ಪ್ರಧಾನ ಮಂತ್ರಿಯವರ ಕಛೇರಿ
ಸಹಕಾರಿ ಕ್ಷೇತ್ರದ ಬಹು ಪ್ರಮುಖ ಉಪಕ್ರಮಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
ಪ್ರಕಟಣಾ ದಿನಾಂಕ:
24 FEB 2024 2:38PM by PIB Bengaluru
ಗೃಹ ವ್ಯವಹಾರ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಅರ್ಜುನ್ ಮುಂಡಾ ಅವರೇ ಮತ್ತು ಶ್ರೀ ಪಿಯೂಷ್ ಗೋಯಲ್ ಜಿ, ರಾಷ್ಟ್ರೀಯ ಸಹಕಾರಿ ಸಮಿತಿಗಳ ಅಧಿಕಾರಿಗಳು, ಇತರ ಗಣ್ಯರು, ಮಹಿಳೆಯರೇ ಮತ್ತು ಮಹನೀಯರೇ!
ಇಂದು, 'ವಿಕಸಿತ ಭಾರತ'ದ 'ಅಮೃತ ಯಾತ್ರೆ'ಯಲ್ಲಿ 'ಭಾರತ್ ಮಂಟಪ' ಮತ್ತೊಂದು ಮಹತ್ವದ ಸಾಧನೆಗೆ ಸಾಕ್ಷಿಯಾಗುತ್ತಿದೆ. ಇಂದು, ದೇಶವು ಕೈಗೊಂಡಿರುವ 'ಸಹಕಾರ ಸೇ ಸಮೃದ್ಧಿ' (ಸಹಕಾರದಿಂದ ಸಮೃದ್ಧಿ) ಎನ್ನುವ ಸಂಕಲ್ಪವನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ನಾವು ಮುಂದುವರಿಯುತ್ತಿದ್ದೇವೆ. ವ್ಯವಸಾಯ ಮತ್ತು ಕೃಷಿಯ ಅಡಿಪಾಯವನ್ನು ಬಲಪಡಿಸುವಲ್ಲಿ ಸಹಕಾರವು ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದ್ದೇವೆ. ಮತ್ತು ಇಂದು ಈ ಕಾರ್ಯಕ್ರಮವು ಅದೇ ಮನೋಭಾವದಿಂದ ನಡೆಯುತ್ತಿದೆ. ಇಂದು, ನಾವು ನಮ್ಮ ರೈತರಿಗಾಗಿ ವಿಶ್ವದ ಅತಿದೊಡ್ಡ ಸಂಗ್ರಹಣಾ ಯೋಜನೆಯನ್ನು ಪ್ರಾರಂಭಿಸಿದ್ದೇವೆ... ಗೋದಾಮು ಯೋಜನೆ. ಈ ಯೋಜನೆಯಡಿಯಲ್ಲಿ, ದೇಶದ ಮೂಲೆ ಮೂಲೆಗಳಲ್ಲಿ ಸಾವಿರಾರು ವೇರ್ ಹೌಸ್ಗಳು ಮತ್ತು ಗೋದಾಮುಗಳನ್ನು ನಿರ್ಮಿಸಲಾಗುವುದು. ಇಂದು, 18,000 ಪಿಎಸಿಎಸ್ ಗಳ (ಪ್ರಾಥಮಿಕ ಕೃಷಿ ಸಾಲ ಸಂಘಗಳು) ಗಣಕೀಕರಣದ ಮಹತ್ವದ ಕಾರ್ಯವೂ ಪೂರ್ಣಗೊಂಡಿದೆ. ಈ ಎಲ್ಲಾ ಯೋಜನೆಗಳು ದೇಶದ ಕೃಷಿ ಮೂಲಸೌಕರ್ಯಕ್ಕೆ ಹೊಸ ಉತ್ತೇಜನ ನೀಡುತ್ತವೆ, ಕೃಷಿಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸುತ್ತವೆ. ಈ ಪ್ರಮುಖ ಮತ್ತು ದೂರಗಾಮಿ ಉಪಕ್ರಮಗಳಿಗಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಮತ್ತು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ.
ಸ್ನೇಹಿತರೇ,
ಸಹಕಾರ ಸಂಘಗಳು ಭಾರತಕ್ಕೆ ಬಹಳ ಪ್ರಾಚೀನ ವ್ಯವಸ್ಥೆಯಾಗಿದೆ. ನಮ್ಮ ಧರ್ಮಗ್ರಂಥಗಳು "ಅಲ್ಪನಾಂ ಅಪಿ ವಾಸ್ತುನಾಂ, ಸಂಹತಿ: ಕಾರ್ಯ ಸಾಧಕ" ಎಂದು ಹೇಳುತ್ತವೆ. ಅಂದರೆ, ಸಣ್ಣ ವಿಷಯಗಳು ಮತ್ತು ಸಣ್ಣ ಸಂಪನ್ಮೂಲಗಳು ಒಟ್ಟಾಗಿ ಸೇರಿದಾಗ, ದೊಡ್ಡ ಕಾರ್ಯಗಳನ್ನು ಸಾಧಿಸಬಹುದು. ಪ್ರಾಚೀನ ಭಾರತದ ಗ್ರಾಮಗಳ ಆರ್ಥಿಕತೆಯಲ್ಲಿ ಈ ಸ್ವಯಂಪ್ರೇರಿತ ಸಹಕಾರ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆ. ಸಹಕಾರವು ನಮ್ಮ ಸ್ವಾವಲಂಬಿ ಸಮಾಜದ ಅಡಿಪಾಯವಾಗಿತ್ತು. ಸಹಕಾರ ಸಂಘಗಳು ಕೇವಲ ಒಂದು ವ್ಯವಸ್ಥೆಯಲ್ಲ; ಅವು ಒಂದು ಭಾವನೆ, ಒಂದು ಚೈತನ್ಯ. ಈ ಸಹಕಾರದ ಮನೋಭಾವವು ವ್ಯವಸ್ಥೆಗಳು ಮತ್ತು ಸಂಪನ್ಮೂಲಗಳ ಮಿತಿಗಳನ್ನು ಮೀರಿ ಆಶ್ಚರ್ಯಕರ ಫಲಿತಾಂಶಗಳನ್ನು ನೀಡುತ್ತದೆ. ಸಹಕಾರ ಸಂಘಗಳು ಸರಳ ಜೀವನಾಧಾರ ವ್ಯವಸ್ಥೆಯನ್ನು ಪ್ರಮುಖ ಕೈಗಾರಿಕಾ ಸಾಮರ್ಥ್ಯವಾಗಿ ಪರಿವರ್ತಿಸಬಹುದು. ದೇಶದ ಆರ್ಥಿಕತೆಯನ್ನು, ವಿಶೇಷವಾಗಿ ಗ್ರಾಮೀಣ ಮತ್ತು ಕೃಷಿ ಆರ್ಥಿಕತೆಯನ್ನು ಪರಿವರ್ತಿಸಲು ಇದು ವಿಶ್ವಾಸಾರ್ಹ ಮಾರ್ಗವಾಗಿದೆ. ಪ್ರತ್ಯೇಕ ಸಚಿವಾಲಯದ ಮೂಲಕ, ದೇಶದ ಈ ಸಾಮರ್ಥ್ಯವನ್ನು ಮತ್ತು ಕೃಷಿ ಕ್ಷೇತ್ರದ ಚದುರಿದ ಶಕ್ತಿಯನ್ನು ಕ್ರೋಢೀಕರಿಸಲು ನಾವು ಕಠಿಣ ಪ್ರಯತ್ನ ಮಾಡುತ್ತಿದ್ದೇವೆ. ರೈತ ಉತ್ಪಾದಕ ಸಂಸ್ಥೆಗಳು (ಎಫ್.