ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಣಿಪುರದ ಚುರಚಂದಪುರದಲ್ಲಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು


ಮಣಿಪುರದಲ್ಲಿ ರೈಲು ಸಂಪರ್ಕ ವಿಸ್ತರಿಸುತ್ತಿದೆ: ಪ್ರಧಾನಮಂತ್ರಿ

ಮಣಿಪುರದಲ್ಲಿ ಬಡವರ ಪರವಾದ ಅಭಿವೃದ್ಧಿ ಉಪಕ್ರಮಗಳನ್ನು ನಾವು ಅನುಷ್ಠಾನಗೊಳಿಸುತ್ತಿದ್ದೇವೆ: ಪ್ರಧಾನಮಂತ್ರಿ

ಮಣಿಪುರದಲ್ಲಿ ಭರವಸೆ ಮತ್ತು ನಂಬಿಕೆಯ ನವೋದಯವಾಗುತ್ತಿದೆ: ಪ್ರಧಾನಮಂತ್ರಿ

ಮಣಿಪುರವನ್ನು ಶಾಂತಿ, ಸಮೃದ್ಧಿ ಮತ್ತು ಪ್ರಗತಿಯ ಸಂಕೇತವನ್ನಾಗಿ ಮಾಡುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ: ಪ್ರಧಾನಮಂತ್ರಿ

Posted On: 13 SEP 2025 2:17PM by PIB Bengaluru

ಮಣಿಪುರದ ಚುರಚಂದಪುರದಲ್ಲಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಮಣಿಪುರ ಧೈರ್ಯ ಮತ್ತು ದೃಢಸಂಕಲ್ಪದ ಭೂಮಿಯಾಗಿದೆ ಮತ್ತು ಮಣಿಪುರದ ಗುಡ್ಡಗಾಡುಗಳು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿವೆ ಎಂದು ಒತ್ತಿ ಹೇಳಿದರು. ಈ ಗುಡ್ಡಗಾಡು ಜನರ ನಿರಂತರ ದಣಿವರಿಯದ ಪರಿಶ್ರಮದ ಸಂಕೇತವಾಗಿವೆ ಎಂದು ಅವರು ಹೇಳಿದರು. ಮಣಿಪುರದ ಜನರ ಉತ್ಸಾಹಕ್ಕೆ ನಮನ ಸಲ್ಲಿಸಿದ ಶ್ರೀ ಮೋದಿ, ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದಕ್ಕಾಗಿ ಜನರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಅವರ ಪ್ರೀತಿಗೆ ಧನ್ಯವಾದ ತಿಳಿಸಿದರು.

ಈ ಪ್ರದೇಶದ ಸಂಸ್ಕೃತಿ, ಸಂಪ್ರದಾಯಗಳು, ವೈವಿಧ್ಯತೆ ಮತ್ತು ಚೈತನ್ಯವನ್ನು ಭಾರತದ ಪ್ರಮುಖ ಶಕ್ತಿ ಎಂದು ಬಣ್ಣಿಸಿದ ಶ್ರೀ ಮೋದಿ, "ಮಣಿಪುರ" ಎಂಬ ಹೆಸರಿನಲ್ಲೇ "ಮಣಿ" ಎಂಬ ಪದವಿದೆ, ಇದು ಮುಂದಿನ ದಿನಗಳಲ್ಲಿ ಇಡೀ ಈಶಾನ್ಯವನ್ನು ಬೆಳಗಿಸುವ ರತ್ನವನ್ನು ಸಂಕೇತಿಸುತ್ತದೆ ಎಂದು ಹೇಳಿದರು. ಮಣಿಪುರದ ಅಭಿವೃದ್ಧಿ ಪ್ರಯಾಣವನ್ನು ವೇಗಗೊಳಿಸಲು ಭಾರತ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಉತ್ಸಾಹದಲ್ಲಿಯೇ ತಾವು ಇಂದು ಮಣಿಪುರದ ಜನರ ನಡುವೆ ಇರುವುದಾಗಿ ಅವರು ಹೇಳಿದರು. ಇಂದು ಸುಮಾರು 7,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಇವು ಮಣಿಪುರದ ಜನರ, ವಿಶೇಷವಾಗಿ ಗುಡ್ಡಗಾಡುಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳ ಜೀವನವನ್ನು ಸುಧಾರಿಸುತ್ತವೆ. ಈ ಯೋಜನೆಗಳು ಈ ಪ್ರದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸೌಲಭ್ಯಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು ಮತ್ತು ಈ ಹೊಸ ಉಪಕ್ರಮಗಳಿಗಾಗಿ ಮಣಿಪುರ ಮತ್ತು ಚುರಚಂದಪುರದ ಜನರನ್ನು ಅಭಿನಂದಿಸಿದರು.

