ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಪ್ರಧಾನಮಂತ್ರಿ ಭೂತಾನ್ ಭೇಟಿಯ ಕುರಿತು ಜಂಟಿ ಪತ್ರಿಕಾ ಪ್ರಕಟಣೆ
Posted On:
12 NOV 2025 9:59AM by PIB Bengaluru
ಭೂತಾನ್ ನ ದೊರೆ ಗೌರವಾನ್ವಿತ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಅವರ ಆಹ್ವಾನದ ಮೇರೆಗೆ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ನವೆಂಬರ್ 11-12, ರವರೆಗೆ ಭೂತಾನ್‌ಗೆ ಎರಡು ದಿನಗಳ ಅಧಿಕೃತ ಭೇಟಿಯಲ್ಲಿದ್ದರು.
ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಮೋದಿ ಅವರು 2025ರ ನವೆಂಬರ್ 11ರಂದು ಚಾಂಗ್ಲಿಮಿಥಾಂಗ್‌ನಲ್ಲಿ ನಡೆದ ನಾಲ್ಕನೇ ಡ್ರುಕ್ ಗಯಾಲ್ಪೊ ಅವರ 70ನೇ ಜನ್ಮ ವಾರ್ಷಿಕೋತ್ಸವದ ಗೌರವಾರ್ಥ ಅತಿಥಿಯಾಗಿ ಭೂತಾನ್ ಜನರೊಂದಿಗೆ ಸೇರಿಕೊಂಡರು. ಪ್ರಧಾನಮಂತ್ರಿ ಮೋದಿ ಅವರು ಥಿಂಪುವಿನಲ್ಲಿ ನಡೆಯುತ್ತಿರುವ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದಲ್ಲಿಯೂ ಭಾಗವಹಿಸಿದರು. ಉತ್ಸವದ ಸಮಯದಲ್ಲಿ ಸಾರ್ವಜನಿಕ ಆರಾಧನೆಗಾಗಿ ಥಿಂಪುವಿನಲ್ಲಿ ಬುದ್ಧನ ಪವಿತ್ರ ಪಿಪ್ರಹ್ವಾ ಅವಶೇಷಗಳು (ಭಾರತದ ಉತ್ತರ ಪ್ರದೇಶದ ಪಿಪ್ರಾಹ್ವಾ ಸ್ಥೂಪದಲ್ಲಿ ಲಭ್ಯವಾದ ಬುದ್ಧನ ಪವಿತ್ರ ಅವಶೇಷಗಳು) ಇರುವುದಕ್ಕೆ ಗೌರವಾನ್ವಿತ ಭೂತಾನ್ ರಾಜರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಮೋದಿ ಅವರನ್ನು ಪ್ರೇಕ್ಷಕರೊಂದಿಗೆ ಭೂತಾನ್‌ನ ಗೌರವಾನ್ವಿತ ದೊರೆ ಮತ್ತು ನಾಲ್ಕನೇ ಡ್ರುಕ್ ಗಯಾಲ್ಪೊ ಬರಮಾಡಿಕೊಂಡರು ಮತ್ತು ಭೂತಾನ್‌ನ ಪ್ರಧಾನಮಂತ್ರಿ ದಾಶೋ ತ್ಶೆರಿಂಗ್ ಟೋಬ್ಗೆ ಅವರೊಂದಿಗೆ ಪ್ರಧಾನಮಂತ್ರಿ ಮೋದಿ ಸಂವಾದ ನಡೆಸಿದರು. ನಾಯಕರ ನಡುವಿನ ಚರ್ಚೆಗಳು ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳು ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಒಳಗೊಂಡಿದ್ದವು.
