ರೈಲ್ವೇ ಸಚಿವಾಲಯ
'ಮೋಂಥಾ' ಚಂಡಮಾರುತ ಹಿನ್ನೆಲೆಯಲ್ಲಿ ರೈಲ್ವೆಯ ಸನ್ನದ್ಧತೆಯನ್ನು ಪರಿಶೀಲಿಸಿದ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್
ನಿರಂತರ ಸಂವಹನ ಮತ್ತು ವಿಪತ್ತು ಸ್ಪಂದನಾ ತಂಡಗಳ ಸಕಾಲಿಕ ನಿಯೋಜನೆಗೆ ಕೇಂದ್ರ ಸಚಿವರ ಒತ್ತು; ಎಲ್ಲಾ ರೈಲ್ವೆ ವಲಯಗಳು ಕಟ್ಟೆಚ್ಚರದಲ್ಲಿರಲು ಮತ್ತು ಚಂಡಮಾರುತದ ನಂತರ ರೈಲು ಸೇವೆಗಳನ್ನು ತ್ವರಿತವಾಗಿ ಪುನಃಸ್ಥಾಪಿಸಲು ನಿರ್ದೇಶನ
ಚಂಡಮಾರುತಕ್ಕೆ ರಿಯಲ್ ಟೈಮ್ ಸ್ಪಂದನೆಗಾಗಿ ಭಾರತೀಯ ರೈಲ್ವೆಯಿಂದ ವಿಭಾಗೀಯ ವಾರ್ ರೂಮ್ ಗಳು ಸಕ್ರಿಯ
ವಿಜಯವಾಡ, ವಿಶಾಖಪಟ್ಟಣಂ ಮತ್ತು ಗುಂಟೂರು ವಿಭಾಗಗಳಲ್ಲಿ ಅಗತ್ಯ ಸಾಮಗ್ರಿಗಳು, ಯಂತ್ರೋಪಕರಣಗಳು ಮತ್ತು ಮಾನವಶಕ್ತಿ ಸನ್ನದ್ಧ ಸ್ಥಿತಿಯಲ್ಲಿವೆ
ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ರೈಲು ಸಂಚಾರದ ಮೇಲೆ ನಿಕಟವಾಗಿ ಮೇಲ್ವಿಚಾರಣೆ
ತುರ್ತು ಸನ್ನದ್ಧತೆ ಮತ್ತು ಸುರಕ್ಷತಾ ಕ್ರಮಗಳಿಗಾಗಿ ECoR, SCoR, ಮತ್ತು SCR ವಲಯಗಳಿಂದ ಸಂಪನ್ಮೂಲಗಳ ಸಜ್ಜುಗೊಳಿಸುವಿಕೆ
Posted On:
28 OCT 2025 4:09PM by PIB Bengaluru
ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಮೋಂಥಾ ಚಂಡಮಾರುತದ ಹಿನ್ನೆಲೆಯಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದರು. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಈ ಪರಿಶೀಲನಾ ಸಭೆಯು, ಪೂರ್ವ ಕರಾವಳಿ ತೀರದಲ್ಲಿ ರೈಲ್ವೆ ಜಾಲದ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡುವತ್ತ ಗಮನಹರಿಸಿತು.
ಪ್ರಯಾಣಿಕರ ಸುರಕ್ಷತೆ, ರೈಲು ಸಂಚಾರ ನಿಯಂತ್ರಣ, ಸೇವೆಗಳ ಪುನಃಸ್ಥಾಪನೆ ಯೋಜನೆ, ಹಾಗೂ ಸ್ಥಳೀಯ ಆಡಳಿತ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಕೇಂದ್ರ ಸಚಿವರು ಪರಿಶೀಲನೆ ನಡೆಸಿದರು. ಚಂಡಮಾರುತದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, ವಿಶೇಷವಾಗಿ ಆಂಧ್ರಪ್ರದೇಶ, ಒಡಿಶಾ ಮತ್ತು ತೆಲಂಗಾಣದ ಪೂರ್ವ ಕರಾವಳಿ ಪ್ರದೇಶದಲ್ಲಿ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಅವರು ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ನಿರಂತರ ಸಂವಹನದ ಅಗತ್ಯತೆ ಮತ್ತು ವಿಪತ್ತು ನಿರ್ವಹಣಾ ತಂಡಗಳನ್ನು ಸಕಾಲದಲ್ಲಿ ನಿಯೋಜಿಸುವುದರ ಮಹತ್ವವನ್ನು ಒತ್ತಿ ಹೇಳಿದ ಕೇಂದ್ರ ಸಚಿವರು, ಎಲ್ಲಾ ರೈಲ್ವೆ ವಲಯಗಳು ಉನ್ನತ ಮಟ್ಟದ ಕಟ್ಟೆಚ್ಚರದಲ್ಲಿರುವಂತೆಯೂ ಮತ್ತು ಚಂಡಮಾರುತದ ನಂತರ ರೈಲು ಸೇವೆಗಳನ್ನು ತ್ವರಿತವಾಗಿ ಪುನಃಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳುವಂತೆಯೂ ನಿರ್ದೇಶನ ನೀಡಿದರು.
ಸಮೀಪಿಸುತ್ತಿರುವ 'ಮೋಂಥಾ' ಚಂಡಮಾರುತಕ್ಕೆ ಸಂಬಂಧಿಸಿದಂತೆ ರಿಯಲ್ ಟೈಮ್ ಸಮನ್ವಯ ಮತ್ತು ಸ್ಪಂದನೆಗಾಗಿ ಭಾರತೀಯ ರೈಲ್ವೆಯು ವಿಭಾಗೀಯ ವಾರ್ ರೂಮ್ ಗಳನ್ನು ಸಕ್ರಿಯಗೊಳಿಸಿದೆ. ವಿಶೇಷವಾಗಿ ವಿಜಯವಾಡ, ವಿಶಾಖಪಟ್ಟಣಂ ಮತ್ತು ಗುಂಟೂರು ವಿಭಾಗಗಳಲ್ಲಿ ಅಗತ್ಯ ಸಾಮಗ್ರಿಗಳು, ಯಂತ್ರೋಪಕರಣಗಳು ಮತ್ತು ಮಾನವಶಕ್ತಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಪ್ರಯಾಣಿಕರಿಗೆ ಆಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ರೈಲು ಕಾರ್ಯಾಚರಣೆಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ಪೂರ್ವ ಕರಾವಳಿ ರೈಲ್ವೆ (ECoR), ದಕ್ಷಿಣ ಕರಾವಳಿ ರೈಲ್ವೆ (SCoR), ಮತ್ತು ದಕ್ಷಿಣ ಮಧ್ಯ ರೈಲ್ವೆ (SCR) ವಲಯಗಳಿಗೆ ತುರ್ತು ಸ್ಪಂದನೆಗಾಗಿ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಮತ್ತು ಅಗತ್ಯವಿರುವ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
ಪೂರ್ವ ಕರಾವಳಿ ರೈಲ್ವೆಯ ಜನರಲ್ ಮ್ಯಾನೇಜರ್ ಶ್ರೀ ಪರಮೇಶ್ವರ್ ಫಂಕ್ವಾಲ್ ಅವರು, ಇಲಾಖೆಯ ಪ್ರಮುಖ ಮುಖ್ಯಸ್ಥರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ, ಅಪಾಯವಿರುವ ಮಾರ್ಗಗಳಲ್ಲಿ, ವಿಶೇಷವಾಗಿ ವಾಲ್ಟೇರ್ ಮತ್ತು ಖುರ್ದಾ ರೋಡ್ ವಿಭಾಗಗಳಲ್ಲಿ ಈಗಾಗಲೇ ಆರಂಭಿಸಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾನ್ಯ ಸಚಿವರಿಗೆ ವಿವರಿಸಿದರು.
*****
(Release ID: 2183362)
Visitor Counter : 9