ಪಿ.ಒಗಳು) ನಮ್ಮ ಮುಂದೆ ಬಹಳ ಮುಖ್ಯವಾದ ಉದಾಹರಣೆಯಾಗಿದೆ. ಎಫ್.ಪಿ.ಒಗಳ ಮೂಲಕ, ಹಳ್ಳಿಗಳಲ್ಲಿನ ಸಣ್ಣ ರೈತರು ಸಹ ಉದ್ಯಮಿಗಳಾಗುತ್ತಿದ್ದಾರೆ ಮತ್ತು ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ದೇಶದಲ್ಲಿ 10,000 ಎಫ್.ಪಿ.ಒಗಳನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಹೊಂದುವ ಪರಿಣಾಮವಾಗಿ, 8,000 ಎಫ್.ಪಿ.ಒಗಳು ಈಗಾಗಲೇ ರಚನೆಯಾಗಿ ಕಾರ್ಯನಿರ್ವಹಿಸುತ್ತಿವೆ. ಅನೇಕ ಎಫ್.ಪಿ.ಒ ಗಳ ಯಶಸ್ಸಿನ ಕಥೆಗಳನ್ನು ದೇಶದ ಹೊರಗೆ ಸಹ ಚರ್ಚಿಸಲಾಗುತ್ತಿದೆ. ಅದೇ ರೀತಿ, ಸಹಕಾರಿ ಸಂಸ್ಥೆಗಳ ಪ್ರಯೋಜನಗಳು ಈಗ ಜಾನುವಾರು ಮತ್ತು ಮೀನುಗಾರನ್ನು ತಲುಪುತ್ತಿವೆ ಎನ್ನುವುದು ಮತ್ತೊಂದು ತೃಪ್ತಿಕರ ಬದಲಾವಣೆಯಾಗಿದೆ. ಇಂದು, 25,000 ಕ್ಕೂ ಹೆಚ್ಚು ಸಹಕಾರಿ ಘಟಕಗಳು ಮೀನು ಸಾಕಣೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಐದು ವರ್ಷಗಳಲ್ಲಿ 200,000 ಸಹಕಾರಿ ಸಂಘಗಳನ್ನು ರಚಿಸುವುದು ಸರ್ಕಾರದ ಗುರಿಯಾಗಿದೆ. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯು ಮೀನುಗಾರಿಕೆ ವಲಯದಲ್ಲಿನ ಸಹಕಾರಿ ಸಂಘಗಳಾಗಿರುತ್ತದೆ.
ಸ್ನೇಹಿತರೇ,
ಗುಜರಾತ್ ಮುಖ್ಯಮಂತ್ರಿಯಾಗಿ, ನಾನು ಸಹಕಾರ ಸಂಘಗಳ ಶಕ್ತಿಯನ್ನು ನೇರವಾಗಿ ಅನುಭವಿಸಿದ್ದೇನೆ. ಗುಜರಾತ್ನಲ್ಲಿ ಅಮುಲ್ ನ ಯಶೋಗಾಥೆ ಇಂದು ವಿಶ್ವಾದ್ಯಂತ ತಿಳಿದಿದೆ. ಪ್ರಪಂಚದಾದ್ಯಂತದ ಮಾರುಕಟ್ಟೆಗಳಲ್ಲಿ ಲಿಜ್ಜತ್ ಪಾಪಡ್ ಅವರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಈ ಚಳುವಳಿಗಳನ್ನು ಪ್ರಾಥಮಿಕವಾಗಿ ನಮ್ಮ ದೇಶದ ಮಹಿಳೆಯರು ಮುನ್ನಡೆಸಿದ್ದಾರೆ. ಇಂದು, ಮಹಿಳೆಯರು ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸಹಕಾರಿ ಸಂಘಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ, ಅವರಲ್ಲಿ ಲಕ್ಷಾಂತರ ಜನರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಮಹಿಳೆಯರ ಸಾಮರ್ಥ್ಯಗಳನ್ನು ಗುರುತಿಸಿ, ಸರ್ಕಾರವು ಸಹಕಾರಿ ಸಂಬಂಧಿತ ನೀತಿಗಳಲ್ಲಿಯೂ ಅವರಿಗೆ ಆದ್ಯತೆ ನೀಡಿದೆ. ಇತ್ತೀಚೆಗೆ, ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಲಾಗಿದೆ ಎನ್ನುವುದು ನಿಮಗೆ ತಿಳಿದಿರಬಹುದು. ಇದರ ಅಡಿಯಲ್ಲಿ, ಬಹು-ರಾಜ್ಯ ಸಹಕಾರಿ ಸಂಘಗಳ ಮಂಡಳಿಯಲ್ಲಿ ಮಹಿಳಾ ನಿರ್ದೇಶಕರನ್ನು ಹೊಂದಿರುವುದು ಈಗ ಕಡ್ಡಾಯವಾಗಿದೆ.
ನಮ್ಮ ದೇಶದಲ್ಲಿ, ನಾರಿ ಶಕ್ತಿ ವಂದನ್ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದರೆ, ಅದು ಹೆಚ್ಚಿನ ಚರ್ಚೆಯನ್ನು ಉಂಟುಮಾಡುತ್ತದೆ. ಆದರೆ ನಾವು ಈ ಪ್ರಮುಖ ಕಾನೂನನ್ನು ಸಮಾನ ಶಕ್ತಿಯೊಂದಿಗೆ ಜಾರಿಗೆ ತಂದಿದ್ದೇವೆ. ಆದರೆ ಬಹಳ ಕಡಿಮೆ ಜನರು ಇದನ್ನು ಚರ್ಚಿಸುತ್ತಾರೆ.
