ಪ್ರಧಾನ ಮಂತ್ರಿಯವರ ಕಛೇರಿ
ಸೆಪ್ಟೆಂಬರ್ 17ರಂದು ಮಧ್ಯಪ್ರದೇಶಕ್ಕೆ ಪ್ರಧಾನಮಂತ್ರಿ ಭೇಟಿ
ಪ್ರಧಾನಮಂತ್ರಿ ಅವರಿಂದ ‘ಸ್ವಸ್ಥ ನಾರಿ ಸಶಕ್ತ ಪರಿವಾರ್’ಮತ್ತು ‘8ನೇ ರಾಷ್ಟ್ರೀಯ ಪೋಷಣ್ ಮಾಹ್’ ಅಭಿಯಾನಗಳಿಗೆ ಚಾಲನೆ
ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಇದುವರೆಗಿನ ಅತಿದೊಡ್ಡ ಆರೋಗ್ಯ ಸೇವಾ ಕಾರ್ಯಕ್ರಮ
ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರವರೆಗೆ ದೇಶಾದ್ಯಂತ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳ ಆಯೋಜನೆ
ಪ್ರಧಾನಮಂತ್ರಿ ಅವರಿಂದ ಮಧ್ಯಪ್ರದೇಶದಲ್ಲಿ ‘ಆದಿ ಸೇವಾ ಪರ್ವ್’ಗೆ ಚಾಲನೆ: ಬುಡಕಟ್ಟು ಪ್ರದೇಶಗಳಲ್ಲಿ ಸೇವಾ-ಆಧಾರಿತ ಚಟುವಟಿಕೆಗಳ ಸರಣಿ
ಪ್ರಧಾನಮಂತ್ರಿ ಅವರಿಂದ ಮಧ್ಯಪ್ರದೇಶಕ್ಕೆ ಒಂದು ಕೋಟಿ ಸಿಕಲ್ ಸೆಲ್ ಸ್ಕ್ರೀನಿಂಗ್ ಮತ್ತು ಕೌನ್ಸೆಲಿಂಗ್ ಕಾರ್ಡ್ಗಳ ವಿತರಣೆ
ಪ್ರಧಾನಮಂತ್ರಿ ಅವರಿಂದ ಧಾರ್ ನಲ್ಲಿ ಪಿ.ಎಂ ಮಿತ್ರ ಪಾರ್ಕ್ ಉದ್ಘಾಟನೆ
Posted On:
16 SEP 2025 2:49PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಧಾರ್ ನಲ್ಲಿ 'ಸ್ವಸ್ಥ ನಾರಿ ಸಶಕ್ತ ಪರಿವಾರ್' ಮತ್ತು '8ನೇ ರಾಷ್ಟ್ರೀಯ ಪೋಷಣ್ ಮಾಹ್' ಅಭಿಯಾನಗಳಿಗೆ ಅವರು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಹಲವಾರು ಇತರ ಉಪಕ್ರಮಗಳಿಗೆ ಶಂಕುಸ್ಥಾಪನೆ ಮತ್ತು ಚಾಲನೆ ನೀಡಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಆರೋಗ್ಯ, ಪೋಷಣೆ, ಫಿಟ್ನೆಸ್, ಮತ್ತು 'ಸ್ವಸ್ಥ ಹಾಗೂ ಸಶಕ್ತ ಭಾರತ'ದ ಕುರಿತ ಅವರ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು 'ಸ್ವಸ್ಥ ನಾರಿ ಸಶಕ್ತ ಪರಿವಾರ್' ಮತ್ತು '8ನೇ ರಾಷ್ಟ್ರೀಯ ಪೋಷಣ್ ಮಾಹ್' ಅಭಿಯಾನಗಳಿಗೆ ಚಾಲನೆ ನೀಡಲಿದ್ದಾರೆ. ಈ ಅಭಿಯಾನವು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ದೇಶಾದ್ಯಂತ ಆಯುಷ್ಮಾನ್ ಆರೋಗ್ಯ ಮಂದಿರಗಳು, ಸಮುದಾಯ ಆರೋಗ್ಯ ಕೇಂದ್ರಗಳು (CHCs), ಜಿಲ್ಲಾ ಆಸ್ಪತ್ರೆಗಳು ಮತ್ತು ಇತರ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು, ಇದು ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ನಡೆಯುತ್ತಿರುವ ಅತಿದೊಡ್ಡ ಆರೋಗ್ಯ ಸೇವಾ ಕಾರ್ಯಕ್ರಮವಾಗಿದೆ. ಪ್ರತಿದಿನ ದೇಶಾದ್ಯಂತ ಎಲ್ಲ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಲಾಗುವುದು.
