಾಂತಿಯಲ್ಲಿ ಭಾರತದ ನಾಯಕತ್ವವನ್ನು ಪ್ರತಿಬಿಂಬಿಸುವ "ಸೃಜನಶೀಲತೆ ಮತ್ತು ತಂತ್ರಜ್ಞಾನದ ಸಮ್ಮಿಲನ" ಎಂಬ ವಿಷಯದ ಅಡಿಯಲ್ಲಿ ಐ.ಎಫ್.ಎಫ್.ಐ 2025 ಅನ್ನು ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು. "ಐ.ಎಫ್.ಎಫ್.ಐ ಭಾರತೀಯ ಪ್ರತಿಭೆಯನ್ನು ಜಾಗತಿಕ ಅವಕಾಶಗಳೊಂದಿಗೆ ಬೆಸೆಯುತ್ತದೆ. ಗೋವಾವನ್ನು ಭಾರತದ ಸೃಜನಶೀಲ ರಾಜಧಾನಿಯನ್ನಾಗಿ ಮಾಡುವುದು ನಮ್ಮ ಕನಸು. ಗೋವಾಕ್ಕೆ ಬನ್ನಿ, ನಿಮ್ಮ ಕಥೆಗಳನ್ನು ಹೇಳಿ, ನಿಮ್ಮ ಸಿನಿಮಾಗಳನ್ನು ಚಿತ್ರೀಕರಿಸಿ" ಎಂದು ಅವರು ಹೇಳಿದರು. ಭಾರತೀಯ ಸಿನಿಮಾವನ್ನು ಅಭೂತಪೂರ್ವ ಅಂತರರಾಷ್ಟ್ರೀಯ ಪ್ರಾಮುಖ್ಯತೆಗೆ ಕೊಂಡೊಯ್ಯುವಲ್ಲಿ, ಭಾರತವನ್ನು ಕಥೆ ಹೇಳುವ ಜಗತ್ತಿನಲ್ಲಿ ಉದಯೋನ್ಮುಖ ಮೃದು ಶಕ್ತಿಯನ್ನಾಗಿ ಮಾಡಿದ ಶ್ರೇಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಸಲ್ಲಬೇಕು ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್, ಪ್ರತಿ ಆವೃತ್ತಿಯೊಂದಿಗೆ ಐ.ಎಫ್.ಎಫ್.ಐ ವಿಕಸನಗೊಳ್ಳುತ್ತಿದೆ ಎಂದು ಹೇಳಿದರು. "ಸಾಂಪ್ರದಾಯಿಕವಾಗಿ, ಈ ಉತ್ಸವವು ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗುತ್ತಿತ್ತು. ಈ ವರ್ಷ, ಇದು ನಮ್ಮ ರಾಜ್ಯಗಳ ವೈವಿಧ್ಯಮಯ ಸಂಪ್ರದಾಯಗಳನ್ನು ಪ್ರದರ್ಶಿಸುವ ಒಂದು ಭವ್ಯ ಸಾಂಸ್ಕೃತಿಕ ಉತ್ಸವವಾಗಿ ಪ್ರಾರಂಭವಾಗುತ್ತಿದೆ" ಎಂದು ಅವರು ಹೇಳಿದರು. ಕಂಟೆಂಟ್, ಸೃಜನಶೀಲತೆ ಮತ್ತು ಸಂಸ್ಕೃತಿಯಿಂದ ನಡೆಸಲ್ಪಡುವ ಭಾರತದ ಬೆಳೆಯುತ್ತಿರುವ ಕಿತ್ತಳೆ ಆರ್ಥಿಕತೆಯ ಬಗ್ಗೆ ಪ್ರಧಾನಮಂತ್ರಿ ಅವರ ದೃಷ್ಟಿಕೋನವನ್ನು ಅವರು ನೆನಪಿಸಿಕೊಂಡರು. ಮುಂಬೈನಲ್ಲಿ ನಡೆದ ವಿಶ್ವ ಧ್ವನಿ- ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಯಂತಹ ಉಪಕ್ರಮಗಳು ದೇಶಾದ್ಯಂತ ಉದಯೋನ್ಮುಖ ಸೃಜನಶೀಲ ಪ್ರತಿಭೆಗಳನ್ನು ಸಬಲೀಕರಣಗೊಳಿಸುತ್ತಿವೆ ಎಂದು ಅವರು ಹೇಳಿದರು. ಗೋವಾವನ್ನು ಐ.ಎಫ್.ಎಫ್.ಐ ನ ಶಾಶ್ವತ ನೆಲೆಯನ್ನಾಗಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಅವರು ದಿವಂಗತ ಶ್ರೀ ಮನೋಹರ್ ಪರಿಕ್ಕರ್ ಅವರಿಗೆ ನಮನ ಸಲ್ಲಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು ಈ ವರ್ಷದ ಆವೃತ್ತಿಯ ಮುಖ್ಯಾಂಶಗಳನ್ನು ವಿವರಿಸಿದರು. "ಮೊದಲ ಬಾರಿಗೆ, ಐ.ಎಫ್.ಎಫ್.ಐ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವ ಭವ್ಯವಾದ ಕಾರ್ನೀವಲ್ ನೊಂದಿಗೆ ಪ್ರಾರಂಭವಾಗುತ್ತಿದೆ. ಈ ಆವೃತ್ತಿಯು ಸುಮಾರು 80 ದೇಶಗಳನ್ನು ಪ್ರತಿನಿಧಿಸುವ - ಹಲವಾರು ಅಂತರರಾಷ್ಟ್ರೀಯ ಮತ್ತು ಜಾಗತಿಕ ಪ್ರಥಮ ಪ್ರದರ್ಶನಗಳೊಂದಿಗೆ ಇದುವರೆಗಿನ ಅತಿದೊಡ್ಡ ಚಲನಚಿತ್ರಗಳ ಸಂಗ್ರಹವನ್ನು ಪ್ರದರ್ಶಿಸುತ್ತದೆ" ಎಂದು ಅವರು ಹೇಳಿದರು. ಐ.ಎಫ್.ಎಫ್.ಐ ಅನ್ನು ಸೃಜನಶೀಲತೆ, ತಂತ್ರಜ್ಞಾನ ಮತ್ತು ಉದ್ಯಮ ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿ ಇರಿಸುವ ಎ.ಐ. ಫಿಲ್ಮ್ ಹ್ಯಾಕಥಾನ್ ಮತ್ತು ಅತಿದೊಡ್ಡ ವೇವ್ಸ್ ಫಿಲ್ಮ್ ಬಜಾರ್ ನಂತಹ ಹೊಸ ಸೇರ್ಪಡೆಗಳನ್ನು ಅವರು ಉಲ್ಲೇಖಿಸಿದರು.
ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರನ್ನು ಚಿತ್ರರಂಗದಲ್ಲಿ 50 ಅದ್ಭುತ ವರ್ಷಗಳನ್ನು ಪೂರೈಸಿದ್ದಕ್ಕಾಗಿ ಮತ್ತು ತೆಲುಗು ಚಿತ್ರರಂಗವನ್ನು ಶ್ರೀಮಂತಗೊಳಿಸಲು ನೀಡಿದ ಅಪಾರ ಕೊಡುಗೆಗಾಗಿ ಸನ್ಮಾನಿಸಲಾಯಿತು.
ಐತಿಹಾಸಿಕ ಭವ್ಯ ಪರೇಡ್

ಗೋವಾ ಸರ್ಕಾರದ 12 ಟ್ಯಾಬ್ಲೋಗಳು ಸೇರಿದಂತೆ ಎರಡು ಡಜನ್ ಗೂ ಹೆಚ್ಚು ಟ್ಯಾಬ್ಲೋಗಳು ಭಾರತದ ಸಿನಿಮೀಯ ಪರಂಪರೆ, ಅನಿಮೇಷನ್ ಜಗತ್ತು ಮತ್ತು ಪ್ರಾದೇಶಿಕ ಸಂಸ್ಕೃತಿಗಳ ಶ್ರೀಮಂತ ವೈವಿಧ್ಯತೆಯನ್ನು ಆಚರಿಸಿದವು. ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ಪ್ರಸ್ತುತಪಡಿಸಿದ ಭವ್ಯ ಜಾನಪದ ನಿರ್ಮಾಣ ಭಾರತ್ ಏಕ್ ಸೂರ್ ಮತ್ತು ಐದು ದಶಕಗಳ ಕಾಲ ದೇಶಾದ್ಯಂತ ಚಲನಚಿತ್ರ ನಿರ್ಮಾಪಕರನ್ನು ಪೋಷಿಸಿದ ಮತ್ತು ಸಿನಿಮಾ ನಾವೀನ್ಯತೆಯನ್ನು ಬೆಳೆಸಿದವರಿಗೆ ಗೌರವ ಸಲ್ಲಿಸುವ ಎನ್ ಎಫ್ ಡಿ ಸಿ 50 ವರ್ಷಗಳು ಸ್ತಬ್ಧ ಚಿತ್ರ. ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಿದ 100 ಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡ ಈ ನಿರ್ಮಾಣವು ತನ್ನ ಪ್ರಮಾಣ ಮತ್ತು ಶಕ್ತಿಯಿಂದ ಪ್ರೇಕ್ಷಕರನ್ನು ಆಕರ್ಷಿಸಿತು.
ಛೋಟಾ ಭೀಮ್, ಮೋಟು ಪಟ್ಲು ಮತ್ತು ಬಿಟ್ಟು ಬಹನೇಬಾಜ್ ನಂತಹ ನೆಚ್ಚಿನ ಅನಿಮೇಟೆಡ್ ಪಾತ್ರಗಳ ಪ್ರದರ್ಶನಗಳು ಉತ್ಸಾಹವನ್ನು ಹೆಚ್ಚಿಸಿದವು, ಅವರ ಮೋಜಿನ ಸಂವಾದಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು. ಪರೇಡ್ ಮುಂಬರುವ ಸಿನಿಮೀಯ ಸಂಭ್ರಮದ ದಿನಗಳಿಗಾಗಿ ಒಂದು ರೋಮಾಂಚಕ ಮತ್ತು ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ಉದ್ಘಾಟನಾ ಚಿತ್ರ
ಗೋವಾದಲ್ಲಿ ಇಂದು ಆರಂಭವಾದ 56ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐ ಎಫ್ ಎಫ್ ಐ) ಪೋರ್ಚುಗೀಸ್ ಭಾಷೆಯ "ಓ ಅಲ್ಟಿಮೊ ಅಜುಲ್" ಎಂದು ಕರೆಯಲ್ಪಡುವ ಗೇಬ್ರಿಯಲ್ ಮಸ್ಕರೋ ಅವರ ಡಿಸ್ಟೋಪಿಯನ್ ಕಥೆ "ದಿ ಬ್ಲೂ ಟ್ರಯಲ್" ಮೊದಲ ಕಿಡಿಯನ್ನು ಹೊತ್ತಿಸಿತು. ಉದ್ಘಾಟನಾ ಚಿತ್ರವು ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದು, ಪ್ರಶಂಸೆ ಮತ್ತು ಅಚ್ಚರಿ ಎರಡನ್ನೂ ಗಳಿಸಿತು.
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿದೆ. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮತ್ತು ಗೋವಾ ಸರ್ಕಾರದ ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸುತ್ತವೆ. ಈ ಉತ್ಸವವು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳು ದಿಟ್ಟ ಪ್ರಯೋಗಗಳನ್ನು ಸಂಧಿಸುತ್ತವೆ ಮತ್ತು ಹೆಸರಾಂತ ಕಲಾವಿದರು ಮೊದಲ ಬಾರಿಯ ಧೈರ್ಯಶಾಲಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ಅನ್ನು ನಿಜವಾಗಿಯೂ ಅದ್ಭುತವಾಗಿಸುವುದು ಅದರ ಅದ್ಭುತವಾದ ಸಮ್ಮಿಲನಗಳು - ಅಂತರರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್ ಗಳು, ಗೌರವಗಳು ಮತ್ತು ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ವ್ಯವಹಾರಗಳು ಮತ್ತು ಸಹಯೋಗಗಳು ಹುಟ್ಟುತ್ತವೆ. ಗೋವಾದ ಬೆರಗುಗೊಳಿಸುವ ಕಡಲತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುವ 56ನೇ ಆವೃತ್ತಿಯು ಬೆರಗುಗೊಳಿಸುವ ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಒಂದು ಅದ್ಭುತ ಶ್ರೇಣಿಯನ್ನು ಆಚರಿಸುವ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
https://www.pib.gov.in/PressReleasePage.aspx?PRID=2191742
https://www.pib.gov.in/PressReleasePage.aspx?PRID=2190381
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2192356
| Visitor Counter:
13