ಪ್ರಧಾನ ಮಂತ್ರಿಯವರ ಕಛೇರಿ
ಮಹಾರಾಷ್ಟ್ರದ ಮುಂಬೈನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
08 OCT 2025 6:32PM by PIB Bengaluru
ಮಹಾರಾಷ್ಟ್ರ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ ಜಿ, ಜನಪ್ರಿಯ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ರಾಮದಾಸ್ ಅಠಾವಳೆ ಜಿ, ಕೆ.ಆರ್. ನಾಯ್ಡು ಜಿ ಮತ್ತು ಮುರಳೀಧರ್ ಮೊಹೋಲ್ ಜಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಜಿ ಮತ್ತು ಅಜಿತ್ ಪವಾರ್ ಜಿ, ಇಲ್ಲಿರುವ ಸಚಿವರೆ, ಭಾರತದ ಜಪಾನ್ ರಾಯಭಾರಿ ಕೆಯಿಚಿ ಓನೋ ಜಿ, ಇತರೆ ಗಣ್ಯ ಅತಿಥಿಗಳೆ ಮತ್ತು ಸಹೋದರ ಸಹೋದರಿಯರೆ!
ವಿಜಯದಶಮಿ ಕಳೆದಿದೆ, ಕೊಜಗಿರಿ ಪೂರ್ಣಿಮೆ ಮುಗಿದಿದೆ ಮತ್ತು ಈಗ 10 ದಿನಗಳಲ್ಲಿ ನಾವು ದೀಪಾವಳಿ ಆಚರಿಸುತ್ತೇವೆ. ಈ ಎಲ್ಲಾ ಹಬ್ಬಗಳಿಗೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೆ,
ಮುಂಬೈ ಮಹಾನಗರಿಯ ದೀರ್ಘ ಕಾಲದ ನಿರೀಕ್ಷೆ ಇಂದು ಪೂರ್ಣಗೊಂಡಿದೆ. ಮುಂಬೈ ಈಗ ತನ್ನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ಈ ವಿಮಾನ ನಿಲ್ದಾಣವು ಈ ಪ್ರದೇಶವನ್ನು ಏಷ್ಯಾದ ಅತಿದೊಡ್ಡ ಸಂಪರ್ಕ ಕೇಂದ್ರಗಳಲ್ಲಿ ಒಂದಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಮುಂಬೈಗೆ ಸಂಪೂರ್ಣವಾಗಿ ನೆಲದಡಿಯ(ಭೂಗತ) ಮೆಟ್ರೋ ಕೂಡ ಆರಂಭವಾಗಿದೆ. ಇದು ಮುಂಬೈ ಮಹಾನಗರಿಯ ಪ್ರಯಾಣವನ್ನು ಸುಲಭಗೊಳಿಸುತ್ತದೆ, ಪ್ರಯಾಣಿಕರ ಸಮಯವನ್ನು ಉಳಿಸುತ್ತದೆ. ಈ ಭೂಗತ ಮೆಟ್ರೋ ಅಭಿವೃದ್ಧಿ ಹೊಂದುತ್ತಿರುವ ಭಾರತದ ಜೀವಂತ ಸಂಕೇತವಾಗಿದೆ. ಮುಂಬೈನಂತಹ ಜನದಟ್ಟಣೆಯ ನಗರದಲ್ಲಿ, ಈ ಭವ್ಯವಾದ ಮೆಟ್ರೋವನ್ನು ನೆಲದಡಿಯಲ್ಲಿ ನಿರ್ಮಿಸಲಾಗಿದೆ, ಅದು ಐತಿಹಾಸಿಕ ಕಟ್ಟಡಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಇದರ ನಿರ್ಮಾಣದಲ್ಲಿ ತೊಡಗಿರುವ ಎಲ್ಲಾ ಕಾರ್ಮಿಕರು ಮತ್ತು ಎಂಜಿನಿಯರ್‌ಗಳನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೆ,