ಈ ದೇಶವ್ಯಾಪಿ ತೀವ್ರ ಅಭಿಯಾನವು ಸಮುದಾಯ ಮಟ್ಟದಲ್ಲಿ ಮಹಿಳಾ-ಕೇಂದ್ರಿತ ತಡೆಗಟ್ಟುವ, ಉತ್ತೇಜಕ ಮತ್ತು ಗುಣಪಡಿಸುವ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ. ಇದು ಸಾಂಕ್ರಾಮಿಕವಲ್ಲದ ರೋಗಗಳು, ರಕ್ತಹೀನತೆ, ಕ್ಷಯ ರೋಗ ಮತ್ತು ಸಿಕಲ್ ಸೆಲ್ ರೋಗಗಳ ಸ್ಕ್ರೀನಿಂಗ್, ಆರಂಭಿಕ ಪತ್ತೆ ಮತ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಬಲಪಡಿಸುತ್ತದೆ. ಇದೇ ವೇಳೆ, ಮಾತೃ, ಶಿಶು ಮತ್ತು ಹದಿಹರೆಯದವರ ಆರೋಗ್ಯಕ್ಕೆ ಸಂಬಂಧಿಸಿದ ಗರ್ಭಪೂರ್ವ ಆರೈಕೆ, ರೋಗನಿರೋಧಕ ಚುಚ್ಚುಮದ್ದು, ಪೋಷಣೆ, ಮುಟ್ಟಿನ ನೈರ್ಮಲ್ಯ, ಜೀವನಶೈಲಿ ಮತ್ತು ಮಾನಸಿಕ ಆರೋಗ್ಯ ಜಾಗೃತಿ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ. ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಆಸ್ಪತ್ರೆಗಳು, ಕೇಂದ್ರ ಸರ್ಕಾರದ ಸಂಸ್ಥೆಗಳು ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ಸ್ತ್ರೀರೋಗ, ಮಕ್ಕಳ ಆರೋಗ್ಯ, ಕಣ್ಣು, ಇ ಎನ್ ಟಿ, ದಂತ, ಚರ್ಮ ಮತ್ತು ಮನೋವೈದ್ಯಕೀಯ ತಜ್ಞರ ಸೇವೆಗಳನ್ನು ಒದಗಿಸಲಾಗುತ್ತದೆ.
ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ರಕ್ತದಾನ ಶಿಬಿರಗಳನ್ನೂ ಆಯೋಜಿಸಲಾಗುವುದು. ರಕ್ತದಾನಿಗಳನ್ನು ಇ-ರಕ್ತಕೋಶ್ ಪೋರ್ಟಲ್ನಲ್ಲಿ ನೋಂದಾಯಿಸಲಾಗುತ್ತದೆ ಮತ್ತು ಮೈಗವರ್ನ್ ಮೂಲಕ ಪ್ರತಿಜ್ಞಾ ಅಭಿಯಾನಗಳನ್ನು ನಡೆಸಲಾಗುವುದು. ಫಲಾನುಭವಿಗಳನ್ನು ಪಿ.ಎಂ.-ಜೆ.ಎ.ವೈ, ಆಯುಷ್ಮಾನ್ ವಯ ವಂದನಾ ಮತ್ತು ಎಬಿಹೆಚ್ಎ ಅಡಿಯಲ್ಲಿ ನೋಂದಾಯಿಸಲಾಗುವುದು. ಆರೋಗ್ಯ ಶಿಬಿರಗಳಲ್ಲಿ ಕಾರ್ಡ್ ಪರಿಶೀಲನೆ ಮತ್ತು ಕುಂದುಕೊರತೆ ನಿವಾರಣೆಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಮಹಿಳೆಯರು ಮತ್ತು ಕುಟುಂಬಗಳಿಗೆ ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮದ ಅಭ್ಯಾಸಗಳನ್ನು ಉತ್ತೇಜಿಸಲು ಯೋಗ ತರಬೇತಿ, ಆಯುರ್ವೇದ ಸಮಾಲೋಚನೆಗಳು ಮತ್ತು ಇತರ ಆಯುಷ್ ಸೇವೆಗಳನ್ನು ಆಯೋಜಿಸಲಾಗುವುದು. ಈ ಅಭಿಯಾನವು ಬೊಜ್ಜು ತಡೆಗಟ್ಟುವುದು, ಪೋಷಣೆಯನ್ನು ಸುಧಾರಿಸುವುದು ಮತ್ತು ಸ್ವಯಂಪ್ರೇರಿತ ರಕ್ತದಾನಕ್ಕೆ ವಿಶೇಷ ಒತ್ತು ನೀಡುವ ಮೂಲಕ ಆರೋಗ್ಯಕರ ಜೀವನಶೈಲಿ ಅಭ್ಯಾಸಗಳತ್ತ ಸಮುದಾಯಗಳನ್ನು ಸಜ್ಜುಗೊಳಿಸಲಿದೆ. ಸಮುದಾಯದ ಸಹಭಾಗಿತ್ವದಲ್ಲಿ ಕ್ಷಯ ರೋಗಿಗಳಿಗೆ ಪೋಷಣೆ, ಸಮಾಲೋಚನೆ ಮತ್ತು ಆರೈಕೆಯನ್ನು ಬೆಂಬಲಿಸಲು ನಾಗರಿಕರನ್ನು ನಿಕ್ಷಯ್ ಮಿತ್ರರಾಗಿ ನೋಂದಾಯಿಸಿಕೊಳ್ಳಲು (www.nikshay.in) ಪ್ರೋತ್ಸಾಹಿಸಲಾಗುತ್ತದೆ.
ಪ್ರಧಾನಮಂತ್ರಿ ಅವರು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಅಡಿಯಲ್ಲಿ ದೇಶದ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಒಂದೇ ಕ್ಲಿಕ್ನಲ್ಲಿ ನೇರವಾಗಿ ಹಣ ವರ್ಗಾಯಿಸಲಿದ್ದಾರೆ. ಈ ಯೋಜನೆಯಿಂದ ದೇಶದಲ್ಲಿ ಸುಮಾರು ಹತ್ತು ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ.
ಅಲ್ಲದೆ, ಮಾತೃ ಮತ್ತು ಶಿಶು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಸುಮನ್ ಸಖಿ ಚಾಟ್ಬಾಟ್ ಅನ್ನು ಪ್ರಧಾನಮಂತ್ರಿ ಅವರು ಅನಾವರಣಗೊಳಿಸಲಿದ್ದಾರೆ. ಈ ಚಾಟ್ ಬಾಟ್ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ಗರ್ಭಿಣಿಯರಿಗೆ ಸಮಯಕ್ಕೆ ಸರಿಯಾಗಿ ಮತ್ತು ನಿಖರವಾದ ಮಾಹಿತಿಯನ್ನು ಒದಗಿಸಿ, ಅಗತ್ಯ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಖಚಿತಪಡಿಸುತ್ತದೆ.
ಸಿಕಲ್ ಸೆಲ್ ರಕ್ತಹೀನತೆಯ ವಿರುದ್ಧ ರಾಷ್ಟ್ರದ ಸಾಮೂಹಿಕ ಹೋರಾಟವನ್ನು ಇನ್ನಷ್ಟು ಬಲಪಡಿಸಲು, ಪ್ರಧಾನಮಂತ್ರಿ ಅವರು ರಾಜ್ಯಕ್ಕೆ ಒಂದು ಕೋಟಿ ಸಿಕಲ್ ಸೆಲ್ ಸ್ಕ್ರೀನಿಂಗ್ ಮತ್ತು ಕೌನ್ಸೆಲಿಂಗ್ ಕಾರ್ಡ್ ಗಳನ್ನು ವಿತರಿಸಲಿದ್ದಾರೆ.
ಆದಿ ಕರ್ಮಯೋಗಿ ಅಭಿಯಾನದ ಭಾಗವಾಗಿ, ಪ್ರಧಾನಮಂತ್ರಿ ಅವರು ಮಧ್ಯಪ್ರದೇಶಕ್ಕಾಗಿ ‘ಆದಿ ಸೇವಾ ಪರ್ವ್’ ಅನ್ನು ಪ್ರಾರಂಭಿಸಲಿದ್ದಾರೆ. ಇದು ಬುಡಕಟ್ಟು ಜನರ ಹೆಮ್ಮೆ ಮತ್ತು ರಾಷ್ಟ್ರ ನಿರ್ಮಾಣದ ಮನೋಭಾವದ ಸಂಗಮವನ್ನು ಸಂಕೇತಿಸುತ್ತದೆ. ಈ ಉಪಕ್ರಮದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ಪೋಷಣೆ, ಕೌಶಲ್ಯ ಅಭಿವೃದ್ಧಿ, ಜೀವನೋಪಾಯ ವೃದ್ಧಿ, ನೈರ್ಮಲ್ಯ, ಜಲ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿದ ಸೇವಾ-ಆಧಾರಿತ ಚಟುವಟಿಕೆಗಳ ಸರಣಿಗಳನ್ನು ಒಳಗೊಂಡಿದೆ. ಪ್ರತಿ ಗ್ರಾಮಕ್ಕೆ ದೀರ್ಘಾವಧಿಯ ಅಭಿವೃದ್ಧಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಉದ್ದೇಶದಿಂದ ಬುಡಕಟ್ಟು ಗ್ರಾಮ ಕಾರ್ಯ ಯೋಜನೆ ಮತ್ತು ಬುಡಕಟ್ಟು ಗ್ರಾಮ ವಿಷನ್ 2030ಕ್ಕೆ ವಿಶೇಷ ಒತ್ತು ನೀಡಲಾಗುವುದು.
5ಎಫ್ ವಿಷನ್ - ಫಾರ್ಮ್ ಟು ಫೈಬರ್, ಫೈಬರ್ ಟು ಫ್ಯಾಕ್ಟರಿ, ಫ್ಯಾಕ್ಟರಿ ಟು ಫ್ಯಾಷನ್, ಮತ್ತು ಫ್ಯಾಷನ್ ಟು ಫಾರಿನ್ (ಫಾರ್ಮ್ನಿಂದ ನಾರು, ನಾರಿನಿಂದ ಕಾರ್ಖಾನೆ, ಕಾರ್ಖಾನೆಯಿಂದ ಫ್ಯಾಷನ್, ಫ್ಯಾಷನ್ನಿಂದ ವಿದೇಶ) ಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಧಾರ್ ನಲ್ಲಿ ಪಿ.ಎಂ. ಮಿತ್ರ ಪಾರ್ಕ್ ಅನ್ನು ಉದ್ಘಾಟಿಸಲಿದ್ದಾರೆ. 2,150 ಎಕರೆಗಳಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹರಡಿರುವ ಈ ಪಾರ್ಕ್, ಸಾಮಾನ್ಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಸೌರ ವಿದ್ಯುತ್ ಘಟಕ, ಆಧುನಿಕ ರಸ್ತೆಗಳು ಸೇರಿದಂತೆ ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಇದು ಒಂದು ಆದರ್ಶ ಕೈಗಾರಿಕಾ ಪಟ್ಟಣವಾಗಿ ರೂಪುಗೊಳ್ಳಲಿದೆ. ಇದು ತಮ್ಮ ಉತ್ಪನ್ನಗಳಿಗೆ ಉತ್ತಮ ಮೌಲ್ಯವನ್ನು ಒದಗಿಸುವ ಮೂಲಕ ಈ ಪ್ರದೇಶದ ಹತ್ತಿ ಬೆಳೆಗಾರರಿಗೆ ಗಣನೀಯವಾಗಿ ಲಾಭವನ್ನು ತರಲಿದೆ ಮತ್ತು ಅವರ ಆದಾಯವನ್ನು ಹೆಚ್ಚಿಸಲಿದೆ.
ಇದಕ್ಕಾಗಿ ವಿವಿಧ ಜವಳಿ ಕಂಪನಿಗಳು 23,140 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಪ್ರಸ್ತಾಪಗಳನ್ನು ಸಲ್ಲಿಸಿದ್ದು, ಹೊಸ ಕೈಗಾರಿಕೆಗಳು ಮತ್ತು ಬೃಹತ್ ಪ್ರಮಾಣದ ಉದ್ಯೋಗಕ್ಕೆ ದಾರಿ ಮಾಡಿಕೊಡಲಿವೆ. ಇದು ಸುಮಾರು 3 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ರಫ್ತನ್ನು ಗಣನೀಯವಾಗಿ ಹೆಚ್ಚಿಸಲಿದೆ.
ಪರಿಸರ ಸಂರಕ್ಷಣೆ ಮತ್ತು ಮಹಿಳಾ ಆರ್ಥಿಕ ಸಬಲೀಕರಣಕ್ಕೆ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ರಾಜ್ಯದ ‘ಏಕ್ ಬಗಿಯಾ ಮಾ ಕೇ ನಾಮ್’ ಉಪಕ್ರಮದ ಅಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪಿನ ಒಬ್ಬ ಫಲಾನುಭವಿಗೆ ಸಸಿ ಒಂದನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಮಧ್ಯಪ್ರದೇಶದಲ್ಲಿ 10,000ಕ್ಕೂ ಹೆಚ್ಚು ಮಹಿಳೆಯರು ‘ಮಾ ಕಿ ಬಗಿಯಾ’ (ಅಮ್ಮನ ತೋಟ) ಅಭಿವೃದ್ಧಿಪಡಿಸಲಿದ್ದಾರೆ. ಸಸ್ಯಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮಹಿಳಾ ಗುಂಪುಗಳಿಗೆ ಅಗತ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ.
*****
(Release ID: 2167419)
Visitor Counter : 2
Read this release in:
Assamese
,
Bengali
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam