ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡೆಹ್ರಾಡೂನ್‌ ನಲ್ಲಿ ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


₹8140 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಅವರಿಂದ ಶಂಕುಸ್ಥಾಪನೆ ಮತ್ತು ಉದ್ಘಾಟನೆ

ಇಂದು ಉತ್ತರಾಖಂಡ ತಲುಪಿರುವ ಎತ್ತರವನ್ನು ಕಂಡಾಗ, ಈ ಸುಂದರ ರಾಜ್ಯದ ಉದಯಕ್ಕಾಗಿ ಒಮ್ಮೆ ಹೋರಾಡಿದ ಪ್ರತಿಯೊಬ್ಬ ವ್ಯಕ್ತಿಗೂ ಸಂತೋಷವಾಗುವುದು ಸಹಜ: ಪ್ರಧಾನಮಂತ್ರಿ

ಇದು ನಿಜವಾಗಿಯೂ ಉತ್ತರಾಖಂಡದ ಉದಯ ಮತ್ತು ಪ್ರಗತಿಯ ನಿರ್ಣಾಯಕ ಯುಗವಾಗಿದೆ: ಪ್ರಧಾನಮಂತ್ರಿ

ದೇವಭೂಮಿ ಉತ್ತರಾಖಂಡವು ಭಾರತದ ಆಧ್ಯಾತ್ಮಿಕ ಜೀವನದ ಹೃದಯ ಬಡಿತವಾಗಿದೆ: ಪ್ರಧಾನಮಂತ್ರಿ

ಉತ್ತರಾಖಂಡದ ನಿಜವಾದ ಅಸ್ಮಿತೆ ಇರುವುದು ಅದರ ಆಧ್ಯಾತ್ಮಿಕ ಶಕ್ತಿಯಲ್ಲಿ: ಪ್ರಧಾನಮಂತ್ರಿ

Posted On: 09 NOV 2025 2:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡೆಹ್ರಾಡೂನ್‌ನಲ್ಲಿ 'ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ' ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ₹8140 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, ದೇವಭೂಮಿ ಉತ್ತರಾಖಂಡದ ಜನತೆಗೆ ಶುಭಾಶಯಗಳನ್ನು ತಿಳಿಸಿದರು ಮತ್ತು ಎಲ್ಲರಿಗೂ ತಮ್ಮ ಹೃತ್ಪೂರ್ವಕ ನಮನ, ಗೌರವ ಹಾಗೂ ಸೇವೆಯನ್ನು ಸಮರ್ಪಿಸಿದರು.

"ನವೆಂಬರ್ 9 ಒಂದು ದೀರ್ಘ ಮತ್ತು ಸಮರ್ಪಿತ ಹೋರಾಟದ ಫಲವಾಗಿದೆ. ಈ ದಿನ ನಮ್ಮೆಲ್ಲರಲ್ಲೂ ಹೆಮ್ಮೆಯ ಭಾವವನ್ನು ಜಾಗೃತಗೊಳಿಸುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತರಾಖಂಡದ ದೈವಸ್ವರೂಪಿ ಜನರು ಬಹುಕಾಲದಿಂದ ಕಂಡಿದ್ದ ಕನಸನ್ನು 25 ವರ್ಷಗಳ ಹಿಂದೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಸರ್ಕಾರದ ನಾಯಕತ್ವದಲ್ಲಿ ಈಡೇರಿಸಲಾಯಿತು ಎಂದು ಅವರು ಒತ್ತಿ ಹೇಳಿದರು. ಕಳೆದ 25 ವರ್ಷಗಳ ಪಯಣವನ್ನು ಸ್ಮರಿಸಿದ ಶ್ರೀ ಮೋದಿ ಅವರು, "ಇಂದು ಉತ್ತರಾಖಂಡ ತಲುಪಿರುವ ಎತ್ತರವನ್ನು ಕಂಡಾಗ, ಈ ಸುಂದರ ರಾಜ್ಯದ ರಚನೆಗಾಗಿ ಅಂದು ಹೋರಾಡಿದ ಪ್ರತಿಯೊಬ್ಬ ವ್ಯಕ್ತಿಯೂ ಸಂತೋಷಪಡುವುದು ಸಹಜ" ಎಂದು ಅಭಿಪ್ರಾಯಪಟ್ಟರು. "ಬೆಟ್ಟ-ಪರ್ವತಗಳನ್ನು ಪ್ರೀತಿಸುವವರು, ಉತ್ತರಾಖಂಡದ ಸಂಸ್ಕೃತಿ ಮತ್ತು ನೈಸರ್ಗಿಕ ಸೌಂದರ್ಯವನ್ನು ಆರಾಧಿಸುವವರು ಹಾಗೂ ದೇವಭೂಮಿಯ ಜನರ ಬಗ್ಗೆ ವಾತ್ಸಲ್ಯ ಹೊಂದಿರುವ ಪ್ರತಿಯೊಬ್ಬರೂ ಇಂದು ಹರ್ಷ ಮತ್ತು ಆನಂದದಿಂದ ತುಂಬಿದ್ದಾರೆ" ಎಂದು ಅವರು ನುಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿರುವ ತಮ್ಮ ಸರ್ಕಾರಗಳು ಉತ್ತರಾಖಂಡದ ಸಾಮರ್ಥ್ಯವನ್ನು ನವ ಶಿಖರಗಳಿಗೆ ಕೊಂಡೊಯ್ಯಲು ಬದ್ಧವಾಗಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ ಶ್ರೀ ಮೋದಿ ಅವರು, ಉತ್ತರಾಖಂಡದ ರಜತ ಮಹೋತ್ಸವಕ್ಕಾಗಿ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ, ಚಳವಳಿಯ ಸಮಯದಲ್ಲಿ ತಮ್ಮ ಪ್ರಾಣಗಳನ್ನು ಬಲಿದಾನ ಮಾಡಿದ ಹುತಾತ್ಮರಿಗೆ ಅವರು ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ಅಂದಿನ ಎಲ್ಲಾ ಹೋರಾಟಗಾರರಿಗೂ ತಮ್ಮ ನಮನಗಳನ್ನು ಅರ್ಪಿಸಿದರು.