ಸ್ನೇಹಿತರೇ,
ಸಹಕಾರಿ ಸಂಸ್ಥೆಗಳು ಸಾಮೂಹಿಕ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ರೈತರ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುತ್ತವೆ ಮತ್ತು ಉಗ್ರಾಣ ಇದಕ್ಕೆ ಒಂದು ಪ್ರಮುಖ ಉದಾಹರಣೆಯಾಗಿದೆ. ಹಿಂದೆ, ಉಗ್ರಾಣಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳ ಕೊರತೆಯಿಂದಾಗಿ ರೈತರು ಗಮನಾರ್ಹ ನಷ್ಟವನ್ನು ಅನುಭವಿಸುತ್ತಿದ್ದರು. ಹಿಂದಿನ ಸರ್ಕಾರಗಳು ಈ ಅಗತ್ಯಕ್ಕೆ ಎಂದಿಗೂ ಹೆಚ್ಚಿನ ಗಮನ ನೀಡಲಿಲ್ಲ. ಆದರೆ, ಇಂದು, ಈ ಸಮಸ್ಯೆಯನ್ನು ಸಹಕಾರಿ ಸಂಘಗಳ ಮೂಲಕ ಪರಿಹರಿಸಲಾಗುತ್ತಿದೆ. ಇದು ತನ್ನಲ್ಲಿಯೇ ಒಂದು ಗಮನಾರ್ಹ ಬೆಳವಣಿಗೆಯಾಗಿದೆ. ವಿಶ್ವದ ಅತಿದೊಡ್ಡ ಸಂಗ್ರಹಣಾ ಯೋಜನೆಯಡಿಯಲ್ಲಿ, ಮುಂದಿನ 5 ವರ್ಷಗಳಲ್ಲಿ 700 ಲಕ್ಷ ಮೆಟ್ರಿಕ್ ಟನ್ ಸಂಗ್ರಹಣೆಯ ಸಾಮರ್ಥ್ಯವನ್ನು ಸಿದ್ಧಪಡಿಸಲಾಗುವುದು. ಈ ಅಭಿಯಾನಕ್ಕೆ 1.25 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗುತ್ತದೆ. ಈ ಯೋಜನೆ ಪೂರ್ಣಗೊಂಡ ನಂತರ, ನಮ್ಮ ರೈತರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಅವರು ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಸಹ ಸುಲಭವಾಗುತ್ತದೆ. ಹಾಗು ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಮಯ ಸರಿಯಾಗಿದೆ ಎಂದು ಭಾವಿಸಿದಾಗ, ಅವರು ತಮ್ಮ ಉತ್ಪನ್ನಗಳನ್ನು ಸರಿಯಾದ ಸಮಯದಲ್ಲಿ ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಸಾಧ್ಯವಾಗುತ್ತದೆ.
ಸ್ನೇಹಿತರೇ,
ಕೃಷಿ ವ್ಯವಸ್ಥೆಗಳನ್ನು ಆಧುನೀಕರಿಸುವುದು 'ವಿಕಸಿತ ಭಾರತ'ಕ್ಕೆ ಅಭಿವೃದ್ಧಿಗೆ ಅಷ್ಟೇ ಅವಶ್ಯಕ. ಕೃಷಿ ಕ್ಷೇತ್ರದಲ್ಲಿ ಹೊಸ ವ್ಯವಸ್ಥೆಗಳನ್ನು ರಚಿಸುವುದರ ಜೊತೆಗೆ, ನಾವು ಪಿಎಸಿಎಸ್ ನಂತಹ ಸಹಕಾರಿ ಸಂಸ್ಥೆಗಳನ್ನು ಹೊಸ ಪಾತ್ರಗಳಿಗಾಗಿ ಸಿದ್ಧಪಡಿಸುತ್ತಿದ್ದೇವೆ. ಈ ಸಂಘಗಳು ಈಗ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತಿವೆ. ಅವು ಸಾವಿರಾರು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಸಹ ನಿರ್ವಹಿಸುತ್ತಿವೆ. ನಾವು ಸಹಕಾರಿ ಸಂಘಗಳನ್ನು ಪೆಟ್ರೋಲ್ ಮತ್ತು ಡೀಸೆಲ್ಗಾಗಿ ಚಿಲ್ಲರೆ ಮಾರಾಟ ಮಳಿಗೆಗಳಾಗಿ ಪರಿವರ್ತಿಸಿದ್ದೇವೆ. ಅನೇಕ ಸಹಕಾರಿ ಸಂಘಗಳು ಈಗ ಎಲ್ಪಿಜಿ ಸಿಲಿಂಡರ್ ಗಳನ್ನು ಸಹ ವಿತರಿಸುತ್ತಿವೆ. ಪಿಎಸಿಎಸ್ ಗಳು ಹಲವಾರು ಹಳ್ಳಿಗಳಲ್ಲಿ ನೀರಿನ ಸಮಿತಿಗಳಾಗಿ ಪಾತ್ರವನ್ನು ನಿರ್ವಹಿಸುತ್ತಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಪಿಎಸಿಎಸ್ ಮತ್ತು ಕ್ರೆಡಿಟ್ ಸೊಸೈಟಿಗಳ ಉಪಯುಕ್ತತೆ ಹೆಚ್ಚುತ್ತಿದೆ ಮತ್ತು ಅವುಗಳ ಆದಾಯದ ಮೂಲಗಳು ಸಹ ಬೆಳೆಯುತ್ತಿವೆ. ಇದಲ್ಲದೆ, ಸಹಕಾರಿ ಸಂಘಗಳು ಈಗ ಹಳ್ಳಿಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳಾಗಿ (ಸಿಎಸ್.ಸಿ) ನೂರಾರು ಸರ್ಕಾರಿ ಸೌಲಭ್ಯಗಳನ್ನು ಒದಗಿಸುತ್ತಿವೆ. ಈ ಸಂಘಗಳು ಗ್ರಾಮೀಣ ಪ್ರದೇಶಗಳನ್ನು ಕಂಪ್ಯೂಟರ್ಗಳ ಮೂಲಕ ತಂತ್ರಜ್ಞಾನ ಮತ್ತು ಡಿಜಿಟಲ್ ಇಂಡಿಯಾದಲ್ಲಿನ ಅವಕಾಶಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಸಂಪರ್ಕಿಸುತ್ತವೆ, ಗ್ರಾಮೀಣ ಪ್ರದೇಶದ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ.
ಸ್ನೇಹಿತರೇ,
'ವಿಕಸಿತ್ ಭಾರತ್'ನ ದೃಷ್ಟಿಕೋನವನ್ನು ಸಾಕಾರಗೊಳಿಸಲು ಸಹಕಾರಿ ಸಂಸ್ಥೆಗಳ ಪಾತ್ರವು ನಿರ್ಣಾಯಕವಾಗಿದೆ. ನಿಮ್ಮ ಪಾತ್ರದ ಮಹತ್ವ ಮತ್ತು ಸಹಕಾರಿ ಸಂಸ್ಥೆಗಳ ಪಾತ್ರವನ್ನು ನಾನು ಚೆನ್ನಾಗಿ ಅರಿತು ಕೊಂಡಿದ್ದೇನೆ. ಆದ್ದರಿಂದ, ನಿಮ್ಮೆಲ್ಲರಿಂದ ನನಗೆ ಹೆಚ್ಚಿನ ನಿರೀಕ್ಷೆಗಳಿವೆ. , ನಿರೀಕ್ಷೆಗಳು ಕಾರ್ಯನಿರ್ವಹಿಸುವವರಿಂದ ಬರುತ್ತವೆ; ಕಾರ್ಯನಿರ್ವಹಿಸದವರಿಂದ ಯಾರು ನಿರೀಕ್ಷಿಸುತ್ತಾರೆ? 'ಆತ್ಮನಿರ್ಭರ ಭಾರತ' ನಿರ್ಮಾಣಕ್ಕೆ ನೀವು ಹೆಚ್ಚು ಸಕ್ರಿಯವಾಗಿ ಮತ್ತು ಗಮನಾರ್ಹವಾಗಿ ಕೊಡುಗೆ ನೀಡಿದರೆ, ನಾವು ನಮ್ಮ ಗುರಿಗಳನ್ನು ವೇಗವಾಗಿ ಸಾಧಿಸುತ್ತೇವೆ. 'ಆತ್ಮನಿರ್ಭರ ಭಾರತ' ಇಲ್ಲದೆ, 'ವಿಕಸಿತ ಭಾರತ'ವನ್ನು ನಿರ್ಮಿಸಲು ಸಾಧ್ಯವಿಲ್ಲ. ನಿಮ್ಮ ಸಾಮರ್ಥ್ಯಗಳು ಮತ್ತು ನಿಮ್ಮ ಸಾಂಸ್ಥಿಕ ಸಾಮರ್ಥ್ಯವನ್ನು ಪರಿಗಣಿಸಿ, ಅನೇಕ ಸಲಹೆಗಳು ನನ್ನ ಮನಸ್ಸಿಗೆ ಬರುತ್ತಿವೆ. ನಾನು ಅವೆಲ್ಲವನ್ನೂ ಒಂದೇ ಬಾರಿಗೆ ನಿಮ್ಮೊಡನೆ ಹಂಚಿಕೊಳ್ಳಲು ಸಾಧ್ಯವಿಲ್ಲ, ಆದರೆ ನಾನು ಕೆಲವನ್ನು ಸೂಚಿಸಲು ಬಯಸುತ್ತೇನೆ. ಉದಾಹರಣೆಗೆ, ನಮ್ಮ ಸಹಕಾರಸಂಘಗಳ ನಾವು ವಿದೇಶದಿಂದ ಯಾವ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎನ್ನುವ ಪಟ್ಟಿಯನ್ನು ರಚಿಸಬೇಕೆಂದು ನಾನು ಸೂಚಿಸುತ್ತೇನೆ. ಈಗ ನಾವು ಆ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಸಹಕಾರಿ ವಲಯ ಏನು ಮಾಡಬಹುದು? ಅದಕ್ಕಾಗಿ ನಾವು ದೇಶದಲ್ಲಿ ಒಂದು ಬೆಂಬಲ ವ್ಯವಸ್ಥೆಯನ್ನು ರಚಿಸಬೇಕಾಗಿದೆ. ಸಹಕಾರಿ ಸಂಸ್ಥೆಗಳು ಈ ಜವಾಬ್ದಾರಿಯನ್ನು ಸುಲಭವಾಗಿ ವಹಿಸಿಕೊಳ್ಳಬಹುದು. ಉದಾಹರಣೆಗೆ, ನಮ್ಮನ್ನು ಕೃಷಿ ಕೇಂದ್ರಿತ ರಾಷ್ಟ್ರ ಎಂದು ಕಳೆದ 75 ವರ್ಷಗಳಿಂದ ನಾವು ಅದೇ ಹಾಡನ್ನು ಹಾಡುತ್ತಿದ್ದೇವೆ ಎನ್ನುವುದು ಸತ್ಯ. ಆದರೂ, ನಾವು ಪ್ರತಿ ವರ್ಷ ಶತಕೋಟಿ ಡಾಲರ್ ಮೌಲ್ಯದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ. ಖಾದ್ಯ ಎಣ್ಣೆಯಲ್ಲಿ ನಾವು ಹೇಗೆ ಸ್ವಾವಲಂಬಿಗಳಾಗಬಹುದು? ಈ ಮಣ್ಣಿನಲ್ಲಿ ಬೆಳೆದ ಎಳ್ಳು, ಅದರಿಂದ ಹೊರತೆಗೆಯಲಾದ ಎಣ್ಣೆ ನಮ್ಮ ನಾಗರಿಕರ ಜೀವನವನ್ನು ಉತ್ತಮಗೊಳಿಸುತ್ತದೆ. ಮತ್ತು ನನ್ನ ಸಹಕಾರಿ ಕ್ಷೇತ್ರದ ಸಹೋದ್ಯೋಗಿಗಳು ಇದಕ್ಕಾಗಿ ಒಟ್ಟಾಗಿ ಕೆಲಸ ಮಾಡದಿದ್ದರೆ, ಅದನ್ನು ಯಾರು ಮಾಡುತ್ತಾರೆ? ನಾನು ಹೇಳುವುದು ಸರಿಯೋ ಅಲ್ಲವೋ? ನೀವು ಅದನ್ನು ಮಾಡಬೇಕಲ್ಲವೇ? ನೋಡಿ, ನಾವು ಸೇವಿಸುವ ಎಣ್ಣೆ ಕೂಡ ವಿದೇಶದಿಂದ ಬರುತ್ತದೆ, ಮತ್ತು ಇಂಧನಕ್ಕಾಗಿ, ವಾಹನಗಳನ್ನು ಓಡಿಸಲು, ಟ್ರಾಕ್ಟರುಗಳನ್ನು ನಿರ್ವಹಿಸಲು ಅಗತ್ಯವಿರುವ ತೈಲ, ಪೆಟ್ರೋಲ್, ಡೀಸೆಲ್, ಈ ಇಂಧನಗಳನ್ನು ಸಹ ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು ನಾವು ಈ ಆಮದು ಬಿಲ್ ಅನ್ನು ಸಹ ಕಡಿಮೆ ಮಾಡಬೇಕಾಗಿದೆ. ಇದಕ್ಕಾಗಿ, ನಾವು ಪ್ರಸ್ತುತ ಎಥೆನಾಲ್ ನೊಂದಿಗೆ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ, ಎಥೆನಾಲ್ ಉತ್ಪಾದನೆ, ಸಂಗ್ರಹಣೆ ಮತ್ತು ಮಿಶ್ರಣದಲ್ಲಿ ಹಲವು ಪಟ್ಟು ಹೆಚ್ಚಳ ಕಂಡುಬಂದಿದೆ. ಇಂದು, ಈ ಕೆಲಸವನ್ನು ಹೆಚ್ಚಾಗಿ ಸಕ್ಕರೆ ಗಿರಣಿಗಳು ನಿರ್ವಹಿಸುತ್ತವೆ ಹಾಗು ಸರ್ಕಾರಿ ಕಂಪನಿಗಳು ಅವುಗಳಿಂದ ಎಥೆನಾಲ್ ಅನ್ನು ಖರೀದಿಸುತ್ತವೆ. ಸಹಕಾರಿ ಸಂಘಗಳು ಇದರಲ್ಲಿ ಭಾಗಿಯಾಗಲು ಸಾಧ್ಯವಿಲ್ಲವೇ? ಅವರು ಹೆಚ್ಚು ತೊಡಗಿಸಿಕೊಂಡಷ್ಟೂ, ಅದರ ಪ್ರಮಾಣವು ಹೆಚ್ಚಾಗುತ್ತದೆ. ಬೇಳೆಕಾಳುಗಳ ಆಮದನ್ನು ಕಡಿಮೆ ಮಾಡುವ ಬಗ್ಗೆ, ನಾವು ಕೃಷಿ ಕೇಂದ್ರಿತ ರಾಷ್ಟ್ರವಾಗಿದ್ದರೂ, ನಾವು ಹೊರಗಿನಿಂದ ಬೇಳೆಕಾಳು ಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಬೇಳೆಕಾಳುಗಳ ಆಮದನ್ನು ಕಡಿಮೆ ಮಾಡುವ ವಿಷಯದಲ್ಲಿ, ಸಹಕಾರಿ ವಲಯದ ಜನರು ಗಮನಾರ್ಹ ಕೆಲಸ ಮಾಡಬಹುದು, ಪ್ರಮುಖ ಪಾತ್ರ ವಹಿಸಬಹುದು. ನಾವು ಆಮದು ಮಾಡಿಕೊಳ್ಳುವ ಉತ್ಪಾದನೆಗೆ ಸಂಬಂಧಿಸಿದ ಅನೇಕ ಸಣ್ಣ ವಸ್ತುಗಳು ಸಹ ಇವೆ, ಆದರೆ ನಾವು ಸಹಕಾರಿ ಸಂಸ್ಥೆಗಳ ಸಹಾಯದಿಂದ ಅವುಗಳನ್ನು ದೇಶದಲ್ಲಿಯೇ ಉತ್ಪಾದಿಸಬಹುದು.