ಮಣಿಪುರ ಗಡಿ ರಾಜ್ಯವಾಗಿರುವುದರಿಂದ ಸಂಪರ್ಕವು ಯಾವಾಗಲೂ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು. ಉತ್ತಮ ರಸ್ತೆಗಳ ಕೊರತೆಯಿಂದಾಗಿ ಜನರು ಎದುರಿಸುತ್ತಿರುವ ತೊಂದರೆಗಳು ಮತ್ತು ಸಮಸ್ಯೆಗಳ ಬಗ್ಗೆ ತಮಗೆ ಅರಿವಿದೆ ಎಂದು ಹೇಳಿದರು. ತಮ್ಮ ನಾಯಕತ್ವದ ಕೇಂದ್ರ ಸರ್ಕಾರವು 2014 ರಿಂದ ಮಣಿಪುರದಲ್ಲಿ ಸಂಪರ್ಕವನ್ನು ಸುಧಾರಿಸುವತ್ತ ನಿರಂತರವಾಗಿ ಗಮನಹರಿಸಿದೆ ಎಂದು ಅವರು ಹೇಳಿದರು. ಈ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು ಎರಡು ಹಂತಗಳಲ್ಲಿ ಕೆಲಸ ಮಾಡುತ್ತಿದೆ, ಮೊದಲ ಹಂತದಲ್ಲಿ, ಮಣಿಪುರದಲ್ಲಿ ರೈಲ್ವೆ ಮತ್ತು ರಸ್ತೆ ಮೂಲಸೌಕರ್ಯಕ್ಕಾಗಿ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ, ಎರಡನೇ ಹಂತದಲ್ಲಿ, ಮಣಿಪುರದ ನಗರಗಳು ಮತ್ತು ಹಳ್ಳಿಗಳ ನಡುವೆ ರಸ್ತೆ ಸಂಪರ್ಕವನ್ನು ವಿಸ್ತರಿಸಲು ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದರು.

ಕಳೆದ ಕೆಲವು ವರ್ಷಗಳಲ್ಲಿ ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೆ 3,700 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಮತ್ತು 8,700 ಕೋಟಿ ರೂ.ಗಳ ಹೊಸ ಹೆದ್ದಾರಿ ಯೋಜನೆಗಳು ತ್ವರಿತಗತಿಯಲ್ಲಿ ಪ್ರಗತಿಯಲ್ಲಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು. ಈ ಹಿಂದೆ, ಈ ಪ್ರದೇಶದ ಹಳ್ಳಿಗಳನ್ನು ತಲುಪುವುದು ಅತ್ಯಂತ ಕಷ್ಟಕರವಾಗಿತ್ತು, ಇದು ಸ್ಥಳೀಯರಿಗೆ ಚೆನ್ನಾಗಿ ತಿಳಿದಿರುವ ಸಂಗತಿ ಎಂದು ಅವರು ಹೇಳಿದರು. ಆದರೆ ಈಗ, ರಸ್ತೆಗಳು ನೂರಾರು ಹಳ್ಳಿಗಳನ್ನು ತಲುಪಿವೆ, ಇದು ಗುಡ್ಡಗಾಡು ಹಳ್ಳಿಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ ಎಂದು ಅವರು ಹೇಳಿದರು.

"ನಮ್ಮ ಸರ್ಕಾರದ ಅವಧಿಯಲ್ಲಿ ಮಣಿಪುರದಲ್ಲಿ ರೈಲು ಸಂಪರ್ಕ ವಿಸ್ತರಿಸುತ್ತಿದೆ ಮತ್ತು ರಾಜಧಾನಿ ಇಂಫಾಲ್ ಶೀಘ್ರದಲ್ಲೇ ಜಿರಿಬಮ್-ಇಂಫಾಲ್ ರೈಲು ಮಾರ್ಗದ ಮೂಲಕ ರಾಷ್ಟ್ರೀಯ ರೈಲು ಜಾಲಕ್ಕೆ ಸಂಪರ್ಕಗೊಳ್ಳಲಿದೆ" ಎಂದು ಪ್ರಧಾನಮಂತ್ರಿ ಹೇಳಿದರು, ಈ ಯೋಜನೆಗೆ 22,000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದು ಹೇಳಿದರು. 400 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ ಇಂಫಾಲ್ ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ವಾಯು ಸಂಪರ್ಕವನ್ನು ಹೆಚ್ಚಿಸುತ್ತಿದೆ. ಈ ವಿಮಾನ ನಿಲ್ದಾಣದಿಂದ ದೇಶದ ಇತರ ಭಾಗಗಳಿಗೆ ಹೆಲಿಕಾಪ್ಟರ್ ಸೇವೆಗಳು ಸಹ ಪ್ರಾರಂಭವಾಗಿವೆ. ಹೆಚ್ಚಿದ ಸಂಪರ್ಕದಿಂದಾಗಿ, ಮಣಿಪುರದ ಜನರಿಗೆ ಸೌಲಭ್ಯಗಳನ್ನು ಸುಧಾರಿಸಲಾಗುತ್ತಿದೆ ಮತ್ತು ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಹೇಳಿದರು.

