ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಶಿಕ್ಷಕರಿಗೆ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ


ಭಾರತವನ್ನು ಜಾಗತಿಕ ಜ್ಞಾನದ ಮಹಾಶಕ್ತಿಯನ್ನಾಗಿ ಮಾಡಲು, ನಮ್ಮ ಶಿಕ್ಷಕರು ವಿಶ್ವದ ಅತ್ಯುತ್ತಮ ಶಿಕ್ಷಕರು ಎಂದು ಗುರುತಿಸಲ್ಪಡಬೇಕು: ರಾಷ್ಟ್ರಪತಿ ಮುರ್ಮು

Posted On: 05 SEP 2025 2:20PM by PIB Bengaluru

ಶಿಕ್ಷಕರ ದಿನಾಚರಣೆಯ ಪ್ರಯುಕ್ತ, ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು, ಇಂದು (ಸೆಪ್ಟೆಂಬರ್ 5, 2025) ನವದೆಹಲಿಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ದೇಶದಾದ್ಯಂತದ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, "ಆಹಾರ, ಬಟ್ಟೆ ಮತ್ತು ವಸತಿಯಂತೆ, ಶಿಕ್ಷಣವೂ ಸಹ ಒಬ್ಬ ವ್ಯಕ್ತಿಯ ಘನತೆ ಮತ್ತು ಸುರಕ್ಷತೆಗೆ ಅತ್ಯಗತ್ಯವಾಗಿದೆ. ವಿವೇಕಯುತ ಶಿಕ್ಷಕರು ಮಕ್ಕಳಲ್ಲಿ ಘನತೆ ಮತ್ತು ಸುರಕ್ಷತೆಯ ಭಾವನೆಯನ್ನು ಮೂಡಿಸಲು ಶ್ರಮಿಸುತ್ತಾರೆ" ಎಂದು ಹೇಳಿದರು. ತಾವು ಶಿಕ್ಷಕಿಯಾಗಿದ್ದ ದಿನಗಳನ್ನು ನೆನಪಿಸಿಕೊಂಡ ಅವರು, ಆ ಸಮಯವನ್ನು 'ನನ್ನ ಜೀವನದ ಅತ್ಯಂತ ಅರ್ಥಪೂರ್ಣ ಅವಧಿ' ಎಂದು ಬಣ್ಣಿಸಿದರು.

ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಸಮರ್ಥ ಮನುಷ್ಯನನ್ನಾಗಿ ಮಾಡುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. ಅದೆಷ್ಟೇ ಬಡತನದ ಹಿನ್ನೆಲೆಯಿಂದ ಬಂದ ಮಕ್ಕಳಾದರೂ, ಶಿಕ್ಷಣವೆಂಬ ಶಕ್ತಿಯ ಬಲದಿಂದ ಅವರು ಪ್ರಗತಿಯ ಗಗನವನ್ನೇ ಮುಟ್ಟಬಲ್ಲರು. ಮಕ್ಕಳ ಈ ಯಶಸ್ಸಿನ ಪಯಣಕ್ಕೆ ರೆಕ್ಕೆಪುಕ್ಕಗಳನ್ನು ನೀಡಿ ಹಾರಲು ಶಕ್ತಿ ತುಂಬುವುದರಲ್ಲಿ, ವಾತ್ಸಲ್ಯ ಮತ್ತು ಸಮರ್ಪಣಾ ಮನೋಭಾವದ ಶಿಕ್ಷಕರ ಪಾತ್ರ ಅತ್ಯಂತ ಹಿರಿದು. ಶಿಕ್ಷಕರಿಗೆ ಸಿಗುವ ಅತಿದೊಡ್ಡ ಪುರಸ್ಕಾರವೆಂದರೆ, ಅವರ ವಿದ್ಯಾರ್ಥಿಗಳು ತಮ್ಮ ಜೀವನಪರ್ಯಂತ ಶಿಕ್ಷಕರನ್ನು ನೆನೆಯುವುದು ಹಾಗೂ ತಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರಕ್ಕೆ ಗಣನೀಯವಾದ ಕೊಡುಗೆಗಳನ್ನು ನೀಡುವುದಾಗಿದೆ ಎಂದು ಹೇಳಿದರು.

ಶಿಕ್ಷಕರ ಪ್ರಾಥಮಿಕ ಕರ್ತವ್ಯವೆಂದರೆ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವುದು ಎಂದು ರಾಷ್ಟ್ರಪತಿಗಳು ಹೇಳಿದರು.  ಕೇವಲ ಸ್ಪರ್ಧೆ, ಪುಸ್ತಕದ ಜ್ಞಾನ ಮತ್ತು ಸ್ವಾರ್ಥದಲ್ಲಿ ಮಾತ್ರ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಿಂತ, ನೈತಿಕ ನಡವಳಿಕೆಯನ್ನು ಪಾಲಿಸುವ ಸಂವೇದನಾಶೀಲ, ಜವಾಬ್ದಾರಿಯುತ ಮತ್ತು ಸಮರ್ಪಣಾ ಮನೋಭಾವದ ವಿದ್ಯಾರ್ಥಿಗಳೇ ಶ್ರೇಷ್ಠರು. ಒಬ್ಬ ಉತ್ತಮ ಶಿಕ್ಷಕ ಭಾವನೆ ಮತ್ತು ಬುದ್ಧಿಶಕ್ತಿ ಎರಡನ್ನೂ ಹೊಂದಿರುತ್ತಾರೆ. ಈ ಭಾವನೆ ಮತ್ತು ಬುದ್ಧಿಶಕ್ತಿಯ ಸಮನ್ವಯವು ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. 