ಸ್ನೇಹಿತರೇ,
ಇಂದು, ನಾವು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಸಹಕಾರಿ ಸಂಸ್ಥೆಗಳು ಇದರಲ್ಲಿಯೂ ಮಹತ್ವದ ಪಾತ್ರ ವಹಿಸಬಹುದು. ಆಹಾರ ಪೂರೈಕೆದಾರರನ್ನು ಇಂಧನ ಪೂರೈಕೆದಾರ ಮತ್ತು ರಸಗೊಬ್ಬರ ಪೂರೈಕೆದಾರರನ್ನಾಗಿ ಮಾಡುವಲ್ಲಿ ಸಹಕಾರಿ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಬಹುದು. ಸಹಕಾರಿ ಸಂಸ್ಥೆಗಳು ಅದರಲ್ಲಿ ಕೈಜೋಡಿಸಿದರೆ, ಫಲಿತಾಂಶಗಳು ತ್ವರಿತವಾಗಿ ಬರುತ್ತವೆ. ಈಗ, ಜಮೀನಿನ ಶೆಡ್ ನಲ್ಲಿ ಮೇಲ್ಛಾವಣಿ ಸೌರ ಫಲಕಗಳು ಅಥವಾ ಸಣ್ಣ ಸೌರ ಫಲಕಗಳನ್ನು ಅಳವಡಿಸುವ ವಿಷಯಕ್ಕೆ ಬಂದರೆ, 50-60 ರೈತರು ಒಗ್ಗೂಡಿ ಸಹಕಾರಿ ಸಂಸ್ಥೆಯನ್ನು ರಚಿಸಿ, ಶೆಡ್ ನ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸಿ, ರೈತರು ಮತ್ತು ಸರ್ಕಾರ ಎರಡಕ್ಕೂ ವಿದ್ಯುತ್ ಮಾರಾಟ ಮಾಡಿದರೆ. ಸಹಕಾರಿ ಸಂಸ್ಥೆಯು ಅದನ್ನು ಸುಲಭವಾಗಿ ನಿರ್ವಹಿಸಬಹುದು. ಇತ್ತೀಚಿನ ದಿನಗಳಲ್ಲಿ, ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಗೋವರ್ಧನ್ ಯೋಜನೆಯಲ್ಲಿ ಆಸಕ್ತಿ ವಹಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಇಂಧನದ ಗಮನಾರ್ಹ ಮೂಲವಾಗಲಿದೆ. ಸಹಕಾರಿ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಏಕೆ ಹಿಂದುಳಿಯಬೇಕು? ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು, ಹಸುವಿನ ಸಗಣಿಯಿಂದ ಜೈವಿಕ ಅನಿಲವನ್ನು ತಯಾರಿಸುವುದು, ಸಾವಯವ ಗೊಬ್ಬರಗಳನ್ನು ಉತ್ಪಾದಿಸುವುದು ಇತ್ಯಾದಿಗಳ ಕೆಲಸಗಳಾಗಲಿ, ಸಹಕಾರಿ ಸಂಸ್ಥೆಗಳು ತಮ್ಮ ಪಾತ್ರವನ್ನು ವಿಸ್ತರಿಸುವ ಬಗ್ಗೆ ಯೋಚಿಸಬಹುದು. ಇದು ರಸಗೊಬ್ಬರಗಳಿಗೆ ಸಂಬಂಧಿಸಿದ ದೇಶದ ಆಮದು ಬಿಲ್ ಅನ್ನು ಸಹ ಕಡಿಮೆ ಮಾಡುತ್ತದೆ. ನಮ್ಮ ರೈತರು ಮತ್ತು ಸಣ್ಣ ಉದ್ಯಮಿಗಳಿಂದ ಉತ್ಪನ್ನಗಳ ಜಾಗತಿಕ ಬ್ರ್ಯಾಂಡಿಂಗ್ ನಲ್ಲಿಯೂ ನೀವು ಮುಂದೆ ಹೆಜ್ಜೆ ಹಾಕಬೇಕು. ಈಗ, ಗುಜರಾತ್ ಅನ್ನು ನೋಡಿ. ಹಿಂದೆ, ಗುಜರಾತ್ನಲ್ಲಿ ವಿವಿಧ ಹೆಸರುಗಳಲ್ಲಿ ಅನೇಕ ಡೈರಿಗಳು ಕಾರ್ಯನಿರ್ವಹಿಸುತ್ತಿದ್ದವು. ಇನ್ನೂ ಅನೇಕ ಡೈರಿಗಳಿವೆ, ಆದರೆ ಅಮುಲ್ ಒಂದು ಬ್ರಾಂಡ್ ಆಗಿ ಮಾರ್ಪಟ್ಟಿದೆ. ಇಂದು, ಅದರ ಹೆಸರು ಜಾಗತಿಕವಾಗಿ ಕೇಳಿಬರುತ್ತಿದೆ. ನಮ್ಮ ವಿವಿಧ ಉತ್ಪನ್ನಗಳಿಗೆ ನಾವು ಒಂದೇ ಬ್ರ್ಯಾಂಡ್ ಅನ್ನು ಸಹ ರಚಿಸಬಹುದು. ನಮ್ಮ ಸಿರಿಧಾನ್ಯಗಳನ್ನು, ಅಂದರೆ, "ಶ್ರೀ ಅನ್ನ" ವನ್ನು ಬ್ರಾಂಡ್ ಮಾಡುವುದು ನಮ್ಮ ಗುರಿಯಾಗಿರಬೇಕು. ಪ್ರಪಂಚದಾದ್ಯಂತದ ಪ್ರತಿಯೊಂದು ಊಟದ ಮೇಜಿನ ಮೇಲೂ ಭಾರತ್ ಬ್ರಾಂಡ್ನ ಸಿರಿಧಾನ್ಯಗಳು ಏಕೆ ಕಾಣಿಸಿಕೊಳ್ಳಬಾರದು? ಈ ನಿಟ್ಟಿನಲ್ಲಿ ಸಹಕಾರಿಗಳು ಸಮಗ್ರ ಕ್ರಿಯಾ ಯೋಜನೆಯೊಂದಿಗೆ ಮುಂದೆ ಬರಬೇಕು.
ಸ್ನೇಹಿತರೇ,
ಗ್ರಾಮೀಣ ಆದಾಯವನ್ನು ಹೆಚ್ಚಿಸುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸಬಹುದು. ಹೈನುಗಾರಿಕೆ ವಲಯದಲ್ಲಿ ನಾವು ಸ್ಪಷ್ಟ ಬದಲಾವಣೆಯನ್ನು ಕಂಡಿದ್ದೇವೆ. ಕಳೆದ ಮೂರು ದಿನಗಳಿಂದ ನಾನು ಸಹಕಾರಿ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಮೊದಲನೆಯದಾಗಿ, ನಾನು ಅಹಮದಾಬಾದ್ ನಲ್ಲಿದ್ದೆ, ಅಲ್ಲಿ ಅಮುಲ್ 50 ವರ್ಷಗಳನ್ನು ಪೂರೈಸಿದೆ. ನಂತರ ನಿನ್ನೆ, ನಾನು ಬನಾರಸ್ನಲ್ಲಿದ್ದೆ, ಅಲ್ಲಿ ನಾನು ಬನಾರಸ್ ಡೈರಿಯನ್ನು ಉದ್ಘಾಟಿಸಿದೆ. ಬನಾರಸ್ ನಲ್ಲಿನ ಅನುಭವವು ಡೈರಿ ಸಹಕಾರ ಸಂಘಗಳ ಬಂದಾಗಿನಿಂದ, ಮಹಿಳಾ ಹೈನುಗಾರರ ಆದಾಯವು ವೇಗವಾಗಿ ಹೆಚ್ಚುತ್ತಿದೆ ಎನ್ನುವುದನ್ನು ತೋರಿಸುತ್ತದೆ. ಸಹಕಾರಸಂಘಗಳು ಮತ್ತೊಂದು ಕ್ಷೇತ್ರವನ್ನು ಪ್ರವೇಶಿಸುತ್ತಿವೆ. ಗುಜರಾತ್ ನ ಸಹಕಾರಿ ಕ್ಷೇತ್ರದ ಜನರು ಜೇನುತುಪ್ಪದ ಕ್ಷೇತ್ರವನ್ನು ಪ್ರವೇಶಿಸಲು ನಾನು ಒತ್ತಾಯಿಸಿದೆ. ನಾವು ಶ್ವೇತ ಕ್ರಾಂತಿಯನ್ನು ಹೊಂದಿದ್ದೇವೆ; ಈಗ ಸಿಹಿ ಕ್ರಾಂತಿಯನ್ನು ಮಾಡೋಣ. ಮತ್ತು ನಮ್ಮ ಜನರು ಜೇನುತುಪ್ಪದ ವಲಯದಲ್ಲಿ ಮುಂದೆ ಬರಬೇಕು. ಜೇನುತುಪ್ಪದ ವಲಯದಿಂದ ರೈತರು ಎಷ್ಟು ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಕಳೆದ 10 ವರ್ಷಗಳಲ್ಲಿ, ಜೇನುತುಪ್ಪದ ಉತ್ಪಾದನೆಯು 75 ಸಾವಿರ ಮೆಟ್ರಿಕ್ ಟನ್ಗಳಿಂದ ಈಗ ಬಹುತೇಕ 1.5 ಲಕ್ಷ ಮೆಟ್ರಿಕ್ ಟನ್ಗಳಿಗೆ ಹೆಚ್ಚಾಗಿದೆ. ಜೇನುತುಪ್ಪದ ರಫ್ತು 28 ಸಾವಿರ ಮೆಟ್ರಿಕ್ ಟನ್ಗಳಿಂದ 80 ಸಾವಿರ ಮೆಟ್ರಿಕ್ ಟನ್ಗಳಿಗೆ ಹೆಚ್ಚಾಗಿದೆ. ಇದರಲ್ಲಿ, ಎನ್.ಎ. ಎಫ್.ಇ.ಡಿ ಮತ್ತು ಟಿ.ಆರ್.ಐ.ಎಫ್ಇ.ಡಿ ಜೊತೆಗೆ, ರಾಜ್ಯಗಳ ಸಹಕಾರಿ ಸಂಸ್ಥೆಗಳು ಸಹ ಮಹತ್ವದ ಪಾತ್ರ ವಹಿಸಿವೆ. ನಾವು ಇದರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ.
ಸ್ನೇಹಿತರೇ,
ಗುಜರಾತ್ನಲ್ಲಿ, ಹಾಲು ಮಾರಾಟದಿಂದ ಬಂದ ಹಣವು ನಮ್ಮ ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾವಣೆಯಾಗಲು ಪ್ರಾರಂಭಿಸಿದಾಗ, ಅದು ಅರ್ಥಪೂರ್ಣ ಸಾಮಾಜಿಕ ಬದಲಾವಣೆಯನ್ನು ತಂದಿತು ಎನ್ನುವುದನ್ನು ನಾವು ನೋಡಿದ್ದೇವೆ. ಈಗ ನಮ್ಮ ಸಹಕಾರ ಸಂಘಗಳು, ನಮ್ಮ ಪಿ.ಎ.ಸಿ.ಎಸ್ ಗಳು, ಗಣಕೀಕೃತವಾಗಿವೆ. ಆದ್ದರಿಂದ, ಯಾವುದೇ ಕೆಲಸ ಮತ್ತು ಯಾವುದೇ ಪಾವತಿಗಳನ್ನು ಮಾಡಿದರೂ, ಅವು ಡಿಜಿಟಲ್ ಆಗಿರಬೇಕು ಎನ್ನುವುದನ್ನು ಈಗ ನೋಡಿಕೊಳ್ಳಬೇಕು. ವಿಶೇಷವಾಗಿ ಸಹಕಾರಿ ಬ್ಯಾಂಕುಗಳು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ತ್ವರಿತವಾಗಿ ಕೆಲಸ ಮಾಡಬೇಕು. ಇನ್ನೊಂದು ವಿಷಯವೆಂದರೆ ಮಣ್ಣಿನ ಆರೋಗ್ಯ ಕಾರ್ಡ್. ಮಣ್ಣಿನ ಆರೋಗ್ಯ ತಪಾಸಣೆಗಾಗಿ ಮಣ್ಣು ಪರೀಕ್ಷೆಗಾಗಿ ನಾವು ದೊಡ್ಡ ಕಾರ್ಯಕ್ರಮವನ್ನು ರಚಿಸಿದ್ದೇವೆ. ಸಹಕಾರಿ ಸಂಸ್ಥೆಗಳು, ಪಿ.ಎ.ಸಿ.ಎಸ್ ಗಳು, ತಮ್ಮ ಪ್ರದೇಶಗಳಲ್ಲಿ ಸಣ್ಣ ಮಣ್ಣಿನ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲು ನಾನು ಒತ್ತಾಯಿಸುತ್ತೇನೆ. ರೈತರು ತಮ್ಮ ಭೂಮಿಯ ಆರೋಗ್ಯ, ಮಣ್ಣಿನ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸಬೇಕು. ಅವರು ಮಣ್ಣು ಪರೀಕ್ಷೆಯ ಜಾಲವನ್ನು ನಿರ್ಮಿಸಬೇಕು.