ಉತ್ತರಾಖಂಡದೊಂದಿಗಿನ ತಮ್ಮ ಆಳವಾದ ಭಾವನಾತ್ಮಕ ಅನುಬಂಧವನ್ನು ಹಂಚಿಕೊಂಡ ಶ್ರೀ ಮೋದಿ ಅವರು, ಈ ಪ್ರದೇಶಕ್ಕೆ ತಾವು ಕೈಗೊಳ್ಳುತ್ತಿದ್ದ ಆಧ್ಯಾತ್ಮಿಕ ಯಾತ್ರೆಗಳ ವೇಳೆ, ಗಿರಿ-ಪರ್ವತಗಳಲ್ಲಿ ವಾಸಿಸುತ್ತಿದ್ದ ತಮ್ಮ ಸಹೋದರ ಸಹೋದರಿಯರ ಹೋರಾಟ, ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪ ತಮಗೆ ಸದಾ ಸ್ಫೂರ್ತಿ ನೀಡುತ್ತಿದ್ದವು ಎಂದು ಸ್ಮರಿಸಿಕೊಂಡರು. ಉತ್ತರಾಖಂಡದಲ್ಲಿ ಕಳೆದ ದಿನಗಳು, ರಾಜ್ಯದ ಅಗಾಧ ಸಾಮರ್ಥ್ಯದ ನೇರ ಅನುಭವವನ್ನು ತಮಗೆ ನೀಡಿದ್ದವು ಎಂದು ಅವರು ಹೇಳಿದರು. "ಬಾಬಾ ಕೇದಾರನಾಥರ ದರ್ಶನದ ನಂತರ, 'ಈ ದಶಕ ಉತ್ತರಾಖಂಡದ್ದೇ ಆಗಿದೆ' ಎಂದು ಘೋಷಿಸಲು ಇದೇ ದೃಢ ವಿಶ್ವಾಸವೇ ನನಗೆ ಪ್ರೇರಣೆಯಾಗಿತ್ತು," ಎಂದು ಪ್ರಧಾನಮಂತ್ರಿ ಅವರು ನುಡಿದರು. ರಾಜ್ಯವು 25 ವರ್ಷಗಳನ್ನು ಪೂರೈಸುತ್ತಿರುವ ಈ ಶುಭ ಘಳಿಗೆಯಲ್ಲಿ, "ಇದು ನಿಜಕ್ಕೂ ಉತ್ತರಾಖಂಡದ ಉದಯ ಮತ್ತು ಪ್ರಗತಿಯ ನಿರ್ಣಾಯಕ ಕಾಲಘಟ್ಟವಾಗಿದೆ" ಎಂದು ಅವರು ದೃಢವಾಗಿ ಪ್ರತಿಪಾದಿಸಿದರು.

"25 ವರ್ಷಗಳ ಹಿಂದೆ ಉತ್ತರಾಖಂಡ ಹೊಸದಾಗಿ ರಚನೆಯಾದಾಗ, ಸವಾಲುಗಳು ಅಗಾಧವಾಗಿದ್ದವು" ಎಂದು ಶ್ರೀ ಮೋದಿ ಸ್ಮರಿಸಿದರು. "ಸಂಪನ್ಮೂಲಗಳು ಸೀಮಿತವಾಗಿದ್ದವು, ರಾಜ್ಯದ ಬಜೆಟ್ ಅತ್ಯಂತ ಚಿಕ್ಕದಾಗಿತ್ತು, ಆದಾಯದ ಮೂಲಗಳು ವಿರಳವಾಗಿದ್ದವು ಮತ್ತು ಹೆಚ್ಚಿನ ಅಗತ್ಯಗಳನ್ನು ಕೇಂದ್ರ ಸರ್ಕಾರದ ನೆರವಿನಿಂದಲೇ ಪೂರೈಸಬೇಕಾಗಿತ್ತು. ಆದರೆ ಇಂದು, ಆ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ" ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮಕ್ಕೆ ಆಗಮಿಸುವ ಮುನ್ನ, ತಾವು ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಒಂದು ಗಮನಾರ್ಹ ಪ್ರದರ್ಶನಕ್ಕೆ ಭೇಟಿ ನೀಡಿದ್ದಾಗಿ ತಿಳಿಸಿದ ಅವರು, ಅದು ಕಳೆದ 25 ವರ್ಷಗಳಲ್ಲಿ ಉತ್ತರಾಖಂಡದ ಅಭಿವೃದ್ಧಿ ಪಯಣದ ಝಲಕ್‌ಗಳನ್ನು ಪ್ರದರ್ಶಿಸಿತು ಎಂದರು. ಮೂಲಸೌಕರ್ಯ, ಶಿಕ್ಷಣ, ಉದ್ಯಮ, ಪ್ರವಾಸೋದ್ಯಮ, ಆರೋಗ್ಯ, ಇಂಧನ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಕ್ಷೇತ್ರಗಳಲ್ಲಿನ ಯಶೋಗಾಥೆಗಳು ನಿಜಕ್ಕೂ ಸ್ಪೂರ್ತಿದಾಯಕವಾಗಿವೆ ಎಂದು ಅವರು ಒತ್ತಿ ಹೇಳಿದರು. ಪ್ರಧಾನಮಂತ್ರಿ ಅವರು, "25 ವರ್ಷಗಳ ಹಿಂದೆ ಉತ್ತರಾಖಂಡದ ಬಜೆಟ್ ಕೇವಲ ₹4,000 ಕೋಟಿ ಇತ್ತು, ಅದು ಈಗ ₹1 ಲಕ್ಷ ಕೋಟಿಯ ಗಡಿಯನ್ನು ದಾಟಿದೆ" ಎಂದು ಉಲ್ಲೇಖಿಸಿದರು. "ಈ ಅವಧಿಯಲ್ಲಿ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯು ನಾಲ್ಕು ಪಟ್ಟು ಹೆಚ್ಚಾಗಿದೆ ಮತ್ತು ರಸ್ತೆಗಳ ಉದ್ದ ದ್ವಿಗುಣಗೊಂಡಿದೆ. ಹಿಂದೆ, ಆರು ತಿಂಗಳಿಗೆ ಕೇವಲ 4,000 ವಿಮಾನ ಪ್ರಯಾಣಿಕರು ಇಲ್ಲಿಗೆ ಬರುತ್ತಿದ್ದರು, ಆದರೆ ಇಂದು, ಒಂದೇ ದಿನದಲ್ಲಿ 4,000 ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದ ಮೂಲಕ ಆಗಮಿಸುತ್ತಿದ್ದಾರೆ" ಎಂದು ಅವರು ಹೇಳಿದರು.

ಕಳೆದ 25 ವರ್ಷಗಳಲ್ಲಿ ಉತ್ತರಾಖಂಡದಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಶ್ರೀ ಮೋದಿ ಅವರು ಮತ್ತಷ್ಟು ಬೆಳಕು ಚೆಲ್ಲಿದರು. "ಹಿಂದೆ ಇಲ್ಲಿ ಕೇವಲ ಒಂದೇ ಒಂದು ವೈದ್ಯಕೀಯ ಕಾಲೇಜು ಇತ್ತು, ಆದರೆ ಇಂದು ಹತ್ತು ಕಾಲೇಜುಗಳಿವೆ" ಎಂದು ಅವರು ಹೇಳಿದರು. 25 ವರ್ಷಗಳ ಹಿಂದೆ, ಲಸಿಕೆ ವ್ಯಾಪ್ತಿಯು  ಶೇ. 25 ಕ್ಕಿಂತ ಕಡಿಮೆ ಇತ್ತು, ಆದರೆ ಈಗ ಉತ್ತರಾಖಂಡದ ಪ್ರತಿಯೊಂದು ಹಳ್ಳಿಯೂ ಲಸಿಕೆ ವ್ಯಾಪ್ತಿಯ ಪರಿಧಿಯೊಳಗೆ ಬಂದಿದೆ ಎಂದು ಅವರು ಹೇಳಿದರು. ಉತ್ತರಾಖಂಡವು ಜೀವನದ ಎಲ್ಲಾ ಆಯಾಮಗಳಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದೆ ಎಂದು ಪ್ರಧಾನಮಂತ್ರಿ ಅವರು ಅಭಿಪ್ರಾಯಪಟ್ಟರು. ಈ ಅಭಿವೃದ್ಧಿಯ ಪಯಣವನ್ನು 'ಗಮನಾರ್ಹ' ಎಂದು ಬಣ್ಣಿಸಿದ ಅವರು, ಈ ಪರಿವರ್ತನೆಯ ಶ್ರೇಯವನ್ನು 'ಸಮಗ್ರ ಅಭಿವೃದ್ಧಿ' ನೀತಿ ಮತ್ತು ಉತ್ತರಾಖಂಡದ ಪ್ರತಿಯೊಬ್ಬ ನಾಗರಿಕನ 'ಸಾಮೂಹಿಕ ಸಂಕಲ್ಪ'ಕ್ಕೆ ಸಲ್ಲಿಸಿದರು. "ಹಿಂದೆ, ಪರ್ವತಗಳ ಕಡಿದಾದ ಏರುಗಳು ಅಭಿವೃದ್ಧಿಯ ಹಾದಿಗೆ ಅಡ್ಡಿಯಾಗಿದ್ದವು, ಆದರೆ ಈಗ ಹೊಸ ದಾರಿಗಳು ತೆರೆದುಕೊಳ್ಳಲು ಪ್ರಾರಂಭಿಸುತ್ತಿವೆ" ಎಂದು ಅವರು ನುಡಿದರು.

ಈ ಮುನ್ನ ತಾವು ಉತ್ತರಾಖಂಡದ ಯುವಕರು ಮತ್ತು ಉದ್ಯಮಿಗಳೊಂದಿಗೆ ನಡೆಸಿದ ಸಂವಾದದ ಕುರಿತು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಅವರೆಲ್ಲರೂ ರಾಜ್ಯದ ಬೆಳವಣಿಗೆಯ ಬಗ್ಗೆ ಅತೀವ ಉತ್ಸಾಹ ಹೊಂದಿದ್ದಾರೆಂದು ತಿಳಿಸಿದರು. ಇಂದು ಉತ್ತರಾಖಂಡದ ಜನರ ಮನೋಭಾವವನ್ನು ಗಢವಾಲಿ ಭಾಷೆಯಲ್ಲಿ ಹೀಗೆ ಕ್ರೋಢೀಕರಿಸಬಹುದು ಎಂದು ಅವರು ಹೇಳಿದರು: "2047 ರ ವೇಳೆಗೆ, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಿದಾಗ, ನನ್ನ ಉತ್ತರಾಖಂಡ, ನನ್ನ ದೇವಭೂಮಿ, ಅದಕ್ಕಾಗಿ ಸಂಪೂರ್ಣ ಸನ್ನದ್ಧವಾಗಿರುತ್ತದೆ."

ಉತ್ತರಾಖಂಡದ ಅಭಿವೃದ್ಧಿ ಪಯಣವನ್ನು ವೇಗಗೊಳಿಸಲು ಇಂದು ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಪ್ರಧಾನಮಂತ್ರಿ ಘೋಷಿಸಿದರು. ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಮತ್ತು ಕ್ರೀಡೆಗೆ ಸಂಬಂಧಿಸಿದ ಈ ಯೋಜನೆಗಳು, ಈ ವಲಯದಲ್ಲಿ ನವೀನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದು ಶ್ರೀ ಮೋದಿ ಹೇಳಿದರು. ಜಮ್ರಾನಿ ಮತ್ತು ಸಾಂಗ್ ಅಣೆಕಟ್ಟು ಯೋಜನೆಗಳು ಡೆಹ್ರಾಡೂನ್ ಮತ್ತು ಹಲ್ದ್ವಾನಿಯ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಅವರು ಒತ್ತಿ ಹೇಳಿದರು. ಈ ಯೋಜನೆಗಳಿಗಾಗಿ ₹8,000 ಕೋಟಿಗೂ ಅಧಿಕ ಹೂಡಿಕೆ ಮಾಡಲಾಗುವುದು. ಈ ಮಹತ್ವದ ಉಪಕ್ರಮಗಳಿಗಾಗಿ ಅವರು ಉತ್ತರಾಖಂಡದ ಜನತೆಯನ್ನು ಅಭಿನಂದಿಸಿದರು.

ಉತ್ತರಾಖಂಡ ಸರ್ಕಾರವು ಸೇಬು ಮತ್ತು ಕಿವಿ ಬೆಳೆಗಾರರಿಗೆ ಡಿಜಿಟಲ್ ಕರೆನ್ಸಿ ಮೂಲಕ ಸಹಾಯಧನ ನೀಡಲು ಪ್ರಾರಂಭಿಸಿರುವುದನ್ನು ಶ್ರೀ ಮೋದಿ ವಿಶೇಷವಾಗಿ ಉಲ್ಲೇಖಿಸಿದರು. "ಈ ಆಧುನಿಕ ತಂತ್ರಜ್ಞಾನದ ಮೂಲಕ, ಒದಗಿಸಲಾಗುತ್ತಿರುವ ಆರ್ಥಿಕ ನೆರವನ್ನು ಸಂಪೂರ್ಣವಾಗಿ ಪತ್ತೆಹಚ್ಚಲು  ಈಗ ಸಾಧ್ಯವಾಗಿದೆ" ಎಂದು ಅವರು ಒತ್ತಿ ಹೇಳಿದರು. ಈ ಮಹತ್ವದ ಉಪಕ್ರಮದಲ್ಲಿ ಭಾಗಿಯಾದ ರಾಜ್ಯ ಸರ್ಕಾರ, ಆರ್‌ ಬಿ ಐ (RBI) ಮತ್ತು ಸಂಬಂಧಪಟ್ಟ ಎಲ್ಲರ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಮುಕ್ತಕಂಠದಿಂದ ಪ್ರಶಂಸಿಸಿದರು.

"ದೇವಭೂಮಿ ಉತ್ತರಾಖಂಡವು ಭಾರತದ ಆಧ್ಯಾತ್ಮಿಕ ಜೀವನದ ಹೃದಯ ಬಡಿತ" ಎಂದು ಶ್ರೀ ಮೋದಿ ಹೇಳಿದರು. ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದ್ರಿನಾಥ, ಜಾಗೇಶ್ವರ ಮತ್ತು ಆದಿ ಕೈಲಾಶವನ್ನು ನಮ್ಮ ನಂಬಿಕೆಯ ಸಂಕೇತಗಳಾದ ಪವಿತ್ರ ತೀರ್ಥಕ್ಷೇತ್ರಗಳೆಂದು ಅವರು ಪಟ್ಟಿ ಮಾಡಿದರು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಪವಿತ್ರ ಕ್ಷೇತ್ರಗಳಿಗೆ ಯಾತ್ರೆ ಕೈಗೊಳ್ಳುತ್ತಾರೆ, ಇದು ಭಕ್ತಿಯ ಮಾರ್ಗವನ್ನು ತೆರೆಯುವುದಲ್ಲದೆ, ಉತ್ತರಾಖಂಡದ ಆರ್ಥಿಕತೆಗೆ ಹೊಸ ಚೈತನ್ಯವನ್ನು ತುಂಬುತ್ತದೆ.