ಇದು ದೇಶದ ಯುವಕರಿಗೆ ಲೆಕ್ಕವಿಲ್ಲದಷ್ಟು ಅವಕಾಶಗಳ ಸಮಯ. ಕೆಲವೇ ದಿನಗಳ ಹಿಂದೆ, ದೇಶಾದ್ಯಂತ ಅನೇಕ ಐಟಿಐಗಳನ್ನು ಉದ್ಯಮದೊಂದಿಗೆ ಸಂಪರ್ಕಿಸಲು 60,000 ಕೋಟಿ ರೂಪಾಯಿಗಳ ಪ್ರಧಾನ ಮಂತ್ರಿ ಸೇತು ಯೋಜನೆ ಪ್ರಾರಂಭಿಸಲಾಯಿತು. ಇಂದಿನಿಂದ, ಮಹಾರಾಷ್ಟ್ರ ಸರ್ಕಾರವು ನೂರಾರು ಐಟಿಐಗಳು ಮತ್ತು ತಾಂತ್ರಿಕ ಕಾಲೇಜುಗಳಲ್ಲಿ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಇಂದಿನಿಂದ ಈ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಡ್ರೋನ್‌ಗಳು, ರೊಬೊಟಿಕ್ಸ್, ವಿದ್ಯುಚ್ಛಾಲಿತ ವಾಹನಗಳು, ಸೌರಶಕ್ತಿ ಮತ್ತು ಹಸಿರು ಹೈಡ್ರೋಜನ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ತರಬೇತಿ ಪಡೆಯುತ್ತಾರೆ. ಹಾಗಾಗಿ, ಮಹಾರಾಷ್ಟ್ರದ ಯುವಕರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೆ,
ಈ ಮಹತ್ವದ ಸಂದರ್ಭದಲ್ಲಿ, ನಾನು ಮಹಾರಾಷ್ಟ್ರದ ಹೆಮ್ಮೆಯ ಪುತ್ರ ಮತ್ತು ಜನನಾಯಕ ದಿವಂಗತ ಡಿ.ಬಿ. ಪಾಟೀಲ್ ಜಿ ಅವರನ್ನು ಸಹ ಸ್ಮರಿಸುತ್ತೇನೆ. ಸಮಾಜ ಮತ್ತು ರೈತರಿಗೆ ಅವರ ಸಮರ್ಪಣೆ ಮತ್ತು ಸೇವೆ ನಮಗೆಲ್ಲರಿಗೂ ಸ್ಫೂರ್ತಿ. ಅವರ ಜೀವನವು ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡುವವರನ್ನು ಪ್ರೇರೇಪಿಸುತ್ತಲೇ ಇರುತ್ತದೆ.
ಸ್ನೇಹಿತರೆ,
ಇಂದು ಇಡೀ ರಾಷ್ಟ್ರವು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ) ದ ಸಂಕಲ್ಪವನ್ನು ಸಾಕಾರಗೊಳಿಸಲು ಸಮರ್ಪಿತವಾಗಿದೆ. 'ವಿಕಸಿತ ಭಾರತ' ಎಂದರೆ 'ಗತಿ'(ವೇಗ) ಮತ್ತು 'ಪ್ರಗತಿ'(ಪ್ರಗತಿ) ಎರಡೂ ಇರುವ ರಾಷ್ಟ್ರ, ಅಲ್ಲಿ ಸಾರ್ವಜನಿಕ ಕಲ್ಯಾಣವೇ ಪ್ರಮುಖ ಆದ್ಯತೆಯಾಗಿದೆ, ಸರ್ಕಾರಿ ಯೋಜನೆಗಳು ಜನರ ಜೀವನವನ್ನು ಸುಲಭಗೊಳಿಸುತ್ತವೆ. ಕಳೆದ 11 ವರ್ಷಗಳ ಪ್ರಯಾಣವನ್ನು ನೀವು ಹಿಂತಿರುಗಿ ನೋಡಿದರೆ, ಭಾರತದ ಪ್ರತಿಯೊಂದು ಮೂಲೆಯಲ್ಲೂ ಕೆಲಸವು ಇದೇ ರೀತಿಯ ಉತ್ಸಾಹದಿಂದ ವೇಗವಾಗಿ ಮುಂದುವರಿಯುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ಅತಿ ವೇಗದ ವಂದೇ ಭಾರತ್ ರೈಲುಗಳು ಹಳಿಗಳ ಮೇಲೆ ಓಡಿದಾಗ, ಬುಲೆಟ್ ರೈಲು ಯೋಜನೆಗಳು ವೇಗ ಪಡೆದಾಗ, ಹೊಸ ನಗರಗಳನ್ನು ಸಂಪರ್ಕಿಸುವ ವಿಶಾಲ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು, ಪರ್ವತಗಳನ್ನು ಅಗೆದು ಉದ್ದವಾದ ಸುರಂಗಗಳನ್ನು ನಿರ್ಮಿಸಿದಾಗ ಮತ್ತು ಸಾಗರದ ಎರಡು ತೀರಗಳನ್ನು ಸಂಪರ್ಕಿಸುವ ಭವ್ಯ ಸಮುದ್ರ ಸೇತುವೆಗಳಲ್ಲಿ ನಾವು ಭಾರತದ 'ಗತಿ' ಮತ್ತು 'ಪ್ರಗತಿ' ಎರಡನ್ನೂ ನೋಡುತ್ತೇವೆ. ಈ ಪ್ರಗತಿಯು ಭಾರತದ ಯುವಕರ ಕನಸುಗಳಿಗೆ ಹೊಸ ರೆಕ್ಕೆಪುಕ್ಕಗಳನ್ನು ನೀಡುತ್ತದೆ.
ಸ್ನೇಹಿತರೆ,
ಇಂದಿನ ಕಾರ್ಯಕ್ರಮವು ಈ ಪ್ರಯಾಣವನ್ನು ಮುಂದುವರೆಸುತ್ತದೆ. ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 'ವಿಕಸಿತ ಭಾರತ'ದ ದೃಷ್ಟಿಕೋನವನ್ನು ನಿಜವಾಗಿಯೂ ಪ್ರತಿಬಿಂಬಿಸುವ ಯೋಜನೆಯಾಗಿದೆ. ಇದನ್ನು ಛತ್ರಪತಿ ಶಿವಾಜಿ ಮಹಾರಾಜರ ಭೂಮಿಯಲ್ಲಿ ನಿರ್ಮಿಸಲಾಗಿದೆ, ಇದರ ವಿನ್ಯಾಸವು ಕಮಲದ ಹೂವನ್ನು ಹೋಲುತ್ತದೆ, ಅಂದರೆ, 'ಸಂಸ್ಕೃತಿ' ಮತ್ತು 'ಸಮೃದ್ಧಿ'ಯ ರೋಮಾಂಚಕ ಸಂಕೇತ. ಈ ಹೊಸ ವಿಮಾನ ನಿಲ್ದಾಣದ ಮೂಲಕ, ಮಹಾರಾಷ್ಟ್ರದ ರೈತರು ಈಗ ಯುರೋಪ್ ಮತ್ತು ಮಧ್ಯಪ್ರಾಚ್ಯದ ಸೂಪರ್‌ಮಾರ್ಕೆಟ್‌ಗಳೊಂದಿಗೆ ಸಂಪರ್ಕ ಹೊಂದಬಹುದು. ಇದರರ್ಥ ಹಣ್ಣುಗಳು, ತರಕಾರಿಗಳು, ಹೂವುಗಳು ಮತ್ತು ಮೀನುಗಳಂತಹ ರೈತರ ತಾಜಾ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ವೇಗವಾಗಿ ತಲುಪುತ್ತವೆ. ಈ ವಿಮಾನ ನಿಲ್ದಾಣವು ಸುತ್ತಮುತ್ತಲ ಪ್ರದೇಶಗಳಲ್ಲಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ರಫ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ, ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುತ್ತದೆ, ಜತೆಗೆ ಹೊಸ ಉದ್ಯಮಗಳು ಮತ್ತು ಕೈಗಾರಿಕೆಗಳನ್ನು ಸೃಷ್ಟಿಸುತ್ತದೆ. ಈ ವಿಮಾನ ನಿಲ್ದಾಣಕ್ಕಾಗಿ ಮಹಾರಾಷ್ಟ್ರ ಮತ್ತು ಮುಂಬೈ ಜನರಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಕನಸುಗಳನ್ನು ನನಸಾಗಿಸುವ ದೃಢಸಂಕಲ್ಪ ಮತ್ತು ತ್ವರಿತ ಅಭಿವೃದ್ಧಿಯ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕನನ್ನು ತಲುಪುವಂತೆ ನೋಡಿಕೊಳ್ಳುವ ಬಲವಾದ ಇಚ್ಛಾಶಕ್ತಿ ಇದ್ದಾಗ, ಫಲಿತಾಂಶಗಳು ಸ್ವಾಭಾವಿಕವಾಗಿಯೇ ಉತ್ತಮವಾಗಿರುತ್ತವೆ. ನಮ್ಮ ವಾಯುಯಾನ ವಲಯ ಮತ್ತು ಅದಕ್ಕೆ ಸಂಬಂಧಿಸಿದ ಕೈಗಾರಿಕೆಗಳು ಈ ಪ್ರಗತಿಗೆ ಸ್ಪಷ್ಟ ಉದಾಹರಣೆಯಾಗಿದೆ. 2014ರಲ್ಲಿ, ದೇಶವು ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ಚಪ್ಪಲಿ ಧರಿಸಿದ ವ್ಯಕ್ತಿಯೂ ಸಹ ವಿಮಾನ ಪ್ರಯಾಣ ಮಾಡಲು ಸಾಧ್ಯವಾಗಬೇಕು ಎಂಬುದು ನನ್ನ ಕನಸು ಎಂದು ನಾನು ಹೇಳಿದ್ದು ನಿಮಗೆ ನೆನಪಿರಬಹುದು. ಈ ಕನಸನ್ನು ನನಸಾಗಿಸಲು, ದೇಶಾದ್ಯಂತ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದು ಅತ್ಯಗತ್ಯವಾಗಿತ್ತು. ನಮ್ಮ ಸರ್ಕಾರ ಈ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಕೆಲಸ ಮಾಡಲು ಪ್ರಾರಂಭಿಸಿತು. ಕಳೆದ 11 ವರ್ಷಗಳಲ್ಲಿ, ಹೊಸ ವಿಮಾನ ನಿಲ್ದಾಣಗಳು ಒಂದರ ನಂತರ ಒಂದರಂತೆ ಬಂದಿವೆ. 2014ರಲ್ಲಿ, ನಮ್ಮಲ್ಲಿ ಕೇವಲ 74 ವಿಮಾನ ನಿಲ್ದಾಣಗಳು ಮಾತ್ರ ಇದ್ದವು. ಇಂದು ಭಾರತದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 160 ದಾಟಿದೆ.
