ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅಕ್ಟೋಬರ್ 8-9ರಂದು ಮಹಾರಾಷ್ಟ್ರಕ್ಕೆ ಭೇಟಿ


ಸುಮಾರು 19,650 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲನೇ ಹಂತವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಮುಂಬೈ ಮೆಟ್ರೋ ಮಾರ್ಗ -3ರ ಅಂತಿಮ ಹಂತವನ್ನು ಉದ್ಘಾಟಿಸಿ, ಒಟ್ಟು 37,270 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಸಂಪೂರ್ಣ ಮುಂಬೈ ಮೆಟ್ರೋ ಮಾರ್ಗ -3 ಅನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

ಪ್ರಧಾನಿ ಅವರಿಂದ 11 ಸಾರ್ವಜನಿಕ ಸಾರಿಗೆ ನಿರ್ವಾಹಕರಿಗೆ ಭಾರತದ ಮೊದಲ ಸಂಯೋಜಿತ ಸಾಮಾನ್ಯ ಸಂಚಾರ ಅಪ್ಲಿಕೇಶನ್ - "ಮುಂಬೈ ಒನ್" ಉದ್ಘಾಟನೆ

ಉದ್ಘಾಟಿಸಲಿರುವ ಪ್ರಮುಖ ಯೋಜನೆಗಳಿಂದ ತಡೆರಹಿತ ಸಂಪರ್ಕ ಖಾತ್ರಿಪಡಿಸುವುದು

ಭಾರತ-ಯುಕೆ ಕಾರ್ಯತಂತ್ರ ಪಾಲುದಾರಿಕೆ ಬಲವರ್ಧನೆ ನಿಟ್ಟಿನಲ್ಲಿ ಮುಂಬೈನಲ್ಲಿ ಯುಕೆ ಪ್ರಧಾನಮಂತ್ರಿಯನ್ನು ಭೇಟಿ ಮಾಡಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ

ಭಾರತ-ಯುಕೆ ಕಾರ್ಯತಂತ್ರದ ಪಾಲುದಾರಿಕೆ ಮತ್ತು ವಿಷನ್ 2035 ನೀಲನಕ್ಷೆಯನ್ನು ಪರಾಮರ್ಶಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ಸ್ಟಾರ್ಮರ್

ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2025ರಲ್ಲಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ಸ್ಟಾರ್ಮರ್

ಜಿ ಎಫ್ ಎಫ್ 2025ರ ವಿಷಯ: ಕೃತಕ ಬುದ್ಧಿಮತ್ತೆ, ವೇಗದ ಗುಪ್ತಚರ, ನಾವೀನ್ಯತೆ ಮತ್ತು ಎಲ್ಲರನ್ನೂ ಒಳಗೊಳ್ಳುವುದರಿಂದ ಮುನ್ನಡೆಸಲ್ಪಡುತ್ತದೆ

Posted On: 07 OCT 2025 10:30AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಕ್ಟೋಬರ್ 8-9 ರಂದು ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಮಂತ್ರಿ ನವಿ ಮುಂಬೈ ತಲುಪಲಿದ್ದಾರೆ ಮತ್ತು ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೊಸದಾಗಿ ನಿರ್ಮಿಸಲಾದ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವೀಕ್ಷಣೆ ಮಾಡಲಿದ್ದಾರೆ. ನಂತರ ಮಧ್ಯಾಹ್ನ 3:30 ರ ಸುಮಾರಿಗೆ ಪ್ರಧಾನ ಮಂತ್ರಿ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಮತ್ತು ಮುಂಬೈನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅಕ್ಟೋಬರ್ 9 ರಂದು ಬೆಳಿಗ್ಗೆ 10 ಗಂಟೆಗೆ  ಪ್ರಧಾನ ಮಂತ್ರಿ ಮುಂಬೈನಲ್ಲಿ ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ಅವರಿಗೆ ಆತಿಥ್ಯ ನೀಡಲಿದ್ದಾರೆ. ಮಧ್ಯಾಹ್ನ 1:40 ರ ಸುಮಾರಿಗೆ ಉಭಯ ದೇಶಗಳ ಪ್ರಧಾನ ಮಂತ್ರಿಗಳು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಸಿಇಒ ಫೋರಂನಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 2:45 ರ ಸುಮಾರಿಗೆ ಇಬ್ಬರೂ ನಾಯಕರು ಜಾಗತಿಕ 6ನೇ  ಗ್ಲೋಬಲ್ ಫಿನ್‌ಟೆಕ್ ಮೇಳದಲ್ಲಿ ಭಾಗವಹಿಸಲಿದ್ದಾರೆ. ಅವರು ಮೇಳದಲ್ಲಿ ಅವರು ಪ್ರಧಾನ ಭಾಷಣಗಳನ್ನು ಮಾಡಲಿದ್ದಾರೆ.