ಉತ್ತಮ ಸಂಪರ್ಕ ವ್ಯವಸ್ಥೆಯು ಉತ್ತರಾಖಂಡದ ಅಭಿವೃದ್ಧಿಯೊಂದಿಗೆ ಆಳವಾಗಿ ಬೆಸೆದುಕೊಂಡಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು, ಪ್ರಸ್ತುತ ರಾಜ್ಯದಲ್ಲಿ ₹2 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ಋಷಿಕೇಶ-ಕರ್ಣಪ್ರಯಾಗ ರೈಲು ಯೋಜನೆ ಮುಂದುವರಿಯುತ್ತಿದೆ ಮತ್ತು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ ವೇ ಬಹುತೇಕ ಪೂರ್ಣಗೊಂಡಿದೆ. ಗೌರಿಕುಂಡ-ಕೇದಾರನಾಥ ಮತ್ತು ಗೋವಿಂದಘಾಟ್-ಹೇಮಕುಂಡ ಸಾಹಿಬ್ ರೋಪ್‌ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅವರು ಗಮನಸೆಳೆದರು. ಈ ಯೋಜನೆಗಳು ಉತ್ತರಾಖಂಡದಲ್ಲಿ ಅಭಿವೃದ್ಧಿಗೆ ವೇಗ ನೀಡುತ್ತಿವೆ.
"ಕಳೆದ 25 ವರ್ಷಗಳಲ್ಲಿ ಉತ್ತರಾಖಂಡವು ಸುದೀರ್ಘವಾದ ಪ್ರಗತಿಯ ಪಯಣವನ್ನು ಕ್ರಮಿಸಿದೆ" ಎಂದು ಪ್ರಧಾನಮಂತ್ರಿ ಅವರು ಸ್ಮರಿಸಿದರು. "ಮುಂದಿನ 25 ವರ್ಷಗಳಲ್ಲಿ ಉತ್ತರಾಖಂಡವನ್ನು ಯಾವ ಎತ್ತರದಲ್ಲಿ ಕಲ್ಪಿಸಿಕೊಳ್ಳುತ್ತೇವೆ?" ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು. "ಮನಸ್ಸಿದ್ದರೆ ಮಾರ್ಗವಿದೆ" ಎಂಬ ಮಾತನ್ನು ಉಲ್ಲೇಖಿಸಿದ ಅವರು, ಒಮ್ಮೆ ನಮ್ಮ ಗುರಿಗಳು ಸ್ಪಷ್ಟವಾದರೆ, ಅವುಗಳನ್ನು ಸಾಧಿಸುವ ಮಾರ್ಗಸೂಚಿಯು ಶೀಘ್ರವಾಗಿ ಹೊರಹೊಮ್ಮುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಭವಿಷ್ಯದ ಗುರಿಗಳ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಲು ನವೆಂಬರ್ 9 ಕ್ಕಿಂತ ಉತ್ತಮವಾದ ದಿನ ಇನ್ನೊಂದಿರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

"ಉತ್ತರಾಖಂಡದ ನಿಜವಾದ ಅಸ್ಮಿತೆ ಇರುವುದು ಅದರ ಆಧ್ಯಾತ್ಮಿಕ ಶಕ್ತಿಯಲ್ಲಿ," ಎಂದು ಪುನರುಚ್ಚರಿಸಿದ ಶ್ರೀ ಮೋದಿ ಅವರು, "ಉತ್ತರಾಖಂಡ ಸಂಕಲ್ಪ ಮಾಡಿದರೆ, ಮುಂಬರುವ ವರ್ಷಗಳಲ್ಲಿ ಅದು ತನ್ನನ್ನು 'ವಿಶ್ವದ ಆಧ್ಯಾತ್ಮಿಕ ರಾಜಧಾನಿ'  ಯಾಗಿ ಸ್ಥಾಪಿಸಿಕೊಳ್ಳಬಲ್ಲದು" ಎಂದು ಹೇಳಿದರು. ರಾಜ್ಯದಲ್ಲಿರುವ ದೇವಾಲಯಗಳು, ಆಶ್ರಮಗಳು, ಧ್ಯಾನ ಮತ್ತು ಯೋಗ ಕೇಂದ್ರಗಳನ್ನು ಜಾಗತಿಕ ಜಾಲದೊಂದಿಗೆ ಸಂಪರ್ಕಿಸಬಹುದು ಎಂದು ಅವರು ಒತ್ತಿ ಹೇಳಿದರು.

ಭಾರತದಾದ್ಯಂತ ಮತ್ತು ವಿದೇಶಗಳಿಂದ ಜನರು 'ವೆಲ್‌ನೆಸ್' (ಸ್ವಾಸ್ಥ್ಯ) ಗಾಗಿ ಉತ್ತರಾಖಂಡಕ್ಕೆ ಬರುತ್ತಾರೆ ಮತ್ತು ಇಲ್ಲಿನ ಗಿಡಮೂಲಿಕೆಗಳು ಹಾಗೂ ಆಯುರ್ವೇದ ಔಷಧಿಗಳಿಗೆ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಮಂತ್ರಿ ಅವರು ಗಮನಸೆಳೆದರು. ಕಳೆದ 25 ವರ್ಷಗಳಲ್ಲಿ ಉತ್ತರಾಖಂಡವು ಸುಗಂಧ ದ್ರವ್ಯ ಸಸ್ಯಗಳು, ಆಯುರ್ವೇದ ಗಿಡಮೂಲಿಕೆಗಳು, ಯೋಗ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಶ್ಲಾಘಿಸಿದರು. ಉತ್ತರಾಖಂಡದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಯೋಗ ಕೇಂದ್ರಗಳು, ಆಯುರ್ವೇದ ಕೇಂದ್ರಗಳು ಮತ್ತು ನ್ಯಾಚುರೋಪಥಿ (ಪ್ರಕೃತಿ ಚಿಕಿತ್ಸೆ) ಸಂಸ್ಥೆಗಳನ್ನು ಒಳಗೊಂಡ ಸಂಪೂರ್ಣ ಪ್ಯಾಕೇಜ್ ಅನ್ನು ಅಭಿವೃದ್ಧಿಪಡಿಸುವಂತೆ ಅವರು ಸಲಹೆ ನೀಡಿದರು, ಇದು ವಿದೇಶಿ ಪ್ರವಾಸಿಗರನ್ನು ಬಲವಾಗಿ ಆಕರ್ಷಿಸುತ್ತದೆ ಎಂದರು.

ಭಾರತ ಸರ್ಕಾರವು ಗಡಿಭಾಗದಲ್ಲಿರುವ 'ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮ'ಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸೂಚಿಸಿದ ಪ್ರಧಾನಮಂತ್ರಿ ಅವರು, ಉತ್ತರಾಖಂಡದ ಪ್ರತಿಯೊಂದು 'ವೈಬ್ರೆಂಟ್ ವಿಲೇಜ್' (ಚೈತನ್ಯಪೂರ್ಣ ಗ್ರಾಮ) ಕೂಡ ಹೋಮ್‌ ಸ್ಟೇಗಳು, ಸ್ಥಳೀಯ ಪಾಕಪದ್ಧತಿ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಮೂಲಕ ಒಂದು ಸಣ್ಣ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯಬೇಕು ಎಂಬ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಿದರು. ಪ್ರವಾಸಿಗರು ಮನೆಯ ವಾತಾವರಣವನ್ನು ಅನುಭವಿಸುತ್ತಾ, 'ಡುಬ್ಕೆ', 'ಚುಡ್ಕಾನಿ', 'ರೋಟ್-ಅರ್ಸಾ', 'ರಸ್-ಭಾತ್' ಮತ್ತು 'ಝಂಗೋರೆ ಕಿ ಖೀರ್' ನಂತಹ ಸಾಂಪ್ರದಾಯಿಕ ಖಾದ್ಯಗಳನ್ನು ಸವಿಯುವುದರಿಂದ ಆಗುವ ಆನಂದವನ್ನು ಕಲ್ಪಿಸಿಕೊಳ್ಳುವಂತೆ ಶ್ರೀ ಮೋದಿ ಎಲ್ಲರನ್ನೂ ಆಹ್ವಾನಿಸಿದರು. "ಈ ಆನಂದವೇ ಅವರನ್ನು ಮತ್ತೆ ಮತ್ತೆ ಉತ್ತರಾಖಂಡಕ್ಕೆ ಕರೆತರುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.

ಉತ್ತರಾಖಂಡದ ಅಡಗಿರುವ ಸಾಮರ್ಥ್ಯವನ್ನು ಅನಾವರಣಗೊಳಿಸುವ ಕಡೆಗೆ ಗಮನಹರಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಹರೇಲಾ, ಫೂಲ್ದೇ ಮತ್ತು ಭಿಟೌಲಿಯಂತಹ ಹಬ್ಬಗಳು, ಅವುಗಳಲ್ಲಿ ಭಾಗವಹಿಸುವ ಪ್ರವಾಸಿಗರ ಮೇಲೆ ಅಳಿಸಲಾಗದ ಛಾಪು ಮೂಡಿಸುತ್ತವೆ ಎಂದು ಹೇಳಿದರು. ನಂದಾ ದೇವಿ ಮೇಳ, ಜೌಲ್ಜೀವಿ ಮೇಳ, ಬಾಗೇಶ್ವರದ ಉತ್ತರಾಯಣಿ ಮೇಳ, ದೇವಿ ಧುರಾ ಮೇಳ, ಶ್ರಾವಣಿ ಮೇಳ ಮತ್ತು 'ಬೆಣ್ಣೆ ಉತ್ಸವ' ದಂತಹ ಸ್ಥಳೀಯ ಜಾತ್ರೆಗಳ ಜೀವಂತಿಕೆಯ ಬಗ್ಗೆ ಅವರು ಬೆಳಕು ಚೆಲ್ಲಿದರು. "ಈ ಆಚರಣೆಗಳಲ್ಲಿಯೇ ಉತ್ತರಾಖಂಡದ ಜೀವಾಳ ನೆಲೆಸಿದೆ" ಎಂದು ಅವರು ನುಡಿದರು. ಈ ಸ್ಥಳೀಯ ಹಬ್ಬಗಳು ಮತ್ತು ಸಂಪ್ರದಾಯಗಳನ್ನು ವಿಶ್ವ ಭೂಪಟದಲ್ಲಿ ಮೂಡಿಸಲು "ಒಂದು ಜಿಲ್ಲೆ, ಒಂದು ಉತ್ಸವ" ದಂತಹ ಅಭಿಯಾನವನ್ನು ಅವರು ಪ್ರಸ್ತಾಪಿಸಿದರು.

ಉತ್ತರಾಖಂಡದ ಎಲ್ಲಾ ಗಿರಿಜಿಲ್ಲೆಗಳು ಹಣ್ಣಿನ ಬೇಸಾಯಕ್ಕೆ ಅಪಾರ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅವುಗಳನ್ನು ತೋಟಗಾರಿಕಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಮಂತ್ರಿ ಅವರು ಗಮನಸೆಳೆದರು. ಬ್ಲೂಬೆರ್ರಿ, ಕಿವಿ, ಗಿಡಮೂಲಿಕೆ  ಮತ್ತು ಔಷಧೀಯ ಸಸ್ಯಗಳೇ ಕೃಷಿಯ ಭವಿಷ್ಯ ಎಂದು ಅವರು ಗುರುತಿಸಿದರು.ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು ಮತ್ತು ಸಾವಯವ ಉತ್ಪನ್ನಗಳಂತಹ ವಲಯಗಳಲ್ಲಿ MSME ಗಳಿಗೆ  ಹೊಸ ಹುರುಪಿನೊಂದಿಗೆ ಚೈತನ್ಯ ನೀಡುವ ಅಗತ್ಯವನ್ನು ಅವರು ಮತ್ತಷ್ಟು ಒತ್ತಿ ಹೇಳಿದರು.

"ಉತ್ತರಾಖಂಡವು ಯಾವಾಗಲೂ ವರ್ಷಪೂರ್ತಿ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಹೊಂದಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸಂಪರ್ಕ ವ್ಯವಸ್ಥೆ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ, 'ಸರ್ವ-ಋತು ಪ್ರವಾಸೋದ್ಯಮ'ದತ್ತ ಸಾಗುವಂತೆ ತಾವು ಈ ಹಿಂದೆ ಸಲಹೆ ನೀಡಿದ್ದನ್ನು ಅವರು ಸ್ಮರಿಸಿದರು. ಉತ್ತರಾಖಂಡವು ಈಗ 'ಚಳಿಗಾಲದ ಪ್ರವಾಸೋದ್ಯಮ'ಕ್ಕೆ ಹೊಸ ಆಯಾಮ ನೀಡುತ್ತಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು. "ಇತ್ತೀಚಿನ ವರದಿಗಳು ಉತ್ಸಾಹದಾಯಕವಾಗಿವೆ, ಚಳಿಗಾಲದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ" ಎಂದು ಶ್ರೀ ಮೋದಿ ಹೇಳಿದರು. ಪಿಥೋರಾಗಢದಲ್ಲಿ 14,000 ಅಡಿಗಳಿಗೂ ಹೆಚ್ಚು ಎತ್ತರದಲ್ಲಿ 'ಅತಿ-ಎತ್ತರದ ಮ್ಯಾರಥಾನ್'  ಅನ್ನು ಯಶಸ್ವಿಯಾಗಿ ಆಯೋಜಿಸಿರುವುದನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು. 'ಆದಿ ಕೈಲಾಶ ಪರಿಕ್ರಮ ರನ್'  ದೇಶಕ್ಕೇ ಸ್ಫೂರ್ತಿಯ ಸೆಲೆಯಾಗಿದೆ ಎಂದು ಅವರು ಹೇಳಿದರು. "ಮೂರು ವರ್ಷಗಳ ಹಿಂದೆ, 2,000 ಕ್ಕಿಂತ ಕಡಿಮೆ ಯಾತ್ರಾರ್ಥಿಗಳು ಆದಿ ಕೈಲಾಶ ಯಾತ್ರೆಯಲ್ಲಿ ಭಾಗವಹಿಸಿದ್ದರು; ಇಂದು ಆ ಸಂಖ್ಯೆ 30,000 ದಾಟಿದೆ" ಎಂದು ಅವರು ಹೇಳಿದರು. "ಕೆಲವೇ ದಿನಗಳ ಹಿಂದೆ, ಕೇದಾರನಾಥ ದೇವಾಲಯದ ಬಾಗಿಲುಗಳು ಈ ಋತುವಿಗಾಗಿ (ಚಳಿಗಾಲಕ್ಕಾಗಿ) ಮುಚ್ಚಲ್ಪಟ್ಟವು" ಎಂದು ಅವರು ತಿಳಿಸಿದರು. "ಈ ವರ್ಷ, ಸುಮಾರು 17 ಲಕ್ಷ ಭಕ್ತರು ಕೇದಾರನಾಥ ಧಾಮಕ್ಕೆ ದರ್ಶನಕ್ಕಾಗಿ ಭೇಟಿ ನೀಡಿದ್ದಾರೆ." ತೀರ್ಥಯಾತ್ರೆ ಮತ್ತು ವರ್ಷಪೂರ್ತಿ ಪ್ರವಾಸೋದ್ಯಮ ಉತ್ತರಾಖಂಡದ ಬೃಹತ್ ಶಕ್ತಿಗಳಾಗಿವೆ ಎಂದ ಪ್ರಧಾನಮಂತ್ರಿ ಅವರು, ಇವು ರಾಜ್ಯವನ್ನು ಅಭಿವೃದ್ಧಿಯ ನವ ಶಿಖರಗಳಿಗೆ ಕೊಂಡೊಯ್ಯುವುದನ್ನು ಮುಂದುವರಿಸುತ್ತವೆ ಎಂದು ದೃಢವಾಗಿ ಪ್ರತಿಪಾದಿಸಿದರು. 'ಪರಿಸರ-ಪ್ರವಾಸೋದ್ಯಮ' ಮತ್ತು 'ಸಾಹಸ-ಪ್ರವಾಸೋದ್ಯಮ' ದಲ್ಲಿರುವ ಅಪಾರ ಸಾಧ್ಯತೆಗಳು, ಭಾರತದ ಯುವಕರನ್ನು ಆಕರ್ಷಿಸಲು ಅತ್ಯುತ್ತಮ ಮಾರ್ಗಗಳಾಗಿವೆ ಎಂದು ಅವರು ಹೇಳಿದರು.

ಉತ್ತರಾಖಂಡವು ಈಗ ಒಂದು 'ಚಿತ್ರೀಕರಣ ತಾಣ'ವಾಗಿ ಹೊರಹೊಮ್ಮುತ್ತಿದೆ ಮತ್ತು ರಾಜ್ಯದ ಹೊಸ ಚಲನಚಿತ್ರ ನೀತಿಯು ಚಿತ್ರೀಕರಣವನ್ನು ಸುಲಭಗೊಳಿಸಿದೆ" ಎಂದು ಪ್ರಧಾನಮಂತ್ರಿ ಅವರು ಅಭಿಪ್ರಾಯಪಟ್ಟರು. ಉತ್ತರಾಖಂಡವು 'ವಿವಾಹ ತಾಣ' ವಾಗಿಯೂ ಜನಪ್ರಿಯತೆಯನ್ನು ಗಳಿಸುತ್ತಿದೆ ಎಂದು ಅವರು ಗಮನಸೆಳೆದರು. "ವೆಡ್ ಇನ್ ಇಂಡಿಯಾ"  ಉಪಕ್ರಮಕ್ಕಾಗಿ, ಉತ್ತರಾಖಂಡವು ಬೃಹತ್ ಪ್ರಮಾಣದ  ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಿ ಹೇಳಿದರು ಮತ್ತು ಈ ಉದ್ದೇಶಕ್ಕಾಗಿ 5 ರಿಂದ 7 ಪ್ರಮುಖ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದರು.

'ಆತ್ಮನಿರ್ಭರ ಭಾರತ' ನಿರ್ಮಾಣಕ್ಕಾಗಿ ರಾಷ್ಟ್ರ ಹೊಂದಿರುವ ದೃಢ ಸಂಕಲ್ಪವನ್ನು ಶ್ರೀ ಮೋದಿ ಅವರು ಪುನರುಚ್ಚರಿಸಿದರು. "ಸ್ವಾವಲಂಬನೆಯ ಈ ಪಥವು 'ವೋಕಲ್ ಫಾರ್ ಲೋಕಲ್' (ಸ್ಥಳೀಯ ಉತ್ಪನ್ನಗಳಿಗಾಗಿ ದನಿ ಎತ್ತುವುದು) ಮೂಲಕವೇ ಸಾಕಾರಗೊಳ್ಳುತ್ತದೆ" ಎಂದು ಅವರು ಪ್ರತಿಪಾದಿಸಿದರು. ಉತ್ತರಾಖಂಡವು ಈ ದೃಷ್ಟಿಕೋನವನ್ನು ಯಾವಾಗಲೂ ಮೈಗೂಡಿಸಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು. "ಸ್ಥಳೀಯ ಉತ್ಪನ್ನಗಳ ಬಗೆಗಿನ ಆಳವಾದ ಮಮಕಾರ, ಅವುಗಳ ಬಳಕೆ ಮತ್ತು ದೈನಂದಿನ ಜೀವನದಲ್ಲಿ ಅವುಗಳನ್ನು ಹಾಸುಹೊಕ್ಕಾಗಿಸಿಕೊಳ್ಳುವುದು ಉತ್ತರಾಖಂಡದ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ," ಎಂದರು. ಉತ್ತರಾಖಂಡ ಸರ್ಕಾರವು 'ವೋಕಲ್ ಫಾರ್ ಲೋಕಲ್' ಅಭಿಯಾನಕ್ಕೆ ಚುರುಕು ನೀಡಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು. ಇದರ ಫಲಶೃತಿಯಾಗಿ ರಾಜ್ಯದ 15 ಕೃಷಿ ಉತ್ಪನ್ನಗಳಿಗೆ 'ಜಿಐ ಟ್ಯಾಗ್' (ಭೌಗೋಳಿಕ ಸಂಕೇತ) ಮಾನ್ಯತೆ ಲಭಿಸಿದೆ. ಇತ್ತೀಚೆಗೆ 'ಬೇಡು' ಹಣ್ಣು ಮತ್ತು 'ಬದ್ರಿ ಹಸುವಿನ ತುಪ್ಪ'ಕ್ಕೆ  ಜಿಐ ಟ್ಯಾಗ್ ದೊರೆತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಅವರು ಬಣ್ಣಿಸಿದರು. ಬದ್ರಿ ಹಸುವಿನ ತುಪ್ಪವನ್ನು "ಪ್ರತಿ ಗಿರಿಜನ ವಾಸಿಯ ಮನೆಯ ಹೆಗ್ಗುರುತು" ಎಂದು ಬಣ್ಣಿಸಿದ ಅವರು, 'ಬೇಡು' ಹಣ್ಣು ಈಗ ಹಳ್ಳಿಗಳ ಗಡಿ ದಾಟಿ ಮಾರುಕಟ್ಟೆಗಳನ್ನು ತಲುಪುತ್ತಿದೆ ಎಂದು ಗಮನಸೆಳೆದರು. "ಅದರಿಂದ ತಯಾರಿಸಿದ ಉತ್ಪನ್ನಗಳು ಇನ್ನು ಮುಂದೆ ಜಿಐ ಟ್ಯಾಗ್ ಅನ್ನು ಹೊಂದಿರುತ್ತವೆ ಮತ್ತು ಅವು ವಿಶ್ವದ ಯಾವುದೇ ಮೂಲೆಗೆ ತಲುಪಿದರೂ, ಉತ್ತರಾಖಂಡದ ಪರಿಚಯವನ್ನು ಹೊತ್ತೊಯ್ಯುತ್ತವೆ." ಇಂತಹ ಜಿಐ-ಟ್ಯಾಗ್ ಹೊಂದಿರುವ ಉತ್ಪನ್ನಗಳನ್ನು ದೇಶದ ಪ್ರತಿ ಮನೆಗೂ ತಲುಪಿಸಬೇಕು ಎಂದು ಶ್ರೀ ಮೋದಿ ಅವರು ಹೇಳಿದರು.

