ರಕ್ಷಣಾ ಸಚಿವಾಲಯ
ಪೊಲೀಸ್ ಹುತಾತ್ಮರ ದಿನ: ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ರಕ್ಷಣಾ ಸಚಿವರು ಪುಷ್ಪಗುಚ್ಛ ಅರ್ಪಿಸಿದರು; ದೇಶಕ್ಕೆ ಸಲ್ಲಿಸಿದ ಸೇವೆಗಾಗಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳಿಗೆ ಗೌರವ ಸಲ್ಲಿಸಿದರು
Posted On:
21 OCT 2025 12:02PM by PIB Bengaluru
ಪೊಲೀಸ್ ಹುತಾತ್ಮರ ದಿನವಾದ ಅಕ್ಟೋಬರ್ 21, 2025 ರಂದು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ನವದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿದರು. 1959ರ ಈ ದಿನದಂದು, ಲಡಾಖ್ ನ ಹಾಟ್ ಸ್ಪ್ರಿಂಗ್ಸ್ ನಲ್ಲಿ ಭಾರೀ ಶಸ್ತ್ರಸಜ್ಜಿತ ಚೀನೀ ಪಡೆಗಳು ನಡೆಸಿದ ಸಂಚಿನ ದಾಳಿಯಲ್ಲಿ 10 ಮಂದಿ ಕೆಚ್ಚೆದೆಯ ಪೊಲೀಸರು ಹುತಾತ್ಮರಾದರು.

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವರು ಹುತಾತ್ಮ ವೀರರಿಗೆ ಗೌರವ ಸಲ್ಲಿಸಿದರು, ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಪೊಲೀಸರು ಮತ್ತು ಅರೆಸೈನಿಕ ಪಡೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಶಸ್ತ್ರ ಪಡೆಗಳು ಮತ್ತು ಪೊಲೀಸ್ ಪಡೆಗಳು ರಾಷ್ಟ್ರೀಯ ಭದ್ರತೆಯ ಆಧಾರಸ್ತಂಭಗಳೆಂದು ಅವರು ಬಣ್ಣಿಸಿದರು, ಸಶಸ್ತ್ರ ಪಡೆಗಳು ದೇಶ ಮತ್ತು ಅದರ ಭೌಗೋಳಿಕ ಸಮಗ್ರತೆಯನ್ನು ರಕ್ಷಿಸಿದರೆ, ಪೊಲೀಸ್ ಪಡೆಗಳು ಸಮಾಜ ಮತ್ತು ಸಾಮಾಜಿಕ ಸಮಗ್ರತೆಯನ್ನು ರಕ್ಷಿಸುತ್ತವೆ ಎಂದು ಹೇಳಿದರು. "ಸೇನೆ ಮತ್ತು ಪೊಲೀಸರು ವಿಭಿನ್ನ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ, ಆದರೆ ಅವರ ಧ್ಯೇಯ ಒಂದೇ – ರಾಷ್ಟ್ರ ರಕ್ಷಣೆ. 2047ರ ವೇಳೆಗೆ ನಾವು ವಿಕಸಿತ ಭಾರತದ ಕಡೆಗೆ ನೋಡುತ್ತಿರುವಾಗ, ರಾಷ್ಟ್ರದ ಬಾಹ್ಯ ಮತ್ತು ಆಂತರಿಕ ಭದ್ರತೆಯ ನಡುವೆ ಸಮತೋಲನ ಸಾಧಿಸುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ" ಎಂದು ಅವರು ಹೇಳಿದರು.
ಗಡಿಗಳಲ್ಲಿ ಅಸ್ಥಿರತೆ ಇರುವಾಗ ಸಮಾಜದಲ್ಲಿ ಅಪರಾಧ, ಭಯೋತ್ಪಾದನೆ ಮತ್ತು ಸೈದ್ಧಾಂತಿಕ ಸಂಘರ್ಷಗಳ ಹೊಸ ರೂಪಗಳು ಹೊರಹೊಮ್ಮುತ್ತಿವೆ ಎಂದು ಶ್ರೀ ರಾಜನಾಥ್ ಸಿಂಗ್ ಇಂದಿನ ಸವಾಲುಗಳ ಕುರಿತು ಹೇಳಿದರು. ಅಪರಾಧವು ಹೆಚ್ಚು ಸಂಘಟಿತ, ಅದೃಶ್ಯ ಮತ್ತು ಸಂಕೀರ್ಣವಾಗಿದೆ ಮತ್ತು ಸಮಾಜದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುವುದು, ನಂಬಿಕೆಯನ್ನು ದುರ್ಬಲಗೊಳಿಸುವುದು ಮತ್ತು ದೇಶದ ಸ್ಥಿರತೆಗೆ ಸವಾಲು ಒಡ್ಡುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಅಪರಾಧವನ್ನು ತಡೆಗಟ್ಟುವ ಅಧಿಕೃತ ಜವಾಬ್ದಾರಿಯನ್ನು ನಿರ್ವಹಿಸುವುದ ಜೊತೆಗೆ ಸಮಾಜದಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳುವ ನೈತಿಕ ಜವಾಬ್ದಾರಿಯನ್ನು ಸಹ ಪೂರೈಸಿದ್ದಕ್ಕಾಗಿ ಪೊಲೀಸರನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. "ಇಂದು ಜನರು ನೆಮ್ಮದಿಯಿಂದ ನಿದ್ರಿಸುತ್ತಿದ್ದರೆ, ಅದು ನಮ್ಮ ಜಾಗರೂಕ ಸಶಸ್ತ್ರ ಪಡೆಗಳು ಮತ್ತು ಜಾಗರೂಕ ಪೊಲೀಸರ ಮೇಲಿನ ನಂಬಿಕೆಯಿಂದಾಗಿ. ಈ ನಂಬಿಕೆಯು ನಮ್ಮ ದೇಶದ ಸ್ಥಿರತೆಯ ಅಡಿಪಾಯವಾಗಿದೆ" ಎಂದು ಅವರು ಹೇಳಿದರು.
