ಪ್ರಧಾನ ಮಂತ್ರಿಯವರ ಕಛೇರಿ
ಕೌಶಲ್ ದೀಕ್ಷಾಂತ್ ಸಮಾರೋಪ ಸಮಾರಂಭದಲ್ಲಿ ವಿವಿಧ ಯುವ ಸಮುದಾಯ ಕೇಂದ್ರಿತ ಉಪಕ್ರಮಗಳಿಗೆ ಉದ್ಘಾಟನೆ ನೆರವೇರಿಸಿ ಪ್ರಧಾನಮಂತ್ರಿ ಭಾಷಣ
Posted On:
04 OCT 2025 2:24PM by PIB Bengaluru
ಬಿಹಾರದ ಗೌರವಾನ್ವಿತ ಮತ್ತು ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಜುವಾಲ್ ಓರಂ ಜಿ, ಶ್ರೀ ರಾಜೀವ್ ರಂಜನ್ ಜಿ, ಶ್ರೀ ಜಯಂತ್ ಚೌಧರಿ ಜಿ ಮತ್ತು ಶ್ರೀ ಸುಕಾಂತ ಮಜುಂದಾರ್ ಜಿ, ಬಿಹಾರದ ಉಪಮುಖ್ಯಮಂತ್ರಿ ಶ್ರೀ ಸಾಮ್ರಾಟ್ ಚೌಧರಿ ಜಿ, ಶ್ರೀ ವಿಜಯ್ ಕುಮಾರ್ ಸಿನ್ಹಾ ಜಿ, ಬಿಹಾರ ಸರ್ಕಾರದ ಸಚಿವರೆ, ನನ್ನ ಸಂಸದೀಯ ಸಹೋದ್ಯೋಗಿ ಶ್ರೀ ಸಂಜಯ್ ಝಾ ಜಿ; ಇಲ್ಲಿರುವ ಜನಪ್ರತಿನಿಧಿಗಳೆ, ದೇಶಾದ್ಯಂತದ ಕೈಗಾರಿಕಾ ತರಬೇತಿ ಸಂಸ್ಥೆಗಳ(ಐ.ಟಿ.ಐ) ಲಕ್ಷಾಂತರ ವಿದ್ಯಾರ್ಥಿಗಳೆ, ಬಿಹಾರದ ಅಸಂಖ್ಯಾತ ವಿದ್ಯಾರ್ಥಿಗಳೆ ಮತ್ತು ಶಿಕ್ಷಕರೆ, ಮಹಿಳೆಯರೆ ಮತ್ತು ಮಹನೀಯರೆ!
ಕೆಲವು ವರ್ಷಗಳ ಹಿಂದೆ, ನಮ್ಮ ಸರ್ಕಾರ ಐ.ಟಿ.ಐ ವಿದ್ಯಾರ್ಥಿಗಳಿಗಾಗಿ ದೊಡ್ಡ ಪ್ರಮಾಣದ ಘಟಿಕೋತ್ಸವಗಳನ್ನು ನಡೆಸುವ ಹೊಸ ಸಂಪ್ರದಾಯ ಪ್ರಾರಂಭಿಸಿತು. ಇಂದು, ನಾವು ಈ ಹೆಮ್ಮೆಯ ಸಂಪ್ರದಾಯದ ಮತ್ತೊಂದು ಅಧ್ಯಾಯವನ್ನು ವೀಕ್ಷಿಸುತ್ತಿದ್ದೇವೆ. ಭಾರತದ ಮೂಲೆ ಮೂಲೆಯಿಂದ ನಮ್ಮೊಂದಿಗೆ ಸಂಪರ್ಕ ಹೊಂದಿರುವ ಎಲ್ಲಾ ಯುವ ಐ.ಟಿ.ಐ ಪ್ರಶಿಕ್ಷಣಾರ್ಥಿಗಳಿಗೆ ನಾನು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ನನ್ನ ಸ್ನೇಹಿತರೆ,
ಇಂದಿನ ಸಮಾರಂಭವು ನವ ಭಾರತವು ಕೌಶಲ್ಯಕ್ಕೆ ನೀಡುತ್ತಿರುವ ಆದ್ಯತೆಯನ್ನು ಸಂಕೇತಿಸುತ್ತದೆ. ಈ ಮಹತ್ವದ ಸಂದರ್ಭದಲ್ಲಿ, ನಮ್ಮ ದೇಶದ ಯುವಕರಿಗೆ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ 2 ಪ್ರಮುಖ ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ. ಈ ಘಟಿಕೋತ್ಸವ ಆಯೋಜಿಸುವ ಹಿಂದಿನ ಆಲೋಚನೆಯು ನಾವು ಶ್ರಮಕ್ಕೆ ಘನತೆಯನ್ನು ನೀಡದ ಹೊರತು, ಕೌಶಲ್ಯ ಮತ್ತು ಸಾಮರ್ಥ್ಯದೊಂದಿಗೆ ಕೆಲಸ ಮಾಡುವವರಿಗೆ ಸಾರ್ವಜನಿಕ ಜೀವನದಲ್ಲಿ ನಿಜವಾಗಿಯೂ ಅರ್ಹವಾದ ಗೌರವವನ್ನು ಎಂದಿಗೂ ಪಡೆಯಲಾಗುವುದಿಲ್ಲ ಎಂಬ ನಂಬಿಕೆಯಲ್ಲಿ ಬೇರೂರಿದೆ. ಆ ಗೌರವವಿಲ್ಲದೆ, ಅವರು ಕುಗ್ಗಿ ಬಿಡುತ್ತಾರೆ ಎಂದೇ ಭಾವಿಸಬಹುದು. ಹಾಗಾಗಿ, ನಾವು ಅದನ್ನೇ ಬದಲಾಯಿಸಲು ಪ್ರಯತ್ನಿಸುತ್ತಿದ್ದೇವೆ.
ಇದು ನಮ್ಮ ಸಾಮೂಹಿಕ ಮನಸ್ಥಿತಿಯನ್ನು ಪರಿವರ್ತಿಸುವ ಗುರಿ ಹೊಂದಿರುವ ಚಳುವಳಿಯಾಗಿದೆ. ನಾವು ಹೆಮ್ಮೆಯಿಂದ 'ಶ್ರಮವೇ ಜಯತೇ' ಮತ್ತು 'ಶ್ರಮವೇ ಪೂಜ್ಯತೇ' ಎಂದು ಹೇಳುತ್ತೇವೆ. ದೇಶಾದ್ಯಂತದ ಎಲ್ಲಾ ಐ.ಟಿ.ಐ ತರಬೇತಿ ಪಡೆಯುವವರಲ್ಲಿ ಈ ಉತ್ಸಾಹದಿಂದಲೇ ನಾವು ವಿಶ್ವಾಸ ತುಂಬಲು ಬಯಸುತ್ತೇವೆ, ಅವರು ಬೇರೆ ಆಯ್ಕೆಗಳಿಲ್ಲದ ಕಾರಣ ಇಲ್ಲಿಗೆ ಬಂದಿಲ್ಲ, ಆದರೆ ಇದು ಕೂಡ ಉಜ್ವಲ ಭವಿಷ್ಯದತ್ತ ಒಂದು ಮಾರ್ಗವಾಗಿದೆ. ಕೌಶಲ್ಯವು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಆದ್ದರಿಂದ, ಐ.ಟಿ.ಐ ರಂಗದ ಪ್ರತಿಯೊಬ್ಬ ಸದಸ್ಯರನ್ನು ನಾನು ಅತ್ಯಂತ ಗೌರವದಿಂದ ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ.
ಇಂದು, ಇನ್ನೂ 2 ಮಹತ್ವದ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ. ಪ್ರಧಾನಮಂತ್ರಿ ಸೇತು ಯೋಜನೆಯಡಿ, 60,000 ಕೋಟಿ ರೂ. ಅನುದಾನ ಹಂಚಿಕೆಯೊಂದಿಗೆ, ನಮ್ಮ ಐ.ಟಿ.ಐಗಳು ಈಗ ಕೈಗಾರಿಕೆಗಳೊಂದಿಗೆ ನೇರವಾಗಿ ಮತ್ತು ಹೆಚ್ಚು ಸದೃಢವಾಗಿ ಸಂಪರ್ಕ ಹೊಂದಿವೆ. ಇದಲ್ಲದೆ, ದೇಶಾದ್ಯಂತ ನವೋದಯ ವಿದ್ಯಾಲಯಗಳು ಮತ್ತು ಏಕಲವ್ಯ ಮಾದರಿ ಶಾಲೆಗಳಲ್ಲಿ 1,200 ಕೌಶಲ್ಯ ಪ್ರಯೋಗಾಲಯಗಳನ್ನು ಉದ್ಘಾಟಿಸಲಾಗಿದೆ.
ಈ ಕಾರ್ಯಕ್ರಮದ ರೂಪರೇಷೆ ಮೊದಲು ಸಿದ್ಧಪಡಿಸಿದಾಗ, ಈ ಘಟಿಕೋತ್ಸವವನ್ನು ವಿಜ್ಞಾನ ಭವನದಲ್ಲಿ ನಡೆಸುವುದು ಮೂಲ ಯೋಜನೆಯಾಗಿತ್ತು. ಆದಾಗ್ಯೂ, 'ಸೋನೆ ಪೆ ಸುಹಾಗ' ಅಥವಾ 'ಐಸಿಂಗ್ ಆನ್ ದಿ ಕೇಕ್' ಎಂಬ ಮಾತಿನಂತೆ ಇನ್ನೂ ಹೆಚ್ಚು ಶುಭವಾದದ್ದು ಸಂಭವಿಸಿದೆ. ಶ್ರೀ ನಿತೀಶ್ ಕುಮಾರ್ ಜಿ ನೇತೃತ್ವದಲ್ಲಿ, ಈ ಆಚರಣೆಯನ್ನು ಭವ್ಯ ಉತ್ಸವವನ್ನಾಗಿ ಪರಿವರ್ತಿಸುವ ಆಲೋಚನೆ ಹೊರಹೊಮ್ಮಿತು. ಇದರ ಪರಿಣಾಮವಾಗಿ, ಇಂದಿನ ಸಂದರ್ಭವು 2 ಪ್ರಮುಖ ಕಾರ್ಯಕ್ರಮಗಳಾದ ಭಾರತ ಸರ್ಕಾರ ಆಯೋಜಿಸಿದ ಐ.ಟಿ.ಐ ಘಟಿಕೋತ್ಸವ ಮತ್ತು ಬಿಹಾರದ ಹಲವಾರು ಅಭಿವೃದ್ಧಿ ಉಪಕ್ರಮಗಳ ಸಂಗಮವಾಗಿದೆ.
ಈ ವೇದಿಕೆಯಿಂದಲೇ, ಹಲವಾರು ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಬಿಹಾರದ ಯುವಕರಿಗೆ ಅರ್ಪಿಸಲಾಗಿದೆ. ಬಿಹಾರದಲ್ಲಿ ಹೊಸ ಕೌಶಲ್ಯ ತರಬೇತಿ ವಿಶ್ವವಿದ್ಯಾಲಯ, ಇತರೆ ವಿಶ್ವವಿದ್ಯಾಲಯಗಳಲ್ಲಿ ಸೌಲಭ್ಯಗಳ ವಿಸ್ತರಣೆ, ಯುವಜನರ ಸಬಲೀಕರಣಕ್ಕಾಗಿ ಯುವ ಆಯೋಗ ಸ್ಥಾಪನೆ ಮತ್ತು ಸಾವಿರಾರು ಯುವಕರಿಗೆ ಸುರಕ್ಷಿತ ಸರ್ಕಾರಿ ಉದ್ಯೋಗಗಳನ್ನು ನೀಡುವ ನೇಮಕಾತಿ ಪತ್ರಗಳ ವಿತರಣೆ ಇವುಗಳಲ್ಲಿ ಸೇರಿವೆ. ಈ ಎಲ್ಲಾ ಉಪಕ್ರಮಗಳು ಬಿಹಾರದ ಯುವ ಪೀಳಿಗೆಗೆ ಉಜ್ವಲ ಮತ್ತು ಹೆಚ್ಚು ಸಮೃದ್ಧ ಭವಿಷ್ಯವನ್ನು ಖಾತರಿಪಡಿಸುತ್ತವೆ.