"ಹೌಸ್ ಆಫ್ ಹಿಮಾಲಯಾಸ್" ಬ್ರಾಂಡ್, ಉತ್ತರಾಖಂಡದ ಸ್ಥಳೀಯ ಅಸ್ಮಿತೆಯನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಬ್ರಾಂಡ್ ಆಗಿ ಹೊರಹೊಮ್ಮುತ್ತಿರುವುದಕ್ಕೆ ಪ್ರಧಾನಮಂತ್ರಿ ಅವರು ಹರ್ಷ ವ್ಯಕ್ತಪಡಿಸಿದರು. ಈ ಬ್ರಾಂಡ್‌ ನ ಅಡಿಯಲ್ಲಿ, ರಾಜ್ಯದ ವಿವಿಧ ಉತ್ಪನ್ನಗಳಿಗೆ ಸಂಘಟಿತ ಗುರುತನ್ನು  ನೀಡಲಾಗಿದ್ದು, ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಪರ್ಧಿಸಲು ಅವುಗಳನ್ನು ಸಶಕ್ತಗೊಳಿಸಲಿದೆ ಎಂದು ಅವರು ಹೇಳಿದರು. ಈ ಪೈಕಿ ಹಲವು ಉತ್ಪನ್ನಗಳು ಈಗ ಡಿಜಿಟಲ್ ವೇದಿಕೆಗಳಲ್ಲಿ ಲಭ್ಯವಿವೆ ಎಂದು ಅವರು ಬೆಳಕು ಚೆಲ್ಲಿದರು. ಇದು ಗ್ರಾಹಕರಿಗೆ ನೇರ ಸಂಪರ್ಕವನ್ನು ಖಚಿತಪಡಿಸುವುದಲ್ಲದೆ, ರೈತರು, ಕರಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ನವೀನ ಮಾರುಕಟ್ಟೆಗಳನ್ನು ತೆರೆದಿಡುತ್ತಿದೆ. ಬ್ರ್ಯಾಂಡಿಂಗ್ ಪ್ರಯತ್ನಗಳಿಗೆ ಹೊಸ ಹುರುಪು ತುಂಬುವಂತೆ ಶ್ರೀ ಮೋದಿ ಅವರು ಕರೆ ನೀಡಿದರು ಮತ್ತು ಈ ಬ್ರಾಂಡೆಡ್ ಉತ್ಪನ್ನಗಳ ವಿತರಣಾ ವ್ಯವಸ್ಥೆಗಳನ್ನು ನಿರಂತರವಾಗಿ ಸುಧಾರಿಸುತ್ತಲೇ ಇರುವ ಅಗತ್ಯವನ್ನು ಒತ್ತಿ ಹೇಳಿದರು.

"ಉತ್ತರಾಖಂಡದ ಅಭಿವೃದ್ಧಿ ಪಯಣವು ಅನೇಕ ಅಡೆತಡೆಗಳನ್ನು ಎದುರಿಸಿದೆ, ಆದರೆ ತಮ್ಮ ಬಲಿಷ್ಠ ಸರ್ಕಾರವು ಈ ಸವಾಲುಗಳನ್ನು ಸ್ಥಿರವಾಗಿ ಮೆಟ್ಟಿನಿಂತಿದೆ. ಇದರಿಂದಾಗಿ ಅಭಿವೃದ್ಧಿಯ ವೇಗವು ಅಡೆತಡೆಯಿಲ್ಲದೆ ಮುಂದುವರಿದಿದೆ" ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. 'ಏಕರೂಪ ನಾಗರಿಕ ಸಂಹಿತೆ'ಯನ್ನು ಗಂಭೀರವಾಗಿ ಜಾರಿಗೆ ತಂದಿರುವ ಶ್ರೀ ಪುಷ್ಕರ್ ಸಿಂಗ್ ಧಾಮಿ ಅವರ ಸರ್ಕಾರವನ್ನು ಅವರು ಶ್ಲಾಘಿಸಿದರು ಮತ್ತು ಇದು ಇತರ ರಾಜ್ಯಗಳಿಗೆ ಒಂದು ಮಾದರಿ ಎಂದು ಬಣ್ಣಿಸಿದರು. 'ಮತಾಂತರ ವಿರೋಧಿ ಕಾನೂನು' ಮತ್ತು 'ಗಲಭೆ ನಿಯಂತ್ರಣ ಕಾನೂನು' ದಂತಹ ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ರಾಜ್ಯ ಸರ್ಕಾರ ತೆಗೆದುಕೊಂಡ  ದಿಟ್ಟ ನೀತಿಗಳನ್ನು ಅವರು ಮೆಚ್ಚಿಕೊಂಡರು. ಕ್ಷಿಪ್ರ 'ಭೂ ಅತಿಕ್ರಮಣ' ಮತ್ತು 'ಜನಸಂಖ್ಯಾ ಬದಲಾವಣೆ'  ಗಳಂತಹ ಸೂಕ್ಷ್ಮ ವಿಷಯಗಳ ಬಗ್ಗೆಯೂ ಸರ್ಕಾರವು ದೃಢವಾದ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಅವರು ಗಮನಸೆಳೆದರು. ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ, ಉತ್ತರಾಖಂಡ ಸರ್ಕಾರದ ತ್ವರಿತ ಮತ್ತು ಸಂವೇದನಾಶೀಲ ಪ್ರತಿಕ್ರಿಯೆಯನ್ನು ಹಾಗೂ ಜನರಿಗೆ ಸಾಧ್ಯವಿರುವ ಎಲ್ಲಾ ನೆರವನ್ನು ಒದಗಿಸುವ ಅದರ ಪ್ರಯತ್ನಗಳನ್ನು ಅವರು ಪ್ರಶಂಸಿಸಿದರು.

ಉತ್ತರಾಖಂಡವು ತನ್ನ ರಾಜ್ಯ ರಚನೆಯ ರಜತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ರಾಜ್ಯವು ಮುಂಬರುವ ವರ್ಷಗಳಲ್ಲಿ ಅಭಿವೃದ್ಧಿಯ ಹೊಸ ಎತ್ತರಗಳನ್ನು ಏರಲಿದೆ ಎಂಬ ದೃಢ ವಿಶ್ವಾಸವನ್ನು ಪ್ರಧಾನಮಂತ್ರಿ ಅವರು ವ್ಯಕ್ತಪಡಿಸಿದರು. ಉತ್ತರಾಖಂಡವು ತನ್ನ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಹೆಮ್ಮೆಯಿಂದ ಮುಂದಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸುತ್ತದೆ ಎಂದು ಅವರು ದೃಢಪಡಿಸಿದರು. "ಮುಂದಿನ 25 ವರ್ಷಗಳ ಉತ್ತರಾಖಂಡದ ಕುರಿತು ನಿಮ್ಮ ದೃಷ್ಟಿಕೋನವನ್ನು ಸಂಕಲ್ಪಿಸಿ ಮತ್ತು ದೃಢ ನಂಬಿಕೆಯೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗಿರಿ" ಎಂದು ಶ್ರೀ ಮೋದಿ ಅವರು ಜನತೆಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಉತ್ತರಾಖಂಡದ ಸಮಸ್ತ ನಿವಾಸಿಗಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ ಪ್ರಧಾನಮಂತ್ರಿ ಅವರು, "ಭಾರತ ಸರ್ಕಾರವು ಉತ್ತರಾಖಂಡ ಸರ್ಕಾರದೊಂದಿಗೆ ಬೆನ್ನೆಲುಬಾಗಿ ನಿಂತಿದೆ ಮತ್ತು ಪ್ರತಿ ಹೆಜ್ಜೆಯಲ್ಲೂ ಬೆಂಬಲಿಸಲು ಬದ್ಧವಾಗಿದೆ" ಎಂದು ಭರವಸೆ ನೀಡಿದರು. ರಾಜ್ಯದ ಪ್ರತಿಯೊಂದು ಕುಟುಂಬ ಮತ್ತು ಪ್ರತಿಯೊಬ್ಬ ನಾಗರಿಕರ ಸುಖ, ಸಮೃದ್ಧಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ತಮ್ಮ ಶುಭ ಹಾರೈಕೆಗಳನ್ನು ತಿಳಿಸುತ್ತಾ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಉತ್ತರಾಖಂಡದ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮಿತ್ ಸಿಂಗ್, ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ಶ್ರೀ ಅಜಯ್ ತಮ್ಟಾ ಅವರು ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿ, 'ಉತ್ತರಾಖಂಡ ರಾಜ್ಯ ರಚನೆಯ ರಜತ ಮಹೋತ್ಸವ'ದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದ ಸ್ಮರಣಾರ್ಥವಾಗಿ ಪ್ರಧಾನಮಂತ್ರಿ ಅವರು 'ಸ್ಮರಣಾರ್ಥ ಅಂಚೆ ಚೀಟಿ'ಯನ್ನು ಬಿಡುಗಡೆ ಮಾಡಿದರು ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು, ₹8140 ಕೋಟಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿ ₹930 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ₹7210 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ಸೇರಿದೆ. ಈ ಯೋಜನೆಗಳು ಕುಡಿಯುವ ನೀರು, ನೀರಾವರಿ, ತಾಂತ್ರಿಕ ಶಿಕ್ಷಣ, ಇಂಧನ, ನಗರಾಭಿವೃದ್ಧಿ, ಕ್ರೀಡೆ, ಮತ್ತು ಕೌಶಲ್ಯ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಲಯಗಳಿಗೆ ಸಂಬಂಧಿಸಿವೆ.

'ಪಿಎಂ ಫಸಲ್ ಬಿಮಾ ಯೋಜನೆ' ಅಡಿಯಲ್ಲಿ ಪ್ರಧಾನಮಂತ್ರಿ ಅವರು, 28,000 ಕ್ಕೂ ಹೆಚ್ಚು ರೈತರಿಗೆ ₹62 ಕೋಟಿ ನೆರವಿನ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಿದರು.

ಪ್ರಧಾನಮಂತ್ರಿ ಅವರಿಂದ ಉದ್ಘಾಟನೆಗೊಂಡ ಯೋಜನೆಗಳಲ್ಲಿ 'ಅಮೃತ್' ಯೋಜನೆ ಅಡಿಯಲ್ಲಿ ಡೆಹ್ರಾಡೂನ್‌ನ 23 ವಲಯಗಳಿಗೆ ನೀರು ಸರಬರಾಜು ವ್ಯವಸ್ಥೆ, ಪಿಥೋರಾಗಢ ಜಿಲ್ಲೆಯಲ್ಲಿ ವಿದ್ಯುತ್ ಉಪಕೇಂದ್ರ, ಸರ್ಕಾರಿ ಕಟ್ಟಡಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳು, ನೈನಿತಾಲ್‌ ನ ಹಲ್ದ್ವಾನಿ ಕ್ರೀಡಾಂಗಣದಲ್ಲಿ 'ಆಸ್ಟ್ರೋಟರ್ಫ್ ಹಾಕಿ ಮೈದಾನ' ಮುಂತಾದವು ಸೇರಿವೆ.

ಪ್ರಧಾನಮಂತ್ರಿ ಅವರು ಜಲ ಸಂಪನ್ಮೂಲ ವಲಯಕ್ಕೆ ಸಂಬಂಧಿಸಿದ ಎರಡು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅದು ಯಾವುದ ಅಂದರೆ, ಡೆಹ್ರಾಡೂನ್‌ಗೆ 150 MLD (ದಿನಕ್ಕೆ ದಶಲಕ್ಷ ಲೀಟರ್) ಕುಡಿಯುವ ನೀರನ್ನು ಪೂರೈಸಲಿರುವ 'ಸಾಂಗ್ ಅಣೆಕಟ್ಟು ಕುಡಿಯುವ ನೀರಿನ ಯೋಜನೆ' ಮತ್ತು ನೈನಿತಾಲ್‌ ನಲ್ಲಿ ಕುಡಿಯುವ ನೀರು, ನೀರಾವರಿ ಹಾಗೂ ವಿದ್ಯುತ್ ಉತ್ಪಾದನೆಗೆ ಬೆಂಬಲ ನೀಡಲಿರುವ 'ಜಮ್ರಾನಿ ಅಣೆಕಟ್ಟು ಬಹುಪಯೋಗಿ ಯೋಜನೆ'. ಶಂಕುಸ್ಥಾಪನೆ ನೆರವೇರಿಸಲಾದ ಇತರ ಯೋಜನೆಗಳಲ್ಲಿ ವಿದ್ಯುತ್ ಉಪಕೇಂದ್ರಗಳು, ಚಂಪಾವತ್‌ ನಲ್ಲಿ 'ಮಹಿಳಾ ಕ್ರೀಡಾ ಕಾಲೇಜು' ಸ್ಥಾಪನೆ, ನೈನಿತಾಲ್‌ ನಲ್ಲಿ 'ಅತ್ಯಾಧುನಿಕ ಡೇರಿ ಘಟಕ' ಮುಂತಾದವು ಸೇರಿವೆ.

 

 

*****


(Release ID: 2188044) Visitor Counter : 7