ಆಂತರಿಕ ಭದ್ರತೆಗೆ ಬಹುಕಾಲದಿಂದ ಪ್ರಮುಖ ಸವಾಲಾಗಿರುವ ನಕ್ಸಲಿಸಂ ಬಗ್ಗೆ ಮಾತನಾಡಿದ ಶ್ರೀ ರಾಜನಾಥ್ ಸಿಂಗ್, ಪೊಲೀಸರು, ಸಿ.ಆರ್.ಪಿ.ಎಫ್, ಬಿ.ಎಸ್.ಎಫ್ ಮತ್ತು ಸ್ಥಳೀಯ ಆಡಳಿತದ ಒಗ್ಗಟ್ಟಿನ ಮತ್ತು ಸಂಘಟಿತ ಪ್ರಯತ್ನಗಳು ಸಮಸ್ಯೆ ಉಲ್ಬಣಗೊಳ್ಳದಂತೆ ನೋಡಿಕೊಳ್ಳುತ್ತಿವೆ ಮತ್ತು ಎಡಪಂಥೀಯ ಉಗ್ರವಾದದಿಂದ ಬಾಧಿತವಾದ ಪ್ರದೇಶಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಿದರು. ಮುಂದಿನ ವರ್ಷದ ಮಾರ್ಚ್ ವೇಳೆಗೆ ಈ ಸಮಸ್ಯೆ ಕೊನೆಗೊಳ್ಳುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. "ಈ ವರ್ಷ ಅನೇಕ ಪ್ರಮುಖ ನಕ್ಸಲೀಯರನ್ನು ನಿರ್ಮೂಲನೆ ಮಾಡಲಾಗಿದೆ. ಹಿಂದೆ ಸರ್ಕಾರದ ವಿರುದ್ಧ ಶಸ್ತ್ರಾಸ್ತ್ರ ಹಿಡಿದವರು ಈಗ ಶರಣಾಗುತ್ತಿದ್ದಾರೆ ಮತ್ತು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ. ಎಡಪಂಥೀಯ ಉಗ್ರವಾದದಿಂದ ಬಾಧಿತವಾಗಿರುವ ಜಿಲ್ಲೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಒಂದು ಕಾಲದಲ್ಲಿ ನಕ್ಸಲೀಯರ ಭದ್ರಕೋಟೆಯಾಗಿದ್ದ ಪ್ರದೇಶಗಳು ಈಗ ಶೈಕ್ಷಣಿಕ ಕೇಂದ್ರಗಳಾಗುತ್ತಿವೆ. ಒಂದು ಕಾಲದಲ್ಲಿ ಕೆಂಪು ಕಾರಿಡಾರ್ ಕರೆಯಲ್ಪಡುತ್ತಿದ್ದ ಪ್ರದೇಶಗಳು ಈಗ ಬೆಳವಣಿಗೆಯ ಕಾರಿಡಾರ್ ಗಳಾಗಿ ರೂಪಾಂತರಗೊಂಡಿವೆ. ನಮ್ಮ ಪೊಲೀಸರು ಮತ್ತು ಭದ್ರತಾ ಪಡೆಗಳು ಈ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿವೆ" ಎಂದು ಅವರು ಹೇಳಿದರು.