ನವಿ ಮುಂಬೈನಲ್ಲಿ ಪ್ರಧಾನಮಂತ್ರಿ

ಭಾರತವನ್ನು ಜಾಗತಿಕ ವೈಮಾನಿಕ ತಾಣವನ್ನಾಗಿ ಪರಿವರ್ತಿಸುವ ತಮ್ಮ ದೂರದೃಷ್ಟಿಯೊಂದಿಗೆ ಪ್ರಧಾನಮಂತ್ರಿ ಅವರು ಸುಮಾರು 19,650 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎನ್ ಎಂ ಎ ಐ) ಒಂದನೇ ಹಂತವನ್ನು ಉದ್ಘಾಟಿಸಲಿದ್ದಾರೆ,

ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯಾಗಿದ್ದು, ಅದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮುಂಬೈ ಮಹಾನಗರ ಪ್ರದೇಶದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಎನ್ ಎಂ ಎ ಐ, ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಿಎಸ್ ಎಂಐಎ) ದೊಂದಿಗೆ ಒಗ್ಗೂಡಿ ಕಾರ್ಯನಿರ್ವಹಣೆ ಮಾಡಿ ದಟ್ಟಣೆಯನ್ನು ತಗ್ಗಿಸುತ್ತದೆ ಮತ್ತು ಮುಂಬೈಯನ್ನು ಜಾಗತಿಕ ಬಹು-ವಿಮಾನ ನಿಲ್ದಾಣ ವ್ಯವಸ್ಥೆಗಳ ಲೀಗ್‌ಗೆ ಸೇರ್ಪಡೆ ಮಾಡುತ್ತದೆ. 1160 ಹೆಕ್ಟೇರ್ ವಿಸ್ತೀರ್ಣದೊಂದಿಗೆ ವಿಶ್ವದ ಅತ್ಯಂತ ಪರಿಣಾಮಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಲು ವಿನ್ಯಾಸಗೊಳಿಸಲಾದ ಈ ವಿಮಾನ ನಿಲ್ದಾಣವು ಅಂತಿಮವಾಗಿ ವಾರ್ಷಿಕವಾಗಿ 90 ಮಿಲಿಯನ್ ಪ್ರಯಾಣಿಕರನ್ನು (ಎಂಪಿಪಿಎ) ಮತ್ತು 3.25 ಮಿಲಿಯನ್ ಮೆಟ್ರಿಕ್ ಟನ್ ಸರಕು ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ.