ಸ್ಮಾರ್ಟ್ ಬ್ಲ್ಯಾಕ್ ಬೋರ್ಡ್ ಗಳು, ಸ್ಮಾರ್ಟ್ ತರಗತಿಗಳು ಮತ್ತು ಇತರ ಆಧುನಿಕ ಸೌಲಭ್ಯಗಳಿಗೆ ಅವುಗಳದ್ದೇ ಆದ ಮಹತ್ವವಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಆದರೆ, ಎಲ್ಲಕ್ಕಿಂತ ಮುಖ್ಯವಾದುದು 'ಸ್ಮಾರ್ಟ್ ಶಿಕ್ಷಕರು'. ತಮ್ಮ ವಿದ್ಯಾರ್ಥಿಗಳ ಬೆಳವಣಿಗೆಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವವರೇ ಸ್ಮಾರ್ಟ್ ಶಿಕ್ಷಕರು. ಇಂತಹ ಶಿಕ್ಷಕರು ಪ್ರೀತಿ ಮತ್ತು ಸಂವೇದನಾಶೀಲತೆಯಿಂದ ಅಧ್ಯಯನದ ಪ್ರಕ್ರಿಯೆಯನ್ನು ಆಸಕ್ತಿದಾಯಕ ಮತ್ತು ಪರಿಣಾಮಕಾರಿಯನ್ನಾಗಿ ಮಾಡುತ್ತಾರೆ. ಅಂತಹ ಶಿಕ್ಷಕರು ವಿದ್ಯಾರ್ಥಿಗಳನ್ನು ಸಮಾಜ ಮತ್ತು ರಾಷ್ಟ್ರದ ಅಗತ್ಯಗಳನ್ನು ಪೂರೈಸಲು ಸಮರ್ಥರನ್ನಾಗಿ ರೂಪಿಸುತ್ತಾರೆ ಎಂದು ಅವರು ಹೇಳಿದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ರಾಷ್ಟ್ರಪತಿಗಳು ಹೇಳಿದರು. ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಹೂಡಿಕೆ ಮಾಡುವುದರ ಮೂಲಕ, ನಾವು ನಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರದ ನಿರ್ಮಾಣದಲ್ಲಿ ಅಮೂಲ್ಯವಾದ ಹೂಡಿಕೆ ಮಾಡಿದಂತಾಗುತ್ತದೆ. 'ಮಹಿಳಾ ನೇತೃತ್ವದ ಅಭಿವೃದ್ಧಿ'ಯನ್ನು ಉತ್ತೇಜಿಸಲು ಹೆಣ್ಣುಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣವನ್ನು ನೀಡುವುದೇ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ 2020, ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳನ್ನು ವಿಸ್ತರಿಸುವುದಕ್ಕೆ ಮತ್ತು ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳಿಗೆ ವಿಶೇಷ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದಕ್ಕೆ ಒತ್ತು ನೀಡುತ್ತದೆ ಎಂದು ಅವರು ತಿಳಿಸಿದರು. ಆದರೆ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಯೋಜನೆಯ ಯಶಸ್ಸು ಮುಖ್ಯವಾಗಿ ಶಿಕ್ಷಕರನ್ನೇ ಅವಲಂಬಿಸಿರುತ್ತದೆ. ಶಿಕ್ಷಕರು, ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಎಷ್ಟು ಹೆಚ್ಚು ಕೊಡುಗೆ ನೀಡುತ್ತೀರೋ, ಆಗ ಶಿಕ್ಷಕರಾಗಿ ನಿಮ್ಮ ಜೀವನ ಅಷ್ಟೇ ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದು ರಾಷ್ಟ್ರಪತಿಗಳು ಶಿಕ್ಷಕರಿಗೆ ಹೇಳಿದರು. ಹೆಣ್ಣುಮಕ್ಕಳು ಸೇರಿದಂತೆ, ಸ್ವಾಭಾವಿಕವಾಗಿ ನಾಚಿಕೆ ಗುಣದ ಅಥವಾ ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬರುವ ಎಲ್ಲಾ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ಅವರು ಶಿಕ್ಷಕರಲ್ಲಿ ಮನವಿ ಮಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತವನ್ನು ಜಾಗತಿಕ ಜ್ಞಾನದ ಮಹಾಶಕ್ತಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಇದಕ್ಕಾಗಿ, ನಮ್ಮ ಶಿಕ್ಷಕರನ್ನು ವಿಶ್ವದ ಅತ್ಯುತ್ತಮ ಶಿಕ್ಷಕರು ಎಂದು ಗುರುತಿಸುವಂತಾಗಬೇಕು. ನಮ್ಮ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಶಾಲಾ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ಕೌಶಲ್ಯ ಶಿಕ್ಷಣ ಈ ಮೂರು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೊಡುಗೆ ನೀಡಬೇಕು. ತಮ್ಮ ನಿರ್ಣಾಯಕ ಕೊಡುಗೆಗಳಿಂದ ನಮ್ಮ ಶಿಕ್ಷಕರು ಭಾರತವನ್ನು ಜಾಗತಿಕ ಜ್ಞಾನದ ಮಹಾಶಕ್ತಿಯಾಗಿ ಸ್ಥಾಪಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ-

 

*****


(Release ID: 2164204) Visitor Counter : 2