ರಾಷ್ಟ್ರೀಯ ಭದ್ರತೆ ಮತ್ತು ಈ ಪ್ರಯತ್ನದಲ್ಲಿ ಪೊಲೀಸ್ ಪಡೆಗಳ ತೊಡಗಿಸಿಕೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸರ್ಕಾರದ ಬದ್ಧತೆಯನ್ನು ರಕ್ಷಣಾ ಸಚಿವರು ಪುನರುಚ್ಚರಿಸಿದರು. "ದೀರ್ಘಕಾಲದವರೆಗೆ, ನಾವು ಒಂದು ದೇಶವಾಗಿ, ಪೊಲೀಸರ ಕೊಡುಗೆಯನ್ನು ಸಂಪೂರ್ಣವಾಗಿ ಗುರುತಿಸಲಿಲ್ಲ. ಆದಾಗ್ಯೂ, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ, ಸರ್ಕಾರವು ನಮ್ಮ ಪೊಲೀಸ್ ಪಡೆಗಳ ಸ್ಮರಣೆಗಳನ್ನು ಗೌರವಿಸಲು 2018 ರಲ್ಲಿ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು ಸ್ಥಾಪಿಸಿತು. ಇದಲ್ಲದೆ, ಪೊಲೀಸರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸುಧಾರಿತ ಸೌಲಭ್ಯಗಳನ್ನು ಒದಗಿಸಲಾಗಿದೆ. ಅವರು ಈಗ ಕಣ್ಗಾವಲು ವ್ಯವಸ್ಥೆಗಳು, ಡ್ರೋನ್ ಗಳು, ವಿಧಿವಿಜ್ಞಾನ ಪ್ರಯೋಗಾಲಯಗಳು ಮತ್ತು ಡಿಜಿಟಲ್ ಪೋಲೀಸಿಂಗ್ ನಂತಹ ಆಧುನಿಕ ಉಪಕರಣಗಳನ್ನು ಹೊಂದಿದ್ದಾರೆ. ಪೊಲೀಸ್ ಪಡೆಗಳನ್ನು ಆಧುನೀಕರಿಸಲು ರಾಜ್ಯಗಳಿಗೆ ಸಾಕಷ್ಟು ಸಂಪನ್ಮೂಲಗಳನ್ನು ಸಹ ಒದಗಿಸಲಾಗುತ್ತಿದೆ," ಎಂದು ಅವರು ಹೇಳಿದರು. ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಮತ್ತು ಏಕೀಕರಣದ ಮೂಲಕ ಮಾತ್ರ ಸಾಧಿಸಬಹುದಾದ ಸಂಪನ್ಮೂಲಗಳ ಅತ್ಯುತ್ತಮ ಬಳಕೆಗೆ ಶ್ರೀ ರಾಜನಾಥ್ ಸಿಂಗ್ ಕರೆ ನೀಡಿದರು.
ಸಮಾಜ ಮತ್ತು ಪೊಲೀಸರು ಪರಸ್ಪರ ಸಮಾನವಾಗಿ ಅವಲಂಬಿತರಾಗಿದ್ದಾರೆ ಎಂದು ಹೇಳಿದ ರಕ್ಷಣಾ ಸಚಿವರು, ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಹೆಚ್ಚು ಜಾಗರೂಕವಾಗಿಸಲು ಎರಡರ ನಡುವೆ ಸಮತೋಲಿತ ಸಂಬಂಧವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. "ನಾಗರಿಕರು ಪಾಲುದಾರರಾಗಿ ಕೆಲಸ ಮಾಡಿದಾಗ ಮತ್ತು ಕಾನೂನನ್ನು ಗೌರವಿಸಿದಾಗ ಮಾತ್ರ ಪೊಲೀಸ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಸಮಾಜ ಮತ್ತು ಪೊಲೀಸರ ನಡುವಿನ ಸಂಬಂಧವು ಪರಸ್ಪರ ತಿಳುವಳಿಕೆ ಮತ್ತು ಜವಾಬ್ದಾರಿಯನ್ನು ಆಧರಿಸಿದಾಗ, ಎರಡೂ ಪ್ರಗತಿ ಸಾಧಿಸುತ್ತವೆ" ಎಂದು ಅವರು ಹೇಳಿದರು.

ಕಾರ್ಯಕ್ರಮದ ಭಾಗವಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿ.ಎ.ಪಿ.ಎಫ್) ಮತ್ತು ದೆಹಲಿ ಪೊಲೀಸರ ಜಂಟಿ ಪರೇಡ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಬಂಡಿ ಸಂಜಯ್ ಕುಮಾರ್, ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕ ಶ್ರೀ ತಪನ್ ದೇಕಾ, ಬಿ.ಎಸ್.ಎಫ್ ಮಹಾ ನಿರ್ದೇಶಕ ಶ್ರೀ ದಲ್ಜಿತ್ ಸಿಂಗ್ ಚೌಧರಿ, ಸಿ.ಎ.ಪಿ.ಎಫ್ ಗಳ ಇತರ ಮುಖ್ಯಸ್ಥರು, ನಿವೃತ್ತ ಡಿ.ಜಿಗಳು ಮತ್ತು ಪೊಲೀಸ್ ಬಳಗದ ಅಧಿಕಾರಿಗಳು ಭಾಗವಹಿಸಿದ್ದರು.
****
(Release ID: 2181204)
Visitor Counter : 9