ಇದರ ವಿಶಿಷ್ಟ ಕೊಡುಗೆಗಳಲ್ಲಿ ಸ್ವಯಂಚಾಲಿತ ಪೀಪಲ್ ಮೂವರ್ (ಎಪಿಎಂ) ಸೇರಿದೆ, ಇದು ಸುಗಮ ಅಂತರ-ಟರ್ಮಿನಲ್ ವರ್ಗಾವಣೆಗಳಿಗಾಗಿ ಎಲ್ಲಾ ನಾಲ್ಕು ಪ್ರಯಾಣಿಕರ ಟರ್ಮಿನಲ್‌ಗಳನ್ನು ಸಂಪರ್ಕಿಸಲು ಯೋಜಿಸಲಾದ ಸಾರಿಗೆ ವ್ಯವಸ್ಥೆಯಾಗಿದೆ. ಜೊತೆಗೆ ನಗರ-ಬದಿಯ ಮೂಲಸೌಕರ್ಯವನ್ನು ಸಂಪರ್ಕಿಸುವ ಲ್ಯಾಂಡ್‌ಸೈಡ್ ಎಪಿಎಂ ಹೊಂದಿದೆ. ಸುಸ್ಥಿರ ಪದ್ಧತಿಗಳಿಗೆ ಅನುಗುಣವಾಗಿ, ವಿಮಾನ ನಿಲ್ದಾಣವು ಸುಸ್ಥಿರ ವಿಮಾನಯಾನ ಇಂಧನ (ಎಸ್ ಎಎಫ್) ಗಾಗಿ ಮೀಸಲಾದ ಸಂಗ್ರಹಣಾ ವ್ಯವಸ್ಥೆ, ಸರಿಸುಮಾರು 47 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮತ್ತು ನಗರದಾದ್ಯಂತ ಸಾರ್ವಜನಿಕ ಸಂಪರ್ಕಕ್ಕಾಗಿ ಇವಿ ಬಸ್ ಸೇವೆಗಳನ್ನು ಒಳಗೊಂಡಿರುತ್ತದೆ. ಎನ್ ಎಂ ಎ ಐ ವಾಟರ್ ಟ್ಯಾಕ್ಸಿ ಮೂಲಕ ಸಂಪರ್ಕ ಹೊಂದಿದ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ.

ಅಲ್ಲದೆ, ಪ್ರಧಾನಮಂತ್ರಿ ಅವರು ಮುಂಬೈ ಮೆಟ್ರೋ ಲೈನ್ -3 ರ ಹಂತ -2ಬಿ ಅನ್ನು ಉದ್ಘಾಟಿಸಲಿದ್ದಾರೆ, ಇದನ್ನು  ಸುಮಾರು 12,200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರೊಂದಿಗೆ, ಅವರು ಇಡೀ ಮುಂಬೈ ಮೆಟ್ರೋ ಲೈನ್ 3 (ಆಕ್ವಾ ಲೈನ್) ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ - ಒಟ್ಟು 37,270 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದ್ದು  ಅದು ನಗರ ಸಾರಿಗೆ ಪರಿವರ್ತನೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.

ಮುಂಬೈನ ಮೊದಲ ಮತ್ತು ಏಕೈಕ ಸಂಪೂರ್ಣ ನೆಲದಾಳದ ಮೆಟ್ರೋ ಮಾರ್ಗವಾಗಿ ಈ ಯೋಜನೆಯು ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಾದ್ಯಂತ (ಎಂಎಂಆರ್) ಪ್ರಯಾಣವನ್ನು ಮರು ರೂಪಿಸಲು ಸಜ್ಜಾಗಿದೆ, ಇದು ಲಕ್ಷಾಂತರ ನಿವಾಸಿಗಳಿಗೆ ವೇಗದ, ಹೆಚ್ಚು ಪರಿಣಾಮಕಾರಿ ಮತ್ತು ಆಧುನಿಕ ಸಾರಿಗೆ ಪರಿಹಾರವನ್ನು ನೀಡುತ್ತದೆ.

ಮುಂಬೈ ಮೆಟ್ರೋ ಲೈನ್ -3 ಮಾರ್ಗ ಕಫೆ ಪೆರೇಡ್ ನಿಂದ ಆರೆ ಜೆವಿಎಲ್ಆರ್ ವರೆಗೆ 33.5 ಕಿ.ಮೀ. ಉದ್ದದಲ್ಲಿ 27 ನಿಲ್ದಾಣಗಳನ್ನು ಹೊಂದಿದ್ದು, ಪ್ರತಿದಿನ 13 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲಿದೆ. ಯೋಜನೆಯ ಅಂತಿಮ ಹಂತ 2ಬಿ ದಕ್ಷಿಣ ಮುಂಬೈನ ಪರಂಪರೆ ಮತ್ತು ಸಾಂಸ್ಕೃತಿಕ ಜಿಲ್ಲೆಗಳಾದ ಫೋರ್ಟ್, ಕಲಾ ಘೋಡಾ ಮತ್ತು ಮೆರೈನ್ ಡ್ರೈವ್‌ಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಜೊತೆಗೆ ಬಾಂಬೆ ಹೈಕೋರ್ಟ್, ಮಂತ್ರಾಲಯ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ), ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿ ಎಸ್ ಇ), ಮತ್ತು ನಾರಿಮನ್ ಪಾಯಿಂಟ್ ಸೇರಿದಂತೆ ಪ್ರಮುಖ ಆಡಳಿತ ಮತ್ತು ಹಣಕಾಸು ಕೇಂದ್ರಗಳಿಗೆ ನೇರ ಪ್ರವೇಶವನ್ನು ಒದಗಿಸುತ್ತದೆ.

ರೈಲ್ವೆ ನಿಲ್ಷಣಾಗಳು, ವಿಮಾನ ನಿಲ್ದಾಣಗಳು, ಇತರ ಮೆಟ್ರೋ ಮಾರ್ಗಗಳು ಮತ್ತು ಮೊನೋರೈಲ್ ಸೇವೆಗಳು ಸೇರಿದಂತೆ ಇತರ ಸಾರಿಗೆ ವಿಧಾನಗಳ ಜತೆ ಪರಿಣಾಮಕಾರಿ ಏಕೀಕರಣವನ್ನು ಖಾತ್ರಿಪಡಿಸಿಕೊಳ್ಳಲು ಮೆಟ್ರೋ ಲೈನ್-3 ಅನ್ನು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ಕೊನೆಯ ಹಂತದ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಮಹಾನಗರ ಪ್ರದೇಶದಾದ್ಯಂತ ವಾಹನ ದಟ್ಟಣೆಯನ್ನು ತಗ್ಗಿಸುತ್ತದೆ.

ಪ್ರಧಾನಮಂತ್ರಿ ಅವರು ಮೆಟ್ರೊ, ಮೋನೋರೈಲು, ಉಪನಗರ ರೈಲ್ವೆಗಳು ಮತ್ತು ಬಸ್ ಪಿಟಿಒಗಳಲ್ಲಿ 11 ಸಾರ್ವಜನಿಕ ಸಾರಿಗೆ ನಿರ್ವಾಹಕರಿಗೆ (ಪಿಟಿಒ) "ಮುಂಬೈ ಒನ್" - ಸಂಯೋಜಿತ ಸಾಮಾನ್ಯ ಸಂಚಾರ ಅಪ್ಲಿಕೇಶನ್ ಅನ್ನು ಉದ್ಘಾಟಿಸಲಿದ್ದಾರೆ, ಅವುಗಳಲ್ಲಿ ಮುಂಬೈ ಮೆಟ್ರೋ ಲೈನ್ 2 ಎ ಮತ್ತು 7, ಮುಂಬೈ ಮೆಟ್ರೋ ಲೈನ್ 3, ಮುಂಬೈ ಮೆಟ್ರೋ ಲೈನ್ 1, ಮುಂಬೈ ಮೊನೋರೈಲ್, ನವಿ ಮುಂಬೈ ಮೆಟ್ರೋ, ಮುಂಬೈ ಉಪನಗರ ರೈಲ್ವೆ, ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್), ಥಾಣೆ ಮುನ್ಸಿಪಲ್ ಟ್ರಾನ್ಸ್‌ಪೋರ್ಟ್, ಮೀರಾ ಭಯಂದರ್ ಮುನ್ಸಿಪಲ್ ಸಾರಿಗೆ, ಕಲ್ಯಾಣ್ ಡೊಂಬಿವಲಿ ಮುನ್ಸಿಪಲ್ ಸಾರಿಗೆ ಮತ್ತು ನವಿ ಮುಂಬೈ ಮುನ್ಸಿಪಲ್ ಸಾರಿಗೆ ಸೇರಿವೆ.