ನವೆಂಬರ್ 10 ರಂದು ದೆಹಲಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಂಭವಿಸಿದ ದುರಂತಮಯ ಜೀವಹಾನಿಗೆ ರಾಜಮನೆತನದ ಸರ್ಕಾರ ಮತ್ತು ಭೂತಾನ್ ನ ಜನರ ತೀವ್ರ ಸಂತಾಪವನ್ನು ರಾಜರು ವ್ಯಕ್ತಪಡಿಸಿದರು ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು. ಭೂತಾನ್‌ನ ಬೆಂಬಲ ಮತ್ತು ಒಗ್ಗಟ್ಟಿನ ಸಂದೇಶವನ್ನು ಭಾರತದ ಕಡೆಯವರು ಶ್ಲಾಘಿಸಿದರು.
ಆರ್ಥಿಕ ಉತ್ತೇಜನ ಕಾರ್ಯಕ್ರಮ ಸೇರಿದಂತೆ ಭೂತಾನ್‌ನ 13ನೇ ಪಂಚವಾರ್ಷಿಕ ಯೋಜನೆಗೆ ಭಾರತದ ಅಚಲ ಬೆಂಬಲವನ್ನು ಪ್ರಧಾನಮಂತ್ರಿ ಮೋದಿ ಪುನರುಚ್ಚರಿಸಿದರು, ಭೂತಾನ್ ತನ್ನ ಪ್ರಮುಖ ಅಭಿವೃದ್ಧಿ ಆದ್ಯತೆಗಳನ್ನು ಸಾಧಿಸಲು ಮತ್ತು ವಲಯಗಳಲ್ಲಿ ಸುಸ್ಥಿರ ಬೆಳವಣಿಗೆಯನ್ನು ಮುನ್ನಡೆಸಲು ಸಕ್ರಿಯವಾಗಿ ಸಹಾಯ ಮಾಡುವ ಭಾರತದ ಬದ್ಧತೆಯನ್ನು ಒತ್ತಿ ಹೇಳಿದರು. ಭೂತಾನ್‌ನಾದ್ಯಂತ ಅನುಷ್ಠಾನದಲ್ಲಿರುವ ವಿವಿಧ ಯೋಜನೆಗಳಿಗೆ ಭೂತಾನ್‌ನ 13 ನೇ ಪಂಚವಾರ್ಷಿಕ ಯೋಜನೆಯ ಅವಧಿಗೆ ಭಾರತದ ಸಹಾಯ ಮತ್ತು ದೇಶದ ಅಭಿವೃದ್ಧಿಗೆ ಅದರ ಕೊಡುಗೆಯನ್ನು ಭೂತಾನ್ ಕಡೆಯವರು ಶ್ಲಾಘಿಸಿದರು.
ಗೆಲೆಫು ಮೈಂಡ್‌ಫುಲ್‌ನೆಸ್ ಸಿಟಿಗಾಗಿ ಭೂತಾನ್‌ನ ದೊರೆಗಳ ದೃಷ್ಟಿಕೋನದ ಸಾಕ್ಷಾತ್ಕಾರಕ್ಕಾಗಿ ಭಾರತ ಸರ್ಕಾರದ ಸಂಪೂರ್ಣ ಬೆಂಬಲವನ್ನು ಪ್ರಧಾನಮಂತ್ರಿ ಮೋದಿ ತಿಳಿಸಿದರು. ಗೆಲೆಫುಗೆ ಹೂಡಿಕೆದಾರರು ಮತ್ತು ಸಂದರ್ಶಕರ ಸುಲಭ ಸಂಚಾರಕ್ಕೆ ಅನುಕೂಲವಾಗುವಂತೆ ಅಸ್ಸಾಂನ ಹಾತಿಸರ್‌ನಲ್ಲಿ ವಲಸೆ ಚೆಕ್ ಪೋಸ್ಟ್ ಸ್ಥಾಪಿಸುವ ನಿರ್ಧಾರವನ್ನು ಅವರು ಘೋಷಿಸಿದರು. ಗ್ಯಾಲ್‌ಸಂಗ್ ಅಕಾಡೆಮಿಗಳ ನಿರ್ಮಾಣಕ್ಕೆ ಭಾರತ ಸರ್ಕಾರ ನೀಡಿದ ಬೆಂಬಲವನ್ನು ಘನತೆವೆತ್ತ ದೊರೆ ಶ್ಲಾಘಿಸಿದರು.
2025ರ ನವೆಂಬರ್ 11 ರಂದು, ಭಗವಾನ್ ಬುದ್ಧರ ಪವಿತ್ರ ಪಿಪ್ರಾಹ್ವಾ ಅವಶೇಷಗಳ ಸಮ್ಮುಖದಲ್ಲಿ, 1020 ಮೆಗಾವ್ಯಾಟ್ ಸಾಮರ್ಥ್ಯದ ಪುನತ್ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಘನತೆವೆತ್ತ ರಾಜ ಮತ್ತು ಪ್ರಧಾನಮಂತ್ರಿ ಮೋದಿ ಜಂಟಿಯಾಗಿ ಉದ್ಘಾಟಿಸಿದರು. ಜಲವಿದ್ಯುತ್ ಕ್ಷೇತ್ರದಲ್ಲಿ ಭೂತಾನ್ ಮತ್ತು ಭಾರತದ ನಡುವಿನ ಸ್ನೇಹ ಮತ್ತು ಅನುಕರಣೀಯ ಸಹಕಾರಕ್ಕೆ ಈ ಯೋಜನೆ ಸಾಕ್ಷಿಯಾಗಿದೆ. ಪುನತ್ಸಂಗ್ಚು-II ರಿಂದ ಭಾರತಕ್ಕೆ ವಿದ್ಯುತ್ ರಫ್ತು ಆರಂಭವನ್ನು ಅವರು ಸ್ವಾಗತಿಸಿದರು. ಮಾರ್ಚ್ 2024ರ ಇಂಧನ ಪಾಲುದಾರಿಕೆಯ ಜಂಟಿ ದೃಷ್ಟಿಕೋನದ ಅನುಷ್ಠಾನದ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು.
1200 ಮೆಗಾವ್ಯಾಟ್ ಸಾಮರ್ಥ್ಯದ ಪುನತ್ಸಂಗ್ಚು-I ಜಲವಿದ್ಯುತ್ ಯೋಜನೆಯ ಮುಖ್ಯ ಅಣೆಕಟ್ಟು ರಚನೆಯ ಕೆಲಸವನ್ನು ಪುನರಾರಂಭಿಸುವ ಬಗ್ಗೆ ತಿಳುವಳಿಕೆಯ ಹಂತವನ್ನು ತಲುಪಿರುವುದನ್ನು ನಾಯಕರು ಸ್ವಾಗತಿಸಿದರು ಮತ್ತು ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು. ಒಮ್ಮೆ ಪೂರ್ಣಗೊಂಡ ನಂತರ, ಪುನತ್ಸಂಗ್ಚು-I ಎರಡೂ ಸರ್ಕಾರಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಲಿದೆ.
