ಪ್ರಧಾನ ಮಂತ್ರಿಯವರ ಕಛೇರಿ
ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ ಚಾಲನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ವಿಡಿಯೋ ಕಾನ್ಫರೆನ್ಸಿಂಗ್ ಭಾಷಣ
Posted On:
26 SEP 2025 2:38PM by PIB Bengaluru
ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು!
ಇಂದು ನವರಾತ್ರಿಯ ಈ ಪವಿತ್ರ ದಿನಗಳಲ್ಲಿ, ಬಿಹಾರದ ಮಹಿಳಾ ಶಕ್ತಿಯೊಂದಿಗೆ ಸಂತೋಷದಿಂದ ಸೇರಲು ನನಗೆ ಅವಕಾಶ ಸಿಕ್ಕಿದೆ. ನಾನು ಇಲ್ಲಿ ಪರದೆಯನ್ನು ನೋಡುತ್ತಿದ್ದೆ, ಲಕ್ಷಾಂತರ ಮಹಿಳೆಯರು ಮತ್ತು ಸಹೋದರಿಯರು ಕಾಣುತ್ತಿದ್ದಾರೆ. ಈ ಪವಿತ್ರ ನವರಾತ್ರಿ ಹಬ್ಬದ ಸಮಯದಲ್ಲಿ ನಿಮ್ಮೆಲ್ಲರ ಆಶೀರ್ವಾದಗಳು ನಮಗೆಲ್ಲರಿಗೂ ದೊಡ್ಡ ಶಕ್ತಿಯಾಗಿದೆ. ನಾನು ಇಂದು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಇಂದಿನಿಂದ "ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ"ಯನ್ನು ಪ್ರಾರಂಭಿಸಲಾಗುತ್ತಿದೆ. ನನಗೆ ತಿಳಿದುಬಂದಂತೆ, ಇಲ್ಲಿಯವರೆಗೆ 75 ಲಕ್ಷ ಸಹೋದರಿಯರು ಈ ಯೋಜನೆಗೆ ಸೇರಿದ್ದಾರೆ. ಈಗ ಈ 75 ಲಕ್ಷ ಸಹೋದರಿಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ಹಣವನ್ನು ಏಕಕಾಲದಲ್ಲಿ ಕಳುಹಿಸಲಾಗಿದೆ.
ಸ್ನೇಹಿತರೆ,
ಈ ಕಾರ್ಯಕ್ರಮ ನಡೆಯುತ್ತಿರುವಾಗ, ನಾನು ಕುಳಿತು 2 ವಿಷಯಗಳ ಬಗ್ಗೆ ಯೋಚಿಸುತ್ತಿದ್ದೆ. ಮೊದಲನೆಯದಾಗಿ, ಇಂದು ನಿತೀಶ್ ಜಿ ಸರ್ಕಾರವು ಬಿಹಾರದ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗಾಗಿ ನಿಜವಾಗಿಯೂ ದೊಡ್ಡ ಮತ್ತು ಮಹತ್ವದ ಹೆಜ್ಜೆ ಇಟ್ಟಿದೆ. ಒಬ್ಬ ಸಹೋದರಿ ಅಥವಾ ಮಗಳು ಉದ್ಯೋಗಿ ಅಥವಾ ಸ್ವಯಂ-ಉದ್ಯೋಗಿಯಾದಾಗ, ಅವರ ಕನಸುಗಳಿಗೆ ಹೊಸ ರೆಕ್ಕೆಪುಕ್ಕಗಳು ಬರುತ್ತವೆ, ಸಮಾಜದಲ್ಲಿ ಅವರ ಗೌರವ ಹೆಚ್ಚಾಗುತ್ತದೆ. ನನ್ನ ಮನಸ್ಸಿಗೆ ಬಂದ ಎರಡನೆಯ ವಿಷಯವೆಂದರೆ, 11 ವರ್ಷಗಳ ಹಿಂದೆ ನೀವು ನನ್ನನ್ನು ಪ್ರಧಾನ ಸೇವಕನಾಗಿ ನಿಮಗೆ ಸೇವೆ ಸಲ್ಲಿಸಲು ನೇಮಿಸಿದಾಗ ನಾವು ಜನ್ ಧನ್ ಯೋಜನೆಯ ಸಂಕಲ್ಪ ತೆಗೆದುಕೊಳ್ಳದಿದ್ದರೆ, ದೇಶವು ಜನ್ ಧನ್ ಯೋಜನೆಯಡಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳ 30 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯದಿದ್ದರೆ, ಈ ಬ್ಯಾಂಕ್ ಖಾತೆಗಳನ್ನು ನಿಮ್ಮ ಮೊಬೈಲ್ ಮತ್ತು ಆಧಾರ್‌ಗೆ ಲಿಂಕ್ ಮಾಡದಿದ್ದರೆ, ಇಂದು ನಾವು ನಿಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಇಷ್ಟೊಂದು ಹಣ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ, ಇದು ಸಂಭವಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಮೊದಲು ಒಬ್ಬ ಪ್ರಧಾನಿ ಹೇಳಿದ್ದರು, ಈ ದಿನಗಳಲ್ಲಿ ನಡೆಯುತ್ತಿರುವ ಈ ಲೂಟಿಯ ಮಾತು, ಹಿಂದೆ ಒಬ್ಬ ಪ್ರಧಾನಿ ಹೇಳಿದ್ದರು, ಆ ಸಮಯದಲ್ಲಿ ಅವರು ಹೇಳುತ್ತಿದ್ದರು, ದೆಹಲಿಯಿಂದ ಒಂದು ರೂಪಾಯಿ ಕಳುಹಿಸಿದರೆ, ಅದು ಪಂಚಾಯಿತಿಗೆ ಹೋಗುವಷ್ಟರಲ್ಲಿ ಕೇವಲ 15 ಪೈಸೆ ತಲುಪುತ್ತದೆ, ಮಧ್ಯವರ್ತಿಗಳಜೇಬಿಗೆ 85 ಪೈಸೆ ಹೋಗುತ್ತಿತ್ತು. ಆದರೆ ಇಂದು ಕಳುಹಿಸುತ್ತಿರುವ ಹಣ, ಸಂಪೂರ್ಣ 10 ಸಾವಿರ ರೂಪಾಯಿ ನಿಮ್ಮ ಖಾತೆಗೆ ಜಮಾ ಆಗುತ್ತಿದೆ, ಯಾರು ಸಹ ಒಂದು ರೂಪಾಯಿ ಕದಿಯಲು ಸಾಧ್ಯವಿಲ್ಲ. ಈ ಮೊದಲು ಲೂಟಿಯಾಗುತ್ತಿದ್ದ ಈ ಹಣದಿಂದ ನಿಮಗೆ ಎಂತಹ ದೊಡ್ಡ ಅನ್ಯಾಯವಾಗುತ್ತಿತ್ತು.
ಸ್ನೇಹಿತರೆ,
ಒಬ್ಬ ಸಹೋದರನು ತನ್ನ ಸಹೋದರಿ ಆರೋಗ್ಯವಾಗಿ, ಸಂತೋಷವಾಗಿದ್ದಾಗ ಮತ್ತು ಅವಳ ಕುಟುಂಬವು ಆರ್ಥಿಕವಾಗಿ ಬಲವಾಗಿದ್ದಾಗ ಸಂತೋಷಪಡುತ್ತಾನೆ, ಇದಕ್ಕಾಗಿ ಸಹೋದರನು ತನ್ನಿಂದ ಸಾಧ್ಯವಾದಷ್ಟು ಮಾಡುತ್ತಾನೆ. ಇಂದು ನಿಮ್ಮ ಇಬ್ಬರು ಸಹೋದರರಾದ ನರೇಂದ್ರ ಮತ್ತು ನಿತೀಶ್ ಜಿ, ನಿಮ್ಮ ಸೇವೆ, ಸಮೃದ್ಧಿ ಮತ್ತು ನಿಮ್ಮ ಸ್ವಾಭಿಮಾನಕ್ಕಾಗಿ ನಿರಂತರವಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿನ ಕಾರ್ಯಕ್ರಮವು ಇದಕ್ಕೆ ಒಂದು ಉದಾಹರಣೆಯಾಗಿದೆ.
ತಾಯಂದಿರೆ, ಸಹೋದರಿಯರೆ,
ಈ ಯೋಜನೆಯ ಬಗ್ಗೆ ನನಗೆ ಹೇಳಿದಾಗ, ಅದರ ದೃಷ್ಟಿಕೋನದಿಂದ ನಾನು ತುಂಬಾ ಪ್ರಭಾವಿತನಾದೆ. ಪ್ರತಿ ಕುಟುಂಬದಿಂದ ಒಬ್ಬ ಮಹಿಳೆ ಖಂಡಿತವಾಗಿಯೂ ಈ ಯೋಜನೆಯ ಲಾಭ ಪಡೆಯುತ್ತಾಳೆ. ಆರಂಭಿಕ 10 ಸಾವಿರ ರೂಪಾಯಿ ನಂತರ, ಮಹಿಳೆ ಈ 10 ಸಾವಿರ ರೂಪಾಯಿ ಬುದ್ಧಿವಂತಿಕೆಯಿಂದ ಬಳಸಿದರೆ, ಸ್ವಲ್ಪ ಉದ್ಯೋಗ ಸೃಷ್ಟಿಸಿದರೆ, ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಲು ವ್ಯವಹಾರ ಪ್ರಾರಂಭಿಸಿದರೆ ಮತ್ತು ಅದು ಯಶಸ್ವಿಯಾದರೆ, ಅವರಿಗೆ 2 ಲಕ್ಷ ರೂಪಾಯಿ ತನಕ ಹೆಚ್ಚುವರಿ ಆರ್ಥಿಕ ಸಹಾಯ ನೀಡಬಹುದು. ಯೋಚಿಸಿ, ಇದು ನಿಮಗೆ ಎಂತಹ ಮಹತ್ವದ ಸಾಧನೆಯಾಗಿದೆ. ಕಾರ್ಪೊರೇಟ್ ಜಗತ್ತಿನಲ್ಲಿ ಇದನ್ನು ಮೂಲಧನ ಎಂದು ಕರೆಯಲಾಗುತ್ತದೆ. ಈ ಯೋಜನೆಯ ಸಹಾಯದಿಂದ, ಬಿಹಾರದ ನನ್ನ ಸಹೋದರಿಯರು ದಿನಸಿ, ಪಾತ್ರೆಗಳು, ಸೌಂದರ್ಯವರ್ಧಕಗಳು, ಆಟಿಕೆಗಳು, ಲೇಖನ ಸಾಮಗ್ರಿಗಳು ಮುಂತಾದ ವಿವಿಧ ಸಣ್ಣ ಅಂಗಡಿಗಳನ್ನು ತೆರೆಯಬಹುದು, ತಮ್ಮದೇ ಆದ ವ್ಯವಹಾರ ಮಾಡಬಹುದು. ಅವರು ಹಸು ಸಾಕಣೆ, ಕೋಳಿ ಸಾಕಣೆ, ಮೀನು ಸಾಕಣೆ, ಮೇಕೆ ಸಾಕಣೆ ಮಾಡಬಹುದು. ಅವರು ಅಂತಹ ಅನೇಕ ವ್ಯವಹಾರಗಳಲ್ಲಿ ಪ್ರಗತಿ ಸಾಧಿಸಬಹುದು. ಇವೆಲ್ಲಕ್ಕೂ ತರಬೇತಿಯ ಅಗತ್ಯವಿರುತ್ತದೆ. ಈಗ ನೀವು ಹಣ ಸ್ವೀಕರಿಸಿದ್ದೀರಿ ಎಂದು ಭಾವಿಸಬಹುದು, ಆದರೆ ನೀವು ನಿಜವಾಗಿಯೂ ಅದನ್ನು ಹೇಗೆ ಮಾಡುತ್ತೀರಿ? ಆದ್ದರಿಂದ, ನಾನು ನಿಮಗೆ ಭರವಸೆ ನೀಡುತ್ತೇನೆ, ನಿಮಗೆ ಹಣ ನೀಡುವುದರ ಜತೆಗೆ, ನಿಮಗೆ ಅದಕ್ಕಾಗಿ ತರಬೇತಿಯನ್ನು ಸಹ ನೀಡಲಾಗುವುದು. ನಿಮಗೆ ಹೇಗೆ ಕೆಲಸ ಮಾಡಬೇಕೆಂದು ಕಲಿಸಲಾಗುತ್ತದೆ. ಬಿಹಾರದಲ್ಲಿ ಜೀವಿಕಾ ಸ್ವಸಹಾಯ ಗುಂಪಿನ ಅದ್ಭುತ ವ್ಯವಸ್ಥೆ ಈಗಾಗಲೇ ಅಸ್ತಿತ್ವದಲ್ಲಿದೆ. ಸುಮಾರು 11 ಲಕ್ಷ ಸ್ವಸಹಾಯ ಗುಂಪುಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ, ಅಂದರೆ ಸುಸ್ಥಾಪಿತ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಈ ತಿಂಗಳ ಆರಂಭದಲ್ಲಿ, ಜೀವಿಕಾ ನಿಧಿ ಸಖ್ ಸಹಕಾರಿ ಸಂಘ (ಕ್ರೆಡಿಟ್ ಕೋ-ಆಪರೇಟಿವ್ ಯೂನಿಯನ್) ಪ್ರಾರಂಭಿಸುವ ಅವಕಾಶ ನನಗೆ ಸಿಕ್ಕಿತು. ಈಗ ಈ ವ್ಯವಸ್ಥೆಯ ಬಲವು ಮುಖ್ಯಮಂತಿ ಮಹಿಳಾ ರೋಜ್‌ಗಾರ್ ಯೋಜನೆಯೊಂದಿಗೆ ಸಂಪರ್ಕ ಹೊಂದಿದೆ. ಅಂದರೆ, ಇದರ ಪ್ರಾರಂಭದೊಂದಿಗೆ ಈ ಯೋಜನೆ ಬಿಹಾರದಾದ್ಯಂತ, ಬಿಹಾರದ ಪ್ರತಿಯೊಂದು ಮೂಲೆಯಲ್ಲಿ ಮತ್ತು ಪ್ರತಿ ಕುಟುಂಬದಲ್ಲಿ ಪರಿಣಾಮಕಾರಿಯಾಗಲಿದೆ.
ಸ್ನೇಹಿತರೆ,
ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯು ಕೇಂದ್ರ ಸರ್ಕಾರದ ಲಖ್‌ಪತಿ ದೀದಿ ಅಭಿಯಾನಕ್ಕೆ ಹೊಸ ಉತ್ತೇಜನ ನೀಡಿದೆ. ಕೇಂದ್ರ ಸರ್ಕಾರವು ದೇಶದಲ್ಲಿ 3 ಕೋಟಿ ಲಖ್‌ಪತಿ ದೀದಿಗಳನ್ನು ರೂಪಿಸುವ ಗುರಿ ಹೊಂದಿದೆ. ಇಲ್ಲಿಯವರೆಗೆ 2 ಕೋಟಿಗೂ ಹೆಚ್ಚು ಸಹೋದರಿಯರು ಲಖ್‌ಪತಿ ದೀದಿಗಳಾಗಿದ್ದಾರೆ. ನಾನು ಗ್ರಾಮೀಣ ಮಹಿಳೆಯರ ಬಗ್ಗೆ ಮಾತನಾಡುತ್ತಿದ್ದೇನೆ. ಅವರ ಕಠಿಣ ಪರಿಶ್ರಮದಿಂದಾಗಿ ಹಳ್ಳಿಗಳು ಬದಲಾಗಿವೆ. ಸಮಾಜ ಬದಲಾಗಿದೆ ಮತ್ತು ಕುಟುಂಬದ ಸ್ಥಿತಿಯೂ ಬದಲಾಗಿದೆ. ಬಿಹಾರದಲ್ಲಿಯೂ ಸಹ, ಲಕ್ಷಾಂತರ ಮಹಿಳೆಯರು ಲಖ್‌ಪತಿ ದೀದಿಗಳಾಗಿದ್ದಾರೆ. ಬಿಹಾರದ ಡಬಲ್-ಎಂಜಿನ್ ಸರ್ಕಾರವು ಈ ಯೋಜನೆಯನ್ನು ಮುನ್ನಡೆಸುತ್ತಿರುವ ರೀತಿಯನ್ನು ನೋಡಿದರೆ, ಭಾರತದಲ್ಲಿ ಎಲ್ಲಿಯಾದರೂ ಅತಿ ಹೆಚ್ಚು ಲಕ್ಷಪತಿ ದೀದಿಗಳು ಇದ್ದರೆ, ಇಂದು ನನ್ನ ಸ್ವಂತ ಬಿಹಾರದಲ್ಲಿಯೇ ಅತಿ ಹೆಚ್ಚು ಲಕ್ಷಪತಿ ದೀದಿಗಳು ಇರುವ ದಿನ ದೂರವಿಲ್ಲ ಎಂದು ನಾನು ದೃಢವಾಗಿ ನಂಬುತ್ತೇನೆ.
ತಾಯಂದಿರೆ, ಸಹೋದರಿಯರೆ,
ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಡ್ರೋನ್ ದೀದಿ ಅಭಿಯಾನ, ಬಿಮಾ ಸಖಿ ಅಭಿಯಾನ ಮತ್ತು ಬ್ಯಾಂಕ್ ದೀದಿ ಅಭಿಯಾನಗಳು ನಿಮಗೆ ಉದ್ಯೋಗ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತಿವೆ. ನಮ್ಮ ಗುರಿ ಒಂದೇ, ಇಂದು ನಾವು ಒಂದೇ ಒಂದು ಗುರಿಯೊಂದಿಗೆ ಮುಂದುವರಿಯುತ್ತಿದ್ದೇವೆ - ನಿಮ್ಮ ಕನಸುಗಳು ನನಸಾಗಬೇಕು, ನಿಮ್ಮ ಕುಟುಂಬದ ಕನಸುಗಳನ್ನು ನನಸಾಗಿಸಬೇಕು, ನಿಮ್ಮ ಮನಸ್ಸಿನಲ್ಲಿರುವ ಉಜ್ವಲ ಭವಿಷ್ಯ, ನಿಮ್ಮ ಮಕ್ಕಳಿಗಾಗಿ ಗರಿಷ್ಠ ಅವಕಾಶಗಳನ್ನು ಪಡೆಯಬೇಕು.
ಸ್ನೇಹಿತರೆ,
ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳಿಂದಾಗಿ, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗಾಗಿ ಹೊಸ ವಲಯಗಳು ತೆರೆದುಕೊಳ್ಳುತ್ತಿವೆ. ಇಂದು ನಮ್ಮ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಮತ್ತು ಪೊಲೀಸ್ ಸೇರುತ್ತಿದ್ದಾರೆ, ಪ್ರತಿಯೊಬ್ಬ ಮಹಿಳೆಯೂ ಹೆಮ್ಮೆಪಡುತ್ತಾರೆ, ಇಂದು ನಮ್ಮ ಹೆಣ್ಣು ಮಕ್ಕಳು ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ.
ಆದರೆ ಸ್ನೇಹಿತರೆ,
ಬಿಹಾರದಲ್ಲಿ ಆರ್‌ಜೆಡಿ ಸರ್ಕಾರ ಇದ್ದ, ದುರಾಡಳಿತ ಇದ್ದ ಆ ದಿನಗಳನ್ನು ನಾವು ಮರೆಯಬಾರದು. ಆ ಸಮಯದಲ್ಲಿ, ನನ್ನ ಬಿಹಾರದ ತಾಯಂದಿರು ಮತ್ತು ಸಹೋದರಿಯರು, ಇಲ್ಲಿನ ಮಹಿಳೆಯರು, ಅರಾಜಕತೆ ಮತ್ತು ಭ್ರಷ್ಟಾಚಾರದಿಂದ ಹೆಚ್ಚು ಬಳಲುತ್ತಿದ್ದರು. ಬಿಹಾರದ ಪ್ರಮುಖ ರಸ್ತೆಗಳು ಹಾಳಾಗಿದ್ದ ಆ ದಿನಗಳಲ್ಲಿ, ಸೇತುವೆಗಳು ಇರಲಿಲ್ಲ. ನಂತರ ಅದರಿಂದ ಹೆಚ್ಚು ಬಳಲಿದವರು, ಅಂತಹ ತೊಂದರೆಗಳು ಎದುರಾದಾಗ ಈ ಎಲ್ಲಾ ತೊಂದರೆಗಳಿಂದ ಮೊದಲು ಬಳಲಿದವರು ನಮ್ಮ ಮಹಿಳೆಯರು, ನಮ್ಮ ತಾಯಂದಿರು ಮತ್ತು ಸಹೋದರಿಯರು ಎಂದು ನಮಗೆಲ್ಲರಿಗೂ ತಿಳಿದಿದೆ. ಪ್ರವಾಹದ ಸಮಯದಲ್ಲಿ ಈ ಪರಿಸ್ಥಿತಿ ಹೇಗೆ ಹದಗೆಟ್ಟಿತು ಎಂದು ನಿಮಗೆ ತಿಳಿದಿದೆ. ಗರ್ಭಿಣಿಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಲು ಸಾಧ್ಯವಾಗಲಿಲ್ಲ. ಗಂಭೀರ ಸ್ಥಿತಿಯಲ್ಲಿ, ಅವರಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಈ ಕಷ್ಟಕರ ಸಂದರ್ಭಗಳನ್ನು ನಿವಾರಿಸಲು ನಮ್ಮ ಸರ್ಕಾರ ಹಗಲಿರುಳು ಶ್ರಮಿಸಿದೆ. ನೀವು ಈ ಸಮಸ್ಯೆಗಳಿಂದ ಹೊರಬರಬೇಕೆಂದು ನಾವು ಬಯಸುತ್ತೇವೆ, ಇಂದು ನಾವು ಅದನ್ನು ಮಾಡಲು ಸಾಧ್ಯವಾಗಿದೆ. ಡಬಲ್-ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬಿಹಾರದಲ್ಲಿ ರಸ್ತೆಗಳನ್ನು ನಿರ್ಮಿಸಲು ಪ್ರಾರಂಭಿಸಿರುವುದನ್ನು ನೀವು ನೋಡಿದ್ದೀರಿ. ಇಂದಿಗೂ ನಾವು ಬಿಹಾರದಲ್ಲಿ ಸಂಪರ್ಕ ಸುಧಾರಿಸುವಲ್ಲಿ ತೊಡಗಿಸಿಕೊಂಡಿದ್ದೇವೆ, ಇದರಿಂದಾಗಿ ಬಿಹಾರದ ಮಹಿಳೆಯರು ಸಾಕಷ್ಟು ಅನುಕೂಲ ಪಡೆಯಲು ಪ್ರಾರಂಭಿಸಿದ್ದಾರೆ.
ತಾಯಂದಿರೆ, ಸಹೋದರಿಯರೆ,
ಈ ದಿನಗಳಲ್ಲಿ ಬಿಹಾರದಲ್ಲಿ ಒಂದು ಪ್ರದರ್ಶನ ಆಯೋಜಿಸಲಾಗುತ್ತಿದೆ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ತಾಯಂದಿರು ಮತ್ತು ಸಹೋದರಿಯರು ಈ ಪ್ರದರ್ಶನಕ್ಕೆ ಭೇಟಿ ನೀಡಲೇಬೇಕು ಎಂದು ನಾನು ಖಂಡಿತವಾಗಿಯೂ ಹೇಳುತ್ತೇನೆ. ಹಳೆಯ ಪತ್ರಿಕೆಗಳ ಮುಖ್ಯಾಂಶಗಳನ್ನು ಈ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿದೆ. ನಾವು ಅವುಗಳನ್ನು ಓದಿದಾಗ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪರಿಸ್ಥಿತಿ ಎಷ್ಟು ಕೆಟ್ಟದಾತ್ತು ಎಂದು ಅರ್ಥವಾಗದಿರಬಹುದು. ವೃದ್ಧರು ಇದನ್ನು ಓದಿದಾಗ, ಅವರಿಗೂ ಅದು ಅನಿಸುತ್ತದೆ, ಆರ್‌ಜೆಡಿ ಆಳ್ವಿಕೆಯಲ್ಲಿ ಬಿಹಾರದಲ್ಲಿ ಯಾವ ರೀತಿಯ ಭಯವಿತ್ತು, ಯಾವುದೇ ಮನೆ ಸುರಕ್ಷಿತವಾಗಿರಲಿಲ್ಲ ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ನಕ್ಸಲೈಟ್ ಹಿಂಸಾಚಾರದ ಭಯೋತ್ಪಾದನೆ ವ್ಯಾಪಕವಾಗಿತ್ತು. ಮಹಿಳೆಯರು ಹೆಚ್ಚು ನೋವು ಸಹಿಸಿಕೊಳ್ಳಬೇಕಾಯಿತು. ಬಡವರಿಂದ ಹಿಡಿದು ವೈದ್ಯರು ಮತ್ತು ಐಎಎಸ್ ಕುಟುಂಬಗಳವರೆಗೆ, ಆರ್‌ಜೆಡಿ ನಾಯಕರ ದೌರ್ಜನ್ಯದಿಂದ ಯಾರೂ ಪಾರಾಗಲಿಲ್ಲ.
ಸ್ನೇಹಿತರೆ,
ಇಂದು ನಿತೀಶ್ ಜಿ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಮರಳಿದಾಗ, ನನ್ನ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು ಮತ್ತು ಮಹಿಳೆಯರು ಅತ್ಯಂತ ದೊಡ್ಡ ಪರಿಹಾರ ಅನುಭವಿಸಿದ್ದಾರೆ. ಇಂದು ಬಿಹಾರದ ಹೆಣ್ಣು ಮಕ್ಕಳು ಭಯವಿಲ್ಲದೆ ತಮ್ಮ ಮನೆಗಳನ್ನು ತೊರೆಯುತ್ತಾರೆ. ನಾನು ಸಂವಾದದ ವೇಳೆ ನಾಲ್ವರು ಸಹೋದರಿಯರ ಮಾತುಗಳನ್ನು ಕೇಳಿದೆ. ಸಹೋದರಿ ರಂಜಿತಾ ಜಿ, ಸಹೋದರಿ ರೀತಾ ಜಿ, ನೂರ್ ಜಹಾನ್ ಬಾನು ಮತ್ತು ನಮ್ಮ ಪುತುಲ್ ದೇವಿ ಜಿ ಅವರು ಸ್ವಂತ ದುಡಿಮೆಯ ಬಗ್ಗೆ ಆತ್ಮವಿಶ್ವಾಸದಿಂದ ವಿಷಯಗಳನ್ನು ಹೇಳಿದ ರೀತಿ. ತಡರಾತ್ರಿಯಾದರೂ ಅವರು ಎಲ್ಲಿಯೂ ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ. ನಾನು ಬಿಹಾರಕ್ಕೆ ಬಂದಾಗಲೆಲ್ಲಾ, ಇಷ್ಟೊಂದು ದೊಡ್ಡ ಸಂಖ್ಯೆಯ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸಿರುವುದನ್ನು ನೋಡಿ ನನಗೆ ತುಂಬಾ ತೃಪ್ತಿಯಾಗಿದೆ. ಆದ್ದರಿಂದ, ಇಂದು ನಾವೆಲ್ಲರೂ ಒಟ್ಟಾಗಿ ಬಿಹಾರವನ್ನು ಮತ್ತೆ ಆ ಕತ್ತಲೆಗೆ ಹೋಗಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕಾಗಿದೆ. ತಾಯಂದಿರೆ ಮತ್ತು ಸಹೋದರಿಯರೆ, ದಯವಿಟ್ಟು ನನ್ನ ಈ ಮಾತುಗಳನ್ನು ಬರೆಯಿರಿ, ನಮ್ಮ ಮಕ್ಕಳನ್ನು ವಿನಾಶದಿಂದ ರಕ್ಷಿಸಲು ಇದು ಏಕೈಕ ಮಾರ್ಗವಾಗಿದೆ.
ತಾಯಂದಿರೆ, ಸಹೋದರಿಯರೆ,
ಒಂದು ಸರ್ಕಾರವು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಿದಾಗ, ಸಮಾಜದ ಪ್ರತಿಯೊಂದು ವರ್ಗ, ಇಡೀ ಕುಟುಂಬವು ಅದರಿಂದ ಪ್ರಯೋಜನ ಪಡೆಯುತ್ತದೆ. ಉದಾಹರಣೆಗೆ, ಇಂದು ಇಡೀ ಜಗತ್ತೇ ಉಜ್ವಲ ಯೋಜನೆಯಿಂದ ಎಷ್ಟು ದೊಡ್ಡ ಬದಲಾವಣೆಯಾಗಿದೆ ಎಂಬುದನ್ನು ನೋಡುತ್ತಿದೆ. ಹಳ್ಳಿಗಳಲ್ಲಿ ಅನಿಲ ಸಂಪರ್ಕ ಪಡೆಯುವುದು ದೊಡ್ಡ ಕನಸಾಗಿದ್ದ ಸಮಯವಿತ್ತು, ನಗರಗಳಲ್ಲಿಯೂ ಅದೇ ಪರಿಸ್ಥಿತಿ ಇತ್ತು. ನನ್ನ ಬಡ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಕೆಮ್ಮುತ್ತಾ ತಮ್ಮ ಜೀವನ ಕಳೆದರು. ಶ್ವಾಸಕೋಶ ಕಾಯಿಲೆಗಳು ಸಾಮಾನ್ಯವಾಗಿದ್ದವು, ದೃಷ್ಟಿ ಕಳೆದುಕೊಳ್ಳುವುದು ಕೂಡ ಸಾಮಾನ್ಯವಾಗಿತ್ತು ಮತ್ತು ಕೆಲವು ವಿದ್ವಾಂಸರು ಹೇಳುವಂತೆ ಒಲೆಯ ಹೊಗೆಯಲ್ಲಿ ದೀರ್ಘಕಾಲ ಇರುವ ತಾಯಂದಿರು ಮತ್ತು ಸಹೋದರಿಯರು ಒಂದು ದಿನದಲ್ಲಿ 400 ಸಿಗರೇಟುಗಳಿಗೆ ಸಮಾನವಾದ ಹೊಗೆ ನುಂಗುತ್ತಾರೆ. ಈಗ ಹೇಳಿ, ಕ್ಯಾನ್ಸರ್ ಬರದೆ ಇರುತ್ತದೆಯೇ? ಇವೆಲ್ಲವನ್ನೂ ಉಳಿಸಲು,ನಾವು ಉಜ್ವಲ ಯೋಜನೆ ತಂದಿದ್ದೇವೆ, ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್‌ಗಳನ್ನು ತಲುಪಿಸಿದ್ದೇವೆ. ಬಿಹಾರದಲ್ಲಿ, ನಮ್ಮ ಸಹೋದರಿಯರ ಜೀವನವು ಉರುವಲು ಹೊತ್ತು ಸಾಗಿಸುವುದರಲ್ಲೇ ಸಮಯ ಕಳೆಯುತ್ತಿತ್ತು. ಸಮಸ್ಯೆಗಳು ಕಡಿಮೆ ಇರಲಿಲ್ಲ, ಮಳೆ ಬಂದರೆ ಒದ್ದೆಯಾದ ಕಟ್ಟಿಗೆ ಸುಡುವುದಿಲ್ಲ, ಪ್ರವಾಹ ಬಂದರೆ ಉರುವಲು ಮುಳುಗುತ್ತಿತ್ತು. ಮನೆಯ ಮಕ್ಕಳು ಎಷ್ಟು ಬಾರಿ ಹಸಿವಿನಿಂದ ಮಲಗುತ್ತಿದ್ದರು ಅಥವಾ ಹಳಸಿದ ಅನ್ನ ತಿಂದು ರಾತ್ರಿ ಕಳೆಯುತ್ತಿದ್ದರು.
ಸ್ನೇಹಿತರೆ,
ಈ ನೋವನ್ನು ಯಾವುದೇ ಪುಸ್ತಕದಲ್ಲಿ ಬರೆದಿಲ್ಲ, ಈ ನೋವನ್ನು ಬಿಹಾರದ ನಮ್ಮ ಸಹೋದರಿಯರು ಅನುಭವಿಸಿದ್ದಾರೆ. ನನ್ನ ಪ್ರತಿಯೊಬ್ಬ ಸಹೋದರಿಯರು ಈ ಅಗ್ನಿಪರೀಕ್ಷೆ ಅನುಭವಿಸಿದ್ದಾರೆ. ಆದರೆ ಎನ್‌ಡಿಎ ಸರ್ಕಾರವು ಸಹೋದರಿಯರನ್ನು ಗಮನದದಲ್ಲಿಟ್ಟುಕೊಂಡು ಯೋಚಿಸಲು ಮತ್ತು ಯೋಜನೆಗಳನ್ನು ರೂಪಿಸಲು ಪ್ರಾರಂಭಿಸಿದಾಗ, ಇಡೀ ಚಿತ್ರಣವೇ ಬದಲಾಗಲು ಪ್ರಾರಂಭಿಸಿತು. ಅನಿಲ ಸಂಪರ್ಕಗಳು ಏಕಕಾಲದಲ್ಲಿ ಕೋಟ್ಯಂತರ ಮನೆಗಳನ್ನು ತಲುಪಿದವು. ಇಂದು ಕೋಟ್ಯಂತರ ಸಹೋದರಿಯರು ಗ್ಯಾಸ್ ಸ್ಟೌವ್‌ನಲ್ಲಿ ಶಾಂತಿಯುತವಾಗಿ ಅಡುಗೆ ಮಾಡುತ್ತಿದ್ದಾರೆ. ಅವರು ಹೊಗೆಯಿಂದ ಮುಕ್ತರಾಗಿದ್ದಾರೆ, ಶ್ವಾಸಕೋಶ ಮತ್ತು ಕಣ್ಣಿನ ಕಾಯಿಲೆಗಳಿಂದ ಮುಕ್ತರಾಗಿದ್ದಾರೆ. ಈಗ ಮನೆಯಲ್ಲಿರುವ ಮಕ್ಕಳು ಪ್ರತಿದಿನ ಬಿಸಿ ಊಟ ಮಾಡುತ್ತಾರೆ. ಉಜ್ವಲ ಅನಿಲ ಸಂಪರ್ಕಗಳು ಬಿಹಾರದ ಅಡುಗೆ ಮನೆಗಳನ್ನು ಮಾತ್ರವಲ್ಲದೆ, ಮಹಿಳೆಯರ ಜೀವನವನ್ನು ಸಹ ಬೆಳಗಿಸಿವೆ.
ತಾಯಂದಿರೆ, ಸಹೋದರಿಯರೆ,
ನಿಮ್ಮ ಎಲ್ಲಾ ಕಾಳಜಿಗಳನ್ನು ಪರಿಹರಿಸುವುದು ನಮ್ಮ ಜವಾಬ್ದಾರಿ. ಕೊರೊನಾ ವೈರಸ್ ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ ನಾವು ಉಚಿತ ಧಾನ್ಯ ಯೋಜನೆ ಪ್ರಾರಂಭಿಸಿದ್ದೇವೆ. ನನಗೆ ಒಂದು ಗುರಿ ಇದ್ದ ಕಾರಣ, ಯಾವುದೇ ಮಗು ರಾತ್ರಿ ಹಸಿವಿನಿಂದ ಮಲಗಬಾರದು. ಆದರೆ ಈ ಯೋಜನೆಯು ನಿಮಗೆ ತುಂಬಾ ಸಹಾಯ ಮಾಡಿದೆ, ಅದನ್ನು ಮುಂದುವರಿಸಲು ನಾವು ನಿರ್ಧರಿಸಿದ್ದೇವೆ. ಇಂದಿಗೂ ಸಹ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಚಾಲನೆಯಲ್ಲಿದೆ. ಈ ಯೋಜನೆಯ ಕಾರಣದಿಂದಾಗಿ, ಬಿಹಾರದ ಎಂಟೂವರೆ ಕೋಟಿಗೂ ಹೆಚ್ಚು ನಿರ್ಗತಿಕ ಜನರು ಉಚಿತ ಪಡಿತರ ಪಡೆಯುತ್ತಿದ್ದಾರೆ. ಈ ಯೋಜನೆಯು ನಿಮ್ಮ ಚಿಂತೆಯನ್ನು ತುಂಬಾ ಕಡಿಮೆ ಮಾಡಿದೆ. ಇನ್ನೊಂದು ಉದಾಹರಣೆ ನೀಡುತ್ತೇನೆ. ಬಿಹಾರದ ದೊಡ್ಡ ಪ್ರದೇಶದಲ್ಲಿ ಬೇಯಿಸಿದ ಅಕ್ಕಿ(ಉಸ್ನಾ ಚಾವಲ್)ಗೆ ಆದ್ಯತೆ ನೀಡಲಾಗುತ್ತದೆ. ಆದಾಗ್ಯೂ, ಮೊದಲು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಸರ್ಕಾರದ ಪಡಿತರವಾಗಿ ಹಸಿ ಅಕ್ಕಿ(ಅರ್ವಾ ಚಾವಲ್) ನೀಡಲಾಗುತ್ತಿತ್ತು. ಬಲವಂತದಿಂದಾಗಿ, ತಾಯಂದಿರು ಮತ್ತು ಸಹೋದರಿಯರು ಮಾರುಕಟ್ಟೆಯಲ್ಲಿ ಅದೇ ಅರ್ವಾ ಅಕ್ಕಿ ನೀಡಿ ಬದಲಾಗಿ ಬೇಯಿಸಿದ ಅಕ್ಕಿಯನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಅಪ್ರಾಮಾಣಿಕತೆಯನ್ನು ನೋಡಿ. ಸಮಸ್ಯೆ ಏನೆಂದರೆ 20 ಕಿಲೋಗ್ರಾಂ ಕಚ್ಚಾ ಅಕ್ಕಿಯ ಬದಲಿಗೆ, ಅವರಿಗೆ ಕೇವಲ 10 ಕಿಲೋಗ್ರಾಂ ಬೇಯಿಸಿದ ಅಕ್ಕಿ ಸಿಗುತ್ತಿತ್ತು. ನಾವು ಈ ಸಮಸ್ಯೆಯನ್ನು ಸಹ ಗಂಭೀರವಾಗಿ ಪರಿಗಣಿಸಿದ್ದೇವೆ. ಈಗ ಸರ್ಕಾರವು ಬೇಯಿಸಿದ ಅಕ್ಕಿಯನ್ನೇ ಪಡಿತರದಲ್ಲಿ ನೀಡಲು ಪ್ರಾರಂಭಿಸಿದೆ.
ನನ್ನ ತಾಯಂದಿರೆ ಮತ್ತು ಸಹೋದರಿಯರೆ,
ಮಹಿಳೆಯರು ತಮ್ಮ ಹೆಸರಿನಲ್ಲಿ ಆಸ್ತಿ ಹೊಂದಿರುವ ಸಂಪ್ರದಾಯವಿಲ್ಲ. ಮನೆ ಪುರುಷನ ಹೆಸರಿನಲ್ಲಿತ್ತು, ಅಂಗಡಿ ಪುರುಷನ ಹೆಸರಿನಲ್ಲಿತ್ತು, ಭೂಮಿ ಪುರುಷನ ಹೆಸರಿನಲ್ಲಿತ್ತು, ಸ್ಕೂಟರ್ ಪುರುಷನ ಹೆಸರಿನಲ್ಲಿತ್ತು - ಎಲ್ಲವೂ ಪುರುಷನ ಹೆಸರಿನಲ್ಲಿತ್ತು. ಆದರೆ ನಾನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಾರಂಭಿಸಿದಾಗ ನನ್ನ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಸಹ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ಮಾಲೀಕರಾಗಿರಬೇಕು ಎಂಬ ನಿಯಮ ಮಾಡಿದ್ದೇನೆ. ಇಂದು ಬಿಹಾರದಲ್ಲಿ 50 ಲಕ್ಷಕ್ಕೂ ಹೆಚ್ಚು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ಮಹಿಳೆಯರ ಒಡೆತನದಲ್ಲಿದೆ. ನೀವೇ ನಿಮ್ಮ ಮನೆಯ ನಿಜವಾದ ಮಾಲೀಕರು.
ಸ್ನೇಹಿತರೆ,
ಸಹೋದರಿಯ ಆರೋಗ್ಯ ಹದಗೆಟ್ಟಾಗ, ಅದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಮಹಿಳೆಯರು ತಮ್ಮ ಕುಟುಂಬಗಳಿಗೆ ಅದನ್ನು ಬಹಿರಂಗಪಡಿಸದೆ ಅನಾರೋಗ್ಯ ಸಹಿಸಿಕೊಳ್ಳುತ್ತಿದ್ದ ಕಾಲವಿತ್ತು. ಅವರ ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ, ಅವರ ಜ್ವರ ಅಥವಾ ಹೊಟ್ಟೆ ನೋವು ಇದ್ದರೂ, ಅವರು ಕೆಲಸ ಮಾಡುತ್ತಲೇ ಇದ್ದರು. ಏಕೆ? ಏಕೆಂದರೆ ಮನೆಯ ಹಣವನ್ನು ಅವರ ಚಿಕಿತ್ಸೆಗೆ ಖರ್ಚು ಮಾಡಬೇಕೆಂದು ಅವರು ಬಯಸಲಿಲ್ಲ. ಅದು ಅವರ ಮಕ್ಕಳು ಮತ್ತು ಕುಟುಂಬಕ್ಕೆ ಹೊರೆಯಾಗಬಾರದು. ಆದ್ದರಿಂದ ತಾಯಂದಿರು ಮತ್ತು ಸಹೋದರಿಯರು ಅನಾರೋಗ್ಯ ಸಹಿಸಿಕೊಂಡರು. ನಿಮ್ಮ ಮಗ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ನಿಮ್ಮ ಈ ಕಾಳಜಿಯನ್ನು ಪರಿಹರಿಸಿದ್ದಾನೆ. ಇಂದು ಬಿಹಾರದ ಲಕ್ಷಾಂತರ ಮಹಿಳೆಯರು 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಗರ್ಭಿಣಿಯರಿಗಾಗಿ ನಡೆಸಲಾಗುತ್ತಿರುವ ಮಾತೃ ವಂದನಾ ಯೋಜನೆಯಲ್ಲಿ, ಹಣವು ನೇರವಾಗಿ ತಾಯಂದಿರ ಖಾತೆಗಳಿಗೆ ಹೋಗುತ್ತಿದೆ. ಆ ಸಮಯದಲ್ಲಿ 9 ತಿಂಗಳ ಅವಧಿಯಲ್ಲಿ ಆಕೆಗೆ ಉತ್ತಮ ಪೋಷಣೆ ಸಿಗುವಂತೆ ಮಾಡಲು, ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯವೂ ಚೆನ್ನಾಗಿರುವಂತೆ ಮತ್ತು ಹೆರಿಗೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ, ತಾಯಿ ಅಥವಾ ಮಗುವಿನ ಜೀವ ಉಳಿಸಲು ಸಹಾಯ ಮಾಡುತ್ತದೆ.
ನನ್ನ ತಾಯಂದಿರೆ ಮತ್ತು ಸಹೋದರಿಯರೆ,
ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ. ಸೆಪ್ಟೆಂಬರ್ 17ರ ವಿಶ್ವಕರ್ಮ ಜಯಂತಿಯಂದು ಮಹಿಳೆಯರ ಆರೋಗ್ಯ ಸುಧಾರಿಸಲು ನಾವು ಒಂದು ದೊಡ್ಡ ಅಭಿಯಾನ ಪ್ರಾರಂಭಿಸಿದ್ದೇವೆ. ಇದನ್ನು "ಸ್ವಸ್ಥ ನಾರಿ, ಸಶಕ್ತ ಪರಿವಾರ್ ಅಭಿಯಾನ" ಎಂದು ಕರೆಯಲಾಗುತ್ತದೆ. ಈ ಅಭಿಯಾನದಲ್ಲಿ 4.25 ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಆಯೋಜಿಸಲಾಗುತ್ತಿದೆ. ರಕ್ತಹೀನತೆ, ರಕ್ತದೊತ್ತಡ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ಪರೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ ಈ ಅಭಿಯಾನಕ್ಕೆ ಸೇರುವ ಮೂಲಕ 1 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪರೀಕ್ಷಿಸಿಕೊಂಡಿದ್ದಾರೆ. ಇಂದು ನಾನು ಬಿಹಾರದ ಎಲ್ಲಾ ಮಹಿಳೆಯರನ್ನು ಖಂಡಿತವಾಗಿಯೂ ಈ ಶಿಬಿರಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಿನಂತಿಸುತ್ತೇನೆ. ಕೆಲವು ಜನರು ಪರೀಕ್ಷೆ ಮಾಡಿಸಬಾರದು ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ರೋಗವನ್ನು ಪತ್ತೆ ಹಚ್ಚುವುದು ಪ್ರಯೋಜನಕಾರಿ, ಹಾನಿಕಾರಕವಲ್ಲ. ಆದ್ದರಿಂದ ಪರೀಕ್ಷೆ ಮಾಡಿಸಿಕೊಳ್ಳಿ.
ಸ್ನೇಹಿತರೆ,
ಇದು ಹಬ್ಬದ ಸಮಯ, ನವರಾತ್ರಿ ನಡೆಯುತ್ತಿದೆ. ದೀಪಾವಳಿ ಬರುತ್ತಿದೆ ಮತ್ತು ಛಠ್ ಪೂಜೆ ಕೂಡ ದೂರವಿಲ್ಲ. ನಮ್ಮ ಸಹೋದರಿಯರು ತಮ್ಮ ಮನೆಯ ಖರ್ಚುಗಳನ್ನು ಹೇಗೆ ನಿರ್ವಹಿಸುವುದು ಮತ್ತು ಹಣವನ್ನು ಹೇಗೆ ಉಳಿಸುವುದು ಎಂಬುದರ ಕುರಿತು ನಿರಂತರವಾಗಿ ಯೋಚಿಸುತ್ತಿದ್ದಾರೆ. ಈ ಕಳವಳಗಳನ್ನು ನಿವಾರಿಸಲು, ಎನ್‌ಡಿಎ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಅನ್ವಯವಾಗುವಂತೆ, ದೇಶಾದ್ಯಂತ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲಾಗಿದೆ. ಈಗ ಟೂತ್‌ಪೇಸ್ಟ್, ಸೋಪ್, ಶಾಂಪೂ, ತುಪ್ಪ ಮತ್ತು ಆಹಾರ ಪದಾರ್ಥಗಳಂತಹ ಎಲ್ಲಾ ದೈನಂದಿನ ಬಳಕೆಯ ವಸ್ತುಗಳು ಮೊದಲಿಗಿಂತ ಅಗ್ಗವಾಗಿವೆ. ಮಕ್ಕಳ ಅಧ್ಯಯನಕ್ಕಾಗಿ ಸ್ಟೇಷನರಿ, ಹಬ್ಬಗಳ ಸಮಯದಲ್ಲಿ ಧರಿಸಲು ಬಟ್ಟೆ ಮತ್ತು ಶೂಗಳ ಬೆಲೆಗಳು ಸಹ ಕಡಿಮೆಯಾಗಿವೆ. ಮನೆ ಮತ್ತು ಅಡುಗೆ ಬಜೆಟ್ ನಿರ್ವಹಿಸುವ ಮಹಿಳೆಯರಿಗೆ ಇದು ದೊಡ್ಡ ಪರಿಹಾರವಾಗಿದೆ. ಡಬಲ್ ಎಂಜಿನ್ ಸರ್ಕಾರವು ಸಹೋದರಿಯರ ಹೊರೆ ಕಡಿಮೆ ಮಾಡುವುದು ಮತ್ತು ಅವರ ಮುಖದಲ್ಲಿ ಹಬ್ಬಗಳ ಸಂತೋಷ ತರುವುದು ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತದೆ.
ಸ್ನೇಹಿತರೆ,
ಬಿಹಾರದ ಮಹಿಳೆಯರಿಗೆ ಅವಕಾಶ ಸಿಕ್ಕಾಗಲೆಲ್ಲಾ, ಅವರು ತಮ್ಮ ಧೈರ್ಯ ಮತ್ತು ದೃಢಸಂಕಲ್ಪದಿಂದ ಗಮನಾರ್ಹ ಬದಲಾವಣೆ ತಂದಿದ್ದಾರೆ. ಮಹಿಳೆಯರು ಪ್ರಗತಿ ಹೊಂದಿದಾಗ, ಇಡೀ ಸಮಾಜವು ಪ್ರಗತಿ ಹೊಂದುತ್ತದೆ ಎಂದು ನೀವು ಸಾಬೀತುಪಡಿಸಿದ್ದೀರಿ. ಮತ್ತೊಮ್ಮೆ, ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗಾಗಿ ಬಿಹಾರದ ಜನರನ್ನು ನಾನು ಅಭಿನಂದಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
(Release ID: 2172548)
Visitor Counter : 6