ಸ್ನೇಹಿತರೇ,
ಸಹಕಾರಿ ಸಂಘಗಳಲ್ಲಿ ಯುವಕರು ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ನಾವು ನಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕಾದ ಮತ್ತೊಂದು ಕ್ಷೇತ್ರವಾಗಿದೆ. ಸಹಕಾರಿ ವಲಯದಲ್ಲಿ ತೊಡಗಿಸಿಕೊಂಡಿರುವ ರೈತರು ಈ ನಿಟ್ಟಿನಲ್ಲಿ ಕೊಡುಗೆ ನೀಡಬಹುದು. ಇದರೊಂದಿಗೆ, ಅವರು ಪಡೆಯುವ ಲಾಭಾಂಶ ಮತ್ತು ಇತರ ಪ್ರಯೋಜನಗಳಲ್ಲಿ ಈಗ ಅವರ ಸಹಕಾರಿ ಸಂಸ್ಥೆಯಿಂದ ಒದಗಿಸಲಾದ ಉಚಿತ ಮಣ್ಣು ಪರೀಕ್ಷೆಯೂ ಸೇರಿರುತ್ತದೆ ಎಂದು ನಾವು ಅವರಿಗೆ ಹೇಳಬಹುದು. ಅವರ ಮಣ್ಣಿನ ಪರೀಕ್ಷಾ ಅನುಭವದ ಆಧಾರದ ಮೇಲೆ ಅವರ ಬೆಳೆಗಳ ಮೇಲೆ ಗಮನಹರಿಸಲು ಅವರಿಗೆ ಕಲಿಸಬೇಕು.
ಸ್ನೇಹಿತರೇ,
ಇದು ಸಹಕಾರಿ ಸಂಸ್ಥೆಗಳಿಗೆ ಚೈತನ್ಯ ತುಂಬುತ್ತದೆ ಮತ್ತು ಹೊಸ ಶಕ್ತಿಯನ್ನು ತರುತ್ತದೆ. ಸಹಕಾರಿ ಸಂಸ್ಥೆಗಳಲ್ಲಿ ಕೌಶಲ್ಯ ಅಭಿವೃದ್ಧಿ, ತರಬೇತಿ ಮತ್ತು ಜಾಗೃತಿ ಹೆಚ್ಚಿಸುವ ಅಗತ್ಯವೂ ಇದೆ. ಬಹಳಷ್ಟು ಬದಲಾಗಿದೆ ಮತ್ತು ಎಲ್ಲವನ್ನೂ ಕಾಗದದ ಮೇಲೆ ಇರಬೇಕು. ಮೌಖಿಕ ಭರವಸೆಗಳನ್ನು ನೀಡುತ್ತಿದ್ದ ದಿನಗಳು ಕಳೆದುಹೋಗಿವೆ. ಆದ್ದರಿಂದ, ತರಬೇತಿ ಬಹಳ ಮುಖ್ಯ, ಮತ್ತು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕು. ಪಿಎಸಿಎಸ್ ಮತ್ತು ಸಹಕಾರಿ ಸಂಘಗಳು ಸಹ ಪರಸ್ಪರ ಕಲಿಯಬೇಕಾಗುತ್ತದೆ. ಅನೇಕ ಸಹಕಾರಿ ಸಂಸ್ಥೆಗಳು ಹೊಸಹೊಸ ಕೆಲಸಗಳನ್ನು ಮಾಡುತ್ತವೆ. ಅವು ಅನೇಕ ಉಪಕ್ರಮಗಳನ್ನು ತೆಗೆದುಕೊಳ್ಳುತ್ತವೆ. ದೇಶದ ಹಲವು ಪ್ರದೇಶಗಳಿಗೆ ಇದರ ಬಗ್ಗೆ ತಿಳಿದಿಲ್ಲ. ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ನಾವು ಸಾಮಾನ್ಯ ಪೋರ್ಟಲ್ ಅನ್ನು ರಚಿಸಬಹುದೇ? ಮತ್ತು ಪ್ರತಿಯೊಬ್ಬರೂ ತಮ್ಮ ಹೊಸ ಅನುಭವಗಳನ್ನು, ಹೊಸ ವಿಧಾನಗಳನ್ನು ಅಲ್ಲಿ ಅಪ್ಲೋಡ್ ಮಾಡಬಹುದು. ಈ ಉತ್ತಮ ಅಭ್ಯಾಸಗಳನ್ನು ಮತ್ತಷ್ಟು ಪ್ರಚಾರ ಮಾಡುವುದು ಹೇಗೆ? ಆನ್ ಲೈನ್ ತರಬೇತಿಗಾಗಿ ವ್ಯವಸ್ಥೆಗಳು ಇರಬೇಕು ಮತ್ತು ಅದಕ್ಕಾಗಿ ಕೆಲವು ಮಾಡ್ಯೂಲ್ ಗಳನ್ನು ರಚಿಸಬೇಕು. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿಯಾನವಾದ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವು ಒಂದು ವೈಶಿಷ್ಟ್ಯವನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆ. ಆರೋಗ್ಯಕರ ಸ್ಪರ್ಧೆಯ ವ್ಯವಸ್ಥೆ ಇದೆ, ಅಲ್ಲಿ ಶ್ರೇಯಾಂಕಗಳು ದಿನಕ್ಕೆ ಹತ್ತು ಬಾರಿ ಏರಿಳಿತಗೊಳ್ಳುತ್ತವೆ. ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಜಿಲ್ಲೆ ಮುಂದುವರಿಯಬೇಕೆಂದು ಭಾವಿಸುತ್ತಾರೆ. ಸಹಕಾರಿ ವಲಯದಲ್ಲಿ ನಾವು ವಿಭಿನ್ನ ವಿಭಾಗಗಳನ್ನು ರಚಿಸಬಹುದೇ? ಪ್ರತಿಯೊಂದು ರೀತಿಯ ಸಹಕಾರಿ ಸಂಸ್ಥೆಗೆ ಒಂದು ವಿಶೇಷ ವಿಭಾಗ, ಇನ್ನೊಂದು ರೀತಿಯ ಸಹಕಾರಿ ಸಂಸ್ಥೆಗೆ ಇನ್ನೊಂದು ವಿಶೇಷ ವಿಭಾಗ, ಮತ್ತು ಅದರೊಳಗೆ ಆರೋಗ್ಯಕರ ಸ್ಪರ್ಧೆಯೂ ಇರುವ ರೀತಿಯಲ್ಲಿ ನಿರ್ವಹಣಾ ವ್ಯವಸ್ಥೆಯನ್ನು ರಚಿಸಿ. ಸಹಕಾರಿ ಸಂಸ್ಥೆಗಳಲ್ಲಿ ಸ್ಪರ್ಧೆ ಇರಬೇಕು ಮತ್ತು ಅತ್ಯುತ್ತಮ ಪ್ರದರ್ಶನ ನೀಡುವವರಿಗೆ ಬಹುಮಾನಗಳನ್ನು ನೀಡಬೇಕು. ಅಂತಹ ಸಹಕಾರಿ ಸಂಸ್ಥೆಗಳಿಂದ ಏನಾದರೂ ನವೀನತೆಯು ಹೊರಹೊಮ್ಮಬೇಕು ಇದು ಸರ್ಕಾರ ಮತ್ತು ಸಹಕಾರಿ ಸಂಸ್ಥೆಗಳು ಜಂಟಿಯಾಗಿ ಹೊಸ ಆಕಾರವನ್ನು ನೀಡಬಹುದಾದ ಬೃಹತ್ ಚಳುವಳಿಯಾಗಿದೆ.