ಸ್ನೇಹಿತರೆ,
ಕೆಲವೇ ದಿನಗಳ ಹಿಂದೆ, ಬಿಹಾರದ ಮಹಿಳೆಯರ ಉದ್ಯೋಗ ಮತ್ತು ಸ್ವಾವಲಂಬನೆಗೆ ಮೀಸಲಾಗಿರುವ ಒಂದು ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿತು. ಆ ಕಾರ್ಯಕ್ರಮದಲ್ಲಿ ನಮ್ಮ ಲಕ್ಷಾಂತರ ಸಹೋದರಿಯರು ಭಾಗವಹಿಸಿದ್ದರು. ಇಂದಿನ ಈ ಕಾರ್ಯಕ್ರಮವು ಬಿಹಾರದ ಯುವಕರ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿದ ಒಂದು ಬೃಹತ್ ಕಾರ್ಯಕ್ರಮವಾಗಿದೆ. ಒಟ್ಟಿನಲ್ಲಿ, ಈ ಕಾರ್ಯಕ್ರಮಗಳು ಎನ್.ಡಿ.ಎ ಸರ್ಕಾರವು ಬಿಹಾರದ ಯುವಕರು ಮತ್ತು ಮಹಿಳೆಯರ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ಹೇಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂಬುದನ್ನು ಪ್ರದರ್ಶಿಸುತ್ತವೆ.
ಸ್ನೇಹಿತರೆ
ಭಾರತವು ಜ್ಞಾನ ಮತ್ತು ಕೌಶಲ್ಯದ ಭೂಮಿ. ಈ ಬೌದ್ಧಿಕ ಶಕ್ತಿಯೇ ನಮ್ಮ ದೊಡ್ಡ ಆಸ್ತಿ. ಜ್ಞಾನ ಮತ್ತು ಕೌಶಲ್ಯವು ರಾಷ್ಟ್ರದ ಅಗತ್ಯಗಳಿಗೆ ಹೊಂದಿಕೊಂಡಾಗ ಮತ್ತು ಅವುಗಳನ್ನು ಪೂರೈಸಲು ಸಮರ್ಪಿತವಾದಾಗ, ಅವುಗಳ ಶಕ್ತಿಯು ಹಲವು ಪಟ್ಟು ಹೆಚ್ಚಾಗುತ್ತದೆ. 21ನೇ ಶತಮಾನವು ದೇಶದ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ಥಳೀಯ ಪ್ರತಿಭೆ, ಸ್ಥಳೀಯ ಸಂಪನ್ಮೂಲಗಳು, ಸ್ಥಳೀಯ ಕೌಶಲ್ಯ ಮತ್ತು ಸ್ಥಳೀಯ ಜ್ಞಾನವನ್ನು ನಾವು ಮುನ್ನಡೆಸಬೇಕೆಂದು ಒತ್ತಾಯಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಸಾವಿರಾರು ಐ.ಟಿ.ಐಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.
ಪ್ರಸ್ತುತ, ಈ ಐ.ಟಿ.ಐಗಳಲ್ಲಿ ಸುಮಾರು 170 ವಹಿವಾಟುಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಕಳೆದ 11 ವರ್ಷಗಳಲ್ಲಿ, 1.5 ಕೋಟಿಗೂ ಹೆಚ್ಚು ಯುವಕರು ಮತ್ತು ಮಹಿಳೆಯರಿಗೆ ವಿವಿಧ ಕ್ಷೇತ್ರಗಳ ತಾಂತ್ರಿಕ ಅರ್ಹತೆಗಳೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಈ ವಹಿವಾಟುಗಳಲ್ಲಿ ತರಬೇತಿ ನೀಡಲಾಗಿದೆ. ಅತ್ಯಂತ ಗಮನಾರ್ಹವಾದ ವಿಷಯವೆಂದರೆ, ಈ ಕೌಶಲ್ಯಗಳನ್ನು ಯುವಕರಿಗೆ ಅವರ ಸ್ಥಳೀಯ ಭಾಷೆಗಳಲ್ಲಿ ಕಲಿಸಲಾಗುತ್ತಿದೆ, ಕಲಿಕೆಯು ಸುಲಭವಾಗಿ ಮತ್ತು ಸಾಪೇಕ್ಷವಾಗಿರುವುದನ್ನು ಖಚಿತಪಡಿಸುತ್ತದೆ. ಈ ವರ್ಷವೂ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಖಿಲ ಭಾರತ ವ್ಯಾಪಾರ ಪರೀಕ್ಷೆಯಲ್ಲಿ ಕಾಣಿಸಿಕೊಂಡರು, ಇಂದು ನಮ್ಮ 45ಕ್ಕೂ ಹೆಚ್ಚು ಯಶಸ್ವಿ ತರಬೇತುದಾರರನ್ನು ಗೌರವಿಸುವ ಸೌಭಾಗ್ಯ ನನಗೆ ಸಿಕ್ಕಿದೆ.
ಸ್ನೇಹಿತರೆ,
ಈ ಯಶಸ್ವಿ ತರಬೇತುದಾರರಲ್ಲಿ ಹೆಚ್ಚಿನ ಸಂಖ್ಯೆಯವರು ನಮ್ಮ ದೇಶದ ದೂರದ ಮೂಲೆಗಳಿಂದ ಗ್ರಾಮೀಣ ಭಾರತದಿಂದ ಬಂದಿದ್ದಾರೆ ಎಂಬುದು ನನಗೆ ಬಹಳ ಹೆಮ್ಮೆಯ ಕ್ಷಣವಾಗಿದೆ. ಅವರನ್ನು ನೋಡುವಾಗ, ನಮ್ಮ ಮುಂದೆ ಭಾರತದ ಒಂದು ಪ್ರತಿಕೃತಿಯೇ ಬಂದು ಕುಳಿತಿದೆ ಎಂದು ಭಾಸವಾಗುತ್ತದೆ. ಅವರಲ್ಲಿ ನಮ್ಮ ಹೆಣ್ಣು ಮಕ್ಕಳು, ಹಾಗೆಯೇ ವಿಶೇಷಚೇತನರು ಇದ್ದಾರೆ, ಅವರೆಲ್ಲರೂ ತಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಯಶಸ್ಸು ಸಾಧಿಸಿದ್ದಾರೆ.
