ಗೋವಾದಲ್ಲಿ ಪ್ರತಿಧ್ವನಿಸಿದ ವಂದೇ ಮಾತರಂ ಗೀತೆ: ಜೇವೋನ್ ಕಿಮ್ ಅವರಿಂದ ಹೃದಯಸ್ಪರ್ಶಿ ಗಾಯನ
ಭಾರತವು 'ವಂದೇ ಮಾತರಂ' ಗೀತೆಯ 150ನೇ ವರ್ಷಾಚರಣೆ ಮಾಡುತ್ತಿರುವ ಸಂದರ್ಭದಲ್ಲಿ ಅದ್ಭುತ ಪ್ರದರ್ಶನ
ಗೋವಾದಲ್ಲಿ ನಡೆದ ವೇವ್ಸ್ ಫಿಲ್ಮ್ ಬಜಾರ್‌ನ ಉದ್ಘಾಟನಾ ಸಮಾರಂಭದಲ್ಲಿ, ಮುಖ್ಯ ಅತಿಥಿ ಹಾಗೂ ಕೊರಿಯಾ ಗಣರಾಜ್ಯದ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾದ ಜೇವೋನ್ ಕಿಮ್ ಅವರು ವಂದೇ ಮಾತರಂ ಗೀತೆಯನ್ನು ಹೃದಯಸ್ಪರ್ಶಿಯಾಗಿ ಹಾಡಿದಾಗ ಪ್ರೇಕ್ಷಕರು ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು.

ಭಾರತದ ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಈ ಸಮಯದಲ್ಲಿ, ಅವರ ಈ ಮನಮುಟ್ಟುವ ಗಾಯನವು ಉತ್ಸವಕ್ಕೆ ಅರ್ಥಪೂರ್ಣತೆಯನ್ನು ತಂದುಕೊಟ್ಟಿತು. ಅವರು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸಿದ ರೀತಿ, ಕಲಾತ್ಮಕತೆ ಮತ್ತು ನಮ್ರತೆಗೆ ಸಭಿಕರು ಎದ್ದುನಿಂತು ಕರತಾಡನ ಮಾಡಿದರು.
ಕಾರ್ಯಕ್ರಮದ ಸಂದರ್ಭದಲ್ಲಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಕಿಮ್ ಅವರ ಈ ಗಾಯನವನ್ನು ಶ್ಲಾಘಿಸಿದರು. ಕೇವಲ ಹಾಡಿಗಾಗಿ ಮಾತ್ರವಲ್ಲದೆ, ಗೀತೆಯ ಸಂಪೂರ್ಣ ಆವೃತ್ತಿಯನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಿಮ್ ಅವರ ಗಾಯನವು ಸ್ನೇಹ ಮತ್ತು ಸಾಂಸ್ಕೃತಿಕ ಸಾಮರಸ್ಯದ ಮನೋಭಾವದ ಸಂಕೇತವಾಗಿದೆ. ಇದು ವೇವ್ಸ್ ಫಿಲ್ಮ್ ಬಜಾರ್‌ನಂತಹ ಕಾರ್ಯಕ್ರಮಗಳ ಮುಖ್ಯ ಅಂಶವಾಗಿದೆ. ಅವರು ಸಭಿಕರಿಗಾಗಿ ಒಂದು ಕೊರಿಯನ್ ಗೀತೆಯನ್ನೂ ಹಾಡುವ ಮೂಲಕ ಕಾರ್ಯಕ್ರಮಕ್ಕೆ ರಸಮಯ ಸಾಂಸ್ಕೃತಿಕ ವಿನಿಮಯದ ಮೆರುಗನ್ನು ಸಹ ನೀಡಿದರು.

ವಿಶ್ವದಾದ್ಯಂತದ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಪ್ರತಿನಿಧಿಗಳು ಮತ್ತು ಕಥೆಗಾರರಿಂದ ತುಂಬಿದ್ದ ಈ ಸಭಾಂಗಣದಲ್ಲಿ, ಕಿಮ್ ಅವರ ಮನೋಜ್ಞ ಗಾಯನವು, ಕಲೆ ಮತ್ತು ಭಾವನೆಗಳು ಗಡಿಗಳನ್ನು ದಾಟಿ ಹೇಗೆ ಪಸರಿಸುತ್ತಿವೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಯಿತು.
ವೇವ್ಸ್ ಫಿಲ್ಮ್ ಬಜಾರ್ ಬಗ್ಗೆ
ಈ ಉಪಕ್ರಮವು ಹಿಂದೆ 'ಫಿಲ್ಮ್ ಬಜಾರ್' ಎಂದು ಕರೆಯಲ್ಪಡುತ್ತಿತ್ತು. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ 2007ರಲ್ಲಿ ಪ್ರಾರಂಭಿಸಿತು ಮತ್ತು ಅಂದಿನಿಂದ ಇದು ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಶಾಲಿ ಚಲನಚಿತ್ರ ಮಾರುಕಟ್ಟೆಯಾಗಿ ಬೆಳೆದಿದೆ.
