ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಜಸ್ಥಾನದ ಬನ್ಸ್ವಾರಾದಲ್ಲಿ 1,22,100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ನಮ್ಮ ಸರ್ಕಾರ ಶುದ್ಧ ಇಂಧನ ಮಿಷನ್ ಅನ್ನು ಜನಾಂದೋಲನವನ್ನಾಗಿ ಪರಿವರ್ತಿಸುತ್ತಿದೆ: ಪ್ರಧಾನಮಂತ್ರಿ

ಸಮಾಜದ ಎಲ್ಲಾ ವರ್ಗಗಳ ಕಲ್ಯಾಣಕ್ಕಾಗಿ ನಾವು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದೇವೆ: ಪ್ರಧಾನಮಂತ್ರಿ

ಬುಡಕಟ್ಟು ಸಮುದಾಯಗಳು ಘನತೆ ಮತ್ತು ಸ್ವಾಭಿಮಾನದಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಬದ್ಧತೆಯಾಗಿದೆ: ಪ್ರಧಾನಮಂತ್ರಿ

Posted On: 25 SEP 2025 4:40PM by PIB Bengaluru

ರಾಜಸ್ಥಾನದ ಬನ್ಸ್ವಾರಾದಲ್ಲಿ 1,22,100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೆರವೇರಿಸಿದರು. ನವರಾತ್ರಿಯ ನಾಲ್ಕನೇ ದಿನದಂದು, ಬನ್ಸ್ವಾರಾದಲ್ಲಿರುವ ಮಾ ತ್ರಿಪುರ ಸುಂದರಿಯ ಪವಿತ್ರ ಭೂಮಿಗೆ ಭೇಟಿ ನೀಡುವುದು ಒಂದು ಸೌಭಾಗ್ಯ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಕಾಂತಲ್ ಮತ್ತು ವಾಗಡ್‌ನ ಗಂಗೆ ಎಂದು ಪೂಜಿಸಲ್ಪಡುವ ಮಾ ಮಾಹಿಯನ್ನು ವೀಕ್ಷಿಸುವ ಅವಕಾಶವೂ ತಮಗೆ ಸಿಕ್ಕಿದೆ ಎಂದು ಅವರು ಹೇಳಿದರು. ಮಾಹಿಯ ನೀರು ಭಾರತದ ಬುಡಕಟ್ಟು ಸಮುದಾಯಗಳ ಸ್ಥಿತಿಸ್ಥಾಪಕತ್ವ ಮತ್ತು ಹೋರಾಟವನ್ನು ಸಂಕೇತಿಸುತ್ತದೆ ಎಂದೂ ಪ್ರಧಾನಮಂತ್ರಿ ಹೇಳಿದರು. ಮಹಾಯೋಗಿ ಗೋವಿಂದ ಗುರು ಜೀ ಅವರ ಸ್ಪೂರ್ತಿದಾಯಕ ನಾಯಕತ್ವವನ್ನು ಅವರು ಉಲ್ಲೇಖಿಸಿದರು, ಅವರ ಪರಂಪರೆ ನಿರಂತರವಾಗಿ ಪ್ರತಿಧ್ವನಿಸುತ್ತಿದೆ, ಮಾಹಿಯ ಪವಿತ್ರ ನೀರು ಮಹಾನ್ ಸಾಹಸಗಾಥೆಗೆ ಸಾಕ್ಷಿಯಾಗಿದೆ ಎಂದ ಶ್ರೀ ಮೋದಿ ಮಾ ತ್ರಿಪುರ ಸುಂದರಿ ಮತ್ತು ಮಾ ಮಾಹಿಗೆ ಗೌರವ ಸಲ್ಲಿಸಿದರು ಮತ್ತು ಭಕ್ತಿ ಹಾಗು ಶೌರ್ಯದ ಭೂಮಿಯಿಂದ ಅವರು ಮಹಾರಾಣಾ ಪ್ರತಾಪ್ ಮತ್ತು ರಾಜಾ ಬನ್ಸಿಯಾ ಭಿಲ್ ಅವರಿಗೆ ತಮ್ಮ ಗೌರವ ಸಮರ್ಪಿಸಿದರು.

ನವರಾತ್ರಿಯ ಸಮಯದಲ್ಲಿ, ದೇಶವು ಒಂಬತ್ತು ರೀತಿಯ ಶಕ್ತಿಗಳನ್ನು ಪೂಜಿಸುತ್ತದೆ ಮತ್ತು ಬನ್ಸ್‌ವಾರಾದಲ್ಲಿ ಇಂದಿನ ಪ್ರಮುಖ ಕಾರ್ಯಕ್ರಮವು ಉರ್ಜ ಶಕ್ತಿ - ಇಂಧನ ಉತ್ಪಾದನೆಗೆ ಸಮರ್ಪಿತವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತದ ವಿದ್ಯುತ್ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ರಾಜಸ್ಥಾನದ ಮಣ್ಣಿನಿಂದ ಬರೆಯಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ₹90,000 ಕೋಟಿಗೂ ಹೆಚ್ಚು ಮೌಲ್ಯದ ವಿದ್ಯುತ್ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಪ್ರಧಾನಮಂತ್ರಿ ಘೋಷಿಸಿದರು. ಇಂತಹ ದೊಡ್ಡ ಪ್ರಮಾಣದ ಯೋಜನೆಗಳನ್ನು ಏಕಕಾಲದಲ್ಲಿ ಪ್ರಾರಂಭಿಸುವುದು ಭಾರತದ ಇಂಧನ ಕ್ಷೇತ್ರದಲ್ಲಿ ವೇಗವರ್ಧಿತ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು, ದೇಶದ ಪ್ರತಿಯೊಂದು ಪ್ರದೇಶಕ್ಕೂ ಸಕ್ರಿಯ ಕೊಡುಗೆ ನೀಡಲಾಗುತ್ತಿದೆ ಮತ್ತು ಎಲ್ಲಾ ರಾಜ್ಯಗಳಿಗೆ ಆದ್ಯತೆ ನೀಡಲಾಗಿದೆ. ರಾಜಸ್ಥಾನದಲ್ಲಿ, ಶುದ್ಧ ಇಂಧನ ಯೋಜನೆಗಳು ಮತ್ತು ಪ್ರಸರಣ ಮಾರ್ಗಗಳಿಗೆ ಅಡಿಪಾಯ ಹಾಕಲಾಗಿದೆ ಎಂದರು.  ಶ್ರೀ ಮೋದಿ ಅವರು ಸೌರಶಕ್ತಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಬನ್ಸ್‌ವಾರಾದಲ್ಲಿ ರಾಜಸ್ಥಾನ ಪರಮಾಣು ವಿದ್ಯುತ್ ಯೋಜನೆಯ ಪ್ರಾರಂಭವನ್ನು ಘೋಷಿಸಿದರು. ಸೌರಶಕ್ತಿಯಿಂದ ಪರಮಾಣು ಶಕ್ತಿಯವರೆಗೆ, ಭಾರತವು ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಹೊಸ ಎತ್ತರವನ್ನು ಏರುತ್ತಿದೆ ಎಂದು ಅವರು ಒತ್ತಿ ಹೇಳಿದರು.

"ತಂತ್ರಜ್ಞಾನ ಮತ್ತು ಕೈಗಾರಿಕೆಗಳ ಇಂದಿನ ಯುಗದಲ್ಲಿ, ಅಭಿವೃದ್ಧಿಯು ವಿದ್ಯುತ್ ಶಕ್ತಿಯ ಮೇಲೆ ನಡೆಯುತ್ತದೆ; ವಿದ್ಯುತ್ ಬೆಳಕು, ವೇಗ, ಪ್ರಗತಿ, ಸಂಪರ್ಕ ಮತ್ತು ಜಾಗತಿಕ ಮಟ್ಟದ ಅವಕಾಶ/ ಪ್ರವೇಶವನ್ನು ತರುತ್ತದೆ" ಎಂದು ಪ್ರಧಾನಮಂತ್ರಿ ವಿವರಿಸಿದರು. ವಿದ್ಯುತ್‌ನ ಮಹತ್ವವನ್ನು ನಿರ್ಲಕ್ಷಿಸಿದ್ದಕ್ಕಾಗಿ ಹಿಂದಿನ ಸರ್ಕಾರಗಳನ್ನು ಅವರು ಟೀಕಿಸಿದರು. 2014 ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ, 2.5 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ ಮತ್ತು ಸ್ವಾತಂತ್ರ್ಯದ 70 ವರ್ಷಗಳ ನಂತರವೂ, 18,000 ಹಳ್ಳಿಗಳು ಒಂದೇ ಒಂದು ವಿದ್ಯುತ್ ಕಂಬವನ್ನು ನೋಡಿರಲಿಲ್ಲ ಎಂದು ಶ್ರೀ ಮೋದಿ ಹೇಳಿದರು. ಪ್ರಮುಖ ನಗರಗಳು ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ಎದುರಿಸುತ್ತಿದ್ದವು ಮತ್ತು ಹಳ್ಳಿಗಳಲ್ಲಿ, 4-5 ಗಂಟೆಗಳ ವಿದ್ಯುತ್ ಕೂಡ ಗಮನಾರ್ಹವೆಂದು ಪರಿಗಣಿಸಲಾಗಿತ್ತು ಎಂಬುದನ್ನು ಅವರು ಎತ್ತಿ ತೋರಿಸಿದರು. ವಿದ್ಯುತ್ ಕೊರತೆಯು ಕಾರ್ಖಾನೆ ಕಾರ್ಯಾಚರಣೆಗಳು ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿಯಾಯಿತು, ಇದು ರಾಜಸ್ಥಾನ ಮತ್ತು ಇಡೀ ದೇಶದ ಮೇಲೆ ಪರಿಣಾಮ ಬೀರಿತು. 2014 ರಲ್ಲಿ, ತಮ್ಮ ಸರ್ಕಾರವು ಪರಿಸ್ಥಿತಿಯನ್ನು ಬದಲಾಯಿಸಲು ಸಂಕಲ್ಪಿಸಿತು ಎಂದು ಪ್ರಧಾನಮಂತ್ರಿ ಹೇಳಿದರು. ಪ್ರತಿ ಹಳ್ಳಿಗೂ ವಿದ್ಯುತ್ ತಲುಪಿಸಲಾಯಿತು ಮತ್ತು 2.5 ಕೋಟಿ ಮನೆಗಳು ಉಚಿತ ಸಂಪರ್ಕಗಳನ್ನು ಪಡೆದವು ಎಂದು ಅವರು ನುಡಿದರು. ವಿದ್ಯುತ್ ಮಾರ್ಗಗಳು ತಲುಪಿದಲ್ಲೆಲ್ಲಾ, ಅವುಗಳನ್ನು ವಿದ್ಯುತ್ ಅನುಸರಿಸಿತು – ಅದು ಜೀವನವನ್ನು ಸುಲಭಗೊಳಿಸಿತು ಮತ್ತು ಹೊಸ ಕೈಗಾರಿಕೆಗಳ ಬೆಳವಣಿಗೆಗೆ ಅನುವು ಮಾಡಿಕೊಟ್ಟಿತು.

21 ನೇ ಶತಮಾನದಲ್ಲಿ ಯಾವುದೇ ರಾಷ್ಟ್ರವು ತ್ವರಿತ ಅಭಿವೃದ್ಧಿಯನ್ನು ಸಾಧಿಸಬೇಕಾದರೆ, ಅದು ತನ್ನ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಅತ್ಯಂತ ಯಶಸ್ವಿ ದೇಶಗಳು ಶುದ್ಧ ಇಂಧನದಲ್ಲಿ ಮುಂಚೂಣಿಯಲ್ಲಿರುವ ದೇಶಗಳಾಗಿವೆ ಎಂಬುದನ್ನು ಅವರು ಒತ್ತಿ ಹೇಳಿದರು. "ನಮ್ಮ ಸರ್ಕಾರ ಶುದ್ಧ ಇಂಧನ ಮಿಷನ್ ಅನ್ನು ಜನಾಂದೋಲನವಾಗಿ ಪರಿವರ್ತಿಸುತ್ತಿದೆ" ಎಂದು ಹೇಳಿದ ಶ್ರೀ ಮೋದಿ ಅವರು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಘೋಷಿಸಿದರು, ಇದರ ಅಡಿಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುತ್ತಿದೆ. ರೈತರಿಗೆ ಕೈಗೆಟುಕುವ ದರದಲ್ಲಿ ವಿದ್ಯುತ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಪಿ.ಎಂ.-ಕುಸುಮ್ (PM-KUSUM) ಯೋಜನೆಯು ಕೃಷಿ ಹೊಲಗಳಲ್ಲಿ ಸೌರ ಪಂಪ್‌ಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡುತ್ತಿದೆ. ಇಂದು ರಾಜ್ಯಗಳಲ್ಲಿ ಹಲವಾರು ಸೌರ ಯೋಜನೆಗಳನ್ನು ಉದ್ಘಾಟಿಸಲಾಗಿದ್ದು, ಇದು ಲಕ್ಷಾಂತರ ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂಬುದರತ್ತ ಪ್ರಧಾನಮಂತ್ರಿ ಗಮನ ಸೆಳೆದರು. ಪಿ.ಎಂ. ಸೂರ್ಯ ಘರ್ ಯೋಜನೆಯು ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುತ್ತದೆ ಮತ್ತು ಪಿ.ಎಂ.-ಕುಸುಮ್ (PM-KUSUM) ಯೋಜನೆಯು ಕೃಷಿಭೂಮಿಗಳಿಗೆ ಉಚಿತ ವಿದ್ಯುತ್ ಅನ್ನು ಖಚಿತಪಡಿಸುತ್ತದೆ ಎಂದು ಅವರು ಪುನರುಚ್ಚರಿಸಿದರು. ಪಿ.ಎಂ.-ಕುಸುಮ್ ಯೋಜನೆಯ ಫಲಾನುಭವಿಗಳೊಂದಿಗೆ ತಮ್ಮ ಹಿಂದಿನ ಸಂವಾದವನ್ನು ಶ್ರೀ ಮೋದಿ ಹಂಚಿಕೊಂಡರು, ಸೌರಶಕ್ತಿ ಚಾಲಿತ ಉಚಿತ ವಿದ್ಯುತ್ ಫಲಾನುಭವಿಗಳ ಜೀವನದಲ್ಲಿ ಪ್ರಮುಖ ಆಶೀರ್ವಾದವಾಗಿದೆ ಎಂದು ಹೇಳಿದ್ದನ್ನು ಅವರು ಉಲ್ಲೇಖಿಸಿದರು.

"ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಅತಿ ವೇಗದಲ್ಲಿ ಕೆಲಸ ಮಾಡುತ್ತಿದೆ, ಈ ಪ್ರಯಾಣದಲ್ಲಿ ರಾಜಸ್ಥಾನವು ಮಹತ್ವದ ಪಾತ್ರ ವಹಿಸುತ್ತಿದೆ" ಎಂದು ಶ್ರೀ ಮೋದಿ ಉದ್ಗರಿಸಿದರು. ನೀರು, ವಿದ್ಯುತ್ ಮತ್ತು ಆರೋಗ್ಯ ಸೇವೆಯನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ರಾಜಸ್ಥಾನದ ಜನರಿಗೆ ₹30,000 ಕೋಟಿ ಮೌಲ್ಯದ ಹೆಚ್ಚುವರಿ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದರು. ವಂದೇ ಭಾರತ್ ಸೇವೆ ಸೇರಿದಂತೆ ಮೂರು ಹೊಸ ರೈಲುಗಳಿಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಿದರು. ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ರಾಷ್ಟ್ರವ್ಯಾಪಿ ಅಭಿಯಾನವನ್ನು ಅವರು ಎತ್ತಿ ತೋರಿಸಿದರು, ಇದರ ಅಡಿಯಲ್ಲಿ ರಾಜಸ್ಥಾನದಲ್ಲಿ 15,000 ಯುವಜನರು ಇಂದು ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ಪಡೆದರು. ಈ ಯುವ ವ್ಯಕ್ತಿಗಳು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿರುವಾಗ ಶ್ರೀ ಮೋದಿ ಅವರಿಗೆ ಶುಭ ಹಾರೈಸಿದರು ಮತ್ತು ಅಭಿವೃದ್ಧಿ ಉಪಕ್ರಮಗಳನ್ನು ಪ್ರಾರಂಭಿಸಿದ ರಾಜಸ್ಥಾನದ ಜನರನ್ನು ಅಭಿನಂದಿಸಿದರು.

ರಾಜಸ್ಥಾನದಲ್ಲಿ ತಮ್ಮ ಸರ್ಕಾರವು ರಾಜ್ಯದ ಅಭಿವೃದ್ಧಿಯ ಕಡೆಗೆ ಸಂಪೂರ್ಣ ಸಮಗ್ರತೆಯಿಂದ ಕೆಲಸ ಮಾಡುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಹಿಂದಿನ ಆಡಳಿತದ ದುರಾಡಳಿತ ಮತ್ತು ಶೋಷಣೆಯಿಂದ ರಾಜಸ್ಥಾನದ ಮೇಲೆ ಉಂಟಾದ ಗಾಯಗಳನ್ನು ಪ್ರಸ್ತುತ ಆಡಳಿತವು ಗುಣಪಡಿಸುತ್ತಿದೆ ಎಂದು ಹೇಳಿದರು. ವಿರೋಧ ಪಕ್ಷದ ಆಳ್ವಿಕೆಯಲ್ಲಿ, ರಾಜಸ್ಥಾನವು ಪ್ರಶ್ನೆಪತ್ರಿಕೆ ಸೋರಿಕೆಯ ಕೇಂದ್ರವಾಗಿತ್ತು ಮತ್ತು ಜಲ ಜೀವನ್ ಮಿಷನ್ ಭ್ರಷ್ಟಾಚಾರದಲ್ಲಿ ತೊಡಗಿತ್ತು ಎಂದೂ ಶ್ರೀ ಮೋದಿ ಆರೋಪಿಸಿದರು. ಮಹಿಳೆಯರ ಮೇಲಿನ ದೌರ್ಜನ್ಯಗಳು ಉತ್ತುಂಗಕ್ಕೇರಿದ್ದವು, ಅಪರಾಧಿಗಳಿಗೆ ರಕ್ಷಣೆ ವಿಸ್ತರಿಸಲಾಗಿತ್ತು ಎಂಬುದನ್ನೂ ಅವರು ಎತ್ತಿ ತೋರಿಸಿದರು. ವಿರೋಧ ಪಕ್ಷದ ಅಧಿಕಾರಾವಧಿಯಲ್ಲಿ, ಬನ್ಸ್ವಾರಾ, ಡುಂಗರಪುರ ಮತ್ತು ಪ್ರತಾಪ್‌ಗಢದಂತಹ ಪ್ರದೇಶಗಳು ಅಪರಾಧ ಮತ್ತು ಅಕ್ರಮ ಮದ್ಯ ವ್ಯಾಪಾರ ಹೆಚ್ಚಳಕ್ಕೆ ಸಾಕ್ಷಿಯಾದವು ಎಂಬುದರತ್ತಲೂ ಅವರು ಗಮನಸೆಳೆದರು. ಜನರು ತಮಗೆ ಒಮ್ಮೆ ಅವಕಾಶ ನೀಡಿದ ನಂತರ, ಕಾನೂನು ಮತ್ತು ಸುವ್ಯವಸ್ಥೆ ಬಲಗೊಂಡಿತು ಮತ್ತು ಅಭಿವೃದ್ಧಿಯ ವೇಗವು ವೇಗಗೊಂಡಿತು ಎಂದು ಪ್ರಧಾನಮಂತ್ರಿ ಹೇಳಿದರು. ರಾಜಸ್ಥಾನದಾದ್ಯಂತ ಬೆಳೆಯುತ್ತಿರುವ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಜಾಲದೊಂದಿಗೆ ಪ್ರಮುಖ ಯೋಜನೆಗಳನ್ನು ಈಗ ಜಾರಿಗೆ ತರಲಾಗುತ್ತಿದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ತಮ್ಮ ಸರ್ಕಾರವು ರಾಜಸ್ಥಾನವನ್ನು, ವಿಶೇಷವಾಗಿ ದಕ್ಷಿಣ ರಾಜಸ್ಥಾನವನ್ನು ಅಭಿವೃದ್ಧಿಯ ವೇಗದ ಹಾದಿಗೆ ಕೊಂಡೊಯ್ಯುತ್ತಿದೆ ಎಂದು ಪ್ರಧಾನಮಂತ್ರಿ ದೃಢಪಡಿಸಿದರು.

ಸಮಾಜದ ಕಟ್ಟಕಡೆಯಲ್ಲಿರುವ ವ್ಯಕ್ತಿಯ ಉನ್ನತಿಯಾದ - ಅಂತ್ಯೋದಯ ತತ್ವವನ್ನು ರಾಷ್ಟ್ರಕ್ಕೆ ನೀಡಿದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಇಂದು ಎಂದು ಹೇಳಿದ ಶ್ರೀ ಮೋದಿ, ಈ ದೃಷ್ಟಿಕೋನವು ಈಗ ಸರ್ಕಾರದ ಧ್ಯೇಯವಾಗಿದೆ ಎಂದು ಒತ್ತಿ ಹೇಳಿದರು. ಬಡವರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ ಆಡಳಿತವು ಆಳವಾದ ಸೇವಾ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಬುಡಕಟ್ಟು ಸಮುದಾಯವನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವುದಕ್ಕೆ ಮತ್ತು ಅವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿರುವುದಕ್ಕೆ ವಿರೋಧ ಪಕ್ಷವನ್ನು ಟೀಕಿಸಿದ ಪ್ರಧಾನಮಂತ್ರಿ, ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಅಡಿಯಲ್ಲಿ ಮೊದಲ ಬಾರಿಗೆ ಬುಡಕಟ್ಟು ವ್ಯವಹಾರಗಳಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವ ಮೂಲಕ ಬುಡಕಟ್ಟು ಕಲ್ಯಾಣಕ್ಕೆ ಆದ್ಯತೆ ನೀಡಿದ್ದು ತಮ್ಮ ಸರ್ಕಾರ ಎಂದು ಒತ್ತಿ ಹೇಳಿದರು. ವಿರೋಧ ಪಕ್ಷದ ಆಳ್ವಿಕೆಯಲ್ಲಿ, ಇಂತಹ ದೊಡ್ಡ ಪ್ರಮಾಣದ ಯೋಜನೆಗಳು ಬುಡಕಟ್ಟು ಪ್ರದೇಶಗಳನ್ನು ತಲುಪುವುದು ಊಹಿಸಲೂ ಸಾಧ್ಯವಿರಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ತಮ್ಮ ಸರ್ಕಾರದ ಅಡಿಯಲ್ಲಿ, ಈ ಬೆಳವಣಿಗೆಗಳು ಈಗ ವಾಸ್ತವವಾಗುತ್ತಿವೆ ಎಂದು ಅವರು ದೃಢಪಡಿಸಿದರು. ಮಧ್ಯಪ್ರದೇಶದ ಧಾರ್‌ನಲ್ಲಿ ಪ್ರಮುಖ ಪಿಎಂ ಮಿತ್ರ ಪಾರ್ಕ್ ಪ್ರಾರಂಭಿಸುವುದಾಗಿ ಅವರು ಘೋಷಿಸಿದರು, ಇದು ಬುಡಕಟ್ಟು ರೈತರಿಗೆ ಗಮನಾರ್ಹ ಪ್ರಯೋಜನಗಳನ್ನು ತರುತ್ತದೆ.

ಬಡ ಬುಡಕಟ್ಟು ಕುಟುಂಬದ ಮಗಳು ಶ್ರೀಮತಿ ದ್ರೌಪದಿ ಮುರ್ಮು ಅವರು ಭಾರತದ ರಾಷ್ಟ್ರಪತಿಯಾಗಲು ತಮ್ಮ ಪಕ್ಷದ ಪ್ರಯತ್ನಗಳೇ ಕಾರಣ ಎಂದು ಉಲ್ಲೇಖಿಸಿದ ಶ್ರೀ ಮೋದಿ, ರಾಷ್ಟ್ರಪತಿಗಳೇ ಅತ್ಯಂತ ಅಂಚಿನಲ್ಲಿರುವ ಬುಡಕಟ್ಟು ಸಮುದಾಯಗಳ ವಿಷಯವನ್ನು ಎತ್ತಿದ್ದಾರೆ, ಇದು ಪ್ರಧಾನ ಮಂತ್ರಿ ಜನಮಾನ್ ಯೋಜನೆಯನ್ನು ಪ್ರಾರಂಭಿಸಲು ಪ್ರೇರಣೆ ನೀಡಿತು ಎಂದು ಒತ್ತಿ ಹೇಳಿದರು. ಈ ಉಪಕ್ರಮದಡಿಯಲ್ಲಿ, ಬುಡಕಟ್ಟು ಸಮಾಜದ ಅತ್ಯಂತ ಅವಕಾಶ ವಂಚಿತ ವರ್ಗಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನದ ಮೂಲಕ, ಬುಡಕಟ್ಟು ಗ್ರಾಮಗಳನ್ನು ಆಧುನೀಕರಿಸಲಾಗುತ್ತಿದೆ, ಇದು ಐದು ಕೋಟಿಗೂ ಹೆಚ್ಚು ಬುಡಕಟ್ಟು ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದರತ್ತ   ಪ್ರಧಾನಮಂತ್ರಿ ಗಮನ ಸೆಳೆದರು. ದೇಶಾದ್ಯಂತ ನೂರಾರು ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಅರಣ್ಯವಾಸಿಗಳು ಮತ್ತು ಪರಿಶಿಷ್ಟ ಬುಡಕಟ್ಟು ಪಂಗಡಗಳ ಅರಣ್ಯ ಹಕ್ಕುಗಳನ್ನು ಸರ್ಕಾರ ಗುರುತಿಸಿದೆ ಎಂದು ಪ್ರಧಾನಮಂತ್ರಿ ದೃಢಪಡಿಸಿದರು.

"ಭಾರತದ ಬುಡಕಟ್ಟು ಸಮುದಾಯಗಳು ಸಾವಿರಾರು ವರ್ಷಗಳಿಂದ ಅರಣ್ಯ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಬಳಸುತ್ತಿವೆ" ಎಂದು ಶ್ರೀ ಮೋದಿ ಹೇಳಿದರು. ಈ ಸಂಪನ್ಮೂಲಗಳು ಅವರಿಗೆ ಪ್ರಗತಿಯ ಸಾಧನವಾಗುವುದನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ವನ್ ಧನ್ ಯೋಜನೆಯನ್ನು ಪ್ರಾರಂಭಿಸಿತು. ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸಲಾಗಿದೆ ಮತ್ತು ಬುಡಕಟ್ಟು ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯತೆಗೆ/ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಇದರ ಪರಿಣಾಮವಾಗಿ, ದೇಶಾದ್ಯಂತ ಅರಣ್ಯ ಉತ್ಪನ್ನಗಳಲ್ಲಿ ಭಾರತ ದಾಖಲೆಯ ಬೆಳವಣಿಗೆಯನ್ನು ಕಂಡಿದೆ ಎಂದು ಪ್ರಧಾನಮಂತ್ರಿ ಗಮನಿಸಿದರು.

ಬುಡಕಟ್ಟು ಸಮುದಾಯವು ಘನತೆಯಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಬದ್ಧತೆಯನ್ನು ದೃಢಪಡಿಸಿದ ಪ್ರಧಾನಮಂತ್ರಿ, ಅವರ ನಂಬಿಕೆ, ಸ್ವಾಭಿಮಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವುದು ಒಂದು ಗಂಭೀರ ಪರಿಪೂರ್ಣ ಸಂಕಲ್ಪ ಎಂದು ಹೇಳಿದರು. ಸಾಮಾನ್ಯ ನಾಗರಿಕರ ಜೀವನ ಸುಲಭವಾದಾಗ, ಅವರು ಸ್ವತಃ ರಾಷ್ಟ್ರದ ಪ್ರಗತಿಯ ಮುಂಚೂಣಿಗೆ ಬರುತ್ತಾರೆ ಎಂದು ಅವರು ಒತ್ತಿ ಹೇಳಿದರು. 11 ವರ್ಷಗಳ ಹಿಂದೆ ವಿರೋಧ ಪಕ್ಷದ ಆಳ್ವಿಕೆಯಲ್ಲಿದ್ದ ಭೀಕರ ಪರಿಸ್ಥಿತಿಗಳನ್ನು ಅವರು ನೆನಪಿಸಿಕೊಂಡರು, ನಾಗರಿಕರ ಶೋಷಣೆ ಮತ್ತು ವ್ಯವಸ್ಥಿತ ಲೂಟಿಗೆ ಅವರು ತೊಡಗಿದ್ದರು ಎಂದು ದೂರಿದರು. ಆ ಅವಧಿಯಲ್ಲಿ, ತೆರಿಗೆಗಳು ಮತ್ತು ಹಣದುಬ್ಬರವು ದಾಖಲೆಯ ಗರಿಷ್ಠ ಮಟ್ಟದಲ್ಲಿತ್ತು ಎಂಬುದರತ್ತ ಅವರು ಗಮನಸೆಳೆದರು. ಜನರು ಒಮ್ಮೆ ತಮ್ಮ ಸರ್ಕಾರಕ್ಕೆ ಆಶೀರ್ವದಿಸಿದ್ದರಿಂದ, ಅದು ವಿರೋಧ ಪಕ್ಷದ ಶೋಷಣಾ ಪದ್ಧತಿಗಳನ್ನು ಕೊನೆಗೊಳಿಸಿತು ಎಂದೂ ಪ್ರಧಾನಮಂತ್ರಿ ನುಡಿದರು.

2017 ರಲ್ಲಿ ಜಿಎಸ್ಟಿ ಅನುಷ್ಠಾನವು ದೇಶವನ್ನು ತೆರಿಗೆ ಮತ್ತು ಸುಂಕಗಳ ಸಂಕೀರ್ಣ ಜಾಲದಿಂದ ಮುಕ್ತಗೊಳಿಸಿತು ಎಂದು ಶ್ರೀ ಮೋದಿ ಹೇಳಿದರು. ಈ ವರ್ಷದ ನವರಾತ್ರಿಯ ಮೊದಲ ದಿನದಂದು, ಪ್ರಮುಖ ಜಿಎಸ್ಟಿ ಸುಧಾರಣೆಯನ್ನು ಪರಿಚಯಿಸಲಾಯಿತು, ಇದರ ಪರಿಣಾಮವಾಗಿ ಭಾರತದಾದ್ಯಂತ ಜಿಎಸ್ಟಿ ಉಳಿತಾಯ ಉತ್ಸವವನ್ನು ಆಚರಿಸಲಾಯಿತು ಎಂದು ಅವರು ಎತ್ತಿ ತೋರಿಸಿದರು. ಬಹುತೇಕ ದಿನನಿತ್ಯದ ವಸ್ತುಗಳು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಹಾಜರಿದ್ದ ಮಹಿಳೆಯರ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮನೆಯ ಅಡುಗೆಮನೆಯ ವೆಚ್ಚಗಳು ಗಮನಾರ್ಹವಾಗಿ ಕಡಿಮೆಯಾಗಿವೆ, ಇದು ದೇಶಾದ್ಯಂತ ತಾಯಂದಿರು ಮತ್ತು ಸಹೋದರಿಯರಿಗೆ ನೇರ ಪರಿಹಾರವನ್ನು ತಂದಿದೆ ಎಂದು ಒತ್ತಿ ಹೇಳಿದರು.

2014 ರ ಮೊದಲು, ವಿರೋಧ ಪಕ್ಷದ ಸರ್ಕಾರದ ಅಡಿಯಲ್ಲಿ ಹೆಚ್ಚಿನ ತೆರಿಗೆಯಿಂದಾಗಿ ಸೋಪ್, ಶಾಂಪೂ, ಟೂತ್‌ಪೇಸ್ಟ್ ಮತ್ತು ಹಲ್ಲಿನ ಪುಡಿಯಂತಹ ದೈನಂದಿನ ಅಗತ್ಯ ವಸ್ತುಗಳ ಮೇಲೆ ₹100 ಖರ್ಚು ಮಾಡುವುದಕ್ಕೆ ಬದಲು ಒಟ್ಟು ₹131 ವೆಚ್ಚಮಾಡಬೇಕಾದ ಸ್ಥಿತಿ ಇತ್ತು ಎಂಬುದನ್ನು ಎತ್ತಿ ತೋರಿಸಿದ ಶ್ರೀ ಮೋದಿ, ವಿರೋಧ ಪಕ್ಷದ ಸರ್ಕಾರವು ಪ್ರತಿ ₹100 ಖರೀದಿಗೆ ₹31 ತೆರಿಗೆ ವಿಧಿಸಿತು ಎಂದು ಹೇಳಿದರು. 2017 ರಲ್ಲಿ ಜಿಎಸ್‌ಟಿ ಜಾರಿಗೆ ತಂದ ನಂತರ, ಅದೇ ₹100 ಮೌಲ್ಯದ ಸರಕುಗಳಿಗೆ ₹118 ವೆಚ್ಚವಾಗುತ್ತಿತ್ತು, ತಮ್ಮ ಸರ್ಕಾರದ ಅಡಿಯಲ್ಲಿ ₹13 ನೇರ ಉಳಿತಾಯವಾಗಿದೆ. ಸೆಪ್ಟೆಂಬರ್ 22 ರಂದು ಪರಿಚಯಿಸಲಾದ ಜಿಎಸ್ಟಿ ಸುಧಾರಣೆಗಳ ನಂತರ, ವೆಚ್ಚವು ₹105 ಕ್ಕೆ ಅಂದರೆ ಮತ್ತಷ್ಟು ಕಡಿಮೆಯಾಗಿದೆ, ಇದರ ಪರಿಣಾಮವಾಗಿ ಹಿಂದಿನ ವಿತರಣಾ ಯುಗಕ್ಕೆ ಹೋಲಿಸಿದರೆ ಒಟ್ಟು ₹26 ಉಳಿತಾಯವಾಗಿದೆ. ತಾಯಂದಿರು ಮತ್ತು ಸಹೋದರಿಯರು ಮನೆಯ ಬಜೆಟ್ ಅನ್ನು ಸೂಕ್ಷ್ಮವಾಗಿ ನಿರ್ವಹಿಸುತ್ತಾರೆ ಮತ್ತು ಹೊಸ ತೆರಿಗೆ ಪದ್ಧತಿಯಡಿಯಲ್ಲಿ, ಕುಟುಂಬಗಳು ಈಗ ಪ್ರತಿ ತಿಂಗಳು ನೂರಾರು ರೂಪಾಯಿಗಳನ್ನು ಉಳಿಸುತ್ತಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಪಾದರಕ್ಷೆಗಳು ಎಲ್ಲರಿಗೂ ಮೂಲಭೂತ ಅವಶ್ಯಕತೆಯಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಹಿಂದಿನ ಸರ್ಕಾರದ ನಿಯಮದ ಪ್ರಕಾರ ₹75 ತೆರಿಗೆ ಹೊರೆಯಿಂದಾಗಿ ₹500 ಬೆಲೆಯ ಶೂ ಖರೀದಿಸುವಾಗ ಬೆಲೆ ₹575 ಆಗುತ್ತಿತ್ತು ಎಂದು ಹೇಳಿದರು. ಜಿಎಸ್‌ಟಿ ಅನುಷ್ಠಾನದೊಂದಿಗೆ, ಈ ತೆರಿಗೆಯನ್ನು ₹15 ರಷ್ಟು ಕಡಿಮೆ ಮಾಡಲಾಗಿದೆ. ಇತ್ತೀಚಿನ ಜಿಎಸ್‌ಟಿ ಸುಧಾರಣೆಗಳ ನಂತರ, ಅದೇ ಶೂ ಬೆಲೆ ಈಗ ₹50 ಕಡಿಮೆಯಾಗಿದೆ. ಈ ಹಿಂದೆ, ₹500 ಕ್ಕಿಂತ ಹೆಚ್ಚಿನ ಬೆಲೆಯ ಪಾದರಕ್ಷೆಗಳು ಇನ್ನೂ ಹೆಚ್ಚಿನ ತೆರಿಗೆಗಳನ್ನು ಆಕರ್ಷಿಸುತ್ತಿದ್ದವು ಎಂಬುದರತ್ತ ಪ್ರಧಾನಮಂತ್ರಿ ಬೆಟ್ಟು ಮಾಡಿದರು. ಸರ್ಕಾರವು ಈಗ ₹2,500 ವರೆಗಿನ ಬೆಲೆಯ ಶೂಗಳ ಮೇಲಿನ ತೆರಿಗೆ ದರಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಇದು ಸಾಮಾನ್ಯ ನಾಗರಿಕರಿಗೆ ಅವುಗಳು ಹೆಚ್ಚು ಕೈಗೆಟುಕುವಂತೆ ಮಾಡಿದೆ ಎಂದು ಅವರು ಒತ್ತಿ ಹೇಳಿದರು.

ಸ್ಕೂಟರ್ ಅಥವಾ ಮೋಟಾರ್‌ಸೈಕಲ್ ಹೊಂದುವುದು ಪ್ರತಿಯೊಂದು ಮನೆಯ ಸಾಮಾನ್ಯ ಆಕಾಂಕ್ಷೆಯಾಗಿದೆ ಎಂದು ಶ್ರೀ ಮೋದಿ ಹೇಳಿದರು, ಆದರೆ ವಿರೋಧ ಪಕ್ಷದ ಆಳ್ವಿಕೆಯಲ್ಲಿ, ಇದು ಕೂಡ ಕೈಗೆಟಕುವಂತಿರಲಿಲ್ಲ. ವಿರೋಧ ಪಕ್ಷದವರು ₹60,000ರ ಬೈಕಿನ ಮೇಲೆ ₹19,000 ಕ್ಕಿಂತ ಹೆಚ್ಚು ತೆರಿಗೆ ವಿಧಿಸಿದ್ದರು ಎಂದು ಅವರು ಎತ್ತಿ ತೋರಿಸಿದರು. 2017 ರಲ್ಲಿ ಜಿಎಸ್‌ಟಿ ಪರಿಚಯಿಸುವುದರೊಂದಿಗೆ, ಈ ತೆರಿಗೆಯನ್ನು ₹2,500 ರಷ್ಟು ಕಡಿಮೆ ಮಾಡಲಾಯಿತು. ಸೆಪ್ಟೆಂಬರ್ 22 ರಂದು ಜಾರಿಗೆ ತರಲಾದ ಪರಿಷ್ಕೃತ ದರಗಳ ನಂತರ, ಅದೇ ಮೋಟಾರ್ ಸೈಕಲ್ ಈಗ ಕೇವಲ ₹10,000 ತೆರಿಗೆಯನ್ನು ಆಕರ್ಷಿಸುತ್ತದೆ - ಇದು 2014 ಕ್ಕೆ ಹೋಲಿಸಿದರೆ ₹9,000 ನೇರ ಲಾಭವನ್ನು ನೀಡುತ್ತದೆ ಎಂದವರು ವಿವರಿಸಿದರು.

ಹಿಂದಿನ ವಿತರಣಾ ನಿಯಮದಡಿಯಲ್ಲಿ, ಮನೆ ನಿರ್ಮಿಸುವುದು ಅತ್ಯಂತ ದುಬಾರಿಯಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ₹300 ಸಿಮೆಂಟ್ ಚೀಲವು ₹90 ಕ್ಕಿಂತ ಹೆಚ್ಚು ತೆರಿಗೆಗಳನ್ನು ಆಕರ್ಷಿಸುತಿತ್ತು ಎಂದು ಅವರು ಎತ್ತಿ ತೋರಿಸಿದರು. 2017 ರಲ್ಲಿ ಜಿಎಸ್‌ಟಿ ಪರಿಚಯಿಸುವುದರೊಂದಿಗೆ, ಈ ತೆರಿಗೆಯನ್ನು ಸುಮಾರು ₹10 ರಷ್ಟು ಕಡಿಮೆ ಮಾಡಲಾಗಿದೆ. ಸೆಪ್ಟೆಂಬರ್ 22 ರಂದು ಜಾರಿಗೆ ತಂದ ಇತ್ತೀಚಿನ ಜಿಎಸ್‌ಟಿ ಸುಧಾರಣೆಗಳ ನಂತರ, ಅದೇ ಸಿಮೆಂಟ್ ಚೀಲವು ಈಗ ಕೇವಲ ₹50 ತೆರಿಗೆಯನ್ನು ಹೊಂದಿದೆ - ಇದರ ಪರಿಣಾಮವಾಗಿ 2014 ಕ್ಕೆ ಹೋಲಿಸಿದರೆ ₹40 ನೇರ ಉಳಿತಾಯವಾಗಿದೆ. ವಿರೋಧ ಪಕ್ಷದ ಅಡಿಯಲ್ಲಿ ಆಡಳಿತವು ಅತಿಯಾದ ತೆರಿಗೆಯಿಂದ ಗುರುತಿಸಲ್ಪಟ್ಟಿತ್ತು, ಈಗ ತಮ್ಮ ಸರ್ಕಾರವು ಸಾಮಾನ್ಯ ನಾಗರಿಕರಿಗೆ ಉಳಿತಾಯದ ಯುಗವನ್ನು ಪ್ರಾರಂಭಿಸಿದೆ ಎಂದು ಶ್ರೀ ಮೋದಿ ಹೇಳಿದರು.

ಜಿಎಸ್‌ಟಿ ಉಳಿತಾಯ ಉತ್ಸವದ ಮಧ್ಯೆ, ಸ್ವಾವಲಂಬಿ ಭಾರತದ ಗುರಿಯನ್ನು ನಾವು ಮರೆಯಬಾರದು ಎಂದು ಶ್ರೀ ಮೋದಿ ಹೇಳಿದರು. ಸ್ವದೇಶಿಯ ಮಂತ್ರವನ್ನು ಮರೆಯಬಾರದು ಎಂದು ಅವರು ನುಡಿದರು, ನಾವು ಮಾರಾಟ ಮಾಡುವುದು ಸ್ವದೇಶಿಯಾಗಿರಬೇಕು ಮತ್ತು ನಾವು ಖರೀದಿಸುವುದು ಸಹ ಸ್ವದೇಶಿಯಾಗಿರಬೇಕು ಎಂದು ಶ್ರೀ ಮೋದಿ ಆಗ್ರಹಿಸಿದರು. "ಇದು ಸ್ವದೇಶಿ" ಎಂದು ಹೆಮ್ಮೆಯಿಂದ ಘೋಷಿಸಲು ಅವರು ನಾಗರಿಕರನ್ನು ಪ್ರೋತ್ಸಾಹಿಸಿದರು. ಜನರು ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿದಾಗ, ಹಣವು ದೇಶದೊಳಗೆ ಉಳಿಯುತ್ತದೆ - ಸ್ಥಳೀಯ ಕುಶಲಕರ್ಮಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳನ್ನು ತಲುಪುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಹಣವು ವಿದೇಶಗಳಿಗೆ ಹರಿಯುವ ಬದಲು ನೇರವಾಗಿ ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ, ಹೊಸ ಹೆದ್ದಾರಿಗಳು ಮತ್ತು ರಸ್ತೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದರು. ಸ್ವದೇಶಿಯನ್ನು ರಾಷ್ಟ್ರೀಯ ಹೆಮ್ಮೆಯ ಸಂಕೇತವನ್ನಾಗಿ ಮಾಡುವಂತೆ ಅವರು ಎಲ್ಲರಿಗೂ ಕರೆ ನೀಡಿದರು. ಹಬ್ಬದ ಋತುವಿನಲ್ಲಿ ಸ್ವದೇಶಿ ಸರಕುಗಳನ್ನು ಮಾತ್ರ ಖರೀದಿಸುವುದಾಗಿ ಪ್ರತಿಜ್ಞೆ ಮಾಡುವಂತೆ ಪ್ರಧಾನಮಂತ್ರಿ ನಾಗರಿಕರಿಗೆ ಮನವಿ ಮಾಡಿದರು ಮತ್ತು ಅಭಿವೃದ್ಧಿ ಹಾಗು ಉದ್ಯೋಗ-ಸಂಬಂಧಿತ ಯೋಜನೆಗಳ ಪ್ರಾರಂಭಕ್ಕಾಗಿ ಮತ್ತೊಮ್ಮೆ ಅವರು ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.

ರಾಜಸ್ಥಾನದ ರಾಜ್ಯಪಾಲ ಶ್ರೀ ಹರಿಭಾವು ಕಿಸನ್‌ರಾವ್ ಬಗಾಡೆ, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್‌ಲಾಲ್ ಶರ್ಮಾ, ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಎಲ್ಲರಿಗೂ ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಭಾರತದ ವಿದ್ಯುತ್ ವಲಯವನ್ನು ಪರಿವರ್ತಿಸುವ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಅಣುಶಕ್ತಿ ವಿದ್ಯುತ್ ನಿಗಮ್ ಲಿಮಿಟೆಡ್‌ನ (ಅಶ್ವಿನಿ-ASHVINI) ಸುಮಾರು ರೂ. 42,000 ಕೋಟಿ ಮೌಲ್ಯದ ಮಹಿ ಬನ್ಸ್‌ವಾರಾ ರಾಜಸ್ಥಾನ ಪರಮಾಣು ವಿದ್ಯುತ್ ಯೋಜನೆಗೆ (4X700 ಮೆ.ವಾ.) ಅಡಿಪಾಯ ಹಾಕಿದರು. ಇದು ವಿಶ್ವಾಸಾರ್ಹ ಬೇಸ್ ಲೋಡ್ ಶಕ್ತಿಯನ್ನು ಪೂರೈಸುವ ದೇಶದ ಅತಿದೊಡ್ಡ ಪರಮಾಣು ಸ್ಥಾವರಗಳಲ್ಲಿ ಒಂದಾಗಲಿದೆ ಮತ್ತು ಪರಿಸರ ನಾಯಕತ್ವ ಹಾಗು ವಿಕಸನಗೊಳ್ಳುತ್ತಿರುವ ಪರಮಾಣು ಇಂಧನ ಭೂದೃಶ್ಯದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ. ಆತ್ಮನಿರ್ಭರ ಭಾರತದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ, ಮಹಿ ಬನ್ಸ್‌ವಾರಾ ರಾಜಸ್ಥಾನ ಪರಮಾಣು ವಿದ್ಯುತ್ ಯೋಜನೆಯು ಎನ್.ಪಿ.ಸಿ.ಐ.ಎಲ್.(NPCIL) ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ನಾಲ್ಕು ದೇಶೀಯವಾದ 700 ಮೆ.ವಾ. ಒತ್ತಡದಲ್ಲಿರಿಸಿದ ಭಾರ ಜಲ ರಿಯಾಕ್ಟರ್‌ಗಳನ್ನು ಒಳಗೊಂಡಿದೆ. ಇದು ಭಾರತದ ವಿಶಾಲವಾದ "ಫ್ಲೀಟ್ ಮೋಡ್" ಉಪಕ್ರಮದ ಭಾಗವಾಗಿದೆ, ಇದರಡಿ ಹತ್ತು ಒಂದೇ ರೀತಿಯ 700 ಮೆ.ವಾ. ರಿಯಾಕ್ಟರ್‌ಗಳನ್ನು ಏಕರೂಪದ ವಿನ್ಯಾಸ ಮತ್ತು ಖರೀದಿ ಯೋಜನೆಗಳ ಅಡಿಯಲ್ಲಿ ಭಾರತದಾದ್ಯಂತ ನಿರ್ಮಿಸಲಾಗುತ್ತಿದೆ. ಈ ಯೋಜನೆಯು ವೆಚ್ಚ ದಕ್ಷತೆ, ವೇಗದ ನಿಯೋಜನೆ ಮತ್ತು ಏಕೀಕೃತ ಕಾರ್ಯಾಚರಣೆಯ ಪರಿಣತಿಯನ್ನು ತರುತ್ತದೆ.

ಭಾರತದ ಶುದ್ಧ ಇಂಧನ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಅವರು ರಾಜಸ್ಥಾನದಲ್ಲಿ ಸುಮಾರು 19,210 ಕೋಟಿ ರೂ. ಮೌಲ್ಯದ ಹಸಿರು ಇಂಧನ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಿಲಾನ್ಯಾಸ ನೆರವೇರಿಸಿದರು. ಫಲೋಡಿ, ಜೈಸಲ್ಮೇರ್, ಜಲೋರ್, ಸಿಕಾರ್ ಸೇರಿದಂತೆ ಇತರ ಸ್ಥಳಗಳಲ್ಲಿ ಸೌರ ಯೋಜನೆಗಳನ್ನು ಉದ್ಘಾಟಿಸಿದರು. ಬಿಕಾನೇರ್‌ನಲ್ಲಿ ಸೌರ ಯೋಜನೆಯ ಶಿಲಾನ್ಯಾಸವನ್ನೂ ನೆರವೇರಿಸಿದರು. ಜೊತೆಗೆ, ಆಂಧ್ರಪ್ರದೇಶದ ರಾಮಗಿರಿಯಲ್ಲಿ ಸೌರ ಉದ್ಯಾನವನಕ್ಕೂ ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆಗಳು ಭಾರತದ ಶುದ್ಧ ಇಂಧನ ಸಾಮರ್ಥ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ, ಲಕ್ಷಾಂತರ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಡೆಯುವುದರೊಂದಿಗೆ ಗಣನೀಯ ಪ್ರಮಾಣದ ಹಸಿರು ಶಕ್ತಿಯನ್ನು ಉತ್ಪಾದಿಸುತ್ತವೆ.

ಎಂಟು ರಾಜ್ಯಗಳಲ್ಲಿ 2030 ರ ವೇಳೆಗೆ 181.5 ಗಿಗಾವ್ಯಾಟ್ (ಜಿ.ಡಬ್ಲ್ಯು.) ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ವಲಯ (ಆರ್.ಇ.ಝಡ್-REZ) ಉಪಕ್ರಮದ ಅಡಿಯಲ್ಲಿ 13,180 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಮೂರು ವಿದ್ಯುತ್ ಪ್ರಸರಣ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ಮಾಡಿದರು. ಲೋಡ್ ಕೇಂದ್ರಗಳ ಕಡೆಗೆ ನವೀಕರಿಸಬಹುದಾದ ಶಕ್ತಿಯನ್ನು ಪರಿಣಾಮಕಾರಿಯಾಗಿ ಪ್ರಸರಣ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಗ್ರಿಡ್ ಸ್ಥಿರತೆಯನ್ನು ಹೆಚ್ಚಿಸಲು, ರಾಜಸ್ಥಾನ ಆರ್.ಇ.ಝಡ್ ಗಾಗಿ ಪವರ್‌ಗ್ರಿಡ್ ಪ್ರಮುಖ ಪ್ರಸರಣ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುತ್ತಿದೆ.

ಇದು ರಾಜಸ್ಥಾನದ ಬೀವರ್ ನಿಂದ ಮಧ್ಯಪ್ರದೇಶದ ಮಾಂಡ್ಸೌರ್ ವರೆಗಿನ 765 ಕೆವಿ ಪ್ರಸರಣ ಮಾರ್ಗಗಳು ಮತ್ತು ಸಂಬಂಧಿತ ಸಬ್‌ಸ್ಟೇಷನ್‌ಗಳ ವಿಸ್ತರಣೆಯನ್ನು ಒಳಗೊಂಡಿದೆ; ರಾಜಸ್ಥಾನದ ಸಿರೋಹಿಯಿಂದ ಮಾಂಡ್ಸೌರ್ ಮತ್ತು ಮಧ್ಯಪ್ರದೇಶದ ಖಾಂಡ್ವಾ ವರೆಗೆ, ಸಿರೋಹಿ ಸಬ್‌ಸ್ಟೇಷನ್‌ನಲ್ಲಿ ಪರಿವರ್ತಕ ಸಾಮರ್ಥ್ಯದ ಹೆಚ್ಚಳ ಮತ್ತು ಮಾಂಡ್ಸೌರ್ ಮತ್ತು ಖಾಂಡ್ವಾ ಸಬ್‌ಸ್ಟೇಷನ್‌ಗಳಲ್ಲಿ ವಿಸ್ತರಣೆಯನ್ನು ಒಳಗೊಂಡಿದೆ; ಹಾಗು ರಾಜಸ್ಥಾನದ ಬಿಕಾನೇರ್‌ನಿಂದ ಹರಿಯಾಣದ ಸಿವಾನಿ ಮತ್ತು ಫತೇಹಾಬಾದ್‌ಗೆ ಮತ್ತು ಪಂಜಾಬ್‌ನ ಪತ್ರಾನ್‌ಗೆ 765 ಕೆವಿ ಮತ್ತು 400 ಕೆವಿ ಪ್ರಸರಣ ಮಾರ್ಗವನ್ನು ಬಿಕಾನೇರ್‌ನಲ್ಲಿ ಸಬ್‌ಸ್ಟೇಷನ್‌ಗಳ ಸ್ಥಾಪನೆ ಮತ್ತು ಸಿವಾನಿ ಸಬ್‌ಸ್ಟೇಷನ್‌ನ ವಿಸ್ತರಣೆಯೊಂದಿಗೆ ಒಳಗೊಂಡಿದೆ. ಒಟ್ಟಾರೆಯಾಗಿ, ಈ ಯೋಜನೆಗಳು ರಾಜಸ್ಥಾನದ ಉತ್ಪಾದನಾ ಕೇಂದ್ರಗಳಿಂದ ಭಾರತದಾದ್ಯಂತ ಫಲಾನುಭವಿ ರಾಜ್ಯಗಳಲ್ಲಿನ ಬೇಡಿಕೆಯ ಕೇಂದ್ರಗಳಿಗೆ 15.5 ಗಿಗಾ ವ್ಯಾಟ್ ಹಸಿರು ಶಕ್ತಿಯನ್ನು ಸರಾಗವಾಗಿ ವರ್ಗಾಯಿಸಲು ಅನುಕೂಲವಾಗುತ್ತವೆ.

ಪ್ರಧಾನಮಂತ್ರಿ ಅವರು ಜೈಸಲ್ಮೇರ್ ಮತ್ತು ಬಿಕಾನೇರ್‌ನಲ್ಲಿ 220 ಕೆವಿ ಮತ್ತು ಸಂಬಂಧಿತ ಲೈನ್‌ಗಳನ್ನು ಒಳಗೊಂಡಿರುವ ಮೂರು ಗ್ರಿಡ್ ಸಬ್‌ಸ್ಟೇಷನ್‌ಗಳಿಗೆ (ಜಿಎಸ್‌ಎಸ್) ಅಡಿಪಾಯ ಹಾಕಿದರು. ಅವರು ಬಾರ್ಮರ್ ಜಿಲ್ಲೆಯ ಶಿವ್‌ನಲ್ಲಿ 220 ಕೆವಿ ಜಿಎಸ್‌ಎಸ್ ಅನ್ನು ಉದ್ಘಾಟಿಸಲಿದ್ದಾರೆ. 490 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳು, ಈ ಪ್ರದೇಶದಲ್ಲಿ ಇಂಧನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಗಮನಾರ್ಹವಾಗಿ ಕೊಡುಗೆ ನೀಡುತ್ತವೆ.

ರೈತರ ಸಬಲೀಕರಣಕ್ಕೆ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಪಿಎಂ-ಕುಸುಮ್ (ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಮ್ ಉತ್ಥಾನ್ ಮಹಾಭಿಯಾನ್) ಯೋಜನೆ (ಘಟಕ ಸಿ) ಅಡಿಯಲ್ಲಿ 16,050 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 3517 ಮೆಗಾವ್ಯಾಟ್ ಫೀಡರ್ ಮಟ್ಟದ ಸೌರೀಕರಣ ಯೋಜನೆಗಳನ್ನು ಉದ್ಘಾಟಿಸಿದರು. ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದು, ನೀರಾವರಿ ವೆಚ್ಚವನ್ನು ಕಡಿತಗೊಳಿಸುವುದು ಮತ್ತು ಗ್ರಾಮೀಣ ಇಂಧನ ಸ್ವಾವಲಂಬನೆಯನ್ನು ಉತ್ತೇಜಿಸುವ ಮೂಲಕ ಲಕ್ಷಾಂತರ ರೈತರಿಗೆ ಪ್ರಯೋಜನವನ್ನು ನೀಡುವ ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ನೀರಾವರಿ ಶಕ್ತಿಯನ್ನು ಖಚಿತಪಡಿಸಿಕೊಳ್ಳಲು ಕೃಷಿ ಫೀಡರ್‌ಗಳನ್ನು ಸೌರೀಕರಣಗೊಳಿಸಲಾಗುತ್ತಿದೆ.

ರಾಮಜಲ್ ಸೇತು ಜೋಡಣೆ ಯೋಜನೆಗೆ ಪ್ರಮುಖ ಉತ್ತೇಜನ ನೀಡುವ ಮತ್ತು ನೀರಿನ ಸುರಕ್ಷತೆಯ ದೃಷ್ಟಿಕೋನವನ್ನು ಮುಂದುವರೆಸುವ ಸಲುವಾಗಿ, ಪ್ರಧಾನಮಂತ್ರಿ ಅವರು ರಾಜಸ್ಥಾನದಲ್ಲಿ 20,830 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಜಲ ಸಂಪನ್ಮೂಲ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಇಸಾರ್ಡಾದಿಂದ ವಿವಿಧ ಫೀಡರ್‌ಗಳ ನಿರ್ಮಾಣ, ಅಜ್ಮೀರ್ ಜಿಲ್ಲೆಯಲ್ಲಿ ಮೋರ್ ಸಾಗರ್ ಕೃತಕ ಜಲಾಶಯ ನಿರ್ಮಾಣ ಮತ್ತು ಚಿತ್ತೋರ್‌ಗಢದಿಂದ ಅದರ ಫೀಡರ್‌ಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಿಸಾಲ್ಪುರ್ ಅಣೆಕಟ್ಟಿನಲ್ಲಿ ಇನ್‌ಟೇಕ್ ಪಂಪ್ ಹೌಸ್, ಖಾರಿ ಫೀಡರ್‌ನ ಪುನರುಜ್ಜೀವನ ಮತ್ತು ವಿವಿಧ ಫೀಡರ್ ಕಾಲುವೆ ಕಾಮಗಾರಿಗಳು ಇತರ ಕೆಲಸಗಳಲ್ಲಿ ಸೇರಿವೆ. ಇಸಾರ್ಡಾ ಅಣೆಕಟ್ಟು, ಧೋಲ್ಪುರ್ ಏತ ಯೋಜನೆ, ತಕ್ಲಿ ಯೋಜನೆಯನ್ನು ಸಹ ಪ್ರಧಾನಮಂತ್ರಿ ಉದ್ಘಾಟಿಸಿದರು.

ಎಲ್ಲರಿಗೂ ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರಿನ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಅಟಲ್ ಮಿಷನ್ ಫಾರ್ ರಿಜುವನೇಷನ್ ಅಂಡ್ ಅರ್ಬನ್ ಟ್ರಾನ್ಸ್‌ಫರ್ಮೇಷನ್ (ಅಮೃತ್) 2.0 ಅಡಿಯಲ್ಲಿ ಬನ್ಸ್‌ವಾರಾ, ಡುಂಗರ್‌ಪುರ್, ಉದಯಪುರ್, ಸವಾಯಿ ಮಾಧೋಪುರ್, ಚುರು, ಅಜ್ಮೀರ್, ಭಿಲ್ವಾರಾ ಜಿಲ್ಲೆಗಳಲ್ಲಿ ರೂ. 5,880 ಕೋಟಿಗೂ ಹೆಚ್ಚು ಮೌಲ್ಯದ ಪ್ರಮುಖ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ರಸ್ತೆ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಮಂತ್ರಿ ಅವರು ಭರತ್‌ಪುರ ನಗರದಲ್ಲಿ ಮೇಲ್ಸೇತುವೆಗಳ ನಿರ್ಮಾಣ, ಬನಾಸ್ ನದಿಗೆ ಸೇತುವೆ ಮತ್ತು 116 ಅಟಲ್ ಪ್ರಗತಿ ಪಥ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಾರ್ಮರ್, ಅಜ್ಮೀರ್, ಡುಂಗರಪುರ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸಂಬಂಧಿಸಿದ ಬಹು ರಸ್ತೆ ಯೋಜನೆಗಳನ್ನು ಅವರು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. 2,630 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳು ಪ್ರಾದೇಶಿಕ ರಸ್ತೆ ಸಂಪರ್ಕವನ್ನು ಸುಧಾರಿಸುತ್ತವೆ, ಸುಗಮ ಸಂಚಾರವನ್ನು ಖಚಿತಪಡಿಸುತ್ತವೆ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತವೆ.

ಭರತ್‌ಪುರದಲ್ಲಿ 250 ಹಾಸಿಗೆಗಳ ಆರ್‌ಬಿಎಂ ಆಸ್ಪತ್ರೆ, ಜೈಪುರದಲ್ಲಿ ಐಟಿ ಅಭಿವೃದ್ಧಿ ಮತ್ತು ಇ-ಆಡಳಿತ ಕೇಂದ್ರ, ಮಕ್ರಾನಾ ನಗರದಲ್ಲಿ ಸಂಸ್ಕರಣಾ ಘಟಕಗಳು ಮತ್ತು ಪಂಪಿಂಗ್ ಕೇಂದ್ರಗಳು ಸೇರಿದಂತೆ ಒಳಚರಂಡಿ ವ್ಯವಸ್ಥೆ ಮತ್ತು ಮಾಂಡವಾ ಹಾಗು ಜುನ್‌ಜುನು ಜಿಲ್ಲೆಯಲ್ಲಿ ಒಳಚರಂಡಿ ಮತ್ತು ನೀರು ಸರಬರಾಜು ಯೋಜನೆಯನ್ನು ಸಹ ಪ್ರಧಾನಮಂತ್ರಿ ಉದ್ಘಾಟಿಸಿದರು.

ರೈಲು ಸಂಪರ್ಕಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಪ್ರಧಾನಮಂತ್ರಿ ಅವರು ಮೂರು ರೈಲುಗಳಿಗೆ ಹಸಿರು ನಿಶಾನೆ ತೋರಿದರು, ಬಿಕನೇರ್ ಮತ್ತು ದಿಲ್ಲಿ ಕಂಟೋನ್ಮೆಂಟ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ಜೋಧ್‌ಪುರ ಮತ್ತು ದಿಲ್ಲಿ ಕಂಟೋನ್ಮೆಂಟ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮತ್ತು ಉದಯಪುರ ನಗರ - ಚಂಡೀಗಢ ಎಕ್ಸ್‌ಪ್ರೆಸ್ ರೈಲುಗಳು ಇಂದು ನಿಶಾನೆ ತೋರಿದ ರೈಲುಗಳಾಗಿವೆ.   ರೈಲುಗಳು ರಾಜಸ್ಥಾನ ಮತ್ತು ಇತರ ಉತ್ತರ ರಾಜ್ಯಗಳ ನಡುವಿನ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ.

ಎಲ್ಲರಿಗೂ ಉದ್ಯೋಗದ ತಮ್ಮ ಚಿಂತನಾ ದೃಷ್ಟಿಕೋನವನ್ನು ಮುಂದುವರಿಸುತ್ತಾ, ರಾಜಸ್ಥಾನದಲ್ಲಿ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ ಯುವಜನರಿಗೆ 15,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು. ಇವರಲ್ಲಿ 5770 ಕ್ಕೂ ಹೆಚ್ಚು ಜಾನುವಾರು ಸೇವಕರು, 4190 ಕಿರಿಯ ಸಹಾಯಕರು, 1800 ಕಿರಿಯ ಬೋಧಕರು, 1460 ಕಿರಿಯ ಎಂಜಿನಿಯರ್‌ಗಳು, 1200 ಮೂರನೇ ದರ್ಜೆಯ ಹಂತ -2 ಶಿಕ್ಷಕರು ಸೇರಿದ್ದಾರೆ.

 

****

 


(Release ID: 2171444) Visitor Counter : 9