ಭೂತಾನ್‌ನಲ್ಲಿನ ಜಲವಿದ್ಯುತ್ ಯೋಜನೆಗಳಲ್ಲಿ ಭಾರತೀಯ ಕಂಪನಿಗಳ ಸಕ್ರಿಯ ತೊಡಗಿಸಿಕೊಳ್ಳುವಿಕೆಯನ್ನು ಅವರು ಸ್ವಾಗತಿಸಿದರು. ಭೂತಾನ್‌ನಲ್ಲಿನ ಇಂಧನ ಯೋಜನೆಗಳಿಗೆ ಹಣಕಾಸು ಒದಗಿಸಲು ಭಾರತ ಸರ್ಕಾರವು 40 ಶತಕೋಟಿ ರೂಪಾಯಿಗಳ ರಿಯಾಯಿತಿ ಸಾಲವನ್ನು ಘೋಷಿಸಿದ್ದಕ್ಕಾಗಿ ಭೂತಾನ್ ಕಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗಡಿಯಾಚೆಗಿನ ಸಂಪರ್ಕವನ್ನು ಸುಧಾರಿಸುವ ಮತ್ತು ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ಗಳ ಸ್ಥಾಪನೆ ಸೇರಿದಂತೆ ಗಡಿಯಾಚೆಗಿನ ಮೂಲಸೌಕರ್ಯವನ್ನು ಹೆಚ್ಚಿಸುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. 2024ರ ನವೆಂಬರ್ ನಲ್ಲಿ ದರ್ರಂಗದಲ್ಲಿ ವಲಸೆ ಚೆಕ್ ಪೋಸ್ಟ್ ಮತ್ತು ಮಾರ್ಚ್ 2025ರಲ್ಲಿ ಜೋಗಿಗೋಫಾದಲ್ಲಿ ಒಳನಾಡಿನ ಜಲಮಾರ್ಗ ಟರ್ಮಿನಲ್ ಮತ್ತು ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್ ಕಾರ್ಯಾರಂಭವನ್ನು ಅವರು ಸ್ವಾಗತಿಸಿದರು. ಸೆಪ್ಟೆಂಬರ್ 2025 ರಲ್ಲಿ ಗಡಿಯಾಚೆಗಿನ ರೈಲು ಸಂಪರ್ಕಗಳ (ಗೆಲೆಫು-ಕೊಕ್ರಜಾರ್ ಮತ್ತು ಸಮತ್ಸೆ-ಬನಾರ್ಹತ್) ಸ್ಥಾಪನೆಯ ಕುರಿತು ತಿಳುವಳಿಕೆ ಒಪ್ಪಂದಕ್ಕೆ (ಎಂ.ಒ.ಯು) ಸಹಿ ಹಾಕಿರುವುದನ್ನು ಮತ್ತು ಯೋಜನೆಯ ಅನುಷ್ಠಾನಕ್ಕಾಗಿ ಯೋಜನಾ ಚಾಲನಾ ಸಮಿತಿಯನ್ನು ಸ್ಥಾಪಿಸಿರುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು.
ಭೂತಾನ್‌ಗೆ ಅಗತ್ಯ ಸರಕುಗಳು ಮತ್ತು ರಸಗೊಬ್ಬರಗಳ ಅಡೆತಡೆಯಿಲ್ಲದ ಪೂರೈಕೆಗಾಗಿ ವ್ಯವಸ್ಥೆಗಳನ್ನು ಸಾಂಸ್ಥಿಕಗೊಳಿಸಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳಿಗೆ ಭೂತಾನ್ ಕಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ವ್ಯವಸ್ಥೆಯಡಿಯಲ್ಲಿ ಭಾರತದಿಂದ ರಸಗೊಬ್ಬರಗಳ ಮೊದಲ ಸರಕಿನ ಆಗಮನವನ್ನು ಎರಡೂ ಕಡೆಯವರು ಸ್ವಾಗತಿಸಿದರು.
ಸ್ಟೆಮ್ , ಫಿನ್‌ಟೆಕ್ ಮತ್ತು ಬಾಹ್ಯಾಕಾಶದ ಹೊಸ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಸಹಕಾರದ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. ಭಾರತಕ್ಕೆ ಬರುವ ಭೂತಾನ್ ನ ಸಂದರ್ಶಕರು ಕ್ಯೂ.ಆರ್. ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಸ್ಥಳೀಯ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುವ ಯು.ಪಿ.ಐ. ಯ ಎರಡನೇ ಹಂತದ ಕೆಲಸವನ್ನು ಅವರು ಸ್ವಾಗತಿಸಿದರು. ಬಾಹ್ಯಾಕಾಶ ಸಹಕಾರದ ಜಂಟಿ ಕ್ರಿಯಾ ಯೋಜನೆಯ ಅನುಷ್ಠಾನದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಭೂತಾನ್‌ನಲ್ಲಿ ಸ್ಟೆಮ್ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಹೆಚ್ಚಿಸುವಲ್ಲಿ ಭಾರತೀಯ ಶಿಕ್ಷಕರು ಮತ್ತು ದಾದಿಯರ ಅಮೂಲ್ಯ ಕೊಡುಗೆಗಳನ್ನು ಅವರು ಶ್ಲಾಘಿಸಿದರು.
ರಾಜಗೀರ್‌ನಲ್ಲಿರುವ ರಾಯಲ್ ಭೂತಾನ ದೇವಾಲಯದ ಪ್ರತಿಷ್ಠಾಪನೆ ಮತ್ತು ಭೂತಾನ ದೇವಾಲಯ ಹಾಗು ಅತಿಥಿ ಗೃಹ ನಿರ್ಮಾಣಕ್ಕಾಗಿ ವಾರಣಾಸಿಯಲ್ಲಿ ಭೂಮಿಯನ್ನು ನೀಡುವ ಭಾರತ ಸರ್ಕಾರದ ನಿರ್ಧಾರವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.
ಭೇಟಿಯ ಸಮಯದಲ್ಲಿ ಎರಡು ದೇಶಗಳ ನಡುವೆ ಈ ಕೆಳಗಿನ ತಿಳುವಳಿಕೆ ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು:
ಎ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಇಂಧನ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವಾಲಯ, ಭೂತಾನ್ ರಾಯಲ್ ಸರ್ಕಾರ (RGoB) ಮತ್ತು ಭಾರತ ಸರ್ಕಾರ (GoI) ನಡುವೆ ತಿಳುವಳಿಕಾ ಒಡಂಬಡಿಕೆ.
ಬಿ. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಆರೋಗ್ಯ ಸಚಿವಾಲಯ, ಆರ್.ಜಿ.ಒ.ಬಿ. (RGoB) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಜಿ.ಒ.ಐ. (GoI) ನಡುವಿನ ತಿಳುವಳಿಕಾ ಒಡಂಬಡಿಕೆ.
ಸಿ. ಸಾಂಸ್ಥಿಕ ಸಂಪರ್ಕಗಳನ್ನು ನಿರ್ಮಿಸುವ ಕುರಿತು ಪಿ.ಇ.ಎಂ.ಎ.(PEMA) ಸಚಿವಾಲಯ ಮತ್ತು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ, ಜಿ.ಒ.ಐ. (GoI) ನಡುವಿನ ತಿಳುವಳಿಕಾ ಒಡಂಬಡಿಕೆ.
ಭೂತಾನ್-ಭಾರತ ಪಾಲುದಾರಿಕೆಯು ಎಲ್ಲಾ ಹಂತಗಳಲ್ಲಿ ಆಳವಾದ ನಂಬಿಕೆ, ಆತ್ಮೀಯ ಸ್ನೇಹ, ಪರಸ್ಪರ ಗೌರವ ಮತ್ತು ತಿಳುವಳಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ ಮತ್ತು ಬಲವಾದ ಜನರಿಂದ ಜನರ ನಡುವಣ ಸಂಪರ್ಕಗಳು ಹಾಗೂ ನಿಕಟ ಆರ್ಥಿಕ ಮತ್ತು ಅಭಿವೃದ್ಧಿ ಸಹಕಾರದಿಂದ ಮತ್ತಷ್ಟು ಬಲಗೊಂಡಿದೆ. ಈ ಭೇಟಿಯು ಎರಡೂ ದೇಶಗಳ ನಡುವಿನ ನಿಯಮಿತ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯವನ್ನು ಪುನರುಚ್ಚರಿಸಿತು ಮತ್ತು ಭವಿಷ್ಯದಲ್ಲಿ ಅದನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
*****
(Release ID: 2189176)
Visitor Counter : 5
Read this release in:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Gujarati
,
Tamil
,
Telugu
,
Malayalam