ಸ್ನೇಹಿತರೆ,
ಸಣ್ಣ ಪಟ್ಟಣಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದಾಗ, ಅಲ್ಲಿನ ಜನರು ವಿಮಾನ ಪ್ರಯಾಣಕ್ಕಾಗಿ ಹೊಸ ಆಯ್ಕೆಗಳನ್ನು ಪಡೆಯುತ್ತಾರೆ. ಅವರಿಗೆ ವಿಮಾನಯಾನವನ್ನು ಕೈಗೆಟುಕುವಂತೆ ಮಾಡಲು, ನಾವು ಉಡಾನ್(ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆ ಪ್ರಾರಂಭಿಸಿದ್ದೇವೆ, ಇದರಿಂದ ಜನರು ಕಡಿಮೆ ವೆಚ್ಚದಲ್ಲಿ ವಿಮಾನದಲ್ಲಿ ಪ್ರಯಾಣಿಸಬಹುದು. ಉಡಾನ್ ಯೋಜನೆಯ ಕಾರಣದಿಂದಾಗಿ, ಲಕ್ಷಾಂತರ ಭಾರತೀಯರು ಕಳೆದ ದಶಕದಲ್ಲಿ ತಮ್ಮ ಮೊದಲ ವಿಮಾನ ಯಾನದ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ.
ಸ್ನೇಹಿತರೆ,
ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಮತ್ತು ಉಡಾನ್ ಯೋಜನೆಯ ಯಶಸ್ಸಿನಿಂದ, ಜನರು ಹೆಚ್ಚಿನ ಅನುಕೂಲ ಪಡೆದುಕೊಂಡಿದ್ದಾರೆ, ಅದೇ ಸಮಯದಲ್ಲಿ ಭಾರತವು ವಿಶ್ವದ 3ನೇ ಅತಿದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆಯಾಗಿದೆ. ಈಗ, ನಮ್ಮ ವಿಮಾನಯಾನ ಸಂಸ್ಥೆಗಳು ನಿರಂತರವಾಗಿ ವಿಸ್ತರಿಸುತ್ತಿವೆ. ವಿಶ್ವಾದ್ಯಂತದ ಜನರು, ವಿಮಾನ ತಯಾರಿಕಾ ಕಂಪನಿಗಳು ಪ್ರಸ್ತುತ ಭಾರತದಿಂದ ಸುಮಾರು 1,000 ಹೊಸ ವಿಮಾನಗಳಿಗೆ ಆರ್ಡರ್ ಮಾಡಿದ್ದಾರೆ ಎಂಬುದನ್ನು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ಈ ಬೆಳವಣಿಗೆಯು ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ, ಎಂಜಿನಿಯರ್‌ಗಳು ಮತ್ತು ನೆಲಗಟ್ಟಿನ ಸಿಬ್ಬಂದಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ಸ್ನೇಹಿತರೆ,
ವಿಮಾನಗಳ ಸಂಖ್ಯೆ ಹೆಚ್ಚಾದಂತೆ, ನಿರ್ವಹಣೆ ಮತ್ತು ದುರಸ್ತಿಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಇದಕ್ಕಾಗಿ, ನಾವು ಭಾರತದಲ್ಲಿಯೇ ಹೊಸ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ(ಎಂ.ಆರ್.ಒ.) ಸೌಲಭ್ಯಗಳನ್ನು ಸ್ಥಾಪಿಸುತ್ತಿದ್ದೇವೆ. ಈ ದಶಕದ ಅಂತ್ಯದ ವೇಳೆಗೆ ಭಾರತವು ಪ್ರಮುಖ ಜಾಗತಿಕ ಎಂ.ಆರ್.ಒ. ಕೇಂದ್ರವಾಗುವುದು ನಮ್ಮ ಗುರಿಯಾಗಿದೆ. ಇದು ನಮ್ಮ ಯುವಕರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಸ್ನೇಹಿತರೆ,
ಇಂದು ಭಾರತವು ಹೆಚ್ಚಿನ ಯುವ ಜನರನ್ನು ಹೊಂದಿರುವ ವಿಶ್ವದ ಚಿರಯೌವ್ವನ ರಾಷ್ಟ್ರವಾಗಿದೆ. ನಮ್ಮ ನಿಜವಾದ ಶಕ್ತಿ ನಮ್ಮ ಯುವಜನರಲ್ಲಿದೆ. ಅದಕ್ಕಾಗಿಯೇ ನಮ್ಮ ಸರ್ಕಾರದ ಪ್ರತಿಯೊಂದು ನೀತಿಯು ಯುವಕರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಗಮನ ಹರಿಸುತ್ತದೆ. ಮೂಲಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆ ಮಾಡಿದಾಗ, ಉದ್ಯೋಗಗಳು ಸೃಷ್ಟಿಯಾಗುತ್ತವೆ. 76,000 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ವಾಧವನ್‌ನಂತಹ ಬಂದರು ಅಭಿವೃದ್ಧಿಗೊಂಡಾಗ, ಉದ್ಯೋಗಗಳು ಸೃಷ್ಟಿಯಾಗುತ್ತವೆ. ವ್ಯಾಪಾರ ಬೆಳೆದಾಗ ಮತ್ತು ಸರಕು ಸಾಗಣೆ ವಲಯವು ಅಭಿವೃದ್ಧಿಯ ವೇಗ ಪಡೆದಾಗ, ಲೆಕ್ಕವಿಲ್ಲದಷ್ಟು ಉದ್ಯೋಗಾವಕಾಶಗಳು ಉದ್ಭವಿಸುತ್ತವೆ.