ಸ್ನೇಹಿತರೆ,
ನಮ್ಮ ಐ.ಟಿ.ಐಗಳು ಕೈಗಾರಿಕಾ ಶಿಕ್ಷಣಕ್ಕೆ ಅತ್ಯುತ್ತಮ ಸಂಸ್ಥೆಗಳು ಮಾತ್ರವಲ್ಲದೆ, ಅವು ಆತ್ಮನಿರ್ಭರ ಭಾರತದ ಕಾರ್ಯಾಗಾರಗಳಾಗಿವೆ. ಆದ್ದರಿಂದ, ನಮ್ಮ ಗಮನವು ಅವುಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಇದ್ದರೂ, ನಾವು ಅವುಗಳ ಗುಣಮಟ್ಟವನ್ನು ನಿರಂತರವಾಗಿ ನವೀಕರಿಸಲು ಬದ್ಧರಾಗಿದ್ದೇವೆ. 2014ರ ವರೆಗೆ, ಭಾರತದಲ್ಲಿ ಸುಮಾರು 10,000 ಐ.ಟಿ.ಐಗಳು ಇದ್ದವು. ಕಳೆದ ದಶಕದಲ್ಲೇ ದೇಶಾದ್ಯಂತ ಸುಮಾರು 5,000 ಹೊಸ ಐ.ಟಿ.ಐಗಳನ್ನು ಸ್ಥಾಪಿಸಲಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸ್ವಾತಂತ್ರ್ಯದ ನಂತರ 10,000 ಸಂಸ್ಥೆಗಳನ್ನು ಸ್ಥಾಪಿಸಿದ್ದರೆ, ನಮ್ಮ ಸರ್ಕಾರ ಕಳೆದ 10 ವರ್ಷಗಳಲ್ಲಿ ಹೆಚ್ಚುವರಿಯಾಗಿ 5,000 ಸಂಸ್ಥೆಗಳನ್ನು ಸ್ಥಾಪಿಸಿದೆ. ಇಂದು, ನಮ್ಮ ಕೈಗಾರಿಕಾ ತರಬೇತಿ ಸಂಸ್ಥೆಗಳ ಜಾಲವು ಉದ್ಯಮದ ಪ್ರಸ್ತುತ ಮತ್ತು ಭವಿಷ್ಯದ ಕೌಶಲ್ಯ ಬೇಡಿಕೆಗಳನ್ನು ಪೂರೈಸಲು ಸಿದ್ಧವಾಗುತ್ತಿದೆ. ಇಂದು ಉದ್ಯಮಕ್ಕೆ ಯಾವ ರೀತಿಯ ಕೌಶಲ್ಯಗಳು ಬೇಕಾಗುತ್ತವೆ, 10 ವರ್ಷಗಳ ನಂತರ ಅದಕ್ಕೆ ಏನು ಬೇಕಾಗುತ್ತದೆ ಎಂಬ ಪ್ರಶ್ನೆಗಳು ನಮ್ಮ ಯೋಜನೆಗೆ ಮಾರ್ಗದರ್ಶನ ನೀಡುತ್ತಿವೆ. ಆದ್ದರಿಂದ, ಉದ್ಯಮ ಮತ್ತು ಐ.ಟಿ.ಐಗಳ ನಡುವಿನ ಸಮನ್ವಯ ಬಲಪಡಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಈ ದಿಕ್ಕಿನಲ್ಲಿ, ಪಿಎಂ ಸೇತು ಯೋಜನೆಯನ್ನು ಪ್ರಾರಂಭಿಸುವುದರೊಂದಿಗೆ ನಾವು ಇಂದು ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದ್ದೇವೆ. ದೇಶಾದ್ಯಂತ 1,000ಕ್ಕೂ ಹೆಚ್ಚು ಐ.ಟಿ.ಐ ಸಂಸ್ಥೆಗಳು ಇದರ ಪ್ರಯೋಜನ ಪಡೆಯುತ್ತಿವೆ. ಈ ಯೋಜನೆಯ ಮೂಲಕ, ಐ.ಟಿ.ಐಗಳನ್ನು ಹೊಸ ಮತ್ತು ಆಧುನಿಕ ಯಂತ್ರೋಪಕರಣಗಳೊಂದಿಗೆ ನವೀಕರಿಸಲಾಗುತ್ತಿದೆ. ಕೈಗಾರಿಕಾ ತರಬೇತಿ ತಜ್ಞರು ಈ ಸಂಸ್ಥೆಗಳಿಗೆ ಬರುತ್ತಾರೆ ಮತ್ತು ಪಠ್ಯಕ್ರಮವನ್ನು ಪ್ರಸ್ತುತ ಮತ್ತು ಭವಿಷ್ಯದ ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ನವೀಕರಿಸುತ್ತಾರೆ. ಒಂದು ರೀತಿಯಲ್ಲಿ, ಪಿಎಂ ಸೇತು ಯೋಜನೆಯು ಭಾರತದ ಯುವಕರನ್ನು ಜಾಗತಿಕ ಕೌಶಲ್ಯ ಬೇಡಿಕೆಗಳೊಂದಿಗೆ ಸಂಪರ್ಕಿಸುವ ಸೇತುವಾಗಿ ಕಾರ್ಯ ನಿರ್ವಹಿಸುತ್ತದೆ.
ನನ್ನ ಯುವ ಸ್ನೇಹಿತರೆ,
ಇತ್ತೀಚಿನ ದಿನಗಳಲ್ಲಿ ಭಾರತವು ವಿವಿಧ ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದಾಗಲೆಲ್ಲಾ, ಅವರು ಎತ್ತಿ ತೋರಿಸುವ ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಿ ಒಂದು ನಮ್ಮ ದೇಶದಿಂದ ಕೌಶಲ್ಯಯುತ ಮಾನವಶಕ್ತಿಯ ಅಗತ್ಯವಾಗಿದೆ ಎಂಬುದನ್ನು ನೀವು ಗಮನಿಸಿರಬೇಕು. ಇದು ಭಾರತದ ಯುವಕರಿಗೆ ಹೊಸ ಜಾಗತಿಕ ಅವಕಾಶಗಳನ್ನು ಸೃಷ್ಟಿಸುತ್ತಿದೆ, ಏಕೆಂದರೆ ವಿಶ್ವಾದ್ಯಂತದ ರಾಷ್ಟ್ರಗಳು ನಮ್ಮ ಯುವ ಪೀಳಿಗೆಯ ಪ್ರತಿಭೆ ಮತ್ತು ಕೌಶಲ್ಯವನ್ನು ಗುರುತಿಸುತ್ತಿವೆ.
ಸ್ನೇಹಿತರೆ,
ಇಂದು ಬಿಹಾರದ ಸಾವಿರಾರು ಯುವಕರು ಈ ಕಾರ್ಯಕ್ರಮದ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಬಹುಶಃ ಈ ಪೀಳಿಗೆಯು ಎರಡು ಅಥವಾ ಎರಡೂವರೆ ದಶಕಗಳ ಹಿಂದೆ ಬಿಹಾರದ ಶಿಕ್ಷಣ ವ್ಯವಸ್ಥೆಯ ಸ್ಥಿತಿಯನ್ನು ಸಂಪೂರ್ಣವಾಗಿ ಊಹಿಸಲು ಸಾಧ್ಯವಿಲ್ಲ. ಶಾಲೆಗಳು ವಿರಳವಾಗಿದ್ದವು, ಶಿಕ್ಷಕರ ನೇಮಕಾತಿ ಬಹುತೇಕ ಅಸ್ತಿತ್ವದಲ್ಲಿರಲಿಲ್ಲ. ಯಾವ ಪೋಷಕರು ತಮ್ಮ ಮಗು ತಮ್ಮ ಸ್ವಂತ ರಾಜ್ಯದಲ್ಲಿ ಅಧ್ಯಯನ ಮಾಡಿ ಪ್ರಗತಿ ಹೊಂದಬೇಕೆಂದು ಬಯಸುವುದಿಲ್ಲ ಹೇಳಿ? ಆದರೂ ಸಂದರ್ಭಗಳಿಂದಾಗಿ, ಲಕ್ಷಾಂತರ ಮಕ್ಕಳು ಶಿಕ್ಷಣ ಹುಡುಕುತ್ತಾ ಬಿಹಾರ ತೊರೆದು ಬನಾರಸ್, ದೆಹಲಿ ಮತ್ತು ಮುಂಬೈನಂತಹ ನಗರಗಳಿಗೆ ವಲಸೆ ಹೋಗಬೇಕಾಯಿತು. ಅದು ಬಿಹಾರದ ಯುವಕರ ವಲಸೆಯ ನಿಜವಾದ ಆರಂಭವಾಗಿತ್ತು.
ಸ್ನೇಹಿತರೆ,
ಮರದ ಬೇರುಗಳು ಕೊಳೆತಾಗ ಅದನ್ನು ಪುನರುಜ್ಜೀವನಗೊಳಿಸಲು ಅಪಾರ ಪ್ರಯತ್ನದ ಅಗತ್ಯವಿದೆ. ಆರ್‌ಜೆಡಿ ಸರ್ಕಾರದ ದುರಾಡಳಿತವು ಬಿಹಾರವನ್ನು ನಿಖರವಾಗಿ ಅಂತಹ ಸ್ಥಿತಿಯಲ್ಲಿ ಬಿಟ್ಟಿತ್ತು. ಅದೃಷ್ಟವಶಾತ್, ಬಿಹಾರದ ಜನರು ಶ್ರೀ ನಿತೀಶ್ ಕುಮಾರ್ ಜಿ ಅವರಿಗೆ ಆಡಳಿತದ ಜವಾಬ್ದಾರಿ ವಹಿಸಿದರು, ಇಡೀ ಎನ್‌ಡಿಎ ತಂಡವು ರಾಜ್ಯದ ಹಳಿತಪ್ಪಿದ ವ್ಯವಸ್ಥೆಗಳನ್ನು ಮತ್ತೆ ಹಳಿಗೆ ತರಲು ಹೇಗೆ ಒಟ್ಟಾಗಿ ಕೆಲಸ ಮಾಡಿದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಇಂದಿನ ಕಾರ್ಯಕ್ರಮವು ಆ ಪರಿವರ್ತನೆಯ ಒಂದು ನೋಟವನ್ನು ನೀಡುತ್ತದೆ.
ಸ್ನೇಹಿತರೆ,
ಕೌಶಲ್ಯ ಘಟಿಕೋತ್ಸವದ ಈ ಸಂದರ್ಭದಲ್ಲಿ ಬಿಹಾರವು ಹೊಸ ಕೌಶಲ್ಯ ವಿಶ್ವವಿದ್ಯಾಲಯವನ್ನು ಹೊಂದಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಶ್ರೀ ನಿತೀಶ್ ಕುಮಾರ್ ಜಿ ನೇತೃತ್ವದಲ್ಲಿ ಬಿಹಾರ ಸರ್ಕಾರವು ಈ ವಿಶ್ವವಿದ್ಯಾಲಯಕ್ಕೆ ಭಾರತ ರತ್ನ, ಜನ್ ನಾಯಕ್ ಕರ್ಪೂರಿ ಠಾಕೂರ್ ಜಿ ಅವರ ಹೆಸರನ್ನು ಇಡಲಾಗಿದೆ. ಟ್ರೋಲಿಂಗ್‌ನಲ್ಲಿ ತೊಡಗಿರುವ ಯಾವುದೇ ಸಾಮಾಜಿಕ ಮಾಧ್ಯಮ ತಂಡವು ಕರ್ಪೂರಿ ಠಾಕೂರ್ ಜಿ ಅವರಿಗೆ ಜನ ನಾಯಕ, ಪೀಪಲ್ ಲೀಡರ್ ಎಂಬ ಬಿರುದು ನೀಡಲಿಲ್ಲ. ಆದರೆ ಅವರು ಬಿಹಾರದ ಪ್ರತಿಯೊಬ್ಬ ನಾಗರಿಕರ ಪ್ರೀತಿ ಮತ್ತು ಗೌರವದ ಮೂಲಕ ಜನನಾಯಕನ ಗೌರವ ಗಳಿಸಿದ್ದಾರೆ, ಅವರ ಸೇವೆ ಮತ್ತು ತ್ಯಾಗದ ಜೀವನವನ್ನು ನೋಡಿದ ನಂತರ ಅದನ್ನು ಜನರೇ ಅವರಿಗೆ ನೀಡಿದರು. ದಯವಿಟ್ಟು ಜಾಗರೂಕರಾಗಿರಿ ಎಂದು ಬಿಹಾರದ ಜನರಿಗೆ ನಾನು ಹೇಳಲು ಬಯಸುತ್ತೇನೆ. ಜನನಾಯಕ ಎಂಬ ಬಿರುದು ಕರ್ಪೂರಿ ಠಾಕೂರ್ ಜಿ ಅವರಿಗೆ ಸರಿಯಾಗಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಆ ಗೌರವ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಜನರು ಅವರಿಗೆ ನೀಡಿದ ಈ ಮನ್ನಣೆಯನ್ನು ಯಾರೂ ಕದಿಯದಂತೆ ನೋಡಿಕೊಳ್ಳಬೇಕೆಂದು ನಾನು ಬಿಹಾರದ ಜನರನ್ನು ಒತ್ತಾಯಿಸುತ್ತೇನೆ. ಭಾರತ ರತ್ನ ಕರ್ಪೂರಿ ಠಾಕೂರ್ ಜಿ ತಮ್ಮ ಇಡೀ ಜೀವನವನ್ನು ಸಮಾಜ ಸೇವೆಗೆ ಮತ್ತು ಶಿಕ್ಷಣ ಪ್ರಚಾರಕ್ಕೆ ಮುಡಿಪಾಗಿಟ್ಟರು. ಸಮಾಜದಲ್ಲಿ ಅತ್ಯಂತ ದುರ್ಬಲ ವ್ಯಕ್ತಿಯೂ ಪ್ರಗತಿ ಸಾಧಿಸಲು ಅನುವು ಮಾಡಿಕೊಡಬೇಕು ಎಂದು ಅವರು ನಿರಂತರವಾಗಿ ಒತ್ತಿ ಹೇಳಿದರು. ಅವರ ಗೌರವಾರ್ಥವಾಗಿ ಹೆಸರಿಸಲಾದ ಈ ಕೌಶಲ್ಯ ವಿಶ್ವವಿದ್ಯಾಲಯವು ಆ ಕನಸನ್ನು ನನಸಾಗಿಸಲು ಪ್ರಬಲ ಮಾಧ್ಯಮವಾಗಲಿದೆ.
ಸ್ನೇಹಿತರೆ,
ಎನ್.ಡಿ.ಎಯ ಡಬಲ್-ಎಂಜಿನ್ ಸರ್ಕಾರವು ಬಿಹಾರದ ಶಿಕ್ಷಣ ಸಂಸ್ಥೆಗಳನ್ನು ಆಧುನೀಕರಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಐ.ಐ.ಟಿ ಪಾಟ್ನಾದಲ್ಲಿ ಮೂಲಸೌಕರ್ಯ ವಿಸ್ತರಣೆ ಈಗಾಗಲೇ ಪ್ರಾರಂಭವಾಗಿದೆ. ಇಂದು ಸಹ, ಬಿಹಾರದಾದ್ಯಂತ ಹಲವಾರು ಪ್ರಮುಖ ಶಿಕ್ಷಣ ಸಂಸ್ಥೆಗಳು ಆಧುನೀಕರಣ ಪ್ರಕ್ರಿಯೆ ಪ್ರಾರಂಭಿಸಿವೆ. ಎನ್.ಐ.ಟಿ ಪಾಟ್ನಾದ ಬಿಹ್ತಾ ಕ್ಯಾಂಪಸ್ ಅನ್ನು ಈಗ ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ತೆರೆಯಲಾಗಿದೆ. ಹೆಚ್ಚುವರಿಯಾಗಿ, ಪಾಟ್ನಾ ವಿಶ್ವವಿದ್ಯಾಲಯ, ಭೂಪೇಂದ್ರ ಮಂಡಲ್ ವಿಶ್ವವಿದ್ಯಾಲಯ, ಛಪ್ರಾದಲ್ಲಿರುವ ಜೈ ಪ್ರಕಾಶ್ ವಿಶ್ವವಿದ್ಯಾಲಯ ಮತ್ತು ನಳಂದ ಮುಕ್ತ ವಿಶ್ವವಿದ್ಯಾಲಯದಲ್ಲಿ ಹೊಸ ಶೈಕ್ಷಣಿಕ ಮೂಲಸೌಕರ್ಯ ಸ್ಥಾಪಿಸಲಾಗಿದೆ.
ಸ್ನೇಹಿತರೆ,
ಉತ್ತಮ ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ಜತೆಗೆ, ಶ್ರೀ ನಿತೀಶ್ ಕುಮಾರ್ ಜಿ ನೇತೃತ್ವದ ಸರ್ಕಾರವು ಬಿಹಾರದ ಯುವಕರ ಮೇಲಿನ ಶಿಕ್ಷಣದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಶುಲ್ಕ ಪಾವತಿಸಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ, ಬಿಹಾರ ಸರ್ಕಾರವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಿದೆ. ಈಗ, ಈ ಕ್ರೆಡಿಟ್ ಕಾರ್ಡ್ ಯೋಜನೆಯಡಿ, ನೀಡಲಾಗುವ ಶಿಕ್ಷಣ ಸಾಲಗಳನ್ನು ಶೂನ್ಯಬಡ್ಡಿ ಆಗಿರುತ್ತವೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು 1,800 ರೂ.ನಿಂದ 3,600 ರೂ.ಗೆ ಹೆಚ್ಚಿಸಲಾಗಿದೆ.
ಸ್ನೇಹಿತರೆ,
ಇಂದು ಭಾರತವು ವಿಶ್ವದಲ್ಲೇ ಹೆಚ್ಚಿನ ಯುವ ಸಮುದಾಯ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ, ಬಿಹಾರವು ಜನಸಂಖ್ಯೆಯಲ್ಲಿ ಅತಿ ಹೆಚ್ಚಿನ ಯುವಕರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಆದ್ದರಿಂದ, ಬಿಹಾರದ ಯುವಕರ ಸಾಮರ್ಥ್ಯ ಬೆಳೆದಾಗ, ಅದು ಸ್ವಾಭಾವಿಕವಾಗಿ ಇಡೀ ರಾಷ್ಟ್ರದ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಹಾರದ ಯುವ ಪೀಳಿಗೆಯ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು ಎನ್.ಡಿ.ಎ ಸರ್ಕಾರವು ಸಂಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಿದೆ. ಆರ್.ಜೆ.ಡಿ-ಕಾಂಗ್ರೆಸ್ ಆಳ್ವಿಕೆಯ ಅವಧಿಗೆ ಹೋಲಿಸಿದರೆ, ಬಿಹಾರದ ಶಿಕ್ಷಣ ಬಜೆಟ್ ಹಲವು ಪಟ್ಟು ಹೆಚ್ಚಾಗಿದೆ. ಇಂದು ಬಿಹಾರದ ಬಹುತೇಕ ಪ್ರತಿಯೊಂದು ಹಳ್ಳಿಯೂ ಶಾಲೆಯನ್ನು ಹೊಂದಿದೆ. ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆಯೂ ಹಲವು ಪಟ್ಟು ಹೆಚ್ಚಾಗಿದೆ. ಇತ್ತೀಚೆಗೆ, ಕೇಂದ್ರ ಸರ್ಕಾರವು ಬಿಹಾರದ 19 ಜಿಲ್ಲೆಗಳಲ್ಲಿ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಿದೆ. ಒಂದು ಕಾಲದಲ್ಲಿ ಬಿಹಾರವು ಕ್ರೀಡೆಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯ ಹೊಂದಿರಲಿಲ್ಲ. ಆದರೆ ಇಂದು, ಬಿಹಾರದಲ್ಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.
ಸ್ನೇಹಿತರೆ,
ಕಳೆದ 2 ದಶಕಗಳಲ್ಲಿ, ಬಿಹಾರ ಸರ್ಕಾರವು ರಾಜ್ಯದೊಳಗೆ 50 ಲಕ್ಷ ಯುವಕರಿಗೆ ಉದ್ಯೋಗ ಒದಗಿಸಿದೆ. ಕಳೆದ ಕೆಲವು ವರ್ಷಗಳಲ್ಲಿ, ಬಿಹಾರದ ಯುವಕರಿಗೆ ಸುಮಾರು 10 ಲಕ್ಷ ಸುರಕ್ಷಿತ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದೆ. ಉದಾಹರಣೆಗೆ ಶಿಕ್ಷಣ ಇಲಾಖೆಯನ್ನೇ ತೆಗೆದುಕೊಳ್ಳಿ, ಉದಾಹರಣೆಗೆ ಶಿಕ್ಷಕರ ನೇಮಕಾತಿ ಅಭೂತಪೂರ್ವ ಪ್ರಮಾಣದಲ್ಲಿ ನಡೆದಿದೆ. ಕಳೆದ 2 ವರ್ಷಗಳಲ್ಲಿ, ಬಿಹಾರದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನು ನೇಮಿಸಲಾಗಿದೆ. ಇದು ಯುವಜನರಿಗೆ ಉದ್ಯೋಗ ಒದಗಿಸುವುದಲ್ಲದೆ, ರಾಜ್ಯದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನು ಹೆಚ್ಚಿಸಿದೆ.
ಸ್ನೇಹಿತರೆ,
ಬಿಹಾರ ಸರ್ಕಾರವು ಈಗ ಇನ್ನೂ ಹೆಚ್ಚಿನ ಗುರಿಗಳತ್ತ ಕೆಲಸ ಮಾಡುತ್ತಿದೆ. ಶ್ರೀ ನಿತೀಶ್ ಕುಮಾರ್ ಜಿ ಅವರು ತಮ್ಮ ಭಾಷಣದಲ್ಲಿ ಹೇಳಿದಂತೆ, ಕಳೆದ 20 ವರ್ಷಗಳಲ್ಲಿ ಸೃಜಿಸಲಾದ ಉದ್ಯೋಗಗಳ ಸಂಖ್ಯೆಗಿಂತ ಮುಂದಿನ 5 ವರ್ಷಗಳಲ್ಲಿ ದುಪ್ಪಟ್ಟು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಬಿಹಾರದ ಯುವಕರು ಬಿಹಾರದಲ್ಲೇ ಉದ್ಯೋಗ ಕಂಡುಕೊಳ್ಳಬೇಕು, ಉದ್ಯೋಗ ಮತ್ತು ಪ್ರಗತಿಗೆ ಅವಕಾಶಗಳು ಅವರ ಸ್ವಂತ ತಾಯ್ನಾಡಿನಲ್ಲಿ ಅವರಿಗೆ ಲಭ್ಯವಿರಬೇಕು ಎಂಬುದು ಸ್ಪಷ್ಟವಾಗಿದೆ.
ಸ್ನೇಹಿತರೆ,
ಇದು ಬಿಹಾರದ ಯುವಕರಿಗೆ ಡಬಲ್ ಬೋನಸ್‌ನ ಸಮಯ. ಪ್ರಸ್ತುತ, ದೇಶವು ಜಿ.ಎಸ್.ಟಿ ಉಳಿತಾಯ ಹಬ್ಬವನ್ನು ಆಚರಿಸುತ್ತಿದೆ. ಮೋಟಾರ್‌ಬೈಕ್‌ಗಳು ಮತ್ತು ಸ್ಕೂಟರ್‌ಗಳ ಮೇಲಿನ ಜಿ.ಎಸ್.ಟಿ ಕಡಿತವು ಬಿಹಾರದ ಯುವಜನರಿಗೆ ಬಹಳ ಸಂತೋಷ ತಂದಿದೆ ಎಂದು ಯಾರೋ ನನಗೆ ಹೇಳಿದರು. ಈ ಧನ್‌ತೇರಸ್‌ನಲ್ಲಿ ಅನೇಕರು ಅವುಗಳನ್ನು ಖರೀದಿಸಲು ಯೋಜಿಸಿದ್ದಾರೆ. ಬಿಹಾರದ ಯುವಕರು ಮತ್ತು ಇಡೀ ರಾಷ್ಟ್ರಕ್ಕೆ ಅಗತ್ಯವಾದ ಹೆಚ್ಚಿನ ವಸ್ತುಗಳ ಮೇಲಿನ ಜಿ.ಎಸ್.ಟಿ ಕಡಿತಗೊಳಿಸಿದ್ದಕ್ಕಾಗಿ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಕೌಶಲ್ಯ ಅಭಿವೃದ್ಧಿಯಾದಾಗ ರಾಷ್ಟ್ರವು ಸ್ವಾವಲಂಬಿಯಾಗುತ್ತದೆ, ರಫ್ತು ಹೆಚ್ಚಾಗುತ್ತದೆ ಮತ್ತು ಉದ್ಯೋಗಾವಕಾಶಗಳು ವಿಸ್ತರಿಸುತ್ತವೆ. 2014ಕ್ಕಿಂತ ಮೊದಲು, ಭಾರತವು ಬೆಳವಣಿಗೆ ನಿಧಾನವಾಗಿದ್ದ ಮತ್ತು ಉದ್ಯೋಗ ಸೃಷ್ಟಿ ದುರ್ಬಲವಾಗಿದ್ದ ದುರ್ಬಲ 5 ಆರ್ಥಿಕತೆಗಳಲ್ಲಿ ಒಂದಾಗಿತ್ತು. ಇಂದು ಭಾರತವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗುವತ್ತ ಸ್ಥಿರವಾಗಿ ಸಾಗುತ್ತಿದೆ. ಇದು ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಏರಿಕೆಯನ್ನು ಸೂಚಿಸುತ್ತದೆ. ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್‌ಗಳು ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಉತ್ಪಾದನೆ ಮತ್ತು ರಫ್ತುಗಳಲ್ಲಿ ಹಿಂದೆಂದೂ ಕಾಣದ ಬೆಳವಣಿಗೆ ಕಂಡುಬಂದಿದೆ. ದೊಡ್ಡ ಕೈಗಾರಿಕೆಗಳಿಂದ ಹಿಡಿದು ನಮ್ಮ ಎಂ.ಎಸ್.ಎಂ.ಇವರೆಗೆ, ಗಮನಾರ್ಹ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಈ ಎಲ್ಲಾ ಬೆಳವಣಿಗೆಗಳು ನಮ್ಮ ಯುವಕರಿಗೆ, ವಿಶೇಷವಾಗಿ ಐ.ಟಿ.ಐಗಳಿಂದ ನುರಿತ ತರಬೇತಿ ಪಡೆಯುವವರಿಗೆ ಹೆಚ್ಚಿನ ಪ್ರಯೋಜನ ನೀಡಿವೆ. ಮುದ್ರಾ ಯೋಜನೆಯು ಕೋಟ್ಯಂತರ ಯುವಜನರು ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಸಬಲೀಕರಣಗೊಳಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು 1 ಲಕ್ಷ ಕೋಟಿ ರೂಪಾಯಿ ಹಂಚಿಕೆಯೊಂದಿಗೆ ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್‌ಗಾರ್ ಯೋಜನೆ ಪ್ರಾರಂಭಿಸಿತು. ಈ ಉಪಕ್ರಮವು ಸುಮಾರು 3.5 ಕೋಟಿ ಯುವ ಭಾರತೀಯರು ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ.
ಸ್ನೇಹಿತರೆ,
ಇದು ದೇಶದ ಪ್ರತಿಯೊಬ್ಬ ಯುವಕನಿಗೆ ಅವಕಾಶಗಳಿಂದ ತುಂಬಿದ ಸಮಯ. ಜೀವನದಲ್ಲಿ ಅನೇಕ ವಿಷಯಗಳಿಗೆ ಪರ್ಯಾಯಗಳಿರಬಹುದು ಆದರೆ ಕೌಶಲ್ಯ, ನಾವೀನ್ಯತೆ ಮತ್ತು ಕಠಿಣ ಪರಿಶ್ರಮಕ್ಕೆ ಪರ್ಯಾಯವಿಲ್ಲ. ಈ ಎಲ್ಲಾ ಗುಣಗಳು ಭಾರತದ ಯುವಕರಲ್ಲಿವೆ. ನಿಮ್ಮ ಸಾಮೂಹಿಕ ಶಕ್ತಿಯೇ ವಿಕಸಿತ ಭಾರತದ ಪ್ರೇರಕ ಶಕ್ತಿಯಾಗುತ್ತದೆ. ಈ ದೃಢ ನಂಬಿಕೆಯೊಂದಿಗೆ ಮತ್ತು ದೇಶಾದ್ಯಂತ ಲಕ್ಷಾಂತರ ಐ.ಟಿ.ಐ ಪ್ರಶಿಕ್ಷಣಾರ್ಥಿಗಳು ಇಂದು ನನ್ನೊಂದಿಗೆ ಸಂಪರ್ಕ ಹೊಂದಿದ್ದಾರೆ, ರಾಜ್ಯ ಸರ್ಕಾರವು ಪ್ರಾರಂಭಿಸಿದ ಹಲವಾರು ಹೊಸ ಉಡುಗೊರೆಗಳು ಮತ್ತು ಉಪಕ್ರಮಗಳಿಗಾಗಿ ಬಿಹಾರದ ಎಲ್ಲಾ ಯುವಕರಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ನನ್ನ ಧನ್ಯವಾದಗಳು.
****
(Release ID: 2175020)
Visitor Counter : 8