ಇಂದು ಉದ್ಘಾಟನೆಗೊಂಡ ಈ ಬಜಾರ್, ಕ್ಯುರೇಟೆಡ್ ವರ್ಟಿಕಲ್‌ಗಳಾದ ಸ್ಕ್ರೀನ್‌ರೈಟರ್ಸ್ ಲ್ಯಾಬ್, ಮಾರ್ಕೆಟ್ ಸ್ಕ್ರೀನಿಂಗ್ಸ್, ವೀಕ್ಷಣಾ ಕೊಠಡಿಯ ಗ್ರಂಥಾಲಯ ಮತ್ತು ಸಹ-ನಿರ್ಮಾಣ ಮಾರುಕಟ್ಟೆ ಸೇರಿದಂತೆ 300ಕ್ಕೂ ಹೆಚ್ಚು ಚಲನಚಿತ್ರ ಯೋಜನೆಗಳ ವಿಸ್ತಾರವಾದ ಆಯ್ಕೆಯನ್ನು ಒಳಗೊಂಡಿದೆ. ಸಹ-ನಿರ್ಮಾಣ ಮಾರುಕಟ್ಟೆಯಲ್ಲಿನ 22 ಚಲನಚಿತ್ರಗಳು ಮತ್ತು 5 ಸಾಕ್ಷ್ಯಚಿತ್ರಗಳಿದ್ದು, ವೇವ್ಸ್ ಫಿಲ್ಮ್ ಬಜಾರ್ ಇವುಗಳನ್ನು ಶಿಫಾರಸು ಮಾಡುತ್ತದೆ. ಈ ವಿಭಾಗವು ಬಹು ಸ್ವರೂಪಗಳಲ್ಲಿನ 22 ಗಮನಾರ್ಹ ಚಲನಚಿತ್ರಗಳನ್ನು ಪ್ರಸ್ತುತಪಡಿಸುತ್ತದೆ. ಏಳು ದೇಶಗಳ ನಿಯೋಗಗಳು ಮತ್ತು ಹತ್ತಕ್ಕೂ ಹೆಚ್ಚು ಭಾರತೀಯ ರಾಜ್ಯಗಳ ಚಲನಚಿತ್ರ ಪ್ರೋತ್ಸಾಹಕ ಪ್ರದರ್ಶನಗಳು ಈ ವೇದಿಕೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ.
ಐ.ಎಫ್.ಎಫ್.ಐ.ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ದೊಡ್ಡ ಚಲನಚಿತ್ರೋತ್ಸವವಾಗಿ ಬೆಳೆದು ನಿಂತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಗೋವಾ ರಾಜ್ಯ ಸರ್ಕಾರದ ಎಂಟರ್‌ಟೈನ್‌ಮೆಂಟ್ ಸೊಸೈಟಿ ಆಫ್ ಗೋವಾ ಜಂಟಿಯಾಗಿ ಆಯೋಜಿಸುವ ಈ ಉತ್ಸವವು ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಪುನಃಸೃಷ್ಟಿಸಲಾದ ಹಳೇ ಚಲನಚಿತ್ರಗಳು ಹೊಸ ಸ್ವರೂಪದಲ್ಲಿ ಪ್ರಯೋಗಗೊಳ್ಳುತ್ತವೆ ಮತ್ತು ಅನುಭವಿ ತಂತ್ರಜ್ಞರು ಹೊಸ ತಲೆಮಾರಿನೊಂದಿಗೆ ಜ್ಞಾನ ಹಂಚಿಕೊಳ್ಳುತ್ತಾರೆ. ಅಂತಾರಾಷ್ಟ್ರೀಯ ಸ್ಪರ್ಧೆ, ಸಾಂಸ್ಕೃತಿಕ ಪ್ರದರ್ಶನ, ಕಾರ್ಯಾಗಾರ, ಗೌರವ ಸಮರ್ಪಣೆ ಮತ್ತು ಆಲೋಚನೆ, ಒಪ್ಪಂದ ಹಾಗೂ ಸಹಯೋಗಗಳನ್ನು ಒಳಗೊಂಡ ವೇವ್ಸ್ ಫಿಲ್ಮ್ ಬಜಾರ್, ಐಎಫ್‍ಎಫ್ಐಯನ್ನು ಅದ್ಭುತವಾಗಿಸಿದೆ. ನವೆಂಬರ್ 20-28 ರವರೆಗೆ ಗೋವಾದ ಕಡಲತೀರದಲ್ಲಿ ನಡೆಯಲಿರುವ 56ನೇ ಆವೃತ್ತಿಯು ಭಾಷೆ, ಪ್ರಕಾರ, ನಾವೀನ್ಯತೆ ಮತ್ತು ಧ್ವನಿಗಳ ಅದ್ಭುತ ವರ್ಣಪಟಲಗಳ ಭರವಸೆಗೆ ಸಾಕ್ಷಿಯಾಗಿದೆ—ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಾತ್ಮಕ ಪ್ರತಿಭೆಗೆ ಮೆರಗು ನೀಡುವ ಆಚರಣೆಯಾಗಿದೆ.
For more information, click on:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56new/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
Release ID:
2192197
| Visitor Counter:
7