ಸ್ನೇಹಿತರೇ,
ಸಹಕಾರಿ ಸಂಸ್ಥೆಗಳ ಸ್ವರೂಪವೇ ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ. ಸಹಕಾರಿ ಚುನಾವಣೆಗಳಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಇದು ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಜನರು ಸೇರಲು ಪ್ರೋತ್ಸಾಹಿಸುತ್ತದೆ.
ಸ್ನೇಹಿತರೇ,
ಸಹಕಾರಿ ಸಂಘಗಳನ್ನು ಸಮೃದ್ಧಿಯ ಅಡಿಪಾಯವನ್ನಾಗಿ ಮಾಡಲು, ನಮ್ಮ ಸರ್ಕಾರವು ಅವು ಎದುರಿಸುತ್ತಿರುವ ಸವಾಲುಗಳನ್ನು ಸಹ ಕಡಿಮೆ ಮಾಡುತ್ತಿದೆ. ಕಂಪನಿಗಳು ಕಡಿಮೆ ಸೆಸ್ ಹೊಂದಿದ್ದರೂ, ಸಹಕಾರಿ ಸಂಘಗಳು ಹೆಚ್ಚಿನ ಸೆಸ್ ಪಾವತಿಸಬೇಕಾಗಿತ್ತು ಎಂಬುದನ್ನು ನೀವು ನೆನಪಿಸಿಕೊಳ್ಳಬಹುದು. ಒಂದು ಕೋಟಿಯಿಂದ 10 ಕೋಟಿ ರೂಪಾಯಿಗಳವರೆಗೆ ಆದಾಯ ಹೊಂದಿರುವ ಸಹಕಾರಿ ಸಂಘಗಳಿಗೆ ನಾವು ಸೆಸ್ ದರವನ್ನು 12% ರಿಂದ 7% ಕ್ಕೆ ಇಳಿಸಿದ್ದೇವೆ. ಇದು ಈ ಸಂಘಗಳು ಕಾರ್ಯನಿರ್ವಹಿಸಲು ಲಭ್ಯವಿರುವ ಹಣವನ್ನು ಹೆಚ್ಚಿಸಿದೆ, ಇದು ಕಂಪನಿಗಳಂತೆ ಪ್ರಗತಿ ಸಾಧಿಸಲು ದಾರಿ ಮಾಡಿಕೊಡುತ್ತದೆ. ಸಹಕಾರಿ ಸಂಘಗಳು ಮತ್ತು ಕಂಪನಿಗಳ ನಡುವೆ ಐಚ್ಛಿಕ ತೆರಿಗೆಗಳಲ್ಲಿ ತಾರತಮ್ಯವಿತ್ತು. ನಾವು ಸಂಘಗಳಿಗೆ ಕನಿಷ್ಠ ಪರ್ಯಾಯ ತೆರಿಗೆಯನ್ನು 18% ರಿಂದ 15% ಕ್ಕೆ ಇಳಿಸಿದ್ದೇವೆ, ಇದು ಕಾರ್ಪೊರೇಟ್ ಜಗತ್ತಿಗೆ ಸಮಾನವಾಗಿದೆ. ಇನ್ನೊಂದು ವಿಷಯವೆಂದರೆ ಸಹಕಾರಿ ಸಂಘಗಳು ಒಂದು ಕೋಟಿ ರೂಪಾಯಿಗಳನ್ನು ಮೀರಿದ ಹಿಂಪಡೆಯುವಿಕೆಗೆ ಟಿಡಿಎಸ್ ಪಾವತಿಸಬೇಕಾಗಿತ್ತು. ನಾವು ಈ ಹಿಂಪಡೆಯುವಿಕೆ ಮಿತಿಯನ್ನು ವಾರ್ಷಿಕವಾಗಿ ಮೂರು ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದೇವೆ. ಈ ಪ್ರಯೋಜನವನ್ನು ಈಗ ಸದಸ್ಯರ ಪ್ರಯೋಜನಕ್ಕಾಗಿ ಬಳಸಿಕೊಳ್ಳಲಾಗುವುದು. ಸಹಕಾರಿ ಸಂಸ್ಥೆಗಳೆಡೆಗೆ ನಮ್ಮ ಸಾಮೂಹಿಕ ಪ್ರಯತ್ನಗಳು ದೇಶದ ಸಾಮೂಹಿಕ ಶಕ್ತಿಯ ಮೂಲಕ ಅಭಿವೃದ್ಧಿಯ ಎಲ್ಲಾ ಸಾಧ್ಯತೆಗಳನ್ನು ತೆರೆಯುತ್ತದೆ ಎಂದು ನನಗೆ ವಿಶ್ವಾಸವಿದೆ.
ಈ ಆಶಯದೊಂದಿಗೆ, ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಮತ್ತು ಅಮಿತ್ ಭಾಯ್ ಹೇಳಿದಂತೆ, ಇಂದು ವಿವಿಧ ಕೇಂದ್ರಗಳಲ್ಲಿ ಲಕ್ಷಾಂತರ ಜನರು ಜಮಾಯಿಸಿದ್ದಾರೆ. ಇಂದು ಈ ಪ್ರಮುಖ ಉಪಕ್ರಮಕ್ಕೆ ಅಷ್ಟೇ ಉತ್ಸಾಹ ಮತ್ತು ಉಲ್ಲಾಸದಿಂದ ಸೇರಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಮತ್ತು ನಾನು ಅವರಿಗೆ ಶುಭ ಹಾರೈಸುತ್ತೇನೆ. 'ವಿಕಸಿತ ಭಾರತ'ದ ಗುರಿಯನ್ನು ಸಾಧಿಸಲು, ಹೆಗಲಿಗೆ ಹೆಗಲು ಕೊಟ್ಟು, ಹಂತ ಹಂತವಾಗಿ, ಸಹಕಾರದ ನಿಜವಾದ ಮನೋಭಾವದೊಂದಿಗೆ ಒಟ್ಟಿಗೆ ಸೇರೋಣ. ಒಂದೇ ದಿಕ್ಕಿನಲ್ಲಿ ಒಟ್ಟಾಗಿ ನಡೆಯೋಣ ಹಾಗೆಯೇ ನಾವು ಫಲಿತಾಂಶಗಳನ್ನು ಸಾಧಿಸುವುದನ್ನು ಮುಂದುವರಿಸೋಣ. ಬಹಳ ಧನ್ಯವಾದಗಳು.
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವು ಹಿಂದಿಯಲ್ಲಿ ಇತ್ತು.
****
(ಪ್ರಕಟಣೆ ಐ.ಡಿ.: 2178751)
ವಿಸಿಟರ್ ಕೌಂಟರ್ : 29
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam