ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ 49ನೇ ಪ್ರಗತಿ ಸಭೆ


ಗಣಿ, ರೈಲ್ವೆ, ಜಲಸಂಪನ್ಮೂಲ, ಕೈಗಾರಿಕಾ ಕಾರಿಡಾರ್‌ಗಳು ಮತ್ತು ವಿದ್ಯುತ್ ವಲಯಗಳಿಗೆ ಸಂಬಂಧಿಸಿದ ಎಂಟು ನಿರ್ಣಾಯಕ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ

15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 65,000 ಕೋಟಿ ರೂ.ಗಳಿಗೂ ಹೆಚ್ಚಿನ ಸಂಚಿತ ಹೂಡಿಕೆಯ ಯೋಜನೆಗಳ ಪ್ರಗತಿ  ಪರಿಶೀಲನೆ

ಪ್ರಗತಿ ಪರಿಶೀಲನೆಯಲ್ಲಿ  ಆದ್ಯತೆ: ಸ್ಪಷ್ಟ ಸಮಯಸೂಚಿಗಳು, ಪರಿಣಾಮಕಾರಿ ಅಂತರ-ಸಂಸ್ಥೆ ಸಮನ್ವಯ ಮತ್ತು ಅಡಚಣೆಗಳ ತ್ವರಿತ ಪರಿಹಾರ

ಯೋಜನಾ ವೆಚ್ಚದಲ್ಲಿ ಏರಿಕೆ ಮತ್ತು ನಾಗರಿಕರಿಗೆ ಅಗತ್ಯ ಸೇವೆಗಳನ್ನು ಸಕಾಲಿಕವಾಗಿ ಪಡೆಯಲು ಸಾಧ್ಯವಾಗದಿರುವಿಕೆ - ಅನುಷ್ಠಾನ ವಿಳಂಬದಿಂದ ವೆಚ್ಚ ದುಪ್ಪಟ್ಟಾಗುತ್ತದೆ ಎಂಬುದನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ

ಫಲಿತಾಂಶ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಪ್ರಧಾನಮಂತ್ರಿ ಸೂಚನೆ

Posted On: 24 SEP 2025 8:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೌತ್ ಬ್ಲಾಕ್‌ನಲ್ಲಿ ನಡೆದ ’ಪ್ರಗತಿ’ಯ 49 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.  “ಪ್ರಗತಿ” ಎಂಬುದು ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನಕ್ಕಾಗಿ ಐಸಿಟಿ-ಸಕ್ರಿಯಗೊಳಿಸಿದ ಬಹು-ಮಾದರಿ ವೇದಿಕೆ. ಪ್ರಮುಖ ಯೋಜನೆಗಳನ್ನು ತ್ವರಿತವಾಗಿ ನಿರ್ವಹಿಸಲು, ಅಡಚಣೆಗಳನ್ನು ಪರಿಹರಿಸಲು ಮತ್ತು ಸಮಯಕ್ಕೆ ಸರಿಯಾಗಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ವೇದಿಕೆಯು ಕೇಂದ್ರ ಮತ್ತು ರಾಜ್ಯಗಳನ್ನು ಒಟ್ಟುಗೂಡಿಸುತ್ತದೆ.

ಸಭೆಯ ಸಮಯದಲ್ಲಿ, ಪ್ರಧಾನ ಮಂತ್ರಿಗಳು ಗಣಿ, ರೈಲ್ವೆ, ಜಲಸಂಪನ್ಮೂಲಗಳು, ಕೈಗಾರಿಕಾ ಕಾರಿಡಾರ್‌ಗಳು ಮತ್ತು ವಿದ್ಯುತ್ ಸೇರಿದಂತೆ ಎಂಟು ನಿರ್ಣಾಯಕ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಿದರು. ಈ ಯೋಜನೆಗಳು ದೇಶಾದ್ಯಂತ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದ್ದು, ₹ 65,000 ಕೋಟಿಗೂ ಹೆಚ್ಚು ಸಂಚಿತ ಹೂಡಿಕೆಯನ್ನು ಹೊಂದಿವೆ. ಆರ್ಥಿಕ ಬೆಳವಣಿಗೆ ಮತ್ತು ಸಾರ್ವಜನಿಕ ಕಲ್ಯಾಣದ ಪ್ರಮುಖ ಚಾಲಕ ಶಕ್ತಿ ಎಂದು ಗುರುತಿಸಲ್ಪಟ್ಟ ಯೋಜನೆಗಳನ್ನು ಸ್ಪಷ್ಟ ಸಮಯ ಮಿತಿಗಳು, ಪರಿಣಾಮಕಾರಿ ಅಂತರ-ಸಂಸ್ಥೆ ಸಮನ್ವಯ ಮತ್ತು ಅಡಚಣೆಗಳ ತ್ವರಿತ ಪರಿಹಾರದ ಮೇಲೆ ಒತ್ತು ನೀಡಿ ಪರಿಶೀಲಿಸಲಾಯಿತು.

ಅನುಷ್ಠಾನದಲ್ಲಿಯ ವಿಳಂಬವು ವೆಚ್ಚವನ್ನು ದುಪ್ಪಟ್ಟು ಮಾಡುತ್ತದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಇದು  ಆಗಾಗ್ಗೆ ಯೋಜನಾ ವೆಚ್ಚವನ್ನು ಹೆಚ್ಚಿಸುವುದರ ಜೊತೆಗೆ ನಾಗರಿಕರಿಗೆ ಅಗತ್ಯ ಸೇವೆಗಳು ಮತ್ತು ಮೂಲಸೌಕರ್ಯಗಳಿಗೆ ಸಕಾಲಿಕ ಪ್ರವೇಶವನ್ನು ವಂಚಿತಗೊಳಿಸುತ್ತದೆ. ಕೇಂದ್ರ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಫಲಿತಾಂಶ-ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳುವಂತೆ, ಅವಕಾಶಗಳನ್ನು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಬಳಸುವಂತೆ  ಸಲಹೆ ಮಾಡಿದರಲ್ಲದೆ ನಾಗರಿಕರಿಗೆ ಜೀವನ ಸುಲಭಗೊಳಿಸುವ  ಹಾಗು ಉದ್ಯಮಗಳಿಗೆ ವ್ಯವಹಾರ ಮಾಡಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ಗುರಿಗಳತ್ತ ಸಾಗುವಂತೆಯೂ  ಅವರು ಆಗ್ರಹಿಸಿದರು.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರಮುಖ ಯೋಜನೆಗಳ ನಿಯಮಿತ ಪರಿಶೀಲನೆ ಮತ್ತು ಮೇಲ್ವಿಚಾರಣೆಗಾಗಿ ತಮ್ಮ ಮಟ್ಟದಲ್ಲಿ ಕಾರ್ಯವಿಧಾನಗಳನ್ನು ಸಾಂಸ್ಥಿಕಗೊಳಿಸಬೇಕು, ಸಕಾಲಿಕ ಅನುಷ್ಠಾನ ಮತ್ತು ಅಡಚಣೆಗಳಿಗೆ ಸಂಬಂಧಿಸಿ  ಪರಿಣಾಮಕಾರಿ ಪರಿಹಾರವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸ್ಪರ್ಧಾತ್ಮಕತೆಯನ್ನು ಸುಧಾರಿಸುವ, ದಕ್ಷತೆಯನ್ನು ಬಲಪಡಿಸುವ ಮತ್ತು ವಲಯಗಳಲ್ಲಿ ನಾವೀನ್ಯತೆಯನ್ನು ಬೆಳೆಸುವ ಗುರಿಯನ್ನು ಹೊಂದಿರುವ ಸುಧಾರಣೆಗಳಿಗೆ ಬಲವಾದ ಒತ್ತು ನೀಡಬೇಕೆಂದು ಅವರು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒತ್ತಾಯಿಸಿದರು ಮತ್ತು ಈ ಸುಧಾರಣೆಗಳ ಮೂಲಕ ಉತ್ತಮ ಸಿದ್ಧತೆಯು ಉದಯೋನ್ಮುಖ ಅವಕಾಶಗಳನ್ನು ತ್ವರಿತವಾಗಿ ವಶಪಡಿಸಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ ಎಂದೂ ಒತ್ತಿ ಹೇಳಿದರು.

 

*****


(Release ID: 2171029) Visitor Counter : 26