ಸಹೋದರ ಸಹೋದರಿಯರೆ,
ರಾಷ್ಟ್ರೀಯ ನೀತಿಯು ರಾಜಕೀಯದ ಭದ್ರ ಬುನಾದಿಯಾಗಿರಬೇಕು ಎಂಬ ನಂಬಿಕೆಯೊಂದಿಗೆ ನಾವು ಬೆಳೆದಿದ್ದೇವೆ. ನಮಗೆ, ಮೂಲಸೌಕರ್ಯಕ್ಕಾಗಿ ಖರ್ಚು ಮಾಡುವ ಪ್ರತಿಯೊಂದು ರೂಪಾಯಿ ನಮ್ಮ ನಾಗರಿಕರ ಅನುಕೂಲತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವಾಗಿದೆ. ಆದರೆ ಮತ್ತೊಂದೆಡೆ, ದೇಶದಲ್ಲಿ ಯಾವಾಗಲೂ ಜನರ ಕಲ್ಯಾಣಕ್ಕಿಂತ ತನ್ನದೇ ಆದ ಶಕ್ತಿ ಮತ್ತು ಅನುಕೂಲತೆಗೆ ಆದ್ಯತೆ ನೀಡುವ ರಾಜಕೀಯ ಶಕ್ತಿಗಳಿವೆ. ಅಭಿವೃದ್ಧಿ ಯೋಜನೆಗಳಲ್ಲಿ ಅಡೆತಡೆಗಳನ್ನು ಸೃಷ್ಟಿಸುವ, ಭ್ರಷ್ಟಾಚಾರ ಮತ್ತು ಹಗರಣಗಳ ಮೂಲಕ ಪ್ರಗತಿಯ ಹಳಿ ತಪ್ಪಿಸುವ ಜನರು ಇವರು. ದಶಕಗಳಿಂದ, ನಮ್ಮ ರಾಷ್ಟ್ರವು ಅಂತಹ ರಾಜಕೀಯದಿಂದ ಉಂಟಾಗುವ ಹಾನಿಯನ್ನು ಕಂಡಿದೆ.
ಸ್ನೇಹಿತರೆ,
ಇಂದು ಉದ್ಘಾಟನೆಯಾದ ಮೆಟ್ರೋ ಮಾರ್ಗವು ಒಂದು ಕಾಲದಲ್ಲಿ ಪ್ರಗತಿಗೆ ಅಡ್ಡಿಯಾಗಿದ್ದವರ ಕೃತ್ಯಗಳನ್ನು ನೆನಪಿಸುತ್ತದೆ. ಮುಂಬೈನಲ್ಲಿ ಲಕ್ಷಾಂತರ ಕುಟುಂಬಗಳು ತಮ್ಮ ದೈನಂದಿನ ಹೋರಾಟಗಳು ಶೀಘ್ರದಲ್ಲೇ ಕಡಿಮೆಯಾಗುತ್ತವೆ ಎಂಬ ಭರವಸೆಯಿಂದ ತುಂಬಿದ್ದಾಗ, ಅದರ ಶಂಕುಸ್ಥಾಪನೆ ಸಮಾರಂಭದಲ್ಲಿ ನಾನು ಹಾಜರಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಆದರೆ ನಂತರ, ಬೇರೆ ಸರ್ಕಾರವು ಅಲ್ಪಾವಧಿಗೆ ಅಧಿಕಾರಕ್ಕೆ ಬಂದು ಇಡೀ ಯೋಜನೆಯನ್ನು ಸ್ಥಗಿತಗೊಳಿಸಿತು. ಅವರು ಅಧಿಕಾರವನ್ನು ಪಡೆದರು, ಆದರೆ ದೇಶವು ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಅನುಭವಿಸಿತು ಜನರು ವರ್ಷಗಳ ಅನನುಕೂಲತೆಗಳನ್ನು ಸಹಿಸಿಕೊಂಡರು. ಈಗ, ಈ ಮೆಟ್ರೋ ಮಾರ್ಗವು ಅಂತಿಮವಾಗಿ ಪೂರ್ಣಗೊಂಡ ನಂತರ, ಒಮ್ಮೆ ಎರಡರಿಂದ ಎರಡೂವರೆ ಗಂಟೆ ತೆಗೆದುಕೊಳ್ಳುತ್ತಿದ್ದ ಪ್ರಯಾಣವು ಈಗ ಕೇವಲ 30ರಿಂದ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿ ನಿಮಿಷವೂ ಮುಖ್ಯವಾಗುವ ಮುಂಬೈನಂತಹ ನಗರದಲ್ಲಿ, 3ರಿಂದ 4 ವರ್ಷಗಳ ಕಾಲ ಮುಂಬೈ ಜನರನ್ನು ಈ ಸೌಲಭ್ಯದಿಂದ ವಂಚಿಸಿದ್ದು ಯಾವುದೇ ದೊಡ್ಡ ಅನ್ಯಾಯಕ್ಕಿಂತ ಕಡಿಮೆಯಿಲ್ಲ.
ಸ್ನೇಹಿತರೆ,
ಕಳೆದ 11 ವರ್ಷಗಳಿಂದ, ನಾಗರಿಕರ ಜೀವನವನ್ನು ಸುಲಭಗೊಳಿಸುವ, ಜೀವನ ಸುಲಭತೆಯನ್ನು ಸುಧಾರಿಸುವತ್ತ ನಮ್ಮ ಗಮನ ಕೇಂದ್ರೀಕರಿಸಿದೆ. ಅದಕ್ಕಾಗಿಯೇ ರೈಲು, ರಸ್ತೆಗಳು, ವಿಮಾನ ನಿಲ್ದಾಣಗಳು, ಮೆಟ್ರೋಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಪ್ರತಿಯೊಂದು ಮೂಲಸೌಕರ್ಯದಲ್ಲಿ ಹಿಂದೆಂದೂ ಕಾಣದ ಹೂಡಿಕೆ ಮಾಡಲಾಗಿದೆ. ಅಟಲ್ ಸೇತು ಮತ್ತು ಕರಾವಳಿ ರಸ್ತೆಯಂತಹ ಯೋಜನೆಗಳನ್ನು ನಿರ್ಮಿಸಲಾಗಿದೆ.
ಸ್ನೇಹಿತರೆ,
ನಾವು ಎಲ್ಲಾ ಸಾರಿಗೆ ವಿಧಾನಗಳನ್ನು ಪರಸ್ಪರ ಸಂಯೋಜಿಸಲು ಕೆಲಸ ಮಾಡುತ್ತಿದ್ದೇವೆ. ಒಂದು ಸಾರಿಗೆ ವಿಧಾನದಿಂದ ಇನ್ನೊಂದಕ್ಕೆ ಬದಲಾಯಿಸುವಾಗ ಜನರು ಕಷ್ಟಪಡಬೇಕಾಗಿಲ್ಲ, ಸುಗಮ ಪ್ರಯಾಣವನ್ನು ಖಚಿತಪಡಿಸುವುದು ನಮ್ಮ ಪ್ರಯತ್ನವಾಗಿದೆ. ಇಂದು ದೇಶವು "ಒಂದು ರಾಷ್ಟ್ರ, ಒಂದು ಚಲನಶೀಲತೆ" ದೃಷ್ಟಿಕೋನದತ್ತ ಸಾಗುತ್ತಿದೆ. ಮುಂಬೈ ಒನ್ ಅಪ್ಲಿಕೇಶನ್ ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಈಗ, ಮುಂಬೈ ಜನರು ಇನ್ನು ಮುಂದೆ ಟಿಕೆಟ್‌ಗಳಿಗಾಗಿ ದೀರ್ಘ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಮುಂಬೈ ಒನ್ ಅಪ್ಲಿಕೇಶನ್‌ನೊಂದಿಗೆ, ನೀವು ಒಮ್ಮೆ ಟಿಕೆಟ್ ಖರೀದಿಸಬಹುದು, ಸ್ಥಳೀಯ ರೈಲುಗಳು, ಬಸ್‌ಗಳು, ಮೆಟ್ರೋಗಳು ಅಥವಾ ಟ್ಯಾಕ್ಸಿಗಳಲ್ಲಿ ಅದೇ ಟಿಕೆಟ್ ಬಳಸಿ ಪ್ರಯಾಣಿಸಬಹುದು.
ಸ್ನೇಹಿತರೆ,
ಮುಂಬೈ ಭಾರತದ ಆರ್ಥಿಕ ರಾಜಧಾನಿ ಮಾತ್ರವಲ್ಲದೆ, ಅದು ಅತ್ಯಂತ ರೋಮಾಂಚಕ ನಗರಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ, 2008ರಲ್ಲಿ ಭಯೋತ್ಪಾದಕರು ಮುಂಬೈಯನ್ನು ಪ್ರಮುಖ ದಾಳಿಗೆ ಆಯ್ಕೆ ಮಾಡಿಕೊಂಡರು. ಆದರೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ದೌರ್ಬಲ್ಯದ ಸಂದೇಶವನ್ನು, ಭಯೋತ್ಪಾದನೆಯ ಮೊದಲು ಶರಣಾಗತಿಯ ಸಂದೇಶವನ್ನು ಕಳುಹಿಸಿತು. ಇತ್ತೀಚೆಗೆ, ದೇಶದ ಗೃಹ ಸಚಿವರಾಗಿ ಸೇವೆ ಸಲ್ಲಿಸಿರುವ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಂದರ್ಶನವೊಂದರಲ್ಲಿ ಪ್ರಮುಖ ವಿಷಯ ಬಹಿರಂಗಪಡಿಸಿದರು. ಮುಂಬೈ ದಾಳಿಯ ನಂತರ ನಮ್ಮ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಿದ್ಧವಾಗಿದ್ದವು, ಆ ಸಮಯದಲ್ಲಿ ಇಡೀ ದೇಶವೇ ಅದನ್ನು ಬಯಸಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಬೇರೆ ದೇಶದ ಒತ್ತಡದಿಂದಾಗಿ ಭಾರತದ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡುವುದನ್ನು ತಡೆಯಿತು ಎಂದು ಅವರು ಹೇಳಿದ್ದಾರೆ. ಹಾಗಾದರೆ, ವಿದೇಶಿ ಒತ್ತಡದಲ್ಲಿ ಆ ನಿರ್ಧಾರವನ್ನು ತೆಗೆದುಕೊಂಡವರು ಯಾರು? ಮುಂಬೈ ಮತ್ತು ರಾಷ್ಟ್ರದ ಭಾವನೆಗಳೊಂದಿಗೆ ಆಟವಾಡಿದವರು ಯಾರು ಎಂದು ಕಾಂಗ್ರೆಸ್ ನಮಗೆ ಹೇಳಬೇಕು. ದೇಶಕ್ಕೆ ತಿಳಿಯುವ ಹಕ್ಕಿದೆ. ಕಾಂಗ್ರೆಸ್‌ನ ಈ ದೌರ್ಬಲ್ಯವು ಭಯೋತ್ಪಾದಕರನ್ನು ಬಲಪಡಿಸಿತು ಮತ್ತು ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿತು, ದೇಶವು ಪದೇಪದೆ ನೂರಾರು ಜೀವಗಳನ್ನು ಕಳೆದುಕೊಂಡಿತು.
ಸ್ನೇಹಿತರೆ,
ನಮಗೆ ದೇಶ ಮತ್ತು ಜನರ ಭದ್ರತೆಗಿಂತ ಹೆಚ್ಚಿನದು ಏನೂ ಇಲ್ಲ. ಇಂದಿನ ಭಾರತವು ಸೂಕ್ತ ಉತ್ತರ ನೀಡುತ್ತಿದೆ. ಇಂದಿನ ಭಾರತವು ತನ್ನದೇ ಆದ ಪ್ರದೇಶದೊಳಗೆ ಶತ್ರುಗಳನ್ನು ಸದೆಬಡಿಯುತ್ತದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಇಡೀ ಜಗತ್ತು ನಮ್ಮ ಸಾಮರ್ಥ್ಯವನ್ನು ಹೆಮ್ಮೆಯಿಂದ ನೋಡಿತು ಮತ್ತು ಅನುಭವಿಸಿತು.
ಸ್ನೇಹಿತರೆ,
ಬಡವರಾಗಿರಲಿ, ನವ ಮಧ್ಯಮ ವರ್ಗವಾಗಿರಲಿ ಅಥವಾ ಮಧ್ಯಮ ವರ್ಗವಾಗಿರಲಿ, ಅವರ ಸಬಲೀಕರಣವು ಇಂದಿನ ರಾಷ್ಟ್ರೀಯ ಆದ್ಯತೆಯಾಗಿದೆ. ಈ ಕುಟುಂಬಗಳು ಅನುಕೂಲತೆ ಮತ್ತು ಗೌರವ ಪಡೆದಾಗ, ಅವರ ಸಾಮರ್ಥ್ಯ ಹೆಚ್ಚಾಗುತ್ತದೆ. ಬಲಿಷ್ಠ ನಾಗರಿಕರು ರಾಷ್ಟ್ರವನ್ನು ಬಲಪಡಿಸುತ್ತಾರೆ. ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಮತ್ತು ಬೆಲೆಗಳ ಇಳಿಕೆಯು ಜನರ ಖರೀದಿ ಶಕ್ತಿಯನ್ನು ಹೆಚ್ಚಿಸಿದೆ. ಈ ನವರಾತ್ರಿಯು ಹಲವು ವರ್ಷಗಳ ಮಾರಾಟ ದಾಖಲೆಗಳನ್ನು ಮುರಿದಿದೆ ಎಂದು ಮಾರುಕಟ್ಟೆ ಅಂಕಿಅಂಶಗಳು ತೋರಿಸುತ್ತವೆ. ದಾಖಲೆಯ ಸಂಖ್ಯೆಯ ಜನರು ಸ್ಕೂಟರ್, ಬೈಕ್, ಟಿವಿ, ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ಗಳನ್ನು ಖರೀದಿಸುತ್ತಿದ್ದಾರೆ.