ಮುಂಬೈ ಒನ್ ಆಪ್ ಪ್ರಯಾಣಿಕರಿಗೆ ಬಹು ಸಾರ್ವಜನಿಕ ಸಾರಿಗೆ ನಿರ್ವಾಹಕರಲ್ಲಿ ಸಂಯೋಜಿತ ಮೊಬೈಲ್ ಟಿಕೆಟ್ ವ್ಯವಸ್ಥೆ, ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮೂಲಕ ಸರತಿ ಸಾಲುಗಳನ್ನು ತಪ್ಪಿಸುವುದು ಮತ್ತು ಬಹು ಸಾರಿಗೆ ವಿಧಾನಗಳನ್ನು ಒಳಗೊಂಡ ಪ್ರವಾಸಗರಿಗೆ ಒಂದೇ ಡೈನಾಮಿಕ್ ಟಿಕೆಟ್ ಮೂಲಕ ತಡೆರಹಿತ ಬಹು ಮಾದರಿ ಸಂಪರ್ಕ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಇದು ವಿಳಂಬಗಳು, ಪರ್ಯಾಯ ಮಾರ್ಗಗಳು ಮತ್ತು ಅಂದಾಜು ಆಗಮನದ ಸಮಯಗಳ ಕುರಿತು ರಿಯಲ್ ಟೈಮ್ ಪ್ರಯಾಣಕ್ಕೆ ತಾಜಾ ಮಾಹಿತಿಗಳನ್ನು ಒದಗಿಸುತ್ತದೆ, ಜೊತೆಗೆ ಹತ್ತಿರದ ನಿಲ್ದಾಣಗಳು, ಆಕರ್ಷಣೆಗಳು ಮತ್ತು ಆಸಕ್ತಿಯ ಸ್ಥಳಗಳ ನಕ್ಷೆ ಆಧಾರಿತ ಮಾಹಿತಿ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಸ್ ಒಎಸ್ ವೈಶಿಷ್ಟ್ಯವನ್ನು ಸಹ ಒದಗಿಸುತ್ತದೆ. ಒಟ್ಟಾಗಿ, ಈ ವೈಶಿಷ್ಟ್ಯಗಳು ಅನುಕೂಲತೆ, ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತವೆ, ಮುಂಬೈನಾದ್ಯಂತ ಸಾರ್ವಜನಿಕ ಸಾರಿಗೆ ಅನುಭವವನ್ನು ಕಟ್ಟಿಕೊಡುತ್ತದೆ.

ಅಲ್ಲದೆ, ಪ್ರಧಾನಮಂತ್ರಿ ಅವರು ಮಹಾರಾಷ್ಟ್ರದಲ್ಲಿ ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ ಇಲಾಖೆಯ ಮಹತ್ವದ ಉಪಕ್ರಮವಾದ ಅಲ್ಪಾವಧಿಯ ಉದ್ಯೋಗಾವಕಾಶ ಕಾರ್ಯಕ್ರಮ (ಎಸ್ ಟಿ ಇ ಪಿ)ಯನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವನ್ನು 400 ಸರ್ಕಾರಿ ಐಟಿಐಗಳು ಮತ್ತು 150 ಸರ್ಕಾರಿ ತಾಂತ್ರಿಕ ಪ್ರೌಢಶಾಲೆಗಳಲ್ಲಿ ಜಾರಿಗೊಳಿಸಲಾಗುವುದು, ಇದು ಉದ್ಯೋಗಾವಕಾಶವನ್ನು ವೃದ್ಧಿಸಲು ಉದ್ಯಮದ ಅವಶ್ಯಕತೆಗಳೊಂದಿಗೆ ಕೌಶಲ್ಯ ಅಭಿವೃದ್ಧಿಯನ್ನು ಸಂಯೋಜಿಸುವಲ್ಲಿ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ಎಸ್ ಟಿಇಪಿ ಮಹಿಳೆಯರಿಗೆ 364 ವಿಶೇಷ ಬ್ಯಾಚ್‌ಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ), ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಎಲೆಕ್ಟ್ರಿಕ್ ವೆಹಿಕಲ್ಸ್ (ಇವಿ), ಸೌರಶಕ್ತಿ ಮತ್ತು ಸಂಯೋಜಕ ಉತ್ಪಾದನೆ ಮುಂತಾದ ಉದಯೋನ್ಮುಖ ತಂತ್ರಜ್ಞಾನ ಕೋರ್ಸ್‌ಗಳಲ್ಲಿ 408 ಬ್ಯಾಚ್‌ಗಳು ಸೇರಿದಂತೆ 2,500 ಹೊಸ ತರಬೇತಿ ಬ್ಯಾಚ್‌ಗಳನ್ನು ಸ್ಥಾಪಿಸಲಿದೆ.

ಯುಕೆ ಪ್ರಧಾನಮಂತ್ರಿ ಭೇಟಿ ಮತ್ತು ಜಾಗತಿಕ ಫಿನ್ ಟೆಕ್ ಮೇಳ

ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಮಂತ್ರಿ ಸರ್ ಕೀರ್ ಸ್ಟಾರ್ಮರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ 2025ರ ಅಕ್ಟೋಬರ್ 8-9 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇದು ಪ್ರಧಾನಿ ಸ್ಟಾರ್ಮರ್ ಅವರ ಭಾರತಕ್ಕೆ ಮೊದಲ ಅಧಿಕೃತ ಪ್ರವಾಸವಾಗಲಿದೆ.

ಈ ಭೇಟಿಯ ವೇಳೆ ಇಬ್ಬರು ಪ್ರಧಾನ ಮಂತ್ರಿಗಳು 'ವಿಷನ್ 2035' ಗೆ ಅನುಗುಣವಾಗಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ವಿವಿಧ ಅಂಶಗಳಲ್ಲಿನ ಪ್ರಗತಿ ಪರಾಮರ್ಶೆ ನಡೆಸಲಿದ್ದಾರೆ, ಇದು ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ರಕ್ಷಣೆ ಮತ್ತು ಭದ್ರತೆ, ಹವಾಮಾನ ಮತ್ತು ಇಂಧನ, ಆರೋಗ್ಯ, ಶಿಕ್ಷಣ ಮತ್ತು ಜನರ ನಡುವಿನ ಸಂಬಂಧ ಸೇರಿದಂತೆ ಪ್ರಮುಖ ವಿಷಯಗಳ ಕುರಿತ ಉಪಕ್ರಮಗಳ ಕೇಂದ್ರೀಕೃತ ಮತ್ತು 10 ವರ್ಷಗಳ ನೀಲನಕ್ಷೆಯನ್ನು ಹೊಂದಲಿವೆ.

ಭಾರತ-ಯುಕೆ ಆರ್ಥಿಕ ಪಾಲುದಾರಿಕೆಯ ಕೇಂದ್ರ ಸ್ತಂಭವಾಗಿ ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (ಸಿಇಟಿಎ) ಪ್ರಸ್ತುತಪಡಿಸಿದ ಅವಕಾಶಗಳ ಕುರಿತು ಇಬ್ಬರೂ ನಾಯಕರು ವ್ಯವಹಾರಗಳು ಮತ್ತು ಉದ್ಯಮ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುಲಿದ್ದಾರೆ. ನಾಯಕರು ಉದ್ಯಮ ತಜ್ಞರು, ನೀತಿ ನಿರೂಪಕರು ಮತ್ತು ನಾವೀನ್ಯಕಾರರೊಂದಿಗೆ ಸಹ ಸಂವಾದ ನಡೆಸುವರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ಸ್ಟಾರ್ಮರ್ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿರುವ 6ನೇ ಆವೃತ್ತಿಯ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗವಹಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ಪ್ರಧಾನ ಭಾಷಣಗಳನ್ನು ಮಾಡಲಿದ್ದಾರೆ.

ಗ್ಲೋಬಲ್ ಫಿನ್‌ಟೆಕ್ ಮೇಳ 2025 ಪ್ರಪಂಚದಾದ್ಯಂತದ ನಾವೀನ್ಯಕಾರರು, ನೀತಿ ನಿರೂಪಕರು, ಕೇಂದ್ರ ಬ್ಯಾಂಕರ್‌ಗಳು, ನಿಯಂತ್ರಕರು, ಹೂಡಿಕೆದಾರರು, ಶಿಕ್ಷಣ ತಜ್ಞರು ಮತ್ತು ಉದ್ಯಮ ನಾಯಕರನ್ನು ಒಟಗೂಡಿಸುತ್ತದೆ. ಸಮ್ಮೇಳನದ ಪ್ರಥಾನ ಥೀಮ್ 'ಉತ್ತಮ ಜಗತ್ತಿಗೆ ಹಣಕಾಸು ಸಬಲೀಕರಣ' – ಕೃತಕ ಬುದ್ಧಿಮತ್ತೆಯಿಂದ  ನಡೆಸಲ್ಪಡುತ್ತಿದೆ, ವರ್ಧಿತ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಸೇರ್ಪಡೆ, ನೈತಿಕ ಮತ್ತು ಸುಸ್ಥಿರ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನ ಮತ್ತು ಮಾನವ ಒಳನೋಟದ ಸಂಯೋಜನೆಯನ್ನು ಎತ್ತಿ ತೋರಿಸುತ್ತದೆ.

ಈ ವರ್ಷದ ಆವೃತ್ತಿಯಲ್ಲಿ 75ಕ್ಕೂ ಅಧಿಕ ದೇಶಗಳಿಂದ 100,000ಕ್ಕೂ ಅದಿಕ ಮಂದಿ ಭಾಗಿದಾರರನ್ನು ಆಕರ್ಷಿಸುವ ನಿರೀಕ್ಷೆಯಿದೆ, ಇದು ವಿಶ್ವದ ಅತಿದೊಡ್ಡ ಫಿನ್‌ಟೆಕ್ ಸಭೆಗಳಲ್ಲಿ ಒಂದಾಗಿದೆ. ಈ ಕಾರ್ಯಕ್ರಮವು ಸುಮಾರು 7,500 ಕಂಪನಿಗಳು, 800 ಭಾಷಣಕಾರರು, 400 ಪ್ರದರ್ಶಕರು ಮತ್ತು ಭಾರತೀಯ ಮತ್ತು ಅಂತಾರಾಷ್ಟ್ರೀಯ ನ್ಯಾಯವ್ಯಾಪ್ತಿಗಳನ್ನು ಪ್ರತಿನಿಧಿಸುವ 70 ನಿಯಂತ್ರಕರ ಭಾಗವಹಿಸುವಿಕೆ ಒಳಗೊಂಡಿದೆ.

ಮೇಳದಲ್ಲಿ ಭಾಗವಹಿಸಲಿರುವ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಸಿಂಗಾಪುರದ ಹಣಕಾಸು ಪ್ರಾಧಿಕಾರ, ಜರ್ಮನಿಯ ಡಾಯ್ಚ ಬುಂಡೆಸ್‌ಬ್ಯಾಂಕ್, ಬ್ಯಾಂಕ್ಯೂ ಡಿ ಫ್ರಾನ್ಸ್ ಮತ್ತು ಸ್ವಿಸ್ ಹಣಕಾಸು ಮಾರುಕಟ್ಟೆ ಮೇಲ್ವಿಚಾರಣಾ ಪ್ರಾಧಿಕಾರ (ಎಫ್ ಐ ಎನ್ ಎಂ ಎ) ನಂತಹ ಪ್ರಸಿದ್ಧ ನಿಯಂತ್ರಕರು ಸೇರಿದ್ದಾರೆ. ಅವರ ಭಾಗವಹಿಸುವಿಕೆಯು ಹಣಕಾಸು ನೀತಿ ಸಂವಾದ ಮತ್ತು ಸಹಕಾರಕ್ಕಾಗಿ ಜಾಗತಿಕ ವೇದಿಕೆಯಾಗಿ ಜಿಎಫ್ ಎಫ್  ಬೆಳೆಯುತ್ತಿರುವ ನಿಲುವನ್ನು ಒತ್ತಿ ಹೇಳುತ್ತದೆ.

 

*****


(Release ID: 2175733) Visitor Counter : 9