"ಭಾರತವು ವೇಗವಾಗಿ ಬೆಳೆಯುತ್ತಿದೆ ಮತ್ತು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಅಭಿವೃದ್ಧಿಯ ಪ್ರಯೋಜನಗಳು ದೇಶದ ಮೂಲೆ ಮೂಲೆಗೂ ತಲುಪುವಂತೆ ನೋಡಿಕೊಳ್ಳುವುದು ನಮ್ಮ ನಿರಂತರ ಪ್ರಯತ್ನವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಒಂದು ಕಾಲದಲ್ಲಿ, ದೆಹಲಿಯಲ್ಲಿ ಮಾಡಿದ ಘೋಷಣೆಗಳು ಮಣಿಪುರದಂತಹ ಸ್ಥಳಗಳನ್ನು ತಲುಪಲು ದಶಕಗಳೇ ಬೇಕಾಗುತ್ತಿದ್ದವು ಎಂದು ಅವರು ನೆನಪಿಸಿಕೊಂಡರು. ಆದಾಗ್ಯೂ, ಇಂದು, ಚುರಚಂದಪುರ ಮತ್ತು ಮಣಿಪುರವು ದೇಶದ ಉಳಿದ ಭಾಗಗಳೊಂದಿಗೆ ಪ್ರಗತಿ ಸಾಧಿಸುತ್ತಿವೆ ಎಂದು ಅವರು ಹೇಳಿದರು. ಬಡವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸಲು ಸರ್ಕಾರ ರಾಷ್ಟ್ರೀಯ ಯೋಜನೆಯನ್ನು ಪ್ರಾರಂಭಿಸಿದೆ, ಇದು ಮಣಿಪುರದ ಸಾವಿರಾರು ಕುಟುಂಬಗಳಿಗೆ ಪ್ರಯೋಜನವನ್ನು ನೀಡಿದೆ, ಸುಮಾರು 60,000 ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಹಿಂದೆ, ಈ ಪ್ರದೇಶವು ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸುತ್ತಿತ್ತು. ಈ ಸಮಸ್ಯೆಯಿಂದ ಜನರನ್ನು ಮುಕ್ತಗೊಳಿಸಲು ಸರ್ಕಾರ ದೃಢನಿಶ್ಚಯವನ್ನು ಮಾಡಿತು ಮತ್ತು ಇದರ ಅಡಿಯಲ್ಲಿ, ಮಣಿಪುರದ 1,00,000 ಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಮಣಿಪುರದ ತಾಯಂದಿರು ಮತ್ತು ಸಹೋದರಿಯರು ದೀರ್ಘಕಾಲದವರೆಗೆ ನೀರು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ 'ಹರ್ ಘರ್ ನಲ್ ಸೆ ಜಲ್' ಯೋಜನೆಯನ್ನು ಪ್ರಾರಂಭಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ, ದೇಶಾದ್ಯಂತ 15 ಕೋಟಿಗೂ ಹೆಚ್ಚು ನಾಗರಿಕರು ನಲ್ಲಿಗಳ ಮೂಲಕ ನೀರು ಪಡೆದಿದ್ದಾರೆ ಎಂದು ಅವರು ಹೇಳಿದರು. 7-8 ವರ್ಷಗಳ ಹಿಂದೆ, ಮಣಿಪುರದಲ್ಲಿ ಕೇವಲ 25,000 ರಿಂದ 30,000 ಮನೆಗಳಿಗೆ ನಲ್ಲಿಗಳ ಮೂಲಕ ನೀರು ಸಿಗುತ್ತಿತ್ತು. ಇಂದು, ರಾಜ್ಯದಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವಿದೆ ಮತ್ತು ಶೀಘ್ರದಲ್ಲೇ ಮಣಿಪುರದ ಪ್ರತಿಯೊಂದು ಮನೆಗೂ ನಲ್ಲಿಗಳ ಮೂಲಕ ನೀರು ತಲುಪಲಿದೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಸಾಮಾಜಿಕ ಮೂಲಸೌಕರ್ಯಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಗುಡ್ಡಗಾಡು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಹಿಂದೆ ಉತ್ತಮ ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳು ಕೇವಲ ಕನಸಾಗಿದ್ದವು. ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ಆಸ್ಪತ್ರೆಗೆ ತಲುಪಲು ಬಹಳ ಸಮಯ ಹಿಡಿಯುತ್ತಿತ್ತು ಎಂದು ಅವರು ಹೇಳಿದರು. ಭಾರತ ಸರ್ಕಾರದ ಪ್ರಯತ್ನಗಳಿಂದಾಗಿ ಪರಿಸ್ಥಿತಿ ಈಗ ಬದಲಾಗುತ್ತಿದೆ ಮತ್ತು ಚುರಚಂದಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈಗ ಅಲ್ಲಿ ಹೊಸ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ ಮತ್ತು ಆರೋಗ್ಯ ಸೇವೆಗಳು ಸುಧಾರಿಸುತ್ತಿವೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ ನಂತರ ಹಲವು ದಶಕಗಳಿಂದ ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಯಾವುದೇ ವೈದ್ಯಕೀಯ ಕಾಲೇಜು ಇರಲಿಲ್ಲ ಎಂಬ ಅಂಶವನ್ನು ಪ್ರಧಾನಮಂತ್ರಿ ಜನರು ತಿಳಿಯಬೇಕು. ಈ ಸಾಧನೆ ಪ್ರಸ್ತುತ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಐದು ಗುಡ್ಡಗಾಡು ಜಿಲ್ಲೆಗಳಲ್ಲಿ ಸರ್ಕಾರ ಆಧುನಿಕ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಪ್ರಧಾನಮಂತ್ರಿ ಡಿವೈನ್‌ (PM-DIVINE) ಯೋಜನೆಯನ್ನು ಉಲ್ಲೇಖಿಸಿದರು. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ  ಸರ್ಕಾರ ಬಡ ಕುಟುಂಬಗಳಿಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಮಣಿಪುರದಲ್ಲಿ ಸುಮಾರು 2.5 ಲಕ್ಷ ರೋಗಿಗಳು ಈ ಯೋಜನೆಯಡಿ ಉಚಿತ  ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು. ಈ ಸೌಲಭ್ಯವಿಲ್ಲದಿದ್ದರೆ ರಾಜ್ಯದ ಬಡ ಕುಟುಂಬಗಳು ತಮ್ಮ ಜೇಬಿನಿಂದ ₹350 ಕೋಟಿ ಖರ್ಚು ಮಾಡಬೇಕಾಗುತ್ತಿತ್ತು. ಈ ಸಂಪೂರ್ಣ ವೆಚ್ಚವನ್ನು ಭಾರತ ಸರ್ಕಾರ ಭರಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಪ್ರತಿಯೊಬ್ಬ ಬಡ ನಾಗರಿಕನ ಕಾಳಜಿಗಳನ್ನು ನೋಡಿಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

"ಮಣಿಪುರದ ಭೂಮಿ ಮತ್ತು ಪ್ರದೇಶವು ಭರವಸೆ ಮತ್ತು ಆಕಾಂಕ್ಷೆಗಳ ನಾಡು" ಎಂದು ಪ್ರಧಾನಮಂತ್ರಿ ಹೇಳಿದರು. ದುರದೃಷ್ಟವಶಾತ್ ಈ ಅದ್ಭುತವಾದ ಪ್ರದೇಶದಲ್ಲಿ ಹಿಂಸಾಚಾರವು ವ್ಯಾಪಕವಾಗಿದೆ ಎಂದು ಅವರು ಹೇಳಿದರು. ಸ್ವಲ್ಪ ಸಮಯದ ಹಿಂದೆಯಷ್ಟೇ ಶಿಬಿರಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತ ಜನರನ್ನು ಭೇಟಿಯಾಗಿದ್ದಾಗಿ ಅವರು ಹೇಳಿದರು. ಅವರೊಡನೆ ಸಂವಾದ ನಡೆಸಿದ ನಂತರ, ಮಣಿಪುರದಲ್ಲಿ ಭರವಸೆ ಮತ್ತು ಆತ್ಮವಿಶ್ವಾಸದ ನವೋದಯವಾಗುತ್ತಿದೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

"ಯಾವುದೇ ಪ್ರದೇಶದ ಅಭಿವೃದ್ಧಿಗೆ ಶಾಂತಿ ಅತ್ಯಗತ್ಯ ಮತ್ತು ಕಳೆದ ಹನ್ನೊಂದು ವರ್ಷಗಳಲ್ಲಿ ಈಶಾನ್ಯದಲ್ಲಿ ಅನೇಕ ಹಳೆಯ ಸಂಘರ್ಷಗಳು ಮತ್ತು ವಿವಾದಗಳನ್ನು ಪರಿಹರಿಸಲಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಜನರು ಶಾಂತಿಯ ಮಾರ್ಗವನ್ನು ಆರಿಸಿಕೊಂಡಿದ್ದಾರೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ ಎಂದು ಅವರು ಹೇಳಿದರು. ಗುಡ್ಡಗಾಡು ಮತ್ತು ಕಣಿವೆ ಪ್ರದೇಶಗಳ ವಿವಿಧ ಗುಂಪುಗಳೊಂದಿಗೆ ಇತ್ತೀಚೆಗೆ ಮಾತುಕತೆಗಳು ನಡೆದಿರುವುದಕ್ಕೆ ಶ್ರೀ ಮೋದಿ ತೃಪ್ತಿ ವ್ಯಕ್ತಪಡಿಸಿದರು. ಈ ಪ್ರಯತ್ನಗಳು ಭಾರತ ಸರ್ಕಾರದ ದೃಷ್ಟಿಕೋನದ ಭಾಗವಾಗಿದ್ದು, ಇದು ಶಾಂತಿಯನ್ನು ಸ್ಥಾಪಿಸಲು ಸಂವಾದ, ಗೌರವ ಮತ್ತು ಪರಸ್ಪರ ತಿಳುವಳಿಕೆಗೆ ಒತ್ತು ನೀಡುತ್ತದೆ ಎಂದು ಅವರು ಹೇಳಿದರು. ಎಲ್ಲಾ ಸಂಘಟನೆಗಳು ಶಾಂತಿಯ ಹಾದಿಯಲ್ಲಿ ಮುನ್ನಡೆಯಬೇಕು ಮತ್ತು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬೇಕೆಂದು ಪ್ರಧಾನಮಂತ್ರಿ ಮನವಿ ಮಾಡಿದರು. ತಮ್ಮ ಬೆಂಬಲ ವ್ಯಕ್ತಪಡಿಸಿದ ಅವರು, ನಾನು ಜನರೊಂದಿಗೆ ನಿಲ್ಲುತ್ತೇನೆ ಮತ್ತು ಭಾರತ ಸರ್ಕಾರ ಮಣಿಪುರದೊಂದಿಗೆ ಇದೆ ಎಂದು ಹೇಳಿದರು.

ಮಣಿಪುರದಲ್ಲಿ ಜೀವನವನ್ನು ಮತ್ತೆ ಹಳಿಗೆ ತರಲು ಭಾರತ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಸ್ಥಳಾಂತರಗೊಂಡ ಕುಟುಂಬಗಳಿಗೆ 7,000 ಹೊಸ ಮನೆಗಳನ್ನು ನಿರ್ಮಿಸಲು ಸರ್ಕಾರ ನೆರವು ನೀಡುತ್ತಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಸುಮಾರು ₹3,000 ಕೋಟಿ ವಿಶೇಷ ಪ್ಯಾಕೇಜ್ ಅನ್ನು ಅನುಮೋದಿಸಲಾಗಿದೆ ಎಂದು ಪ್ರಧಾನಮಂತ್ರಿ ಘೋಷಿಸಿದರು. ಸ್ಥಳಾಂತರಗೊಂಡ ಜನರಿಗೆ ಸಹಾಯ ಮಾಡಲು ₹500 ಕೋಟಿಯನ್ನು ವಿಶೇಷವಾಗಿ ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮಣಿಪುರದ ಬುಡಕಟ್ಟು ಯುವಕರ ಕನಸುಗಳು ಮತ್ತು ಹೋರಾಟಗಳ ಬಗ್ಗೆ ತಮಗೆ ಚೆನ್ನಾಗಿ ಅರಿವಿದೆ ಎಂದ ಪ್ರಧಾನಮಂತ್ರಿ, ಅವರ ಕಳವಳಗಳನ್ನು ಪರಿಹರಿಸಲು ಹಲವಾರು ಪರಿಹಾರಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು. ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಬಲಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ ಮತ್ತು ಅವುಗಳ ಅಭಿವೃದ್ಧಿಗೆ ಸೂಕ್ತ ಹಣಕಾಸು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

"ಪ್ರತಿಯೊಂದು ಬುಡಕಟ್ಟು ಸಮುದಾಯದ ಅಭಿವೃದ್ಧಿಯು ರಾಷ್ಟ್ರೀಯ ಆದ್ಯತೆಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗಾಗಿ ಮೊದಲ ಬಾರಿಗೆ ಧರ್ತಿ ಆಬಾ ಜನಜಾತಿ ಗ್ರಾಮ ಉತ್ಕರ್ಷ್ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಉಪಕ್ರಮದಡಿಯಲ್ಲಿ, ಮಣಿಪುರದ 500 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಬುಡಕಟ್ಟು ಪ್ರದೇಶಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಮಣಿಪುರದಲ್ಲಿ 18 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಶಾಲೆಗಳು ಮತ್ತು ಕಾಲೇಜುಗಳ ಆಧುನೀಕರಣವು ಗುಡ್ಡಗಾಡು ಜಿಲ್ಲೆಗಳಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಮಣಿಪುರದ ಸಂಸ್ಕೃತಿ ಯಾವಾಗಲೂ ಮಹಿಳಾ ಸಬಲೀಕರಣವನ್ನು ಉತ್ತೇಜಿಸಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಮಣಿಪುರದ ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಸರ್ಕಾರ ದುಡಿಯುವ ಮಹಿಳೆಯರಿಗಾಗಿ ಹಾಸ್ಟೆಲ್‌ ಗಳನ್ನು ನಿರ್ಮಿಸುತ್ತಿದೆ ಎಂದು ಅವರು ಹೇಳಿದರು.

"ಮಣಿಪುರವನ್ನು ಶಾಂತಿ, ಸಮೃದ್ಧಿ ಮತ್ತು ಪ್ರಗತಿಯ ಸಂಕೇತವನ್ನಾಗಿ ಮಾಡುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದರು. ಮಣಿಪುರದ ಅಭಿವೃದ್ಧಿ, ಸ್ಥಳಾಂತರಗೊಂಡ ಕುಟುಂಬಗಳ ಪುನರ್ವಸತಿ ಮತ್ತು ಶಾಂತಿ ನಿರ್ಮಾಣಕ್ಕಾಗಿ ಭಾರತ ಸರ್ಕಾರ ಮಣಿಪುರ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ಜನರಿಗೆ ಭರವಸೆ ನೀಡುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.

ಮಣಿಪುರದ ರಾಜ್ಯಪಾಲ ಶ್ರೀ ಅಜಯ್ ಕುಮಾರ್ ಭಲ್ಲಾ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಈ ಯೋಜನೆಗಳಲ್ಲಿ ಮಣಿಪುರ ನಗರ ರಸ್ತೆಗಳು, ಒಳಚರಂಡಿ ಮತ್ತು ಆಸ್ತಿ ನಿರ್ವಹಣಾ ಸುಧಾರಣಾ ಯೋಜನೆಗಳು 3,600 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ್ದಾಗಿವೆ; 2,500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು; ಮಣಿಪುರ ಇನ್ಫೋಟೆಕ್ ಅಭಿವೃದ್ಧಿ (ಎಂ ಐ  ಎನ್‌ ಡಿ) ಯೋಜನೆ, 9 ಸ್ಥಳಗಳಲ್ಲಿ ದುಡಿಯುವ ಮಹಿಳೆಯರಿಗಾಗಿ ಹಾಸ್ಟೆಲ್‌ ಗಳು ಸೇರಿವೆ.

 

 

*****


(Release ID: 2166470) Visitor Counter : 2