ಸ್ನೇಹಿತರೆ,
ಜನರ ಜೀವನವನ್ನು ಉತ್ತಮಗೊಳಿಸುವ ಮತ್ತು ರಾಷ್ಟ್ರವನ್ನು ಬಲಪಡಿಸುವ ಪ್ರತಿಯೊಂದು ಹೆಜ್ಜೆಯನ್ನೂ ನಮ್ಮ ಸರ್ಕಾರ ಮುಂದುವರಿಸುತ್ತದೆ. ಆದರೆ ನಾನು ನಿಮಗಾಗಿ ಒಂದು ಮನವಿ ಮಾಡುತ್ತೇನೆ: ಸ್ವದೇಶಿ(ಸ್ಥಳೀಯ ಉತ್ಪನ್ನಗಳು)ಯನ್ನು ಸ್ವೀಕರಿಸಿ. ಹೆಮ್ಮೆಯಿಂದ ಹೇಳಿ: "ಇದು ಸ್ವದೇಶಿ!" ಇದು ಪ್ರತಿ ಮನೆಯ ಮತ್ತು ಪ್ರತಿಯೊಂದು ಮಾರುಕಟ್ಟೆಯ ಮಂತ್ರವಾಗಲಿ. ಪ್ರತಿಯೊಬ್ಬ ನಾಗರಿಕನು ಭಾರತೀಯ ನಿರ್ಮಿತ ಬಟ್ಟೆ ಮತ್ತು ಬೂಟುಗಳನ್ನು ಖರೀದಿಸಿದರೆ, ಮನೆಗೆ ಸ್ವದೇಶಿ ವಸ್ತುಗಳನ್ನು ತಂದರೆ ಮತ್ತು ಉಡುಗೊರೆಗಳನ್ನು ನೀಡುವಾಗ ಸ್ವದೇಶಿ ಉತ್ಪನ್ನಗಳನ್ನು ಆಯ್ಕೆ ಮಾಡಿದರೆ, ದೇಶದ ಹಣವು ರಾಷ್ಟ್ರದೊಳಗೆ ಉಳಿಯುತ್ತದೆ. ಇದು ಭಾರತೀಯ ಕಾರ್ಮಿಕರಿಗೆ ಕೆಲಸ ಮತ್ತು ಭಾರತೀಯ ಯುವಕರಿಗೆ ಉದ್ಯೋಗ ನೀಡುತ್ತದೆ. ಇಡೀ ದೇಶವು ಸ್ವದೇಶಿಯನ್ನು ಅಳವಡಿಸಿಕೊಂಡಾಗ, ಭಾರತದ ಶಕ್ತಿ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ನೀವೇ ಊಹಿಸಿ!
ಸ್ನೇಹಿತರೆ,
ದೇಶದ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಮಹಾರಾಷ್ಟ್ರ ಯಾವಾಗಲೂ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರದ ಪ್ರತಿಯೊಂದು ನಗರ ಮತ್ತು ಪ್ರತಿಯೊಂದು ಹಳ್ಳಿಯ ಬಲವನ್ನು ಹೆಚ್ಚಿಸಲು ಎನ್‌ಡಿಎ ಡಬಲ್-ಎಂಜಿನ್ ಸರ್ಕಾರವು ಅವಿಶ್ರಾಂತವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಭವಿಷ್ಯಕ್ಕಾಗಿ ನನ್ನ ಶುಭಾಶಯಗಳನ್ನು ಕೋರುತ್ತೇನೆ. ಈಗ, ನನ್ನೊಂದಿಗೆ ಹೇಳಿ: ಭಾರತ್ ಮಾತಾ ಕಿ ಜೈ! ನಿಮ್ಮ ಎರಡೂ ಕೈಗಳನ್ನು ಎತ್ತಿ ಈ ವಿಜಯವನ್ನು ಆಚರಿಸಿ!
ಭಾರತ್ ಮಾತಾ ಕಿ ಜೈ!
ಭಾರತ್ ಮಾತಾ ಕಿ ಜೈ!
ತುಂಬು ಧನ್ಯವಾದಗಳು.
*****
(Release ID: 2177291)
Visitor Counter : 16
Read this release in:
Odia
,
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam